ಹಾಡುಹಕ್ಕಿಗಳ ಪ್ರಾಣಮಿತ್ರ!

ಅವತ್ತು ಬರೆಯ ಹೊರಟಿದ್ದೇ ಬೇರೆ; ಅದು ಕರೆದೊಯ್ದದ್ದೇ ಬೇರೆಡೆಗೆ! 

ಇದೇ ಅಂಕಣದಲ್ಲಿ ಹಿಂದೊಮ್ಮೆ ಉಲ್ಲೇಖಿಸಿದ ಅಮೆರಿಕದ ಕವಿ ರಾಬರ್ಟ್ ಫ್ರಾಸ್ಟ್ ನ `ದ ರೋಡ್ ನಾಟ್ ಟೇಕನ್’ ಪದ್ಯದಲ್ಲಿರುವ ‘ವೇ ಲೀಡ್ಸ್ ಆನ್ ಟು ವೇ’ (ಹಾದಿ ಕರೆದೊಯ್ಯವುದು ಹಾದಿಗೆ) ಎಂಬ ಪ್ರತಿಮೆ ನಿಮಗೆ ನೆನಪಿರಬಹುದು. ಮೊನ್ನೆ ಈ ಅಂಕಣದ ವಸ್ತು ತಲೆಯಲ್ಲಿ ಸುತ್ತುತ್ತಿದ್ದಾಗಲೂ ಹಾಗೇ ಆಯಿತು. ಈ ಅಂಕಣ ಬರೆಯುವಾಗ ಆಗಾಗ ಹೀಗೆ ಆಗುವುದು ನನ್ನ ಅದೃಷ್ಟ. ಜಡ ಸಾಮಾಜಿಕ ವಸ್ತು, ವಿವರಗಳಲ್ಲಿ ಮುಳುಗಿ ಜಡ್ಡು ಹಿಡಿದ ಮನಸ್ಸು ಅವನ್ನೆಲ್ಲ ಹಿಂದೆಬಿಟ್ಟು, ಮೀರಿ ಎಲ್ಲೋ ಹೊರಳುತ್ತಿರುತ್ತದೆ! ಹಾಗೆ ಹೊರಳಿದಾಗ ಕಂಡದ್ದು ಈ ಹಕ್ಕಿ ರಕ್ಷಕನ ಲೇಟೆಸ್ಟ್ ಪ್ರಸಂಗ. 


ಈತನ ಹೆಸರು ಸಿಲ್ವಾ ಗು. ಊರು: ಚೀನಾದ ರಾಜಧಾನಿ ಬೀಜಿಂಗ್. ಈಗ ಈತನ ಫುಲ್‌ಟೈಂ ಕೆಲಸ: ಹಾಡುಹಕ್ಕಿಗಳನ್ನು ಹಕ್ಕಿಗಳ್ಳರಿಂದ ಕಾಪಾಡುವುದು; ಅವು ಆಗಸದಲ್ಲಿ ಮತ್ತೆ ಹಾಡುತ್ತಾ ಹಾರಿಹೋಗುವಂತೆ ಮಾಡುವುದು. 

ಕೆಲವು ದಿನಗಳ ಕೆಳಗೆ ಒಂದು ಬೆಳಗಿನ ಜಾವ ಬಿ.ಬಿ.ಸಿ ಚಾನಲ್‌ನ ಸಿಯೋಲ್ ವರದಿಗಾರ್ತಿ ಲಾರಾ ಬಿಕರ್ ಈ ಸಿಲ್ವಾ ಹಾಡುಹಕ್ಕಿಗಳನ್ನು ರಕ್ಷಣೆ ಮಾಡುವ ಪರಿ ನೋಡಲು  ಕ್ಯಾಮರಾಮನ್ ಜೊತೆ ಅವನ ಹಿಂದೆ ಹೊರಟಳು. ಸೂರ್ಯ ಹುಟ್ಟಿರಲಿಲ್ಲ. ಬೀಜಿಂಗ್ ಇನ್ನೂ ಮಲಗಿತ್ತು. ಸಿಲ್ವಾ ಪಿಸುದನಿಗಿಂತ ಪಿಸುದನಿಯಲ್ಲಿ ಅವರಿಗೆ ಸೂಚನೆ ಕೊಡುತ್ತಿದ್ದ. ಎಲ್ಲರೂ ಉಸಿರು ಬಿಗಿ ಹಿಡಿದು ಕಾದರು. 

