ನಮ್ಮ ಬನವಾಸಿಯ ಬರ್ತ್‌ಡೇ
by Nataraj Huliyar
ದೇವನೂರ ಮಹಾದೇವರ ಬಗ್ಗೆ ಮಾತಾಡಬೇಕೆಂದು ಮೋಹನ್ ಮಿರ್ಲೆ, ಸಬಿತಾ ಬನ್ನಾಡಿ ಹೇಳಿದ ಆಸುಪಾಸಿನಲ್ಲೇ ಬಂದ ಒಂದು ಇ-ಮೇಲ್, ಇದೇ ಡಿಸೆಂಬರ್ ೨೯ಕ್ಕೆ 'ನಮ್ಮ ಬನವಾಸಿ’ ವೆಬ್‌ಸೈಟಿಗೆ ಹತ್ತು ವರ್ಷವಾಗಲಿದೆ ಎಂದು ನೆನಪಿಸಿತು. ಕನ್ನಡದ ಇಬ್ಬರು ದೊಡ್ಡ ಲೇಖಕರಿಗೆ 'ಬನವಾಸಿ’ ಅಂಟಿಕೊಂಡ ಸೋಜಿಗ ಮತ್ತೆ ಸುಳಿಯಿತು.
೧೯೭೦ರ ದಶಕದ ಒಂದು ಘಟ್ಟದಲ್ಲಿ ಹೆಚ್ಚುಕಡಿಮೆ ಒಂದೇ ಗುರಿ, ಒಂದೇ ಕಾಳಜಿ ಇದ್ದ ಇಬ್ಬರು ಕನ್ನಡ ಲೇಖಕರು ಹಲವರ ಜೊತೆಗೂಡಿ ದಲಿತ ಚಳುವಳಿಯನ್ನು ರೂಪಿಸುವುದರಲ್ಲಿ ತೊಡಗಿದ್ದರು. ಇಬ್ಬರ ಬರವಣಿಗೆ, ಭಾಷಣ, ಚಳುವಳಿ, ರಾಜಕಾರಣಗಳ ರೀತಿ ಬೇರೆ ಬೇರೆ. ಆದರೆ ಇಬ್ಬರ ಜೊತೆಗೂ ಆದಿಕವಿ ಪಂಪನ ಬನವಾಸಿ ಸೇರಿಕೊಂಡಿರುವುದು ಮಾತ್ರ ಕುತೂಹಲಕರ. ಕವಿ ಸಿದ್ಧಲಿಂಗಯ್ಯನವರ ಬೆಂಗಳೂರು ಮನೆಯ ಹೆಸರು ಬನವಾಸಿ. ಅವರ ಮನೆಯ ಹಜಾರದಲ್ಲಿ ಬನವಾಸಿಯ ಫೋಟೋ ಕೂಡ ಇದೆ. ದೇವನೂರು ತಮ್ಮ ತೋಟಕ್ಕೆ ಬನವಾಸಿ ಎಂಬ ಹೆಸರಿಡುವಾಗ ಪಂಪನ ಬನವಾಸಿಗಿಂತಲೂ 'ಬನವಾಸಿ’ ಮೆಟಫರ್ ಅವರ ತಲೆಯಲ್ಲಿತ್ತೇನೋ ಎಂಬುದು ನನ್ನ ಊಹೆ!
ದೇವನೂರ ಮಹಾದೇವರ ಮಾತಿರಲಿ, ಬರಹವಿರಲಿ, ಅವನ್ನೆಲ್ಲ ಮೆಟಫಾರಿಕಲ್ ಆಗಿ ಅಥವಾ ರೂಪಕನೋಟದಲ್ಲಿ ನೋಡಿದರೆ ಹಲವು ಸತ್ಯಗಳು ದಕ್ಕುತ್ತವೆ; ಅರ್ಥಗಳು ವಿಸ್ತಾರವಾಗುತ್ತವೆ. ಮಹದೇವರಿಗೆ ವೈಕಂ ಪ್ರಶಸ್ತಿ ಬಂದ ನೆಪದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ-ಅಧ್ಯಾಪಕಿಯರ ಜೊತೆ ದೇವನೂರರ ಸಾಹಿತ್ಯದ ಬಗ್ಗೆ ಮಾತಾಡಿದಾಗ, ಅವರ ಎಲ್ಲ ಬರಹಗಳ ರೂಪಕ ಗುಣಗಳನ್ನು ಚರ್ಚಿಸಿದೆ. ಅದನ್ನು ಒಪ್ಪುತ್ತಾ, ಅಧ್ಯಾಪಕ ಧನಂಜಯಮೂರ್ತಿ ದೇವನೂರರ ’ಎದೆಗೆ ಬಿದ್ದ ಅಕ್ಷರ’ದ ರೂಪಕಾತ್ಮಕ ಬಣ್ಣನೆಯನ್ನು ಓದಿಯೇಬಿಟ್ಟರು:
'ಗಾಂಧಿ ಕಾಠಿಣ್ಯದ ತಂದೆಯಂತೆ. ಜೆಪಿ ಅಸಹಾಯಕ ತಾಯಿ. ವಿನೋಬಾ ಮದುವೆಯಾಗದ ವ್ರತನಿಷ್ಠ ಅಕ್ಕನಂತೆ. ಲೋಹಿಯಾ ಊರೂರು ಅಲೆಯುವ, ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಯ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?’
