ನಾಟಕ ಮತ್ತು ಸಂಘರ್ಷ

 ಬಿ.ಬಿ.ಸಿ.ಯಲ್ಲಿ ಪ್ರಸಾರವಾದ ‘ಮ್ಯಾಕ್‌ಬೆತ್’ ನಾಟಕದ ಆ ಪ್ರಖ್ಯಾತ ದೃಶ್ಯ ಕಂಡು ಟೆರ್‍ರಿ ಈಗಲ್ಟನ್ ಬೆರಗಾದರು. ಟೆರ್‍ರಿ ಈಗಲ್ಟನ್ ಪ್ರಖ್ಯಾತ ಮಾರ್ಕ್ಸ್‌ವಾದಿ ವಿಮರ್ಶಕರು. ಇಂಗ್ಲಿಷ್ ಪ್ರೊಫೆಸರ್. ಶೇಕ್‌ಸ್ಪಿಯರನ ‘ಮ್ಯಾಕ್‌ಬೆತ್’ ಅವರು ಸಾಕಷ್ಟು ಬಲ್ಲ, ಟೀಚ್ ಮಾಡಿದ್ದ ನಾಟಕವೇ ಆಗಿದ್ದರೂ ಅವತ್ತು ಆ ದೃಶ್ಯದ ಅರ್ಥ ಹೊಸದಾಗಿ ಹೊಳೆಯಿತು. 

ಮೊದಲಿಗೆ, ಲೇಡಿ ಮ್ಯಾಕ್‌ಬೆತ್‌ಳ ಸ್ವ-ಹತ್ಯೆಯ ನಂತರ ಮ್ಯಾಕ್‌ಬೆತ್ ಹತಾಶೆಯ ಸ್ವಗತದ ಭಾಗ. ಅನುವಾದ: ಕೆ.ಎಸ್. ಭಗವಾನ್: 

ಬಾಳು ಬರಿ ನಡೆವ ನೆರಳು. 
ರಂಗದ ಮೇಲೆ ತನ್ನ ತಾಸನ್ನು ಬಿಂಕದಲಿ ಆಡುವ ನಟ. ಆಮೇಲೆ 
ಕೇಳಿಸುವುದಲ್ಲ. ಅದೊಂದು ಹೆಡ್ಡ ಹೇಳಿದ ಕತೆ,
ಆವೇಶ ಅಬ್ಬರ ತುಂಬಿ ಅರ್ಥ ಸೂಸದ ಶೂನ್ಯ.

ಅವತ್ತು ಮ್ಯಾಕ್‌ಬೆತ್ ಪಾತ್ರ ಮಾಡುತ್ತಿದ್ದ ನಟ ಮೇಲೆ ಓವರ್ ಹೆಡ್ ಕ್ಯಾಮರಾ ಕಡೆಗೆ ಕತ್ತೆತ್ತಿ `it is a tale told by an idiot‘ ಎಂದು ಉರಿವ ಸಿಟ್ಟಿನಿಂದ ಹೇಳತೊಡಗಿದ. ಆ ನಟನ ಈ ಮಂಡನೆ ನೋಡುತ್ತಾ ಈಗಲ್ಟನ್‌ಗೆ ಹೊಸ ಅರ್ಥ ಹೊಳೆಯಿತು: 'ಜೀವನದ ಈ ಕತೆ ಹೇಳುತ್ತಿರುವ ಈಡಿಯಟ್ ಯಾರು ಅಂದರೆ, ಮೇಲಿರುವ ದೇವರು…’ 
ಇದುವರೆಗೂ ಶೇಕ್‌ಸ್ಪಿಯರನ ಮ್ಯಾಕ್‌ಬೆತ್‌ನಲ್ಲಿ ಮೂಡುತ್ತಿದ್ದ ‘ಲೈಫ್ ಅಂದರೆ ಇಷ್ಟೇ…’ ಎಂಬ ಅರ್ಥ ಏಕ್‌ದಂ ಪಲ್ಲಟವಾಗಿತ್ತು…

