ಮಾನವಂತ ನಾಯಕರು; ಮರ್ಯಾದಸ್ಥ ಮತದಾರ, ಮತದಾರ್ತಿಯರು!

ಚುನಾವಣೆಯ ಕಾಲ. ಚಿತ್ತ ರಾಜಕೀಯದ ಸುತ್ತಲೇ ಸುತ್ತುತ್ತದೆ; ನಾಯಕರ ಹಸಿ ಸುಳ್ಳುಗಳನ್ನು ಕಂಡು ಅಸಹ್ಯ ಹುಟ್ಟುತ್ತದೆ. ಇಂಥದರ ನಡುವೆಯೂ ಏನಾದರೂ ಬದಲಾಗಬಹುದೆಂದು ವೋಟು ಹಾಕುವ ಮತದಾರರನ್ನು, ಅದರಲ್ಲೂ ಮುಖ್ಯವಾಗಿ ಮತದಾರ್ತಿಯರನ್ನು, ಕಂಡು ನಮ್ಮಂಥವರ ಸಿನಿಕತೆ ಚದುರಿ ಹೋಗುತ್ತದೆ. 

ಹತ್ತು ವರ್ಷಗಳ ಕೆಳಗೆ ಕರ್ನಾಟಕದ ಅಪೂರ್ವ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ (೧೯೨೩-೧೯೭೨) ಜೀವನಚರಿತ್ರೆ ಬರೆಯಲು ತೀರ್ಥಹಳ್ಳಿಯ ಸುತ್ತಮುತ್ತ ಓಡಾಡುತ್ತಿದ್ದಾಗ ನನಗನ್ನಿಸಿದ್ದು: ಮಾನವಂತ ನಾಯಕರಿದ್ದರೆ ಮಾತ್ರ ಮರ್ಯಾದಸ್ಥ ಮತದಾರ, ಮತದಾರ್ತಿಯರೂ ಇರುತ್ತಾರೆ; ಆಗ ಮಾತ್ರ ಚುನಾವಣೆಗಳು ಸಂಭ್ರಮ ಉಕ್ಕಿಸುವ ಸಾತ್ವಿಕ ಹಬ್ಬದಂತೆ ನಡೆಯುತ್ತಿರುತ್ತವೆ! 

ಅವತ್ತು ಗೋಪಾಲಗೌಡರ ಕಾಲದ ಚುನಾವಣೆಗಳನ್ನು ನೆನಸಿಕೊಳ್ಳುತ್ತಿದ್ದ ಹಿರಿಯರು ಇನ್ನೂ ಇದ್ದರು. ಒಬ್ಬರಂತೂ ‘ಗೋಪಾಲಗೌಡ್ರು ತೀರಿಕೊಂಡ ಮೇಲೆ ನಾನು ಯಾರಿಗೂ ವೋಟೇ ಹಾಕಿಲ್ಲ’ ಅಂದರು! ಅಲ್ಲಿ ಕಿವಿಗೆ ಬಿದ್ದ ಕತೆಗಳು ಹಾಗೂ ಅವರ ಸಮಕಾಲೀನರ ಬರಹಗಳ ಹಿನ್ನೆಲೆಯಲ್ಲಿ ಗೋಪಾಲಗೌಡರ ರಾಜಕಾರಣ-ಚುನಾವಣೆಗಳ ಘನತೆಯ ಚಿತ್ರಗಳನ್ನು ಮತ್ತೆ ಕೊಡುತ್ತಿರುವೆ: 

ಚುನಾವಣೆ ೧: ಗೋಪಾಲಗೌಡ ಹೈಸ್ಕೂಲ್ ಹುಡುಗನಾಗಿದ್ದಾಗಲೇ ಗಾಂಧೀಜಿಯ ಕರೆ ಕೇಳಿ, ’ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಧುಮುಕಿದ್ದರು; ೧೯೫೧ರ ಕಾಗೋಡು ಗೇಣಿ ಹೋರಾಟದಲ್ಲಿ ತೊಡಗಿ ದೊಡ್ಡ ನಾಯಕನಾಗಿ ಬೆಳೆಯತೊಡಗಿದ್ದರು. ಇಪ್ಪತ್ತೊಂಬತ್ತನೆಯ ವಯಸ್ಸಿಗಾಗಲೇ ೧೯೫೨ರ ಮೈಸೂರು ರಾಜ್ಯದ ಪ್ರಥಮ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದರು. ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ಕ್ಷೇತ್ರದ ಚುನಾವಣೆ ಕುರಿತು ಶಾಮ ಐತಾಳ ಬರೆಯುತ್ತಾರೆ: ‘ಗೋಪಾಲಗೌಡರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದ ಆಗರ್ಭ ಶ್ರೀಮಂತರಾದ ಬದರಿನಾರಾಯಣ್ ಅಯ್ಯಂಗಾರ್‌ಗೆ ಎಷ್ಟಾದರೂ ಹಣ ಚೆಲ್ಲುವ ಚೈತನ್ಯವಿತ್ತು. ಜಮೀನ್ದಾರರ ಬೆಂಬಲವಿತ್ತು. ಗೌಡರಿಗೆ ಹಣವೊಂದನ್ನು ಬಿಟ್ಟು ಉಳಿದೆಲ್ಲ ಬಂಡವಾಳವೂ ಇತ್ತು. ಗೌಡರ ೨೫೦ ರೂಪಾಯಿ ಠೇವಣಿ ಹಣವನ್ನು ಸ್ನೇಹಿತರಿಂದ ಸಂಗ್ರಹ ಮಾಡಿ ಕಟ್ಟಿದ್ದೆವು.’  