ಆಳವಾದ ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ಅರಿವಿನಿಂದ ಹುಟ್ಟಿದ ಅರ್ಥಪೂರ್ಣ ಉಪಮೆ, ರೂಪಕಗಳಲ್ಲಿ ಚಿಮ್ಮುವ ಇಂಥ ಅಪೂರ್ವ ಒಳನೋಟಗಳು ದೇವನೂರರ ಬರಹಲೋಕದ ತುಂಬ ಇವೆ. ಇಂಥ ಸರ್ವಸ್ವೀಕಾರದ (ಇನ್ಕ್ಲೂಸಿವ್) ಸಮಾಜವಾದಿ ನೋಟಗಳ ಅವರ ಬರಹಲೋಕದಲ್ಲಿ ಸಮುದಾಯಗನ್ನಡಗಳು, ಸಮುದಾಯ ಜ್ಞಾನ, ಲೇಖಕನ ಕಾಲಕಾಲದ ಜ್ಞಾನೋದಯ, ಈ ಬರಹಗಳು ಹಬ್ಬಿಸಬಲ್ಲ ಆರೋಗ್ಯ, ಕಾಳಜಿ, ಸಂವೇದನೆ ಇವೆಲ್ಲವೂ ಇವೆ. ಅವರ ಬರಹಗಳನ್ನು ಕಾವ್ಯ ಓದುವಂತೆ ಹತ್ತಿರದಿಂದ ಓದಿದಾಗ ಕಾಣುವ ಸತ್ಯಗಳನ್ನೂ ಓದುಗ ಓದುಗಿಯರು ವ್ಯವಧಾನದಿಂದ ಅರಿಯುವ ಅಗತ್ಯವಿದೆ; ಟೀಚರುಗಳು ಇವನ್ನು ವಿವರಿಸಿ, ವಿಸ್ತರಿಸಿ ಮಕ್ಕಳಿಗೆ ಮುಟ್ಟಿಸುವ ಕೆಲಸವೂ ಇದೆ. ಇದು ತಲೆತಲೆಮಾರುಗಳು ದೊಡ್ಡ ಲೇಖಕರನ್ನು ಮುಂದೊಯ್ಯವ ರೀತಿ ಕೂಡ.
ದೇವನೂರರಿಗೆ ವೈಕಂ ಪ್ರಶಸ್ತಿ ಬಂದಾಗ, ಗೆಳೆಯರು ವೈಕಂ ಸತ್ಯಾಗ್ರಹ, ಪೆರಿಯಾರ್, ಗಾಂಧೀಜಿ… ಎಲ್ಲವನ್ನೂ ನೆನೆದಿದ್ದರು. ಅಂಬೇಡ್ಕರ್ ವೈಕಂ ಸತ್ಯಾಗ್ರಹದ ಬಗ್ಗೆ ಮಾತಾಡಿದ್ದು ನೆನಪಾಗಿ, ವಿವರಗಳನ್ನು ಹುಡುಕಿದೆ:
ಆಗ ಬಾಂಬೆಯಲ್ಲಿದ್ದ ಅಂಬೇಡ್ಕರ್ ವೈಕಂ ಸತ್ಯಾಗ್ರಹದ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಬೆಳಗಾವಿಯ ನಿಪ್ಪಾಣಿಯಲ್ಲಿ ೨೫ ಏಪ್ರಿಲ್ ೧೯೨೫ರಂದು ಮಾಡಿದ ಭಾಷಣದಲ್ಲಿ ಅಂಬೇಡ್ಕರ್ ವೈಕಂ ಸತ್ಯಾಗ್ರಹ 'ವಿಫಲ’ ಎನ್ನುತ್ತಾ, 'ಹಿಂದೂ- ಮುಸ್ಲಿಂ ಏಕತೆ, ಖಾದಿ ಪ್ರಚಾರಗಳಿಗೆ ಕೊಡುತ್ತಿರುವ ಮಹತ್ವವನ್ನು ಗಾಂಧಿ ಅಸ್ಪೃಶ್ಯತೆಯ ನಿವಾರಣೆಗೆ ಕೊಡುತ್ತಿಲ್ಲ’ ಎಂದು ಟೀಕಿಸಿದರು; ಅದರ ಜೊತೆಗೇ, 'ಸಾಮಾಜಿಕ ಅನ್ಯಾಯವನ್ನು ತೊಡೆಯುವುದು ಅತ್ಯಂತ ಮುಖ್ಯ ಕೆಲಸ ಹಾಗೂ ಈ ಕೆಲಸವನ್ನು ಪ್ರತಿಯೊಬ್ಬ ಭಾರತೀಯನೂ ಪವಿತ್ರ ಕರ್ತವ್ಯದಂತೆ ಕೈಗೆತ್ತಿಕೊಳ್ಳುವಂತೆ ಈ ದೇಶದಲ್ಲಿ ಹೇಳಿದ ಮೊದಲ ವ್ಯಕ್ತಿ ಅವರು’ ಎಂದು ಮೆಚ್ಚುತ್ತಾ ಅಂಬೇಡ್ಕರ್ ಹೇಳಿದರು: ’ಯಾರೂ ನಮ್ಮ ಹತ್ತಿರ ಕೂಡ ಬರದಿದ್ದಾಗ ಮಹಾತ್ಮ ಗಾಂಧಿ ತೋರಿಸಿದ ಅನುಕಂಪ ಸಣ್ಣ ಸಂಗತಿಯಲ್ಲ.’
