ಬಾಬಾಸಾಹೇಬರ ಸಂಧ್ಯಾರಾಗ; ಕೊನೆಯ ರಾತ್ರಿಯ ಕಾಯಕ

1956 ರ ಒಂದು ಸಂಜೆ ಬಾಬಾಸಾಹೇಬರ ದುಗುಡ ತುಂಬಿದ ಮಾತುಗಳನ್ನು ಕೇಳುತ್ತಿದ್ದ ನಾನಕ್ ಚಂದ್ ರತ್ತುವಿಗೆ ಅವರ ಕೊನೆಯ ದಿನಗಳು ಹತ್ತಿರವಿದ್ದಂತೆ ಕಂಡಿತು. ಈಚೆಗೆ ಅಂಬೇಡ್ಕರ್ ಸದಾ ದುಃಖದಲ್ಲಿ ಮುಳುಗಿರುತ್ತಿದ್ದನ್ನು ಕಂಡಿದ್ದ ರತ್ತು ಜುಲೈ ೩೧ರ ಸಂಜೆ ಕೇಳಿಯೇಬಿಟ್ಟರು: ‘ಸರ್, ಈಚೆಗೆ ತಾವು ಯಾಕೆ ಇಷ್ಟೊಂದು ದುಃಖಿಯಾಗಿರುತ್ತೀರಿ? ಆಗಾಗ ಅಳುತ್ತಿರುತ್ತೀರಿ. ದಯವಿಟ್ಟು ನಿಮ್ಮ ದುಃಖಕ್ಕೆ ಕಾರಣವೇನು, ಹೇಳಿ.’ 

ಚಣ ಸುಮ್ಮನಾದ ಬಾಬಾಸಾಹೇಬರ ಗದ್ಗದ ಕಂಠದಿಂದ ಹೊರಬಿದ್ದ ಮಾತುಗಳಿವು: ‘ನಾನು ಯಾಕಿಷ್ಟು ದಃಖಿಯಾಗಿದ್ದೇನೆ, ನನ್ನನ್ನು ಯಾವ ಚಿಂತೆ ಮುತ್ತಿದೆ ಎಂಬುದು ನಿನಗೆ ಅರ್ಥವಾಗಲಾರದು. ನನ್ನ ಬದುಕಿನ ಉದ್ದೇಶ ಇನ್ನೂ ಈಡೇರಿಲ್ಲ; ಇದು ನನ್ನ ಮೊದಲ ಚಿಂತೆ; ನನ್ನ ಜನ ಇತರ ಸಮುದಾಯಗಳೊಡನೆ ಸಮಾನವಾಗಿ ರಾಜಕೀಯ ಅಧಿಕಾರ ಹಂಚಿಕೊಂಡು ಆಳುವ ವರ್ಗವಾಗುವುದನ್ನು ಕಾಣಬೇಕೆಂದುಕೊಂಡಿದ್ದೆ. ಅನಾರೋಗ್ಯ ನನ್ನೆಲ್ಲ ಚಟುವಟಿಕೆಗಳನ್ನು ಕುಂಠಿತಗೊಳಿಸಿದೆ. ಈವರೆಗೆ ನಾನು ಸಾಧಿಸಿದ ಅಷ್ಟಿಷ್ಟು ಗುರಿಗಳಿಂದಾಗಿ ಅನುಕೂಲ ಪಡೆದಿರುವ ವಿದ್ಯಾವಂತರು ದಮನಕ್ಕೊಳಗಾದ ತಮ್ಮ ಅಣ್ಣತಮ್ಮಂದಿರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ. ಇವತ್ತಿಗೂ ಹಳ್ಳಿಗಳಲ್ಲಿ ಯಾತನೆ ಪಡುತ್ತಾ, ಆರ್ಥಿಕವಾಗಿ ಒಂದಿಷ್ಟೂ ಬದಲಾಗದ ಆ ಬೃಹತ್ ಅನಕ್ಷರಸ್ಥ ಸಮುದಾಯಕ್ಕಾಗಿ ನಾನು ಕೆಲಸ ಮಾಡಬೇಕೆಂದುಕೊಂಡಿದ್ದೆ. ಆದರೆ ನನ್ನ ಬದುಕು ಮುಗಿಯತೊಡಗಿದೆ...