ಗೋಪಾಲಗೌಡರ ಪ್ರಚಾರ ಸರಳವಾಗಿತ್ತು: ಜನರ ಸಮಸ್ಯೆಗಳನ್ನು ಬಿಡಿಸಿಟ್ಟು ಭಾಷಣ ಮಾಡುವುದು; ‘ನೀವು ಜಾತಿ ನೋಡಿ ಮತ ಕೊಟ್ಟರೆ ಅದು ನನಗೆ ಬೇಡ’ ಎಂದು ನೇರವಾಗಿ ಮತದಾರರಿಗೆ ಹೇಳುವುದು; ಎದುರಾಳಿಯ ವಿರುದ್ಧ ತಾತ್ವಿಕವಾದ ಟೀಕೆಗಳನ್ನಷ್ಟೇ ಮಾಡುವುದು; ಬಹುತೇಕ ಕಾಲ್ನಡಿಗೆಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವುದು; ಮತದಾರರ ಮನೆಯಲ್ಲಿ ಊಟ, ತಿಂಡಿ ಮಾಡಿ ಮುಂದಕ್ಕೆ ಹೋಗುವುದು. 

ನಡುರಾತ್ರಿಯಾದರೂ ಜನ ಗೌಡರ ಭಾಷಣಕ್ಕಾಗಿ ಕಾಯುತ್ತಿದ್ದರು. ನಡುರಾತ್ರಿಯ ಭಾಷಣಗಳಲ್ಲೂ ಸಮಾನತೆ, ಸಮಾಜವಾದ, ರೈತರ ಹೋರಾಟಗಳ ಪರಿಚಯ ಮತದಾರರಿಗೆ ಆಗುತ್ತಿತ್ತು. ರಾತ್ರಿ ಗೌಡರು ಎಲ್ಲರನ್ನೂ ನಗಿಸಿಕೊಂಡು, ಮಧ್ಯೆಮಧ್ಯೆ ಹಾಡು ಹೇಳಿಕೊಂಡು ದಾರಿ ಸವೆಸುತ್ತಿದ್ದರು. ಗೌಡರ ಜಾತ್ಯತೀತ ವ್ಯಕ್ತಿತ್ವಕ್ಕೆ ಎಲ್ಲ ಜಾತಿಯ ಜನರೂ ಮಾರು ಹೋಗಿ ವೋಟು ಹಾಕಿದರು; ಭಾರೀ ಜಮೀನ್ದಾರರೊಬ್ಬರನ್ನು ಹಣಬಲವಿಲ್ಲದ ಸಮಾಜವಾದಿ ತರುಣ ಗೋಪಾಲಗೌಡರು ಸೋಲಿಸಿದರು. 

ಬಡವರಿಗೆ, ಭೂಹೀನರಿಗೆ, ನಿರ್ಗತಿಕರಿಗೆ, ಗೇಣಿದಾರರಿಗೆ ದೊಡ್ಡ ಚೈತನ್ಯ ಬಂತು. ‘ಉಳುವವನೇ ನೆಲದೊಡೆಯನಾಗಬೇಕು’, ‘ಗೇಣಿ ಪದ್ಧತಿ ರದ್ದಾಗಬೇಕು’ ಎಂಬ ಕೂಗು ಶಾಸನಸಭೆಯಲ್ಲಿ ಮೊಳಗಿತು. ಗೌಡರ ಚುನಾವಣಾ ವೆಚ್ಚ ಐದು ಸಾವಿರ ಮೀರಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಮಾಡಿ, ಜೊತೆಗೆ ಅಧಿವೇಶನದಲ್ಲಿ ಬರುತ್ತಿದ್ದ ದಿನಭತ್ಯೆ, ಪ್ರಯಾಣ ಭತ್ಯದಲ್ಲಿ ಉಳಿಸಿದ್ದ ಎರಡು ಸಾವಿರ ರೂಪಾಯಿ, ಸಿಜಿಕೆ ರೆಡ್ಡಿಯವರ ಸಾವಿರ ರೂಪಾಯಿ ಸೇರಿಸಿ ಚುನಾವಣೆಯ ಸಾಲ ತೀರಿಸಿದರು. ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕರ್ನಾಟಕದ ಪ್ರಬಲ ವಿರೋಧಿನಾಯಕನಾಗಿ ರೂಪುಗೊಂಡಿದ್ದರು. 

