ಚಳುವಳಿಗನ್ನಡಂ ಆಳ್ಗೆ!
by Nataraj Huliyar
ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ದಿನ ಕರ್ನಾಟಕ ರಾಜ್ಯೋತ್ಸವ. ಕನ್ನಡವನ್ನು ನೆನಸಿಕೊಂಡವರಂತೆ ನಿನ್ನೆ ರಾತ್ರಿ ಕಲಿತು ಇವತ್ತು ಹಾಡುತ್ತಿದ್ದಂತಿದ್ದ ದನಿಗಳು ಹತ್ತಿರದ ಅಪಾರ್ಟ್‌ಮೆಂಟಿನಿಂದ ಕೇಳಿಸುತ್ತಿದ್ದವು. ಮೊನ್ನೆ ತಾನೇ ಕನ್ನಡ ಅಧ್ಯಾಪಕಿಯೊಬ್ಬರು ಕನ್ನಡ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಸುಸ್ತಾಗಿ ಕೂತಿದ್ದ ಚಿತ್ರ ಕಣ್ಮುಂದೆ ಬಂತು. ಅದು ನೂರು ಪೇಪರುಗಳನೆಲ್ಲ ನೋಡಿ ನೋಡಿ ಆಚೆ ನೂಕಿದ್ದರಿಂದ ಹುಟ್ಟಿದ ಸುಸ್ತಾಗಿರಲಿಲ್ಲ; ಬೆಂಗಳೂರಿನಲ್ಲಿ ಹೊಸ ತಲೆಮಾರಿನ ಪಿಯುಸಿ ಓದುವ ಕನ್ನಡ ಕಂದಮ್ಮಗಳು ಬರೆದ ಕರುಣಾಜನಕ ಕನ್ನಡ ಹುಟ್ಟಿಸಿದ ಸುಸ್ತಾಗಿತ್ತು! ಕನ್ನಡ ಮೇಡಂ ಕುವೆಂಪು ಬಣ್ಣನೆಯನ್ನು ಕೊಂಚ ಬದಲಿಸಿ ‘ಕನ್ನಡವೆನೆ ಹೌಹಾರುವುದೆನ್ನೆದೆ’ ಎಂದು ಕೊರಗುತ್ತಾ, ದುಃಖದ ಹಾಡಿಗೆ ತಕ್ಕ ತೋಡಿ ರಾಗದಲ್ಲಿ ದುಃಖ ತೋಡಿಕೊಳ್ಳುವ ಸ್ಥಿತಿ ತಲುಪಿದಂತಿತ್ತು. ಮೊನ್ನೆ ನಾನೇ ಕಂಡಿದ್ದ ಕೆಲವು ‘ಉನ್ನತ’ ಕನ್ನಡ ವಿದ್ಯಾರ್ಥಿಗಳ ಉತ್ತರವೂ ಇಂಥದೇ ರಾಗ ಹೊರಡಿಸುವಂತಿತ್ತು.
ಕನ್ನಡ ಸಂಕಷ್ಟದ ಚಿತ್ರಗಳು ತಲೆಯಲ್ಲಿ ಸುತ್ತುತ್ತಿರುವಾಗ… ಗೆಳೆಯ ಕರಿಸ್ವಾಮಿಯವರು ನಾಗೇಗೌಡ ಕಿಲಾರ ಫೇಸ್‌ಬುಕ್ಕಿನಲ್ಲಿ ಬರೆದ ಟಿಪ್ಪಣಿಯನ್ನು ನನಗೆ ಸಮೇಸ-ಸಂಕ್ಷಿಪ್ತಮೇಘಸಂದೇಶ-ದ ಮೂಲಕ ಕಳಿಸಿದರು: ‘ಕರ್ನಾಟಕಕೇಂದ್ರಿತ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎನ್ನಿಸಿದರೆ ನೀವುಗಳು ತಪ್ಪದೆ ಎಂ.ಡಿ. ನಂಜುಂಡಸ್ವಾಮಿಯವರು ಬರೆದಿದ್ದ ರಾಜಕೀಯ ಪಕ್ಷದ ಪ್ರಣಾಳಿಕೆ ಓದಬೇಕು ಫ್ರೆಂಡ್ಸ್…ಆಮೇಲೆ ನಿಮ್ಮ ಕರ್ನಾಟಕಕೇಂದ್ರಿತ ರಾಜಕೀಯ ನೆಲೆಯನ್ನು ವಿಶ್ವಾತ್ಮಕ ನೆಲೆಗೆ ವಿಸ್ತರಿಸಬೇಕು ಅನ್ನಿಸಿದರೆ ಕಾರ್ಲ್ ಮಾರ್ಕ್ಸ್-ಫ್ರೆಡ್ರಿಕ್ ಎಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ’ಓದಿ ಫ್ರೆಂಡ್ಸ್.’
