ತೇಜಸ್ವಿ ಕಲಿಸುವ ಪಾಠಗಳು

ತೇಜಸ್ವಿ ಕಲಿಸುವ ಪಾಠಗಳು

ಕನ್ನಡದ ಅತ್ಯಂತ ಮಹತ್ವದ ಲೇಖಕರ ಸಾಲಿನಲ್ಲಿರುವ ಕೆ.ಪಿ  ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ ಸೆಪ್ಟೆಂಬರ್ 8 ರಂದು. ಎಷ್ಟೋ ಸಲ ತೇಜಸ್ವಿಯವರ ಮೂಡಿಗೆರೆಯ ಮನೆಗೆ ಹೋಗಬೇಕೆಂದುಕೊಂಡರೂ ಹೋಗಲು ಆಗಿಯೇ ಇರಲಿಲ್ಲ. ತೇಜಸ್ವಿ (8 ಸೆಪ್ಟೆಂಬರ್ 1938- 5 ಏಪ್ರಿಲ್ 2007) ಹಾಗೂ ಅವರ ಸಂಗಾತಿ ರಾಜೇಶ್ವರಿ ಇಬ್ಬರೂ ತೀರಿಕೊಂಡ ಮೇಲೆ ಒಂದು ದಿನ ಒಬ್ಬನೇ ಅವರ ಮೂಡಿಗೆರೆಯ ಮನೆ ‘ನಿರುತ್ತರ’ಕ್ಕೆ ಹೋದರೆ, ಮನೆ ನಿಜಕ್ಕೂ ನಿರುತ್ತರವಾಗಿತ್ತು. ಎಸ್ಟೇಟ್ ರೈಟರ್ ಶಿವು ಮನೆಯ ಹೊರಗಿನ ಕಿಟಕಿಯಿಂದಲೇ ತೇಜಸ್ವಿ ಕೂತು ಬರೆಯುತ್ತಿದ್ದ ಜಾಗ ಹಾಗೂ ಪುಸ್ತಕಗಳನ್ನು ತೋರಿಸಿದರು. ತೇಜಸ್ವಿ ಬರವಣಿಗೆಯಲ್ಲಿ ಪ್ರಖ್ಯಾತವಾಗಿರುವ ಅವರ ಸ್ಕೂಟರ್ ಮೇಲೆ ಕೂತು ಫೋಟೋ ತೆಗೆಸಿಕೊಂಡು ವಿಚಿತ್ರ ಖುಷಿ ಪಡುತ್ತಾ ಹಾದಿಯಲ್ಲಿ ತೇಜಸ್ವಿ ಕನ್ನಡಕ್ಕೆ ಕೊಟ್ಟ ಕಾಣಿಕೆಗಳನ್ನು ನೆನೆಯತೊಡಗಿದೆ.

2007ನೆಯ ಇಸವಿಯಲ್ಲಿ ತೇಜಸ್ವಿ ತೀರಿಕೊಂಡಾಗ, ಚಂದ್ರಶೇಖರ ಐಜೂರ್ ಸಂಪಾದಿಸುತ್ತಿದ್ದ ‘ಕನ್ನಡ ಟೈಮ್ಸ್’ ವಾರಪತ್ರಿಕೆಗಾಗಿ ಮಂಜುನಾಥ ಲತಾ ಮುಂತಾದ ಗೆಳೆಯರೆಲ್ಲ ಸೇರಿ ‘ಕಾಡು ಹಕ್ಕಿಯ ಕಣ್ಮರೆ’ ಎಂಬ ವಿಶೇಷ ಸಂಚಿಕೆ ರೂಪಿಸಿದ್ದು ನೆನಪಾಗುತ್ತದೆ. ಹಾಗೆಯೇ, ನನ್ನ ಹದಿಹರೆಯದಲ್ಲಿ ತೇಜಸ್ವಿಯವರ ‘ನಿಗೂಢ ಮನುಷ್ಯರು’ ನೀಳ್ಗತೆ ಓದಿ ಹುಟ್ಟಿದ್ದ ವಿಸ್ಮಯ ಕೂಡ ಮೈದುಂಬುತ್ತದೆ. ಲೇಖಕನೊಬ್ಬ ಓದುಗರು ಮುಟ್ಟಿ ನೋಡುವಂತೆ ಪರಿಸರವನ್ನು ಚಿತ್ರಿಸಬೇಕೆಂದರೆ ಹೀಗೆ ಬರೆಯಬೇಕೆನ್ನಿಸಿತ್ತು. ಇದಾದ ನಂತರ ನನ್ನ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯ ಕುರಿತ ಪಿಎಚ್.ಡಿ. ತೌಲನಿಕ ಅಧ್ಯಯನದಲ್ಲಿ ತೇಜಸ್ವಿಯವರ ಕೃತಿಗಳನ್ನು ಕೂಡ ಒಳಗೊಳ್ಳಲು ಗುರುಗಳಾದ ಡಿ. ಆರ್. ನಾಗರಾಜ್ ಸೂಚಿಸಿದರು. ಆಗ ತೇಜಸ್ವಿಯವರ ಎಲ್ಲ ಕೃತಿಗಳನ್ನೂ ಓದತೊಡಗಿದಾಗ ಅವರ ಬರವಣಿಗೆಯ ಆಳ, ಅವರ ಕೃತಿಗಳು ಎತ್ತುವ ನಾಗರಿಕತೆಯ ಪ್ರಶ್ನೆಗಳು, ಲೋಹಿಯಾ ಸಮಾಜವಾದ ಲೇಖಕನೊಬ್ಬನ ಬರವಣಿಗೆಯನ್ನು ರೂಪಿಸುವ ರೀತಿಗಳು ಅರ್ಥವಾಗತೊಡಗಿದವು. ಸೋಷಲಿಸ್ಟನೊಬ್ಬನ ಕೈಯಲ್ಲಿ ಮೂಡುವ ಪಾತ್ರಗಳ  ಶಕ್ತಿ ಅರಿವಿಗೆ ಬರತೊಡಗಿಗಿತು. ಇವತ್ತಿಗೂ ಸರಳವಾಗಿ, ಆಳವಾಗಿ ಬರೆಯುವ ಕಲೆ ಕಲಿಯ ಬಯಸುವವರಿಗೆ ತೇಜಸ್ವಿ ಬರವಣಿಗೆ ಒಂದು ಉತ್ತಮ ಮಾದರಿಯಾಗಿ ನಮ್ಮದುರಿಗಿದೆ.

ಮಿಲಿನಿಯಂ ಸರಣಿಯ ಹಲವು ಪುಸ್ತಕಗಳ ಜೊತೆಗೆ ‘ಯಮಳ ಜೋಡಿ’ ಎಂಬ ನಾಟಕ, ‘ಕರ್ವಾಲೊ’, ‘ಚಿದಂಬರ ರಹಸ್ಯ’, ‘ಜುಗಾರಿ ಕ್ರಾಸ್’, ‘ಮಾಯಾಲೋಕ’, ‘ಕಾಡು ಮತ್ತು ಕ್ರೌರ್ಯ’ ಕಾದಂಬರಿಗಳು, ಹತ್ತಾರು ಅಪೂರ್ವ ಸಣ್ಣ ಕತೆಗಳು ‘ಅಣ್ಣನ ನೆನಪು’ ಎಂಬ ಅಪ್ಪ-ಮಗನ ಆತ್ಮೀಯ ಚರಿತ್ರೆ, ವೈಚಾರಿಕ ಬರಹಗಳು ಇವೆಲ್ಲವೂ ಇವತ್ತಿಗೂ ತೇಜಸ್ವಿಯವರನ್ನು ಜೀವಂತವಾಗಿಟ್ಟಿವೆ; ಹೊಸ ಹೊಸ ಓದುಗರನ್ನು, ಲೇಖಕ, ಲೇಕಕಿಯರನ್ನು ರೂಪಿಸುತ್ತಿವೆ. ತೇಜಸ್ವಿ ಬರಹಗಳನ್ನು ನಿರಂತರವಾಗಿ ಪ್ರಕಟಿಸಿ ಎಲ್ಲೆಡೆ ತಲುಪಿಸುತ್ತಿರುವ ಪುಸ್ತಕಲೋಕದ ಪ್ರೊ. ಬಿ.ಎನ್. ಶ್ರೀರಾಮ್, ರಾಘವೇಂದ್ರ, ಫೇಸ್ ಬುಕ್ ನಲ್ಲಿ ತೇಜಸ್ವಿಯವರನ್ನು ನಿರಂತರವಾಗಿ ಬಿತ್ತರಿಸುತ್ತಿರುವ ಶ್ರೀಧರ್ ಏಕಲವ್ಯ, ಸದಾ ತೇಜಸ್ವಿ ಹವಾ ಎಬ್ಬಿಸುತ್ತಿರುವ ಶಿವಾರೆಡ್ಡಿ ಈ ಎಲ್ಲ ಗೆಳೆಯರಿಗೆ ಕನ್ನಡನಾಡು ಕೃತಜ್ಞವಾಗಿರಬೇಕಾಗುತ್ತದೆ. ತೇಜಸ್ವಿ ತೀರಿಕೊಂಡಾಗ ‘ಕನ್ನಡ ಟೈಮ್ಸ್’ ಪತ್ರಿಕೆಯ ‘ಗಾಳಿ ಬೆಳಕು’ ಅಂಕಣದಲ್ಲಿ ಬರೆದ ಸುದೀರ್ಘ ಬರಹವೊಂದನ್ನು ಇಲ್ಲಿ ಹೊಸ ಓದುಗರಿಗಾಗಿ ಕೊಡುತ್ತಿರುವೆ.

