ನಾಯಕರ ನಿಜದನಿ
by Nataraj Huliyar
`ಏನ್ ಮಾಡ್ತಿದೀರ?’ ಎಂದರು ಡಿ. ಆರ್. ನಾಗರಾಜ್. ನಾನಾಗ ಡಿ. ಆರ್. ಅವರ ರಿಸರ್ಚ್ ಸ್ಟೂಡೆಂಟ್.
‘ಜಿ. ಎಚ್. ನಾಯಕರ ಪುಸ್ತಕ್ ಪ್ರೂಫ್ ನೋಡ್ತಿದೀನಿ’ ಎಂದೆ. ಅದು ಶೂದ್ರ ಶ್ರೀನಿವಾಸ್ ಪ್ರೆಸ್ಸಿನ ಒಂದು ಅಸೈನ್‌ಮೆಂಟ್.
`ಏನ್ರೀ ಪುಸ್ತಕದ ಹೆಸರು?
`ವಿನಯ ವಿಮರ್ಶೆ.’
`ಥತ್! ವಿಮರ್ಶೆಗೂ ವಿನಯಕ್ಕೂ ಏನ್ರೀ ಸಂಬಂಧ?’ ಎಂದು ಡಿ. ಆರ್. ಪಟಾಕಿ ಹಚ್ಚಿ ಖುಷಿ ಪಡುವವರಂತೆ ನಕ್ಕರು.
ಮೊನ್ನೆ ಹೊಸ ತಲೆಮಾರಿನ ಸಂಶೋಧಕ-ವಿಮರ್ಶಕ ವಿನಯ್ ನಂದಿಹಾಳ್ ವಿಮರ್ಶೆಗೇ ಮೀಸಲಾದ ಒಂದು `ಯೂ ಟ್ಯೂಬ್’ ಚಾನಲ್ ಮಾಡಿ `ವಿನಯ ವಿಮರ್ಶೆ’ ಎಂದು ಹೆಸರಿಟ್ಟರು. ವಿನಯ್‌ಗೆ ಡಿ. ಆರ್. ಪ್ರತಿಕ್ರಿಯೆ ಹೇಳಿದರೆ, `ನನ್ನ ಹೆಸರನ್ನೂ ವಿಮರ್ಶೆಯನ್ನೂ ಕೂಡಿಸಿ ಹೀಗೆ ಹೆಸರಿಟ್ಟೆ ಸಾರ್!’ ಎಂದರು. `ವಿನಯ ವಿಮರ್ಶೆ’ ಕುರಿತು ಡಿ.ಆರ್. ಹೇಳಿದ ಮಾತೂ ನೆನಪಿರಲಿ’ ಎಂದೆ.
ಆದರೂ ಜಿ.ಎಚ್. ನಾಯಕರು `ವಿನಯ’ವನ್ನು ವಿಮರ್ಶೆಯ ಜೊತೆ ಸೇರಿಸಿದ್ದು ಮಹಾಕೃತಿಗಳ ಎದುರು ನಮ್ಮ ತಲೆ ತಂತಾನೇ ಬಾಗುವ ರೀತಿಯ ಬಗೆಗೇ ಹೊರತು ಅದೇನೂ ಭೋಳೆ ವಿನಯವಲ್ಲ; `ಕಲಿಸು ಬಾಗುವುದನ್ನು, ಬಾಗದೆ ಸೆಟೆಯುವುದನ್ನು’ ಎಂದ ಅಡಿಗರ `ಪ್ರಾರ್ಥನೆ’ಯ ಸಂಕೀರ್ಣ ತಹತಹ ನಾಯಕರ ವಿಮರ್ಶಕ ವ್ಯಕ್ತಿತ್ವದಲ್ಲೇ ಇತ್ತು.
ಜಿ. ಎಚ್. ನಾಯಕರನ್ನು ಕುರಿತ ನನ್ನ ಅಂಕಣ ಬರಹವೊಂದು `ಕನ್ನಡಿ’ (ಪಲ್ಲವ ಪ್ರಕಾಶನ) ಪುಸ್ತಕದಲ್ಲಿರುವುದರಿಂದ ಆ ಬರಹದಾಚೆಗೆ ನಿಂತು ನೋಡಲೆತ್ನಿಸಿದೆ: ನಾಯಕರ ನೈತಿಕ ವ್ಯಕ್ತಿತ್ವ ಅವರ ಒಟ್ಟು ವಿಮರ್ಶೆಯಲ್ಲೂ ಪ್ರಕಟಗೊಂಡಿರುವುದು ಕಾಣತೊಡಗಿತು. ಲೀವಿಸ್ `ವಿಮರ್ಶೆ ಬದುಕಿನ ನೈತಿಕ ವಿಚಾರಣೆ’ ಎಂದಿದ್ದು ನೆನಪಾಯಿತು. ನಾಯಕರಂತೆ ಕೃತಿ ಹೊರಡಿಸಿದ ಅರ್ಥವನ್ನು ಪ್ರಾಮಾಣಿಕವಾಗಿ ಹೇಳುವವರು ಕಡಿಮೆಯಾಗುತ್ತಿದ್ದಾರೆ ಎನ್ನಿಸಿತು.