ಚುನಾವಣೆ ೨: ೧೯೫೭ರಲ್ಲಿ ಎರಡನೇ ಚುನಾವಣೆ ಬಂತು. ಸಮಕಾಲೀನರ ಪ್ರಕಾರ, ‘ಗೌಡರನ್ನು ಮುಗಿಸಿಯೇ ತೀರಬೇಕೆಂದು ಹಠತೊಟ್ಟ ಕಾಂಗ್ರೆಸ್ಸಿಗರೂ, ಭಾರಿ ಜಮೀನ್ದಾರರೂ, ಜಾತಿವಾದಿಗಳೂ ಸನ್ನದ್ಧರಾದರು. ಗೌಡರಿಗೆ ಕೊಡಬಾರದ ಕಿರುಕುಳ ಕೊಟ್ಟರು. ನೀರಿನಂತೆ ಹಣ ಚೆಲ್ಲಿದರು. ಸಮಾಜವಾದಿ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರುಗಳ ಕೋಟೆಯನ್ನು ಬಿರುಕುಗೊಳಿಸಿದರು. ’

ಈ ಸಲ ಗೌಡರ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಲೋಹಿಯಾ, ಸಾಗರದ ಬಹಿರಂಗ ಸಭೆಯಲ್ಲಿ ಮತದಾರರನ್ನು ಛೇಡಿಸಿದರು: ‘ನೀವು ಚುನಾಯಿಸಿ ಕಳುಹಿಸಿದ ಗೋಪಾಲಗೌಡರು ರೈತರ ಬಗ್ಗೆ, ಕೂಲಿಕಾರರ ಬಗ್ಗೆ, ಶ್ರೀಸಾಮಾನ್ಯರ ಬಗ್ಗೆ ಏನು ಕ್ರಾಂತಿ ಮಾಡಿದ್ದಾರೆ? ಪಕ್ಷದ ಸಂಘಟನೆ ಹೇಗೆ ನಡೆದಿದೆ? ರೈತರ ಬೇಡಿಕೆಗಳ ಬಗ್ಗೆ ಸತ್ಯಾಗ್ರಹ ಹೂಡಿ, ಎಷ್ಟು ಸಲ ಜೈಲಿಗೆ ಹೋಗಿದ್ದಾರೆ? ನೀವು ಈ ಬಗ್ಗೆ ನಿಮ್ಮ ಶಾಸಕರಾದ ಅವರನ್ನು ವಿಚಾರಿಸಿಕೊಂಡಿದ್ದೀರಾ?’ 

ಮತದಾರರನ್ನು ಎಚ್ಚರಿಸಲು ಲೋಹಿಯಾ ಆಡಿದ ಮಾತು ವಿರುದ್ಧ ಪರಿಣಾಮ ಬೀರಿತು! ಎದುರಾಳಿಗಳು ಇದನ್ನೇ ಪ್ರಚಾರ ಮಾಡಿದರು! ಈ ಕಾರಣವೂ ಸೇರಿ, ಗೋಪಾಲ ಗೌಡರು ಸೋತರು. ಚುನಾವಣೆಯ ಖರ್ಚು ಆರು ಸಾವಿರದಷ್ಟಾಗಿತ್ತು.  

ಸೋತ ಗೋಪಾಲಗೌಡರಿಗೆ ತೀರ್ಥಹಳ್ಳಿ ತಾಲೂಕಿನ ಆರಗ ಎಂಬ ಹಳ್ಳಿಯ ಗುಡಿಸಲು ಬಿಟ್ಟರೆ ಬೇರೆಲ್ಲೂ ಮನೆಯಿರಲಿಲ್ಲ. ಬೆಂಗಳೂರಿನ ಸಮಾಜವಾದಿ ಪಕ್ಷದ ಕಛೇರಿಯೇ ಗೌಡರ ಮನೆಯಾಯಿತು.  ಸಮಾಜವಾದಿ ರಾಜಕಾರಣ ರೂಪಿಸಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಪ್ರಚಾರ ಮಾಡಲು ಗೌಡರು ರಾಜ್ಯಾದ್ಯಂತ ಓಡಾಡುತ್ತಿದ್ದರು. ಆ ಓಡಾಟಗಳಿಗೆ ಅವರ ಬಳಿ ಹಣವೇ ಇರುತ್ತಿರಲಿಲ್ಲ.   

