ಮುಗ್ಧತೆ: ಬತ್ತದ ಒರತೆ

'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಗುಂಗಿನಲ್ಲಿದ್ದ ಆ ಓದುಗ, ಓದುಗಿಯರು ಮುಗ್ಧತೆಯ ಮ್ಯೂಸಿಯಂನಿಂದ ಹೊರ ಹೋಗಲು ಸಿದ್ಧವೇ ಇರಲಿಲ್ಲ! ಕಳೆದ ವಾರ ಈ ಅಂಕಣದಲ್ಲಿ ಪ್ರಕಟವಾದ ‘ಕಾದಂಬರಿ, ಮ್ಯೂಸಿಯಂ ಮತ್ತು ಮುಗ್ಧತೆ’ READ HERE ಬರೆದವನಿಗಂತೂ ಆ ಮಂಪರಿನಿಂದ ಹೊರ ಬರುವ ತುರ್ತೂ ಇರಲಿಲ್ಲ, ಇರಾದೆಯೂ ಇರಲಿಲ್ಲ! ಅತ್ತ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ೨೦೦೮ರಲ್ಲಿ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಬರೆದು, ೨೦೧೨ರಲ್ಲಿ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಸಂಗ್ರಹಾಲಯ ಮಾಡಿದ ಮೇಲೂ ಮುಗ್ಧತೆಯ ಗುಂಗಿನಲ್ಲೇ ಇದ್ದ; ಮ್ಯೂಸಿಯಂ ಕ್ಯಾಟಲಾಗ್ ಬರೆವ ನೆಪದಲ್ಲಿ ‘ಇನ್ನೊಸೆನ್ಸ್ ಆಫ್ ಆಬ್ಜೆಕ್ಸ್ಟ್’ ಪುಸ್ತಕ ಬರೆದ; ಅಲ್ಲಿ ಮುಗ್ಧತೆಯ ಇನ್ನಷ್ಟು ಹೊಸ ವ್ಯಾಖ್ಯಾನಗಳಿದ್ದವು!

ಪಾಮುಕ್ ಇದೇ ಲಹರಿಯಲ್ಲಿದ್ದಾಗ ಸಿನಿಮಾ ನಿರ್ದೇಶಕ ಗ್ರಾಂಟ್ ಗೀ ಇಸ್ತಾನ್‌ಬುಲ್ ನಗರಕ್ಕೆ ಬಂದು ಮ್ಯೂಸಿಯಂ ನೋಡಿ ಬೆರಗಾದ; `ಇನ್ನೊಸೆನ್ಸ್ ಆಫ್ ಮೆಮೊರೀಸ್’ ಎಂಬ ಸಿನಿಮಾ ಮಾಡಲು ಹೊರಟ. ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆಯಲು ಗೀ ಜೊತೆ ಸೇರಿಕೊಂಡ ಪಾಮುಕ್ ಅವನ ಜೊತೆ ಹಲವು ರಾತ್ರಿ ಇಸ್ತಾನ್‌ಬುಲ್ ಸುತ್ತಿದ. ಹೀಗೆ ಸುತ್ತಿ ಸುಳಿದು ‘ಎ ಸ್ಟ್ರೇಂಜ್‌ನೆಸ್ ಇನ್ ಮೈ ಮೈಂಡ್’ ಕಾದಂಬರಿ ಬರೆದ!

ಈ ರಾತ್ರಿಗಳ ಅಡ್ಡಾಟದಲ್ಲಿ ಹಲವು ಫಿಲಸಾಫಿಕಲ್ ಪ್ರಶ್ನೆಗಳು ಪಾಮುಕ್‌ಗೆ ಎದುರಾದವು: ‘ಈ ನಗರದಲ್ಲಿ ನಾವು ಸುಂದರವಾದ ಏನೋ ಒಂದನ್ನು ನೋಡುತ್ತಿರುವಾಗ ಅಲ್ಲಿ ಕಾಣುವ ಸೌಂದರ್ಯ ಆ ವಸ್ತುವಿನಲ್ಲಿದೆಯೋ? ಅಥವಾ ಆ ಸೌಂದರ್‍ಯ ನಮ್ಮ ನಾಸ್ಟಾಲ್ಜಿಯಾದಲ್ಲಿ-ಹಿಂದಣ ನೆನಪಿನ ವಿಷಾದಮಯ ಮಧುರ ಯಾತನೆಯಲ್ಲಿ- ಇದೆಯೋ? ...ಹೀಗೆ ಯೋಚಿಸುತ್ತಾ ನಮ್ಮ ಸುತ್ತಣ ಇರುವ ಪ್ರತಿ ವಸ್ತುವಿನಲ್ಲೂ ಒಂದು ಕತೆಯಿದೆ ಎಂಬುದು ಪಾಮುಕ್‌ಗೆ ಮನವರಿಕೆಯಾಯಿತು: ‘ಮ್ಯೂಸಿಯಂ ಎನ್ನುವುದು ರಾಜರ ಚರಿತ್ರೆಯ, ರಾಷ್ಟ್ರದ ಚರಿತ್ರೆಯ ಸಂಗ್ರಹಾಲಯವಾಗಬಾರದು; ಅಲ್ಲಿ ಆಧುನಿಕ ಕಾದಂಬರಿಯಂತೆ ಸಾಮಾನ್ಯ ಮನುಷ್ಯರ ಬದುಕು, ಹಾಗೂ ಅವರ ವಸ್ತುಗಳನ್ನು ಜೋಡಿಸಿಡಬೇಕು’ ಎನ್ನಿಸಿತು.

