ಬಾನು-ದೀಪಾ ಜೋಡಿಯ ಬುಕರ್ ಜಿಗಿತ!

ಕನ್ನಡ ಲೇಖಕಿ ಬಾನು ಮುಷ್ತಾಕ್ ಹೆಸರು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ದೀಪಾ ಭಸ್ತಿ ಮಾಡಿದ ಬಾನು ಮುಷ್ತಾಕ್ ಅವರ ಹನ್ನೆರಡು ಕತೆಗಳ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್’ ೨೦೨೫ರ ಬುಕರ್ ಪ್ರಶಸ್ತಿಯ ಅಂತಿಮ ಹದಿಮೂರು ಪುಸ್ತಕಗಳ ‘ಲಾಂಗ್ ಲಿಸ್ಟ್‌’ಗೆ ಜಿಗಿದಿದೆ. ಈ ಜಿಗಿತ ಕುರಿತ ಖುಷಿಯನ್ನು ಲೇಖಕಿ ಶಾಕಿರಾ ಖಾನುಂ ಜೊತೆ ಮಾತಾಡುತ್ತಿದ್ದರೆ, ಅವರ ಸಂಭ್ರಮ ನನ್ನ ಖುಷಿಗಿಂತ ಜೋರಾಗಿತ್ತು. ಕಾರಣ, ಅವರು ಬರೆಯಬಹುದಾಗಿದ್ದ ಕತೆಗಳನ್ನು ಬಾನು ಬರೆದಿದ್ದರು. ತಮ್ಮ ಪುಸ್ತಕವನ್ನು ಪ್ರಶಸ್ತಿಗೆ ಕಳಿಸಿದ್ದು ಕೂಡ ಗೊತ್ತಿರದ ಬಾನು ಅವರಿಗೆ ಇದೆಲ್ಲ ಅಚ್ಚರಿ ತಂದಂತಿತ್ತು. 

ದೆಹಲಿಯ ಪ್ರಕಾಶನ ಸಂಸ್ಥೆಯ ಗೆಳೆಯರೊಬ್ಬರು ಬಾನು ಮುಷ್ತಾಕರ ಕತೆಗಳ ಬಗ್ಗೆ ನನ್ನನ್ನು ಕೇಳಿದಾಗ, ಹಿಂದೊಮ್ಮೆ ಓದಿದ್ದ ಅವರ ಕತೆಗಳಲ್ಲಿರುವ ಬಂಡಾಯದ ಸಹಜತೆ, ಅನಿವಾರ್ಯತೆ, ಪ್ರಾಮಾಣಿಕತೆ ಎಲ್ಲವೂ ನೆನಪಾದವು. ಬಾನು ಕತೆಗಳಲ್ಲಿ ಬರುವ ಮುಸ್ಲಿಂ ಸಮುದಾಯದ ಕಷ್ಟ ಸುಖ, ಆಧುನಿಕ ಮುಸ್ಲಿಂ ಹೆಣ್ಣುಗಳ ತಳಮಳಕ್ಕೆ ಅವರು ದನಿಯಾಗಿದ್ದು ಇವೆಲ್ಲದರ ಬಗ್ಗೆ ಅವರಿಗೆ ಹೇಳಿದೆ. ಆ ಕತೆಗಳನ್ನು ಈಗ ಓದಿದರೆ ಅವುಗಳ ಕಲಾತ್ಮಕ ಮಹತ್ವದ ಬಗ್ಗೆ ಏನನ್ನಿಸಬಹುದು ಎಂಬ ಬಗ್ಗೆ ನನಗೆ ಗ್ಯಾರಂಟಿಯಿರಲಿಲ್ಲ. ಆದರೆ ಈ ಕತೆಗಳಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿರುವ ಸಾಂಸ್ಕೃತಿಕ-ಸಾಮಾಜಿಕ ಮಹತ್ವದ ಬಗ್ಗೆ ಖಾತ್ರಿಯಿದೆ ಎಂಬುದನ್ನು ಅವರಿಗೆ ಒತ್ತಿ ಹೇಳಿದೆ. 

ಬಾನು ಮುಷ್ತಾಕ್ ಈ ಕತೆಗಳ ಹೊರಗೆ ಮಾಡಿರುವ ಹೋರಾಟಗಳು, ಲಾಯರ್ ಆಗಿ ಅವರು ಮಾಡಿರುವ ಸಮುದಾಯದ ಕೆಲಸಗಳು, ಅವರು ಎದುರಿಸಿರುವ ಮೂಲಭೂತವಾದಿಗಳ ಕಿರಿಕಿರಿಗಳು… ಇವೆಲ್ಲವೂ ಅವರನ್ನು ಕನ್ನಡದ ಅನನ್ಯ ಆಕ್ಟಿವಿಸ್ಟ್-ಲೇಖಕಿಯಾಗಿಸಿವೆ. ಅದರಲ್ಲೂ ಮುಸ್ಲಿಂ ಸಮುದಾಯದ ಹೆಣ್ಣೊಬ್ಬಳು ಲೇಖನಿ ಹಿಡಿಯುವುದೇ ಒಂದು ‘ಆಕ್ಟಿವಿಸಂ’ ಎನ್ನುವಂತಿದ್ದ ಇಪ್ಪತ್ತನೆಯ ಶತಮಾನದ ಎಂಬತ್ತು-ತೊಂಬತ್ತರ ದಶಕದ ಕಾಲದಲ್ಲಿ ಬಾನು ದಿಟ್ಟವಾದ ಕತೆ, ವರದಿ, ವಿಶ್ಲೇಷಣೆಗಳನ್ನು ಬರೆದ ರೀತಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಾಗಲು ಅತ್ಯಂತ ಅರ್ಹವಾಗಿದೆ.

