ಪ್ರತಿಮೆಗೊಂದು ಪ್ರತಿಮೆ ಹೊಳೆವ ಪ್ರತಿಭಾವಿಲಾಸ!
by Nataraj Huliyar
ವಿದ್ಯಾರ್ಥಿನಿಯೊಬ್ಬರು ತಮ್ಮೂರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಮಾಡುವ ಸಾಹಸಕ್ಕಿಳಿದಿದ್ದರು. ಸಾಹಿತ್ಯ, ಸಂಗೀತಗಳ ಲೋಕದ ಸೂಕ್ಷ್ಮಜೀವಿಯಾದ ಆಕೆಗೆ ಪಕ್ಕದ ಜಮೀನಿನವರು ಅನಗತ್ಯ ಕಿರುಕುಳ ಕೊಡತೊಡಗಿದರು. ಈಚೆಗೆ ಅವರು ತಮ್ಮ ಕೃಷಿ ಸಾಹಸ ಹೇಳುತ್ತಲೇ ತಮ್ಮ ಜಮೀನಿನ ಪಕ್ಕದ 'ಕಿರುಕುಳಜೀವಿ’ಯ ಉಪಟಳ ಹೇಳಿಕೊಂಡರು. ಈ 'ಕಿರುಕುಳಜೀವಿ’ ಎಂಬ ಪದ ನನಗೊಮ್ಮೆ ಹೀಗೇ ಹೊಳೆಯಿತು! ಅದರ ಸಂಕ್ಷಿಪ್ತರೂಪ 'ಕಿಕುಜೀ!’
ಅದಿರಲಿ! ಆಕೆಯ ಊರಿಗೆ ಸ್ವಲ್ಪ ಹತ್ತಿರದಲ್ಲಿ ಗೆಳೆಯರೊಬ್ಬರು ಪೊಲೀಸ್ ಅಧಿಕಾರಿಯಾಗಿರುವುದು ನೆನಪಾಯಿತು. 'ಅವರನ್ನು ಭೇಟಿ ಮಾಡಿ ನೋಡಿ’ ಎಂದೆ.
ಸಮಸ್ಯೆ ಹೊತ್ತು ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಆಕೆ ಮಾತಿನ ನಡುವೆ ಅವರ ಸಾಹಿತ್ಯ ವಿಹಾರದ ಪರಿ ಕಂಡು ವಿಸ್ಮಯಗೊಂಡರು; ಆಕೆಯ ಸಮಸ್ಯೆಗೂ ಅಧಿಕಾರಿ ಒಂದು ಪರಿಹಾರ ತೋರಿಸಿದ್ದರು. ಆ ಪರಿಹಾರಕ್ಕಿಂತ ಹೆಚ್ಚಾಗಿ, ಕಾಖಿ ತೊಟ್ಟ ಅಧಿಕಾರಿಯೊಳಗೆ ಉಕ್ಕುತ್ತಲೇ ಇದ್ದ ಸಾಹಿತ್ಯದ ಒರತೆ ಕಂಡು ಆಕೆ ದಂಗಾಗಿದ್ದರು.
ಆಕೆ ತಮ್ಮ ವಿಸ್ಮಯವನ್ನು ಹೇಳುತ್ತಿರುವಾಗ ಹತ್ತು ವರ್ಷಗಳ ಕೆಳಗೆ ಈ ಅಧಿಕಾರಿ ನನಗೂ ಇಂಥದೇ ವಿಸ್ಮಯ ಹುಟ್ಟಿಸಿದ್ದು ನೆನಪಾಯಿತು. ಆಗಿನ್ನೂ ಅವರು ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದರು. ಅವರ ಪರಿಚಯವೂ ನನಗಿರಲಿಲ್ಲ. ನಾನು ಯಾವುದೋ ಸಮಸ್ಯೆ ಹೇಳಿದ ತಕ್ಷಣ, ಅವರು ನನ್ನ ಸಹಾಯಕ್ಕೆ ಧಾವಿಸಿದ್ದರು. ಅಷ್ಟೊತ್ತಿಗಾಗಲೇ ನನ್ನ ಬರಹಗಳನ್ನು ಗಮನಿಸಿದ್ದ ಅವರು ಮಾತುಮಾತಾಡುತ್ತಲೇ ತಮ್ಮ ಯಾವುದೋ ಮಾತಿಗೆ ಉದಾಹರಣೆಯಾಗಿ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ದ ಪದ್ಯವೊಂದನ್ನು ಉಲ್ಲೇಖಿಸಿದರು.
ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸುವುದು ಸಾಮಾನ್ಯವಾಗಿ ಸಾಹಿತ್ಯಾಸಕ್ತರ ಅಭ್ಯಾಸ ಎಂದುಕೊಂಡು ಸುಮ್ಮನಿದ್ದೆ. ಆದರೆ ಮರುಗಳಿಗೆಗೇ ಆ ಇನ್‌ಸ್ಪೆಕ್ಟರ್ ಸ್ನೇಹಮಯ ಸವಾಲೊಂದನ್ನು ಎಸೆದರು:
‘ನೀವು ಯಾವುದಾದರೂ ಥೀಮ್ ಹೇಳಿ, ನಾನು ಅದಕ್ಕೆ ತಕ್ಕ ಕಗ್ಗವೊಂದನ್ನು ಹೇಳುತ್ತೇನೆ!’
