ಕೊಂದವರುಳಿಯುವರೆ?
by Nataraj Huliyar
ಭಾಗ: ೧
ಬರೆವ ಬದುಕಿನ ವ್ಯಕ್ತಿಯೊಬ್ಬ ಮತ್ತೆ ಮತ್ತೆ ಕೆಲವು ವಸ್ತುಗಳಿಗೆ ಮರಳುವುದು ಸಾಮಾನ್ಯ. ಕತೆ, ಅಂಕಣ, ನಾಟಕ, ಕಾವ್ಯ, ರಾಜಕೀಯ ವಿಶ್ಲೇಷಣೆ… ಹೀಗೆ ಹಲವು ಪ್ರಕಾರಗಳ ಮೋಹನ ಮುರಳಿಗಳು ಕರೆಯುವ ನನ್ನಂಥವನಿಗಂತೂ ಈ ಅನುಭವ ಇನ್ನಷ್ಟು ಸಾಮಾನ್ಯ. ನನ್ನ ಕೆಲವು ಕತೆಗಳು ಪ್ರಕಟವಾದ ಹತ್ತಾರು ವರ್ಷಗಳ ನಂತರ ಕೂಡ ಈ ಕತೆಗಳು ಬೆಳೆದ ವಿಸ್ಮಯವನ್ನು ನನ್ನ ೨೦೨೩ರ ಕಥಾಸಂಕಲನ (ಪಲ್ಲವ ಪ್ರಕಾಶನ) ‘ಕಥಾನಂತರ’ದಲ್ಲಿ ಶೋಧಿಸಲೆತ್ನಿಸಿದ್ದೆ…
ಇದನ್ನೆಲ್ಲ ಹೇಳಬೇಕಾಗಿ ಬಂದಿದ್ದು ಈಚೆಗೆ ಎರಡು ಹಳೆಯ ಪ್ರಶ್ನೆಗಳು-ಎರಡು ಹಳೆಯ ವಸ್ತುಗಳು- ಮತ್ತೆ ನನ್ನೊಳಗೆ ಸುತ್ತತೊಡಗಿದ್ದರಿಂದ.
ಒಂದು: ನಮ್ಮ ಅರಿವು, ಜ್ಞಾನ, ತಿಳಿವಳಿಕೆ ಇವೆಲ್ಲ ಸದಾ ಯಾಕೆ ನಮ್ಮ ನೆನಪಿಗೆ ಬಂದು ನಮ್ಮ ಕೈ ಹಿಡಿಯುವುದಿಲ್ಲ?
ಎರಡು: ನಾವು ಮಾತಾಡುವಾಗ ಅನೇಕ ಸಲ ಮಾತಾಡುವಾಗ ನ್ಯಾಯವಾದ ಅಭಿಪ್ರಾಯ ಹೇಳದೆ ನಮ್ಮ ಪೂರ್ವಗ್ರಹಗಳನ್ನೇ ಬಿತ್ತುತ್ತಿರುತ್ತೇವೆಯೆ? ನಾವು ನಮ್ಮೆದುರಿಗಿರುವ ಮಾನವಜೀವಿಯೊಂದು ಕಸದ ಬುಟ್ಟಿ ಎಂದುಕೊಂಡು ಅವಳ ಅಥವಾ ಅವನ ತಲೆಗೆ ನಮ್ಮ ತಲೆಯ ಕಸವನ್ನು ತುಂಬುತ್ತಿರುತ್ತೇವೆಯೇ? ಶೇಕ್‌ಸ್ಪಿಯರನ ‘ಒಥೆಲೊ’ ನಾಟಕದ ಇಯಾಗೊ ಇಂಥವರ ಮೂಲ ಮಾದರಿಯಲ್ಲವೆ!
ಈ ಥರದ ಪ್ರಶ್ನೆಗಳು ಈಚೆಗೆ ಇಂಥ ಪೂರ್ವಗ್ರಹ ಬಿತ್ತನೆಗಾರನೊಬ್ಬ ಕಣ್ಮುಂದೆ ಬಂದಾಗ ಮತ್ತೆ ಎದುರಾದವು. ಈ ಥರದ ‘ಪೂರ್ವಗ್ರಹ ಬಿತ್ತನೆಯ ಕಾಯಂ ಕಾರ್ಮಿಕ’ನ ಬಗ್ಗೆ ನಾನು ೧೯೯೯ರಲ್ಲಿ ‘ಲಂಕೇಶ್ ಪತ್ರಿಕೆ’ಯ ಅಂಕಣದಲ್ಲಿ ‘ಅವರ ಹೊರೆ’ ಎಂಬ ಟಿಪ್ಪಣಿ ಬರೆದಿದ್ದು ಕೂಡ ನೆನಪಾಯಿತು. ಅದು ಹಲವು ವ್ಯಕ್ತಿಗಳ ಎಳೆಗಳು ಸೇರಿ ಮೂಡಿದ್ದ ಒಂದು ಸಂಕೀರ್ಣ ವ್ಯಕ್ತಿತ್ವ ಕೂಡ. ಇದನ್ನು ಆಗ ಓದಿದ ಗೆಳೆಯನೊಬ್ಬ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಅತಿಯಾಗಿ ತಲೆದೂಗಿ ಮೆಚ್ಚಿದ್ದ. ಈ ಮೆಚ್ಚುಗೆಯ ನಂತರ ಏನಾಯಿತು ಎಂಬ ಕತೆ ಹೇಳುವ ಮುನ್ನ ’ಲಂಕೇಶ್ ಪತ್ರಿಕೆ’ಗೆ ಬರೆದ ಟಿಪ್ಪಣಿಯಲ್ಲಿದ್ದ ಕೇಂದ್ರ ವ್ಯಕ್ತಿಯ ಜೊತೆಗಿನ ಪ್ರಶ್ನೋತ್ತರಗಳ ಸ್ಯಾಂಪಲ್‌ಗಳನ್ನು, ಗ್ರಹಿಕೆಗಳನ್ನು ಮುಂದಿನ ಭಾಗದಲ್ಲಿ ಕೊಟ್ಟಿರುವೆ:
ಭಾಗ: ೨
‘ಬಾಲ್ಯಕಾಲದ ಗೆಳೆಯ ರಾಮಚಂದ್ರ ಸಿಕ್ಕಿದ್ದನೆ?’
