ಹೆಣ್ಣಿನ ಅರಿವು; ಗಂಡಿನ ಅರ್ಥ

ಈ ಅಂಕಣದಲ್ಲಿ ಕಳೆದ ವಾರ ಬುದ್ಧನ ಬಗ್ಗೆ ಬರೆದು, ಈ ವಾರ ಯುದ್ಧದ ಬಗ್ಗೆ ಬರೆಯುತ್ತಿರುವುದಕ್ಕೆ `ಬುದ್ಧ; - ‘ಯುದ್ಧ’ಗಳ ಪ್ರಾಸದ ರಾಜಕಾರಣ ಕಾರಣವಲ್ಲ. ಎಷ್ಟೋ ಸಲ ಇದ್ದಕ್ಕಿದ್ದಂತೆ ಹುಟ್ಟುವ ಪ್ರಾಸಗಳೇ ನಮ್ಮ ಯೋಚನೆಗಳನ್ನು, ಕವಿತೆಗಳನ್ನು ಮುನ್ನಡೆಸುವ ಪರಿ ಕಂಡು ಈ ಮಾತು ಬರೆದೆ! ಈ ಮಾತು ಬರೆಯುತ್ತಿರುವಾಗ `ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ’ ಎಂಬ ಸಾಲು ಮನಸ್ಸಿಗೆ ಬಂತು. ಕೆ.ಎಸ್. ನರಸಿಂಹಸ್ವಾಮಿಯವರ `ಗಾಳಿಯು ನಿನ್ನದೆ ದೀಪವು ನಿನ್ನದೆ’ಎಂದು ಶುರುವಾಗುವ ‘ಪ್ರಥಮ ರಾಜನಿಗೆ’ಎಂಬ ಕವಿತೆಯಲ್ಲಿ ಬರುವ ವಿರುದ್ದಾರ್ಥದ ರೂಪಕಗಳಿವು. ಸಾವಿರಾರು ವರ್ಷಗಳಿಂದ ಜಾತಿಪದ್ಧತಿಯಲ್ಲಿ ಮಲೆತು, ಕೊಳೆತು ನಿಂತ ಸಮಾಜದ ವಿರುದ್ಧ ಬುದ್ಧ ಹೂಡಿದ ಯುದ್ಧವೇನೂ ಸಾಮಾನ್ಯವಾದುದಲ್ಲ; ಅದು ಕೂಡ ಭಾರತದ ನಿರ್ಣಾಯಕ ಯುದ್ಧವೇ ಹೌದು ಎಂಬುದನ್ನು ಈ ರೂಪಕಗಳು ಮತ್ತೆ ಮನವರಿಕೆ ಮಾಡಿಕೊಟ್ಟವು.

ಇದೆಲ್ಲಕ್ಕಿಂತ ಮೊದಲು ಬೆಳ್ಳಂಬೆಳಗಿಗೇ ನೆನಪಾದದ್ದು ನಾನು ಹಿಂದೊಮ್ಮೆ ಪಿಯುಸಿ ಹುಡುಗಿಯರಿಗೆ ಟೀಚ್ ಮಾಡಿದ  ‘ದ ವಾರ್’ಎಂಬ ಕತೆ. 