ಇದನ್ನು ಹೀಗೆ ವಿವರಿಸಬಹುದು: ಒಬ್ಬ ವಿಮರ್ಶಕಿ, ಲೇಖಕ ಹೇಳಿದ್ದು ತಪ್ಪಾಗಿದೆ ಎಂದು ನಮಗೆ ಅನ್ನಿಸಬಹುದು. ಆದರೆ ಅದು ಸುಳ್ಳು ಎನ್ನಿಸಿದರೆ ಅದು ಓದಲು ಅರ್ಹವಲ್ಲ. ನಾಯಕ್ ಥರದವರು ಬರೆದಾಗ ಅದು ಕೆಲವೆಡೆ `ಮಂದ’ ಎನ್ನಿಸಿದರೂ ಸುಳ್ಳೆನ್ನಿಸುವುದಿಲ್ಲ. ಕಾಲಕಾಲದ ‘ಟ್ರೆಂಡಿ’ ವಿಮರ್ಶೆಗಳೆಲ್ಲ ಕಣ್ಮರೆಯಾಗಿ, ನಾಯಕರ ಓದಿನ ಪ್ರಾಮಾಣಿಕತೆ ಕನ್ನಡ ವಿಮರ್ಶಾ ಪರಂಪರೆಯಲ್ಲಿ ಬಹು ಕಾಲ ಉಳಿಯಬಲ್ಲದು. ಅವರ ಪುಸ್ತಕವೊಂದರ ಹೆಸರು: ‘ನಿಜ ದನಿ’. ಅವರ ಸಮಗ್ರ ವಿಮರ್ಶಾ ಸಂಪುಟಗಳ ಹೆಸರು: ‘ಮೌಲ್ಯಮಾರ್ಗ’. ಇವೆರಡೂ ಹೆಸರುಗಳು ಸಾಹಿತ್ಯ ಕೃತಿಗಳ ದನಿ ಹಾಗೂ ಮೌಲ್ಯಗಳನ್ನು ಕುರಿತಂತೆ ನಾಯಕರ ನಿರಂತರ ಹುಡುಕಾಟಗಳನ್ನು ಹೇಳುತ್ತವೆ.
ಕಳೆದ ವರ್ಷ ಮೇ ೨೬ರಂದು ತೀರಿಕೊಂಡ ಜಿ.ಎಚ್. ನಾಯಕರನ್ನು ಕುರಿತು ಹಿಂದೆ ಮತ್ತು ಈಚೆಗೆ ಪತ್ರಿಕೆಗಳಲ್ಲಿ ಬರೆದ ಟಿಪ್ಪಣಿಗಳು:
ನಾಯಕರ ಪ್ರಾಮಾಣಿಕ, ನಿಜ ದನಿ ನನ್ನನ್ನು ಥಟ್ಟನೆ ತಟ್ಟಿದ್ದು ಹದಿಹರೆಯದಲ್ಲಿ ಲೈಬ್ರರಿಯಲ್ಲಿ ಸಿಕ್ಕ ಅವರ ‘ಸಮಕಾಲೀನ’ ಎಂಬ ವಿಮರ್ಶೆಯ ಪುಸ್ತಕದಲ್ಲಿ. ಅದು ಎಷ್ಟು ಅರ್ಥವಾಯಿತೋ ಏನೋ! ಅಲ್ಲಿನ ವಿಶ್ಲೇಷಣೆಯ ಗಾಂಭೀರ್ಯ ಮಾತ್ರ ನನ್ನೊಳಗಿಳಿಯಿತು. ಒಂದು ಪಠ್ಯವನ್ನು ಓದುವ ಧ್ಯಾನಸ್ಥ ರೀತಿಯನ್ನು, ವಸ್ತುನಿಷ್ಠ ಓದು ತಲುಪುವ ಬೌದ್ಧಿಕ ಎತ್ತರವನ್ನು ನಾಯಕರ ಬರವಣಿಗೆಯಲ್ಲಿ ಮುಂದೆ ಗಮನಿಸುತ್ತಾ ಬಂದೆ. ಸಾಹಿತ್ಯವನ್ನು ಪ್ರೀತಿಯಿಂದ ಗ್ರಹಿಸುವವರಿಗೆ, ಅರ್ಥಪೂರ್ಣವಾಗಿ ಪಾಠ ಮಾಡುವವರಿಗೆ ನಾಯಕರ ರೀತಿಯ ಪಠ್ಯದ ನಿಕಟ ಓದು ಆದರ್ಶವಾದುದು. ಹೀಗೆ ಪ್ರಾಮಾಣಿಕವಾಗಿ ಪಠ್ಯವನ್ನು ಹತ್ತಿರದಿಂದ ಓದುವುದನ್ನು ಕಲಿತ ಮೇಲಷ್ಟೇ ಉಳಿದ ಅನೇಕ ಓದುಗಳು ನಮ್ಮಲ್ಲಿ ಬೆಳೆಯಬಲ್ಲವು.