‘ಸರಿ! ’ಸೈಲೆನ್ಸ್’ ಬಗ್ಗೆ ಮಂಕುತಿಮ್ಮನ ಕಗ್ಗದಲ್ಲಿ ಏನಾದರೂ ಬರುತ್ತಾ, ನೋಡಿ’ ಎಂದೆ. ಒಂದು ಕಾಲಕ್ಕೆ ನನಗೆ ಪ್ರಿಯವಾಗಿದ್ದ ಆ ಪದ್ಯ ಇನ್‌ಸ್ಪೆಕ್ಟರ್ ನಾಲಗೆಯ ತುದಿಯಲ್ಲೇ ಇತ್ತು!
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ‍್ಯ ಚಂದ್ರರದೊಂದೂ ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.
ಸಣ್ಣಪುಟ್ಟದ್ದನ್ನೇ ‘ಸಾಧನೆ’ ಎಂದುಕೊಂಡು ಆ ಬಗ್ಗೆ ಶಂಖ ಬಾರಿಸಿ ಕೂಗಿಕೊಳ್ಳುವ ಆತ್ಮಕೇಂದ್ರಿತ ಭಾರತೀಯರಿಗೆ ಎಚ್ಚರ ಹೇಳುವ ಈ ಪದ್ಯವನ್ನು ಹದಿಹರೆಯದಲ್ಲೇ ಒಪ್ಪಿ ಮೆಚ್ಚಿದ್ದು, ಹಾಗೂ ಆ ಪದ್ಯದ ಸಂದೇಶದಂತೆ ಅಷ್ಟಿಷ್ಟು ತುಟಿ ಹೊಲಿದುಕೊಂಡಿದ್ದು ನೆನಪಾಯಿತು! ಇದೀಗ ಮತ್ತೆ ಆ ಪದ್ಯ ಕೇಳಿ ಪುಳಕ ಹುಟ್ಟಿತು.
ಈ ಅಧಿಕಾರಿಯ ವಿಶಿಷ್ಟ ಪ್ರತಿಭೆಯ ಬಗ್ಗೆ ನನ್ನಲ್ಲಿ ಹುಟ್ಟಿದ ಗೌರವ, ಆನಂದಗಳನ್ನು ಅವರಿಗೆ ತುಟಿ ಹೊಲಿದುಕೊಂಡೇ, ಅಂದರೆ ಸೂಚ್ಯವಾಗಿ, ಹೇಳಿದೆ. ಆಗ ಅವರು ‘ಅಲ್ಲಮಪ್ರಭುಗಳ ವಚನಗಳು, ಗೋಪಾಲಕೃಷ್ಣ ಅಡಿಗರ ಕವನಗಳನ್ನು ಎಲ್ಲಿ ಬೇಕಾದರೂ ಕೇಳಿ, ಹೇಳುತ್ತೇನೆ’ ಎಂದು ಇನ್ನಷ್ಟು ಬೆರಗು ಹುಟ್ಟಿಸಿದರು!
ಮಂಕುತಿಮ್ಮನ ಕಗ್ಗದ ಬಗೆಗಿನ ಅವರ ಒಲವನ್ನೇನೋ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಿತ್ತು; ಆದರೆ ಕನ್ನಡದ ಶ್ರೇಷ್ಠ ಕವಿಗಳ ಸಾಲಿನಲ್ಲಿರುವ ಅಲ್ಲಮಪ್ರಭು, ಅಡಿಗರಂಥ ಸಂಕೀರ್ಣ ಕವಿಗಳಿಗೂ ಚಾಚಿಕೊಂಡಿರುವ ಅವರ ಬಗ್ಗೆ ವಿಶೇಷ ಅಭಿಮಾನ ಮೂಡತೊಡಗಿತು. ಆ ಗಳಿಗೆಯಲ್ಲೇ ನಾನು ಅವರ ಗೆಳೆಯನಾದೆ; ಸಂವೇದನೆಗಳು ಮ್ಯಾಚ್ ಆಗದೆ, ತಕ್ಷಣ ಇಂಥ ಸ್ನೇಹ ಹುಟ್ಟುವುದು ಕಷ್ಟ. ನೀವು ಇಂಥ ಸ್ನೇಹಿತ, ಸ್ನೇಹಿತೆಯರನ್ನು ಹೆಚ್ಚು ಭೇಟಿ ಮಾಡಿ, ಬಿಡಿ; ಆ ಸ್ನೇಹ ಹಾಗೇ ಇರುತ್ತದೆ. ಅವತ್ತಿನಿಂದಲೂ ಅವರು ನನ್ನ ಅಥವಾ ಇತರರ ಕಷ್ಟಗಳಲ್ಲಿ ಕೈ ಹಿಡಿದಿದ್ದಾರೆ. ಅದನ್ನೆಲ್ಲ ಹೇಳಲು ಇದು ವೇದಿಕೆಯಲ್ಲ.