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಬರೆಯಲು, ಅದರ ಜೊತೆಗೆ ಕಾದಂಬರಿಯ ಕಥಾನಾಯಕ ಕೇಮಲ್ ಮಾಡಿದಂಥ ಮ್ಯೂಸಿಯಂ ಮಾಡಲು ವಸ್ತುಗಳನ್ನು ಸಂಗ್ರಹಿಸಲು ಅಡ್ಡಾಡಿದ ಅನುಭವ ಕುರಿತು ಪಾಮುಕ್ ಬರೆಯುತ್ತಾನೆ: ‘ಸೇದಿ ಬಿಟ್ಟ ಸಿಗರೇಟ್ ತುಂಡುಗಳು, ಆಶ್ ಟ್ರೇಗಳು, ಮಾತ್ರೆಯ ಡಬ್ಬಿಗಳು , ಐಡೆಂಟಿಟಿ ಕಾರ್ಡುಗಳು, ಪಾಸ್‌ಪೋರ್‍ಟ್‌  ಫೋಟೋಗಳು… ಇವನ್ನೆಲ್ಲ ಕಲೆಕ್ಟ್ ಮಾಡುತ್ತಾ ನನಗೆ ಹೊಳೆಯಿತು: ‘ಕಾದಂಬರಿ ಬರೆಯಲು ವಾಸ್ತವಾಂಶಗಳನ್ನು, ಕತೆಗಳನ್ನು ಕಲೆಕ್ಟ್ ಮಾಡುವುದು ಮ್ಯೂಸಿಯಂಗೆ ವಸ್ತುಗಳನ್ನು ಸಂಗ್ರಹಿಸುವುದಕ್ಕಿಂತ ಭಿನ್ನವಲ್ಲ.’

‘ಕಾದಂಬರಿ ಬರೆಯುವಾಗ ಮ್ಯೂಸಿಯಂ ಕುರಿತು ಯೋಚಿಸುತ್ತಿದ್ದೆ; ಮ್ಯೂಸಿಯಂ ಮಾಡುವಾಗ ಕಾದಂಬರಿ ಕುರಿತು ಯೋಚಿಸುತ್ತಿದ್ದೆ’ ಎನ್ನುವ ಪಾಮುಕ್, ಮ್ಯೂಸಿಯಂನಲ್ಲಿರುವ ಒಂದೊಂದು ವಸ್ತುವಿನ ಮೂಲಕವೂ ಕತೆ ಹೇಳುವ ತಂತ್ರ ಬಳಸಲು ಯೋಚಿಸಿದ್ದ; ಆದರೆ ಅದು ಕೈಗೂಡಲಿಲ್ಲ. ಕಾದಂಬರಿಯ ವಸ್ತುವೇ ತನ್ನ ತಂತ್ರವನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಇಂಗ್ಲಿಷ್ ನವ್ಯ ವಿಮರ್ಶೆ ಹಾಗೂ ಕನ್ನಡ ನವ್ಯ ವಿಮರ್ಶೆಗಳು ಹೇಳಿದ್ದು ಕರಾರುವಾಕ್ಕಾಗಿದೆ!

ಅದಿರಲಿ. ಪಾಮುಕ್ ಕಾದಂಬರಿ ಹಾಗೂ ಮ್ಯೂಸಿಯಮ್ಮಿನ ಮುಗ್ಧತೆಯ ಸ್ವರೂಪ ಕುರಿತು ಕನ್ನಡದ ವಿಶಿಷ್ಟ ಲೇಖಕ, ಲೇಖಕಿಯರು ಕಳೆದ ವಾರ ಮಾಡಿದ ಕಾಮೆಂಟುಗಳಲ್ಲಿ ಮುಗ್ಧತೆಯ ಕಲ್ಪನೆಯನ್ನು ವಿಸ್ತರಿಸಿದ ಕ್ರಮ ಅನನ್ಯವಾಗಿದೆ. ಅಂಥ ಕೆಲವು ಬರಹಗಳು ಕಳೆದ ವಾರದ ಅಂಕಣದ ಕಾಮೆಂಟ್ ವಿಭಾಗದಲ್ಲಿವೆ: READ HERE

ಈ ಬಗೆಯ ತೀವ್ರ ಸ್ಪಂದನಗಳನ್ನು ನಾನು ‘ಪ್ರತಿಕ್ರಿಯೆ’ ಎನ್ನದೆ ‘ಸಹ-ಬರವಣಿಗೆ’ ಎನ್ನುತ್ತೇನೆ. ಈ ವೆಬ್‌‌ಸೈಟ್ ಹಾಗೂ ಅಂಕಣ ಶುರುವಾದಾಗಿನಿಂದಲೂ ನಾನು ಇದು ಸಾಹಿತ್ಯ, ಸಂಸ್ಕೃತಿಗಳ ಸಹಪಯಣಿಗರ ‘ಕಲೆಕ್ಟೀವ್ ಹುಡುಕಾಟ’ ಎಂದೇ ನಂಬಿ ಬರೆಯುತ್ತಾ, ಹಲವರಿಂದ ಕಲಿಯುತ್ತಾ ಬಂದಿರುವೆ.

ಗೆಳೆಯರಾದ ಬಂಜಗೆರೆ ಜಯಪ್ರಕಾಶ್, ಗುಂಡಣ್ಣ ಚಿಕ್ಕಮಗಳೂರು, ಚಂದ್ರಶೇಖರ ತಾಳ್ಯ- ಮೂವರೂ ವಿಭಿನ್ನ ಧಾರೆಯ ಲೇಖಕ-ಬುದ್ಧಿಜೀವಿಗಳು. ಬಂಜಗೆರೆ ಹಾಗೂ ಗುಂಡಣ್ಣ ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ಹೆಚ್ಚು ಒಪ್ಪಿದವರು. ಚಂದ್ರಶೇಖರ ತಾಳ್ಯ ಕವಿ ಹಾಗೂ ಪ್ರಗತಿಪರ ಧಾರೆಗಳನ್ನು ಒಪ್ಪಿದ ಚಿಂತಕ. ಈ ಮೂವರೂ ತಾವು ಕಂಡ ಮಗ್ಧತೆಯ ಲೋಕಗಳನ್ನು ಕುರಿತು ಬರೆದಿದ್ದಾರೆ.  ಬಂಜಗೆರೆ ಹುಡುಕಿದ ಭಾರತೀಯ ಕಾದಂಬರಿಗಳು, ಸಿನಿಮಾಗಳವರೆಗಿನ ಪ್ರೇಮಲೋಕ; ಮಗ ಶಶಾಂಕನ ವಸ್ತುಗಳ ಬಗ್ಗೆ ಗುಂಡಣ್ಣನವರ ಎದೆಯ ದನಿ; ಸಲೀಂ-ಅನಾರ್ಕಲಿ, ದೇವದಾಸ್, ಅಮೃತಾ ಪ್ರೀತಂವರೆಗೂ ಕೈ ಚಾಚಿದ ಕವಿ ಚಂದ್ರಶೇಖರ ತಾಳ್ಯ…