ಈ ಅರ್ಥ ಹೇಗೆ ಹುಟ್ಟಿತು? ಅದು ನಟನಿಗೆ ‘ಕತ್ತೆತ್ತಿ ಈ ಡಯಲಾಗ್ ಹೇಳು’ ಎಂದು ಸೂಚಿಸಿದ ನಿರ್ದೇಶಕನ ಜೀವನದರ್ಶನವೆ? ನಟನಿಗೆ ಆ ಕ್ಷಣದಲ್ಲಿ ಓವರ್‍‌ಹೆಡ್ ಕ್ಯಾಮರಾ ನೋಡಿ ಹುಟ್ಟಿದ ಐಡಿಯವೇ? ಅಥವಾ ಆ ಭಂಗಿ ಇದ್ದಕ್ಕಿದ್ದಂತೆ ಹುಟ್ಟಿತೆ? ಅಥವಾ ಇದು ಆ ನಟನ ಹೊಸ ಮಂಡನೆ ನೋಡುತ್ತಾ ಪ್ರೊಫೆಸರ್‍ ಟೆರ್‍ರಿ ಈಗಲ್ಟನ್ ಒಳಗೆ ಹುಟ್ಟಿದ ಅರ್ಥವೆ? 

ಒಂದು ನಾಟಕದ ಮುದ್ರಿತ ಪಠ್ಯ ಏನಾದರೂ ಇರಲಿ, ರಂಗದ ಮೇಲೆ ಅದು ಪಡೆಯುವ ಅರ್ಥ ಬೇರೆಯಾಗಿರಬಲ್ಲದು. ಇದು ಎಲ್ಲರಿಗೂ ಗೊತ್ತು. ಆದರೆ ರಂಗದ ಮೇಲೆ ನಾಟಕವೊಂದು ಪಡೆದ ಅರ್ಥದ ಬಗ್ಗೆ ನುರಿತ ವಿಮರ್ಶಕ-ನೋಡುಗನೊಬ್ಬನ ಮನಸ್ಸಿನಲ್ಲಿ ಮೂಡುವ ಅರ್ಥ ಇನ್ನೇನೋ ಆಗಿರಬಲ್ಲದು. ದೇವನೂರ ಮಹಾದೇವರ ‘ಒಡಲಾಳ’ ನಾಟಕದ ಆರಂಭದ ದೃಶ್ಯವನ್ನು ತರುಣ ಮಾರ್ಕ್ಸಿಸ್ಟ್ ವಿಮರ್ಶಕ ಡಿ.ಆರ್. ನಾಗರಾಜ್ ಗಮನಿಸಿದ ರೀತಿಯನ್ನು ಈ ಹಿಂದೆ ‘ಇಂತಿ ನಮಸ್ಕಾರಗಳು’ ಪುಸ್ತಕದಲ್ಲಿ ಬರೆದಿದ್ದನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: 

‘ಲೇಖಕನೊಬ್ಬ ಒಂದೇ ಒಂದು ಸಣ್ಣ ಹೊಸ ಒಳನೋಟ ಕೊಟ್ಟರೂ ಸಾಕು, ನಮ್ಮೊಳಗೆ ಕಾಯಂ ಆಗಿ ಉಳಿದುಬಿಡುತ್ತಾನೆ. ನನಗೆ ನೆನಪಿರುವಂತೆ ಡಿ.ಆರ್. ನಾಗರಾಜ್ ಅವರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಮೂಡಿದ್ದು ‘ಒಡಲಾಳ’ ನಾಟಕದ ಬಗ್ಗೆ ಅವರು ಮಾಡಿದ ಕಾಮೆಂಟಿನಿಂದ. ಎಲ್ಲರ ಹಾಗೆ ನಾನೂ ಸಿ.ಜಿ.ಕೆ. ನಿರ್ದೇಶಿಸಿದ ದೇವನೂರ ಮಹಾದೇವರ ಕತೆಯನ್ನು ಆಧರಿಸಿದ ‘ಒಡಲಾಳ’ ನಾಟಕ ನೋಡಿ ತಲೆದೂಗುತ್ತಾ ಹೊರಬಂದಿದ್ದೆ. ಇವತ್ತಿಗೂ ಅದು ಭಾರತದ ರಂಗಭೂಮಿಯ ಶ್ರೇಷ್ಠ ನಾಟಕಗಳಲ್ಲಿ ಒಂದು ಎಂದು ನನ್ನ ನಂಬಿಕೆ. ಒಮ್ಮೆ ಡಿ.ಆರ್. ಜೊತೆಗಿನ ಮಾತುಕತೆಯ ನಡುವೆ ‘ಒಡಲಾಳ’ ನಾಟಕ ಸುಳಿಯಿತು. ಆ ನಾಟಕದ ಮೊದಲ ದೃಶ್ಯದಲ್ಲಿ ಚೆನ್ನಾಗಿ ಡ್ರೆಸ್ ಮಾಡಿಕೊಂಡ ನಗರದ ವ್ಯಕ್ತಿಯೊಬ್ಬ ಹಳ್ಳಿಗೆ ಬರುತ್ತಾನೆ. ಅವನು ಇನ್‌ಸ್ಫೆಕ್ಟರ್ ಎಂದು ತಿಳಿಯದ ಪೋಲೀಸ್ ಪೇದೆ ‘ಹಲ್ಕಾ ನನ್ಮಗನೆ’ ಎಂದು ಬಯ್ಯುತ್ತಾ ಇನ್‌ಸ್ಫೆಕ್ಟರ್ ಮೇಲೆ ಎರಗುತ್ತಾನೆ. ಕೊನೆಗೆ ಆ ನಗರದವನು ‘ನಾನೇ ಹೊಸದಾಗಿ ಬಂದಿರೋ ಇನ್‌ಸ್ಫೆಕ್ಟರ್‍’ ಎಂದು ಪೇದೆಯ ಕಾಲಿನತ್ತ ಸೂಟ್‌ಕೇಸ್ ಎಸೆಯುತ್ತಾನೆ. ನಾಟಕ ಕೊಂಚ ತಮಾಷೆಯಾಗಿ ಶುರುವಾಗಲು ನಿರ್ದೇಶಕ ರೂಪಿಸಿಕೊಂಡಿರುವ ದೃಶ್ಯ ಇದು. 

