ಕಾರ್ಲ್ ಮಾರ್ಕ್ಸ್ ಮತ್ತು ಕನ್ನಡ ಸಂಸ್ಕೃತಿ
by Nataraj Huliyar
ಕಾರ್ಲ್ ಮಾರ್ಕ್ಸ್ ಬರೆಯದಿದ್ದರೆ ಚರಿತ್ರೆಯ ಚಕ್ರ ಎತ್ತ ತಿರುಗುತ್ತಿತ್ತೋ ಊಹಿಸುವುದು ಕಷ್ಟ!
ಗ್ರೀಕ್ ದೇವತೆ ಪ್ರೊಮಿಥ್ಯೂಸ್‌ಗೆ ಮಾನವವಿರೋಧಿಗಳಾದ ಹಿರಿಯ ದೇವತೆಗಳು ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಆಜ್ಞೆ ಮಾಡುತ್ತಾರೆ. ಆದರೆ ಮಾನವರಿಗೆ ಸಹಾಯ ಮಾಡಲೇಬೇಕೆಂಬ ಕಾಳಜಿ, ಹಟದ ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಟಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಪ್ರೊಮಿಥ್ಯೂಸ್‌ಗೆ ಸ್ಯೂಸ್ ದೇವ ಕ್ರೂರ ಶಿಕ್ಷೆ ಕೊಡುತ್ತಾನೆ. ಪ್ರೊಮಿಥ್ಯೂಸ್ ದಿಟ್ಟತನ ಕುರಿತು ಗ್ರೀಕ್ ನಾಟಕಕಾರ ಈಸ್ಕಿಲಸ್ ಎರಡೂವರೆ ಸಾವಿರ ವರ್ಷಗಳ ಕೆಳಗೆ ’ಪ್ರೊಮಿಥ್ಯೂಸ್ ಬೌಂಡ್’ ಎಂಬ ಅದ್ಭುತ ನಾಟಕ ಬರೆದ.
ಕಾರ್ಲ್ ಮಾರ್ಕ್ಸ್ (5.5.1818-14.3.1883) ಹುಟ್ಟು ಹಬ್ಬದ ದಿನ ಪ್ರೊಮಿಥ್ಯೂಸ್ ಅವನ ಪ್ರಿಯವಾದ ಪಾತ್ರವೆಂಬುದನ್ನು ನಿಮಗೆ ನೆನಪಿಸುತ್ತಿರುವೆ. ಬಡತನದಲ್ಲಿ ನರಳಿದ್ದ ಮಾರ್ಕ್ಸ್‌ಗೆ ಎಂಥ ಕಷ್ಟ ಎದುರಾದರೂ ಮಾನವಕೋಟಿಗೆ ನೆರವಾಗಲೇಬೇಕು ಎಂಬ ಪ್ರೇರಣೆ ಈ ಕತೆಯಿಂದಲೂ ಹುಟ್ಟಿರಬಹುದು. ಅಂಥ ಪ್ರೇರಣೆಯ ಸಣ್ಣ ಹೊಳೆ ನಮ್ಮೊಳಗೂ ಸದಾ ಹರಿಯುತ್ತಿರಲಿ!
ಜರ್ಮನಿಯ ಮಾರ್ಕ್ಸ್ ಸಾಮಾಜಿಕ ರಚನೆಯನ್ನೇ ಕದಲಿಸಿ, ದುಡಿಯುವವರ ಸ್ಥಿತಿಯನ್ನು ಬದಲಿಸುವ ಫಿಲಾಸಫಿ ರೂಪಿಸಿದವನು; ಚರಿತ್ರೆಯ ಚಕ್ರದ ನಡೆ ಬದಲಿಸಿದವನು. ಚರಿತ್ರೆ, ತತ್ವಜ್ಞಾನ, ಲೋಕದ ರಾಜಕೀಯ ವ್ಯವಸ್ಥೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಮಾರ್ಕ್ಸ್ ಸಾಹಿತ್ಯದ ಸೂಕ್ಷ್ಮ ವಿದ್ಯಾರ್ಥಿಯಾಗಿದ್ದ. ಶೇಕ್‌ಸ್ಪಿಯರ್ ನಾಟಕಗಳ ಮೂಲಕವೂ ಚರಿತ್ರೆಯ ಸಂಘರ್ಷಗಳನ್ನು ಅರಿಯಲೆತ್ನಿಸಿದ್ದ. ಮಾರ್ಕ್ಸ್ ಹಾಗೂ ಎಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಜಗತ್ತಿನ ವಿಮೋಚನೆಯ ಪ್ರಣಾಳಿಕೆಯಾಗಿರುವಂತೆ ಅದ್ಭುತ ಕಾವ್ಯ ಕೂಡ ಎನ್ನುವವರಿದ್ದಾರೆ.
ತನ್ನ ಥಿಯರಿಗಳನ್ನು ರೂಪಿಸುತ್ತಿದ್ದಾಗ ಮಾರ್ಕ್ಸ್‌ಗೆ ಹೀಗೆನ್ನಿಸಿತು: ‘ತತ್ವಜ್ಞಾನಿಗಳು ಜಗತ್ತನ್ನು ಬರೀ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. ಈಗ ಇರುವ ವಿಚಾರವೆಂದರೆ ಜಗತ್ತನ್ನು ಬದಲಾಯಿಸುವುದು.’ ಈ ಮಾತನ್ನು ತತ್ವಜ್ಞಾನಿಗಳ ಕೆಲಸ ವ್ಯರ್ಥ ಎಂಬ ಅರ್ಥಬರುವಂತೆ ಕೆಲವರು ವ್ಯಾಖ್ಯಾನಿಸುತ್ತಾರೆ; ಆದರೆ ಯಾವುದೇ ತತ್ವಜ್ಞಾನ ಜನರನ್ನು ಕ್ರಿಯೆಗೆ ಅಣಿಗೊಳಿಸುವಂತೆ ರೂಪುಗೊಳ್ಳಬೇಕು ಎಂಬುದು ಮಾರ್ಕ್ಸ್ ಆಶಯವಾಗಿತ್ತು.
