ಕಪ್ಪು ಜನರ ನವೋದಯ
by Nataraj Huliyar
ಅಮೆರಿಕದಲ್ಲಿ ನೂರು ವರ್ಷಗಳ ಕೆಳಗೆ ಪ್ರಕಟವಾದ ಈ ಪುಸ್ತಕದ ಹೆಸರು ‘ದ ನ್ಯೂ ನೀಗ್ರೊ’. ಆಫ್ರಿಕನ್ನರನ್ನು ಕುರಿತಂತೆ ಯುರೋಪಿಯನ್ನರು ಬಳಸುತ್ತಿದ್ದ ‘ನೀಗ್ರೋ’, ‘ನಿಗ್ಗರ್’ ಎಂಬ ಪದಗಳು ಅವರನ್ನು ಹೀಗಳೆಯುವ ಅವಮಾನಕರ ಪದಗಳು. ಇವತ್ತು ಈ ಪದಗಳನ್ನು ಬಳಸಿದರೆ ಒದೆ ಬೀಳುತ್ತದೆ. ಇಂಡಿಯಾದಲ್ಲಿ ಅವಮಾನಕರವಾದ ಜಾತಿಸೂಚಕ ಪದಗಳನ್ನು ಹೀಗಳೆಯಲು ಬಳಸಿದರೆ ಎಂಥ ಪ್ರತಿಕ್ರಿಯೆ ಬರುತ್ತದೋ ಅಂಥ ಪ್ರತಿಕ್ರಿಯೆ ಅಮೆರಿಕದಲ್ಲೂ ಈಗ ಬರುತ್ತದೆ.
ಆದರೆ ೧೯೨೫ರಲ್ಲಿ ಅಲೈನ್ ಲಾಕ್ ಸಂಪಾದಿಸಿದ ‘ದ ನ್ಯೂ ನೀಗ್ರೋ’ ಸಂಕಲನದಲ್ಲಿರುವ ಲೇಖಕ, ಲೇಖಕಿಯರು ‘ನೀಗ್ರೋ’ ಎಂಬ ಅವಮಾನದ ಪದವನ್ನೇ ಆತ್ಮವಿಶ್ವಾಸದ ಪದವನ್ನಾಗಿಸಿಕೊಂಡು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಕತೆ, ಕಾವ್ಯ, ಪ್ರಬಂಧಗಳ ಸಂಕಲನದಲ್ಲಿ ಮುಂದೆ ಪ್ರಖ್ಯಾತ ಆಫ್ರೋ ಅಮೆರಿಕನ್ ಲೇಖಕರಾದ ಲಾಂಗ್‌ಸ್ಟನ್ ಹ್ಯೂಸ್, ಕ್ಲಾಡ್ ಮೆಕೇ ಮೊದಲಾದವರ ಬರಹಗಳಿದ್ದವು.
ಗುಲಾಮನಾಗಿದ್ದ ‘ಹಳೆಯ ನೀಗ್ರೋ’ನ ಕೀಳರಿಮೆ, ಅವಮಾನಗಳ ಎದುರು, ತನ್ನನ್ನು ತಾನು ಅರಿತ, ತನ್ನ ಸ್ಥಿತಿಯನ್ನು ಬದಲಾಯಿಸುವ, ಸ್ವಾಭಿಮಾನದ ’ಹೊಸ ನೀಗ್ರೋ’ನ ಹುಟ್ಟನ್ನು ಈ ಬರಹಗಳು ಸಾರುತ್ತಿದ್ದವು. ಭಾರತದಲ್ಲೂ ಎಲಿನಾರ್ ಝೆಲಿಯಟ್ ೧೯೯೬ರಲ್ಲಿ ಪ್ರಕಟಿಸಿದ ’ಫ್ರಂ ಅನ್‌ಟಚಬಲ್ ಟು ದಲಿತ್’ ಪುಸ್ತಕ ಅಸ್ಪೃಶ್ಯನೊಬ್ಬ ’ದಲಿತ’ ಆಗಿ ಹೊಸ ವ್ಯಕ್ತಿತ್ವ, ಸ್ವಾಭಿಮಾನವನ್ನು ಗಳಿಸಿಕೊಳ್ಳುವ ಬೆಳವಣಿಗೆಯ ಹೆಜ್ಜೆಗಳನ್ನು ತೋರಿಸಿದ್ದು ನಿಮಗೆ ನೆನಪಿರಬಹುದು. ಭಾರತದ ದಲಿತ ಚಳುವಳಿಯ ಈ ಥರದ ನೋಟಗಳುಳ್ಳ ಅಧ್ಯಯನಗಳ ಹಿನ್ನೆಲೆಯಲ್ಲಿ ‘ದ ನ್ಯೂ ನೀಗ್ರೋ’ ಪ್ರಕಟವಾದ ಕಾಲದ ಹ್ಯಾರ್‍ಲೆಮ್ ರೆನೈಸಾನ್ಸ್ ಥರದ ಮೈಲಿಗಲ್ಲುಗಳೂ ಇದ್ದಂತಿವೆ. ಭಾರತದಲ್ಲೂ ದಲಿತ, ಆದಿವಾಸಿ ಸಾಹಿತ್ಯದಲ್ಲಿ ಕೆಲವು ಲೇಖಕರು ಜಾತಿಯ ಹೆಸರುಗಳನ್ನು ಸ್ವಾಭಿಮಾನದ ಸಂಕೇತವಾಗಿ ಇಟ್ಟುಕೊಂಡ ಬೆಳವಣಿಗೆಗಳೂ ನಡೆದವು.