ಇದನ್ನೆಲ್ಲ ಬರೆಯುತ್ತಾ, ’ಸ್ನೇಹ’ ಎಂಬ ಪದ ಸುಳಿದ ತಕ್ಷಣ, ಕಿ.ರಂ. 'ಸ್ನೇಹ' ಎಂಬ ಪದಕ್ಕೆ ಕೊಟ್ಟ ವಿವರಣೆಯನ್ನು ನನ್ನ ’ಕಾಮನಹುಣ್ಣಿಮೆ’ ಕಾದಂಬರಿಯ (ಪಲ್ಲವ ಪ್ರಕಾಶನ) ಚಂದ್ರ ನೆನಪಿಸಿಕೊಳ್ಳುವ ಭಾಗ ನೆನಪಾಯಿತು:
’[ಕಿ.ರಂ. ನಾಗರಾಜರು] ಇದ್ದಕ್ಕಿದ್ದಂತೆ ’ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ ಸುತ್ತಿ ಸುತ್ತಿ…’ ಎಂಬ ಅಕ್ಕನ ವಚನಕ್ಕೆ ಬಂದು ನಿಂತರು. ಅದೇ ಸಾಲನ್ನು ಇನ್ನೊಂದು ಸಲ ಹೇಳಿ, ’ಸ್ನೇಹ ಅಂದರೆ ಏನು ಗೊತ್ತೇನ್ರೀ?’ ಎಂದು ಚಣ ಮಾತು ನಿಲ್ಲಿಸಿ, ಸೈಲೆಂಟಾಗಿ ಸುತ್ತಮುತ್ತ ನೋಡಿದರು; ಕನ್ನಡ ಮೇಷ್ಟರಾದಿಯಾಗಿ ಯಾರೂ ಇದಕ್ಕೆ ಉತ್ತರ ಹೇಳಲು ಬಾಯಿ ಬಿಡಲಿಲ್ಲ. ಆಮೇಲೆ ಅವರೇ, ’ಸ್ನೇಹ ಅಂದರೇ … ಅಂಟು ಅಂತ! ಗೊತ್ತೇನ್ರೀ!’ ಎಂದು ನಗುತ್ತಾ ಕಣ್ಣು ಮಿಟುಕಿಸಿದರು!’
ಕಿ.ರಂ. ಮಾತನ್ನು ಉಲ್ಲೇಖಿಸುತ್ತಿರುವಂತೆಯೇ ಅವರೂ, ಕವಿ ಕೆ.ಬಿ. ಸಿದ್ಧಯ್ಯನವರೂ ಒಂದು ರಾತ್ರಿ ’ವಚನದಾಟ’ ಶುರು ಮಾಡಿದ್ದು ಕಣ್ಣಿಗೆ ಬಂತು! ಒಂದು ವಚನ ಒಗೆದು, ಅದಕ್ಕೆ ಸರಣಿಯಂತೆ ಸೇರಿಕೊಳ್ಳುವ ಇನ್ನೊಂದು ವಚನ, ಮತ್ತೊಂದು ವಚನ… ಹೀಗೆ ಅವರ ಸುಂದರ ಸಂಧ್ಯಾ ವಚನ ಖವ್ವಾಲಿ ನಡೆಯುತ್ತಿತ್ತು. ಅಂಥ ಪ್ರತಿಭೆಯನ್ನು ನಾನು ಮತ್ತೆ ಕಂಡಿದ್ದು ಈ ಹೊಸ ಗೆಳೆಯನಲ್ಲಿ.
ಇದಕ್ಕಿಂತ ಭಿನ್ನವಾದ, ಜನಪದ ಲೋಕದ ಅನನ್ಯ ಪ್ರತಿಭೆಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಒಗಟಿಗೊಂದು ಒಗಟು ಹೇಳುವ ಪ್ರತಿಭೆಗಳು, ಸವಾಲ್ ಜವಾಬ್‌ಗಳ, ಖವ್ವಾಲಿಗಳ ಅದ್ಭುತ ಹಾಡುಗಾರ, ಹಾಡುಗಾರ್ತಿಯರು ಕೂಡ ನಿಮಗೆ ಪರಿಚಯವಿರಬಹುದು. ವಚನ ಸಾಹಿತ್ಯ ರಚನೆಯಲ್ಲಿ ಭಾಗಿಯಾದ ಹಲವರು ಪ್ರತಿಮೆಗೊಂದು ಪ್ರತಿಮೆ ತಗುಲಿ ಬೆಳೆದ ವಚನಗಳನ್ನು ನುಡಿದಿದ್ದಾರೆ ಎಂದು ಊಹಿಸುವೆ. ಆಫ್ರಿಕದ ಜಾನಪದದಲ್ಲಿ ಕತೆಗೊಂದು ಕತೆ, ಸರಗತೆಗಳ ಲೋಕವೂ ಇದೆ.
ಆದರೆ ಈ ಕಾಲದ ಮೌಖಿಕ ಪ್ರತಿಭೆ ಈ ಗೆಳೆಯನಲ್ಲಿ ಕಾಲಕ್ಕೆ ತಕ್ಕ ರಿಫೈನ್‌ಮೆಂಟ್ ಪಡೆದಿತ್ತು. ನಾವು ಓದಿ ಹೀರಿಕೊಂಡಿದ್ದರ ನೆನಪು ಹೀಗೆ ಸೃಜನಶೀಲವಾಗಿ ಒದಗುವಂತೆ, ನುಡಿಯುವಂತೆ ನೆರವಾಗುವ ಈ ಪ್ರತಿಭೆ ಸಾಮಾನ್ಯದ್ದಲ್ಲ!
ಆ ಗೆಳೆಯ ಮೊದಲ ಸಲ ಭೇಟಿಯಾಗಿ ಹೊರಡುವಾಗ ನನ್ನ ’ಇಂತಿ ನಮಸ್ಕಾರಗಳು: ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ’ ಪುಸ್ತಕ ಕೊಟ್ಟೆ. ಅವರು ಜೀಪು ಹತ್ತಿದರು.
