ಕವಿ ಎಂಬ ಕಾಲದ ವಿದ್ಯಮಾನ
by Nataraj Huliyar
ದೊಡ್ಡ ಲೇಖಕ ಅಥವಾ ಲೇಖಕಿ ಬರಬರುತ್ತಾ ಕೇವಲ ಲೇಖಕರಾಗಿ ಉಳಿಯದೆ ಕಾಲದ ವಿದ್ಯಮಾನ ಅಥವಾ Phenomenon ಆಗಿ ಕಾಣತೊಡಗುವ ಬಗೆಯನ್ನು ಈ ಅಂಕಣದಲ್ಲಿ ಆಗಾಗ ಚರ್ಚಿಸಿರುವೆ. ಮೊನ್ನೆ ಜೂನ್ ೧೧ಕ್ಕೆ ಕವಿ ಸಿದ್ಧಲಿಂಗಯ್ಯನವರು ನಮ್ಮನ್ನಗಲಿ ಐದು ವರ್ಷವಾದದ್ದನ್ನು ಗೆಳೆಯರು ನೆನಸಿಕೊಂಡರು. ೨೦೨೧ರಲ್ಲಿ ಹಿರಿಯ ಚಿಂತಕ ಗೋಪಾಲಗುರು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಸಿದ್ಧಲಿಂಗಯ್ಯನವರನ್ನು ಕುರಿತು ಬರೆಯಲು ಹೇಳಿದ್ದರು; ‘ಮಯೂರ’ದ ಸಂಪಾದಕರಾಗಿದ್ದ ಗೆಳೆಯ ಸಂದೀಪ್ ನಾಯಕ್ ಸಿದ್ಧಲಿಂಗಯ್ಯನವರನ್ನು ಕುರಿತು ಸುದೀರ್ಘ ಲೇಖನ ಬರೆಯಲು ಪ್ರೇರೇಪಣೆಯಾದರು. ಈ ಸಲ ಈ ಎರಡೂ ಲೇಖನಗಳ ಆಯ್ದ ಭಾಗಗಳನ್ನು ಕೊಡುತ್ತಾ, ಕನ್ನಡದ ಮುಖ್ಯ ಕವಿಯೊಬ್ಬರು ಕಾಲದ ವಿದ್ಯಮಾನವಾಗಿ ಅರಳಿದ ಬಗೆಯನ್ನು ಒಂದು ಚೌಕಟ್ಟಿನಲ್ಲಿ ನೋಡಲೆತ್ನಿಸಿದೆ:
೧೯೬೦ರ ದಶಕದಲ್ಲಿ ಒಂದು ದಿನ ಬೆಂಗಳೂರಿಗೆ ಐವತ್ತು ಕಿಲೋಮೀಟರ್ ದೂರದಲ್ಲಿರುವ ಮಾಗಡಿ ಬಳಿಯ ಐನೋರ ಹೊಲವನ್ನು ಇಬ್ಬರು ಗಂಡಾಳುಗಳು ನೇಗಿಲ ನೊಗ ಹೊತ್ತು ಎತ್ತುಗಳಂತೆ ಉಳುತ್ತಿದ್ದರು. ಈ ದೃಶ್ಯವನ್ನು ದಲಿತಕೇರಿಯ ಪುಟ್ಟ ಹುಡುಗರು ತಮಾಷೆಯೆಂಬಂತೆ ನೋಡುತ್ತಿದ್ದರು. ಆ ಇಬ್ಬರಲ್ಲಿ ತನ್ನ ಅಪ್ಪ ದೇವಯ್ಯನೂ ಇರುವುದನ್ನು ಕಂಡ ಆ ಗುಂಪಿನಲ್ಲಿದ್ದ ಹುಡುಗ ಸಿದ್ಧಲಿಂಗಯ್ಯನಿಗೆ ವಿಚಿತ್ರ ಸಂಕಟ ಶುರುವಾಯಿತು.
ಕೆಲ ವರ್ಷಗಳ ನಂತರ ದೇವಯ್ಯ ಮಾಗಡಿ ಬಳಿಯ ಮಂಚನಬೆಲೆ ಬಿಟ್ಟು, ಹೆಂಡತಿ, ಮತ್ತು ಆರು ಮಕ್ಕಳೊಂದಿಗೆ ಬೆಂಗಳೂರಿನ ಶ್ರೀರಾಂಪುರದ ಗೋಪಾಲಸ್ವಾಮಿ ಅಯ್ಯರ್ ಕಾಲನಿಯ ಪುಟ್ಟ ಮನೆಯೊಂದರಲ್ಲಿ ಬಿಡಾರ ಹೂಡಿದರು. ಜಾಣ ಹುಡುಗ ಸಿದ್ಧಲಿಂಗಯ್ಯ ಹೈಸ್ಕೂಲಿನಲ್ಲಿದ್ದಾಗಲೇ ತನ್ನ ಎಕ್ಸರ್‌ಸೈಸ್ ನೋಟ್ ಬುಕ್ಕಿನ ಒಳಗೆ ತನ್ನ ಸಿಟ್ಟು, ಅಸಹನೆ, ದುಗುಡಗಳನ್ನೆಲ್ಲ ಪದ್ಯಗಳ ರೂಪದಲ್ಲಿ ಗೀಚಿಡುತ್ತಿದ್ದ. ಒಮ್ಮೆ ಈ ಹುಡುಗನ ಚಿಕ್ಕಪ್ಪನ ಮಗ ಆ ಪದ್ಯಗಳನ್ನೆಲ್ಲ ನೋಡಿ ದಿಗಿಲುಗೊಂಡ. ‘ಇಷ್ಟರಲ್ಲೇ ನಿನ್ನ ಮಗನ್ನ ಪೋಲೀಸೋರು ಇಡ್ಕಂಡೋಗ್ತರೆ’ ಎಂದು ಈ ಪದ್ಯಗಳ ಪರಿಣಾಮದ ಬಗ್ಗೆ ಈತ ದೇವಯ್ಯನವರನ್ನು ಹೆದರಿಸಿದ. ಹೆದರಿದ ದೇವಯ್ಯ ಆ ನೋಟ್ ಬುಕ್ಕನ್ನು ಒಲೆಗೆ ಹಾಕಿ, ಮಗನನ್ನು ಪೊಲೀಸರಿಂದ ಬಚಾವು ಮಾಡಿದೆ ಎಂದು ನೆಮ್ಮದಿಗೊಂಡರು. ಹುಡುಗ-ಕವಿ ರೇಗಿ, ಗೊಣಗಿ ಸುಮ್ಮನಾದರೂ ಕವಿತೆ ಮಾತ್ರ ಅವನ ಕೈ ಬಿಡಲಿಲ್ಲ.
ಹುಡುಗ ಸಿದ್ಧಲಿಂಗಯ್ಯ ಬರೆದ ಆರಂಭದ ಪದ್ಯಗಳು ಸುಟ್ಟು ಹೋದರೂ ಆ ಪದ್ಯಗಳಲ್ಲಿ ಚಿಮ್ಮುತ್ತಿದ್ದ ಭಾವ ಕವಿಪ್ರಜ್ಞೆಯನ್ನು ರೂಪಿಸುತ್ತಲೇ ಇತ್ತು. ಕಿಕ್ಕಿರಿದ ಪುಟ್ಟ ಮನೆಯಲ್ಲಿ ಎಷ್ಟೋ ಸಲ ನಿಲ್ಲಲು ಕೂಡ ಜಾಗವಿಲ್ಲದ ಕವಿ ಒಮ್ಮೆ ಸುಮ್ಮನೆ ನಡೆಯುತ್ತಾ ಹೋದಾಗ ಶ್ರೀರಾಂಪುರಕ್ಕೆ ಹೊಂದಿಕೊಂಡಿದ್ದ ಹರಿಶ್ಚಂದ್ರ ಸ್ಮಶಾನ ಕಾಣಿಸಿತು. ಅಂದಿನಿಂದ ಕವಿಗೆ ಸ್ಮಶಾನವೇ ಓದುವ, ಬರೆಯುವ, ತನ್ನ ಪಾಡಿಗೆ ಇರುವ ತಾಣವಾಯಿತು. ಹದಿಹರೆಯದಲ್ಲಿ ಭಾಷಣ ಮಾಡುವ ಕಲೆಯೂ ಕವಿಯಲ್ಲಿ ಬೆಳೆಯಿತು. ಮಂಟೇಸ್ವಾಮಿ ಒಕ್ಕಲಿನ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ಕವಿ ಅಂಬೇಡ್ಕರ್ ಬಗ್ಗೆ ಕಟ್ಟಿದ ಅರೆಸತ್ಯ-ಅರೆಕಲ್ಪನೆ ಬೆರೆತ ಕಥಾಪ್ರಸಂಗ ಸುತ್ತಮುತ್ತಲ ಕೇಳುಗರ ನಡುವೆ ಜನಪ್ರಿಯವಾಯಿತು. ಅಂಬೇಡ್ಕರ್ ಚಿಂತನೆಗಳನ್ನು ಅರಿಯುವ ಮೊದಲೇ ಅಂಬೇಡ್ಕರ್ ವ್ಯಕ್ತಿತ್ವ ಕವಿಯ ಭಾವಲೋಕದೊಳಗೆ ಇಳಿದಿತ್ತು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ದಲಿತಪರ ಚಟುವಟಿಕೆಗಳು ಕೂಡ ಕವಿಯನ್ನು ಅಂಬೇಡ್ಕರ್ ಚಿಂತನೆಗಳತ್ತ ಕರೆದೊಯ್ದವು.
