’ಕ್ರಿಟಿಸಿಸಂ’ನ ಕಾರ್ಯ ಮತ್ತು ’ಕ್ರಿಟಿಕಲ್’ ನೋಟ

ಈಚೆಗೆ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರು, ಲೇಖಕರು, ಲೇಖಕಿಯರ ಜೊತೆ ಮಾತಾಡುವಾಗ `ಕ್ರಿಟಿಕಲ್’ ಮತ್ತು ’ಕ್ರಿಟಿಸಿಸಂ’ ಈ ಎರಡು ಪದಗಳ ಬಳಕೆಯ ಬಗ್ಗೆ ಗೊಂದಲವಿರುವುದನ್ನು ಗಮನಿಸಿರುವೆ. ಮೂವತ್ತು ವರ್ಷ ಸಾಹಿತ್ಯ ಪಾಠ ಮಾಡಿರುವ ಮೇಷ್ಟರೊಬ್ಬರು ಒಂದು ಭಾಷಣದಲ್ಲಿ ಹತ್ತು ಸಲ `ಕ್ರಿಟಿಕಲ್ ಆಗಿ ನೋಡಬೇಕು’ ಎಂಬುದನ್ನು `ಟೀಕಿಸಬೇಕು’ ಎಂಬ ಅರ್ಥದಲ್ಲೇ ಬಳಸುತ್ತಿದ್ದರು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಈ ಮೇಷ್ಟ್ರು ಬಳಸುತ್ತಿದ್ದ `ಕ್ರಿಟಿಕಲ್’ ಎಂಬ ಪದ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುವ `ಟೀಕೆ’ ಅಥವಾ ಕ್ರಿಟಿಸೈಸ್ ಮಾಡುವುದು ಎಂಬ ಸರಳ ಅರ್ಥವನ್ನೇ ಮತ್ತೆ ಮತ್ತೆ ಸೂಚಿಸುತ್ತಿತ್ತು. 

ಇಂಥ ಮಾತುಗಳಿಂದ ಕೂಡ ಸಾಹಿತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಒಂದು ಕೃತಿಯ ವಿಮರ್ಶೆಯೆಂದರೆ ಅದರಲ್ಲಿರುವ ದೋಷ, ದೌರ್ಬಲ್ಯಗಳನ್ನು ಹೆಕ್ಕಿ ತೋರಿಸುವುದು ಅಥವಾ ಟೀಕಿಸುವುದು ಎಂಬುದೇ ಪ್ರಧಾನ ಅರ್ಥವಾಗಿ ಉಳಿದುಬಿಟ್ಟಿರುತ್ತದೆ. ಯಾವುದೇ ಪಠ್ಯವನ್ನು `ಕ್ರಿಟಿಕಲ್’ ಆಗಿ ನೋಡುವುದು ಎಂಬುದರ ಅರ್ಥ ಹೀಗೆ ಸೀಮಿತವಾದರೆ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ಯ ವಿಸ್ತಾರವಾದ ಕೆಲಸ ಮರೆತು ಹೋಗುತ್ತದೆ. 

ಸಾಹಿತ್ಯಕ ಸಂಸ್ಕೃತಿಯಲ್ಲಿ ಹಾಗೂ ಸಾಹಿತ್ಯದ ಟೀಚಿಂಗಿನಲ್ಲಿ ಇಂಥ ಗೊಂದಲಗಳು ಸೃಷ್ಟಿಯಾದಾಗ ಸಾಹಿತ್ಯ ವಿಮರ್ಶೆಯ ಪ್ರಾಥಮಿಕ ಪಾಠಗಳನ್ನು ಮತ್ತೆ ತಿರುವಿ ಹಾಕಿ ಸ್ಪಷ್ಟತೆ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ ಎಂಬ ಪದಕ್ಕೆ ವಿಮರ್ಶೆ ಕುರಿತು ನೀವು ಹಿಂದೆ ಕೇಳಿರುವ ವಿವರಣೆಗಳನ್ನು ಒಮ್ಮೆ ನೆನಸಿಕೊಳ್ಳಿ. ಅಥವಾ ಓ. ಎಲ್. ನಾಗಭೂಷಣಸ್ವಾಮಿಯವರ ’ವಿಮರ್ಶೆಯ ಪರಿಭಾಷೆ’ಯನ್ನು ನೋಡಿ. ವಿಮರ್ಶೆಗೆ ಪರಿಶೀಲನೆ, ಪರೀಕ್ಷೆ, ವ್ಯಾಖ್ಯಾನ, ವಿವರಣೆ, ಮೌಲ್ಯಮಾಪನ, ಕೃತಿಪ್ರಕಾಶ, ಕೃತಿ ವಿಸ್ತಾರ, ಸಮಕಾಲೀನ ಅರ್ಥನಿರ್ಮಾಣ…  ಹೀಗೆ ಹಲವು ಕೆಲಸಗಳಿರುತ್ತವೆ. ಡೇವಿಡ್ ಡೈಚಸ್‌ನ `ಕ್ರಿಟಿಕಲ್ ಅಪ್ರೋಚಸ್ ಟು ಲಿಟರೇಚರ್’ ಎಂಬ ಹಳೆಯ ಪುಸ್ತಕ ವಿಮರ್ಶೆಯ ವಿಶಾಲ ಪ್ರಕ್ರಿಯೆಯಲ್ಲಿ ಬಗೆಬಗೆಯ ಓದುಗಳು, ಅಂತರ್ ಶಿಸ್ತೀಯ ಸಂಬಂಧಗಳು ಸೇರಿರುವುದನ್ನು ವಿವರವಾಗಿ ಮಂಡಿಸುತ್ತದೆ. 