ಈ ಹಿನ್ನೆಲೆಯಲ್ಲಿ, ಶತಮಾನ ದಾಟಿದ ಆಫ್ರೋ-ಅಮೆರಿಕನ್ನರ ‘ಹ್ಯಾರ್‍ಲೆಮ್ ರೆನೈಸಾನ್ಸ್’ ಕುರಿತು ಈ ಟಿಪ್ಪಣಿ:
ಯುರೋಪಿಗೊಂದು ರೆನೈಸಾನ್ಸ್ ಇದ್ದಂತೆ, ಅಮೆರಿಕದಲ್ಲಿ ನೆಲೆಸಿದ ಕರಿಯರ ಬದುಕಿನಲ್ಲೂ ಒಂದು ರೆನೈಸಾನ್ಸ್ ೧೯೧೮-೩೦ರ ನಡುವೆ ನಡೆಯಿತು. ಅಮೆರಿಕಾದಲ್ಲಿ ನಡೆದ ಈ ‘ಹ್ಯಾರ್ಲೆಮ್ ರೆನೈಸಾನ್ಸ್’ನ ಸಾಂಸ್ಕೃತಿಕ ಮಹತ್ವ ಜಗತ್ತಿಗೆ ತೀರ ತಡವಾಗಿ ಗೊತ್ತಾಗತೊಡಗಿತು. ಹ್ಯಾರ್ಲೆಮ್ ನವೋದಯ ಆಫ್ರೋಅಮೆರಿಕನ್ನರ ಬದುಕಿನ ಒಂದು ಮುಖ್ಯ ತಿರುವಾಯಿತು. ಅಮೆರಿಕಾದ ನ್ಯೂಯಾರ್ಕ್ ನಗರದ ಒಂದು ಭಾಗ ಹ್ಯಾರ್ಲೆಮ್. ಅಲ್ಲಿನ ರಂಗಭೂಮಿಯಲ್ಲಿ ಕಪ್ಪು ನಟರು ಹೊಸ ರೀತಿಯಲ್ಲಿ ರೂಪುಗೊಳ್ಳತೊಡಗಿದರು. ಅದು ಆಫ್ರೋಅಮೆರಿಕನ್ನರ ಚರಿತ್ರೆಯಲ್ಲಿ ಹೊಸ ಘಟ್ಟವನ್ನೇ ತೆರೆಯಿತು.
ಕಲೆ, ಸಾಹಿತ್ಯ ಹಾಗೂ ರಂಗಭೂಮಿಗಳು ಸಮಾಜವನ್ನು ಬದಲಿಸಬಲ್ಲವೆಂಬ ನಂಬಿಕೆಯಿಂದ ಈ ನಟರು ಹೊರಟಿದ್ದರು. ಅದಕ್ಕೊಂದು ರಾಜಕೀಯ ಮುಖವೂ ಇತ್ತು. ಅಮೆರಿಕಾದ ದಕ್ಷಿಣ ಭಾಗ ಹಾಗೂ ಮಿಡ್‌ವೆಸ್ಟ್ ಭಾಗಗಳಲ್ಲಿ ವರ್ಣಗಲಭೆಗಳು ಶುರುವಾದಾಗ ಕರಿಯರಿಗೆ ಹ್ಯಾರ್ಲೆಮ್ ಒಂದು ಆಶ್ರಯತಾಣವಾಯಿತು. ಆಫ್ರೋಅಮೆರಿಕನ್ ಸಮಾಜವಾದಿಗಳು ‘ಮೆಸೆಂಜರ್’ ಎಂಬ ವೈಚಾರಿಕ ಪತ್ರಿಕೆ ಹೊರಡಿಸಿದರು. ಜಮೈಕಾದ ಮಾರ್ಕಸ್ ಗಾರ್ವೇ ‘ಬ್ಯಾಕ್ ಟು ಆಫ್ರಿಕಾ’ ಚಳುವಳಿಯನ್ನು ಶುರು ಮಾಡಿದ; ಎಲ್ಲ ಕಪ್ಪು ಜನರೂ ಆಫ್ರಿಕಾಕ್ಕೆ ಮರಳಬೇಕು ಎಂದು ಕರೆ ಕೊಟ್ಟ.
