‘ಒಡಿಸ್ಸಿ’ ಓದಿ ನೀಷೆಗೆ ಹೊಳೆದ ಗಾಢ ಸತ್ಯ!

ಮೊನ್ನೆ ಕನ್ನಡ ಸಾಹಿತ್ಯದ ಹುಡುಗ, ಹುಡುಗಿಯರಿಗೆ ‘ಒಡಿಸ್ಸಿ’  ಮಹಾಕಾವ್ಯದ ಒಡಿಸ್ಯೂಸನ ಒಂದು ವಿದಾಯದ ಗಳಿಗೆಯನ್ನು ಬಣ್ಣಿಸುತ್ತಿದ್ದಾಗ ಲೋಕದ ಅನನ್ಯ ತತ್ವಜ್ಞಾನಿ ನೀಷೆಗೆ ಹಿಂದೊಮ್ಮೆ ಈ ಭಾಗ ಓದಿ ಹೊಳೆದ ಸತ್ಯ ನೆನಪಾಯಿತು. ಗ್ರೀಕ್ ಮಹಾಕವಿ ಹೋಮರ್ ಬರೆದ ‘ಒಡಿಸ್ಸಿ’ಯನ್ನು ಓದದಿರುವವರಿಗೆ ಅಥವಾ ಓದಿ ಮರೆತಿರುವವರಿಗೆ ಈ ಭಾಗವನ್ನು ನೆನಪಿಸುವೆ:

ಜಗದೇಕ ಸುಂದರಿ ಹೆಲೆನ್ನಳ ಪ್ರಣಯಪಲ್ಲಟವನ್ನು ನಿಮಿತ್ತವಾಗಿಟ್ಟುಕೊಂಡು ಗ್ರೀಕರು-ಟ್ರೋಜನ್ನರ ನಡುವೆ ನಡೆದ ಯುದ್ಧಕ್ಕೆ ಒಡಿಸ್ಯೂಸ್ ಒಲ್ಲದ ಮನಸ್ಸಿನಿಂದಲೇ ಹೊರಡುತ್ತಾನೆ. ಟ್ರೋಜನ್ ಯುದ್ಧ ಮುಗಿದರೂ ‘ಒಡಿಸ್ಸಿ’ಯ ಕಾವ್ಯನಾಯಕ ಒಡಿಸ್ಯೂಸ್ ಊರಿಗೆ ಮರಳುವಂತಿಲ್ಲ. ಕಾರಣ, ಒಡಿಸ್ಯೂಸನಿಗೆ ಹತ್ತು ವರ್ಷ ಯುದ್ಧ ಹಾಗೂ ಹತ್ತು ವರ್ಷ ಅಲೆದಾಟ- ಹೀಗೆ ಇಪ್ಪತ್ತು ವರ್ಷ ಕಾಲ ತನ್ನೂರು ಇಥಾಕಕ್ಕೆ ಮರಳಬಾರದು ಎಂಬ ಶಾಪವಿದೆ. ಹೀಗಾಗಿ ಯುದ್ಧ ಮುಗಿಸಿ ಊರಿಗೆ ಯಾನ ಹೊರಟ ಓಡಿಸ್ಯೂಸ್ ದಾರಿಯಲ್ಲಿ ಥರಹೇವಾರಿ ತರಲೆಗಳನ್ನು ಮಾಡುತ್ತಾನೆ. ರಾಕ್ಷಸ ಸೈಕ್ಲೋಪನ ಗುಹೆ ಹೊಕ್ಕು ಉಪಾಯ ಹಾಗೂ ಸಾಹಸಗಳಿಂದ ತಪ್ಪಿಸಿಕೊಂಡು ಹೊರಬರುತ್ತಾನೆ. ಮಾಯಾವಿನಿ ಸರ್ಸಿಯಿಂದ ಬಿಡಿಸಿಕೊಳ್ಳುತ್ತಾನೆ…ಇಂಥ ಹಲ ಬಗೆಯ ಅಪಾಯಗಳಲ್ಲಿ ಸಿಲುಕಿ, ಪಾರಾಗಿ, ಗೆದ್ದು ಮುಂದೆ ಸಾಗುತ್ತಾನೆ. 