ಒಮ್ಮೆ ನಾಯಕರು ರಿಫ್ರೆಶರ್ ಕೋರ್ಸಿನಲ್ಲಿ ಪಂಪನನ್ನು ಚರ್ಚಿಸುತ್ತಾ, ಅವನ ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ’ ಎಂಬ ಜನಪ್ರಿಯ ಘೋಷಣೆಯನ್ನು ಪ್ರಸ್ತಾಪಿಸಿದರು. ತಕ್ಷಣ ಅಲ್ಲಿದ್ದ ಟೀಚರುಗಳು, ‘ಇಲ್ಲಿ ಎಂದರೆ ವಿಕ್ರಮಾರ್ಜುನ ವಿಜಯ; ಅಲ್ಲಿ ಎಂದರೆ ಆದಿಪುರಾಣ’ ಎಂಬ ಹಳೆಯ ಪ್ಲೇಟನ್ನೇ ಹಾಕಿದರು!
“...‘ಅಲ್ಲಿ’ ಎಂದರೆ ಆದಿಪುರಾಣ ಎಂದು ಖಾತ್ರಿಯಾಗಿ ಹೇಗೆ ಹೇಳುತ್ತೀರಿ? ‘ಅಲ್ಲಿ’ ಎನ್ನುವುದು ಅಕಸ್ಮಾತ್ ಸಿಕ್ಕಿರದ ಪಂಪನ ಇನ್ನಾವುದೋ ಕೃತಿಯನ್ನೂ ಸೂಚಿಸುತ್ತಿರಬಹುದಲ್ಲವೆ!” ಎಂದು ನಾಯಕರು ನಕ್ಕರು. ಅವರ ಓಪನ್ ರೀಡಿಂಗ್‌ನ ಒರಿಜಿನಾಲಿಟಿ ಅವತ್ತು ನನ್ನಲ್ಲಿ ಹುಟ್ಟಿಸಿದ ವಿಸ್ಮಯ ಇವತ್ತಿಗೂ ಇದೆ.
ನಾಯಕರು ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಗೆ ಬರೆದ ಹಿನ್ನುಡಿಯಲ್ಲಿ ತೇಜಸ್ವಿಯವರ ಒಟ್ಟು ಸಾಹಿತ್ಯವನ್ನು ‘ಚಿರ ವಾಸ್ತವ’ಹಾಗೂ ‘ಚರ ವಾಸ್ತವ’ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ನೋಡಿದ ರೀತಿಯನ್ನು ನೀವು ಗಮನಿಸಿರಬಹುದು. ಎರಡು ಪರಿಕಲ್ಪನೆಗಳ ಮೂಲಕ ಲೇಖಕನೊಬ್ಬನ ಎಲ್ಲ ಕೃತಿಗಳನ್ನೂ ವಿವರಿಸಿದ ನಾಯಕರ ಅಧ್ಯಯನ ವಿಧಾನ ಸಾಹಿತ್ಯ ಸಂಶೋಧನೆಯಲ್ಲಿ ತೊಡಗುವವರಿಗೆ ಅತ್ಯಂತ ಉಪಯುಕ್ತ.
ಸಿರಿವರ ಪ್ರಕಾಶನ ಪ್ರಕಟಿಸಿರುವ ನಾಯಕರ ಸಮಗ್ರ ಕೃತಿಗಳನ್ನೊಳಗೊಂಡ ‘ಮೌಲ್ಯಮಾರ್ಗ’ದ ಸಂಪುಟಗಳನ್ನು ನೋಡನೋಡುತ್ತಾ, ನಾಯಕರ ವಿಮರ್ಶೆಯನ್ನು ಸರಿಯಾಗಿ ಓದದೆ ನಮ್ಮ ಬೋಧನಾವಲಯ ಗಂಭೀರ ಓದಿನ ಮಾರ್ಗಗಳನ್ನು ಕಳೆದುಕೊಂಡಿದೆ ಅನ್ನಿಸಿತು. ಅಬ್ಬರದ, ಅಸೂಕ್ಷವಾದ, ಸರಳ ಸಾಮಾಜಿಕ ಓದಿನ ಹಳ್ಳಕ್ಕೆ ಬಿದ್ದು ಒಂದು ಧಾರೆಯ ಕನ್ನಡ ವಿಮರ್ಶೆ ಕಳೆದುಕೊಂಡಿರುವ ಸೂಕ್ಷ್ಮತೆಯನ್ನು ನಾಯಕರಂಥವರ ಪಠ್ಯವಿಸ್ತರಣೆಯ ಓದಿನಿಂದಲೂ ಪಡೆಯುತ್ತಿರಬೇಕಾಗುತ್ತದೆ.
