ಸಾವಿತ್ರಿಬಾಯಿ ಫುಲೆ: ಒಂದು ಟಿಪ್ಪಣಿಯ ನಂತರ
by Nataraj Huliyar
ನಿನ್ನೆ ಜನವರಿ ೩ನೇ ತಾರೀಕು ಹಿಂದೊಮ್ಮೆ ೨೦೧೪ರಲ್ಲಿ ಈ ಅಂಕಣಕಾರ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಪ್ರಜಾವಾಣಿಯ ಸಂಗತ ಅಂಕಣಕ್ಕೆ ಬರೆದ ಟಿಪ್ಪಣಿ, ಆ ಟಿಪ್ಪಣಿಗೆ ಬಂದ ಸ್ಪಂದನಗಳು ನೆನಪಾದವು. ಪ್ರಜಾವಾಣಿಯ ಸಹಸಂಪಾದಕರಾಗಿದ್ದ ಸಿ.ಜಿ. ಮಂಜುಳ ಆ ಬರಹ ಬರೆಯಲು ಪ್ರೇರಣೆಯಾಗಿದ್ದರ ಬಗ್ಗೆ ಕೃತಜ್ಞತೆ ಹುಟ್ಟಿತು. ಅವತ್ತು ಅವರು ನನ್ನ ಬರಹದಿಂದ ಆಯ್ದು ಕೊಟ್ಟಿದ್ದ ಇಂಟ್ರೊ ಇದು: ‘ನಮ್ಮ ಸರ್ಕಾರಗಳು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸುವುದು ಅರ್ಥಪೂರ್ಣವಾಗಿರಬಲ್ಲದು.’
ಆ ಪುಟ್ಟ ಬರಹಕ್ಕೆ ಬಂದ ಕನ್ನಡ ಕ್ರಿಯಾಶೀಲ ಚಿಂತಕ, ಚಿಂತಕಿಯರ ಸ್ಪಂದನ ವಿಸ್ಮಯಕರವಾಗಿತ್ತು. ಚಿತ್ರದುರ್ಗದಲ್ಲಿ ಬಿ.ಎಸ್.ಪಿ.ಯಲ್ಲಿ ಕ್ರಿಯಾಶೀಲರಾಗಿದ್ದ ಮೇಷ್ಟ್ರು ಶಿವಣ್ಣ ಮತ್ತವರ ಗೆಳೆಯರು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವ ಪೋಸ್ಟ್ ಕಾರ್ಡ್ ಚಳುವಳಿ ಶುರು ಮಾಡಿದರು. ಈ ಟಿಪ್ಪಣಿಯನ್ನು ಕಿರಣ್‌ಕುಮಾರ್ ಅವರ ’ಓಪನ್ ಮೈಂಡ್ಸ್’ ಸ್ಕೂಲಿನ ಮಕ್ಕಳು, ಇನ್ನಿತರ ಗೆಳೆಯ, ಗೆಳತಿಯರು ಪ್ರತಿ ವರ್ಷ ಹಂಚಿಕೊಳ್ಳುತ್ತಲೇ ಇದ್ದರು.
ಮುಂದೆ ೨೦೧೯ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಸಾವಿತ್ರಿಬಾಯಿ ಫುಲೆಯವರ ದಿನಾಚರಣೆಯನ್ನು ಆಚರಿಸುವ ಆದೇಶ ಹೊರಡಿಸಿತು. ಶಿಕ್ಷಕರ ದಿನಾಚರಣೆಯಂದು ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ ಕೊಡುವ ಯೋಜನೆಯೂ ಶುರುವಾಯಿತು. ಇದೆಲ್ಲ ಒಂದು ಬರಹದಿಂದ ಆಯಿತು ಎಂದು ಸೂಚಿಸುತ್ತಿಲ್ಲ. ಸರಿ ದಿಕ್ಕಿನ ಒಂದು ಚಿಂತನೆ ಹೇಗೋ ಬೆಳೆದು, ಯಾರಿಂದಲೋ ಜಾರಿಯಾಗುವ ಸೋಜಿಗವನ್ನು ಇದು ಸೂಚಿಸುತ್ತದೆ.
ಅಂದಿನ ’ಪ್ರಜಾವಾಣಿ’ ಲೇಖನದ ಆರಂಭದ ಮಾತುಗಳನ್ನು ಮತ್ತೆ ಉಲ್ಲೇಖಿಸುತ್ತೇನೆ:
‘ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಿರುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಹತ್ತೊಂಬತ್ತನೇ ಶತಮಾನದ ಐವತ್ತರ ದಶಕದಲ್ಲಿ ಹುಡುಗಿಯರನ್ನು ಶಾಲೆಗೆ ಕಳಿಸುವ ಬಗ್ಗೆ ಇಂಗ್ಲೆಂಡಿನ ಸಮಾಜವೇ ಇನ್ನೂ ಹಿಂದೆ ಮುಂದೆ ನೋಡುತ್ತಿತ್ತು. ಅಂಥ ಕಾಲಘಟ್ಟದಲ್ಲಿ ಜ್ಯೋತಿಬಾ ಫುಲೆಯವರು ಸಾಮಾಜಿಕ ಸ್ವಾತಂತ್ರ‍್ಯ ಹಾಗೂ ಮಹಿಳೆಯರ ವಿಮೋಚನೆಯ ಕಾಲವನ್ನಾಗಿ ಪರಿವರ್ತಿಸುವ ಕೆಲಸ ಆರಂಭಿಸಿದ್ದರು. ಹದಿಹರೆಯಕ್ಕೆ ಕಾಲಿಡುತ್ತಿದ್ದ ಪತ್ನಿ ಸಾವಿತ್ರಿಬಾಯಿಗೆ ಅಕ್ಷರ ಕಲಿಸಲು ಶುರು ಮಾಡಿದ್ದರು.’