ವಿಮರ್ಶೆಯ ಚರಿತ್ರೆಯ ಈ ಹಿನ್ನೆಲೆಯಲ್ಲಿ, `ಕ್ರಿಟಿಕಲ್’ ಎಂಬ ಪದಕ್ಕೆ ಕನ್ನಡದಲ್ಲಿ ಕೆಲವೊಮ್ಮೆ ಸೀಮಿತ ಅರ್ಥ ಬಂದಿದ್ದೇಕೆ ಎಂಬುದನ್ನು ಗಮನಿಸೋಣ. ಕುವೆಂಪು ಕೃತಿಗಳ ಬಗ್ಗೆ ಹಲ ಬಗೆಯ ವಿಮರ್ಶೆಗಳು ಬಂದಿದ್ದರೂ, `ಬಿ. ಕೃಷ್ಣಪ್ಪನವರು ಕುವೆಂಪು ಬರೆದ ಎರಡು ಕಾದಂಬರಿಗಳಲ್ಲಿ ದಲಿತಲೋಕದ ಚಿತ್ರಣವನ್ನು `ಕ್ರಿಟಿಕಲ್’ ಆಗಿ ನೋಡಿದ್ದಾರೆ’ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ದಲಿತ ತಾತ್ವಿಕತೆಯ ಮೂಲಕ ಕುವೆಂಪು ಕಾದಂಬರಿಗಳನ್ನು ಪರಿಶೀಲಿಸಿದ ಕೃಷ್ಣಪ್ಪ(1938-1997), ಕುವೆಂಪುವಿನಂಥ ದೊಡ್ಡ ಲೇಖಕರಿಗೂ ದಲಿತ ಲೋಕವನ್ನು ಹತ್ತಿರದಿಂದ ನೋಡಿ ಬರೆಯಲು ಸಾಧ್ಯವಾಗಲಿಲ್ಲ; ಅವರ ದಲಿತ ಜೀವನಚಿತ್ರಣದಲ್ಲಿ ಪೂರ್ವಗ್ರಹಗಳಿವೆ. ಆದ್ದರಿಂದ ದಲಿತರ ಅಥೆಂಟಿಕ್ ಲೋಕವನ್ನು ದಲಿತ ಸಾಹಿತಿಗಳೇ ಚಿತ್ರಿಸಲು ಸಾಧ್ಯ ಎಂದು ವಾದಿಸಿದರು. ಇದು ಒಂದು ಬಗೆಯ `ಕ್ರಿಟಿಕಲ್’ ನೋಟವೂ ಹೌದು. 