‘ನನ್ನ ಮಹತ್ವದ ಪುಸ್ತಕಗಳಾದ ‘ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’, ‘ಪ್ರಾಚೀನ ಇಂಡಿಯಾದಲ್ಲಿ ಕ್ರಾಂತಿ-ಪ್ರತಿಕ್ರಾಂತಿ’, ‘ಹಿಂದೂ ಧರ್ಮದ ಒಗಟುಗಳು’ ಇವನ್ನು ಬರೆದು ಮುಗಿಸಲು ಆಗುತ್ತಿಲ್ಲ. ನಾನು ತೀರಿಕೊಂಡ ಮೇಲೆ ಇವನ್ನು ಯಾರೂ ಪ್ರಕಟಿಸಲಾರರು... ನಾನು ಬದುಕಿರುವಾಗಲೂ, ಮುಂದೆಯೂ ದಲಿತ ವರ್ಗಗಳ ಚಳುವಳಿಯನ್ನು ಮುನ್ನಡೆಸಬಲ್ಲವರನ್ನು ಹುಡುಕುತ್ತಿದ್ದೇನೆ. ಒಬ್ಬರೂ ಕಾಣುತ್ತಿಲ್ಲ. ದೇಶದ ವಿದ್ಯಮಾನಗಳಲ್ಲಿ ಆಸಕ್ತಿ ಇರಿಸಿಕೊಳ್ಳುವುದು ಕೂಡ ನನಗೀಗ ಕಷ್ಟವಾಗಿದೆ. ಯಾಕೆಂದರೆ, ಈ ದೇಶದ ಜನ ಪ್ರಧಾನಮಂತ್ರಿಯ ವಲಯದ ಮಾತುಗಳನ್ನು ಬಿಟ್ಟರೆ ಇನ್ನಾರ ಮಾತುಗಳನ್ನೂ ಕೇಳಲು ಸಿದ್ಧರಿಲ್ಲ. ಈ ದೇಶದ, ಈ ಜನರ ಸೇವೆ ಮಾಡಬೇಕೆಂದು ನಾನು ಹೊರಟಿದ್ದೆ. ಆದರೆ ಇಷ್ಟೊಂದು ಜಾತಿಪೀಡಿತವಾದ, ಪೂರ್ವಗ್ರಹಗಳಿರುವ ದೇಶದಲ್ಲಿ ಹುಟ್ಟುವುದೇ ಪಾಪ... ಈ ದೇಶ ಎಂಥ ಪ್ರಪಾತಕ್ಕೆ ಬೀಳತೊಡಗಿದೆ...’

ತಮ್ಮ ಮಾತು ಕೇಳಿ ಕಣ್ಣೀರಿಟ್ಟ ರತ್ತುವಿಗೆ ಅಂಬೇಡ್ಕರ್ ಹೇಳಿದರು: ‘ಧೈರ್ಯ ತಂದುಕೋ. ಬದುಕು ಒಂದಲ್ಲ ಒಂದು ದಿನ ಮುಗಿಯಲೇಬೇಕು.’ ಚಣ ಸುಮ್ಮನಾದ ಅಂಬೇಡ್ಕರ್ ಕಣ್ಣೀರೊರೆಸಿಕೊಳ್ಳುತ್ತಾ, ಕೊಂಚ ಕೈ ಮೇಲೆತ್ತಿ ಮಾತಾಡತೊಡಗಿದರು. ಕಣ್ಣು ಮಿನುಗುತ್ತಿದ್ದವು: 

‘ನಾನಕ್ ಚಂದ್, ನನ್ನ ಜನರಿಗೆ ಹೇಳು. ನಾನು ಏನೆಲ್ಲ ಸಾಧಿಸಿದ್ದೇನೋ ಅದನ್ನೆಲ್ಲ ಅಸಂಖ್ಯಾತ ಕಷ್ಟಕೋಟಲೆಗಳನ್ನು ಎದುರಿಸುತ್ತಾ, ಈ ನನ್ನ ಏಕಾಂಗಿ ಕೈಗಳಿಂದ ನಾನೊಬ್ಬನೇ ಸಾಧಿಸಿದ್ದೇನೆ. ಎಲ್ಲ ಕಡೆಯಿಂದ ಎರಗಿದ ನಿಂದನೆಗಳನ್ನು, ಅದರಲ್ಲೂ ಹಿಂದೂಗಳ ಪತ್ರಿಕೋದ್ಯಮ ನನ್ನ ಮೇಲೆ ಸುರಿದ ಬೈಗುಳಗಳನ್ನು ಎದುರಿಸುತ್ತಾ, ನನ್ನ ಎದುರಾಳಿಗಳ ಜೊತೆ ಹೋರಾಡುತ್ತಾ, ತಮ್ಮ ಸ್ವಾರ್ಥಕ್ಕಾಗಿ ನನಗೆ ಮೋಸ ಮಾಡಿದ ನನ್ನ ಜನರ ಜೊತೆಗೂ ಹೋರಾಡುತ್ತಾ, ಇಷ್ಟನ್ನು ಮಾಡಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ಈ ದೇಶಕ್ಕಾಗಿ, ಇಲ್ಲಿನ ದಮನಿತರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ತುಂಬ ಕಷ್ಟಪಟ್ಟು ಈ ಬಂಡಿಯನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಈ ಬಂಡಿ ಎಲ್ಲ ಅಡೆತಡೆಗಳನ್ನು ದಾಟಿ ಮುಂದುವರಿಯಲಿ. ನನ್ನ ಜನ ಹಾಗೂ ನನ್ನ ಜೊತೆಯವರು ಈ ಬಂಡಿಯನ್ನು ಮುಂದೊಯ್ಯಲು ಆಗದಿದ್ದರೆ, ಕೊನೆಯ ಪಕ್ಷ ಅದು ಈಗ ಎಲ್ಲಿದೆಯೋ ಅಲ್ಲೇ ಇರಲಾದರೂ ಬಿಡಲಿ. ಆದರೆ ಯಾವ ಕಾರಣಕ್ಕೂ ಅವರು ಈ ಬಂಡಿ ಹಿಂದೆ ಹೋಗಲು ಬಿಡದಿರಲಿ. ಇದು ನನ್ನ ಸಂದೇಶ. ಪ್ರಾಯಶಃ ನನ್ನ ಅತ್ಯಂತ ಗಂಭೀರವಾದ ಕೊನೆಯ ಸಂದೇಶ. ಇದನ್ನು ನನ್ನ ಜನ ಕೇಳಿಸಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ಹೋಗು, ಅವರಿಗೆ ಈ ಮಾತನ್ನು ಹೇಳು. ಹೋಗು, ಅವರಿಗೆ ಈ ಮಾತನ್ನು ಹೇಳು. ಹೋಗು, ಅವರಿಗೆ ಈ ಮಾತನ್ನು ಹೇಳು.’ 

