ಕಾಮನ ಬಿಲ್ಲಿನ ಮೇಲೆ ಕವಿ ಕಲರವ!
by Nataraj Huliyar
ಒಂದು ಅಣಕು ನಾಟಕವು...
ದೃಶ್ಯ : ೧
ಸ್ವಾತಂತ್ರ್ಯೋತ್ಸವದ ದಿನ ಮೂಡಿದ್ದ ನಯನಮನೋಹರ ಕಾಮನಬಿಲ್ಲಿನ ಮೇಲೆ ಆರಾಮಾಗಿ ಕೂತು ಸ್ವಾತಂತ್ರ್ಯೋತ್ಸವ ಕವಿಗೋಷ್ಠಿಗೆ ಕನ್ನಡ ಕವಿಗಳು ಸಜ್ಜಾಗುತ್ತಿರುವರು. ಬೇಂದ್ರೆ, ಕುವೆಂಪು ತಮ್ಮ ಸ್ವಾತಂತ್ರ್ಯ ಗೀತೆಗಳನ್ನು ದೇವಾನುದೇವತೆಗಳ ಮುಖಕ್ಕೆ ಬೀಸಲು ಅಣಿಯಾಗುತ್ತಿರುವರು.
ರಂಗ ನಿರ್ದೇಶಕ ಸಿಜಿಕೆ ಸ್ವಾತಂತ್ರ್ಯ ಕುರಿತಂತೆ ‘ಇಗೋ ಮುಗಿಲು, ಅಗೋ ಸಿಡಿಲು’ ನಾಟಕವನ್ನು ಆ ರಾತ್ರಿ ಗಗನದೊಡಲಿನ ಗುಡುಗು ಸಿಡಿಲಿನ ಸಹಜ ವಾತಾವರಣದಲ್ಲೇ ಆಡಿಸಬೇಕೆಂದು ಹಿರಿಯ ನಟರಿಗೆಲ್ಲ ರಿಹರ್ಸಲ್ ಮಾಡಿಸಿ ಮಾಡಿಸಿ ಸುಸ್ತಾಗಿದ್ದರು. ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಥರದ ರಂಗನಟರು ಒರಿಜಿನಲ್ ಡೈಲಾಗ್ ಬಿಟ್ಟು ಬಾಯಿಗೆ ಬಂದ ಡೈಲಾಗು, ಜೋಕು ಹೊಡೆದು ಪ್ರೇಕ್ಷಕರನ್ನು ನಗಿಸಲು ಸರ್ಕಸ್ ಮಾಡುತ್ತಿದ್ದುದನ್ನು ನೋಡಿ ರೇಗಿದ ಸಿಜಿಕೆ ವಾಚ್ ಬಿಚ್ಚಿ ಎಸೆದು ಅಮೃತ ಬಾರ್ ಕಡೆಗೆ ತೆರಳಿದ್ದರು.
‘ಸ್ವಾತಂತ್ರ್ಯ ಕವಿಗೋಷ್ಠಿ’ಯ ಭಾಗವಾಗಿ ಆಧುನಿಕ ಕಾವ್ಯ ಓದುವ ರೀತಿ ಕುರಿತು ದೇವದಾನವರಿಬ್ಬರಿಗೂ ಕೀರಂ ನಾಗರಾಜ್ ಕಾವ್ಯಕಮ್ಮಟ ಮಾಡಬೇಕೆಂದು ತೀರ್ಮಾನವಾಗಿತ್ತು. ‘ಕುರಿತೋದದೆಯುಂ ಕಾವ್ಯ ಪರಿಣಿತಮತಿ’ಗಳಂತಾಡುತ್ತಿದ್ದ ದೇವತೆಗಳನ್ನು ಪೋಸ್ಟ್ ಮಾಡರ್ನ್ ರೀಡಿಂಗುಗಳಿಂದ ಕಂಗಾಲಾಗಿಸಲು ಕೀರಂ ನಕ್ಷತ್ರಗಳ ಬೆಳಕಿನಲ್ಲಿ ಅಧ್ಯಯನ ನಡೆಸಿದ್ದರು.
ಕವಿಗೋಷ್ಠಿಯ ಆಶಯ ಭಾಷಣ ಮಾಡಲು ಅನಂತಮೂರ್ತಿ, ಡಿ. ಆರ್. ನಾಗರಾಜ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಡಿ.ಆರ್. ತಮ್ಮ ಐಡಿಯಲಾಜಿಕಲ್ ರೌಡಿಸಂ ಪ್ರಯೋಗಿಸಿ, ಅನಂತಮೂರ್ತಿಯವರನ್ನು ಹಿಂದಕ್ಕಿಕ್ಕಿ, ‘ಇಡೀ ಕನ್ನಡ ಕಾವ್ಯವೇ ಶಕ್ತಿ ಶಾರದೆಯ ಮೇಳ’ ಎಂಬ ಆಶಯ ಭಾಷಣಕ್ಕೆ ತಯಾರಿ ನಡೆಸಿದ್ದರು. ಇಂಗ್ಲಿಷಿನ ಹೆವಿ ಕಾವ್ಯ ಪರಿಕಲ್ಪನೆಗಳನ್ನು ಬಳಸಿ ಟಿಪ್ಪಣಿ ಮಾಡಿಕೊಳ್ಳುತ್ತಲೇ, ಕುವೆಂಪು, ಪುತಿನ, ಅಡಿಗ, ಬೇಂದ್ರೆ ಮುಂತಾದ ಮೇಜರ್ ಕವಿಗಳ ಸುತ್ತ ತಾತ್ಸಾರದಿಂದ ಕಣ್ಣಾಡಿಸುತ್ತಿದ್ದ ಡಿ.ಆರ್., ‘ಈ ಅಮಾಯಕ ಹಿರೀಕರ ಮೇಲೆ ಜಾಗತೀಕರಣೋತ್ತರ ಥೀಸಿಸ್ಸುಗಳನ್ನು ಪ್ರಯೋಗಿಸಿ ಮಗ್ಗಾ ಮಲಗಿಸುವೆನು!’ ಎಂದುಕೊಂಡು ಗಡ್ಡದ ಮರೆಯಲ್ಲೇ ನಗುತ್ತಿದ್ದರು.
ಅತ್ತ ಕವಿತೆಗಳ ಓದಿನ ರಿಹರ್ಸಲ್ ನಡೆಸಿದ್ದ ಕವಿಗಳ ಸುತ್ತ ಬೆತ್ತ ಹಿಡಿದು ಅಡ್ಡಾಡುತ್ತಿದ್ದ ಕೀರಂ ಕಿರಿಯ ಕವಿಗಳಿಗಿರಲಿ, ಹಿರಿಯ ಕವಿಗಳಿಗೂ ಥರಂಥರ ಸೂಚನೆಗಳನ್ನು ಕೂಗಿ ಹೇಳುತ್ತಿದ್ದರು.
ಸೂಚನೆ 1: ಏನ್ಸಾರ್ ಬೇಂದ್ರೆಯವರೇ! ಒಂದ್ ಸಲ ಓದಿದ ಸಾಲನ್ನ ಮತ್ತೆ ರಿಪೀಟ್ ಮಾಡ್ಬಾರ್ದು, ಗೊತ್ತಾಯ್ತಾ! ಫವರ್ ಫುಲ್ ಮೆಟಫರ್ ಆಗಿದ್ರೆ ಒಂದೇ ಸಲಕ್ಕೆ ರೀಡರ್ ಗೆ ರೀಚಾಗುತ್ತೆ...
ಸೂಚನೆ 2: ಸಾರ್! ನರಸಿಂಹಸ್ವಾಮಿಗಳೇ! ಆ ಮಲ್ಲಿಗೆ ರೂಪಕಾನೇ ಎಷ್ಟು ಶತಮಾನ ಬಳಸ್ತಾ ಇರ್ತೀರ! ಈ ಲೋಕದಲ್ಲಾದ್ರೂ ಪಾರಿಜಾತಾ ಮೆಟಫರ್ ಟ್ರೈ ಮಾಡಿ ಸಾರ್- ಫಾರ್ ಎ ಚೇಂಜ್!
ಸೂಚನೆ 3: ಅಲ್ಲಾ ಸಾರ್ ಅಡಿಗರೇ! ‘ಭೂಮಿಗೀತ’ ಬರೆದು ಐವತ್ ವರ್ಷ ಆಗಿದೆ, ಇನ್ನೂ ನೋಟ್‍ಬುಕ್ ನೋಡ್ಕೊಂಡೇ ಓದ್‍ತಿದೀರಲ್ಲ! ನಮ್ಮ ಜನಪದ ಕವಿಗಳು ಎಷ್ಟೊಂದು ಪಠ್ಯಗಳನ್ನ ನಾಲಗೇ ತುದೀಲೇ ಇಟ್ಕೊಂಡಿದ್ರು! ಏನ್ಸಾರ್!