ಮಾರ್ಕ್ಸ್‌ವಾದ ಇಪ್ಪತ್ತನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಚಿಂತನೆ, ಕ್ರಿಯೆ, ವ್ಯಾಖ್ಯಾನ, ಕಲೆ, ರಾಜಕಾರಣ ಹಾಗೂ ಬರವಣಿಗೆಗಳ ದಿಕ್ಕನ್ನು ಬದಲಿಸಿತು. ಮಾರ್ಕ್ಸ್ ಚಿಂತನೆಯನ್ನು ಮೇಲ್ಪದರದಲ್ಲಿ ಗ್ರಹಿಸಿದವರು ಕೂಡ ಯಥಾಸ್ಥಿತಿವಾದಿ ಆಗಿರುವುದು ಸಾಧ್ಯವಿಲ್ಲ. ಜಗತ್ತಿನ ಎಲ್ಲ ದೇಶಗಳೂ ಒಂದಲ್ಲ ಒಂದು ಹಂತದಲ್ಲಿ ಮಾರ್ಕ್ಸ್- ಎಂಗೆಲ್ಸರ ಚಿಂತನೆಗಳಿಂದ ಪ್ರಭಾವಿತವಾಗಿವೆ.
ಮಾರ್ಕ್ಸ್ ಚಿಂತನೆ 1920ರ ಸುಮಾರಿಗೆ ಕಾರ್ಮಿಕ ಚಳುವಳಿಗಳ ಮೂಲಕ ಕನ್ನಡನಾಡನ್ನು ಪ್ರವೇಶಿಸಿತು; ಇಲ್ಲಿನ ಚಳುವಳಿ, ಸಂಸ್ಕೃತಿ, ರಾಜಕಾರಣಗಳ ದಿಕ್ಕನ್ನು ನಿರ್ಣಾಯಕವಾಗಿ ಬದಲಿಸಿತು. ನವೋದಯ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆಯವರ ಸಮಾನತೆಯ ಆಶಯದಲ್ಲಿ ಮಾರ್ಕ್ಸ್ ಹಣಿಕಿದಂತಿದೆ. ಪ್ರಗತಿಶೀಲ, ಬಂಡಾಯ, ದಲಿತ ಹಾಗೂ ಸ್ತ್ರೀವಾದಿ ಘಟ್ಟಗಳು ಮಾರ್ಕ್ಸ್‌ವಾದದಿಂದ ಒಂದಲ್ಲ ಒಂದು ರೀತಿಯ ಪ್ರಭಾವ ಪಡೆದಿವೆ. ಸು.ರಂ. ಎಕ್ಕುಂಡಿ, ಬಂಜಗೆರೆ ಜಯಪ್ರಕಾಶ್ ಮಾರ್ಕ್ಸ್‌ವಾದಿ ನೋಟಕ್ರಮಗಳ ಮೂಲಕ ವಿಶಿಷ್ಟ ರಾಜಕೀಯ ಕಾವ್ಯ ಬರೆದರು. ದಲಿತ ಸಾಹಿತ್ಯದ ಆರಂಭದಲ್ಲೂ, ಇವತ್ತಿನ ಹಂತದಲ್ಲೂ ಮಾರ್ಕ್ಸ್‌ವಾದದ ಛಾಯೆಯಿದ್ದೇ ಇದೆ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಮಾರ್ಕ್ಸ್‌ವಾದಿಗಳು ದಲಿತ ಚಳುವಳಿಯ ತರುಣರಿಗೂ, ತರುಣ ಮಾರ್ಕ್ಸಿಸ್ಟರಿಗೂ ಚಿಂತನ ಶಿಬಿರ ನಡೆಸುತ್ತಿದ್ದುದರಿಂದಲೂ ಕನ್ನಡ ದಲಿತ ಚಿಂತನೆಯಲ್ಲಿ ಮಾರ್ಕ್ಸ್‌ವಾದ ಬೆರೆಯಿತು.
ಕನ್ನಡ ಸಾಮಾಜಿಕ ವಿಮರ್ಶೆಯ ನುಡಿಗಟ್ಟು, ವಿಶ್ಲೇಷಣೆಗಳು ಮಾರ್ಕ್ಸ್‌ವಾದಿ ವಿಮರ್ಶೆಯಿಂದ ಪ್ರಭಾವಿತಗೊಂಡಿವೆ. ಪ್ರಗತಿಶೀಲ ಘಟ್ಟದಲ್ಲಿ ನಿರಂಜನರು ಕಮ್ಯುನಿಸ್ಟ್ ಪಕ್ಷದ ಜೊತೆಯಲ್ಲಿದ್ದರು; ಅನಕೃ, ಬಸವರಾಜ ಕಟ್ಟೀಮನಿ, ತರಾಸು ಸಮಾಜದ ಬಗೆಗಿನ ಕಾಳಜಿಯ ಮಟ್ಟದಲ್ಲಿ ಮಾರ್ಕ್ಸ್ ಚಿಂತನೆಯ ಜೊತೆಗೆ ಸಂಬಂಧ ಸಾಧಿಸಿದ್ದರು. ಡಿ. ಆರ್. ನಾಗರಾಜ್, ಸಿದ್ಧಲಿಂಗಯ್ಯ, ಬರಗೂರರ ಚಿಂತನೆಯ ಆರಂಭ ಮಾರ್ಕ್ಸ್‌ವಾದದಿಂದಲೇ ಆಯಿತು. ಪ್ರಗತಿಶೀಲ ಹಾಗೂ ಬಂಡಾಯ ಪ್ರಣಾಳಿಕೆಗಳೆರಡರಲ್ಲೂ ಮಾರ್ಕ್ಸ್‌ವಾದದ ಪ್ರೇರಣೆಯಿದೆ. ಸಾಹಿತ್ಯಕ ಸಂಸ್ಕೃತಿಯ ಮೂಲಕ ಕರ್ನಾಟಕದಲ್ಲಿ ಹಬ್ಬಿರುವ ಕಮ್ಯುನಿಸಂ ಸ್ಥಳೀಯ ಬೇರುಗಳನ್ನೂ ಪಡೆದಿದೆ.