ಹೀಗೆ ಡಾ. ಸಿದ್ಧಲಿಂಗಯ್ಯನವರು ಒಂದು ಕಾಲಘಟ್ಟದ ಹಲಬಗೆಯ ನಿರ್ಣಾಯಕ ವಿದ್ಯಮಾನಗಳ ಫಲವಾಗಿ ವಿಕಾಸಗೊಳ್ಳುತ್ತಾ ತಾವೇ ಒಂದು ಅಪೂರ್ವ ವಿದ್ಯಮಾನವಾದ ಕವಿ. ಇಂಥ ಕವಿಯನ್ನು ವ್ಯಕ್ತಿಪ್ರತಿಭೆಯಾಗಿ ನೋಡುವುದರ ಜೊತೆಗೇ, ಈ ಕವಿಯನ್ನು ಸೃಷ್ಟಿಸಿದ ಕಾಲಘಟ್ಟ, ವೈಚಾರಿಕ, ರಾಜಕೀಯ, ಸಾಮಾಜಿಕ ಪರಿಸರ, ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣಗಳ ಹಿನ್ನೆಲೆಯಲ್ಲಿ ನೋಡಿದರೆ ಹಲವು ಸತ್ಯಗಳು ಕಾಣುತ್ತವೆ:
ಎಪ್ಪತ್ತರ ದಶಕದ ಶುರುವಿನಲ್ಲಿ ಕಾಂಗ್ರೆಸ್ ರಾಜಕಾರಣ ಯಥಾಸ್ಥಿತಿವಾದಿಯಾಗಿ ಬಸವಳಿಯುತ್ತಿತ್ತು. ಆದರೆ ಕಾಂಗ್ರೆಸ್ಸಿನ ಕಾರ್ಯಕ್ರಮಗಳಿಂದಾಗಿ ಶೂದ್ರ, ದಲಿತ ತಲೆಮಾರುಗಳು ಹೊಸ ಶಿಕ್ಷಣವನ್ನೂ ಪಡೆಯುತ್ತಿದ್ದವು. ಪುರೋಹಿತಶಾಹಿಯನ್ನು, ಜಮೀನ್ದಾರಿಕೆಯನ್ನು, ಅಸ್ಪೃಶ್ಯತೆಯನ್ನು ಪ್ರಶ್ನಿಸಬಲ್ಲ ಹೊಸ ಹುಡುಗರು ಸಿದ್ಧವಾಗುತ್ತಿದ್ದರು. ಅದೇ ಆಗ ವಕೀಲರಾಗಿ, ಹರಿಹರದ ಹಳ್ಳಿಹಳ್ಳಿಗಳಿಗೆ ಸೈಕಲ್ಲಿನಲ್ಲಿ ಹೋಗಿ ದಲಿತರಲ್ಲಿ ಎಚ್ಚರ ಮೂಡಿಸುತ್ತಿದ್ದ ಬಿ. ಬಸವಲಿಂಗಪ್ಪ ರಾಜಕೀಯ ಪ್ರವೇಶಿಸಿದ್ದರು; ಆವರೆಗಿನ ವಿನಮ್ರ ದಲಿತ ರಾಜಕಾರಣದ ಭಾಷೆಗಿಂತ ಭಿನ್ನವಾದ ಸ್ವಾಭಿಮಾನದ ಭಾಷೆಯನ್ನು ಬಸವಲಿಂಗಪ್ಪ ಬಳಸಲಾರಂಭಿಸಿದ್ದರು; ದಲಿತ ಸಮುದಾಯಕ್ಕೆ ಛಲ, ಘನತೆ, ದಿಟ್ಟತನಗಳ ಹಾದಿ ತೋರಿಸುತ್ತಿದ್ದರು.
ಇತ್ತ ಸಾಹಿತ್ಯಲೋಕದಲ್ಲಿ ನವ್ಯ ಲೇಖಕರಾಗಿ ಶುರು ಮಾಡಿದ್ದ ತೇಜಸ್ವಿ, ಲಂಕೇಶ್, ಚಂದ್ರಶೇಖರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ ಥರದವರು ನವ್ಯ ಮಾರ್ಗ ತೊರೆದು ಶೂದ್ರ ಬರಹಗಾರರ ಒಕ್ಕೂಟವನ್ನು ರೂಪಿಸಿಕೊಂಡಿದ್ದರು. ಅಷ್ಟು ಹೊತ್ತಿಗಾಗಲೇ ಹಾಸ್ಟೆಲ್ ಸೇರಿದ್ದ ಸಿದ್ಧಲಿಂಗಯ್ಯ ದಲಿತ ವಿದ್ಯಾರ್ಥಿಗಳ ಪ್ರತಿಭಟನೆಯ ನೇತೃತ್ವ ವಹಿಸಿ ನಾಯಕರಾಗಿದ್ದರು. ವಿಧಾನಸೌಧದ ಗ್ಯಾಲರಿಯಿಂದ ಕರಪತ್ರ ತೂರಿದ್ದರು. ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಮಾಡುವ ಕಾಲಕ್ಕೆ ಸ್ಪಷ್ಟ ವೈಚಾರಿಕತೆಯ, ನಿರ್ಭಯ ನಿಲುವಿನ ಚರ್ಚಾಪಟುವೂ ಆಗಿದ್ದರು. ದೇವರ ಅಸ್ತಿತ್ವ ಕುರಿತು ಎ.ಪಿ.ಎಸ್. ಕಾಲೇಜಿನಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ಸ್ಟೇಜಿನ ಮೇಲೆ ಉರಿಯುತ್ತಿದ್ದ ದೀಪವನ್ನು ದೇವರ ಅವತಾರವೆಂದು ಪ್ರತಿಸ್ಪರ್ಧಿಗಳು ಮತ್ತೆ ಮತ್ತೆ ಹೇಳುತ್ತಿದ್ದುದನ್ನು ಕೇಳಿ ಸಿದ್ಧಲಿಂಗಯ್ಯನವರಿಗೆ ರೇಗಿಹೋಗಿತ್ತು. ತಮ್ಮ ಸರದಿ ಬಂದಾಗ ಸ್ಟೇಜು ಹತ್ತಿದ ಅವರು ಇದ್ದಕ್ಕಿದ್ದಂತೆ ದೀಪ ಉರುಬಿ ಆರಿಸಿ, ‘ನಿಮ್ಮ ದೇವರು ಇದ್ದ ಪಕ್ಷದಲ್ಲಿ ನಾನು ಮಾತಾಡುವುದನ್ನು ನಿಲ್ಲಿಸಲಿ’ ಎಂದು ವಿರೋಧಿಗಳಿಗೆ ಸವಾಲು ಹಾಕಿದರು!
1973ರಲ್ಲಿ ಬಸವಲಿಂಗಪ್ಪನವರು ಇಡೀ ಕನ್ನಡ ಸಾಹಿತ್ಯವನ್ನೇ ‘ಬೂಸಾ’ ಎಂದರೆಂದು ಮೇಲುಜಾತಿಗಳ ಅಪಪ್ರಚಾರ ಶುರುವಾಗಿ, ಅವರ ರಾಜೀನಾಮೆಗಾಗಿ ಒತ್ತಾಯ ಎದ್ದಿತು. ಸಿದ್ಧಲಿಂಗಯ್ಯ ಬಸವಲಿಂಗಪ್ಪನವರ ಪರ ನಿಂತರು. 3000 ಹುಡುಗರ ಪ್ರತಿಭಟನಾ ಪ್ರದರ್ಶನವನ್ನೂ ಸಂಘಟಿಸಿದರು. ಆಗ ಕರ್ನಾಟಕದ ಅನೇಕ ಪ್ರಗತಿಪರರಿಗೆ ಮೇಷ್ಟರಾಗಿದ್ದ ಜಿ. ರಾಮಕೃಷ್ಣ ನಡೆಸುತ್ತಿದ್ದ ‘ಸರ್ಕಲ್ ಫಾರ್ ದಿ ಸ್ಟಡಿ ಆಫ್ ಡಯಲೆಕ್ಟಿಕಲ್ ಮೆಟೀರಿಯಲಿಸಂ’ ಸಿದ್ಧಲಿಂಗಯ್ಯನವರಿಗೆ ಸೈದ್ಧಾಂತಿಕ ಸ್ಪಷ್ಟನೆ ನೀಡತೊಡಗಿತ್ತು. ಅವರು ಒಂದೆರಡು ವರ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದ ಸದಸ್ಯರೂ ಆಗಿದ್ದರು.