ಈ ಟಿಪ್ಪಣಿ ಸೂಚಿಸಿದ್ದ ‘ಕನ್ನಡ ದೇಶ’ ರಾಜಕೀಯ ಪಕ್ಷದ ಪ್ರಣಾಳಿಕೆ ನಟರಾಜ್ ಹುಳಿಯಾರ್-ರವಿಕುಮಾರ್ ಬಾಗಿ ಸಂಪಾದಿಸಿದ ಎಂ.ಡಿ ನಂಜುಂಡಸ್ವಾಮಿಯವರ ಆಯ್ದ ಬರಹಗಳ ಸಂಕಲನ ‘ಬಾರುಕೋಲು’ (ಪಲ್ಲವ ಪ್ರಕಾಶನ, ರೂ ೨೦೦) ಪುಸ್ತಕದಲ್ಲಿದೆ. ಈಚೆಗೆ ಯಾವುದೋ ಕಾರಣಕ್ಕೆ ’ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಇಂಗ್ಲಿಷ್ ಅನುವಾದ ಓದುತ್ತಿದ್ದಾಗ ಅದರ ವಾದ-ವಸ್ತು-ವಿಶ್ಲೇಷಣೆಯ ಬೀಸಿನ ಜೊತೆಗೆ ಅದರ ಚಿಂತನೆ-ಭಾಷೆಯ ತೀವ್ರತೆ ಕೂಡ ಅದು ಜಗತ್ತನ್ನೇ ವ್ಯಾಪಿಸಿಕೊಳ್ಳಲು ಕಾರಣ ಎನ್ನಿಸಿತ್ತು. ಕಮ್ಯುನಿಸ್ಟ್ ಮ್ಯಾನಿಫೆಸ್ಟೋವನ್ನು ಕನ್ನಡಕ್ಕೆ ಹೇಗೆ ಅನುವಾದಿಸಿದ್ದಾರೋ ಹುಡುಕಿ ನೋಡಬೇಕೆಂದುಕೊಂಡೆ.
ಇದೀಗ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ (೧೯೩೬-೨೦೦೪) ಬರೆದ ಪ್ರಣಾಳಿಕೆಯನ್ನು ಮತ್ತೆ ತೆಗೆದು ನೋಡಿದೆ. ಅದು ತೊಂಬತ್ತರ ದಶಕಕ್ಕೆ ಸ್ವಾಭಿಮಾನಿ ಕರ್ನಾಟಕದ ಸಮಗ್ರ ಪ್ರಣಾಳಿಕೆಯಂತಿತ್ತು. ಇದಕ್ಕೂ ಮೊದಲು ಪ್ರೊಫೆಸರ್ ತೀರಿಕೊಂಡಾಗ ನಾನು ಸಂಪಾದಿಸಿದ ‘ಹಸಿರು ಸೇನಾನಿ’ ಪುಸ್ತಕದಲ್ಲಿ ಕರ್ನಾಟಕ, ಕನ್ನಡ ರಾಜ್ಯೋತ್ಸವಗಳ ಬಗ್ಗೆ ಉಲ್ಲೇಖಿಸಿದ್ದ ಮಾತುಗಳು ನೆನಪಾದವು.
ಸ್ವಾಭಿಮಾನಿ ಕರ್ನಾಟಕ ಕುರಿತ ಪ್ರೊಫೆಸರ್ ಮಾತುಗಳು:
‘ನಮ್ಮ ದುಡಿಮೆಗೆ ನ್ಯಾಯವಾದ ಕೂಲಿ, ನಮ್ಮ ಉತ್ಪಾದನೆಗೆ ನ್ಯಾಯವಾದ ಬೆಲೆ ಮತ್ತು ನಾವು ಉಪಯೋಗಿಸುವ ವಸ್ತುಗಳಿಗೆ ನ್ಯಾಯವಾದ ಬೆಲೆ ನಿಗದಿಪಡಿಸಿಕೊಂಡು, ನಮ್ಮ ‘ಕೊಳ್ಳುವ ಶಕ್ತಿ’ ಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನಮ್ಮ ದುಡಿಮೆಯ ಶಕ್ತಿಯಿಂದಲೇ ಸ್ವಾಭಿಮಾನದ ಪಂಚೆಯುಟ್ಟು, ನಮ್ಮ ಹೆಂಡತಿಗೆ ಸ್ವಾಭಿಮಾನದ ಸೀರೆಯುಡಿಸಿ, ಸ್ವಾಭಿಮಾನದ ತಾಳಿ ಕಟ್ಟಿ, ನಮ್ಮ ಮಕ್ಕಳಿಗೆ ಸ್ವಾಭಿಮಾನದ ಪುಸ್ತಕ ಕೊಡಿಸಿ, ಸಮವಸ್ತ್ರ ಉಡಿಸಿ, ಸ್ವಾಭಿಮಾನದ ಅನ್ನ ಉಂಡು ಒಂದು ‘ಸ್ವಾಭಿಮಾನಿ ಕರ್ನಾಟಕ’ ಆಗಬೇಕಾಗಿದೆ.’