ಕಾರ್ಮಿಕ ಚಳುವಳಿಗಳು, ಕಮ್ಯುನಿಸ್ಟ್ ಪಕ್ಷಗಳ ರಾಜಕಾರಣಗಳೂ ಮಾರ್ಕ್ಸ್‌ವಾದವನ್ನು ಕನ್ನಡ ಸಂಸ್ಕೃತಿಯಲ್ಲಿ ಹಬ್ಬಿಸಿವೆ. ಕನ್ನಡ ರಂಗಭೂಮಿಗೆ ಬರ್ಟೋಲ್ಟ್ ಬ್ರೆಕ್ಟ್ ಮೂಲಕವೂ ಮಾರ್ಕ್ಸ್‌ವಾದ ಬಂತು; ರಂಗಭೂಮಿಯ ಮೂಲಕವೂ ಕಮ್ಯುನಿಸಂ ಕರ್ನಾಟದಲ್ಲಿ ಹಬ್ಬಿತು. ಎಪ್ಪತ್ತರ ದಶಕದ ’ಸಮುದಾಯ’ ಸಾಂಸ್ಕೃತಿಕ ಜಾಥಾ ಕರ್ನಾಟಕದುದ್ದಕ್ಕೂ ಎಡಪಂಥೀಯ ರಂಗಭೂಮಿಯನ್ನು, ಮಾರ್ಕ್ಸ್‌ವಾದಿ ಚಿಂತನೆಯನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಿತು. ಮಾಲತಿ, ಸಿಜಿಕೆ, ಪ್ರಸನ್ನ, ಗಂಗಾಧರಸ್ವಾಮಿ, ಗುಂಡಣ್ಣ, ಜನ್ನಿ, ಬಸವಲಿಂಗಯ್ಯ, ಮೊದಲಾದವರ ಜೊತೆ ರಾಜ್ಯದ ನೂರಾರು ನಟ, ನಟಿಯರು ಊರೂರು ಸುತ್ತಿ ಹಾಡು, ಬೀದಿ ನಾಟಕಗಳ ಮೂಲಕ ವೈಚಾರಿಕ ಆಲೋಚನೆಗಳನ್ನು, ಜನರ ಸ್ಥಿತಿಯ ಬದಲಾವಣೆಯ ಸಾಧ್ಯತೆಗಳನ್ನು ಬಿತ್ತುತ್ತಾ ಬಂದರು. ರಂಗ ಚಟುವಟಿಕೆಗಳಿಗೆ ಸಾಮಾಜಿಕ ಜವಾಬ್ದಾರಿಯ ಆಯಾಮ ದೊಡ್ಡ ಮಟ್ಟದಲ್ಲಿ ಬಂದದ್ದು ಆಗ. ದಲಿತ ಸಂಘರ್ಷ ಸಮಿತಿಯ ಒಂದು ಧಾರೆ ಗದ್ದರ್ ಹಾಡುಗಳಲ್ಲಿರುವ ವರ್ಗಪ್ರಜ್ಞೆಯನ್ನು ಕರ್ನಾಟಕದಲ್ಲಿ ಹಬ್ಬಿಸಲೆತ್ನಿಸಿತು.
ಡಿ. ಆರ್.ನಾಗರಾಜ್, ಜಿ. ರಾಜಶೇಖರ್, ಚಂದ್ರಶೇಖರ ನಂಗಲಿಯವರ ಬರಹಗಳ ಮೂಲಕವೂ ಕನ್ನಡ ವಿಮರ್ಶೆ, ಸಂಸ್ಕೃತಿ ಚಿಂತನೆಗಳಲ್ಲಿ ಮಾರ್ಕ್ಸ್‌ವಾದಿ ವಿಮರ್ಶೆಯ ಖಚಿತ ಚೌಕಟ್ಟುಗಳು ಸೇರಿಕೊಂಡವು. ಬಂಡಾಯ ಮಾರ್ಗದ ಬರಗೂರು ರಾಮಚಂದ್ರಪ್ಪ, ರಂಜಾನ್ ದರ್ಗಾ, ರಹಮತ್ ತರೀಕೆರೆಯವರಿಂದ ಹಿಡಿದು ಹಲವರ ವಿಮರ್ಶಾ ನೋಟಕ್ರಮಗಳು ಮಾರ್ಕ್ಸ್‌ನ ಸಮಾಜ, ಸಂಸ್ಕೃತಿಗಳ ಗ್ರಹಿಕೆಯನ್ನು ಆಧರಿಸಿವೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕೂಡ ಕೊನೆಗೆ ವರ್ಗಸಂಘರ್ಷವೊಂದೇ ಉತ್ತರ ಎಂಬ ನಿಲುವಿಗೆ ತಲುಪಿದ್ದರು.