ಅವತ್ತು ಈ ಲೇಖನ ಓದಿ ಬಂದ ಫೋನುಗಳಲ್ಲಿ ಕವಿ ಚಂದ್ರಶೇಖರ ಕಂಬಾರರು ಹೇಳಿದ್ದ ಒಂದು ಮಾತನ್ನು-ಈವರೆಗಿನ ನಮ್ಮ ಚರಿತ್ರೆಯ ಬರವಣಿಗೆಯ ಲೋಪವನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ಮಾತ್ರ- ಇಲ್ಲಿ ಕೊಡುತ್ತಿದ್ದೇನೆ: ‘ಏನ್ರೀ ಆ ಹೆಣ್ಣುಮಗಳ ಸಾಹಸ! ಇದೆಲ್ಲ ನನಗೆ ಗೊತ್ತೇ ಇರಲಿಲ್ಲವಲ್ರೀ?’
ಆ ಲೇಖನ ಓದಿದ ಮತ್ತೊಬ್ಬರು, ‘ನೀವು ಫಾತಿಮಾ ಶೇಖ್ ಬಗ್ಗೆ ಬರೆದಿಲ್ಲವಲ್ಲ?’ ಅಂದಾಗ ಕಂಬಾರರ ಮಾತನ್ನು ಮರುನುಡಿವ ಸರದಿ ನನ್ನದಾಗಿತ್ತು! ಚರಿತ್ರೆಯ ಅಷ್ಟಿಷ್ಟು ಓದಿನಲ್ಲಿ ಸಾವಿತ್ರಿಬಾಯಿಯವರ ಬಗ್ಗೆ ತಿಳಿದಿದ್ದ ನನಗೆ ಆಗ ಫಾತಿಮಾ ಶೇಖ್ ಬಗ್ಗೆ ಗೊತ್ತಿರಲಿಲ್ಲ. ಫಾತಿಮಾ ಕುರಿತು ನಂತರ ಓದಿದ ವಿವರಗಳನ್ನು ಬರೆಯುವ ಮುನ್ನ ನಿಮಗೆ ಪರಿಚಿತವಿರಬಹುದಾದ ೨೦೧೪ರ ಲೇಖನದ ಭಾಗಗಳನ್ನು ಕೊಡುವೆ.
‘ಎದೆಗೆ ಬಿದ್ದ ಅಕ್ಷರದ ಫಲವಾಗಿ ಸಾವಿತ್ರಿಬಾಯಿ (ಜನನ: ೩ ಜನವರಿ ೧೮೩೧) ಮುಂದೆ ೧೮೫೧ರಲ್ಲಿ ಜ್ಯೋತಿಬಾಫುಲೆ ಎಲ್ಲ ಜಾತಿಯ ಹುಡುಗಿಯರಿಗಾಗಿ ತೆರೆದ ಮೊಟ್ಟ ಮೊದಲ ಶಾಲೆಯಲ್ಲಿ ಭಾರತದ ಮೊದಲ ಶಿಕ್ಷಕಿಯಾಗುತ್ತಾರೆ. ಸಾವಿತ್ರಿಯವರ ಮಾವ ಶಿಕ್ಷಕಿಯ ಕೆಲಸ ಬಿಡುವಂತೆ ಸಾವಿತ್ರಿಗೆ ತಾಕೀತು ಮಾಡುತ್ತಾರೆ. ಜ್ಯೋತಿಬಾಗೆ ಶಾಲೆ ಮುಚ್ಚಲು ಹೇಳುತ್ತಾರೆ. ಹುಡುಗಿಯರು ಅಕ್ಷರ ಕಲಿತರೆ ಗಂಡಂದಿರು ಸಾಯುತ್ತಾರೆ ಎಂದು ಸನಾತನಿಗಳು ಎಲ್ಲೆಡೆ ಪತ್ರ ಬರೆದು ಜನರನ್ನು ಹೆದರಿಸುತ್ತಾರೆ. ಸಾವಿತ್ರಿ ಹಾಗೂ ಜ್ಯೋತಿಬಾ ಮನೆ ಬಿಟ್ಟು ಹೊರಬರುವ ಸನ್ನಿವೇಶ ನಿರ್ಮಾಣವಾಗುತ್ತದೆ. ಶಿಕ್ಷಕಿ ಸಾವಿತ್ರಿ ಶಾಲೆಗೆ ಹೊರಟರೆ, ಕ್ರೂರ ಮಡಿವಂತರು ಆಕೆಯ ಮೇಲೆ ಸಗಣಿ ಎರಚುತ್ತಾರೆ. ಅದಕ್ಕೆಲ್ಲ ಜಗ್ಗದ ಸಾವಿತ್ರಿ ಪತಿಯ ಸಲಹೆಯಂತೆ ಶಾಲೆಗೆ ಹೋಗುವಾಗ ಹಳೆಯ ಸೀರೆ ಉಟ್ಟು, ಶಾಲೆ ತಲುಪಿದ ಮೇಲೆ ಮತ್ತೊಂದು ಸೀರೆ ಉಟ್ಟು ಹುಡುಗಿಯರಿಗೆ ಪಾಠ ಹೇಳಿಕೊಡುತ್ತಾರೆ.
ಸಾವಿತ್ರಿಬಾಯಿಯವರ ಶಾಲೆಯಲ್ಲಿ ಕಲಿತ ಮೊಟ್ಟ ಮೊದಲ ಮಾತಂಗ ಜಾತಿಯ ಧನ್ಯಾಬಾಯಿ ಎಂಬ ಹುಡುಗಿ ೧೮೫೫ರಲ್ಲಿ ಮರಾಠಿ ಪತ್ರಿಕೆಯೊಂದರಲ್ಲಿ ಬರೆದ ಬರಹ ಇಡೀ ಮೌನಕ್ರಾಂತಿಯ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಂತಿದೆ: ‘ನಾವು ಮನೆಗಳ ಕೆಳಗೆ ಹೂತು ಹೋಗಿದ್ದೆವು. ಹಿಂದೆ ನಮನ್ನು ಓದಲು ಬರೆಯಲು ಬಿಡುತ್ತಿರಲಿಲ್ಲ. ಆದರೆ ಈಗ ಯಾರೂ ನಮ್ಮನ್ನು ಹೀಗಳೆಯಲಾರರು. ಜೀವಂತ ಸುಡಲಾರರು. ನಾವೀಗ ಬಟ್ಟೆ ತೊಡಬಹುದು; ಪೇಟೆಗೆ ಹೋಗಬಹುದು.’