ಮುಂದಿನ ಎರಡೇ ನಿಮಿಷದಲ್ಲಿ ಆ ಪುಸ್ತಕದ ಪರಿವಿಡಿಯ ಮೇಲೆ ಕಣ್ಣಾಡಿಸಿದ್ದ ಅವರು ಫೋನ್ ಮಾಡಿದರು:
‘ಸಾರ್! ಇಲ್ಲೊಂದು ಚಾಪ್ಟರ್ ಟೈಟಲ್ ಬರುತ್ತಲ್ಲಾ- ‘ಇದ ಕಂಡು ಬೆರಗಾದೆ ಗುಹೇಶ್ವರಾ!’ ಇದು ಅಲ್ಲಮ ಪ್ರಭುಗಳ ’ಆ….’ ವಚನದ ಸಾಲಲ್ಲವೆ?’
’ಹೂಂ’ ಎಂದೆ.
ಆ ವಚನ ಅವರ ಬಾಯಲ್ಲೇ ಇತ್ತು:
ಬೆಳಕೂ ಅದೇ! ಕತ್ತಲೆಯೂ ಅದೇ!
ಇದೇನು ಚೋದ್ಯವೊ? ಒಂದಕ್ಕೊಂದಂಜದು
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ!
ಅವರು ಫೋನಿಟ್ಟ ತಕ್ಷಣ, ನಮ್ಮ ಅನೇಕ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಲ್ಲಿ ಹುಡುಕಿದರೂ ಕಾಣದ ಅವರ ತೀವ್ರ ಕಾವ್ಯಮೋಹ ನನ್ನೊಳಗೆ ಹಬ್ಬತೊಡಗಿತು. ಅವರು ಸಮಸ್ಯೆಯೊಂದನ್ನು ಬಗೆಹರಿಸಲು ಬಂದಿದ್ದರು ಎಂಬುದನ್ನೇ ಮರೆತು ಅವರ ನವಮೌಖಿಕ ಪ್ರತಿಭಾಲೋಕ ತೆರೆದ ವಿಸ್ಮಯದಲ್ಲಿ ಮುಳುಗಿದೆ. ಅವತ್ತು ಅವರ ಹಾಜರಿಯ ವೈಖರಿಯಿಂದಲೇ ಕಳ್ಳ ಸಿಕ್ಕು ಬಿದ್ದ; ಹೇಳದೆ ಕೇಳದೆ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋದ! ಆ ಕತೆ ಬೇರೆ!
ಒಂದು ಪ್ರತಿಮೆ ಇನ್ನೊಂದು ಪ್ರತಿಮೆಗೆ ತಗುಲಿ ಕವಿತೆ ಬೆಳೆಯುವ ರೀತಿ ಕವಯಿತ್ರಿಯರಿಗೆ ಗೊತ್ತಿರುತ್ತದೆ; ಎಷ್ಟೋ ಸಲ ಹಟಾತ್ತನೆ ಹೊಳೆದ ಪದವೇ ತಮ್ಮ ಕವಿತೆಯನ್ನು ಎಲ್ಲೋ ಕರೆದೊಯ್ಯುವ ಬೆರಗನ್ನು, ಬೆಡಗನ್ನು ಸೃಜನಶೀಲರು ಅನುಭವಿಸುತ್ತಲೇ ಇರುತ್ತಾರೆ. ಆದರೆ ಓದುಗ, ಓದುಗಿಯರ ಒಳಗಿಳಿದ ನೂರಾರು ಪಠ್ಯಗಳು ಹೀಗೆ ಕರೆದಾಗ ಒದಗಿ ಬರುವ ಪ್ರತಿಭೆ ಮಾತ್ರ ಅಪರೂಪ ಮತ್ತು ವಿಶಿಷ್ಟ!
ನಾವು ಓದಿದ ಕವಿತೆಗಳು ನಮ್ಮ ಆಳಕ್ಕಿಳಿಯದೆ, ನಮ್ಮ ಒಳಗಿನ ಭಾಗವಾಗದೆ, ಕಾವ್ಯದ ಬಗ್ಗೆ ಸಹಜ ಪ್ರೀತಿಯಿಲ್ಲದೆ, ಕವಿತೆಯ ಸಾಲುಗಳು ಹೀಗೆ ಎದೆಯಿಂದ ಪುಟಿದೆದ್ದು ಹೊರ ಚಿಮ್ಮಲಾರವು. ಕಿ.ರಂ. ಬಾಯಲ್ಲಿ ಹೀಗೆ ನುಗ್ಗಿ ನುಗ್ಗಿ ಬರುತ್ತಿದ್ದ ಕಾವ್ಯಪ್ರತಿಮೆಗಳನ್ನು ಕೇಳಿದ್ದ ನಾನು ಅವರ ನಂತರ ಹೀಗೆ ಸಾಲುಸಾಲುಗಳನ್ನು ನುಡಿಯಬಲ್ಲ, ನುಡಿಸಬಲ್ಲ ಮತ್ತೊಬ್ಬರನ್ನು ಮೊದಲ ಬಾರಿಗೆ ಕಂಡಿದ್ದೆ. ’ಕುಸುಮಬಾಲೆ’ಯನ್ನು ಎಲ್ಲಿ ಕೇಳಿದರಲ್ಲಿ ಹೇಳುವ ಮೈಸೂರು ಸೀಮೆಯ ಕನ್ನಡ ಪ್ರೊಫೆಸರ್ ಶಿವಸ್ವಾಮಿ ಕೂಡ ನೆನಪಾದರು.
