ಕಾವೇರಿ ಜಲವಿವಾದ: ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಎರಡು ಭಾಷಣಗಳು

1991ರಲ್ಲಿ ಕರ್ನಾಟಕದ ವಿಧಾನಸಭಾ ಶಾಸಕರಾಗಿದ್ದ ಖ್ಯಾತ ಸಮಾಜವಾದಿ ಚಿಂತಕ-ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಕಾವೇರಿ ಜಲವಿವಾದ ಕುರಿತು ಆಡಿದ ಮಾತುಗಳನ್ನು ನಮ್ಮ ನಾಯಕರು ಓದಿ ಅರಿಯುವುದು ಅಗತ್ಯ ಎನ್ನಿಸಿ ಈ ಎರಡೂ ಭಾಷಣಗಳನ್ನೂ ಇಲ್ಲಿ ಕೊಡುತ್ತಿರುವೆ. ಈ ಭಾಷಣಗಳನ್ನು ಓದುತ್ತಿದ್ದರೆ ಇವತ್ತಿನ ವಿಧಾನಸಭೆಯ ಚರ್ಚೆ ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ನೋಡಿ ದುಃಖವಾಗುತ್ತದೆ. 

 

ಎಂ.ಡಿ.ಎನ್. ಭಾಷಣ-1:  (06.07.1991)

ಕಾವೇರಿ ಜಲವಿವಾದದ ಬಗ್ಗೆ ಬಂದ ಮಧ್ಯಂತರ ಆದೇಶವನ್ನು ತಿರಸ್ಕರಿಸಬೇಕು, ನ್ಯಾಯಮಂಡಳಿಯನ್ನು ಬಹಿಷ್ಕರಿಸಬೇಕು, ರಾಷ್ಟ್ರೀಯ ಜಲನೀತಿ ರೂಪಿಸಬೇಕು ಎಂದು ವಿಧಾನಸಬೆಯಲ್ಲಿ ಖಚಿತವಾಗಿ ಹೇಳಿದ್ದ ಪ್ರೊ. ಎಂ.ಡಿ.ಎನ್. ಭಾಷಣದ ಭಾಗಗಳು:

 

‘ಏತಕ್ಕೋಸ್ಕರ ನಾವು ಈ ಮಧ್ಯಂತರ ಆದೇಶವನ್ನು ತಿರಸ್ಕರಿಸಬೇಕು ಎನ್ನುವುದು ಒಂದು ವಿಷಯ. ಎರಡನೆಯ ವಿಷಯ, ಏತಕ್ಕೋಸ್ಕರ ನಾವು ಈ ನ್ಯಾಯ ಮಂಡಳಿಯನ್ನು ಬಹಿಷ್ಕರಿಸಬೇಕು ಎನ್ನುವುದು. ಈ ಮಧ್ಯಂತರ ಆದೇಶ ಎಂದರೇನು? ನಾವು ಸ್ಪಷ್ಟವಾದ ಭಾಷೆ ಬಳಸಬೇಕು. ಬಹಳ ಜನ ಸದಸ್ಯರು ಮಧ್ಯಂತರ ತೀರ್ಪು, ಮಧ್ಯಂತರ ತೀರ್ಪು ಎಂದು ಹೇಳುತ್ತಿದ್ದರು. ಇದು ತೀರ್ಪು ಅಲ್ಲ, ಇದು ಮಧ್ಯಂತರ ಆದೇಶ. ಇದು ಹೇಗೆ ಹೊರಗಡೆ ಬಂತು ಎನ್ನುವುದೇ ನನಗೆ ದೊಡ್ಡ ಆಶ್ಚರ್ಯ. ಮೊದಲು ನ್ಯಾಯಮಂಡಳಿ ‘ಮಧ್ಯಂತರ ಆದೇಶ ಹೊರಡಿಸುವುದಕ್ಕೆ ನನಗೆ ಅಧಿಕಾರ ಇಲ್ಲ’ ಎಂದು ಹೇಳಿದ ಅಭಿಪ್ರಾಯ ಸರಿ. ಅನಂತರ ಸುಪ್ರೀಂ ಕೋರ್ಟ್ ಯಾವ ಕಾರಣಕ್ಕೆ ಈ ನ್ಯಾಯಮಂಡಳಿ ಮಧ್ಯಂತರ ಆದೇಶ ಹೊರಡಿಸಬೇಕು ಎನ್ನುವಂಥ ಅರ್ಥ ಬರುವ ಒಂದು ಆದೇಶ ಹೊರಡಿಸಿತೋ, ನನಗಿನ್ನೂ ಅರ್ಥವಾಗುತ್ತಿಲ್ಲ. ಏಕೆಂದರೆ, ಈ ನ್ಯಾಯಮಂಡಳಿಯವರು ಯಾವುದೇ ಮಧ್ಯಂತರ ಆದೇಶ ಹೊರಡಿಸಿದರೂ ಅದನ್ನು ಜಾರಿಗೆ ತರುವುದಕ್ಕೆ ಈಗಿರುವಂಥ ಕಾನೂನಿನ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೂ ಅಧಿಕಾರ ಇಲ್ಲ. ಸನ್ಮಾನ್ಯ ಸಭಾಧ್ಯಕ್ಷಿಣಿಯವರೇ, ಇಂಟರ್‌ಸ್ಟೇಟ್ ವಾಟರ್ ಡಿಸ್‌ಪ್ಯೂಟ್ ಆ್ಯಕ್ಟ್, ಸೆಕ್ಷನ್ -೬ನ್ನು ಓದುತ್ತಿದ್ದೇನೆ.