ಸಾವಿತ್ರಿ ಶಿಕ್ಷಕಿಯಾದ ಮರುವರ್ಷವೇ ಮಹಿಳಾ ಸೇವಾಮಂಡಳ ತೆರೆದರು. ಜ್ಯೋತಿಬಾ- ಸಾವಿತ್ರಿ ಶೂದ್ರರು, ದಲಿತರಿಗಾಗಿ ಹದಿನೆಂಟು ಶಾಲೆಗಳನ್ನು ತೆರೆದರು. ಈ ಪ್ರಯತ್ನಗಳಿಗೆ ವಿರೋಧಗಳೂ ಮುಂದುವರಿದವು. ‘ಅಸ್ಪೃಶ್ಯರಿಗೆ ವಿದ್ಯೆ ಕಲಿಸಿ ನೀನೂ ನಿನ್ನ ಪತಿಯೂ ಸಮಾಜದಲ್ಲಿ ಅಸ್ಪೃಶ್ಯರಾಗಿದ್ದೀರಿ’ ಎಂದು ಸಾವಿತ್ರಿಯ ಅಣ್ಣನೇ ಖಂಡಿಸತೊಡಗಿದ. ‘ನಾಗರ ಹಬ್ಬದ ದಿನ ವಿಷ ಕಕ್ಕುವ ಹಾವುಗಳನ್ನು ಹಿಡಿದು ಹಾಲೆರೆದು ಪೂಜಿಸುತ್ತೀರಿ; ಆದರೆ ಮಹರ್ ಹಾಗೂ ಮಾಂಗ್ ಜಾತಿಯ ಮನುಷ್ಯರನ್ನು ಅಸ್ಪೃಶ್ಯರಾಗಿಸಿದ್ದೀರಲ್ಲ?’ ಎಂದು ಅಣ್ಣನನ್ನು ಗಟ್ಟಿಸಿ ಕೇಳಿದ ಸಾವಿತ್ರಿ, ಅವನ ಕಣ್ಣು ತೆರೆಸಲೆತ್ನಿಸಿದರು. ಸಾವಿತ್ರಿಬಾಯಿ ಈ ಬಗ್ಗೆ ಜ್ಯೋತಿಬಾಗೆ ಬರೆಯುತ್ತಾ ‘ಎಂಥ ಕಷ್ಟ ಬಂದರೂ ನಾವು ನಮ್ಮ ಈ ಹಾದಿಯಿಂದ ಕದಲಬಾರದು; ನಾಳೆ ನಮ್ಮದು’ ಎಂದದ್ದು ಎಲ್ಲ ಕಾಲಕ್ಕೂ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿದವರಲ್ಲಿ ಸ್ಫೂರ್ತಿ ಹುಟ್ಟಿಸುತ್ತದೆ.
‘ಕಾವ್ಯ ಫುಲೆ’ ಕವನ ಸಂಕಲನವೂ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಸಾವಿತ್ರಿಬಾಯಿ ಕಾವ್ಯವನ್ನು ಜಾತಿಪದ್ಧತಿ, ಮನುಧರ್ಮಶಾಸ್ತ್ರದ ವಿರುದ್ಧ ಅಸ್ತ್ರವನ್ನಾಗಿ ಬಳಸಿದರು. ತಮ್ಮ ಮನೆಯ ಬಾವಿಯನ್ನು ದಲಿತರೂ ಸೇರಿದಂತೆ ಎಲ್ಲ ಜಾತಿಗಳವರೆಗೂ ತೆರೆದರು. ವಿಧವೆಯವರ ತಲೆ ಬೋಳಿಸುವುದನ್ನು ಪ್ರತಿಭಟಿಸಲು ಸಾವಿತ್ರಿಬಾಯಿ ೧೮೬೦ರಲ್ಲಿ ಕ್ಷೌರಿಕರನ್ನು ಸಂಘಟಿಸಿದರು. ದಲಿತ ಹುಡುಗಿ-ಬ್ರಾಹ್ಮಣ ಹುಡುಗನ ಪ್ರೇಮವಿವಾಹಕ್ಕೆ ಇಂಬಾಗಿ ನಿಂತರು. ವಿಧವಾವಿವಾಹ ಕುರಿತು ಅರಿವು ಮೂಡಿಸಿದರು. ವೇಶ್ಯೆಯರ, ವಿಧವೆಯರ ಮಕ್ಕಳು ಅವರಲ್ಲಿ ಆಸರೆ ಪಡೆದರು. ಜ್ಯೋತಿಬಾ ನಿರ್ಗಮನದ ನಂತರ ‘ಸತ್ಯಶೋಧಕ ಸಮಾಜ’ದ ಸಾಮಾಜಿಕ ಚಳುವಳಿಯನ್ನೂ ಮುಂದುವರಿಸಿದ ಸಾವಿತ್ರಿಬಾಯಿ ಪ್ಲೇಗಿಗೆ ತುತ್ತಾದ ರೋಗಿಗಳ ಆರೈಕೆ ಮಾಡುತ್ತಿರುವಾಗ ಪ್ಲೇಗಿನ ಸೋಂಕು ತಗುಲಿ ೧೦ ಮಾರ್ಚ್ ೧೮೬೦ರಂದು ತೀರಿಕೊಂಡರು. ಅವರ ಸಾವಿನಲ್ಲೂ ಒಂದು ಅಪೂರ್ವ ಅರ್ಪಣಾ ಸಂದೇಶವೇ ಇತ್ತು.
ಸಾವಿತ್ರಿಬಾಯಿ- ಜ್ಯೋತಿಬಾ ಅವರ ಶಿಕ್ಷಣದ ಕಲ್ಪನೆಯ ಕೇಂದ್ರದಲ್ಲಿ ಮಹಿಳೆ, ದಲಿತ, ಶೂದ್ರರಿದ್ದರು. ಸಂಸ್ಕೃತಿಯ ಬದಲಾವಣೆಗೆ ಸ್ತ್ರೀಯರ ಮಾನಸಿಕ ಪರಿವರ್ತನೆ ಅತ್ಯಂತ ಮುಖ್ಯ ಎಂಬ ಬಗ್ಗೆ ಇಬ್ಬರಿಗೂ ಸ್ಪಷ್ಟತೆಯಿತ್ತು.
