ಪುರಾಣ ಕತೆಗೆ ಮರುಭೇಟಿ

 ಕಳೆದ ವಾರ ಅಸ್ಪಷ್ಟವಾಗಿ ಸುತ್ತುತ್ತಿದ್ದ ಒಂದು ವಸ್ತು ಈ ವಾರ ಮತ್ತೆ ಕೆಣಕತೊಡಗಿತು. ಅದಕ್ಕೆ ಕಾರಣವೂ ಇತ್ತು.

ಗಣೇಶಮೂರ್ತಿಯ ವಿಸರ್ಜನೆಯನ್ನೇ ನೆಪವಾಗಿಟ್ಟುಕೊಂಡು ಗಲಭೆ ಸೃಷ್ಟಿಸಲು ಸಮಾಜ ವಿಭಜಕ ಶಕ್ತಿಗಳು ಕೆಲವೆಡೆ ಬೀದಿಗೆ ಬಂದವು. ಸಮಾಜದ ನೆಮ್ಮದಿ ಕೆಡಿಸಲು ಇಂಥ ದುರುಳತನವನ್ನು ಹುಟ್ಟು ಹಾಕುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ವಿಘ್ನನಿವಾರಕ ಎಂದು ಹೊಗಳುವ ದೇವತೆಯನ್ನೇ ವಿಘ್ನಗಳ ಕೇಂದ್ರವಾಗಿಸುವ ವ್ಯವಸ್ಥಿತ ಹುನ್ನಾರಗಳನ್ನು ದೇವರು, ಧರ್ಮಗಳನ್ನು ರಾಜಕೀಯ ಲಾಭದ ಆಚೆಗೆ ನೋಡುವ ಧಾರ್ಮಿಕ ಮನಸ್ಸಿನ ಜನರಾದರೂ ಅರ್ಥ ಮಾಡಿಕೊಳ್ಳಬಹುದೇ? ‘ಭಕ್ತಿಯೆಂಬುದು ತೋರುಂಬ ಲಾಭ’ ಎಂದು ಅಲ್ಲಮಪ್ರಭು ಹೇಳಿದ ಮಾತಿನ ಸತ್ಯವನ್ನು ಅಸಲಿ ಆಧ್ಯಾತ್ಮಿಕ ಜೀವಿಗಳಾದರೂ ಅರಿಯಬಲ್ಲರೆ?

ಕೆಲ ವರ್ಷಗಳ ಕೆಳಗೆ ಗಣೇಶಾಕೃತಿಯ ಸಾಂಕೇತಿಕತೆಗೆ ಮನಸೋತಿದ್ದ ವಿದೇಶಿ ಮಹಿಳೆಯೊಬ್ಬರನ್ನು ಕಂಡಾಗ ಅಚ್ಚರಿಯಾಗಿತ್ತು. ಸ್ವೀಡನ್ನಿನಿಂದ ಬೆಂಗಳೂರಿಗೆ ಬಂದಿದ್ದ ಲೇಖಕ, ಲೇಖಕಿಯರ ತಂಡಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ನಾಟಕ, ಯಕ್ಷಗಾನ, ರಂಗಭೂಮಿಗಳನ್ನು ಪರಿಚಯಿಸುವ ಪ್ರವಾಸವೊಂದನ್ನು ಏರ್ಪಡಿಸಿತ್ತು. ಆಗ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ನನ್ನನ್ನು ಆ ತಂಡದ ಜೊತೆಗೆ ಕಳಿಸಿದ್ದರು. ಆ ಕತೆ ಇಲ್ಲಿ ಅಗತ್ಯವಿಲ್ಲ. ನಾನು ಹೇಳಹೊರಟಿದ್ದು ಆ ತಂಡದಲ್ಲಿದ್ದ ಒಬ್ಬ ಮಹಿಳೆ ಮತ್ತೆ ಮತ್ತೆ ಗಣೇಶನ ಚಿತ್ರಗಳು, ಗಣೇಶನ ಬೊಂಬೆ, ಪುಟ್ಟ ವಿಗ್ರಹಗಳನ್ನು ಹುಡುಕುತ್ತಿದ್ದರ ಬಗ್ಗೆ; ಈ ಅಪರೂಪದ ಕಲಾಕಲ್ಪನೆ ಆಕೆಯನ್ನು ಸೆಳೆದಿದ್ದರ ಬಗ್ಗೆ. 

ಪರೀಕ್ಷೆಗೆ ಕೂತ ವಿದ್ಯಾರ್ಥಿನಿಯಂತೆ, ಶಾಪದಿಂದಾಗಿ ಯುದ್ಧ ಕಾಲದಲ್ಲಿ ತಕ್ಕ ಶಸ್ತ್ರವಿದ್ಯೆ ಮರೆತು ಹೋದ ಕರ್ಣನಂತೆ, ನನಗೂ ವಿಸ್ಮೃತಿ ಆವರಿಸುತ್ತಿರುತ್ತದೆ! ಲೋಹಿಯಾ ಮಾಡಿದ್ದ ಗಣೇಶನ ಕತೆಯ ಅನನ್ಯ ವಿಶ್ಲೇಷಣೆಯನ್ನು ಆಕೆಗೆ ಹೇಳಬೇಕೆಂದು ಅವತ್ತು ಹೊಳೆಯಲಿಲ್ಲ. ಇವತ್ತು ವಿದೇಶೀಯರಿರಲಿ, ಮೊದಲು ದೇಶೀಯರಿಗೆ ಈ ಲೋಹಿಯಾ ವಿಶ್ಲೇಷಣೆಯನ್ನು ತಲುಪಿಸಬೇಕಾದ ಅಗತ್ಯ ಈ ಆಧ್ಯಾತ್ಮಿಕ ಅಂಧಕಾರದ ಕಾಲದಲ್ಲಿ ಹೆಚ್ಚು ಇರುವಂತಿದೆ. ಲೋಹಿಯಾರ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕದಲ್ಲಿರುವ ‘ರಾಮ ಕೃಷ್ಣ ಶಿವ’ ಲೇಖನದಲ್ಲಿ ಬರುವ ಈ ವಿಶ್ಲೇಷಣೆಯನ್ನು (ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ) ಇಲ್ಲಿ ಕೊಡುತ್ತಿರುವೆ: 