ಆ ಕಾಲದಲ್ಲಿ ಸ್ವಾತಂತ್ರ‍್ಯ ಚಳುವಳಿ ಭಾರತದ ಸಾಮಾಜಿಕ ಪ್ರಶ್ನೆಗಳಿಗೆ ಒತ್ತು ಕೊಡಬೇಕೋ, ರಾಜಕೀಯ ಪ್ರಶ್ನೆಗಳಿಗೆ ಒತ್ತು ಕೊಡಬೇಕೋ ಎಂಬ ಚರ್ಚೆ ಕಾಂಗ್ರೆಸ್ಸಿನೊಳಗೆ ನಡೆಯುತ್ತಿತ್ತು. ರಾನಡೆ, 'ಸಮಾಜ ಸುಧಾರಣೆ ಮೊದಲು’ ಅಂದರೆ, ತಿಲಕ್, 'ರಾಜಕೀಯ ಸ್ವಾತಂತ್ರ‍್ಯ ಮೊದಲು’ ಎಂದು ವಾದಿಸಿದ್ದರು. ಗಾಂಧೀಜಿ ಬಂದ ಮೇಲೆ ಸಾಮಾಜಿಕ ಬದಲಾವಣೆಯ ಒತ್ತು ಹೆಚ್ಚಾಯಿತು. ಅಂಬೇಡ್ಕರ್ ವೈಕಂ ಸತ್ಯಾಗ್ರಹದ ವಿಫಲತೆಯ ಬಗ್ಗೆ ಮಾತಾಡುತ್ತಿದ್ದಾಗ, ರಾಜಕೀಯ ಬದಲಾವಣೆಗಿಂತ ಮೊದಲು ಸಾಮಾಜಿಕ ಬದಲಾವಣೆಯಾಗಬೇಕು ಎಂದು ಸೂಚಿಸುತ್ತಿದ್ದರು.
ಗಾಂಧೀ ನಂತರದ ಕಾಲದಲ್ಲಿ, ಮುಖ್ಯವಾಗಿ ಅಂಬೇಡ್ಕರ್, ಲೋಹಿಯಾ, ಗಾಂಧಿ ಬೆರೆತ ಸ್ವತಂತ್ರ ಭಾರತದಲ್ಲಿ ಕಣ್ಣು ಬಿಟ್ಟ ದೇವನೂರ ಮಹಾದೇವ ಈ ಮೂವರಂತೆ ಸಾಮಾಜಿಕ ಬದಲಾವಣೆ ಮೊದಲು ಎಂದು ಆರಂಭದಲ್ಲಿ ಹೊರಟಂತಿದೆ. ಮುಂದೆ ಅಂಬೇಡ್ಕರ್ ತಮ್ಮ ಸಾಮಾಜಿಕ ಬದಲಾವಣೆಯ ಚಿಂತನೆ-ಹೋರಾಟಕ್ಕೆ ಪೂರಕವಾಗಿ ರಾಜಕೀಯ ಪಕ್ಷ ಮಾಡಬೇಕೆಂದು ಹೊರಟರು. ನಿಷ್ಕರುಣಿ ಕಾಲ ಅದಕ್ಕೆ ಅವಕಾಶ ಕೊಡಲಿಲ್ಲ. ಆದರೆ ಎಪ್ಪತ್ತರ ದಶಕದ ಕಾಲದ ಒತ್ತಾಯದಂತೆ ದಲಿತ ಚಳುವಳಿಯ ಜೊತೆಗೆ ನಡೆದ ಲೇಖಕ ಮಹಾದೇವ ಇಪ್ಪತ್ತೊಂದನೆಯ ಶತಮಾನದಲ್ಲಿ 'ಸರ್ವೋದಯ ಕರ್ನಾಟಕ’ ರಾಜಕೀಯ ಪಕ್ಷದ ಅಧ್ಯಕ್ಷರಾದರು. ಇವೆಲ್ಲವೂ ಕಾಲದ ವಿದ್ಯಮಾನಗಳ ಒತ್ತಡಗಳು ಗಂಭೀರವಾದ ವ್ಯಕ್ತಿತ್ವವೊಂದನ್ನು ರೂಪಿಸುವ ರೀತಿಯನ್ನು ಸೂಚಿಸುತ್ತವೆ. ಲಂಕೇಶ್, ತೇಜಸ್ವಿ ಥರದ ಬರಹಗಾರರಿಗಿಂತ ಹೆಚ್ಚಿನ ರೀತಿಯಲ್ಲಿ ಕಾಲದ ಒತ್ತಡ, ವಿದ್ಯಮಾನಗಳು ಮಹಾದೇವರನ್ನು ರೂಪಿಸಿ, ಅವರ ಮೇಲೆ ಸಮಾಜದ ಜವಾಬ್ದಾರಿಗಳನ್ನು ಹೊರಿಸಿದಂತಿದೆ. ದಲಿತ ಸಮುದಾಯದ ಸ್ಥಿತಿಗತಿಗಳ ಬದಲಾವಣೆಯ ತೀವ್ರ ವೈಯಕ್ತಿಕ ತುಡಿತವೂ ಅದರೊಡನೆ ಸೇರಿಕೊಂಡಿದೆ.