ಇನ್ನೇನು ಸೂರ್ಯ ಮೂಡುವುದರ ಸೂಚನೆ ಕೊಡುತ್ತಿದ್ದಂಥ ಬೆಳಗು ಆಗಸದಲ್ಲಿ ಹಬ್ಬುತ್ತಿತ್ತು... ಹಕ್ಕಿಗಳ್ಳರ ಹೆಜ್ಜೆ ಸಪ್ಪಳ ಕೇಳಿಸತೊಡಗಿತು. ತೆಳ್ಳನೆಯ ಮೈಕಟ್ಟಿನ ಮೂವತ್ತೊಂದರ ಹರೆಯದ ಸಿಲ್ವಾ ಮೆಲ್ಲಮೆಲ್ಲನೆ ಮುಂದೆ ಸರಿಯತೊಡಗಿದ. ಲಾರಾ ಹಾಗೂ ಅವಳ ಜೊತೆಗೆ ಕ್ಯಾಮರಾ ರೆಡಿಯಿರಿಸಿಕೊಂಡಿದ್ದ ಕ್ಯಾಮರಾಮನ್ ಸಿಲ್ವಾನ ಹಿಂದೆ ಕಳ್ಳ ಹೆಜ್ಜೆ ಇಡತೊಡಗಿದರು. ಮರಗಳ ಸಾಲು ದಾಟಿ ನೋಡಿದರೆ ಅಲ್ಲೊಂದು ಹಕ್ಕಿ ಬಲೆ. ಅದು ಮಂಜಿನಂತಿರುವ ಮಾಯಾಬಲೆ. ಅದು ಎಷ್ಟು ತೆಳ್ಳಗಿದೆಯೆಂದರೆ, ಹಕ್ಕಿ ಮಿದುಳಿಗೆ ಅದು ತನ್ನನ್ನು ಸೆರೆ ಹಿಡಿವ ಬಲೆ ಎನ್ನುವುದು ಗೊತ್ತಾಗುವುದು ಕೂಡ ಸಾಧ್ಯವಿರಲಿಲ್ಲ.  

ಅಲ್ಲೇ ಬಿದಿರುಮೆಳೆಗಳ ನಡುವೆ ಹಕ್ಕಿಗಳ್ಳರು ಇರಿಸಿದ್ದ ಅಂಥದೊಂದು ಮಂಜು ಬಲೆ. ಪುಟ್ಟ ಹಕ್ಕಿಯೊಂದು ಆ ಬಲೆಯಲ್ಲಿ ಸಿಕ್ಕಿಕೊಂಡ ತನ್ನ ಕಾಲನ್ನು ಹೊರಗೆಳೆಯಲೆತ್ನಿಸುತ್ತಿದೆ. ಹಕ್ಕಿ ಕಾಲೆಳೆದುಕೊಳ್ಳಲೆತ್ನಿದಷ್ಟೂ ಅದರ ಕಾಲು ಆ ಬಲೆಯೊಳಗೆ ಇನ್ನಷ್ಟು ಸಿಕ್ಕಿಕೊಳ್ಳುತ್ತಿದೆ. ಅದು ಮೆಡೋ ಪಿಪಿಟ್ ಎಂಬ ಹಕ್ಕಿ. ಚೀನಾದಲ್ಲೀಗ ಅದು ಸಂರಕ್ಷಿತ ಹಕ್ಕಿ. 