ಸಾವಿತ್ರಿಬಾಯಿಯವರ ಇಡೀ ಶಿಕ್ಷಣಪಯಣ ಸರ್ವಕಾಲದ ಸಂದೇಶಗಳನ್ನು ಹೊರಡಿಸುತ್ತದೆ. ಇವತ್ತಿಗೂ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಕ್ಷರ ಕಲಿಯಹೊರಟಿರುವ ಹಳ್ಳಿಗಾಡಿನ ಹುಡುಗ, ಹುಡುಗಿಯರಿದ್ದಾರೆ. ಅಂಥವರಿಗೆಲ್ಲ ಸಾವಿತ್ರಿಬಾಯಿಯವರ ರೀತಿಯ ಬದ್ಧತೆಯಿಂದ ವಿದ್ಯೆ ಕಲಿಸಬೇಕಾದ ಹಾಗೂ ಶಿಕ್ಷಣದ ಅರ್ಥವನ್ನು ವಿಸ್ತರಿಸಬೇಕಾದ ಜರೂರು ಈಗ ಇದೆ. ಈಗ ಸರ್ಕಾರಿ ವಲಯದಲ್ಲಿ ಪ್ರೈಮರಿ ಶಿಕ್ಷಣದ ಅರ್ಧ ಭಾಗಕ್ಕಿಂತ ಹೆಚ್ಚು ಹಾಗೂ ಖಾಸಗಿ ಶಿಕ್ಷಣದಲ್ಲಿ ಬಹುತೇಕ ಭಾಗ ಬೋಧನೆಯ ಜವಾಬ್ದಾರಿ ಮಹಿಳೆಯರ ಕೈಯಲ್ಲಿದೆ. ಈ ಕುತೂಹಲಕರ ಅಂಕಿಅಂಶವನ್ನು ಇವತ್ತು ಶಿಕ್ಷಣವನ್ನು ಸಮಾಜ ಬದಲಾವಣೆಯ ಸಾಧನವನ್ನಾಗಿ ಕಾಣುವ ಎಲ್ಲರೂ ಸರಿಯಾಗಿ ಗ್ರಹಿಸಬೇಕು.
ಶಿಕ್ಷಣ ಕ್ಷೇತ್ರದಲ್ಲಿರುವ ಮಹಿಳೆಯರು ನಿಜವಾದ ಅರ್ಥದಲ್ಲಿ ಸುಶಿಕ್ಷಿತರಾಗಿ ಪಾಠ ಮಾಡತೊಡಗಿದರೆ, ನಮ್ಮ ಮಕ್ಕಳ ತಲೆಯಲ್ಲಿರುವ ಹಲವು ವಿಕಾರಗಳನ್ನು ಹೊಡೆದೋಡಿಸಬಹುದು. ಪ್ರೈಮರಿ ಶಿಕ್ಷಕ, ಶಿಕ್ಷಕಿಯರಿಂದ ಹಿಡಿದು ವಿಶ್ವವಿದ್ಯಾಲಯಗಳ ಅಧ್ಯಾಪಕ ಅಧ್ಯಾಪಕಿಯರವರೆಗೂ ಇರುವ ಶಿಕ್ಷಕ ವರ್ಗ ಕ್ರಾಂತಿಜ್ಯೋತಿ ಸಾವಿತ್ರಿಬಾಯಿಯವರ ಜೀವನದ ಎಳೆಯಿಂದ ಸ್ಫೂರ್ತಿ ಪಡೆದರೆ, ಶಿಕ್ಷಣಲೋಕದ ಬಗೆಬಗೆಯ ಬೇಜವಾಬ್ದಾರಿತನಗಳು ಎಷ್ಟೋ ಕಡಿಮೆಯಾಗಬಲ್ಲವು. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸಿದರೆ ಅರ್ಥಪೂರ್ಣ ವಾಗಿರಬಲ್ಲದು.’
೨೦೧೪ರಲ್ಲಿ ಮೇಲಿನ ಲೇಖನ ಬರೆದ ನಂತರದ ದಿನಗಳಲ್ಲಿ ಫಾತಿಮಾ ಜೀವನದ ವಿವರಗಳನ್ನು ಗಮನಿಸಿದೆ. ರೀಟಾ ರಾಮಮೂರ್ತಿ ಗುಪ್ತ ಬರೆದ ‘ಸಾವಿತ್ರಿಬಾಯಿ ಫುಲೆ: ಹರ್ ಲೈಫ್, ಹರ್ ರಿಲೇಶನ್‌ಶಿಪ್ಸ್, ಹರ್ ಲೆಗಸಿ’ ಪುಸ್ತಕದ ವಿವರಗಳನ್ನು ಈಚೆಗೆ ನೋಡಿದೆ:
ಫುಲೆ-ಸಾವಿತ್ರಿಬಾಯಿ ಮಹರ್, ಮಾಂಗ್, ಶೂದ್ರ, ಅತಿ ಶೂದ್ರರಿಗಾಗಿ ೧೮ ಶಾಲೆಗಳನ್ನು ರೂಪಿಸಿದಾಗ ಫಾತಿಮಾ ಜೊತೆಗೂಡಿದ್ದರು. ೧ ಜನವರಿ ೧೮೪೮ರಂದು ಅವರ ಮೊದಲ ಶಾಲೆ ಶುರುವಾಯಿತು. ಸಾವಿತ್ರಿಬಾಯಿ ಹೆಡ್ ಮಿಸ್ಟ್ರೆಸ್ ಆದರು; ಫಾತಿಮಾ ಶಿಕ್ಷಕಿಯಾದರು.