ಇಟಲಿಯ ನೊಬೆಲ್ ಪ್ರಶಸ್ತಿವಿಜೇತ ಲೇಖಕ ಲೂಜಿ ಪಿರಂಡಲ್ಲೋ ಬರೆದ ಈ ಪ್ರಖ್ಯಾತ ಕತೆ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಈ ಕತೆ ನೆನಪಾದದ್ದಕ್ಕೆ ಕಾರಣ- ಮೊನ್ನೆ ಹಸೆಮಣೆಯಿಂದಲೇ ಪತಿಯನ್ನು ಸೇನೆಗೆ ಕಳಿಸಿಕೊಟ್ಟ ನವ ವಧುವಿನ ಬಗ್ಗೆ; ಮಿಲಿಟರಿಯಿಂದ ರಜೆಗೆ ಬಂದ ಮಗನನ್ನು ಮತ್ತೆ ಸೇನೆಯ ಕರ್ತವ್ಯಕ್ಕೆ ಕಳಿಸಿಕೊಟ್ಟ ತಾಯಿಯ ಬಗ್ಗೆ... ಜನ ಹೆಗ್ಗಳಿಕೆಯಿಂದ ಆಡುತ್ತಿರುವ ತೋರುಗಾಣಿಕೆಯ ಮಾತುಗಳು. ಈ ಮಾತುಗಳನ್ನು ಕೇಳುತ್ತಿದ್ದರೆ, ತರಾಸು ಥರದವರ ಅತಿರಂಜಿತ ಐತಿಹಾಸಿಕ ಕಾದಂಬರಿಗಳ ಅಥವಾ ಅಗ್ಗದ ಚರಿತ್ರೆಯ ಪುಸ್ತಕಗಳ ವೀರತಿಲಕ, ವೀರಸ್ವರ್ಗಗಳ ರೆಟರಿಕ್‌ನ- ಅಂದರೆ ಭಾಷಣರೂಪಿ ಭಾಷೆಯ- ಪ್ರಭಾವಗಳು ಇಲ್ಲೇ ಎಲ್ಲೋ ಗಾಳಿಯಲ್ಲಿ ಅಡ್ಡಾಡುತ್ತಿರುವಂತೆ ಕಾಣುತ್ತವೆ. ಒಂದು ಭಾಷೆಯಲ್ಲಿ ಹಬ್ಬುವ ಉತ್ಪ್ರೇಕ್ಷೆಗಳು ಅಷ್ಟು ಸುಲಭವಾಗಿ ಕಿವಿಮರೆಯಾಗುವುದಿಲ್ಲ! 

ಮೇಲೆ ಹೇಳಿದ ಲೂಜಿ ಪಿರಾಂಡಲ್ಲೋನ ‘ದ ವಾರ್’ ಕತೆಯ ಸಂಗ್ರಹರೂಪ:  

ಇಟಲಿಯ ಫ್ಯಾಬ್ರಿಯಾನೋದ ರೈಲ್ವೇನಿಲ್ದಾಣ. ಯಾವುದೋ ದುಃಖದಲ್ಲಿದ್ದ ಗಂಡ, ಹೆಂಡತಿ ರೈಲ್ವೆ ಬೋಗಿಯೊಂದಕ್ಕೆ ಬಂದು ಕೂತರು. ಗಂಡ ಹೆಂಡತಿಯ ಕಡೆಗೆ ತಿರುಗಿ ಅನುಕಂಪದಿಂದ ಕೇಳಿದ: ‘ಆರ್ ಯು ಆಲ್ ರೈಟ್, ಡಿಯರ್?’ 

ಹೆಂಡತಿ ಅಳು ಉಕ್ಕುತ್ತಿದ್ದ ಮುಖವನ್ನು ಮುಚ್ಚಿಕೊಂಡಳು. ಅವರಿಬ್ಬರೂ ಇನ್ನು ಮೂರು ದಿನದಲ್ಲಿ ಯುದ್ಧಕ್ಕೆ ತೆರಳಲಿದ್ದ ತಮ್ಮ ಇಪ್ಪತ್ತು ವರ್ಷದ ಮಗನಿಗೆ ವಿದಾಯ ಹೇಳಲು ಹೊರಟಿದ್ದರು.  

ಗಂಡ ಆಕೆಯ ದುಃಖದ ಕಾರಣವನ್ನು ಅಲ್ಲಿದ್ದ ಸಹಪಯಣಿಗರಿಗೆ ಹೇಳತೊಡಗಿದ. ಆ ಬೋಗಿಯಲ್ಲಿದ್ದ ಎಲ್ಲರ ಕತೆಯೂ ಹೆಚ್ಚು ಕಡಿಮೆ ಹೀಗೇ ಇತ್ತು. ಎಲ್ಲರ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಯುದ್ಧಕ್ಕೆ ಹೋಗಿದ್ದರು. 

`ಅಯ್ಯೋ! ನಿಮ್ಮ ಮಗ ಪರವಾಯಿಲ್ಲಪ್ಪ, ಈಗ ಹೋಗ್ತಾ ಇದಾನೆ; ನನ್ನ ಮಗ ಎರಡು ಸಲ ಗಾಯ ಆಗಿ ಮನೆಗೆ ಬಂದ; ಈಗ ಮತ್ತೆ ಯುದ್ಧಕ್ಕೆ ಕಳಿಸಿದಾರೆ’ಅಂದ ಒಬ್ಬ.