ಕೊನೆಯ ಮಾತನ್ನು ಮೂರು ಸಲ ಹೇಳಿದ ಬಾಬಾಸಾಹೇಬ್ ಬಿಕ್ಕಿ ಬಿಕ್ಕಿ ಅತ್ತರು. ಕಣ್ಣೀರು ಹರಿಯುತ್ತಿತ್ತು. ಅದು ನಿಜಕ್ಕೂ ಬಾಬಾಸಾಹೇಬರ ಕೊನೆಯ ಸಂದೇಶವಾಗುವುದೆಂದು ರತ್ತು ಊಹಿಸಿರಲಿಲ್ಲ. ಅವರ ಮುಖದಲ್ಲಿ ಕವಿದಿದ್ದ ನಿರಾಶೆ ರತ್ತುವನ್ನು ಕಂಗೆಡಿಸಿತ್ತು.

ಇದಾದ ನಾಲ್ಕು ತಿಂಗಳ ನಂತರ, ಡಿಸೆಂಬರ್ ೩ರಂದು, ಕಾಯಿಲೆಯಾಗಿ ಮಲಗಿದ್ದ ತಮ್ಮ ಕೈತೋಟದ ಮಾಲಿಯ ಆರೋಗ್ಯ ವಿಚಾರಿಸಲು ಅಂಬೇಡ್ಕರ್ ಮಾಲಿಯ ಮನೆಗೆ ಹೋಗಿದ್ದರು. ಮಾಲಿಯ ಕಣ್ಣೀರು ಕಂಡ ಅಂಬೇಡ್ಕರ್ ರತ್ತುವಿಗೆ ಹೇಳಿದರು: `ನೋಡು, ಈ ಮನುಷ್ಯ ಸಾವಿನ ಕಲ್ಪನೆಯಿಂದ ಅಂಜಿಕೊಂಡಿದ್ದಾನೆ. ನನಗೆ ಸಾವಿನ ಭಯವೆಂಬುದಿಲ್ಲ. ಮರಣ ಯಾವಾಗಲಾದರೂ ಬರಲಿ, ನಾನು ಅದನ್ನು ಬರಮಾಡಿಕೊಳ್ಳಲು ಸಿದ್ಧನಿದ್ದೇನೆ.’ 

