ಸೊಫೋಕ್ಲಿಸ್, ಕುವೆಂಪು, ವ್ಯಾಸ: ಸ್ತ್ರೀವಾದಿ ನೋಟ

ಕೆಲವು ವರ್ಷಗಳ ಕೆಳಗೆ ‘ಮಿಥ್’ ಎಂಬ ಸ್ತ್ರೀವಾದಿ ಪದ್ಯ ಓದಿದ ಮೇಲೆ ಸೊಫೋಕ್ಲಿಸ್‌ನ 'ಈಡಿಪಸ್’ ದುರಂತ ನಾಟಕವನ್ನು ನಾನು ಓದುವ ರೀತಿ ಕೊಂಚ ಬದಲಾಯಿತು. ಆ ಪದ್ಯ ಓದುವ ಮೊದಲು ಗ್ರೀಕ್ ಸಂಸ್ಕೃತಿಯ ಈಡಿಪಸ್ ಪುರಾಣಕತೆಯ ಸಾರಾಂಶ: 

ಥೀಬ್ಸ್ ರಾಜ್ಯದ ರಾಜ ಲಾಯಿಸ್-ರಾಣಿ ಜೊಕಾಸ್ತರಿಗೆ ಹುಟ್ಟಿದ ಮಗು 'ತನ್ನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತದೆ’ ಎಂಬ ಭೀಕರ ಭವಿಷ್ಯವಾಣಿ ಕೇಳಿ ಬಂತು. ತಂದೆ, ತಾಯಿ ಈ ಮಗುವನ್ನು ಕೊನೆಗಾಣಿಸಲು ಸೇವಕನಿಗೆ ಹೇಳಿದರು. ಸೇವಕ ಆ ನತದೃಷ್ಟ ಮಗುವನ್ನು ಕೊಲ್ಲಲಾಗದೆ ಬೆಟ್ಟದಲ್ಲಿ ಬಿಟ್ಟು ಬಂದ. ಆ ಮಗು ಕಾರಿಂಥ್ ಪ್ರದೇಶದ ಕುರುಬನೊಬ್ಬನಿಗೆ ಸಿಕ್ಕಿತು. ಆತ ಆ ಮಗುವನ್ನು ತನ್ನ ರಾಜ್ಯದ ದೊರೆಗೆ ಕೊಟ್ಟ. ಮಕ್ಕಳಿಲ್ಲದ  ದೊರೆ ಈಡಿಪಸ್‌ನನ್ನು ಬೆಳೆಸಿದ. ತರುಣ ಈಡಿಪಸ್‌ಗೆ ಡೆಲ್ಫಿಯ ವಾಣಿಯಿಂದ ತನ್ನ ಬಗೆಗಿನ ಹಳೆಯ ಭವಿಷ್ಯವಾಣಿ ತಿಳಿಯಿತು. ಆದರೆ ಆ ಹಳೆಯ ಭವಿಷ್ಯವಾಣಿಯ ಕಾಲದ ತಂದೆ ತಾಯಿಯರ ಬಗ್ಗೆ ಅರಿವಿರದ ಈಡಿಪಸ್ ಈಗಿನ ತಂದೆ ತಾಯಿಯರಿಂದ ತಪ್ಪಿಸಿಕೊಳ್ಳಲು ದೇಶಾಂತರ ಹೊರಟ. 

ದಾರಿಯಲ್ಲಿ ಈಡಿಪಸ್ ನಡುರಾತ್ರಿಯಲ್ಲಿ ತನಗೆ ಅಡ್ಡವಾದವರನ್ನು ಕೊಂದು ಕುದುರೆಯನ್ನು ಮುಂದಕ್ಕೆ ಓಡಿಸುತ್ತಾ ಯಾವುದೋ ರಾಜ್ಯಕ್ಕೆ ಬಂದ. ರಾಜನಿಲ್ಲದ ಆ ರಾಜ್ಯದಲ್ಲಿ ಸ್ಫಿಂಕ್ಸ್ ಮಾರಿ ಒಂದು ಒಗಟಿಗೆ ಉತ್ತರ ಕೊಡುವಂತೆ ಜನರನ್ನು ಪೀಡಿಸುತ್ತಿದ್ದಳು. ಉತ್ತರ ಕೊಡದವರನ್ನು ಹಿಂಸಿಸುತ್ತಿದ್ದಳು. ಈಡಿಪಸ್ ಆಕೆಯ ಒಗಟಿಗೆ ಉತ್ತರ ಕೊಟ್ಟ. ರಾಜ್ಯದ ಜನ ಸ್ಫಿಂಕ್ಸ್ ಹಾವಳಿಯಿಂದ ಮುಕ್ತರಾದರು. ಆ ರಾಜ್ಯದ ದೊರೆ ಸತ್ತಿದ್ದರಿಂದ ಒಗಟು ಬಿಡಿಸಿ, ತಮ್ಮನ್ನು ರಕ್ಷಿಸಿದ ಜಾಣ ಈಡಿಪಸ್‌ನನ್ನೇ ಜನರು ರಾಜನನ್ನಾಗಿ ಆರಿಸಿದರು. ಅಲ್ಲಿನ ಪದ್ಧತಿಯಂತೆ ಅಳಿದ ರಾಜನ ರಾಣಿಯನ್ನು ಈಡಿಪಸ್ ಮದುವೆಯಾದ. ಮಕ್ಕಳನ್ನು ಪಡೆದ. 

ಹಲವು ವರ್ಷಗಳ ನಂತರ ರಾಜ್ಯಕ್ಕೆ ಮತ್ತೆ ಕಷ್ಟ ಎದುರಾಯಿತು. ‘ರಾಜ್ಯದ ಹಳೆಯ ದೊರೆ ಲಾಯಿಸ್‌ನನ್ನು ಕೊಂದವನು ಈ ರಾಜ್ಯದಲ್ಲಿದ್ದಾನೆ; ಅವನಿಂದಲೇ ಈ ರಾಜ್ಯಕ್ಕೆ ಕುತ್ತು ಬಂದಿದೆ’ ಎಂದು ಡೆಲ್ಫಿಯ ವಾಣಿ ಹೇಳಿತು. ಈಡಿಪಸ್ ವಿಚಾರಣೆ ನಡೆಸತೊಡಗಿದ. ಅವತ್ತು ನಡುರಾತ್ರಿ ತಾನು ಕೊಂದವನು ಈ ರಾಜ್ಯದ ದೊರೆ ಲಾಯಿಸ್; ಆತ ತನ್ನ ನಿಜವಾದ ತಂದೆ; ಮದುವೆಯಾದ ರಾಣಿ ತನ್ನ ತಾಯಿ ಎಂಬುದು ಈಡಿಪಸ್‌ಗೆ ಗೊತ್ತಾಯಿತು. ಜೊಕಾಸ್ತ ಆತ್ಮಹತ್ಯೆ ಮಾಡಿಕೊಂಡಳು. ಈಡಿಪಸ್ ಜೊಕಾಸ್ತಳ ಉಡುಗೆಯಲ್ಲಿದ್ದ ಆಭರಣದಿಂದ ಕಣ್ಣನ್ನು ಇರಿದುಕೊಂಡು ತನ್ನ ತಪ್ಪಿಗೆ ಶಿಕ್ಷೆಯಂಬಂತೆ ದೇಶಾಂತರ ಹೊರಟ.    