ಕನ್ನಡ ರಾಜ್ಯೋತ್ಸವ ಕುರಿತು ಪ್ರೊಫೆಸರ್ ಹೇಳಿದ್ದು:
‘ಹೊಟ್ಟೆ ಹೊರೆಯುವುದಕ್ಕಾಗಿ ಮನೆ ಬಿಟ್ಟು ವಲಸೆ ಹೋಗುವುದನ್ನು, ಹೊಟ್ಟೆಪಾಡಿಗಾಗಿ ಕರ್ನಾಟಕದ ಹೆಣ್ಣುಮಕ್ಕಳು ವೇಶ್ಯೆಯರಾಗುತ್ತಿರುವುದನ್ನು, ಅಂಗವಿಕಲರು, ಮುದುಕರು ಮತ್ತು ರೋಗಿಷ್ಠರು ಭಿಕ್ಷುಕರಾಗುತ್ತಿರುವುದನ್ನು ನಾವು ಪೂರ್ಣವಾಗಿ ಕರ್ನಾಟಕದಲ್ಲಿ ನಿರ್ನಾಮ ಮಾಡಿದಾಗ ಕರ್ನಾಟಕ ರಾಜ್ಯ ಉದಯವಾಗುತ್ತದೆ. ಆವತ್ತಿನಿಂದ ನಾವೆಲ್ಲ ಕರ್ನಾಟಕ ರಾಜ್ಯೋತ್ಸವ ಆಚರಿಸೋಣ. ಇಲ್ಲದಿದ್ದಲ್ಲಿ ಈಗ ನಡೆಯುವ ಎಲ್ಲ ಆನಂದದ ಕುಣಿತಗಳು ಕೋಟ್ಯಾಂತರ ದೌರ್ಭಾಗ್ಯಶಾಲಿ ಕನ್ನಡಿಗರ ಎದೆಯ ಮೇಲೆ ಕೆಲವೇ ಅಯೋಗ್ಯರು ಕುಣಿಯುವ ಅಸಹ್ಯ ರಾಕ್ಷಸ ಕುಣಿತದಂತೆ ಕಾಣುತ್ತವೆ.’
ಅವತ್ತು ಪ್ರೊಫೆಸರ್ ಹೇಳಿದ್ದನ್ನು ಕರ್ನಾಟಕದ ಬಗ್ಗೆ ಕಾಳಜಿ ಇರುವ ರಾಜಕಾರಣಿಗಳು ಅರ್ಧದಷ್ಟಾದರೂ ಅರ್ಥ ಮಾಡಿಕೊಂಡಿದ್ದರೂ ನಾವು ಸ್ವಾಭಿಮಾನಿ ಕರ್ನಾಟಕವಾಗುವತ್ತ ಸಾವಿರಾರು ಹೆಜ್ಜೆ ಇಡಬಹುದಿತ್ತು. ಇಂಥ ಚಿಂತನೆಗಳನ್ನು ಮಂಡಿಸುತ್ತಿದ್ದ ಸೋಶಲಿಸ್ಟ್ ಪ್ರೊಫೆಸರ್ ಅದಕ್ಕೆ ತಕ್ಕ ಗಂಭೀರ ಕನ್ನಡವನ್ನು ರೂಢಿಸಿಕೊಂಡ ರೀತಿಯನ್ನು ಕೂಡ ನಾವು ಆಳವಾಗಿ ಗಮನಿಸುವ ಅಗತ್ಯವಿದೆ. ನಾನು ‘ಹಸಿರು ಸೇನಾನಿ’ ಪುಸ್ತಕ ಮಾಡುತ್ತಿದ್ದಾಗ, ೨೦೦೮ರ ಸುಮಾರಿಗೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ರಂಗ ನಿರ್ದೇಶಕ ಪ್ರಸನ್ನ ಸಿಕ್ಕರು. ಇದ್ದಕ್ಕಿದ್ದಂತೆ, ‘ನಂಜುಂಡಸ್ವಾಮಿ ಬಳಸ್ತಾ ಇದ್ದ ಕನ್ನಡ… ಏನ್ರೀ ಅದರ ಗಾಂಭೀರ್ಯ…’ ಎಂದು ಪ್ರಸನ್ನ ಹೇಳುತ್ತಿದ್ದಾಗ ಅರಳಿದ ಅವರ ಮುಖ, ಕಣ್ಣಿನಲ್ಲಿ ಮಿಂಚಿದ ಆರಾಧನಾಭಾವ ನೆನಪಾಯಿತು.
ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್, ಕಿ.ರಂ. ನಾಗರಾಜ್ ಥರದ ಅಂದಿನ ತರುಣ ತಲೆಮಾರಿಗೆ ಸಮಾಜವಾದವನ್ನು ಕನ್ನಡದಲ್ಲಿ ಹೇಳಿಕೊಟ್ಟವರು ಪ್ರೊಫೆಸರ್ ಎಂ.ಡಿ.ಎನ್. ಎಂಬತ್ತು, ತೊಂಬತ್ತರ ದಶಕದಲ್ಲಿ ರೈತರ ಸಂಕಷ್ಟಗಳಿಗೆ ಕಾರಣವಾದ ಅಂತರ‍್ರಾಷ್ಟ್ರೀಯ ನೀತಿಗಳು, ವರ್ಲ್ಡ್ ಟ್ರೇಡ್ ಆರ್ಗನೈಸೇಶನ್, ಗ್ಯಾಟ್ ಒಪ್ಪಂದಗಳು, ವಾರ್ಷಿಕ ಬಜೆಟ್ಟುಗಳು ಎಲ್ಲವನ್ನೂ ರೈತ ಸಮುದಾಯಕ್ಕೆ ತಲುಪುವ ಕನ್ನಡ ಭಾಷೆಯಲ್ಲಿ ಹೇಳಿಕೊಟ್ಟವರು ಅವರು. ನಾನು ಕಾಲೇಜು ಹುಡುಗನಾಗಿದ್ದಾಗಿನಿಂದಲೂ ಗಮನಿಸಿದಂತೆ, ರೈತ ಚಳುವಳಿಗಾಗಿ ಹೊಸದೊಂದು ಕನ್ನಡವನ್ನು ರೈತರ ಜೊತೆ ಮಾತುಮಾತಾಡುತ್ತಲೇ ಪ್ರೊಫೆಸರ್ ಸೃಷ್ಟಿಸಿಕೊಂಡರು.
ಪ್ರೊಫೆಸರ್ ಜೊತೆಗಿದ್ದ ಎನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ ಮಲೆನಾಡುಕನ್ನಡವನ್ನು ‘ರೈತಚಳುವಳಿಕನ್ನಡ’ ಆಗಿಸಿದರು. ಈ `ರೈತಚಳುವಳಿ ಕನ್ನಡ’ವನ್ನು ಇತರ ರೈತ ನಾಯಕರಾದ ಕೆ.ಟಿ ಗಂಗಾಧರ್, ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ಮುಂದುವರಿಸಿದರು. ‘ಹಾಲುಕರೆವವರು ನಾವು ಕುಡಿಯುವವರು ನೀವು’; 'ಭತ್ತ ಬೆಳೆಯೋರು ನಾವು ಅನ್ನ ಉಣ್ಣೋರು ನೀವು’ ಎಂದು ತಿಪಟೂರಿನಿಂದ ಬೆಂಗಳೂರಿನವರೆಗಿನ ರೋಡುಗಳಲ್ಲಿ ನಟರಾಜ್ ಹೊನ್ನವಳ್ಳಿಯವರ ಜೊತೆ ಸೇರಿ ರೈತಸಂಘದ ಘೋಷಣೆ ಕೂಗುತ್ತಲೇ ಆ ಭಾಷೆ ನನ್ನೊಳಗಿಳಿಯಿತು; ಸೋಷಲಿಸ್ಟ್ ಫಿಲಾಸಫಿಯವರೆಗೂ ಕರೆದೊಯ್ದಿತು.