ಕನ್ನಡ ಸಂಸ್ಕೃತಿಯ ವೈಶಿಷ್ಟ್ಯ ಇದು: ಮಾರ್ಕ್ಸ್‌ವಾದದತ್ತ ಆಕರ್ಷಿತರಾದ ಡಿ. ಆರ್. ನಾಗರಾಜ್, ಸಿಜಿಕೆ, ಬರಗೂರು, ಸಿದ್ಧಲಿಂಗಯ್ಯ ಥರದವರು ಕಮ್ಯುನಿಸ್ಟ್ ಪಾರ್ಟಿಗಳ ನಿರ್ದೇಶನಕ್ಕಾಗಿ ಕಾಯುವವರಾಗಿರಲಿಲ್ಲ. ಕನ್ನಡ ಲೇಖಕರನ್ನು ಮಾರ್ಕ್ಸ್‌ವಾದದತ್ತ ಸೆಳೆದ ಎಂ.ಕೆ. ಭಟ್ ಹಾಗೂ ಪಾರ್ಟಿಯತ್ತ ಕರೆದೊಯ್ದ ಕೊಂಡಜ್ಜಿ ಮೋಹನ್ ನೆನಪಾಗುತ್ತಾರೆ. ಮಾರ್ಕ್ಸಿಸ್ಟ್ ನಾಯಕ ನಂಬೂದಿರಿಪಾಡ್ ‘ನೀವು ಕಲಾವಿದರೆಲ್ಲ ಐಡಿಯಾಲಜಿಗೆ ಕಟ್ಟು ಬೀಳದೆ ಮುಕ್ತವಾಗಿ ಯೋಚಿಸಿ’ ಎಂದಿದ್ದು ತಮಗೆಲ್ಲ ಹೊಸ ಹಾದಿ ತೋರಿಸಿತೆಂದು ’ಸಮುದಾಯ’ದ ಜನ್ನಿ ನೆನೆಯುತ್ತಾರೆ. ಗುಂಡಣ್ಣ, ಶಶಿಧರ್ ಬಾರಿಘಾಟ್ ಮೊದಲಾದವರು ಇದೇ ಹಾದಿಯಲ್ಲಿ ಮುಂದುವರಿದಿದ್ದಾರೆ.
ಕರ್ನಾಟಕದಲ್ಲಿ ನೀಲಾ, ವಿಮಲಾ, ವಸು ಮಳಲಿ, ಗಾಯತ್ರಿ, ರಾಜೇಶ್ವರಿ, ಮೀನಾಕ್ಷಿ ಬಾಳಿಯವರಂತೆ ಸ್ತ್ರೀವಾದದ ಜೊತೆಗೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ಬೆಸೆದವರಿದ್ದಾರೆ. ಕಮ್ಯುನಿಸ್ಟ್ ಆಗದೆಯೇ ಮಾರ್ಕ್ಸ್‌ವಾದದ ಮೂಲ ಸತ್ವ , ವರ್ಗ ಪ್ರಜ್ಞೆ, ವರ್ಗಸಂಘರ್ಷದ ಐಡಿಯಾಗಳ ಮೂಲಕ ಇಲ್ಲಿನ ಜಾತಿ ಸಮಾಜವನ್ನು ಗ್ರಹಿಸಿದ ಲೇಖಕ, ಲೇಖಕಿಯರೂ ಇದ್ದಾರೆ.
ಎಂಬತ್ತರದ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಕರ್ನಾಟಕದಲ್ಲೂ ಮಾರ್ಕ್ಸ್‌ವಾದದ ಬಗ್ಗೆ ಅನುಮಾನಗಳೆದ್ದವು. ಆದರೆ ಮಾರ್ಕ್ಸ್ ಚಿಂತನೆಗಳು ಬಂಡವಾಳಶಾಹಿಯ ರಾಕ್ಷಸ ವರ್ತನೆಯನ್ನು, ಜಾಗತೀಕರಣ-ಖಾಸಗೀಕರಣದ ವಿನಾಶಕರ ಮುಖವನ್ನು ಗ್ರಹಿಸಲು ಕನ್ನಡ ಚಿಂತಕ, ಚಿಂತಕಿಯರಿಗೆ ನೆರವಾದವು. ಈ ಹಂತದಲ್ಲಿ ಕಾರ್ಪೊರೇಟ್ ವಲಯಗಳ ಬೆಳವಣಿಗೆ, ಸರ್ಕಾರಿ ವಲಯದಲ್ಲಿ ಖಾಸಗೀಕರಣದ ಭರಾಟೆ ಹಾಗೂ ಕಾನೂನಿನ ಕುಣಿಕೆಗಳು ಹೋರಾಟದ ಹಕ್ಕುಗಳ ದಮನದಲ್ಲಿ ತೊಡಗಿದವು; ಖಾಸಗಿ ಕ್ಷೇತ್ರಗಳ ಆರಾಮ ಕುರ್ಚಿಯ ಚಿಂತಕರು ಹಾಗೂ ಬಲಪಂಥೀಯರು ತಮ್ಮ ಲಾಭಕ್ಕಾಗಿ ಮಾರ್ಕ್ಸ್‌ವಾದದ ವಿರುದ್ಧ ಅಸಹನೆ ಬಿತ್ತಲೆತ್ನಿಸಿದರು. ವಿಶ್ವವಿದ್ಯಾಲಯಗಳ ಇಬ್ಬರು ಸುಪಾರಿ ಕುಲಪತಿಗಳು ಮಾರ್ಕ್ಸ್‌ವಾದವನ್ನು ಪಠ್ಯದಿಂದಲೇ ಓಡಿಸುವಂತೆ ಕಿರುಚತೊಡಗಿದರು.
2011ರ ಹೊತ್ತಿಗೆ ಟೆರಿ ಈಗಲ್ಟನ್ ಅವರ ಮಹತ್ವದ ಪುಸ್ತಕ ‘ವೈ ಮಾರ್ಕ್ಸ್ ವಾಸ್ ರೈಟ್’ ಬಂತು. ‘ಚಿಂತನ ಪುಸ್ತಕ’ದ ವಸಂತರಾಜ್ ನನಗೆ ಈ ಪುಸ್ತಕ ಕೊಟ್ಟ ಗಳಿಗೆ ನೆನಪಿದೆ. ಮಾರ್ಕ್ಸ್‌ವಾದವನ್ನು ಒಪ್ಪಿದ್ದ ಸರ್ಕಾರಗಳು ಚೆಲ್ಲಿದ ಹಿಂಸೆ; ಮಾರ್ಕ್ಸ್‌ವಾದದ ನಿರಂತರ ಸಾಧ್ಯತೆ-ಎರಡನ್ನೂ ಈ ಪುಸ್ತಕ ಚರ್ಚಿಸುತ್ತದೆ; ‘ಪ್ರಜಾಪ್ರಭುತ್ವವಾದಿ’ ಎನ್ನಲಾದ ಸರ್ಕಾರಗಳು ಸೃಷ್ಟಿಸುವ ದಮನಗಳನ್ನೂ ವಿಶ್ಲೇಷಿಸುತ್ತದೆ. ಆರ್. ಕೆ. ಹುಡಗಿ, ಜಿ. ರಾಮಕೃಷ್ಣ ಮಾಡಿರುವ ಈ ಪುಸ್ತಕದ ಎರಡು ಕನ್ನಡಾನುವಾದಗಳು ಈ ಚರ್ಚೆಯನ್ನು ಕರ್ನಾಟಕದಲ್ಲೂ ಮುಂದುವರಿಸಿವೆ. ನವಕರ್ನಾಟಕ, ಕ್ರಿಯಾ ಪ್ರಕಾಶನ, ಚಿಂತನ ಪುಸ್ತಕ, ಲಡಾಯಿ ಪ್ರಕಾಶನಗಳು ಮಾರ್ಕ್ಸ್‌ವಾದಿ ಚಿಂತನೆಯನ್ನು ನಿರಂತರವಾಗಿ ಹಬ್ಬಿಸುತ್ತಿವೆ.