‘ತನ್ನದಲ್ಲದ ತಪ್ಪಿಗಾಗಿ ಮನುಷ್ಯ ಏಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ?’ ಎಂಬ ಎಂದೂ ಉತ್ತರ ಸಿಗದ ಪ್ರಶ್ನೆಯನ್ನು ಮುಂದಿಟ್ಟ ಜಗತ್ತಿನ ಶ್ರೇಷ್ಠ ದುರಂತನಾಟಕವಾದ ’ಈಡಿಪಸ್’ ನಾಟಕವನ್ನು ಲಂಕೇಶ್ ತೀವ್ರವಾಗಿ ಕನ್ನಡಿಸಿದರು. ಈಡಿಪಸ್ ಪುರಾಣ ಅಥವಾ ನಾಟಕ ಓದಿ ಅಮೆರಿಕದ ಸ್ತ್ರೀವಾದಿ ಕವಯಿತ್ರಿ Muriel Rukeyser ಬರೆದ ’ಮಿಥ್’ ಪದ್ಯದ ಸರಳ ಕನ್ನಡಾನುವಾದ:

ಕಾಲ ಉರುಳಿತು.
ಮುದುಕ ಈಡಿಪಸ್, ಕುರುಡ ಈಡಿಪಸ್, 
ಹಾದಿಗುಂಟ ನಡೆಯುತ್ತಿದ್ದ. 

ಮೂಗಿಗೆ ಪರಿಚಿತ ಗಂಧ ಮುತ್ತಿತು. 
ಎದುರಾದವಳು ಸ್ಫಿಂಕ್ಸ್. 

ಈಡಿಪಸ್ ಕೇಳಿದ: 'ನಿನಗೊಂದು ಪ್ರಶ್ನೆ ಕೇಳಲೆ? 
ನಾನು ನನ್ನ ತಾಯಿಯನ್ನೇಕೆ ಗುರುತಿಸಲಿಲ್ಲ?’  

'ನೀ ನನಗೆ ಕೊಟ್ಟ ಉತ್ತರ ತಪ್ಪಾಗಿತ್ತು’ ಎಂದಳು ಸ್ಫಿಂಕ್ಸ್.
’ಆದರೆ ಅದರಿಂದ ತಾನೇ ಎಲ್ಲವೂ ಆಗಿದ್ದು?’ ಎಂದ ಈಡಿಪಸ್.

ಅದಕ್ಕೆ ಸ್ಫಿಂಕ್ಸ್ ಕೊಟ್ಟ ಉತ್ತರ: 
'ಇಲ್ಲ. ಬೆಳಗ್ಗೆ ನಾಲ್ಕು ಕಾಲಿನ ಮೇಲೆ
ಮಧ್ಯಾಹ್ನ ಎರಡು ಕಾಲಿನ ಮೇಲೆ
ಮುಸ್ಸಂಜೆ ಮೂರು ಕಾಲಿನ ಮೇಲೆ 
ನಡೆಯುವುದು ಯಾವುದು?’ 
ಎಂದು ನಾನು ಕೇಳಿದೆ;
'ಮನುಷ್ಯ’ ಎಂದು ನೀನು ಹೇಳಿದೆ, 
ಆದರೆ ಹೆಣ್ಣಿನ ಬಗ್ಗೆ ನೀನು ಏನೂ ಹೇಳಲಿಲ್ಲ’.

'ಮನುಷ್ಯಾ… ಅಂದರೆ…ಅದರಲ್ಲಿ ಹೆಣ್ಣೂ ಸೇರಿರುತ್ತೆ ತಾನೆ?
ಇದು ಎಲ್ಲರಿಗೂ ಗೊತ್ತು’ ಎಂದ ಈಡಿಪಸ್.

'ಹಾಗಂತ ನೀನಂದುಕೊಂಡಿದ್ದೀಯ, ಅಷ್ಟೆ’ ಎಂದಳು ಸ್ಫಿಂಕ್ಸ್.

ಮ್ಯುರಿಯೆಲ್ ಪದ್ಯ ಅಲ್ಲಿಗೆ ಮುಗಿಯುತ್ತದೆ. ಶ್ರೇಷ್ಠ ಗ್ರೀಕ್ ದುರಂತಕಾರರಲ್ಲಿ ಒಬ್ಬನಾದ ಸೊಫೋಕ್ಲಿಸ್ ಗ್ರೀಕ್ ಜನಮಾನಸ ರೂಪಿಸಿದ್ದ ಈಡಿಪಸ್ ಪುರಾಣವನ್ನು ಎರಡೂವರೆ ಸಾವಿರ ವರ್ಷಗಳ ಕೆಳಗೆ ದುರಂತ ನಾಟಕವಾಗಿಸಿದ. ಆದರೆ ಈಡಿಪಸ್ ಅವತ್ತು ಸ್ಫಿಂಕ್ಸ್ ಕೇಳಿದ ಒಗಟಿಗೆ ಕೊಟ್ಟ ಸರ್ವಸಾಮಾನ್ಯ ಉತ್ತರ `ಮ್ಯಾನ್’ ಎಂಬುದು ಪುರುಷಪ್ರಧಾನತೆಯನ್ನೇ ಸೂಚಿಸುವ ಉತ್ತರವಾಗಿತ್ತು ಎಂಬುದು ಪ್ರಾಚೀನನಾದ ಸೊಫೋಕ್ಲಿಸ್‌ಗಿರಲಿ, ಅವನ ನಾಟಕವನ್ನು ಅನುವಾದಿಸಿದ ಆಧುನಿಕ ಲಂಕೇಶರಿಗೂ ಹೊಳೆಯುವುದು ಕಷ್ಟವಿತ್ತು.  ಸ್ತ್ರೀವಾದಿಗಳು ನಾವು ಬಳಸುವ ಭಾಷೆಯಲ್ಲೇ ಹುದುಗಿರುವ ಪುರುಷ ಯಜಮಾನಿಕೆಯನ್ನು ಗುರುತಿಸಿದ ನಂತರ ಈ ಸೂಕ್ಷ್ಮಗಳು ಲೇಖಕರಿಗೂ, ಲೇಖಕಿಯರಿಗೂ ಗೊತ್ತಾಗತೊಡಗಿದವು.   