‘ಅಲ್ಲಿ ಇಲ್ಲಿ ದೊರೆತ ಮೌಖಿಕ ದಾಖಲೆಗಳ ಆಧಾರದ ಮೇಲೆ ಫಾತಿಮಾರ ಜೀವನಯಾನವನ್ನು ಕಟ್ಟುವುದು ಕಷ್ಟವಿತ್ತು’ ಎಂದು ರೀಟಾ ಬರೆಯುತ್ತಾರೆ. ಸಾವಿತ್ರಿ-ಫಾತಿಮಾರ ಭೇಟಿಯಾದದ್ದು ಪೂನಾದ ಮಿಸೆಸ್ ಮಿಶೆಲ್ ಸ್ಕೂಲಿನಲ್ಲಿ; ಅಲ್ಲಿ ಇಬ್ಬರೂ ಇಂಗ್ಲಿಷ್ ಕಲಿಯುತ್ತಿದ್ದರು. ಆವರೆಗೆ ಫಾತಿಮಾ ಥರದ ಹುಡುಗಿಯನ್ನೇ ಸಾವಿತ್ರಿ ಕಂಡಿರಲಿಲ್ಲ. ಉರ್ದು ಕಾವ್ಯದ ಸಾಲುಗಳನ್ನು ನಿರರ್ಗಳವಾಗಿ ಉಲ್ಲೇಖಿಸಬಲ್ಲವರಾಗಿದ್ದ ಫಾತಿಮಾ, ಪರ್ಷಿಯನ್ ಸಾಹಿತ್ಯವನ್ನು ಆಳವಾಗಿ ಓದುತ್ತಿದ್ದರು.
ಬಾಲಕಿಯರ, ಮಹಿಳೆಯರ ಸ್ಥಿತಿ ಬದಲಾಯಿಸಲು ಸಾವಿತ್ರಿಬಾಯಿ ಆರಂಭಿಸಿದ್ದ ಯುದ್ಧಕ್ಕೆ ಫಾತಿಮಾ ಬೆಂಬಲವಾಗಿ ನಿಂತರು. ‘ಟೀಕೆ, ನಿಂದೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು; ಎಲ್ಲ ಕಡೆಯಿಂದ ಸಂಕಷ್ಟಗಳು ಎದುರಾದರೂ ಅನುಕಂಪ ಕಳೆದುಕೊಳ್ಳಬಾರದು’ ಎಂಬುದನ್ನು ಸಾವಿತ್ರಿಬಾಯಿಗೆ ಹೇಳಿಕೊಟ್ಟರು. ಮಹರ್, ಮಾಂಗ್ ಮಕ್ಕಳಿಗೆ ಕುಡಿಯುವ ನೀರು ಸಿಗದಿದ್ದಾಗ ಫಾತಿಮಾ, ಸಾವಿತ್ರಿ ನೀರು ಕೊಂಡು ಈ ಮಕ್ಕಳಿಗೆ ಕೊಡುತ್ತಿದ್ದರು.
ಫಾತಿಮಾ ತಮ್ಮ ಮನೆಯಿಂದ ಭಿಡೇವಾಡದ ಶಾಲೆಗೆ ಹೋಗುತ್ತಿದ್ದಾಗ ಕ್ರೂರಿಗಳು ಅವರ ಮೇಲೂ ಸಗಣಿ ಎಸೆದರು. ಫಾತಿಮಾ ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊಂಡರು. ಸಹೋದ್ಯೋಗಿಯನ್ನು ಸಂತೈಸುತ್ತಾ ಸಾವಿತ್ರಿಬಾಯಿ ’ಹೆದರಬೇಡ’ ಎಂದರು. ಆಗ ಫಾತಿಮಾ ಹೇಳಿದರು: ‘ನಮ್ಮದು ನೂರು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಹಿಡಿಯುವ ಹೋರಾಟ.’ ಫುಲೆ-ಸಾವಿತ್ರಿ ಮನೆ ಬಿಟ್ಟು ಹೊರಡಬೇಕಾಗಿ ಬಂದಾಗ ಅವರಿಬ್ಬರೂ ಫಾತಿಮಾರ ಮನೆಯಲ್ಲಿ ನೆಲೆ ಕಂಡರು. ಭಾರತದ ಒಂದು ಮಹತ್ವದ ಶಿಕ್ಷಣ ಕ್ರಾಂತಿ ಗಂಡ-ಹೆಂಡತಿಯ ಅರ್ಥಪೂರ್ಣ ಸಂಬಂಧದ ಮೂಲಕ, ಜಾತಿ ಧರ್ಮಗಳ ಗಡಿ ಮೀರಿದ ಸಂಬಂಧಗಳ ಮೂಲಕ, ಆದದ್ದು ಮಲೆತುಹೋಗಿರುವ ಮನಸ್ಸುಗಳಿಗೆ ನೆನಪಾಗಬೇಕು.
ಕಳೆದ ವರ್ಷವಷ್ಟೇ ಸಾವಿತ್ರಿಬಾಯಿಯವರ ಪದ್ಯಗಳ ಮರಾಠಿ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದೆ. ಮೂಲ ಮರಾಠಿ ಕವಿತೆಗಳ ಲಯ, ಪ್ರಾಸಗಳನ್ನು ಗಮನಿಸಿದರೆ, ಸಾವಿತ್ರಿಯವರ ಸಹಜ ಕವಿತಾ ಶಕ್ತಿ ಓದು, ಟೀಚಿಂಗ್, ಸಾಮಾಜಿಕ ಸವಾಲುಗಳ ಜೊತೆ, ಭಕ್ತಿ ಕಾವ್ಯದ ಓದಿನ ಜೊತೆಗೆ ವಿಕಾಸಗೊಂಡಂತಿದೆ:
ಜಾತಿ ಗಾಯದ ರಕ್ತ ಒಸರುತ್ತಲಿದೆ
ಈ ಬದುಕಿಂದ ಕೊನೆಗೊಮ್ಮೆ ಅದನು ತೊಡೆದು ಹಾಕುವೆ.