ಒಂದು ಪುಸ್ತಕ ಬರೆದ ನಂತರ ಅಥವಾ ಅದು ಇಂಗ್ಲಿಷಿಗೆ ಅನುವಾದವಾದ ನಂತರ ಅದಕ್ಕೆ ಸ್ಪಂದಿಸುವ ಓದುಗ, ಓದುಗಿಯರನ್ನು ಹುಡುಕುವುದನ್ನು ಬಿಟ್ಟು ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಜಾಡು ಹುಡುಕುವ ಲೇಖಕ, ಲೇಖಕಿಯರು ಜಗತ್ತಿನ ಎಲ್ಲೆಡೆ ಇರುತ್ತಾರೆ.  ಕನ್ನಡ ಪುಸ್ತಕಗಳ ಇಂಗ್ಲಿಷ್ ಪರಕಾಯ ಪ್ರವೇಶದ ಬಗ್ಗೆ ಈಚೆಗೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನದೊಂದು ಲೇಖನ ಕೆಲವರಿಗೆ ವಿನಾಕಾರಣ ಕಿರಿಕಿರಿ ಹುಟ್ಟಿಸಿದ್ದನ್ನು ನೀವು ಗಮನಿಸಿರಬಹುದು. ಒಂದು ಪ್ರಶಸ್ತಿಗೆ ಯಾವ ಥರದ ಪುಸ್ತಕಗಳು ಸೂಟಾಗುತ್ತವೆ; ಈ ಪ್ರಶಸ್ತಿ ಪಡೆಯಲು ಇತ್ತೀಚಿನ ವರ್ಷಗಳಲ್ಲಿ ತನ್ನ ‌‌‌ವ್ಯಕ್ತಿತ್ವ ಹೇಗೆಲ್ಲ ಬಿಂಬಿತವಾಗಿರಬೇಕು ಎಂದು ‘ರಿಸರ್ಚ್’ ಮಾಡುವ ಲೇಖಕ, ಲೇಖಕಿಯರೂ ಲೋಕದಲ್ಲಿರುತ್ತಾರೆ! ಒಂದು ಅಂತರ್ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಲು ‘ಪರಿಸರವಾದಿ’ ಎಂದು ಕೂಡ ಪರಿಚಿತವಾಗಿರಬೇಕು ಎಂದು ಲೇಖಕರೊಬ್ಬರಿಗೆ ಯಾರೋ ಹೇಳಿದರು. ಸರಿ, ಅವರು ಮೇಧಾ ಪಾಟ್ಕರ್ ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧ ಹೋರಾಡುತ್ತಿದ್ದ ಜಾಗಕ್ಕೆ ಹೋಗಿ ಅವರನ್ನು ಬೆಂಬಲಿಸಿ ಕೂತರು. ಆದರೆ ಅಲ್ಲಿ ಹಲವು ವರ್ಷಗಳಿಂದ ಹೋರಾಡುತ್ತಿದ್ದವರು ಈ ಇನ್ಸ್ಟಂಟ್ ಪರಿಸರವಾದಿಯನ್ನು 'ದಯಮಾಡಿ ಹೊರಡಿ' ಎಂದ ಮೇಲೆ ಆ ಮಹನೀಯರು ಅಲ್ಲಿಂದ ಹೊರಡಲೇಬೇಕಾಯಿತು! 

ಆದರೆ ಬಾನು-ದೀಪಾ ಜೋಡಿಯ ‘ಹಾರ್ಟ್ ಲ್ಯಾಂಪ್’ ಕತೆಗಳ ಈ ಸಹಜ ಸೀಮೋಲ್ಲಂಘನದ ಹಿಂದೆ ಇಂಥ ಯಾವ ಸರ್ಕಸ್ಸುಗಳೂ ಇರಲಿಲ್ಲ! ಅಥವಾ ಆ ಥರದ ತಲುಬುಗಳಿಗೆಲ್ಲ ಬಾನು ಥರದ ಲೇಖಕಿಯರಿಗೆ ಎಂದೂ ಸಮಯವಿರಲಿಲ್ಲ. ಬಾನು ಹೆಣ್ಣಾಗಿ, ಒಬ್ಬ ಮುಸ್ಲಿಂ ಹೆಣ್ಣಾಗಿ ತಮ್ಮ ತಳಮಳ ಹಾಗೂ ಸುತ್ತಮುತ್ತಲಿನ ಮುಸ್ಲಿಮರ ಕಷ್ಟಗಳ ಬಗ್ಗೆ ಮಾತು ಕೊಡಲು ಕತೆ ಬರೆದವರು. ಅವರು ಬರೆಯುವ ಹೊತ್ತಿಗೆ ಲಂಕೇಶರು ಮುಸ್ಲಿಂ ದನಿಗಳಿಗೆ ತಮ್ಮ ‘ಲಂಕೇಶ್ ಪತ್ರಿಕೆ’ಯಲ್ಲಿ ಹೆಚ್ಚು ಜಾಗ ಕೊಡತೊಡಗಿದ್ದರು. ಸಾರಾ ಅಬೂಬಕರ್, ಬಾನು ಮೊದಲಾದವರು ಇಲ್ಲಿ ಬರೆಯತೊಡಗಿದರು. ಮುಸ್ಲಿಂ ಮಹಿಳಾ ಲೋಕದ ಬನಿ ಕರ್ನಾಟಕದ ತುಂಬ ಹಬ್ಬತೊಡಗಿತು. ಹೀಗೆ ತಮ್ಮ ಪತ್ರಿಕೆಯಲ್ಲಿ ಮುಸ್ಲಿಂ ಲೋಕವನ್ನು ಮಂಡಿಸುವುದಕ್ಕೆ ಒತ್ತು ಕೊಡಲು ಲಂಕೇಶರ ಲೋಹಿಯಾವಾದಿ-ಸಮಾಜವಾದಿ ದೃಷ್ಟಿಕೋನವೂ ಕಾರಣವಾಗಿತ್ತು. ಉದಾರವಾದಿ ರಾಜಕಾರಣಿ ನಜೀರ್ ಸಾಬ್ ಕರ್ನಾಟಕದ ಮುಖ್ಯ ಮಂತ್ರಿಯಾಗಬೇಕು ಎಂದು ಲಂಕೇಶ್ ಮತ್ತೆ ಮತ್ತೆ ಬರೆಯತೊಡಗಿದ್ದರ ಹಿಂದೆ ಈ ಸಮಾಜವಾದಿ ನೋಟವೂ ಇತ್ತು. 

ಎಂಬತ್ತರ ದಶಕದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯದ ವಿಮರ್ಶಾ ಚೌಕಟ್ಟುಗಳು ಕೂಡ ಬಾನು ಮುಷ್ತಾಕರ ರೀತಿಯ ಕತೆಗಳು ಕನ್ನಡ ಸಂಸ್ಕೃತಿಯಲ್ಲಿ ಹೆಚ್ಚು ಸ್ವೀಕಾರವಾಗುವಂತೆ ಮಾಡತೊಡಗಿದವು. ನನ್ನ ತುಮಕೂರು ಗೆಳೆಯರಾದ ಸಯೀದ್, ನವೀದ್ ಪ್ರತಿವಾರ ‘ಲಂಕೇಶ್ ಪತ್ರಿಕೆ’ ಓದುತ್ತಾ ಬಾನು ಮುಷ್ತಾಕ್ ಥರದವರ ನಿಲುವುಗಳನ್ನು ಬೆಂಬಲಿಸುತ್ತಾ, ಅಲ್ಲಿನ ಮಸೀದಿಯ ಕೆಲವರ ಕೆಂಗಣ್ಣಿಗೂ ಗುರಿಯಾದರು. ಹೀಗೆ ಬಾನು ಮುಷ್ತಾಕರ ಬರಹಗಳು ಅವರಿಗೆ ಅರಿವಿಲ್ಲದೆಯೇ ಕರ್ನಾಟಕದ ಆಧುನಿಕ ಮನಸ್ಸಿನ ಮುಸ್ಲಿಮರ ಚರಿತ್ರೆಯ ಚಕ್ರವನ್ನು ಬದಲಿಸತೊಡಗಿದ್ದವು. ಬಾನುವಿನ ದನಿಯಿಂದ ಕೂಡ ಕರ್ನಾಟಕದ ಸಾಂಸ್ಕೃತಿಕ ಬಾನಿನಲ್ಲಿ ಅಲ್ಲಲ್ಲಿ ಬಂಡಾಯದ ಚುಕ್ಕಿಗಳು ಮೂಡತೊಡಗಿದವು. ನೆನಪಿರಲಿ, ಹೀಗೆ ಮೂಡಿದ ಹೆಣ್ಣು ಚುಕ್ಕಿಗಳು ಕೇವಲ ಮುಸ್ಲಿಂ ಸಮುದಾಯದ ಕತ್ತಲಿನಿಂದ ಮಾತ್ರ ಬರದೆ, ಹಿಂದೂ ಸಮಾಜದ ವಿವಿಧ ಜಾತಿಗಳಿಂದಲೂ ಬರತೊಡಗಿದ್ದವು. ಆಳವಾದ ಚಡಪಡಿಕೆಯ ಆಧುನಿಕ ಮನಸ್ಸಿನ ಮಹಿಳೆಯೊಬ್ಬರ ಕತೆಗಳು ಮೆಲ್ಲಗೆ, ಸದ್ದಿಲ್ಲದೆ ಕ್ರಾಂತಿ ಮಾಡತೊಡಗಿದ್ದವು. 