ಈ ದೃಶ್ಯಕ್ಕೆ ಪ್ರತಿಕ್ರಿಯಿಸುತ್ತಾ ಡಿ.ಆರ್. ಹೇಳಿದರು: ‘ಯಾವ ಯಾವ ವರ್ಗಗಳು ಯಾವ ಯಾವ ವರ್ಗಗಳ ಬಗೆಗೆ ಹೇಗೆ ವರ್ತಿಸುತ್ತವೆ ಎಂಬ ಕಲ್ಪನೆ ನಿರ್ದೇಶಕನಿಗೆ ಇಲ್ಲದಿದ್ದರೆ ಈ ಥರದ ತಪ್ಪು ಆಗುತ್ತದೆ. ಸಿಟಿಯಿಂದ ಬಂದ ಜರ್ಬಾದ ವ್ಯಕ್ತಿಯೊಬ್ಬನನ್ನು ಹಳ್ಳಿಯ ಪೋಲೀಸ್ ಪೇದೆ ಅಷ್ಟು ಸಲೀಸಾಗಿ ‘ಹಲ್ಕಾ ನನ್ಮಗನೆ’ ಎಂದು ಬೈಯುತ್ತಾ ಅವನ ಮೇಲೆ ಎರಗಲು ಸಾಮಾನ್ಯವಾಗಿ ಹಿಂಜರಿಯುತ್ತಾನೆ. ಇದು ನಿರ್ದೇಶಕನಿಗೆ ಗೊತ್ತಿರಬೇಕಾಗುತ್ತದೆ.’ ಆಗ ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಯಾಗಿದ್ದ ನನಗೆ ಸಾಹಿತ್ಯ ಕೃತಿಯೊಂದರಲ್ಲಿ ಈ ಬಗೆಯಲ್ಲಿ ವರ್ಗ ಗುಣ ಗುರುತಿಸುವ ರೀತಿ ಅತ್ಯಂತ ಹೊಸದಾಗಿ ಕಂಡಿತ್ತು. ಈ ಥರದ ಮಾರ್ಕ್ಸ್‌ವಾದಿ ಹಿನ್ನೆಲೆಯಲ್ಲಿ ಸಾಹಿತ್ಯಕೃತಿಗಳನ್ನು ಡಿ.ಆರ್. ಚುರುಕಾಗಿ ಓದುತ್ತಿದ್ದ ಕ್ರಮವೇ ನನಗೆ ಅವರ ಬಗೆಗಿನ ಆರಂಭದ ಸೆಳೆತಕ್ಕೆ ಕಾರಣವಾಗಿತ್ತು.’  (ಇಂತಿ ನಮಸ್ಕಾರಗಳು, ೨೦೧೩) 