ಅತ್ತಣಿಂದ ಬಂದ ಹಕ್ಕಿಗಳ್ಳ ಸಿಲ್ವಾನ ತಂಡ ನೋಡಿದ ತಕ್ಷಣ ಪೇರಿ ಕೀಳತೊಡಗಿದ. ಸೊಂಟದ ಹಿಂದಕ್ಕೆ ಕಟ್ಟಿಕೊಂಡಿದ್ದ ಚೀಲದಿಂದ ಐದಾರು ಹಕ್ಕಿಗಳನ್ನು ಸರ‍್ರನೆ ಆಗಸಕ್ಕೆಸೆಯುತ್ತಾ ಪೊದೆಸಾಲಿನ ಗುಂಟ ಓಡತೊಡಗಿದ. ಇದೆಲ್ಲವನ್ನೂ ಕ್ಯಾಮರಾ ಸೆರೆ ಹಿಡಿಯುತ್ತಲೇ ಇತ್ತು. ಸಿಲ್ವಾ ಓಡೋಡಿ ಹಕ್ಕಿಗಳ್ಳನನ್ನು ಅಡ್ಡ ಹಾಕತೊಡಗಿದ. ಸಿಲ್ವಾನ ಈಚಿನ ಹಲವು ವರ್ಷಗಳ ಅನುಭವದಲ್ಲಿ ಹಕ್ಕಿಗಳ್ಳರನ್ನು ಹಿಡಿಯುವುದು, ಪೊಲೀಸರನ್ನು ಕರೆಯುವುದು...ಈ ಕಲೆ ಕರಗತವಾಗಿಬಿಟ್ಟಿದೆ. ಅವತ್ತು ನಲವತ್ತು ನಿಮಿಷಗಳಲ್ಲಿ ಪೊಲೀಸರು ಅಲ್ಲಿಗೆ ಬಂದರು. ಪೊಲೀಸರು ಹೀಗೆ ಸ್ಪಾಟಿಗೆ ಬರುವುದರ ಹಿಂದೆ ಸಿಲ್ವಾನ ಎಡೆಬಿಡದ ಪ್ರಚಾರ, ಮನವೊಲಿಕೆ, ಅವನ ವಿಶಿಷ್ಟ ಬದ್ಧತೆ ಎಲ್ಲವೂ ಇದ್ದವು.

ಸಿಲ್ವಾನ ಸಾಹಸ ಮತ್ತು ಹಕ್ಕಿ ಒಲವಿನ ಕತೆ ಓದುತ್ತಿರುವಾಗಲೂ ಸಮಸ್ಯೆಯ ಮತ್ತೊಂದು ಮುಖ ನಮ್ಮನ್ನು ಕಾಡುತ್ತಲೇ ಇರುತ್ತದೆ: ಹಳ್ಳಿಗಾಡುಗಳಿಂದ ಬೀಜಿಂಗಿಗೆ ಕೆಲಸ ಮಾಡಲು ಬಂದು, ಇಲ್ಲಿನ ದುಡಿಮೆಯಿಂದ ಬರುವ ದುಡ್ಡು ಬದುಕಲು ಸಾಕಾಗದೆ ಹಾಡುಹಕ್ಕಿಗಳನ್ನು ಹಿಡಿಯುವ, ಮಾರುವ ಬಡವರು, ಕೂಲಿ ಕಾರ್ಮಿಕರು… ಇವರೆಲ್ಲರ ಸಂಕಷ್ಟಗಳ ಕತೆಯನ್ನು ಇನ್ನೊಂದು ದಿಕ್ಕಿನಿಂದಲೇ ನೋಡಬೇಕಾಗುತ್ತದೇನೋ. ಈ ಕೂಲಿಕಾರರ ಅದೃಷ್ಟಕ್ಕೆ ಒಂದು ಹಾಡುಹಕ್ಕಿ ಅವರ ಮಂಜು ಬಲೆಗೆ ಸಿಕ್ಕಿ, ಅದನ್ನು ಮಾರಿದರೆ ೨೧೦ ಪೌಂಡ್‌ನಷ್ಟು ಹಣ ಸಿಗುತ್ತದೆ. ಅಂದರೆ ಸುಮಾರು ೨೫೦೦೦ ರೂಪಾಯಿ. ಇದು ರೈತ ಕಾರ್ಮಿಕರ, ಶ್ರಮಿಕರ ತಿಂಗಳ ದುಡಿಮೆಗಿಂತ ಹೆಚ್ಚು. ಅದರಲ್ಲೂ ಸೈಬೀರಿಯಾದ ರೂಬಿತ್ರೋಟ್, ಬ್ಲೂತ್ರೋಟ್ ಥರದ ಹಕ್ಕಿಗಳು ಸಿಕ್ಕರೆ ಜಾಕ್ ಪಾಟ್ ಹೊಡೆದಂತೆ!  