ಇವತ್ತಿಗೂ ಲೋಕದ ಸಾವಿರಾರು ಸಾಹಿತ್ಯ ಕೃತಿಗಳು ಹಾಗೂ ಸಿನಿಮಾ, ನಾಟಕಗಳಲ್ಲಿ ಕೂಡ ಹೀರೋನ ಮಾದರಿಯನ್ನು ಸೃಷ್ಟಿ ಮಾಡಲು ಹೋಮರನ ಒಡಿಸ್ಯೂಸನ ಮಾದರಿಯನ್ನು ಅನುಕರಿಸುವವರಿದ್ದಾರೆ. ‘ಹೀರೋ’ ಎಂದರೆ ಮುನ್ನಡೆಸುವವನು; ಎಂಥ ಕಷ್ಟದ ನಡುವೆಯೂ ಜೈಸುವವನು; ಹೆಂಗಳೆಯರ ಮನ ಗೆಲ್ಲುವವನು; ಸಾಹಸದಿಂದಲೋ ಉಪಾಯದಿಂದಲೋ ಎಂಥ ಸವಾಲನ್ನಾದರೂ ಎದುರಿಸಬಲ್ಲವನು; ನಂಬಿದವರನ್ನು, ಅನಾಥರನ್ನು ರಕ್ಷಿಸಬಲ್ಲವನು; ಎಂಥ ಒಗಟಿಗೂ ಉತ್ತರ ಹುಡುಕಬಲ್ಲವನು...ಹೀಗೆ ಹೀರೋನ ಹತ್ತಾರು ಸಿದ್ಧ ಮಾದರಿಗಳನ್ನು ಒಡಿಸ್ಯೂಸ್ ಪಾತ್ರ ಇವತ್ತಿಗೂ ಕೊಡುತ್ತಾ ಬಂದಿದೆ. ಅಂತೂ ಹತ್ತಾರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಲೇ ಒಡಿಸ್ಯೂಸ್ ಕಡಲಯಾನ ಮುಂದುವರೆಸುತ್ತಾನೆ. ಇನ್ನೇನು ತಾಯಿನಾಡು ಇಥಾಕ ಸಿಕ್ಕುವ ಮುನ್ನ ಅವನ ದೋಣಿ ಚೂರಾಗಿ ಫೀಶಿಯಾ ರಾಜ್ಯದ ಕಡಲ ದಂಡೆಯಲ್ಲಿ ಅನಾಥನಾಗಿ, ಬೆತ್ತಲಾಗಿ, ಬೀಳುತ್ತಾನೆ.
ಮೈ ಮೇಲೆ ನೂಲಿನೆಳೆಯೂ ಇಲ್ಲದೆ ಎಲೆಗಳಲ್ಲಿ ಸೊಂಟ ಮುಚ್ಚಿಕೊಂಡು ಮೇಲೆದ್ದು ಬರುತ್ತಿದ್ದ ಒಡಿಸ್ಯೂಸನ ಮೈಕಟ್ಟು ಕಂಡ ಫೀಶಿಯಾದ ದೊರೆ ಆಲ್ಕಿನೌಸಿನ ಮಗಳು, ರಾಜಕುಮಾರಿ ನೌಸಿಕಾಗೆ ಇವನು ಯಾರೋ ವೀರಾಧಿವೀರನೇ ಇರಬೇಕು; ಮದುವೆಯಾದರೆ ಇಂಥವನನ್ನೇ ಮದುವೆಯಾಗಬೇಕು ಎನ್ನಿಸುತ್ತದೆ! ಸಖಿಯರಿಗೆ ಹೇಳಿ ಅವನನ್ನು ಸಜ್ಜುಗೊಳಿಸಿ ಅರಮನೆ ತಲುಪುವ ಹಾದಿ ತೋರಿಸುತ್ತಾಳೆ. ದೊರೆ ಆಲ್ಕಿನೌಸ್ ಅವನನ್ನು ಎದುರುಗೊಂಡು ಆದರಿಸುತ್ತಾನೆ. ಒಂದು ದಿನ ಅರಮನೆಯಲ್ಲಿ ಗಾಯಕನೊಬ್ಬ ಟ್ರೋಜನ್ ಯುದ್ಧಕಾಲದ ಒಡಿಸ್ಯೂಸ್-ಅಖಿಲೀಸರ ಕತೆಯನ್ನೇ ಹಾಡು ಮಾಡಿ ಹೇಳುತ್ತಿರುವಾಗ ಒಡಿಸ್ಯೂಸನಿಗೆ ಕಣ್ಣೀರುಕ್ಕುತ್ತದೆ. ಅಲ್ಲಿಯತನಕ ತನ್ನ ಗುರುತು ಮುಚ್ಚಿಟ್ಟಿದ್ದ ಒಡಿಸ್ಯೂಸ್ ತನ್ನ ಸಾಹಸದ ಕತೆಗಳನ್ನು ಹೇಳತೊಡಗುತ್ತಾನೆ. ಇದು ಒಡಿಸ್ಯೂಸನ ಆವರೆಗಿನ ಪಯಣದ ಕತೆ ಹೇಳಲು ಹೋಮರ್ ರೂಪಿಸಿಕೊಂಡಿರುವ ಕಥಾತಂತ್ರ ಕೂಡ! 