ಇದಕ್ಕಿಂತ ಮೊದಲು ಇಂಥ ಸೂಕ್ಷ್ಮಗಳು ಶ್ರೇಷ್ಠ ಲೇಖಕರಿಗೂ ಹೊಳೆಯುವುದು ಕಷ್ಟವಿತ್ತು. ನಾನು ಸ್ತ್ರೀವಾದವನ್ನು ತಕ್ಕಮಟ್ಟಿಗೆ ಓದಿ, ಪಾಠ ಮಾಡುತ್ತಿರುವಾಗ ಸ್ತ್ರೀವಾದಿ ನೋಟ ಕವಿತೆಯೊಂದರ ಬಗ್ಗೆ ಒಂದು ಪ್ರಶ್ನೆಯನ್ನು ಪ್ರಚೋದಿಸಿತು: ಕರ್ನಾಟಕದ ಏಕೀಕರಣದ ಪರವಾಗಿದ್ದ ಕುವೆಂಪು ಅವರಿಗೆ ಸರ್ಕಾರ ನೊಟೀಸ್ ಕೊಟ್ಟಿತ್ತು; ಕುವೆಂಪು ಅದಕ್ಕೆ ಉತ್ತರವಾಗಿ ತಮ್ಮ ನಿಲುವನ್ನು ದಿಟ್ಟವಾಗಿ ಪ್ರತಿಪಾದಿಸಿ ಬರೆದ 'ಅಖಂಡ ಕರ್ಣಾಟಕ!’ ಕವಿತೆಯ ಈ ಸಾಲುಗಳು ಪ್ರಖ್ಯಾತವಾಗಿವೆ:

ನೃಪತುಂಗನೆ ಚಕ್ರವರ್‍ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್‍ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ,
ತನಗೆ ರುಚಿರ ಕುಂಡಲ!

ಈ ಭಾಗವನ್ನು ಮತ್ತೆ ಓದುವಾಗ, ‘ಅರೆರೆ! ಪಂಪ ಮುಖ್ಯಮಂತ್ರಿಯಾಗಿರುವ ಅಖಂಡ ಕರ್ನಾಟಕದ ಸಾಂಸ್ಕೃತಿಕ ಸಚಿವ ಮಂಡಲದಲ್ಲಿ ಬರೇ ಪುರುಷ ಕವಿಗಳೇ ಇದ್ದಾರಲ್ಲ! ಕನ್ನಡದ ಮೊದಲ ಭಾವಗೀತಕಾರ್ತಿ ಅಕ್ಕಮಹಾದೇವಿಗೂ ಸಚಿವೆಯ ಸ್ಥಾನವಿಲ್ಲವಲ್ಲ!’ ಎನ್ನಿಸಿದ್ದಕ್ಕೆ ಸ್ತ್ರೀವಾದಿ ತರಬೇತಿಯೂ ಕಾರಣವಾಗಿತ್ತು. ಇವೆಲ್ಲ ತುಂಟ ಪ್ರಶ್ನೆಗಳಾದರೂ ಬರೆವವರು ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಒಳ್ಳೆಯದು.

ಆ ಕಾಲದಲ್ಲೇ ಯಾರಾದರೂ ಈ ಪ್ರಶ್ನೆಯನ್ನು ಕುವೆಂಪು ಅವರ ಎದುರಿಗಿಟ್ಟಿದ್ದರೆ ಅವರಿಗೂ ಇದು ಹೊಳೆಯದೇ ಹೋಗುತ್ತಿರಲಿಲ್ಲ. ಕುವೆಂಪು ವಿದ್ಯಾರ್ಥಿ ದೆಸೆಯಲ್ಲೇ ಬರೆದ ’ಜಯಹೇ  ಕರ್ನಾಟಕ ಮಾತೆ’ ಕವಿತೆಯಲ್ಲಿ 'ಬಸವೇಶ್ವರರಿಹ ದಿವ್ಯಾರಣ್ಯ’ ಎಂದಿದೆಯೇ ಹೊರತು, ಅಲ್ಲಿ ಮಧ್ವಾಚಾರ್ಯರ ಹೆಸರಿರಲಿಲ್ಲ. ಕೆಲವರು ಈ ಹೆಸರೂ ಬೇಕು ಎಂದು ಗೋಗರೆದ ಮೇಲೆ ’ಹಾಕ್ಕೊಂಡು ಹಾಳಾಗೋಗಿ’ ಎಂದ ಕುವೆಂಪು ರೇಗಿದ್ದನ್ನು ಕುರಿತು ಪೂರ್ಣಚಂದ್ರ ತೇಜಸ್ವಿ ಮುಂದೊಮ್ಮೆ ಬರೆದರು.

ಕವಿತೆಯೊಂದು ರಚನೆಯಾದ ಮೇಲೆ ಅದರಲ್ಲಿ ಏನೋ ಮತ್ತೊಂದನ್ನು ಕೃತಕವಾಗಿ ಸೇರಿಸುವುದು ತೀರಾ ಕಷ್ಟ ಹಾಗೂ ಅಸಹಜ ಎಂಬುದು ಎಲ್ಲ ಲೇಖಕಿಯರಿಗೂ, ಲೇಖಕರಿಗೂ ಗೊತ್ತಿರುತ್ತದೆ. ಹಾಗೆ ಸೇರಿಸುವುದು ಈಗಾಗಲೇ ಕಟ್ಟಿದ ಕಟ್ಟಡದೊಳಗೆ ಮತ್ತೇನನ್ನೋ ತುರುಕುವಷ್ಟೇ ಕೃತಕವಾಗಿರುತ್ತದೆ. ಆದರೂ, ಒಂದು ಸಂಸ್ಕೃತಿಯಲ್ಲಿ ಶತಮಾನ-ಸಹಸ್ರಮಾನಗಳ ಲಿಂಗರಾಜಕಾರಣದಿಂದಾಗಿ ಭಾಷೆಯಲ್ಲೇ ಅದೃಶ್ಯವಾಗುವ ಮಹಿಳೆಯ ಬಗ್ಗೆ ಈ ಥರದ ಪ್ರಶ್ನೆಯನ್ನು ಲೇಖಕರು ಆಗಾಗ್ಗೆ ಕೇಳಿಕೊಳ್ಳುವುದು, ಮುಂದಿನ ಬರಹಗಳಲ್ಲಾದರೂ ಉತ್ತರ ಹುಡುಕಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ.