 

‘The Central Government shall publish the decision of the Tribunal in the official gazette...’

 

ಈ ಮಧ್ಯಂತರ ಆದೇಶವನ್ನು ಜಾರಿಗೆ ತರುವುದಕ್ಕೆ ಕೇಂದ್ರ ಸರ್ಕಾರಕ್ಕೂ ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರ ಇಲ್ಲ ಎಂದು ನಾನು ಹೇಳುತ್ತಾ ಇದ್ದೆ. ಸೆಕ್ಷನ್-೬ ಇಂಟರ್‌ಸ್ಟೇಟ್ ವಾಟರ್ ಡಿಸ್‌ಪ್ಯೂಟ್ಸ್ ಆ್ಯಕ್ಟ್:

 

‘The Central Government shall publish the decision of the Tribunal in the Official Gazette and the decision shall be final and binding on the parties to the dispute and shall be given effect to by them.

 

Only the decision of a tribunal constituted under this Act can be enforced and not the interim orders.’

 

ಸೆಕ್ಷನ್ -೬ರ ಪ್ರಕಾರ ಈ ನ್ಯಾಯಮಂಡಳಿಗೆ ಮಧ್ಯಂತರ ಆದೇಶ ಹೊರಡಿಸುವ ಅಧಿಕಾರವೂ ಇಲ್ಲ. ಅಕಸ್ಮಾತ್ ಹೊರಡಿಸಿದರೆ ಕೇಂದ್ರ ಸರ್ಕಾರಕ್ಕೆ ಅದನ್ನು ಜಾರಿಗೊಳಿಸುವಂಥ ಅಧಿಕಾರವೂ ಇಲ್ಲ...ಆ ಕಾರಣ ಇದನ್ನು ನಾವು ತಿರಸ್ಕರಿಸಬೇಕು. ಎರಡನೆಯ ವಿಷಯ, ಏತಕ್ಕೋಸ್ಕರ ನಾವು ಈ ನ್ಯಾಯಮಂಡಲಿಯನ್ನು ಬಹಿಷ್ಕರಿಸಬೇಕು, ಬಹಿಷ್ಕರಿಸದೇ ಇದ್ದರೆ ಏನಾಗುತ್ತೆ, ಈ ನ್ಯಾಯಮಂಡಳಿ ಯಾವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಈ ಮಧ್ಯಂತರ ಆದೇಶದಲ್ಲಿ ನಮಗೆ ಕಂಡುಬರುತ್ತದೆ.

 