ತೇಜಸ್ವಿ: ಕೊನೆಯ ಭೇಟಿ ಮತ್ತು ಮರುಭೇಟಿ

ಭಾಗ 1: ‘ಎಲ್ಲ ವೇಸ್ಟ್ ಆಯಿತಲ್ಲ!’

೨೦೦೬ರ ಸೆಪ್ಟೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಿನ ಒಂದು ಭಾನುವಾರದ ರಾತ್ರಿ ಎಂ.ಡಿ. ನಂಜುಂಡಸ್ವಾಮಿಯವರನ್ನು ಕುರಿತ ಪುಸ್ತಕದ ಬಿಡುಗಡೆಯ ಕಾರ್ಯಕ್ರಮದ ಖೆಡ್ಡಾಕ್ಕೆ ಆ ಆನೆಯನ್ನು ಕೆಡವಲೆಂದು ಹೊರಟಿದ್ದೆವು. ಬೆಂಗಳೂರಿನ ಎಚ್ ಎಸ್ ಆರ್ ಬಡಾವಣೆಯಲ್ಲಿ ತೇಜಸ್ವಿಯವರ ಮಗಳ ಮನೆ ಹುಡುಕುವ ಹೊತ್ತಿಗೆ ಹೆಚ್ಚೂ ಕಡಿಮೆ ಮೂಡಿಗೆರೆಗೇ ಹೋದಂತಾಗಿತ್ತು.

ಯಾವ ತಲೆನೋವು ತಂದಿದ್ದಾರೋ ಎಂದು ಹೆದರಿಕೊಂಡವರಂತೆ ತೇಜಸ್ವಿ ಮಗಳ ಮನೆಯೊಳಗಿನಿಂದ ಬಂದರು. ಪುಸ್ತಕ ಬಿಡುಗಡೆಗೆ ಕರೆಯಬಂದವರೆಂದು ಗೊತ್ತಾದ ತಕ್ಷಣ ಹೊರೆ ಇಳಿದವರಂತೆ 'ಸದ್ಯ! ಅದೇನು ತಂದುಬಿಟ್ಟಿದ್ದಾರೋ ಅಂತ ಹೆದರಿ ಹೋಗಿದ್ದೆನಲ್ಲ ಮಾರಾಯ' ಎಂದು ನಕ್ಕು ಆರಾಮಾಗತೊಡಗಿದರು.

ಅವರೇ ಮಾತಾಡಲೆಂದು ಎಲ್ಲರೂ ಸುಮ್ಮನಿದ್ದೆವು. 'ನೋಡ್ತಾ ನೋಡ್ತಾ ಎಲ್ಲ ಎಷ್ಟು ಟ್ರಿವಿಯಲ್ ಅನ್ನಿಸುತ್ತೆ' ಅಂದರು ತೇಜಸ್ವಿ. 'ಅದೇ ಮಾಯಾಲೋಕದ ವಸ್ತು' ಎಂದು ಒಂದು ಗಳಿಗೆ ಬಿಟ್ಟು ಹೇಳಿದರು. ನಾವೆಲ್ಲ ಅಪರಾಧಿಗಳಂತೆ ಕೂತಿದ್ದೆವು. ಕಾರಣ, ಆಗ ನಮ್ಮಲ್ಲಿ ಯಾರೂ ತೇಜಸ್ವಿಯವರ ಹೊಸ ಕಾದಂಬರಿ 'ಮಾಯಾಲೋಕ'ವನ್ನು ಓದಿರಲಿಲ್ಲ! ನಂತರ ಓದಿದಾಗ, ನಮ್ಮ ಸುತ್ತ ನಡೆಯುವ ಕ್ಷುಲ್ಲಕ ಎನ್ನಿಸುವ ಘಟನೆಗಳೇ ಚರಿತ್ರೆಯನ್ನು ನಿಯಂತ್ರಿಸುವ ರೀತಿಯನ್ನು ತೇಜಸ್ವಿ ಯಾವುದೇ ಅತಿಯಾದ ಸಿದ್ಧಾಂತದ ಭಂಗಿಯೂ ಭಾರವೂ ಇಲ್ಲದೆ ಈ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ ಎನಿಸತೊಡಗಿತು. ಅವತ್ತು ನಂಜುಂಡಸ್ವಾಮಿಯವರನ್ನು ಕುರಿತ ಪುಸ್ತಕದ ಪ್ರತಿಯನ್ನು ತೇಜಸ್ವಿಯವರ ಕೈಗಿಡುತ್ತಾ 'ನೀವು ಬರೆದ ಪುಟ್ಟ ಪ್ರತಿಕ್ರಿಯೆ ಈ ಪುಸ್ತಕದಲ್ಲಿದೆ' ಎಂದೆ. 'ಅಯ್ಯೋ ನಂಜುಂಡಸ್ವಾಮಿ ಬಗ್ಗೆ ಸಿಕ್ಕಾಪಟ್ಟೆ ಇದೆ ಬರೆಯೋದು, ಬರೆಯೋಕೆ ಟೈಮಿಲ್ಲ' ಎಂದರು ತೇಜಸ್ವಿ.

'ಯಾರಿಗಾದರೂ ಹೇಳಿ ಬರೆಸಬಹುದಲ್ವ ಸಾರ್?' ಎಂದರು ನನ್ನ ಜೊತೆಯಲ್ಲಿದ್ದ ಮಿತ್ರರು.

'ಅಯ್ಯೋ ಅಯ್ಯೋ! ಮಾತೇ ಬೇರೆ, ಬರೆಯೋದೇ ಬೇರೆ. ನೀವು ಆಡುವ ಮಾತಿನಲ್ಲಿ ಏನೇನೋ ಸೇರಿಕೊಂಡು, ನಿಮ್ಮ ಮುಖ, ಮೈ ಎಲ್ಲ ಸೇರಿಕೊಂಡು ಏನೇನೋ ಆಗಿಬಿಡುತ್ತದೆ. ಬರೆಯೋದು ತುಂಬಾ ಡಿಫರೆಂಟ್... ಅಲ್ಲಿ ಕಾಣೋ ಥರಾನೇ ಬೇರೆ' ಎಂದರು ತೇಜಸ್ವಿ.

'ಅದೆಲ್ಲ ಇರಲಿ, ನೀವು ನಂಜುಂಡಸ್ವಾಮಿಯವರ ಪುಸ್ತಕ ಬಿಡುಗಡೆ ಮಾಡಲೇಬೇಕು' ಎಂದು ನಮ್ಮ ಒತ್ತಾಯ ಶುರುವಾಯಿತು.

'ಮಾತಾಡೋದು ಅಂದ್ರೆ ಶಿಲುಬೆಗೇರಿಸಿದ ಥರ ಕಣ್ರಿ! ಮೂವತ್ತು ವರ್ಷ ಮಾತಾಡೀ ಆಡಿ... ಈ ನಂಜುಂಡಸ್ವಾಮಿ, ರಾಮದಾಸ್ ... ಐವತ್ತು ಜನ ಸಿಕ್ಕರೆ ಸಾಕು ಮಾತಾಡೀ ಆಡಿ...' ಎಂದ ತೇಜಸ್ವಿ ಚಣ ಮಾತು ನಿಲ್ಲಿಸಿದರು. ಮತ್ತೆ '...ಯು ಸೀ, ನಿಮ್ಮ ಥರದವರ ಜೊತೆ ಒಂದು ವೇವ್ ಲೆಂಗ್ತ್ ಇದ್ದರೆ ಎಷ್ಟಾದರೂ ಮಾತಾಡಬಹುದು. ಆದ್ರೆ ಈ ಸಭೇ ಅಂದ್ರೆ ಬಹಳ ಕಷ್ಟ ಕಣ್ರೀ. ಈಗ ನೋಡಿ, ನಂಜುಂಡಸ್ವಾಮಿ ಮೇಲೆ ನಾನು ಮಾತಾಡೋಕೆ ಶುರು ಮಾಡಿದರೆ ಅವರ ಬಗೆಗಿನ ತಮಾಷೆ, ಅವರ ದೌರ್ಬಲ್ಯ ಎಲ್ಲ ಹೇಳಬೇಕಾಗುತ್ತೆ. ಆದರೆ ಅಂಥ ಸಭೆಗಳಲ್ಲಿ ಹೀರೋವರ್ಶಿಪ್ ಮಾಡೋ ಜನ ಇರ್ತಾರೆ. ನಾನು ಇದನ್ನೆಲ್ಲಾ ನೋಡಿದೀನಿ ಕಣ್ರಿ. ಒಬ್ಬ ರೈಟರ್ ಆಗಿರೋದ್ರಿಂದ ನನಗೆ ಎಲ್ಲ ಆಯಾಮಗಳೂ ಹೊಳೆದು ಬಿಟ್ಟಿರುತ್ತೆ. ನನಗೆ ಯಾರನ್ನೂ ಹೀರೋವರ್ಶಿಪ್ ಮಾಡೋಕಾಗಲ್ಲ. ಆದ್ರೆ ಈ ಥರ ವಿಮರ್ಶೆ ಮಾಡ್ತಾ ನಂಜುಂಡಸ್ವಾಮಿ ಮೇಲೆ ಮಾತಾಡೋಕೆ ಹೋದ್ರೆ ಅಲ್ಲಿ ಬಂದಿರೋ ಜನ ಸಿಟ್ಟಾಗ್ತಾರೆ…ಈಗ ನೋಡಿ, ಆ ನಂಜುಂಡಸ್ವಾಮಿ ಕಡಿದಾಳ್ ಶಾಮಣ್ಣನನ್ನು ರೈತಸಂಘದಿಂದ ತೆಗೆದು ಹಾಕಿದರು. ಆಗ ಶಾಮಣ್ಣ 'ಅಲ್ರೀ, ನನ್ನ ಹೆಂಗೆ ರೈತಸಂಘದಿಂದ ತೆಗೆಯೋಕೆ ಸಾಧ್ಯ ಅಂತ ನಗೋರು...' ಎಂದು ಇಡೀ ಮೈತುಂಬ ನಕ್ಕರು ತೇಜಸ್ವಿ. ಅವರು ನಕ್ಕಾಗ ಸಿನಿಮಾಗಳಲ್ಲಿ ಕಾಣುವ ದೊಡ್ಡ ಗಾತ್ರದ ಹಕ್ಕಿಯೊಂದು ತನ್ನ ಮೈ ರೆಕ್ಕೆಗಳನ್ನು ಕುಣಿಸುತ್ತಾ ಕುಣಿಸುತ್ತಾ ನಕ್ಕಂತೆ ಕಾಣುತ್ತಿತ್ತು.