ಸಾವಿತ್ರಿಬಾಯಿಯವರ ಕವಿತೆಗಳನ್ನು ಮರಾಠಿ ಬಲ್ಲ ಕನ್ನಡ ಕವಯಿತ್ರಿಯೊಬ್ಬರು ಅನುವಾದಿಸಿದರೆ, ಆ ಕಾವ್ಯದ ನಿಜವಾದ ಶಕ್ತಿ ಅರಿವಾಗಬಲ್ಲದು. ಆಧುನಿಕ ಮಹಿಳಾ ಕಾವ್ಯದ ಹುಟ್ಟಿನ ಕೆಲವು ಎಳೆಗಳು ಸಾವಿತ್ರಿಬಾಯಿಯವರ ಕವಿತೆಗಳಲ್ಲೂ ಇವೆಯೆನ್ನಿಸುತ್ತದೆ. ಮರಾಠಿಯಲ್ಲಿ ಬಂದ ‘ಸತ್ಯಶೋಧಕ್’ ಸಿನಿಮಾ, ಈಚೆಗೆ ಬಂದ ‘ಫುಲೆ’ ಹಿಂದಿ ಸಿನಿಮಾಕ್ಕೆ ಸೆನ್ಸಾರಿನವರು ಕೊಟ್ಟ ಕಿರುಕುಳ, ಈ ಸಿನಿಮಾ ಫುಲೆ-ಸಾವಿತ್ರಿಬಾಯಿಯವರ ಹೋರಾಟವನ್ನು ಹಿಡಿದಿಟ್ಟಿರುವ ರೀತಿ ಇವೆಲ್ಲ ನಿಮಗೂ ಗೊತ್ತಿರಬಹುದು.
ಇಷ್ಟಾಗಿಯೂ ಸಾವಿತ್ರಿಬಾಯಿ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಘೋಷಿಸುವ ಕೆಲಸ ಹಾಗೇ ಉಳಿದಿದೆ. ಜೊತೆಗೆ, ರಾಧಾಕೃಷ್ಣನ್ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ಕೊನೇ ಪಕ್ಷ ೫೦:೫೦ರ ಅನುಪಾತದಲ್ಲಿ ಹಂಚಬೇಕೆಂಬ ಬೇಡಿಕೆಯನ್ನೂ ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಸಲ್ಲಿಸುವ ಕೆಲಸವೂ ತಕ್ಷಣ ಆರಂಭವಾಗಬೇಕು.
Comments
11 Comments
| ಮಂಜುನಾಥ್ ಸಿ ನೆಟ್ಕಲ್
ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಅವರ ಸೇವಾ ನಿಷ್ಠೆ , ಸಮರ್ಪಣಾ ಮನೋಭಾವ , ಸಮಾಜದ ವಿರೋಧವನ್ನು ಲೆಕ್ಕಿಸದೆ, ತಮ್ಮ ಧ್ಯೇಯೋದ್ದೇಶದಿಂದ ಹಿಮ್ಮೆಟ್ಟದ ಬದ್ಧತೆ ಎಲ್ಲರಿಗೂ ಸ್ಫೂರ್ತಿಯಾಗಲಿ... ಸಕಾಲಿಕ ಲೇಖನ ಮತೊಮ್ಮೆ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಈ ಇಬ್ಬರೂ ಮಹಾನ್ ಮಹಿಳಾ ಚೇತನಗಳಿಗೆ ಹೃತ್ಪೂರ್ವಕ ನಮನಗಳು.
| Somashekhar Kadirenahally
ಅದ್ಬುತವಾದ ಲೇಖನ, ಸಾವಿತ್ರಿಬಾಯಿ ಪುಲೆ, ಹಾಗು ಅವರ ಗರಡಿಯ ಪಾತಿಮಾ ಶೇಕ್ ರವರು ಸಂಪ್ರದಾಯ ಸಮಾಜದ ವಿರುದ್ದ ಬಂಡೆದ್ದ ಅಕ್ಷರ ಕ್ರಾಂತಿ ಮಾತ್ರ ಸಿಪಾಯಿದಂಗೆಯೆಷ್ಟೆ ಸಮರದಂತಿದೆ, ಇಲ್ಲಿಯವರೆಗೂ ಬೆಳಕುಕಾಣದ ಮಹರ್ ನ ಧನ್ಯಾಬಾಯಿ ವಿಚಾರ ಇಲ್ಲಿ ಬಂದಿರುವುದು ಮತ್ತೊಂದು ಉತ್ತಮ ವಿಚಾರ. ಧನ್ಯವಾದಗಳು. 🤝💐👏
| Lolakshi N.K
ಬ್ರಿಟಿಷ್ ಸರ್ಕಾರ ಸಾವಿತ್ರಿಬಾಯಿ ಫುಲೆಯವರಿಗೆ ಭಾರತದ ಮೊದಲ ಶಿಕ್ಷಕಿ ಎಂಬ ಪ್ರಶಸ್ತಿಯನ್ನು 1852 ರಲ್ಲಿ ಕೊಟ್ಟು ಗೌರವಿಸಿದರೂ ನಾವಿನ್ನೂ ಅವರ ಹೆಸರನ್ನೂ ಸರಿಯಾಗಿ ನೆನಪಿಟ್ಟುಕೊಂಡಿಲ್ಲ. ಸಮಯೋಚಿತ ಅರ್ಥಪೂರ್ಣ ಲೇಖನ ಸರ್
| Chandana Siddaraj
ಸಾವಿತ್ರಿಬಾಯಿ ಫುಲೆ ಅವರ ಮೊಟ್ಟ ಮೊದಲ ಆಧುನಿಕ ಭಾರತೀಯ ಟೀಚರ್. ಅಂದರೆ ಸ್ತ್ರೀ- ಪುರುಷ ಬೋಧಕರ ಪೈಕಿ ಮೊದಲಿಗರು ಎಂದು ಗುರುತಿಸಲಾಗಿದೆ. ಇದು ಅನೇಕ ರೀತಿಗಳಲ್ಲಿ ಮಹತ್ತರವಾದುದು. ಹಳೆತನವನ್ನು ಬಿಡಿಸಿಕೊಳ್ಳುವಲ್ಲಿ ಇಡೀ ಸಮಾಜಕ್ಕೆ ಬಂದು ಚಾಲನೆ ಕೊಟ್ಟಂತಾಯಿತು. ಜಡ್ಡುಕಟ್ಟಿದ ಸ್ಥಿತಿಯಲ್ಲಿ ಪರಿವರ್ತನೆ ಒಳಗಿನಿಂದ ಬರದೆ ಮೊಂಡು ಹೂಡಿದಾಗ ಫುಲೆಯಂತಹವರ ಚಿಂತನೆ, ಛಲ ಮತ್ತು ದುಡಿಮೆ ಹೊರಗಿನಿಂದ ಜಾಗೃತಿ ಮೂಡಿಸಿದೆ. ದಮನಿತ ಚೌಕಟ್ಟಿನ ತೀವ್ರ ಸಂತ್ರಸ್ತ ಜೀವವೊಂದು ಯುಗವನ್ನು ತೊಳೆದು ಬೆಳಗಿದ್ದು ಅಂತಿಂತಹ ಸಾಧನೆ ಅಲ್ಲ. ಅವರಿಗೆ ನಮಸ್ಕಾರ.
