ದೇವರಾಜ ಅರಸು: ಹಲವು ಕಣ್ಣುಗಳು ಕಂಡ ಕಲರ್ ಫುಲ್ ಪೈಲ್ವಾನ್!
by Nataraj Huliyar
ಇಪ್ಪತ್ತನೆಯ ಶತಮಾನದ ಕೊನೆಗೆ ‘ಸಹಸ್ರಮಾನದ ವ್ಯಕ್ತಿ’ಗಳನ್ನು ಆಯ್ಕೆ ಮಾಡುವ ಸಡಗರ ಮಾಧ್ಯಮಗಳಲ್ಲಿ ಶುರುವಾಗಿತ್ತು. ಇಂಥ ಟ್ರೆಂಡಿ ಆಯ್ಕೆಗಳ ಕಡೆಗೆ ಒಲವಿರದ ಪಿ. ಲಂಕೇಶರು ಕೂಡ ಕರ್ನಾಟಕದ ಮಟ್ಟಿಗೆ ‘ಸಹಸ್ರಮಾನದ ವ್ಯಕ್ತಿ’ ಯಾರು ಎಂದು ಹುಡುಕತೊಡಗಿದರು. ಅವರ ಆಯ್ಕೆ ಕರ್ನಾಟಕದ ಎರಡು ಶ್ರೇಷ್ಠ ವ್ಯಕ್ತಿತ್ವಗಳಾದ ಬಸವಣ್ಣ ಹಾಗೂ ದೇವರಾಜ ಅರಸರ ಸುತ್ತ ಬಂದು ನಿಂತಿತು. ಕೊನೆಗೆ, ಕರ್ನಾಟಕದ ಸಾಮಾಜಿಕ-ರಾಜಕೀಯ-ಆರ್ಥಿಕ ಬದುಕಿನಲ್ಲಿ ನಿರ್ಣಾಯಕ ಬದಲಾವಣೆಗೆ ಕಾರಣರಾದ ‘ದೇವರಾಜ ಅರಸು ಕರ್ನಾಟಕದ ಸಹಸ್ರಮಾನದ ವ್ಯಕ್ತಿ’ ಎಂಬ ನಿಲುವಿಗೆ ಲಂಕೇಶರು ಬಂದರು. ಲಂಕೇಶರಿಂದ ಪತ್ರಿಕೋದ್ಯಮದ ಪಾಠಗಳನ್ನು ಕಲಿತ ಬಸವರಾಜು ಮೇಗಲಕೇರಿ ಇದೀಗ ‘ನಮ್ಮ ಅರಸು’ ಎಂಬ 580 ಪುಟಗಳ ಬೃಹತ್ ಪುಸ್ತಕವನ್ನು ರೂಪಿಸಿದ್ದಾರೆ. 2015ರಲ್ಲಿ ಅರಸು (ಜನನ: 20 ಆಗಸ್ಟ್ 1915) ಶತಮಾನೋತ್ಸವದ ಸಂದರ್ಭದಲ್ಲಿ, ಆನಂತರದ ವರ್ಷಗಳಲ್ಲಿ ಅರಸು ಅವರ ಒಡನಾಡಿಗಳು, ಅಭಿಮಾನಿಗಳು, ಹಿತಶತ್ರುಗಳು… ಈ ಎಲ್ಲರ ನೆನಪು, ನಿರೂಪಣೆಗಳನ್ನು ಆಧರಿಸಿದ ಪುಸ್ತಕ ಇದು.
ರಾಜಕೀಯದಲ್ಲಿರುವ ಬಹುತೇಕರು ಸಾರ್ವಜನಿಕವಾಗಿಯಾಗಲೀ, ಖಾಸಗಿಯಾಗಿಯಾಗಲೀ ಸತ್ಯ ನುಡಿಯಲು ಸಿದ್ಧವಿರದ ಈ ಕಾಲದಲ್ಲಿ ಅನೇಕ ವೃತ್ತಿ ರಾಜಕಾರಣಿಗಳು ಹಾಗೂ ಇನ್ನಿತರ ವಲಯಗಳ ಚಿಂತಕರ ನೆನಪುಗಳನ್ನು ಆಧರಿಸಿದ ಈ ಪುಸ್ತಕದಲ್ಲಿ ಸ್ವಾತಂತ್ರ್ಯೋತ್ತರ ಇಂಡಿಯಾದ, ಮುಖ್ಯವಾಗಿ ಕರ್ನಾಟಕದ ರಾಜಕೀಯ-ಸಾಮಾಜಿಕ ಚರಿತ್ರೆಯೂ ಮೂಡತೊಡಗುತ್ತದೆ. ಇತಿಹಾಸಲೇಖನ ಮಾಡುವ ವಿದ್ವಾಂಸರಿಗೆ ಬೇಕಾದ ಸಮೃದ್ಧ ವಿವರಗಳೂ, ‘ಅಧಿಕೃತ’ ಚರಿತ್ರೆಯನ್ನು ಬರೆಯುವವರಿಗೆ ಸಾಮಾನ್ಯವಾಗಿ ಸಿಕ್ಕದ ವಿದ್ಯಮಾನಗಳೂ ಇಲ್ಲಿವೆ.
ಇಂಥ ಪುಸ್ತಕಗಳನ್ನು ಬರೆಯುವಾಗ ದೊರೆಯುವ ಸ್ವಾತಂತ್ರ್ಯ ಹಾಗೂ ಎದುರಾಗುವ ಬಿಕ್ಕಟ್ಟುಗಳೆರಡೂ ಈ ಪುಸ್ತಕದಲ್ಲಿ ಕಾಣುತ್ತವೆ. ತೀರಿಕೊಂಡ ದೊಡ್ಡ ರಾಜಕಾರಣಿಯೊಬ್ಬನನ್ನು ಹೊಗಳಿ ಅಮರರಾಗಲು ವೃತ್ತಿ ರಾಜಕಾರಣಿಗಳು ತುದಿಗಾಲಿನಲ್ಲಿರುತ್ತಾರೆ. ಅವರ ನಡುವೆಯೂ ಕೊಂಚ ಸೂಕ್ಷ್ಮವಾದ ರಾಜಕಾರಣಿಗಳು, ಚಿಂತಕರು ಸಾಧ್ಯವಾದಷ್ಟೂ ಸತ್ಯ ಹೇಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಚರಿತ್ರೆಗೆ ಸಂದ ವ್ಯಕ್ತಿಯ ಹಾಗೂ ಆ ಕಾಲದ ಘಟನಾವಳಿಗಳನ್ನು ಕುರಿತು ಮಾತಾಡುವ ಎಲ್ಲರಿಗೂ ಸತ್ಯಬದ್ಧತೆ ಹಾಗೂ ನಿಷ್ಠುರತೆ ಇರುತ್ತದೆಂದು ಹೇಳಲಾಗದು; ಇಂಥ ಸಂದರ್ಭಗಳಲ್ಲಿ ಸಿಕ್ಕುವ ಮಾಹಿತಿಗಳಲ್ಲಿ, ವ್ಯಾಖ್ಯಾನಗಳಲ್ಲಿ ಇರಬಹುದಾದ ಸತ್ಯವನ್ನು, ದೇಶಾವರಿ ಉಪಕತೆಗಳ ನಡುವೆ ವಾಸ್ತವವನ್ನು ಹೆಕ್ಕಿ ತೆಗೆಯಲು ಲೇಖಕನೊಬ್ಬ ಸೆಣಸಾಡಬೇಕಾಗುತ್ತದೆ!