ಕೀರಂ ಕೂಗಾಟದಿಂದಾಗಿ, ಅತ್ತ ತಮ್ಮ ಹಣೆಯ ಮೇಲಿನ ನಾಮವನ್ನು ಸ್ಟ್ರೈಟಾಗಿ ಕೂರಿಸಲು ಪಾಡು ಪಡುತ್ತಿದ್ದ ಪು.ತಿ.ನ.ಗೆ ಧ್ಯಾನಭಂಗವಾಗಿ ಉರಿಗಣ್ ಬಿಡುವರು.
ಕೀರಂ: (ಸಿಟ್ಟಾದ ಪು.ತಿ.ನ.ರನ್ನು ಪುಳಕಿಸಲೆತ್ನಿಸುತ್ತಾ) ಆಹಾ! ಇದಲ್ವೇ ಸಾರ್- ‘ಯದುಗಿರಿಯ ಮೌನವಿಕಾಸ’! ಯಾವ ಪದ್ಯ ಓದ್ತೀರ ಸಾರ್?
ಪು.ತಿ.ನ: (ಜುಬ್ಬದ ಜೇಬಿನಿಂದ ಮಡಿಚಿ ಮುದ್ದೆಯಾಗಿದ್ದ ಪದ್ಯ ತೆಗೆಯುತ್ತಾ) ಅದೇ ಕಣಪ್ಪಾ, ಗಾಂಧಿ ಮೇಲಿನ ನನ್ನ ಹಳೇ ಪದ್ಯ ಇದೆಯಲ್ಲಾ... ‘ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು...’ ಅದನ್ನೇ ಓದ್ತೀನಿ! ಮೊನ್ನೆ ವಾಕಿಂಗಲ್ಲಿ ಸ್ವತಃ ಗಾಂಧೀಜೀನೇ ಈ ಪದ್ಯ ಕೇಳುಸ್ಕೊಂಡು ‘ವೆರಿ ಗುಡ್’ ಹಾಕಿದಾರೆ! ಇಲ್ನೋಡಿ!
(ಪು.ತಿ.ನ. ಪುಟ್ಟ ಸ್ಕೂಲ್ ಹುಡುಗಿಯಂತೆ ಹೆಮ್ಮೆಯಿಂದ ಗಾಂಧೀಜಿಯ ‘ವೆರಿ ಗುಡ್’ ಮೇಲೆ ಬೆರಳಿಟ್ಟು ಎಲ್ಲರಿಗೂ ತೋರಿಸಲಾರಂಭಿಸುವರು.)
ಡಿ.ಆರ್: (ತಮ್ಮ ವಿಮರ್ಶಾ ಪ್ರಜ್ಞೆಯನ್ನು ಕುರ್ತೇಟ್ ಪ್ರಯೋಗಿಸಿ) ಇದೊಳ್ಳೆ ತಮಾಷೆ! ಗಾಂಧೀಜಿ ನಿಮ್ ಕನ್ನಡ ಪದ್ಯಾನ ಹೆಂಗೆ ಅರ್ಥ ಮಾಡ್ಕೊಂಡು ‘ಗುಡ್’ ಹಾಕಿದ್ರು ಸಾರ್?!
(ಪುತಿನ ಮುಖ ಇಳಿಬಿದ್ದುದನ್ನು ಕಂಡು ಡಿ.ಆರ್. ಕಿಲಾಡಿತನದಿಂದ ನಗುವರು. ಈ ತಾರ್ಕಿಕ ಪ್ರಶ್ನೆಗೆ ಉತ್ತರ ಹೊಳೆಯದೆ ಪುತಿನ ಚಿಂತಾಕ್ರಾಂತರಾಗುವರು.)
ಡಿ.ಆರ್: (ಕೀರಂ ಕಡೆಗೆ ಕಣ್ಣು ಮಿಟುಕಿಸಿ, ಪುತಿನ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲು) ಏನ್ಸಾರ್! ಮೇಲಕ್ಕೆ ಬಂದ ಮೇಲಾದರೂ ನಿಮ್ಮ ಈ ಹಳೇ ಪದ್ಯದ ಚಿತ್ರಗಳನ್ನ ರಿವರ್ಸ್ ಮಾಡಬಾರ್ದಾ?
ಪುತಿನ: (ಹಣೆಯಲ್ಲಿ ನಿರಿಗೆ ಮೂಡಿ, ನಾಮ ಕೊಂಚ ಕುಗ್ಗಿ) ಪ್ರಿಂಟಾದ ಮೇಲೆ...ಹೆಂಗಪ್ಪಾ ಚೇಂಜ್ ಮಾಡೋದು...
ಅಡಿಗ: (ನೂರನೇ ಸಲ ‘ಭೂಮಿಗೀತ’ ಪದ್ಯ ತಿದ್ದುತ್ತಾ ಕೂತಿದ್ದವರು) ಯಾಕಾಗೊಲ್ಲ! ನೀವು ಆ ಪದ್ಯ ಬರೆದಾಗ ಕೆಳಗಿದ್ರಲ್ವೆ? ಆಗ ಮೇಲೆ ನೋಡ್ತಾ, ‘ಮೇಲೊಂದು ಗರುಡ ಹಾರುತಿಹುದು’ ಅಂತ ಬರೆದ್ರಿ! ಈಗ ಮೇಲಿದೀರಲ್ವೆ? ಕೆಳಗೆ ನೋಡಿ ಹಳೇ ಮೆಟಫರ್ ಚೇಂಜ್ ಮಾಡಿ!
ಡಿ.ಆರ್: (ಕಿಲಾಡಿತನದಿಂದ ಕತ್ತು ಹಾಕುತ್ತಾ) ಅಮರ ಲೋಕದಲ್ಲಿ ಕವಿಗಳು ಮೃತ ರೂಪಕಗಳನ್ನು ಬಳಸಬಾರದು! ಚೇಂಜ್ ಮಾಡಿ!
ಪುತಿನ: (ಛಾಲೆಂಜ್ ಮಾಡುತ್ತಾ) ಹಾಗಾದ್ರೆ ನೀವು ಆವಾಗ ಬಂಡಾಯದವರಿಗೆ ‘ಖಡ್ಗವಾಗಲಿ ಕಾವ್ಯ’ ಅಂತ ಘೋಷಣೆ ಬರೆದಿದ್ರಲ್ಲ, ಅದನ್ನ ಇಲ್ಲಿ ‘ವಜ್ರಾಯುಧವಾಗಲಿ ಕಾವ್ಯ’ ಅಂತ ಚೇಂಜ್ ಮಾಡ್ಕೊಂತೀರಾ?! ಏನ್ರೀ ಅಡಿಗರೇ! ನೀವು ನಿಮ್ಮ ಭೂಮಿಗೀತಾನ ‘ಗಗನಗೀತ’ ಅಂತ ಚೇಂಜ್ ಮಾಡ್ಕೊಂತೀರಾ?!
(ನಾಮಧಾರಿಯ ನೇರ ಢಿಕ್ಕಿಗೆ ಅಡಿಗ, ಡಿ.ಆರ್. ಡಿಮ್ಮಾಗುವರು. ಅಡಿಗ, ಡಿ.ಆರ್. ಡಿಮ್ಮಾಗಿದ್ದನ್ನು ನೋಡಿ ಅನಂತಮೂರ್ತಿ, ಕಾನ್ರಾಡ್ ಬ್ರೈಟಾಗುವರು!)
ಅನಂತಮೂರ್ತಿ: (ಡಿ.ಆರ್. ಕಾಲೆಳೆಯುತ್ತಾ) ಯಾಕ್ ಚೇಂಜ್ ಮಾಡಬಾರ್ದು ಡೀಯಾರ್! ಬಂಡಾಯದವರು ಮುಂದೆ ತಮ್ಮ ಕಾವ್ಯ ಮೀಮಾಂಸೇನೇ ಚೇಂಜ್ ಮಾಡ್ಕೊಳ್ಳಿಲ್ವೆ?
ಕಾನ್ರಾಡ್: ‘ನಾವು ಹೂವಿನ ಬಗ್ಗೆ, ನಾವು ತಾರೆ ಬಗ್ಗೆ ಬರೀಲೇಬೇಕು’ ಅಂತ ಹಾವೇರಿ ಬಂಡಾಯ ಸಮ್ಮೇಳನದಲ್ಲಿ ಠರಾವು ಪಾಸ್ ಮಾಡ್ಲಿಲ್ವೆ?
ಕೀರಂ: ರಂಜಾನ್ ದರ್ಗಾ ‘ಬಂದೂಕಿನ ಬಾಯಲ್ಲಿ ಗುಬ್ಬಿ ಗೂಡು ಕಟ್ಟುತ್ತೆ’ ಅನ್ನೋ ಸಾಲನ್ನ ‘ಬಂದೂಕಿನ ಬಾಯಲ್ಲಿ ಗುಲಾಬಿ ಬಿರಿಯುತ್ತೆ’ ಅಂತ ಚೇಂಜ್ ಮಾಡಲಿಲ್ವ?!