ಈ ಪಟ್ಟಿ ಬೆಳೆಯುತ್ತದೆ… ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಮೂಲಕ ಹಬ್ಬಿದ ಮುಗ್ಧತೆಯ ಲೋಕ ಕಂಡು ಭಾವಪರವಶರಾದ ಕೆ. ಪುಟ್ಟಸ್ವಾಮಿ ಸಿನಿಮಾ ಚರಿತ್ರಕಾರರು, ವಿಜ್ಞಾನ ಬರಹಗಾರರು. ಕ್ಲಾಸ್ ರೂಮಿನಲ್ಲಿ ಮುಗ್ಧತೆಯ ಹುಡುಕಾಟ ನಡೆಸಿರುವ ಮಂಜುನಾಥ ನೆಟ್ಕಲ್, ಶಿವಲಿಂಗೇಗೌಡ ನನ್ನ ಎಂ.ಎ. ವಿದ್ಯಾರ್ಥಿಗಳಾಗಿದ್ದವರು; ಈಗ ಕನ್ನಡ ಅಧ್ಯಾಪಕರು. ಮ್ಯೂಸಿಯಮ್ಮಿನ ಮುಗ್ಧತೆಗೆ ಮನಸೋತವರಲ್ಲಿ ಮೂವರು ಕನ್ನಡದ ಪ್ರಖರ ಸ್ತ್ರೀವಾದಿ ಚಿಂತಕಿಯರು. ಶೂದ್ರ ಶ್ರೀನಿವಾಸ್ ಹಲಬಗೆಯ ಚಿಂತನೆಗಳ ವೇದಿಕೆಯಾಗಿದ್ದ ‘ಶೂದ್ರ’ ಮಾಸಪತ್ರಿಕೆ ನಡೆಸಿದವರು; ಕತೆಗಾರರು… ಎ.ಎಸ್. ಪ್ರಭಾಕರ್ ವಿಶಿಷ್ಟ ಸಮಾಜ ವಿಜ್ಞಾನಿ; ಹಿರಿಯರಾದ ಬಿ.ಸಿ. ಪ್ರಭಾಕರ್ ಫಿಸಿಕ್ಸ್ ಪ್ರೊಫೆಸರ್‌.; ಹರಿಹರದ ಗುರುಪ್ರಸಾದ್ ವಿಶಿಷ್ಟ ಸಾಹಿತ್ಯಜೀವಿ, ನಿರಂಜನ್ ಇಂಗ್ಲಿಷ್ ಪ್ರೊಫೆಸರ್‌, ಡಾಮಿನಿಕ್ ಕನ್ನಡ ಪ್ರೊಫೆಸರ್‌…

ಇದು ವಂದನಾರ್ಪಣೆಯ ಪಟ್ಟಿಯಲ್ಲ! ನಮ್ಮ ಈ ಕಾಲದಲ್ಲಿ ಮುಗ್ಧತೆಯ ಹುಡುಕಾಟ ಎಲ್ಲ ವಲಯಗಳಲ್ಲೂ ನಡೆಯುತ್ತಿರುತ್ತಿದೆ; ಇದು ಎಂದೂ ಬತ್ತದ ಒರತೆ ಎಂಬ ಸಂಭ್ರಮವನ್ನು ಹಂಚಿಕೊಳ್ಳಲು ಈ ಕೆಲವು ಹೆಸರುಗಳನ್ನು ಉಲ್ಲೇಖಿಸಿರುವೆ. ಕನ್ನಡ ಪ್ರಗತಿಪರ ವಲಯದ ಈ ಎಲ್ಲರೂ ಒರಾನ್ ಪಾಮುಕ್ ಕೊಟ್ಟ ಮ್ಯೂಸಿಯಮ್ಮಿನ ಮುಗ್ಧತೆಯ ಹೊಸ ರೂಪಕ ಕಂಡು ರೋಮಾಂಚನಗೊಂಡವರು; ಗೆಳೆಯ, ಗೆಳತಿಯರ ಆಪ್ತ ಲೋಕದಲ್ಲಿ ಶುರುವಾದ ಮುಗ್ಧತೆಯ ಮರು ಹುಡುಕಾಟ ಕಂಡು ಮುಗ್ಧತೆಯ ಹುಡುಕಾಟದ ಇನ್ನಷ್ಟು ಚರ್ಚೆಗಳತ್ತ ತಿರುಗಿದೆ.

ಮನೋವಿಜ್ಞಾನಿ ರೋಲೋ ಮೇ ಹೇಳುವ ಎರಡು ಬಗೆಯ ಮುಗ್ಧತೆಗಳನ್ನು ಅಶೀಶ್ ನಂದಿ ಉಲ್ಲೇಖಿಸುತ್ತಾರೆ; ಈ ಬಗ್ಗೆ ನನ್ನ ಇನ್ನಿತರ ಪುಸ್ತಕಗಳಲ್ಲಿ ಚರ್ಚಿಸಿರುವೆ: ಒಂದು, ನಿಜ ಮುಗ್ಧತೆ (ಅಥೆಂಟಿಕ್ ಇನ್ನೊಸೆನ್ಸ್). ಮತ್ತೊಂದು, ಭೋಳೆ ಮುಗ್ಧತೆ (ಸ್ಯೂಡೋ ಇನ್ನೊಸೆನ್ಸ್). ರೋಲೋ ಮೇ ಪ್ರಕಾರ, ನಿಜ ಮುಗ್ಧತೆಗೆ ಕೇಡಿನ ಅರಿವಿರುತ್ತದೆ; ಭೋಳೆ ಮುಗ್ಧತೆ ಕೇಡನ್ನು ಅರಿಯದೆ ಅಥವಾ ಕಡೆಗಣಿಸಿ ಮುಂದೆ ಸಾಗುತ್ತದೆ.