 

ಒಡಿಸ್ಯೂಸನ ಕತೆ ಕೇಳಿದ ಆಲ್ಕಿನೌಸನಿಗೆ ತನ್ನ ಮಗಳು ನೌಸಿಕಾಗೆ ಒಡಿಸ್ಯೂಸ್ ತಕ್ಕ ಜೋಡಿ ಎನ್ನಿಸುತ್ತದೆ; ಮಗಳಿಗೆ ಮದುವೆ ಮಾಡಿ ಒಡಿಸ್ಯೂಸನನ್ನು ಇಲ್ಲೇ ಉಳಿಸಿಕೊಳ್ಳಬೇಕೆನ್ನಿಸುತ್ತದೆ. ಆದರೆ ಊರು ತಲುಪುವ ಕಾತರದಲ್ಲಿರುವ ಒಡಿಸ್ಯೂಸನನ್ನು ಇಲ್ಲೇ ಉಳಿಯಬೇಕೆಂದು ಒತ್ತಾಯಿಸಲಾಗದ ದೊರೆ ಅವನನ್ನು ಇಥಾಕಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡುತ್ತಾನೆ. ಎಂಥ ಸನ್ನಿವೇಶದಲ್ಲೂ ವ್ಯವಧಾನದ ಸುಂದರ ಚಿತ್ರಗಳನ್ನು ಕೊಡಬಲ್ಲ ವ್ಯವಧಾನದ ಪ್ರಕಾರ- ಮಹಾಕಾವ್ಯ! ಒಡಿಸ್ಯೂಸ್ ಹೊರಟು ಇನ್ನೇನು ಅರಮನೆ ಬಿಡುವ ಗಳಿಗೆಯಲ್ಲಿ ಹೋಮರ್ ಕೋಮಲ ಸನ್ನಿವೇಶವೊಂದನ್ನು ಸೃಷ್ಟಿಸುತ್ತಾನೆ: ರಾಜಕುವರಿ ನೌಸಿಕಾ, ಕಡು ಚೆಲುವೆ ನೌಸಿಕಾ, ಸ್ವರ್ಗವೇ ಕಡೆದಂತಿರುವ ನೌಸಿಕಾ, ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ ಒಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ ಕಂಗಳಲ್ಲಿ ಬೆರಗು ಚೆಲ್ಲಿ ಸರ್ರನೆ ಮೆಲುನುಡಿದಳು:

 

‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು ನೆನೆದುಕೋ 
ನೆನೆನೆನೆದು ಹಾಯೆಂದುಕೋ.’

ನೌಸಿಕಾ ಮೆಲುನುಡಿಗೆ ಒಡಿಸ್ಯೂಸ್ ಮರುನುಡಿದನು:
‘ನೌಸಿಕಾ, ಆಲ್ಕಿನೌಸನ ಮಗಳೆ,    
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ,
ಆ ನೆಲದಲ್ಲಿ ಆ ಗಳಿಗೆಯಲ್ಲಿ 
ಮತ್ತು ಅಂದಿನಿಂದ ಅನುದಿನವು 
ನನ್ನ ಕಟ್ಟ ಕಡೆಯ ಉಸಿರಿರುವ ತನಕ, 
ನನ್ನ ಜೀವ ಉಳಿಸಿದ ರಾಜಕುವರಿಯೇ, 
ದೇವಿಯೊಬ್ಬಳ ನೆನೆದಂತೆ 
ನಾ ನಿನ್ನ ನೆನೆಯುವಂತಾಗಲಿ.’  
ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.
‘ಒಡಿಸ್ಸಿ’ಯ ಈ ಭಾಗವನ್ನು ಅನೇಕರು ಓದಿರಬಹುದು; ವ್ಯವಧಾನವಿಲ್ಲದ ಓದಿನಲ್ಲಿ ಇಂಥ ಸುಂದರ ಭಾಗವೊಂದನ್ನು ನನ್ನಂತೆಯೇ ಹಲವರು ಸರಿಯಾಗಿ ಗಮನಿಸದೆ ಮುಂದೆ ಸಾಗಿರಲೂಬಹುದು! ಆದರೆ ನೀಷೆಯಂಥ ದೊಡ್ಡ ತತ್ವಜ್ಞಾನಿ ಈ ಭಾಗವನ್ನು ಓದುತ್ತಿರುವಾಗ ಅವನ ಪ್ರಬುದ್ಧ ಜೀವನದರ್ಶನವೊಂದು ಹೊರಹೊಮ್ಮಿದ್ದು ಅಚ್ಚರಿಯಲ್ಲ. ಇದು ನೀಷೆ ಬರೆದ ಮಾತು:
ಒಡಿಸ್ಯೂಸ್ ಒಂದು ಘಟ್ಟದಲ್ಲಿ 
ರಾಜಕುಮಾರಿ ನೌಸಿಕಾಳನ್ನು 
ಬಿಟ್ಟು ಅರಮನೆಯಿಂದ ಹೊರಡುತ್ತಾನಲ್ಲಾ,  
ಹಾಗೆ ಬದುಕಿನಿಂದ ತೆರಳಬೇಕು-
ಶುಭ ಕೋರುತ್ತಾ...
ಬದುಕಿನ ಬಗೆಗಿನ ತೀವ್ರ ಮೋಹ ತೊರೆಯುತ್ತಾ…