ಇದೆಲ್ಲದರ ಜೊತೆಗೆ, ಪತಿ ಮುಷ್ತಾಕ್ ಗಟ್ಟಿಯಾಗಿ ಬಾನುವಿನ ಬೆಂಬಲಕ್ಕೆ ನಿಂತಿದ್ದರ ಮಹತ್ವ ಕೂಡ ನನಗೆ ನೆನಪಾಗುತ್ತದೆ. ಬಾನು ಅವರ ಕತೆಗಳು ಪಠ್ಯವಾದಾಗ ಅವು ಹುಡುಗ, ಹುಡುಗಿಯರ ಪ್ರಜ್ಞೆಯನ್ನೂ ಬದಲಿಸತೊಡಗಿದವು. ಮುಸ್ಲಿಂ ಲೋಕವನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳದೆ ಕೋಮುವಾದದ ವಿಕಾರಕ್ಕೆ ಒಳಗಾಗುತ್ತಿದ್ದ ಕನ್ನಡಿಗರನ್ನು ಬದಲಾಯಿಸಲು ಬಾನು, ಸಾರಾ ಥರದವರ ಕತೆ, ಕಾದಂಬರಿಗಳು ಮಾಡಿರುವ ಕೆಲಸದ ಸಾಮಾಜಿಕ-ಸಾಂಸ್ಕೃತಿಕ ಮಹತ್ವವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕಾಗಿದೆ. ಜಾತ್ಯತೀತ ಕರ್ನಾಟಕದ ಸೃಷ್ಟಿಯಲ್ಲಿ ಇಂಥ ನೂರಾರು ಪ್ರಯತ್ನಗಳು ಕೊಟ್ಟಿರುವ ಕೊಡುಗೆಗಳನ್ನು ನೆನೆದರೆ ಹೆಮ್ಮೆಯಾಗುತ್ತದೆ.  

ಬಾನು ಮುಷ್ತಾಕರ ಕತೆಗಳ ಅನುವಾದದ ಪುಸ್ತಕ ‘ಹಾರ್ಟ್ ಲ್ಯಾಂಪ್’ನಲ್ಲಿರುವ ದೀಪಾ ಭಸ್ತಿಯವರ ‘ರೆಡ್ ಲುಂಗಿ’ ಕತೆಯ ಒಂದು ಭಾಗವನ್ನು ‘ಪ್ಯಾರಿಸ್ ರಿವ್ಯೂ’ನಲ್ಲಿ ಓದಿದೆ. ಹಿಂದೆ ಬಾನು ಅವರ ಕನ್ನಡ ಕತೆಗಳನ್ನು ಓದಿದ್ದಂತೆಯೇ ಈ ಸಹಜ ಇಂಗ್ಲಿಷ್ ಮರುಸೃಷ್ಟಿಯನ್ನೂ ಆರಾಮಾಗಿ ಓದಿದೆ. ದೀಪಾ ಈ ಕತೆಗಳನ್ನು ಅನುವಾದಿಸುವ ಮೊದಲು ಅರೇಬಿಕ್ ಕಲಿತಿದ್ದು ಕೂಡ ಕುತೂಹಲಕರ. ಹವ್ಯಕ ಮಾತೃಭಾಷೆಯ ದೀಪಾ, ದಖನಿಗೆ ಹತ್ತಿರವಿರುವ ಭಾಷೆಯ ಬಾನು ಈ ಇಬ್ಬರ ಜೋಡಿ ಕನ್ನಡ ಸಂಸ್ಕೃತಿಯ ವಿಶಿಷ್ಟ ಅನುಭವಗಳನ್ನು ಜಗತ್ತಿಗೆ ತಲುಪಿಸುವ ಚಾರಿತ್ರಿಕ ಕೆಲಸ ಮಾಡಿದೆ. ‘ಪ್ಯಾರಿಸ್ ರಿವ್ಯೂ’ವರೆಗೆ ಪಯಣಿಸಿದ ದೀಪಾ ಅವರ ಕಥಾನುವಾದದ ಟಿಪ್ಪಣಿ ಹಾಗೂ ‘ರೆಡ್ ಲುಂಗಿ’ ಕತೆ ಈಗಾಗಲೇ ಇಬ್ಬರನ್ನೂ ಜಗತ್ತಿನ ಸಾಂಸ್ಕೃತಿಕ ಭೂಪಟದಲ್ಲಿ ಮೂಡಿಸಿದೆ. ‘ಹಾರ್ಟ್ ಲ್ಯಾಂಪ್’ ಕೂಡ ಹೀಗೇ ಮುನ್ನಡೆದು ಗುರಿ ಮುಟ್ಟಲಿ ಎಂದು ಹಾರೈಸೋಣ.