ಮಧ್ಯಂತರ ಆದೇಶದ ನೆಪದಲ್ಲಿ ಈ ನ್ಯಾಯಮಂಡಲಿ ಒಂದು ಜಲನೀತಿಯನ್ನು ರೂಪಿಸುತ್ತಿದೆ. ನಾವು ಇದನ್ನು ಒಪ್ಪುವುದಾದರೆ ಈ ಜಲನೀತಿಯನ್ನು ರೂಪಿಸುವ ಅಧಿಕಾರ ಯಾರಿಗೆ ಇದೆ ಎಂದರೆ, ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ.  ಇದು ಕೇಂದ್ರ ಸರ್ಕಾರದ ವ್ಯಾಪ್ತಿಯ ಮೇಲಿನ ಅತಿಕ್ರಮಣ. ಆದ್ದರಿಂದ ಇದನ್ನು ನಾವು ಬಹಿಷ್ಕರಿಸದಿದ್ದರೆ ನಾವು ಕೆಟ್ಟ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ.  ಈ ಮಧ್ಯಂತರ ಆದೇಶ ಇನ್ನೂ ಯಾವ ಮಟ್ಟಕ್ಕೆ ಹೋಗುತ್ತದೆಂಬುದನ್ನು ನೋಡಬೇಕಾಗಿದೆ. ಈ ನ್ಯಾಯಮಂಡಳಿ ಪರ್ಯಾಯ ನೀತಿ ನಿರ್ಮಾಪಕನಂತೆಯೂ ಕೆಲಸ ಮಾಡಲು ಪ್ರಯತ್ನಿಸುತ್ತಿದೆ.  

 

ಈ ನ್ಯಾಯಮಂಡಳಿಗೆ ಅಧಿಕಾರವಾದರೂ ಏನಿದೆ? ನಿಮ್ಮ ನೀರಾವರಿ ಪ್ರದೇಶವನ್ನು ವಿಸ್ತಾರ ಮಾಡಿಕೊಳ್ಳಬಾರದೆಂದು ಹೇಳುವುದಕ್ಕೆ ಯಾರು ಇದಕ್ಕೆ ಅಧಿಕಾರವನ್ನು ಕೊಟ್ಟಿದ್ದಾರೆ? ಇವತ್ತು ನಾವು ಇದನ್ನು ಬಹಿಷ್ಕಾರ ಮಾಡದಿದ್ದರೆ we will be conceding facts or conceding the power of this Tribunal to function as a parallel policy maker.

 

ನ್ಯಾಯಮಂಡಳಿಗೆ ಇದನ್ನು ಮಾಡುವುದಕ್ಕೆ ಅವಕಾಶವೇ ಇಲ್ಲ. ಇದನ್ನು ಮಾಡಕೂಡದು. ಇದನ್ನು ಕೇವಲ ನಮ್ಮ ರಾಜ್ಯದ ಹಿತಾಸಕ್ತಿಯಿಂದ ಮಾತನಾಡುತ್ತಿಲ್ಲ. ಇಡೀ ದೇಶದ ಎಲ್ಲ ರಾಜ್ಯಗಳ ಹಿತಾಸಕ್ತಿಯಿಂದ ಆಡುತ್ತಿರುವ ಮಾತಿದು. ಈ ಕಾರಣದಿಂದ ನಾವು ಈ ನ್ಯಾಯಮಂಡಳಿಯ ತೀರ್ಪನ್ನು ತಿರಸ್ಕರಿಸಬೇಕು.  I even go to the extent of saying that this Tribunal is an illegitimate child without guidelines.

 

ಇಂಟರ್‌ಸ್ಟೇಟ್ ವಾಟರ್ ಡಿಸ್‌ಪ್ಯೂಟ್ ಆ್ಯಕ್ಟ್ ಏನು ಹೇಳುತ್ತದೆ ಎಂದರೆ, 

 

Water dispute means any dispute or difference between two or more State Governments with respect to the use, distribution and control of the waters of or any interstate river or river valley.’’

 

Yes, where are the guidelines? This is an act without guidelines and this is a Tribunal constituted under this Act without guidelines.

 

ಈ ಸಮಸ್ಯೆ ಬಂದಾಗ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗಲೂ ನನ್ನ ಅಭಿಪ್ರಾಯ ಇದೇ ಇತ್ತು. ನ್ಯಾಯಮಂಡಳಿಯನ್ನು ನಾವು ಒಪ್ಪೋಣ; ಆದರೆ ಯಾವಾಗ? ಒಂದು ರಾಷ್ಟ್ರೀಯ ಜಲನೀತಿಯನ್ನು ರೂಪಿಸಿದ ನಂತರ. ಮೊದಲು ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು. ಆ ರಾಷ್ಟ್ರೀಯ ಜಲನೀತಿಯ ಆಧಾರದ ಮೇಲೆ ಗೈಡ್‌ಲೈನ್‌ಗಳನ್ನು ಈ ಕಾನೂನಿಗೆ ಅಳವಡಿಸಬೇಕು. ಅನಂತರ ಟ್ರಿಬ್ಯುನಲ್ ರಚನೆಯಾಗಬೇಕು. ಆನಂತರ ನಾವು ಅದನ್ನು ಒಪ್ಪತಕ್ಕದ್ದು. ಆದರೆ, ಇವತ್ತು ಸೂತ್ರಗಳೇ ಇಲ್ಲದಿರತಕ್ಕ ಈ ನ್ಯಾಯಮಂಡಳಿಯನ್ನು ನಾವು ಈಗಲಾದರೂ ತಿರಸ್ಕರಿಸಬೇಕು. ಇಲ್ಲದಿದ್ದರೆ, we will be helping building up of a very wrong precedent which will be harmful not only to Karnataka but to all the other States in India. 