‘ಅಯ್ಯೋ! ನನ್ನ ಇಬ್ಬರು ಮಕ್ಕಳು, ಮೂವರು ಸೋದರಳಿಯರು ತುಕಡಿಯಲ್ಲಿದಾರೆ’ಎಂದ ಮತ್ತೊಬ್ಬ.

‘ಇರಬೌದು. ಆದರೆ ನಮ್ಮೋನು ಒಬ್ಬನೇ ಮಗ...’ ಎಂದು ರಾಗ ಎಳೆದ, ಈ ಮಾತುಕತೆ ಶುರು ಮಾಡಿದ್ದ ಗಂಡ.  

‘ಆದರೆ ನಾನು ಇಬ್ಬರು ಮಕ್ಕಳ ನೋವನ್ನೂ ಅನುಭವಿಸಬೇಕಲ್ಲಪ್ಪಾ...’ ಎಂದ ಆ ತಂದೆ. 

‘ಆದರೆ... ಒಬ್ಬ ಹೋದರೂ ಇನ್ನೊಬ್ಬ ಮಗ ಅಪ್ಪನ್ನ ಸಮಾಧಾನ ಮಾಡೋಕೆ ಉಳಿದರೆ...’ ಎಂದು ಗಂಡ ರಾಗ ಎಳೆದ.

‘ಅಯ್ಯೋ! ಉಳಿದಿರೋ ಒಬ್ಬ ಮಗನಿಗಾಗಿ ಅಪ್ಪ ಬದುಕಲೇಬೇಕಾಗುತ್ತಲ್ಲಪ್ಪಾ. ಒಬ್ಬನೇ ಮಗ ಇದ್ದು, ಅವನು ಸತ್ತಿದ್ರೆ ಅಪ್ಪನೂ ಸತ್ತು ತನ್ನ ಗೋಳಿಗೆ ಕೊನೆ ಹಾಡಬಹುದಿತ್ತಲ್ಲ; ನಿಮ್ಮದೇ ಪರವಾಯಿಲ್ಲ’ಎಂದ ಆ ಎರಡು ಮಕ್ಕಳ ತಂದೆ. 

ಹೀಗೇ ಮಾತುಕತೆ ನಡೆಯುತ್ತಿತ್ತು. ಈ ಮಾತುಕತೆ ಕೇಳಿಸಿಕೊಳ್ಳುತ್ತಿದ್ದ ಕೆಂಪು ಮುಖದ ಒಬ್ಬ ಧಡೂತಿ ಆಸಾಮಿ ಕಣ್ಣು ಕೆಂಪಾಗಿಸಿಕೊಂಡು, ಉದ್ವೇಗದಿಂದ ಏದುಸಿರುಬಿಡುತ್ತಾ, ‘ನಾನ್ಸೆನ್ಸ್’ ಅಂದ. ಅದೇ ಉಸಿರಿನಲ್ಲಿ, ‘ನಾನ್ಸೆನ್ಸ್. ಏನು, ನಾವು ನಮ್ಮ ಅನುಕೂಲಕ್ಕೋಸ್ಕರ ಮಕ್ಕಳನ್ನು ಹುಟ್ಟಿಸ್ತೀವೇನ್ರಿ?’ ಅಂದ. 

ಯುದ್ಧದ ಮೊದಲ ದಿನದಿಂದಲೇ ತುಕಡಿಯಲ್ಲಿದ್ದ ಯೋಧನ ಅಪ್ಪ, ‘ನೀವನ್ನೋದು ನಿಜ. ನಮ್ಮ ಮಕ್ಕಳು ನಮಗೆ ಸೇರಿದೋರಲ್ಲ; ದೇಶಕ್ಕೆ ಸೇರಿದೋರು’ಎನ್ನುತ್ತಾ ನಿಟ್ಟುಸಿರಿಟ್ಟ. 