ಸಾಹಿತ್ಯದ ವಿದ್ಯಾರ್ಥಿಯಾಗಿ ನಾನು ಗಮನಿಸಿದಂತೆ ಬದಲಾಗುವ ಪಶ್ಚಿಮದ ವಿಮರ್ಶೆಗಳ ಮಾನದಂಡಗಳು ವಿಚಿತ್ರ. ಈ ಮಾನದಂಡಗಳು ಯಾವ ಕಾರಣಕ್ಕೆ ಯಾವ ಕೃತಿಯನ್ನು ಎತ್ತಿ ಹಿಡಿಯುತ್ತವೋ ಹೇಳುವುದು ಕಷ್ಟ. ಕಳೆದ ವರ್ಷ ಹಾನ್ ಕಾಂಗ್‌ರ ಸಮಗ್ರ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಘೋಷಿಸಿದ ಆಯ್ಕೆ ಸಮಿತಿ ಆಕೆಯ ’ಕಾವ್ಯಾತ್ಮಕ ಗದ್ಯ’ವನ್ನು ವಿಶೇಷವಾಗಿ ಗುರುತಿಸಿತ್ತು. ಹಾನ್ ಕಾಂಗ್‌ಗೆ ನೊಬೆಲ್ ಬಂದಾಗ ಅವರ ’ದ ವೆಜಿಟೇರಿಯನ್’ ಕಾದಂಬರಿ ಹಿಂದೊಮ್ಮೆ ಬುಕರ್ ಪ್ರಶಸ್ತಿ ಪಡೆದಿದ್ದನ್ನು ಗಮನಿಸಿದೆ; ಆ ಕಾದಂಬರಿಯನ್ನು ಅಂದೇ ಓದಲು ಅಂಗಡಿಯಿಂದ ತರಿಸಿದ ನಾನು ಅದರಲ್ಲಿ ಸಸ್ಯಾಹಾರದ ಕಡೆಗೆ ತಿರುಗಿದ ಹೆಣ್ಣೊಬ್ಬಳ ಮೇಲೆ ನಡೆಯುವ ವಿಚಿತ್ರ ಮಾನಸಿಕ ಹಲ್ಲೆಗಳವರೆಗೂ ಓದಿ, ಬೆಚ್ಚಿ, ಎತ್ತಿಟ್ಟೆ. 

ಅವತ್ತು ಬೆಳಗ್ಗೆಯೇ ಜ್ವರ ಬರುವಂತೆ ಕಾಣುತ್ತಿದ್ದ ನನಗೆ ‘ದ ವೆಜಿಟೇರಿಯನ್’ ಕಾದಂಬರಿಯ ಈ ಹಿಂಸೆಗಳ ಭಾಗಕ್ಕೆ ಬರುವ ಹೊತ್ತಿಗೆ ಜ್ವರ ಏರಿಯೇ ಬಿಟ್ಟಿತು! ಮೈ ಸರಿಯಿಲ್ಲದಿರುವಾಗ ಯಾವುದನ್ನು ಓದಬಾರದು ಎಂದು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ವಿಮರ್ಶಕ ವಾಲ್ಟರ್ ಬೆಂಜಮಿನ್‌ಗೆ ಹೇಳಿದ್ದರ ಬಗ್ಗೆ ಹಿಂದೊಮ್ಮೆ ನಾನೇ ಬರೆದಿದ್ದು ನೆನಪಾಯಿತು. ಅದರಲ್ಲೂ ಜ್ವರ ಬಂದಾಗ ದಾಸ್ತೋವಸ್ಕಿಯ ತಂಟೆಗಂತೂ ಹೋಗಲೇಬೇಡ ಎನ್ನುತ್ತಾನೆ ಬ್ರೆಕ್ಟ್!

ಇದೀಗ, ಈ ಅಂಕಣ ಬರೆಯುವ ಮೊದಲೇ ಜ್ವರ ತಾನು ಬರಲಿದ್ದೇನೆಂದು ಹೆದರಿಸುತ್ತಿತ್ತು! ಆ ಹೆದರಿಕೆಯನ್ನು ಒದ್ದೋಡಿಸುವಂತೆ ಬಾನುಮುಷ್ತಾಕರ ಅನುವಾದಿತ ಕತೆ ‘ರೆಡ್ ಲುಂಗಿ’, ಅನುವಾದಕಿ ದೀಪಾ ಅವರ ‘ಅಂತೆ' ಟಿಪ್ಪಣಿ ಎರಡೂ ಸಿಕ್ಕವು. ಶನಿವಾರ ಸಂಜೆಯವರೆಗೂ ಏನು ಬರೆಯಬೇಕೆಂದು ಯೋಚಿಸುತ್ತಿದ್ದವನಿಗೆ ಬಾನು-ದೀಪಾ ಜೋಡಿಯ ಸಾಹಸದ ಬಗ್ಗೆ ಬರೆಯಲೇಬೇಕೆಂಬ ಅಸಲಿ ಒತ್ತಡ ಮೂಡತೊಡಗಿತು.

ಬರುವ ಮೇ ತಿಂಗಳಲ್ಲಿ ಬುಕರ್ ಪ್ರಶಸ್ತಿಯ ಘೋಷಣೆ ಆಗುವವರೆಗೂ ಕಾಯುವ ಸೋಮಾರಿತನಕ್ಕಿಳಿಯದೆ, ಬಾನು ಮುಷ್ತಾಕರ ಕನ್ನಡ ಕತೆಗಳನ್ನೂ, ಅವರ ಇಂಗ್ಲಿಷ್ ಕತೆಗಳನ್ನೂ ಮೊದಲೇ ಓದಿ, ಚರ್ಚಿಸಿ ಎಂದು ಓದುಗಿಯರಿಗೂ, ಓದುಗರಿಗೂ ಪ್ರೀತಿಯಿಂದ ಹೇಳಬಯಸುವೆ.

Share on:

Comments

22 Comments



| Subramanya Swamy

, ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್


| ಮಂಜುನಾಥ್ ಸಿ ನೆಟ್ಕಲ್

ಕನ್ನಡದ ಹೆಮ್ಮೆಯ ಬರಹಗಾರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಸಂದರ್ಭದಲ್ಲಿ ಇಂತಹ ಆತ್ಮೀಯ ಬರಹ ಮನ ಮುಟ್ಟುವಂತಿದೆ. ಧನ್ಯವಾದಗಳು ಸರ್... ಇನ್ನಷ್ಟು ಲೇಖಕಿಯರಿಗೆ ಕನ್ನಡ ಸಾಹಿತ್ಯಲೋಕ ಪ್ರವೇಶಿಸಲು\r\nಈ ಬರಹ ಸ್ಫೂರ್ತಿ ನೀಡಲಿ