‘ಆನೆಮುಖದ ಗಣೇಶನ ವ್ಯಕ್ತಿತ್ವವೂ ತೀರ ವಿಶಿಷ್ಟವಾದದ್ದೇ. ಒಂದು ರೀತಿಯಿಂದ ಅವನು ತನ್ನ ತಂದೆಯ ಕೈಚಳಕವೇ ಆಗಿದ್ದಾನೆ. ಇನ್ನೊಂದು ರೀತಿಯಿಂದ ತನ್ನ ಸಾವಧಾನ ಪ್ರವೃತ್ತಿಯ, ಆದರೆ ಆಳವಾದ ಬುದ್ಧಿಮತ್ತೆಯ ಸಾಕಾರನಾಗಿದ್ದಾನೆ. ಸಣ್ಣ ಹುಡುಗನಿದ್ದಾಗ ಒಮ್ಮೆ ಅವನ ತಾಯಿ ಸ್ನಾನಕ್ಕೆ ಹೋಗುವಾಗ ಹೊರಗೆ ಈತನನ್ನು ನಿಲ್ಲಿಸಿ, ಯಾರನ್ನೂ ಒಳಗೆ ಬಿಡದಿರುವಂತೆ ಹೇಳಿದಳು. ಅದೇ ಹೊತ್ತಿನಲ್ಲಿ ಶಿವ ಅಲ್ಲಿಗೆ ಬಂದ. ಅವನೋ ಮೊದಲೇ ಶೀಘ್ರಕೋಪಿ; ಗಣೇಶನೋ ಅಚಲನಾದ ಬಂಟ. ಗಣೇಶ ಶಿವನನ್ನು ತಡೆದ; ಶಿವ ಮಗನ ಕುತ್ತಿಗೆ ತರಿದು ಹಾಕಿದ. ಮುಂದೆ ಪಾರ್ವತಿಯ ಶೋಕಕ್ಕೆ ಮೇರೆಯಿಲ್ಲವಾಯಿತು. ಅಷ್ಟರಲ್ಲಿ ಅಲ್ಲೇ ಒಂದು ಆನೆ ಹೋಗುತ್ತಿದ್ದುದು ಕಂಡಿತು. ಶಿವ ಆ ಆನೆಯ ಕುತ್ತಿಗೆಯನ್ನೆ ಕತ್ತರಿಸಿ ಗಣೇಶನಿಗಿಟ್ಟ. ಆಗ ಮನುಷ್ಯ ಬುದ್ಧಿಯೂ ಆನೆಯ ವಿಧೇಯತೆಯೂ ಏಕತ್ರ ಹೊಂದಿಕೊಂಡು, ಜ್ಞಾನಸಾಗರನಾಗಿರುವ ಈ ಗಜದೇವತೆ ಹುಟ್ಟಿದ.’  

ಈ ವ್ಯಾಖ್ಯಾನ ಮಾಡುತ್ತಿರುವಾಗಲೇ ಒಂದು ನೈತಿಕ ಪ್ರಶ್ನೆಯೂ ಲೋಹಿಯಾಗೆ ಎದುರಾಗುತ್ತದೆ: ‘ಈ ಸಂದರ್ಭದಲ್ಲಿ ಶಿವ ತನ್ನ ಸಹಜ ಚಾರಿತ್ಯ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲವೆ ಎಂದು ಎಷ್ಟೋ ಸಲ ನನಗೆ ಆಶ್ಚರ್ಯವಾಗಿದೆ. ಶಿವನ ಈ ಕೃತ್ಯ ಸಮರ್ಥನೀಯವೆ? ಗಣೇಶನಿಗೆ ಜೀವ ಮರಳಿ, ಪಾರ್ವತಿಯ ದುಃಖ ತಣಿಯಿತು, ನಿಜ. ಆದರೆ ಜೀವ ಕಳೆದುಕೊಂಡ ಆನೆಮರಿಯ ತಾಯಿಯ ದುಃಖಕ್ಕೆ ಶಿವನ ಕೃತ್ಯ ಕಾರಣವಾಯಿತಲ್ಲವೆ? ಬಹುಶಃ ಈ ಪ್ರಶ್ನೆಯಲ್ಲೇ ಉತ್ತರವೂ ಹೊಳೆಯುವಂತಿದೆ. ಗಜಮುಖನ ಈ ನೂತನ ನಿರ್ಮಿತಿಯಲ್ಲಿ ಹಿಂದಿನ ಗಣೇಶನೂ ಈ ಆನೆಯೂ ಎರಡೂ ಜೀವ ಪಡೆದುಕೊಂಡಂತಾಯಿತು. ಎರಡೂ ಜೀವಗಳು ಇಲ್ಲಿ ಮತ್ತೆ ತಮ್ಮ ಬದುಕನ್ನು ಮುಂದುವರಿಸಿದವು; ಯಾರೂ ಸಾಯಲಿಲ್ಲ. ಜೊತೆಗೆ, ಮನುಷ್ಯ ಮತ್ತು ಆನೆಯ ಈ ಮೋಜಿನ ಮಿಶ್ರಣ ಎಂಥ ನಿತ್ಯಹರ್ಷದ, ನಿತ್ಯಜ್ಞಾನದ ನೂತನ ಸೃಷ್ಟಿಯಾಗಿತ್ತು!’

ಇದು ಲೋಹಿಯಾ ವ್ಯಾಖ್ಯಾನ. ನೀವು ಕೇಳಿರುವ ಗಣೇಶನ ಕತೆ ಇದಕ್ಕಿಂತ ಕೊಂಚ ಭಿನ್ನವಾಗಿರಬಹುದು. ಆದರೆ ಸಾವಿರಾರು ವರ್ಷಗಳ ಕೆಳಗೆ ಈ ಪುರಾಣವನ್ನು ಸೃಷ್ಟಿಸಿದ ಜನರ ಕಲ್ಪನೆಯಲ್ಲಿ ಅರಳಿರುವ ಮಾನವ ಹಾಗೂ ಪ್ರಾಣಿಯ ಸಂಗಮಕ್ಕೆ ಅನೇಕ ಅರ್ಥಗಳಿರಬಹುದು. ಮನುಷ್ಯ ಮೂಲತಃ ಪ್ರಾಣಿಯೇ; ಎಲ್ಲೋ ಆಗಾಗ್ಗೆ ಮಾತ್ರ ಈ ಪ್ರಾಣಿತನ ಮೀರಲು ಮಾನವ ಪ್ರಯತ್ನ ನಡೆಯುತ್ತಿರುತ್ತದೆ. ಮಾನವ ಮನಸ್ಸು ಪ್ರಾಣಿತನವನ್ನು ಮೀರಿದ ಸೃಜನಶೀಲ ಗಳಿಗೆಗಳಲ್ಲಿ ಮಾನವ ಹಾಗೂ ಪ್ರಾಣಿ ಎರಡೂ ಬೆರೆತ ಇಂಥ ವಿಶಿಷ್ಟ ಕಲ್ಪನೆಗಳು ಮೂಡಿರಬಹುದು. 