ನಿನ್ನೆ ಶನಿವಾರ ‘ಸಮಾಜಮುಖಿ’ ವಿಚಾರ ಸಂಕಿರಣದಲ್ಲಿ ‘ಕನ್ನಡ ನಾಟಕ ಸಾಹಿತ್ಯ ಹುಡುಕದ ಸಂಘರ್ಷಗಳು’  ಬಗ್ಗೆ ಮಾತಾಡಲು ಯೋಚಿಸುತ್ತಿದ್ದಾಗ ಈ ಎರಡೂ ಪ್ರಸಂಗಗಳು ನನ್ನ ತಲೆಯಲ್ಲಿ ಸುಳಿದವು. ಆ ಕಾಲದಲ್ಲಿ ಸಿ.ಜಿ.ಕೆ. ಕೂಡ ಮಾರ್ಕ್ಸ್‌ವಾದದ ಪ್ರಭಾವದಲ್ಲಿದ್ದವರೇ. ಸಿ.ಜಿ.ಕೆ.ಯವರ ‘ಒಡಲಾಳ’ದ ಆರಂಭ ದೃಶ್ಯ ಹಾಗೂ ‘ವರ್ಗಗಳು’ ಹೇಗೆ ವರ್ತಿಸುತ್ತವೆ ಎಂಬ ಬಗ್ಗೆ ಡಿ. ಆರ್‍. ಮಾತು ಎರಡು ಬಗೆಯ ಗ್ರಹಿಕೆಗಳ ಮುಖಾಮುಖಿಯಂತೆ ಇವತ್ತು ಕಾಣುತ್ತದೆ. ಒಂದು ನಾಟಕ ಕೃತಿಯಲ್ಲಿ ಅಡಗಿರುವ ಸಂಘರ್ಷಗಳು ನಿರ್ದೇಶಕ-ನಟ-ನಟಿಯರ ರೀಡಿಂಗ್ ಹಾಗೂ ಪ್ರತಿಭಾವಿಲಾಸದಲ್ಲಿ; ಪ್ರೇಕ್ಷಕಿ, ಪ್ರೇಕ್ಷಕರ ಗ್ರಹಿಕೆಯಲ್ಲಿ ಹೇಗೆ ಕಾಣಿಸುತ್ತವೆ ಎಂಬುದನ್ನು ಅರಿಯುವುದು ನಿಜಕ್ಕೂ ರೋಮಾಂಚಕ ಕೆಲಸ!

ಮೊನ್ನೆ ಮನಸ್ಸಿಗೆ ಬಂದ ಮತ್ತೊಂದು ದೃಶ್ಯ ನನ್ನ ‘ಮುಂದಣ ಕಥನ’ ನಾಟಕದ್ದು. ಈ ನಾಟಕವನ್ನು ಮೊದಲು ನಿರ್ದೇಶಿಸಿದ ನಟರಾಜ ಹೊನ್ನವಳ್ಳಿ ಸೂಚಿಸಲೆತ್ನಿಸಿದ ಒಂದು ಸಮಕಾಲೀನ ಮಹಾದುರಂತ ನಿರ್ದೇಶಕನ ಇಮ್ಯಾಜಿನೇಶನ್ ಕೆಲಸ ಮಾಡುವ ವಿಶಿಷ್ಟ ರೀತಿಯನ್ನು ಹೇಳುತ್ತಿತ್ತು. ನಾಟಕದ ಮೊದಲ ದೃಶ್ಯದಲ್ಲಿ ಹನ್ನೆರಡನೆಯ ಶತಮಾನದ ಕಲ್ಯಾಣದಲ್ಲಿ ಪ್ರಭುತ್ವದ ದಮನದಿಂದಾಗಿ ವಚನಗಳನ್ನು ಎತ್ತಿಕೊಂಡು ದಶದಿಕ್ಕುಗಳಿಗೆ ಹೊರಡುವ ಶರಣ, ಶರಣೆಯರ ಚಿತ್ರವಿದೆ. ಆ ದೃಶ್ಯದ ಫೋಟೋವನ್ನೂ ಇಲ್ಲಿ ಕೊಟ್ಟಿದ್ದೇನೆ. 