ಧಡೂತಿ ಆಸಾಮಿ ಭಾಷಣವನ್ನೇ ಶುರು ಮಾಡಿದ: ‘ಥತ್! ಮಕ್ಕಳಿಗೆ ಜನ್ಮ ಕೊಡುವಾಗ ನಾವು ದೇಶದ ಬಗ್ಗೆ ಯೋಚನೆ ಮಾಡಿರ‍್ತಿವೇನ್ರಿ? ನಾವು ಇಪ್ಪತ್ತನೇ ವಯಸ್ಸಿನಲ್ಲಿ ಹೇಗಿದ್ವೋ ಹಾಗೇ ನಮ್ಮ ಮಕ್ಳು ಕೂಡ ಇರ‍್ತಾರೆ.  ನಾವು ಕೂಡ ಆ ವಯಸ್ಸಿನಲ್ಲಿ ದೇಶ ನಮ್ಮನ್ನ ಕರೆದರೆ ಹೋಗ್ತಾ ಇದ್ವು. ಈಗ ನಮಗೆ ನಮ್ಮ ಈ ವಯಸ್ನಲ್ಲಿ ನಮ್ಮ ಮಕ್ಕಳಿಗಿರೋ ದೇಶಪ್ರೇಮಕ್ಕಿಂತ ಇನ್ನೂ ಹೆಚ್ಚು ದೇಶಪ್ರೇಮ ಇರುತ್ತೆ, ಅಲ್ವ? ನಮ್ಮಲ್ಲಿ ಯಾರೇ ಆಗಲಿ, ನಮ್ಮ ಮಕ್ಕಳ ಬದಲಿಗೆ ದೇಶಕ್ಕಾಗಿ ಸೇನಾ ತುಕಡಿ ಸೇರೋಕೆ ಸಿದ್ಧ ಇದೀವಿ, ಅಲ್ವ?’

ಯಾರೂ ಮಾತಾಡಲಿಲ್ಲ. ಧಡೂತಿ ಆಸಾಮಿ ಭಾಷಣದ ಧಾಟಿಯಲ್ಲಿ ಮಾತು ಮುಂದುವರಿಸಿದ. ‘ನೋಡಿ, ನಮ್ಮ ಮಕ್ಕಳಿಗೆ ಅವರ ಇಪ್ಪತ್ತನೇ ವಯಸ್ನಲ್ಲಿ ನಮ್ಮ ಬಗ್ಗೆ ಇರೋ ಪ್ರೀತಿಗಿಂತ ದೇಶದ ಬಗ್ಗೆ ಹೆಚ್ಚು ಪ್ರೀತಿ ಇರೋದು ನ್ಯಾಚುರಲ್, ಅಲ್ವಾ? ನಮ್ಮ ಮಕ್ಕಳು ಈ ಜೀವನದ ಕರಾಳ ಮುಖಗಳನ್ನ ನೋಡದೇ, ಈ ಬದುಕಿನ ಕಹಿ, ಭ್ರಮನಿರಸನ, ಬೇಸರ... ಇವನ್ನೆಲ್ಲ ನೋಡದೆ ಎಳೇ ವಯಸ್ಸಿನಲ್ಲೇ ಸಂತೋಷವಾಗಿ ಸತ್ತರೆ ಅದಕ್ಕಿಂತ ಬೇರೆ ಇನ್ನೇನು ಬೇಕು, ಹೇಳಿ? ಈಗ ನನ್ನ ಮಾತು ಕೇಳಿ- ಎಲ್ಲಾರೂ ಅಳೋದನ್ನ ನಿಲ್ಲಿಸಬೇಕು. ಎಲ್ಲಾರೂ ನನ್ ಥರಾ ನಗಬೇಕು. ನನ್ನ ಮಗ ಸಾಯೋಕೆ ಮುಂಚೆ ನನಗೆ ಕಳಿಸಿದ ಸಂದೇಶದಲ್ಲಿ ಏನು ಹೇಳಿದ್ದ ಗೊತ್ತ? ‘ನಾನು ಯಾವ ಥರ ಅತ್ಯುತ್ತಮ ರೀತೀಲಿ ಸಾಯಬೇಕು ಅಂದುಕೊಂಡಿದ್ನೋ ಅದೇ ರೀತೀಲಿ ಸಾಯ್ತಿದೀನಿ; ನಾನು ತೃಪ್ತಿಯಿಂದ ಸಾಯ್ತಿದೀನಿ’ಅಂತ. ಅದುಕ್ಕೇ ನೋಡಿ- ನಾನು ಮೌರ್ನಿಂಗ್ ಡ್ರೆಸ್ ಕೂಡ ಹಾಕ್ಕೊಂಡಿಲ್ಲ.’