‘ಕಳ್ಳ! ಅವನೆಲ್ಲಿ ಸಿಗುತ್ತಾನೆ?'
‘ನಮ್ಮ ಮ್ಯಾಥಮ್ಯಾಟಿಕ್ಸ್ ಮೇಷ್ಟರ ಮನೆ ಈಗ ಎಲ್ಲಿದೆ?’
‘ಆ ಖದೀಮ ಅವರಿವರ ದುಡ್ಡು ಹೊಡೆದು ಊರ ಹೊರಗೆ ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ!’
‘ಊರಲ್ಲಿ ಉಳಿದವರು ಹೇಗಿದ್ದಾರೆ?'
ಈ ಪ್ರಶ್ನೆಗಂತೂ ಅವನು ಪ್ರತಿಯೊಬ್ಬನಿಗೂ ‘ದುಷ್ಟ’, ‘ಕೇಡಿ’, ‘ನೀಚ’ ಹರಾಮ್’ ಮುಂತಾದ ವಿಶೇಷಣಗಳನ್ನು ಕೊಟ್ಟೇ ಅವರ ಕತೆ ಹೇಳಲು ಶುರು ಮಾಡುತ್ತಿದ್ದ!
ಬಹುಕಾಲ ಕಾಣೆಯಾಗಿದ್ದ ಈ ವ್ಯಕ್ತಿ ಮತ್ತೆ ಪ್ರತ್ಯಕ್ಷನಾದಾಗ ಮೇಲೆ ಹೇಳಿದ್ದೆಲ್ಲ ನನ್ನೆದುರು ಫ್ಲ್ಯಾಷ್‌ಬ್ಯಾಕಿನಂತೆ ಮೂಡತೊಡಗಿತು: ‘ಊರಲ್ಲೇನು ವಿಶೇಷ?' ಎಂದು ನಾನು ಕೇಳುವುದನ್ನೇ ಕಾದು ಕೂತಿದ್ದವನಂತೆ, ‘ಎಲ್ಲರೂ ಕಳ್ಳರು ಕಣಯ್ಯ!’ ಎಂದು ಅವನು ಶುರು ಮಾಡಿದ. ನನಗೆ ಭಯ ಶುರುವಾಯಿತು. ಕಾರಣ, ಹತ್ತಾರು ವರ್ಷ ಕಾಲ ಅವನು ಕೊಟ್ಟ ಕನ್ನಡಕದ ಮೂಲಕ ನೂರಾರು ಜನರನ್ನು ನೋಡಿ, ಅವರೆಲ್ಲ ಖಳರೆಂದು ತೀರ್ಮಾನಿಸಿದ್ದೆ; ಇದು ನನಗೆ ಹೊಳೆದದ್ದು ನಂತರದ ವರ್ಷಗಳಲ್ಲಿ. ಆದರೆ ಕಳೆದ ಇಪ್ಪತೈದು ವರ್ಷಗಳಿಂದ ಅವನು ಮಾತ್ರ ಬದಲಾದಂತಿಲ್ಲ. ‘ಪೂರ್ವಗ್ರಹ ಬಿತ್ತನೆ’ಯ ತನ್ನ ಕಾಯಂ ಕೆಲಸವನ್ನು ಅವನು ಆರಾಮಾಗಿ ಮುಂದುವರಿಸಿದ್ದ!
ದುರಂತವೆಂದರೆ, ಅವನ ಪೂರ್ವಗ್ರಹ ಬಿತ್ತನೆಯ ಕಾಯಂ ಕಸುಬು ನನಗೆ ಗೊತ್ತಾಗುವ ಹೊತ್ತಿಗೆ ಹತ್ತಾರು ವರ್ಷಗಳು ಉರುಳಿದ್ದವು! ಅದು ತಿಳಿದದ್ದು ಕೂಡ ಆಕಸ್ಮಿಕ; ಅದೂ ‘ದುಡ್ಡು ಹೊಡೆದು ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾನೆ’ ಎಂದು ಅವನು ವರ್ಣಿಸಿದ್ದ ಮ್ಯಾಥಮ್ಯಾಟಿಕ್ಸ್ ಮೇಷ್ಟ್ರು ಪುಟ್ಟ ಮನೆಯಲ್ಲಿ ತೀರಾ ಸಾಧಾರಣವಾಗಿ ಬದುಕುತ್ತಿದ್ದನ್ನು ನಾನೇ ಕಣ್ಣಾರೆ ಕಂಡ ನಂತರ. ಈ ನಡುವೆ ಅವನ ಪೂರ್ವಗ್ರಹ ಬಿತ್ತನೆಯಿಂದಾಗಿ ಎಷ್ಟೊಂದು ಜನ ನನಗೆ ವಿಕೃತರಾಗಿ ಕಂಡಿದ್ದರು; ಎಷ್ಟೊಂದು ಜನರ ಬಗ್ಗೆ ನನ್ನೊಳಗೇ ಅನಗತ್ಯ ಅಸಹ್ಯ ಮೂಡಿ ಅವರನ್ನು ಸುಮ್ಮ ಸುಮ್ಮನೆ ಹೀಗಳೆದಿದ್ದೆ!