ಮಾನವರ ಒಳಿತಿನ ಶಕ್ತಿಯಲ್ಲಿ, ಅವರೊಳಗಿನ ಒಳಿತನ್ನು ಹೊರ ತರುವುದರಲ್ಲಿ, ನಂಬಿಕೆಯಿದ್ದ ಗಾಂಧೀಜಿಗೆ ವಸಾಹತುಕಾರ ವ್ಯವಸ್ಥೆ ಸೃಷ್ಟಿಸುವ ಕೇಡಿನ ಸಂಪೂರ್ಣ ಅರಿವಿತ್ತು. ಕೇಡಿನ ವ್ಯಾಪಕ ಸ್ವರೂಪ ಕಂಡು ಅದನ್ನು ಬದಲಿಸಲು ಹೋರಾಡಿದ ಅಂಬೇಡ್ಕರ್, ಲೋಹಿಯಾ ಥರದವರಲ್ಲಿ ಕಾಣುವ ಪ್ರಖರ ಬೌದ್ಧಿಕತೆ ಹಾಗೂ ತೀಕ್ಷ್ಣ ವಿಮರ್ಶಾತ್ಮಕ ನೋಟದ ನಂತರ ಚಿಮ್ಮುವ ನಿಜ ಮುಗ್ಧತೆಯ ಸ್ವರೂಪವೇ ಬೇರೆ! ಅದು ಒಂದು ಬೃಹತ್ ಥೀಸಿಸ್ ಬರೆಯುವಂಥ ವಿಸ್ತೃತ ವಲಯ!  

ಆದರೆ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಈ ಎರಡೂ ಮುಗ್ಧತೆಗಳಿಗಿಂತ ಭಿನ್ನವಾದ, ನಮ್ಮೊಳಗೆ ಹುದುಗಿರುವ, ಯಾವ ವೈಚಾರಿಕ ವ್ಯಾಖ್ಯಾನಕ್ಕೂ ಸಿಕ್ಕದ ಕೋಮಲ ಮುಗ್ದತೆ. ಇದನ್ನು ರೊಮ್ಯಾಂಟಿಕ್ ಮುಗ್ಧತೆ ಎನ್ನುವುದು ಕೂಡ ಸೀಮಿತವಾಗಿಬಿಡುತ್ತದೆ. ‘ಸಾಹಿತ್ಯ ಅಥವಾ ಕಲೆಗೆ ಮಾತ್ರ ಈ ಮುಗ್ಧತೆಯನ್ನು ಕಾಯಮ್ಮಾಗಿ ರಕ್ಷಿಸುವ, ಆದರ್ಶವಾಗಿ ಬಿಂಬಿಸುವ ಸಾಧ್ಯತೆಯಿದೆ’ ಎಂದರೆ, ‘ಇದು ರೊಮ್ಯಾಂಟಿಕ್’ ಎಂದು ಮೂಗು ಮುರಿಯುವವರು ಇರಬಹುದು. ಆದರೂ ಉಛಾಯಿಸಿ ಹೇಳಿಯೇ ಬಿಡುವೆ: ‘ನೋಡಿ! ಕೊನೆಗೂ ಈ ಕೆಳಕಂಡವರೆಲ್ಲ ನಮಗೆ ಸಿಕ್ಕುವುದು ಸಾಹಿತ್ಯದಲ್ಲೇ’:

ಬೇಂದ್ರೆ ಹಾಗೂ ಕುವೆಂಪು ಕಾವ್ಯದ ನೂರಾರು ಕಣ್ಣುಗಳು, ಪಾತ್ರಗಳು; ಸೀತೆ-ಹೂವಯ್ಯ, ಗುತ್ತಿ (ಕುವೆಂಪು: ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು); ಸರಸ್ವತಿ (ಶಿವರಾಮ ಕಾರಂತ: ಮರಳಿ ಮಣ್ಣಿಗೆ); ವೆಂಕಟಶಾಮಿ (ಮಾಸ್ತಿ: ವೆಂಕಟಶಾಮಿಯ ಪ್ರಣಯ); ಅಪ್ಪು, ಚಿರಕುಂಡ (ನಿರಂಜನ: ಚಿರಸ್ಮರಣೆ); ಮಂದಣ್ಣ-ಕರ್ವಾಲೋ (ತೇಜಸ್ವಿ: ಕರ್ವಾಲೋ); ಸಾಕವ್ವ, ಪುಟಗೌರಿ; ಕುಸುಮ- ಚೆನ್ನ (ಕೇರಾಫ್ ದೇವನೂರು: ಒಡಲಾಳ, ಕುಸುಮಬಾಲೆ); ದೇವದಾಸ್ (ಶರತ್ ಚಂದ್ರ ಚಟ್ಟೋಪಾಧ್ಯಾಯ/ಅಕ್ಕಿನೇನಿ ನಾಗೇಶ್ವರರಾವ್/ ಶಾರೂಖ್ ಖಾನ್: ದೇವದಾಸ್); ಸನಾದಿ ಅಪ್ಪಣ್ಣ(ಕೃಷ್ಣಮೂರ್ತಿ ಪುರಾಣಿಕ/ ರಾಜ್‌ಕುಮಾರ್: ಸನಾದಿ ಅಪ್ಪಣ್ಣ); ಚ.ಸರ್ವಮಂಗಳ-ಸ. ಉಷಾ-ಸವಿತಾ ನಾಗಭೂಷಣ-ಪ್ರತಿಭಾ ನಂದಕುಮಾರ್-ಎಚ್‌.ಎಲ್.ಪುಷ್ಪ-ತೇಜಶ್ರೀ-ಭುವನಾ ಹಿರೇಮಠ… ಮೊದಲಾದ ನೂರಾರು ಕವಯಿತ್ರಿಯರ ಕವಿತೆಗಳ ಸಾವಿರಾರು ಸ್ತ್ರೀಯರು;  ದು. ಸರಸ್ವತಿಯವರ ಸಣ್ತಿಮ್ಮಿ; ರಾಜೀವ (ಟಿ.ಕೆ. ರಾಮರಾವ್/ ರಾಜ್‌ಕುಮಾರ್: ಬಂಗಾರದ ಮನುಷ್ಯ); ಜೂಲಿಯೆಟ್ (ಶೇಕ್‌ಸ್ಪಿಯರ್: ರೋಮಿಯೋ ಜೂಲಿಯೆಟ್); ಹಕೀಮ ಅಲಾವಿಖಾನ್, ಪಾರ್ವತಜ್ಜಿ (ಲಂಕೇಶ್: ಗುಣಮುಖ; ವೃಕ್ಷದ ವೃತ್ತಿ), ಹಡೆ ವೆಂಕಟ (ಅನಂತಮೂರ್ತಿ: ಸೂರ್‍ಯನ ಕುದುರೆ); ಮೊಗಳ್ಳಿ ಗಣೇಶರ ಕಥಾಪಾತ್ರಗಳು; ಕೃಷ್ಣಮೂರ್ತಿ ಬಿಳಿಗೆರೆಯವರ ಕೃತಿಗಳ ಹಳ್ಳಿಗರು; ಫ್ಲೋರೈಂಟೈನೋ ಅರಿಝಾ (ಮಾರ್ಕ್ವೆಜ್: ಲವ್ ಇನ್ ದ ಟೈಮ್ ಆಫ್ ಕಾಲರಾ); ರೈತ ಲೆವಿನ್ (ಟಾಲ್‌ಸ್ಟಾಯ್ : ಅನ್ನಾಕರೆನಿನಾ)…