ಇದೆಲ್ಲದರ ಫಲವಾಗಿ, 1970ರ ದಶಕದ ಕರ್ನಾಟಕದ ನಕಾಶೆಯಲ್ಲಿ ಹೊಸ ಕವಿ-ನಾಯಕನೊಬ್ಬ ಹಠಾತ್ತನೆ ಮೂಡಿಬಂದಿದ್ದ. ಒಂದು ಕಾಲದ ವೈಚಾರಿಕ ಪ್ರೇರಣೆಗಳು, ಒತ್ತಡಗಳು, ವಿದ್ಯಮಾನಗಳು, ತಿರುವುಗಳು ಹಾಗೂ ವ್ಯಕ್ತಿಯ ಚಡಪಡಿಕೆಗಳು ಹೇಗೆ ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ಸೃಷ್ಟಿಸುತ್ತವೆ ಎಂಬುದನ್ನೂ ಈ ವಿದ್ಯಮಾನಗಳು ಹೇಳುತ್ತವೆ. ಈ ಹಿನ್ನೆಲೆಯ ಕವಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಸೇರಿ, ಜ್ಞಾನಭಾರತಿಯ ಮರಗಳಡಿ ತನ್ನ ಸಿಟ್ಟಿನ ಕವಿತೆಗಳನ್ನು ಓದಿದಾಗ ಅಲ್ಲಿದ್ದ ಖ್ಯಾತ ಅಧ್ಯಾಪಕ-ಲೇಖಕರು ಅಚ್ಚರಿಗೊಂಡು 'ಹೊಲೆ ಮಾದಿಗರ ಹಾಡುಗಳು' ಸಂಕಲನ ಪ್ರಕಟಿಸಿದರು. ಈ ಸಂಕಲನದ ‘ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ’ ಎಂಬ ಸ್ಫೋಟ ಹುಟ್ಟಿದ ಹಿನ್ನೆಲೆಯ ಬಗ್ಗೆ ಸಿದ್ಧಲಿಂಗಯ್ಯನವರೇ ಹೇಳಿದ ಅಂಶಗಳು ಕುತೂಹಲಕರವಾಗಿವೆ:
ಆಗ ಭರತ್ ಜುಂಝನ್ವಾಲ ಎಂಬ ಸಮಾಜವಿಜ್ಞಾನಿ ಬೆಂಗಳೂರಿನ ಸ್ಲಮ್ಮೊಂದರಲ್ಲೇ ವಾಸಿಸುತ್ತಾ, ಅಲ್ಲಿನ ಸ್ಥಿತಿಗತಿಗಳನ್ನು ಅರಿಯುತ್ತಾ, ಅಲ್ಲಿಗೆ ಲೇಖಕರನ್ನೂ ಚಿಂತಕರನ್ನೂ ಕರೆಯುತ್ತಿದ್ದರು. ಅವರೊಮ್ಮೆ ಡಿ. ಆರ್. ನಾಗರಾಜ್, ಶೂದ್ರ ಶ್ರೀನಿವಾಸ್, ಸಿದ್ಧಲಿಂಗಯ್ಯ ಮೊದಲಾದವರನ್ನು ಕರೆದುಕೊಂಡು ತಮಿಳುನಾಡಿನ ಹಳ್ಳಿಯೊಂದಕ್ಕೆ ಹೋದರು; ಅವರೆಲ್ಲಾ ಆ ಹಳ್ಳಿಯಲ್ಲೇ ಇದ್ದು ಅಲ್ಲಿನ ಸ್ಥಿತಿಗತಿಗಳನ್ನು ಹತ್ತಿರದಿಂದ ಅಧ್ಯಯನ ಮಾಡಬೇಕಾಗಿತ್ತು. ಈ ಕ್ಯಾಂಪಿಗೆ ಒಂದು ದಿನ ತಮಿಳುನಾಡಿನ ದಲಿತ ಸಮುದಾಯದ ಜನ ಬಂದು ತಮ್ಮ ದಾರುಣ ಸ್ಥಿತಿಗತಿಗಳನ್ನೂ, ತಮ್ಮ ಮೇಲೆ ಮೇಲುಜಾತಿಗಳು ನಡೆಸುತ್ತಿದ್ದ ಹಲ್ಲೆಗಳನ್ನೂ ಕುರಿತು ಹೇಳಿಕೊಳ್ಳಲಾರಂಭಿಸಿದರು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಸಿದ್ಧಲಿಂಗಯ್ಯನವರಿಗೆ ತಮ್ಮ ಸಮುದಾಯದ ಜನರ ಮೇಲೆ ನಡೆಯುತ್ತಿದ್ದ ಹಲ್ಲೆ ಕುರಿತು ಒಳಗಿನಿಂದ ಒದ್ದುಕೊಂಡು ಬರುತ್ತಿದ್ದ ಸಿಟ್ಟು; ಆ ಹಲ್ಲೆಗೆ ಪ್ರತಿಯಾಗಿ ಏನೂ ಮಾಡಲಾಗದ ಅಸಹಾಯಕತೆ- ಎರಡೂ ಸೇರಿ ‘ಇಕ್ರಲಾ ವದೀರ್ಲಾ…’ ಸ್ಫೋಟ ಹುಟ್ಟಿತು. ಕನ್ನಡ ಕಾವ್ಯಕ್ಕೆ ‘ಅಕಾವ್ಯ’ ಭಾಷೆಯನ್ನು ಪರಿಚಯಿಸಿದ ಖ್ಯಾತಿ ಪಡೆದ ಈ ಪದ್ಯದ ಅರ್ಥಗಳು, ಸಂದೇಶಗಳು ತಲೆಮಾರಿನಿಂದ ತಲೆಮಾರುಗಳಿಗೆ ಹಬ್ಬುತ್ತಲೇ ಇವೆ. ನೂರಾರು ಕವಿಗಳಿಂದ ಹೊಸ ಕವಿತೆಗಳನ್ನು ಬರೆಸಿವೆ, ಬರೆಸುತ್ತಲೇ ಇವೆ.
1974ರಿಂದಾಚೆಗೆ ದಲಿತ ಚಳುವಳಿಯ ಸಭೆಗಳಲ್ಲಿ ಸಿದ್ಧಲಿಂಗಯ್ಯನವರು ಸ್ಟಾರ್ ಭಾಷಣಕಾರರಾದರು. ಸಿಟ್ಟಿನ ನೇರ, ಪುಟ್ಟ ವಾಕ್ಯಗಳು, ಸಂದರ್ಭಕ್ಕಾಗಿ ಸಜ್ಜುಗೊಂಡ ಪ್ರಸಂಗಗಳು, ಅನಿರೀಕ್ಷಿತ ಪಂಚ್ ಲೈನ್‌ಗಳು, ಮೆಲ್ಲಗೆ ಹೊರಬರುವ ಕಿಲಾಡಿ ಹಾಸ್ಯ, ತಿವಿಯುವ ವ್ಯಂಗ್ಯ… ಎಲ್ಲವೂ ಸೇರಿದ ಅವರ ನೇರ, ಜೀವಂತ ಭಾಷಣಗಳು ಚಳುವಳಿಗೆ ಹೊಸ ಹೊಸ ಹುಡುಗರನ್ನು ಆಕರ್ಷಿಸಿದವು. ದಲಿತ ಚಳುವಳಿಯಲ್ಲಿ ಮಾತ್ರವಲ್ಲದೆ, ಕಮ್ಯುನಿಸ್ಟ್ ಚಳುವಳಿ, ಬಂಡಾಯ ಸಂಘಟನೆ, ವೈಚಾರಿಕ ಸಭೆಗಳು…ಹೀಗೆ ಎಲ್ಲ ಕಡೆ ಈ ಹುಡುಗರು ಕಾಣತೊಡಗಿದರು. ಸಿದ್ಧಲಿಂಗಯ್ಯನವರ ಪದ್ಯಗಳು ಯಾರ ವಿವರಣೆಯನ್ನೂ ಬೇಡದೆ ನೇರವಾಗಿ ಹಸಿವಿನಿಂದ ಸತ್ತೋರ ಸಮುದಾಯಗಳನ್ನು, ಸೈಜುಗಲ್ಲು ಹೊತ್ತೋರ ಮಕ್ಕಳನ್ನು, ‘ನನ್ನ ಜನಗಳ’ನ್ನು ತಲುಪುತ್ತಿದ್ದವು. ಹೊಸ ತಲೆಮಾರಿನ ವೈಚಾರಿಕ ಹುಡುಗ, ಹುಡುಗಿಯರು ಕಾಲೇಜುಗಳಲ್ಲಿ, ಕ್ಯಾಂಪಸ್ಸುಗಳಲ್ಲಿ ತಲೆಯೆತ್ತಿ ಓಡಾಡಲು ದಲಿತ ಚಳುವಳಿಯೂ ಕಾರಣವಾಗಿತ್ತು; ಸಿದ್ಧಲಿಂಗಯ್ಯನವರ ಹಾಡುಗಳನ್ನು ಟ್ಯೂನ್ ಮಾಡಿದ ಜನ್ನಿ, ಪಿಚ್ಚಳ್ಳಿ ಶ್ರೀನಿವಾಸರ ಹಾದಿಯಲ್ಲಿ ಹೋರಾಟದ ಹಾಡುಗಳನ್ನು ಹಾಡುವ ಸಾವಿರಾರು ಗಾಯಕರು ಕರ್ನಾಟಕದ ತುಂಬ ಹುಟ್ಟಿಕೊಂಡರು. ಆ ಗಾಯಕ ಪಡೆ ಇವತ್ತಿಗೂ ಬೆಳೆಯುತ್ತಲೇ ಇದೆ.
