ಪ್ರೂಫ್ ರೀಡಿಂಗ್ ಮತ್ತು ಡಿಜಿಟಲ್ ಯುಗ
by Nataraj Huliyar
ಇಂಗ್ಲಿಷ್ ಅಧ್ಯಾಪಕನಾಗಿರುವ ವಿದ್ಯಾರ್ಥಿ ಮಿತ್ರನೊಬ್ಬ ಈಚೆಗೆ ಕಳಿಸಿದ ಒಂದು ಮೆಸೇಜ್:
‘‘…‘ಇಂತಿ ನಮಸ್ಕಾರಗಳು’ ಪುಸ್ತಕ ಓದುತ್ತಾ ಇದ್ದೀನಿ. ನನಗೆ ತುಂಬಾ ಖುಷಿ ಕೊಟ್ಟ ವಿಷಯ ಅಂದ್ರೆ typing mistakes ಇಲ್ಲ. ಇತ್ತೀಚೆಗೆ ನಾನು ಓದಿದ ಕೆಲವು ಕನ್ನಡ ಪುಸ್ತಕಗಳಲ್ಲಿ ಈ mistakes ತುಂಬಾ ನೋಡ್ತಿದೀನಿ.’’
ಈ ವಾಕ್ಯದ ನಂತರ ಆ ಪುಸ್ತಕದ ಅಧ್ಯಾಯವೊಂದನ್ನು ಮೆಚ್ಚಿದ್ದರ ಬಗೆಗೂ ಆ ಮಿತ್ರ ಬರೆದಿದ್ದ. ಅದಿರಲಿ! ಇಂಗ್ಲಿಷ್ ಅಧ್ಯಾಪಕ-ಸಂಶೋಧಕನಾದ ಈ ಮಿತ್ರ ಇಂಗ್ಲಿಷ್ ಪುಸ್ತಕಗಳಲ್ಲಿ ಕಾಗುಣಿತದ ತಪ್ಪುಗಳನ್ನು ಕಾಣುವುದು ಕಡಿಮೆ. ಇಂಗ್ಲಿಷಿನಲ್ಲಿ ‘ಸ್ಪೆಲ್ ಚೆಕ್’ ಇದೆ; ಸ್ಪೆಲ್ಲಿಂಗ್ ತಪ್ಪಾದರೆ ಯಾವುದು ಸರಿ ಎಂಬುದನ್ನು ಅದು ಸೂಚಿಸುತ್ತದೆ. ಇಂಗ್ಲಿಷ್ ವಾಕ್ಯಗಳ ಸರಿ ತಪ್ಪುಗಳನ್ನೂ ಸೂಚಿಸುವ ವ್ಯವಸ್ಥೆಗಳಿವೆ. ಕನ್ನಡದಲ್ಲಿ ಈ ಅನುಕೂಲ ಇಲ್ಲ. ಜೊತೆಗೆ ಲೇಖಕರ ಬೇಜವಾಬ್ದಾರಿ, ಅವಸರ, ಅದಕ್ಷತೆ, ದಕ್ಷ ಪ್ರೂಫ್ ರೀಡರುಗಳ ಕೊರತೆ, ಪ್ರಾಮಾಣಿಕ ಪ್ರೂಫ್ ರೀಡರುಗಳಿಗೆ ತಕ್ಕಮಟ್ಟಿನ ಸಂಭಾವನೆಯನ್ನಾದರೂ ಕೊಡಲು ಲೇಖಕರ, ಸಂಸ್ಥೆಗಳ ಹಿಂಜರಿತ…ಇವೆಲ್ಲ ಇದರಲ್ಲಿ ಸೇರಿವೆ.
೧೯೯೦ರ ಸುಮಾರಿಗೆ ಸ್ವತಃ ನಾನೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲವು ಪುಸ್ತಕಗಳ ಪ್ರೂಫ್ ರೀಡಿಂಗ್ ಮಾಡುತ್ತಿದ್ದಾಗ ಪುಟಕ್ಕೆ ೩ರೂಪಾಯಿ ೮೦ ಪೈಸೆ ಸಂಭಾವನೆ. ೨೦೨೫ರಲ್ಲಿ ಹೊಸ ತಲೆಮಾರಿನ ಗೆಳೆಯರಿಗೆ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಪುಟದ ಪ್ರೂಫ್ ರೀಡಿಂಗ್ ಕೆಲಸ ವಹಿಸಿದರೆ, ಅದರ ಪ್ರೂಫ್ ರೀಡಿಂಗ್ ಸಂಭಾವನೆ ಪುಟಕ್ಕೆ ೧೦ ರೂಪಾಯಿ ಮಾತ್ರ! ‘ಇವತ್ತು ಇದನ್ನು ಕೊನೇ ಪಕ್ಷ ಪುಟಕ್ಕೆ ಇಪ್ಪತ್ತು ಮೂವತ್ತು ರೂಪಾಯಿಯನ್ನಾದರೂ ಮಾಡಿ’ ಎಂದರೆ, ಅಧಿಕಾರಿಗಳ ತಲೆಗೆ ಅದು ಹೋಗುವುದೇ ಇಲ್ಲ. ‘ಕಳೆದ ಮೂವತ್ತೈದು ವರ್ಷಗಳಲ್ಲಿ ನಿಮ್ಮ ಸಂಬಳ, ಭತ್ಯೆ ಎಷ್ಟು ಏರಿದೆ ಹೋಲಿಸಿಕೊಂಡು ನೋಡಿಯಾದರೂ ಇದನ್ನು ಏರಿಸಿ’ ಎಂದರೆ, ದಿವ್ಯ ನಿರ್ಲಿಪ್ತತೆಯೇ ಅವರ ಉತ್ತರ!