ಆದರೆ `ಕ್ರಿಟಿಸಿಸಂ’ನ ವಿಶಾಲ ಪ್ರಕ್ರಿಯೆ ಹೀಗೆ `ಕ್ರಿಟಿಸೈಸ್’ ಅಥವಾ ’ಟೀಕೆ’ ಮಾಡುವುದರ ಜೊತೆಗೇ ಕುವೆಂಪು ಕೃತಿಗಳಲ್ಲಿ ಇರುವ ಇನ್ನಿತರ ಅಂಶಗಳನ್ನೂ ಓದುಗರ ಎದುರು ತೆರೆದಿಡುತ್ತದೆ: ಉದಾಹರಣೆಗೆ, ಈ ಕಾದಂಬರಿಯ ಭಾಷೆ ಓದುಗ, ಓದುಗಿಯರನ್ನು ತನ್ನೊಳಗೆ ಮಗ್ನವಾಗಿಸಿಕೊಂಡು ಅವರ ವ್ಯಕ್ತಿತ್ವ ಬೇರೆ ಥರ ಬೆಳೆಯುವಂತೆ ಮಾಡುತ್ತದೆ; ಕಾದಂಬರಿಯ ನಾಯಕ ಹೂವಯ್ಯ ಜಡ ಸಮಾಜವನ್ನು ಕದಲಿಸಲೆತ್ನಿಸುತ್ತಿದ್ದಾನೆ, ಬದಲಿಸಲೆತ್ನಿಸುತ್ತಿದ್ದಾನೆ; ಸುತ್ತಲಿನ ಜನರನ್ನು ಸೂಕ್ಷ್ಮವಾಗಿಸುತ್ತಿದ್ದಾನೆ; ಒಂದು ಸಮಾಜ ಬದಲಾಗಲು ಎಲ್ಲ ಜಾತಿಗಳ ಆಧುನಿಕ ಮನಸ್ಸಿನವರೂ ತಂತಮ್ಮ ಸಮುದಾಯಗಳ ಸ್ವವಿಮರ್ಶೆಯನ್ನು, ಸುಧಾರಣೆಯನ್ನು ಆರಂಭಿಸಬೇಕು ಎಂಬ  ಸ್ವಾತಂತ್ರ‍್ಯ ಚಳುವಳಿಯ ಕಾಲದ ತುಡಿತವನ್ನು, ಗಾಂಧೀ ನೋಟವನ್ನು ಈ ಕಾದಂಬರಿ ಹೇಳುತ್ತಿದೆ; ಕಾದಂಬರಿಯ ಕೇಂದ್ರ ಪಾತ್ರದ ಕ್ರಿಯೆ ಒಟ್ಟಾರೆಯಾಗಿ ಸಮಾಜದ ಶೂದ್ರರ, ದಲಿತರ, ಮಹಿಳೆಯರ ಬಿಡುಗಡೆಯ ಹಾದಿಯನ್ನೂ ನಿಧಾನಕ್ಕೆ ತೆರೆಯಬಹುದು…ಇವೆಲ್ಲವನ್ನೂ ಕಾದಂಬರಿಯ ಸಮಗ್ರ ವಿಮರ್ಶೆ ತೋರಿಸಿಕೊಡಬಲ್ಲದು.

ಆದ್ದರಿಂದಲೇ, `ಕ್ರಿಟಿಸಿಸಂ’ನ ಚಟುವಟಿಕೆಗೆ ಹಲವು ಕೆಲಸಗಳಿವೆ ಎಂಬುದನ್ನು ಸಾಹಿತ್ಯದ ಟೀಚರುಗಳಾದರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೃತಿಯ ವಿಮರ್ಶೆ ಕೃತಿಯಲ್ಲಿನ ಅನೇಕ ಅಂಶಗಳನ್ನು ಅನುಭವಿಸಿ, ಆ ಅನುಭವವನ್ನು ಓದುಗ, ಓದುಗಿಯರಿಗೆ ದಾಟಿಸಬೇಕಾಗುತ್ತದೆ. ಟೀಚಿಂಗಿನಲ್ಲಿ ಕ್ರಿಟಿಸಿಸಂನ ಈ ಕೆಲಸ ಪ್ರಧಾನವಾಗಿ ನಡೆಯುತ್ತಿರುತ್ತದೆ. ಕೃತಿಯ ಭಾಷೆ, ಶೈಲಿ, ಪಾತ್ರ, ವಸ್ತು, ವಸ್ತುವಿನ್ಯಾಸ ಎಲ್ಲವನ್ನೂ ವಿವರವಾಗಿ ನೋಡಬೇಕಾಗುತ್ತದೆ. ತನ್ನ ಸ್ವಂತದ ಸಿದ್ಧಾಂತ ಅಥವಾ ಫಿಲಾಸಫಿ ಯಾವುದೇ ಇದ್ದರೂ ಅದರಾಚೆಗೂ ಹೋಗಿ ಕೃತಿಯ ಸತ್ವವನ್ನು ನೋಡಬೇಕಾಗುತ್ತದೆ. 