ಲೋಹಿಯಾ ಪ್ರಕಾರ, ‘ಯಾವುದೇ ಜನರ ಪುರಾಣಕಥೆಗಳು ಅವರ ಕನಸು ಮತ್ತು ಕೋಟಲೆಗಳ ದಾಖಲೆಯಾಗಿರುತ್ತವೆ; ಜನರು ಅತ್ಯಂತ ಆಳದಲ್ಲಿ ಸವಿದ, ಅತ್ಯಮೂಲ್ಯವೆಂದು ತಿಳಿದ ಆಸೆಗಳು, ಹಂಬಲಗಳ ಜೊತೆಗೇ, ಬದುಕಿನ ಸರಕಾಗಿರುವ, ಮತ್ತು ಬದುಕಿನ ಸ್ಥಳಿಕ ಹಾಗೂ ಲೌಕಿಕ ಇತಿಹಾಸದ ಸರಕಾಗಿರುವ, ವಿಮೋಚನೆಯೇ ಇಲ್ಲದ ವಿಷಾದ’ಗಳ ದಾಖಲೆಯಾಗಿರುತ್ತವೆ. 

ಇದೇ ಲೇಖನದಲ್ಲಿ ಲೋಹಿಯಾ ಬರೆಯುತ್ತಾರೆ: ‘ಪುರಾಣವೆಂಬುದು ತುದಿಯೇ ಇಲ್ಲವೇನೋ ಎನ್ನುವಂಥ ಕಾದಂಬರಿ; ಚಕಚಕಿಸುವ ಅಸಂಖ್ಯ ಕತೆಗಳನ್ನು ಖಚಿತಗೊಳಿಸಿ ಕಟ್ಟಿದ್ದು. ಅದು ಉಪದೇಶಿಸಿದರೆ ಅಥವಾ ರಂಜಿಸಿದರೆ ಕತೆಯ ಭಾಗವಾಗಿ, ಅಷ್ಟೆ. ಹೆಚ್ಚಾಗಿ ಅದು ಸೂರ‍್ಯನ ಹಾಗೆ, ಬೆಟ್ಟಗಳ ಹಾಗೆ, ಫಲವೃಕ್ಷಗಳ ಹಾಗೆ ನಮ್ಮ ಬದುಕಿನ ದೊಡ್ಡ ಭಾಗವೇ ಆಗಿರುತ್ತದೆ. ಮಾವು, ಹಲಸುಗಳು ನಮ್ಮ ದೇಹಧಾತುವೇ ಆಗುತ್ತವೆ; ನಮ್ಮ ರಕ್ತಮಾಂಸಗಳಲ್ಲೆ ಬೆರೆತುಕೊಳ್ಳುತ್ತವೆ; ಹಾಗೆಯೇ ಪುರಾಣ ಕೂಡ ಯಾವುದೇ ಜನಾಂಗದ ದೇಹಧಾತುವಿನ ಭಾಗ; ಅದು ರಕ್ತಗತವಾಗುವಂಥದು ಹಾಗೂ ಮಾಂಸಗತವಾಗುವಂಥದು...’ 

ಆದರೆ, ‘ಪುರಾಣಕಲ್ಪನೆಗಳನ್ನು ಉದಾತ್ತೀಕರಣದ ಮಾದರಿಗಳಾದ ಮಹಾವ್ಯಕ್ತಿಗಳ ಜೀವನ ಎಂಬಂತೆ ಅಳೆಯ ಹೊರಡುವುದು ಹಾಸ್ಯಾಸ್ಪದವಾದ ಬೆಪ್ಪುತನವಾದೀತು’ ಎಂದು ಕೂಡ ಲೋಹಿಯಾ ಎಚ್ಚರಿಸುತ್ತಾರೆ. 

ಜಗತ್ತಿನಾದ್ಯಂತ ಸಮುದಾಯದ ಪುರಾಣಗಳು ಹೇಗೆ ಹುಟ್ಟುತ್ತವೆ ಎಂಬುದರ ಬಗ್ಗೆ ಮನೋವಿಜ್ಞಾನಿ ಕಾರ್ಲ್ ಯೂಂಗ್ ಕೊಡುವ ವ್ಯಾಖ್ಯಾನವನ್ನು ಹಿಂದೊಮ್ಮೆ ಉಲ್ಲೇಖಿಸಿದ್ದೆ: ‘ಪುರಾಣಗಳು ಸಮಷ್ಟಿ ಅಥವಾ ಸಮುದಾಯದ ಅಪ್ರಜ್ಞೆಯಲ್ಲಿರುವ ಕನಸುಗಳು.’ ಅಂದರೆ, ಈ ಪುರಾಣಗಳು ಏಕವ್ಯಕ್ತಿ ಸೃಷ್ಟಿಗಳಲ್ಲ; ಸಾಮೂಹಿಕ ಸೃಷ್ಟಿಗಳು. ಅವುಗಳನ್ನು ಸಮುದಾಯ ಸಮ್ಮತಿಯಿಂದ ಒಪ್ಪಿಕೊಂಡಿರಬಹುದು; ಕೆಲವೊಮ್ಮೆ ಯೋಚಿಸದೆ, ಹುಂಬತನದಿಂದಲೂ ಅನುಸರಿಸಿರಬಹುದು. ಅಂಬೇಡ್ಕರ್ ’ಹಿಂದೂ ಧರ್ಮದ ಒಗಟುಗಳು’ ಪುಸ್ತಕದಲ್ಲಿ ತೋರಿಸುವಂತೆ ಅವುಗಳಲ್ಲಿ ದಮನಕಾರಿ ಪುರಾಣಗಳು, ಯಜಮಾನಿಕೆ ಹಾಗೂ ಭೇದಭಾವಗಳನ್ನು ಸೃಷ್ಟಿಸುವ ಪುರಾಣಗಳೂ ಇರುತ್ತವೆ.  