ನೀಷೆಗಿಂತ ಒಂದು ಶತಮಾನದ ಹಿಂದೆ ಬದುಕಿದ್ದ ಇಂಗ್ಲಿಷ್ ಕವಿ ಕೋಲರಿಜ್ ಪದ್ಯವೊಂದನ್ನು ಹೇಗೆ ಓದಬೇಕು ಎಂಬ ಬಗ್ಗೆ ಬರೆದ ಮಾತುಗಳ ಇಂಗಿತ ಇದೀಗ ಮತ್ತೆ ನೆನಪಾಗುತ್ತದೆ: ‘ಕವಿತೆ ಓದುವಾಗ ಮುಂದೇನಾಗುತ್ತದೋ, ಕೊನೆಗೇನಾಗುತ್ತದೋ  ಎಂಬ ಕುತೂಹಲದಿಂದ ಸರಸರ ಮುಂದೆ ಸಾಗಬಾರದು; ಕವಿತೆಯೊಳಗಣ ಪಯಣ ಆ ಪಯಣದಲ್ಲಿ ಸಿಕ್ಕುವ ಮೋಹಕ ಅಂಶಗಳಿಂದ ಮುದಗೊಳ್ಳುವ ಮನಸ್ಸಿನ ಉಲ್ಲಾಸಕರ ಚಟುವಟಿಕೆಯಂತಿರಬೇಕು; ಅದು ಸರ್ಪದ ನಡಿಗೆಯಂತೆ ಅಥವಾ ಗಾಳಿಯಲ್ಲಿ ಹಾದಿ ಕೊರೆವ ಸದ್ದಿನಂತಿರಬೇಕು; ನಾವು ಆ ಪಯಣದಲ್ಲಿ ಅಲ್ಲಲ್ಲಿ ನಿಂತು, ಆವರೆಗಿನ ನಡಿಗೆಯಿಂದಲೇ ಚೈತನ್ಯ ಪಡೆದು ಮುಂದೆ ಸಾಗುವಂತಿರಬೇಕು…’  
ಕವಿತೆಯರಲಿ, ನಾಟಕವಿರಲಿ, ಯಾವ ಥರದ ಕೃತಿಯೇ ಇರಲಿ, ಈ ಬಗೆಯ ಮುಕ್ತ ಮನಸ್ಸಿನ, ವ್ಯವಧಾನದ ಓದಿನಲ್ಲಿ ನೀಷೆಗೆ ಹೊಳೆದ ಗಾಢ ಸತ್ಯಗಳು ನಮಗೂ ಹೊಳೆಯಬಲ್ಲವು. ಮೂರು ಮೊಳದ ಬರವಣಿಗೆಯ, ಮೂರು ಗಳಿಗೆಯ ಓದಿನ ತರಾತುರಿಯಲ್ಲಿ ಬುದ್ಧಿ ಕೈ ಕೊಡುತ್ತದೆ; ವಿವೇಕ, ಜ್ಞಾನಗಳಂತೂ ಮೊದಲೇ ಕೈ ಕೊಟ್ಟಿರುತ್ತವೆ! ಇಂಥ ಟ್ರಾಫಿಕ್ ಸಿಗ್ನಲ್ ದಾಟುವ ‘ಓಡು ಮನಸ್ಥಿತಿ’ಯಲ್ಲಿ ಶ್ರೇಷ್ಠ ಕಲಾಕೃತಿಗಳ ಗಾಢ ಸತ್ಯಗಳು ಎಲ್ಲಿಂದ ತಾನೇ ಹೊಳೆಯಬಲ್ಲವು! ಆದ್ದರಿಂದಲೇ,  ಕತೆಯನ್ನಾಗಲೀ, ನಾಟಕವನ್ನಾಗಲೀ, ವೈಚಾರಿಕ ಕೃತಿಯನ್ನಾಗಲೀ ಓದುತ್ತಾ, ಓದುತ್ತಾ ಹೊಸ ಹೊಸ ಸತ್ಯ ಕಂಡು, ಇತರರಿಗೂ ಆ ಸತ್ಯಗಳನ್ನು ಕಾಣಿಸಬಲ್ಲ ವ್ಯವಧಾನದ ಓದು ಸದಾ ನಮ್ಮ ಪಾಲಿಗಿರಲಿ!
 

Share on:


Recent Posts

Latest Blogs



Kamakasturibana

YouTube



Comments

0 Comments





Add Comment