‘ಸಮುದಾಯ’ ಜಾಥಾದಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಕರ್ನಾಟಕದ ಎಲ್ಲೆಡೆ ತಲುಪಿದವು. ‘ನನ್ನ ಜನದ ಜೊತೆ ನಾನಾಡುವ ಮಾತು…ನಾನು ಕೊಡುವ ಕವನ’ ಎಂಬ ಕಾವ್ಯತತ್ವವನ್ನು ರೂಪಿಸಿಕೊಂಡು ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ, ದಲಿತರ ಸ್ಥಿತಿಗತಿಗಳನ್ನು ನೇರವಾಗಿ ತಲುಪಿಸುವ ‘ಪಂಚಮ’ ‘ನೆಲಸಮ’ ಬೀದಿ ನಾಟಕಗಳನ್ನು ಬರೆದರು; ಇವು ಸಾವಿರಾರು ಪ್ರದರ್ಶನಗಳನ್ನು ಕಂಡವು. ಬ್ರೆಕ್ಟ್ ನಾಟಕಗಳಿಂದ ಶುರು ಮಾಡಿ ರಂಗಭೂಮಿಗೂ ವೈಚಾರಿಕ ಹಾಡುಗಳನ್ನು ಬರೆದ ಸಿದ್ಧಲಿಂಗಯ್ಯ ಮುಂದೆ ಪೂರ್ಣ ಪ್ರಮಾಣದ ‘ಏಕಲವ್ಯ’ ನಾಟಕ ಬರೆದರು. ಸಿದ್ಧಲಿಂಗಯ್ಯನವರ ಏಕಲವ್ಯ ದ್ರೋಣಾರ್ಜುನರ ಸಂಚಿಗೆ ಬಲಿಯಾಗಿ ಬಲಗೈ ಹೆಬ್ಬೆರಳನ್ನು ಕೊಟ್ಟರೂ, ಎಡಗೈಯಲ್ಲಿ ಬಿಲ್ವಿದ್ಯೆ ಕಲಿಯಲು ಶುರು ಮಾಡುತ್ತಾನೆ. ಆ ಮೂಲಕ ಹೊಸ ಏಕಲವ್ಯ ಬುಡಕಟ್ಟು ಸಮುದಾಯಗಳ, ಹಾಗೂ ಶಿಕ್ಷಣದಿಂದ ವಂಚಿತರಾದ ಎಲ್ಲ ಸಮುದಾಯಗಳ ಹೊಸ ಕಾಲದ ಛಲವನ್ನು ಸಾರುತ್ತಾನೆ. ಸಿದ್ಧಲಿಂಗಯ್ಯನವರ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಸಾಲು ಮೊದಲು ಘೋಷಣೆಯಂತೆ ಕಂಡಿದ್ದರೂ ನಂತರ ಅದು ಎಲ್ಲೆಡೆ ಪ್ರತಿಧ್ವನಿಸಿ ದಲಿತ ಸಮುದಾಯದ ಖಡಕ್ಕಾದ ರಾಜಕೀಯ ಪ್ರತಿಪಾದನೆಯೇ ಆಯಿತು. ಕವಿತೆಯೊಂದರ ಸಾಲು ರಾಜಕಾರಣದಲ್ಲಿ, ಅಸಮಾನತೆಯ ಸಮಾಜದಲ್ಲಿ ಸಾಕಾರವಾದ ಕಾಲ ಅದು. ಅಂದರೆ ನಾಡಿನ ಗೋಡೆಗಳ ಮೇಲಿನ ಬರಹ ನಾಡಿನಲ್ಲಿ ಜಾರಿಯಾಗತೊಡಗಿತ್ತು:
ಸಿದ್ಧಲಿಂಗಯ್ಯನವರ ಕಾವ್ಯ ದಲಿತ ಕಾವ್ಯಮಾರ್ಗವನ್ನು ಉದ್ಘಾಟಿಸಿದಂತೆ ಬಂಡಾಯ ಸಾಹಿತ್ಯಕ್ಕೂ ಒಂದು ಪ್ರೇರಣೆಯಾಯಿತು. ಬಂಡಾಯದ ‘ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಧ್ಯೇಯವಾಕ್ಯಕ್ಕೆ ಮಾರ್ಕ್ಸ್‌ವಾದಿ ಸಾಹಿತ್ಯ ತತ್ವದ ಹಿನ್ನೆಲೆಯೂ ಇತ್ತು; ಈ ಘೋಷಣೆಗೆ ಸಿದ್ಧ ಪುರಾವೆಯಾಗಿ ಸಿದ್ಧಲಿಂಗಯ್ಯನವರ ಕಾವ್ಯವೂ ಜೊತೆಗಿತ್ತು. ದಲಿತ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯಗಳೆರಡೂ ಕರ್ನಾಟಕದ ದಲಿತ ,ಶೂದ್ರ, ಮುಸ್ಲಿಂ, ಮಹಿಳಾ ಲೋಕಗಳ ಸಿಟ್ಟಿನ, ಕಾಳಜಿಯ ತರುಣ, ತರುಣಿಯರ ಕ್ರಿಯಾಶೀಲತೆ ಉಕ್ಕಿ ಹೊರಚೆಲ್ಲುವಂತೆ ಮಾಡಿದವು. ಪು.ತಿ.ನ.ರಂಥ ನವೋದಯ ಕವಿಯೂ ಸಿದ್ಧಲಿಂಗಯ್ಯನವರ ಧಾಟಿಯಲ್ಲಿ ‘ಹೆಸರೆ ಇಲ್ಲದವರು’ ಎಂಬ ಪದ್ಯ ಬರೆದರು. ಅಡಿಗರೂ, ಕಂಬಾರರೂ ಅಂಬೇಡ್ಕರ್ ಕುರಿತ ಕವಿತೆ ಬರೆಯುವ ಕಾಲವೂ ಬಂತು. ಸಿದ್ಧಲಿಂಗಯ್ಯನವರು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕವಿಯಾಗಿ ರೂಪುಗೊಂಡಿದ್ದು ಹೀಗೆ. ಅಸಲಿ ಕವಿಯ ಹೊಸ ಭಾಷೆ ಸ್ವೀಕಾರವಾಗಲು ಹೀಗೆ ಕಾಲದ ಸಿದ್ಧತೆಯೂ ಮುಖ್ಯ. ಇಂಥ ಮುಕ್ತ ಸ್ವೀಕಾರದ ಕಾಲದಲ್ಲಿ ಬರೆದ ಸಿದ್ಧಲಿಂಗಯ್ಯ ಎಲ್ಲ ಬಗೆಯ ಬಿಡುಗಡೆಯ ಚಳುವಳಿಗಳ ನಾಯಕರಿಗೆ, ಕಾರ್ಯಕರ್ತರಿಗೆ, ಸಂಘಟನೆಗಳಿಗೆ ಪ್ರಿಯರಾಗುತ್ತಾ ಹೋದರು.