ಪೂರ್ವಗ್ರಹ ಬಿತ್ತನೆಯ ವಿಕೃತರು ನಮಗರಿವಿಲ್ಲದಂತೆಯೇ ನಮ್ಮ ಜೀವಕೋಶಗಳಿಗೆ ಎಂಥ ಮಾರಕಹಾನಿ ಮಾಡಿಬಿಟ್ಟಿರುತ್ತಾರೆ ಎಂಬುದು ನನಗೆ ಸರಿಯಾಗಿ ಅರ್ಥವಾದದ್ದು ಮರಣಶಯ್ಯೆಯಲ್ಲಿದ್ದ ಸಾಹಿತಿಯೊಬ್ಬರನ್ನು ಕಂಡಾಗ. ‘ಮರಣಶಯ್ಯೆ' ಎಂದರೇನೆಂಬುದು ಸರಿಯಾಗಿ ಅರಿವಿಗೆ ಬಂದದ್ದು ಕೂಡ ಆಗಲೇ. ಆ ಸಾಹಿತಿ ಮುದುಡಿಕೊಂಡು ಹಿಡಿಯಷ್ಟಾಗಿ ಮಲಗಿದ್ದರು. ಅವರನ್ನು ಈಚಿನ ವರ್ಷಗಳಲ್ಲಿ ಭೇಟಿಯಾಗಿರಲಿಲ್ಲ. ಭೇಟಿಯಾಗದಿರಲು ವಿಚಿತ್ರ ಕಾರಣಗಳಿದ್ದವು. ಈತ ಮಹಾ ಹೊಟ್ಟೆಕಿಚ್ಚಿನ ಮನುಷ್ಯನೆಂದು ಮಿತ್ರರೊಬ್ಬರು ಹೇಳಿದ್ದರು. ಅವನು ಯಾರ‍್ಯಾರದೋ ಪುಸ್ತಕಗಳನ್ನು ತನ್ನ ಹೆಸರಲ್ಲಿ ಅಚ್ಚು ಹಾಕಿಸಿಕೊಳ್ಳುತ್ತಾನೆಂದೂ ಹೇಳಿದ್ದರು. ಈತ ಫೋರ್ಜರಿ ಮಾಡಿದ್ದಾನೆಂದು ಕೂಡ ಅವರೇ ವದಂತಿ ಹಬ್ಬಿಸಿದ್ದರು. ಇವತ್ತು ಮರಣಶಯ್ಯೆಯಲ್ಲಿದ್ದ, ನೆರೆತ ಗಡ್ಡದ ಆ ಮುಖದಲ್ಲಿ ಆ ಯಾವುದರ ಕಲೆಯೂ ಕಾಣುವಂತಿರಲಿಲ್ಲ...
ಸಾವಿನ ಹಾಸಿಗೆಯಲ್ಲಿ ಮಲಗಿದವರ ಎದುರಿಗೆ ಕೂತಾಗ ಕೆಲವು ಭೀಕರ ಸತ್ಯಗಳು ಕಾಣತೊಡಗುತ್ತವೇನೋ. ಆಗ ಥಟ್ಟನೆ, ಈ ವ್ಯಕ್ತಿಯ ಬಗ್ಗೆ ಈ ತನಕ ನಾನು ಮತ್ತೊಬ್ಬನಿಂದ ಕೇಳಿರುವ ಮಾತುಗಳು ಸುಳ್ಳಾಗಿದ್ದರೆ... ಎನ್ನಿಸಿ ಕಸಿವಿಸಿ ಮುತ್ತಿಕೊಳ್ಳತೊಡಗಿತು. ಅವೆಲ್ಲ ಸುಳ್ಳಾಗಿದ್ದರೂ, ನಿಜವಾಗಿದ್ದರೂ, ಸಾಯುತ್ತಿರುವ ವ್ಯಕ್ತಿಗೆ ಅದರಿಂದೆಲ್ಲ ಏನೂ ಆಗಬೇಕಿರಲಿಲ್ಲ. ಆದರೆ ಪಾಪಪ್ರಜ್ಞೆ ಕಾಡತೊಡಗಿದ್ದು ನನಗೆ; ಈ ವ್ಯಕ್ತಿಯ ಬಗ್ಗೆ ಯಾರೋ ಹೊರಿಸಿದ ಹೊರೆಯನ್ನೇ ಹೊತ್ತು, ಅದನ್ನು ಹೆಗಲಿನಿಂದ ಕೆಳಗಿಳಿಸದೆ ಇಷ್ಟು ವರ್ಷ ಓಡಾಡಿರುವ ನನಗೆ; ನನ್ನಿಡೀ ಜೀವನದಲ್ಲಿ ಈ ವ್ಯಕ್ತಿಯ ಜೊತೆ ಸರಿಯಾಗಿ ಅರ್ಧ ಗಂಟೆ ಕೂಡ ಮಾತಾಡದೆ ಯಾರೋ ಎಳೆದುಕೊಟ್ಟ ಗೆರೆಗಳನ್ನೆಲ್ಲ ಕೂಡಿಸಿಕೊಂಡು ಈ ವ್ಯಕ್ತಿಯೊಬ್ಬ ಖಳನೆಂಬಂತೆ ಚಿತ್ರಿಸಿಕೊಂಡಿದ್ದ ನನಗೆ...
ನನಗೆ ನಿಜಕ್ಕೂ ಶಾಕ್ ಆದದ್ದು- ನಾವು ಹತ್ತಾರು ವರ್ಷ ಬೇರೆಯವರು ಕೊಟ್ಟ ಎರಕದಲ್ಲೇ ಇತರರ ವ್ಯಕ್ತಿತ್ವಗಳ ಅಚ್ಚುಗಳನ್ನು ಕಣ್ಣುಮುಚ್ಚಿಕೊಂಡು ತೆಗೆಯುತ್ತಿರುತ್ತೇವೆ ಅನ್ನಿಸಿದಾಗ; ಹಿಂದೆ ಮುಂದೆ ನೋಡದೆ ಅದನ್ನೇ ಸತ್ಯವೆಂದು ಇನ್ನೊಬ್ಬರಿಗೂ ಹಂಚುತ್ತಿರುತೇವೆ ಎಂಬುದು ಹೊಳೆದಾಗ. ಬಂಡಾಯ ಸಾಹಿತಿಯೊಬ್ಬರ ಅನುಯಾಯಿಯೊಬ್ಬ ಸುಮಾರು ಇಪ್ಪತ್ತು ವರ್ಷಗಳ ಕಾಲ ಅನಂತಮೂರ್ತಿಯವರ ಪುಸ್ತಕಗಳನ್ನೇ ಓದಿರಲಿಲ್ಲವಂತೆ. ಕಾರಣ: ಅವನ ಬಂಡಾಯ ಗುರುಗಳು ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಇಷ್ಟಪಡುತ್ತಿರಲಿಲ್ಲ. ಕನ್ನಡ ನಾಟಕಗಳ ಬಗ್ಗೆ ಡಾಕ್ಟರೇಟ್ ಪ್ರಬಂಧ ಬರೆದ ವಿದ್ಯಾರ್ಥಿಯೊಬ್ಬ ತನ್ನ ಥೀಸಿಸ್ಸಿನಲ್ಲಿ ಎಲ್ಲೂ ಲಂಕೇಶರ ನಾಟಕಗಳನ್ನೇ ಚರ್ಚಿಸದ ಹಾಗೆ ಆತನ ಗೈಡ್ ಬಹಳ ಜಾಗರೂಕತೆಯಿಂದ ‘ಮಿಸ್‌ಗೈಡ್’ ಮಾಡಿರುವುದನ್ನು ಕುರಿತು ಆ ಥೀಸಿಸ್ ಮೌಲ್ಯಮಾಪನ ಮಾಡಿದ ಪ್ರೊಫೆಸರೊಬ್ಬರು ಹೇಳಿದ್ದರು. ನಾನೇ ನೋಡಿದಂತೆ, ಎಷ್ಟೋ ಜನ ಮೇಷ್ಟ್ರುಗಳು, ನಾಯಕರು ತಮ್ಮ ಅನುಯಾಯಿಗಳೆಂದರೆ ತಮ್ಮ ವಿಷ, ಪೂರ್ವಗ್ರಹಗಳನ್ನು ತುಂಬುವ ಕಸದ ಬುಟ್ಟಿಗಳೆಂದು ಖಚಿತವಾಗಿ ನಂಬಿಕೊಂಡಂತೆ ಕಾಣುತ್ತದೆ.