ಆದ್ದರಿಂದಲೇ ಈ ಕಾಲದ ಸಾಹಿತ್ಯ ಕೃತಿಗಳನ್ನು ನಾವು ನೋಡುವ ರೀತಿಯಲ್ಲೇ ಪುರಾಣ ಕತೆಗಳಲ್ಲಿರುವ ಸರ್ವಕಾಲದ ಸತ್ಯಗಳನ್ನೂ, ಅಸತ್ಯಗಳನ್ನೂ ಮುಕ್ತವಾಗಿ ನೋಡುವ ಅಗತ್ಯವಿದೆ. ಕೊನೆಯ ಪಕ್ಷ ಸಾಹಿತ್ಯವನ್ನು ಗಂಭೀರವಾಗಿ ಓದುವವರು ಹಾಗೂ ಕಲಿಸುವವರು ಪ್ರಾಚೀನ ಪುರಾಣಗಳ ಸರ್ವಕಾಲದ ಉತ್ತಮ ಅರ್ಥಗಳನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಅವುಗಳಲ್ಲಿ ದಮನಕಾರಿ ಅಂಶಗಳಿದ್ದರೆ ಅವನ್ನೂ ಚರ್ಚಿಸಿ, ತಿರಸ್ಕರಿಸಲೂ ಬೇಕಾಗುತ್ತದೆ.  

ಭಸ್ಮಾಸುರನ ಮೃತ್ಯುಹಸ್ತದಂತೆ ಕೋಮುವಾದಿ ರಾಜಕಾರಣ ಎಲ್ಲರ ತಲೆಯ ಮೇಲೆ ಚಾಚಿಕೊಳ್ಳುತ್ತಿದೆ. ಈ ಕರಾಳಹಸ್ತ ಭಾರತದ ಸಾಮೂಹಿಕ ಸೃಜನಶೀಲತೆ ಸೃಷ್ಟಿಸಿದ ಅನನ್ಯ ಪುರಾಣಗಳ ಅರ್ಥಪೂರ್ಣತೆಯನ್ನು ನಾಶಮಾಡದಂತೆ ಕಾಪಾಡುವುದು ಅಸಲಿ ಆಧ್ಯಾತ್ಮಿಕ ಮನಸ್ಸಿನ ಜನರ ಕರ್ತವ್ಯವಾಗಿದೆ; ಹಾಗೆಯೇ ಇದು ಸಾಹಿತ್ಯವನ್ನು ಗಂಭೀರವಾಗಿ ನೋಡುವವರ ಕೆಲಸವೂ ಆಗಿದೆ. ಪುರಾಣಗಳು ಜನರ ಮನಸ್ಸಿನಲ್ಲಿ ಸೃಷ್ಟಿಸುವ ಮಂಪರನ್ನು ಕೂಡ ಲೋಹಿಯಾ ಮತ್ತೊಂದೆಡೆ ಚರ್ಚಿಸುತ್ತಾರೆ. ಆ ಬಗ್ಗೆ ಮುಂದೊಮ್ಮೆ ಮಾತಾಡಬಹುದು.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:

Comments

8 Comments



| Subramanya Swamy

Very good insights , sir cultural awareness very important to people to lead meaningful life.


| Anil Gunnapur

ವಿಶೇಷ ಸಕಾಲಿಕ ಬರಹ. ಇಷ್ಟವಾಯಿತು.


| ಗಂಗಾಧರ್

ಲೋಹಿಯಾ ಚಿಂತನೆಯನ್ನು ಬೆಸೆದು ಮಾಡಿದ ಬರಹ


| Dr.Prabhakar

Terrific insights into our \'puranas\'.


| ಗುರ

ಗಣೇಶೋತ್ಸವ ಆಚರಣೆಯ ಸ್ವರೂಪ ಕಳೆದ 20 ವರ್ಷಗಳಲ್ಲಿ ಬಾರೀ ಬದಲಾವಣೆಯಾಗಿದೆ.ಪ್ರಮುಖವಾಗಿ ಡಿ ಜೆ ಸದ್ದು, ಪಡ್ಡೆ ಹುಡುಗರ ಕುಡಿತ.ಇದು ಕೋಮುವಾದವನ್ನು ಸಹ ಮೀರಿದೆ.ಗಲಾಟೆ,ಹಲ್ಲೆಗಳು ಕುಡಿತಕ್ಕೆ ಸಂಬಂಧಪಟ್ಟದ್ದಾಗಿದೆ.ಅದಕ್ಕಾಗಿಯೇ ಅಲ್ಲವೇ ಮೆರವಣಿಗೆ ಮುನ್ನ ,ನಂತರ ಒಟ್ಟಿನಲ್ಲಿ48 ತಾಸು ಬಾರ್ ಗಳನ್ನು ಬಂದ್ ಮಾಡಲಾಗುತ್ತದೆ. ಯಾವ ಸಾಹಿತಿ,ಬರಹಗಾರರು ಕುಡಿತದ ಈ ದುಷ್ಪರಿಣಾಮಗಳ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.ಬಹುತೇಕ ರೇಪ್,ಕೊಲೆ,ಡಕಾಯಿತಿ ಪ್ರಕರಣಗಳಿಗೆ ಕುಡಿತಕ್ಕೆ ನಂಟಿದೆ. ಬಡ,ಮಧ್ಯಮ ವರ್ಗದವರು ಇದರಿಂದ ಆಸ್ಪತ್ರೆಗೇ ದುಡ್ಡು ಸರಿಯುತ್ತಿದ್ದಾರೆ ಸರ್ಕಾರಕ್ಕೆ ಅಬ್ಕಾರಿ ಆದಾಯಗ ಬಗ್ಗೆ ಮಾತ್ರ ಗಮನ.ಅವರ ಬಗೆಗಿನ ಕಾಳಜಿ ಬರೀ ಬೊಗಳೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಪುರಾಣಗಳು ನಮ್ಮ ಸಮುದಾಯಗಳ, ನಮ್ಮ ದೇಶದ, ನಮ್ಮ ಸಂಸ್ಕ್ರತಿಯ, ಮತ್ತು ನಮ್ಮ ಮನಸುಗಳ ಭಾಗವೇ ಆಗಿರುವುದು ನಿತ್ಯಸತ್ಯ.\r\n\r\nಕಾಲ ಕಳೆದಂತೆ ಧಾರ್ಮಿಕ ಆಚರಣೆಗಳು ತಮ್ಮ ಮೂಲ ಅರ್ಥ ಮತ್ತು ಉದ್ದೇಶಗಳಿಗಿಂತ ದೂರ ಸರಿದು, ಬೇರೆಯದೇ ಆದ ರೀತಿ ಆಚರಿಸಲ್ಪಡುವುದಲ್ಲದೆ, ಅವುಗಳು ಅನರ್ಥಕಾರಿಯಾಗಿ ಬದಲಾಗಿ, ಸಮಾಜದ ಸಮುದಾಯಗಳ ಸ್ವಸ್ಥತೆಯನ್ನು ಹಾಳುಮಾಡುತ್ತಿರುವುದು ವಿಷಾದಕರ. ಈ ದಿಸೆಯಲ್ಲಿ ಹುಳಿಯಾರರ ಈ ಲೇಖನ ಸಕಾಲಿಕವಾಗಿ ಸಮಂಜಸ ಎಚ್ಚರಿಕೆಯ ಕಹಳೆಯನ್ನು ಮೊಳಗಿಸಿದೆ. ನಮನಗಳು.