ಪುತಿನ: (ರೇಗಿ) ಅದಕ್ಕೆ ನನ್ನೇನು ಮಾಡೂಂತೀರ?
ಅಡಿಗ: ಸಿಂಪಲ್! ನೀವೂನೂ ನಿಮ್ಮ ಪದ್ಯಾನ ಈಗ ಮೇಲಿಂದ ನೋಡಿ, ಈ ಥರ ಚೇಂಜ್ ಮಾಡಬಹುದು:
ಕೆಳಗೊಂದು ಹದ್ದು ಇಳಿಯುತಿಹುದು
ಮೇಲದರ ಗುದ್ದು ಕೇಳುತಿಹುದು...
ಲಂಕೇಶ್: (ಟೀಕೆ ಟಿಪ್ಪಣಿ ಬರೆಯುತ್ತಿದ್ದವರಿಗೆ ಡಿಸ್ಟರ್ಬಾಗಿ) ಥತ್! ಪದ್ಯಾತುರ ಹದ್ದು!
ಅಡಿಗ: ಪದ್ಯಾತುರ ಹದ್ದು! ಪ್ರಾಸ ಚೆನ್ನಾಗಿದೆ! ನಾನೇನಪ್ಪಾ ಆ ಹದ್ದು?
ಲಂಕೇಶ್: ನೀವಲ್ಲ! ಆ ನಿಂ ಬ್ರದರ್, ನಾ-ಅಡಿಗ ಅಂತಾನಲ್ಲ, ಆ ನಾಡಿಗ! ಲೇಟಾಗಾದ್ರೂ ನಮ್ ಕಡೆ ಬಂದ್ನಲ್ಲ...ಬೆಟರ್ ಲೇಟ್ ದ್ಯಾನ್ ನೆವರ್!
(ಸಿಜಿಕೆ ಕತ್ತೆತ್ತಿ ಮೇಲೆ ನೋಡಿ, ‘ಕರ್ಟನ್ಸ್!’ ಎನ್ನುವರು. ಮೋಡಗಳ ತೆರೆ ಬಿದ್ದು ರಂಗ ಮಬ್ಬಾಗುವುದು)
ದೃಶ್ಯ: ೨
ಹಿಂದಿನ ದೃಶ್ಯದ ಕೊನೆಗೆ ಲಂಕೇಶರ ಮಾತಿನಲ್ಲಿ ಕೇಳಿ ಬಂದ ‘ಲೇಟ್’ ಎಂಬ ಪದ ತಮ್ಮನ್ನೇ ಕುರಿತಾದದ್ದಿರಬಹುದು ಎಂದು ಅಳುಕಾಗಿ, ಇದ್ದಕ್ಕಿದ್ದಂತೆ ಮೋಡಗಳ ಮರೆಯಿಂದ, ‘ಸಾರಿ ಸಾರ್! ಲೇಟಾಯ್ತು!’ ಎಂಬ ಚಿರಪರಿಚಿತ ವಿನಯಶೀಲ ದನಿ ಕೇಳಿಸುವುದು. ಮರುಗಳಿಗೆಗೇ, ತಮಟೆಯ ಸದ್ದಿನ ಜೊತೆಗೆ ಗುಡುಗಿನಂಥ ಹಾಡು ಕೇಳಿಸುವುದು! ಕವಿಗಳೆಲ್ಲ ರೋಮಾಂಚನಗೊಂಡು ಅತ್ತ ತಿರುಗುವರು.
ಕವಿ ದನಿ: ಯಾರಿಗೆ ಬಂತು...ಎಲ್ಲಿಗೆ ಬಂತು...ನಲವತ್ತೇಳರ ಸ್ವಾತಂತ್ರ್ಯ?
ಕಿರಂ-ಡಿಆರ್: (ಥ್ರಿಲ್ಲಾಗಿ ಒಟ್ಟಿಗೇ) ಬಂದ್ರು ಸಾರ್ ಓಹೋ! ಕವಿಗಳು! ಓಹೋ!
ನಿಸಾರ್: (ಖುಷಿಯಿಂದ ಅತ್ತ ತಿರುಗಿ) ಕವಿಗಳು ಸಾರ್! ಕವಿಗಳು!
ಪುತಿನ–ಅಡಿಗ: (ರೇಗಿ, ಒಟ್ಟಿಗೇ ಮುಷ್ಠಿ ಬಿಗಿ ಹಿಡಿದು ಕೊಂಚ ವಿವಾದಾಸ್ಪದವಾದ ಸನ್ನೆ ಮಾಡುತ್ತಾ) ಅವರೊಬ್ರೇ ಕವೀನಾ? ಹಂಗಾರೆ ನಾವೇನು ಇವರಾ?
ನಾಡಿಗ್: (ಇಂಗ್ಲಿಷ್ ಉಚ್ಚಾರಣೆಯ ಕನ್ನಡ ಶೈಲಿಯಲ್ಲಿ) ಯೆಸ್ಸೆಸ್! ಎಂಬತ್ತನೇ ಇಸವೀ ಖನ್ನಡಾ ಸಾಂಸ್ಕೃತಿಕ ನಿಘಂಟಲ್ಲೇ ‘ಖವೀ’ ಅಂದ್ರೆ ‘ಸಿದ್ಧಲಿಂಗಯ್ಯ’ ಅಂತ ರೆಕಾರ್ಡ್ ಆಗಿದೆ ಸ್ವಾಮೀ...
ಜಿ. ವೆಂಕಟಸುಬ್ಬಯ್ಯ: (ಪ್ರತಿಭಟಿಸುತ್ತಾ) ನೋ! ನೋ! ನಾನು ಬರೋ ಹಿಂದಿನ ರಾತ್ರಿಯಿನ್ನಾ ಸಾಹಿತ್ಯ ಪರಿಷತ್ತಿನ ಐವತ್ತು ವರ್ಷದ ಹಿಂದಿನ ಲೇಟೆಸ್ಟ್ ಎಡಿಶನ್ ಕನ್ನಡ ನಿಘಂಟ್ ರಿವೈಸ್ ಮಾಡ್ ಬಂದಿದೀನಿ! ಆ ನಿಘಂಟಲ್ಲಿ ನೀವ್ ಹೇಳ್ತಿರೋ ‘ಕವಿ’ ಪದದ ಹೊಸ ಅರ್ಥ ಸರಸ್ವತಿ ಆಣೆಗೂ ಸೇರಿಲ್ಲ!
ಕುವೆಂಪು: (ಪಕ್ಷಿಕಾಶಿಯಲ್ಲಿ ಮೈ ಮರೆತಿದ್ದವರು, ‘ಕವಿ’ ಎಂಬ ಪದಕ್ಕೆ ಕನ್ನಡದ ಹೊಸ ಕವಿಯೊಬ್ಬ ಅನ್ವರ್ಥ ನಾಮವಾಗಿರುವ ಸುದ್ದಿ ಕೇಳಿ ಬೆಚ್ಚಿ, ಧ್ಯಾನಸಮಾಧಿಯಿಂದ ಕತ್ತೆತ್ತಿ ನುಡಿಯುವರು) ‘ಪೊಸ ಕಬ್ಬಿಗನಾಗಮನದಿಂದುಂ ರಾಷ್ಟ್ರಕವಿ ಪಟ್ಟಂ ಅಬಾಧಿತಂ ಕಣಾ!’
ಸಿಜಿಕೆ ಕವಿಗೋಷ್ಠಿ ಶುರುವಾಗಲಿರುವ ಗಂಟೆ ಬಾರಿಸುವರು. ಕವಿಗಳು ಪದ್ಯಗಳನ್ನು ಅವಚಿಕೊಂಡು ತಾ ಮೊದಲು, ನಾ ಮೊದಲು ಎಂದು ವೇದಿಕೆಯಡಿ ನುಗ್ಗುವರು.ಈ ಗಡಿಬಿಡಿಯ ನಡುವೆ ರಂಗದ ಕೆಳಭಾಗದಲ್ಲಿ ಒಂದು ಕುತೂಹಲಕರ ದೃಶ್ಯ ಕಾಣಬರುವುದು:
ಭೂಲೋಕದಲ್ಲಿ ಗುರು ಶಂಕರಭಟ್ಟರಿಂದ ‘ಕನ್ನಡಾಕ್ಷರ ಮಹಾಪ್ರಾಣ ಸಂಹಾರ ಯಜ್ಞ’ದ ಅರೆದೀಕ್ಷೆ ಪಡೆದಿದ್ದ ಭಾಷಾವಿಜ್ಞಾನಿ ಕಿಕ್ಕೇರಿ ನಾರಾಯಣ ‘ಕವಿಗೋಷ್ಠಿ’ ಎಂದು ಬರೆದು ನಿಲ್ಲಿಸಲಾಗಿದ್ದ ಬೋರ್ಡಿನ ಸುತ್ತ ಅನುಮಾನಾಸ್ಪದವಾಗಿ ಅಡ್ಡಾಡುತ್ತಿರುವುದು ಕಂಡುಬರುವುದು! ಅಳುಕಿನಿಂದ ಅತ್ತಿತ್ತ ನೋಡುತ್ತಲೇ ಕಿಕ್ಕೇರಿ ನಾರಾಯಣ ಮಿಂಚಿನ ವೇಗದಲ್ಲಿ ‘ಗೋಷ್ಠಿ’ಯಲ್ಲಿದ್ದ ‘ಷ್ಠಿ’ಯನ್ನು ಸರಕ್ಕನೆ ಎಡಗೈಯಿಂದ ಅಳಿಸಿ, ಫಟಾರನೆ ಗೋ’ಷ್ಟಿ’ ಎಂದು ಬಲಗೈಯಲ್ಲಿ ತಿದ್ದಿ ದಿಗ್ವಿಜಯದ ನಗೆ ಚೆಲ್ಲುತ್ತಾ ನಿಲ್ಲುವರು.