ಹಲಬಗೆಯ ಸಾರ್ವಜನಿಕ ವ್ಯಕ್ತಿಗಳ ಅಭಿಪ್ರಾಯಗಳನ್ನು ದಾಖಲಿಸುವ ಲೇಖಕನೊಬ್ಬ ಎಲ್ಲಿ ನಿಂತು ಸತ್ಯವನ್ನು ನಿಷ್ಠುರವಾಗಿ ಗ್ರಹಿಸಬೇಕು ಎಂಬುದು ಸವಾಲಿನ ಕೆಲಸ. ಉದಾಹರಣೆಗೆ, ಈ ಪುಸ್ತಕದಲ್ಲಿ ಎಚ್.ಡಿ.ದೇವೇಗೌಡರು ಅರಸು ಅವರನ್ನು ಮೆಚ್ಚುವ ಪ್ರಸಂಗಗಳನ್ನು ಹೇಳುತ್ತಲೇ ತಮ್ಮ ಇಮೇಜನ್ನು ವಿಸ್ತರಿಸಿಕೊಳ್ಳಲೆತ್ನಿಸುವ ‘ವ್ಯಾಖ್ಯಾನ ರಾಜಕೀಯ’ವನ್ನು ಗಮನಿಸಬಹುದು. ಈ ಥರದ ಮಾತುಗಳನ್ನು ‘ಬಿಟ್ವೀನ್ ದಿ ಲೈನ್ಸ್’ ಓದಿದಾಗ, ಅಂದರೆ ಈ ಮಾತುಗಳು ಬಚ್ಚಿಡುವ, ಮಾತುಗಳ ಮಧ್ಯೆ ಎಲ್ಲೋ ಹುದುಗಿರಬಹುದಾದ, ಸೂಕ್ಷ್ಮಗಳನ್ನು ಹೆಕ್ಕಿಕೊಂಡು ನೋಡಿದಾಗ ಮಾತ್ರ, ಅಷ್ಟಿಷ್ಟು ಸತ್ಯ ಕಾಣಬಹುದೇನೋ!
ಅದೇನೇ ಇದ್ದರೂ, ಹಲವು ವಲಯಗಳ ನಿರೂಪಕರು ಮಾತುಮಾತಾಡುತ್ತಿರುವಂತೆಯೇ ಬಗೆಬಗೆಯ ನಿಗೂಢ ರಾಜಕೀಯ ಸತ್ಯಗಳು ಇಲ್ಲಿ ಮೂಡುತ್ತಾ ಹೋಗುತ್ತವೆ. ಅಂಥ ಪ್ರಸಂಗವೊಂದನ್ನು ಅರಸು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಸಚ್ಚಿದಾನಂದಸ್ವಾಮಿ ನೆನಸಿಕೊಳ್ಳುತ್ತಾರೆ: ಒಮ್ಮೆ ದೇವರಾಜ ಅರಸು ತಮ್ಮ ಮಂತ್ರಿಮಂಡಲಕ್ಕೆ ಸೇರಬೇಕಾದ ಮಂತ್ರಿಗಳ ಪಟ್ಟಿಯೊಂದನ್ನು ಇಂದಿರಾಗಾಂಧಿಯವರಿಗೆ ಕಳಿಸುತ್ತಾರೆ. ಆ ಪಟ್ಟಿ ಇಂದಿರಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಡಿ.ಕೆ.ಬರೂವರನ್ನು ತಲುಪುತ್ತದೆ. ಮುಂದಿನ ಕತೆಯನ್ನು ಸ್ವಾಮಿಯವರ ಮಾತಿನಲ್ಲೇ ಕೇಳಿ: ‘ಡಿ.ಕೆ. ಬರೂವ ಆ ಪಟ್ಟಿಯಲ್ಲಿದ್ದ ಮೊದಲನೆಯ ಹೆಸರಾದ ಎಸ್. ಬಂಗಾರಪ್ಪನವರನ್ನು ಬಿಟ್ಟು ಮಿಕ್ಕೆಲ್ಲರನ್ನೂ ತೆಗೆದುಕೊಳ್ಳಬಹುದು’ ಎಂದು ಶರಾ ಬರೆದಿದ್ದರು. ‘ಬಂಗಾರಪ್ಪನವರನ್ನು ಬಿಟ್ಟಿದ್ದೇಕೆ?’ ಎಂದು ಕೇಳಿದೆ. ‘ಕಾಂಗ್ರೆಸ್ ಪಾರ್ಟಿ ಮತ್ತು ಅರಸು ಅವರ ಹಿತದೃಷ್ಟಿಯಿಂದ’ ಎಂದರು ಬರೂವ.’