ಅನಿಶ್ಚಿತ ಹಣಕಾಸಿನ ಪರಿಸ್ಥಿತಿ, ಇತರರ ಬಳಿ ಹಣ ಕೇಳುವಾಗ ವ್ಯಕ್ತಿತ್ವಕ್ಕೆ ಆಗುತ್ತಿದ್ದ ಘಾಸಿ, ಬೇರೆಯವರಿಂದ ಹಣ ಪಡೆಯುವಾಗ ಉಂಟಾಗುವ ಸಂಕೋಚ, ಮುತ್ತುತ್ತಿದ್ದ ಕಾಯಿಲೆಗಳು... ಇವೆಲ್ಲ ಸೇರಿಕೊಂಡು ಮೂವತ್ತಮೂರನೆಯ ವಯಸ್ಸಿಗಾಗಲೇ ಗೋಪಾಲಗೌಡರ ದೇಹ ಶಿಥಿಲವಾಗತೊಡಗಿತ್ತು. ಕರ್ನಾಟಕದ ಧೀಮಂತ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು; ಸಾರ್ವಜನಿಕ ಜವಾಬ್ದಾರಿಗಳು; ಬಡತನ, ಅಭದ್ರತೆ, ಒಂಟಿತನ; ಸಂಜೆಯ ಊಟದ ಗ್ಯಾರಂಟಿಯೇ ಇರದ ಅಸಹಾಯಕ ಸ್ಥಿತಿ; ಆತ್ಮಾಭಿಮಾನಕ್ಕೆ ಮತ್ತೆ ಮತ್ತೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನನ್ನು ಎಲ್ಲ ದಿಕ್ಕುಗಳಿಂದಲೂ ಹತಾಶೆ ಮುತ್ತಿದಾಗ ಎದುರಾಗುವ ಮನಸ್ಥಿತಿ... ಇವೆಲ್ಲವನ್ನೂ ಇವತ್ತು ನೆನೆಯುತ್ತಿದ್ದರೆ, ಎಂಥ ಅಸಹಾಯಕ ಪರಿಸ್ಥಿತಿಯಲ್ಲೂ ಅನ್ಯರ ಎಂಜಲಿಗೆ ಕೈ ಚಾಚದ ಗೋಪಾಲಗೌಡರ ಸ್ವಾಭಿಮಾನಿ ವ್ಯಕ್ತಿತ್ವದೆದುರು ನಮ್ಮ ತಲೆ ತಂತಾನೇ ಬಾಗತೊಡಗುತ್ತದೆ.  

ಗೋಪಾಲಗೌಡರ ಈ ಘಟ್ಟದ ಬಗ್ಗೆ ಅವರ ಗೆಳೆಯ ಲಂಕೇಶರು ಕೊಡುವ ಚಿತ್ರ: ‘ಮಹಾ ಸ್ವಾಭಿಮಾನಿಯಾಗಿದ್ದು ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಆತ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈ ಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ....ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು.’ 

ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಂಗಾತಿಗಳು ಚಳುವಳಿ ರಾಜಕಾರಣದ ಮೂಲಕ  ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇರಿಸಿದ್ದರು. ಹರತಾಳ, ಅರಣ್ಯಭೂಮಿ ಆಕ್ರಮಿಸಿ ಉಪವಾಸ ಸತ್ಯಾಗ್ರಹ, ಇಂಗ್ಲಿಷ್ ತೊಲಗಿಸಿ ಆಂದೋಲನ, ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ, ಕಾನೂನುಭಂಗ ಚಳುವಳಿ, ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಈ ಎಲ್ಲದರ ನಿರಾಶಾದಾಯಕ ಫಲಿತಾಂಶಗಳು ಸಮಾಜವಾದಿ ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು. ಈ ನಡುವೆಯೂ ಗೌಡರು ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು; ರೇಡಿಯೋದಲ್ಲಿ ಅಲಿ ಅಕ್ಬರ್ ಸರೋದ್‌ ವಾದನ ಕೇಳಿಸಿಕೊಳ್ಳುವುದು; ‘ಅಳಿದ ಮೇಲೆ’ ಥರದ ಕಾದಂಬರಿಗಳನ್ನು ಓದುವುದು ಇವೆಲ್ಲವೂ ಇದ್ದವು. ೧೯೬೨ರ ಚುನಾವಣೆ ಬರುವ ಕಾಲಕ್ಕೆ ಗೌಡರು ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದರು. 

ಚುನಾವಣೆ ೩-೪: ೧೯೬೨ರ ವಿಧಾನಸಭಾ ಚುನಾವಣೆ ಬಂತು. ಈ ಸಲ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವಾಯಿತು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ೧೯೬೭ರಲ್ಲಿ ಮತ್ತೆ ಚುನಾವಣೆಗೆ ನಿಂತರು. ಕಾಂಗ್ರೆಸ್ಸಿನ ವಿಶ್ವನಾಥರೂ ಗೌಡರ ಶಿಷ್ಯರೇ. ‘ಗುರು-ಶಿಷ್ಯರ ಸ್ಪರ್ಧೆ ಪ್ರಬಲವಾಗಿತ್ತು. ಅನೇಕ ಮಂತ್ರಿಗಳು ಗೌಡರ ರಾಜಕೀಯವನ್ನೇ ಮುಗಿಸಲು ಕಣಕ್ಕಿಳಿದರು. ಹಣ ಸುರಿದರು. ಮುಖ್ಯಮಂತ್ರಿಯೇ ತೀರ್ಥಹಳ್ಳಿಗೆ ಬಂದಿದ್ದರು. ಯಾಕೆಂದರೆ, ಗೌಡರು ಕಾಂಗ್ರೆಸ್ ಪಕ್ಷಕ್ಕೆ, ಮಂತ್ರಿಮಂಡಲಕ್ಕೆ ದುಃಸ್ವಪ್ನವಾಗುವಷ್ಟರ ಮಟ್ಟಿನ ಮಹಾನ್ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಇಂಥ ತತ್ವನಿಷ್ಠೆಯ, ನಿರ್ಭಯ ರಾಜಕಾರಣಿಯ ವಿರುದ್ಧ ಚುನಾವಣೆಯಲ್ಲಿ ಮುಯ್ಯಿ ತೀರಿಸಿಕೊಳ್ಳಲು ಅವರೆಲ್ಲ ಹವಣಿಸುತ್ತಿದ್ದರು’ ಎಂದು ಗೌಡರ ಸಮಕಾಲೀನರು ಬರೆಯುತ್ತಾರೆ.