ಅವರ ಈ ಸಾಧನಾಸಂತೃಪ್ತ ಭಂಗಿಯನ್ನು ‘ದೇವದರ್ಶನ್’ ಟಿವಿಯ ಕ್ಯಾಮರಾಮನ್ ಹನುಮಾನ್ ಮೋಡಗಳ ಬೆನ್ನೇರಿ ಛಕಛಕನೆ ಸೆರೆ ಹಿಡಿಯುವನು.
ಆಗ ಮಿಂಚಿನಂತೆ ಹಾಜರಾದ ರಿಪೋರ್ಟರ್ ರಂಭಾ ರೊಯ್ಯನೆ ಎಡಗೈಯಲ್ಲಿ ತನ್ನ ಕಂಚುಕವನ್ನು ಕೂರಿಸಿಕೊಳ್ಳುತ್ತಾ, ಮೈಕ್ ಹಿಡಿದು ಚೀರುವಳು!
ರಿಪೋರ್ಟರ್ ರಂಭಾ: ಬ್ರೇಕಿಂಗ್ ನಾಯ್ಸ್! ಕನ್ನಡ ಮಹಾಪ್ರಾಣ ಹರಣದ ಕರಾಮತ್! ಬಯಲಾಯ್ತು ಭಾಷಾವಿಜ್ಞಾನಿಗಳ ಬಂಡವಾಳ!
ದೃಶ್ಯ: ೩
ಕಾಮನಬಿಲ್ಲಿನ ಸ್ಟೇಜಿನ ಮೇಲೆ ಕವಿಗೋಷ್ಠಿಯ ವೇದಿಕೆಗೆ ಕವಿಗಳು ನುಗ್ಗಲೆತ್ನಿಸುತ್ತಿರುವರು. ಮಾಸ್ತಿ ತಾವೇ ಮೊದಲು ಪದ್ಯ ಓದಬೇಕೆಂದು ಸೀನಿಯಾರಿಟಿಯ ಅಧಿಕಾರಯುತ ಸೌಜನ್ಯ ಬಳಸಿ ಪ್ರಭಾವ ಬೀರಲೆತ್ನಿಸುತ್ತಿರುವರು. ಕಾಂಪಿಯರ್ ಕೀರಂ ಫಟಾರನೆ ಮಧ್ಯೆ ಬಾಯಿ ಹಾಕಿ, ‘ಈ ಕವಿಗೋಷ್ಠಿ ಅಪ್ಪಟ ಕವಿಗಳಿಗೆ ಮಾತ್ರ ಸಾರ್!’ ಎಂದು ರೇಗಿ, ಮಾಸ್ತಿಯ ಬಾಯಿ ಬಡಿದು ಸುಮ್ಮನಾಗಿಸುವರು.
ಕೀರಂ: ಕವಿಗೋಷ್ಠಿಯ ಮೊದಲಿಗೆ ಬೇಂದ್ರೆಯವರು ಕವಿತೆ ಓದ್ತಾರೆ. ಸಮಾರೋಪ ಕಾವ್ಯವನ್ನು ಕುವೆಂಪು ಓದ್ತಾರೆ. ದಯಮಾಡಿ ವರಕವಿ ಬೇಂದ್ರೆಯವರು...
ಅಡಿಗ: (ತೋಳೆತ್ತಿ ಪ್ರತಿಭಟಿಸುತ್ತಾ) ಅವರು ವರ ಕವಿ ಆದ್ರೆ... ನಾವೇನು ಶಾಪ ಕವಿಗಳಾ! ಅಥವಾ ವಧು ಕವಿಗಳಾ?
ಬೇಂದ್ರೆ: (ಕರಿ ಟೊಪ್ಪಿಗೆ ಸರಿಪಡಿಸಿಕೊಂಡು, ಗದ್ಗದ ಕಂಠದಲ್ಲಿ ಪದ್ಯ ಓದಲು ಶುರು ಮಾಡುತ್ತಾ) ಯವ್ವ ಭಾರತಿ ಕಣ್ಣೀರ ಸುರಸ್ತಾ ಕೇಳ್ತದಾಳು... ‘ಮಕ್ಕಳಿವರೇನಮ್ಮಾ ಮೂವತ್ತಮೂರು ಕೋಟಿ...’
ಕೀರಂ: (ಕಾಂಪಿಯರಿಂಗ್) ದಯಮಾಡಿ ಕವಿಗಳು ಪದ್ಯದ ಜೊತೆಗೆ ಗದ್ಯ ವಿವರಣೆ ಕೊಡೋ ನೀನಾಸಂ ಸ್ಟೈಲ್ ನಿಲ್ಲಿಸ್ಬೇಕ್!
ಡಿ.ಆರ್: (ಕೀಟಲೆಯ ದನಿಯಲ್ಲಿ) ತೀರಾ ಬೇಕೂಂದ್ರೆ ನಿಮ್ಮ ಪದ್ಯದ ಅಂಕಿಅಂಶಾನ ಇವತ್ತಿಗೆ ಅಪ್‍ಡೇಟ್ ಮಾಡಿ, ‘ಮಕ್ಕಳಿವರೇನಮ್ಮ ನೂರ ಮೂವತ್ತ ಮೂರು ಕೋಟಿ...’ ಅಂತ ಬದಲಾಯಿಸ್ಕೋಬಹುದು!
ಸಿದ್ದಲಿಂಗಯ್ಯ: (ವಿನಯದಿಂದ ಡಿ.ಆರ್. ಕಡೆಗೆ ತಿರುಗಿ) ಸಾರಿ ಡಾಕ್ಟ್ರೆ! ಮೊನ್ನೆ ಬರುವಾಗ ಗೂಗಲ್ ಚೆಕ್ ಮಾಡ್ಕೊಂಡ್ ಬಂದೆ- ಈಗ ಭಾರತದ ಜನಸಂಖ್ಯೆ ನೂರ ನಲವತ್ತು ಕೋಟಿ!
ಕೀರಂ: ಸೈಲೆನ್ಸ್! ಮಳೆ ಬರೋ ಸೂಚನೆಗಳು ಕಾಣ್ತಿರೋದರಿಂದ ಉಳಿದ ಕವಿಗಳು ರಾತ್ರಿ ಆನ್ ಲೈನ್‍ನಲ್ಲಿ ಪದ್ಯ ಓದಬಹುದು. ಈಗ ಮಹಾಕವಿ ಕುವೆಂಪು ಅವರು ತಮ್ಮ ಪದ್ಯ ಓದಬೇಕೂಂತ...
ಕುವೆಂಪು: (‘ಕವಿಗಳು ಚೀಟಿ ನೋಡಿಕೊಳ್ಳದೆ ನೇರವಾಗಿ ಓದಬೇಕು’ ಎಂಬ ಕೀರಂ ಗರ್ಜನೆ ನೆನಪಾಗಿ ತಮ್ಮ ಬೇರೆ ಬೇರೆ ಪದ್ಯಗಳ ಸಾಲುಗಳನ್ನು ನೆನಪಿನ ಗಣಿಯಿಂದ ಅಗೆಯುತ್ತಾ ಹೇಳಲಾರಂಭಿಸುವರು.)
ನೂರು ದೇವರನೆಲ್ಲ ನೂಕಾಚೆ ದೂರ!
ಭಾರತಾಂಬೆಯೆ ಇಂದು ಪೂಜಿಸುವ ಬಾರ!