ಮಾರ್ಕ್ಸ್‌ವಾದ ಕ್ರಿಯೆ, ಪ್ರಯೋಗಗಳ ಜೊತೆಗೇ ಬೆಳೆಯುವ ಸಿದ್ಧಾಂತ. ಇವತ್ತಿಗೂ ವಿವಿಧ ವಲಯಗಳ ಕಾರ್ಮಿಕರನ್ನಾಗಲೀ, ಅಂಗನವಾಡಿ ಕಾರ್ಯಕರ್ತೆಯರನ್ನಾಗಲೀ, ಅಸಂಘಟಿತ ವಲಯಗಳ ಕಾರ್ಯಕರ್ತರನ್ನಾಗಲೀ ಕಮ್ಯುನಿಸ್ಟರು ತಾತ್ವಿಕವಾಗಿ ಸಂಘಟಿಸಬಲ್ಲರು. ಕಮ್ಯುನಿಸ್ಟರಲ್ಲಿ ದೀರ್ಘ ಹೋರಾಟಗಳನ್ನು ಕಟ್ಟಬಲ್ಲ ಸಂಘಟನೆ ಹಾಗೂ ಅನುಭವಗಳು ಇನ್ನೂ ಉಳಿದಿವೆ. ಉಳಿದವರಲ್ಲಿ ಆ ಕಾಳಜಿ, ಸ್ಪಷ್ಟತೆ, ತಾತ್ವಿಕ ಬದ್ಧತೆ ಕಡಿಮೆ.
ಕೋಮುವಾದ ವಿರೋಧಿ ಚಳುವಳಿ ಹಾಗೂ ಜಾತ್ಯತೀತ ಸಂಸ್ಕೃತಿ ನಿರ್ಮಾಣಕ್ಕೆ ಮಾರ್ಕ್ಸ್‌ವಾದಿಗಳ ಕೊಡುಗೆ ವಿಶಿಷ್ಟವಾದುದು. ಭಾರತದ ಸ್ವಾತಂತ್ರ್ಯ ಚಳುವಳಿಯ ಘಟ್ಟದಲ್ಲಿ ಕೋಮುವಾದಿ ವಿಭಜನೆಯನ್ನು ಕಮ್ಯುನಿಸ್ಟ್ ಚಿಂತನೆ ತಡೆಗಟ್ಟಿದ್ದನ್ನು ಇತಿಹಾಸಕಾರ ಎಸ್. ಚಂದ್ರಶೇಖರ್ ಗುರುತಿಸುತ್ತಾರೆ. ಇಂದಿಗೂ ಎಲ್ಲ ಕಮ್ಯುನಿಸ್ಟ್ ಬಣಗಳೂ ಕೋಮುವಾದವನ್ನು ಪ್ರಬಲವಾಗಿ ವಿರೋಧಿಸುತ್ತಿವೆ.
ಜಗತ್ತಿನ ಎಲ್ಲೆಡೆಯಲ್ಲಾದಂತೆ ಕನ್ನಡದಲ್ಲೂ ಸರಳ ಮಾರ್ಕ್ಸ್‌ವಾದಿ ವಿಮರ್ಶೆಯ ರೂಪಗಳು ಸಾಹಿತ್ಯ ಕೃತಿಗಳ ಓದನ್ನು ಸೀಮಿತಗೊಳಿಸಿವೆ; ಆದರೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ವಿಮರ್ಶಾ ದೃಷ್ಟಿಯಿಂದ ಮರು ಪರಿಶೀಲಿಸಿ ವಿಸ್ತರಿಸಿದ ವಾಲ್ಟರ್ ಬೆಂಜಮಿನ್, ಫ್ರಾಂಕ್‌ಫರ್ಟ್ ಸ್ಕೂಲ್ ಚಿಂತನೆಗಳಿಂದಲೂ ತಾರಕೇಶ್ವರ್, ರಾಜೇಂದ್ರ ಚೆನ್ನಿಯಂಥವರ ವಿಮರ್ಶೆ ಸೂಕ್ಷ್ಮ ಪ್ರೇರಣೆಗಳನ್ನು ಪಡೆದಿದೆ. ಶಿವಸುಂದರ್, ಮುಝಾಫರ್ ಅಸಾದಿ ಥರದ ಹಲವು ಸಮಾಜವಿಜ್ಞಾನಿಗಳ ಮಾರ್ಕ್ಸ್‌ವಾದಿ ದೃಷ್ಟಿಕೋನ ಕನ್ನಡ ಸಮಾಜವಿಜ್ಞಾನಕ್ಕೆ ಖಚಿತ ತಾತ್ವಿಕ ಚೌಕಟ್ಟನ್ನು ಕೊಟ್ಟಿದೆ.