| ಶಿವಲಿಂಗಮೂರ್ತಿ

ಪುರಾಣಗಳನ್ನು ಕುರಿತ ಲೋಹಿಯಾ ,ಅಂಬೇಡ್ಕರ್, ಕಾರ್ಲ್ ಯೂಂಗ್ ಮತ್ತು ತಮ್ಮ ಅಭಿಪ್ರಾಯಗಳು ವಿವೇಕದಿಂದ ಕೂಡಿವೆ. ತಮ್ಮ ಈ ಲೇಖನವನ್ನು ಓದುತ್ತಿರುವಾಗಲೇ ತೇಜಸ್ವಿಯವರ \'ಡೇರ್ ಡೆವಿಲ್ ಮುಸ್ತಾಫಾ\' ಕಥೆ ಕಣ್ಮುಂದೆ ಬಂತು ಇಡೀ ಕಥೆಯು ಸಮುದಾಯಗಳ ಸಾಮರಸ್ಯದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ.


| Udaykumar Habbu

ಈ ಪುಸ್ತಕವನ್ನು ಯಾವಾಗಾದರೂ ಓದಬಹುದೆಂದು ಬದಿಗೆ ಸರಿಸಿಟ್ಟಿದ್ದೆ. ಕೊರೊನಾ ಗ್ರಹಬಂಧನ ಇದನ್ನು ಹುಡುಕಿ ಓದುವಂತಾಯಿತು. ಓದದಿದ್ದರೆ ಕನ್ನಡ ಈರ್ವರು ಘಟಾನುಘಟಿ ಸಾಹಿತಿಗಳ ಕುರಿತಾದ ಒಳನೋಟಗಳನ್ನು ಕಳೆದುಕೊಳ್ಳುತ್ತಿದ್ದೆ. ೧೯೮೦ ರಲ್ಲಿ ನಾನು, ಡಾ. ಡಿ‌ ಅರ್ ನಾಗರಾಜ್ ಮತ್ತು ಬರಗೂರು ರಾಮಚಂದ್ರಪ್ಪ ಒಂದೆ ವೇದಿಕೆಯಲ್ಲಿ ಭಾಷಣಕರ್ತರಾಗಿ ಸೇರಿದ್ದೆವು. ಆಗ ಬಂಡಾಯ ಸಾಹಿತ್ಯ ಚಳುವಳಿಯ ಪ್ರಾರಂಭದ ದಿನಗಳು.‌ ಡಿ ಅರ್ ನಾಗರಾಜ್ ಬಂಡಾಯ ಸಾಹಿತ್ಯ ಚಳುವಳಿಗೆ ಒಂದು ಘೋಷ ವಾಕ್ಯವನ್ನು ಒದಗಿಸಿಕೊಟ್ಟಿದ್ದರು‌ ಬಡವರ ಕಣ್ಣೀರಿಗೆ ಮಿಡಿವ ಪ್ರಾಣಮಿತ್ರ.\" ನೆನಪಿನಲ್ಲಿ ಇಷ್ಟೆ ಇದೆ‌. ಮತ್ತೆ ಡಿ ಅರ್ ನಾಗರಾಜ್ ಅಮೃತಕ್ಕೆ ಹಾರಿದ ಗರುಡರಾದರು. ನಾನು ನನ್ನ ಹೊಟ್ಟೆಪಾಡಿನ ಉದ್ಯೋಗಕ್ಕೆ, ಸಂಸಾರಕ್ಕೆ ಕಟ್ಟುಬಿದ್ದು ಸಾಹಿತಿಯಾಗಿ ಕಳೆದು ಹೋಗಿಬಿಟ್ಟೆ. ಅರ್ ಕೆ ಮಣಿಪಾಲ್ ಕೂಡ ನಮ್ಮೊಂದಿಗಿದ್ದರು. ಆ ಚಳುವಳಿ ಉಡುಪಿ ರಥಬೀದಿಯಲ್ಲಿ ಚರ್ಚೆಗೊಳಗಾಗಿತ್ತು. ಇರಲಿ.\r\nಈ ಪುಸ್ಯಕದಲ್ಲಿ ಡಾ.‌ನಟರಾಜ ಹುಳಿಯಾರು ಅವರು ತಮ್ಮ‌ಸಾಹಿತ್ಯಿಕ ಬದುಕನ್ನು ರೂಪಿಸಿದ ಈ ಈರ್ವರು ಕನ್ನಡದ ಮೇರು ಸಾಹಿತಿಗಳ ಕುರಿತಾಗಿ ಅವರ ಶೃದ್ಧಾವಂತ ಶಿಷ್ಯನಾಗಿ, ಈ ಸಾಹಿತಿಗಳ ಕೃತಿಗಳ ಕುರಿತಾಗಿ, ಕೃತಿಗಳು ಹುಟ್ಟಿದ ಸಂದರ್ಭಗಳು, ನಟರಾಜರ ಆ ಕೃತಿಗಳ ಸೃಷ್ಟಿಯಾದಾಗ ತಮ್ಮ ಪಾತ್ರದ ಕುರಿತಾಗಿ, ಮತ್ತು ಗುರುಗಳ ಮೆರಿಟ್, ಅವರ ಸಾಹಿತ್ಯ ಕೃತಿಗಳ ಅನನ್ಯತೆಯ ಬಗ್ಗೆ ಒಳನೋಟಗಳಿಂದ ಕೂಡಿರುವ ಅಪೂರ್ವ‌ ಗ್ರಂಥ.‌ಇದು Boswel\'s Life of Johnson ಅನ್ನು ನೆನಪಿಗೆ ತಂದರೂ ಇದು ವಿಭಿನ್ನ. ಯಾಕೆಂದರೆ‌ ನಟರಾಜರಿಗೆ ಈ ಈರ್ವರು ಸಹಿತಿಗಳೊಂದಿಗೆ ಇರುವ ನಿಕಟ ಸಂಪರ್ಕ.‌ಗುರುಗಳ ಗುಣಗಳನ್ನು ಎ್ತತ್ತಿ ಹಿಡಿದಂತೆ ಅವರ ಅವಗುಣಗಳಾದ ಮತ್ಸರ, ಈರ್ಷ್ಯೆ, ಸಣ್ಣತನ, ಅಹಂಕಾರ, ಪರಸ್ಪರ ಹೊಟ್ಟೆಕಿಚ್ಚು, ಹೊಗಳಿಕೆಯ ಬಗ್ಗೆ ತೀರದ ಆಸೆ ಇವೆಲ್ಲವುಗಳು ಮುಪ್ಪರಿಗೊಂಡಿವೆ.