ಇಷ್ಟಾಗಿಯೂ, ತಾವು ಭಾಗಿಯಾದ ಚಳುವಳಿ, ಬರವಣಿಗೆ, ರಾಜಕಾರಣ, ಮಾತು ಇವೆಲ್ಲವನ್ನೂ ಮಹಾದೇವ ತಮ್ಮ ಆಳದಲ್ಲಿ ಒಪ್ಪಿಯೇ ಮಾಡಿದಂತಿದೆ; ತಮ್ಮ ನೈತಿಕ ನೋಟ, ನಿಲುವು ಏನೆಂಬುದನ್ನು ಹುಡುಕಿಕೊಂಡು, ವಿವರಿಸಿಕೊಂಡೇ ಮುನ್ನಡೆದಂತಿದೆ; ಸೂಕ್ಷ್ಮ, ಆತ್ಮಪರೀಕ್ಷೆಯ ಲೇಖಕನಾಗಿಯೇ ಉಳಿದೆಲ್ಲದರಲ್ಲೂ ತೊಡಗುವ ತುಡಿತ ಅವರ ವ್ಯಕ್ತಿತ್ವವನ್ನು ರೂಪಿಸಿದಂತಿದೆ. 'ಕುಸುಮಬಾಲೆ’ಯ ಚನ್ನನ ಅಪ್ಪನಂತೆ 'ನಮ್ಮ ಕ್ರಿಯಾ ಒಂದು ಸುದ್ದ ಇದ್ರ…’ ಎಂದು, ತಮ್ಮ ಕ್ರಿಯೆಗಳು ’ಇಂದಲ್ಲ ನಾಳೆ ಫಲ ಕೊಡುವು’ದನ್ನು ಕಾಯತ್ತಲೂ ಅವರು ಹೊರಟಂತಿದೆ. ಈ ಎಲ್ಲ ಕ್ರಿಯೆಗಳ ಸೂಕ್ಷ್ಮತೆಗೆ ಅವರ ಲೇಖಕವ್ಯಕ್ತಿತ್ವ ಕೊಟ್ಟ ಕೊಡುಗೆಯನ್ನು ಇವತ್ತು ಬರೆಯಬಯಸುವ ಎಲ್ಲರೂ ಆಳವಾಗಿ ಧ್ಯಾನಿಸಿ ಅರಿಯಬೇಕಾಗಿದೆ. ಮಹಾದೇವ ಬರೆಯಲಿ, ಬರೆಯದಿರಲಿ, ಅವರ ಎಲ್ಲ ಸಾರ್ವಜನಿಕ ಕ್ರಿಯೆ, ಚಿಂತನೆಗಳೂ ಅವರ ಸೂಕ್ಷ್ಮ ಲೇಖಕವ್ಯಕ್ತಿತ್ವದ ವಿಸ್ತರಣೆಯಂತೆಯೇ ಇವೆ.
ಇವೆಲ್ಲವನ್ನೂ ನೆನೆಯುತ್ತಲೇ ಹತ್ತು ತುಂಬಿದ 'ನಮ್ಮ ಬನವಾಸಿ’ ವೆಬ್‌ಸೈಟ್ ನೋಡಿದರೆ, ಅಲ್ಲಿ ಹದಿಹರೆಯದಲ್ಲಿ ಲೈಬ್ರರಿಯೊಂದರಲ್ಲಿ ನನ್ನ ಕೈಗೆ ಸಿಕ್ಕ 'ದ್ಯಾವನೂರು’ ಕಥಾ ಸಂಕಲನದ ಕಂದು ಬಣ್ಣದ ಕವರ್ ಪೇಜ್, ಅದರ ಮೇಲಿದ್ದ ಕೈ ಬರಹ ಕಂಡು ಪುಳಕ ಹುಟ್ಟಿತು. 'ಖಂಡವಿದು ಕೋ ಮಾಂಸವಿದು ಕೋ’ ಎಂಬ ಗೋವಿನ ಹಾಡಿನ ಸಾಲು ಪುಸ್ತಕದ ಮುಖಪುಟದಲ್ಲಿದ್ದುದು ನೆನಪಾಯಿತು. ಕತೆ ಬರೆಯಲು ಕಾತರಿಸುತ್ತಿದ್ದ ನನಗೆ ಈ ಪುಸ್ತಕ ಹಳ್ಳಿ ಲೋಕ, ದಲಿತ ಲೋಕ ಎಂದರೇನೆಂಬುದನ್ನು ಕಲಿಸತೊಡಗಿತು. 'ದತ್ತ’ ಕತೆಯ ಹುಡುಗನ ಪರಕೀಯತೆ, ಕತೆಯ ವಾತಾವರಣ ಇವತ್ತಿಗೂ ನನ್ನಲ್ಲಿ ಉಳಿದುಬಿಟ್ಟಿವೆ. ಅದೇ ಕಾಲದಲ್ಲಿ ಆಲ್ಬರ್ಟ್ ಕಮೂನ 'ದ ಔಟ್‌ಸೈಡರ್’ ಕಾದಂಬರಿಯ ಕನ್ನಡಾನುವಾದ 'ಅನ್ಯ’ದಲ್ಲಿ (ಅನುವಾದ: ಡಿ.ಎ. ಶಂಕರ್) ಕಂಡಿದ್ದ ಪರಕೀಯ ಭಾವವೂ ಇದರೊಡನೆ ಸೇರಿಕೊಂಡಂತಿದೆ.
ಹತ್ತಿರ ಹತ್ತಿರ ಸಾವಿರ ಪುಟಗಳಷ್ಟು ಬರವಣಿಗೆ, ಮಾತು, ಸ್ಪಂದನ, ಕ್ರಿಯೆಗಳ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ಸುಮಾರು ಐವತ್ತು ವರ್ಷಗಳಿಂದ ಪ್ರಖರ ಹಾಜರಿಯುಳ್ಳ ದೇವನೂರ ಮಹಾದೇವರ ಲೋಕಕ್ಕೆ 'ನಮ್ಮ ಬನವಾಸಿ’ ಎಂಬ ಕಲಾತ್ಮಕ-ಪ್ರೊಫೆಶನಲ್ ವೆಬ್‌ಸೈಟ್ ಮುದ ನೀಡುವ, ದಕ್ಷವಾದ ಕನ್ನಡಿಯಾಗಿದೆ; ಇದು ದೊಡ್ಡ ಲೇಖಕನೊಬ್ಬನಿಗೆ ನಾಡವರು, ಸಂಗಾತಿಗಳು ಸಲ್ಲಿಸಲೇಬೇಕಾದ ಕೃತಜ್ಞತೆಯಂತೆ, ಅಕ್ಕರೆಯ ಕೊಡುಗೆಯಂತೆ, ಕರ್ತವ್ಯದಂತೆಯೂ ಇದೆ. 'ನಮ್ಮ ಬನವಾಸಿ’ಯಲ್ಲಿರುವ ಒಂಬತ್ತು ವಿಭಾಗಗಳಲ್ಲಿ ಮಹಾದೇವಲೋಕದ ಬಹುತೇಕ ದಾಖಲೆಗಳ ಜೊತೆಗೆ, ಅವರ ಸಂವೇದನೆಗೆ ಹತ್ತಿರವಿರುವ ಹತ್ತಾರು ಲೇಖಕ, ಲೇಖಕಿಯರ ಬರಹಗಳ 'ಸಹಪಯಣ’ವೂ ಇದೆ. ಕನ್ನಡ ಓದುಗ, ಓದುಗಿಯರು, ಬೋಧನಾವಲಯ, ರಿಸರ್ಚ್ ವಲಯ ಮತ್ತೆ ಮತ್ತೆ ಭೇಟಿ ಕೊಟ್ಟು ಬಳಸಿಕೊಳ್ಳಬೇಕಾದ ಜಾಲತಾಣ ಇದು.