...ನಿದ್ದೆ ಮಾಡುತ್ತಿಹರು ಹಲವು ದೇವತೆಗಳೆಲ್ಲ
ಬಿದ್ದವರು ಕಲ್ಲಾಗಿ ಕೆಲವರಿಹರು
ರಿಪೋರ್ಟರ್ ರಂಭಾ: ಬ್ರೇಕಿಂಗ್ ನಾಯ್ಸ್! ರಾಷ್ಟ್ರಕವಿಯ ಕರೆಗೆ ದಿಕ್ಕೆಟ್ಟ ದೇವಲೋಕ! ದೇವ ಕವಿಗಳ ತುರ್ತುಸಭೆಗೆ ಹೈಕಮ್ಯಾಂಡ್ ಆರ್ಡರ್!
ಕುವೆಂಪು: (ಗಲಾಟೆಗಳಿಗೆ ಕೇರ್ ಮಾಡದ ಕಾಜಾಣದಂತೆ ತಮ್ಮ ನೆನಪಿಗೆ ಬಂದ ಕವಿತೆಯ ಸಾಲುಗಳನ್ನು ನುಡಿಯತೊಡಗುವರು)
ಉಳುವಾ ಯೋಗಿಯ ನೋಡಲ್ಲಿ...
ರಾಜ್ಯಗಳಳಿಯಲಿ...
ಉರುಳಲಿ ಗದ್ದುಗೆ ಮುಕುಟಗಳು...
ರಾತ್ರಿಯಾಗುತ್ತಿದೆ. ಬ್ರೇಕಿಂಗ್ ನಾಯ್ಸ್ ಪೈಪೋಟಿ ಹೆಚ್ಚಿ, ಚಾನಲ್ಲುಗಳ ಚೀರುಗಳು ಮೋಡ ಸೀಳಿ ಬರುವುವು.
ಕ್ರೈಂ ಚಾನಲ್ : ಸು.ರಂ. ಎಕ್ಕುಂಡಿ ಕಮ್ಯುನಿಸ್ಟ್ ಕವಿತೆ ಓದಲಿರುವ ಬಗ್ಗೆ ಇಗ್ನೋರೆನ್ಸ್ ಡಿಪಾರ್ಟ್ ಮೆಂಟ್ ವರದಿ! ಧೋಕಾ ಕಾಯ್ದೆಯಡಿ ಕವಿ ಬಂಧನಕ್ಕೆ ಇಂಟರ್ ಪೋಲ್ ಸಿದ್ಧತೆ!
ಸ್ಕ್ರೀಂ ಚಾನಲ್: ಟೀಕೆಟಿಪ್ಪಣಿ ಬರೆದು ಅರಾಜಕತೆ ಸೃಷ್ಟಿಸಲು ಲಂಕೇಶ್ ಸಂಚು! ಮೋಡ ಮಧ್ಯದಲ್ಲೇ ಬಂಧನ ಸಾಧ್ಯತೆ! ಕನ್ನಡ ಕವಿಗಳ ಸೀಕ್ರೆಟ್ ಫೈಲ್ ರೆಡಿ ಮಾಡಲು ಕ್ರೈಂ ಬ್ರಾಂಚ್ ಪೇ-ರೋಲ್ ಸಾಹಿತಿಗಳ ಸೀಕ್ರೆಟ್ ಮಿಶನ್!
ಕವಿಗೋಷ್ಠಿಯ ಪದ್ಯಗಳು ವಿವಾದಕ್ಕಡೆ ಮಾಡಿಕೊಡಲಿವೆ ಎಂಬ ಸುಳಿವು ಹತ್ತಿದ ತಕ್ಷಣ, ಸೈಡ್‍ವಿಂಗಿನಲ್ಲಿ ಕೂತಿದ್ದ ಸಿದ್ಧಲಿಂಗಯ್ಯ ಹುಷಾರಾಗುವರು. ಮಿಂಚಿನ ವೇಗದಲ್ಲಿ ಪೆನ್ ತೆಗೆದು ಥಟಕ್ಕನೆ ತಾವು ಓದಬೇಕೆಂದುಕೊಂಡಿದ್ದ ಪದ್ಯದಲ್ಲಿ ಕರಕರನೆ ತಿದ್ದುಪಡಿ ಮಾಡಿ, ತಮ್ಮನ್ನೇ ತಾವು ಮೆಚ್ಚಿಕೊಂಡು ಕಿಲಾಡಿಯಂತೆ ನಗುವರು. ಕವಿ ಸಿದ್ಧಲಿಂಗಯ್ಯ ಮೆಲುದನಿಯಲ್ಲಿ ಪದ್ಯ ಪ್ರಾಕ್ಟೀಸ್ ಮಾಡುತ್ತಾ ಪದ್ಯ ರಿಪೇರಿ ಮಾಡುತ್ತಿರುವುದನ್ನು ಕಂಡು ಕೆಂಪಂಗಿಯ ಚನ್ನಣ್ಣ ವಾಲೀಕಾರ ಮೆಲ್ಲಗೆ ಇಣುಕಿ ಆ ತಿದ್ದುಪಡಿ ನೋಡಿ ಒಳಗೊಳಗೇ ನಗುವರು.
ಸಿದ್ಧಲಿಂಗಯ್ಯ: (ಅತ್ತಿತ್ತ ಓಡಾಡುತ್ತಾ, ಮೆಲುದನಿಯಲ್ಲಿ ಪದ್ಯ ಪ್ರಾಕ್ಟೀಸ್ ಮಾಡುತ್ತಾ)
ಯಾರಿಗೆ ಬಂತು
ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಇಂದ್ರಾ ಚಂದ್ರ ಜೇಬಿಗೆ ಬಂತು
ಅಮೃತ ಹೀರುವ ಬಾಯಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಚನ್ನಣ್ಣ ವಾಲೀಕಾರ ಮತ್ತೆ ಇಣುಕಿದ್ದನ್ನು ನೋಡಿದ ಕವಿಗಳು ತಿದ್ದಿದ ಪದ್ಯವನ್ನು ಥಟಕ್ಕನೆ ಜೇಬಿಗಿಟ್ಟುಕೊಂಡು ಏನೂ ಆಗಿಲ್ಲವೆಂಬಂತೆ ನಗುವರು.
ಸಿದ್ದಲಿಂಗಯ್ಯ: (ವಿನಯವೇ ಮೈವೆತ್ತಂತೆ) ಅಣ್ಣಾ! ಚೆನ್ನಣ್ಣಾ, ಯಾವ ಪದ್ಯ ಹಾಡ್ತೀರಣ್ಣಾ!
ಚನ್ನಣ್ಣ ವಾಲೀಕಾರ: ತಮ್ಮಾ! ನಂದ್ ವಂದೇ ಅದಾ ನೋಡ್ - ಹಿಟ್ ಸಾಂಗು (ಎನ್ನುತ್ತಾ ಕಣ್ಮುಚ್ಚಿ ಶಿವರಂಜಿನಿ ರಾಗದ ಯಾತನಾ ಧಾಟಿಯಲ್ಲಿ ಹಾಡು ಶುರು ಮಾಡುವರು.)
ನೀ ಹೋದ ಮರುದಿನಕಾ
ನಮ ಬಾಳು ಮೊದಲ್ಹಂಗಾ
ಆಗ್ಯಾದ ಬಾಬಾ ಸಾಹೇಬಾ
ವಾಲೀಕಾರರ ದನಿ ತಾರಕಕ್ಕೇರುತ್ತಿದ್ದಂತೆ ಸಿಜಿಕೆ ‘ಶ್’ ಎಂದು ತುಟಿಯ ಮೇಲೆ ಬೆರಳಿಟ್ಟು, ಮೋಡಗಳ ಕಡೆಗೆ ಕೈ ಮಾಡಿ ಯಾರನ್ನೋ ತೋರಿಸುತ್ತಾ ತಕ್ಷಣ ಹಾಡು ನಿಲ್ಲಿಸುವಂತೆ ಸನ್ನೆ ಮಾಡುವರು. ಆದರೂ ಚೆನ್ನಣ್ಣ ಮತ್ತಷ್ಟು ದನಿಯೇರಿಸಿ ‘ನೀ ಹೋದ ಮರು ದಿನಕಾ’ ಎಂದು ಹಾಡತೊಡಗಿದಾಗ ಮೋಡಗಳ ಮರೆಯಿಂದ ಸಿಡಿಲಿನಂಥ ದನಿ ಕೇಳಿಸುವುದು:
ಧ್ವನಿ: ಅವಿವೇಕಿ ಕವಿಗಳಾ! ನಾನು ಇಲ್ಲೀವರೆಗೆ ಎಳೆದು ತಂದ ರಥಾನ ಮುಂದಕ್ಕೆ ಎಳೆದೊಯ್ಯಿರಿ ಎಂದು ನಿಮಗೆಲ್ಲಾ ಕರೆ ಕೊಟ್ಟು ಬಂದರೆ...ನೀವು ಹಾಡು ಪಾಡು ಬರೆಯುತ್ತಾ ವೇಳೆ ಪೋಲು ಮಾಡಿ ಬಂದಿದ್ದು ಅಕ್ಷಮ್ಯ ಅಪರಾಧ...