‌‌‌ಗುಣಮುಖ, ಮುಸ್ಸಂಜೆಯ ಕಥಾಪ್ರಸಂಗ, ಕಾದಂಬರಿ ಬಿರುಕು, ಅವರ ಇನ್ನಿತರ ನಾಟಕಗಳು, ಸಿನೆಮಾಗಳು, ಲಂಕೇಶ ಪತ್ರಿಕೆ, ಇವುಗಳೊಡನೆ ನಟರಾಜರ ಆತ್ಮೀಯ ಒಡನಾಟ. ಮುಂತಾದವುಗಳು ತುಂಬಾ ಪ್ರಾಮಾಣಿಕವಾಗಿ ಮೂಡಿ ಬಂದಿವೆ. ಲಂಕೇಶರೊಡನೆ ಜಗಳವಾಡಿ ತಿಂಗಳುಗಳ ಕಾಲ ಮಾತು ಬಿಟ್ಟಾಗ ಇಬ್ಬರಿಗೂ ಕಸವಿಸಿಯಾಗಿದ್ದು, ಮತ್ತೆ ಲಂಕೇಶರೆ ರಾಜಿಮಾಡಿಕೊಳ್ಳಲು ನಟರಾಜರ ಮನೆಯವರೆಗೂ ಬಂದಿದ್ದು ಗುರು ಶಿಷ್ಯರ ಸಮಾಗಮ ತುಂಬ ಅಪ್ಯಾಯಮಾನವಾಗಿ ನಿರೂಪಿಸಲ್ಪಟ್ಟಿದೆ. ನಟರಾಜರು ಯಾವ ಮುಲಾಜುಗಳಿಲ್ಲದೆ ಈ ಈರ್ವರ ಶ್ರೇಷ್ಠತೆಯನ್ನು ಅನಾವರಣಗೊಳಿಸಿ ಪ್ರಶಂಸಿದ್ದಾರೆ, ಮಾತ್ರವಲ್ಲ ಅವರ ದೌರ್ಬಲ್ಯ ಗಳ ಬಗ್ಗೆ ‌ನೇರವಾಗಿ ಖಡಾಖಂಡಿತವಾಗಿ ಅಭಿವ್ಯಕ್ತಿಸಿದ್ದಾರೆ. ಆದರೆ ಈ ಎಲ್ಲ ತಮ್ಮ‌ಗುರುಗಳ ಮಿತಿಗಳ ನಡುವೆ ಅವರಿಬ್ಬರೂ ಕನ್ನಡ ಸಾಹಿತ್ಯಕ್ಕೆ ಕನ್ನಡ ಸಂಸ್ಕೃತಿಗೆ ನೀಡಿದ ಅಪಾರ ಕೊಡುಗೆಯನ್ನು ನಿರ್ಲಿಪ್ತವಾಗಿ, ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಕನ್ನಡ ಸಾಹಿತಿಗಳು ಸಾಹಿತಿಗಳಲ್ಲಿರುವ ವೃತ್ತಿ ಮಾತ್ಸರ್ಯ, ಪರಸ್ಪರ ಹೊಟ್ಟೆಕಿಚ್ಚು ಇಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ಡಿ ಆರ್ ನಾಗರಾಜ್ ಡಾ ನಟರಾಜ ಹುಳಿಯಾರರಿಗೆ ಪಿ ಎಚ್ ಡಿಗೆ ಗೈಡ್ ಆಗಿದ್ದವರು. ಹಾಗಾಗಿ ನಟರಾಜ ಡಿ ಆರ್ ನಾಗರಾಜ್ ರ ನಿಕಟ ಸಂಪರ್ಕಕ್ಕೆ ಬಂದಿದ್ದರು. ಡಿ ಆರ್ ಸಾಹಿತ್ಯ ವಿಮರ್ಶೆಯನ್ನು ಅಂತರ್ ಶಾಸ್ತ್ರೀಯ ಅಧ್ಯಯನವಾಗಿ ಕನ್ನಡ ವಿಮರ್ಶೆಗೆ ಹೊಸ ದಿಕ್ಕನ್ನು ತೋರಿಸಿದವರು. ಓರ್ವ ಚಿಂತಕನಾಗಿ ಅದರಲ್ಲೂ ಅವೈದಿಕ ಭಾರತೀಯ ಪ್ರಾಚೀನ ತತ್ವಾನ್ವೇಷಣೆಯ ಶೋದಕ ಮತ್ತು ಸಾಧಕನಾಗಿ ಅಂತರ್ರಾಷ್ಟ್ರೀಯ ಸ್ಥಾನಮಾನವನ್ನು ಪಡೆದವರು.‌ವೈದಿಕ ವಿಚಾರಗಳ ದಬ್ಬಾಳಿಕೆಗೆ ಪರ್ಯಾಯವಾಗಿ ಅವೈದಿಕ ಶೈವಿಸಂ, ಭೋಯಿಯಂತವರ, ತತ್ವಪದಕಾರರ, ದೇಸೀಯ ವಚನಗಳ, ಅದರಲ್ಲೂ ಅಲ್ಲಮ ಪ್ರಭುವಿನ ಆಳವಾದ ಒಳನೋಟಗಳನ್ನು ಒಳಗೊಂಡ ಪಂಚರಾತ್ರದಂತಹ ಅವೈದಿಕ ಅನುಯಾಯಿಗಳು ವೈದಿಕ ಬ್ರಾಹ್ಮಣ್ಯಕ್ಕಾಗಿ ಆರ್ತರಾಗಿ ಕೇಳಿಕೊಳ್ಳುವುದು ಇವೆಲ್ಲವುಗಳನ್ನು ವೈದಿಕ ವಿಚಾರ ಗಳಿಗೆ ಮುಖಾಮುಖಿಯಾಗಿಸಿ ಅವೈದಿಕ ತತ್ವಶಾಸ್ತ್ರವನ್ನು ಮುನ್ನೆಲೆಗೆ ತರುವುದು ಡಿ ಆರ್ ಅವರ ಅನನ್ಯ ಹೋರಾಟದ ನೆಲೆಗಟ್ಟಾಗಿತ್ತು. ಇಲ್ಲಿ ಡಿ ಅರ್ ನಾಗರಾಜ ಅವರ \"ಅಲ್ಲಮ ಪ್ರಭು ಹಾಗೂ ಶೈವ ಪ್ರತಿಭೆ\" ಎಂಬ ಶ್ರೇಷ್ಠ ವಿಮರ್ಶಾ ಗ್ರಂಥದ ಅವಲೋಕನವಿದೆ. ಡಿ ಆರ್ ನಾಗರಾಜ್ ಕೇವಲ ನಲ್ವತ್ತರ ಹರೆಯದಲ್ಲಿ ಹೃದಯಾಘಾತದಿಂದ ಸಾಯದಿರುತ್ತಿದ್ದರೆ ಅವರು ಓರ್ವ ೨೦ನೆ ಶತಮಾನದ ಶ್ರೇಷ್ಠ ಚಿಂತಕರಾಗಿ ಅಂತರ್ರಾಷ್ಟ್ರೀಯ ಮನ್ನಣೆ ಪಡೆಯುತ್ತಿದ್ದರು‌ ನಟರಾಜರು ಲಂಕೇಶ ಪತ್ರಿಕೆ ಯಲ್ಲಿ ಡಿ ಅರ್ ನಾಗರಾಜ್ ರ ವ್ಯಕ್ತಿಚಿತ್ರಣ ಬರೆದಾಗ ನಾಗರಾಜ್ ವ್ಯಗ್ರರಾದುದರ ಬಗ್ಗೆ ಬರೆಯುತ್ತ ತನ್ನ ಈ ಅಭಿಪ್ರಾಯವು ಸತ್ಯವಾಗಿದ್ದರೂ ಅವರು ಒಪ್ಪದೆ ಕೆಂಡಾಮಂಡಲವಾದರು ಎಂದು ಡಿ ಅರ್ ನಾಗರಾಜ್ ಅವರ ಬಗ್ಗೆ ಬರೆಯುತ್ತಾರೆ. ಡಿ ಆರ್ ಅವರ ಹುಂಬುತನ, ದುಡುಕು ಸ್ವಭಾವ, ಲಂಕೇಶರ ಪೂರ್ವಾಗ್ರಹ ಅಭಿಪ್ರಾಯ, ನಾಗರಾಜ್ ಅಮೇರಿಕಾಕ್ಕೆ ವಿಶ್ವವಿದ್ಯಾಲಯದ ಕರೆಯ ಮೇಲೆ ಹೋದಾಗ ಲಂಕೇಶ ಹೇಳುವ ಮಾತಿದು:\" ಅಮೇರಿಕಾದ ಒಬ್ಬ ಅಡುಗೆಯವನೂ ನಮ್ಮ‌ ದೇಶಕ್ಕೆ ಬರಲು ಇಷ್ಟಪಡುವುದಿಲ್ಲ. ‌ನಮ್ಮ ವಿದ್ವಾಂಸರು ಅಮೇರಿಕಾ ಹೋಗಲು ತುದಿಗಾಲಿನಲ್ಲಿ ನಿಲ್ಲುತ್ತಾರೆ.\" ಹಾಗೆಂದು ಲಂಕೇಶರಿಗೆ ವಿದೇಶಿ ಪ್ರಯಾಣದ ಬಗ್ಗೆ ಆಸೆಯೇನೂ ಇರಲಿಲ್ಲ. ಎನ್ನುತ್ತಾರೆ ನಟರಾಜರು. ಪರಸ್ಪರ ಸ್ಪರ್ಧಾಳುಗಳಂತೆ ಇದ್ದರೂ ಪರಸ್ಪರರ ಬಗ್ಗೆ ಒಳಮೆಚ್ಚುಗೆಯೂ‌ ಇತ್ತು. ಡಿ ಅರ್ ನಾಗರಾಜ್ ರ ಪರವಾಗಿ ಮೈಸೂರು ವಿಶ್ವ ವಿದ್ಯಾಲಯದ ವೈಸ್ ಚಾನ್ಸೆಲರ್ ಹುದ್ದೆಗೆ ಲಂಕೇಶ ಹಾಮಾನಾಯಕರ ಮೇಲೆ ಪ್ರಭಾವ ಬೀರಿದ್ದರು. \r\nಲಂಕೇಶರ ಕುರಿತಾಗಿಯೂ ನಟರಾಜರು‌ ವ್ಯಕ್ತಿಚಿತ್ರಣ ಬರೆದಾಗ ಲಂಕೇಶ ನಕ್ಕುಬಿಟ್ಟಿದ್ದರಂತೆ. \r\nನಟರಾಜ್ ಹುಳಿಯಾರ್ ಅವರು ತಮ್ಮ ಈ ಪುಸ್ತಕದ ಬ್ಲರ್ಬ್ ನಲ್ಲಿ ಬರೆದಿದ್ದಾರೆ:..\r\n\" ಕನ್ನಡದ ಬಹುದೊಡ್ಡ ಸೃಜನಶೀಲ ಲೇಖಕರಲ್ಲಿ‌ ಒಬ್ಬರಾದ ಪಿ ಲಂಕೇಶ್ ದಿನ‌ನಿತ್ಯದ ಹಾಗೂ ದೀರ್ಘಕಾಲದ ರಾಜಕೀಯ, ಸಮಾಜ ಹಾಗೂ ಸಂಸ್ಕೃತಿಯ ಬಿಕ್ಕಟ್ಟುಗಳು, ಸಾಹಿತ್ಯಕ ಹಾಗೂ ಖಾಸಗಿ ಪ್ರಶ್ನೆಗಳು- ಈ ಎಲ್ಲವನ್ನೂ ಕುರಿತು ಆಳವಾಗಿ ಧ್ಯಾನಿಸಿ ಕಂಡ ಕಟು‌ ಸತ್ಯಗಳನ್ನು ಮಂಡಿಸಿದರು; ಬಗೆ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುವ ಮಾರ್ಗಗಳನ್ನು ಹುಡುಕಿದರು. ಭಾರತದ‌ ಮುಖ್ಯ ಸಂಸ್ಕೃತಿ ಚಿಂತಕರ ಸಾಲಿನಲ್ಲಿರುವ ಡಿ. ಅರ್. ನಾಗರಾಜ್ ಈ ಎಲ್ಲ ನೆಲೆಗಳನ್ನು ವಿವರಿಸುವ ವಿಶಾಲ ತಾತ್ವಿಕ‌‌ ನೆಲೆಗಳನ್ನು, ನುಡಿಗಟ್ಟುಗಳನ್ನು ರೂಪಿಸಿದರು. ವಸಾಹತುಶಾಹಿಯನಚನ್ನು ಹಾಗೂ ದೇಶೀ ಲೋಕಗಳನ್ನು ‌ಗ್ದಹಿಸುವ ಆಳವಾದ ಬೌದ್ಧಿಕ ಚಿಂತನೆಯನ್ನೂ ಬೆಳೆಸಿದರು. ಇಂದು ಕನ್ನಡದಲ್ಲಿ ಈ ಎಲ್ಲ‌‌ ವಲಯಗಳಲ್ಲಿ ವಿಕಾಸಗೊಂಡಿರುವ ಚಿಂತನೆ ಹಾಗೂ ಕ್ರಿಯೆಗಳಲ್ಲಿ ಇವರಿಬ್ಬರ ಮಾರ್ಗಗಳೂ ಜೀವಂತವಾಗಿ ಮುಂದುವರಿದಿವೆ... \r\nಹಲವು ವರ್ಷಗಳ ಕಾಲ ಈ ಇಬ್ಬರ ಒಡನಾಟ ಸಿಕ್ಕಿದ್ದು ನನ್ನ ಜೀವನದ ಬಹು‌ ದೊಡ್ಡ ಭಾಗ್ಯ.