ಪುಟ್ಟ ಕಾದಂಬರಿಗೊಂದು ಬೆನ್ನುಡಿ

ಎರಡು ವರ್ಷಗಳ ಕೆಳಗೆ ಗೆಳೆಯ ಹುಲಿಕುಂಟೆ ಮೂರ್ತಿ ಕವಿ ಗಂಗಪ್ಪ ತಳವಾರ ಬರೆದ ‘ಧಾವತಿ’ಯ ಮೊದಲ ಡ್ರಾಫ್ಟ್ ಕಳಿಸಿ, ‘ಇದು ನಮ್ಮ ‘ತಮಟೆ’ ಪ್ರಕಾಶನದ ಮೊದಲ ಪುಸ್ತಕ’ ಅಂದರು. ‘ಬಾರದ ಭವಂಗಳಲ್ಲಿ’ ಮೈದಳೆದ ‘ಧಾವತಿ’ಯ ಭಾಷೆಯ ಕಸುವು ಕಂಡು ‘ಇದು ಇನ್ನಷ್ಟು ವಿಸ್ತೃತವಾದ ಕಾದಂಬರಿಯಾಗಬಹುದೇನೋ?’ ಎಂದೆ. ತಮ್ಮ ಹೊಸ ಸಿನಿಮಾಕ್ಕೆ ಕೋಲಾರಕನ್ನಡದ ಪ್ರಯೋಗದಲ್ಲಿ ತೊಡಗಿದ್ದ ಸಿನಿಮಾ ನಿರ್ದೇಶಕ-ಗೆಳೆಯ ಬಿ. ಸುರೇಶ್ ಗೆ ಈ ಭಾಷೆಯ ತಾಜಾತನವನ್ನು ಬಣ್ಣಿಸಿದೆ. ‘ಕಾಮನ ಹುಣ್ಣಿಮೆ’ ಕಾದಂಬರಿಯ ಪ್ರೇರಕ ಪಾತ್ರವೂ ಆಗಿರುವ ದಲಿತ ಚಳುವಳಿಯ ಪಿತಾಮಹ ಗಡ್ಡಂ ವೆಂಕಟೇಶ್ ಅವರಿಗೆ ಈ ಕೃತಿ ಅರ್ಪಣೆಯಾಗಿರುವುದು ಕೂಡ ಅರ್ಥಪೂರ್ಣವಾಗಿದೆ. ಈ ನಡುವೆ ಗಂಗಪ್ಪ ಇನ್ನಷ್ಟು ತಿದ್ದಿ ಕಳಿಸಿದ ಕಾದಂಬರಿಯ ಜೊತೆಗೆ ಈ ಕೃತಿಗೆ ಕವಯಿತ್ರಿ ಭಾರತಿದೇವಿ ಬರೆದ ವಿವರವಾದ ಮುನ್ನುಡಿಯನ್ನು ಓದುತ್ತಾ, ಚೆಲುವಾಂತನು ಕವಿ ಮಂಜುನಾಥ ಸೃಷ್ಟಿಸಿದ ಚಿತ್ರಗಳನ್ನು ನೋಡುತ್ತಾ… ಬರೆದ ಮಾತುಗಳು ‘ಧಾವತಿ’ಯ ಬೆನ್ನುಡಿಯಲ್ಲಿವೆ. ಶನಿವಾರ (೨೬ ಆಗಸ್ಟ್ ೨೦೨೩) ಬಿಡುಗಡೆಯಾದ ಈ  ಪುಸ್ತಕದ ಬೆನ್ನುಡಿಯ ಮಾತುಗಳು: 

 