ಆ ದನಿ ಬಾಬಾಸಾಹೇಬ್ ಅಂಬೇಡ್ಕರ್ ದನಿಯಂತೆ ಕೇಳಿಸಿ ಕವಿಗಳೆಲ್ಲರೂ ಗಪ್ ಚಿಪ್ಪಾಗುವರು. ಮೈಕು ಗೊರಗುಡುತ್ತಾ ಬಂದಾಗುವುದು.
ದೃಶ್ಯ: ೪
ಗೊರಗುಡುತ್ತಿದ್ದ ಮೈಕ್ ತಂತಾನೇ ಸರಿಯಾಗುವುದು. ಕೊಂಚ ಕಿರಿಯರ ಮರಿ ಕವಿಗೋಷ್ಠಿ ಶುರುವಾಗುವುದು.
ಸು.ರಂ. ಎಕ್ಕುಂಡಿ: (ಪದ್ಯ ಶುರು ಮಾಡುವರು) ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡ...
ಕಲ್ಚರ್ ಅಕಾಡೆಮಿ ಅಧ್ಯಕ್ಷರು ಈ ಪದ್ಯದ ಧಾಟಿ ಕಂಡು ಉರಿದು ಬೀಳುತ್ತಾ, ಈ ಕವಿತೆ ಸಾರ್ವಜನಿಕ ಶಾಂತಿ ಕದಡಲಿದೆಯೆಂದು ಗುಪ್ತ ವರದಿ ಕೊರೆಯುತ್ತಿರುವುದು ಲಂಕೇಶರ ಕಣ್ಣಿಗೆ ಬೀಳುವುದು.
ಲಂಕೇಶ್: (ಕೀರಂ ಕರೆದು) ನೋಡಲೇ! ಇಲ್ಲೂ ಸರ್ಕಾರಿ ಚಿತ್ರಗುಪ್ತರು ಅಕಾಡೆಮಿ ಗಿಕಾಡೆಮೀ ಸೇರ್ಕೊಂಡು ಯಾರ ಕವಿತೇಲಿ ಏನು ಗವರ್ಮೆಂಟ್ ವಿರೋಧಿ ಐಡಿಯಾ ಇದೇಂತ ಗುಟ್ಟಾಗಿ ಸರ್ಕಾರಕ್ಕೆ ರಿಪೋರ್ಟ್ ಮಾಡ್ತಾರಲೇ!
ಚನ್ನಣ್ಣ ವಾಲೀಕಾರ: (ರಾಗವಾಗಿ) ಓಹೋ! ಹಮ್ ದೇಖೇಂಗೆ...
ರಿಪೋರ್ಟರ್ ರಂಭಾ: (ಬಾಯಿಗೆ ಮೈಕ್ ತುರುಕಿಕೊಂಡು) ಬ್ರೇಕಿಂಗ್ ನಾಯ್ಸ್! ಪ್ರಭುತ್ವವಿರೋಧಿ ಕವಿತಾ ವಾಚನ ಮಾಡ್ತಾ ಇರೋ ಎಡಪಂಥೀಯ ಕವಿಗಳ ವಿರುದ್ಧ ‘ದೇವದ್ರೋಹ’ ಕಾಯ್ದೆ ಜಾರಿಗೆ ಜಡಪಂಥೀಯ ಕವಿಗಳ ಡಿಮಾಂಡ್! ಕವಿಗಳ ಕಾರಾಗೃಹವಾಸಕ್ಕೆ ವಿಮರ್ಶಕ ಶೇಷಗಿರಿಭಟ್ ಒತ್ತಾಯ!
ಈ ಗದ್ದಲಗಳ ನಡುವೆ ಕಾಮನಬಿಲ್ಲಿನ ಕವಿಗಳು ಕೇರ್ ಮಾಡದೆ ಪದ್ಯ ಕುಟ್ಟುತ್ತಲೇ ಇರುವರು. ಕೀರಂ ‘ವಾಹ್! ವಾಹ್!’ ಎಂದು ಹುರಿದುಂಬಿಸುತ್ತಿರುವರು.
ಭೂಲೋಕದಂತೆ ದೇವಲೋಕದ ಮರಿಕವಿಗೋಷ್ಠಿಯಲ್ಲೂ ಹನಿಗವಿತೆಗೆ ಅನ್ಯಾಯವಾಗಿದ್ದನ್ನು ಪ್ರತಿಭಟಿಸುತ್ತಾ, ಹನಿಗವಿ ಜರಗನಹಳ್ಳಿ ಶಿವಶಂಕರ್ ಪದ್ಯ ಹೇಳುತ್ತಲೇ ವೇದಿಕೆಗೆ ನುಗ್ಗೇ ಬಿಡುವರು.
ಜರಗನಹಳ್ಳಿ ಶಿವಶಂಕರ್:
ಎರಡು ಕಲ್ಲು ಬೇಕು
ಕಿಡಿ ಹಾರಿಸಿ ಬೆಂಕಿ ಕಾಣಲು
ಆದರೆ ಒಂದು ನಾಲಗೆ ಸಾಕು
ಕೋಲಾಹಲ ಎಬ್ಬಿಸಲು...
ಈ ಹನಿಗವಿತೆ ಸಾರ್ವಜನಿಕ ಶಾಂತಿ ಭಂಗ ಮಾಡುವುದೆಂದು ಸರ್ಕಾರಿ ಚಿತ್ರಗುಪ್ತರು ಚೀರಲಾರಂಭಿಸುವರು. ಇದೇ ತಕ್ಕ ಸಮಯವೆಂದು ಕಾಂಪಿಯರ್ ಕೀರಂ ಕಿಲಾಡಿತನದಿಂದ ಡ್ರಿಂಕ್ಸ್ ಬ್ರೇಕ್ ಘೋಷಿಸುವರು.
ದೃಶ್ಯ: ೫
ಲಂಕೇಶ್: (ಡಿ.ಆರ್., ಕೀರಂ ಜೊತೆ ಒಂದು ಕ್ವಿಕ್ ಸಿಪ್ ಹೀರುತ್ತಾ) ಥತ್! ಬರೀ ಓಲ್ಡ್ ಫೆಲೋಗಳ ಪ್ರಾಚೀನ ಪದ್ಯಾನೇ ಆಯ್ತಲ್ರಲೇ! ಮುಂದಿನ ಜನರೇಶನ್ ಕವಿ ನನ್ಮಕ್ಳು ಯಾವನಾರೂ ಈ ಕಡೆ ಆನ್ ದಿ ವೇ ಇದಾರೇನ್ ನೋಡ್ರಲೇ!
ಕೀರಂ: ಕರೆಕ್ಟ್ ಸಾರ್! ಕೆಳಗಿನಿಂದಲೇ ಯಾರನ್ನಾದರೂ ಆನ್‍ಲೈನ್‍ನಲ್ಲಿ ಕವಿತೆ ಓದಲು ಕರೀಬಹುದಲ್ಲ?
ಕೀರಂ ಮಾತು ಕೇಳಿ ಡಿ.ಆರ್., ಸಿದ್ದಲಿಂಗಯ್ಯ, ಕೇಬಿ ಸಿದ್ಧಯ್ಯ ಮೇಲಿನಿಂದ ಇಣುಕಿ ಇಣುಕಿ ಕೆಳಗೆ ನೋಡುವರು.
ಸಂಜೆ ಸಂಸ ಬಯಲು ರಂಗಮಂದಿರದಲ್ಲಿ ನಟರಾಜ್ ಹುಳಿಯಾರ್, ಸುಬ್ಬು ಹೊಲೆಯಾರ್, ಎಲ್. ಎನ್. ಮುಕುಂದರಾಜ್, ವಿಕ್ರಮ್ ವಿಸಾಜಿ ಮೊದಲಾದ ಅಳಿದುಳಿದ ಲೇಖಕರು ವಿನಾಕಾರಣ ನಗುತ್ತಾ ಕೊಂಚ ಸಂದೇಹಾಸ್ಪದವಾಗಿ ಸುಳಿದಾಡುತ್ತಿರುವ ದೃಶ್ಯ ಕಂಡು ಬರುವುದು. ಕನ್ನಡ ಮಹಿಳಾ ಕವಿಗಳ ಕಾಯಂ ಪ್ರೋತ್ಸಾಹಕರಾದ ಈ ಮಹನೀಯರುಗಳು ಕೆಲವೇ ಕ್ಷಣಗಳಲ್ಲಿ ಶುರುವಾಗಲಿದ್ದ ‘ಸ್ವಾತಂತ್ರೋತ್ಸವ ಮಹಿಳಾ ಕವಿಗೋಷ್ಠಿ’ಯಲ್ಲಿ ಕವಿತೆ ಓದಲು ‘ನೆರೆದಿದ್ದ’ ನವ ಕವಯಿತ್ರಿಯರ ಭರ್ಜರಿ ಮೇಕಪ್ಪನ್ನು ಪದೇ ಪದೇ ನೋಡಿ ನೋಡಿ ಪುಳಕಗೊಳ್ಳುತ್ತಿರುವ ನೋಟವು ರಮಣೀಯವಾಗಿ ಕಾಣುತ್ತಿರುವುದು.