ಹ್ಯಾರ್ಲೆಮ್ ಪ್ರದೇಶದಲ್ಲಿ ಸೇರತೊಡಗಿದ ಕರಿಯರ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ನೃತ್ಯ, ಫ್ಯಾಶನ್, ರಾಜಕಾರಣ, ಗಂಭೀರ ಅಧ್ಯಯನ ಹೀಗೆ ಹಲವು ವಲಯಗಳಲ್ಲಿ ಒಂದು ನವೋದಯ ಆರಂಭವಾಯಿತು. ಜಾಝ್ ಸಂಗೀತಗಾರರು ಹ್ಯಾರ್ಲೆಮ್ ಕಡೆಗೆ ಬರತೊಡಗಿದರು. ಹ್ಯಾರ್ಲೆಮ್ ನವೋದಯದ ಫಲವಾಗಿ ಆಫ್ರೋ-ಅಮೆರಿಕನ್ ವಲಯದಿಂದ ಹೊಸ ಕಾದಂಬರಿಕಾರರು, ಕವಿಗಳು, ಸಮಾಜವಿಜ್ಞಾನಿಗಳು ಮೂಡಿ ಬಂದರು. ಅವರು ಕಪ್ಪುಜನರ ಅನನ್ಯ ಗುಣಗಳನ್ನು ಶೋಧಿಸತೊಡಗಿದರು. ಡುಬೈಸ್, ಕ್ಲಾಡ್ ಮೆಕೇ, ಲಾಂಗ್‌ಸ್ಟನ್ ಹ್ಯೂಸ್ ಮೊದಲಾದವರು ಕಪ್ಪು ಜನರ ಧ್ವನಿಗಳಷ್ಟೇ ಅಲ್ಲ, ಒಟ್ಟು ಅಮೆರಿಕನ್ ಸಾಹಿತ್ಯದ ಮುಖ್ಯ ಧ್ವನಿಗಳಾಗಿಯೂ ಹೊರ ಹೊಮ್ಮಿದರು.
ಈ ಘಟ್ಟದಲ್ಲಿ ಬಿಳಿಯರ ಮನ ಬದಲಿಸುವಲ್ಲಿ ಕಾವ್ಯ ಹಾಗೂ ಆತ್ಮಚರಿತ್ರೆಗಳು ಮಹತ್ತರ ಕೆಲಸ ಮಾಡತೊಡಗಿದವು. ಅಮೆರಿಕದ ಬಿಳಿಯರಿಗಿಲ್ಲದ ವಿಶಿಷ್ಟ ಶಕ್ತಿ ಕರಿಯರಿಗಿದೆ ಹಾಗೂ ಬಿಳಿಯರ ನಾಗರಿಕತೆ ಪತನಗೊಳ್ಳುತ್ತಿದೆ ಎಂದು ಹ್ಯಾರ್ಲೆಮ್ ಲೇಖಕ, ಲೇಖಕಿಯರು ಗಟ್ಟಿ ದನಿಯಲ್ಲೇ ಪ್ರತಿಪಾದಿಸಲಾರಂಭಿಸಿದರು. ಆದರೆ ಹ್ಯಾರ್ಲೆಮ್ ನವೋದಯ ಹೊಮ್ಮಿಸಿದ್ದ ಆಶಾವಾದ ಬಹುಕಾಲ ಉಳಿಯಲಿಲ್ಲ. ೧೯೨೯ರ ಹೊತ್ತಿಗೆ ಅಮೆರಿಕಾದಲ್ಲಿ ಆರ್ಥಿಕ ಕುಸಿತದ ಶುರುವಾಯಿತು. ಈ ನೆವದಲ್ಲಿ ಕಪ್ಪು ಜನರನ್ನು ಕೊಲ್ಲುವ ಬರ್ಬರ ಘಟ್ಟ ಆರಂಭವಾಯಿತು. ಹ್ಯಾರ್ಲೆಮ್ ನವೋದಯ ಕರಿಯರಲ್ಲಿ ಹುಟ್ಟಿಸಿದ್ದ ಹೊಸ ಭರವಸೆ ಕುಸಿಯತೊಡಗಿತು.
ಆದರೆ ಹ್ಯಾರ್ಲೆಮ್ ನವೋದಯ ಬಿತ್ತಿದ ಕಪ್ಪು ಸ್ಫೂರ್ತಿ ಆಫ್ರಿಕಾ ಖಂಡದ ದೇಶಗಳಲ್ಲೂ ಹಲವು ವರ್ಷ ಮುಂದುವರೆಯಿತು. ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿದ್ದ ಆಫ್ರಿಕನ್ ಕವಿ ಲೆಪಾಲ್ಡ್ ಸೆಂಘರ್ ಹ್ಯಾರ್ಲೆಮ್ ನವೋದಯದ ಪ್ರತಿಧ್ವನಿ ಎಂಬಂತೆ ಮುಂದೊಮ್ಮೆ ತನ್ನ ‘ನ್ಯೂಯಾರ್ಕ್’ ಪದ್ಯದಲ್ಲಿ ‘ಎಲೆ ನ್ಯೂಯಾರ್ಕ್, ಕಪ್ಪು ರಕ್ತ ಹರಿಯಲಿ ನಿನ್ನೊಳಗೆ’ ಎಂದು ಬರೆದ. ಕರಿಯರನ್ನು ‘ನೀಗ್ರೋ’ ಎಂಬ ಅವಹೇಳನದ ಪದ ಬಳಸಿ ಹೀಗಳೆಯುತ್ತಿದ್ದ ಬಿಳಿಯರ ಮುಖಕ್ಕೆ ರಾಚುವಂತೆ ಫ್ರೆಂಚ್ ಆಫ್ರಿಕಾದ ಲೇಖಕರು ‘ನೀಗ್ರೋತನ’ (ನೆಗ್ರಿಟ್ಯೂಡ್) ಎಂಬ ಚಳುವಳಿಯನ್ನೇ ಹುಟ್ಟು ಹಾಕಿದರು.
‘ಅಮೆರಿಕಾದ ನೀಗ್ರೋಗಳ ಬದುಕಿನ ಭೀಕರ ಅನುಭವಗಳನ್ನು ಹೇಳಲು ಇನ್ನೂ ಭಾಷೆಯೇ ಸೃಷ್ಟಿಯಾಗಿಲ್ಲ’ ಎಂದು ಜೇಮ್ಸ್ ಬಾಲ್ಡ್‌ವಿನ್‌ಗೆ ಅನ್ನಿಸತೊಡಗಿತು. ಬಾಲ್ಡ್‌ವಿನ್ ಕಪ್ಪು ಜನರ ಆಳದ ಸಿಟ್ಟಿಗೆ ತಾತ್ವಿಕ ರೂಪ ಕೊಟ್ಟ. ಇದೆಲ್ಲದರ ನಡುವೆ, ಅಮೆರಿಕಾದ ಆಫ್ರಿಕನ್ನರು ಹಾಗೂ ಇನ್ನಿತರ ಕರಿಯರು ತಮ್ಮ ಚರ್ಮದ ಬಣ್ಣದ ಕೀಳರಿಮೆಯನ್ನು ಮೀರಲು ಹಾಗೂ ಕಪ್ಪು ಸಂಸ್ಕೃತಿಯ ಶಕ್ತಿ ಹಾಗೂ ವಿಶಿಷ್ಟ ಅಸ್ತಿತ್ವವನ್ನು ಪ್ರತಿಪಾದಿಸಲು ೧೯೬೦ರ ದಶಕದಲ್ಲಿ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳುವಳಿಯನ್ನು ಆರಂಭಿಸಿದರು. ಮುಂದೆ ಮಾಯಾ ಏಂಜೆಲೊ, ಆ್ಯಲಿಸ್ ವಾಕರ್, ಟೋನಿ ಮಾರಿಸನ್ ಅಮೆರಿಕಾದ ಬರವಣಿಗೆಯ ದಿಕ್ಕನ್ನೇ ಬದಲಿಸಿದರು.