ಈ ಬರಹ ಬರೆವ ಗಳಿಗೆಯಲ್ಲಿ ಸಹಜವಾಗಿ, ಛಕ್ಕನೆ ಹೊಳೆದ ಈ ಪಾತ್ರಗಳ ಪಟ್ಟಿಗೆ ಕೊನೆಯೇ ಇಲ್ಲ…ನಿಮ್ಮ ನಿಮ್ಮ ಆಯ್ಕೆಯ ಪಾತ್ರಗಳನ್ನು ಈ ಪಟ್ಟಿಗೆ ಸೇರಿಸಿರಿ! ಕಾಲದಲ್ಲಿ ಕೊಂಚ ಹಿಂದಕ್ಕೆ ಹೋಗಿ ವಚನಯುಗಕ್ಕೆ ಹೋದರಂತೂ, ಅಕ್ಕಮಹಾದೇವಿ, ನೀಲಮ್ಮ, ಆಯ್ದಕ್ಕಿ ಲಕ್ಕಮ್ಮ, ಬಸವ, ಅಲ್ಲಮಾದಿಗಳ ವಚನಗಳಲ್ಲಿ ಹರಿವ ಮುಗ್ಧತೆಯ ರಸ… ಜ್ಞಾನೋದಯದ ನಂತರ ಬುದ್ಧನಿಗೆ ದಕ್ಕಿರಬಹುದಾದ ಮುಗ್ಧತೆ…. ಈ ಎಲ್ಲರನ್ನೂ ಮೈದುಂಬಿ ವಿವರಿಸುತ್ತಿದ್ದ ಕಿ.ರಂ. ನಾಗರಾಜ್ ಅವರಿಗೆ ಸಾಹಿತ್ಯ ಸಂಭ್ರಮವೇ ಕೊಟ್ಟ ಅನನ್ಯ ಮುಗ್ಧತೆ…

ಮೇಲೆ ಹೇಳಿರುವ ಸಾಹಿತ್ಯ ಕೃತಿಗಳ ಅನೇಕ ಪಾತ್ರಗಳು ಎಲ್ಲೋ ಒಂದೆಡೆಯಲ್ಲಿ ಲೋಕದ ಅಸಲಿ ಜನರ ಕಲಾ ತದ್ರೂಪಿಗಳು, ಅಥವಾ ಆದರ್ಶೀಕರಿಸಿದ ಪಾತ್ರಗಳು, ನಿಜ; ಆದರೆ ಅವರ ಮುಗ್ಧತೆ, ಸುಂದರವಾಗಿ, ಪ್ರಿಯವಾಗಿ ಕಾಣುವುದು ಸಾಹಿತ್ಯ ಲೋಕದಲ್ಲೇ; ಅವರೆಲ್ಲ ನಮ್ಮೊಳಗಿನ ಮುಗ್ದತೆ, ಆದರ್ಶ, ಸಹನೆ, ತಾಳಿಕೆ, ಒಳಿತಿನ ಲೋಕಗಳನ್ನು ಪ್ರತಿನಿಧಿಸಲೆತ್ನಿಸುತ್ತಾರೆ; ಆದ್ದರಿಂದ ಅವರು ನಮ್ಮ ಆರಾಧನೆ, ವಿಸ್ಮಯ, ಪ್ರೀತಿಗಳಿಗೆ ಪಾತ್ರರು!

ಹ್ಯಾಪಿ ಇನ್ನೊಸೆನ್ಸ್!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:


Recent Posts

Latest Blogs



Kamakasturibana

YouTube



Comments

8 Comments



| Dr. Mohan Mirle

“ಕಾದಂಬರಿ, ಮ್ಯೂಸಿಯಂ ಮತ್ತು ಮುಗ್ಧತೆ” ಬ್ಲಾಗ್ ನ ಓದಿನಿಂದ ನನ್ನ ಮನದಲ್ಲಿ ಆವರಿಸಿದ್ದ ಮುಗ್ಧತೆಯ ಸಾಂದರ್ಭಿಕ ನೆನಪುಗಳು ಇನ್ನೂ ಹಸಿಯಾಗಿರುವಂತೆಯೇ ಇಂದಿನ ಬ್ಲಾಗ್ ಅದೇ ‘ಮುಗ್ಧತೆ’ಗೆ ಸಂಬಂಧಿಸಿದ ಹೊಸ ಆಯಾಮದೊಂದಿಗೆ ಮೂಡಿಬಂದಿದೆ. ಮುಗ್ಧತೆಗೂ ಸೃಜನಶೀಲತೆಗೂ ಇರುವ ಸಹಜ ಸ್ವಾಭಾವಿಕ ಸಂಬಂಧ ಮತ್ತು ಸಾಧ್ಯತೆಗಳನ್ನು ನಿರ್ಲಿಪ್ತವಾಗಿ ನಿರೂಪಿಸುತ್ತಾ ಬೆರಗು ಮೂಡಿಸಿದೆ. ಒಂದು ಕೃತಿ ಒಂದು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರೇರಣೆಯಾಗುವುದು; ಒಂದು ಸಂಗ್ರಹಾಲಯ ಮತ್ತೊಂದು ಪುಸ್ತಕ ರಚನೆಗೆ ಒತ್ತಾಯಿಸುವುದು; ಆ ಪುಸ್ತಕ ಚಲನಚಿತ್ರ ನಿರ್ಮಾಣಕ್ಕೆ ಪ್ರೇರಣೆಯಾಗುವುದು; ಅದರ ಚಿತ್ರಕತೆ ಮತ್ತೊಂದು ಕಾದಂಬರಿಯ ರಚನೆಗೆ ಪ್ರೇರಣೆಯಾಗುವುದು... ಇವೆಲ್ಲಾ ಸೃಜನಶೀಲತೆಗೂ ಮುಗ್ಧತೆಗೂ ಇರುವ ಸಂಬಂಧಗಳನ್ನು ವಿವರಿಸುತ್ತಲೇ, ಸೃಜನಶೀಲತೆಯ ಸಹಜ ಸಾಧ್ಯತೆಯೊಂದನ್ನು ಪ್ರತಿಪಾದಿಸುತ್ತವೆ. ಇಂತಹ ಸೃಜನಶೀಲತೆಗಳೇ ಹೆಚ್ಚು ಆಪ್ತವಾಗುವುದು, ಸಾರ್ವತ್ರಿಕ ಮನ್ನಣೆಗಳಿಸುವುದು ಎಂಬುದು ನಿಧಾನವಾಗಿ ಮನವರಿಕೆಯಾಗತೊಡಗುತ್ತದೆ. ಕನ್ನಡದಲ್ಲೂ ಅಂತಹ ಹಲವು ಮುಗ್ಧತೆಯ ಪಾತ್ರಗಳನ್ನು ಗುರುತಿಸಿ ಪಟ್ಟಿಮಾಡಿ ನಮ್ಮ ಭಾವಕೋಶದಲ್ಲೂ ಹುದುಗಿರುವ ಹಲವು ಮುಗ್ಧತೆಯ ನೆನಪುಗಳನ್ನು, ಅವು ತಂದ ಸೊಗಸುಗಳನ್ನು ಮೆಲುಕು ಹಾಕಲು ಇಂದಿನ ಲೇಖನ ಖಂಡಿತಾ ನೆರವಾಗಿದೆ.

\r\n\r\n

ಮುಗ್ಧತೆಯ ಶುಭಾಶಯಗಳೊಂದಿಗೆ,

\r\n


| ಪದ್ಮಾಕ್ಷಿ ಕೆ

Orhan Pamuk ಗುಂಗು ಈ ವಾರವೂ  ಮುಂದುವರೆದಿದ್ದು ಖುಷಿಯಾಯಿತು.  Museum of Innocence ಬಗ್ಗೆ  The Naive and the Sentimental Novelist ನಲ್ಲಿ Pamuk ತುಂಬಾ ಬರೆದಿದ್ದರೂ  ಈ ವರೆಗೆ ಅದನ್ನು ಓದಲಾಗಲಿಲ್ಲ.ಆದರೆ ಅವರ My name is Red ಮತ್ತು Snow-ಹಿಮ ಎರಡನ್ನೂ ಓದಿದೆ.ಕೆ.ಎಸ್.ವೈ ಶಾಲಿಯವರು ಅನುವಾದಿಸಿದ ಹಿಮವನ್ನೂ ಓದಿರುವೆ.  My name is Red ನಲ್ಲಿ miniature painting ಕಲಾವಿದರ ಕುರಿತು,ಕುದುರೆಯ ಚಲನೆಯನ್ನು ತೋರಿಸುವ ಕಾಲುಗಳನ್ನು ಚಿತ್ರಿಸಿರುವ.  ರೀತಿಯಿಂದಲೇ ಕಲಾವಿದನ ಮನಸ್ಸನ್ನು ಊಹಿಸುವ  ಇತರ ಕಲಾವಿದರು, miniature painting ನಲ್ಲಿ ಉತ್ಕೃಷ್ಟತೆ  ಸಾಧಿಸುವ ಹೊತ್ತಿಗೆ ಅವರು ಕುರುಡರೇ ಆಗಿಬಿಡುವುದು ಇವೆಲ್ಲಾ ಅದ್ಭುತ ಎನಿಸಿತು.  Red-Haired woman ಅರ್ಧ ಓದಿದಾಗ ತಳಮಳವಾಗಿ ಪೂರ್ತಿ ಓದಲಿಲ್ಲ. ಮುಂದಿನ ಕಥೆ ಗೊತ್ತಾದ ಮೇಲೆ ಓದಬಹುದೆನಿಸಿತು.ಓದುವೆ. ಮಾರ್ಕ್ವೆಜ್ ಕುರಿತ ಬರಹದಿಂದಲೇ ಮುಂದಿನ ವಾರದ ಬರಹದ ನಿರೀಕ್ಷೆ ಮಾಡುವಂತಾಗಿತ್ತು.ಮುಂದಿನ ಬರಹ ಯಾರ ಕುರಿತು ಎಂಬ ನಿರೀಕ್ಷೆಯಲ್ಲ....

\r\n


| Dr. Raju B L

Excellent write up on Pamuk

\r\n


| ಶ್ರೀಧರ್

ನಿಮ್ಮ 'ಮುಗ್ದತೆ: ಬತ್ತದ ಒರತೆ' ಬರಹಕ್ಕೊಂದು ಪ್ರತಿಕ್ರಿಯೆ:

\r\n\r\n

"ಆಧುನಿಕ ಜಗತ್ತಿನ ಜಂಜಡದಲ್ಲಿ ಮುಗ್ಧತೆ ಸಾಧ್ಯವಾಗುವುದು ಜ್ಞಾನದ ಆತ್ಯಂತಿಕ ಘಟ್ಟದಲ್ಲಿ. ಅದರ ಹಿಂದಿನ ಯಾವುದೇ ಮುಗ್ಧತೆಯ ಸ್ಥಿತಿ ಹುಂಬತನದ್ದೂ, ಕೃತಕವೂ ಆಗುತ್ತದೆ. ಜ್ಞಾನ ತನ್ನ ಶೃಂಗಸ್ಥಿತಿಯಲ್ಲಿ ಸ್ವಯಂ ವಿಸರ್ಜನೆಗೊಂಡಾಗ ಮಗುವಿನ ಮುಗ್ಧತೆ ಹುಟ್ಟುತ್ತದೆ. ಈ ವೈರುಧ್ಯ ಬರೀ ಆಧುನಿಕ ಜಗತ್ತಿಗೆ ಮಾತ್ರ ಮೀಸಲಾದದ್ದು ಎಂಬ ಹಿಂದಿನ ಸಾಲಿನ ನನ್ನ ನಂಬಿಕೆ ಈ ಕ್ಷಣದಲ್ಲೆ ಏಕೋ ಕ್ಷೀಣಿಸುತ್ತಿದೆ. 