ಮತ್ತೆ ಪೊಲೀಸ್ ಗೆಳೆಯರ ಮಾತಿಗೇ ಬರುವುದಾದರೆ, ಕಾವ್ಯ ಸಂಗಾತ ಅವರ ಮಾತು, ಗ್ರಹಿಕೆಗಳನ್ನು ಚೆನ್ನಾಗಿಯೇ ರೂಪಿಸಿದಂತಿತ್ತು. ಅದು ಮುಂದೆಯೂ ನನ್ನ ಅನುಭವಕ್ಕೆ ಬಂತು. ಅನೇಕ ಸಾಹಿತ್ಯದ ಮೇಷ್ಟರುಗಳು ತಪ್ಪಿಯೂ ಸಾಹಿತ್ಯ ಮಾತಾಡುವುದಿಲ್ಲ; ಆದರೆ ಈ ಗೆಳೆಯ ಸಾಹಿತ್ಯದ ನಾವೆಯಲ್ಲೇ ಸದಾ ತೇಲುವವರಂತೆ ಕಂಡರು!
ಇಂಥ ಮೌಖಿಕ ಪ್ರತಿಭೆಯ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದ ರವೀಶ್ ಸಿ. ಆರ್. ಈಚೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆದ ಮೇಲೆ ಹೆಚ್ಚು ಬಿಜಿಯಾಗಿರುವುದು ಸಹಜ. ಆದರೆ ಅವರ ಮನಸ್ಸು ಹಳಗನ್ನಡ, ಹೊಸಗನ್ನಡವೆನ್ನದೆ ಕನ್ನಡ ಕಾವ್ಯಲೋಕದಲ್ಲೇ ತಂಗಲು ಕಾತರಿಸುತ್ತಿರುತ್ತದೆ.
ತಮ್ಮ ಬೆಂಗಳೂರಿನ ಮನೆಯಲ್ಲಿ ಸಾವಿರಾರು ಪುಸ್ತಕಗಳ ಖಾಸಗಿ ಗ್ರಂಥಾಲಯವನ್ನೂ ಜೋಡಿಸಿಕೊಂಡಿರುವ ರವೀಶ್ ನಮ್ಮೆಲ್ಲ ಮೇಡಂ, ಮೇಷ್ಟರುಗಳಿಗೂ ಒಳ್ಳೆಯ ಮಾದರಿಯಾಗಬಲ್ಲರು. ಮೊನ್ನೆಮೊನ್ನೆಯವರೆಗೂ ಪೊಲೀಸ್ ಅಧಿಕಾರಿಯಾಗಿದ್ದು, ಈಗ ಬೇರೊಂದು ಇಲಾಖೆಯಲ್ಲಿರುವ ಸ್ತ್ರೀವಾದಿ ಚಿಂತಕಿ ಧರಣೀದೇವಿ ಈಚೆಗೆ ಬರೆದ ಸೂಕ್ಷ್ಮ ಪದ್ಯಗಳು, ರವಿ ಬೆಸಗರಹಳ್ಳಿ ಆಗಾಗ್ಗೆ ಬರೆಯುವ ಚುರುಕಾದ ಪದ್ಯಗಳು ಕೂಡ ನೆನಪಾಗುತ್ತಿವೆ. ವೃತ್ತಿಯ ಒತ್ತಡಗಳಲ್ಲಿ ಸೃಜನಪ್ರತಿಭೆ ಛಲದಿಂದ ಹೊರ ಚಿಮ್ಮುವ ಈ ಪರಿ ಕಂಡಾದರೂ ’ಅಯ್ಯೋ! ಟೈಮೇ ಇಲ್ಲ!’ ಎಂದು ಹಲುಬುವ ವೃತ್ತಿಜೀವಿಗಳು ಸ್ಫೂರ್ತಿ ಪಡೆಯಲಿ!
ಹತ್ತಾರು ವರ್ಷ ಒಂದು ವೃತ್ತಿಯಲ್ಲಿರುವವರ ಭಾಷೆ, ಧೋರಣೆ, ವರ್ತನೆಗಳನ್ನು ಆ ವೃತ್ತಿಯೇ ರೂಪಿಸುತ್ತಿರುತ್ತದೆ, ನಿಜ. ಆದರೆ ನಮ್ಮ, ನಿಮ್ಮೆಲ್ಲರಂತೆ ಪೊಲೀಸರು ಕೂಡ ತಮ್ಮ ವೃತ್ತಿಯ ನಿರ್ದೇಶನ ಮೀರಿ ಕಲೆ, ಸಾಹಿತ್ಯಗಳ ಒರತೆಗಳನ್ನು ಹುಡುಕಿಕೊಳ್ಳುತ್ತಿರುತ್ತಾರೆ ಎಂಬುದನ್ನು ಬಾಲ್ಯದಿಂದಲೂ ನೋಡಿ ಬಲ್ಲೆ.
ನಮ್ಮ ಗ್ರಾಮೀಣ ರಂಗಭೂಮಿಯಲ್ಲಿ, ಹಳೆಯ ಬೆಂಗಳೂರಿನ ಭಾಗಗಳಲ್ಲಿ ಪೌರಾಣಿಕ ಪಾತ್ರಗಳನ್ನು ಮಾಡುತ್ತಿದ್ದ, ಈಗಲೂ ಪಾತ್ರ ಮಾಡುತ್ತಿರಬಹುದಾದ, ಪೊಲೀಸರು ನಿಮಗೆ ನೆನಪಾಗುತ್ತಿದ್ದಾರೆಯೆ?