ಆದರೆ ‘ಬಂಗಾರಪ್ಪ ಮಂತ್ರಿಮಂಡಲಕ್ಕೆ ಅನಿವಾರ್ಯ ಅಗತ್ಯ’ ಎಂಬ ಅರಸು ನಿಲುವನ್ನು ಸ್ವಾಮಿಯವರು ಇಂದಿರಾಗಾಂಧಿ ಹಾಗೂ ಬರೂವರಿಗೆ ಒತ್ತಿ ಹೇಳುತ್ತಾರೆ. ಮಾರನೆಯ ದಿನ ಸ್ವಾಮಿಯವರನ್ನು ಬರೂವ ತಮ್ಮ ಮನೆಗೆ ಕರೆಯುತ್ತಾರೆ: ‘ವಿಶಾಲವಾದ ಮನೆಯ ಒಂದು ಫ್ಲೋರ್ ನಲ್ಲಿ ಸುಸಜ್ಜಿತವಾದ ಲೈಬ್ರರಿ. ನನ್ನನ್ನು ಕರೆದು ‘ಬುಕ್ ನಂಬರ್ 423 ತೆಗೆದುಕೊಂಡು ಬಾ. ಅದರಲ್ಲಿ ಮಾರ್ಕ್ ಮಾಡಿಟ್ಟಿದ್ದೇನೆ. ಅದನ್ನು ನಿಮ್ಮ ಅರಸುಗೆ ತೋರಿಸು’ ಎಂದರು ಬರೂವ. ಅದು ಆಂತ್ರೋಪಾಲಜಿ (ಮಾನವ ಶಾಸ್ತ್ರ) ಪುಸ್ತಕ. ಅದು ಜಗತ್ತಿನ ಜನಸಮುದಾಯಗಳನ್ನು ವಿಶ್ಲೇಷಣೆ ಮಾಡಿದ್ದ ಪುಸ್ತಕ. ಅವರು ಮಾರ್ಕ್ ಮಾಡಿದ್ದ ಪುಸ್ತಕ ತೆಗೆದು ನೋಡಿದೆ: ಅದರಲ್ಲಿ ಕ್ಯಾರಕ್ಟರ್ ಆಫ್ ದಟ್ ಕಮ್ಯುನಿಟಿ…ಅನ್ ಪ್ರೆಡಿಕ್ಟಬಲ್ ಫೆಲೋ’ ಅಂತ ಬರೆದಿದ್ದರು. ಬರೂವ ಅವರ ಮುಖ ನೋಡಿದೆ; ‘ಇಷ್ಟರ ಮೇಲೆ ನಿಮ್ಮ ಹಣೆ ಬರಹ’ ಅಂದರು.’
ಒಂಥರದ ಹಿಂದಿ ‘ಕವಿ’ಯೂ ಆಗಿದ್ದ ದೇವಕಾಂತ ಬರೂವ ಇಂದಿರಾಗಾಂಧಿಯವರ ಮಹಾ ಭಟ್ಟಂಗಿಯಾಗಿದ್ದರು; ‘ಇಂದಿರಾ ಈಸ್ ಇಂಡಿಯಾ; ಇಂಡಿಯಾ ಈಸ್ ಇಂದಿರಾ’ ಎಂಬ ಘೋಷಣೆ ಹೊಸೆದಿದ್ದರು! ಎರಡು ವರ್ಷ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಮೇಲೆ ಹೇಳಿದ ಪ್ರಸಂಗದಲ್ಲಿ ಬರೂವ ‘ಮಾನವಶಾಸ್ತ್ರೀಯ’ ಎನ್ನಲಾದ ಮಾಹಿತಿಗಳನ್ನಾಧರಿಸಿ ಹಿಂದುಳಿದ ಜಾತಿಗಳ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಅಪಾಯಕರ ಕ್ರಮವನ್ನು ಗಮನಿಸಿ; ಇಂಥ ರಾಜಪುರೋಹಿತರು ಆ ಕಾಲಕ್ಕೆ ಯಾವ್ಯಾವ ರೀತಿಯಲ್ಲಿ ದೇಶದಾದ್ಯಂತ ಸಹಸ್ರಾರು ಶೂದ್ರ, ದಲಿತ ಜಾತಿಗಳ ರಾಜಕಾರಣಿಗಳ ಭವಿಷ್ಯವನ್ನು ಮುಗಿಸಿರಬಹುದು ಎಂಬುದನ್ನು ಊಹಿಸಿಕೊಳ್ಳಿ! ಈ ಬರೂವಾ ‘ಸಂಶೋಧನೆ’ಯನ್ನು ಅರಸು ತಿರಸ್ಕರಿಸಿದರು; ಬಂಗಾರಪ್ಪ ಮಂತ್ರಿಯಾದರು. ಆ ಮಾತು ಬೇರೆ. ಆದರೆ ಅಸ್ಸಾಮಿ ಬ್ರಾಹ್ಮಣರಾಗಿದ್ದ ಬರೂವಾ ಥರದ ‘ರಾಜಕೀಯ ವಿಜ್ಞಾನಿಗಳು’ ಇವತ್ತಿಗೂ ಅನೇಕ ರಾಜಕೀಯ ಪಕ್ಷಗಳ ತೆರೆಮರೆಯಲ್ಲಿ ಎಂಥೆಂಥ ಅರೆಬೆಂದ ‘ಸಂಶೋಧನಾ’ ಪುಸ್ತಕಗಳ ಮೂಲಕ, ಜ್ಯೋತಿಷಿಗಳು-ಕವಡೆ ಶಾಸ್ತ್ರದವರ ಮೂಲಕ ದೇಶದ ಶೂದ್ರ, ದಲಿತ ರಾಜಕಾರಣವನ್ನು ನಿಯಂತ್ರಿಸುತ್ತಿರಬಹುದು ಎಂಬುದನ್ನು ನೆನೆದರೆ ಗಾಬರಿಯಾಗುತ್ತದೆ.