ದಿನನಿತ್ಯದ ಚಟುವಟಿಕೆಗಳಲ್ಲೇ ಹೀಗೆ ಅವರಿವರ ಹೊರೆ ಹೊತ್ತು ಜೀವಮಾನ ಸವೆಸುವ ನಾವು ಎಂಥ ಹೊರಬರಲಾಗದ ಜಾಲದಲ್ಲಿ ಸಿಕ್ಕಿದ್ದೇವೆ ಎನ್ನುವುದು ಸರಿಯಾಗಿ ಗೊತ್ತಾಗುವುದು ನಮ್ಮ ಟೆಲಿವಿಷನ್, ಪತ್ರಿಕೆಗಳು ಹಾಗೂ ಧಾರ್ಮಿಕ, ರಾಜಕೀಯ ನಾಯಕರನ್ನು ಕಂಡಾಗ. ತಮ್ಮ ಬಾಯಿಗೆ ಬಂದದ್ದನ್ನೇ ಶಾಶ್ವತ ಸತ್ಯವೆಂಬಂತೆ ಘೋಷಿಸುವ ಟೆಲಿವಿಷನ್ ಮಾತುಗಾರರು, ಸುಳ್ಳು ಬರೆಯುವುದನ್ನೇ ರೂಢಿ ಮಾಡಿಕೊಂಡ ಪತ್ರಕರ್ತರು, ತಮ್ಮನ್ನು ಹೊಗಳದವರನ್ನು, ಪ್ರಶಸ್ತಿ ಕೊಡದವರನ್ನು ಬಯ್ಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಲೇಖಕರು.... ಸದಾ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವುದನ್ನೇ ಜೀವನವಾಗಿಸಿಕೊಂಡಿರುವ ಕೋಮುವಾದಿಗಳು, ಜಾತಿವಾದಿಗಳು...
ಇಂಥವರೆಲ್ಲ ಸೇರಿ ಜನರಲ್ಲಿ ರೂಪಿಸಿರಬಹುದಾದ ಅಭಿಪ್ರಾಯಲೋಕ ಎಷ್ಟು ನರಕಸದೃಶವಾದುದು ಎಂಬುದನ್ನು ನೆನೆದರೆ ದಿಗ್ಭ್ರಮೆಯಾಗುತ್ತದೆ. ಅದಕ್ಕಿಂತ ಹೆಚ್ಚು ದಿಗ್ಭ್ರಮೆಯಾಗುವುದು ‘ಪೂರ್ವಗ್ರಹ ಬಿತ್ತನೆ’ಯನ್ನೇ ತಮ್ಮ ಜೀವಮಾನವಿಡೀ ಮಾಡುವ ವ್ಯಕ್ತಿಗಳು ತಮ್ಮೊಳಗೇ ಸೃಷ್ಟಿಸಿಕೊಂಡಿರುವ ಭೀಕರ ನರಕ ಎಂಥದೆಂಬುದನ್ನು ನೆನೆಸಿಕೊಂಡಾಗ!
-ಇವು ಮೇಲೆ ಹೇಳಿದ ೧೯೯೮ರ ಲೇಖನದ ಕೆಲವು ಭಾಗಗಳು.
ಭಾಗ:೩
ಅಪ್ ಡೇಟ್: ಸದರಿ ಲೇಖನವನ್ನು ಓದಿದ್ದ ಗೆಳೆಯನೊಬ್ಬ ಅದರಲ್ಲಿದ್ದ ಪೂರ್ವಗ್ರಹಬಿತ್ತನೆ ಕುರಿತ ಗ್ರಹಿಕೆಗಳನ್ನು ಬಹುವಾಗಿ ಒಪ್ಪಿದ್ದನೆಂದು ಹೇಳಿದೆನಷ್ಟೆ? ‘ಅದು ನನ್ನ ಕಣ್ಣು ತೆರೆಸಿತು’ ಎಂದು ಕೂಡ ಆತ ಹೇಳಿದ್ದ. ಅದೆಲ್ಲ ನಿಜವಿರಬಹುದು. ವಿಚಿತ್ರವೆಂದರೆ, ಈತ ಕೂಡ ಮುಂದೆ ಬಹು ಕಾಲ ನಮ್ಮ ಅನೇಕ ಮಿತ್ರರ ಬಗ್ಗೆ ಇದೇ ಬಗೆಯ ಪೂರ್ವಗ್ರಹ ಬಿತ್ತನೆಯ ಕೆಲಸ ಮಾಡಿದ್ದು ಈಚೆಗೆ ಕಂಡು ಬಂದಾಗ ಬೆಚ್ಚಿದೆ.