ಈ ಚುನಾವಣೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಸಮಾಜವಾದಿ ಪಕ್ಷದ ಬಹಳ ಜನರಿಗೆ ಲಾಠಿ ಏಟು ಬಿದ್ದಿತ್ತು. ಚುನಾವಣೆಯಲ್ಲಿ ಗೌಡರಿಗೆ ತಾಲ್ಲೂಕಿನ ಸಿ.ಪಿ.ಎಂ. ಪೂರ್ಣ ಬೆಂಬಲ ನೀಡಿತು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ಎಣಿಕೆ ಮುಗಿದು ಹೊರಬೀಳುವಾಗ ಸೋತ ಅಭ್ಯರ್ಥಿ ವಿಶ್ವನಾಥ್ ಹೇಳಿದರು: ‘ಇನ್ನು ಈ ಕ್ಷೇತ್ರದಲ್ಲಿ ಗೋಪಾಲಗೌಡರ ಎದುರು ಯಾರು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ.’ 

೧೯೭೨ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಗೌಡರು ಆಸ್ಪತ್ರೆಯಲ್ಲಿದ್ದರು. ಪಾರ್ಶ್ವವಾಯುವಿಗೆ ತುತ್ತಾಗಿ ಮಾತು ಹೊರಡದಿದ್ದ ಗೌಡರೆದುರು ಆ ಸಲದ ಚುನಾವಣೆಗೆ ಸ್ಪರ್ಧಿಸಲಿದ್ದ ಸಮಾಜವಾದಿ ಸಂಗಾತಿ ಕೋಣಂದೂರು ಲಿಂಗಪ್ಪ ನಿಂತಿದ್ದರು. ಗೌಡರು ತಲೆದಿಂಬಿನಡಿಯಲ್ಲಿದ್ದ ತಮ್ಮ ಮಫ್ಲರ್ ತೆಗೆದು ಕೊಟ್ಟು ಲಿಂಗಪ್ಪನವರಿಗೆ ಶುಭ ಹಾರೈಸಿದರು. 

ಸಮಾಜವಾದಿ ಪಕ್ಷದ ಬಡ ಕಾರ್ಯಕರ್ತ ಲಿಂಗಪ್ಪ ಆ ಮಫ್ಲರ್ ಹಾಕಿಕೊಂಡು ರಾತ್ರಿಯ ಬಸ್ಸಿನಲ್ಲಿ ತೀರ್ಥಹಳ್ಳಿಗೆ ಬಂದಿಳಿದರು; ಹಲವು ವರ್ಷಗಳಿಂದ ಆ ಬಸ್‌ನಿಲ್ದಾಣದಲ್ಲೇ ಲಿಂಗಪ್ಪನವರ ತಂದೆ ಮೂಟೆ ಹೊರುವ ಹಮಾಲಿ ಕೆಲಸ ಮಾಡುತ್ತಿದ್ದರು.

ಗೋಪಾಲಗೌಡರು ಶುಭ ಹಾರೈಸಿ ಕೊಟ್ಟ ಮಫ್ಲರನ್ನು ಕೋಣಂದೂರು ಲಿಂಗಪ್ಪ ಚುನಾವಣಾ ಸಭೆಗಳಲ್ಲಿ ಪ್ರದರ್ಶಿಸುತ್ತಿದ್ದರು! ಜಾತಿಬಲ, ಹಣಬಲ ಇಲ್ಲದೆ, ಬೋವಿ ಜನಾಂಗದ ಹಮಾಲಿಯೊಬ್ಬರ ಮಗ ಲಿಂಗಪ್ಪ ಜನಬಲದಿಂದಲೇ ಗೆದ್ದರು. ಈ ಗೆಲುವು ಗೋಪಾಲಗೌಡರ ಮಾನವಂತ ನಾಯಕತ್ವ ರೂಪಿಸಿದ್ದ ಮತದಾರ ವಲಯದ ಮರ್ಯಾದಸ್ಥ ಮತದಾನದ ಗೆಲುವೂ ಆಗಿತ್ತು. ಆ ಕಾಲದ ಪತ್ರಿಕೆಗಳು ‘ಮಫ್ಲರ್ ಗೆದ್ದಿತು!’ ಎಂದು ಈ ಗೆಲುವನ್ನು ಬಣ್ಣಿಸಿದ್ದವು.  