ಡಿಸೆಂಬರ್ ೫ರ ಸಂಜೆ ಅಂಬೇಡ್ಕರ್ ಉದ್ವಿಗ್ನರಾಗಿದ್ದಂತೆ ರತ್ತುವಿಗೆ ಕಂಡಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಜೈನ ಸಮಾಜದ ನಾಯಕರು ಬಂದು ‘ಜೈನ್ ಔರ್ ಬುದ್ಧ’ ಪುಸ್ತಕವನ್ನು ಅಂಬೇಡ್ಕರ್‌ಗೆ ಕೊಟ್ಟು, ಜೈನಸಭೆಯೊಂದಕ್ಕೆ ಆಹ್ವಾನಿಸಿ ಹೋದರು. ನಂತರ ರತ್ತು ಬಾಬಾಸಾಹೇಬರ ದಣಿದ ಕಾಲುಗಳನ್ನು ಒತ್ತಿ, ಅವರ ತಲೆಗೆ ಎಣ್ಣೆ ಹಚ್ಚಿದರು. ಹಾಯೆನ್ನಿಸಿದಂತಾಗಿ, ಅಂಬೇಡ್ಕರ್ ಕಂಠದಿಂದ ಮೆಲುವಾಗಿ ಹೊರಟ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಬರಬರುತ್ತಾ ಗಟ್ಟಿಯಾಗಿ ಕೇಳತೊಡಗಿತು. ಅವರ ಬಲಗೈ ಬೆರಳುಗಳು ಸೋಫಾದ ಮೇಲೆ ತಾಳ ಹಾಕುತ್ತಿದ್ದವು. ತಮ್ಮ ಇಚ್ಛೆಯಂತೆ ರತ್ತು ರೇಡಿಯೋಗ್ರಾಂನಲ್ಲಿ ಹಾಕಿದ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆಗೆ ಅಂಬೇಡ್ಕರ್ ದನಿಗೂಡಿಸಿದರು. ಮೇಲೆದ್ದು ಕಪಾಟುಗಳಿಂದ ಹಲವು ಪುಸ್ತಕಗಳನ್ನು ತೆಗೆದುಕೊಂಡು, ಅವನ್ನು ಹಾಸಿಗೆಯ ಪಕ್ಕದ ಮೇಜಿನ ಮೇಲಿಡಲು ರತ್ತುವಿಗೆ ಹೇಳಿದರು. 

ಒಂಚೂರು ಊಟ ಮಾಡಿ, ಕೋಲೂರಿಕೊಂಡು ಮೇಲೆದ್ದ ಅಂಬೇಡ್ಕರ್ ಬಾಯಿಂದ ಕಬೀರರ ‘ಚಲ್ ಕಬೀರ್ ತೇರ ಭವಸಾಗರ್ ಡೇರಾ’ ಸಾಲು ತೇಲಿ ಬರುತ್ತಿತ್ತು. ಜೀವನಪಯಣದ ತಾತ್ಕಾಲಿಕತೆಯನ್ನು ಹೇಳುವ ‘ನಡೆ ಕಬೀರಾ ನಿನ್ನ ಭವಸಾಗರವು ಡೇರೆಯಂತೆ…’ಎಂಬ ಹಾಡು ಗುಣುಗುಣಿಸುತ್ತಿರುವಾಗಲೇ ಅವರ ಕಣ್ಣ ರೆಪ್ಪೆಗಳು ದಣಿವಿನಿಂದ ಮುಚ್ಚಿಕೊಳ್ಳತೊಡಗಿದ್ದವು. ಮನೆಗೆ ಹೊರಡುವ ಮುನ್ನ ರತ್ತು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸರಿಸಿದ; ಅಂಬೇಡ್ಕರ್ ಕಣ್ತೆರೆದರು. ರಾತ್ರಿ ೧೨ ಗಂಟೆಗೆ ರತ್ತು ಸೈಕಲ್ಲೇರಿ ಬಾಬಾಸಾಹೇಬರ ಮನೆ ‘ರಾಜಗೃಹ’ದ ಗೇಟು ದಾಟುತ್ತಿದ್ದಂತೆ, ಅಡಿಗೆಯ ಸುದಾಮ ರತ್ತುವನ್ನು ಕರೆಯಲು ಓಡೋಡಿ ಬಂದ. 

ಮತ್ತೆ ಬಂದ ರತ್ತುವಿಗೆ ಅಂಬೇಡ್ಕರ್ ತಾವು ಬರೆದಿಟ್ಟಿದ್ದ ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿ ಹಾಗೂ ಪ್ರಸ್ತಾವನೆಗಳ ಟೈಪಾದ ಹಾಳೆಗಳನ್ನು, ಪತ್ರಗಳನ್ನು ತರಲು ಹೇಳಿದರು. ಸುದಾಮ ಎಂದಿನಂತೆ ಕಾಫಿ ಫ್ಲಾಸ್ಕ್ ಹಾಗೂ ಸಿಹಿತಿಂಡಿಗಳನ್ನು ತಂದು ಹಾಸಿಗೆಯ ಬದಿಯಲ್ಲಿಟ್ಟ. ರತ್ತು ತಂದ ಹಾಳೆಗಳು, ಪತ್ರಗಳನ್ನು ನೋಡುತ್ತಾ ಅಂಬೇಡ್ಕರ್, ‘ಹೊರಡು. ಬೆಳಗ್ಗೆ  ಬಂದು  ಇವನ್ನೆಲ್ಲ ತಪ್ಪದೆ ಕಳಿಸಬೇಕು. ಇವನ್ನೆಲ್ಲ ರಾತ್ರಿಯೇ ಓದಿ ಮುಗಿಸುತ್ತೇನೆ’ ಎಂದರು. ಇದು ರತ್ತು ಕೇಳಿಸಿಕೊಂಡ ಅಂಬೇಡ್ಕರ್ ಅವರ ಕೊನೆಯ ಮಾತು. ಆ ರಾತ್ರಿ ಅಲ್ಲಿಂದ ಹೊರಟ ರತ್ತುವಿಗೆ ಬಾಬಾಸಾಹೇಬರ ಸಾವಿನ ಸೂಚನೆ ಕಂಡಿರಲಿಲ್ಲ.