ಹೀಗೆ ಮಾಡದಿದ್ದರೆ, `ಈ ಬಟ್ಟೆಯ ಬಣ್ಣ ಚೆನ್ನಾಗಿದೆ’; `ಆ ಬಟ್ಟೆಯ ಬಣ್ಣ ಚೆನ್ನಾಗಿಲ್ಲ’ ಎನ್ನುವ ಬಟ್ಟೆಯಂಗಡಿ ಗ್ರಾಹಕ ಗ್ರಾಹಕಿಯರಂತೆ ಓದುಗ ಓದುಗಿಯರೂ ಸೀಮಿತ ಪ್ರತಿಕ್ರಿಯೆಗಳಲ್ಲಿ ಮುಳುಗುತ್ತಾರೆ. `ಫೇಸ್ ಬುಕ್’, `ವಾಟ್ಸ್ ಆಪ್’ ವೇದಿಕೆಗಳಲ್ಲಿ ಸಡನ್ನಾಗಿ ಹೆಬ್ಬೆಟ್ಟೆತ್ತುವ, ಹೆಬ್ಬೆಟ್ಟಿಳಿಸುವ ಪ್ರತಿಕ್ರಿಯೆಕಾರರ ಆಯ್ಕೆ-ತಿರಸ್ಕಾರಗಳ ಕ್ಷಿಪ್ರ ಮಾರ್ಗವನ್ನು ಸಾಹಿತ್ಯ ವಿಮರ್ಶೆ ಅಳವಡಿಸಿಕೊಳ್ಳಲಾಗದು. ಹಾಗೆ ಮಾಡಿದರೆ ಸಾಹಿತ್ಯ ಕೃತಿಗಳ-ಒಟ್ಟಾರೆಯಾಗಿ ಎಲ್ಲ ಬಗೆಯ ಬರವಣಿಗೆಗಳ- ಓದು, ವಿಮರ್ಶೆ, ಅಧ್ಯಯನ, ಟೀಚಿಂಗ್, ಮೌಲ್ಯಮಾಪನ ಎಲ್ಲವೂ ಕ್ಷಿಪ್ರ ಪ್ರತಿಕ್ರಿಯೆಗಳ ಅವಸರದಲ್ಲಿ ಚಿಂದಿಯಾಗಿ ಹೋಗುತ್ತವೆ. ಹಲವು ವರ್ಷಗಳ ಆಳವಾದ ಅಧ್ಯಯನಗಳ ಹಿನ್ನೆಲೆಯಲ್ಲಿ ಹುಟ್ಟುವ ಕ್ಷಿಪ್ರ ಪ್ರತಿಕ್ರಿಯೆಗಳು ಕೂಡ ಗಂಭೀರವಾಗಿ `ಕ್ರಿಟಿಕಲ್’ ಆಗಿರಬಲ್ಲವು, ನಿಜ. ಅವುಗಳಲ್ಲಿ `ಕ್ರಿಟಿಸಿಸಂ’ನ ವಿಸ್ತೃತ ಕೆಲಸ ಸೇರಿಕೊಂಡಾಗ ಮಾತ್ರ ಅವು ಕೃತಿಗಳನ್ನು ಬೆಳೆಸಬಲ್ಲವು.  

‘ಈಗಿನ ಪರಿಸ್ಥಿತಿಯಲ್ಲಿ ನಮ್ಮ ಕ್ಲಾಸ್‌ ರೂಮುಗಳಲ್ಲಿ ಒಂದು ಪಠ್ಯ ಟೀಚ್ ಮಾಡುವಾಗ ಯಾವುದಾದರೂ ಧರ್ಮವನ್ನು `ಕ್ರಿಟಿಕಲ್’ ಆಗಿ ನೋಡುವುದು ಕಷ್ಟವಾಗಿದೆಯಲ್ಲ?’ ಎಂದು ಸಾಹಿತ್ಯದ ಅಧ್ಯಾಪಕರೊಬ್ಬರು ಈಚೆಗೆ ಕೇಳಿದರು. ಅವರ ಕಷ್ಟ ಎಲ್ಲರಿಗೂ ಅರ್ಥವಾಗುತ್ತದೆ. ಅವರ ಮಾತಿನ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ಹೀಗೆನ್ನಿಸಿತು: 