ಹಲವು ದಿಕ್ಕುಗಳಿಂದ ಶುರುವಾದ ತಮ್ಮ ಬಿಡುಗಡೆಗೆ ಹಿಂಸಾಮಾರ್ಗವನ್ನು ಹಿಡಿಯುವುದೋ ಅಥವಾ ಅಹಿಂಸಾ ಮಾರ್ಗವನ್ನು ಹಿಡಿಯುವುದೋ ಎಂಬ ಗೊಂದಲ ಕೂಡ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆಫ್ರೋ-ಅಮೆರಿಕನ್ನರಿಗೆ ಎದುರಾಯಿತು. ಇದೆಲ್ಲದರ ನಡುವೆ, ಕರಿಯರ ಮೇಲೆ ಬಿಳಿಯರ ಮಾರುಕಟ್ಟೆಯ ಹಿಡಿತ ಸಾಧಿಸುವ ಪ್ರಯತ್ನಗಳು ಶುರುವಾದವು. ಕರಿಯರು ನಡೆಸುತ್ತಿದ್ದ ಬಡ ಪ್ರದೇಶಗಳ ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ಮೇಲೆ ಸರ್ಕಾರ ನಿರ್ಬಂಧ ಹೇರಿತು. ಅಲಬಾಮಾ ರಾಜ್ಯದ ಬರ್ಮಿಂಗ್ ಹ್ಯಾಂ ಕಡೆ ಗಲಭೆಗಳಾದವು. ಆ ಕಾಲದಲ್ಲಿ ಗುಡ್ ಫ್ರೈಡೇಯ ದಿನ ಚರ್ಚೊಂದನ್ನು ಸುತ್ತುವರಿದ ಜನರನ್ನು ಬಂಧಿಸಲಾಯಿತು. ಅವತ್ತು ಬಂಧನಕ್ಕೊಳಗಾದವರಲ್ಲಿ ಕ್ರೈಸ್ತ ಬ್ಯಾಪ್ಟಿಸ್ಟ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡ ಇದ್ದರು.
‘ನಾವು ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು’ ಎಂದು ಘೋಷಿಸಿದ ಮಾರ್ಟಿನ್ ಲೂಥರ್ ಕಿಂಗ್ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು. ಬಂಧನದಲ್ಲಿದ್ದಾಗ ಜೈಲಿನಲ್ಲಿ ಸಿಕ್ಕ ಟಾಯ್ಲೆಟ್ ಪೇಪರ್ ಹಾಗೂ ದಿನಪತ್ರಿಕೆಗಳ ಮೇಲೆ ಹತ್ತೊಂಬತ್ತು ಪುಟಗಳ ಪತ್ರ ಬರೆದು ಕಪ್ಪು ಜನರ ಅಸಹನೆಯ ಕಾರಣಗಳನ್ನು ವಿವರಿಸಿದರು. ‘ಲೆಟರ್ ಫ್ರಂ ಎ ಬರ್ಮಿಂಗ್ ಹ್ಯಾಮ್ ಜೈಲ್’ ಎಂಬ ಪ್ರಖ್ಯಾತ ಪತ್ರದ ಒಂದು ಭಾಗ:
‘ಬರ್ಮಿಂಗ್ ಹ್ಯಾಮ್‌ನಲ್ಲಿ ನೀಗ್ರೋಗಳ ಮನೆಯ ಮೇಲೆ ಆದಷ್ಟು ಬಾಂಬ್ ದಾಳಿ ಇನ್ಯಾವ ನಗರದಲ್ಲೂ ಆಗಿಲ್ಲ…ಏಷ್ಯಾ ಹಾಗೂ ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಗಳಿಸಲು ಜೆಟ್ ವೇಗದಲ್ಲಿ ಚಲಿಸುತ್ತಿವೆ; ಆದರೆ ನಾವಿಲ್ಲಿ ಜಟಕಾ ಗಾಡಿಯ ವೇಗದಲ್ಲಿ ಲಂಚ್ ಕೌಂಟರಿನಲ್ಲಿ ಒಂದು ಕಪ್ ಕಾಫಿ ಪಡೆಯಲು ಹೋರಾಡುತ್ತಿದ್ದೇವೆ’
ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕಾದ ಕರಿಯರ ನಾಯಕರಾದ ಇತಿಹಾಸ ಈಗ ಎಲ್ಲರಿಗೂ ಗೊತ್ತಿದೆ: ಅವರ ಪ್ರಖ್ಯಾತ ಭಾಷಣ ‘ಐ ಹ್ಯಾವ್ ಎ ಡ್ರೀಮ್’ನ ಸಾಲುಗಳಿವು:
‘ನನಗೊಂದು ಕನಸಿದೆ…ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು… ಎಂದು ನನಗೊಂದು ಕನಸಿದೆ.’
‘ಐ ಹ್ಯಾವ್ ಎ ಡ್ರೀಮ್’ ಎಂಬ ಕಿಂಗ್ ಕನಸಿನ ಪಲ್ಲವಿ ಚರಿತ್ರೆಯಲ್ಲಿ ಪ್ರಬಲ ರೂಪಕವಾಯಿತು. ಎಲ್ಲ ಬಗೆಯ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಾ ಬಂತು. ೧೯೬೪ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಕಿಂಗ್ ನಾಲ್ಕು ವರ್ಷಗಳ ನಂತರ ಹತ್ಯೆಯಾದರು.