ಬೆನ್ನುಡಿ

"ಸಾವಿರಾರು ವರ್ಷಗಳಿಂದ ಹರಿದು ಬಂದ ಯಾವುದೇ ಭಾಷೆಯ ನುಡಿಗಟ್ಟುಗಳಲ್ಲಿ ನಿರಂತರವಾಗಿ ಬಿಚ್ಚಿಕೊಳ್ಳುತ್ತಾ ಹೋಗುವ ಜ್ಞಾನ, ವಿವೇಕಗಳನ್ನು ಕಂಡು ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ವಿಸ್ಮಯಗೊಳ್ಳುತ್ತಾನೆ. ಗಂಗಪ್ಪ ತಳವಾರ ಬರೆದ ‘ಧಾವತಿ’ಕಾದಂಬರಿಯೊಳಗೆ ಕೋಲಾರ ಸೀಮೆಯ ಸುತ್ತಮುತ್ತಲ ಆಡುಮಾತಿನಲ್ಲಿ ಚಿಮ್ಮುವ ಬಾಳಿನ ಅನುಭವಗಳು, ಚಿತ್ರಗಳು ಹಾಗೂ ನೋಟಗಳನ್ನು ಕಂಡಾಗ ಫ್ರಾಯ್ಡ್ ವಿಸ್ಮಯ ನನ್ನ ಅರಿವಿಗೂ ಬರತೊಡಗಿತು. ತನ್ನ ತಾರುಣ್ಯವನ್ನು ಕೋಲಾರದ ಆದಿಮ ಬೆಟ್ಟದ ಸುತ್ತ ಕಳೆದಿರುವ ಅಸಲಿ ದನಿಯ ಕವಿ ಗಂಗಪ್ಪ ಬರೆದ ಈ ಪುಟ್ಟ ಕಾದಂಬರಿ ಕನ್ನಡ ಕಥಾಲೋಕಕ್ಕೆ ಇನ್ನೂ ಪರಿಚಯವಿರದ ಸ್ತ್ರೀಲೋಕವನ್ನು ಸಿದ್ಧ ಅನುಕಂಪದ ಗಡಿ ಮೀರಿ ಸಹಜವಾಗಿ ಗ್ರಹಿಸಲೆತ್ನಿಸಿದೆ. ಚಿಂದಿಯಾದ ಚಂದ್ರಿಯ ದಾರುಣ ಬದುಕಿನ ಏರುಪೇರು, ಅವಮಾನ, ಅವಳ ಕಣ್ಣು, ದೇಹ, ಆತ್ಮ, ಲಯ, ಮಾತು, ಮನೋಲೋಕಗಳ ಜೊತೆಗೇ ಸಾಗುವ ಕಾದಂಬರಿಕಾರ ಅವಳ ಮೈ ಮನಗಳ ಲಯಗಳಲ್ಲಿ ಬೆರೆತು ಬರೆಯುವ ರೀತಿ ಅನನ್ಯವಾಗಿದೆ.

ಕನ್ನಡ ಸಾಹಿತ್ಯ ಕಂಡ ಹಲವು ಚಳುವಳಿಗಳ ಗುರುತನ್ನು ಉಳಿಸಿಕೊಂಡೂ, ಆ ಮಾದರಿಗಳಾಚೆಗೆ ದಾಟಿ ಕತೆ ಹೇಳುವ ಕಾತರ ತೋರುವ ‘ಧಾವತಿ’ಕಾದಂಬರಿ ವಿವಿಧ ದ್ರಾವಿಡ ಭಾಷೆಗಳು ಬೆರೆಯುವ ಸೀಮೆಯ ವಿಶಿಷ್ಟ ನುಡಿಗಟ್ಟುಗಳಿಗೆ ಮಾತ್ರವೇ ದಕ್ಕಬಲ್ಲ ಲೋಕಸತ್ಯಗಳತ್ತ ಕೈ ಚಾಚಿದೆ; ಆ ಲೋಕದಿಂದಲೇ ಒಡಮೂಡಿದ ಶಕ್ತ ಕಾದಂಬರಿಕಾರನ ಹುಟ್ಟನ್ನು ಇಲ್ಲಿನ ಪುಟಪುಟವೂ ಸಾರುತ್ತದೆ. ತಮ್ಮ ಪಾತ್ರಗಳ ಸಾಮಾಜಿಕ ಭಿತ್ತಿಯ ಒಳಹೊರಗಿನಲ್ಲಿ ಇನ್ನಷ್ಟು ಆಳವಾಗಿ ತೊಡಗಿ, ಭಾಷೆಯ ಜೀವಂತ ಲಯಗಳ ಜೊತೆಗೆ ಬೆಸುಗೆಯರಿಯದಂತೆ ಬೆರೆವ ಕಲೆ ದಕ್ಕಿದ ದಿನ ಗಂಗಪ್ಪ ಕನ್ನಡದ ಮಹತ್ವದ ಕಾದಂಬರಿಕಾರರಾಗಬಲ್ಲರು."

Share on:

Comments

0 Comments





Add Comment






Recent Posts

Latest Blogs



Kamakasturibana

YouTube