\r\n\r\n

'ಮಗುವಿನ ಮುಗ್ಧತೆ' ಎನ್ನುವುದು ಎಲ್ಲ ಕಾಲದಲ್ಲೂ ಯೋಗಿಗಳಿಗೆ, ಅನುಭಾವಿಗಳಿಗೆ, ಆ ಮಟ್ಟದ ಸಾಹಿತಿಗೆ, ಸಾಧ್ಯವಾಗುವುದು ಶಾಸ್ತ್ರವಿದ್ಯೆಗಳ ಲೋಹವನ್ನು ಕರಗಿಸಿದಾಗ. ನಾಗಾರ್ಜುನನಿಗೆ, ಅಲ್ಲಮನಿಗೆ, ಸರ್ವಜ್ಞನಿಗೆ, ವೇಮನನಿಗೆ, ಸರಹಪಾದನಿಗೆ, ರೂಮಿಗೆ ಆದದ್ದು ಹೀಗೆಯೇ. 

\r\n\r\n

ಅಲ್ಲಮನ ಮುಗ್ಧತೆಯ ಹಿಂದೆ ಸಾವಿರ ಶಾಸ್ತ್ರಗಳನ್ನು ಕರಗಿಸಿಕೊಂಡ ಜೀರ್ಣಾಗ್ನಿ ಇದೆ. ಸರಹಪಾದನಿಗೆ ಶಂಕರನನ್ನು ಮೀರಿಸುವ ವಿದ್ಯೆ ಇದೆ. ಈ ಅರ್ಥದಲ್ಲಿ ಶೇಕ್ಸ್ ಪಿಯರ್, ಬೇಂದ್ರೆ ದೊಡ್ಡ ವಿದ್ಯಾವಂತರು. ವಿದ್ಯೆ ಎನ್ನುವುದು ಮುಗ್ಧತೆಯಾಗಿ ಪರಿವರ್ತನೆಯಾಗಬೇಕಾದರೆ, ವಿದ್ಯೆ ತೀವ್ರವಾಗುತ್ತಾ, ಸಾಂದ್ರವಾಗುತ್ತ ಹೋಗಬೇಕು. ಆದರೆ, ಲಂಕೇಶ್ ಮುಗ್ಧತೆ ಮತ್ತು ವಿದ್ಯೆಗಳನ್ನು ಪರಸ್ಪರ ವಿರೋಧವಾಗಿ ನೋಡುತ್ತಾರೆಯೋ ಎಂಬ ಸಂದೇಹ ನನಗಿದೆ.

\r\n\r\n

ನಾನಿನ್ನೂ ವಿದ್ಯೆಯ ಮಟ್ಟದಲ್ಲೇ ಇರುವಾತ. ಅದು ಸಾಂದ್ರವಾಗಿ ಸ್ವಯಂ ವಿಸರ್ಜನೆಗೊಂಡು ಮಗುತನದ ಮುಗ್ಧತೆ ಹುಟ್ಟಲಿ ಎಂಬ ಆಸೆ ನನ್ನದು. 

\r\n\r\n

ಹಾಗೆಯೇ ವ್ಯವಹಾರ ಜ್ಞಾನದ ಪ್ರಶ್ನೆ. ಈಗಿನ ಲೋಕದ ವ್ಯವಹಾರಗಳ ಅರ್ಥೈಸುವಿಕೆಗೆ ಹಲವು ಆಧುನಿಕ ಶಾಸ್ತ್ರಗಳಲ್ಲಿ ಆಳವಾದ ಜ್ಞಾನ ಅನಿವಾರ್ಯ. ಚರಿತ್ರೆ, ಸಂಸ್ಕೃತಿಶಾಸ್ತ್ರ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರಗಳ ಜ್ಞಾನ ಈ ಲೋಕದ ವ್ಯವಹಾರ ತಿಳಿದುಕೊಳ್ಳಲು ಈಗ ಅನಿವಾರ್ಯ ಎನ್ನುವುದು ನನ್ನ ನಂಬಿಕೆ. 

\r\n\r\n

ಲಂಕೇಶರು ಬಯಸುವ ಮಗುವಿನ ಮುಗ್ಧತೆ ನನಗಿಲ್ಲವಾದರೂ, ನನ್ನ ಅರ್ಥದ ವ್ಯವಹಾರಜ್ಞಾನದಿಂದಾಗಿ ನನ್ನ ಕೃತಿಗಳು ಸ್ವಲ್ಪ ಮಟ್ಟಿಗೆಯಾದರೂ ಕನ್ನಡ ಸಂಸ್ಕೃತಿಗೆ ಉಪಯುಕ್ತ ಎಂದು ಭಾವಿಸಿದ್ದೇನೆ. ಈ ದೃಷ್ಟಿಯಿಂದ ನನ್ನ 'ಸಾಹಿತ್ಯ ಕಥನ' ಅನೇಕ ಶಾಸ್ತ್ರಗಳ ವ್ಯವಹಾರ ಜ್ಞಾನ ಇರುವ ಕೃತಿ." -ಡಿ.ಆರ್. ನಾಗರಾಜ್

\r\n\r\n

('ಲಂಕೇಶರಲ್ಲಿ ರೀತಿ ಮತ್ತು ನೀತಿ' ಲೇಖನ, ಶೂದ್ರ, ಜೂನ್-ಜುಲೈ, 1996, 'ಸಂಸ್ಕೃತಿ ಕಥನ' ಪುಸ್ತಕ, ಪುಟ: 104, 2002

\r\n


| Eerappa kambali

ನಮ್ಮೊಳಗಿನ ಆ ಮುಗ್ಧತೆಯನ್ನೆ ಕಳೆದು ಕೊಂಡು ಕಂಗಾಲಾದ ಈ ಹೊತ್ತಿನಲ್ಲಿ  ನಿಮ್ಮ 'ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್' ಟಿಪ್ಪಣಿ ಅಗಾಧ ಅನುಭವ ನೀಡುತ್ತದೆ. ಕಾಲದ ಹಂಗಿಲ್ಲದೆ ಕಾಡುವ ನಮ್ಮೊಳಗಿನ ಪ್ರೇಮಲೋಕದ ಬಾಗಿಲೆಡೆಗೆ ಹಿಂತಿರುಗಿ ನಿಂತು ನೋಡುವಂತೆ ಮಾಡುತ್ತದೆ. . . . ಜಡ್ಡುಗಟ್ಟಿದ ಮನಸ್ಸಿಗೆ ಮುದ ನೀಡುವ ನಿಮ್ಮ ಪೆನ್ನು ದಣಿವರಿಯದಿರಲಿ. ಹದುಳ.