ಈ ಬಗೆಯ ಮತ್ತೊಂದು ಬೆಳವಣಿಗೆ ಬಿ.ಕೃಷ್ಣಪ್ಪ, ಸಿದ್ಧಲಿಂಗಯ್ಯ ಥರದವರು ರೂಪಿಸಿಕೊಡುತ್ತಿದ್ದ ‘ದಲಿತಚಳುವಳಿಕನ್ನಡ’ದಲ್ಲೂ ಮುಂದುವರಿಯಿತು. ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಎಂಬ ಕವಿಸಾಲು-ಘೋಷಣೆ-ಗೋಡೆ ಬರಹ ಅಂಬೇಡ್ಕರ್ ಫಿಲಾಸಫಿಯತ್ತ ನಮ್ಮಂಥ ಲಕ್ಷಾಂತರ ಜನರನ್ನು ಒಯ್ದಿತು. ಹೀಗೆಯೇ ಅನಕೃ, ಮ.ರಾಮಮೂರ್ತಿ ಥರದ ಹಲವರು ರೂಪಿಸಿದ ‘ಕನ್ನಡಚಳುವಳಿಗನ್ನಡ’, ಮಹಿಳಾ ಚಳುವಳಿಗಳು ರೂಪಿಸಿದ ಸ್ತ್ರೀಚಳುವಳಿಕನ್ನಡ, ಕಮ್ಯುನಿಸ್ಟ್ ಚಳುವಳಿಕನ್ನಡ... ಹೀಗೆ ನಾವು ಚಳುವಳಿಗನ್ನಡಗಳ ಹಲವು ರೂಪಗಳನ್ನು ಅಧ್ಯಯನ ಮಾಡುತ್ತಾ, ಹೊಸ ಹೊಸ ತಲೆಮಾರುಗಳಿಗೆ ವಿವರಿಸುತ್ತಾ ಹೋಗಬೇಕಾಗುತ್ತದೆ. ಈ ನಡುವೆ ‘ಎಂಥ ಕ್ಲಿಷ್ಟ, ಸಂಕೀರ್ಣ ತಾತ್ವಿಕ ವಿಷಯವನ್ನಾದರೂ ಎಲ್ಲರಿಗೂ ತಿಳಿಯುವಂತೆ ಹೇಳಬಹುದು ಎಂಬುದನ್ನು ನಾನು ಲಂಕೇಶರಿಂದ ಕಲಿತೆ’ ಎಂದು ನ್ಯಾಶನಲ್ ಕಾಲೇಜಿನ ಸಭೆಯಲ್ಲಿ ಡಿ. ಆರ್. ನಾಗರಾಜ್ ಹೇಳಿದ್ದು ನೆನಪಾಗುತ್ತದೆ. ಈ ಸರ್ವರಿಂದ ಈ ಅಂಕಣಕಾರನೂ ಅಷ್ಟಿಷ್ಟು ’ನುಡಿಗಲಿತು’ ಬೆಳೆಯಲೆತ್ನಿಸಿರಬಹುದು.
ಪ್ರೊಫೆಸರ್ ಎಂ.ಡಿ.ಎನ್. ಕನ್ನಡ-ಕರ್ನಾಟಕ ಕುರಿತು ಮಾತಾಡಿದ್ದನ್ನು ಇವತ್ತು ನೆನೆಯುತ್ತಿರುವಾಗ ‘ರೈತ ಚಳುವಳಿಯೇ ಭಾಷಾ ಚಳುವಳಿಯನ್ನೂ ಕೈಎತ್ತಿಕೊಳ್ಳಬೇಕಾಗುತ್ತದೆ’ ಎಂದು ಬರಗೂರು ರಾಮಚಂದ್ರಪ್ಪನವರ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದು ನೆನಪಾಯಿತು: ‘ಇಲ್ಲಿ ಭಾಷಾ ಚಳವಳಿ ಆಗಿಲ್ಲ. ಆಗಿದ್ದು ಗೋಕಾಕ್ ಚಳವಳಿ. ಗೋಕಾಕ್ ಚಳವಳಿ ಭಾಷಾ ಚಳವಳಿ ಅಲ್ಲ. ನಾವು ಹಿಂದೆ ೧೯೬೮ರಲ್ಲಿ ಭಾಷಾ ಚಳುವಳಿ ಪ್ರಾರಂಭ ಮಾಡಿದ್ದೆವು- ಅದರ ಕಾರ್ಯಕ್ರಮ ‘ಕನ್ನಡ ಬಳಸಿ, ಇಂಗ್ಲೀಷ್ ಇಳಿಸಿ.’ ಇದನ್ನು ನಾವೇ ಮುಂದೆ ನಡೆಸಬೇಕಾಗುತ್ತದೆ.
...ಜನಭಾಷೆಯೇ ಆಡಳಿತವಾಗದಿದ್ದರೆ ಅದು ಪ್ರಜಾಪ್ರಭುತ್ವ ಆಗೋಲ್ಲ. ನ್ಯಾಯ ನನ್ನ ಭಾಷೆಯಲ್ಲಿ ಸಿಗುತ್ತದೆಯೇ ಹೊರತು ವಿದೇಶೀ ಭಾಷೆಯಲ್ಲಲ್ಲ. ಈ ತನಕ ಭಾಷೆಗೂ ಪ್ರಜಾಪ್ರಭುತ್ವಕ್ಕೂ ಸಂಬಂಧ ಕಲ್ಪಿಸಿಲ್ಲ. ನಾವು ಆ ಕೆಲಸ ಮಾಡ್ತೇವೆ. ನಾವು ರೈತರಿಗೆ ಹೇಳಿದ್ದೇವೆ- ಇಂಗ್ಲೀಷಿನಲ್ಲಿ ಸಮನ್ಸ್ ಬಂದರೆ ಹಿಂದಕ್ಕೆ ಕಳುಹಿಸಿ ಅಂತ. ನನ್ನ ಮನೆಗೆ ಒಂದು ಬಾರಿ ಪೊಲೀಸ್ ಇಂಗ್ಲಿಷ್‌ನಲ್ಲಿ ಸಮನ್ಸ್ ತಂದಿದ್ದ. ‘ನನಗೆ ಇಂಗ್ಲಿಷ್ ಬರಲ್ಲ, ಕನ್ನಡದಲ್ಲಿ ತಾ’ ಎಂದು ಹಿಂದಿರುಗಿಸಿದ್ದೆ. ಯಾವುದೋ ಒಂದು ಸಂದರ್ಭದಲ್ಲಿ ಭಾಷಾ ಚಳವಳಿಯನ್ನು ನಾವೇ, [ರೈತ ಸಂಘದವರೇ] ಕೈಗೆ ತೆಗೆದುಕೊಳ್ಳಬೇಕಾಗುತ್ತದೆ.’