ಈ ಮಾತು ಹೇಳುತ್ತಾ ಆ ಮುದುಕ ತನ್ನ ಬಿಳಿಕೋಟನ್ನು ತೋರಿಸಿದ. ಅವನ ಕಣ್ಣು ತುಂಬಿ ಬಂದಿದ್ದವು. ಜೋರಾಗಿ ನಕ್ಕ; ಅದು ಬಿಕ್ಕಳಿಕೆ ಕೂಡ ಆಗಬಹುದಿತ್ತೇನೋ.

ಅಲ್ಲಿದ್ದವರೆಲ್ಲ, ‘ಊಂ, ಊಂ, ನಿಜ ನಿಜ ಕಣಪ್ಪ’ಅಂದರು.  

ಮಾತಾಡುತ್ತಿದ್ದವರೆಲ್ಲ ಗಂಡಸರು. ಅವತ್ತು ಮಗನನ್ನು ತುಕಡಿಗೆ ಕಳಿಸಲು ಗಂಡನ ಜೊತೆಗೆ ಹೊರಟು ದುಃಖದಲ್ಲಿ ಮುಳುಗಿದ್ದ ಆ ಮಹಿಳೆಗೆ ತನ್ನದೇ ತಪ್ಪು ಅನ್ನಿಸತೊಡಗಿತು. ತಮ್ಮ ಮಕ್ಕಳನ್ನು ಸೇನಾ ತುಕಡಿಗೆ ಮಾತ್ರವಲ್ಲ, ಸಾವಿನ ಬಾಯಿಗೆ ಕೂಡ ಕಳಿಸಲು ಸಿದ್ಧರಿದ್ದ ತಂದೆ, ತಾಯಂದಿರ ಎತ್ತರಕ್ಕೆ ತಾನು ಏರಲಾಗಿಲ್ಲವಲ್ಲ ಎಂದು ಆಕೆಗೆ ಪೆಚ್ಚೆನಿಸಿತು. ಇದೀಗ ಆಕೆ ಧಡೂತಿ ಆಸಾಮಿಯ ಮಾತುಗಳನ್ನು ಇನ್ನಷ್ಟು ಕಿವಿಗೊಟ್ಟು ಕೇಳಿಸಿಕೊಳ್ಳತೊಡಗಿದಳು. 

ಧಡೂತಿ ಮುದುಕ ಹೇಳುತ್ತಲೇ ಇದ್ದ: ‘ನನ್ನ ಮಗ ಹೀರೋ ಆಗಿ ಸತ್ತ; ರಾಜನಿಗಾಗಿ, ದೇಶಕ್ಕಾಗಿ ಪ್ರಾಣಕೊಟ್ಟ; ಸಂತೋಷದಿಂದ... ಯಾವ ವಿಷಾದವೂ ಇಲ್ಲದೆ ಸತ್ತ...’ 
ಹೀಗೇ ಅವನ ಮಾತು ಮುಂದುವರಿದಿತ್ತು.

ಆಕೆ ನೋಡುತ್ತಲೇ ಇದ್ದಳು. ಇಂಥದೊಂದು ಲೋಕವಿದೆ ಎನ್ನುವುದೇ ಅವಳಿಗೆ ಗೊತ್ತಿರಲಿಲ್ಲ. ತನ್ನ ಮಗನ ಸಾವಿನ ಬಗ್ಗೆ ಅಷ್ಟೊಂದು ನಿರ್ಲಿಪ್ತವಾಗಿ ಮಾತಾಡುತ್ತಿರುವ ತಂದೆಯನ್ನು ಎಲ್ಲರೂ ಅಭಿನಂದಿಸುತ್ತಿದ್ದರು.

ಆಗ ಆಕೆ ಆವರೆಗೆ ಹೇಳಿದ್ದು ಏನೂ ಕೇಳಿಸದವಳಂತೆ, ಅದೇ ಆಗ ಕನಸಿನಿಂದ ಎದ್ದವಳಂತೆ ಆ ಮುದುಕನ ಕಡೆಗೆ ತಿರುಗಿ ಕೇಳಿದಳು: 

‘ಹಂಗಾರೆ...ನಿಮ್ಮ ಮಗ ನಿಜವಾಗ್ಲೂ ತೀರಿಕೊಂಡಿದಾನಾ?’ 