ಇದು ನಿಜಕ್ಕೂ ನನ್ನಲ್ಲಿ ವಿಚಿತ್ರ ತಳಮಳ ಹುಟ್ಟಿಸಿತು. ಪೂರ್ವಗ್ರಹಗಳನ್ನು ಬಿತ್ತುವವರ ಬಗ್ಗೆ ಒಂದು ‘ತಾತ್ವಿಕ’ ಲೇಖನ ಬರೆದವನಿಗಾಗಲೀ, ಆ ಲೇಖನದ ಗ್ರಹಿಕೆಗಳನ್ನು ಒಪ್ಪಿ ಮೆಚ್ಚಿದವನಿಗಾಗಲೀ ‘ಜ್ಞಾನೋದಯ’ ಎನ್ನುವುದು ಅಷ್ಟು ಸುಲಭವಲ್ಲ ಎಂಬ ಹೊಸ ಜ್ಞಾನೋದಯ ಈ ಅನುಭವದಿಂದ ಮೂಡತೊಡಗಿತು!
ಮೊನ್ನೆ ಈ ಥರದ ಪೂರ್ವಗ್ರಹ ಬಿತ್ತನೆಯ ಬಗ್ಗೆ ಕತೆಗಾರ ಮಿತ್ರರೊಬ್ಬರ ಜೊತೆ ಮಾತಾಡುತ್ತಿದ್ದಾಗ, ಇಂಥ ಮತ್ತೊಬ್ಬ ಪೂರ್ವಗ್ರಹ ಬಿತ್ತನೆಕಾರನ ಉದಾಹರಣೆ ಎದುರಾಯಿತು! ಈ ಸಲ ಏನಾಯಿತೆಂದರೆ, ನಾನೂ, ಈ ಕತೆಗಾರ ಮಿತ್ರರೂ ಆ ಪೂರ್ವಗ್ರಹ ಬಿತ್ತನೆಯ ಹೊಸ ವ್ಯಕ್ತಿಯ ಮಿಕಗಳಾಗಿದ್ದೆವು! ಅಂದರೆ, ಲೋಕದಲ್ಲಿ ಇಂಥ ಮಹನೀಯರದೇ ಒಂದು ಸಿದ್ಧ ಮಾದರಿ ಇರುವಂತಿದೆ. ಯಾವುದೇ ಘಟನೆ ಇರಲಿ, ವ್ಯಕ್ತಿಯಿರಲಿ, ಇವರ ವರ್ಷನ್ ಸದಾ ಸಿದ್ಧವಿರುತ್ತದೆ! ಅದೂ ನಿಜದ ತಲೆಯ ಮೇಲೆ ಹೊಡೆದಂತೆ!
ಅದೇನೇ ಇರಲಿ, ಪೂರ್ವಗ್ರಹ ಬಿತ್ತನೆಗಾರರು ಸೃಷ್ಟಿಸುವ ನರಕಕ್ಕಿಂತ ಅವರೊಳಗೆ ಸೃಷ್ಟಿಯಾಗಿರುವ ನರಕ ನಿಜಕ್ಕೂ ಭೀಕರವಾಗಿರಬಲ್ಲದು! ‘ಕೊಂದವರುಳಿಯುವರೇ ಕೂಡಲ ಸಂಗಮದೇವಾ?’ ಎಂದು ಬಸವಣ್ಣ ತನ್ನ ಸುತ್ತ ಮುತ್ತ ನೋಡಿ, ಆಳವಾಗಿ ಯೋಚಿಸಿ, ನಿಜಕ್ಕೂ ಮರುಕದಿಂದ ಹೇಳಿದ್ದನೆಂಬುದು ನನ್ನ ಊಹೆ!
Comments
12 Comments
| ಮಂಜುನಾಥ್ ಸಿ ನೆಟ್ಕಲ್
ಕೊಂದವರುಳಿಯುವರೆ ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಪೂರ್ವಗ್ರಹ ಬಿತ್ತನೆಯ ವಿಕೃತರು ನಮಗರಿವಿಲ್ಲದಂತೆಯೇ ನಮ್ಮ ಜೀವಕೋಶಗಳಿಗೆ ಎಂಥ ಮಾರಕಹಾನಿ ಮಾಡಿಬಿಟ್ಟಿರುತ್ತಾರೆ. ಎಂಬುದು ಅಕ್ಷರಶಃ ಸತ್ಯ ಸರ್... ಕೆಲವೊಮ್ಮೆ ಸತ್ಯಾಂಶ ತಿಳಿಯಲು ಪ್ರಯತ್ನ ಪಡದೆ ಕೇಳಿದ್ದನ್ನೇ ನಂಬಿ ನಿರ್ಧಾರ ಮಾಡಿ ದುರಂತಗಳೇ ನಡೆದು ಹೋಗಿವೆ. ಪ್ರತಿಯೊಬ್ಬರೂ ಕೇಳಿದ್ದು... ನೋಡಿದ್ದು ಮಾತ್ರ ಸತ್ಯ ಎಂದು ನಂಬದೆ ಯೋಚಿಸಿ ವಿಶ್ಲೇಷಣೆ ಮಾಡಿ ಅರಿಯಬೇಕು ಎಂಬುದನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
| ಚರಣ್
ಇದೊಂತರ ವಿಷಸರಪಳಿ ಇದ್ದಂಗೆ, ಎಷ್ಟೋ ಬಾರಿ ನಾವೇ ಇದರ ಪಾತ್ರದಾರಿಗಳಾಗಿ ವರ್ತಿಸ್ತಾ ಹೋಗ್ತೇವೆ; ಬೇರೆ ಪೂರ್ವಗ್ರಹಿಗಳನ್ನು ಚಿಂತನೆ ಹಾಗೂ ನಡತೆಯಲ್ಲಿ ಅನುಕರಿಸುತ್ತಾ ಇರ್ತೇವೆ. ಇದರ ಬಿತ್ತನೆಗಿಂತ, ಅದರ ಅರಿವು ಇಲ್ಲದ್ದು ಅಪಾಯಕಾರಿ ಅಂತ ಕೆಲವು ಸಲ ಅನ್ನಿಸುತ್ತದೆ. ಪೂರ್ವಗ್ರಹದ ಗ್ರಹಣದಿಂದ ಸತ್ಯ ಕಾಣುವುದು ತುಂಬಾ ಕಷ್ಟದ್ದು ಸರ್, ಆದ್ದರಿಂದ ಉತ್ತರದಾಯಿ ಇಲ್ಲದ ಅಗ್ಗದ ಬೀಸುಮಾತುಗಳನ್ನು ಫಿಲ್ಟರ್ ಇಲ್ಲದಂಗೆ ಅರಗಿಸಿಕೊಳ್ಳುತ್ತ, ಕಕ್ಕುತ್ತ ಹೋಗ್ತೇವೆ; ಒಮ್ಮೊಮ್ಮೆ ಇವುಗಳು ಇಲ್ಲದೆ ಮಾತೇ ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ.