`ನಮ್ಮ ಸಮಾಜದಲ್ಲಿ `ಜಾತ್ಯತೀತತೆ’, `ಉದಾರವಾದ’, `ಸಮಾನತೆ’, `ವೈಚಾರಿಕತೆ’ ಇತ್ಯಾದಿ ಪದಗಳು ಮಕ್ಕಳ ಕಿವಿಗೆ ಬೀಳದೆ, ತಿರುಪತಿ ಲಡ್ಡು, ಜಾತೀಯತೆ, ಸಂಕುಚಿತ ಅರ್ಥದ ಧರ್ಮ…ಇತ್ಯಾದಿ ಪದಗಳು ಕಿವಿಗೆ ಬೀಳುತ್ತಿವೆ; ಇಂಥ ಕಾಲದಲ್ಲಿ ಮಕ್ಕಳ ಮನಸ್ಸಿನ ವಿಕಾರಗಳಿಗೆ `ಮನೆಯೆ ಮೊದಲ ಪಾಠಶಾಲೆ’ಯಾಗಿದೆ; ಹಾದಿ ಬೀದಿಗಳು, ಸಮಾಜ, ಹಾಗೂ ಒಂದು ವರ್ಗದ ಮಾಧ್ಯಮಗಳು ಈ ವಿಕಾರಗಳ `ಹೈಯರ್ ಎಜುಕೇಶನ್’ ಸೆಂಟರುಗಳಾಗಿವೆ. ಈ ಭಾಷೆ ನ್ಯಾಯಾಧೀಶರುಗಳ ನಾಲಗೆಯಿಂದಲೂ ಉದುರತೊಡಗಿದೆ. ಇಂಥ ಸಂದರ್ಭದಲ್ಲಿ ಯಾವುದಾದರೂ ಧರ್ಮವನ್ನು ‘ಟೀಕಿಸುವುದು’, ಅಂದರೆ ಸರಳ ಅರ್ಥದಲ್ಲಿ ‘ಕ್ರಿಟಿಕಲ್ ಆಗಿರುವುದು’ ಕಷ್ಟ. ಆದರೆ ‘ಕ್ರಿಟಿಸಿಸಂ’ನ ಇತರ ಸಲಕರಣೆಗಳನ್ನು ಬಳಸಿ ಪಠ್ಯಗಳಲ್ಲಿರುವ ಧರ್ಮದ ನಿಜವಾದ ಅರ್ಥವನ್ನು ತೋರಿಸಬಹುದು. ಜೈನ ಧರ್ಮದ ಬಗ್ಗೆ ಪಂಪ, ಜನ್ನರ ಕೃತಿಗಳು ಏನು ಹೇಳುತ್ತಿವೆ ಎಂಬುದನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡಿಯಂತೆ ತೋರಿಸುತ್ತಾ, ಈಗ ಏನಾಗುತ್ತಿದೆ ಎಂಬುದನ್ನು ನೋಡಲು ಸೂಚಿಸಬಹುದು.

ಇದೆಲ್ಲದರ ಕುರಿತು ಟಿಪ್ಪಣಿ ಮಾಡುತ್ತಿರುವಾಗ ಮುಡಾ ಪ್ರಕರಣದ ಬಗೆಗಿನ ಹೈಕೋರ್ಟ್ ತೀರ್ಪಿನ ೧೯೭ ಪುಟಗಳ ಕಾಪಿಯನ್ನು ತರುಣ ಲಾಯರೊಬ್ಬರು ಕಳಿಸಿದರು. ಪಠ್ಯದ ನಿಕಟ ಓದು ಕೂಡ ವಿಮರ್ಶೆಯ ಭಾಗವೇ ತಾನೆ? ಇದೀಗ ಈ ತೀರ್ಪನ್ನು ವಿವರವಾಗಿ ಗ್ರಹಿಸುವ, ಕ್ರಿಟಿಕಲ್ ಆಗಿ ಪರೀಕ್ಷಿಸುವ ಹಾಗೂ ತೀರ್ಪಿನ ಪರಾಮರ್ಶೆ ಮಾಡುವ ‘ಕ್ರಿಟಿಸಿಸಂ’ ಇವೆಲ್ಲವೂ ಈ ಸನ್ನಿವೇಶದಲ್ಲಿ ಅತ್ಯಗತ್ಯ ಎನ್ನಿಸತೊಡಗಿತು.  