ಇಷ್ಟೆಲ್ಲ ಬಲಿದಾನಗಳ ನಡುವೆ ಹ್ಯಾರ್‍ಲೆಮ್ ರೆನೈಸಾನ್ಸ್ ನಿಧಾನಕ್ಕೆ ಫಲ ಕೊಡತೊಡಗಿತು. ಆಫ್ರೋ ಅಮೆರಿಕನ್ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದರ ಹಿಂದೆ ನೂರು ವರ್ಷಗಳ ಕೆಳಗೆ ಶುರುವಾದ ‘ಹ್ಯಾರ್‍ಲೆಮ್ ನವೋದಯ’ವೂ ಇತ್ತು.
ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿತು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಎಲ್ಲೋ ಹ್ಯಾರ್‍ಲೆಮ್ ನವೋದಯ ಕೂಡ ನಮ್ಮ ನೆನಪಿನಲ್ಲಿರಬೇಕು ಎನ್ನಿಸಿತು. ಈ ಮಾತುಗಳನ್ನು ಬರೆಯುತ್ತಿರುವಾಗ ನಾಳೆ ಕುವೆಂಪು ಜನ್ಮದಿನ ಎಂಬುದು ನನ್ನ ತಲೆಯಲ್ಲಿ ಸುಳಿಯುತ್ತಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಭಾರತದಲ್ಲಿ ವಿಕಾಸಗೊಂಡ ಹೊಸ ಸಾಹಿತ್ಯವನ್ನು ‘ನವೋದಯ’ ಎಂದು ಕರೆದವರು ಕುವೆಂಪು ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಭಾರತದ ಇನ್ನಿತರ ಸಾಹಿತಿಗಳಿಗಿಂತ ಭಿನ್ನವಾಗಿ ನವೋದಯದ ಕಲ್ಪನೆಯನ್ನು ವಿಸ್ತರಿಸಿದ ಕುವೆಂಪು ಅದನ್ನು ಕನ್ನಡನಾಡಿನ ಬಹುಜನ ಸಮುದಾಯದ ನವೋದಯಕ್ಕೆ ವಿಸ್ತರಿಸಿ, ಸರ್ವೋದಯದ ಕಲ್ಪನೆಯಾಗಿ ಮರುರೂಪಿಸಿದರು. ನವೋದಯ ರಾಷ್ಟ್ರೀಯತೆಗೆ ವಿಶಿಷ್ಟ ರಾಜಕೀಯ ಆಯಾಮ ಒದಗಿಸುವ ಅಖಂಡ ಕರ್ನಾಟಕದ ಕಲ್ಪನೆಯ ಜೊತೆಗೆ ಸರ್ವಸ್ವೀಕಾರ ರಾಷ್ಟ್ರೀಯತೆಯನ್ನೂ ರೂಪಿಸಿದರು.
ಈ ಅಂಕಣ ಬರೆಯುವ ಹಿಂದಿನ ದಿನ, ಇದ್ದಕ್ಕಿದ್ದಂತೆ ವಿದ್ಯಾರ್ಥಿ ಮಿತ್ರ-ಉದಯೋನ್ಮುಖ ವಿಮರ್ಶಕ ಕಿಶೋರ್ ಚಿಂತಾಮಣಿ ‘ಕುವೆಂಪು ಸಾಹಿತ್ಯವನ್ನು ಸಿದ್ಧ ಮಾದರಿಯಲ್ಲೇ ನೋಡಿ ನೋಡಿ ಅಧ್ಯಯನಗಳು ಸವಕಲಾಗತೊಡಗಿವೆಯೇನೋ’ ಎಂದಿದ್ದು ಈ ಟಿಪ್ಪಣಿ ಬರೆಯುವಾಗ ನೆನಪಾಗುತ್ತಿದೆ. ಕುವೆಂಪು ಕಾವ್ಯ ಹಾಗೂ ಅವರ ಒಟ್ಟು ಸಾಹಿತ್ಯ ರಾಷ್ಟ್ರೀಯ ಚಳುವಳಿ, ಕನ್ನಡ ಚಳುವಳಿ, ವೈಚಾರಿಕ ಚಳುವಳಿ ಇವೆಲ್ಲದರ ಜೊತೆ ಬೆರೆತು ಸೃಷ್ಟಿಸಿದ ನವೋದಯದ ರಾಜಕೀಯ, ಸಾಂಸ್ಕೃತಿಕ ಪರಿಣಾಮ, ಬೆಳವಣಿಗೆಗಳನ್ನು ಕ್ಷೇತ್ರಕಾರ್ಯ, ಸಂದರ್ಶನಗಳ ಮೂಲಕ ವಿಸ್ತೃತ ಅಧ್ಯಯನ ಮಾಡಬಹುದೇ ಎಂಬ ಬಗ್ಗೆ ಹೊಸ ಕಾಲದ ಅಧ್ಯಯನಕಾರರು, ಅಧ್ಯಯನಕಾರ್ತಿಯರು ಯೋಚಿಸಬಹುದೆಂದು ಕಾಣುತ್ತದೆ.