ಎಲ್ಲ ಬಗೆಯ ಬಿಡುಗಡೆಯ ಚಿಂತನೆ, ಕ್ರಿಯೆಗಳನ್ನು ನಿರ್ಗತಿಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಬೇಕು ಎಂಬ ಮಾರ್ಕ್ಸ್‌ವಾದದ ಆಶಯ ಹಾಗೂ ಎಂಥ ಭೌತಿಕ ಸ್ಥಿತಿಯನ್ನಾದರೂ ವ್ಯವಸ್ಥಿತ ಅಧ್ಯಯನ ಹಾಗೂ ಸಂಘಟಿತ ಕ್ರಿಯೆಗಳಿಂದ ಬದಲಿಸಬಹುದು ಎಂಬ ಮಾರ್ಕ್ಸ್‌ವಾದದ ಸ್ಪಿರಿಟ್ ಎಲ್ಲ ಕಾಲಕ್ಕೂ ಮರು ಹುಟ್ಟು ಪಡೆಯಬಲ್ಲದು. ಮಾರ್ಕ್ಸ್‌ವಾದದ ಜೊತೆ ಸೆಣಸುತ್ತಾ ಅಥವಾ ಅದನ್ನು ವಿಸ್ತರಿಸುತ್ತಲೇ ಕಳೆದ ನೂರೈವತ್ತು ವರ್ಷಗಳ ಬಹುತೇಕ ಪ್ರಗತಿಪರ ಚಿಂತನೆಗಳು ಹುಟ್ಟಿವೆ ಎಂಬುದನ್ನು ಮಾರ್ಕ್ಸ್ ಹುಟ್ಟು ಹಬ್ಬದ ದಿನ ಮತ್ತೆ ನೆನೆಯೋಣ!
ಲೇಖನ ಪ್ರಕಟವಾದ ನಂತರ ಹಿರಿಯ ಕಾಮ್ರೇಡ್ ಗುಂಡಣ್ಣ ಚಿಕ್ಕಮಗಳೂರು ಸಲಹೆಗಳು:
ಲೇಖನ ಸಮಗ್ರವಾಗಿದೆ. ಕೆಲವು ಘಟನೆಗಳು ಹಳೆಯ ನೆನಪುಗಳನ್ನು ತಂದಿತು.
ಸಮುದಾಯ ಸಂಘಟನೆಗೆ ಸಂಬಂದಿಸಿದ ಹಾಗೆ ಹಲವು ಹೆಸರುಗಳು ತಪ್ಪಾಗಿವೆ.
gangadhara Murthy ಗಂಗಾಧರ ಸ್ವಾಮಿ ಆಗಬೇಕು. ಈ ಹೆಸರುಗಳ ಒಟ್ಟಿಗೇ, ಲಿಂಗದೇವರು ಹಳೆಮನೆ, ಎಮ್. ಜಿ. ವೆಂಕಟೇಶ್, ಸಿ. ಆರ್. ಭಟ್ , ಯತಿರಾಜ್ ಹೆಸರುಗಳು ಸೇರ್ಪಡಬೇಕು. ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದು ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದ್ದು ಕಾಂ.ಎಂ ಕೆ ಭಟ್ ಅವರೇ.
ಮಹಿಳಾ ಸಂಘಟನೆಯ ಹೆಸರುಗಳಲ್ಲಿ ಹರಿಣಿ ಕಕ್ಕೇರಿ ಮಾತು ಗಾಯತ್ರಿ ದೇವಿ ಹೆಸರುಗಳು ಸೇರ್ಪಡೆ ಆಗಬೇಕು.
ಇದು ಸಂಘಟನೆಯ ವಿಷಯ ಆಗಿರುವುದರಿಂದ ದಯವಿಟ್ಟು ಸರಿಪಡಿಸಲು ಕೋರುತ್ತೇನೆ.
ಕೊನೆ ಟಿಪ್ಪಣಿ
‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ ಐದನೇ ಕಂತು ಇದೀಗ ಮಾರುಕಟ್ಟೆಯಲ್ಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Comments
10 Comments
| ಡಾ, ವಿಜಯಾ
ಇಂದಿನ ತಲೆಮಾರಿಗಾಗಿ ಮಾರ್ಕ್ಸ್ ಬಗ್ಗೆಯೂ ಹೆಚ್ಚು ಬರೆಯಿರಿ. ನಮಗೆ ತಿಳಿದಿದ್ದು ಕೂಡ ಅತ್ಯಲ್ಪ.
\r\n| Gundanna chickmagalur
ಲೇಖನ ಸಮಗ್ರವಾಗಿದೆ. ಕೆಲವು ಘಟನೆಗಳು ಹಳೆಯ ನೆನಪುಗಳನ್ನು ತಂದಿತು.
\r\n\r\nಸಮುದಾಯ ಸಂಘಟನೆಗೆ ಸಂಬಂದಿಸಿದ ಹಾಗೆ ಹಲವು ಹೆಸರುಗಳು ತಪ್ಪಾಗಿವೆ.
\r\n\r\n\r\ngangadhara murthy ಗಂಗಾಧರ ಸ್ವಾಮಿ ಆಗಬೇಕು. ಹಾಗಯೇ ನನ್ನ ಹೆಸರು ಆ ಸಾಲಿನಲ್ಲಿ ಬರಬೇಕು. ಈ ಹೆಸರುಗಳ ಒಟ್ಟಿಗೇ, ಲಿಂಗದೇವರು ಹಳೆಮನೆ, ಎಮ್ ಜಿ ವೆಂಕಟೇಶ್, ಸಿ ಆರ್ ಭಟ್ , ಯೇತಿರಾಜ್ ಹೆಸರುಗಳು ಸೇರ್ಪಡಬೇಕು. ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದು ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದ್ದು ಕಾಂ.ಎಂ ಕೆ ಭಟ್ ಅವರೇ. ಕೊಂಡಜ್ಜಿ ಪಾತ್ರ ಇರಲಿಲ್ಲ.
ಮಹಿಳಾ ಸಂಘಟನೆಯ ಹೆಸರುಗಳಲ್ಲಿ ಹರಿಣಿ ಕಕ್ಕೇರಿ ಮಾತು ಗಾಯತ್ರಿ ದೇವಿ ಹೆಸರುಗಳು ಸೇರ್ಪಡೆ ಆಗಬೇಕು.