ಕನ್ನಡ ಪುಸ್ತಕಗಳ ಪ್ರೂಫ್ ರೀಡಿಂಗ್ ನಿಜಕ್ಕೂ ಅಸಲಿ ವಿಜ್ಞಾನ ಎಂದು ‘ವಿನ್ಯಾಸವಿಜ್ಞಾನಿ’ ಸುಜ್ಞಾನಮೂರ್ತಿ ಥರದವರು ಎಷ್ಟು ಬಡಕೊಂಡರೂ ಅನೇಕರಿಗೆ ಅರ್ಥವಾಗುವುದಿಲ್ಲ. ಆದರೂ ಪರಿಸ್ಥಿತಿ ತೀರಾ ಕೈಮೀರಿಲ್ಲ! ನನ್ನ ವಲಯದಲ್ಲಿ ಕೆಲವರಾದರೂ ಸೂಕ್ಷ್ಮ ಕಣ್ಣಿನ ಗೆಳೆಯ, ಗೆಳತಿಯರು, ಭಾಷಾಜ್ಞಾನ ಇರುವವರು, ಸದಾ ಕನ್ನಡ ಭಾಷೆಯ ಜೊತೆಯಿರುವವರು ಇರುವುದರಿಂದ, ನಾನೂ ಸಾಕಷ್ಟು ಗಮನ ಕೊಡುವುದರಿಂದ, ನನ್ನಂಥವರು ಕೊಂಚ ಬಚಾವ್.
ಆದರೂ, ಬರೆವವರೆಲ್ಲ ಇಂಥ ವಲಯವನ್ನು ಸೃಷ್ಟಿಸಿಕೊಳ್ಳುವುದು ಕಷ್ಟವಿರಬಹುದು. ಈ ಸಮಸ್ಯೆಗೆ ಕಾಯಂ ಉತ್ತರ ಬೇಕಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಅವರನ್ನು ಕೇಳಿದೆ. ಹಿಂದೊಮ್ಮೆ ‘ಪ್ರಜಾವಾಣಿ’ಯಲ್ಲಿ ‘ಇ-ಹೊತ್ತು’ ಅಂಕಣ ಬರೆಯುತ್ತಿದ್ದ ಇಸ್ಮಾಯಿಲ್ ಆಧುನಿಕ ಡಿಜಿಟಲ್ ತಂತ್ರಜ್ಞಾನ ವಲಯದ ಆಳವಾದ ಜ್ಞಾನವುಳ್ಳ ಕರ್ನಾಟಕದ ಅಪರೂಪದ ಪ್ರತಿಭೆ. ನನ್ನಂಥವರು ಇಂಥ ಸಮಸ್ಯೆಗಳಿಗೆಲ್ಲ ಸದಾ ಮೊರೆ ಹೋಗುವುದು ಅವರನ್ನೇ.
ಇಸ್ಮಾಯಿಲ್ ಕನ್ನಡ ಸ್ಪೆಲ್ ಚೆಕ್ ಕುರಿತು ಹಲವು ವರ್ಷಗಳಿಂದ ಯೋಚಿಸಿ ಕೆಲಸ ಮಾಡುತ್ತಿರುವವರು. ಪ್ರಜಾವಾಣಿಯಲ್ಲಿದ್ದಾಗ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದವರು. ಈ ಅಂಕಣಕ್ಕಾಗಿ ನಾನು ಕೇಳಿಕೊಂಡಾಗ, ‘ಕನ್ನಡ ಕಾಗುಣಿತ ಪರೀಕ್ಷಕ’ ಅಥವಾ ’ಸ್ಪೆಲ್ ಚೆಕ್’ ಕುರಿತು ಇಸ್ಮಾಯಿಲ್ ಕೊಟ್ಟ ಟಿಪ್ಪಣಿಯ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ:
‘ಕನ್ನಡದಲ್ಲಿ ಸ್ಪೆಲ್ ಚೆಕ್ ಸುತ್ತ ಕೆಲವು ಕೆಲಸಗಳೂ ಆಗಿವೆ. ಮುಖ್ಯವಾದದ್ದು ಓಪನ್ ಆಫೀಸ್ ಅಥವಾ ಲಿಬ್ರೆ ಆಫೀಸ್‌ಗಾಗಿ ಕೆಲವು ಉತ್ಸಾಹಿ ತಂತ್ರಜ್ಞರು ಸ್ವಯಂಸೇವಕರಾಗಿ ಮಾಡಿದ ಕೆಲಸ. ಇದು ಒಂದು ಹಂತದವರೆಗೂ ಆಗಿ ಉಳಿದಿದೆ. ಏಕೆಂದರೆ, ಇದಕ್ಕೆ ಬಹಳ ಮುಖ್ಯವಾಗಿ ಬೇಕಿದ್ದ tagged corpus of words ( ಒಂದು ಪದ ನಾಮಪದವೋ, ವಿಶೇಷಣವೋ, ಕ್ರಿಯಾಪದವೋ ಎಂಬುದನ್ನು ಸೂಚಿಸುವ, ಪದ ಸ್ವರೂಪವನ್ನು ವಿವರಿಸುವ ಪದಕೋಶ) ಕನ್ನಡದಲ್ಲಿ ಲಭ್ಯವೇ ಇಲ್ಲ. ಮೈಸೂರಿನ ಭಾಷಾಸಂಸ್ಥಾನ ಇಂಥದ್ದೊಂದನ್ನು ಮಾಡಿದೆಯಂತೆ. ಅದು ಓಪನ್ ಸೋರ್ಸ್ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರಿಗೆ ಲಭ್ಯವಿರುವ ಮಾಹಿತಿ ನನಗಿಲ್ಲ.