ಹಾಗೆ ನಗುತ್ತಾ ಮಾತಾಡಲಾರಂಭಿಸಿದ ಮೇಲೆ ತೇಜಸ್ವಿಯವರ ಲಹರಿ ನಿರಾಳವಾಗಿ ಹರಿಯತೊಡಗಿತು... 'ಒಂದ್ಸಲ ನಂಜುಂಡಸ್ವಾಮಿ, ನಾನು, ರಾಮದಾಸ್ ನನ್ನ ಹಳೇ ಜೀಪಲ್ಲಿ ಹೋಗ್ತಾ ಇದ್ವಿ. ನನ್ನ ಹತ್ರ ಜೀಪಿನ ಒಂದು ಡಾಕ್ಯುಮೆಂಟೂ ಇಲ್ಲ! ದಾರೀಲಿ ಯಾವನಾದ್ರೂ ಹಿಡಿದರೆ ಏನು ಗತಿ ಅಂತ ನಾನು ಯೋಚನೆ ಮಾಡ್ತಿದ್ರೆ... ಆ ಪೊಲೀಸ್ನೋರು ದಾರೀಲಿ ಕೈ ಹಾಕೇಬಿಟ್ರು. ಗಣೇಶನ ಉತ್ಸವಕ್ಕೆ ಐದು ರೂಪಾಯಿ ಕೊಡಿ ಅಂತ ಟಿಕೆಟ್ ಪುಸ್ತಕ ಹಿಡಿದರು. ಸರಿ, ಈ ರಾಮದಾಸ್ ಜೀಪಿಂದ ಇಳಿದೇಬಿಟ್ಟರು. 'ಏನ್ರೀ ಇದು, ಈ ಸೆಕ್ಯುಲರ್ ದೇಶದಲ್ಲಿ ಪೊಲೀಸ್ ಡಿಪಾರ್ಟ್‌ಮೆಂಟಿರೋದು ಇಂಥದಕ್ಕೇನ್ರಿ? ಒಂದು ಧರ್ಮದ ರಶೀತಿ ಮಾರೋಕ್ಕೇನ್ರಿ, ಆಂ?' ಅಂತ ಆ ಪೊಲೀಸರ ಮೇಲೆ ಯುದ್ಧ ಶುರುಮಾಡೇಬಿಟ್ಟರು. ನಂಜುಂಡಸ್ವಾಮೀನೂ ಅದೇ ಥರ ಮಾತಾಡೋಕೆ ಹೊರಟರು. ನನಗೆ ಭಯ- ನನ್ನ ಹತ್ರ ಗಾಡಿ ಡಾಕ್ಯುಮೆಂಟ್ಸು ಒಂದೂ ಇಲ್ಲವಲ್ಲಪ್ಪ ಅಂತ! ಇಂಥೋರು ಕಣ್ರೀ ಇವರು. ಇವೆಲ್ಲ ಬಿಟ್ಟು ನಾನು ಮಾತಾಡೋಕಾಗಲ್ಲ. ನಂಜುಂಡಸ್ವಾಮಿಯ ಡಿಕ್ಟೇಟರ್‌ಶಿಪ್ಪನ್ನೂ ಮಾತಾಡಬೇಕಾಗುತ್ತೆ...'

ನಡುವೆ ಬಾಯಿ ಹಾಕಿದ ನಾನು, 'ನಂಜುಂಡಸ್ವಾಮಿ ಹಾಗೆ ಬದ್ಧವಾಗಿರದಿದ್ದರೆ, ಕಟುವಾಗಿರದಿದ್ದರೆ ಅಷ್ಟು ದೊಡ್ಡ ಸಂಘಟನೆಯನ್ನು ಕಟ್ಟೋಕೆ ಆಗ್ತಿರಲಿಲ್ಲ. ನೋಡಿ, ನಿಮಗಾಗಲೀ ಲಂಕೇಶರಿಗಾಗಲೀ ಹಾಗೆ ಒಂದೇ ದಿಕ್ಕಿನಲ್ಲಿ ಯಾವ ಸಂಘಟನೆಯನ್ನೂ ಕಟ್ಟೋಕಾಗಲಿಲ್ಲ' ಎಂದೆ.

'ಯೂ ಆರ್ ರೈಟ್ ' ಎಂದು ಸುಮ್ಮನಾದ ತೇಜಸ್ವಿ ನಂತರ, 'ಏನ್ರಿ ಇಷ್ಟು ವರ್ಷ ಹೀಗೆ ನಾವು ಸುಮ್ಮನೇ ಮಾತಾಡಿ ಎಲ್ಲ ವೇಸ್ಟ್ ಆಯ್ತಲ್ರೀ' ಎಂದರು.

'ನೀವು ಹಾಗೆ ಇವೆಲ್ಲ ಸಾಮಾಜಿಕ ಚಳವಳಿಗಳ ಜೊತೆಗಿರದಿದ್ದರೆ ಚಿತ್ತಾಲರಂಥ ಲೇಖಕರ ಥರ ಕೊರಕೊಂಡು ಕೂತಿರ್ತಾ ಇದ್ರಿ, ಅಷ್ಟೆ. ಇದೆಲ್ಲಾ ಮಾಡಿದ್ದಕ್ಕೇ ಇಷ್ಟು ಜೀವಂತವಾಗಿ, ವೈಬ್ರೆಂಟ್ ಆಗಿರೋದು. ನಾನು ಯೂನಿವರ್ಸಿಟಿಯಲ್ಲಿ ನಿಮ್ಮ 'ಚಿದಂಬರ ರಹಸ್ಯ' ಹಾಗೂ ಅಂಬೇಡ್ಕರ್ ಅವರ 'ಜಾತಿ ವಿನಾಶ' - ಈ ಎರಡೂ ಪುಸ್ತಕಗಳನ್ನು ತೌಲನಿಕವಾಗಿ ಪಾಠ ಹೇಳ್ತೀನಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಪುಸ್ತಕಗಳಿಗೆ ಎಷ್ಟು ಚೆನ್ನಾಗಿ ಮಿಡೀತಾರೆ ಗೊತ್ತಾ?' ಎಂದೆ.

'ಅದು ಸರಿ, ನಾನು ಹಾಗೆಲ್ಲಾ ಓಡಾಡಿದ್ದರಿಂದ ನನ್ನ ಸೈದ್ಧಾಂತಿಕ ನಿಲುವುಗಳಿಗೆ ಸಹಾಯ ಆಗಿದೆ... ನಿಜ.'

'ಅಷ್ಟೇ ಅಲ್ಲ. ನೀವು, ನಂಜುಂಡಸ್ವಾಮಿ ಸೇರಿ ಮಾಡಿದ ಲೋಹಿಯಾ ರೆಡ್ ಬುಕ್ ಎಷ್ಟೊಂದು ಎಫೆಕ್ಟಿವ್ ಆಗಿದೆ ಗೊತ್ತಾ?'

'ಅಯ್ಯೋ ಅದರಲ್ಲಿ ಭಾರಿ ತಪ್ಪುಗಳಿದಾವೆ ಕಣ್ರಿ' ಎಂದು ರೆಡ್ ಬುಕ್ ಅನುವಾದವನ್ನು ನೆನೆಸಿಕೊಂಡಾಗ, ತೇಜಸ್ವಿಯವರ ಆಲೋಚನೆ ಅನುವಾದದ ಕಡೆ ಹೊರಳಿತು. 'ನೋಡಿ, 'ಕರ್ವಾಲೊ' ಕಾದಂಬರಿಯಲ್ಲಿ ಮಂದಣ್ಣ 'ಅಸಡಾ ಬಸಡಾ ಕಾಲು ಹಾಕುತ್ತ ಬರುತ್ತಿದ್ದ' ಅಂತ ಒಂದು ಸಾಲು ಬರುತ್ತೆ. ಅದನ್ನು ಇಂಗ್ಲಿಷ್‌ಗೆ ಅನುವಾದ ಮಾಡಬೇಕಾದರೆ ಎಷ್ಟು ಸರ್ಕಸ್ ಮಾಡಿದರು ಅಂದರೆ... ಅವೆಲ್ಲ ಇಂಗ್ಲಿಷನಲ್ಲಿ ಬರಲ್ಲ. ಆ ಉಕ್ತಿಭಂಗಿ ಬೇರೆ ಭಾಷೆಯಲ್ಲಿ ಬರೋದೇ ಇಲ್ಲ ಕಣ್ರೀ' ಎಂದರು ತೇಜಸ್ವಿ. ಅವರು 'ಉಕ್ತಿಭಂಗಿ' ಎಂದಾಗ ಏರಿದ ಹುಬ್ಬು 

ಹಾಗೂ ಮುಖದಲ್ಲಿ ಮೂಡಿದ ಬೆರಗು ನನ್ನ ಕಣ್ಣಲ್ಲಿ ಹಾಗೇ ಕುಂತಿದೆ.