ಉಳಿದವರೆಲ್ಲ ಕೆಕ್ಕರುಗಣ್ಣಿನಿಂದ ಅವಳನ್ನು ನೋಡಿದರು. ಮುದುಕನ ಮಂಜಾದ ಕಣ್ಣುಗಳು ಅವಳನ್ನು ನೋಡಲೆತ್ನಿಸಿದವು. ಆತ ತಡವರಿಸುತ್ತಾ ಅವಳ ಪ್ರಶ್ನೆಗೆ ಉತ್ತರ ಕೊಡಲೆತ್ನಿಸಿದ. ಮಾತೇ ಹೊರಡಲಿಲ್ಲ. ಅವಳನ್ನೇ ನೋಡುತ್ತಿದ್ದ... ಅವಳ ಆ ಸಿಲ್ಲಿ, ಅಸಂಬದ್ಧ ಪ್ರಶ್ನೆಯ ಅರ್ಥ ಈಗ ಅವನಿಗೆ ತಟ್ಟಿದಂತಾಯಿತು: ಅಂದರೆ, ಮಗ ಇನ್ನೆಂದೂ ಬಾರದಂತೆ ಹೊರಟು ಹೋಗಿದ್ದಾನೆ. 

ಅವನ ಮುಖ ಕುಗ್ಗಿತು. ಕಿವುಚಿಕೊಂಡಿತು. ತಕ್ಷಣ ಜೇಬಿನಿಂದ ಕಚೀಫ್ ಎಳೆದುಕೊಂಡ; ಸುತ್ತ ಇದ್ದವರ ಎದೆಯೊಡೆಯುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ...

ಎಷ್ಟೋ ವರ್ಷಗಳ ಕೆಳಗೆ ‘ದ ವಾರ್’ ಕತೆಯನ್ನು ಪಾಠ ಮಾಡಿದಾಗ, ಈ ಕತೆಯ ಕೊನೆಯಲ್ಲಿರುವ, ‘Then…is your son really dead?’ ಎಂಬ ಆ ಮಹಿಳೆಯ ಪ್ರಶ್ನೆಯಲ್ಲಿರುವ `ರಿಯಲೀ’ ಎಂಬ ಪದ ಹೊರಡಿಸುವ ಆಳವಾದ ಅರ್ಥ; ಅಥವಾ ‘ಯುವರ್’ ಅಥವಾ ‘ಸನ್’ ಈ ಯಾವ ಪದದ ಮೇಲೆ ಒತ್ತು ಹಾಕಿದರೂ ಹೊರಡುವ ಬೇರೆ ಬೇರೆ ಅರ್ಥ...ಇವೆಲ್ಲದರ ಬಗ್ಗೆ ಜಾಣ ಹುಡುಗಿಯರು ಚರ್ಚಿಸಿದ್ದು ನೆನಪಾಗುತ್ತದೆ. ನೊಂದವರ ಮನಸ್ಸಿನಲ್ಲಿ ನಡೆಯುತ್ತಿದ್ದ ಭಾವನೆಗಳ ‘ಯುದ್ಧ’; ಹೊರ ಮಾತು-ಒಳಸತ್ಯಗಳ ನಡುವೆ ನಡೆವ ‘ಯುದ್ಧ’; ನಮ್ಮ ಉಬ್ಬಿದ ಮಾತುಗಳ ಅರ್ಥಹೀನತೆ... ಇವೆಲ್ಲವನ್ನೂ ಗ್ರಹಿಸಲೆತ್ನಿಸುತ್ತಿದ್ದ ಆ ಹದಿಹರೆಯದ ಹುಡುಗಿಯರಿಗೆ ತಾಯಿಯ ದುಃಖ, ಭಾಷೆ ನಿಧಾನಕ್ಕೆ ಅರ್ಥವಾಗತೊಡಗಿತ್ತು. 