ಆ ಕವಿರೂಪಿ ಮಹಿಳೆಯರು ಕವಿತೆ ಓದುವ ಮೊದಲೇ ಅವರನ್ನು ಮೆಚ್ಚಲೇಬೇಕೆಂದು ತೀರ್ಮಾನಿಸಿದ್ದ ಸದರಿ ಮಹಾಶಯರು ಒಳ್ಳೊಳ್ಳೇ ಹೊಗಳಿಕೆಯ ವಾಕ್ಯಗಳನ್ನು ಒಳಗೊಳಗೇ ಪೋಣಿಸಿಕೊಳುತ್ತಾ, ಉಗುಳು ನುಂಗುತ್ತಾ, ಮಾತುಮಾತಿಗೂ ಮುಗುಳು ನಗುತ್ತಾ, ತಕ್ಕ ಗಳಿಗೆಗಾಗಿ ಹೊಂಚುತ್ತಾ ನಿಂತಿರುವರು. ಈ ರೊಮ್ಯಾಂಟಿಕ್ ದೃಶ್ಯವನ್ನು ಅಮರಲೋಕದ ಕವಿಗಳು ಕಣ್ಣುರಿಯಿಂದ ಗಮನಿಸಲಾರಂಭಿಸುವರು.
ಸಿಜಿಕೆ: (ಮೇಲಿಂದ ಕೆಳಗೆ ಇಣುಕಿ ನೋಡುತಿದ್ದ ಹಿರಿಯ ಸಾಹಿತಿಗಳು ಕೆಳಗಿನವರ ಮೇಲೆ ಆಸೆಗಣ್ಣು ಹಾಕುತ್ತಿರುವುದನ್ನು ತಡೆಯಲೆತ್ನಿಸುತ್ತಾ) ಲೇ ಲೇ ಲೇ! ಪಾಪ! ಆ ಹುಡುಗರ್ ಮ್ಯಾಲೆ ಕೇಡ್‍ಗಣ್ ಆಕ್ಬೇಡ್ರಿ ಕಣ್ರುಲಾ! ಸತ್ತೋದ ಲೇಖಕರ ಮೇಲೆ ಆರ್ಟಿಕಲ್ಲೂ, ಪದ್ಯಾ, ನಾಟಕಾ ಕೆರೆಯೋಕೆ ಉಳ್ದಿರೋರು ಈ ನನ್ನಕ್ಳೇ ಕಣ್ರೋ!
ಅಲ್ಲಮಪ್ರಭು: (ಏಕ್‍ದಂ ಶೂನ್ಯ ಸಿಂಹಾಸನ ಬಿಟ್ಟೆದ್ದು) ಆಹಾ! ಮುಂದಣ ಕವಿಗಳೆನ್ನ ಕರುಣದ ಕಂದಮ್ಮಗಳೆಂಬೆ...ಗುಹೇಶ್ವರಾ!
ಕನ್ನಡ ಕಾವ್ಯದ ಹೆಡ್ ಆಫ್ ದಿ ಡಿಪಾರ್ಟ್‍ಮೆಂಟ್ ಅಲ್ಲಮಪ್ರಭುಗಳ ದನಿ ಹಠಾತ್ತನೆ ಕೇಳಿ ಬಂದ ತಕ್ಷಣ, ಸಕಲ ಕವಿಗಳೂ ತಮ್ಮ ಕವನಗಳನ್ನು ಜೇಬಿಗೆ ತುರುಕಿಕೊಳ್ಳುತ್ತಾ ಗಪ್‍ಚಿಪ್ಪಾಗಿ ಚದುರುವರು!
ಆಗಸದಲ್ಲಿ ಮೋಡಗಳು ಮುಚ್ಚಿಕೊಂಡು ಕತ್ತಲಾವರಿಸುವುದು. ಕನ್ನಡ ಕವಿಗಡಣವು ಮೇನಕಾ ಬಾರ್‌ನಲ್ಲಿ ಏರ್ಪಡಿಸಿರುವ ಉಚಿತ ಅಮೃತಪಾನ ಗೋಷ್ಠಿಗೆ ಸಡಗರದಿಂದ ಸಜ್ಜಾಗುವುದು.
(ಮಂಗಳಂ!)
(ಭಾರತದ ಸ್ವಾತಂತ್ಯ್ರೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ ೨೦೨೧ರ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಈ ಅಂಕಣಕಾರನ ಅಣಕು ನಾಟಕದ ಎಡಿಟೆಡ್ ರೂಪ. ಚಿತ್ರಗಳು: ರಾಮಕೃಷ್ಣ ಸಿದ್ರಪಾಲ. ಕೃಪೆ ಪ್ರಜಾವಾಣಿ.)
Comments
17 Comments
| Nataraj Honnavalli
ಬ್ರಿಲಿಯಂಟ್! ಅರಿಸ್ತೋಫನೀಸ್ ನ 'ದ ಕ್ಲೌಡ್ಸ್' ನಾಟಕ ನೆನಪಾಯ್ತು. ಒಂದು ಪೂರ್ಣ ಪ್ರಮಾಣದ ನಾಟಕ ಮಾಡಬಹುದು.
| ಡಾ. ನಿರಂಜನ ಮೂರ್ತಿ ಬಿ ಎಂ
ಸಿಂಪ್ಲಿ ವಂಡರ್ಫುಲ್! ಸರಳಾದ್ಭುತ!! ಸಮಯೋಚಿತ ಸಂದರ್ಭ, ಕಲ್ಪನಾ ಲೋಕದ ವಿಲಾಸ, ಬಳಸಿದ ಭಾಷೆ ಮೂಡಿಸುವ ಮಂದಹಾಸ, ಓದಿನ ಹಬ್ಬದ ರಸಗವಳ, ಎಲ್ಲ ಎಲ್ಲವೂ ಪರಮಾದ್ಭುತ!!
| kaavya
Wow! I had missed this gem. This is classic!
| Dr.Sanganagouda Hiregouda
ಅದ್ಭುತವಾಗಿದೆ ಸರ್. ಇನ್ನೊಂದು ಇಂತೀ ನಮಸ್ಕಾರದಂತಿದೆ. ಸಾಹಿತ್ಯದ ಗಂಭೀರ ಓದುಗರಿಗೆ ಮಾತ್ರ, ಇಲ್ಲಿಯ ಆತ್ಮಗಳ ಸಂಭಾಷಣೆ ಅರ್ಥವಾಗುತ್ತದೆ....
| Swamy
ಎವರ್ ಗ್ರೀನ್! ನಕ್ಕೂ ನಕ್ಕೂ ಸುಸ್ತಾಯ್ತು.. ಜಡಪಂಥೀಯ ಪ್ರಯೋಗ.. 👌👌👌
| ಗುರು ಜಗಳೂರು
ನಾಟಕದ ರಚನೆಯೂ ನಿಮಗೆ ಗದ್ಯದಂತೆ ಸಿದ್ದಿಸಿದೆ.ಇದು " ಶೇಕ್ಸ್ ಪಿಯರ್ ಮನೆಗೆ ಬಂದ ಅಥವಾ ಮುಂದಣ ಕಥನದಲ್ಲಿ ಗಮನಿಸಬಹದು.ಅಪಾರ ಸಾಹಿತ್ಯ ಓದು,ವಿನೋದ ಪ್ರಜ್ಞೆ, ತುಂಟತನ ಮೇಲಿನ ಬರಹದಲ್ಲಿ ಕಾಣಬಹುದು. ನಾವೆಲ್ಲರೂ ಮತ್ತು ಹಳ್ಳಿಗಳಲ್ಲಿ ಮಾತಿನ ಮಧ್ಯೆ ಹಾರಿಸುವ ಹಾಸ್ಯ ಚಟಾಕಿಗಳು ನಮ್ಮನ್ನು ಜೀವಂತವಾಗಿಡುತ್ತಿದ್ದವು.ಈಗ ಇವೆಲ್ಲ ಕಾಣೆಯಾಗಿ ಸಣ್ಣಪುಟ್ಟ ವಿಷಯಕ್ಕೂ ರಣರಂಗವನ್ನು ಕಾಣುವಂತಾಗಿದೆ. ಸರ್,ಪರುಶು ಅಂತ ನಟಭೈರವನನ್ನು(ವಜ್ರಮುನಿ) ಯಥಾವತ್ ಮಿಮಿಕ್ರಿ ಮಾಡೋನು.ಇತ್ತೀಚಿಗೆ ಅವನು ತೀರಿಕೊಂಡಾಗ ಬಹುಶಃ ಈಗ ಸ್ವರ್ಗದಲ್ಲಿ ನಟಭೈರವನನ್ನು ಕಾಣಲು ಹೋಗಿರಬಹುದು ಎಂದು ತಮಾಷೆ ಮಾಡುತ್ತಿದ್ದೆವು.
| ಎಸ್.ಆರ್.