ಈ ವೆಬ್‌ಸೈಟ್ ನಡೆಸುವ ಬನವಾಸಿಗರು ಬರೆಯುತ್ತಾರೆ: 'ನಮ್ಮ ಬನವಾಸಿ ಎಂಬ ದೇವನೂರ ಮಹಾದೇವ ಅವರ ಕುರಿತ ಈ ಜಾಲತಾಣ ಕುವೆಂಪು ಜನ್ಮದಿನವಾದ ೨೯.೧೨.೨೦೧೪ರಂದು ಆರಂಭವಾಯಿತು… ಪೂರ್ವಗ್ರಹ ಮತ್ತು ವೈಭವೀಕರಣವಿಲ್ಲದೆ, ಅವರ ಚಿಂತನೆ, ಮನಸು, ಧಾರಣಶಕ್ತಿಯನ್ನು ಯಥಾವತ್ತಾಗಿ ದಾಖಲಿಸುವುದನ್ನು ಕೇಂದ್ರೀಕರಿಸಿ ಈ ಜಾಲತಾಣ ಮುಂದುವರೆಯುತ್ತಿದೆ.’ ಜೊತೆಗೊಂದು ಬಿನ್ನಹವೂ ಇದೆ: 'ಮಹಾದೇವರ ಕುರಿತು ನಿಮ್ಮಲ್ಲಿ ಇರಬಹುದಾದ ವಿಶೇಷವಾದುದನ್ನು ಪ್ರೀತಿಯಿಂದ ನೀಡಿದರೆ ನಮ್ಮ ಬನವಾಸಿಯ (http://www.nammabanavasi.com) ಮೌಲ್ಯ ಹೆಚ್ಚುತ್ತದೆ…ನಾವೆಲ್ಲರೂ ಸೇರಿ ಅದರ ಸೊಬಗನ್ನು ಹೆಚ್ಚಿಸೋಣವೆಂದು ಮನವಿ ಮಾಡುತ್ತಿದ್ದೇವೆ.’
ಇದೆಲ್ಲವನ್ನೂ ಬರೆಯುವಾಗ ಹಿಂದೊಮ್ಮೆ ಪ್ರಜಾವಾಣಿಯ 'ಕನ್ನಡಿ’ ಅಂಕಣದಲ್ಲಿ ಬರೆದ ಮಾತೊಂದನ್ನು ಮತ್ತೆ ಇಲ್ಲಿ ಕಾಣಿಸಬೇಕೆನ್ನಿಸಿತು: 'ಕಿ.ರಂ. ನಾಗರಾಜ್ ಹಾಗೂ ಮಹಾದೇವರನ್ನು ನೋಡಿದಾಗ ಗಾಂಧೀಜಿ ಇಲ್ಲೇ ಎಲ್ಲೋ ನಡೆದಾಡಿದಂತೆ ಅನ್ನಿಸುತ್ತದೆ.’ ಅವತ್ತು ಈ ಮಾತನ್ನು ಗಮನಿಸಿದ್ದ ದೇವನೂರ್, 'ಒಂಚೂರು ಓವರ್ ಆಯಿತು… ಆ…ಆ…’ ಎಂದಿದ್ದರು. ನಂತರ ನನ್ನ ’ಕನ್ನಡಿ’ ಅಂಕಣ ಬರಹಗಳ ಪುಸ್ತಕವನ್ನು 'ಕನ್ನಡ ಬರವಣಿಗೆಯ ದಿಕ್ಕನ್ನು ಬದಲಿಸಿದ ಅನನ್ಯ ಲೇಖಕ-ಚಿಂತಕ-ನಾಯಕ ದೇವನೂರ ಮಹಾದೇವ ಅವರಿಗೆ’ ಅರ್ಪಣೆ ಮಾಡಿದ್ದೆ. ಅದಕ್ಕೆ ದೇವನೂರ್ ಪ್ರತಿಕ್ರಿಯೆ ಏನು ಎಂಬುದು ತಿಳಿಯಲಿಲ್ಲ. ಈ ಬಣ್ಣನೆಯನ್ನು ಅವರು ಥಣ್ಣಗೆ ಒಪ್ಪಿಕೊಂಡಿರಲೂಬಹುದು ಎಂದು ಊಹಿಸುವೆ! ಜೊತೆಗೆ, ದೇವನೂರ ಮಹಾದೇವರನ್ನು ಬಲ್ಲ ಬಹುತೇಕ ಸೂಕ್ಷ್ಮಜ್ಞರು ಹಾಗೂ ಈಗಾಗಲೇ ಹದಿನೈದು ಲಕ್ಷ ಜನ ಭೇಟಿ ಕೊಟ್ಟಿರುವ 'ನಮ್ಮ ಬನವಾಸಿ’ ವೆಬ್‌ಸೈಟ್ ನೋಡುಗರಲ್ಲಿ ಹಲವು ಸಾವಿರ ಜನರಾದರೂ ಈ ಎರಡೂ ಮಾತನ್ನು ಒಪ್ಪುವರೆಂದು ನಂಬುವೆ!