ಉತ್ತರಕನ್ನಡದ ಅಂಕೋಲದ ಸೂರ್ವೆ ಊರಿನಿಂದ ಬಂದ ಗೋವಿಂದರಾಯ ಹಮ್ಮಣ್ಣ ನಾಯಕ (ಹುಟ್ಟು: ೧೮ ಸೆಪ್ಟೆಂಬರ್ ೧೯೩೩) ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ, ಲೇಖಕರಾಗಿ, ತಮಗೆ ನಿಜಕ್ಕೂ ಒಪ್ಪಿಗೆಯಾದ ನವ್ಯ ವಿಮರ್ಶಾ ಮಾನದಂಡಗಳನ್ನು ನಿಷ್ಠುರವಾಗಿ ಬಳಸಿದರು. ಮೈಸೂರಿನ `ಸಾಹಿತ್ಯ ಪರಪುಟ್ಟ’ಗಳ ಅಸಾಹಿತ್ಯಕ ಪ್ರತಿಕ್ರಿಯೆಗಳು ಹಾಗೂ ಪೀಡನಗಳ ನಡುವೆಯೂ ಸಾಹಿತ್ಯದ ಚಿಂತನೆ, ಬೋಧನೆಗಳಲ್ಲಿ ಆಳವಾಗಿ ಮುಳುಗಿ ಸುತ್ತಲಿನ ಸಣ್ಣತನವನ್ನು ಮೀರಲೆತ್ನಿಸಿದರು.
ನಾಯಕರು ಕುವೆಂಪು ಅವರ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದಾರೆಂದು ಕುವೆಂಪು ಅಂಧಾಭಿಮಾನಿಗಳು ಕಿಡಿ ಕಾರಿದ ಕಾಲವೂ ಇತ್ತು. ಇದರಿಂದ ಅಸಹ್ಯಗೊಂಡ ಪೂರ್ಣಚಂದ್ರ ತೇಜಸ್ವಿ, ಮೇಷ್ಟರ ಕೆಲಸ ಬಿಟ್ಟು ತನ್ನಂತೆಯೇ ತೋಟ ಮಾಡಲು ನಾಯಕರನ್ನು ಕರೆಯುತ್ತಾ ಹೇಳುತ್ತಾರೆ: ‘ಯಾವಯಾವುದೋ ಹಾಳುಮೂಳು ರದ್ದಿ ಟೆಕ್ಸ್ಟ್ ಬುಕ್ಕುಗಳನ್ನು ಹತ್ತೂವರೆಯಿಂದ ಐದು ಗಂಟೆಯವರೆಗೂ ಪಾಠ ಮಾಡುವುದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು… ಇದರಲ್ಲೇ ನಿಮ್ಮ ಟೈಂ ಕಳೆದು ಹೋಗುತ್ತೆ. ಅದು ಅಕಡೆಮಿಕ್ ವರ್ಕ್ ಏನ್ರೀ?’
ನಾಯಕರು ಕೆಲಸ ಬಿಡಲಿಲ್ಲ. ತೋಟ ಮಾಡಲಿಲ್ಲ. ತಾವು ಬೋಧಿಸುತ್ತಿದ್ದ ಉತ್ತಮ ಕೃತಿಗಳ ನಿಜದನಿಯನ್ನು ವಿಸ್ತರಿಸುತ್ತಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಬೆಳೆಸುತ್ತಾ ಹೋದರು. ನಾಯಕರಂತೆ ಐವತ್ತು ವರ್ಷಗಳ ಕಾಲ ಹಲ್ಲು ಕಚ್ಚಿ ಸಾಹಿತ್ಯ ವಿಮರ್ಶೆಯ ಮೌಲ್ಯಮಾರ್ಗದಲ್ಲಿರುವುದು ಸುಲಭವಲ್ಲ. ಈ ಮಾರ್ಗದಲ್ಲಿರಲು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಆಳವಾದ ಗ್ರಹಿಕೆಯ ಜೊತೆಜೊತೆಗೇ ತಾನು ಬಳಸುತ್ತಿರುವ ವಿಮರ್ಶಾ ಮಾರ್ಗಗಳ ಬಗ್ಗೆ ಸ್ಪಷ್ಟತೆಗಳಿರಬೇಕು; ಆ ಮಾರ್ಗಗಳ ಬಗ್ಗೆ ಆಳದ ನಂಬಿಕೆಯಿರಬೇಕು; ಸಾಹಿತ್ಯ ವಿಮರ್ಶೆ ಬಾಯುಪಚಾರದ ಮಾತುಗಳನ್ನು ಮೀರಿ ವಸ್ತುನಿಷ್ಠವಾದ ಸತ್ಯಶೋಧನೆಯಾಗಬೇಕು.… ಇವೆಲ್ಲ ನಾಯಕರ ವಿಮರ್ಶೆಯ ಮೂಲಕವೂ ನಮಗೆ ಮನವರಿಕೆಯಾಗುತ್ತಾ ಹೋಗುತ್ತವೆ.