\r\n\r\n\r\nಇದು ಸಂಘಟನೆಯ ವಿಷಯ ಆಗಿರುವುದರಿಂದ ದಯವಿಟ್ಟು ಸರಿಪಾದಿಸಲು ಕೋರುತೇನು.
gundanna chickmagalur
\r\n\r\nl
\r\n| Dr C M Lakshmana
Very good article
\r\n| Manjunath
ಕಾರ್ಲ್ ಮಾರ್ಕ್ಸ್ ಸಿದ್ಧಾಂತ, ಅದು ನಮ್ಮ ನೆಲದಲ್ಲಿ ಬೀರಿದ ಪ್ರಭಾವದ ಕುರಿತು ತುಂಬ ಸೊಗಸಾಗಿ ಬರೆದಿದ್ದೀರಿ ಸರ್. ಇಂಹ ಲೇಖನ ಕೊಟ್ಟದ್ದಕ್ಕೆ ತಮಗೆ ಧನ್ಯವಾದಗಳು
\r\n| Jayashri
ಲೇಖನ ಅದ್ಭುತವಾಗಿದೆ. ಬಹಳ ಅರ್ಥವತ್ತಾಗಿ ಗ್ರೀಕರ reference ನಿಂದ ಈಗಿನ ನಮ್ಮ ಲೇಖಕರ, ನಟ, ನಟಿ, ನಾಟಕ ಹಾಗೂ ಇವಲ್ಲವನ್ನು ಒಳಗೊಂಡ ಮಾರ್ಕ್ಸ್ ಜೀವನ, ಚಿಂತನ, ವಾದ.... Hats off to you 🙏
\r\n| ಬಂಜಗೆರೆ ಜಯಪ್ರಕಾಶ
ಮಾರ್ಕ್ಸ್ವಾದದ ಬಗ್ಗೆ ಕೆಲವರಿಗೆ ಪೂರ್ವಗ್ರಹ ಇರುವುದು ಸತ್ಯ. ಲೋಹಿಯಾವಾದಿಗಳು, ಗಾಂಧಿವಾದಿಗಳು, ಅಂಬೇಡ್ಕರ್ವಾದಿಗಳೂ ಸೇರಿದಂತೆ ಹಲವರು ಕಟು ಟೀಕೆಗಳನ್ನು ಮಾಡುವುದನ್ನು ನೋಡಿದ್ದೇನೆ. ನಾನು ಮಾರ್ಕ್ಸ್ನವಾದಿ ಚಿಂತನೆಗಳ ಪ್ರೇರಣೆಯಿಂದ ಕ್ರಿಯಾಶೀಲನಾದವನು ಎಂಬುದು ನಿಜ. ಆದರೆ ಅಂಬೇಡ್ಕರ್ ಲೋಹಿಯಾ ಫುಲೆ, ಪೆರಿಯಾರ್ ಮುಂತಾದವರ ಚಿಂತನೆಗಳು ನನ್ನ ಮೇಲೆ ಪ್ರಭಾವ ಬೀರಲು ಮಾರ್ಕ್ಸ್ ಚಿಂತನೆಗಳು ಅಡ್ಡಿಯಾಗಿಲ್ಲ. ಹಾಗೆ ನೋಡಿದರೆ ಇವರೆಲ್ಲರ ಚಿಂತನೆಗಳು ಶೋಷಣೆಯ ವಿರುದ್ಧ ಇವೆ ಎನ್ನುವುದನ್ನು ಕಂಡುಕೊಳ್ಳಲು ಮಾರ್ಕ್ಸ್ ವಾದ ಕಲಿಸಿದ ಗತಿತಾರ್ಕಿಕ ಭೌತವಾದದ ಸೂತ್ರಗಳೇ ನೆರವು ನೀಡಿದವು. ಮಾರ್ಕ್ಸ್ವಾದ ಒಂದು ತಾತ್ವಿಕತೆ. ಅದರ ಬೆಳಕಿನಲ್ಲಿ ಬೇಕಾದಷ್ಟು ಸ್ವೋಪಜ್ಞ ಚಿಂತಕರು, ಬರಹಗಾರರು ಹೋರಾಟಗಾರರು ರೂಪುಗೊಂಡರು ಎಂಬ ಬಹಳ ವಸ್ತುನಿಷ್ಠ ವಿವರಗಳನ್ನು ನಿಮ್ಮ ಲೇಖನದಲ್ಲಿ ನೀಡಿದ್ದೀರಿ. ಮಾರ್ಕ್ಸ್ವಾದಕ್ಕೆ ಮಿತಿಗಳಿಲ್ಲ ಎಂದಲ್ಲ. ಹಾಗಾದರೆ ಮಿತಿಗಳಿಲ್ಲದ ತತ್ವಜ್ಣಾನ ಯಾವುದಿದೆ. ಎಲ್ಲವೂ, ದೇಶ ಕಾಲದ ಮಿತಿಯಲ್ಲೇ ರೂಪಗೊಳ್ಳುತ್ತದೆ. ಯಾವುದನ್ನೂ ಅಕ್ಷರಶಃ ಸತ್ಯ ಎಂದು ಹಠ ಹಿಡಿಯುವ ಅಗತ್ಯವಿಲ್ಲ. ಅಂತಹ ಹಟಗಳೆಲ್ಲಾ ಮೂಲಭೂತವಾದ ಎಂದು ತಿರಸ್ಕೃತಗೊಳ್ಳುತ್ತವೆ, ಹೊಸ ದೇಶ ಹೊಸ ಕಾಲದಲ್ಲಿ.
\r\n| ಶಾಮರಾವ್
ಈ ವಿಷಯ ಒಂದು ಸಂಪ್ರಬಂಧದ ವ್ಯಾಪ್ತಿಯುಳ್ಳದ್ದು.ಒಂದು ಸಮಗ್ರ ಪಕ್ಷಿನೋಟ ನೀಡಿದ್ದೀರಿ.ಧನ್ಯವಾದಗಳು.