ಈ ಹಿನ್ನೆಲೆಯಲ್ಲಿ ಸೊಫೊಕ್ಲಿಸ್, ಕುವೆಂಪು ಥರದ ಜೀನಿಯಸ್‌ಗಳ ಎದುರು ಸ್ತ್ರೀವಾದ ಈ ಥರದ ಪ್ರಶ್ನೆಯನ್ನಿಟ್ಟಿದ್ದರೆ ಅದು ನಿಜಕ್ಕೂ ಅವರಿಗೆ ಮನವರಿಕೆಯಾಗಿ ಮುಂದಿನ ಆವೃತ್ತಿಯಲ್ಲಿ ತಿದ್ದಿಕೊಂಡಿರುತ್ತಿದ್ದರು ಎಂಬುದು ನನ್ನ ಊಹೆ. ಕಾರಣ ಸ್ವಂತದ ಹಾಗೂ ಸಂಸ್ಕೃತಿಯ ಪೂರ್ವಗ್ರಹ, ಹಿಡಿತಗಳನ್ನು ಮೀರಿ ನೋಡಬಲ್ಲ ಶಕ್ತಿ ಮಹಾಪ್ರತಿಭೆ ಅಥವಾ ಜೀನಿಯಸ್‌ಗೆ ಇರುತ್ತದೆ ಎಂಬುದು ನನ್ನ ನಂಬಿಕೆ. ಸಂಪೂರ್ಣ ಪುರುಷಯಜಮಾನಿಕೆಯ ಕಾಲದಲ್ಲಿ ಬಂದ ವ್ಯಾಸನ ಮಹಾಭಾರತದಲ್ಲೂ ಆ ಯಜಮಾನಿಕೆಯನ್ನು ಪ್ರಶ್ನಿಸುವ ದ್ರೌಪದಿಯ ಪಾತ್ರದ ಬಗ್ಗೆ 'ದ್ರೌಪದಿಯೋ? ಸಾವಿತ್ರಿಯೋ?’ ಎಂಬ ಲೇಖನದಲ್ಲಿ ಲೋಹಿಯಾ ಬರೆಯುತ್ತಾರೆ. ಈ ಬರಹ 'ಉತ್ತರ ದಕ್ಷಿಣ’ ಎಂಬ ಲೋಹಿಯಾ ಬರಹಗಳ ಸಂಪುಟ-೨ರಲ್ಲಿದೆ.

ಸಾವಿತ್ರಿ ಹಾಗೂ ದ್ರೌಪದಿಯರ ನಡುವೆ ಆಯ್ಕೆ ಬಂದಾಗ, ದ್ರೌಪದಿ ನನ್ನ ಆಯ್ಕೆ ಎನ್ನುವ ಲೋಹಿಯಾ, ದ್ರೌಪದಿಯ ಶಕ್ತಿಯ ಬಗ್ಗೆ ಬರೆಯುವ ಮಾತುಗಳು:
‘ಸುಮಾರು ನಲ್ವತ್ತು, ಐವತ್ತು ವಿಚಾರಗಳನ್ನು ಕುರಿತು ದ್ರೌಪದಿ ನಡೆಸುವ ವಾಗ್ವಾದ, ಮಾತುಕತೆಗಳಿವೆ… ದ್ರೌಪದಿಯಂತೆ ಇಷ್ಟೆಲ್ಲ ವಿಚಾರಗಳ ಮೇಲೆ ವಾಗ್ವಾದ ಮಾಡಿರುವ ಮಹಿಳೆ ಇನ್ನೊಬ್ಬಳಿಲ್ಲ…ಪ್ರಪಂಚದ ಯಾವುದೇ ದೇಶದ, ಯಾವುದೇ ಕಾಲದ ಯಾವೊಬ್ಬ ಮಹಿಳೆಯೂ ಅರಿವಿನಲ್ಲಿ, ತರ್ಕದಲ್ಲಿ, ಸೂಕ್ಷ್ಮದಲ್ಲಿ, ಧೈರ್ಯದಲ್ಲಿ ದ್ರೌಪದಿಯ ಥರ ಇರುವುದು ಕಾಣುವುದಿಲ್ಲ. ಇವಳಷ್ಟು ಜ್ಞಾನಸಂಪನ್ನಳಾದ ಇನ್ನೊಬ್ಬ ಮಹಿಳೆಯಿಲ್ಲ. ತನ್ನ ಕಾಲದ ಪ್ರತಿ ಗಂಡಸನ್ನೂ ದ್ರೌಪದಿ ಸೂಕ್ಷ್ಮವಾದ ಮಾತುಕತೆಯಲ್ಲಿ ಸೋಲಿಸಿದಳು. ಅವಳು ಎಂಥ ಜ್ಞಾನಿ ಹಾಗೂ ತೀಕ್ಷ್ಣಮತಿಯೆಂದರೆ, ಅವಳ ಮುಂದೆ ಆ ಕಾಲದ ಯಾವ ಗಂಡೂ ಸಹ ನಿಲ್ಲಲಾಗುತ್ತಿರಲಿಲ್ಲ...’

ದ್ರೌಪದಿಯ ಪ್ರಖರತೆಯನ್ನು ಸೂಚಿಸುವ ಪ್ರಸಂಗವೊಂದನ್ನು ಲೋಹಿಯಾ ಉಲ್ಲೇಖಿಸುತ್ತಾರೆ: ‘ಸಾವಿನ ಮಡಿಲಲ್ಲಿದ್ದ ಭೀಷ್ಮಾಚಾರ್ಯರು ರಾಜನೀತಿಯನ್ನು ಬರೆಸುತ್ತಿದ್ದರು. ಭಾರತದಲ್ಲಷ್ಟೇ ಅಲ್ಲ, ಇದು ಒಂದರ್ಥದಲ್ಲಿ ಪ್ರಪಂಚದಲ್ಲಿಯೇ ರಾಜನೀತಿಶಾಸ್ತ್ರ ಕುರಿತ ಮೊದಲ ಗ್ರಂಥ. ಮಹಾಭಾರತದ ‘ಶಾಂತಿಪರ್ವ’ದಲ್ಲಿ ಬಹುಶಃ ಕೌರವ, ಪಾಂಡವರೆಲ್ಲ ಒಟ್ಟಾಗಿ ಭೀಷ್ಮರಿಂದ ನೀತಿಯನ್ನು ಕಲಿಯುತ್ತಿದ್ದರು. ಈ ಪ್ರಸಂಗದಲ್ಲಿ ದ್ರೌಪದಿ ಒಮ್ಮೆಲೆ ನಕ್ಕಳು. ನನಗನ್ನಿಸುವಂತೆ ಕೊಂಚ ಜೋರಾಗಿಯೇ ನಕ್ಕಿರಬಹುದು! ಆಕೆ ನಿರ್ಭೀತ ಹೆಂಗಸು ನೋಡಿ! ಇಡೀ ಪ್ರಪಂಚದ ರಾಜನೀತಿಯನ್ನೆಲ್ಲ ವಿಶ್ಲೇಷಿಸಿ ಹೇಳುತ್ತಿದ್ದೇನೆ; ಜ್ಞಾನದಾನ ಮಾಡುತ್ತಿದ್ದೇನೆ ಎಂದು ಭೀಷ್ಮರು ವ್ಯರ್ಥ ಪಾಂಡಿತ್ಯಪ್ರದರ್ಶನ ಮಾಡುತ್ತಿದ್ದರು. ಆಗ ದ್ರೌಪದಿ ನಕ್ಕಳು. 