ನಾಯಕರ ವಿಮರ್ಶೆಯಲ್ಲಿದ್ದ ವಸ್ತುನಿಷ್ಠ ನೋಟವನ್ನು ಸಮಾಜದ ಎಲ್ಲ ವಲಯಗಳೂ ಎದುರು ನೋಡುತ್ತಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ: ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಮೈಸೂರಿನಲ್ಲಿ ದಲಿತ ಬಣಗಳನ್ನು ಒಂದುಗೂಡಿಸಲು ಮುಕ್ತ ಚರ್ಚೆಯೊಂದು ನಡೆಯಿತು. ದಿನವಿಡೀ ನಡೆದ ಈ ಚರ್ಚೆಯನ್ನು ನಿರ್ವಹಿಸಲು ದಲಿತ ಚಳುವಳಿಗಾರರು ಜಿ.ಎಚ್. ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಕಾರಣ ಮುಂದೊಮ್ಮೆ ಹೊಳೆಯಿತು: ವ್ಯಕ್ತಿಯೊಬ್ಬ ಸಾಹಿತ್ಯವಿಮರ್ಶೆಯಲ್ಲಿ ಬಳಸುವ ವಸ್ತುನಿಷ್ಠತೆ ಸಮಾಜದ ಇನ್ನಿತರ ವಲಯಗಳನ್ನು ಗ್ರಹಿಸಲೂ ಅತ್ಯಗತ್ಯ. ವಿಮರ್ಶೆಯ ಚಟುವಟಿಕೆ ಅಖಂಡ. ಅದು ಎಲ್ಲ ವಲಯಗಳಿಗೂ ಒಂದೇ ತೀವ್ರತೆಯಿಂದ ಚಾಚಿಕೊಳ್ಳಬಲ್ಲದು!
ಆ ಕಾಲದಲ್ಲಿ ನಾಯಕರು ಸಾಹಿತ್ಯ ವಿಮರ್ಶೆಯಾಚೆಗೆ ಹೊರಳಿ, ‘ದಲಿತ ಹೋರಾಟ: ಗಂಭೀರ ಸವಾಲುಗಳು’ ಎಂಬ ಪುಟ್ಟ ಪುಸ್ತಕ ಬರೆದರು. ದಲಿತ ಚಳುವಳಿ ಶಿಸ್ತುಬದ್ಧ ಅಕಡೆಮಿಕ್ ಗ್ರಹಿಕೆಗಳಿಂದಲೂ ಕಲಿಯಬೇಕಾದ ಅಗತ್ಯವನ್ನು ಸೂಚಿಸುವ ಪುಸ್ತಕವಿದು. ಸಾಹಿತ್ಯ ವಿಮರ್ಶೆಯ ಜೊತೆಗೇ ಖಚಿತ ವೈಚಾರಿಕ ಮುಖವೂ ನಾಯಕರಲ್ಲಿತ್ತು. ಆದ್ದರಿಂದಲೇ ಅಂಬೇಡ್ಕರ್ ಕುರಿತ ಅವರ ಲೇಖನವೂ ಮುಖ್ಯವಾದುದು. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದನ್ನು ಅವರು ಪ್ರಶ್ನಿಸಿದ ರೀತಿ; ಮಠಗಳು, ಕೋಮುವಾದ ಹಾಗೂ ಜಾತಿ ಸಂಘಟನೆಗಳ ಬಗ್ಗೆ ತಳೆದ ನಿಲುವುಗಳು ಅವರ ಸ್ಪಷ್ಟ ವೈಚಾರಿಕ ಚೌಕಟ್ಟನ್ನು ಬಿಂಬಿಸುತ್ತವೆ.
ಜಿ.ಎಚ್. ನಾಯಕರ ‘ಸಮಕಾಲೀನ’, ‘ಅನಿವಾರ್ಯ’, ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ಪುಸ್ತಕಗಳ ನಂತರ ಬಂದ ‘ಉತ್ತರಾರ್ಧ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಅವರ ವಿಮರ್ಶೆಯ ಪೂರ್ವಾರ್ಧದ ಪುಸ್ತಕಗಳ ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಈ ಪ್ರಶಸ್ತಿ ಪಡೆದ ಪುಸ್ತಕದಲ್ಲಿರಲಿಲ್ಲ. ಈ ಮಾತನ್ನು ಅವರಿದ್ದಾಗಲೇ ಬರೆದಿದ್ದೆ.
ಆದರೂ ಅವರ ಬರವಣಿಗೆ ತೀರಾ ಕುಂದಿರಲಿಲ್ಲ. ಗಂಭೀರ ಓದಿನ ಶ್ರಮ ಹಾಗೂ ಪ್ರಾಮಾಣಿಕತೆಗಳ ಬುನಾದಿಯುಳ್ಳ ಬರವಣಿಗೆ ಏರುಪೇರನ್ನು, ಇಳಿಮುಖವನ್ನು ಕಾಣಬಹುದು; ಆದರೆ ಅದು ತೀರಾ ಅಳ್ಳಕವಾಗುವುದಿಲ್ಲ.