| Dr.Mohan Mirle

ಬರಹ ತುಂಬಾ ಚೆನ್ನಾಗಿದೆ. ಎರಡು ಬಾರಿ ಓದಿದೆ. ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಕನ್ನಡ ಸಾಹಿತ್ಯಿಕ‌ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಖಂಡಿತಾ ಬಾನು ಮುಷ್ತಾಕರ ಸ್ಥಾನ ಅನನ್ಯ. ಅದನ್ನು ತುಂಬಾ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೀರಿ. ಪ್ರಶಸ್ತಿಗಳ ಮಾರಾಟ! ಮತ್ತು ಬೇಟೆ! ಎರಡೂ ಭರದಿಂದ ಸಾಗುತ್ತಿರುವ ಈ ಹೊತ್ತಿನಲ್ಲಿ ಬಾನು ಅವರ ಕಥೆಗಳು(ಮತ್ತು ದೀಪಾ ಭಸ್ತಿ ಅವರ ಸಮರ್ಥ ಅನುವಾದ) ಪ್ರಶಸ್ತಿಯ ಆಯ್ಕೆ ಸುತ್ತಿಗೆ ಪ್ರವೇಶಿಸಿರುವ ರೀತಿ ಕೀರ್ತಿ ಶನಿಯನ್ನು ತಾವಾಗಿಯೇ ಹೆಗಲಮೇಲೆ ಕೂರಿಸಿಕೊಂಡು ಅಲೆಯುತ್ತಿರುವ ಅನೇಕರ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುವಂತಿದೆ. ಒಬ್ಬ ಬರಹಗಾರ್ತಿ, ಬರಹಗಾರ ಅಂತರಂಗದ ತುಡಿತ ಮತ್ತು ನೈಜ ಕಾಳಜಿಯಿಂದ ಸಾಮಾಜಿಕ‌ ಬದಲಾವಣೆಗೆ ಹಂಬಲಿಸಿ ಬರೆದರೆ ಪ್ರಶಸ್ತಿ ನಿಜಕ್ಕೂ ನಗಣ್ಯ. ಬಂದರೆ ಸಂತೋಷ, ಅಂತಹ ಪ್ರಾಮಾಣಿಕ ಪ್ರಯತ್ನ‌ ನನ್ನಿಂದ ಆಗಿದೆಯಲ್ಲಾ ಎಂಬ ಆತ್ಮತೃಪ್ತಿ. ಮತ್ತಷ್ಟು ಸಮಾಜಮುಖಿ ಕಾರ್ಯ ಮಾಡಲು ಉತ್ತೇಜನ. ಈ ಎಲ್ಲವನ್ನೂ ಈ ಬರಹ ಸೂಕ್ಷ್ಮವಾಗಿ ಮಂಡಿಸುತ್ತಿದೆ ಎಂದೇ ನನ್ನ ಭಾವನೆ. ಈ ಸಂದರ್ಭದಲ್ಲಿ ನೀವು ಯಾವಾಗಲೂ ಹೇಳುತ್ತಿದ್ದ ಒಂದು ಮಾತು ನನ್ನ ನೆನಪಿಗೆ ಬರುತ್ತಿದೆ. \"ಬರಹದಲ್ಲಿ ಶೈಲಿಗಿಂತ ಪ್ರಾಮಾಣಿಕತೆ ಮುಖ್ಯ. ಆ ಪ್ರಾಮಾಣಿಕತೆಯೇ ಬರಹಕ್ಕೊಂದು ಶಕ್ತಿ ನೀಡುತ್ತದೆ.\" ಈ ಮಾತನ್ನು ನಾನೂ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ವಿದ್ಯಾರ್ಥಿ ಮಿತ್ರರಿಗೂ ಇದನ್ನೇ ಹೇಳುತ್ತಿದ್ದೇನೆ. ಇಂತಹ ಇನ್ನೂ ಸಾವಿರಾರು ಬರಹಗಳು ಬರಲಿ. ಕನ್ನಡ ನಾಡನ್ನು, ಅದರಲ್ಲೂ ಯುವಜನತೆಯನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತಷ್ಟು ಸೂಕ್ಷ್ಮ ಸಂವೇದಿಗಳನ್ನಾಗಿ ರೂಪಿಸಲಿ. ಲಂಕೇಶರಿಗೂ ನಿಮಗೂ ಮನದುಂಬಿದ ಧನ್ಯವಾದಗಳು.\r\n


| Dr.Sanganagowda

ಕನ್ನಡ ಅಂತರರಾಷ್ಟಿಯ ಮಟ್ಟದಲ್ಲಿ ಮತ್ತಷ್ಟೂ ಗುರುತಿಸುಶಂತಾಗಲಿ. ಮುಸ್ಲಿಂ ಬರೆಹಗಾರ್ತಿಯರ ಕಾದಂಬರಿಗಳನ್ನು ಗಂಭೀರವಾಗಿ ಓದಲು ಹಚ್ಚವಂತ ಬರೆಹ ಬರೆದ ನಿಮಗೆ ಧನ್ಯವಾದಗಳು


| ಕುಂಸಿ ಉಮೇಶ್

ಸರಳ ವಾಗಿ ಬರೆದು ಒರಿಜಿನಲ್ಸ್ ಕಡೆ ಓಡಿಹೋಗಿ ಓದುವಂತೆ ಮಾಡುವ ನಿಮ್ಮ ಗಾಳಿ ಬೆಳಕು ಸ್ವಚಂದ.. ಲಂಕೇಶ್ ಮೇಸ್ಟ್ರು ಈಗ ಇದ್ದಿದ್ರೆ..ಬೂಕರ್ ಪ್ರಶಸ್ತಿ ತಮಗೆ ಬಂದಷ್ಟು ಉಲ್ಲಸಿತರಾಗಿ ಪೆಗ್ ಹಾಕಿ ಟಿಪ್ಪಣಿ ಬರಿಯೋರೇನೋ.. ಅಥವಾ ತೊ ತೋ.. ಅವೆಲ್ಲ ಮುಖ್ಯ ಅಲ್ಲಾ.. ಜಾಣೆ ಜಾಣರು.. ಮುಖ್ಯವಾಗಿ ಓದಬೇಕು.. ನಟರಾಜ್ ಅಂತ ಹೇಳುತಿದ್ರು ಅನ್ನಿಸುತ್ತೆ.. ನೀವು ಒಟ್ಟಿಗೆ ಬ್ರೇಕ್ಟ್. ಬೆಂಜಮಿನ್. ದಾಸ್ತೋವಸ್ಕಿ.. ಲಂಕೇಶ್ ರನ್ನ ನೆನೆದು ಬರೆಯೋದು. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಈಗ ಅನಿವಾರ್ಯ ಸಾರ್.. ಬಾನು ಮೇಡಂಗೆ ಪ್ರಶಸ್ತಿ ದೊರೆಯಲಿ.. ಆ ಮೂಲಕ ಕರುನಾಡು ಮತ್ತೆ ಮತ್ತೆ ಮೇಷ್ಟ್ರೇನ್ನ ನೆನಪು ಮಾಡಿಕೊಳ್ಳಲಿ...


| ಎಚ್ ಟಿ ಕೃಷ್ಣಮೂರ್ತಿ

ನಟರಾಜ್, ಬಾನು ಅವರ ಕತೆ ಬಗ್ಗೆ ಹೇಳುತ್ತಲೇ ಸಾಂಸ್ಕೃತಿಕ ವಿಮರ್ಶೆ,ಚರಿತ್ರೆ, ಎಚ್ಚರ ಎಲ್ಲ ಜೋಡಿಸಿ ಬರೆದಿದ್ದೀರಿ.ಜೊತೆಗೆ ದೀಪ ಬಗ್ಗೆ ಕೂಡ..ಎಲ್ಲರಿಗೂ ಅಭಿನಂದನೆಗಳು.