ವಿಮರ್ಶೆಯ ಈ ಮುಖ್ಯ ಕೆಲಸಗಳು ತರಗತಿಗಳಲ್ಲೂ ಆರಂಭವಾದರೆ ಮಕ್ಕಳ ಸಂವೇದನೆ ಹರಿತವಾಗತೊಡಗುತ್ತದೆ. ಕ್ರಿಟಿಸಿಸಂನ ಕೆಲಸಗಳಲ್ಲಿ ’ಅಭಿರುಚಿಯನ್ನು ತಿದ್ದುವುದು’ (’ಕರೆಕ್ಷನ್ ಆಫ್ ಟೇಸ್ಟ್’) ಕೂಡ ಮುಖ್ಯವಾದುದು ಎನ್ನುತ್ತಾನೆ ಎಲಿಯಟ್. ಈ ಕೆಲಸ ಮೊದಲು ಶುರುವಾದರೆ, ನಂತರ ’ಕ್ರಿಟಿಕಲ್’ ಆಗಿ ನೋಡುವ ಬಗೆಯನ್ನು ಕಲಿಸಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲು ಕುವೆಂಪು ಸಾಹಿತ್ಯದ ಸತ್ವವನ್ನು ಕಲಿಸಿ ಓದುಗಲೋಕವನ್ನು ಅರಳಿಸೋಣ. ಕುವೆಂಪುವಿನ ಭಾವಗೀತೆಯ ಸಾಧ್ಯತೆಯನ್ನು ತೋರಿಸಿ ಮಕ್ಕಳ ಮನಸ್ಸನ್ನು ಉದಾರವಾಗಿಸೋಣ. ನಂತರ ಕುವೆಂಪು ಕಾದಂಬರಿಯ ಬಗ್ಗೆ ಕೃಷ್ಣಪ್ಪನವರು ಎತ್ತಿದ ಪ್ರಶ್ನೆಯನ್ನೋ, ’ಮನೆ ಮನೆಯ ತಪಸ್ವಿನಿಗೆ’ ಪದ್ಯದ ಬಗ್ಗೆ ಸ್ತ್ರೀವಾದಿ ಚಿಂತಕಿ ಎಲ್. ಸಿ. ಸುಮಿತ್ರ ಅವರು ಎತ್ತಿರುವ ’ಕ್ರಿಟಿಕಲ್’ ಪ್ರಶ್ನೆಗಳನ್ನೋ ಮುನ್ನಲೆಗೆ ತರೋಣ. ಆಗ ’ಕ್ರಿಟಿಸಿಸಂ’ ಹಾಗೂ ’ಕ್ರಿಟಿಕಲ್ ನೋಟ’ ಎರಡೂ ತಂತಮ್ಮ ಕೆಲಸ ಮಾಡುತ್ತಿರುತ್ತವೆ. ಹಲವು ಓದುಗಳು ಬೆಳೆಯುತ್ತಿರುತ್ತವೆ.  

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:

Comments

24 Comments



| ಶಿವಲಿಂಗೇಗೌಡ ಡಿ

ಕ್ರಿಟಿಸಿಸಂನ ವಿಸ್ತೃತ ಕಾರ್ಯಗಳ ಬಗೆಗೆ, ಸಾಹಿತ್ಯದ ಓದಿನ ಸಾಧ್ಯತೆಯ ಬಗೆಗೆ ನಮ್ಮ ಅರಿವನ್ನ ವಿಸ್ತರಿಸುವ ಲೇಖನ. ಉತ್ತಮ ಲೇಖನ ಸರ್


|


|


|


| Dr.Gangadhar

ಕೃತಿ ಪರಿಶೀಲನೆಗೆ ಮಾರ್ಗದರ್ಶಿ


| Dr.Kavyashri

I have read it some where: \'Although the concept of a critic had existed for centuries, the word critic wasn\'t used in its modern sense until Shakespeare used it in his play Love\'s Labour Lost\'


| Vikram Visaji

ಯಾವತ್ತಿನಂತೆ ಸೂಕ್ಷ್ಮ ಬರಹ


| Sabita Bannadi

ಓದಿನ ಸಾಧ್ಯತೆ ಯ ಕುರಿತ ಸಮತೂಕದ ಬರಹ


| Dr.Mohan

Very useful writing for teachers, readers, students and writers


| Banjagere Jayaprakash

ಕ್ರಿಟಿಸೈಸ್ ಮತ್ತು ಕ್ರಿಟಿಸಿಸಂ ನಡುವಿನ ವ್ಯತ್ಯಾಸವನ್ನು ಮನ ಮುಟ್ಟುವಂತೆ ನಿರೂಪಿಸಿದ್ದೀರಿ.


| Suresha B

ಕ್ರಿಟಿಸಿಸಂ ಎಂಬ ಪದ ಇತ್ತೀಚೆಗೆ ಅದೆಷ್ಟು ದುರ್ಬಳಕೆ ಆಗಿದೆಯೆಂದರೆ ಮತ್ತೆ ಮತ್ತೆ ಆ ಪದದ ನಿರ್ವಚನವನ್ನು ಹೊಸ ತಲೆಮಾರಿಗೆ ದಾಟಿಸಬೇಕಾದ ಅಗತ್ಯ ಬಂದಿದೆ. ಈ ಲೇಖನವನ್ನು ಆರಂಭ ಎಂದುಕೊಂಡು ಕ್ರಿಟಿಸಸಂ, ಕ್ರಿಟಿಕಲ್ ಅಪ್ರೋಚ್ ಕುರಿತು ಸರಣಿ ಲೇಖನ ಬರೆಯಿರಿ ಎಂದು ಎಲ್ಲಾ ಹಿರಿಯ ವಿಮರ್ಶಕರಿಗೂ ಹೇಳಬೇಕು. ಆ ಮೂಲಕ \'ಹೊಗಳಿಕೆ ತೆಗಳಿಕೆ\' ತರಹದ ತೆಳು ಪದಗಳಿಗೆ ಮೀರಿದ್ದು ಕ್ರಿಟಿಸಿಸಂ ಎಂಬ ಸತ್ಯ ದಾಟಿಸಬೇಕಿದೆ.


| Sadanand R.