ನಾಯಕರ ಕೊನೆಯ ಘಟ್ಟದ ಬರವಣಿಗೆ ಓದುವಾಗ ಹೀಗೆನ್ನಿಸಿತು: ಸಾಧಾರಣ ಕೃತಿಗಳ ಬಗ್ಗೆ ಬರೆಯುವಾಗ ನಮ್ಮ ಬರವಣಿಗೆಯೂ ಸಾಧಾರಣವಾಗುತ್ತದೇನೋ! ಕಾರಂತರ ‘ಒಂಟಿದನಿ’, ‘ಮೊಗ ಪಡೆದ ಮನ’ ಕಾದಂಬರಿಗಳ ಬಗೆಗೆ ನಾಯಕರ ವಿವರಣಾತ್ಮಕ ವಿಮರ್ಶೆಯನ್ನು ಓದುವಾಗ ಹೀಗನ್ನಿಸಿತು. ಅಲ್ಲಿ ಕೂಡ ಸರಿಯಾದ ಪ್ರಶ್ನೆಗಳನ್ನು ನಾಯಕರು ಎತ್ತಲು ಮರೆತಿಲ್ಲ ಎನ್ನುವುದೂ ನಿಜ.
ಸಾಹಿತ್ಯಸಂಸ್ಕೃತಿಯನ್ನು ಪೊರೆಯುವ ಕೆಲಸ ಆಳವಾದ ಅಧ್ಯಯನ, ಸೂಕ್ಷ್ಮ ಚರ್ಚೆ, ಸಮಾಜದ ಆರೋಗ್ಯ ಕುರಿತ ಕಾಳಜಿ, ಜವಾಬ್ದಾರಿಯುತ ಬೋಧನೆ, ಅರ್ಥಪೂರ್ಣ ವಿಮರ್ಶೆ, ಪಠ್ಯಪುಸ್ತಕಗಳ ಬಗೆಗೆ ಚಿಂತನೆ… ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಹೊಣೆಯನ್ನು ಹಲವು ದಶಕಗಳ ಕಾಲ ನಿರ್ವಹಿಸಿದ ಜಿ.ಎಚ್. ನಾಯಕರ ನಿಜ ಮಾದರಿ ಎಲ್ಲ ಕನ್ನಡ ತಲೆಮಾರುಗಳಿಗೂ ಬೇಕಾಗುತ್ತದೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Comments
12 Comments
| Dr. Mohan Mirle
G. H. ನಾಯಕರು ಮರೆಯಾಗಿ ಇಂದಿಗೆ ವರ್ಷ ಸಂದಿರುವ ಈ ಹೊತ್ತಿನಲ್ಲಿ ಅವರ ಬರಹವನ್ನು ಕೇಂದ್ರವಾಗಿಟ್ಟುಕೊಂಡ ‘ವಿಮರ್ಶೆ’ ಕುರಿತ ಈ ವಸ್ತುನಿಷ್ಠ ಬರಹ ಎಲ್ಲ ಸಾಹಿತ್ಯ ಪ್ರಿಯರಿಗೂ ವಿಮರ್ಶಕರಿಗೂ ಸಾಹಿತ್ಯ ಬೋಧಕರಿಗೂ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೂ ಬಹು ಉಪಯುಕ್ತವಾಗಿದೆ. ಲೀವಿಸ್ ಅವರ “ವಿಮರ್ಶೆ ಬದುಕಿನ ನೈತಿಕ ವಿಚಾರಣೆ” ಎಂಬ ವ್ಯಾಖ್ಯಾನ ವಿಮರ್ಶಾ ಕ್ಷೇತ್ರದಲ್ಲಿರುವವರ ಬರಹದ ಪ್ರಾಮಾಣಿಕತೆಯ ಜೊತೆಗೆ ವೈಯಕ್ತಿಕ ನೈತಿಕತೆಯನ್ನೂ ಎಚ್ಚರಿಸುವಂತಿದೆ. ಇನ್ನು ‘ಪಠ್ಯದ ನಿಕಟ ಓದು’ ನಿಮ್ಮ ಬಳಿ ಬರುವ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ನೀವು ಹೇಳುವ ಮೊದಲ ಪಾಠ. ಅದೇ ರೀತಿ ಡಿ.ಆರ್. ನಾಗರಾಜ್, ಪಿ. ಲಂಕೇಶ್ ಮತ್ತು ಜಿ.ಎಚ್. ನಾಯಕರ ವಿಮರ್ಶಾ ಬರಹಗಳ ಓದು ಕೂಡ. ಈ ಮಾತನ್ನು ನೀವು ನನಗೂ ಹಲವು ಬಾರಿ ಹೇಳಿದ್ದೀರಿ. ಇನ್ನು ಅಬ್ಬರದ, ಅಸೂಕ್ಷ್ಮವಾದ, ಸರಳ ಸಾಮಾಜಿಕ ಓದಿನ ವಿಮರ್ಶೆಗಳನ್ನು ಕುರಿತು ಆಡಿರುವ ಮಾತುಗಳು ಮತ್ತು ಅದಕ್ಕೆ ಸೂಚಿಸಿರುವ ಪರಿಹಾರ, ಆಗಾಗ್ಗೆ ವಿಮರ್ಶೆಯ ಸಾಹಸಕ್ಕೆ ಕೈಹಾಕುವ ನನ್ನಂಥವರಿಗೂ ಪಾಠದಂತಿದೆ. ಮತ್ತು ಅದೇ ಸಮಯದಲ್ಲಿ ವಿಮರ್ಶಾ ಮಾರ್ಗಗಳ ಸ್ಪಷ್ಟ ತಿಳುವಳಿಕೆ ಮತ್ತು ವಸ್ತುನಿಷ್ಠ ಸತ್ಯಶೋಧನೆಗೆ ಒತ್ತಾಯಿಸುತ್ತದೆ.