ಇಂಗ್ಲಿಷ್‌ನಲ್ಲಿ ಸ್ಪೆಲ್ ಚೆಕ್ ಆರಂಭವಾದದ್ದು ೧೯೬೦ರಲ್ಲಿ. ಅಮೆರಿಕದ ಬ್ರೌನ್ ಯೂನಿವರ್ಸಿಟಿ ೧೯೬೦ರಲ್ಲಿ ಈ ಪ್ರಯತ್ನ ಆರಂಭಿಸಿ ಸುಮಾರು ೧೦ ಲಕ್ಷ ಪದಗಳ tagged corpora ಅಭಿವೃದ್ಧಿಪಡಿಸಿತು. ಇದರಿಂದ ಪ್ರೇರಿತರಾಗಿ ಲ್ಯಾಂಕಾಸ್ಟರ್, ಓಸ್ಲೋ ಮತ್ತು ಬರ್ಗನ್ ವಿಶ್ವವಿದ್ಯಾಲಯಗಳು ೧೯೭೦ರಲ್ಲಿ ’ಬ್ರಿಟಿಷ್ ಇಂಗ್ಲಿಷ್ ಕಾರ್ಪೋರಾ’ ಅಭಿವೃದ್ಧಿ ಪಡಿಸಿದವು. ಈಗ ಇಂಥ ಅನೇಕ ಕಾರ್ಪೊರಾಗಳಿವೆ.
ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ 365ನಲ್ಲಿ ಕನ್ನಡ ಸ್ಪೆಲ್ ಚೆಕ್ ಲಭ್ಯವಿದೆ. ಆದರೆ ಇದು ಸ್ವತಂತ್ರ ಪದಗಳನ್ನು ಗುರುತಿಸುತ್ತದೆಯೇ ಹೊರತು, ಒಂದು ಪದದಿಂದ ರೂಪುಗೊಳ್ಳುವ ’derivative’ ಪದಗಳಲ್ಲಿ ಇರುವ ತಪ್ಪನ್ನು ಗುರುತಿಸುವುದಿಲ್ಲ. ಆದರೂ ಬಹುತೇಕ ತಪ್ಪುಗಳನ್ನು ಗುರುತಿಸಲು ಇದರಿಂದ ಸಾಧ್ಯ. ಸಾಮಾನ್ಯ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪುಗಳನ್ನು ಇದು ಹೇಳುತ್ತದೆ. ಆದರೆ ಇದನ್ನು ಬಳಸುವುದಕ್ಕೆ ಹೊಸ ಆವೃತ್ತಿಯ ಆಫೀಸ್ ಪ್ಯಾಕೇಜ್ ಖರೀದಿಸಬೇಕಾಗುತ್ತದೆ. ನಮ್ಮಲ್ಲಿ ಬಹುತೇಕರು ಅನಧಿಕೃತ ಆವೃತ್ತಿಗಳನ್ನು ಬಳಸುತ್ತಾರೆ; ಆದ್ದರಿಂದ ಜನಸಾಮಾನ್ಯರಿಗೆ ಇದು ಸುಲಭವಾಗಿ ಸಿಗುವುದಿಲ್ಲ.
ಗೂಗಲ್ ಡಾಕ್ಸ್‌ನಲ್ಲಿ ಕನ್ನಡ ಸ್ಪೆಲ್ ಚೆಕ್ ನೇರವಾಗಿ ಲಭ್ಯವಿಲ್ಲ. ನೀವು ಗೂಗಲ್ ವರ್ಕ್ ಸ್ಪೇಸ್ ಬಳಸುವವರಾದರೆ, ಪರೋಕ್ಷವಾಗಿ ಈ ಸವಲತ್ತು ಲಭ್ಯವಿದೆ. Gemini AIಯನ್ನು ಗೂಗಲ್ ಡಾಕ್ಸ್‌ನಲ್ಲಿ ಬರವಣಿಗೆ ಸಹಾಯಕನಂತೆ ಬಳಸಿಕೊಂಡರೆ ಅದು ತಪ್ಪುಗಳನ್ನೂ ತಿದ್ದಿಕೊಡುತ್ತದೆ. ಇದಕ್ಕೆ ಸಣ್ಣಮಟ್ಟಿಗಿನ ಕಸರತ್ತು ಮಾಡಬೇಕಾಗುತ್ತದೆ. ಜೊತೆಗೆ ಗೂಗಲ್ ವರ್ಕ್ ಸ್ಪೇಸ್‌ನ ಚಂದಾದಾರಿಕೆಯ ಅಗತ್ಯವೂ ಇದೆ. ಸದ್ಯದ ಮಟ್ಟಿಗೆ ಜಿಯೋ ಮೊಬೈಲ್‌ನ ಚಂದಾದಾರರಿಗೆ ಗೂಗಲ್ ಸೇವೆ ಒಂದೂವರೆ ವರ್ಷದ ಮಟ್ಟಿಗೆ ಉಚಿತವಾಗಿ ದೊರೆಯುತ್ತದೆ. ಜಿಯೋ ಮೊಬೈಲ್ ನಂಬರ್ ಇರುವವರು ಇದನ್ನು ಬಳಸಲು ಸಾಧ್ಯವಿದೆ.
ಕನ್ನಡ ಪದಗಳ tagged corpus (ಪದಸ್ವರೂಪಗಳ ಕೋಶ) ಮಾಡುವ ಯೋಜನೆಯೊಂದನ್ನು ಪೂರ್ಣಚಂದ್ರ ತೇಜಸ್ವಿಯವರ ಸಲಹೆಯ ಮೇರೆಗೆ ಪ್ರೊ. ವಿವೇಕ ರೈಯವರು ಕುಲಪತಿಗಳಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿತ್ತು. ಆದರೆ ಅದು ಮುಂದುವರಿದಂತಿಲ್ಲ. ಕನ್ನಡ ವಿಶ್ವವಿದ್ಯಾಲಯ ಇವತ್ತಿಗೂ ಇದನ್ನು ಮಾಡಬಹುದು. ಇಂಥದ್ದೊಂದು ವ್ಯವಸ್ಥೆ ಇದ್ದಿದ್ದರೆ ಓಪನ್ ಸೋರ್ಸ್ ಉತ್ಸಾಹಿಗಳು, ಜೊತೆಗೆ ಮೈಕ್ರೋಸಾಫ್ಟ್‌ನಂಥ ಕಂಪೆನಿಗಳೂ, ಸ್ಪೆಲ್ ಚೆಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದರು. ಈಗ ಅವರ ಬಳಿ ಇರುವುದು ಅವರೇ ಅಭಿವೃದ್ಧಿಪಡಿಸಿದ ಕಾರ್ಪೊರಾಗಳನ್ನು ಅವಲಂಬಿಸಿರುವ ಸ್ಪೆಲ್ ಚೆಕ್‌ಗಳು. ಎಐ ಬಂದಮೇಲೆ ಈ ಕೆಲಸ ಇನ್ನೂ ಸುಲಭವಾಗಿದೆ. ಆದರೆ ಈ ಕಂಪೆನಿಗಳಿಗೆ ಇದನ್ನು ಮಾಡಲೇಬೇಕಾದಷ್ಟು ದೊಡ್ಡ ಮಾರುಕಟ್ಟೆಯೇ ಕಾಣಿಸುತ್ತಿಲ್ಲ.
ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸುಲಭವಾಗಿ ಹಾಗೂ ಅತ್ಯಗತ್ಯವಾಗಿ ಮಾಡಬಹುದಾದ ಕೆಲಸ ಇದು:
ಕರ್ನಾಟಕ ಸರ್ಕಾರ ತಾನು ಖರೀದಿಸುವ ಆಫೀಸ್ ೩೬೫ ತಂತ್ರಾಂಶದಲ್ಲಿ ಕನ್ನಡ ಸ್ಪೆಲ್ ಚೆಕ್‌ನ ಮಟ್ಟ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಲು ತೀರ್ಮಾನಿಸಿದರೆ ನಿರ್ಣಾಯಕ ಬದಲಾವಣೆ ಸಾಧ್ಯವಿದೆ. ಆದರೆ ಅದಕ್ಕೆ ಸರ್ಕಾರ ಮನಸ್ಸು ಮಾಡಬೇಕಷ್ಟೇ. ಕನ್ನಡ ಬಳಸಬಲ್ಲ ಕಂಪ್ಯೂಟರ್‌ಗಳನ್ನೂ, ಸಾಫ್ಟ್‌ವೇರ್‌ಗಳನ್ನೂ ಖರೀದಿಸುವುದರಲ್ಲಿ ಕರ್ನಾಟಕ ಸರ್ಕಾರಕ್ಕಿಂತ ದೊಡ್ಡ ಗ್ರಾಹಕ ಮತ್ತಾರೂ ಇರಲು ಸಾಧ್ಯವಿಲ್ಲ. ಇದನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಜಾಣತನ, ಕಾಳಜಿ ಸರ್ಕಾರಕ್ಕೆ ಇರಬೇಕು. ಕರ್ನಾಟಕದ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಗೂ ಈ ಕೆಲಸವನ್ನು ಒಪ್ಪಿಸಿ ಮಾಡಿಸಬಹುದು. ಆದರೆ ಈ ಬಗೆಯ ಕೆಲಸಕ್ಕೆ ವಿಷನ್ ಮುಖ್ಯ. ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ತುಂಬಾ ಅಧಿಕಾರಿಗಳು ಮತ್ತು ಹಳೆಯ ತಲೆಮಾರಿನವರೇ ಇದ್ದಾರೆ. ಇದೇ ದೊಡ್ಡ ಸಮಸ್ಯೆ.