\r\n


| ಶಿವಲಿಂಗೇಗೌಡ ಡಿ.

ಮುಗ್ಧತೆ ಮತ್ತು ಸೃಜನಶೀಲತೆಯ ಹೊಸ ಸಾಧ್ಯತೆಗಳನ್ನು ಈ ಲೇಖನದಲ್ಲಿ ಮತ್ತಷ್ಟು ಮನಮುಟ್ಟುವಂತೆ ವಿವರಿಸಲಾಗಿದೆ. ಸಾಹಿತ್ಯ ಲೋಕದ ಹಲವು ಮುಗ್ಧತೆಯ ಸೃಜನಶೀಲ ವ್ಯಕ್ತಿತ್ವಗಳ ಪಟ್ಟಿಯನ್ನೇ ಮುಂದಿರಿಸುವ ಮೂಲಕ ನಮ್ಮೊಳಗಿನ ಮುಗ್ಧತೆಯನ್ನು, ನಾವು ಕಂಡ ಮುಗ್ಧ ವ್ಯಕ್ತಿತ್ವಗಳನ್ನು ಶೋಧಿಸಿಕೊಳ್ಳಲು ಪ್ರೇರೇಪಿಸುತ್ತದೆ ಈ ಲೇಖನ. 'ಮುಗ್ಧತೆಯ' ಓದಿನ ಸಾಧ್ಯತೆಯನ್ನು ನಮ್ಮೊಳಗೆ ವಿಸ್ತರಿಸುವಲ್ಲಿ ಈ ಲೇಖನ ನೆರವಾಯಿತು.

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಬದುಕು ಮತ್ತು ಬದುಕಿನ ಪ್ರತಿಬಿಂಬ-ಗತಿಬಿಂಬವಾದ ಸಾಹಿತ್ಯದಲ್ಲಿ ಮುಗ್ಧತೆಯ ಪ್ರಾಮುಖ್ಯತೆಯನ್ನು ಬಿಂಬಿಸಿರುವ ಈ ಲೇಖನ ಮನವನ್ನು ತಟ್ಟುತ್ತದೆ.

\r\n\r\n

ಮನೋವಿಜ್ಞಾನಿ ರೋಲೋ ಮೇ ನ ನಿಜ ಮುಗ್ಧತೆ ಮತ್ತು ಭೋಳೆ ಮುಗ್ಧತೆಗಳಿಂದ ಹಿಡಿದು; ವಸಾಹತುಶಾಹಿ ಸೃಷ್ಟಿಸಿದ ಕೇಡಿನ ವಿರುದ್ಧದ ಪ್ರಖರ ಬೌದ್ಧಿಕ ಮತ್ತು ತೀಕ್ಷಣ ವಿಮರ್ಶಾತ್ಮಕ ಹೋರಾಟದ ನಂತರ ಲೋಹಿಯಾ ಮತ್ತು ಅಂಬೇಡ್ಕರ್ ಅವರಂತಹ ನಾಯಕರುಗಳಲ್ಲಿ ಹೊಮ್ಮಿದ ನಿಜ ಮುಗ್ಧತೆ; ವಚನಕಾರರ ವಚನಗಳಲ್ಲಿ ಹರಿಯುವ ರಸಮಯ ಮುಗ್ಧತೆ; ಜ್ಞಾನೋದಯದ ನಂತರ ಬುದ್ಧನಲ್ಲಿ ಕಾಣಿಸಿದ್ದಿರಬಹುದಾದ ಮುಗ್ಧತೆ; ಮತ್ತು ಇವೆಲ್ಲ ಮುಗ್ಧತೆಗಳಿಗಿಂತ ಭಿನ್ನವಾದ ಸಾಹಿತ್ಯದಲ್ಲಿ ಕಾಣುವ ಕೋಮಲ ಮುಗ್ಧತೆಗಳನ್ನು ವಿವರಿಸಿರುವ ರೀತಿ ಅನನ್ಯವಾಗಿದೆ.

\r\n\r\n

ಸಾಹಿತ್ಯಿಕ ಪಾತ್ರಗಳು ನಿಜಬದುಕಿನ ಅಸಲಿ ಮನುಷ್ಯರ ಕಲಾ ತದ್ರೂಪಿಗಳು ಅಥವಾ ಆದರ್ಶೀಕರಿಸಿದ ಪಾತ್ರಗಳೆಂದು ಸಾರುತ್ತಾ, ಈ ಮುಗ್ಧತೆಯನ್ನು ಸುಂದರವಾಗಿಸಿ, ಪ್ರಿಯವಾಗಿಸಿ, ಕಾಪಾಡುವ ಸಾಹಿತ್ಯವನ್ನು ಸಹೃದಯೀ ಮನಸುಗಳಿಗೆ ಅಚ್ಚುಮೆಚ್ಚಾಗಿಸುವ ಇಂತಹ ಲೇಖನಗಳು ಇನ್ನೂ ಸಮೃದ್ಧವಾಗಿ ಹರಿದು ಬರುತ್ತಿರಲಿ ಹುಳಿಯಾರರ ಈ ಬ್ಲಾಗಿನಲಿ.

\r\n


| Sanganagowda

ಮುಗ್ದತೆಯ ನಿಮ್ಮ ಹುಡುಕಾಟ ಬೆರಗುಗೊಳಿಸುತ್ತದೆ

\r\n




Add Comment