| ಸದಾನಂದ ಆರ್
ಹೌದು, ದುರ್ಬಲ ಮನುಷ್ಯನ ಸಹಜ ಗುಣವಿದು - ಇತರರನ್ನು ಆದಷ್ಟು ಕೆಳಗಿಳಿಸಿ, ಆನಂತರ ಅವರನ್ನು ಕೆಳಗಿರಿಸಿ, ತಾನೆಷ್ಟು ದೊಡ್ಡವನು ಎಂದು ಸಾಬೀತು ಮಾಡುವ ಹಪಹಪಿಕೆ. ಮರಕ್ಕಿಂತ ಮರ ದೊಡ್ಡದಿರುತ್ತದೆ ಎನ್ನುವ ಸಹಜ ಮಾತು ಇವರಿಗೆ ಬೇಡ. ಹಾಗಾಗಿ ಅವರಲ್ಲಿ ತುಂಬಿರುವ ಅಸಹಜ ಸ್ಥಿತಿಯ ಕಾರಣದಿಂದ ಅವರೇ ಸೃಷ್ಟಿಸಿಕೊಳ್ಳುವ ಭೀಕರ ಲೋಕದಲ್ಲಿ ಅವರು ನರಳವುದಲ್ಲದೇ, ಇಂತುಹುದೇ ಮನಸ್ಥಿತಿಯಿರುವ ಇನ್ನಷ್ಟು ಜನರನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ! ಇಯಾಗೋನ ಪಾತ್ರ ನೆನಪು ಮಾಡಿರುವುದು ಉಚಿತವಾಗಿದೆ. ವಕ್ರ ದೃಷ್ಟಿಯ ಆತನಿಗೆ ಎಲ್ಲದರಲ್ಲೂ ಎಲ್ಲರಲ್ಲೂ ವಕ್ರವೇ ಕಾಣುವುದು. ಇಂತಹವರ ನರಕಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವುದನ್ನು ನೀವು ಖಚಿತವಾಗಿ ಗುರುತಿಸಿದ್ದೀರಿ. ತಾಯ್ತನದ ಗುಣ ನಿಮ್ಮಲ್ಲಿ ಸಹಜವಾಗಿರುವುದರಿಂದಲೇ ಈ ಅಸಹಜ ಗುಣದವರ ಕುರಿತು ಮರುಗಿದ್ದೀರಿ. ಹಾಗಾಗಿ ಬಸವಣ್ಣು ಮಾತು ʻಕೊಂದವರುಳಿಯುವವರೆ ಕೂಡಲಸಂಗಮದೇವʼ ಲೇಖನದ ಅಂತ್ಯದಲ್ಲಿ ಕಾಣಿಸಿಕೊಂಡಿದೆ.
| Azeempasha
Sir, this article again and again enforces that the Told and the Heard might be wrong. The speaker and the spoken can create always half naked stories. Thread of every word in this article says that being faithful friend is not a mistake but being a faithful listener is foolishness. Sir you made Aristotle, Shakespeare, Wordsworth, Coleridge and so on (who are visible in this article to a sensible reader) just to close their eyes and smile and are saying that "Nataraj not only you, we too became pray for such kinds, that's why we wrote that man cannot create or present Original". , END NOTE: Every reader or freind of Prof. Nataraj keeps forefinger on his/her cheek and questions himself/herself " Did I say anything false about somebody to Nataraj" "Could that Ramachandra be me?" "I didn't meet him recently, certainly I am not that Ramachandra" and..... "
| ಸೋಮಶೇಖರ್ ಕದಿರೇಹಳ್ಳಿ
ಚಿನ್ನದ ಗುಣನೆ ಹೊಳೆಯುವಿಕೆ , ಕಬ್ಬಿಣಕ್ಕೆ ಇದು ಸಾದ್ಯವಿಲ್ಲ , ಹಾಗಂತ ಚಿನ್ಸ ಅದನ್ಬ ಸಾಬೀತು ಪಡಿಸಬೇಕಿಲ್ಲ ಅನಿಸುತ್ತೆ ಸರ್, ಲೋಕ ಇರುವ ವರೆವಿಗೂ ಇಂತಹ ಜಂತುಗಳು ನಮ್ಮೊಳಗೆ ಸಿಲುಕಿರುತ್ತಾರೆ ಇಂತವರ ಕಾಯಕವೇ ದೂರುವ ಕಾಯಕ, ಅವರ ಇವರು ಕೊನೆಗೆ ಜಂತುವಿನಂತೆ ಯಾತನೆ ಪಡುತ್ತಾರೆ ಸರ್
| Chandana Siddaraj
ನೀವೇನೇ ಹೇಳಿ, ನಮ್ಮ ಪೆದ್ದುತನದ ರತ್ನಗಂಬಳಿಯಿಲ್ಲದೆ ಪೂರ್ವಗ್ರಹಕೋರರು ನಮ್ಮನ್ನು ಆಕ್ರಮಿಸಲಾರರು. ಈಗಂತೂ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಮಾಹಿತಿ ಮೂಲವಿರುತ್ತದೆ. ಪತ್ರಕರ್ತರು, ವಿಮರ್ಶಕರು, ರಾಜಕೀಯದವರು, ವ್ಯಾಪಾರಿಗಳು, ಆಡಳಿತಗಾರರು, ಸಾಮಾನ್ಯ ಜ್ಞಾನ ಹೊಂದಿದವರು, ರೌಡಿಗಳು.....ಇಂಥವಕ್ಕೆಲ್ಲ ಬಲಿಯಾಗುವುದಿಲ್ಲ.