ಇಷ್ಟೆಲ್ಲ ಬೇರೆ ಬೇರೆ ವಿಷಯಗಳ ಬಗ್ಗೆ ನಾವು ಮಾತಾಡುತ್ತಿದ್ದರೂ ನಮ್ಮ ಹಿಡನ್ ಅಜೆಂಡಾ ಮಾತ್ರ ಬಿಟ್ಟಿರಲಿಲ್ಲ! ಮತ್ತೆ ಪುಸ್ತಕ ಬಿಡುಗಡೆಯ ರಾಗ ಎಳೆಯತೊಡಗಿದೆವು. ಆಗ ತೇಜಸ್ವಿ ತಮ್ಮ ಅನಾರೋಗ್ಯದ ಬಗ್ಗೆ ಹೇಳತೊಡಗಿದರು. 'ನಿಜವಾಗ್ಲೂ ಸೀರಿಯಸ್ ಕಣ್ರೀ, ಡಾಕ್ಟರು ಎರಡು ತಿಂಗಳು ಅಡ್ಡಾಡಬೇಡ ಅಂತ ಹೇಳಿದ್ದಾರೆ...'

'ಏನಾಗಿತ್ತು ಸಾರ್ ...'

'ಅಯ್ಯೋ ಅದೊಂದು ಕತೆ ಕಣ್ರೀ... ಒಂದು ದಿನ ಸುಮ್ಮನೆ ಕೂತಿದ್ದೆ. ಯಾರೋ ಟಿಬೆಟಿಯನ್ ಮೆಡಿಸಿನ್ ಅಂತ ಕೂಗಿಕೊಂಡು ಹೋಗ್ತಾ ಇದ್ದ. ನಾನು ನೋಡೋಣ ಅಂತ ಕರೆಸಿ ಅದೇನೋ ಮಸಾಜ್ ಮಾಡಿಸಿಕೊಂಡೆ. ಶುರುವಾಯ್ತು ನೋಡಿ! ನನ್ನ ಕಾಲು ಆನೇ ಕಾಲಿನ ಥರ ಆಗಿ ಹೋಯ್ತು. ಅಮೇಲೆ ಅದನ್ನೆಲ್ಲಾ ಸರಿ ಮಾಡೋಕೆ ಮೈಸೂರಿನ ಆಸ್ಪತ್ರೆ ಸೇರಿದೆ. ಅದೆಲ್ಲಾ ಆದ ಮೇಲೆ ಲಂಗ್ಸ್‌ನಲ್ಲೆಲ್ಲ ನೀರು ತುಂಬಿಕೊಂಡಿದೆ ಅನ್ನೋಕೆ ಶುರು ಮಾಡಿದರು. ಬ್ಯಾಡಾ ಕಣ್ರಿ, ಎರಡು ಲಕ್ಷದ ಮೇಲೆ ಖರ್ಚಾಗಿ ಹೋಯ್ತು...'

ತೇಜಸ್ವಿ ತಮ್ಮ ದೇಹದ ಇಂಥ ಗಂಭೀರ ಸ್ಥಿತಿಯನ್ನು ಕೂಡ, ನಡುನಡುವೆ ನಗುತ್ತಾ, ತಮ್ಮ ಕಾದಂಬರಿಯ ಭಾಗದ ಹಾಗೆ ವರ್ಣಿಸುತ್ತಿದ್ದರು. ಎರಡು ತಿಂಗಳ ಕೆಳಗೆ ಈ ಪ್ರಸಂಗ ಕುರಿತು ಗೆಳೆಯರೊಡನೆ ಮಾತಾಡಿದ ಕಲಾವಿದ ಕೆ.ಟಿ. ಶಿವಪ್ರಸಾದ್, 'ಆ ತೇಜಸ್ವಿ-'ಮಾಯಾಲೋಕ' ಕಾದಂಬರಿಯ ಕ್ಯಾರೆಕ್ಟರ್ ಥರ ಆಗಿದಾರೆ ಕಣ್ರಿ' ಎಂದಿದ್ದು ನೆನಪಾಗಿ ನಗು ಬರತೊಡಗಿತು.

ರಾತ್ರಿ ಹತ್ತೂವರೆಯಾದರೂ ನಾವಿನ್ನೂ ಮೇಲೇಳುವ ಸೂಚನೆಯೇ ಕಾಣದಿದ್ದುದರಿಂದ ತೇಜಸ್ವಿಯವರೇ ಮೇಲೆದ್ದು 'ನೀವಿನ್ನು ತೊಲಗ್ರಯ್ಯಾ' ಎಂದರೂ ನಮ್ಮೊಡನೆ ಮಾತಾಡುವ ಪ್ರೀತಿ, ಕಾತರ ಇನ್ನೂ ಅವರಲ್ಲಿತ್ತು. ನಮ್ಮ ಸುತ್ತಲಿನ ದುಸ್ಥಿತಿ ಕಂಡು ಹುಟ್ಟಿದ ವ್ಯಗ್ರತೆ ಅವರ ಮಾತಿನಲ್ಲಿತ್ತು. 'ಅದೆಲ್ಲಾ ಬೇಡ, ಈಗ ನಾವೊಂದು ಪೇಪರ್ ಮಾಡ್ತೀವಿ, ಎಡಿಟರ್ ಆಗಿಬಿಡಿ' ಎಂದೆ. 'ನಿಮ್ಮ ಸಹವಾಸ ಬ್ಯಾಡ್ರಯ್ಯಾ' ಎಂದು ಕೈ ಎತ್ತಿದರು.

ಆದರೂ ಪುಸ್ತಕ ಬಿಡುಗಡೆಯ ನಮ್ಮ ಬೇಡಿಕೆ ಬಿಟ್ಟುಕೊಡಲು ನಾವು ತಯಾರಿರಲಿಲ್ಲ! ಅವರು ಖಾಯಿಲೆಯ ಬಗ್ಗೆ ಹೇಳುತ್ತಿದ್ದಾಗಲೆಲ್ಲ ನಾವು, ತ್ಚು... ತ್ಚು... ಛೆ... ಥೋ... ಎಂದು ಔಪಚಾರಿಕ ಉದ್ಗಾರ ಹೊರಡಿಸುತ್ತಿದ್ದೆವು! ಇದನ್ನು ಗಮನಿಸಿದ ತೇಜಸ್ವಿ, 'ಅಲ್ರಯ್ಯಾ, ಆವಾಗಿಂದ ನಾನು ಹೇಳಿದ್ದನ್ನು ಕೇಳಿ ‘ತ್ಚು ತ್ಚು’ ಅಂತೀದೀರೇ ಹೊರತು, ನೀವು ಈ ಕಾರ್ಯ ಕ್ರಮಕ್ಕೆ ಬರೋದು ಬ್ಯಾಡ ಬಿಡಿ ಅಂತ ಒಂದು ಮಾತು ಹೇಳ್ತಿಲ್ಲವಲ್ರಯ್ಯಾ, ಕಳ್ರು!' ಎಂದು ನಕ್ಕರು.

ಕೊನೆಗೆ ಕಾರಿಗೊರಗಿ ನಿಂತು, 'ಇಷ್ಟೆಲ್ಲಾ ವರ್ಷ ಮಾತಾಡಿ, ಒಂದು ನೂರು ಜನರನ್ನಾದರೂ ವರದಕ್ಷಿಣೆ ತಗೊಳ್ಳದೆ ಮದುವೆ ಆಗೋ ಥರ ಮಾಡಿದೀವೇನ್ರಿ?' ಎಂದರು ತೇಜಸ್ವಿ.

ನಾನು 'ಖಂಡಿತ' ಎಂದೆ, ನಂಬಿಕೆಯಿಂದ.

ಆದರೆ, ಎಲ್ಲವೂ ವೇಸ್ಟ್ ಆಯಿತೇನೋ ಎಂಬ ದುಗುಡ ಆಳದಿಂದ ಒಸರುತ್ತಿದ್ದ ತೇಜಸ್ವಿಯವರಿಗೆ ನಮ್ಮಂಥವರ ಸರಳ ಆಶಾವಾದಿ ನಂಬಿಕೆಗಳು ಸಮಾಧಾನ ತರುವಂತೆ ಕಾಣಲಿಲ್ಲ. 'ಎಲ್ಲ ವೇಸ್ಟ್ ಆಯಿತಲ್ಲ' ಎಂಬ ದಿಗ್ಭ್ರಮೆ ಅವರ ಮುಖ, ಮನಸ್ಸು ಹಾಗೂ ಪ್ರಜ್ಞೆಯಿಂದ ಅಷ್ಟು ಸುಲಭವಾಗಿ ಮಾಯವಾಗುವಂತಿರಲಿಲ್ಲ.