ಈ ವಿವರಗಳೆಲ್ಲ ಬಾಬಾಸಾಹೇಬರ ಪ್ರಿಯ ಶಿಷ್ಯ ನಾನಕ್ ಚಂದ್ ರತ್ತು ಬರೆದ ‘ಲಾಸ್ಟ್ ಫ್ಯೂ ಯಿಯರ್ಸ್ ಆಫ್ ಅಂಬೇಡ್ಕರ್’ ಪುಸ್ತಕದಲ್ಲಿವೆ. ಆ ಕೊನೆಯ ರಾತ್ರಿ-ಬೆಳಗಿನ ನಡುವೆ ಅಂಬೇಡ್ಕರ್ ತಮ್ಮ ಕೊನೆಯ ಕರ್ತವ್ಯವನ್ನು ಮುಗಿಸುವಂತೆ ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕಕ್ಕೆ ತಾವು ಬರೆದ ಮುನ್ನುಡಿ, ಪ್ರಸ್ತಾವನೆಗಳ ಮೇಲೂ ಕಣ್ಣಾಡಿಸಿ, ತಿದ್ದಿರಬಹುದು ಎಂದು ಊಹಿಸಬಹುದು. ಪ್ರಸ್ತಾವನೆ ಮುಗಿದಂತಿದೆ. ಅವರ ಅಪೂರ್ಣ ಮುನ್ನುಡಿಯ ಕೆಲವು ಮಾತುಗಳು:

‘ನೀವು ಯಾಕೆ ಬೌದ್ಧಧರ್ಮದತ್ತ ವಾಲಿದ್ದೀರಿ?’ ಎಂದು ಜನ ಆಗಾಗ್ಗೆ ನನ್ನನ್ನು ಕೇಳುತ್ತಾರೆ. ಇದಕ್ಕೆ  ನನ್ನ ಉತ್ತರ: ‘ನನ್ನ ಪ್ರಕಾರ ಬುದ್ಧನ ಧಮ್ಮ ಶ್ರೇಷ್ಠ ಧರ್ಮ. ಬೇರಾವ ಧರ್ಮವನ್ನೂ ಈ ಧಮ್ಮಕ್ಕೆ ಹೋಲಿಸಲಾಗದು. ವಿಜ್ಞಾನ ಗೊತ್ತಿರುವ ಯಾವುದೇ ಮನುಷ್ಯನಿಗೆ ಧರ್ಮ ಬೇಕೆನ್ನಿಸಿದರೆ, ಅವನು ಆರಿಸಿಕೊಳ್ಳುವುದು ಬೌದ್ಧ ಧರ್ಮವನ್ನು ಮಾತ್ರ. ಕಳೆದ ೩೫ ವರ್ಷಗಳಲ್ಲಿ ಎಲ್ಲ ಧರ್ಮಗಳನ್ನೂ ಅಧ್ಯಯನ ಮಾಡಿದ ಮೇಲೆ, ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ.

“ನನಗೆ ಬುದ್ಧಿಸಮ್ ಕುರಿತ ಪ್ರೇರಣೆ ಎಲ್ಲಿಂದ ಬಂತು ಎನ್ನುವುದನ್ನು ಹೇಳಹೊರಟರೆ ಅದೇ ಒಂದು ಕತೆಯಾಗುತ್ತದೆ: ನಾನು ಇಂಗ್ಲಿಷ್ ನಾಲ್ಕನೇ ತರಗತಿ ಪಾಸಾದಾಗ ನಮ್ಮ ಸಮುದಾಯದವರು ನನ್ನನ್ನು ಅಭಿನಂದಿಸಲು ಮುಂದಾದರು. ನಮ್ಮ ಸಮುದಾಯದಲ್ಲಿ ಈ ಹಂತಕ್ಕೇರಿದ ಮೊದಲ ಹುಡುಗ ನಾನೆಂದು ಅವರಿಗೆ ಹೆಮ್ಮೆ. ಅಪ್ಪ ಅದೆಲ್ಲ ಬೇಡವೆಂದರು. ಆಗ ನಮ್ಮ ಜನ ಆ ಕಾಲದ ದೊಡ್ಡ ಲೇಖಕರಾದ ಕೇಳುಸ್ಕರ್ ಅವರಿಂದ ಅಪ್ಪನಿಗೆ ಹೇಳಿಸಿದರು. ಆ ಸಭೆಗೆ ಬಂದ ಕೇಳುಸ್ಕರ್ ತಾವು ಬರೆದ ‘ಲೈಫ್ ಆಫ್ ಗೌತಮ ಬುದ್ಧ’ ಪುಸ್ತಕವನ್ನು ನನಗೆ ಕೊಟ್ಟರು. ಆ ಪುಸ್ತಕವನ್ನು ಅಪಾರ ಆಸಕ್ತಿಯಿಂದ ಓದಿದೆ; ಭಾವುಕನಾದೆ, ಪ್ರಭಾವಿತನಾದೆ...