ಹೀಗೆ ‘ನಮ್ಮ ಅರಸು’ ಪುಸ್ತಕ ಸುಮಾರು ಐವತ್ತು ವರ್ಷಗಳ ಭಾರತೀಯ ರಾಜಕಾರಣದ ಅಗೋಚರ ಮುಖಗಳನ್ನೂ ಹೊರತಂದಿದೆ. ಹಾಗೆಯೇ, ದೇವರಾಜ ಅರಸರ ರಾಜಕಾರಣ ದನಿಯಲ್ಲದ ಸಮುದಾಯಗಳಿಗೆ ತೆರೆದ ಹೊಸ ಬಾಗಿಲುಗಳನ್ನು ಕೂಡ ಕಾಣಿಸುತ್ತದೆ. ಚರಿತ್ರೆಯಲ್ಲಿ ಎಂದೂ ಅಧಿಕಾರದ ಹತ್ತಿರ ಕೂಡ ಸುಳಿಯಲಾಗದ ಜನರಿಗೆ ಅಧಿಕಾರ ಹಾಗೂ ರಾಜಕೀಯ ಶಕ್ತಿಯನ್ನು ನೀಡುವ ಗುರಿ, ಬದ್ಧತೆಗಳು ಅರಸು ರಾಜಕಾರಣದ ಮುಖ್ಯ ನೆಲೆಗಳಾಗಿದ್ದವು. ಅಲೆಮಾರಿ ಸಮುದಾಯದಲ್ಲಿ ಹುಟ್ಟಿ ಕಾನೂನು ಪದವಿ ಪಡೆದ ಎಂ.ಎಸ್. ಹೆಳವರ್ ದೇವರಾಜ ಅರಸರನ್ನು ಭೇಟಿ ಮಾಡಿದ ಮೇಲೆ ಆ ಸಮುದಾಯದ ಕಷ್ಟಗಳು ಅರಸು ಅವರಿಗೆ ಅರಿವಾಗತೊಡಗುತ್ತವೆ. ಇಂಥ ಅಂಚಿನ ಸಮುದಾಯಗಳ ಬಿಡುಗಡೆಗಾಗಿ ಅರಸು ಕೈಗೊಂಡ ಕ್ರಮದಿಂದಾಗಿ, ಅವರು ಜಾರಿಗೆ ತಂದ ಹಾವನೂರ್ ವರದಿಯ ಪರಿಣಾಮದಿಂದಾಗಿ ಈ ಅಲೆಮಾರಿ ಸಮುದಾಯದ ಚಿತ್ರವೇ ಬದಲಾದದ್ದನ್ನು ಕುರಿತು ಹೆಳವರ್ ಹೇಳುತ್ತಾರೆ:
‘ಅವತ್ತು ನಮ್ಮ ಹೆಳವರ ಹಟ್ಟಿಯಲ್ಲಿ ನನ್ನ ಏಕೈಕ ಸೆಕೆಂಡ್ ಹ್ಯಾಂಡ್ ರಾಲಿ ಸೈಕಲ್ಲೇ ಭಾರಿ ವಾಹನ. ಇವತ್ತು ಇಲ್ಲಿ 7 ಕಾರುಗಳಿವೆ. 11 ಟ್ರ್ಯಾಕ್ಟರುಗಳಿವೆ. 60 ಬೈಕುಗಳಿವೆ. 200 ಕುಟುಂಬಗಳಿವೆ… ಲೆಕ್ಕವಿಲ್ಲದಷ್ಟು ಹುಡುಗ, ಹುಡುಗಿಯರು ಪದವಿ ಪಡೆದು ಇಂಜಿನಿಯರ್, ಡಾಕ್ಟರು, ಲಾಯರುಗಳಾಗಿದ್ದಾರೆ; ಗ್ರಾಮಪಂಚಾಯ್ತಿ ಮೆಂಬರುಗಳಾಗಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ನೆಲೆಯೇ ಇಲ್ಲದ ಹೆಳವರು ಇಂದು ಭೂಮಾಲೀಕರಾಗಿದ್ದಾರೆ.’
ಹೆಳವರ್ ಕೃತಜ್ಞತೆಯಿಂದ ಹೇಳುವ ಈ ಮಾತುಗಳು ಕರ್ನಾಟಕದ ಹಲವು ಹಿಂದುಳಿದ ಜಾತಿ, ವರ್ಗಗಳ ಚಲನೆಗಳನ್ನೂ ಪ್ರತಿನಿಧಿಸುತ್ತವೆ. ರವಿವರ್ಮಕುಮಾರ್ ಗುರುತಿಸುವಂತೆ, ‘ಅರಸು ನಿರ್ಲಕ್ಷಿತ ಜಾತಿಗಳ ಪ್ರತಿಭಾವಂತರನ್ನು ಹೆಕ್ಕಿ ಅವರಿಗೆ ಪಬ್ಲಿಕ್ ಸರ್ವೀಸ್ ಕಮಿಷನ್ನಿನಲ್ಲಿ, ಬೋರ್ಡು, ಕಾರ್ಪೋರೇಷನ್ನುಗಳಲ್ಲಿ, ಸಮಿತಿಗಳಲ್ಲಿ, ವಿಧಾನಮಂಡಲದಲ್ಲಿ, ನ್ಯಾಯಾಂಗದಲ್ಲಿ ಅತ್ಯುನ್ನತ ಸ್ಥಾನಗಳನ್ನು ಕಲ್ಪಿಸಿಕೊಡುತ್ತಾ ಹೋದರು.’ ಜೊತೆಗೆ, ಪ್ರಬಲ ಜಾತಿಗಳ ರಾಜಕಾರಣದಿಂದಾಗಿ ಪ್ರಾತಿನಿಧ್ಯ ಪಡೆಯಲಾಗದ ಸಣ್ಣಪುಟ್ಟ ಜಾತಿಗಳ ನಾಯಕರನ್ನು ವಿಧಾನ ಪರಿಷತ್ತು, ರಾಜ್ಯಸಭೆಗಳಿಗೆ ಆಯ್ಕೆ ಮಾಡುವ ಮೂಲಕ ಹೊಸ ಬಗೆಯ ರಾಜಕೀಯ ಅವಕಾಶಗಳನ್ನು ತೆರೆದರು. ಈ ಮೇಲ್ಪಂಕ್ತಿಗಳಲ್ಲಿ ಕೆಲವನ್ನಾದರೂ ಮುಂದೆ ಬಂದ ಮುಖ್ಯಮಂತ್ರಿಗಳು ಅನುಸರಿಸಲೇಬೇಕಾದಂಥ ಅನಿವಾರ್ಯತೆಯನ್ನು ಅರಸು ರಾಜಕಾರಣ ಸೃಷ್ಟಿಸಿತು. ಸಾವಿರಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಚರಿತ್ರೆಯನ್ನು ಉತ್ತಮ ನಾಯಕನೊಬ್ಬ ಹೇಗೆ ಕದಲಿಸಬಲ್ಲ ಹಾಗೂ ತಬ್ಬಲಿ ಜಾತಿಗಳ ಬದುಕಿನ ಗತಿಯನ್ನು ಬದಲಿಸಬಲ್ಲ ಎಂಬುದಕ್ಕೆ ಅರಸು ಚಿಂತನೆ-ನಡೆ-ರಾಜಕಾರಣಗಳು ಚರಿತ್ರೆಯ ಇತ್ತೀಚಿನ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗಿವೆ.