| Poornima L
ಚಟ ಅಥವಾ ಮನಶಾಸ್ತ್ರೀಯ ಕಾರಣದಿಂದ ಹುಟ್ಟಿಕೊಳ್ಳುವ ಪೂರ್ವಗ್ರಹ ಕರ್ಮಿಗಳನ್ನು ಸಹಿಸಿಕೊಳ್ಳಬಹುದು ಅದನ್ನು ಬೇಕೆಂದೇ ಟೂಲ್ ಕಿಟ್ ಮಾಡಿಕೊಳ್ಳುವುದು ಈಗ ಬಲಗೊಂಡಿದೆ. ಅದು ಇಯಾಗೋ ಮಾದರಿಗಿಂತ ಭೀಕರ (ಈ ಟೈಪ್ ಕ್ಯಾರಕ್ಟರ್ ಹಾಗಾಗಲು ʼನೆಪʼ ಕೂಡ ಇತ್ತು). ಉದಾಹರಣೆಗೆ ರಾಷ್ಟ್ರೀಯತೆಯು ಬಲದವರು ಹೇಳುವಷ್ಟು ಅದ್ಭುತವೂ ಅಲ್ಲ. ಎಡದವರು ನಿರೂಪಿಸುವಷ್ಟು ಪ್ರತಿಗಾಮಿಯೂ ಅಲ್ಲ- ವಿಶೇಷವಾಗಿ ಬೇರೆ ದೇಶಗಳಲ್ಲಿ ರಾಷ್ಟ್ರೀಯತೆ, ವಲಸೆ ಧೋರಣೆ, ಜನಾಂಗೀಯ ತಾರತಮ್ಯ ಇತ್ಯಾದಿ ವಿಜೃಂಭಿಸುತ್ತಿರುವಾಗ. ಜನ ಸುಲಭಕ್ಕೆ ಯಾವುದನ್ನೂ ನಂಬುವುದಿಲ್ಲ. ಸ್ವಾರ್ಥಕ್ಕೆ ವದಂತಿ ನಂಬುವುದು, ನಂಬಿಸುವುದು ಬೇರೆ ವಿಷಯ. ಪಠ್ಯಪುಸ್ತಕ, ಪತ್ರಿಕೆಗಳು, ಸಾಹಿತ್ಯ, ಮೀಡಿಯಾ, ಪ್ರಶಸ್ತಿಗಳು ಇವನ್ನೆಲ್ಲ ಅಪನಂಬಿಕೆಯ ನಿಗಾವಣೆಯಲ್ಲಿ ಅಷ್ಟಿಷ್ಟು ಹತ್ತಿರ ಬಿಟ್ಟುಕೊಳ್ಳುತ್ತಾರೆ. ಆರೋಗ್ಯಕರ ಸಿನಿಸಿಸಂ ಕೂಡ ಮೌಲ್ಯವೇ. ಲೇಖನದ ವಿಚಾರಕ್ಕೆ ʼಕೊಂದವರು....ʼ ಎಂಬ ಅದ್ಭುತ ಸಾಲು ಹೆಚ್ಚಿನ ಭಾರದ್ದಾಯಿತು. ಕೊಲೆಯಷ್ಟು ಕ್ರೌರ್ಯ ಅದರಲ್ಲಿಲ್ಲ (ರೂಪಕವಾಗಿಯೂ). ಅಭಿಪ್ರಾಯ ರೂಪಿಸುವ ಎಲ್ಲ ಶಕ್ತಿಗಳು ತಮ್ಮ ತಮ್ಮ ಹಿತಾಸಕ್ತಿಗಾಗಿ ಭ್ರಷ್ಟಾಚಾರದ ಕಡೆಗೆ ಕುರುಡಾಗಿರುವುದು ಪೂರ್ವಗ್ರಹ ರೋಗಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ಕಳ್ಳಾಟತನದ್ದು. ಜಾತಿ, ಓಟು, ಮೀಸಲಾತಿ ಇತ್ಯಾದಿಗಳನ್ನು ವಿಶ್ಲೇಷಿಸುವಲ್ಲಿ ಕಾಣುವ ಶಕ್ತಿ, ಪ್ರತಿಭೆ ಹಾಗೂ ವಕೀಲಿಕೆ ದೇಶದ ದೊಡ್ಡ ಪಿಡುಗಾದ ಭ್ರಷ್ಟಾಚಾರದ ಬಗ್ಗೆ ನಿಸ್ತೇಜವಾಗಿವೆ.