‘...ನಮ್ಮಪ್ಪ ಯಾಕೆ ನಮಗೆ ಬೌದ್ಧ ಸಾಹಿತ್ಯದ ಪರಿಚಯ ಮಾಡಿಕೊಡಲಿಲ್ಲ ಎಂಬ ಪ್ರಶ್ನೆ ಆಗ ನನ್ನಲ್ಲಿ ಹುಟ್ಟಿತು. ಅಪ್ಪನಿಗೆ ಹೇಳಿದೆ: ‘ಯಾಕೆ ಮಹಾಭಾರತ, ರಾಮಾಯಣಗಳನ್ನೇ ಓದಲು ನಮ್ಮನ್ನು ಒತ್ತಾಯ ಮಾಡುತ್ತಿದ್ದಿರಿ? ಅವು ಬ್ರಾಹ್ಮಣರ, ಕ್ಷತ್ರಿಯರ ಹಿರಿಮೆಯನ್ನು ಒತ್ತಿ ಹೇಳುತ್ತವೆ; ಶೂದ್ರರ, ಅಸ್ಪೃಶ್ಯರ ಹೀನಸ್ಥಾನವನ್ನು ಪ್ರತಿಪಾದಿಸುತ್ತವೆ.’ ಅಪ್ಪನಿಗೆ ನನ್ನ ಮಾತಿನ ಧಾಟಿ ಇಷ್ಟವಾಗಲಿಲ್ಲ; ಆದರೂ ಹೇಳಿದೆ: ‘ಭೀಷ್ಮ, ದ್ರೋಣ, ಕೃಷ್ಣರನ್ನು ನಾನು ಇಷ್ಟಪಡುವುದಿಲ್ಲ. ಭೀಷ್ಮ ಮತ್ತು ದ್ರೋಣರು ಬೂಟಾಟಿಕೆಯ ವ್ಯಕ್ತಿಗಳು. ತಾವು ಹೇಳಿದ್ದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತಿದ್ದರು. ಕೃಷ್ಣ ಕಪಟದಲ್ಲಿ ನಂಬಿಕೆ ಇಟ್ಟಿದ್ದ; ರಾಮನು ಶೂರ್ಪನಖಿ ಹಾಗೂ ವಾಲಿ-ಸುಗ್ರೀವ ಪ್ರಕರಣಗಳಲ್ಲಿ ನಡೆದುಕೊಂಡ ರೀತಿ, ಸೀತೆಯನ್ನು ಕುರಿತ ಅವನ ಕ್ರೂರ ವರ್ತನೆ ನನಗೆ ಇಷ್ಟವಾಗುವುದಿಲ್ಲ.’ 
ಅಪ್ಪ ಮಾತಾಡಲಿಲ್ಲ. ಸುಮ್ಮನಿದ್ದರು. ಮನೆಯಲ್ಲಿ ಒಂದು ದಂಗೆಯೆದ್ದಿದೆ ಎಂಬುದು ಅವರ ಅರಿವಿಗೆ ಬರತೊಡಗಿತ್ತು...

‘ನಾನು ಬುದ್ಧನೆಡೆಗೆ ತಿರುಗಿದ್ದು ಹೀಗೆ. ನಾನು ಖಾಲಿ ತಲೆಯಲ್ಲಿ ಬುದ್ಧನೆಡೆಗೆ ತಿರುಗಲಿಲ್ಲ. ಬುದ್ಧನ ಸಾಹಿತ್ಯ ಓದುತ್ತಾ, ಇತರ ಧರ್ಮಗಳಿಗೂ ಬೌದ್ಧ ಧರ್ಮಕ್ಕೂ ಇರುವ ಹೋಲಿಕೆ, ವ್ಯತ್ಯಾಸಗಳನ್ನು ಗಮನಿಸಿದೆ. ಇದು ಬುದ್ಧ ಮತ್ತು ಅವನ ಧಮ್ಮದ ಬಗೆಗಿನ ನನ್ನ ಆಸಕ್ತಿಯ ಮೂಲ. ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಈಗಲೂ ಸುಧಾರಿಸಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ಡಾಕ್ಟರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದರು. ಆದರೆ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಶಾರದಾ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’