ಕೊಂಚ ನಿಧಾನವಾಗಿ ಶರಣ, ಶರಣೆಯರು ನಡೆಯುತ್ತಿದ್ದಾರೆ. ಈ ನಿಧಾನಗತಿಯ ದೃಶ್ಯ ರೂಪಿಸಲು ತಮಗೆ ಪ್ರೇರಣೆಯಾದ ಸಮಕಾಲೀನ ವಿದ್ಯಮಾನವೊಂದರ ಬಗ್ಗೆ ನಟರಾಜ ಹೊನ್ನವಳ್ಳಿ ನನಗೊಮ್ಮೆ ಹೇಳಿದರು: ‘ವಚನ ಹೊತ್ತು ಸಾಗುತ್ತಿರುವ ಶರಣ, ಶರಣೆಯರ ದೃಶ್ಯವನ್ನು ನಾನು ರಂಗದ ಮೇಲೆ ಕಂಪೋಸ್ ಮಾಡಲು ಯೋಚಿಸುತ್ತಿದ್ದ ಕಾಲದಲ್ಲಿ   ಮಯನ್ಮಾರ್‍‌ನಿಂದ ರೊಂಹಿಂಗ್ಯಾ ಮುಸ್ಲಿಮರು ಮನೆಮಾರು, ತಂಗುದಾಣಗಳಿಲ್ಲದೆ ತಬ್ಬಲಿಗಳಾಗಿ ಹೊರಟಿದ್ದ ಚಿತ್ರಗಳು ನನ್ನನ್ನು ಕಾಡತೊಡಗಿದವು. ಅದರ ಪ್ರತಿಬಿಂಬವೇ ಈ ದೃಶ್ಯ.’ 

‘ಮುಂದಣ ಕಥನ’ ನಾಟಕ ಚರಿತ್ರೆಯ ಸಂಘರ್ಷಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಮರುಕಳಿಸುವುದನ್ನು, ಇಪ್ಪತ್ತನೆಯ ಶತಮಾನದ ಲೇಖಕ, ಲೇಖಕಿಯರ ಬೇಟೆ, ಹತ್ಯೆಗಳನ್ನೂ ಹೇಳಲೆತ್ನಿಸಿದೆ. ಆದರೆ ತನ್ನ ಕಾಲದಲ್ಲಿ ಕಣ್ಣೆದುರು ನಡೆಯುತ್ತಿದ್ದ ಒಂದು ಭೀಕರ ಜನಾಂಗೀಯ ಬೇಟೆ ನಟರಾಜ ಹೊನ್ನವಳ್ಳಿಯವರನ್ನು ಆ ದುರಂತವನ್ನೂ ಇಲ್ಲಿ ತರುವಂತೆ ಮಾಡಿತ್ತು. ಅಥವಾ ಇಂದಿನ ದಿಕ್ಕೆಟ್ಟ ಸ್ಥಿತಿಯ ಮೂಲಕ ಶರಣರ ಸ್ಥಿತಿಯನ್ನು ಅರಿಯುವಂತೆ ಹೇಳುತ್ತಿತ್ತು. ಲೋಹಿಯಾ ಮಾರ್ಗದ ಸಮಾಜವಾದ ಹಾಗೂ ಬಗೆಬಗೆಯ ರಂಗಚಿಂತನೆಗಳ ಜೊತೆಗೇ ರೂಪುಗೊಂಡಿರುವ ನಟರಾಜ ಹೊನ್ನವಳಿಯವರ ಜಾತ್ಯತೀತ ಗ್ರಹಿಕೆಗಳ ನೋಟವೂ ಈ ದೃಶ್ಯವನ್ನು ರೂಪಿಸಿರಬಹುದು.

ನಾಟಕ ಪಠ್ಯವಿರಲಿ, ರಂಗಕೃತಿಯಿರಲಿ, ನಿರ್ದೇಶನವಿರಲಿ, ಅನೇಕ ಸಲ ಇವೆಲ್ಲದರ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಫಿಲಾಸಫಿ ಹಾಗೂ ಸಿದ್ಧಾಂತಗಳು ಕೂಡ ಸಂಘರ್ಷಗಳನ್ನು ಮಂಡಿಸುವ, ನಿಭಾಯಿಸುವ, ಪರಿಹರಿಸುವ ರೀತಿಯನ್ನು ಪ್ರಭಾವಿಸುತ್ತಿರಬಲ್ಲವು. ಕುಟುಂಬವೊಂದರ ಬಿಕ್ಕಟ್ಟಿನ ದೃಶ್ಯವನ್ನು ಗಾಂಧೀವಾದ, ಸಮಾಜವಾದ ಅಥವಾ ಸ್ತ್ರೀವಾದ ನೋಡುವ, ಉತ್ತರ ಹುಡುಕುವ ಬಗೆ ಬೇರೆಬೇರೆಯಾಗಿರಬಲ್ಲದು. 