ಮನೆಯೆದುರು ಹಾಡು ಹಕ್ಕಿಗಳನ್ನು ತೂಗುಬಿಡುವುದು ಶ್ರೀಮಂತಿಕೆಯ, ಅಂತಸ್ತಿನ ಸಂಕೇತ ಎಂದು ಹಳೆಯ ಚೀನಾದ ಜನ ನಂಬಿದ್ದರು. ಆ ನೆನಪಲ್ಲೇ ಇವತ್ತೂ ಇರುವ ಅರವತ್ತು ಎಪ್ಪತ್ತು ವರ್ಷ ದಾಟಿದ ನಿವೃತ್ತ ಮಂದಿ ಇವತ್ತಿಗೂ ಹಕ್ಕಿಗಳನ್ನು ಮನೆಯ ಹೊರಗೆ ತೂಗುಬಿಡುವ ರೂಢಿ ಚೀನಾದಲ್ಲಿ ಮುಂದುವರಿದಿದೆ. ಇವರಿಗಾಗಿ ಹಕ್ಕಿಗಳ್ಳರು, ಮಾರಾಟಗಾರರು ಅಲ್ಲಲ್ಲಿ ಕದ್ದುಮುಚ್ಚಿ ಈ ಹಕ್ಕಿಗಳನ್ನು ಮಾರುತ್ತಲೇ ಇರುತ್ತಾರೆ. ಪ್ರಜಾಪ್ರಭುತ್ವ ದೇಶವಾದರೇನು, ಕಮ್ಯುನಿಸ್ಟ್ ದೇಶವಾದರೇನು! ಜನರ ವರ್ತನೆಗಳು ಎಲ್ಲೆಡೆಯೂ ಒಂದೇ ಇರಬೇಕು!
ಅಪರೂಪದ ಹಾಡುಹಕ್ಕಿಗಳನ್ನು ರಕ್ಷಿಸುವ ಬಗ್ಗೆ ಸಿಲ್ವಾ ಪ್ರಯತ್ನ ಹಾಗೂ ಅವನ ಪ್ರಚಾರ ಶುರುವಾದ ಮೇಲೆ ಚೀನಾದಲ್ಲಿ ಹಕ್ಕಿ ಹಿಡಿಯುವ ಅಪರಾಧದ ಸುತ್ತಣ ಕಾಯ್ದೆಗಳು ಕೊಂಚ ಬಿಗಿಯಾಗಿವೆ. ಇಂಥ ಹಕ್ಕಿಗಳನ್ನು ಮಾರುವುದು, ಕೊಳ್ಳುವುದು ಈಗ ಕಷ್ಟವಾಗಿದೆ. ಕಳೆದ ವರ್ಷ ಬೀಜಿಂಗಿನಲ್ಲಿ ಪೊಲೀಸರು ಹೀಗೆ ಹಕ್ಕಿಗಳನ್ನು ಕೊಂಡವರ ಹೆಸರು ಬರೆದುಕೊಳ್ಳತೊಡಗಿದಾಗ, ಒಬ್ಬ ‘ನಾನು ನನ್ನ ಹಕ್ಕಿ ಜೊತೆ ವಾಕಿಂಗ್ ಬಂದಿದ್ದೇನೆ, ನಿನಗೇನಾಗಬೇಕು?’ ಎಂದು ಪೊಲೀಸರ ಮೇಲೆ ರೇಗಿದ!   