\r\n\r\nನಿರಂತರ ಸಾಹಿತ್ಯಕ ಜಾಗೃತಿಗಾಗಿ ಧನ್ಯವಾದಗಳು.
\r\n| GANGADHAR
ಜಿ.ಹೆಚ್. ನಾಯಕರು ವಿಮರ್ಶೆಗೆ 'ಮೌಲ್ಯ' ಕೊಟ್ಟವರೆಂಬುದು ನಿಜ . ಇಪ್ಪತ್ತು ವರ್ಷಗಳ ಹಿಂದೆ ಪಂಪನ ಕುರಿತು ವಿಮರ್ಶೆ ಬರೆಯುವಾಗ ನಾಯಕರ ಲೇಖನವನ್ನು ಯಥಾವತ್ತಾಗಿ ಕಾಪಿ ಮಾಡಿದ್ದೆ ಡಿಗ್ರಿ ಓದುವಾಗ. ಏಕೆಂದರೆ ಅವರ ವಿಮರ್ಶೆ ಓದಿದ ನಂತರ ನನ್ನ ತಲೆಯಲ್ಲಿ ಹೊಸತೇನೂ ಹೊಳೆಯಲಿಲ್ಲ. ಅಷ್ಟ ಗಾಢವಾದ ವಸ್ತು ನಿಷ್ಟವೆನಿಸುವ ಬರಹ ಅವಾಗಿದ್ದವು.
\r\n| Banjagere Jayaprakash
ನಾಯಕರ ಗುಣಗ್ರಾಹಿ ವಿಮರ್ಶೆಯ ಬಗ್ಗೆ ನೀವು ತೋರಿಸಿರುವ ಮೆಚ್ಚುಗೆ ನಿಜದನಿಯದ್ದಾಗಿದೆ
\r\n| Udaykumar Habbu
ಜಿ ಎಚ್ ನಾಯಕರ ವಿಮರ್ಶಾ ಕೃತಿಗಳ ಅವರ ವಸ್ತುನಿಷ್ಢ ವಿಮರ್ಶಾ ಧೋರಣೆಗಳ ನಿಜ ದನಿ ನಿಮ್ಮ ಬರಹದ್ದಾಗಿದೆ
\r\n\r\nವಿಮರ್ಶೆಯಲ್ಕಿ ರಸವಿಮರ್ಶೆ ಎಂಬುದು ಕೃತಿನಿಷ್ಠವಾದ ವಿಮರ್ಶೆ ಯಾ ಅವಲೋಕನವಾಗಿರುತ್ತದೆ. ಇದರ. ಒಂದು ಲಾಭವೆಂದರೆ ಜನಸಾಮಾನ್ಯ ಓದುಗರಿಗೆ ಕೃತಿಯನ್ನು ಓದಲು ಪ್ರೇರಣೆ ನೀಡುತ್ತದೆ ಎರಡನೆಯದಾಗಿ ಕೃತಿಕಾರನಿಗೆ ಪ್ರಚಾರ ಸಿಕ್ಕು ಅವನ ಪುದ್ತಕವು ಓದುಗರ ಗಮನ ಸೆಳೆದು ಕೃತಿ ಮಾರಾಟಕ್ಕೂ ಸಹಾಯವಾಗುತ್ತದೆ. ನಾನು ಮಾಡುತ್ತಿರುವುದು ಯಾವುದೆ ವಿಮರ್ಶಾ ಜಾರ್ಗನ್ನುಗಳಿಗೆ ಮೊರೆ ಹೋಗದೆ ಕೃತಿನಿಷ್ಠವಾಗಿ ಕೃತಿ ಯಾಕೆ ಓದುಗರಿಗೆ ಇಷ್ಟವಾಗುತ್ತದೆ ಎಂಬುದರ ಕುರಿತಾಗಿಯೂ ಬೆಳಕು ಚೆಲ್ಲುತ್ತದೆ. ಯಾವು ಯಾವುದೆ ಪಂಥಗಳ ಸಿದ್ಧಾಂತಗಳ ಕೊಟ್ಟಿಗೆಯಲ್ಲಿ ಕೃತಿಗಳನ್ನು ಕಟ್ಟಿ ಹಾಕುವುದೇಕೆ? ಚೋಮನ ದುಡಿ ಒಂದು ಕ್ಲಾಸಿಕ ಕಾದಂಬರಿ.ಬತೆದವರು ದಲಿತರೆ, ಬ್ರಾಹ್ಮಣರೆ ಎಂಬ ಅಪಸವ್ಯ ಯಾಕೆ? ಕುಡಿಯರ ಕೂಸು ಯಾವ ಮಾರ್ಗಕ್ಕೆಕಟ್ಟಿ ಹಾಕುತ್ತೀರಿ?