 

ಎಂ.ಡಿ.ಎನ್. ಭಾಷಣ-2: (03 12.1991)

ಈ ಜಲವಿವಾದ ಪ್ರಾರಂಭವಾದಾಗಿಂದ ನಾನು ಈ ಸರ್ಕಾರಕ್ಕೆ ಒಂದು ವಿಷಯವನ್ನು ತಿಳಿಸುತ್ತಲೇ ಬಂದೆ. ಜಲವಿವಾದವನ್ನು ನ್ಯಾಯಮಂಡಳಿಗೆ ಒಪ್ಪಿಸುವಂಥ ವಿಚಾರಕ್ಕೆ ನಮ್ಮ ಒಪ್ಪಿಗೆ ಕೊಡಬಾರದು. ಅದಕ್ಕೆ ಕಾರಣ- ಜಲವಿವಾದಗಳನ್ನು ಪುಸ್ತಕದ ಮೂಲಕ ಕಾನೂನು ಕಲಿತಂಥ ನ್ಯಾಯಪಂಡಿತರಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಅಂತರ್ ರಾಷ್ಟ್ರೀಯವಾಗಿ ಸಾಬೀತಾದ ಸತ್ಯವಾಗಿರುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಮಗೂ, ಪಾಕಿಸ್ತಾನಕ್ಕೂ ಪಂಜಾಬಿನ ನದಿ ನೀರಿನ ವಿವಾದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ನಾವು ಪಶ್ಚಿಮ ಜರ್ಮನಿಯ ಒಬ್ಬ ಕಾನೂನು ಪ್ರಾಧ್ಯಾಪಕರ ಸಹಾಯ ಪಡೆದುಕೊಂಡೆವು. ಕೇಂದ್ರ ಸರ್ಕಾರ ಈ ಸಹಾಯವನ್ನು ಪಡೆಯಿತು. ಆ ಕಾನೂನು ಪ್ರಾಧ್ಯಾಪಕರು ನಮ್ಮ ಸರ್ಕಾರಕ್ಕೆ ಸಹಾಯ ಕೊಡುವಂಥ ಸಂದರ್ಭದಲ್ಲಿ ಅಂತರ್ ರಾಷ್ಟ್ರೀಯವಾಗಿ ಬಹಳ ಪ್ರಖ್ಯಾತಿ ಪಡೆದಿರುವಂಥ ಒಂದು ಪುಸ್ತಕವನ್ನು ಬರೆದಿದ್ದಾರೆ:  Rivers in International Law. ಈ ಪುಸ್ತಕ ಬರೆದವರು  Prof. F.J. Berber. 

 

ಇದನ್ನು ನಾನು ಹಿಂದೆ ಹೇಳಿದಾಗಲೆಲ್ಲ, ಅಂತರ್ ರಾಷ್ಟ್ರೀಯವಾಗಿ ಒಪ್ಪಿಗೆಯಾಗಿರುವ ವಿಚಾರಗಳನ್ನು ಈ ಸಭೆಯ ಮುಂದೆ ಮಂಡಿಸುತ್ತಿದ್ದೆ. ಈ ಸಭೆ ನಾನು ಒಬ್ಬ ಸಣ್ಣ ಕಾನೂನಿನ ವಿದ್ಯಾರ್ಥಿ ಎಂಬ ಕಾರಣಕ್ಕೆ ನನ್ನ ಅಭಿಪ್ರಾಯವನ್ನು ಒಪ್ಪಿರಲಿಲ್ಲ. ಆ ಕಾರಣ ನಾನು ಬರ್ಬರ್ ಅವರು ಆ ಪುಸ್ತಕದಲ್ಲಿ ಏನು ಹೇಳಿದ್ದಾರೆ ಎಂದು ತೋರಿಸುವುದಕ್ಕಾಗಿ ಬರ್ಬರ್ ಅವರ ಪುಸ್ತಕದ ಒಂದು ಪ್ಯಾರಾಗ್ರಾಫ್ ಅನ್ನು ಓದಿ ಹೇಳುತ್ತೇನೆ. 