ಅದೇ ಸರಳತೆಯ ಕೋಣಂದೂರು ಲಿಂಗಪ್ಪ ಈಗಲೂ ಶಿವಮೊಗ್ಗದಲ್ಲಿ ಸಿಗುತ್ತಾರೆ. ಇದನ್ನೆಲ್ಲ  ಈಗ ಓದುತ್ತಿರುವವರಿಗೆ ಇದು ಗತಕಾಲದ ಕತೆಯಂತೆ ಕಂಡರೆ ಅಚ್ಚರಿಯಲ್ಲ. ಆದರೆ ಕೆಲವಾದರೂ ನಾಯಕ, ನಾಯಕಿಯರಲ್ಲಿ; ಶೇಕಡ ಐವತ್ತರಷ್ಟು ಮತದಾರರಲ್ಲಿ, ಅದರಲ್ಲೂ ಮತದಾರ್ತಿಯರಲ್ಲಿ ಇಂಥ ನೈತಿಕ ಶಕ್ತಿ ಇನ್ನೂ ಉಳಿದಿರಬಹುದು ಎಂಬ ಆಶಾವಾದ ಹುಟ್ಟದಿದ್ದರೆ ಯಾವ ಹೊಸ ರಾಜಕಾರಣವೂ ಸಾಧ್ಯವಿಲ್ಲ!

 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:


Recent Posts

Latest Blogs



Kamakasturibana

YouTube



Comments

5 Comments



| Bhupali

ಮತ್ತೊಂದು ಹೊಸ ಪದ ಸಿಕ್ಕಿದೆ - ‘ಮತದಾರ್ತಿ’. ಆದರೂ ಮೊದಲ ಬಾರಿಗೆ ಈ ಪದವನ್ನು ಓದುವಾಗ ತೀರ ಅಪರಿಚಿತವೆನಿಸಲಿಲ್ಲ. ಈವರೆಗೆ ನಮ್ಮ ಎದೆಯೊಳಗೇ ಇದ್ದು ನಾವು ಬಳಸುತ್ತಿರಲಿಲ್ಲವೇನೋ ಎನಿಸುವ ಭಾವ. ಹಾಗಾಗಿ ನೋಡಿದ/ಓದಿದ ಮರುಕ್ಷಣವೇ ಅದು ನಮ್ಮ ಭಾವಕೋಶಕ್ಕೂ ಪದಕೋಶಕ್ಕೂ ಸೇರಿಹೋಯಿತು.ಇನ್ನು ಲೇಖನದ ಮುಖ್ಯ ಉದ್ದೇಶಕ್ಕೆ ಬರುವುದಾದರೆ, ಮೊದಲ ಹಂತದ ‘ಮತದಾನ’ಕ್ಕೆ ಇನ್ನು ಕೇವಲ ಇಪ್ಪತ್ತು ದಿನಗಳು ಉಳಿದಿರುವಾಗ ಓದುಗರಿಗೆ ಮತದಾನದ ಮೌಲ್ಯ, ಪಾವಿತ್ರ್ಯ ಮತ್ತು ಗಾಂಭೀರ್ಯವನ್ನು ತಿಳಿಸುವ ಒಂದು ಆದರ್ಶ ಮಾದರಿಯೊಂದನ್ನು ನೀಡಿರುವುದು ಸಮಯೋಚಿತ ಮತ್ತು ಅರ್ಥಪೂರ್ಣವಾಗಿದೆ. ಆದರೆ ಈ ಬರಹ ಬಹುತೇಕ ಅಕಡೆಮಿಕ್ ವಲಯ ಮತ್ತು ಕ್ರಿಯಾಶೀಲ ವಿದ್ಯಾವಂತ ಸಮೂಹದಲ್ಲೇ ಚಲಿಸಬಹುದೆಂಬ ಅಂದಾಜು ನನ್ನದು. ನಿಜವಾಗಿ ಈ ಸುದ್ದಿ ನಮ್ಮ ಗ್ರಾಮೀಣ ರೈತಾಪಿ ಮತದಾರ ಮತದಾರ್ತಿಯರಿಗೆ ಮತ್ತು ನಗರದ ಮಧ್ಯಮ ವರ್ಗದವರು, ವ್ಯಾಪಾರಸ್ಥರು, ಕೂಲಿಕಾರ್ಮಿಕರು ಮುಂತಾದ ಸ್ತರಗಳಲ್ಲಿ ಬರುವ ಮತದಾರ ಮತದಾರ್ತಿಯರಿಗೆ, ಅಲ್ಲದೆ ಬಹುವಾಗಿ ನವ ಮತದಾರರಿಗೆ ಹೆಚ್ಚು ತಲುಪಬೇಕೆಂಬುದು ನನ್ನ ಅನಿಸಿಕೆ. ಈ ಬರಹವನ್ನು ಓದಿದ ಮೊದಲ ವರ್ಗದವರು ಈ ಎರಡನೆಯ ವರ್ಗದವರಿಗೆ ಈ ಸಂದೇಶವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಲುಪಿಸುವ ಸಾಧ್ಯತೆಗಳಿದ್ದರೂ ಪ್ರಮಾಣ ಕಡಿಮೆಯಾಗಬಹುದೇನೋ. ಹಾಗಾಗಿ ನೇರ ಅವರಿಗೇ ತಲುಪಿಸುವ ಮಾರ್ಗವನ್ನೂ ಹುಡುಕಿಕೊಳ್ಳಬೇಕಿದೆ. ಇಂತಹ ಲೇಖನಗಳಿಂದ ಪ್ರೇರಿತರಾಗಿ ನಾವು ಆರಿಸಲು ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪನವರಂತಹ ಅಭ್ಯರ್ಥಿಗಳು ಸಿಗದಿದ್ದರೂ ದೇಶದ ಭವಿಷ್ಯದ ದೃಷ್ಟಿಯಿಂದ ಇರುವವರಲ್ಲಿ ಯೋಗ್ಯರನ್ನು ಆರಿಸಲು ಮತ್ತು ಮತದಾರ ಮತದಾರ್ತಿಯರಾಗಿ ನಾವು ಶುದ್ಧರಾಗಿರಲು ಖಂಡಿತಾ ಪ್ರಸ್ತುತ ಬರಹ ಪ್ರೇರೇಪಿಸುತ್ತದೆ ಎಂಬುದಂತೂ ದಿಟ.