| Dr.Savitha Ravishankar

ಬರಹಕ್ಕೆ ಎರಡು ಮಾತಿಲ್ಲ. ಆದರೆ ಮೂಲಕೃತಿಯ ಹೆಸರು ತಿಳಿಯಲಿಲ್ಲ. \'ಹಾರ್ಟ್ ಲ್ಯಾಂಪ್\' ಅನುವಾದಗೊಂಡ ಕೃತಿ. ಮೂಲ ಕೃತಿಯ ಹೆಸರು? ಬೆಳಕಿಂಡಿಯ ನೋಟದಂತೆ ಬರಹವಿದ್ದರೂ, ವಿಶಾಲ ಆಗಸ ನೋಡಬೇಕಿರುವುದು ನಾವೇ ಎಂಬುದನ್ನು ಮನವರಿಕೆ ಮಾಡುತ್ತದೆ. ಪುಸ್ತಕ ಕೊಂಡುಕೊಳ್ಳುವ ಕುತೂಹಲ ಮೂಡಿಸಿದೆ. ಕೃತಿಯೊಂದನ್ನು ಓದಿ, ನಂತರ ಅಭಿನಂದನೆಗಳನ್ನು ಹೇಳಬೇಕು. ಇರಲಿ, ಖುಷಿ ಹಂಚಿಕೊಳ್ಳಲು ಕಾರಣ ಬೇಡ. ಜೋಡಿ ಲೇಖಕಿಯರಿಗೆ ಹಾಗೂ ಈ ವಿಷಯ ತಿಳಿಸಿದ ನಿಮಗೂ ಅಭಿನಂದನೆಗಳು.


| Nataraj Huliyar Replies

ಥ್ಯಾಂಕ್ಸ್. ಅನುವಾದಿತ ಪುಸ್ತಕದ ಹೆಸರು ಹಾರ್ಟ್ ಲ್ಯಾಂಪ್. ಇದು ಬಾನು ಅವರ ಆಯ್ದ ಕನ್ನಡ ಕತೆಗಳ ಅನುವಾದದ ಕೃತಿ. ರೆಡ್ ಲುಂಗಿ ಅದರಲ್ಲಿರುವ ಒಂದು ಕತೆ.


| Dr.B.L.Raju

ಲೇಖನಗಳು ಬಹಳ ಒಳ್ಳೆಯ ಒಳನೋಟಗಳಿಂದ ಕೂಡಿವೆ. ಈ ಹೊತ್ತಿನ ಕನ್ನಡ ಸಂವೇದನೆಯನ್ನು ವಿಸ್ತರಿಸುತ್ತಿರುವವರಲ್ಲಿ ನೀವು ಮಂಚೂಣಿಯಲ್ಲಿದ್ದೀರಿ.


| ದೀಪಾ ಭಾಸ್ತಿ

ಓದಿದೆ, ತುಂಬಾ ಧನ್ಯವಾದಗಳು 🙏🏽 Heart Lamp ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟವಾಗಲಿದೆ, ಓದಿ ನಿಮ್ಮ ಅನಿಸಿಕೆ ತಿಳಿಸಿ


| ಡಾ. ಅಮರೇಂದ್ರ ಹೊಲ್ಲಂಬಳ್ಳಿ

ಬಾನು ದೀಪಾ ಜೋಡಿಯ ಬುಕರ್ ಜಿಗಿತ ನಿನ್ನೆ ಓದಿದೆ. ತುಂಬ ಅರ್ಥಪೂರ್ಣವಾದ ಬರೆಹ. ನಾನು ಮೂರು ದಿನಗಳ ಹಿಂದೆ ಬಾನು ರವರಿಗೆ ಮೆಸೇಜ್ ಮಾಡಿ ಅಭಿನಂದಿಸಿದೆ. ಎಂಎ ಕ್ಲಾಸಿಗೆ ಅವರದೊಂದು ಕತೆ ಇತ್ತು. ದೇವರು ಮತ್ತು ಅಪಘಾತ ಅಂತ. ತುಂಬ ಆಸಕ್ತಿಕರ ಅನಿಸಿತು. ಆನಂತರ ಅವರ ಇನ್ನೊಂದಿಷ್ಟು ಬರೆಹಗಳನ್ನು ಓದಿದ್ದೆ. ನಂತರ ಅವರೊಂದಿಗೆ ಮಾತನಾಡಿದ್ದೆ ಕೂಡ. ಅವರ ಪುಸ್ತಕಕ್ಕೆ ಬುಕರ್ ಪ್ರಶಸ್ತಿ ಬರುತ್ತದೊ ಇಲ್ಲವೊ ತಿಳಿದಿಲ್ಲ. ಬರಲಿ, ಸಂತೋಷ. ಅದು ಕನ್ನಡ ಸಂವೇದನೆಗೆ ಸಿಗುವ ಅಂತಾರಾಷ್ಟ್ರೀಯ ಮನ್ನಣೆ ಆಗುವುದರಿಂದ ನಾವೆಲ್ಲ ಖುಷಿ ಪಡಲೇಬೇಕಾದ ವಿಚಾರ. ಆದರೆ, ನೀವು ಬಾನುರವರ ಬರಹಗಳ ನಿಜ ಮಿಡಿತವನ್ನು ದಾಖಲಿಸಿರುವ ಕ್ರಮ ಇದೆಯಲ್ಲ, ಅದು ಒಂದು ಹಿಂಜರಿಕೆಯ ಲೋಕದಿಂದ ಬಂದು ಮುಖ್ಯರಂಗದ ಮುನ್ನೆಲೆಯಲ್ಲಿ ನಿಂತ ಅಪರೂಪದ ಲೇಖಕಿ ಮತ್ತು ಸಾಧಕಿಗೆ ಸಲ್ಲಿಸಿರುವ ವಿಶಿಷ್ಟ ಗೌರವ.


| ದೇವಿಂದ್ರಪ್ಪ ಬಿ.ಕೆ.