| Poornima L
ಫುಲೆ ಅವರು ಕೇವಲ ಒಂದು ವರ್ಗಕ್ಕಲ್ಲದೆ ಇಡೀ ಮನುಕುಲದ ಶೈಕ್ಷಣಿಕ ನಾಯಕಿಯಾಗಿದ್ದಾರೆ. ಮೇಡಂನವರಿಗೆ ದೀರ್ಘ ಕಾಲಮಾನವೂ, ನಾಗರಿಕತೆಯೂ ಋಣಿಯಾಗಿರಬೇಕು. ಪರಿಣಾಮದಲ್ಲಿ ಅವರು ಆಧುನಿಕ ಶಿಕ್ಷಣದ ಮೊಟ್ಟ ಮೊದಲ ಗುರು ಎಂದು ಗುರುತಿಸಿರುವುದು ಸ್ವಾಗತಾರ್ಹ. ಆದರೆ ಅವರನ್ನು ಸಿದ್ಧಪಡಿಸಿದ ಮತ್ತೊಂದು ಗುರುವೃಂದವಿರಬೇಕು. ಅದಕ್ಕೂ ಹೃದಯಪೂರ್ವಕ ನಮನಗಳು.
| ಹರಿಪ್ರಸಾದ್ ಬೇಸಾಯಿ
ಲವ್ಸ ಅಂಡ್ ಹಗ್ಸ
| Manjula
ಇತಿಹಾಸದ ಅನೇಕ ಅಗೋಚರ ಸಂಗತಿಗಳ ಅರ್ಥಪೂರ್ಣ ಸ್ಮರಣೆ. 'ಶಿಕ್ಷಕಿಯರ ದಿನ'ವಾಗಿಸುವ ಅಭಿಯಾನವನ್ನು ಜೀವಂತವಾಗಿರಿಸುವ ಪ್ರಕ್ರಿಯೆಯಲ್ಲಿ ಈ ಬರಹ ಹಂಚಿಕೊಂಡಿರುವ ಹಲವು ಹೊಸ ಮಾಹಿತಿಗಳು ಮಹತ್ವದ್ದು. ಚರಿತ್ರೆಯ ದಾಖಲೆಗಳೊಂದಿಗೆ ವ್ಯಕ್ತಿಗಳ ಬದುಕನ್ನು ನೀವು ಕಟ್ಟಿ ಕೊಡುವ ಪರಿ ವಿಶಿಷ್ಟ. ಸುಧಾದಲ್ಲಿ ಪ್ರಕಟವಾದ ಲೋಹಿಯಾ ಕುರಿತ ಕಥನವೂ ನೆನಪಾಯಿತು.
| Manjunath M K
ಜ್ಯೋತಿರಾವ್ ಫುಲೆಯವರು ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ ಓದಲು ಮತ್ತು ಬರೆಯಲು ಮನೆಯಲ್ಲಿ ಕಲಿಸಿದರು. ರಾವ್ ಅವರು ಅಹ್ಮದ್‌ನಗರ ಮತ್ತು ಪುಣೆಯ ಸ್ಕಾಟಿಷ್ ಮಿಷನರಿಗಳಿಂದ ಔಪಚಾರಿಕ ಶಿಕ್ಷಕ ತರಬೇತಿಯನ್ನು ಪಡೆದರು. ಥಾಮಸ್ ಪೈನ್ ಅವರಂತಹ ಚಿಂತಕರಿಂದ ಪ್ರಭಾವಿತರಾದರು. ಪೈನ್ ಅವರ 'ರೈಟ್ಸ್ ಆಫ್ ಮ್ಯಾನ್' ಪುಸ್ತಕದಿಂದ ಗಾಢವಾಗಿ ಸ್ಫೂರ್ತಿ ಪಡೆದರು. ಇದು ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಶಿಕ್ಷಣಕ್ಕಾಗಿ ಅವರ ಬದ್ಧತೆಯನ್ನು ಉತ್ತೇಜಿಸಿತು. ಈ ಸಂದರ್ಭದಲ್ಲಿ ಸಗುಣಾಬಾಯಿ ಕ್ಷೀರಸಾಗರ್ ಅವರ ಸೇವೆ-ಸಾಧನೆಯನ್ನು ಮರೆಯಲಾಗದು. ಜ್ಯೋತಿರಾವ್ ಅವರ ತಾಯಿಯ ಮರಣದ ನಂತರ ಅವರನ್ನು ಸಗುಣಾಬಾಯಿ ಬೆಳೆಸಿದರು; ಕರುಣೆ, ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಮೌಲ್ಯಗಳನ್ನು ತುಂಬಿದರು ಮತ್ತು ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಇಬ್ಬರ ಕೆಲಸದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದರು. 19 ನೇ ಶತಮಾನದ ಮಹಾರಾಷ್ಟ್ರದಲ್ಲಿ ಜಾತಿವಾದವನ್ನು ಪ್ರಶ್ನಿಸುವ ಮತ್ತು ಮಹಿಳಾ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ ಪ್ರತಿಪಾದಿಸುವ ಮೂಲಕ ರಾವ್ ಅವರ ತಾಯಿಯಂತೆ ವರ್ತಿಸಿದರು. ಬಾಲ ವಿಧವೆಯಾಗಿದ್ದ ಅವರು ಪುಣೆಯಲ್ಲಿ ಕ್ರಿಶ್ಚಿಯನ್ ಮಿಷನರಿಯೊಂದಿಗೆ ಕೆಲಸ ಮಾಡಿದರು, ಇಂಗ್ಲಿಷ್ ಕಲಿತರು ಮತ್ತು ಸಮಾನತೆ ಮತ್ತು ಕಲಿಕೆಯ ಮನೋಭಾವವನ್ನು ಬೆಳೆಸಿದರು, ಅದು ಫುಲೆ ದಂಪತಿಗಳ ಕ್ರಾಂತಿಕಾರಿ ಸಾಮಾಜಿಕ ಚಳುವಳಿಗಳಿಗೆ ಅಡಿಪಾಯವಾಯಿತು.