Follow Blog WhatsApp Channel: CLICK HERE
Comments
5 Comments
| Chethankumar linagadahalli
Very nice content wonderful writer i like that story
| Sanganagowda
ನಮ್ಮಲ್ಲಿ ತತ್ವಪದಕಾರರು ತಮ್ಮ ಊರುಗಳನ್ನೇ ಪ್ರಾರಂಭದಲ್ಲಿ ಬಳಸಿಕೊಂಡು ಘನತೆ ಮೆರೆದಿದ್ದಾರೆ.(ಉದಾಹರಣೆ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ರಾಂಪುರ ಬಕ್ಕಪ್ಪ ಇತ್ಯಾದಿ .... ಶೂದ್ರ ಶ್ರೀನಿವಾಸ್, ಸುಬ್ಬು ಹೊಲೆಯಾರ್. ಈ ತರಹದ ಹೆಸರುಗಳು, ಶ್ರೇಷ್ಟತೆಯ ವ್ಯಸನದಿಂದ ಬಿಡಿಸಿಕೊಂಡದ್ದೇ ಹೇಳುತ್ತದೆ. ಕೇಶವ ಮಳಗಿ ಅವರು ಅನುವಾದಿಸಿದ 'ಗುಂಡಿಗೆ ಬಿಸಿ ರಕ್ತ' ಕೃತಿ ಓದಿರುವೆ. ಅಲ್ಲಿಯೂ ನಿಗ್ರೂಟ್ಯೂಡ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಕವಿ (ಸಧ್ಯಕ್ಕೆ ಹೆಸರು ನೆನಪಿಗೆ ಬರುತ್ತಿಲ್ಲ) ಆತನ ಕವಿತೆಯ ಸಾಲು: "ನನ್ನ ಕಪ್ಪು ಋಜುತ್ವ ಕಲ್ಲಲ್ಲ/ ನಿಮ್ಮ ಹಗಲು ಗದ್ದಲಕ್ಕೆ/ ಎಸೆದ ಮೌನ" ಈ ಸಾಲುಗಳಲ್ಲಿ ಎಂಥಾ ಸ್ವಾಭಿಮಾನವಿದೆ !
| Somashankara N
ಒಬ್ಬ ಸಶಕ್ತ ಬರಹಗಾರನ ಬರವಣಿಗೆ ಒಂದು ಸಮುದಾಯಕ್ಕೆ ನವೋದಯದ ಪರಿವರ್ತನಾತ್ಮಕ ಹೊಂಬಳಕನ್ನು ತರಬಲ್ಲದು ಎಂಬುದಕ್ಕೆ ತಮ್ಮ ಈ ಲೇಖನ ಜ್ವಲಂತ ಸಾಕ್ಷಿ. ಒಂದು ಕಾಲಕ್ಕೆ ಆಫ್ರಿಕನ್ನರ ಬಣ್ಣದ ವರ್ಣತಾರತಮ್ಯ ಎಷ್ಟರಮಟ್ಟಿಗೆ ರಾಕ್ಷಸಿ ರೂಪ ತಾಳಿತ್ತೆಂದರೆ ಮಾನವನ ಜೀವಿತ ಕ್ರಮದ ಮೂಲವನ್ನೇ ಪಲ್ಲಟಗೊಳಿಸಿ ಬುದ್ಧಿವಂತ ವರ್ಗ ತಮ್ಮ ಸ್ವಹಿತಾಸಕ್ತಿಯನ್ನು ಸಾಧಿಸಿಕೊಳ್ಳುವುದಕ್ಕೆ ಸಕಾರಣ ನೆಪವಾಗಿತ್ತು ಮತ್ತು ವ್ಯಕ್ತಿಯನ್ನು ಸಾಮಾಜಿಕವಾಗಿ ಅಷ್ಟೇ ಅಲ್ಲ ಕೌಟುಂಬಿಕವಾಗಿಯೂ ಅತ್ಯಂತ ಕನಿಷ್ಠ ಘಟಕವನ್ನಾಗಿ ಒಡೆದು ಹಾಕಿತ್ತು.. ಮಾನವನ ಅಂತ:ಕರಣವನ್ನೇ ಸಂಪೂರ್ಣವಾಗಿ ನುಂಗಿ ಹಾಕಿತ್ತು. ವ್ಯಕ್ತಿ ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಒಂಟಿತನದ ಈರ್ಷೆಯನ್ನು ಅನುಭವಿಸಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿತ್ತು. no man is an island ಎಂಬ ಸಂಕಲ್ಪದ ಪ್ರಜ್ಞೆ ಪಲ್ಲವಿಸಿದ ಎಲ್ಲ ವಿಚಾರ ಶೀಲ ಬರಹಗಾರರಿಗೆ ನನ್ನ ನಮನಗಳು.