ಸುಮಾರು ೨೦೧೫ರ ತನಕವೂ ನಮ್ಮ ಓಪನ್ ಸೋರ್ಸ್ ಗ್ರೂಪ್‌ಗಳು ಸ್ವಲ್ಪ ಮಟ್ಟಿಗೆ ಕನ್ನಡ ತಂತ್ರಜ್ಞಾನದ ಸುತ್ತ ಕೆಲಸ ಮಾಡುತ್ತಿದ್ದವು. ಆದರೆ ಈಗ ಅದೂ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಕನ್ನಡ ಭಾಷೆ ಗೊತ್ತಿರುವ, ಕನಿಷ್ಠ ಕನ್ನಡವನ್ನು ಟೈಪ್ ಮಾಡುವ ಉತ್ಸಾಹವಿರುವ, ಸ್ವಯಂ ಉತ್ಸಾಹದಿಂದ ಈ ಕೆಲಸ ಮಾಡುವ ವಿದ್ಯಾರ್ಥಿ ವಾಲೆಂಟಿಯರ್‌ಗಳೇ ಈಗ ಇಲ್ಲವಾಗಿದ್ದಾರೆ. ಎಂಜಿನಿಯರಿಂಗ್ ಕಾಲೇಜುಗಳಿಗೆ ಬರುವ ಅನೇಕರು ಕನ್ನಡವನ್ನು ಪಾಸ್ ಆಗಲು ಬೇಕಾದ ಭಾಷೆಯಾಗಿಯಷ್ಟೇ ಗ್ರಹಿಸಿ ಕಲಿತವರು. ಹಾಗಾಗಿ ಇಂಥವರು ಕನ್ನಡ ಪ್ರಾಜೆಕ್ಟ್‌ಗಳಿಗೆ ಸಿಗುವುದೇ ಇಲ್ಲ. ಈ ಮಟ್ಟಿಗೆ ತಮಿಳು ಮತ್ತು ಮಲಯಾಳಂಗಳೇ ಪರವಾಗಿಲ್ಲ. ಅಲ್ಲಿ ಇನ್ನೂ ಉತ್ಸಾಹ ಉಳಿದುಕೊಂಡಿದೆ.
ತಮಿಳು ಸ್ಪೆಲ್ ಚೆಕ್ ಬರಲು ದಶಕಗಳ ಹಿಂದೆ ತಮಿಳು ಸರ್ಕಾರವೇ ಮುಂದಡಿಯಿಟ್ಟಿದ್ದರಿಂದ ತಮಿಳು ಸ್ಪೆಲ್ ಚೆಕ್ ಈಗ ಜಾರಿಯಲ್ಲಿದೆ.
ಕನ್ನಡದಲ್ಲೂ ಸ್ಪೆಲ್ ಚೆಕ್ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಸಾಧ್ಯವಾದದ್ದೇನಲ್ಲ. ಕನ್ನಡದ ಹೊಸ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಬಹುದಾದ ಕೆಲಸ.’
ಸದಾ ಸಮಾಜಮುಖಿ-ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾತಾಡುವ, ಬರೆಯುವ ಎನ್.ಎ.ಎಂ. ಇಸ್ಮಾಯಿಲ್ ಅವರ ಅನುಭವ ಮತ್ತು ಜ್ಞಾನದ ಕಾಳಜಿಯ ಮಾತುಗಳನ್ನು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಸಂಸ್ಥೆಗಳು ಕಿವಿಗೊಟ್ಟು ಕೇಳಿಸಿಕೊಳ್ಳುವ ಕಾಲ ಬೇಗ ಬರಲಿ.