ನನ್ನೊಳಗೆ ಉಳಿದಿರುವ ಅವರ ಬೆಳಕನ್ನು, ಅವರ ವ್ಯಕ್ತಿತ್ವ, ಮಾತು, ಬರಹಗಳು ನನ್ನಲ್ಲಿ ಹುಟ್ಟಿಸಿದ ಸ್ಪ,ದನಗಳನ್ನು, ಇಲ್ಲಿ ಮಂಡಿಸಿರುವೆ.‌ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ‌ನಾನು ಬರೆದುಕೊಂಡ ಟಿಪ್ಪಣಿಗಳು, ಪದ್ಯ, ನಾಟಕ, ವಿಮರ್ಶೆ, ವಿವರಣೆ, ನಿರೂಪಣೆ ಇವೆಲ್ಲದರ‌ ಮೂಲಕ ಮೈದಾಳಿರುವ ಈ ಪುಸ್ತಕ ವಿವಿಧ ಪ್ರಕಾರಗಳು ಬೆರೆತ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿಯಂತೆ ಓದುಗರಿಗೆ ಕಂಡರೆ ಆಶ್ಚರ್ಯವಿಲ್ಲ!\"\r\nಹೌದು; ನಾನು ಈ ಪುಸ್ತಕವನ್ನು ಕಾದಂಬರಿಯಂತೆ ಓದಿದೆ.\r\n\",ಇಂತೀ ನಮದ್ಕಾರಗಳು ಇದು ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಡುವ ಒಂದು ಹೊಸ ಪುಸ್ತಕ. ಈ ಪುಸ್ತಕ ಬರೀ‌ ವ್ಯಕ್ತಿಪೂಜೆಗೆಂದು ಬರೆದ ಪುಸ್ತಕವಲ್ಲ. ಅಥವಾ ಶಿಷ್ಯನೊಬ್ಬ \" ಸ್ವರಕ\"ದಲ್ಲಿರುವ‌ ಗುರುಗಳನ್ನು ಮೆಚ್ಚಿಸಲಿಕ್ಕೆ ಬರೆದ ಪುಸ್ತಕವಲ್ಲ.‌ಬದಲಿಗೆ ಕನ್ನಡ ಸಾಹಿತ್ಯವನ್ನು ಹೇಗೆ ನೋಡಬೇಕು, ಅದರಲ್ಲೂ ‌ಡಿ‌‌ ಅರ್‌‌ ಹಾಗೂ ಲಂಕೇಶರ ಬರಹಗಳನ್ನು ಯಾವ ರೀತಿಯಲ್ಲಿ ನೋಡಬೇಕು ಎಂಬುದನ್ನು ಕಲಿಸಿ ಕೊಡುತ್ತದೆ. ಈ ಪುಷ್ತಕ ಬರೀ ಅಕಾಡೆಮಿಕ್‌ ಅಥವಾ ತಮಾಷೆಯ ಪುಸ್ತಕವಲ್ಲ.‌ಬದಲಿಗೆ ಎಲ್ಲಾ ವಿಷಯಗಳನ್ನೂ ಒಂದು‌ ರೀತಿ‌ ಕಂಬೈನ್ ಮಾಡಿ ಬರೆದಿರುವ ಪುಸ್ತಕ. ಈ ಪುಸ್ತಕದಲ್ಲಿ ಡಿ ಆರ್‌ ಅವರ ತಮಾಷೆಯ ವ್ಯಕ್ತಿತ್ವ, ವ್ಯಗ್ರತೆ ಎಲ್ಲವೂ ಕಾಣುತ್ತದೆ. ಹಾಗೆಯೇ ಲಂಕೇಶರ ಸಿಟ್ಟು, ಸೆಡವುಗಳು ಕಾಣುತ್ತವೆ. ಒಟ್ಟಿನಲ್ಲಿ‌ ಈ ಪುಸ್ತಕ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶಿಷ್ಟ ಛಾಪನ್ನು ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಶಿಷ್ಯನೊಬ್ಬ ತನ್ನ ಗುರುಗಳಿಗೆ ಸಲ್ಲಿಸಲಿರುವ ನಿಜವಾದ \"ಇಂತಿ ನಮಸ್ಕಾರ\" ಶೋಮಿಕಾ.\r\nಕನ್ನಡದ ಅಪೂರ್ವ ಪುಸ್ತಕ ಓದಿ ಖುಸಿಪಡಿ




Add Comment


Shaksphere Manege Banda

YouTube






Recent Posts

Latest Blogs