 

‘It is noteworthy that water disputes are generally agreed to constitute a classical example of disputes which cannot be satisfactorily solved by a judicial decision.’ (p. 263)

 

ಇದು ಅಂತರ್ ರಾಷ್ಟ್ರೀಯವಾಗಿ ಒಪ್ಪಿಗೆಯಾಗಿರುವಂಥ ಒಂದು ವಿಚಾರ. ನಾವು ನಮ್ಮ ಶ್ರೇಷ್ಠ ನ್ಯಾಯಾಲಯದ ಅಭಿಪ್ರಾಯಗಳನ್ನು ವಿಶ್ಲೇಷಣೆ ಮಾಡುತ್ತಿದ್ದೇವೆ. ನಮ್ಮ ಶ್ರೇಷ್ಠ ನ್ಯಾಯಾಲಯಕ್ಕಿಂತಲೂ ಹಿರಿಯ ನ್ಯಾಯಾಲಯ, ನಮ್ಮಲ್ಲಿರುವ ಅಂತರರಾಜ್ಯ ಜಲವಿವಾದಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಜ್ಯ ಜಲವಿವಾದಗಳನ್ನು ವಿಶ್ಲೇಷಣೆ ಮಾಡಿದಂಥ ಅಮೇರಿಕಾದ ಶ್ರೇಷ್ಠ ನ್ಯಾಯಾಲಯದ ಒಂದು ಅಭಿಪ್ರಾಯವನ್ನು ತಮ್ಮ ಮುಂದೆ ಹೇಳುತ್ತೇನೆ. Colorado Vs.Kansas ಕೇಸಿನಲ್ಲಿ ಅಮೆರಿಕಾದ ಶ್ರೇಷ್ಠ ನ್ಯಾಯಾಲಯ ಹೇಳಿದಂಥ ಒಂದು ಪ್ಯಾರಾಗ್ರಾಫನ್ನು ನಾನು ಇಲ್ಲಿ ಓದುತ್ತೇನೆ:

 

The reason of judicial caution in adjudicating the relative rights of States in such cases is that while we have jurisdiction over such disputes, they involve the interests of quasi river rights, present complicated and delicate questions and due to the possibility of future change of conditions necessitate expert administration rather than judicial imposition of hard and fast rule."

 

The court continues: ‘Such controversies may appropriately be composed by negotiations and agreement pursuant to the Compact Clause of the Federal Constitution. We say of this case, as the court has said, inter state differences of like nature, that mutual accommodation and agreement and if possible, be the medium of settlement instead of invocation of our adjudicatory powers.

 