Follow Blog WhatsApp Channel: CLICK HERE
Comments
9 Comments
| ಮೋಹನ್ ಮಿರ್ಲೆ
ಬಹಳ ಮುಖ್ಯವಾಗಿ ಆಗಬೇಕಾದ ಕೆಲಸ ಇದು. ಇಲ್ಲಿ ಪ್ರಸ್ತಾಪಿಸಿರುವಂತೆ ಎಷ್ಟೋ ಕನ್ನಡ ಪುಸ್ತಕಗಳನ್ನು ಓದುವಾಗ ಊಟದಲ್ಲಿ ಸಿಗುವ ಕಲ್ಲುಗಳಂತೆ ಕಾಗುಣಿತ ದೋಷಗಳು ದುತ್ತೆಂದು ಎದುರಾಗಿ ಓದಿನ ಹರಿವಿಗೆ ಭಂಗ ತರುತ್ತವೆ. ಇನ್ನು ಪದವಿ ಪಠ್ಯಪುಸ್ತಕಗಳ ವಿಷಯದಲ್ಲಂತೂ ಈ ಮಾತು ಹೇಳುವುದೇ ಬೇಡ. ಎಷ್ಟೋ ಪಠ್ಯಪುಸ್ತಗಳಲ್ಲಿ ನಾವು ಪಾಠ ಮಾಡುವ ಮೊದಲು ದೋಷ ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೂ ಹೇಳಿ ತಿದ್ದಿಸಿ, ನಂತರ ಪಾಠಮಾಡಿದ ಉದಾಹರಣೆಗಳಿವೆ. ಇನ್ನು "ಕನ್ನಡ ಕಾಗುಣಿತ ಪರೀಕ್ಷಕ" ತಂತ್ರಾಂಶದ ಬಗ್ಗೆ ಹೇಳುವುದಾದರೆ ಎಲ್ಲಾ ಕಡೆ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಸಹಜವಾಗಿ ಬೇಡಿಕೆ ಬರುತ್ತದೆ. ಆಗ ಸಾಫ್ಟ್ ವೇರ್ ಕಂಪನಿಗಳೂ ಇತ್ತ ಗಮನಹರಿಸುತ್ತವೆ. ನಾನಿರುವ ವಾಟ್ಸಾಪ್ ಗುಂಪುಗಳಲ್ಲಿ ಕನ್ನಡ ಅಧ್ಯಾಪಕರಿರುವ ಗುಂಪುಗಳಲ್ಲಿ ಮಾತ್ರ ಕನ್ನಡ ಭಾಷೆ ಮತ್ತು ಅಕ್ಷರಗಳಲ್ಲಿ ಸಂದೇಶಗಳ ಸಂವಾದ ನಡೆಯುತ್ತದೆ. ಉಳಿದಂತೆ ಎಲ್ಲಾ ವಿಷಯಗಳ ಅಧ್ಯಾಪಕರಿರುವ ಗುಂಪುಗಳಲ್ಲಿ ಬಹುತೇಕ ಇಂಗ್ಲಿಷ್ ಭಾಷೆ ಮತ್ತು ಅಕ್ಷರಗಳನ್ನು ಸಂದೇಶ ಸಂವಾದಕ್ಕೆ ಬಳಸುತ್ತಾರೆ. ಎ.ಟಿ.ಎಂ.ನಲ್ಲೂ "ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ" ಎಂದು ಬಂದಾಗ ಬಹುತೇಕರು ಇಂಗ್ಲಿಷ್ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕಾಲೇಜಿನ ವಿದ್ಯಾರ್ಥಿಗಳೂ ಬಹುತೇಕರು ಗೆಳೆಯರ ಜನ್ಮ ದಿನದ ಶುಭಾಶಯಗಳನ್ನು, ತಮ್ಮ ಪ್ರವಾಸದ ವಿವರಗಳನ್ನು, ತಾವು ಹಾಕಿರುವ ಚಿತ್ರದ ಘಟನಾ ವಿವರಗಳನ್ನು ಅಡಿಬರಹಗಳಲ್ಲಿ ತಪ್ಪುತಪ್ಪಾದ ಇಂಗ್ಲಿಷ್ ನಲ್ಲಿ ಬರೆದು ಕನ್ನಡದ ಅವಗಣನೆಯ ಜೊತೆಗೆ ಇಂಗ್ಲೀಷ್ ಮರ್ಯಾದೆಯನ್ನೂ ತೆಗೆಯುತ್ತಿರುತ್ತಾರೆ. ವಿದ್ಯಾರ್ಥಿಗಳಿರಲಿ ನಮ್ಮ ಕನ್ನಡ ಅಧ್ಯಾಪಕರೂ "Today, with my optional kannada students" ಅಂತಾ ಫೋಟೋಗಳನ್ನು ಹಂಚಿಕೊಂಡಿರುತ್ತಾರೆ. ಬಳಕೆ ಹೆಚ್ಚಾದರೆ ಅದರ ಅಗತ್ಯ ತಂತ್ರಜ್ಞಾನದ ಮೂಲಕ ಸಂಬಂಧಪಟ್ಟ ತಂತ್ರಜ್ಞರಿಗೂ ಸಹಜವಾಗಿ ತಿಳಿಯುತ್ತದೆ. ಆಗ "ಕನ್ನಡ ಕಾಗುಣಿತ ಪರೀಕ್ಷಕ"ದಂತಹ ತಂತ್ರಾಂಶಗಳೂ ಸಿಗಲು ಸಾಧ್ಯವಾಗುತ್ತದೆ. ಆದಾಗ್ಯೂ ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ಕೊಡಬೇಕಾಗಿರುವುದಲ್ಲದೆ, ಕನ್ನಡವೇ ಆಡಳಿತ ಭಾಷೆಯಾಗಿರುವ ಕಾರಣ ಕರ್ನಾಟಕ ಸರ್ಕಾರವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಕನ್ನಡ ಸಂಬಂಧಿ ಸಂಸ್ಥೆಗಳ ಮೂಲಕ ಈ ಕಾರ್ಯವನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ ಕೈಗೆತ್ತಿಕೊಳ್ಳಬೇಕಾಗಿದೆ. ಗಮನ ಸೆಳೆಯುವ ಲೇಖನಕ್ಕಾಗಿ ಧನ್ಯವಾದಗಳು.