 

ಭಾಗ: 2

 ‘ಎಲ್ಲ ವೇಸ್ಟ್ ಆಯಿತೆ?’: ತೇಜಸ್ವಿ ಸಾಹಿತ್ಯಕ್ಕೆ ಮರು ಭೇಟಿ

ಆ ನಮ್ಮ ಕೊನೆಯ ಭೇಟಿಯಲ್ಲಿ ‘ಎಲ್ಲ ವೇಸ್ಟ್ ಆಯಿತಲ್ಲ!’ ಎಂದು ತೇಜಸ್ವಿ ಉದ್ಗಾರ ತೆಗೆದದ್ದು ಕೇವಲ ಆತ್ಮಾವಲೋಕನದ ವೈಯಕ್ತಿಕ ಪ್ರಶ್ನೆಯಾಗಿರಲಿಲ್ಲ. ಅದು ತಮ್ಮ ಕಾಲದ ಅನೇಕ ಬಗೆಯ ಸಾಮಾಜಿಕ ಚಳುವಳಿಗಾರರ ಪ್ರಯತ್ನಗಳನ್ನು ಕುರಿತ ಸಿನಿಕ ಪ್ರತಿಕ್ರಿಯೆಯೂ ಆಗಿರಲಿಲ್ಲ. ಯಾಕೆಂದರೆ, ಇಂಡಿಯಾದ ಸಮಾಜದಲ್ಲೇ ಇಂಥದೊಂದು ನಿರಂತರ ವೇಸ್ಟ್ ಆಗುತ್ತಿರುವುದನ್ನು ತೇಜಸ್ವಿ ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದರು. ಮೂವತ್ತೈದು ವರ್ಷಗಳ ಕೆಳಗೆ ಮೂಡಿಗೆರೆಗೆ ಹೋಗಿ ಭಾರತದ ಗ್ರಾಮಗಳನ್ನು ಹತ್ತಿರದಿಂದ ನೋಡತೊಡಗಿದ ತೇಜಸ್ವಿ 'ಹೆಬ್ಬೆಟ್ಟೊತ್ತುವ ಪಶುಸದೃಶ ಸಮುದಾಯ'ವೊಂದು ಅಲ್ಲಿ ಸೃಷ್ಟಿಯಾಗುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದರು. ಭಾರತದ ಅನೇಕ ಬರಹಗಾರರ ಹಾಗೆ ತೇಜಸ್ವಿ ಹಳ್ಳಿಯಿಂದ ನಗರಕ್ಕೆ ಬಂದು, ಆನಂತರ ಹಳ್ಳಿಯನ್ನು ನೆನಪಿನಿಂದ ಅಗೆದು ಬರೆದವರಲ್ಲ; ಬದಲಿಗೆ ಹಳ್ಳಿ-ನಗರಗಳು ಬೆರೆಯುವ ಊರೊಂದರಲ್ಲಿ ನಿಂತು ಭಾರತದ ಚಲನೆ ಹಾಗೂ ಸ್ಥಗಿತತೆಯನ್ನು ನೋಡಿದವರು. ಹಾಗೆ ನೋಡನೋಡುತ್ತಾ, ಭಾರತದಲ್ಲಿ ಆಗುತ್ತಿರುವ ಮಾನವ ಶಕ್ತಿಯ ಅಗಾಧ ವ್ಯರ್ಥತೆ ಅವರಿಗೆ ಗೋಚರವಾಗತೊಡಗಿತು. ಅದನ್ನು ಇನ್ನಷ್ಟು ವಿವರವಾಗಿ ನೋಡಬಹುದು.

ತೇಜಸ್ವಿಯವರ 'ಅವನತಿ' ಕತೆಯಲ್ಲೇ ಈ ಗ್ರಹಿಕೆ ಸ್ಪಷ್ಟವಾಗಿತ್ತು. ಅದ್ಭುತ ಶಿಲ್ಪಿ ಸೂರಾಚಾರಿಯ ಪ್ರತಿಭೆ ಹಳ್ಳಿಯಲ್ಲಿ ನಾಶವಾಗತೊಡಗಿದೆ. ಅಂಥ ಸೃಜನಶೀಲ ಕಲಾವಿದ ನನ್ನು ಊರಿನ ಜನ ಮಾರಿ ಮಸಣಿಗಳ ಗೊಂಬೆ ಮಾಡುವ ಮಟ್ಟಕ್ಕೆ ಇಳಿಸಿದ್ದಾರೆ. ಗೌರಿಯ ಅಸಾಮಾನ್ಯ ಸೌಂದರ್ಯ ಅಲ್ಲಿ ಕಮರಿ ಹೋಗಿದೆ. ಕುಬೇರ ಎಂಬ ವೈದ್ಯ ಹಳ್ಳಿಗಳ ಕಣ್ಣಲ್ಲಿ ಪಂಜುರ್ಲಿಯೋ ಜಟ್ಟಿಗನೋ ಆಗಿ ಕೊನೆಯಾಗುತ್ತಿದ್ದಾನೆ. ಗ್ರಾಮ ಎಂದರೆ ಮುಗ್ಧತೆ ಮಾತ್ರ ಅಲ್ಲ; ಅಜ್ಞಾನ ಕೂಡ ಎಂಬ ಕಟುಸತ್ಯ ಕುವೆಂಪುವಿನಿಂದ ಹಿಡಿದು ಅನೇಕ ಕನ್ನಡ ಲೇಖಕರಲ್ಲಿ ಕಾಣಿಸಿಕೊಂಡ ಹಾಗೆ ತೇಜಸ್ವಿಯವರಲ್ಲೂ ಕಾಣಿಸಿಕೊಂಡಿತು. 'ಕುಬಿ ಮತ್ತು ಇಯಾಲ' ಕತೆಯಲ್ಲಿ ಪುಟ್ಟ ಹುಡುಗಿ ಇಯಾಲಳ ಮೇಲೆ ನಡೆದ ಅತ್ಯಾಚಾರ ಡಾಕ್ಟರ್ ಕುಬೇರನನ್ನು ಬೆಚ್ಚಿ ಬೀಳಿಸುತ್ತದೆ. ಮೈನೆರೆಯದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದರೆ ತನ್ನ ಗುಹ್ಯರೋಗ ವಾಸಿಯಾಗುತ್ತದೆ ಎಂದು ನಂಬಿದ ಲೋರಿಯ ಮೂಢನಂಬಿಕೆಗೆ ಇಯಾಲ ಬಲಿಯಾಗಿದ್ದಾಳೆ. ಹಳ್ಳಿಯ ಡಾಕ್ಟರಾಗಿ, ಜನರಿಗೆ ಉಪಯುಕ್ತವಾಗಬೇಕೆಂದು ಹೊರಟಿರುವ ಕುಬಿಯ ವೈದ್ಯಗಾರಿಕೆ ಹಾಗೂ ಆಯುಷ್ಯ ಗ್ರಾಮದ ಕತ್ತಲಿನ ವಿರುದ್ಧ ಹೋರಾಡುವುದರಲ್ಲಿ ಕೂಡ ಕಳೆದುಹೋಗುವ ಅಪಾಯ ಎದುರಾಗಿದೆ.

ಅತ್ತ ಮಂದಣ್ಣನಂಥ ಹುಟ್ಟಾ ನ್ಯಾಚುರಲಿಸ್ಟ್ ಹಾಗೂ ಸಹಜ ವಿಜ್ಞಾನಿ ಊರವರ ಕಣ್ಣಿಗೆ ಹುಳ ಹುಪ್ಪಟೆ ಹಿಡಿಯುವ ಕಿರಾತನಂತೆ ಮಾತ್ರ ಕಾಣುತ್ತಾನೆ. ಮಂದಣ್ಣನ ಸಹಜ ಪ್ರತಿಭೆ ಅಲ್ಲಿ ವ್ಯರ್ಥವಾಗಲಾರಂಭಿಸಿದೆ. ಅಕಸ್ಮಾತ್ ಕರ್ವಾಲೊಗೆ ಸಿಕ್ಕ ಅವನ ಪ್ರತಿಭೆ ಅರಳಿದ್ದು ಕೂಡ ಒಂದು ಆಕಸ್ಮಿಕ. ಇಂಡಿಯಾದ ಗ್ರಾಮೀಣ ಪ್ರತಿಭೆಗಳ ಸಾಧ್ಯತೆಯನ್ನು ಮರಳಿ ಹುಡುಕಿಕೊಳ್ಳುವ ಕತೆಯನ್ನು ಹಾರುವ ಓತಿಯ ಹುಡುಕಾಟದ ಪಯಣದ ಮೂಲಕ ಹೇಳಿದ 'ಕರ್ವಾಲೊ' ಕಾದಂಬರಿ ಕನ್ನಡ ಸಾಹಿತ್ಯದ ಅತ್ಯಂತ ಒರಿಜಿನಲ್ ರೂಪಕಗಳಲ್ಲಿ ಒಂದು ಎನ್ನಿಸುವುದಕ್ಕೆ ಇನ್ನೂ ಒಂದು ಕಾರಣವಿದೆ. ಅದೇನೆಂದರೆ, ವಿಜ್ಞಾನಿಯ ಕಣ್ಣು ಮಂದಣ್ಣನನ್ನು ಗುರುತಿಸುವುದಷ್ಟೇ ಈ ಕಾದಂಬರಿಯ ಮುಖ್ಯ ಒಳನೋಟವಲ್ಲ; ಅದರ ಜೊತೆಗೆ, ವಿಜ್ಞಾನಕ್ಕೂ ಒಂದು ಹೊಸ ದಿಕ್ಕನ್ನು ಕಾಣಿಸಲು ಈ ಕಾದಂಬರಿ ಯತ್ನಿಸುತ್ತದೆ ಎಂಬುದು ಕೂಡ ಬಹುಮುಖ್ಯ ಅಂಶ.