Good theme. Well written. The teacher in you is reaching out through your column writing


| CG Lakshmipathi

ಇಷ್ಟವಾಯಿತು. ಪಾಠವೂ ಆಯಿತು. ಸಮಾಜ ವಿಮರ್ಶೆಗೂ ಅಗತ್ಯವಾದ ಬರಹ


| CG Lakshmipathi

ಇಷ್ಟವಾಯಿತು. ಪಾಠವೂ ಆಯಿತು. ಸಮಾಜ ವಿಮರ್ಶೆಗೂ ಅಗತ್ಯವಾದ ಬರಹ


| Anil

ಕ್ರಿಟಿಸಿಸಂ ಕುರಿತ ಲೇಖನ ಕಾಯ್ದಿರಿಸಿ, ಮತ್ತೆ ಮತ್ತೆ ಓದಬೇಕಾದ ಲೇಖನ. 💐🙏🏻💐


|


| ರವಿಕುಮಾರ್

ಈ ಬರಹವನ್ನು ಓದುತ್ತಿರುವಾಗ ಕಿರಂ ನೆನಪಾದರು. ಅನಂತಮೂರ್ತಿ ಯವರು ಹೇಳುತ್ತಿದ್ದ ಕ್ರಿಟಿಕಲ್ ಇನ್ ಸೈಡರ್ ಪದ ನೆನಪಾಯಿತು.ಮೊನ್ನೆಯಷ್ಟೆ ದೇವನೂರರ ಜತೆ ಮಾತನಾಡುತ್ತಿದ್ದಾಗ ಕುವೆಂಪು ಕಾದಂಬರಿಗಳ ಬಗೆಗೆ ಮಾತನಾಡಿದ್ದು ನೆನಪಾಯಿತು. ನನ್ನ ಈ ದಿನದ ಬೆಳಗನ್ನು ಸಾರ್ಥಕಗೊಳಿಸಿದ ನಿಮ್ಮ ಬರಹಕ್ಕೆ ಧನ್ಯವಾದಗಳು.


| Vishukumar N R

ವಿಮರ್ಶೆ ಎನ್ನುವುದು ವಿಶಾಲ ಅರ್ಥದ ಪದ. ಓದುಗರ ತಿಳಿವಳಿಕೆಯ\r\nಆಳ ವಿಸ್ತಾರಗಳು ಮತ್ತು ಒಲವು ನಿಲುವುಗಳು ವಿಮರ್ಶೆಯ ದಿಕ್ಕು ದೆಸೆಯನ್ನು ನಿರ್ಧರಿಸುತ್ತವೆ. ಮುಕ್ತ ಸಮಾಜ ಒಪ್ಪಿತವಾದ ಮೌಲ್ಯಗಳ ಹಿನ್ನೆಲೆಯಲ್ಲಿ ವಿಮರ್ಶೆ ಮಾಡುವುದೇ ಸರಿಯಾದ ಮಾರ್ಗ . \r\n


| Vishukumar N R

ವಿಮರ್ಶೆ ಎನ್ನುವುದು ವಿಶಾಲ ಅರ್ಥದ ಪದ. ಓದುಗರ ತಿಳಿವಳಿಕೆಯ\r\nಆಳ ವಿಸ್ತಾರಗಳು ಮತ್ತು ಒಲವು ನಿಲುವುಗಳು ವಿಮರ್ಶೆಯ ದಿಕ್ಕು ದೆಸೆಯನ್ನು ನಿರ್ಧರಿಸುತ್ತವೆ. ಮುಕ್ತ ಸಮಾಜ ಒಪ್ಪಿತವಾದ ಮೌಲ್ಯಗಳ ಹಿನ್ನೆಲೆಯಲ್ಲಿ ವಿಮರ್ಶೆ ಮಾಡುವುದೇ ಸರಿಯಾದ ಮಾರ್ಗ . \r\n


| G S Rajendra Asura Naadu

ಇದು corrupt the taste ಕಾಲಘಟ್ಟದ ಉತ್ತುಂಗ. ನೀವು ಎಲಿಯಟ್ ಮಾತನ್ನು \'correction of taste\' ಸರಿಯಾಗಿಯೇ ಬಳಸಿಕೊಂಡು ಹೇಳಬೇಕಾದುದನ್ನು ಸರಳವಾಗಿ present ಮಾಡಿದ್ದೀರಿ. ಸಾಹಿತಿಗಳಿಗೆ, ವಿಮರ್ಶಕರಿಗೆ, ಓದುಗರಿಗೆ ಹೀಗೆ ಒಟ್ಟಾರೆ ಓದಿನ ಜಗತ್ತು ಈ ಲೇಖನವನ್ನು ಒಂದು ಸೂತ್ರ ಎಂದು ಉಳಿಸಿಕೊಳ್ಳುವುದು ಸೂಕ್ತ.