Comments
19 Comments
| ಮಂಜುನಾಥ್ ಸಿ ನೆಟ್ಕಲ್
ದಶಕ ದಾಟಿದ ಬನವಾಸಿ.... ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಾ, ದೇವನೂರು ಮಹಾದೇವ ಅವರ ಪ್ರಖರ ಪ್ರಾಮಾಣಿಕತೆ ಮತ್ತು ನಾಡು ನುಡಿಯ ಕುರಿತಾದ ನಿಸ್ವಾರ್ಥ ಕಾಳಜಿಯನ್ನು ಎಲ್ಲರಿಗೂ ಹಂಚುತ್ತಾ ಸಾಗಲಿ ಎಂದು ಹಾರೈಸುತ್ತೇನೆ.
| B Mahesh Harave
ಧನ್ಯವಾದಗಳು ಅಣ್ಣ
| sanganagouda
ಬನವಾಸಿ ವೆಬ್ಸೈಟ್ ಅನ್ನು ನಾನು ತುಂಬಾ ದಿನದಿಂದ ಫಾಲೋ ಮಾಡುತ್ತಿರುವೆ ಸರ್. ನಿಮ್ಮೀ ಲೇಖನದಿಂದ ಆ ವೆಬ್ಸೈಟ್ ನ ಮತ್ತಷ್ಟು ಮೆರಗು ಹೆಚ್ಚಾಯಿತು
| GANGADHAR
ತಮ್ಮ ಅಪೂರ್ವ ಗ್ರಹಿಕೆಗೆ ಮನಸೋತೆ. ಖಂಡವಿದೆಕೋ ಮಾಂಸವಿದೆಕೋ.. ಎಂಬ ತಮ್ಮ ಮೊದಲ ಕೃತಿಯ ರೂಪಕದ ನುಡಿಯೊಡನೆ ಇಂದಿಗೂ ನಮ್ಮೆಲ್ಲರ ಒಳಗಿನ ಮಾನವತ್ವವನ್ನು ಬಡಿದೆಬ್ಬಿಸುವ ಸಾಹಿತಿ ದೇವನೂರ ಮಹದೇವರು.
| Subramanya Swamy
ಬನವಾಸಿಯ ಪಯಣವನ್ನು ಮನಮುಟ್ಟುವಂತೆ ಅತ್ಯಂತ ಚೆನ್ನಾಗಿ ಕಟ್ಟಿಕೊಟ್ಟ ಡಾ. ನಟರಾಜ್ ಹುಳಿಯಾರ್ ಸಾರ್ ಗೆ ಧನ್ಯವಾದಗಳು. ದಶಕದ ಹಿಂದೆ ಈ ರೀತಿಯ ವೆಬ್ ತಾಣಗಳು ಕನ್ನಡದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದ್ದವು. ಬನವಾಸಿಯ ಬಂಧುತ್ವ ಆಲದ ಮರದಂತೆ ಹಬ್ಬಲಿ ಎಂದು ಹಾರೈಸುತ್ತೇನೆ ಮಹಾದೇವ, ಸಿದ್ದಲಿಂಗಯ್ಯ ನವರ ಕಾಳಜಿ ಅಪಾರ.. ಕನ್ನಡದ ಅಸ್ಮಿತೆಯನ್ನು ಡಿಜಿಟಲ್ ಲೋಕಕ್ಕೆ ಅನಾವರಣ ಮಾಡುವ ಮೂಲಕ ಬನವಾಸಿ ಬಳಗದ ಶ್ರಮ ಅಪಾರ.\r\n\r\n\r\n\r\n
| Mahadeva Bharani
ನಮ್ಮ ಬನವಾಸಿಯವರಿಗೆ ಶುಭ ಕೋರುವೆ
| Aiyasha
ನಮ್ಮ ಗುರುಗಳ ತಲೆಯಲ್ಲಿ ಇಷ್ಟೆಲ್ಲಾ ವಿಚಾರಗಳು ಇವೆ ಎಲ್ಲಾ ಎಂದು ಖುಷಿಯಾಯಿತು.
| Kallaiah
ಒಳ್ಳೆಯ ಬರಹ. ಧನ್ಯವಾದಗಳು
| ಶಿವಪ್ರಕಾಶ ಡಿ.ಆರ್.
ದೇವನೂರು ಅವರದು ವಿಶಿಷ್ಟ ಪ್ರತಿಭೆ.