ಅಂದರೆ, ಭಾರತದಂಥ ದೇಶದಲ್ಲಿ ವಿಜ್ಞಾನವು ಗ್ರಾಮಗಳ ಸಹಜ ಪ್ರತಿಭೆಗಳ ಜೊತೆ ಅರ್ಥಪೂರ್ಣ ಸಂಬಂಧ ಏರ್ಪಡಿಸಿಕೊಳ್ಳುವುದರ ಮೂಲಕ ಮಾತ್ರ ಹೊಸ ಸಂಶೋಧನೆ ಯತ್ತ ಚಲಿಸಬಹುದು ಎಂಬ ಮಹತ್ವದ ಸತ್ಯವನ್ನು ಈ ಕಾದಂಬರಿ ಕಂಡುಕೊಳ್ಳುತ್ತದೆ. ಹಾರುವ ಓತಿಯನ್ನು ಪತ್ತೆ ಹಚ್ಚಲು ಬಯಸುವ ಕರ್ವಾಲೊ ಕೂಡ ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸಲು ಹೊರಟವನೇ; ಆದರೂ ವಿಜ್ಞಾನದ ಮೂಲ ಪ್ರವೃತ್ತಿಯಾದ ಮುಕ್ತ ಕುತೂಹಲದ ಕಣ್ಣನ್ನು ಕರ್ವಾಲೊ ಇನ್ನೂ ಉಳಿಸಿಕೊಂಡಿದ್ದಾನೆ. ಆದ್ದರಿಂದಲೇ ಆ ಕಣ್ಣಿಗೆ ಮಂದಣ್ಣ, ಹಾವುಗೊಲ್ಲರ ಯಂಕ್ಟ, ಬಿರಿಯಾನಿ ಕರಿಯಪ್ಪ ಎಲ್ಲರ ಸಾಧ್ಯತೆಯೂ ಕಾಣ ತೊಡಗಿದೆ. ಕರ್ವಾಲೊ ಕಣ್ಣುಗಳು ಜಾತ್ಯತೀತವಾಗಿ ನೋಡುವುದರಿಂದಲೂ ಈ ಸಾಧ್ಯತೆ ಅವನಿಗೆ ಕಂಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್‌ನಂಥ ನಮ್ಮ ವಿಜ್ಞಾನ ಸಂಸ್ಥೆಗಳು ಒಬ್ಬ ಮಂದಣ್ಣನನ್ನು ಎಂದಾದರೂ ಒಳಗೆ ಬಿಟ್ಟುಕೊಳ್ಳುತ್ತವೆಯೇ ಎಂಬ ಪ್ರಶ್ನೆಯನ್ನು ಎದುರಿ ಗಿಟ್ಟುಕೊಂಡು ನೋಡಿದಾಗ, ಕರ್ವಾಲೊ ಮಾರ್ಗದ ಮಹತ್ವ ನಮಗೆ ಇನ್ನಷ್ಟು ಚೆನ್ನಾಗಿ ಹೊಳೆಯುತ್ತದೆ. ಪಶ್ಚಿಮದ ಆಧುನಿಕ ವಿಜ್ಞಾನ ಹಾಗೂ ದೇಶೀ ಪ್ರತಿಭೆಗಳೆರಡೂ ಬೆರೆಯುವ ಬಿಂದುವೊಂದನ್ನು 'ಕರ್ವಾಲೊ' ಕಾದಂಬರಿ ಹುಡುಕಿ ತೋರಿಸಲೆತ್ನಿಸುತ್ತದೆ.

ಈ ಹುಡುಕಾಟ ಪ್ರತಿಭೆಯ ವ್ಯರ್ಥತೆಯನ್ನು ತಡೆಯುವ ಮುಖ್ಯವಾದ ಮಾರ್ಗ ತಾನೆ? ಭೋರ್ಗರೆದು ಧುಮುಕುತ್ತಿದ್ದ ಜೋಗದ ಜಲಪಾತವನ್ನು ಕಂಡು 'ವಾಟ್ ಎ ಕಲೋಸಲ್ ವೇಸ್ಟ್ !' ಎಂದು ಸರ್ ಎಂ.ವಿಶ್ವೇಶ್ವರಯ್ಯನವರು ಉದ್ಗಾರ ತೆಗೆದರು. ಆ ವೇಸ್ಟ್ ತಡೆಗಟ್ಟಿ ವಿದ್ಯುತ್ತಿನ ಬೆಳಕು ಕೊಟ್ಟ ವಿಶ್ವೇಶ್ವರಯ್ಯನವರ ಕೊಡುಗೆಯ ಬಗ್ಗೆ ಎಲ್ಲರಿಗೂ ಕೃತಜ್ಞತೆ ಇದೆ. ದುರದೃಷ್ಟವಶಾತ್ ಅಂಥ ಪ್ರತಿಭಾವಂತ ವಿಜ್ಞಾನಿಯ ಕಣ್ಣಿಗೆ ಕೆಳಜಾತಿಗಳ ಪ್ರತಿಭೆಯನ್ನು ಗುರುತಿಸಬೇಕಾದ ಸಾಮಾಜಿಕ ಅಗತ್ಯ ಮಾತ್ರ ಕಾಣಲಿಲ್ಲ. ಅವರು ಮಹಾರಾಜರು ಇಟ್ಟ ಮೀಸಲಾತಿ ಪ್ರಸ್ತಾವವನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೋದರು. ಆದರೆ ಅವತ್ತು ವಿಶ್ವೇಶ್ವರಯ್ಯನವರಿಗೆ ಕಾಣದ ಸತ್ಯ ತೇಜಸ್ವಿಯವರ ಸಮಾಜವಾದಿ ವಿಜ್ಞಾನಿ ಕರ್ವಾಲೊಗೆ ಕಾಣುತ್ತದೆ. ಆದ್ದರಿಂದಲೇ ಕರ್ವಾಲೊ ಕೇವಲ ಮಂದಣ್ಣನ ಪ್ರತಿಭೆಯನ್ನು ಗುರುತಿಸಿದ್ದಷ್ಟೇ ಅಲ್ಲ, ಅವನನ್ನು ಗುರುವಾಗಿ ಕೂಡ ಸ್ವೀಕರಿಸುತ್ತಾನೆ. ಆ ಮೂಲಕ, ವ್ಯರ್ಥವಾಗುತ್ತಿರುವ ಪ್ರತಿಭೆಗಳನ್ನು ಕೇಂದ್ರರಂಗಕ್ಕೆ ತರಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯನ್ನು ಕೂಡ ನಮಗೆ ತೋರಿಸುತ್ತಾನೆ.

ಮುಂದೆ 'ಚಿದಂಬರ ರಹಸ್ಯ' ಕಾದಂಬರಿಯಲ್ಲಿ ಕೂಡ 'ಎಲ್ಲ ವೇಸ್ಟ್ ಆಗುತ್ತಿದೆಯಲ್ಲ!' ಎಂಬ ತೇಜಸ್ವಿ ದಿಗ್ಭ್ರಮೆ ಮತ್ತೆ ಕಾಣಿಸಿಕೊಳ್ಳುತ್ತದೆ. ಹೊಸ ತಲೆಮಾರಿನ ಸೂಕ್ಷ್ಮ ಹುಡುಗ, ಹುಡುಗಿಯರ ತಾರುಣ್ಯ, ಆರೋಗ್ಯ ಹಾಗೂ ಉತ್ಸಾಹ ದಿನನಿತ್ಯದ ತರಲೆ ತಾಪತ್ರಯಗಳಲ್ಲಿ ವ್ಯರ್ಥವಾಗುತ್ತಿದೆ. ಅವರಿಗೆ ದಿಕ್ಕು ತೋರಿಸಬಲ್ಲ ಅಧ್ಯಾಪಕ, ವಿಜ್ಞಾನಿ, ಲೇಖಕರ ಕಾಲು ಕೂಡ ಕೆಸರೂರಿನ ಜಿಗ್ಗಿನಲ್ಲಿ ಹೂತು ಹೋಗತೊಡಗುತ್ತದೆ. ತಾರುಣ್ಯದ ಸಹಜ ಉತ್ಸಾಹವನ್ನು ಸರಿಯಾದ ದಿಕ್ಕಿನಲ್ಲಿ ಹರಿಸಲಾಗದ ಈ ದೇಶದ ದುರಂತವನ್ನು ಹೇಳುತ್ತಲೇ, ಮತೀಯವಾದದ ಬೆಂಕಿಗೆ ತುತ್ತಾದ ದೇಶವೊಂದು ಸುಟ್ಟು ಬೂದಿಯಾಗಿ, ಮತ್ತೆ ಎಲ್ಲ ಸರಿಯಾಗಬಹುದೇನೋ ಎಂದು ಕಾದಂಬರಿಯ ನಿರೂಪಕ ಕಾಯುತ್ತಿದ್ದಾನೆ. ಅಲ್ಲಿ ಆ ಬೆಂಕಿಯಲ್ಲಿ ವ್ಯರ್ಥವಾಗಿ ಸಾಯದೆ ತಪ್ಪಿಸಿಕೊಳ್ಳುವವರು ಒಬ್ಬ ಹುಡುಗ ಹಾಗೂ ಒಬ್ಬಳು ಹುಡುಗಿ; ಜಾತಿ, ಧರ್ಮ ಮೀರಿದ ಸ್ನೇಹದ ಮೂಲಕ ಮತೀಯವಾದಿ ಭಾರತಕ್ಕೆ ಹೊಸ ಹಾದಿ ತೋರಿಸುತ್ತಿರುವ ರಫಿ ಮತ್ತು ಜಯಂತಿ...