ಹಕ್ಕಿಗಳ್ಳರ ಬೆನ್ನು ಹತ್ತಿದ ಸಿಲ್ವಾನ ಸಾಹಸ ವಿಸ್ಮಯಕರವಾಗಿದೆ: ಮೊದಮೊದಲು ಒಂದು ಹುಚ್ಚು ಕಾಳಜಿಯ ಹುಕ್ಕಿಯಲ್ಲಿ ಒಬ್ಬನೇ ಈ ಹಾಡುಹಕ್ಕಿಗಳ ರಕ್ಷಣೆಗಿಳಿದ ಸಿಲ್ವಾ ನಿಧಾನಕ್ಕೆ ತನ್ನಂಥವರ ಪುಟ್ಟ ತಂಡವನ್ನೇ ಕಟ್ಟಿದ; ಅದನ್ನು `ಬೀಜಿಂಗ್ ಮೈಗ್ರೇಟರಿ ಬರ್ಡ್ ಸ್ಕ್ವಾಡ್’ ಎಂದು ಕರೆದ. ಸ್ಥಳೀಕರ ಜೊತೆ ಸಭೆ ಮಾಡಿ ಈ ಹಕ್ಕಿಗಳನ್ನು ಉಳಿಸುವ ಬಗ್ಗೆ ಮಾತಾಡಿದ. ಈ ಅಪರೂಪದ ಹಕ್ಕಿಗಳನ್ನು ಉಳಿಸುವ ಅಗತ್ಯವನ್ನು ಪೊಲೀಸರಿಗೂ ಮನವರಿಕೆ ಮಾಡಿದ. ಕೊನೆಗೂ ಪೊಲೀಸರು ಈ ಹಕ್ಕಿಗಳ್ಳರ ಮೇಲೆ ನಿಗಾ ಇಡತೊಡಗಿದರು. ಆ ಮೂಲಕ ಪೊಲೀಸರಿಗೆ ಇನ್ನಿತರ ಅಪರಾಧಗಳ ಸುಳಿವುಗಳೂ ಸಿಗತೊಡಗಿದವು.  

ಸಿಲ್ವಾನ ಹಾದಿ ಸುಗಮವಾಗಿರಲಿಲ್ಲ. ಬೀಜಿಂಗಿನ ಹಕ್ಕಿ ಮಾರಾಟಗಾರ ದಾದಾ ಒಬ್ಬ ತನ್ನ ಚೇಲಾಗಳನ್ನು ಸಿಲ್ವಾನ ಬೆನ್ನು ಹತ್ತಲು ಕಳಿಸಿದ. ಆ ಚೇಲಾಗಳು ಸಿಲ್ವಾನನ್ನು ಸುತ್ತುವರಿದು ಹೊಡೆದದ್ದೂ ಆಯಿತು. ಸಿಲ್ವಾ ಪೊಲೀಸರ ಬಳಿ ದೂರು ಹೊತ್ತು ಹೋದರೆ, ಅವರು ಕೂಡ ಈ ದಂಧೆಯಲ್ಲಿ ಶಾಮೀಲಾದಂತಿತ್ತು! ಸಿಲ್ವಾ ಬಗ್ಗಲಿಲ್ಲ. ಹಕ್ಕಿ ರಕ್ಷಣೆಯನ್ನು ಫುಲ್‌ಟೈಂ ಕಾಯಕ ಮಾಡಿಕೊಂಡ. ಅವನ ತಂಡಕ್ಕೆ ವಂತಿಗೆ ಕೊಡುವವರೂ ಮುಂದೆ ಬಂದರು. ಸಿಲ್ವಾ ಹೊಸ ಕಾಲದ ಸೆಟಲೈಟ್ ಸಾಧನಗಳನ್ನೂ ಬಳಸತೊಡಗಿದ. ಹಕ್ಕಿ ಹಿಡಿಯುವವರು ಓಡಾಡುವ ಜಾಡುಗಳ ಮೇಲೆ ಕಣ್ಣಿಟ್ಟ. ರಾತ್ರಿಯ ಹೊತ್ತು ಹಕ್ಕಿಗಳನ್ನು ಸೆಳೆದುಕೊಳ್ಳುವ ಬಲೆಗಳ ಗುರುತನ್ನೂ ಪತ್ತೆ ಹಚ್ಚತೊಡಗಿದ.   