ಅರಸು ರಾಜಕಾರಣದ ಫಲಾನುಭವಿಗಳಾಗಿಯೂ ಅರಸರಿಗೆ ಕೈಕೊಟ್ಟ ಹಿಂದುಳಿದ ವರ್ಗಗಳ ನಾಯಕರು ಮುಂದೆ ಅರಸು ಕೊಡುಗೆಗಳ ಮಹತ್ವವನ್ನು ನೆನೆದದ್ದಿದೆ. ಆದರೆ ಹಿಂದುಳಿದ ವರ್ಗಗಳ ನಾಯಕರಿಗೆ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ತಾತ್ವಿಕ ಸ್ಪಷ್ಟತೆ ಹಾಗೂ ರಾಜಕೀಯ ಗಟ್ಟಿತನ ಇಲ್ಲದಿದ್ದರಿಂದಾಗಿ ಹಿಂದುಳಿದ ವರ್ಗಗಳ ರಾಜಕೀಯ ಮುನ್ನಡೆಗೆ ಅಡ್ಡಿಗಳು ಎದುರಾದವು. ಎಂಬತ್ತರ ದಶಕದಲ್ಲಿ ಇಂಡಿಯಾದ ಹಲವು ಭಾಗಗಳ ದಲಿತ ಸಮುದಾಯಗಳು ಕಾನ್ಷೀರಾಂ-ಮಾಯಾವತಿಯವರ ರಾಜಕಾರಣದ ಗಟ್ಟಿ ಬೆಂಬಲಿಗರಾದಂತೆ ಹಿಂದುಳಿದ ಜಾತಿಗಳು ಅರಸು ಮಾರ್ಗದ ರಾಜಕಾರಣದ ಬೆಂಬಲಿಗರಾಗಿ, ವಾರಸುದಾರರಾಗಿ ಉಳಿಯಲಿಲ್ಲ. ಅರಸು ಅವರ ಅಚಲ ಬೆಂಬಲದಿಂದಾಗಿ ಹಿಂದುಳಿದ ವರ್ಗಗಳ ನಿರ್ಣಾಯಕ ಚಲನೆಗೆ ಕಾರಣವಾದ ಕ್ರಾಂತಿಕಾರಕ ವರದಿ ಕೊಟ್ಟ ಎಲ್.ಜಿ. ಹಾವನೂರರೇ ಖಚಿತ ತಾತ್ವಿಕತೆಯಿಲ್ಲದೆ ಬಿಜೆಪಿಗೆ ಹಾರಿದರೆಂದ ಮೇಲೆ ಇನ್ನಿತರ ಹಿಂದುಳಿದ ಸಮುದಾಯಗಳ ನಾಯಕರ, ಮತದಾರರ ಪತನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.
ಅಸಲಿ ಸಾಮಾಜಿಕ ಕಾಳಜಿಯಿಂದಲೂ, ತಮ್ಮ ರಾಜಕೀಯ ಉಳಿವಿನ ಕಾರಣಕ್ಕಾಗಿಯೂ ಹಿಂದುಳಿದ ಜಾತಿಗಳಿಂದ ಬಂದ ನೂರಾರು ನಾಯಕರನ್ನು ರೂಪಿಸಿದ ಅರಸು ಮುಂದೊಮ್ಮೆ ‘ಹಿಂದುಳಿದ ವರ್ಗ’ ಎಂಬುದನ್ನು ರೂಪಿಸಲು ತಮಗೆ ಪೂರ್ವಸಿದ್ಧತೆ ಇರಲಿಲ್ಲವೆಂಬುದನ್ನು ಕಂಡುಕೊಂಡರು ಎಂದು ಡಿ.ವಿ. ರಾಜಶೇಖರ್ ಗುರುತಿಸುತ್ತಾರೆ. ಆದರೆ ಈ ಮಿತಿ ಅರಸು ಒಬ್ಬರದೇ ಎಂದೇನೂ ತಿಳಿಯಬೇಕಾಗಿಲ್ಲ. ಅರಸು ಆರಂಭಿಸಿದ ರಾಜಕಾರಣಕ್ಕೆ ವಿಶಾಲ ತಾತ್ವಿಕ ಚೌಕಟ್ಟನ್ನು ನಿರ್ಮಾಣ ಮಾಡಬೇಕಾಗಿದ್ದವರು ಹಾಗೂ ಇವತ್ತಿಗೂ ಆ ಕೆಲಸ ಮಾಡಬೇಕಾಗಿರುವವರು ಈ ವರ್ಗಗಳಿಗೆ ಸೇರಿದ ಹಾಗೂ ಈ ವರ್ಗಗಳ ಬಗ್ಗೆ ಕಾಳಜಿ, ಜವಾಬ್ದಾರಿಗಳನ್ನುಳ್ಳ ರಾಜಕಾರಣಿಗಳು, ಪತ್ರಕರ್ತರು, ಚಿಂತಕ, ಚಿಂತಕಿಯರು. ತಂತಮ್ಮ ವಲಯಗಳಲ್ಲಿ ಈ ಹೊಣೆಯನ್ನು ನಿರ್ವಹಿಸುತ್ತಾ ಬಂದಿರುವ ಕಲ್ಲೆ ಶಿವೋತ್ತಮರಾವ್, ರವಿವರ್ಮಕುಮಾರ್, ಎಂ.ಸಿ.ನಾಣಯ್ಯ, ನಂಜರಾಜೇ ಅರಸು, ಬಿ.ಎ.ಮೊಹಿದೀನ್, ಅಗ್ರಹಾರ ಕೃಷ್ಣಮೂರ್ತಿ, ಕಾಗೋಡು ತಿಮ್ಮಪ್ಪ ಮೊದಲಾದವರು ಅರಸು ಜಾರಿಗೊಳಿಸಿದ ಯೋಜನೆಗಳಿಂದ ಹಿಂದುಳಿದ ವರ್ಗಗಳಲ್ಲಿ ಉಂಟಾದ ಮಹತ್ತರ ಬದಲಾವಣೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಅರಸು ತಮ್ಮ ಹದಿಹರೆಯದಲ್ಲಿ ಅರಿಯಲೆತ್ನಿಸಿದ್ದ ಕಾರ್ಲ್ ಮಾರ್ಕ್ಸ್ರ ವರ್ಗಸಂಘರ್ಷ, ನಂತರ ಅಂಬೇಡ್ಕರ್, ಲೋಹಿಯಾ ಮೂಲಕ ಅರಿತ ಕೆಳಜಾತಿಗಳ ಚಲನೆ ಇವೆಲ್ಲವನ್ನೂ ಬೆರೆಸಿ ಮಾಡಿದ ರಾಜಕಾರಣದ ಉತ್ತಮ ಫಲವನ್ನು ಇವತ್ತಿಗೂ ಅನುಭವಿಸುತ್ತಿರುವ ಲಕ್ಷಾಂತರ ಜನರಿದ್ದಾರೆ. ಈ ಪುಸ್ತಕದಲ್ಲಿ ಅಂಥ ಫಲಾನುಭವಿ ಸಮುದಾಯಗಳ ಹೊಸ ಹೊಸ ತಲೆಮಾರುಗಳ ಕಣ್ಣು ತೆರೆಸಬಲ್ಲ ಹತ್ತಾರು ದಾಖಲೆಗಳಿವೆ.