‘ಆ ನಗುವನ್ನು ಕಂಡು ಅರ್ಜುನನಿಗೆ ಎಷ್ಟು ಕೋಪ ಬಂತೆಂದರೆ, ಅವನು ದ್ರೌಪದಿಯನ್ನು ಅಟ್ಟಿಸಿಕೊಂಡು ಹೊಡೆಯಲು ಓಡಿದ. ಅನೇಕ ದೃಷ್ಟಿಯಿಂದ ಅರ್ಜುನ ಕಾಡುಮನುಷ್ಯ! ಅವನು ದ್ರೌಪದಿಯನ್ನು ಹೊಡೆಯಲು ಓಡತೊಡಗಿದಾಗ ಕೃಷ್ಣ ತಡೆದು ಹೇಳಿದ: ‘ತಾಳು ಅರ್ಜುನ. ದ್ರೌಪದಿ ಯಾಕೆ ನಕ್ಕಳು ಅಂತ ಕೇಳು.’ ಆಗ ಅರ್ಜುನ ಕೇಳಿದ ಪ್ರಶ್ನೆಗೆ ದ್ರೌಪದಿ ಹೇಳಿದಳು: ‘ಈ ಭೀಷ್ಮರು ತಮ್ಮ ಜೀವನದುದ್ದಕ್ಕೂ ಈ ಜ್ಞಾನೋಪದೇಶದ ವಿರುದ್ಧ ನಡೆದಿದ್ದಾರೆ. ಈಗ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ ನೀತಿಬೋಧೆಗೆ ಇಳಿದಿದ್ದಾರೆ!’ ದ್ರೌಪದಿಯ ನಗುವಿಗೆ ಉತ್ತರಿಸುತ್ತಾ ಭೀಷ್ಮ, ‘ಸರಿ, ನಗಲು ದ್ರೌಪದಿಗೆ ಪೂರ್ಣ ಹಕ್ಕಿದೆ’ ಎಂದ.’ 

ಸಾಹಿತ್ಯ ರಚನೆಯಲ್ಲಿ ಪುರುಷ ಪೂರ್ವಗ್ರಹದ ಬಗ್ಗೆ ಸ್ತ್ರೀವಾದಿ ಚಿಂತನೆ ಹೇಳುವುದನ್ನು ಒಪ್ಪುವಾಗಲೂ, ಎಷ್ಟೋ ಸಲ ಸಾಹಿತ್ಯ ಕೃತಿಯಲ್ಲಿ ಸೃಷ್ಟಿಯಾದ ಸ್ತ್ರೀ ಪಾತ್ರವೇ ತನ್ನ ಕಾಲದ ಪುರುಷ ಪೂರ್ವಗ್ರಹದಿಂದ ಆಚೆಗೆ ಬಂದು ನೋಡುವಂತೆ ಲೇಖಕನನ್ನು ಒತ್ತಾಯಿಸಬಲ್ಲದು. ಸೃಜನಶೀಲ ಸೃಷ್ಟಿಯ ಈ ಮುಖವನ್ನೂ ಮರೆಯದಿರೋಣ! 
 

Share on:

Comments

18 Comments



| Subramanya Swamy

ಪುರುಷ ಪೂರ್ವ ಗ್ರಹದಿಂದ ಜಗತ್ತು ಹೊರಬರಬೇಕಿದೆ ಎಂಬ ವಿವೇಕ ಹಾಗೂ ವಿವೇಚನೆ ವಾಸ್ತವದ ಬದುಕಿನಲ್ಲಿ ನಮಗೊಂದು ಎಚ್ಚರ ಆಗಬೇಕು. ಡಾ. ನಟರಾಜ್ ಹುಳಿಯಾರ್ ಮೇಷ್ಟ್ರು ಅನೇಕ ಅವರ ಭಾಷಣ ಮತ್ತು ಬರಹಗಳಲ್ಲಿ ಈ ಎಚ್ಚರವನ್ನು ಜಾಗೃತ ಪ್ರಜ್ಞೆಯಾಗಿ ಕಾಯ್ದುಕೊಂಡು ಇರುವುದನ್ನು ನಾನು ಗಮನಿಸಿದ್ದೇನೆ, ನನ್ನ ಹಾಗೆ ಬಹಳಷ್ಟು ಸ್ನೇಹಿತರು ಕೂಡಾ ಅಂದುಕೊಂಡಿದ್ದೇನೆ .