ಪ್ರೊಫೆಸರ್ ಬಾಯಿಂದ ಸಮಾಜವಾದ ಕೇಳಿ ಕಲಿತು ಅದನ್ನು ಕ್ಲಾಸ್ ರೂಮಿನಲ್ಲೂ ಬಳಸುವುದು ಹೇಗೆ ಎಂಬುದನ್ನು ಅವರನ್ನೇ ಕೇಳಿ ಕಲಿತ ಕಿ.ರಂ. ನಾಗರಾಜ್, ೨೦೦೪ರಲ್ಲಿ ಎಂ.ಡಿ.ಎನ್. ತೀರಿಕೊಂಡಾಗ ನಡೆದ ಸಭೆಯಲ್ಲಿ ಇಡೀ ಪ್ರೊಫೆಸರ್ ಚಿಂತನೆಯಲ್ಲಿ ಕರ್ನಾಟಕವೇ ಕೇಂದ್ರವಾಗಿದ್ದುದನ್ನು ಗುರುತಿಸಿದರು:
‘ಎಂ.ಡಿ.ಎನ್.ಗೆ ಕರ್ನಾಟಕ ಅನ್ನುವುದು ಬಹಳ ಮುಖ್ಯವಾದ ಕೇಂದ್ರವಾಗಿತ್ತು. ಸ್ಥಳೀಯ ನೆಲೆಯನ್ನು ಗಟ್ಟಿಯಾಗಿ ಆತುಕೊಂಡು ಅವರು ಇವನ್ನೆಲ್ಲ ಮಾತಾಡುತ್ತಿದ್ದರು. ಆದ್ದರಿಂದ ಸ್ಥಳೀಯತೆಯನ್ನು ಅವರೆಂದೂ ಬಿಟ್ಟುಕೊಟ್ಟವರಲ್ಲ. ಕನ್ನಡ ಭಾಷೆಯನ್ನು ಹಾಗೂ ಕನ್ನಡನಾಡನ್ನು ಮುಖ್ಯ ಕೇಂದ್ರ ಮಾಡಿಕೊಳ್ಳುವುದೇ ಅವರ ಉದ್ದೇಶ ಕೂಡ ಆಗಿತ್ತು. ನಾವೆಲ್ಲ ದೇಶೀಯತೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಬಹಳ ದೊಡ್ಡದಾಗಿ ಮಾತನಾಡುತ್ತಿರುತ್ತೇವೆ. ಆದರೆ ದೇಶೀಜ್ಞಾನದ ನಿಜವಾದ ರೂಪ ಏನು ಅನ್ನುವುದನ್ನು ಬಹಳ ಸಮರ್ಥವಾದ ಪ್ರಯೋಗಶೀಲತೆಯಿಂದ ತೋರಿಸಿದವರು ಎಂ.ಡಿ.ಎನ್; ಅಂದರೆ, ದೇಶೀಜ್ಞಾನಕ್ಕೆ ತನ್ನದೇ ಆದ ಒಂದು ನೆಲೆ ಇದೆ, ಕರ್ನಾಟಕಕ್ಕೆ ತನ್ನದೇ ಆದ ಒಂದು ಜ್ಞಾನದ ನೆಲೆ ಇದೆ, ಹಾಗೂ ಇರುತ್ತದೆ; ಕರ್ನಾಟಕದ ಜನತೆಯ ಜೀವನದೃಷ್ಟಿಯೊಂದಿಗೆ ಈ ದೇಶೀ ಜ್ಞಾನ ಬೆರೆತಿರುತ್ತದೆ. ಆ ದೇಶೀ ಜ್ಞಾನ ಕೇವಲ ಅಕಡೆಮಿಕ್ ಆದದ್ದಲ್ಲ; ಅದು ಇಲ್ಲಿನ ಮನುಷ್ಯರ ದಿನನಿತ್ಯದ ಸಮಸ್ಯೆಗಳೊಂದಿಗೆ ಸೇರಿರುವಂಥದ್ದು ಎನ್ನುವುದನ್ನು ಎಂ.ಡಿ.ಎನ್. ತಿಳಿದಿದ್ದರು. ಅದಕ್ಕೆ ತನ್ನದೇ ಆದಂಥ ಮಾದರಿಯನ್ನು ರೂಪಿಸುವ ಪ್ರಯತ್ನವನ್ನು ಅವರು ಮಾಡಿದ್ದರು.’