ಆದರೆ ತಾವು ಮಾತ್ರ ಸುರಕ್ಷಿತವಾಗಿ ಬದುಕುತ್ತಾ, ಇನ್ನೊಬ್ಬರನ್ನು ಉಬ್ಬಿಸುವ 'ಗಂಡು ಭಾಷೆ’ ಬಳಸುವ ಮಧ್ಯಮ ವರ್ಗಗಳ ಗಂಡಸರಿಗೆ ಈ ಸೂಕ್ಷ್ಮಗಳು ಸುಲಭವಾಗಿ ಅರ್ಥವಾಗಬಲ್ಲವೆ?

Share on:

Comments

9 Comments



| Aiyasha

ಶಬ್ದ ಒಂದು ಅರ್ಥ ನೂರಾರು.


| Doreswamy

ಯುದ್ಧದ ಬಗ್ಗೆ ಒತ್ತಿ ಒತ್ತಿ ಹೇಳಿದರೂ ಅರ್ಥವಾಗಲ್ಲ ಮನಸ್ಸಿನ ಹಿಡಿತ ಕಳೆದುಕೊಂಡವರಿಗೆ.


| DEVINDRAPPA

ಹೆಣ್ಣಿನ ಅರಿವು; ಗಂಡಿನ ಅರ್ಥ ಲೇಖನವನ್ನು ಯುದ್ದಕ್ಕೆ ಹೊರಟು ನಿಂತ ಮಗನನ್ನು ಕಳುಹಿಸಿದ ಅನೇಕ ತಂದೆಯರ ಸಂಭಾಷಣೆಯ ಮೂಲಕ ವಿವರಿಸಿದ್ದೀರಿ. ಪ್ರಭುತ್ವ ನಮಗೆ ಹೆಣೆಯಲಾದ ಮಯದ ಬಲೆಯಲ್ಲಿ ಎಲ್ಲರೂ ಬಂದು ಬಿದ್ದಿದ್ದೇವೆ. ಯುದ್ಧ ಯಾರಿಗೂ ಬೇಡ ಎಂದರೂ ಸಹ ಈ ಗಂಡಾಳ್ವಿಕೆಯೇ ಮತ್ತೆ ಮತ್ತೆ ಮನುಷ್ಯನನ್ನು ಪ್ರಚೋದನೆಗೆ ಒಳಪಡಿಸುತ್ತಾ ಬಂದಿದೆ. ಯುದ್ಧದಲ್ಲಿ ಮಡಿದರೆ ವೀರಸ್ವರ್ಗ ಲಭಿಸುತ್ತದೆ ಎಂಬ ಮಾಯಾಜಾಲ ಹೆಣೆದ ಗಂಡು ಭಾಷೆ ಇಂದಿಗೂ ಹಾಗೆ ಬಳಕೆಯಲ್ಲಿ ಬಂದಿದೆ. ದ ವಾರ್ ಕಥೆಯಲ್ಲಿ ಬರುವ ದಡೂತಿ ಮನುಷ್ಯನ ವರ್ತನೆಯನ್ನು ಗಮನಿಸಿದಾಗ ಈ ಮಾತಿಗೆ ಪುಷ್ಟಿ ಒದಗುತ್ತದೆ. ಕೊನೆಗೆ ಈ ಸಮಾಜದಲ್ಲಿ ಮಹಿಳೆ ತನ್ನೊಳಗಿನ ದುಃಖವನ್ನು ಹೇಳದೆ ನುಂಗಿಕೊಂಡು ಇರಬೇಕು ಎನ್ನುವ ಸಂದರ್ಭದಲ್ಲಿ ತಟ್ಟನೆ ಆ ದಢೂತಿ ಮನುಷ್ಯನಿಗೆ ಕೇಳುವ ಪ್ರಶ್ನೆ ತುಂಬಾ ಗಾಢವಾದ ಪರಿಣಾಮ ಬೀರಬಲ್ಲದು. ಯಾವ ತಾಯಿ ಹೃದಯವೂ ಕೂಡ ತನ್ನ ಮಗ ಮಾತ್ರ ಯುದ್ಧದಲ್ಲಿ ಮಡಿಯಬಾರದು ಎಂಬುದರ ಜೊತೆಗೆ ಎದುರಾಳಿ ಕೂಡ ಬದುಕಿ ಬಾಳಬೇಕೆಂದು ಆಶಿಸುತ್ತಾಳೆ. ಇದು ಬುದ್ದ ನಮಗೆ ಕಲಿಸಿದ ತಾಯ್ತನದ ಪಾಠ.