ಅತ್ತ ಕಿರಗೂರಿನಲ್ಲಿ ಜಡಗೊಂಡಿರುವ ಹಳ್ಳಿಯ ಪುರುಷರು ತಮ್ಮೆಲ್ಲ ಶಕ್ತಿ ಕಳೆದುಕೊಂಡು ಹೆಂಗಸರ ಮೇಲೆ ಹೀನ ಕ್ರೌರ್ಯವೆಸಗುವ ಹೇಡಿತನ ತೋರುತ್ತಾ ನಾಶವಾಗುತ್ತಿದ್ದಾಗ, ಆ ಹಳ್ಳಿಗೆ ಜೀವ ತುಂಬುವವರು ದಾನಮ್ಮನಂಥ ಗಯ್ಯಾಳಿ'ಯರು. ಅಂದರೆ, ತಮ್ಮ ಆಳದ ಸಿಟ್ಟನ್ನು ನೇರವಾಗಿ ಹೇಳಬಲ್ಲ ಗಟ್ಟಿಗಿತ್ತಿಯರು, ಜಯಂತಿ, ದಾನಮ್ಮನಂಥ ಸ್ತ್ರೀಯರು ಕಳ್ಳ ಹುದುಲಿನಲ್ಲಿ ಸಿಕ್ಕಿಕೊಂಡ ಭಾರತಕ್ಕೆ ಹೊಸ ಹಾದಿ ತೋರಿಸಬಲ್ಲರು ಎಂಬುದು ತೇಜಸ್ವಿ ಈಚಿನ ವರ್ಷಗಳಲ್ಲಿ ಕಂಡುಕೊಂಡ ಇನ್ನೊಂದು ಸತ್ಯವಾಗಿತ್ತು. ಅನೇಕ ಬಗೆಯ ಸಂಘಟಿತ ಪ್ರಯತ್ನಗಳಿಂದ ಉಂಟಾಗದ ಬದಲಾವಣೆಗಳು ಮಾನವರ ಸಹಜ ಸ್ಫೋಟಗಳಿಂದ ಉಂಟಾಗಬಹುದು ಎಂಬ ನಂಬಿಕೆಯ ಕಡೆಗೂ ತೇಜಸ್ವಿ ಚಲಿಸುತ್ತಿದ್ದಂತಿತ್ತು.

ಜಾಗತೀಕರಣದ ಆಗಮನದ ಆರಂಭದಲ್ಲಿ ತೇಜಸ್ವಿ ಈ ಬಗೆಯ ಆಧುನಿಕ ಬೆಳವಣಿಗೆಗಳನ್ನು ಜಾತಿ, ಧರ್ಮಗಳ ವಿಕಾರವನ್ನು ಕಡಿಮೆಗೊಳಿಸುವ ಸಾಧನವನ್ನಾಗಿ ಬಳಸಬಹುದೇ ಎಂದು ಕೂಡ ಯೋಚಿಸುತ್ತಿದ್ದರು. ಟೆಲಿವಿಷನ್ನನ್ನು ಸಮರ್ಥವಾಗಿ ಬಳಸಿ ಜಾತಿಪದ್ಧತಿಗೆ ಸರಿಯಾದ ಪೆಟ್ಟು ಕೊಡಬಹುದು ಎಂಬ ಆಶಾವಾದದಲ್ಲಿದ್ದರು. ಆದರೆ 'ಜುಗಾರಿ ಕ್ರಾಸ್' ಬರೆಯುವ ಹೊತ್ತಿಗೆ ಅವರು ಜಾಗತೀಕರಣದ ಬಗ್ಗೆ ಬೇರೆಯದೇ ಆದ ರೀತಿಯಲ್ಲಿ ಯೋಚನೆ ಮಾಡುತ್ತಿದ್ದರು. ಈ ರಿಮೋಟ್ ಕಂಟ್ರೋಲ್ ಯುಗದಲ್ಲಿ ಯಾರು ಯಾರಿಗೋ ಫೋನ್ ಮಾಡುತ್ತಿದ್ದಾರೆ; ಯಾರು ಯಾರನ್ನೋ ನಿಯಂತ್ರಿಸುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬನೂ ಒಂದು ಜುಗಾರಿ ಆಟದಲ್ಲಿ ಸಿಕ್ಕಿಕೊಂಡಿದ್ದಾನೆ. ಇಡೀ ಜಗತ್ತಿನ ಸಮಸ್ಯೆಗಳು ಪುಟ್ಟ ಹಳ್ಳಿಯ ಸಮಸ್ಯೆಯೊಂದಿಗೆ ಬೆಸೆದುಕೊಂಡಿವೆ. ಇಡೀ ಜಗತ್ತಿನ ನಿಯಂತ್ರಣಗಳು, ಆಟಗಳು ಪುಟ್ಟ ಊರಿನ ಅಡಿಕೆ ಬೆಲೆಯ ಪ್ರಶ್ನೆಯೊಂದಿಗೆ ಬೆರೆತುಹೋಗಿವೆ. ಒಮ್ಮೆ ಕಿ.ರಂ. ನಾಗರಾಜರು ಹೇಳಿದಂತೆ 'ಇಡೀ ಭಾರತವೇ ಒಂದು 'ಜುಗಾರಿಕ್ರಾಸ್' ಆಗಿಬಿಟ್ಟಿದೆ. ಹಾಗೆಯೇ 'ಕ್ರಾಸ್' ಎಂಬ ಶಬ್ದದ ಇನ್ನೊಂದು ಅರ್ಥದ ಹಿನ್ನೆಲೆಯಲ್ಲಿ ನೋಡಿದರೆ, ಇಲ್ಲಿ ಯಾರು ಯಾರನ್ನು ಯಾತಕ್ಕಾಗಿ 'ಕ್ರಾಸ್'ಗೆ-ಅಂದರೆ ಶಿಲುಬೆಗೆ-ಏರಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯದಂತಾಗಿಬಿಟ್ಟಿದೆ.

ಇಂಥ ಲೋಕವನ್ನು ಹಿಡಿದಿಟ್ಟ ತೇಜಸ್ವಿಯವರ ನೋಟದ ಕೇಂದ್ರದಲ್ಲಿದ್ದುದು ಕೇವಲ ವಿಸ್ಮಯವಲ್ಲ; ವ್ಯಗ್ರತೆ, ಆಧುನಿಕ ಸಾಹಿತ್ಯದಲ್ಲಿ ಕೇವಲ ವಿಸ್ಮಯದಿಂದ ಯಾವ ದೊಡ್ಡ ಕಲಾಕೃತಿಯೂ ಹುಟ್ಟಿದಂತಿಲ್ಲ. ಆದ್ದರಿಂದ ತೇಜಸ್ವಿಯವರ ಲೋಕ ವಿಸ್ಮಯಲೋಕವಲ್ಲ; ಮಾಯಾಲೋಕವೂ ಅಲ್ಲ. ಇಲ್ಲಿ ಯಾಕೆ ಹೀಗಾಗುತ್ತಿದೆ, ಇದರ ಅರ್ಥವೇನು, ಈ ಸುರಂಗದಿಂದ ಪಾರಾಗುವ ರಹದಾರಿಗಳೇನು ಎಂಬ ಹುಡುಕಾಟದ ವ್ಯಗ್ರತೆಯಿಂದ ಸೃಷ್ಟಿಯಾದ ಕಟುವಾಸ್ತವದ ಲೋಕ...

ಆದ್ದರಿಂದಲೇ ತೇಜಸ್ವಿ ವೈಜ್ಞಾನಿಕ ನೋಟಕ್ರಮ, ವಿಜ್ಞಾನ, ವೈಚಾರಿಕತೆ ಹಾಗೂ ಜಾತ್ಯತೀತತೆಗಳ ಲೋಕದತ್ತ ದೊಡ್ಡ ಮಟ್ಟದಲ್ಲಿ ಹೊರಳಿದ್ದರು. ಹೀಗೆ ಹೊರಳಲು, ಭಾರತದಲ್ಲಿ ಧರ್ಮ ಹಾಗೂ ಜಾತಿಮೂಲದಿಂದ ಎರಗುವ ಹುಸಿ ಪ್ರಶ್ನೆಗಳು ಹಾಗೂ ಗೋಸುಂಬೆತನಗಳಲ್ಲಿ ಮಾನವ ಶಕ್ತಿ ಸದಾ ವ್ಯರ್ಥವಾಗುತ್ತಿರುವುದು ಕೂಡ ಕಾರಣವಾಗಿತ್ತು. ಆದ್ದರಿಂದಲೇ ಅವರು ದೊಡ್ಡವರಿಗಷ್ಟೇ ಅಲ್ಲ, ಮಕ್ಕಳಿಗಾಗಿ ಬರೆದ ಪುಸ್ತಕಗಳಲ್ಲೂ ವೈಜ್ಞಾನಿಕತೆಯ ಅಂಶಗಳನ್ನು ಕೇಂದ್ರಕ್ಕೆ ತರಲೆತ್ನಿಸಿದರು. ನಾವು ಸಾಮಾನ್ಯವಾಗಿ ಮಕ್ಕಳಿಗೆ ಓದಿಸುವ ಪುರಾಣದ ಕಗ್ಗಗಳು ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುತ್ತವೆ, ನಿಜ. ಆದರೆ ಅವು ಅಂತಿಮವಾಗಿ ಮಕ್ಕಳಲ್ಲಿ ಕಂದಾಚಾರವನ್ನು ಬಿತ್ತಿ ಬೆಳೆಸುವ ಸಾಧನವೂ ಆಗಿಬಿಡುತ್ತವೆ ಎಂಬುದನ್ನು ನಾವು ಸರಿಯಾಗಿ ಗಮನಿಸಿರುವುದಿಲ್ಲ. ಆದ್ದರಿಂದಲೋ ಏನೋ, ತೇಜಸ್ವಿ ವಿಜ್ಞಾನ, ಪರಿಸರಕ್ಕೆ ಸಂಬಂಧಿಸಿದ ಕಥನಗಳನ್ನು ಮಕ್ಕಳಿಗೆ ಹೇಗೋ ಹಾಗೆ ಆ ಮಕ್ಕಳ ತಂದೆ, ತಾಯಂದಿರಿಗೂ ಪ್ರಿಯವಾಗುವಂತೆ ಬರೆದರು.