| ಅನಿಲ್ ಗುನ್ನಾಪುರ
ಬರಹ ಇಷ್ಟವಾಯಿತು. ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವೆ
| ಉದಯಕುಮಾರ್ ಹಬ್ಬು
ನಾನು ಹಲವು ವರ್ಷಗಳ ಹಿಂದೆ \"ದೇವನೂರು ಮಹಾದೇವರ ಸಣ್ಣ ಕಥೆಗಳು ಮತ್ತು ಕಾದಂಬರಿಗಳು- ಒಂದು ಅವಲೋಕನ\" ಪುಸ್ತಕ ಪ್ರಕಟಿಸಿದ್ದೆ. ಅದು ಕೃತಿಗಳ ಪ್ಯಾರಾಫ್ರೆಸ್ ಇದ್ದಂತಿದೆ. ದೇವನೂರು ಅವರಿಗೆ ಆ ಕುರಿತು ಸಂತೋಷವಾಗಿತ್ತು ಮತ್ತು ನನಗೆ ಫೋನ್ ಮಾಡಿದ್ದರು. ದೇವನೂರರನ್ನು ಗಾಂಧಿ ಅನುಯಾಯಿ ಎನ್ನಬಹುದೇನೋ. ತೀರ ಅಂಬೇಡ್ಕರ್ ವಾದಿ ಅಂತ ನನಗನಿಸೋಲ್ಲ. ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಸ್ಪ್ರಶ್ಯತೆಯ ಅನುಭವ, ಅವಮಾನ ನಿಜಕ್ಕೂ ವೇದನೆಯ ಸಂಗತಿಗಳೇ ಹೌದು. ಅದೇ ಬಗೆಯ ಅನುಭವಕ್ಕೆ ದೇವನೂರು ಪಕ್ಕಾದರೂ ಅವರು ಅಂಬೇಡ್ಕರ್ ಅವರಷ್ಟು ತೀವ್ರವಾದಿಗಳಲ್ಲ ಅಂತ ನನ್ನ ಅನಿಸಿಕೆ.\r\nಉದಯಕುಮಾರ ಹಬ್ಬು\r\n
| Dr.Ramaiah
ಸರ್, ಮತ್ತೆ ಮತ್ತೆ ಓದು ಎಂದು ಪ್ರೇರೇಪಿಸಿದ ಲೇಖನ. ಧನ್ಯವಾದಗಳು.
| ಡಾ. ನಿರಂಜನ ಮೂರ್ತಿ ಬಿ ಎಂ
ಬನವಾಸಿಯ ಹುಟ್ಟುಹಬ್ಬದ ಅಂಗವಾಗಿ ಇಬ್ಬರು ಕನ್ನಡ ಲೇಖಕರ ಬಗ್ಗೆ ಮಹತ್ವಪೂರ್ಣವಾದ ವಿಶ್ಲೇಷಣೆ ನೀಡಿದ್ದೀರಿ. ಅದರಲ್ಲೂ ದೇವನೂರ ಮಹಾದೇವರ ಸಮಗ್ರ ವ್ಯಕ್ತಿಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು. ಇದೇ ರೀತಿಯಲ್ಲಿ ಸಿದ್ದಲಿಂಗಯ್ಯನವರ ಸಮಗ್ರ ವ್ಯಕ್ತಿತ್ವದ ಬಗ್ಗೆಯೂ ಮುಂದಿನ ದಿನಗಳಲ್ಲಿ ಬರೆಯಬಹುದಲ್ಲವೆ?
| Nataraj Huliyar Replies to Niranjan
Thanks Niranjan. Will write on an occasion. I have written full length articles on Dr. Siddalingaih in EPW and MAYURA.\r\n\r\nWatch \"Interview with Dr.Siddalingaiah, Poet, Playwright | DD Chandana\" on YouTube\r\nhttps://youtu.be/eAeaEoGbV0g?si=qCm4fccqXLI6yyKv
| K j suresh
ಮತ್ತೊಮ್ಮೆ ನೆನಪಿಸಿದ ನಿಮಗೆ ಧನ್ಯವಾದಗಳು
| ನಟರಾಜ್ ಹುಳಿಯಾರ್ ಉತ್ತರ
\r\nದೂರದರ್ಶನದಲ್ಲಿ ಬಿತ್ತರಗೊಂಡ ಡಾ.ಸಿದ್ದಲಿಂಗಯ್ಯನವರ ಜೊತೆಗಿನ ಸಂದರ್ಶನದ ಲಿಂಕ್.\r\n\r\nhttps://youtu.be/eAeaEoGbV0g?si=QQ3qgk1rab0I65LC
| ಜಿ.ಎನ್.ಧನಂಜಯ ಮೂರ್ತಿ
ಕನ್ನಡ ನಾಡು ದಕ್ಕಿಸಿಕೊಂಡ ಸದಾಕಾಲದ ಎಚ್ಚರ ನಮ್ಮ ಬನವಾಸಿ ಅರ್ಥಾತ್ \"ದ್ಯಾವನೂರು\" ಮಾತುಗಳೆಲ್ಲವೂ ರೂಪಕಗಳಾಗುವ ಆ ಬೆರಗು ಸೋಜಿಗ ಹುಟ್ಟಿಸುತ್ತದೆ. ಶರಣರ ನುಡಿದರೆ ಮುತ್ತಿನ ಹಾರದಂತಿರಬೇಕೆಂಬ ಫಿಲಾಸಫಿ ಅರ್ಥವಾಗಬೇಕೆಂದರೆ ದೇವನೂರರ ಮಾತುಗಳನ್ನು ಮೈಯೆಲ್ಲ ಕಣ್ಣಾಗಿ ಕೇಳಿಸಿಕೊಳ್ಳಬೇಕು. ಬಹುಶ್ಃ ಆ ವಚನದ ತಾತ್ವಿಕ ಆಶಯ ದೇವನೂರರ ಬದುಕಿನಲ್ಲಿ ಸಾರ್ಥಕಗೊಂಡಿದೆ. \r\n\r\nಇಡೀ ಕನ್ನಡ ಸಾಹಿತ್ಯದ ದಿಕ್ಕು ದೆಸೆಯನ್ನು ಮಾಡಿಕೊಳ್ಳಬಯಸುವವರು \'ಎದೆಗೆ ಬಿದ್ದ ಅಕ್ಷರ \' ಓದಬೇಕು. (ಇದರ ಜೊತೆಗೆ ನಾನು ಜಿ.ರಾಜಶೇಖರ್ ಅವರ \'ಬಹುವಚನ ಭಾರತವನ್ನೂ ಸೇರಿಸುತ್ತೇನೆ.) ಇಲ್ಲವಾದರೆ ಕನ್ನಡ ಸಾಹಿತ್ಯ \"ಕ್ಯಾಬಿನೈ\" ಆಗುತ್ತದೆ.