ನಮಸ್ತೆ ಸರ್.\r\nಇತ್ತೀಚೆಗೆ ಬಾನು ಮುಷ್ತಾಕ್ ಅವರ ಇಂಗ್ಲಿಷ್ ಅನುವಾದ \'ಹಾರ್ಟ್ ಲ್ಯಾಂಪ್ \' ಕಥಾ ಸಂಕಲನ ಬುಕರ್ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿ ಇರುವುದು ಕನ್ನಡಿಗರಿಗೆಲ್ಲ ಸಂತೋಷದ ಸಂಗತಿ.\r\nಬಾನು ಮುಷ್ತಾಕ್ ಅವರು ತಮ್ಮ ಕಥೆಗಳಲ್ಲಿ ಮಾತ್ರ ಬಂಡಾಯದ ಪ್ರತಿರೋಧವನ್ನು ತರಲಿಲ್ಲ. ಅವರ ಬದುಕೇ ಬಂಡಾಯದ ಮನೋಭಾವದಲ್ಲಿ ಬೆಳೆದು ಬಂದದ್ದು. ಅವರೊಂದಿಗೆ ಲಂಕೇಶ್ ಕುರಿತ ಕಮ್ಮಟದಲ್ಲಿ ಸಂವಾದ ಮಾಡುವಾಗ ಲಂಕೇಶರು ಅವರ ಬರವಣಿಗೆಗೆ ಮತ್ತು ವೈಯಕ್ತಿಕವಾಗಿ ನೀಡಿದ ಧೈರ್ಯವನ್ನು ನೆನೆದರು. ಅಂದಿನ ಮುಸ್ಲಿಂ ಸಮುದಾಯದ ರೀತಿ ನೀತಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ನೇರವಾಗಿ ಬರೆದ ಬಾನು ಮುಷ್ತಾಕ್ ಆಗಲಿ, ಸಾರಾ ಅಬೂಬಕರ್ ಆಗಲಿ ಇತರೆ ಪುರುಷ ಮುಸ್ಲಿಂ ಲೇಖಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯನ್ನು ಕಲಿಯಲು ಹಿಂಜರಿಯುವಂತಹ ಸಂದರ್ಭದಲ್ಲಿ ಇಡೀ ಸಮುದಾಯವನ್ನು ಎದುರು ಹಾಕಿಕೊಂಡು ಬೆಳೆದು ಬಂದ ಈ ಇಬ್ಬರೂ ಲೇಖಕಿಯರು ನಮಗೆಲ್ಲ ಮಾದರಿ. ಯಾವುದೇ ಒಬ್ಬ ಲೇಖಕ ತನ್ನ ಸಮುದಾಯದೊಳಗಿನ ನ್ಯೂನ್ಯತೆಗಳನ್ನು ಧೈರ್ಯವಾಗಿ ಬರೆದಾಗ ಮಾತ್ರ ಅದು ಗಟ್ಟಿ ಬರಹವಾಗುತ್ತದೆ. ಅಂತಹ ಕೆಲಸ ಬಾನು ಮುಷ್ತಾಕ್ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಸರಗೋಡುಗೆ ಭೇಟಿ ನೀಡಿದ್ದಾಗ ಅಲ್ಲಿನ ಚಂದ್ರಗಿರಿ ತೀರದಲ್ಲಿನ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿನ ಬಹುತೇಕ ಮುಸ್ಲಿಂ ಹೆಣ್ಣು ಮಕ್ಕಳು ಯಾವುದೇ ಭಯ ಭೀತಿ ಇಲ್ಲದೆ ಶಿಕ್ಷಣ ಪಡೆಯುತ್ತಿದ್ದಾರೆ. ನಾನು ಸಾಹಿತ್ಯದ ವಿದ್ಯಾರ್ಥಿಯಾಗಿದ್ದರಿಂದ ಇದನ್ನು ಸಾರಾ ಅಬೂಬಕರ್ ಅವರ ಕಥೆ, ಕಾದಂಬರಿಗಳು ಬೀರಿದ ಪರಿಣಾಮ ನೋಡಿ ನಿಜಕ್ಕೂ ಖುಷಿಯಾಯಿತು. ಈ ಇಬ್ಬರೂ ಲೇಖಕಿಯರು ಸುಡು ಸುಡು ಕೆಂಡದ ಮೇಲೆ ನಡೆದು ನಮಗೆಲ್ಲ ಹೂವಿನ ಹಾಸಿಗೆಗೆ ದಾರಿ ಮಾಡಿಕೊಟ್ಟವರು. ಅವರ ಬರಹಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವೈಯಕ್ತಿಕವಾಗಿ ನಮಗೆಲ್ಲ ಸಂತೋಷ. ಇದರ ಜೊತೆಗೆ ಅನುವಾದಕಿ ದೀಪಾ ಭಸ್ತಿ ಅವರಿಗೂ ಧನ್ಯವಾದಗಳು.\r\nI


| ಡಾ. ದಿವ್ಯ ಬೆಸಗರಹಳ್ಳಿ

ಬಡತನ, ಅನಕ್ಷರತೆ, ಮೂಡನಂಬಿಕೆ, ಧರ್ಮದಾಚೆಗೆ......ವರ್ತಮಾನದಲ್ಲಿ ಮುಸ್ಲಿಂ ಮಹಿಳೆಯರ ಸಮಸ್ಯೆ ಸವಾಲುಗಳನ್ನು,ನಿಂತು ನೋಡುವ ಹಾಗೂ ಅಷ್ಟೇ ಸಹಜವಾಗಿ , ಪ್ರಾಮಾಣಿಕತೆಯಿಂದ ಸೃಜಿಸುವ ಬಾನು ಮಷ್ತಾಕ್ ಹಾಗೂ ದೀಪ ಅವರ ಅನುವಾದವನ್ನು ಮೆಚ್ಚಿ ಪ್ರೋತ್ಸಾಹ ತುಂಬುವ ತಮಗೆ ತುಂಬು ಮನದ ಧನ್ಯವಾದಗಳು ಸರ್🙏


| ಸವಿತ ನಾಗಭೂಷಣ

ತುಂಬಾ ಚನ್ನಾಗಿದೆ. ಅವರ ಪ್ರಥಮ ಕಥಾ ಸಂಕಲನ ಹೆಜ್ಜೆ ಮೂಡಿದ ಹಾದಿ ನಾವೇ ಪ್ರಕಟಿಸಿದ್ದು. ನಾಗಭೂಷಣ ಪ್ರೂಫ್ ಸಹ ನೋಡಿದ್ದು, ಬಾನು ಬಿಡುಗಡೆ ಸಮಾರಂಭಕ್ಕೆ ಮಾತ್ರ ಬಂದಿದ್ದು!!