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Comments
17 Comments
| Gangadhara BM
ಓದಿದೆ ಸರ್. ಮೌಖಿಕ ಪ್ರತಿಭಾ ವಿಲಾಸ ಅಧ್ಯಾಪಕರ ಪ್ರಮುಖ ಕೌಶಲವಾಗಬೇಕು ಅನ್ನೋದು ನಿಜ ಸರ್. ತಮ್ಮ ಈ ವಾರದ ಲೇಖನ ಸಾಹಿತ್ಯದ ಅಧ್ಯಾಪಕರಿಗೆ ಪ್ರೇರಣೆ ಒದಗಿಸುತ್ತದೆ. ಚೆಂದವಾದ ಪ್ರತಿಮೆಗಳನ್ನು ಸಕಾಲಿಕವಾಗಿ ಉಲ್ಲೇಖಿಸುವ ವಾಕ್ ಶಕ್ತಿ, ರವೀಶ್ ಅವರಂತೆ ನಮಗೂ ಸಿಗಲಿ ಎಂಬ ಆಸೆಯ ಪ್ರಜ್ಞೆ ಸದಾ ಇರಲಿದೆ ಸರ್. ಧನ್ಯವಾದಗಳು.
\r\n| Dr.Vijaya
ಸೊಗಸಾದ ಲೇಖನ. ನನ್ನ ಅನುಭವದಲ್ಲಿ ಇಂಥ ಕೆಲವರನ್ನು ಕಂಡಿದ್ದೇನೆ. ಬಹುತೇಕರು ಕಾವ್ಯ ರಚನೆಯಲ್ಲೂ ಪರಿಣತರು. ಇಂಥ ಪೊಲೀಸರಲ್ಲಿ ಕೊಂಚ ಮಾರ್ದವವೂ ನೆಲೆಸಿರುತ್ತದೆ.
\r\n| ಡಾ.ರಾಜು
ತುಂಬಾ ಚೆನ್ನಾಗಿದೆ.ಪೊಲೀಸರಲ್ಲೂ ಅತ್ಯುತ್ತಮ ಸಾಹಿತ್ಯ ಸಂವೇದನೆಗಳ ಮನುಷ್ಯರಿದ್ದಾರೆ.
\r\n| Mamatha Arasikere
ಬಿಡುವಿಲ್ಲದ ಕೆಲಸದ ನಡುವೆಯೂ ಅಧಿಕಾರಿಗಳ ಸಾಹಿತ್ಯ ಪ್ರೀತಿ ಮಾದರಿಯೇ ಸರಿ. ಅವರ ಪ್ರತಿಭೆ ಅಚ್ಚರಿ ಹುಟ್ಟಿಸುತ್ತದೆ.
\r\n| Irappa M Kambali
ನನ್ನ ಒಡನಾಟಕ್ಕೆ ದಕ್ಕಿಲ್ಲದ- ದಂತ ಕಥೆಗಳಂತೆ ಉಲ್ಲೇಖವಾಗುವ ವಿಶಿಷ್ಟ ವ್ಯಕ್ತಿತ್ವದ, ಆ ಕಿರಂ, ಕೆ ಬಿ ಸಿದ್ಧಯ್ಯ, 'ಕುಸುಮಬಾಲೆ' ಪ್ರಸ್ತಾಪಗಳು ಸೊಗಸಾದ ಆಪ್ತವಾದ ಓದಿನ ಅನುಭವ.ನೀಡುತ್ತವೆ. ನಿಮಗೆ ಅನಂತ ಧನ್ಯವಾದಗಳು.
\r\n| Chandrashekhar
Very interesting write up.Really he is a very rare police officer.ಅಂಥವರ ಸಂಖ್ಯೆ ನೂರ್ಮಡಿಯಾಗಲಿ
\r\n| gundanna chickmagalur
ಲೇಖನ ಸುಂದರ ವಾಗಿದೆ
\r\n\r\nರವೀಶ್ ತರಹದ ಕ್ಷಣದಲ್ಲಿ ಇರುವ ಸ್ಥಳದಲ್ಲೇ ವ್ಯಕ್ತಿಗಳನ್ನು ಮತ್ತು ಸಾಹಿತಿಗಳನ್ನು ನಾನು ಕಂಡಿದೇನೆ.... ನಿಜಕ್ಕೂ ವಿಸ್ಮಯದ ಸಾಹಿತಿಗಳು ಅವರು. ಅವರ ನೆನಪಿನ ಶಕ್ತಿಗ ಒಂದು ಸಲಾಂ. ಆದರೆ ನನ್ನ ಕುತೂಹಲ ಎಂದರೆ ಅಷ್ಟೆಲ್ಲ ಹೇಗೆ ಅವರುಗಳು ಆ ಕ್ಷಣದಲ್ಲಿ , ಸಂದರ್ಭಕ್ಕೆ ಸೂಕ್ತವಾದ ವಚನ, ಸೂಚಕಗಳನ್ನು ಉದ್ಘೋಷಿಸುತ್ತಾರೆ ಎಂಬುದು ನನಗೆ ಈ ಕ್ಷಣಕ್ಕೂ ವಿಸ್ಮಯವೇ. ಮತ್ತೊಂದು ಹಾಸ್ಯದ ವಿಶಯ ಎಂದರೆ ಡಾ.ಡಿ.ಆರ್ ಅವರನ್ನು ಅವರ ಆಪ್ತ ವಲಯದ ಸ್ನೇಹಿತರು ಕೋಟೇಶ್ವರ ಎಂದು ಅವರ ಬೆನ್ನ ಹಿಂದೆ ತಮಾಷೆ ಮಾಡುತ್ತಿದ್ದುದು.