| Gowrabai
ನಿಜವಾಗಿಯೂ ಕಣ್ಣುತೆರೆಸುವ ಬರಹ
| Dr muthegowda
ಅಭಿನಂದನೆಗಳು ಸರ್, ಇದರ ಬಗ್ಗೆ ನಾನು ಗಮನಿಸಿದಂತೆ ಬಹಳಷ್ಟು ಶಿಕ್ಷಕರಿಗೆ ಇವರ ಬಗ್ಗೆ ತಿಳಿದಿಲ್ಲ. ಅಕ್ಷರಕ್ಕಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಮಾನತೆಗಾಗಿ ಜೀವನವನ್ನೇ ಸವೆಸಿದ ಇಂತಹವರ ಜಯಂತಿ ಮತ್ತು ಇವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳು ಇಂದಿನ ಸಮಾಜಕ್ಕೆ ಮುಖ್ಯವಾಗುತ್ತದೆ . ಈ ನಿಟ್ಟಿನಲ್ಲಿ ನಿಮ್ಮ ಬರಹದ ಮೂಲಕ ಬಹಳಷ್ಟು ಜನರು ತಿಳಿಯುವಂತೆ ಆಗಿದೆ ದನ್ಯವಾದಗಳು ಗುರುಗಳೇ
| Nagabhushana M
ಫುಲೆಯವರ ಬಗ್ಗೆ ಯೋಚಿಸಿದಾಗ ಕಣ್ಣು ತೇವವಾಗುತ್ತದೆ. ಮನಸ್ಸು ಧನ್ಯವಾಗುತ್ತದೆ. ಫುಲೆ ಲೇಖನಗಳಿಗೆ ಲೈಕು, ಚಪ್ಪಾಳೆ ಬೀಳುತ್ತದೆ. ಇವರ ನೆನಪಿನ ನಿಮಿತ್ತ ಚಟುವಟಿಕೆಗಳಾಗುತ್ತವೆ. ಅದಕ್ಕಾಗಿ ಪುಳಕವಾಗುತ್ತದೆ- ನಮಗೂ ನಿಮಗೂ. ಕಾಲ ಓಡುತ್ತದೆ. ಅಷ್ಟೇ ಸಾಕೆ? ವಿದ್ಯಾವಂತರು, ಚಳುವಳಿಯಿಂದ ಬೆಳೆದವರು, ಯುನಿವರ್ಸಿಟಿಗಳಲ್ಲಿ ಲಕ್ಷ ಲಕ್ಷ ಸಂಬಳ ತಿನ್ನುವವರು ಹೃದಯ ತುಂಬಿ ಮಾತಾಡಿಬಿಟ್ಟರೆ ಸಾಕೆ? ಕಾಲೇಜುಗಳಲ್ಲಿ ದಲಿತರ ಸ್ಕಾಲರ್ಶಿಪ್ ಪೂರ್ತಿ ವಿತರಣೆಯಾಗುತ್ತಿಲ್ಲ. ಲೈಬ್ರರಿಗಳು ಕ್ರಿಯಾತ್ಮಕವಾಗಿ ಬಳಕೆಯಾಗುತ್ತಿಲ್ಲ. ನೇಮಕಾತಿ ಆಗುತ್ತಿಲ್ಲ. ದುಬಾರಿ ಮದುವೆಗಳನ್ನು ತಿದ್ದುವವರಿಲ್ಲ. ಜಾತೀಯತೆಯನ್ನು ರಾಜಕೀಯದಲ್ಲಿ, ಸಮಾಜದಲ್ಲಿ ನಿಯಂತ್ರಿಸಿ ನಿಜ ಸೆಕ್ಯುಲರಿಸಂ ತರುವುದು ವಿದ್ಯಾವಂತರಿಗೇ ಬೇಕಿಲ್ಲ. ಗ್ರಾಸ್ ರೂಟ್ ಮಟ್ಟದಲ್ಲಿ ಹೆಣ್ಣು ಮಕ್ಕಳ ರಕ್ಷಣೆ, ವಿಕಾಸಕ್ಕೆ ದುಡಿಯುವುದು ಬೇಕಿಲ್ಲ. ಭ್ರಷ್ಟಾಚಾರ ನಿಯಂತ್ರಿಸುವುದು ಬೇಕಿಲ್ಲ. ಸಂಪತ್ತಿನ ಸೃಷ್ಟಿ, ಅದರ ಹಂಚಿಕೆ, ದುಡಿಮೆಯ ಅವಕಾಶಗಳ ಬಗ್ಗೆ ಆರೋಗ್ಯಕರ ನೀತಿಯಿಲ್ಲ. ಚುನಾವಣಾ ರಾಜಕೀಯವೇ ಅಂತಿಮ ಗುರಿ; ಅದಕ್ಕೆ ದೇಶದ ಬಲಿ. ಅನೇಕರಿಗೆ ಎಡ-ಬಲದ ಚೀರಾಟ ಕೀರ್ತಿ ಕಾಮನೆಯ ಬಂಡವಾಳ ಅಷ್ಟೇ. ಫುಲೆಯವರು ಸಮಾಧಿಯಲ್ಲಿ ರೋದಿಸುತ್ತಿರಬೇಕು.
Add Comment