ಸಿಲ್ವಾ ಗು ಕಳೆದ ಹತ್ತು ವರ್ಷಗಳಲ್ಲಿ ಸುಮಾರು ೨೦೦೦೦ ಹಕ್ಕಿಗಳನ್ನು ರಕ್ಷಿಸಿದ್ದಾನೆ; ಹಕ್ಕಿಗಳ್ಳರ ಲೆಕ್ಕವಿಲ್ಲದಷ್ಟು ಬಲೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾನೆ. ಹಕ್ಕಿವಲಸೆಯ ಕಾಲದಲ್ಲಂತೂ ರಾತ್ರಿಯೆಲ್ಲ ಬೀಜಿಂಗಿನ ಹೊಲಗದ್ದೆಗಳಲ್ಲಿ ತಿರುಗುತ್ತಾ ಮತ್ತೆ ಬೀಜಿಂಗಿನ ಆಗಸದಲ್ಲಿ ಹಾಡುಹಕ್ಕಿಗಳ ದನಿ ಮರಳಿ ಬರುವಂತೆ ಮಾಡುವ ಕನಸು ಕಾಣುತ್ತಾನೆ. ತಾನು ಹುಡುಗನಾಗಿದ್ದಾಗ ಬೀಜಿಂಗಿನ ಆಗಸದಲ್ಲಿ ಈ ಹಕ್ಕಿಗಳ ದನಿ ಕೇಳಿಸುತ್ತಿತ್ತಲ್ಲ, ಆ ದನಿ ಮರಳಿ ಬರಲಿ ಎಂದು ಸಿಲ್ವಾ ಕಾತರಿಸುತ್ತಾನೆ.


ವಿಚಿತ್ರವೆಂದರೆ, ಮೊನ್ನೆ ಬರೆಯಬೇಕೆಂದು ಹೊರಟದ್ದು ಸಿಲ್ವಾನ ಕತೆಯಲ್ಲ! ಕಳೆದ ತಿಂಗಳು ಬೆಂಗಳೂರಿನ ಗಿರಿನಗರದ ಅಪಾರ್ಟ್‌ಮೆಂಟೊಂದರ ಬಳಿ ನಾಗಮಂಗಲದ ಅರುಣ್‌ಕುಮಾರ್ ಎಂಬ ಮೂವತ್ತೆರಡು ವರ್ಷದ ತರುಣ ಉದ್ಯಮಿ ಎರಡು, ಎರಡೂವರೆ ಲಕ್ಷ ರೂಪಾಯಿ ಬೆಲೆಯ ಸುಂದರ ಗಿಳಿಯನ್ನು ರಕ್ಷಿಸಲು ಹೋಗಿ ಕರೆಂಟು ಹೊಡೆದು ತೀರಿಕೊಂಡ ಘಟನೆ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಈ ಘಟನೆಯ ವಿವರಗಳನ್ನು ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಬಿ.ಬಿ.ಸಿ.ಯ ಸಿಲ್ವಾ ಸ್ಟೋರಿ ಕಣ್ಣಿಗೆ ಬಿತ್ತು. ಬೆಂಗಳೂರಿನ ರಮ್ಯ ಸಾಹಸಿಯ ಕತೆ ಬೀಜಿಂಗಿನ ಸಿಲ್ವಾ ಕಡೆಗೆ ಕರೆದೊಯ್ದಿತ್ತು. ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಅರುಣ್ ಹಾಗೂ ಸಿಲ್ವಾರ ವಿಚಿತ್ರ ಸಾಹಸ ನನ್ನನ್ನು ವಿಸ್ಮಯದಲ್ಲಿ ಅದ್ದಿತು. ಅರುಣ್ ತನ್ನ ’ಕಸಿನ್’ಗಾಗಿ ಈ ಗಿಳಿಯನ್ನು ರಕ್ಷಿಸಲು ಹೋದ ಎಂದು ಪತ್ರಿಕಾವರದಿಯೊಂದು ಹೇಳುತ್ತದೆ. 

ಹಾಡುಹಕ್ಕಿಗಳನ್ನು ಆಗಸಕ್ಕೆ ಹಾರಿಬಿಡುವ ಸಿಲ್ವಾನ ಕಾಯಕದಲ್ಲೂ ಅರುಣ್ ಸಾಹಸದಲ್ಲಿರುವ ಅಪಾಯಗಳು ಇದ್ದೇ ಇವೆ. ಹೊಟ್ಟೆಪಾಡಿಗೆ ಹಕ್ಕಿ ಮಾರುವ ಬಡವರೋ ಅಥವಾ ಹಕ್ಕಿ ಮಾರಾಟದ ದಂಧೆಯ ದಾದಾಗಳೋ ಸಿಲ್ವಾಗೆ ಅಪಾಯ ತಂದೊಡ್ಡಲೂಬಹುದು. 