\r\n| Rajaram
A very perceptive write up on g.h.n.
\r\n| Shamarao
ಯಾವುದೋ ಪ್ರಪಂಚದ ಪ್ರತಿಭೆಯನ್ನು ಪರಿಚಯಮಾಡಿಸಿದಿರಿ ಹಾಗೂ ಮರೆತುಬಿಡಬಹುದಾದ ಮಾರ್ಗದರ್ಶಕ ಹಿರಿಯರನ್ನು ನೆನಪು ಮಾಡಿಸಿದಿರಿ.ಧನ್ಯವಾದಗಳು.
\r\n| Sanganagowda
ವೃತ್ತಿ, ಪ್ರವೃತ್ತಿ, ಪ್ರವೃತ್ತಿ ಸಾಹಿತ್ಯವೇ ಆದಾಗ ಯಾವುದೇ ವೃತ್ತಿಯನ್ನು ಹೊಂದಿರುವವರು ಸಂವೇದನಾಶೀಲದವರಾಗಿರುತ್ತಾರೆ
\r\n| ಡಾ. ನಿರಂಜನ ಮೂರ್ತಿ ಬಿ ಎಂ
ಜಿ.ಎಚ್. ನಾಯಕರ ಅಮೂಲ್ಯವಾದ ಸಾಹಿತ್ಯ ವಿಮರ್ಶಾ ವಿಧಾನಗಳನ್ನು ಬಿತ್ತರಿಸುವ ಈ ಲೇಖನ ಸರಳಾದ್ಭುತ! ವಿಮರ್ಶೆಗೆ ಪಠ್ಯದ ನಿಕಟ ಓದು ಮತ್ತು ವಸ್ತುನಿಷ್ಠತೆ ಬಹಳ ಮುಖ್ಯ. ಕೃತಿಯ ನಿಜದನಿ ಮತ್ತು ವಿಮರ್ಶಕನ ಪ್ರಾಮಾಣಿಕ ಧ್ವನಿಗಳು ಮಾನದಂಡಗಳಾದಾಗ ಮೌಲ್ಯಯುತ ವಿಮರ್ಶೆ ಅರಳುತ್ತದೆ. ವಿಶೇಷವೆಂದರೆ ಈ ವಿಮರ್ಶಾ ವಿಧಾನವನ್ನು ಬದುಕಿನ ಇನ್ನಿತರ ಅನೇಕ ವಲಯಗಳಲ್ಲೂ ಬಳಸಬಹುದು! ಇಂತಹ ಮೌಲ್ಯಯುತ ಬರಹಕ್ಕಾಗಿ ಹುಳಿಯಾರರಿಗೆ ಧನ್ಯವಾದಗಳು.
\r\n| Subramanya Swamy
ಜಿ .ಎಚ್ ನಾಯಕರು ಕನ್ನಡ ವಿಮರ್ಶಾ ಸಾಹಿತ್ಯ ಲೋಕದ ಸೂಕ್ಷ್ಮ ಸಂವೇದನೆಯ ಬರಹಗಾರರು ಪಂಪನಿಂದ ತೇಜಸ್ವಿ ವರೆಗೂ ಅವರ ಬರಹದ ಮೌಲಿಕ ತೇಜಸ್ವಿ ಮೆಚ್ಚುಗೆ ಪಡೆದವರಲ್ಲಿ ಇವರು ಪ್ರಮುಖರು.
\r\n| B c Prabhakar
Great reminiscing of a great writer
\r\n| B c Prabhakar
Great reminiscing of a great writer
\r\n| Dr.Mallikarjun
ನಾಯಕರ ವಿಮರ್ಶೆ ನಿಜ ದನಿಯೆಂದು ಅವರ ಒಂದು ಕೃತಿ ಯ ಹೆಸರಿನ ಮೂಲಕ ಸರಿಯಾಗಿ ಗುರುತಿಸಿದ್ದೀರಿ.ಪ್ರಾಸಂಗಿಕವಾಗಿ ನೀವು ಸೂಕ್ಷ್ಮ ಓದಿನ ಬಗ್ಗೆ ಪ್ರಸ್ತಾಪಿಸಿದ್ದೀರಿ.ಅದು ಈಗಂತೂ ತೀರ ಅಪರೂಪವಾಗಿದೆ.ಅದು ಓಟಕಿತ್ತಿದೆ.
\r\nAdd Comment