| Dr.Pattan Rakesh

ಲೇಖನ ಉತ್ತಮವಾಗಿ ಮೂಡಿ ಬಂದಿದೆ


| Hari Prasad

ಎಂಥ ಕವಿತೆ, ಎಂಥಾ ಕವಿತೆ


| ಡಾ. ಮೋಹನ್ ಮಿರ್ಲೆ

ಸರ್, ಕಳೆದ ಹನ್ನೆರಡು ವರ್ಷಗಳ ನಿಮ್ಮೊಂದಿಗಿನ ಒಡನಾಟದಲ್ಲಿ ಸ್ತ್ರೀವಾದಿ ದೃಷ್ಟಿಕೋನ ನಿಮ್ಮ ಮಾತು, ಬರಹ ಮತ್ತು ಭಾಷಣಗಳಿಂದ ನನ್ನಲ್ಲಿ ಸಾಕಷ್ಟು ನೆಲೆಯೂರಿದೆ. ಈ ಅಭಿಪ್ರಾಯವನ್ನು ಈ ಹಿಂದೆಯೂ ಬ್ಲಾಗ್ ನ ಪ್ರತಿಕ್ರಿಯೆಯೊಂದರಲ್ಲಿ ಹಂಚಿಕೊಂಡಿದ್ದೆ. ಮತ್ತು ಈ ಕಾರಣದಿಂದಲೆ ಏನೋ ಪ್ರಮುಖ ಬರಹಗಾರರ ಕೃತಿಗಳನ್ನು ಓದುವಾಗಲೂ ಅಲ್ಲಿನ ಪುರುಷವಾದಿ ನಿರೂಪಣೆಗಳು, ಉಲ್ಲೇಖಗಳು ಸರಾಗ ಓದಿನ ನಡುವೆಯೂ ಧುತ್ತೆಂದು ಎದುರಾಗಿ ಓದಿನ ಹರಿವಿಗೆ ಕೊಂಚ ತಡೆಯೊಡ್ಡುತ್ತವೆ. ಸಮಾಜವನ್ನು ಪ್ರತಿನಿಧಿಸುವ, ಸಾಮಾನ್ಯೀಕೃತ ಹೇಳಿಕೆಗಳನ್ನು ವ್ಯಾಖ್ಯೆಗಳನ್ನು ನೀಡುವ, ಅಭಿಪ್ರಾಯ-ತೀರ್ಮಾನ-ಉದಾಹರಣೆಗಳನ್ನು ಕೊಡುವ ಅನೇಕ ಸಂದರ್ಭಗಳಲ್ಲಿ ನಮ್ಮ ಪ್ರಮುಖ ಬರಹಗಾರರೂ ಪುರುಷ ವಾಚಕಗಳನ್ನೇ ಬಳಸಿರುವುದನ್ನು ನೋಡಬಹುದು. ಬರಹಗಾರರ ಮಾತಿರಲಿ ಬರಹಗಾರ್ತಿಯರೂ ಈ ಪುರುಷಪ್ರಧಾನ ಸಮಾಜದ ಬಲಿಪಶುಗಳಂತೆ ಅದೇ ಕಣ್ಣುಗಳಿಂದ ಬರೆದಿರುವುದಕ್ಕೂ ಕೊರತೆಯೇನಿಲ್ಲ.\r\n\r\nಕಾಕತಾಳೀಯವೆಂಬಂತೆ ಮೊನ್ನೆ ತಾನೆ ನಾನು ಮತ್ತು ನನ್ನ ಸಹೋದ್ಯೋಗಿ ಮಿತ್ರರಾದ ಸಂಪತ್ ಬೆಟ್ಟಗೆರೆ ನಾಡಗೀತೆಯಲ್ಲಿ ಮಹಿಳೆಯರ ಹೆಸರಿಲ್ಲದಿರುವ ಬಗ್ಗೆ ಚರ್ಚೆ ನಡೆಸಿದ್ದೆವು. ಈ ಗೀತೆಯಲ್ಲಿ ಭಾರತ ದೇಶವನ್ನೂ, ಕನ್ನಡ ನಾಡನ್ನೂ ಸ್ತ್ರೀರೂಪದಲ್ಲಿ ಸಂಬೋಧಿಸಿ ಗೌರವಿಸಿದರೂ, ಕೆಲವೊಂದು ಸ್ತ್ರೀ ಹೆಸರಿನ ನದಿಗಳ ಉಲ್ಲೇಖವಿದ್ದರೂ ಈ ಸಾಂಕೇತಿಕ ರೂಪಗಳಲ್ಲದೆ ವಾಸ್ತವ ವಿವರಗಳಲ್ಲಿ ನಾಡಿನ ಯಾವ ಘನತೆವೆತ್ತ ಸ್ತ್ರೀಯರ ಹೆಸರಿಲ್ಲದ್ದು ಕೊರತೆಯಾಗಿ ಕಾಡುವುದನ್ನು ಕುರಿತು ನಾವು ಚರ್ಚಿಸಿದ್ದೆವು. \r\n\r\nಸ್ತ್ರೀವಾದಿ ಆಲೋಚನೆ ಮನದಲ್ಲಿ ನೆಲೆಯೂರಿತೆಂದರೆ ಪಠ್ಯ ಓದಿನಲ್ಲಿ ಸಾಮಾನ್ಯೀಕರಣದ ಸ್ಥಳಗಳಲೆಲ್ಲಾ ಸಿಗುವ ಈ ಬಗೆಯ ಪುರುಷವಾದಿ ಉಲ್ಲೇಖಗಳು ಊಟದಲ್ಲಿ ಸಿಗುವ ಕಲ್ಲಿನಂತೆ ಓದಿಗೆ ತೊಡಕಾಗಿ ಕಾಡುತ್ತವೆ. ಮತ್ತು ನಮ್ಮ ಬರವಣಿಗೆಗಳನ್ನು ಸುಧಾರಿಸಲು ಇದು ನೆರವಾಗುತ್ತದೆ. ಇನ್ನು ಇಲ್ಲಿ ನೀವು ನೀಡಿರುವ ‘ಮಿಥ್’ ಕವಿತೆಯ ಕನ್ನಡಾನುವಾದ ತುಂಬಾ ಉಪಯುಕ್ತವಾಗಿದೆ. ಈ ಕವಿತೆಯ ಕೊನೆಯ ಸಾಲುಗಳು ಅತ್ಯಂತ ಸರಳ ನಿರೂಪಣೆಯಲ್ಲಿ ಮತ್ತು ಅಷ್ಟೇ ಗಾಢವಾಗಿ ಸ್ತ್ರೀವಾದವನ್ನು ನಮ್ಮ ಎದೆಯ ಆಳಕ್ಕೆ ಇಳಿಸಿಬಿಡುವ ಸಾಮರ್ಥ್ಯವನ್ನು ಹೊಂದಿವೆ.\r\n\r\nವಿಚಾರ ಪ್ರಚೋದಕ ಬರಹಕ್ಕಾಗಿ ಧನ್ಯವಾದಗಳು..


| Rupa Hassan

ನಿಮ್ಮ ಅಂಕಣ ಹಲವು ವಿಸ್ತಾರಗಳಿಗೆ ಕರೆದೊಯ್ದಿತು! ನನ್ನಂತಹ ಸಾಹಿತ್ಯದ ವಿದ್ಯಾರ್ಥಿ ಅಲ್ಲದವರಿಗೆ ನಿಮ್ಮ ಅಂಕಣ ಬರಹಗಳು ಒಳ್ಳೆಯ ಸಾಹಿತ್ಯ ಪಾಠ. \'ಮಿಥ್\' ಪದ್ಯದ ಅನುವಾದ ಓದಿ... ವಾಹ್ ಎನ್ನಿಸಿತು! ಎಷ್ಟು ಸಶಕ್ತ ಅಭಿವ್ಯಕ್ತಿ ಮಾದರಿ!