ಇದು ಈ ಮೊಕದ್ದಮೆಯಲ್ಲಿ ಮಾತ್ರ ಸುಪ್ರೀಂಕೋರ್ಟ್ ಆಫ್ ಯುನೈಟೆಡ್ ಸ್ಟೇಟ್ಸ್ ಹೇಳಿರುವ ವಿಚಾರ ಅಲ್ಲ. ಇಂತಹ ಹಲವಾರು ಮೊಕದ್ದಮೆಗಳಲ್ಲಿ, ಅಂತರರಾಜ್ಯ ವಿವಾದಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಹೇಳಿರುವಂಥ ಅಭಿಪ್ರಾಯ ಇದು. ಈ ವಿಚಾರವನ್ನು ನಾನು ಈ ವಿವಾದ ಪ್ರಾರಂಭವಾದಾಗಿಂದಲೂ ಹೇಳುತ್ತಿದ್ದೇನೆ. ಕೇವಲ ಕಾನೂನು ಪುಸ್ತಕದ ಮೂಲಕ ಕಾನೂನನ್ನು ಕಲಿತಿರುವಂತಹ ನ್ಯಾಯಾಧೀಶರಿಂದ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಾಧ್ಯ ಇಲ್ಲ. ಆದುದರಿಂದ ನಾವು ಇದನ್ನು ಒಪ್ಪಬಾರದು. ಆದರೂ ಏನೋ ಸರ್ವಾನುಮತದ ನಿರ್ಣಯ ಮಾಡಬೇಕು, ಸರ್ವಾನುಮತದ ನಿರ್ಣಯ ಎನ್ನುವ ಕಾರಣಕ್ಕಾಗಿ ನಾವು ಒಪ್ಪಿಕೊಂಡು, ಒಪ್ಪಿಗೆಯನ್ನು ಕೊಡುತ್ತಾ ಬಂದಿದ್ದೇವೆ. ಇದನ್ನು ಏತಕ್ಕೆ ವಿವರವಾಗಿ ಹೇಳುತ್ತಿದ್ದೇನೆ ಎಂದರೆ ಈ ನಿರ್ಣಯದಲ್ಲಿ ಜಲವಿವಾದವನ್ನು ತಾವು ಚರ್ಚೆ ಮತ್ತು ಸಂಧಾನದ ಮೂಲಕ ಬಗೆಹರಿಸಬೇಕೆಂದು ಹೇಳಿದ್ದೀರಿ. ನಿಜವಾಗಲೂ ಅದೇ ಕೆಲಸ ಆಗಬೇಕು. ನಾನು ಹೊರಗಡೆ ರೈತಸಂಘದ ಪರವಾಗಿ ಈ ನ್ಯಾಯಮಂಡಲಿ ರದ್ದಾಗಬೇಕೆಂದು ಒತ್ತಾಯ ಮಾಡಿರುತ್ತೇನೆ. ಈ ಒತ್ತಾಯವನ್ನು ತಾವೂ ಪ್ರಧಾನಮಂತ್ರಿಗಳ ಹತ್ತಿರ ಮಾಡುತ್ತೀರಾ ಎಂದು ನಾನು ಕೇಳುತ್ತಿದ್ದೇನೆ. 

 

ನಮ್ಮ ಸುಪ್ರೀಂ ಕೋರ್ಟಿನ ಅಭಿಪ್ರಾಯಕ್ಕೂ, ಅಮೆರಿಕಾ ಸುಪ್ರೀಂ ಕೋರ್ಟಿನ ಅಭಿಪ್ರಾಯಕ್ಕೂ ಬಹಳ ವ್ಯತ್ಯಾಸ ಬರುತ್ತದೆ. ಸಂಧಾನದ ಮೂಲಕ ಸಾಧ್ಯ ಇಲ್ಲದೇ ಇರುವುದರಿಂದ ಜ್ಯುಡಿಶಿಯಲ್ ಟ್ರಿಬ್ಯೂನಲ್ ಕಾನ್‌ಸ್ಟಿಟ್ಯೂಟ್ ಮಾಡಬೇಕೆಂದು ನಮ್ಮ ಸುಪ್ರೀಂ ಕೋರ್ಟ್ ಹೇಳುತ್ತದೆ. ಅಮೆರಿಕದ ಸುಪ್ರೀಂ ಕೋರ್ಟ್, `ಇದು ನ್ಯಾಯಾಧೀಶರಿಂದ ಸಾಧ್ಯ ಇಲ್ಲ; ಸಂಧಾನದ ಮೂಲಕ ಮಾತ್ರ ಸಾಧ್ಯ' ಎಂದು ಹೇಳುತ್ತದೆ. ನ್ಯಾಯಾಧೀಶರಿಂದ ಏತಕ್ಕೆ ಸಾಧ್ಯ ಇಲ್ಲ ಎಂಬುದಕ್ಕೆ ದೊಡ್ಡ ಉದಾಹರಣೆ ಈ ನ್ಯಾಯಮಂಡಳಿಯ ಮಧ್ಯಂತರ ಆಜ್ಞೆ. ಈ ನಿರ್ಣಯದಲ್ಲಿ ಮೊದಲನೇ ಪ್ಯಾರಾದಲ್ಲಿರುವ ಅಂಶ ನೋಡಿ. ಸಂಸದೀಯ ಮಂತ್ರಿಗಳು ಕಾನೂನುತಜ್ಞರು. ನ್ಯಾಯಶಾಸ್ತ್ರ (Jurisprudence)ದಲ್ಲಿ ನಾನೊಂದು ಸರಳವಾದ ಪ್ರಶ್ನೆ ಕೇಳುತ್ತೇನೆ: ‘ಜಾರಿ ಮಾಡಲಾಗದ ಆಜ್ಞೆಯನ್ನು ಆಜ್ಞೆ ಎನ್ನಲು ಸಾಧ್ಯವೆ? ಅದರ ಬಗ್ಗೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ?’  