| ವೈದೇಹಿ

ಇದೀಗ ರೋಮಾಂಚಕ ಸುದ್ದಿ. ...ಸಂಭ್ರಮ, ಪುಳಕ...ಎಲ್ಲವೂ


| ಡಾ. ನಿರಂಜನ ಮೂರ್ತಿ ಬಿ ಎಂ

ಬಾನು-ಭಸ್ತಿಯವರ ಪಯಣದ ವಿವರಗಳನ್ನೊಳಗೊಂಡ \'ಬಾನು-ದೀಪಾ ಜೋಡಿಯ ಬುಕರ್ ಜಿಗಿತ\' ಹುಳಿಯಾರರ ಅತ್ಯುತ್ತಮ ಲೇಖನಗಳ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಇಪ್ಪತ್ತನೆಯ ಶತಮಾನದ ಎಂಭತ್ತು ತೊಂಭತ್ತರ ದಶಕಗಳಲ್ಲಿ, ಮಹಿಳಾ ಲೇಖಕಿಯರಿಗೆ ಅಷ್ಟೊಂದು ಪ್ರಾಮುಖ್ಯತೆ ಇರದಿದ್ದ ಕಾಲಘಟ್ಟದಲ್ಲಿ, ಬಾನು ಅವರು ನೊಂದ ಹೆಣ್ಣಿನ ಮನದ ತಳಮಳಗಳಿಗೆ ಧ್ವನಿಯಾದವರು. ಹಾಗಾಗಿ ಅವರ ಸಾಹಿತ್ಯಾಭಿವ್ಯಕ್ತಿಗೆ ವಿಶೇಷ ಮಹತ್ವವಿದೆ. ಬಾನು ಅವರಿಗೆ ಹೃತ್ಪೂರ್ವಕ ನಮನಗಳು.\r\n\r\nಅಂತಹ ಮಹತ್ವದ ಬಾನು ಅವರ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಸಮರ್ಥವಾಗಿ ಅನುವಾದಿಸಿ, ಅಂತರ್ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಭಸ್ತಿಯವರಿಗೂ ಹೃತ್ಪೂರ್ವಕ ನಮನಗಳು.\r\n\r\nಇವರಿಬ್ಬರ ಸಾಹಸವನ್ನು ಪರಿಚಯಿಸಿದ ಹುಳಿಯಾರರಿಗೂ ಹೃತ್ಪೂರ್ವಕ ನಮನಗಳು.\r\n\r\nಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸುವ ಅರ್ಹತೆಯಿರುವ, ಆದರೆ ಇಂಗ್ಲಿಷ್ ಗೆ ಅನುವಾದಗೊಳ್ಳದಿರುವ, ಅನೇಕ ಲೇಖಕಿ-ಲೇಖಕರ ಮಹತ್ವದ ಕೃತಿಗಳನ್ನು ಓದುವ ವರ್ಗಕ್ಕೆ ಪರಿಚಯಿಸುವ ಲೇಖನಗಳು ಹುಳಿಯಾರರಿಂದ ಮೂಡಿಬರಲಿ ಎಂಬುದೇ ನನ್ನ ಆಶಯ.


| ಶಿವಲಿಂಗಮೂರ್ತಿ

ನಿಮ್ಮ ಈ ಲೇಖನ ಹೃದಯಸ್ಪರ್ಶಿಯಾಗಿದೆ. ಲಂಕೇಶರು ಬೆನ್ನು ತಟ್ಟಿ ಬೆಳೆಸಿದ ಸಸಿಗಳು ಹೆಮ್ಮರವಾಗಿ ಫಲ ಕೊಡುತ್ತಿವೆ. ಭಾನು ಮುಷ್ತಾಕ್ ಮತ್ತು ಸಾರಾ ಅಬೂಬಕರ್ ಅವರ ಕಥೆ ಕಾದಂಬರಿಗಳು ತೆರೆದಿಡುವ ವಾಸ್ತವದ ಸಂಗತಿಗಳು ನಿಜಕ್ಕೂ ಮೂಲಭೂತವಾದಿಗಳನ್ನು ಬಿಚ್ಚಿ ಬೀಳುವಂತೆ ಮತ್ತು ಆಕ್ರೋಶಗೊಳ್ಳುವಂತೆ ಮಾಡುತ್ತವೆ. ಕನ್ನಡದ ಕೃತಿಗಳು ಇಂಗ್ಲಿಷ್ ಅನುವಾದದ ಮೂಲಕ ಪ್ರಸಾರಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷಾ ವಿಷಯದ ಪಠ್ಯವಾಗಿರುವಂತೆ ಇವರ ಕೃತಿಗಳು ಉರ್ದು ಭಾಷಾ ವಿಷಯದ ಪಠ್ಯವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದಲ್ಲಿ ಇವರ ಕೃತಿಗಳು ಅನುವಾದಗೊಂಡು ಅಲ್ಲಿ ಪಠ್ಯ ವಿಷಯವಾಗುವುದು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬಹುಮುಖ್ಯ. ದೀಪಾ ಭಸ್ತಿ ಅವರ \r\nಅನುವಾದಿತ ಕೃತಿ \'ಹಾರ್ಟ್ ಲ್ಯಾಂಪ್\'ಗೆ ಬುಕರ್ ಪ್ರಶಸ್ತಿ ಬರಲಿ ಎಂಬುದು ನನ್ನ ಹಾರೈಕೆ ಕೂಡ. ನಿಮ್ಮ ಬರಹದ ಜಿಗಿತ ನಿಜಕ್ಕೂ ನನಗೆ ಅಚ್ಚರಿ ಉಂಟುಮಾಡುತ್ತದೆ.


| ಚಂದ್ರಶೇಖರ ತಾಳ್ಯ

ಬಾನು - ದೀಪಾ ಬರಹ ಹೆಮ್ಮೆ ಪಡುವಂತಿದೆ, ಈ ಇಬ್ಬರೂ ಕನ್ನಡ ಭಾಷೆ, ಸಂಸ್ಕೃತಿಗೆ ಕೀರ್ತಿ ತರುವಂತವರು ಎಂದು ಪ್ರತಿ ಕನ್ನಡಿಗನೂ ಎದೆಯುಬ್ಬಿಸಿ ಹೇಳಬೇಕು, ನಿಮ್ಮ ಬರಹ ಇಂಥದಕ್ಕೆ ಮುನ್ನುಡಿಯಂತಿದೆ. ಪರಿಸರ ಹೂರಾಟದಲ್ಲಿ ಭಾಗವಹಿಸಲೇಬೇಕು ಅಂತ ಹೇಳಿ ಅಲ್ಲಿ ಹೋಗಿ ಹೊರದಬ್ಬಿಸಿಕೊಂಡ ಶ್ರೀ, ಶ್ರೀಮತಿ ಯಾರೋ? ಕೆಟ್ಟ ಕುತೂಹಲ!\r\n


| Vikram Visaji

Wonderful!


| Dr.Suresh

ಲೇಖನ ತುಂಬಾ ಚೆನ್ನಾಗಿದೆ. ಬಾನು ಅವರ ಕತೆಗಳು ನಿಮ್ಮಬರಹದ ಮೂಲಕ ಚರ್ಚೆ ಆಗಲಿ


| Dr Jayashree C Kambar

Sir, ನಿಮ್ಮ ಬರಹಗಳು ಇನ್ನೂ ಹೆಚ್ಚು ಓದಲು ಪ್ರೇರೇಪಿಸುತ್ತವೆ.


| Doreswamy

Sir,\r\nಬಾನು-ದೀಪಾರವರ ಕತೆಗಳ ಬಗ್ಗೆ ತಮ್ಮ ಓದಿನ ಪ್ರಶಂಸೆ, ಪ್ರಶಸ್ತಿಗಳಿಗಿಂತ important..




Add Comment






Recent Posts

Latest Blogs



Kamakasturibana

YouTube