ಅಂಬೇಡ್ಕರ್ ತಮ್ಮ ಕೊನೆಯ ರಾತ್ರಿ ತಿದ್ದಿರಬಹುದಾದ ಈ ಮುನ್ನುಡಿಯ ಜೊತೆಗೇ ಪುಸ್ತಕದ ಪ್ರಸ್ತಾವನೆಯೂ ಇತ್ತು. ಈ ಪ್ರಸ್ತಾವನೆಯಲ್ಲಿ ಬೌದ್ಧ ಧರ್ಮವನ್ನು ಆರ್ಯರ ಸುಳ್ಳುಗಳಿಂದ ಬಿಡಿಸುವ ತಮ್ಮ ಬೌದ್ಧಿಕ   ಪ್ರಯತ್ನ ಕುರಿತು ಹೇಳುತ್ತಾ, ಕೊನೆಗೆ ಬರೆಯುತ್ತಾರೆ: ‘ನಾನು ಈ ಪುಸ್ತಕದಲ್ಲಿ ಎತ್ತಿರುವ ಪ್ರಶ್ನೆಗಳು ಓದುಗರನ್ನು ಆ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಪ್ರೇರೇಪಿಸುತ್ತವೆಂದು ನಿರೀಕ್ಷಿಸುವೆ.’

ಬಾಬಾಸಾಹೇಬರ ನಿರೀಕ್ಷೆ ಒಂದರ್ಥದಲ್ಲಿ ಸಫಲವಾಗಿದೆ. ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಇಂಡಿಯಾದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಲಕ್ಷಾಂತರ ಓದುಗರು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಪ್ರೇರೇಪಿಸಿದೆ. ಬಾಬಾಸಾಹೇಬರ ಹದಿಹರೆಯದ ಬೌದ್ಧ ಧರ್ಮದ ಹುಡುಕಾಟ ಹಾಗೂ ಬೌದ್ಧ ಪಯಣ 1956ರ ಡಿಸೆಂಬರ್ 6ರ ರಾತ್ರಿ ಅವರು ಕೊನೆಯ ಉಸಿರೆಳೆಯುವವರೆಗೂ ಮುಂದುವರಿದೇ ಇತ್ತು. ಬದುಕಿನಲ್ಲಿ ಕೈಗೆತ್ತಿಕೊಂಡ ಮಹತ್ವದ ಕೆಲಸವೊಂದನ್ನು ಮುಗಿಸುವ ಸಂಕಲ್ಪ ಅವರ ಕೊನೆಯ ಗಳಿಗೆಯವರೆಗೂ ಜೀವಂತವಾಗಿತ್ತು. ಬಾಬಾಸಾಹೇಬರ ಈ ಅನನ್ಯ ಬೌದ್ಧಿಕ ಹೊಣೆ ಹಾಗೂ ಬದ್ಧತೆ ನಮ್ಮ ಅನುದಿನದ ಸ್ಫೂರ್ತಿಯಾಗಿರಲಿ. ಬಾಬಾಸಾಹೇಬರ ಕೊನೆಯ ಸಂದೇಶ ನಮ್ಮ ಕರ್ತವ್ಯಗಳ ದಿಕ್ಕನ್ನು ರೂಪಿಸುತ್ತಿರಲಿ.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:

Comments

13 Comments



| MAVALLI SHANKAR

Best tribute to Babasaheb Ambedkar

\r\n


| ಮಂಗ್ಳೂರ ವಿಜಯ

ಈ ಮಾತುಗಳು ಬಹಳ ಜನರಿಗೆ ತಲುಪಲಿ. ನಮ್ಮನ್ನು ಸ್ವಶೋಧನೆಗೆ ಪ್ರೇರೇಪಿಸಲಿ. 

\r\n\r\n

ನಟರಾಜ್, ನಿಮಗೆ ಶಿರಬಾಗಿ ಶರಣು.

\r\n


| Gangadhara BM

ಇಂದಿನ ಪರಿ ನಿರ್ವಾಣ  ದಿನದಂದು ಅಂಬೇಡ್ಕರ್ ರವರ ಕೊನೆಯ ದಿನಗಳ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು ಸರ್. ರತ್ತು ಪುಸ್ತಕ ಓದಿದಂತಾಯ್ತು. ಅಧ್ಯಯನ ಶೀಲತೆ, ನಿಖರತೆಗೆ ಮತ್ತೊಂದು ಹೆಸರು ಅಂಬೇಡ್ಕರ್ ಎನ್ನಬಹುದು.  ಭಾರತದ ರೋಗಗ್ರಸ್ತ ಸಮಾಜದಲ್ಲಿ ನೆಡೆಸಿದ್ದು ಕೇವಲ ಬದುಕಲ್ಲ.‌ಅದೊಂದು ಹೋರಾಟ. ಕೊನೆಯ ದಿನದವರೆಗೆ.