| Suresha B

"ದಿ ವಾರ್" ಎನ್ನುವ ಲೂಗಿ ಪಿರಾಂಡೆಲೋ ಕತೆ ತುಂಬಾ ತುಂಬಾ ಮನಸ್ಸಿಗೆ ನಾಟುವಂತಿದೆ. ಯುದ್ಧ ಕುರಿತಂತೆ ಎದೆಯುಬ್ಬಿಸಿ ಮಾತಾಡುವ ದೇಶಭಕ್ತರಿಗೆ ಆ ತಾಯಿಯ ಹಾಗೆಯೇ "ನಿಜವಾಗಿ... ನಿಜವಾಗಿಯೂ... ನಿಮ್ಮ ಮಗ ತೀರಿಹೋದನೇ" ಎಂದು ಕೇಳಬೇಕು. ಯುದ್ಧದ ಕರಾಳತೆಯನ್ನು ಈ ಬಗೆಯಲ್ಲಿ ಬಿಚ್ಚಿಡುವ ಕತೆ ಓದಿದ್ದು ಹೊಸ ನೋಟವೊಂದನ್ನು ಕಲಿಸಿತು. ಥ್ಯಾಂಕ್ಸು ಕಾಮ್ರೇಡ್....


| Hari Prasad

ಈ ಕಣ್ಣೋಟವೇ ಈಗ ಬೇಕಿರುವುದು. ಥ್ಯಾಂಕ್ಯೂ ಸಾ


| ಡಾ. ನಿರಂಜನ ಮೂರ್ತಿ ಬಿ ಎಂ

ಯುದ್ಧ-ಬುದ್ಧ ಪ್ರಾಸಂಗಿಕವಾಗಿ ಬಳಸಿದ ಪ್ರಾಸಪದಗಳೇ ಆದರೂ, ಅವು ವಿರುದ್ಧಾರ್ಥಕ ಪದಗಳೆಂಬ ಸತ್ಯವನ್ನು ಮನಗಾಣಿಸುವ ಈ ಬರಹ ಸಮಂಜಸ ಮತ್ತು ಸಕಾಲಿಕ. ಸಮಾಜದಲ್ಲಿನ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಬುದ್ಧ ಮಾಡಿದ ಯುದ್ಧವನ್ನು ಸ್ಮರಿಸುವ ಮೂಲಕ ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತ ಮತ್ತು ಅಗತ್ಯವೆಂಬ ನಿಜವನ್ನು ರುಜುವಾತುಪಡಿಸುತ್ತೆ ಈ ಲೇಖನ. ಲೂಜಿ ಪಿರಾಂಡೆಲೋನ ಕಥೆಯನ್ನು ವಿಶ್ಲೇಷಿಸುತ್ತಾ, ಹೆಣ್ಣಿನ ಸೂಕ್ಷ್ಮ ಭಾವನೆಗಳನ್ನು ಮತ್ತು ಗಂಡಿನ ಅಸೂಕ್ಷ್ಮ ಮಾತುಗಳನ್ನು ಗುರುತಿಸುವ ಮೂಲಕ ಪರೋಕ್ಷವಾಗಿ ಯುದ್ಧದ ಅನರ್ಥತೆ ಮತ್ತು ಕರಾಳತೆಯನ್ನು ತೋರುವ ಲೇಖಕರ ಸೂಕ್ಷ್ಮತೆ ಎದ್ದುಕಾಣುತ್ತದೆ. ಧನ್ಯವಾದಗಳು.


| sanganagouda

ನಮ್ಮ ಕನ್ನಡದ ಚಂಪೂ ಕಾವ್ಯವಗಳು ಸಾಮಾನ್ಯ ಸಾವು ಬಯಸಲಿಲ್ಲ. ಸರ್..


| Vijaya

ಮನಸ್ಸುಗಳನ್ನು ಓದುವ ಬಗೆಗೆ ನಮಸ್ಕಾರ


| Dr. B.C. Prabhakar

Beautiful narration!




Add Comment


Nataraj Huliyar on Book Prize Awardees

YouTube






Recent Posts

Latest Blogs