\r\n| ಡಾ. ನಿರಂಜನ ಮೂರ್ತಿ ಬಿ ಎಂ
ಎಲ್ಲರೂ ಒಟ್ಟಾಗಿ ದುಡಿದು ಹಂಚಿಕೊಂಡು ಒಟ್ಟಾಗಿ ಬಾಳುವ ಮತ್ತು ಎಲ್ಲರೂ ಎಲ್ಲರಿಗಾಗಿ ದುಡಿಯುವ ಮೂಲಮಂತ್ರದ ಕಾರ್ಲ್ ಮಾರ್ಕ್ಸ್ ಸಿದ್ಧಾಂತವು ವಿಶಿಷ್ಟವಾಗಿದೆ.
\r\n\r\nಇಡೀ ವಿಶ್ವದಲ್ಲಿ ತನ್ನ ಪ್ರಭಾವವನ್ನು ಬೀರಿರುವ ಈ ಕಾರ್ಲ್ ಮಾರ್ಕ್ಸ್ ಸಿದ್ಧಾಂತವು ಕನ್ನಡ ಸಂವೇದನೆ, ಸಾಹಿತ್ಯ, ಕಲೆ, ಸಂಸ್ಕೃತಿ, ಮತ್ತು ಒಟ್ಟಾರೆ ಬದುಕಿನ ಮೇಲೆ ಬೀರಿರುವ ಪ್ರಭಾವವನ್ನು ಪ್ರಸ್ತುತಪಡಿಸಿರುವ ಈ ಲೇಖನ ಓದುಗ ವರ್ಗವನ್ನು ಪ್ರಭಾವಿಸಲು ಸಮರ್ಥವಾಗಿದೆ. ಹುಳಿಯಾರರಿಗೆ ಧನ್ಯವಾದಗಳು.
\r\n| ಡಾ. ನಿರಂಜನ ಮೂರ್ತಿ ಬಿ ಎಂ
ಎಲ್ಲರೂ ಒಟ್ಟಾಗಿ ದುಡಿದು ಹಂಚಿಕೊಂಡು ಒಟ್ಟಾಗಿ ಬಾಳುವ ಮತ್ತು ಎಲ್ಲರೂ ಎಲ್ಲರಿಗಾಗಿ ದುಡಿಯುವ ಮೂಲಮಂತ್ರದ ಕಾರ್ಲ್ ಮಾರ್ಕ್ಸ್ ಸಿದ್ಧಾಂತವು ವಿಶಿಷ್ಟವಾಗಿದೆ.
\r\n\r\nಇಡೀ ವಿಶ್ವದಲ್ಲಿ ತನ್ನ ಪ್ರಭಾವವನ್ನು ಬೀರಿರುವ ಈ ಕಾರ್ಲ್ ಮಾರ್ಕ್ಸ್ ಸಿದ್ಧಾಂತವು ಕನ್ನಡ ಸಂವೇದನೆ, ಸಾಹಿತ್ಯ, ಕಲೆ, ಸಂಸ್ಕೃತಿ, ಮತ್ತು ಒಟ್ಟಾರೆ ಬದುಕಿನ ಮೇಲೆ ಬೀರಿರುವ ಪ್ರಭಾವವನ್ನು ಪ್ರಸ್ತುತಪಡಿಸಿರುವ ಈ ಲೇಖನ ಓದುಗ ವರ್ಗವನ್ನು ಪ್ರಭಾವಿಸಲು ಸಮರ್ಥವಾಗಿದೆ. ಹುಳಿಯಾರರಿಗೆ ಧನ್ಯವಾದಗಳು.
\r\n| NAGARAJA G
ಎಲ್ಲರ ಗಾಂಧೀಜಿ\r\nಪುಸ್ತಕ ದ್ವಿತೀಯ ಮುದ್ರಣ ಬಿಡುಗಡೆ ಕಲಬುರ್ಗಿಯಲ್ಲಿ ನಡೆದಾಗ ನಿಮ್ಮ ಬಳಿ ಫೋಟೋ ತೆಗೆಸಿಕೊಂಡ ನೆನಪು ಆ ನೆಪದಿಂದಲೇ ಅಂದೆ ನಿಮ್ಮ ನಟರಾಜ್ ಹುಳಿಯಾರ್ ಬ್ಲಾಗ್ಗೆ ಭೇಟಿ ಕೊಟ್ಟು ಓದಲಿಕ್ಕೆ ಶುರು ಮಾಡಿದ ನನಗೆ ನಿಮ್ಮ ಬ್ಲಾಗೊಂದು ಚಟದ ಓದಾಗಿ ಬಿಟ್ಟಿದೆ. ಅದಕ್ಕೂ ಮಿಗಿಲು \r\nಕವಿ ಜೋಡಿಯ ಆತ್ಮಗೀತ (ಕಥಾ ಕಾವ್ಯ) ಓದಿದಾಗಿನಿಂದ ನಿಮ್ಮ ಬ್ಲಾಗ್ ಕುರಿತ ಓದಿನ ಕುತೂಹಲ ಹೆಚ್ಚಾಗಿದೆ. \r\n\r\nಧನ್ಯವಾದಗಳು \r\n\r\nಮೊನ್ನೆ ತೇಜಸ್ವಿ ಯವರ ಕುರಿತಾದ (ರವೀಂದ್ರ ಕಲಾಕ್ಷೇತ್ರ) ಆದ ಕಾರ್ಯಕ್ರಮದಲ್ಲಿ ತಮ್ಮ ಮಾತುಗಳನ್ನು ಆಲಿಸಿದೆ\r\n\r\nನಿಮ್ಮ ಮಾತಿನ ಲಾಜಿಕ್ ಜೊತೆಗೆ ಮಾತಿನ ಮಧ್ಯೆ ನಗಿಸುತ್ತಲೇ ಸೂಕ್ಷ್ಮ ಗ್ರಾಹಿ ನೆಲೆಗೆ ಕೊಂಡೊಯ್ಯುವ ಕ್ರಮ ಉತ್ತಮ
Add Comment