| Appagere Somashekar
ಸಂವೇದನಾಶೀಲ ಬರಹ ಸರ್, ಧನ್ಯವಾದಗಳು. \r\n\r\nಮೇಷ್ಟ್ರು ಡಾ. ಸಿದ್ಧಲಿಂಗಯ್ಯ ಅವರ ಮನೆಗೆ \"ಬನವಾಸಿ\" ಎಂಬ ಹೆಸರಿರುವುದು ಗೊತ್ತಿದ್ದ ನನಗೆ, ದೇವನೂರ ಸರ್ ಅವರ ತೋಟಕ್ಕೆ ಈ ಹೆಸರಿರುವುದು ಗೊತ್ತಿರಲಿಲ್ಲ. ಒಮ್ಮೆ ನಾನು, ಡಾ. ಎಸ್. ನರೇಂದ್ರಕುಮಾರ್ ಮಲ್ಲಿಗಹಳ್ಳಿ ಅವರ ಜೊತೆ ದೇವನೂರ ಸರ್ ಅವರ ತೋಟಕ್ಕೆ ಹೋದಾಗ, ತೋಟದ ಗೇಟನ ನಾಮಫಲಕದಲ್ಲಿ \"ಬನವಾಸಿ\" ಹೆಸರು ನೋಡಿ ತುಂಬಾ ಸಂತೋಷ, ಆಶ್ಚರ್ಯವಾಗಿ, ತಕ್ಷಣ ಮೇಷ್ಟ್ರು ಡಾ. ಸಿದ್ಧಲಿಂಗಯ್ಯ ಅವರಿಗೆ ಫೋನ್ ಮಾಡಿ ವಿಷಯ ಹೇಳಿದೆ. ಸಂತೋಷದಿಂದ ಕವಿಗಳು, \"ಹೌದಾ, ಬಹಳ ಸಂತೋಷ. ಮುಂದೊಮ್ಮೆ ತೋಟಕ್ಕೆ ಹೋಗೋಣ ನಾನು ಬರುತ್ತೇನೆ\" ಎಂದು ಹೇಳಿದ ಮಾತು ನನ್ನೊಳಗೆ ಇಂದಿಗೂ ಜೀವಂತವಾಗಿದೆ.\r\n\r\nಮಹಾಕವಿ ಪಂಪ ಹೇಳಿದ \"ಮನುಷ್ಯ ಜಾತಿ ತಾನೊಂದೆ ವಲಂ\" ಸಾಲನ್ನು ಹೀಗೆ ಓದಿ ಕೊಳ್ಳಬಹುದ ಸರ್,\r\n\r\n\"ದೇವನೂರು ಕವಿ ಒಂದೇ ವಲಂ\"
| Appagere Somashekar
ಸಂವೇದನಾಶೀಲ ಬರಹ ಸರ್, ಧನ್ಯವಾದಗಳು. \r\n\r\nಮೇಷ್ಟ್ರು ಡಾ. ಸಿದ್ಧಲಿಂಗಯ್ಯ ಅವರ ಮನೆಗೆ \"ಬನವಾಸಿ\" ಎಂಬ ಹೆಸರಿರುವುದು ಗೊತ್ತಿದ್ದ ನನಗೆ, ದೇವನೂರ ಸರ್ ಅವರ ತೋಟಕ್ಕೆ ಈ ಹೆಸರಿರುವುದು ಗೊತ್ತಿರಲಿಲ್ಲ. ಒಮ್ಮೆ ನಾನು, ಡಾ. ಎಸ್. ನರೇಂದ್ರಕುಮಾರ್ ಮಲ್ಲಿಗಹಳ್ಳಿ ಅವರ ಜೊತೆ ದೇವನೂರ ಸರ್ ಅವರ ತೋಟಕ್ಕೆ ಹೋದಾಗ, ತೋಟದ ಗೇಟನ ನಾಮಫಲಕದಲ್ಲಿ \"ಬನವಾಸಿ\" ಹೆಸರು ನೋಡಿ ತುಂಬಾ ಸಂತೋಷ, ಆಶ್ಚರ್ಯವಾಗಿ, ತಕ್ಷಣ ಮೇಷ್ಟ್ರು ಡಾ. ಸಿದ್ಧಲಿಂಗಯ್ಯ ಅವರಿಗೆ ಫೋನ್ ಮಾಡಿ ವಿಷಯ ಹೇಳಿದೆ. ಸಂತೋಷದಿಂದ ಕವಿಗಳು, \"ಹೌದಾ, ಬಹಳ ಸಂತೋಷ. ಮುಂದೊಮ್ಮೆ ತೋಟಕ್ಕೆ ಹೋಗೋಣ ನಾನು ಬರುತ್ತೇನೆ\" ಎಂದು ಹೇಳಿದ ಮಾತು ನನ್ನೊಳಗೆ ಇಂದಿಗೂ ಜೀವಂತವಾಗಿದೆ.\r\n\r\nಮಹಾಕವಿ ಪಂಪ ಹೇಳಿದ \"ಮನುಷ್ಯ ಜಾತಿ ತಾನೊಂದೆ ವಲಂ\" ಸಾಲನ್ನು ಹೀಗೆ ಓದಿ ಕೊಳ್ಳಬಹುದ ಸರ್,\r\n\r\n\"ದೇವನೂರು ಕವಿ ಒಂದೇ ವಲಂ\"
Add Comment