| Prathiksha

Abcd


| ಡಾ. ನಿರಂಜನ ಮೂರ್ತಿ ಬಿ ಎಂ

ಕ್ರಿಟಿಸಿಜಂನ ಕಾರ್ಯ ಮತ್ತು ಕ್ರಿಟಿಕಲ್ ನೋಟ ಎಂಬ ಶೀರ್ಷಿಕೆಯ ಲೇಖನ, ಒಂದೇ ಪದಮೂಲದ ಕ್ರಿಟಿಸಿಜಂ ಎಂಬ ನಾಮಪದ ಮತ್ತು ಕ್ರಿಟಿಕಲ್ ಎಂಬ ನಾಮವಿಶೇಷಣಪದಗಳ ಕಾರ್ಯ ಮತ್ತು ನೋಟಗಳ ಮಧ್ಯದ ವ್ಯತ್ಯಾಸವನ್ನು ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದೆ. ಸಾಹಿತ್ಯದ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಆಸಕ್ತ ಓದುಗರಿಗೆ ತುಂಬಾ ಅಗತ್ಯವಾದ ಸೂಕ್ಷ್ಮ ಒಳನೋಟಗಳನ್ನು ನೀಡಿದೆ. \r\nಕ್ರಿಟಿಕಲ್ ಆಗಿ ನೋಡುವುದು ಮತ್ತು ವಿಮರ್ಶೆ ಮಾಡುವುದು ಭಿನ್ನ. ನೋಟ ಒಂದು ಕೃತಿಯ ಯಾವುದೋ ಒಂದೆರಡು ಅಂಶಗಳನ್ನು ಮಾತ್ರ ಗುರುತಿಸಿದರೆ, ವಿಮರ್ಶೆ ಇಡೀ ಕೃತಿಯನ್ನು ಸಂಪೂರ್ಣವಾಗಿ ಗುರುತಿಸುತ್ತದೆ. ಕ್ರಿಟಿಕಲ್ ನೋಟ ಭಾಗಿಕ, ಕ್ರಿಟಿಸಿಜಂ ಕಾರ್ಯ ಸಮಗ್ರ. ಅತ್ಯಂತ ಉಪಯುಕ್ತ ಲೇಖನ.


| Doreswamy

\r\nಸರಿಯಾಗಿ ಓದದೆ ಒದರುವವರು ಸೃಷ್ಟಿಸುವ ಗೊಂದಲಗಳಿಂದ ಓದುಗರನ್ನು ಉಳಿಸಲು ನೆರವಾಗುವ ನೋಟ


| ಶಿವಲಿಂಗಮೂರ್ತಿ

ವಿಮರ್ಶೆಯನ್ನು ಕುರಿತ ನಿಮ್ಮ ಈ ಬರಹ ಅಧ್ಯಾಪಕರಿಗೆ ಒಳ್ಳೆಯ ಸಲಹೆಯಾಗಿದೆ. ಹೊಸದಾಗಿ ಆಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದವರಿಗಂತೂ ಈ ಮೌಲಿಕವಾದ ಮಾತುಗಳ ಅಗತ್ಯವಿದೆ. ಓರಿಯೆಂಟೇಶನ್, ರಿಪ್ರೆಷರ್ ಕೋರ್ಸುಗಳಲ್ಲಿ ಅಧ್ಯಾಪಕರಿಗೆ ಇಂತಹ ವಿಚಾರಗಳು ತಲುಪಿದರೆ ಇನ್ನು ಒಳ್ಳೆಯದು.\r\nಕುವೆಂಪು ಅವರು ಪ್ರತಿಪಾದಿಸುವ ಸರ್ವೋದಯ ಸಮನ್ವಯ ಪೂರ್ಣ ದೃಷ್ಟಿ ತತ್ವಗಳು ಎಂದಿಗೂ ಎಲ್ಲರಿಗೂ ದಾರಿ ದೀಪಗಳು.




Add Comment






Recent Posts

Latest Blogs



Kamakasturibana

YouTube