| gundanna chickmagalur
21.05.2024- Corrected version of my first comments: ಲೇಖನ ಸುಂದರವಾಗಿದೆ......ರವೀಶ್ ತರಹದ ಅನೇಕ ಸಾಹಿತಿಗಳು , ಅಧ್ಯಾಪಕರುಗಳು , ಕ್ಷಣದಲ್ಲಿ ಇರುವ ಸ್ಥಳದಲ್ಲೇ ತಮ್ಮ ನೆನಪಿನ ಶಕ್ತಿಯಿಂದ ವಚನ,ಸೂಕ್ತಿ ,ಕವನದ ಸಾಲುಗಳು ಮತ್ತು ಸೂಚಕಗಳನ್ನು (ಕೊಟೇಶನ್ಸ್) ಗಳನ್ನೂ ಹೇಳುವ ಅನೇಕರನ್ನು ನಾನೂ ಕಂಡಿದ್ಧೇನೆ .... ನಿಜಕ್ಕೂ ವಿಸ್ಮಯದ ವ್ಯಕ್ತಿಗಳು ಅವರು. ಅಂತಹವರ ನೆನಪಿನ ಶಕ್ತಿಗ ಒಂದು ಸಲಾಂ. ನಿಜಕ್ಕೂ ನನ್ನ ಕುತೂಹಲ ಎಂದರೆ ಅಷ್ಟೆಲ್ಲ ಹೇಗೆ ಅಂತಹವರುಗಳು ಆ ಕ್ಷಣದಲ್ಲಿ , ಸಂದರ್ಭಕ್ಕೆ ಸೂಕ್ತವಾದ ವಚನ, ಸೂಚಕಗಳನ್ನು ಉದ್ಘೋಷಿಸುತ್ತಾರೆ ಎಂಬುದು.... ಒಂದು ವಿಸ್ಮಯವೇ...ಮತ್ತೊಂದು ಹಾಸ್ಯದ ವಿಶಯ ಎಂದರೆ ಡಾ.ಡಿ.ಆರ್ ಅವರನ್ನು ಅವರ ಆಪ್ತ ವಲಯದ ಸ್ನೇಹಿತರು ಕೋಟೇಶ್ವರ ಎಂದು ಅವರ ಬೆನ್ನ ಹಿಂದೆ ತಮಾಷೆ ಮಾಡುತಿದ್ದರು ಎಂಬುದು..
\r\n\r\nಲೇಖನ ಸುಂದರವಾಗಿದೆ......
\r\n\r\nರವೀಶ್ ತರಹದ ಅನೇಕ ಸಾಹಿತಿಗಳು , ಅಧ್ಯಾಪಕರುಗಳು , ಕ್ಷಣದಲ್ಲಿ ಇರುವ ಸ್ಥಳದಲ್ಲೇ ತಮ್ಮ ನೆನಪಿನ ಶಕ್ತಿಯಿಂದ ವಚನ,ಸೂಕ್ತಿ ,ಕವನದ ಸಾಲುಗಳು ಮತ್ತು ಸೂಚಕಗಳನ್ನು (ಕೊಟೇಶನ್ಸ್) ಗಳನ್ನೂ ಹೇಳುವ ಅನೇಕರನ್ನು ನಾನೂ ಕಂಡಿದ್ಧೇನೆ .... ನಿಜಕ್ಕೂ ವಿಸ್ಮಯದ ವ್ಯಕ್ತಿಗಳು ಅವರು. ಅಂತಹವರ ನೆನಪಿನ ಶಕ್ತಿಗ ಒಂದು ಸಲಾಂ. ನಿಜಕ್ಕೂ
\r\n\r\nನನ್ನ ಕುತೂಹಲ ಎಂದರೆ ಅಷ್ಟೆಲ್ಲ ಹೇಗೆ ಅಂತಹವರುಗಳು ಆ ಕ್ಷಣದಲ್ಲಿ , ಸಂದರ್ಭಕ್ಕೆ ಸೂಕ್ತವಾದ ವಚನ, ಸೂಚಕಗಳನ್ನು ಉದ್ಘೋಷಿಸುತ್ತಾರೆ ಎಂಬುದು.... ಒಂದು ವಿಸ್ಮಯವೇ.
\r\n\r\nಮತ್ತೊಂದು ಹಾಸ್ಯದ ವಿಶಯ ಎಂದರೆ ಡಾ.ಡಿ.ಆರ್ ಅವರನ್ನು ಅವರ ಆಪ್ತ ವಲಯದ ಸ್ನೇಹಿತರು ಕೋಟೇಶ್ವರ ಎಂದು ಅವರ ಬೆನ್ನ ಹಿಂದೆ ತಮಾಷೆ ಮಾಡುತಿದ್ದರು ಎಂಬುದು..
\r\n| Dr. VenkateshTS
ಬಹು ಶಃ ಈಕನ್ನಡ ಸಾಹಿತ್ಯದ ಆಪ್ತತೆ ಆರಕ್ಷಕ ಇಲಾಖೆ ಅಧಿಕಾರಿಗಳು ಪಡೆದು ಸೂಕ್ಷ್ಮತೆಯ ಕ್ರಿಯಾಶೀಲ ಉತ್ಸಾಹವನ್ನು ನೋಡಿದರೆ ಕನ್ನಡ ಮೇಷ್ಟ್ರಿಗೆ ಆಶ್ಚರ್ಯ.