\r\n\r\n

 

\r\n


| Sandeep

ಮಾನವಂತ ನಾಯಕರು....ಸಕಾಲಿಕ ಮತ್ತು ಸಾರ್ವಕಾಲಿಕ ಬರಹ

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಭಾರತದ ರಾಜಕೀಯ ಇತಿಹಾಸದಲ್ಲಿ ರಾಮ ಮನೋಹರ ಲೋಹಿಯಾರವರು ಸಿದ್ಧಾಂತಬದ್ಧತೆ, ಪ್ರಾಮಾಣಿಕತೆ, ವೈಚಾರಿಕತೆ, ಬುದ್ಧಿವಂತಿಕೆ, ಹೃದಯವಂತಿಕೆ, ನಿರ್ಭಯತೆ, ಸಮಾನತೆ, ಮತ್ತು ನೇರ ನಡೆನುಡಿಗಳನ್ನು ಹೊಂದಿದ್ದಂತಹ ವಿಶಿಷ್ಟ ನೇತಾರರಾಗಿದ್ದಂತೆಯೇ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅವರ ಅನುಯಾಯಿ ಶಾಂತವೇರಿ ಗೋಪಾಲ ಗೌಡರು. ಒಂದು ರೀತಿಯಲ್ಲಿ ಲೋಹಿಯಾರ ಪ್ರತಿರೂಪ ಗೌಡರು.

\r\n\r\n

ಶಾಗೋಗೌರವರು ಕರ್ನಾಟಕದ ಸಮಾಜವಾದೀ ಚಳುವಳಿಯ ಪ್ರವರ್ತಕರು ಮತ್ತು ನೇತಾರರು. ಬರಿಗೈ ಫಕೀರನಾಗಿದ್ದ ಗೌಡರು ೧೯೫೨ ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಸೈದ್ಧಾಂತಿಕ ನಿಲುವು ಮತ್ತು ಜನಪರ ಕಾಳಜಿಗಳಿಂದಲೇ ಗೆದ್ದಿದ್ದು ಅವರು ಮಾನವಂತರಾಗಿದ್ದುದನ್ನು ಮತ್ತು ಅಂದಿನ ಮತದಾರ-ಮತದಾರಿಯರು ಮರ್ಯಾದಸ್ಥರಾಗಿದ್ದರೆಂಬುದನ್ನು ತೋರಿಸುತ್ತದೆ. ನಂತರ ೧೯೫೭ ರ ಚುನಾವಣೆಯಲ್ಲಿ ಉಳ್ಳವರ ವಿರೋಧೀ ಪಿತೂರಿಗಳಿಂದ ಸೋತರೂ ಕೂಡ, ೧೯೬೨ ಮತ್ತು ೬೭ ರ ಚುನಾವಣೆಗಳಲ್ಲಿ ಅವರು ಹಣಬಲ-ಜಾತಿಬಲಗಳಿಲ್ಲದೆ ಬರೀ ಪ್ರಾಮಾಣಿಕತೆ-ಜನಪರತೆಗಳಿಂದಲೇ ಗೆದ್ದಿದ್ದು ಇಡೀ ಪ್ರಜಾಪ್ರಭುತ್ವದ ಗೆಲುವು ಮತ್ತು ಸೌಂದರ್ಯ!