| Shamarao

ಅಪರೂಪದ ಲೇಖನ


| Dr. Sunandamma

ಸ್ತ್ರೀವಾದದ ಬಗ್ಗೆ ನಿಮ್ಮಂಥ ಲೇಖಕರು ಮಾತಾಡುವುದು ಬಹು ಮುಖ್ಯ. ಧನ್ಯವಾದಗಳು.


| Aiyasha

ದ್ರೌಪದಿಯ ಒಂದು ನಗುವನ್ನೇ ಅಂದಿನ ಪ್ರಪಂಚ ಸಹಿಸಿಕೊಳ್ಳಲಿಲ್ಲ ಅಂತ ಹೇಳಿದ್ರೆ ಇಂದಿನ ಪ್ರಪಂಚದಲ್ಲಿ ಸ್ತ್ರೀ ಮುಂದೆ ಬರ್ತಾಳೆ ಕೆಲಸ ಮಾಡ್ತಾಳೆ ಅಂತ ಹೇಳಿದ್ರೆ ಇವತ್ತಿನ ಕೆಲವು ಪುರುಷರು ಇದನ್ನ ಸಹಿಸಿಕೊಳ್ಳೋದಿಲ್ಲ. ಇದು ಕೆಲಸ ಮಾಡುವಂತಹ ಜಾಗಗಳಲ್ಲಿ ಬದಲಾಗಬೇಕು ಆಗ ನಾವು ದ್ರೌಪದಿಯನ್ನ ಸರಿಯಾಗಿ ಅರ್ಥ ಮಾಡಿಕೊಳ್ಳ ಬಹುದೇನೋ ಅಂತ ಅನ್ಸುತ್ತೆ


| ದೇವಿಂದ್ರಪ್ಪ ಬಿ.ಕೆ.

ಸೊಫೋಕ್ಲಿಸ್, ಕುವೆಂಪು, ವ್ಯಾಸ : ಸ್ತ್ರೀವಾದಿ ನೋಟ ಎಂಬ ಲೇಖನ ಮೂರು ಜನ ಲೇಖಕರ ಬರವಣಿಗೆಯ ಹಿನ್ನೆಲೆಯನ್ನು ತಿಳಿಸುತ್ತದೆ. ಲೇಖಕರು ತಾವು ಬರೆಯುವ ಕೃತಿಯನ್ನು ಕೆಲವು ತಾತ್ವಿಕ ಸಿದ್ಧಾಂತಗಳನ್ನು ಮೊದಲೇ ನಿರ್ಧರಿಸಿರುತ್ತಾರೆ. ಕೆಲವು ಸಂಗತಿಗಳು ಕೃತಿ ರಚನೆಯ ಸಂದರ್ಭಕ್ಕೆ ತಕ್ಕಂತೆ ರೂಪುಗೊಳ್ಳುತ್ತವೆ. ಆಧುನಿಕ ಸಾಹಿತ್ಯ ರಚನೆಯ ಸಂದರ್ಭದಲ್ಲಿ ನಮ್ಮ ಓದುಗಳು ಭಿನ್ನವಾಗಿ ರೂಪುಗೊಂಡ ನಂತರ ಅನೇಕ ಒಳ ನೋಟಗಳನ್ನು ಕೃತಿಗಳಲ್ಲಿ ಹುಡುಕಲು ಆರಂಭಿಸಿದೆವು. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಮುನ್ನೆಲೆಗೆ ಬಂದಿದ್ದ ಸ್ತ್ರೀವಾದಿ ದೃಷ್ಟಿಕೋನ ಕನ್ನಡದ ಸಂದರ್ಭಕ್ಕೆ ಬರುವಾಗ ಅದರ ಸ್ವರೂಪ ಬದಲಾಯಿತು. ಕುವೆಂಪು ಬರೆದ ಕವಿತೆಯಲ್ಲಿ ಮೂಡಿ ಬರಬೇಕಿದ್ದ ಅಕ್ಕಮಹಾದೇವಿಯ ಖಾಲಿತನವನ್ನು ಪುರುಷ ಲೇಖಕರು ನೋಡುವ ದೃಷ್ಟಿಕೋನ ಒಂದಾದರೆ, ಲೇಖಕಿಯರ ದೃಷ್ಟಿಕೋನ ಮತ್ತೊಂದು. ಕನ್ನಡದ ಆರಂಭದ ಮಹಿಳಾ ಸಾಹಿತ್ಯವನ್ನು ಅಡುಗೆಮನೆ ಸಾಹಿತ್ಯ ಎಂದು ಬಿಂಬಿಸಿದಾಗ ಬಂದ ಪ್ರತಿಕ್ರಿಯೆಯ ಜೊತೆಯಲ್ಲಿಟ್ಟುಕೊಂಡು ಇಲ್ಲಿನ ವ್ಯಾಖ್ಯಾನಗಳನ್ನು ಓದುಗರಾಗಿ ನೋಡಿದಾಗ, ಓದುಗರ ನೋಟವೇ ಮುಖ್ಯವಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ


| Prof. Mallikarjun Hiremath

ಸ್ತ್ರೀ ವಾದಿಗಳು ಹೇಳುವ ಹಾಗೆ ದೊಡ್ಡ ಲೇಖಕರಲ್ಲೂ ಪುರುಷ ಪ್ರಾಧಾನ್ಯತೆ ಎದ್ದು ಕಾಣುತ್ತದೆ. ಈ ದೃಷ್ಟಿಯಿಂದ ಅವರು ನಮ್ಮ ಕಣ್ಣು ತೆರೆಯಿಸುತ್ತಿದ್ದಾರೆ.ಆದರೆ ಅದೇ ಹೊತ್ತಿಗೆ ಲೇಖಕರು ತಮ್ಮ ಸೃಜನ ಕೃತಿಗಳಲ್ಲಿ ಅದ್ಭುತ ಸ್ತ್ರೀ ಪಾತ್ರಗಳನ್ನು ನಿರ್ಮಿಸಿದ್ದಾರೆ. ಈ ಸಂಕೀರ್ಣತೆಯನ್ನು ಗುರುತಿಸಿದ್ದೀರಿ.