ನವೋದಯ ಸಾಹಿತ್ಯದ ಘಟ್ಟದ ನಂತರ, ನಮ್ಮ ಮುಖ್ಯ ಸಾಹಿತಿಗಳು ಮಕ್ಕಳ ಲೋಕಕ್ಕೆ ಕೂಡ ತಾವು ಸದಾ ಕೊಡಬೇಕಾದ ಕೊಡುಗೆ ಇದೆ ಎಂಬುದನ್ನು ಹೆಚ್ಚು ಕಡಿಮೆ ಮರೆತೇಬಿಟ್ಟರು. ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹುಟ್ಟಿದ ಈ ದೊಡ್ಡ ಕಂದರವನ್ನು ತೇಜಸ್ವಿ ಹೊಸ ರೀತಿಯಲ್ಲಿ ತುಂಬಿ ಮಕ್ಕಳಿಗೆ ನಾವು ಕೊಡಬೇಕಾದ ಪುಸ್ತಕಗಳ ಹೊಸ ದಿಕ್ಕನ್ನೇ ತೋರಿಸಿದರು. ಅವರು ಕೊಟ್ಟ ಪರಿಸರದ ಕತೆಗಳನ್ನು ಓದಿದ ನಗರದ ಪುಟ್ಟಪುಟ್ಟ ಮಕ್ಕಳು ಕಾಡು, ಹಕ್ಕಿ, ಮೀನುಗಳ ಬಗ್ಗೆ ಬೆಳೆಸಿಕೊಂಡ ಹೊಸ ಬಗೆಯ ಕುತೂಹಲ ಹಾಗೂ ಪ್ರೀತಿಯನ್ನು ಕುರಿತು ಕವಿ ಶಿವತೀರ್ಥನ್ ನೆನಸಿಕೊಳ್ಳುತ್ತಿದ್ದರು.

ಈ ಬಗೆಯ ಪರಿಣಾಮ ಸಾಧ್ಯವಾಗಿದ್ದಕ್ಕೆ ತೇಜಸ್ವಿಯವರು ಬಳಸಿದ ಕನ್ನಡ ಕೂಡ ಕಾರಣವಾಗಿತ್ತು. 'ಅಬಚೂರಿನ ಪೋಸ್ಟಾಫೀಸು' ಸಂಕಲನದ ಕತೆಗಳನ್ನು ಬರೆಯುವ ಕಾಲದಲ್ಲಿ ತೇಜಸ್ವಿ ತಾವು ಬರೆಯುವ ನುಡಿಗಟ್ಟು ಎಲ್ಲರಿಗೂ ತಲುಪಬೇಕೆಂಬ ಹಂಬಲದಿಂದ ಕೊಂಚ ವಿನೋದದ ಲೇಪವಿರುವ ಹೊಸಬಗೆಯ ತಿಳಿಗನ್ನಡವನ್ನು ರೂಪಿಸಿ ಕೊಂಡರು. ಹೆಚ್ಚು ಜನರನ್ನು ತಲುಪಬೇಕೆಂಬ ಸಾಮಾಜಿಕ ಜವಾಬ್ದಾರಿಯಿಂದ ಕೂಡ ಅವರ ಈ ಬಗೆಯ ಕನ್ನಡ ರೂಪುಗೊಂಡಿತ್ತು. ಸಾಹಿತ್ಯಲೋಕದ ಸೀಮಿತ ವಲಯದಾಚೆಗೆ ಅವರಷ್ಟು ಅಗಾಧ ಓದುಗರನ್ನು ಸೃಷ್ಟಿಸಿಕೊಂಡ ಲೇಖಕರು ಈಚಿನ ವರ್ಷಗಳಲ್ಲಿ ಯಾರೂ ಇಲ್ಲ. ತಮ್ಮ ಪತ್ರಿಕೆಯ ಮೂಲಕ ಅಸಂಖ್ಯಾತ ಓದುಗರನ್ನು ಸೃಷ್ಟಿಸಿಕೊಂಡ ಲಂಕೇಶರ ಪುಸ್ತಕಗಳು ಕೂಡ ತೇಜಸ್ವಿಯವರ ಪುಸ್ತಕಗಳಂತೆ ಖರ್ಚಾಗುತ್ತಿಲ್ಲವೇನೋ. ಈ ಅಂಶ ಮುಂಬರುವ ದಿನಗಳಲ್ಲಿ ತೇಜಸ್ವಿಯವರ ಬರಹಗಳು ಪಡೆಯಬಹುದಾದ ವ್ಯಾಪಕತೆಯನ್ನು ಸೂಚಿಸುವಂತಿದೆ.

ಇಷ್ಟಾಗಿಯೂ ತೇಜಸ್ವಿಯವರ ಬರಹಗಳಲ್ಲಿ ಕಾಣುವ ವೈನೋದಿಕ ಲೇಪನದಿಂದಾಗಿ ಆ ಬರಹಗಳ ಅಂತಿಮ ಪರಿಣಾಮಕ್ಕೆ ಕೊಂಚ ಹೊಡೆತ ಬಿದ್ದಿತೇ ಎಂದು ಅನುಮಾನ ಕೂಡ ಅಲ್ಲಲ್ಲಿ ಏಳುತ್ತದೆ. ಆದರೆ ತೇಜಸ್ವಿಯವರ ದಿಗ್ಭ್ರಮೆ ಮಾತ್ರ ನಮ್ಮೆಲ್ಲರನ್ನೂ ಆವರಿಸುತ್ತಲೇ ಹೋಗುತ್ತದೆ. ಈ ದಿಗ್ಭ್ರಮೆಯಲ್ಲಿ ಹಿಂತಿರುಗಿ ನೋಡಿದರೆ, 'ಎಲ್ಲ ವೇಸ್ಟ್ ಆಯಿತೆ?' ಎಂಬ ತೇಜಸ್ವಿಯವರ ಪ್ರಶ್ನೆ ಅವರ ಹುಡುಕಾಟದ ಆರಂಭ ಬಿಂದುವೂ ಆಗಿತ್ತು; ಹಾಗೆಯೇ ಈ ಪ್ರಶ್ನೆ ಇನ್ನಷ್ಟು ಹೊಸ ಹಾದಿಗಳನ್ನು ಹುಡುಕಲು ಹೊರಟ ಲೇಖಕನೊಬ್ಬ ಹಾಕಿಕೊಂಡ ಸೃಜನಶೀಲ ಪ್ರಶ್ನೆಯೂ ಆಗಿತ್ತು ಎಂಬುದು ಹೊಳೆಯುತ್ತದೆ. 'ಮಾಯಾ ಲೋಕ' ಭಾಗ-೧ರ ಕೊನೆಗೆ ಈ ಪ್ರಶ್ನೆ ಮತ್ತೊಮ್ಮೆ ರೂಪುಗೊಳ್ಳುತ್ತಿತ್ತು. ಹಾಗೆಯೇ 'ಮಾಯಾಲೋಕ'ದ ಎರಡನೆಯ ಭಾಗ ತೇಜಸ್ವಿಯವರ ಮನಸ್ಸಿನಲ್ಲಿ ಆಕಾರ ಪಡೆಯುತಿದ್ದಂತಿತ್ತು.

ಆದರೆ ತೇಜಸ್ವಿಯವರ ಕೊನೆಯ ಕಾದಂಬರಿ 'ಮಾಯಾಲೋಕ' ಅಪೂರ್ಣವಾಗಿಯೇ ಉಳಿಯಿತಲ್ಲ ಎಂಬುದು ನೆನಪಾದಾಗ... ಆ ಪ್ರಚಂಡ ಪ್ರತಿಭೆಯ ಕೊನೆಯ ಘಟ್ಟದ ಹುಡುಕಾಟದ ಫಲ ಕನ್ನಡಿಗರಿಗೆ ದಕ್ಕಲಿಲ್ಲವಲ್ಲ ಎಂದು ಖಿನ್ನತೆ ಆವರಿಸತೊಡಗುತ್ತದೆ…

(೨೦, ೨೭ ಏಪ್ರಿಲ್, ೨೦೦೭, ಕನ್ನಡ ಟೈಮ್ಸ್. ‘ಗಾಳಿ ಬೆಳಕು', ಪಲ್ಲವ ಪ್ರಕಾಶನ, ಮೊಬೈಲ್: 8880087235)

Share on:


Recent Posts

Latest Blogs



Kamakasturibana

YouTube



Comments

1 Comments



|




Add Comment