ಪ್ರಜಾವಾಣಿಯಲ್ಲಿ ಪ್ರಕಟವಾದಾಗಲೇ ಓದಿದ್ದೆ. ಈಗಲೂ ಅಷ್ಟೇ ಫ್ರೆಶ್ ಆಗಿದೆ. ಇಂಥ ನಿರ್ಲಿಪ್ತ ಬರವಣಿಗೆ ಕನ್ನಡಕ್ಕೆ ಬೇಕು.
| Gangadhar
ಸಾಹಿತ್ಯ ಸಂವೇದನೆ ಬೆಳೆಸುವ ಸೃಜನಶೀಲ ಬರಹ.
| Venkatesh Murthy
ಈ ಅಣಕು ನಾಟಕ ಇದೊಂದು ಅಂಕದ ಪ್ರಹಸನದ ಸ್ಯಾಂಪಲ್..... ಮತ್ತೆ ಉಳಿದ ಅಂಕಗಳಲ್ಲಿ ಕತ್ತಲೆ ಬೆಳಕು ಗಾಳಿ.. ಎಂಬ ಶೀರ್ಷಿಕೆಯ ಅಡಿಯಲ್ಲಿ ಅಣಕು ನಾಟಕ ಮುಂದುವರೆಯಲಿ. ವಿವಿಧ ಅಂಕಗಳಲ್ಲಿ ಸಂಸ ,ಕೈಲಾಸo, ಡಿವಿಜಿ, ರಾಜರತ್ನಂ,, ತುರ್ತು ಪರಿಸ್ಥಿತಿ ಪದ್ಯ ಬರೆದ ಚಂಪಾ,, ತೇಜಸ್ವಿ ಒಳಗೊಂಡ ಹೋರಾಟ, ಚಳುವಳಿ, ಬಂಡಾಯ, ರಾಜಕಾರಣ, ಕೀರ್ತಿ ಶನಿ ಇತ್ಯಾದಿ ಸಾಂಸ್ಕೃತಿಕ ರಾಜಕಾರಣ ವರಿಗೂ ಈ ಹಣಕ ನಾಟಕ ವಿಸ್ತರಿಸಲಿ...... ಈ ಕೆಲಸವನ್ನು ಚಂಪಾ ಮತ್ತು ಎಂ ಎಸ್ ಕೆ ಪ್ರಭು ಮುಂತಾದ ಲೇಖಕರು ಮಾಡಿದ್ದಾರೆ.. ತಮ್ಮ ಈ ಅಣಕು ನಾಟಕ ಇನ್ನೂ ವಿಭಿನ್ನವಾಗಿ ಸಾಂಸ್ಕೃತಿಕ ಮಹತ್ವ ಉಳ್ಳ ಗಂಭೀರ ಹಾಗೂ ಪ್ರಹಸನ ನಾಟಕವಾಗಿ ಹೊರಬರಲಿ ಎಂಬುದೇ ನನ್ನ ಆಶಯ....
| MP
ನವರಸ ಕೂರ್ಮ ತಿಂದಂತೆ ಆಯಿತು. ನಮ್ಮ ಹಿರಿಯ ಕವಿಗಳ ಅಂಕುಡೊಂಕು ಪರಿಚಯಿಸಿದಿರಿ. ಓದುತ್ತಾ ಎಂಜಾಯ್ ಮಾಡಿದೆ
| Ramesh Aroli
ಚೆನ್ನಾಗಿದೆ ಸರ್. ಇದನ್ನು ರಂಗರೂಪಕ್ಕೆ ತರ್ಬೇಕು. ಚಂಪಾ ಮತ್ತು ಇತರೆ ಮಹಿಳಾ ಕವಿಗಳ ಅನುಪಸ್ಥಿತಿ ಢಾಳವಾಗಿ ಎದ್ದು ಕಾಣುತ್ತಿದೆ ಸರ್. ಮೊಗಳ್ಳಿ ಮತ್ತು ಎನ್. ಕೆ ಹನಮಂತಯ್ಯ ಅವರು ಅಲ್ಲಿ ಸೇರಿದರೆ ಸಂಭಾಷಣೆ ಹೇಗಿರಬಹುದು ಅನ್ನೊ ಕುತೂಹಲ. 😊
| Nataraj Huliyar Replies, Hi Comrades!
Thanks Ramesh Aroli. GPA granted to dear friends Ramesh Aroli,Sangangowda, Karigowda Bichanahally and Nataraj Honnavalli to add imaginative scenes to this developing text. I will surely work on it and try to produce it on stage when Honnavalli is free. Thanks Dr.Sharada of Kuppam University for reminding me the Paraody form popularised in Telugu.
| Dr. Karigowda Bichanahally
ಆಲನಹಳ್ಳಿ ಶ್ರೀ ಕೃಷ್ಣ, 'ಅಕ್ಕಮಹಾದೇವಿಗೆ ಯಾಕೆ ಮಹಿಳಾ ಮೀಸಲಾತಿ ಕೊಟ್ಟಿಲ್ಲ , ಕವಿಗೋಷ್ಠಿಗೆ ಕಣವಿ, ಜಿಎಸ್ಸೆಸ್ ಯಾಕೆ ಆಯ್ಕೆ ಮಾಡಿಲ್ಲ?' ಅಂತ ಗಲಾಟೆ ಮಾಡುತ್ತಿರುವ ಸುದ್ದಿ ಬಂದಿದೆ!
| Somashankara N
ಕನ್ನಡ ಕವಿಗಳ ಕವಿಗೋಷ್ಠಿಯ ಸನ್ನಿವೇಶಗಳನ್ನೇ ಪೋಣಿಸಿದ ಅಣಕು ನಾಟಕದಿಂದ ಒಂದು ಮಧುರ ರಸಾನುಭೂತಿ ಸಿಕ್ಕಂತಾಯಿತು. ಒಂದು ಸಂಕ್ಷಿಪ್ತ ಸಾಹಿತ್ಯ ಚರಿತ್ರೆ ಓದಿದಷ್ಟು ನಿರಾಳ ಮತ್ತು ಸಾಹಿತ್ಯ ಸರಸ್ವತಿಯೇ ಅಕ್ಷರ ಲಕ್ಷ್ಮಿ ರೂಪ ತಾಳಿ ಗೆಜ್ಜೆ ಕಟ್ಟಿ ಕುಣಿದು ರಂಗದ ತುಂಬಾ ಪ್ರತಿಬಿಂಬವಾದ ಹಾಗೆ ಆಂತರ್ಯವೇ ಅಕ್ಷರವಾದ ಸಮಯ; ಹಗುರವಾಯಿತು ಹೃದಯ! ಸಾಹಿತ್ಯ ವಲಯದಲ್ಲಿ ಕಂಡು ಬರುವ ಮಾನವಿಕ ಸಂಬಂಧಗಳ ಗಟ್ಟಿತನ ಕೆನೆಗಟ್ಟಿ ಸಾಹಿತ್ಯ ಸಂಸ್ಕೃತಿಯ ಹೂರಣ ಉಣ ಬಡಿಸಿದ ತಮಗೆ ಕೃತಜ್ಞತಾ ಭಾವದಿಂದ ತಲೆಬಾಗಿ ನಮಿಸುತ್ತಿರುವೆ. ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಸರ್..
| Dr.K.S.R
ಈ ಅಂಕಣದಲ್ಲಿ ಪ್ರತಿ ಸಲ ಹೊಸ ಹೊಸ ಪ್ರಯೋಗಗಳು! 'ಐಡಿಯಲಾಜಿಕಲಕ್ ರೌಡಿಸಂ' ಕುತೂಹಲಕರ ಪ್ರಯೋಗ.
| Vimala
ಡಿ.ಆರ್. ನಾಗರಾಜ್ ಬಗ್ಗೆ ಬರೆದಿರುವುದು... ಅವರನ್ನೇ ನೋಡಿದ ಹಾಗಾಯ್ತು. ಸಿದ್ದಲಿಂಗಯ್ಯನವರದೂ ಹಾಗೇ. ನಿಮ್ಮ ಇಮ್ಯಾಜಿನೇಶನ್ ಗೆ 🙏🙏🙏🫡
| Hari Prasad
ಮಜವಾಗಿದೆ ಪದ್ಯಾತುರ ಹದ್ದು! ಚಂದವಾದ ಪ್ರಯೋಗ ಎನ್ಕೆ ಮಿಸ್ ಆಗಿರೋದನ್ನು ಪ್ರತಿಭಟಿಸಲಾಗುವುದು!!!
Add Comment