ತಮ್ಮ ಶಕ್ತಿ, ಸಾಧ್ಯತೆಗಳ ಬಗ್ಗೆ ಅಪಾರ ಆತ್ಮವಿಶ್ವಾಸವುಳ್ಳ ರಾಜಕಾರಣಿಯಾಗಿದ್ದ ಅರಸು ಪ್ರಜಾಪ್ರಭುತ್ವದ ಮುಖ್ಯ ನೆಲೆಯಾದ ಸಂವಾದದಲ್ಲಿ ನಂಬಿಕೆಯಿಟ್ಟಿದ್ದವರು. ವರುಣಾನಾಲೆ ಯೋಜನೆಯನ್ನು ವಿರೋಧಿಸಲು ಮಂಡ್ಯದ ರೈತರು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಬೃಹತ್ ಸಭೆಗೆ ತಾವಾಗಿಯೇ ಹೋದ ಅರಸು ತಮ್ಮನ್ನು ವಿರೋಧಿಸುತ್ತಿದ್ದ ಜನಸ್ತೋಮದ ಎದುರು ತಮ್ಮ ನಿಲುವನ್ನು ವಿವರಿಸಬಲ್ಲವರಾಗಿದ್ದರು. ಭೂಸುಧಾರಣೆಯನ್ನು ವಿರೋಧಿಸಿದ ಭೂಮಾಲೀಕರ ಎದುರು ನಿಂತು, ರಷ್ಯಾದಂತೆ ಹಿಂಸಾತ್ಮಕವಾಗಿ ಭೂಮಿ ಹಂಚುವ ಹಾದಿಗೆ ಇಳಿಯದೆ ಹೊಂದಾಣಿಕೆಯ ಮೂಲಕ ಭೂಮಿ ಹಂಚಬೇಕಾಗಿರುವುದನ್ನು ಮನವರಿಕೆ ಮಾಡಿಕೊಡಬಲ್ಲವರಾಗಿದ್ದರು. ದೇಶದ ದೊಡ್ಡ ಸಮಾಜವಿಜ್ಞಾನಿಗಳ ಸಭೆಯಲ್ಲಿ ಕೇಳುಗನಾಗಿ ಕೂತು ಅವರ ಚಿಂತನೆಗಳ ಟಿಪ್ಪಣಿ ಮಾಡಿಕೊಂಡು ಸಂಜೆಯ ಹೊತ್ತಿಗೆ ಅದೇ ಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಯೋಜನೆಗಳ ನೀಲಿನಕಾಶೆಯನ್ನು ಮಂಡಿಸಬಲ್ಲವರಾಗಿದ್ದರು. ಲೋಹಿಯಾ ಸಂಪಾದಿಸುತ್ತಿದ್ದ ‘ಮ್ಯಾನ್ ಕೈಂಡ್’ ಮಾಸಿಕದಿಂದ ಹಿಡಿದು ತಮ್ಮ ಕಾಲದ ಬಹು ಮುಖ್ಯ ಪುಸ್ತಕಗಳವರೆಗೂ ಹಬ್ಬಿದ್ದ ವಿಸ್ತಾರವಾದ ಓದು ಕೂಡ ಅವರ ಗಂಭೀರ ವ್ಯಕ್ತಿತ್ವವನ್ನು ರೂಪಿಸಿತ್ತು.
ಅರಸು ಒಡನಾಡಿಗಳ ಜೊತೆಜೊತೆಗೇ ಅರಸು ಜೊತೆಗೆ ಕೆಲಸ ಮಾಡಿದ ಜೆ.ಸಿ. ಲಿನ್, ಚಿರಂಜೀವಿಸಿಂಗ್, ಯಲ್ಲಪ್ಪರೆಡ್ಡಿ, ಲಕ್ಷ್ಮಣ್ ಥರದ ಸೂಕ್ಷ್ಮ ಅಧಿಕಾರಿಗಳು; ಮಲ್ಲಿಕಾರ್ಜುನ ಖರ್ಗೆ, ಎಂ. ರಘುಪತಿ, ಐ.ಜಿ. ಸನದಿ, ರಮೇಶ್ ಕುಮಾರ್, ಎ.ಕೆ.ಸುಬ್ಬಯ್ಯ, ಎಚ್. ವಿಶ್ವನಾಥ್ ಥರದ ರಾಜಕಾರಣಿಗಳು; ವಿ.ಕೆ. ನಟರಾಜ್, ಸಿ. ನರಸಿಂಹಪ್ಪನವರಂಥ ವಿದ್ವಾಂಸರು, ಈ ಪುಸ್ತಕದ ಮುನ್ನುಡಿಕಾರ ಎನ್. ಎಸ್. ಶಂಕರ್… ಹಾಗೂ ಇನ್ನೂ ಅನೇಕರು ತಂತಮ್ಮ ವಲಯಗಳಿಂದ ಅರಸು ವ್ಯಕ್ತಿತ್ವವನ್ನು ನೋಡುತ್ತಿರುವಂತೆ… ಅರಸು ಅವರ ಬಗೆಬಗೆಯ ವ್ಯಕ್ತಿತ್ವಗಳು ನಮ್ಮೆದುರು ಮೂಡತೊಡಗುತ್ತವೆ:
ರೈತರ, ಸಾಮಾನ್ಯರ, ಹಳ್ಳಿಗಳ ನಾಡಿಮಿಡಿತ ಬಲ್ಲ ಜನನಾಯಕ; ಶಾಸಕನಾಗಿದ್ದಾಗಲೂ ಹೊಲದಲ್ಲಿ ಉಳಬಲ್ಲ ರೈತ; ರೈತರ ಮನೆಯ ಕಣಜ ಇಲ್ಲವಾದರೆ ಅವರ ಬದುಕೇ ನಾಶವಾಗುತ್ತದೆಂದು ಶೋಕಿಸುವ ಭಾವುಕ; ಅಧ್ಯಯನಶೀಲ ಬುದ್ಧಿಜೀವಿ; ಕಾಡಿನ ಬಗ್ಗೆ ಸಹಜ ಕಾಳಜಿಯಿದ್ದ ಪರಿಸರ ಪ್ರೇಮಿ; ದಾರಿಯಲ್ಲಿ ಸಿಕ್ಕ ನಿರ್ಗತಿಕರ ಕಷ್ಟಕ್ಕೆ ಕೈಲಾದ ಪರಿಹಾರ ನೀಡಬಲ್ಲ ಹೃದಯವಂತ; ಪಿಂಚಣಿ ಕೇಳಲು ಬಂದ ಅಂಗವಿಕಲ ಹುಡುಗಿಯೊಬ್ಬಳಿಗೆ ‘ಎರಡೆಕರೆ ಜಮೀನು ಕೊಟ್ಟರೆ ಯಾರಾದರೂ ಮದುವೆಯಾಗಲು ಮುಂದೆ ಬರುತ್ತಾರಲ್ಲವೆ?’ ಎಂದು ಯೋಚಿಸಬಲ್ಲ ಪ್ರಾಕ್ಟಿಕಲ್ ಮನುಷ್ಯ; ‘ಜೇನು ಕೀಳುವಾಗ ಕೈಗಂಟುವ ಜೇನನ್ನು ನೆಕ್ಕುವುದು ನನಗಲ್ಲ; ನಮ್ಮ ಪಕ್ಷಕ್ಕಾಗಿ’ ಎಂದು ಭ್ರಷ್ಟಾಚಾರ ಕುರಿತ ತರ್ಕವನ್ನು ಮಂಡಿಸಬಲ್ಲ ಚತುರ ರಾಜಕಾರಣಿ; ಸಾಮಾಜಿಕ ನ್ಯಾಯ ಹಾಗೂ ರಾಜಕೀಯದ ಪಟ್ಟುಗಳೆರಡನ್ನೂ ಬೆಸೆದ ಚಾಣಾಕ್ಷ ಪೈಲ್ವಾನ್; ತಾನೇ ಫಿಯೆಟ್ ಕಾರ್ ಡ್ರೈವ್ ಮಾಡಿಕೊಂಡು ವಿಧಾನಸೌಧ ತಲುಪಬಲ್ಲ ಸರಳ ಮುಖ್ಯಮಂತ್ರಿ; ಒಳ್ಳೆಯ ಪುಸ್ತಕಗಳಂತೆ ಸೊಪ್ಪಿನ ಸಾರು, ಮುದ್ದೆಯನ್ನೂ, ನಾಟಿ ಕೋಳಿಯನ್ನೂ, ಮದ್ಯವನ್ನೂ ಆನಂದಿಸುತ್ತಿದ್ದ ಜೀವನಪ್ರೀತಿಯ ರಸಿಕ; ಅದೇ ರೀತಿ ಹಾದಿಬದಿಯಲ್ಲಿ ಜನ ಕೊಟ್ಟ ರೊಟ್ಟಿ–ಖಾರಾ ಬ್ಯಾಳಿಯನ್ನು ಆರಾಮಾಗಿ ತಿನ್ನಬಲ್ಲ ಸಂತೃಪ್ತ; ತನ್ನ ಶಕ್ತಿಯ ಬಗ್ಗೆ ವಿಶ್ವಾಸವುಳ್ಳ ಹಾಗೂ ಅನುಯಾಯಿಗಳಲ್ಲಿ ಆತ್ಮವಿಶ್ವಾಸ ತುಂಬಬಲ್ಲ ನಾಯಕ; ಬದುಕಿನಲ್ಲಿ ಹೊಡೆತಗಳ ಮೇಲೆ ಹೊಡೆತ ಬಿದ್ದು ಮನಸ್ಸು ದುರ್ಬಲವಾದಾಗ ಜೋತಿಷ್ಯಕ್ಕೆ ಜೋತುಬಿದ್ದ ಹುಲುಮಾನವ; ಕಾಲೇಜು ನಾಟಕಗಳಲ್ಲಿ ಮತ್ತೆ ಮತ್ತೆ ಕರ್ಣನ ಪಾತ್ರ ಮಾಡಿ, ಕೊನೆಗೆ ಬದುಕಿನಲ್ಲೂ ದುರಂತವನ್ನಪ್ಪಿದ ನಾಯಕ...
…ಹೀಗೆ ಥರಹೇವಾರಿ ಅರಸು ವ್ಯಕ್ತಿತ್ವಗಳು ಈ ನಿರೂಪಣೆಗಳಲ್ಲಿ ಮೂಡುತ್ತಾ ಹೋಗುತ್ತವೆ. ಈ ಮುಖಗಳನ್ನೆಲ್ಲ ನೋಡನೋಡುತ್ತಾ ನಮ್ಮ ಈ ಕಾಲದಲ್ಲಿ ಇಂಥ ಅಪರೂಪದ ವರ್ಣರಂಜಿತ ರಾಜಕಾರಣಿಯನ್ನು ಕಾಣುವುದು ಅಸಾಧ್ಯ ಎಂಬ ವಿಷಾದ ಮುತ್ತತೊಡಗುತ್ತದೆ. ಅದರ ಬೆನ್ನಿಗೇ ಇವತ್ತಿನ ರಾಜಕಾರಣಿಗಳೂ ಈ ಪುಸ್ತಕವನ್ನು ಓದಿ ಅಷ್ಟಿಷ್ಟಾದರೂ ಜನಪರ ಕಾಳಜಿಯನ್ನು ರೂಢಿಸಿಕೊಳ್ಳಬಹುದಲ್ಲವೇ ಎಂಬ ಆಶಾವಾದವೂ ಮೂಡತೊಡಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಉತ್ತಮ ಮಾದರಿಗಳೇ ವಿರಳವಾಗಿ, ದಿಕ್ಕೇಡಿಯಾದ ದುರುಳ ನಾಯಕರು ರೂಪುಗೊಳ್ಳುತ್ತಿರುವ ಘಟ್ಟದಲ್ಲಿ, ನಾಯಕತ್ವದ ಲಕ್ಷಣವೆಂದರೆ ಇದೇ ಎಂದು ಜನರೂ ಭಾವಿಸಿರುವ ಕೆಟ್ಟ ಕಾಲದಲ್ಲಿ ಈ ಪುಸ್ತಕದಲ್ಲಿ ಮೈದಾಳಿರುವ ಅರಸು ಅವರ ಆಕರ್ಷಕ ಆದರ್ಶಗಳು ಹೊಸಬರಿಗಾದರೂ ಸ್ಫೂರ್ತಿ ಕೊಡಬಹುದಲ್ಲವೇ ಎನ್ನಿಸುತ್ತದೆ. ಹಾಗೆಯೇ ಅರಸುಯುಗದ ರಾಜಕಾರಣದ ಬೆಳವಣಿಗೆ, ಪರಿಣಾಮ ಮತ್ತು ಇಳಿಮುಖದ ವಸ್ತುನಿಷ್ಠ ಅಧ್ಯಯನದ ಮೂಲಕ ಹಿಂದುಳಿದ ಜಾತಿಗಳ ರಾಜಕಾರಣದ ಇಂದಿನ ಮಾದರಿಯೊಂದನ್ನು ರೂಪಿಸಬಲ್ಲ ಸಾಧ್ಯತೆಗಳೂ ಗೋಚರವಾಗತೊಡಗುತ್ತವೆ.