\r\n


| Muniramu

Thanks for giving must know matters

\r\n\r\n

 

\r\n\r\n

Jai bheem 

\r\n


| Rajappa Dalavayi

ಲೇಖನ ತುಂಬಾ ಚನ್ನಾಗಿದೆ. ಸಕಾಲಿಕ. ಇಷ್ಟ ಆಯ್ತು.

\r\n


| Hamsalekha

Eyeopener . Namaste 

\r\n


| Dr. Vijaya

ಕಣ್ಣು ತೆರೆಸಿದ ಲೇಖನ

\r\n


| Subramanya Swamy

ನಿಮ್ಮ ಈ ಲೇಖನ ಅಂಬೇಡ್ಕರ್ ಅವರ ಕೊನೆಯ ದಿನಗಳನ್ನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳಲು ನಾನಕ್ ಚಂದ್ ದತ್ತು ಪುಸ್ತಕದ ಕನ್ನಡ ರೂಪಾಂತರ ತುಂಬಾ ಸಹಾಯ ಮಾಡುತ್ತದೆ ಹಾಗೂ ತುಂಬಾ ಅರ್ಥಪೂರ್ಣವಾಗಿದೆ ಸಾರ್.

\r\n


| Krishna Kumar

His Life is message for me 

\r\n


| ATMANANDA

ಈ ಲೇಖನ ಎಲ್ಲರ ಹೃದಯವನ್ನು ಮುಟ್ಟಿದರೆ ಅವರ ಜೀವನ ವಿಧಾನವೇ ಬದಲಾಗಬಲ್ಲದು.

\r\n


| ಗ ನ ಅಶ್ವತ್ಥ್

ಸರ್ ಬಾಬಾ ಸಾಹೇಬ್ರ ಸಂಧ್ಯಾ ರಾಗ ಓದಿದೆ ತುಂಬಾ ಚೆನ್ನಾಗಿದೆ ಲೇಖನ ಮೂಡಿ ಬಂದಿದೆ.. ಜೈ ಭೀಮ್  ಭೀಮ್

\r\n


| ಸವಿತಾ ನಾಗಭೂಷಣ

ತುಂಬ ಒಳ್ಳೆಯ ಆರ್ದ್ರ ಬರಹ

\r\n


| GANGADHAR HIREGUTTI

ನಾವು ಅಂಬೇಡ್ಕರ್ ಅವರನ್ನು ಸಂಪೂರ್ಣ ಅಧ್ಯಯನ ಮಾಡಿಲ್ಲ. ಯಾಕೆಂದರೆ ಎಲ್ಲಾ ಹಿಂದುಳಿದ ವರ್ಗಗಳು ಬದುಕು ಸರಿಪಡಿಸಿಕೊಳ್ಳಲು ಅಂಬೇಡ್ಕರ್ ಯೋಜನೆಯಾದರೇ ಹೊರತು, ಆ ಹಿಂದುಳಿದ ವರ್ಗಗಳು ತಮ್ಮ ಅಭಿವೃದ್ಧಿಯ ಹರಿಕಾರರಾದ ಅಂಬೇಡ್ಕರ್ ಅವರ ಅಧ್ಯಯನ ಮಾಡಲಿಲ್ಲ. ತಮ್ಮನ್ನು ತಾವು ಸುಧಾರಣೆ ಮಾಡಿಕೊಂಡರೂ ಅಂಬೇಡ್ಕರ್ ಚಿಂತನೆಗಳನ್ನು  ಓದಿ ತಿಳಿಯಲಿಲ್ಲ.ಈಗ  ಓದುತ್ತಿದ್ದೇವೆ. ಹೀಗೆ ಓದುವ ಬರಹಗಾರರೂ ಹೆಚ್ಚಾಗಲಿ. ಇವರೆಲ್ಲರೂ ಅಂಬೇಡ್ಕರ್ ಅವರನ್ನು ಓದಲಿ. ನಿಮ್ಮ ಅದ್ಭುತ ಬರೆವಣಿಗೆಗೆ ಸಲಾಂ sir. ನಿಮ್ಮ ಪ್ರತಿಭೆಗಳೇ ನಮ್ಮ ಮೇಲೇರುವ ಅಸ್ತ್ರಗಳು.
\r\n 

\r\n




Add Comment






Recent Posts

Latest Blogs



Kamakasturibana

YouTube