ದೇಶದ ರಾಜಕೀಯದಲ್ಲಿ ದಲಿತ ಪ್ರವಾಹ ಉಕ್ಕತೊಡಗಿದ್ದ ಈ ಘಟ್ಟದಲ್ಲಿ ಸಿದ್ಧಲಿಂಗಯ್ಯನವರ ಜನಪ್ರಿಯತೆ, ಪ್ರಭಾವ ಹಾಗೂ ಅವರಿಗಿದ್ದ ಅನುಯಾಯಿಗಳ ಲೋಕವನ್ನು ಗಮನಿಸುತ್ತಿದ್ದ ಕರ್ನಾಟಕದ ಅಧಿಕಾರ ರಾಜಕಾರಣ ಸಿದ್ಧಲಿಂಗಯ್ಯನವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಲೇ ಇತ್ತು. ದಲಿತ ವೋಟುಗಳ ಮೇಲೂ ಒಂದು ಕಣ್ಣಿಟ್ಟ ರಾಮಕೃಷ್ಣ ಹೆಗಡೆ ಸರ್ಕಾರ ಸಿದ್ಧಲಿಂಗಯ್ಯನವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಿತು. ಈ ವಿದ್ಯಮಾನ ಕರ್ನಾಟಕದ ಸೈದ್ಧಾಂತಿಕ ವಲಯದಲ್ಲಿ ದೊಡ್ಡ ಚರ್ಚೆಯ ವಸ್ತುವೇ ಆಯಿತು. ಇದು ಕ್ರಾಂತಿಕಾರಿ ಕವಿಯೊಬ್ಬ ಪ್ರಭುತ್ವದೊಂದಿಗೆ ರಾಜಿಯಾದ ಬೆಳವಣಿಗೆಯಂತೆ ಕಂಡದ್ದು ಸಹಜವಾಗಿತ್ತು. ಆ ಸಂದಿಗ್ಧ ಪರಿಸ್ಥಿತಿಯನ್ನು ಸಿದ್ಧಲಿಂಗಯ್ಯ ಸಹಜ ಜಾಣ್ಮೆಯಿಂದಲೂ, ತಮ್ಮ ಮೂಲ ಕಾಳಜಿಗಳನ್ನು ಸದನದ ಚರ್ಚೆಗಳಲ್ಲಿ ತರುವುದರ ಮೂಲಕವೂ ನಿಭಾಯಿಸಿದ್ದು ಕೂಡ ಅಷ್ಟೇ ಮುಖ್ಯವಾಗಿದೆ. ಕೊರಗ ಸಮುದಾಯದ ಮೇಲೆ ಹೇರಲಾಗಿದ್ದ ಅಜಲು ಪದ್ಧತಿ, ಕಣಿಯ ಜನಾಂಗದ ಸಂಕಷ್ಟಗಳು, ದಲಿತರ ಮೇಲಿನ ಹಲ್ಲೆಗಳು, ಅಗ್ನಿಶಾಮಕ ದಳದ ದಯನೀಯ ಸ್ಥಿತಿ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಸ್ಪೃಶ್ಯತೆಯ ವಿವಿಧ ರೂಪಗಳು... ಇಂಥ ಸಮಸ್ಯೆಗಳನ್ನು ಬಡವರ ವಕೀಲನಂತೆ ಸದನದಲ್ಲಿ ಮಂಡಿಸಿದ ಅವರು ಸರ್ಕಾರಗಳು ಪರಿಹಾರ ರೂಪಿಸುವಂತೆಯೂ ಮಾಡಿದರು.
‘ಕ್ರಾಂತಿಯ ಬಿರುಗಾಳಿ’ ಎಬ್ಬಿಸಿದ ಕವಿ ಮುಂದೆ ಜನಪ್ರಿಯತೆಯ ಸುಳಿಗಾಳಿಯಲ್ಲಿ ಸಿಕ್ಕಿಕೊಂಡ ಕಾಲವೂ ಬಂತು. ಸಿದ್ಧಲಿಂಗಯ್ಯನವರು ಹೆಚ್ಚು ಹೆಚ್ಚು ಸಾರ್ವಜನಿಕ ವ್ಯಕ್ತಿಯಾಗುತ್ತಾ, ಅವರ ಕಾವ್ಯ ಹೊಸ ಧಾಟಿಯ ಹಾಡುಗಳತ್ತ ತಿರುಗುತ್ತಿದ್ದ ಕಾಲದಲ್ಲಿ ಸಿನಿಮಾಲೋಕವೂ ಅವರನ್ನು ಕರೆಯಿತು. ಪುಟ್ಟಣ್ಣ ಕಣಗಾಲರ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಕ್ಕೆ ಅವರು ಬರೆದ ಹಾಡುಗಳಲ್ಲಿ, ‘ಗೆಳತಿ ಓ ಗೆಳತಿ, ಅಪ್ಪಿಕೋ ಎನ್ನ ಅಪ್ಪಿಕೋ, ಬಾಳೆಲ್ಲ ಹೀಗೆ ತಬ್ಬಿಕೋ’ ಹಾಡು ಅತ್ಯಂತ ಜನಪ್ರಿಯವಾಯಿತು; ಈ ಹಾಡಿನಿಂದಾಗಿ ತಮ್ಮ ಹಳೆಯ ಓದುಗರ ಕಟು ಟೀಕೆಯನ್ನೂ ಕವಿ ಎದುರಿಸಬೇಕಾಯಿತು! ಕಾಲದ ಓಟದಲ್ಲಿ ಕವಿಯ ಕಾವ್ಯತತ್ವ ಬದಲಾಗಿತ್ತು; ಕವಿತೆಯ ಭಾಷೆಯೂ, ಪ್ರತಿಮೆಗಳೂ ಬದಲಾಗಿದ್ದವು. ಅವರ ಹಿಂದಿನ ಕವಿತೆಯಲ್ಲಿ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’ ಎಂಬ ಕ್ರಾಂತಿಚಿತ್ರವಿತ್ತು; ಮುಂದಿನ ಘಟ್ಟದ ಕವಿತೆಯಲ್ಲಿ, ‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಎಂಬ ರಮ್ಯ ನೇವರಿಕೆಯಿತ್ತು. ‘ಕ್ರಾಂತಿಯ ಬಿರುಗಾಳಿಯಲ್ಲಿ’ ಹುಟ್ಟಿದ್ದ ಅವರ ವ್ಯಗ್ರ ಭಾವಗೀತೆ ಈಗ ಸರಳ ಕೋಮಲ ಭಾವಗೀತೆಯಾಗಿತ್ತು. ತಮ್ಮ ಸಂಶೋಧಕ ಘಟ್ಟದಲ್ಲಿ ಅವರು ಗ್ರಾಮ ದೇವತೆಗಳನ್ನು ಕುರಿತು ಬರೆದ ‘ಅವತಾರಗಳು’ ಕೃತಿಯಲ್ಲಿ ಕಂಡುಕೊಂಡ ತಮ್ಮ ವ್ಯಕ್ತಿತ್ವದ ಕಾಮಿಕ್ ಆಯಾಮವನ್ನು ಮುಂದೆ ಅವರು ‘ಟ್ರ್ಯಾಜಿಕಾಮಿಕ್’ ಗದ್ಯದ ಮೂಲಕ ವಿಸ್ತರಿಸಿಕೊಂಡರು. ಅವರ ಆತ್ಮಕತೆ ‘ಊರು ಕೇರಿ’ ಮತ್ತೆ ಅವರನ್ನು ಕನ್ನಡ ಸಾಹಿತ್ಯ ಸಂಸ್ಕೃತಿಯ ಕೇಂದ್ರಕ್ಕೆ ತಂದು ನಿಲ್ಲಿಸಿತು.