| VIJAY HANAKERE
ಈಗ ಚಾಟ್ GPT ಗಳ ಮೂಲಕ ಕನ್ನಡವನ್ನೂ ಸ್ಪೆಲ್ಲಿಂಗ್ ಚೆಕ್ ಮಾಡಬಹುದು..
| ಸೋಮಶೇಖರ್ ಕದಿರೇಹಳ್ಳಿ
ಇಂತಹ ಸೆಲ್ಪ ಕರೆಕ್ಷನ್ ಪರಿಕಲ್ಪನೆ ಈ ಲೇಖನವೇ ಹೊಳೆಸಿದ್ದು , ಸೆಲ್ಪ್ ಕರೆಕ್ಷನ್ ಇಂಗ್ಲೀಷ್ ನಲ್ಲಿ ಬಹಳಷ್ಟು ವರ್ಷಗಳಿಂದಲೇ ಇದೆ ಎಂಬುದು ಗೊತ್ತಿತ್ತು, ಆದರೆ ಕನ್ನಡ ಅಕ್ಷರಗಳಿಂದ ಕಟ್ಟಿದ ಪದಗಳ ತಪ್ಪು ಕಂಡುಕೊಳ್ಳಲು ಇನ್ನು ತಂತ್ರಾಂಶ ಇಲ್ಲದ ಕೊರತೆ ಕನ್ನಡ ಎದುರಿಸುತ್ತಿದೆ, ಆಗೆಲ್ಲ ಕನ್ನಡ ಅಷ್ಟು ತಂತ್ರಾಂಶದಲ್ಲಿ ಮುಂದಿಲ್ಲ ಎಂಬ ಭಾವನೆ ಮೂಡಿದ್ದು ಸಹಜ, ಕನ್ನಡ ದಲ್ಲಿ ಒಂದು ಪುಟ ಕರೆಕ್ಷನ್ ಗೆ 3 ರೂ 80 ಪೈಸೆ ಇದ್ದು ಅದು ಮುಂದುವರೆದು 10 ರೂ ಆಗಿದೆ ಎಂಬುದು ಆಶ್ಚರ್ಯ ತಂದಿದ್ದಂತು ಸತ್ಯ. ತಮಿಳು ಭಾಷೆಯಲ್ಲಿ ಸೆಲ್ಪ್ ಕರೆಕ್ಷನ್ ಸಾಧ್ಯವಾಗಿರುವುದು ಕನ್ನಡದಲ್ಲಿ ಇಲ್ಲ ಎನ್ನುವುದು ನಮ್ಮ ಭಾಷೆಯ ತಂತ್ರಾಂಶ ಹಿಂದುಳಿದಿದೆ ಎಂಬ ಅಭಿಪ್ರಾಯ ಸರಿ, ಇಲ್ಲ ಕರ್ನಾಟಕ ಸರ್ಕಾರ ಈ ತಂತ್ರಾಂಶವನ್ನು ಒದಗಿಸಿಕೊಡಬೇಕು ಮತ್ತು ಅಷ್ಟೆ ಸುಲಭವಾಗಿ ಸಿಗಬೇಕು, ಈ ನಿಟ್ಟಿನಲ್ಲಿ ಕನ್ನಡಿಗರು , ಸರ್ಕಾರ ಗಮನಹರಿಸಲಿ . ಸೋಮಶೇಖರ್ ಕದಿರೇಹಳ್ಳಿ
| K. RAJAKUMAR
ಕರಡು ತಿದ್ದುವಿಕೆ ಒಂದು ವಿಶಿಷ್ಟ ಕೌಶಲ. ಕನ್ನಡ ಕಾಪ ಬೇಗನೆ ಬರಬೇಕಾಗಿದೆ. ಈಗಿನ ಬರೆಹಗಾರರಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಹಾಗಾಗಿ ಕಾಕಪದ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಲಿ.
| K. RAJAKUMAR
ಕರಡು ತಿದ್ದುವಿಕೆ ಒಂದು ವಿಶಿಷ್ಟ ಕೌಶಲ. ಕನ್ನಡ ಕಾಪ ಬೇಗನೆ ಬರಬೇಕಾಗಿದೆ. ಈಗಿನ ಬರೆಹಗಾರರಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಹಾಗಾಗಿ ಕಾಕಪದ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಲಿ.
| ಮಹಾಲಿಂಗೇಶ್ವರ್
ನಿಜ. ಕರಡು ತಿದ್ದುವುದು ಒಂದು ಶ್ರೇಷ್ಠ ಕಲೆ. ಸರ್ಕಾರಿ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಲೇಬೇಕು
| K j suresh
ಸರ್ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಶ್ಲಾಘನೀಯ ನಮಸ್ಕಾರ
| ದೇವಿಂದ್ರಪ್ಪ ಬಿ.ಕೆ.