 

ಒಂದು ಪಕ್ಷ ಕೇಂದ್ರ ಸರ್ಕಾರದವರು ಈ ಆಜ್ಞೆಯನ್ನು ಗೆಜೆಟ್ ನೋಟಿಫಿಕೇಶನ್ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ನಂತರ ಏನು ಮಾಡುತ್ತಾರೆ? ಆಗಲೂ ಕೂಡ ಅದನ್ನು ಜಾರಿಗೊಳಿಸಲಾಗದು. ಆದ್ದರಿಂದ ಈ ಗೆಜೆಟ್ ನೋಟಿಫಿಕೇಶನ್ ಕೂಡ ವ್ಯರ್ಥ ಪ್ರಯತ್ನ ಎಂದು ನೀವು ಕೇಂದ್ರ ಸರ್ಕಾರಕ್ಕೆ ಹೇಳಬೇಕು.  

 

ಆ ಕಾರಣದಿಂದ ನಾನು ತಮಗೆ ಸಲಹೆ ಮಾಡುವುದು ಏನು ಅಂದರೆ, ನೀವೇನು ನಿಯೋಗ ಹೋಗುತ್ತಿದ್ದೀರಿ, ಆ ನಿಯೋಗದವರು ಪ್ರಧಾನಮಂತ್ರಿಗಳಿಗೆ ಇಷ್ಟನ್ನು ಮನವರಿಕೆ ಮಾಡಿಕೊಡಬೇಕು. ಏತಕ್ಕೆಂದರೆ ಬರಿ ಕಾವೇರಿ ಜಲವಿವಾದಕ್ಕೇ ನಮ್ಮ ದೇಶದ ಜಲ ಸಮಸ್ಯೆ ನಿಲ್ಲುವುದಿಲ್ಲ. ಬೇರೆ ಬೇರೆ ನದಿಗಳಿಗೆ ಸಂಬಂಧಪಟ್ಟ ಹಾಗೆ ಇನ್ನು ಮುಂದೆ ಕೇಂದ್ರ ಸರ್ಕಾರವನ್ನು ಯಾರು ನಡೆಸುತ್ತಿರುತ್ತಾರೆ, ಅವರು ಇಂತಹದೇ ಸಮಸ್ಯೆಗಳನ್ನು ಇನ್ನು ಮುಂದೆಯೂ ಎದುರಿಸಬೇಕಾಗುತ್ತದೆ.

 