ಸಿದ್ಧಲಿಂಗಯ್ಯನವರು ನೋಡನೋಡುತ್ತಿದ್ದಂತೆಯೇ, ೨೦೨೦ರ ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳಿಂದ ಊರಿಗೆ ಮರಳುತ್ತಿದ್ದ ನೊಂದ ಕಾರ್ಮಿಕರ ವಿಡಿಯೋ ತುಣುಕುಗಳ ಜೊತೆಗೆ ‘ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು’ ಸಾಲುಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರತೊಡಗಿದವು; ತಮ್ಮ ಕಾವ್ಯದ ಕಾಳಜಿಗಳು ಮುಂದೆಯೂ ತಮ್ಮ ಕೈ ಹಿಡಿಯಬಹುದೆಂಬ ಆಶಾಕಿರಣ ಆಗ ಅವರಲ್ಲಿ ಕಾಣಿಸಿಕೊಂಡಂತಿತ್ತು. ಅವರ ‘ಸಾವಿರಾರು ನದಿಗಳು’ ‘ಕಪ್ಪು ಕಾಡಿನ ಹಾಡು’ ‘ಕುದಿವ ನೀಲಿಯ ಕಡಲು’ ‘ಊರು ಸಾಗರವಾಗಿ’ ಸಂಕಲನಗಳಲ್ಲಿ ನದಿ, ಕಡಲು, ಸಾಗರ ಹಾಗೂ ಕಾಡಿನ ಪ್ರತಿಮೆಗಳು ಅವರ ಕಾವ್ಯ ಕೇಂದ್ರದ ನಿರಂತರತೆಯನ್ನು ಸೂಚಿಸುತ್ತವೆ; ಅವರ ಕಾವ್ಯದ ದುರ್ಬಲ ಭಾಗಗಳ ಜೊತೆಗೇ ಕಾವ್ಯದ ಮೂಲ ಕಾಳಜಿ ಹಾಗೂ ಕಾವ್ಯತತ್ವ ಕೊನೆಯವರೆಗೂ ಹೆಚ್ಚುಕಡಿಮೆ ಒಂದೇ ಆಗಿದೆ. ಆದರೆ ಅವರ ‘ಊರು ಸಾಗರವಾಗಿ’ ಎಂಬ ಕೊನೆಯ ಸಂಕಲನದ ಕೊನೆಯ ಪದ್ಯ ‘ಕೊಳಲು ಮತ್ತು ಖಡ್ಗ’ದಲ್ಲಿ ಖಡ್ಗದಿಂದ ಕೊಳಲಿಗೆ ಹೊರಳುವ ಸರಳ ಕಾತರವಿತ್ತು. ‘ಖಡ್ಗವಾಗಲಿ ಕಾವ್ಯ’ ಎಂಬ ಆಶಯಕ್ಕೆ ಸ್ಫೂರ್ತಿಯಾಗಿದ್ದ ಕವಿಯ ಕಾವ್ಯತತ್ವ ಬೇರೊಂದು ದಿಕ್ಕಿಗೆ ಹೊರಳಲು ಬಯಸಿತ್ತೆ? ನಿರ್ದಯ ಕಾಲ ಅವರ ಕಾವ್ಯದ ಈ ದಿಕ್ಕಿಗೆ ಕಾಲಾವಕಾಶ ಕೊಡಲು ಸಿದ್ಧವಿರಲಿಲ್ಲ…
ನಾನು ಸಿದ್ಧಲಿಂಗಯ್ಯನವರ ಮನೆಗೆ ಹೋದಾಗಲೆಲ್ಲ ಅವರ ಮನೆಯ ಪಡಸಾಲೆಯ ಗೋಡೆಯ ಮೇಲೆ, ಗೋಡೆಯ ಗೂಡುಗಳಲ್ಲಿ ಥರಂಥರದ ಬುದ್ಧ ಚಿತ್ರಗಳು, ಬುದ್ಧ ಮೂರ್ತಿಗಳಿದ್ದುದು ನೆನಪಾಗುತ್ತದೆ. ಅಷ್ಟೊಂದು ಬುದ್ಧರುಗಳ ಹಿನ್ನೆಲೆಯಲ್ಲಿ ವಿರಾಮವಾಗಿ, ಹಲ ಬಗೆಯ ಕಹಿ ಮರೆತು, ತಮ್ಮ ಸಹಜ ತುಂಟತನವನ್ನು ಅದುಮಿಡಲಾಗದೆ ಕೂತ ಕವಿಯ ಚಿತ್ರ ನನ್ನೆದುರು ಸುಳಿಯುತ್ತದೆ. ದುಡಿಯವ ಜನರ ಸಿಟ್ಟನ್ನು, ಶಕ್ತಿಯನ್ನು ಒಂದೇ ಗಳಿಗೆಯಲ್ಲಿ ತೋರಿಸಿಕೊಟ್ಟ ಅವರ ‘ನೆನ್ನೆ ದಿನ ನನ್ನ ಜನ…’ ಹಾಡು ನನ್ನ ವಿದ್ಯಾರ್ಥಿ ದೆಸೆಯಲ್ಲಿ ಹುಟ್ಟಿಸಿದ ಮಿಂಚು ಮತ್ತೆ ಸುಳಿಯುತ್ತದೆ. ಆ ಕಾಲದಲ್ಲಿ ನಟರಾಜ ಹೊನ್ನವಳ್ಳಿ, ಈ ಅಂಕಣಕಾರ, ಧಮೇಂದ್ರ ಅರಸು, ಅಚ್ಯುತಕುಮಾರ್ ಮಾಡಿದ, ಕುಂವೀರಭದ್ರಪ್ಪನವರ ಕತೆಗಳನ್ನಾಧರಿಸಿದ, ‘ಕತ್ತಲನು ತ್ರಿಶೂಲ ಹಿಡಿದ ಕತೆ’ ನಾಟಕದಲ್ಲಿ ‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ’ ಹಾಗೂ ‘ಕ್ವರುಗ್ತಿನಿ, ಕ್ವನೆಗೊಂದ್ಸಲ ಕೂಗ್ತಿನಿ, ಬಡ್ಡೀ ದುಡ್ನೋನ್ ಬಂಗ್ಲೆ ಕ್ಯಳ್ಗೆ ತಳಾದೀಗ್ ಸಿಕ್ಕಂಡಿರೋ ಮೂಳೆ… ನಾ ಕೂಗ್ತಿನಿ, ಸಿಡಿತಿನಿ…’ ಸಾಲುಗಳನ್ನು ಹಾಡುತ್ತಿದ್ದೆವು; ಹಾಗೆ ಹಾಡ ಹಾಡುತ್ತಾ, ಈ ಸಾಲುಗಳು ನಮ್ಮೆಲ್ಲರ ಪ್ರಜ್ಞೆಯನ್ನೇ ಬದಲಿಸಿದ ರೀತಿಗೆ ಕೃತಜ್ಞತೆ ಹುಟ್ಟುತ್ತದೆ. ಸಿದ್ದಲಿಂಗಯ್ಯನವರ ನಿರ್ಗಮನದಿಂದಾಗಿ ಕರ್ನಾಟಕ ಸಂಸ್ಕೃತಿಯ ಜಾತ್ಯತೀತ ಯುಗದ ಒಂದು ಮಹಾಸ್ತಂಭವೇ ಸರಿದು ಹೋಯಿತು ಎಂಬ ದುಗುಡ ಮುತ್ತುತ್ತದೆ…
Comments
21 Comments
| Dominic Davidapppa
ಈ ಲೇಖನದ ಲೇಖಕರೂ ಸಹ ಒಂದು ವಿದ್ಯಮಾನವೇ ಹೌದು... ನಿಮ್ಮಂತಹವರ ತಂಡ ಉದಯಿಸಲೇಂದೇ ನನ್ನ ಆಶಯ..
| ಮಂಜುನಾಥ್ ಸಿ ನೆಟ್ಕಲ್
ಕವಿ ಎಂಬ ಕಾಲದ ವಿದ್ಯಮಾನ ' ಈ ಸುದೀರ್ಘ ಲೇಖನದಲ್ಲಿ ಡಾ. ಸಿದ್ದಲಿಂಗಯ್ಯನವರ ಸಂಕ್ಷಿಪ್ತ ಜೀವನ ಚರಿತ್ರೆಯ ಜೊತೆಗೆ ದಲಿತ ಚಳುವಳಿಯ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಅವರ ಪಾತ್ರದ ಮಹತ್ವವನ್ನು ತಿಳಿಸಿದ್ದೀರಿ. ಈ ವಾರಾಂತ್ಯದಲ್ಲಿ ಅತ್ಯುತ್ತಮ ಲೇಖನ ಓದಿದ ಖುಷಿ ಮತ್ತು ತೃಪ್ತಿ ನನ್ನದು ಅದಕ್ಕಾಗಿ ಧನ್ಯವಾದಗಳು ಸರ್. ಈ ಲೇಖನವನ್ನು ಓದುತ್ತಾ ವಿದ್ಯಾರ್ಥಿಯಾಗಿದ್ದಾಗ ನನಗೆ ಪಾಠ ಮಾಡುತ್ತಿದ್ದ ಕನ್ನಡ ಅಧ್ಯಾಪಕಿಯರು ದಲಿತರು ಅಂಬೇಡ್ಕರ್ ಮತ್ತು ಬಸವಲಿಂಗಪ್ಪನವರ ಬಗ್ಗೆ ತೋರಿಸುತ್ತಿದ್ದ ಅಸಹನೆಯ ಮಾತುಗಳು ನೆನಪಾದವು. ಪ್ರೌಢಶಾಲೆಯಲ್ಲಿ ಬ್ರಾಹ್ಮಣ ಸಮುದಾಯದ ಕನ್ನಡ ಶಿಕ್ಷಕಿ ಅಂಬೇಡ್ಕರ್ ಕೇವಲ ದಲಿತರ ಪರವಾಗಿ ಹೋರಾಟ ಮಾಡಿದರು ಎನ್ನುವುದನ್ನು ಖಡಕ್ಕಾಗಿ ಜೊತೆಗೆ ಅಸಹನೀಯ ಸಿಟ್ಟಿನಿಂದ ಹೇಳುತ್ತಿದ್ದರು. ಇನ್ನು 1992 ರಲ್ಲಿ ಪದವಿ ಕನ್ನಡ ತರಗತಿಗೆ ಪಾಠ ಮಾಡುತ್ತಿದ್ದ ಬಸವಣ್ಣನವರನ್ನು ಆರಾಧಿಸುವ ಸಮುದಾಯಕ್ಕೆ ಸೇರಿದ ಕನ್ನಡ ಅಧ್ಯಾಪಕಿ ಬಿ ಬಸವಲಿಂಗಪ್ಪ ನವರನ್ನು ಕುರಿತು "ಆ ಮನುಷ್ಯನಿಗೆ ಪಂಪ ರನ್ನ ಜನ್ನ ಈ ಕವಿಗಳ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ಇಲ್ಲದೆ ಕನ್ನಡ ಸಾಹಿತ್ಯವನ್ನು ಬೂಸಾ ಎಂದಿದ್ದಾನೆ " ಅಂತ ತೀವ್ರ ಆಕ್ರೋಶ. ಮತ್ತು ಅಸಹನೆಯ ಧ್ವನಿಯಲ್ಲಿ ಕಿರುಚಾಡಿದ್ದು ನೆನಪಾಯಿತು. ಆ ಕಾಲದಲ್ಲಿ ನನಗೆ ಇದೆಲ್ಲ ಏನು ಯಾಕೆ ಹೀಗೆ ಇವರಿಗೆ ಈ ಆಕ್ರೋಶ ಎನ್ನುವುದು ಗೊತ್ತಿರಲಿಲ್ಲ. ಅವರುಗಳು ಶಿಕ್ಷಕರಲ್ಲವೇ ಅವರು ಹೇಳಿದ ಮೇಲೆ ಸತ್ಯವೇ ಇರಬಹುದು ಎಂದು ನಂಬಿಕೊಂಡಿದ್ದೆ. ಮುಂದಿನ ದಿನಗಳಲ್ಲಿ ಒಂದಷ್ಟು ಕನ್ನಡ ಸಾಹಿತ್ಯ ಅಧ್ಯಯನ ಮಾಡಿ. ಹಲವಾರು ಪುಸ್ತಕಗಳು ಮತ್ತು ಲೇಖನಗಳನ್ನು ಓದಿದ ನಂತರ ಹಿರಿಯ ಲೇಖಕರ , ಗೆಳೆಯರ ಒಡನಾಟದಿಂದ ನನ್ನ ಅಭಿಪ್ರಾಯಗಳು ಬದಲಾದವು. ಆದರೆ ಅದೆಷ್ಟೋ ವಿದ್ಯಾರ್ಥಿಗಳು ಆ ಕಾಲದ ಅಧ್ಯಾಪಕರು ಹೇಳಿದ್ದೇ ಪರಮ ಸತ್ಯವೆಂದು ಇಂದಿಗೂ ನಂಬಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದಲಿತರು ಮತ್ತು ದಲಿತ ನಾಯಕರ ಕುರಿತು ವಿಷ ಕಾರುತ್ತಿದ್ದಾರೆ. ಕನಿಷ್ಠ ಅಂಥವರಿಗೆ ನಿಮ್ಮ ಈ ಲೇಖನ ಕಣ್ತೆರೆಸಲಿ ಧನ್ಯವಾದಗಳು ಸರ್
| Hari Prasad
ಪುತಿನ ಅವರ ಹೆಸರೆ ಇಲ್ಲದವರು ಪದ್ಯ ಓದಿದಾಗ ಆಶ್ಚರ್ಯವೇ ಆಗಿತ್ತು. ಅದರ ಹಿನ್ನೆಲೆಯಲ್ಲಿ ಸಿದ್ದಲಿಂಗ ಡಾಂಗೆ ಇದಾರೆ ಎಂಬ ನಿಮ್ಮ ರೀಡಿಂಗ್ ನಾವು ಓದಿಕೊಳ್ಳುವ ಕ್ರಮವನ್ನು ವಿಸ್ತರಣೆ ಮಾಡುವ ಜರೂರಿಯನ್ನು ಹೇಳುವಂತಿದೆ
| Hari Prasad
ಪುತಿನ ಅವರ ಹೆಸರೆ ಇಲ್ಲದವರು ಪದ್ಯ ಓದಿದಾಗ ಆಶ್ಚರ್ಯವೇ ಆಗಿತ್ತು. ಅದರ ಹಿನ್ನೆಲೆಯಲ್ಲಿ ಸಿದ್ದಲಿಂಗ ಡಾಂಗೆ ಇದಾರೆ ಎಂಬ ನಿಮ್ಮ ರೀಡಿಂಗ್ ನಾವು ಓದಿಕೊಳ್ಳುವ ಕ್ರಮವನ್ನು ವಿಸ್ತರಣೆ ಮಾಡುವ ಜರೂರಿಯನ್ನು ಹೇಳುವಂತಿದೆ
| Dr. Vimala
ಲೇಖನ ಹಲವು ವಿಷಯಗಳ ಮರು ನೆನಪು. ಅದ್ಭುತ ವಿಶ್ಲೇಷಣೆ.
| ರವಿಕುಮಾರ್ ಬಾಗಿ
‘ಕವಿ ಎಂಬ ಕಾಲದ ವಿದ್ಯಮಾನ’ ಲೇಖನ ಚೆನ್ನಾಗಿದೆ
| Shamarao
ಕವಿಗಳನ್ನು ಕುರಿತು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದೀರಿ. ಪುಟ್ಟದಾದರೂ ಸಮಗ್ರ ಚಿತ್ರಣ ಕೊಡುತ್ತದೆ. ಕವಿಗಳ ಬಗ್ಗೆ ತಮಗಿರುವ ಪ್ರೀತಿ ಅಭಿಮಾನ ಕೂಡ ಸುವ್ಯಕ್ತವಾಗಿದೆ. ಅವರು ನಾನು ಬೆಳೆಯುವಂತೆ ಮಾಡಿದವರು; ಬೆಳೆಸಿದವರು ಕೂಡ. ಅವರ ಜೊತೆಗೆ ನಾನು ಕಳೆದ ಕಾಲ ಅತ್ಯಂತ ಅಮೂಲ್ಯವಾದುದು. ಅವರು ಜಾತ್ಯತೀತ ಯುಗದ ಆಧಾರ ಸ್ತಂಭವಾಗಿದ್ದರು. ಅವರನ್ನು ಅರ್ಥಪೂರ್ಣವಾಗಿ ನೆನಪು ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು. ಕವಿಗಳನ್ನು ಕುರಿತು ನಿಮ್ಮಿಂದ ಒಂದು ಪುಸ್ತಕವನ್ನು ನಿರೀಕ್ಷೀಸುತ್ತೇನೆ.
| Somashankara N
"ಕವಿ ಎಂಬ ಕಾಲದ ವಿದ್ಯಮಾನ" ಲೇಖನವು ಡಾ. ಸಿದ್ಧಲಿಂಗಯ್ಯನವರ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಅತ್ಯಂತ ಆಳವಾಗಿ ಹಾಗೂ ಹೃದಯಸ್ಪರ್ಶಿಯಾಗಿ ಪರಿಚಯಿಸಿದೆ. ಒಬ್ಬ ಕವಿಯನ್ನು ಕೇವಲ ವ್ಯಕ್ತಿಯಾಗಿ ಅಲ್ಲದೆ, ಒಂದು ಕಾಲಘಟ್ಟದ ಸಾಂಸ್ಕೃತಿಕ ಮತ್ತು ವೈಚಾರಿಕ ವಿದ್ಯಮಾನವಾಗಿ ನೀವು ವಿಶ್ಲೇಷಿಸಿರುವ ರೀತಿ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಲೇಖನವು ಸಿದ್ಧಲಿಂಗಯ್ಯನವರ ಸಾಹಿತ್ಯದ ಮಹತ್ವವನ್ನು ಹೊಸ ತಲೆಮಾರಿಗೆ ಅರ್ಥಮಾಡಿಸುವಲ್ಲಿ ಯಶಸ್ವಿಯಾಗಿದೆ. ಇಂದಿಗೂ ಜಾತಿ ಅಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಪ್ರಶ್ನೆಗಳು ಜೀವಂತವಾಗಿರುವ ಸಂದರ್ಭದಲ್ಲಿ ಸಿದ್ಧಲಿಂಗಯ್ಯರ ಕಾವ್ಯ ಮತ್ತು ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ. ಅವರ ಸಾಹಿತ್ಯವು ಸಮಾನತೆ, ಸ್ವಾಭಿಮಾನ ಮತ್ತು ಪ್ರತಿರೋಧದ ಮೌಲ್ಯಗಳನ್ನು ಹೊಸ ತಲೆಮಾರಿಗೆ ನೆನಪಿಸುತ್ತದೆ. ಇಂತಹ ಚಿಂತನಶೀಲ ಮತ್ತು ಪ್ರೇರಣಾದಾಯಕ ಬರಹಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು ಸರ್.
| Ramachandra Naik
ಅವರ ಸಾವಿರಾರು ನದಿಗಳು ನನ್ನ ನೆಚ್ಚಿನ ಕವಿತೆಗಳಲ್ಲಿ ಒಂದು, ಅವರ ವಯಕ್ತಿಕ ಪರಿಚಯದಲ್ಲಿ ಅವರ ಮೆದು ಮಾತು, ನಗು ನಮ್ಮನ್ನೇ ಕುಬ್ಜರನ್ನಾಗಿಸುತ್ತಿದ್ದವು, ಅವರೆದುರಿಗೇ ಅವರ ಸಾವಿರಾರು ನದಿಗಳು ಕವಿತೆಯನ್ನು ನಾನು ವಾಚಿಸಿದಾಗ ಅವರು ಸಂತಸಪಟ್ಟಿದ್ದು ಇನ್ನೂ ನೆನಪಿದೆ
| ಸೋಮಶಂಕರ ವಿ
ಪ್ರೀತಿಯ ಮೇಸ್ಟ್ರು ಡಾ.ಸಿದ್ದಲಿಂಗಯ್ಯ ನವರ ಬದುಕು,ಸಾಹಿತ್ಯ, ಹೋರಾಟದ ಹಾದಿ ಎಲ್ಲವನ್ನು ಒಮ್ಮೆಗೆ ಕ್ಲುಪ್ತ ಶೈಲಿಯ ಮಿಂಚಿನ ರಬಸದಲ್ಲಿ ಸಮಗ್ರವಾಗಿ ಸವಿಸಿದ ಅನುಭೂತಿ ಈ ಒಂದು ಲೇಖನದಿನ ಸಾಧ್ಯವಾಗಿದೆ ಸರ್, ಅಷ್ಟು ದೊಡ್ಡ ಪ್ರತಿಮೆಯ ಪ್ರತಿಭೆಯನ್ನು ಪ್ರತಿಮೆಯನ್ನು ಇಷ್ಟು ಸಣ್ಣ ಬರಹದಲ್ಲಿ ಹಿಡಿದಿಡುವ ನಿಮ್ಮ ಪ್ರತಿಭೆಗೂ ಒಂದು ಸೆಲ್ಯೂಟ್ ಸರ್, ಧನ್ಯವಾದಗಳು.