| Philomina J
ನೀವು ಹೇಳುವುದು ಯಾವುದಾದರೂ ಪೂರ್ವಗ್ರಹ ಪ್ರಸಾರಕರು ಮೇಲೆ ತೀವ್ರ ಸ್ವರೂಪದ ಆಪಾದನೆ ಹಾಕುವುದು ಸರಿಯಾಗುವುದಿಲ್ಲ ಅದು ಸಂವಹನದ ವರಸೆಯೂ ನಿಜ ಹಾಗೂ ಅದರ ಇತಿಮಿತಿಯು ಹೌದು ಜಡ್ಜ್ಮೆಂಟ್ ಅಲ್ಲ ಮಾತಿನ ಜಾಯಮಾನದಲ್ಲಿ ಇದು ಬಹಳ ಸಲ ಅರ್ಥವಾಗುತ್ತದೆ ಉದ್ದೇಶಪಟ್ಟು ಈ ಕೆಲಸ ಮಾಡುವವರು ಹಾಗೂ ಸಿದ್ಧಾಂತ ಕೋರರು ಅವರು ನಿಜಕ್ಕೂ ಹೆಚ್ಚು ಪ್ರಶ್ನಾರ್ಹರು ಅತ್ತೆಯ ದೂರನ್ನು ಸೊಸೆಯ ದೂರನ್ನು ಎಷ್ಟು ಹೇಗೆ ತೆಗೆದುಕೊಳ್ಳಬೇಕೆಂದು ಸಮಾಜವೇ ಕಲಿಸುತ್ತದೆ ನಮಗೆ ಅನುಕೂಲ ಮಾಡಿದವರ ಜಾತಿಯ ಬಗ್ಗೆ ಕೃತಜ್ಞತೆ ತಾಳಿದರೆ ಅನಾನುಕೂಲವಾದಾಗ ಅವರನ್ನೇ ಜಾತಿ ಬುದ್ಧಿ ತೋರಿದರೆಂದು ಬೈದುಕೊಳ್ಳುತ್ತೇವೆ ತಪ್ಪು ಡ್ರೈವಿಂಗ್ ಸಂದರ್ಭದಲ್ಲಿ ನಮ್ಮ ವಾಹನವೇ ಸರಿ ಎಂದು ನಂಬುತ್ತೇವೆ ಅದರ ವಿಶ್ಲೇಷಣೆ ಬೇರೆ ಹೇಳಬಹುದು ಎಚ್ಚರಿಕೆ ಮುಖ್ಯ
| ಚಂದ್ರಶೇಖರ್
ಕೊಂದವರುಳಿವರೆ? ಮನುಷ್ಯನ ಒಳಗಿನ ವಿಷಜಂತುವಿನ ಆಟಕ್ಕೆ ಕೊನೆಯಿಲ್ಲ, ಹಾಗೇ ಇನ್ನೊಬ್ಬರ ಬಗ್ಗೆ ವದಂತಿ ಹಬ್ಬಿಸುವ ನೀಚ ಮನುಷ್ಯ ತಾನು ಶುದ್ಧ ಎಂದು ಭಾವಿಸಿರುತ್ತಾನೆ, ಪಶ್ಚಾತ್ತಾಪ ಅವನೊಳಗೆ ಎಂದಿಗೂ ಮೂಡಲಾರದು, ಆದರೆ ಬಲಿಪಶುವಾದವರ ಗತಿ ಏನಾಗಬಹುದು. ಊಹಿಸಿಕೊಂಡರೆ ಮೈ ನಡುಗುತ್ತದೆ. ನನಗೇ ಆ ಅನುಭವವಾಗಿದೆ. ಅದೊಂದು ಮಾನಸಿಕ ಕಾಯಿಲೆ. ಮನುಷ್ಯನ ಸಣ್ಣತನಕ್ಕೆ ಕೊನೆಯೆಲ್ಲಿ?
| GNS
Excellent. Introspective tone gives it authenticity and persuasiveness
| ಡಾ. ನಿರಂಜನ ಮೂರ್ತಿ ಬಿ ಎಂ
'ಕೊಂದವರುಳಿಯುವರೆ?' ತುಂಬಾ ಸೂಕ್ಷ್ಮ ಅವಲೋಕನ ಮತ್ತು ವಿಶ್ಲೇಷಣೆಗಳಿಂದ ಕೂಡಿದ ವಿಶಿಷ್ಟ ಲೇಖನ. ಈ ಪೂರ್ವಾಗ್ರಹ ಬಿತ್ತುವವರ ಮಾನಸಿಕ ಸ್ಥಿತಿ ಎಂತಹುದು, ಅವರ ಮನೋಭಾವ ಹೇಗಿರಬಹುದೆಂದು ಅರಿತು ಕೊಳ್ಳುವುದು ತುಂಬಾ ಕಷ್ಟದ ವಿಷಯವೆನಿಸುತ್ತೆ. ಅವರದು ಅವಿವೇಕವೋ, ಉಡಾಫೆನೋ, ಅಥವಾ ಸಿನಿಕತನವೋ ತಿಳಿಯದು. ಅದು ಏನಾದರೂ ಆಗಿರಲಿ, ಎದುರಿಗಿರುವ ವ್ಯಕ್ತಿ ನನ್ನ ತರಹವೇ ಇರುವ ಮನುಷ್ಯ ಎಂಬ ಸಾಮಾನ್ಯ ಅರಿವು ಎಲ್ಲರಲ್ಲೂ ಮೂಡಿದಾಗ, ಇಂತಹ ಪೂರ್ವಾಗ್ರಹಗಳು ಮತ್ತು ಅದರಿಂದಾಗುವ ಅನಾಹುತಗಳು ಕಡಿಮೆಯಾಗುತ್ತವೆ ಮತ್ತು ಮರೆಯಾಗುತ್ತವೆ.
| ಗುರು ಜಗಳೂರು
ಸರ್ ತಡವಾಗಿ ಓದಿದೆ.ಬಹಳ ಒಳ್ಳೆಯ ಲೇಖನ.ಆಗಲೇ ಲಂಕೇಶ್ ಪತ್ರಿಕೆಯಲ್ಲಿ ಎಷ್ಟು ಚೆನ್ನಾಗಿ ಬರೆದಿದ್ದೀರಿ.ಇದನ್ನು ಓದಿದಾಗ ಇದು ನಮಗೇ ಆದ ಅನುಭವ ಎನ್ನುವಷ್ಟು ಪ್ರಭಾವಶಾಲಿಯಾಗಿದೆ.ನಿಜ ಜೀವನದಲ್ಲಿಯೂ ನಮ್ಮಂಥವರಿಗೆ ನಮ್ಮ ಸಂಬಂಧಸಿದವರು ನಮಗೆ ಕಟ್ಟಿದ ಹಣೆಪಟ್ಟಿಯನ್ನು ಬಿಡಿಸಿಕೊಂಡ ಬರುವುದು ಕಷ್ಟಸಾದ್ಯವಾಯಿತು.ಅವನ,ಯಾರ ಮಗ ? ಅವನು ಪ್ರಯೋಜವಿಲ್ಲ ಎನ್ನುವ ಮಾತು.ನಿಜಕ್ಕೂ ಪ್ರಯೋಜನಕ್ಕೆ ಬಾರದಿರುವವರು ಅವರೇ ಆಗಿರುತ್ತಾರೆ.
Add Comment