ಆ ಕಾರಣ, ನಾವು ಕೇಂದ್ರ ಸರ್ಕಾರಕ್ಕೆ ಕಿವಿ ಮಾತು ಹೇಳಬೇಕು. ಈಗಾಗಲೇ ನೀವು ಏನು ತಪ್ಪುಗಳನ್ನು ಮಾಡಿದ್ದೀರಿ, ಜಲ ವಿವಾದವನ್ನು ನ್ಯಾಯ ಮಂಡಳಿಗೆ ಒಪ್ಪಿಸುವಂಥ ತಪ್ಪನ್ನು ಏನು ಮಾಡಿದ್ದೀರಿ, ನಮ್ಮ ರಾಜ್ಯದಲ್ಲಿ ಅಂಥ ಎರಡು ತಪ್ಪುಗಳು ಆಗಿವೆ. ಒಂದು ಕೃಷ್ಣಾ ನದಿಗೆ ಸಂಬಂಧಪಟ್ಟ ಹಾಗೆ. ಬಜಾವತ್ ಅವರನ್ನು ಬಹಳ ದೊಡ್ಡ ಕಾನೂನು ಪಂಡಿತ ಎಂದು ಕರೆಯುತ್ತೀರಿ. ೨೦೦೦ನೇ ಇಸವಿಯೊಳಗೆ ನಾವು ಎಲ್ಲಾ ಕೆಲಸವನ್ನು ಮುಗಿಸಬೇಕು ಎನ್ನುವ ಈ ನ್ಯಾಯಾಧೀಶರು, ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಅಂದರೆ ಒಂದು ಮ್ಯಾಟ್ನಿ ಸಿನಿಮಾ ಎಂದು ತಿಳಿಯುತ್ತಾರೆ. ಹಲವಾರು ಕಾರಣಗಳು ಇರುತ್ತವೆ- ನಾವು ಒಂದು ಕೆಲಸ ಮಾಡಿ ಮುಗಿಸುವುದಕ್ಕೆ ಅಥವಾ ಒಂದು ಕೆಲಸ ಮಾಡುವುದಕ್ಕೆ ಸಾಧ್ಯವಾಗದೇ ಇರುವುದಕ್ಕೆ. ಕೇಂದ್ರದಲ್ಲಿ ಒಂದು ಸರ್ಕಾರ, ರಾಜ್ಯದಲ್ಲಿ ಒಂದು ಸರ್ಕಾರ. ಇದನ್ನು ಸುಮಾರು ೭-೮ ವರ್ಷಗಳಿಂದ ನಾವು ನೋಡುತ್ತಿದ್ದೇವೆ. ಅವರ ಜೊತೆಗೆ ೫-೬ ವರ್ಷಗಳು ನಮ್ಮ ರಾಜ್ಯಕ್ಕೆ ಬರಗಾಲ. ಇದನ್ನೆಲ್ಲಾ ಬಚಾವತ್ ಆಲೋಚನೆ ಮಾಡುವುದಿಲ್ಲ. ಇವರು ಬರೀ ಪುಸ್ತಕದಲ್ಲಿ ಕಾನೂನು ಓದುವ ನ್ಯಾಯಾಧೀಶರು. ಆ ಕಾರಣ, ನಾವು ನಿಮಗೆ ಹೇಳುತ್ತಿದ್ದೇವೆ- ನಿಮ್ಮಿಂದ ಸಾಧ್ಯವಿಲ್ಲ, ಅಪ್ಪರ್ ಕೃಷ್ಣಾ ಪ್ರಾಜೆಕ್ಟನ್ನು ಎರಡು ಸಾವಿರ ಇಸವಿಯೊಳಗೆ ಮುಗಿಸುವುದಕ್ಕೆ. ಆ ಕಾರಣ, ನಮ್ಮ ರಾಜ್ಯದ ಜನಗಳ ಹಕ್ಕನ್ನು ರಕ್ಷಣೆ ಮಾಡುವಂಥ ಕಾವೇರಿ ನೀರಿಗೆ ಏನು ಕಾನೂನು ಮಾಡಿದೆವು, ಅದೇ ರೀತಿಯಾದ ಕಾನೂನನ್ನು ಕೃಷ್ಣಾ ನೀರಿಗೂ ಮಾಡಬೇಕೆಂದು ನಾವು ಒತ್ತಾಯ ಮಾಡುತ್ತಿರುವುದು. 

 

ಸರ್ಕಾರಗಳು ನಮ್ಮ ಹಕ್ಕನ್ನು ಮೊಟಕು ಮಾಡುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಹಕ್ಕನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ.  ಪ್ರಧಾನಮಂತ್ರಿಯವರಿಗೆ ಮತ್ತು ಕೇಂದ್ರ ಸರ್ಕಾರದ ಯಾರು ಯಾರು ಜವಾಬ್ದಾರಿ ವ್ಯಕ್ತಿಗಳನ್ನು ತಾವು ಭೇಟಿ ಮಾಡುತ್ತೀರೋ ಅವರಿಗೆ ಜಲವಿವಾದಗಳು ಇನ್ನು ಮುಂದೆ ನಮ್ಮ ದೇಶದಲ್ಲಿ ಸಂಧಾನ ಮತ್ತು ಚರ್ಚೆಯ ಮೂಲಕ ಮಾತ್ರ ಆಗಬೇಕೇ ಹೊರತು ನ್ಯಾಯಾಧಿಕರಣದ ಮೂಲಕ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಂಥ ಪ್ರಯತ್ನ ಮಾಡಬೇಕು ಎಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ, ನಮಸ್ಕಾರ.’

 

(ನಟರಾಜ್ ಹುಳಿಯಾರ್ - ರವಿಕುಮಾರ್ ಬಾಗಿ ಸಂಪಾದಿಸಿರುವ ಬಾರುಕೋಲು: ಎಂಡಿ ನಂಜುಂಡಸ್ವಾಮಿ ಚಿಂತನೆ ಪುಸ್ತಕದಿಂದ. ಪಲ್ಲವ ಪ್ರಕಾಶನ, 88800 87235)

Share on:

Comments

0 Comments





Add Comment






Recent Posts

Latest Blogs



Kamakasturibana

YouTube