ಅದೇನೇ ಇರಲಿ, ಮುಂಬರಲಿರುವ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಸ್ವಂತಕ್ಕೆ ಯಾವ ಲಾಭವೂ ಇಲ್ಲದ ಕಾಯಕಗಳಲ್ಲಿ ಮುಳುಗುವ ಇಂಥ ಮಾನವ ಚೈತನ್ಯಗಳ ಒಳಚಾಲಕ ಶಕ್ತಿ ನಿಜಕ್ಕೂ ನಿಗೂಢ ಹಾಗೂ ಅನನ್ಯ! 
 

Share on:

Comments

3 Comments



| ಡಾ. ಶಿವಲಿಂಗೇಗೌಡ ಡಿ.

ಸ್ಪೂರ್ತಿದಾಯಕ ಬರಹ. ಸಿಲ್ವಾನಂತಹ ಮಾನವ ಚೈತನ್ಯಗಳ ಅವಶ್ಯಕತೆ ಇಂದು ಬಹಳಷ್ಟಿದೆ. ನಮ್ಮ ಸುತ್ತಲ ಪರಿಸರವನ್ನು ಜೀವವೈವಿಧ್ಯವನ್ನು ಕಾಪಾಡಿಕೊಳ್ಳಲು ಇಂಥ ಹುಚ್ಚು ಸಾಹಸದ, ಅಧಮ್ಯ ಕಾಳಜಿಯ ವ್ಯಕ್ತಿತ್ವಗಳು ಎಲ್ಲ ರಂಗಗಳಲ್ಲಿಯೂ ಬೇಕಾಗಿದ್ದಾರೆ.


| Mohan

Heart warming. Rare people, they are!


| ಚರಣ್

ಇದನ್ನು ಓದುವಾಗ ಎಷ್ಟೊಂದು ದಂಧೆಗಳು, ಶೋಕಿಗಾಗಿ ಇರುವಂತವು normalize ಆಗಿಬಿಟ್ಟಿವೆ ಅನ್ನಿಸುತ್ತಿದೆ. ಸಿಲ್ವಾನ ಕಥೆ refreshing ಆಗಿ ಇದೆ, ಜೊತೆಗೆ ಆ ದಂಧೆಯನ್ನು ಅವಲಂಬಿಸಿರುವ ಬಡಜನರನ್ನು ಕಂಡಾಗ, ಒಂದು ಸಂಗತಿ ನೆನಪಿಗೆ ಬರುತ್ತಿದೆ. ಮಾರ್ಕೆಟ್ ಬಳಿ ಓಡಾಡುವಾಗ ಕುದುರೆ ಅಥ್ವ ಎತ್ತಿನ ಬಂಡಿಯಲ್ಲಿ ಹೆಣಭಾರದ ಕಂಬಿಗಳನ್ನು ಇಟ್ಟುಕೊಂಡು, ಹೊಡೆಯಲು ಚಾಟಿ ಇಟ್ಟುಕೊಳ್ಳುವ ಕಪ್ಪನೆಯ ಕೆಂಪುಗಣ್ಣಿನ ವಯಸ್ಸಾದವರ ಚಿತ್ರಣ ನೋಡಿದಾಗ ಆ ಪ್ರಾಣಿಗಳು ಪಾಪದೊವೋ, ಆ ಮುದುಕ ಪಾಪಿಯೋ, ಅಥ್ವ ಈ ಇಬ್ಬರನ್ನು ಹಿಂಗೆ ದುಡಿಸಿಕೊಳ್ಳುತ್ತಿರುವ, ಇದೇ ಸ್ಥಿತಿಯಲ್ಲಿ ಇಟ್ಟಿರುವ ನಮ್ಮ ವ್ಯವಸ್ಥೆ ಪಾಪಕೂಪವೋ ಎಂದು ನನ್ನಲ್ಲೇ ಮುಳುಗಿಕೊಂಡದ್ದರಿಂದ ಕೆಲಕಾಲ ಆಚೆ ಬರ್ತೇನೆ.




Add Comment


Mundana Kathana Nataka

YouTube






Recent Posts

Latest Blogs