ಜಾಗತೀಕರಣ, ಮಾರ್ಕೆಟ್ಟೀಕರಣ, ಪೇಟೆಂಟ್‌ಗಳಿಗೆ ಸಡ್ಡು ಹೊಡೆಯಲು ೨೦೦೦ನೆಯ ಇಸವಿಯ ಸುಮಾರಿಗೆ ಬೆಂಗಳೂರಿನ ಕಬ್ಬನ್‌ಪಾರ್ಕಿನಲ್ಲಿ ನಡೆದ ರೈತ ಸಮಾವೇಶ ನೆನಪಾಗುತ್ತದೆ: ಅವತ್ತು ಆಫ್ರಿಕಾದ ರೈತರು ತಮ್ಮ ದೇಶಿ ಬೀಜಗಳನ್ನು ಕರ್ನಾಟಕಕ್ಕೆ ಕಳಿಸಿದ್ದರು. ಆಫ್ರಿಕಾದ ಪ್ರತಿನಿಧಿಯ ಮೂಲಕ ಕರ್ನಾಟಕದ ರೈತರು ಅವತ್ತು ತಾವು ಕಾಪಾಡಿದ್ದ ದೇಶಿಬೀಜಗಳನ್ನು ಆಫ್ರಿಕದ ರೈತರಿಗೆ ಕಳಿಸಿಕೊಟ್ಟರು.
ರೈತಚಳುವಳಿ ಕರ್ನಾಟಕದ ಕೇಂದ್ರದಿಂದ ಜಾಗತಿಕ ಮಾರುಕಟ್ಟೆಯ ಆಕ್ಟೊಪಸ್ ಹಿಡಿತಕ್ಕೆ ಹಾಕಿದ ಈ ಕನ್ನಡ ಸವಾಲ್ ಕನ್ನಡಿಗರಲ್ಲಿ ಸದಾ ರೋಮಾಂಚನ ಉಂಟು ಮಾಡುತ್ತಿರಲಿ!
Comments
6 Comments
| Subramanyaswamy Swamy
ಕನ್ನಡ ನಾಡಿನ ಜನರಾದ ನಾವುಗಳು ಆಲೋಚನೆ ಮಾಡಿ ಸಾಗಬೇಕಾದ ಮುಂದಿನ ನಡೆ ಬದಲಾದರೆ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ. ಎಂ.ಡಿ.ಎನ್, ಲಂಕೇಶ್, ಮುಂತಾದವರ ವಿಚಾರಗಳಲ್ಲಿ ಕನ್ನಡದ ನಡೆ ಅದರ ಅಸ್ಮಿತೆ ಅಡಗಿದೆ .
| Nayana Gowda T
Still we have problems with many movement leaders. Actually women must get 50% reservation in all fields. The leaders turn a blind eye to this and are very cool about it. Having this in the background, the aspect of language does not count much for women.
| Madhavi Bhandari Kerekona
ಮಾರ್ಗಸೂಚಿ ಬರಹ.
| Kiran C N
ಚಳುವಳಿಗಳ ಭಾಷೆಯು ದುರ್ಬಲಗೊಳ್ಳುತ್ತಿರುವ ಬಗ್ಗೆ ನೀವು ತೋರಿರುವ ಕಾಳಜಿ ತುಂಬ ಗಮನಾರ್ಹವಾಗಿದೆ. ವಂದನೆಗಳು. ಆದರೆ ಚಳುವಳಿಗಳಿಗೇ ಗೆದ್ದಲು ಹತ್ತುತ್ತಿರುವಾಗ ಅವುಗಳ ಭಾಷೆಯ ಬಗೆಗಿನ ಕಾಳಜಿ ಅಸೂಕ್ಷ್ಮವಾದೀತೆ-ತಲೆಗಿಂತ ಹೆಚ್ಚಾಗಿ ಟೋಪಿ ಕುರಿತು ಚಿಂತಿಸಿದಂತೆ? ಚಳುವಳಿಗಳ ದುರುಪಯೋಗ, ಕುಂಟುವಿಕೆ, ಅಡ್ಡಹಾದಿ, ಅಸಮರ್ಥನೀಯ ವಿನಾಶ, ಅಧಿಕಾರ ಪ್ರಿಯತೆ, ಸರ್ಕಾರೀ ಒಲವು ಇನ್ನೂ ಹೆಚ್ಚಿನ ನೋವುಂಟುಮಾಡುತ್ತವೆ. ಈ ಪ್ರಕ್ರಿಯೆಗಳು ಎಲ್ಲ ಸಂಸ್ಥೆ, ಸಂಘಟನೆಗಳಲ್ಲೂ ಇರುವಂಥದು ಹಾಗೂ ಮನುಷ್ಯ ಸಹಜ ದೌರ್ಬಲ್ಯಗಳಿಂದ ಉಂಟಾಗುವಂಥವು. ಆದರೆ ಇದು ಕೇವಲ ದಮನಿತರ ದೌರ್ಬಲ್ಯ ಎಂಬಂತೆ ಕುಹಕಿಗಳು ಬಿಂಬಿಸುವುದು ಅಸಹ್ಯಕರ.