| ಡಾ. ನಿರಂಜನ ಮೂರ್ತಿ ಬಿ ಎಂ
ನೀಗ್ರೋ ಜನಾಂಗದ ನವೋದಯದ ಸಂಪೂರ್ಣ ವಿವರಗಳ ಆಗರವಾಗಿದೆ ಈ ಲೇಖನ. ಯುರೋಪಿನ ರೆನೈಸಾನ್ಸ್, ಹ್ಯಾರ್ಲೆಮ್ ರೆನೈಸಾನ್ಸ್, ಮತ್ತು ಭಾರತದ ನವೋದಯವನ್ನು ಸಮೀಕರಿಸಿದ ಒಳನೋಟ ಮತ್ತು ವಿಶ್ಲೇಷಣೆ ವಿಶೇಷವಾಗಿದೆ. ಧನ್ಯವಾದಗಳು.
| ಸೋಮಶಂಕರ ವಿ
ಸಾಹಿತ್ಯ ಮತ್ತು ಸಮಾಜಕ್ಕೆ ಅವಿನಾಭಾವ ಸಂಬಂಧವಿದೆ, ಸಾಹಿತ್ಯಕ್ಕೆ ಸಮಾಜ ವಸ್ತುವಾದರೆ. ಸಾಹಿತ್ಯ ಸಮಾಜದ ವಾಸ್ತವವಾಗಿರುತ್ತದೆ. ಸಮಾಜ ನಿರಂತರ ಹೇಗೆ ಬದಲಾವಣೆಯೆಡೆಗೆ ಸಾಗುತ್ತದೋ ಸಾಹಿತ್ಯವೂ ತನ್ನ ತಾನು ಬದಲಿಸಿಕೊಂಡು ಸಮಾಜವನ್ನು ಅನುಕರಿಸಬೇಕು ತಪ್ಪಿದ್ದಲ್ಲಿ ನವೋದಯದ ಸಿದ್ದ ಮಾದರಿಗಳನ್ನು ಮುಂದುವರೆಸಿಕೊಂಡು ಹೋಗುವ ಆತಂಕ ಮತ್ತು ಕುವೆಂಪುವನ್ನು ರೆಡಿಮೇಡ್ ಮಾದರಿಯಲ್ಲಿಟ್ಟು ನೋಡುವ ಆತಂಕ ನಮಗೆ ತಪ್ಪಿದ್ದಲ್ಲ ಎಂಬುದು ಸ್ಪಷ್ಟಗೊಳ್ಳುತ್ತದೆ. ಇತ್ತೀಚಿಗೆ ದಲಿತ ಸಾಹಿತ್ಯವೂ ತನ್ನ ಮೊಣಚು ಕಳೆದುಕೊಳ್ಳುತ್ತಿದೆ, ಬರುಬಾರುತ್ತಾ ಆಸ್ಪಷ್ಟ ವಾತಾವರಣವನ್ನು ಮೂಡಿಸುತ್ತಿದೆ ಇಲ್ಲವೆ ತೀರಾ ಸರಳವಾದ ಮಟ್ಟಕ್ಕೆ ಉಳಿದುಬಿಡುತ್ತವೆ ಎಂಬ ಅಂಶವನ್ನು ಡಿ ಆರ್ ನಾಗರಾಜ್ (ಈಚಿನ ಕನ್ನಡ ಕಾವ್ಯ ಲೇಖನ)ಅಂದು ಬರೆದ ಬರಹ ನನ್ನ ನೆನಪಲ್ಲಿ ಸುಳಿಯಿತು. ಹ್ಯಾರ್ಲೆಮ್ ಎಲೆ ನ್ಯೂಯಾರ್ಕ್, ಕಪ್ಪು ರಕ್ತ ಹರಿಯಲಿ ನಿನ್ನೊಳಗೆ’ ಎಂದು ಬರೆದ ಬರಹ,ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು… ಎಂದು ನನಗೊಂದು ಕನಸಿದೆ.’ ಎಂದಿದ್ದ ಮಾರ್ಟಿನ್ ಮಾತು ಮತ್ತೇ ದಲಿತ ಸಾಹಿತ್ಯದ ಮರುಪರಿಶೀಲನೆ ಬಯಸಿದೆ ಎಂದು ಮರೆಯೋ ಹಾಗಿಲ್ಲ
Add Comment