\r\n\r\nಒಳ್ಳೆ ವಿಚಾರ ಗುರುಗಳೇ
\r\n\r\nಧನ್ಯವಾದಗಳು.
\r\n| ವಿಕ್ರಮ್
ವಚನ ಖವ್ವಾಲಿ. ಕಾವ್ಯ ಸಂಗಾತ.ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ
\r\n| Siddu satyannanavar
🙏💐
\r\n\r\nಓದಿದೆ ಸರ್. ಬಹಳ ಹಿಡಿಸಿತು.
| ಮಹಾಲಿಂಗೇಶ್ವರ್
ಅಬ್ಬಾ! ಬೆರಗು!
\r\n| ಡಾ. ನಿರಂಜನ ಮೂರ್ತಿ ಬಿ ಎಂ
ಸಾಹಿತ್ಯದ ನಂಟು, ಕಾವ್ಯಮೋಹ, ಸ್ನೇಹದ ಅಂಟು, ವಚನದಾಟ, ಒಗಟು, ಸವಾಲ್, ಜವಾಬ್, ಖವಾಲಿ, ಕತೆ, ಸರಗತೆಗಳನ್ನೆಲ್ಲಾ ಸ್ಪರ್ಶಿಸಿ, ಪ್ರತಿಮೆಗೊಂದು ಪ್ರತಿಮೆ ಜೋಡಿಸಿ ಹುಳಿಯಾರರು ಸೃಷ್ಟಿಸಿದ ಈ ಲೇಖನ ಮಜಬೂತಾಗಿದೆ. ಕತೆ, ಕವಿತೆ, ನಾಟಕ ಮುಂತಾದ ಸಾಹಿತ್ಯ ಕೃತಿಗಳನ್ನು ಬರೀ ಓದಿದರೆ ಸಾಲದು; ಅವುಗಳು ಓದುಗನ ಮನದಾಳಕ್ಕಿಳಿದು, ಅವನ ಭಾಗವೇ ಆದಾಗ ಮಾತ್ರ, ಅವು ಬೇಕಾದ ಸಮಯ-ಸಂದರ್ಭಕ್ಕನುಗುಣವಾಗಿ ಹೊರಬರಲು ಸಾಧ್ಯವೆನ್ನುವ ಲೇಖಕರ ಅನುಭವಾಮೃತ ಎಷ್ಟೊಂದು ದಿಟ! ಸಾಹಿತ್ಯವನ್ನು, ವಿಶೇಷವಾಗಿ ಕಾವ್ಯವನ್ನು ತಮ್ಮ ಮೈಮನಗಳ ಭಾಗವಾಗಿಸಿಕೊಂಡು ಸಂದರ್ಭಕ್ಕನುಗುಣವಾಗಿ ಹೊರಬಿಡುವಂತಹ ಅಪರೂಪದ ಪ್ರತಿಭೆಯಿರುವ ರವೀಶ್ ಅವರು ಸಾಹಿತ್ಯದ ಭಕ್ತರಿಗೆಲ್ಲಾ ಆದರ್ಶಪ್ರಾಯರು! ಹಾಗೆಯೇ ಕೀರಂ, ಸಿದ್ದಯ್ಯ, ಶಿವಸ್ವಾಮಿ, ಧರಣೀದೇವಿ, ರವಿ ಬೆಸಗರಹಳ್ಳಿ ಅವರಂತಹವರೂ ನಮಗೆಲ್ಲಾ ಭವ್ಯ ಆದರ್ಶ! ಇಂತಹ ದೈತ್ಯಪ್ರತಿಭೆಗಳನ್ನು ಸ್ಮರಿಸಿದ ಲೇಖಕ ನಟರಾಜ್ ಹುಳಿಯಾರ್ ಅವರೂ ಆದರ್ಶಪ್ರಾಯರು!
\r\n| Mallikarjun Hiremath
ಪ್ರತಿಭಾ ವಿಲಾಸ ಅಪರೂಪದ ಕಾವ್ಯ ಜೀವಿಯನ್ನು ಕುರಿತ ಬರಹ.ಕಿರಂ ನಂತರದ ಕಾವ್ಯ ಪ್ರೀತಿಯ ವ್ಯಕ್ತಿಯನ್ನು ಆಪ್ತವಾಗಿ ಪರಿಚಯಿಸಿದ್ದೀರಿ.ಕಾವ್ಯವ ನ್ನು ಆತ್ಮಸತ್ತಾಗಿಸಿಕೊಂಡು ಮುಖೋದ್ಗತವಾಗಿ ಹೇಳಬಲ್ಲವರನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಈ ಪ್ರೀತಿ ನಿಮ್ಮ ಬರಹದಲ್ಲಿದೆ.
\r\n| Sanganagouda
ವೃತ್ತಿ, ಪ್ರವೃತ್ತಿ, ಪ್ರವೃತ್ತಿ ಸಾಹಿತ್ಯವೇ ಆದಾಗ ಯಾವುದೇ ವೃತ್ತಿಯನ್ನು ಹೊಂದಿರುವವರು ಸಂವೇದನಾಶೀಲದವರಾಗಿರುತ್ತಾರೆ. ಸರ್
\r\n| B c Prabhakar
'Mana Mohaka baraha'
\r\n| B c Prabhakar
'Mana Mohaka baraha'
\r\nAdd Comment