ನಾಟಕ ಸಾಹಿತ್ಯ ‘ಹುಡುಕದ’ ಸಂಘರ್ಷಗಳ ಬಗ್ಗೆ ಮಾತಾಡಲು ತಕ್ಕ ನಾಟಕಗಳ ಸಮೀಕ್ಷೆಯ ಬಲ, ಸಿದ್ಧತೆ ನನಗೆ ಇಲ್ಲದಿದ್ದುದರಿಂದ ರಂಗಭೂಮಿಯಲ್ಲಿ ಮಂಡಿತವಾದ ಸಂಘರ್ಷಗಳ ರೀತಿ ಕುರಿತ ಮೂರು ಪ್ರಸಂಗಗಳನ್ನು ಹೇಳಿ ಹೊನ್ನವಳ್ಳಿ, ದಳವಾಯಿ, ಸುಮತಿ, ಚೌಗಲೆಯವರ ಮಾತುಗಳನ್ನು ಕೇಳಿಸಿಕೊಳ್ಳಲೆತ್ನಿಸಿದೆ. 

ಕೊನೆ ಟಿಪ್ಪಣಿ

ಬೆಂಗಳೂರಿನಲ್ಲಿ ವರ್ಷಕ್ಕೆ ಕೊನೇ ಪಕ್ಷ ಮುನ್ನೂರಾದರೂ ಹೊಸ ಹೊಸ ನಾಟಕಗಳು ಪ್ರದರ್ಶನವಾಗುತ್ತಿರಬಹುದು. ಅದೇ ಲೆಕ್ಕದಲ್ಲಿ ಕರ್ನಾಟಕದಾದ್ಯಂತ ಸಾವಿರಾರು ಹಳೆಯ ನಾಟಕಗಳ ಹೊಸ ಪ್ರದರ್ಶನಗಳು, ಹೊಸ ನಾಟಕಗಳು ನಡೆಯತ್ತಿರುತ್ತವೆ. ರಂಗಭೂಮಿ ಇಷ್ಟೊಂದು ವ್ಯಾಪಕವಾಗಿರುವಾಗ ಕನ್ನಡ ನಾಟಕ ಸಾಹಿತ್ಯದ ಒಟ್ಟು ಗತಿಯ ಬಗ್ಗೆ ಮಾತಾಡುವುದು ಕಷ್ಟ. ಕೊನೇ ಪಕ್ಷ ನಾಟಕ ಅಕಾಡೆಮಿ, ಅಥವಾ ಇನ್ನಿತರ ಅನುದಾನಿತ ರಂಗ ಸಂಸ್ಥೆಗಳಾದರೂ ಹೊಸ ನಾಟಕಗಳು ಹಾಗೂ ಅವುಗಳ ವಸ್ತು, ಸಾರ, ಕೃತಿ ಬರೆದವರು, ನಟಿಸಿದವರು ಹಾಗೂ ರಂಗತಂಡಗಳ ಡಿಜಿಟಲ್ ದಾಖಲೆಯನ್ನಾದರೂ ತಮ್ಮ ವೆಬ್‌ಸೈಟುಗಳಲ್ಲಿ ಹಾಕಿದರೆ ಇಂಥ ವಿಸ್ತೃತ ಅಧ್ಯಯನಗಳಿಗೆ, ವ್ಯಾಪಕ ಚರ್ಚೆಗಳಿಗೆ ಉಪಯುಕ್ತ ಕೊಡುಗೆಯಾಗಬಲ್ಲದು. ಈ ನಿಟ್ಟಿನಲ್ಲಿ ರಂಗಾಸಕ್ತರು, ಥಿಯೇಟರ್‍ ಸ್ಕೂಲುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ರಿಸರ್ಚರುಗಳ ನೆರವನ್ನೂ ಈ ಸಂಸ್ಥೆಗಳು ಪಡೆಯಬಹುದು.

ಶೇಕ್‌ಸ್ಪಿಯರನ ಹ್ಯಾಮ್ಲೆಟ್  ಹೇಳಿದಂತೆ ‘The readiness is all!’ 
  
 

Share on:

Comments

1 Comments



| NHonnavalli

ಟೆರ್ರಿ ಈಗಲ್ಟನ್ ಮ್ಯಾಕ್ ಬೆತ್ ಸ್ವಗತ ಓದಿದ ರೀತಿ ವಂಡರ್ ಫುಲ್




Add Comment


Mundana Kathana Nataka

YouTube






Recent Posts

Latest Blogs