ಪ್ರೂಫ್ ರೀಡಿಂಗ್ ಮತ್ತು ಡಿಜಿಟಲ್ ಯುಗ ಕುರಿತ ಲೇಖನ ಸದ್ಯದ ಸಂದರ್ಭದಲ್ಲಿ ಅಗತ್ಯವಾಗಿ ಕನ್ನಡ ಕರಡು ತಿದ್ದುವಿಕೆಯಲ್ಲಿ ಆಗಬೇಕಾದ ಕೆಲಸದ ಬಗ್ಗೆ ಗಮನ ಸೆಳೆಯುತ್ತದೆ. ಇಂದು ಅನೇಕರ ಕೈಯಲ್ಲಿ ಮೊಬೈಲ್ ಇದೆ. ಆದರೆ ಅವರ ತಮ್ಮ ಸ್ನೇಹಿತರೊಂದಿಗಿನ ಸಂಭಾಷಣೆ ಮಾತ್ರ ಇಂಗ್ಲಿಷ್ ನಲ್ಲಿ ಇರುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದಲ್ಲಿ ವ್ಯವಹರಿಸುವ ಹಾಗೆ ನಮಗೆ ನಾವೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು. ತಂತ್ರಜ್ಞಾನದಲ್ಲಿ ಆಗುವಂತಹ ಅನೇಕ ಬದಲಾವಣೆಗಳನ್ನು ನಮ್ಮ ಓದಿಗೆ, ಬರವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕಾಗಿದೆ. ಇಂದು ಪುಸ್ತಕಗಳಲ್ಲಿ ಕನ್ನಡದ ತಪ್ಪು ಅಕ್ಷರಗಳನ್ನು ಗುರುತಿಸಿ ತಿದ್ದಿ ಸರಿ ಮಾಡಿಕೊಡುವ ಸಮರ್ಥ ಪ್ರೂಫ್ ರೀಡರ್ ಗಳ ಅವಶ್ಯಕತೆ ಇದೆ. ಸುಜ್ಞಾನಮೂರ್ತಿ ಸರ್ ಅವರು ಇದರಲ್ಲಿ ತುಂಬಾ ಸಮರ್ಥರು ಎಂದು ನಾನು ನೋಡಿದ್ದೇನೆ. ಕನ್ನಡದ ಅಧ್ಯಾಪಕರು ಕನ್ನಡವನ್ನು ತಪ್ಪಿಲ್ಲದೆ ಬರೆಯುವ, ಮಾತನಾಡುವ ಕಡೆಗೆ ಯೋಚಿಸಬೇಕಾಗಿದೆ.
| ಡಾ. ನಿರಂಜನ ಮೂರ್ತಿ ಬಿ ಎಂ
'ಪ್ರೂಫ್ ರೀಡಿಂಗ್ ಮತ್ತು ಡಿಜಿಟಲ್ ಯುಗ' ಸಕಾಲಿಕ ಲೇಖನ. ಆಧುನಿಕ ಡಿಜಿಟಲ್ ಮಾಧ್ಯಮದಲ್ಲಿ ಕನ್ನಡದ ಬಳಕೆಯನ್ನು ಪ್ರೋತ್ಸಾಹಿಸಬೇಕಾದ ತುರ್ತನ್ನು ಒತ್ತಿಹೇಳುತ್ತಲೇ ಅದಕ್ಕೆ ಬೇಕಾದ ಕಕಾಪವನ್ನು ರೂಪಿಸಬೇಕಾದ ಅನಿವಾರ್ಯತೆಯನ್ನು ಮನಗಾಣಿಸುತ್ತದೆ. ಕಕಾಪ ಕೇವಲ ಪದಗಳಲ್ಲಿನ ತಪ್ಪುಗಳನ್ನು ತೋರಿಸಿ ಸರಿಪಡಿಸಲು ಸೂಚಿಸಿದರೆ, ವಾಕ್ಯರಚನೆಯಲ್ಲಿನ ವ್ಯಾಕರಣ ತಪ್ಪುಗಳನ್ನೂ ತೋರಿಸಿ ಸರಿಪಡಿಸುವ ಕವ್ಯಾಪ (ಕನ್ನಡ ವ್ಯಾಕರಣ ಪರೀಕ್ಷಕ)ದ ಅಗತ್ಯವೂ ಇದೆ. ಇಂಗ್ಲಿಷ್ ನಲ್ಲಿರುವಂತೆ, ಸ್ಪೆಲ್ ಚೆಕ್ ಮತ್ತು ಗ್ರಾಮರ್ ಚೆಕ್, ಎರಡನ್ನೂ ಒಟ್ಟಿಗೇ ತೋರಿಸುವ ಮತ್ತು ಆಯ್ಕೆಗಳನ್ನು ನೀಡುವ ತಂತ್ರಾಂಶ ರೂಪಿಸಿದರೆ ಬಹಳ ಅನುಕೂಲವಾಗುತ್ತದೆ. ಈ ವಿಷಯದಲ್ಲಿ, ಹುಳಿಯಾರರು ಸೂಚಿಸಿರುವ ಎನ್ ಎ ಎಂ ಇಸ್ಮಾಯಿಲ್ ಅವರು ತಜ್ಞರು. ಸರ್ಕಾರವು ಅವರ ಸೇವೆಯನ್ನು ನಮ್ಮ ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಗಾಗಿ ಬಳಸಿಕೊಳ್ಳುವುದು ಸಮಂಜಸ.
Add Comment