| Kavitha M. N
ಲೇಖನ ತುಂಬಾ ಚೆನ್ನಾಗಿದೆ ಸರ್🙏🙏
| Kavitha M. N
ಲೇಖನ ತುಂಬಾ ಚೆನ್ನಾಗಿದೆ ಸರ್🙏🙏
| Krishna Kumar
ಸತ್ತ ಕವಿ ಬದುಕಿದ, ಲೇಖನಿ ಬರೆಯುವುದನ್ನು ನಿಲ್ಲಿಸಿತ್ತು. ಏನು ಹೇಳ್ದ ಲೇಖನಿ ಇಂಕಿಲ್ಲದೆ ಪರದಾಡಿತ್ತು. ಎಲ್ಲೆಲ್ಲೂ ಕತ್ತಲೆ ಹುಡುಕಾಡಿದ ಪೆನ್ನಿಗೆ ಸಿಗಲೇಇಲ್ಲ, ಬರೆಯಲಾಗಲಿಲ್ಲ
| ಸೋಮಶೇಖರ್ ಕದಿರೇಹಳ್ಳಿ
ದಲಿತ ಸಾಹಿತ್ಯದ ಮುಂಚೂಣಿ ಕವಿಗಳ ಸಿದ್ದಲಿಂಗಯ್ಯ ನವರ ಕುರಿತ ಈ ಲೇಖನ ಅವರ ಸಾಹಿತ್ಯ ಹಿನ್ನೆಯಲ್ಲಿ ಕುತೂಹಲದ ಮಜಲನ್ನು ಹೊರಹಾಕಿದೆ, ಮುಖ್ಯವಾಗಿ ಇವರ ಕಾವ್ಯ ಶೈಲಿಯನ್ನು ಪ್ರಶ್ನೆ ಮಾಡುವಂತಹದ್ದು ಎಂದಿದ್ದರು, ಕೆಲವು ನವ್ಯ ಲೇಖಕರಿಂದ ಬಂಡಾಯ ಕಾವ್ಯ ಬರೆಸುವಂತೆ ಮಾಡಿದ್ದು ಒಂದು ಸಾಹಿತ್ಯ ಕ್ರಾಂತಿಯೇ, ಅದ್ಬುತವಾದ ಸಿನಿಮಾ ಗೀತೆಗಳನ್ನು ಬರೆಯುತ್ತಲೇ, ದಲಿತ ಸಂವೇದನೆಯ ಕವನಗಳನ್ನು ಕೆಂಡದುಂಡೆಗಳಂತೆ ಹೊಳಪಿಸದಿದರು, ಜಾತಿಸಮಾಜವನ್ನು ವಿಡಂಬಿಸಿದರು, ರಾಜಕೀಯ ಕ್ಷೇತ್ರಕ್ಕು ಪಾದಾರ್ಪಣೆ ಮಾಡಿ ತನ್ನ ಸಮುದಾಯ ಒಂದು ದಿಕ್ಕಿಗೆ ಒಂದು ಪಕ್ಷದ ಕೈ ಬೆರಳು ಹಿಡಿದು ನಡೆವ ಹೊತ್ತಿನಲ್ಲಿ ,ಇದರ ತಾತ್ವಿಕ ವಿರೋದ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕಾರಣ ಮಾಡಿದ್ದು ,ವಿರೋದಿಗಳನ್ನು ಸೃಷ್ಟಿಸಿಕೊಂಡದ್ದು ಕುರುಹಾಗಿ ಉಳಿಯಿತು, ಆದರೂ ದಲಿತ ಸಾಹಿತ್ಯದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಬಿಟ್ಟು ಸಮಾಜದೊಂದಿಗೆ ಸಂವಾದ ನಡೆಸಿದ ಅಗ್ರಕವಿ, ಲೆಖನ ಚೆನ್ನಾಗಿದೆ ಸರ್
| TBMahalingaiah
RespectedSir Balyada. Prowdhimeya shresta kavyada rachaneyaSahaja kavi siddalingaiah. navaru. Vastava sangatigalu hagu. Bharateeya. Sanaja sankrutiya. Bahumukhi Vyangyatanake. Prakhara. Padagala. Mukhena chaluvali. Rupakottavaru Avamanada. Nelegalannukavyada. Mukhantara. Parinamakariyagi. .chuchhidavaru Dalita. Chaluvali. Mattu. Horatagagalu Kannada. Kavyalokakke. Hosa. Bhashe Bareda vu DrN. Helida e. Kavi. Badavra. Naguvina Shakthi Aste. Alla Ellara naguvina. Shakti Yavattu Echharavagidaballa. Satva Siddalingaiahra. Kavyadallide. Full. Energy Evarige. MA. Taragatigaledare. Alergy Rajakiyada. Shaktiye. Doddashaktiyendu Odi. Odi. Padavi. Padedu. Nondavara. Kastakke. Hegaladaru
| TB. Mahalingaiah
Respected. Professor Neevu. Apara. Odina. Mulaka. Grahisi Paradeya. Mele. Drushyagalu. Hadu. Hogi Mana. Muttuvante. Chtrisuva Adbuta. Kale. Nimage. Siddisiddu Nimma lekhanagalu. Hosa. Holahu. Chintana. Shaktiyannu. Needuttave. Sir
| Pushpa HL
ಕಾಲದ ಅನಿವಾರ್ಯ ಅಗತ್ಯವಾಗಿ ರೂಪುಗೊಂಡ, ದಲಿತ ಕಾವ್ಯ ಹಾಗೂ ಆತ್ಮಕಥೆ ಪ್ರಕಾರಕ್ಕೆ ಹೊಸಭಾಷ್ಯವನ್ನು ಬರೆದ ಸಿದ್ಧಲಿಂಗಯ್ಯನವರನ್ನು ಚೊಕ್ಕವಾಗಿ, ಅದರೆ ಸಮಗ್ರವಾಗಿ ಹಿಡಿದಿಟ್ಟೀದ್ದೀರಿ. ಲೇಖನ ಇಷ್ಟವಾಯಿತು. ಅಭಿನಂದನೆಗಳು ನಟರಾಜ್. - ಪುಷ್ಪ. ಎಚ್.ಎಲ್
| ಡಾ. ನಿರಂಜನ ಮೂರ್ತಿ ಬಿ ಎಂ
ಕವಿ ಸಿದ್ದಲಿಂಗಯ್ಯನವರ ಕಾವ್ಯ ತಮ್ಮ ಕಾಲದ ತುರ್ತಾಗಿ ರೂಪುಗೊಂಡು, ಜಾತಿ, ವರ್ಗ, ಅಂತಸ್ತುಗಳೆಂಬ ತರತಮಗಳ ಅರಿವನ್ನು ಮೂಡಿಸಿ, ಅವುಗಳ ವಿರುದ್ಧ ಹರಿಹಾಯ್ದು, ಹೋರಾಟವನ್ನು ರೂಪಿಸಿದ ಪರಿಯನ್ನು ವಿವರಿಸುವ ಮೂಲಕ, ಸಿದ್ದಲಿಂಗಯ್ಯನವರ ವಾಸ್ತವದ ವ್ಯಕ್ತಿಚಿತ್ರಣವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟಿರುವ ಈ ಲೇಖನ ತುಂಬಾ ಚೆನ್ನಾಗಿದೆ. ಹುಳಿಯಾರರಿಗೆ ನಮನಗಳು.
| TN SEETARAM
ಅನನ್ಯ ಬಗೆಯಲ್ಲಿ ಸಿದ್ದಲಿಂಗಯ್ಯ ನವರ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಚಿತ್ರಿಸಿದ್ದೀರಿ ..🙏🙏🙏🙏
| TN SEETARAM
ಅನನ್ಯ ಬಗೆಯಲ್ಲಿ ಸಿದ್ದಲಿಂಗಯ್ಯ ನವರ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಚಿತ್ರಿಸಿದ್ದೀರಿ ..🙏🙏🙏🙏
| Rupa
ಚೆನ್ನಾಗಿದೆ
Add Comment