ಇಷ್ಟಾಗಿಯೂ,ಹಲ ಬಗೆಯ ಸಾರ್ವಜನಿಕ ನಿರೂಪಣೆಗಳನ್ನು ಸಂಯೋಜಿಸಬೇಕಾದ ಈ ಬಗೆಯ ಪುಸ್ತಕಗಳು ಸಂದರ್ಶಿತರು ಕೊಡುವ ಚಿತ್ರಗಳನ್ನೇ ಪೂರಾ ನೆಚ್ಚಿಕೊಳ್ಳಬೇಕಾಗಿ ಬರುವುದರಿಂದ ಅರಸು ಅವರಂಥ ಧೀಮಂತ ನಾಯಕನ ಸಂಕೀರ್ಣ ರಾಜಕೀಯ ಜೀವನದ ಆಯಾಮಗಳನ್ನು ಕೊಡುವುದು ಕಷ್ಟ. ತನ್ನ ವಿಮರ್ಶಾತ್ಮಕ ಮಧ್ಯಪ್ರವೇಶಕ್ಕೆ ಹೆಚ್ಚಿನ ಅವಕಾಶವಿಲ್ಲದಷ್ಟು ದೂರದಲ್ಲಿ ನಿಂತು ಲೇಖಕ-ಸಂಪಾದಕ ತನ್ನ ಸ್ಥಾನವನ್ನು ನಿರ್ದೇಶಿಸಿಕೊಂಡಿರುವುದು ಕೂಡ ಈ ಮಿತಿಗೆ ಮತ್ತೊಂದು ಕಾರಣ. ಆದರೂ ಬಸವರಾಜು ಅವರ ನಾಲ್ಕೈದು ವರ್ಷಗಳ ಪರಿಶ್ರಮದಿಂದ ರೂಪುಗೊಂಡಿರುವ ಈ ಪುಸ್ತಕದ ಸಮೃದ್ಧ ವಿವರಗಳು ಕರ್ನಾಟಕದ ರಾಜಕಾರಣದಲ್ಲಿ ಜಾತಿ, ವರ್ಗ, ವರ್ಗಸಂಘರ್ಷ, ಆರ್ಥಿಕತೆ, ಚಲನೆ, ಅಧಿಕಾರ ರಾಜಕಾರಣ ಕುರಿತ ಪುಸ್ತಕಗಳನ್ನು ಬರೆಯುವವರೆಗೆ ಹಲಬಗೆಯಲ್ಲಿ ನೆರವಾಗಬಲ್ಲವು. ಈಗಾಗಲೇ ಕಾವ್ಯ, ನಾಟಕಗಳಲ್ಲಿ ಕೂಡ ಶೋಧಿತವಾಗಿರುವ ಅರಸು ಬದುಕು-ಚಿಂತನೆ-ರಾಜಕಾರಣದ ಮತ್ತಷ್ಟು ಸೃಜನಶೀಲ ಹುಡುಕಾಟಗಳಿಗೂ ಈ ಪುಸ್ತಕ ಪ್ರೇರಣೆಯಾಗಬಲ್ಲದು.
ಈ ಪುಸ್ತಕದ ಜೊತೆಗೆ ವಡ್ಡರ್ಸೆ ರಘುರಾಮಶೆಟ್ಟಿಯವರ ‘ಬಹುರೂಪಿ ಅರಸು’, ಐ.ಕೆ. ಜಾಗೀರದಾರರ ‘ಅರಸು ಆಡಳಿತ ರಂಗ’ ಥರದ ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿ, ಹಲವು ಜ್ಞಾನ ಶಿಸ್ತುಗಳನ್ನು ಬಳಸಿ ಅರಸು ಅವರ ಸಮಗ್ರ ಜೀವನ ಚರಿತ್ರೆಯನ್ನು ಬರೆಯುವ ಸಾಧ್ಯತೆಯನ್ನೂ ಈ ಪುಸ್ತಕ ತೆರೆದಿಟ್ಟಿದೆ. ಅಂಥ ಪುಸ್ತಕ ಏಕಕಾಲಕ್ಕೆ ಅರಸು ಅವರ ಜೀವನ ಚರಿತ್ರೆಯೂ, ಕರ್ನಾಟಕದ ರಾಜಕೀಯ-ಸಾಮಾಜಿಕ ಚರಿತ್ರೆಯೂ ಆಗಬಲ್ಲದು. ಇಂಥದೊಂದು ಪುಸ್ತಕ ಕೊಟ್ಟ ಲೇಖಕ ಬಸು ಮೇಗಲ್ಕೇರಿಗೆ, ಪಲ್ಲವ ಪ್ರಕಾಶನಕ್ಕೆ, ಅರಸು ಅವರ ಅಪೂರ್ವ ವರ್ಣಚಿತ್ರವನ್ನೂ, ಕ್ಯಾರಿಕೇಚರುಗಳನ್ನೂ ಬರೆದಿರುವ ಕಲಾವಿದ ಹಾದಿಮನಿಯವರಿಗೆ ಅಭಿನಂದನೆಗಳು. ಕರ್ನಾಟಕ ರಾಜಕಾರಣದ ನಿರ್ಣಾಯಕ ಘಟ್ಟಗಳ ಬಗ್ಗೆ ಎಲ್ಲ ಆಸಕ್ತಿಯಿರುವವರೆಲ್ಲ ಓದಬೇಕಾದ ಪುಸ್ತಕ ಇದು.
(ಮಯೂರ, ಡಿಸೆಂಬರ್ 2020)
Comments
0 Comments
Add Comment