| Vijaya

ಈ ಬರಹ ಬರೆಯುವಾಗ ನಿಮ್ಮೊಳಗೆ ವಿಚಾರವಂತ ತಾಯ್ತನವೊಂದು ನಿಮ್ಮ ಕೈ ಹಿಡಿದು ಬರೆಸಿದೆ.ಸದಾ ನಿಮ್ಮ ಬರಹಕ್ಕೆ ಆ‌ ಶಕ್ತಿ ಸಹಕರಿಸಲಿ


| ವಿಶುಕುಮಾರ್ ಎನ್ ಆರ್

ಸ್ತ್ರೀವಾದಿ ಚಿಂತನೆ ಮನುಷ್ಯನ ಬೌದ್ಧಿಕ ವಿಕಾಸವಾದದ ಕುರುಹು . ಅದರ ಆರಂಭಿಕ ಹೊಳಹುಗಳು ದ್ರೌಪದಿಯಲ್ಲಿ ಕಂಡು ಬಂದಿದೆ. ಆದರೆ ಅದನ್ನು ಅರಿಯುವ ಮನಸ್ಸುಗಳು ಆಗಲೂ ಇರಲಿಲ್ಲ. ಈಗಲೂ ವಿರಳವಾಗಿವೆ. ಸ್ತ್ರೀವಾದಿ ಚಿಂತನೆಯ ನಿಮ್ಮ ಒಳನೋಟಗಳು ಕುತೂಹಲಕಾರಿಯಾಗಿವೆ . ಇದು ಹೆಚ್ಚು ಜನರನ್ನು ತಲುಪ ಬೇಕು ಹಾಗೂ ಜನರೂ ಮಹಿಳಾಪರ ಒಲವು ನಿಲುವುಗಳನ್ನು ಬೆಳೆಸಿಕೊಳ್ಳ ಬೇಕು .


| Kaavya

One of your best. First credit goes to the poem Myth. But your genius is in questioning about the absence of Kuvempu\'s Sachiva mandala


| Divya

ಅತ್ಯುತ್ತಮ ಬರಹ. ಮನುಷ್ಯ ಸಹಜ ಜೀವದ ಅರಿವಾಗಿರುವ ಹೆಣ್ಣಿನ ನೆಲೆ ಬೆಲೆ ಎಂಬುದೇ...ಇನ್ನು ಎಷ್ಟು ಕಾಲದ ಚರ್ಚೆಯಾಗಬಹುದು...


| ಡಾ. ನಿರಂಜನ ಮೂರ್ತಿ ಬಿ ಎಂ

ಸೋಫೋಕ್ಲಿಸ್ ನ ಈಡಿಪಸ್, ವ್ಯಾಸರ ದ್ರೌಪದಿ, ಮತ್ತು ಕುವೆಂಪುರವರ ಕವಿತೆಯ ಬಗ್ಗೆ ಸ್ತ್ರೀವಾದಿ ನೋಟದ ಹಿನ್ನೆಲೆಯಲ್ಲಿ ಮಾಡಿರುವ ವಿಶ್ಲೇಷಣೆ ಮನಮುಟ್ಟುವ ಹಾಗಿದೆ. ಅವರ ಕಾಲದಲ್ಲಿ ಪ್ರಚಲಿತವಾಗಿರದಿದ್ದ ಅಥವಾ ಇಂದಿನಷ್ಟು ಪ್ರಖರವಾಗಿರದಿದ್ದ ಸ್ತ್ರೀವಾದಿ ನೋಟಗಳು ಅವರ ಸಾಹಿತ್ಯದಲ್ಲಿ ಎದ್ದುಕಾಣದಿದ್ದರೂ, ಅವರ ಅಂತರಾಳದಲ್ಲಿ ಸ್ತ್ರೀಯರ ಬಗ್ಗೆ ಅಂತಃಕರಣವಿದ್ದಿರಲೇಬೇಕೆಂದು ನಾನು ಭಾವಿಸುತ್ತೇನೆ. \r\n\r\nವಿಮರ್ಶಕ ರಾಜೇಂದ್ರ ಚೆನ್ನಿಯವರು ಇತಿಹಾಸವು ಪುರುಷಮಯವಾಗಿರುವುದರಿಂದಲೇ ಅದು (His story) History ಆಗಿದೆಯೆಂದು ಒಮ್ಮೆ ತಮ್ಮ ಭಾಷಣದಲ್ಲಿ ಹೇಳಿದ್ದು ನೆನಪಾಗುತ್ತಿದೆ.\r\n\r\nಆದರೆ ಕಾಲ ಉರುಳಿದಂತೆ, ಶಿಕ್ಷಣ ಹರಡಿದಂತೆ, ವೈಚಾರಿಕತೆ ಅರಳಿದಂತೆ, ಸ್ತ್ರೀವಾದ ಬೆಳೆದಂತೆ, ಅದು ಜನರ ದೃಷ್ಟಿಕೋನದಲ್ಲಿ, ಜನಜೀವನದಲ್ಲಿ, ಮತ್ತು ಸಾಹಿತ್ಯದಲ್ಲಿ ಹಾಸುಹೊಕ್ಕಾಗುತ್ತದೆ. ಆ ದಿಸೆಯಲ್ಲಿ ಹುಳಿಯಾರರ ಈ ಲೇಖನವೂ ಒಂದು ಹೆಜ್ಜೆಯಾಗಿದೆ. ಅಭಿನಂದನೆಗಳು.


|


| Dr.Ramaiah

ಅಬ್ಬಾ! ಲೇಖನ ಮತ್ತೆ ಮತ್ತೆ ಗಂಭೀರ ಚಿಂತನೆಗೆ ಹಚ್ಚುತ್ತದೆ. ಧನ್ಯವಾದಗಳು.


| ಹಳೆಮನೆ ರಾಜಶೇಖರ

ಪುರುಷರು ಬಳಸುವ ಭಾಷೆ ಸಾಮಾಜಿಕ ಹೆಣ್ತನದ ಸೂಕ್ಷ್ಮ ತೆಯನ್ನು ಅರಿಯದೆ ಹೋಗುತ್ತದಲ್ಲ ಎಂಬ ಅರಿವು ಮೂಡಿತು. ನಾವು ಹಿರಿಯರು ಬರೆದ ಈ ನೆಲೆಯಲ್ಲಿ ಅವಲೋಕಿಸುವ ಅಗತ್ಯವಿದೆ ಅನಿಸಿತು. ತಮ್ಮ ಒಳನೋಟವುಳ್ಳ ಬರಹಗಳು ನಮ್ಮಂತ ಸಾಹಿತ್ಯ ವಿದ್ಯಾರ್ಥಿಗಳಿಗೆ ಹೊಸ ದಿಕ್ಕನ್ನು ತೋರಿಸುತ್ತಿವೆ \r\n\r\nಧನ್ಯವಾದಗಳು ಸಾರ್




Add Comment


Nataraj Huliyar on Book Prize Awardees

YouTube






Recent Posts

Latest Blogs