| ಡಾ. ಶಿವಲಿಂಗೇಗೌಡ ಡಿ.
ಕನ್ನಡ ಭಾಷೆಯನ್ನು ಕಟ್ಟಿದ ರೈತಚಳುವಳಿ , ದಲಿತ ಚಳುವಳಿ, ಮಹಿಳಾ ಚಳುವಳಿಗಳು ಹಾಗೂ ಕನ್ನಡದ ಲೇಖಕರ ಕ್ರಿಯಾಶೀಲ ಮತ್ತು ಕ್ರಾಂತಿಕಾರಕ ಪ್ರಯತ್ನಗಳನ್ನು ತಿಳಿಸುತ್ತಲೇ ಕನ್ನಡಿಗರ ಮುಂದೆ ಇರುವ ಕನ್ನಡ ಭಾಷೆ ಮತ್ತು ಜ್ಞಾನವನ್ನು ಕಟ್ಟುವ ಮತ್ತು ಬೆಳೆಸಿ ಉಳಿಸಿಕೊಳ್ಳು ಜವಾವ್ದಾರಿಗಳನ್ನು ಈ ಲೇಖನ ಎಚ್ಚರಿಸುತ್ತಿದೆ. ಧನ್ಯವಾದಗಳು ಸರ್
| ಡಾ. ನಿರಂಜನ ಮೂರ್ತಿ ಬಿ ಎಂ
ಭಿನ್ನ ಭಿನ್ನ ಚಳುವಳಿಗಳು ರೂಪಿಸಿದ ಕನ್ನಡ ಭಾಷೆಯು, ಕನ್ನಡ ನಾಡಿನ ಬದುಕನ್ನು ರೂಪಿಸುವ ಮಹತ್ತರ ಕೆಲಸವನ್ನು ಮಾಡುವ ಜೊತೆಗೆ, ಇಂದಿನ ದಿನಗಳಲ್ಲಿ ಅನ್ನ ನೀಡುವ ಭಾಷೆಯಾಗಿಯೂ ಬೆಳೆಯಬೇಕಾಗಿದೆ. ಈ ದಿಸೆಯಲ್ಲಿ, ಈ ನಾಡಿನ ಚಳುವಳಿಗಳು ಮತ್ತವುಗಳು ರೂಪಿಸಿದ ವಿಶಿಷ್ಟ ಕನ್ನಡ ಭಾಷೆಯನ್ನು ವಿಶ್ಲೇಷಿಸಿರುವ ಈ ಲೇಖನ ಮಾರ್ಮಿಕವಾಗಿದೆ. ಲೇಖಕರು ಬಳಸಿರುವ ಭಾಷೆ ಸೊಗಸಾಗಿದೆ. ವಿಶೇಷವಾಗಿ ಆರಂಭದ ಭಾಗದಲ್ಲಿ ಬಳಸಿರುವ ಹಾಸ್ಯಮಿಶ್ರಿತ- ಅರ್ಥಗರ್ಭಿತ ಕನ್ನಡವಂತೂ ಹೌದ್ಹೌದು ಎನ್ನುವ ಹಾಗಿದೆ. ಉದಾಹರಣೆಗೆ--'ನೂರು ಪೇಪರುಗಳನ್ನೆಲ್ಲ ನೋಡಿ ನೋಡಿ ಆಚೆ ನೂಕಿದ್ದರಿಂದ.... ಸುಸ್ತಾಗಿತ್ತು!' 'ಕನ್ನಡವೆನೆ ಹೌಹಾರುವುದೆನ್ನೆದೆ,'--ಮುಂತಾದವುಗಳು ಮತ್ತೆ ಮತ್ತೆ ಗಮನಿಸಬಹುದಾದಂತ ವಾಕ್ಯಗಳಾಗಿವೆ. ನಟರಾಜ್ ಹುಳಿಯಾರ್ ಅವರಿಗೆ ನಮನಗಳು.
Add Comment