\r\n\r\n

ತಮ್ಮ ಅವಿರತ ಸತ್ಯಾಗ್ರಹ, ಚಳುವಳಿ, ಮತ್ತು ಹೋರಾಟಗಳಿಂದ ಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು ದುರಂತವೇ ಸರಿ. ನೊಂದವರಿಗಾಗಿ, ಶೋಷಿತರಿಗಾಗಿ, ತತ್ವ-ಸಿದ್ಧಾಂತಗಳಿಗಾಗಿ, ಒಟ್ಟಾರೆ ಸಮಾಜಕ್ಕಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿದ ಅವರು, ೧೯೭೨ ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಆಸ್ಪತ್ರೆ ಸೇರಿದ್ದರೂ, ಅವರ ಶಿಷ್ಯ ಕೋಣಂದೂರು ಲಿಂಗಪ್ಪನವರು ಅವರ ನಾಮ-ತತ್ವ-ಸಿದ್ಧಾಂತಗಳ ಬಲದ ಮೇಲೆಯೇ ಗೆದ್ದಿದ್ದು ಐತಿಹಾಸಿಕವೇ ಸರಿ!

\r\n\r\n

ಹದಿನೈದು ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿದ್ದರೂ ಕೂಡ, ಕನಿಷ್ಟ ಸ್ವಂತಕ್ಕೊಂದು ಸೂರು, ಆಪತ್ತಿಗೆ ಚೂರುಪಾರು ಕಾಸು ಮಾಡದೇ ಇದ್ದದ್ದು, ಗೌಡರು ಎಂಥಹ ಅದ್ಭುತ ನಿರ್ವ್ಯಾಮೋಹಿ, ನಿಸ್ಪ್ರಹ, ತ್ಯಾಗಿಯಾಗಿದ್ದರೆಂಬುದನ್ನು ತೋರಿಸುತ್ತದೆ. ಅವರೊಬ್ಬ ಅಪರೂಪದ ಮಾನವ! ಅವರಿಗೆ ನಮೋನ್ನಮಃ.

\r\n\r\n

ಅಂತಹ ಅಪರೂಪದ ಮಾನವಂತ ನಾಯಕನನ್ನು ಮೂರು ಬಾರಿ ಗೆಲ್ಲಿಸಿದ ಅಂದಿನ ಮತದಾರ-ಮತದಾರ್ತಿಯರು ನಿಜವಾಗಿಯೂ ಮರ್ಯಾದಸ್ತರೇ ಆಗಿರಬೇಕು. ಇದನ್ನೆಲ್ಲಾ ಈ ಸನ್ನಿವೇಶದಲ್ಲಿ ಹುಳಿಯಾರರು ಲೇಖಿಸಿರುವುದು ಅತ್ಯಂತ ಸಕಾಲಿಕ. ಅವರ ಈ ಸಕಾಲಿಕ ಕೃತ್ಯಕ್ಕೆ ಧನ್ಯವಾದಗಳು. ನಾವೆಲ್ಲರೂ, ಇಂದಿನ ಮತದಾರರೆಲ್ಲರೂ ಮರ್ಯಾದಸ್ಥರಾಗಬೇಕಿರುವುದು ಇಂದಿನ ಜರೂರು!

\r\n


| Sangappa

ಮಾನವಂತ ನಾಯಕರು ಮರ್‍ಯಾದಸ್ತ ಮತದಾರ/ಮತದಾರ್ತಿ ಲೇಖನ ಓದಿದೆ. ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವದಲ್ಲಿನ ಒಂದಂಶವನ್ನಾದರು ಉಳಿಸಿಕೊಳ್ಳುವವರೆ? ಎಂದು ಕೇಳಿಕೊಂಡರೆ ಐದು ವರ್ಷಕ್ಕೊಮ್ಮೆ ಅವರ ಚರ, ಸ್ಥಿರ ಆಸ್ತಿಯಲ್ಲಿ ಅಜಗಜಾಂತರ ವ್ಯತ್ಯಾಸವೇ. ಈ ಲೇಖನಕ್ಕೆ ಮತ್ತಷ್ಟು ಫಿಗರ್ಸ್ ಮಾಣಿಕ್ ಸರ್ಕಾರ್, ಪವನ್ ಕುಮಾರ್ ಚಾಮ್ಲಿಂಗ್, ಜ್ಯೋತಿ ಬಸು, ಅಂಥವರನ್ನು ಸೇರಿಸಿ ಹಿಗ್ಗಿಸಿದ್ದರೆ ಚೆನ್ನಾಗಿರುತ್ತಿತ್ತು ಸರ್??? 

\r\n


| Shobha

ಮಾನವಂತ ನಾಯಕರು; ಮರ್ಯಾದಸ್ಥ ಮತದಾರ, ಮತದಾರ್ತಿಯರು! ಓದಿದೆ.
\r\nಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಮತ್ತು ಅತ್ಯಗತ್ಯವಾದ ಚಿಂತನೆ.
\r\nಸಧ್ಯದ ಚುನಾವಣಾ ರಾಜಕಾರಣ ಎಂತಹ ಆಶಾವಾದಿಗಳನ್ನೂ ಹತಾಶೆಗೊಳಿಸುತ್ತಿದೆ ಅಲ್ಲವೇ? 

\r\n




Add Comment