ಅರಸು: ಆದರ್ಶ ಚಿಂತನೆ- ವಾಸ್ತವಗಳ ನಡುವೆ

ಮೊನ್ನೆ ಗೆಳೆಯರು ದೇವರಾಜ ಅರಸರ ಹುಟ್ಟುಹಬ್ಬವನ್ನು (೨೦ ಆಗಸ್ಟ್ ೧೯೧೫) ನೆನಪಿಸಿ, ‘ಈ ವಾರ ಅರಸು ಬಗ್ಗೆ ಬರೆಯಿರಿ’ ಎಂದಾಗ, ಈಗಾಗಲೇ ಅರಸು ಬಗ್ಗೆ ಹಲವು ಅಂಕಣಗಳಲ್ಲಿ ಬರೆದಿರುವುದು ನೆನಪಾಗಿ ಹೇಳಲು ಹೊಸದೇನೂ ಇಲ್ಲ ಎನ್ನಿಸಿತು. ಆದರೆ ಈ ಅಂಕಣ ಬರೆಯುವ ದಿನ ಏಕಾಏಕಿ ಅರಸು ಅವರ ಬುದ್ಧಿಜೀವಿ-ವ್ಯಕ್ತಿತ್ವ ತೇಲಿ ಬಂತು; ಲೋಹಿಯಾ ಸಂಪಾದಕತ್ವದ ‘ಮ್ಯಾನ್‌ಕೈಂಡ್’ ಪತ್ರಿಕೆಯನ್ನು ಅರಸು ಓದುತ್ತಿದ್ದರೆಂಬುದು ನೆನಪಾಯಿತು. 

ಈಚೆಗೆ ಲೋಹಿಯಾ ಜೀವನ ಚರಿತ್ರೆ ‘ಡಾಕ್ಟರ್ ಸಾಹೇಬ್’ಗೆ ಕೊನೆಯ ಸ್ಪರ್ಶ ಕೊಡುತ್ತಿದ್ದಾಗ, ಈ ಪುಸ್ತಕ ಬರೆಯಲು ಈವರೆಗೆ ಓದಿದ ನೂರಾರು ಪುಸ್ತಕಗಳ ಸಾವಿರಾರು ವಿವರಗಳಲ್ಲಿ ಅರಸು ‘ಮ್ಯಾನ್‌ಕೈಂಡ್’ ಪತ್ರಿಕೆಯನ್ನು ತಪ್ಪದೆ ಓದುತ್ತಿದ್ದರು ಎಂಬ ವಿವರ ಕೂಡ ನನ್ನಲ್ಲಿ ಉಳಿದಿತ್ತು. ‘ಮ್ಯಾನ್‌ಕೈಂಡ್’ ಲೋಹಿಯಾ ಹಾಗೂ ಸಂಗಾತಿಗಳು ಸಂಪಾದಿಸುತ್ತಿದ್ದ ಭಾರತದ ಅತ್ಯಪೂರ್ವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ವಿಶ್ಲೇಷಣೆಗಳ ಮಾಸಪತ್ರಿಕೆ ಎಂಬುದು   ಹಲವರಿಗೆ ತಿಳಿದಿರಲಿಕ್ಕಿಲ್ಲ. 

ಕಳೆದ ವರ್ಷ ‘ಮ್ಯಾನ್‌ಕೈಂಡ್’ನ ಹತ್ತಾರು ಸಂಚಿಕೆಗಳನ್ನು ಪ್ರೊಫೆಸರ್ ರವಿವರ್ಮಕುಮಾರ್‍ ಹಾಗೂ ಸವಿತಾ ನಾಗಭೂಷಣ ಕೊಟ್ಟಾಗ ರೋಮಾಂಚನದಿಂದ ತಿರುವಿ ಹಾಕಿದೆ; ‘ಲೋಹಿಯಾರ ಪುಟ್ಟ ಸಮಾಜವಾದಿ ಗುಂಪು ಎಂಥ ಅದ್ಭುತವಾದ ಐಡಿಯಾಗಳ ಪತ್ರಿಕೆ ತಂದಿದೆ!’ ಎಂದು ಮತ್ತೊಮ್ಮೆ ಕೃತಜ್ಞತೆ ಹುಟ್ಟಿತು. ದೇಶ ವಿದೇಶಗಳ ಸಮಾಜವಾದಿ ಚಿಂತಕ ಚಿಂತಕಿಯರು ಬರೆಯುತ್ತಿದ್ದ ಪತ್ರಿಕೆ ಇದು. ಕರ್ನಾಟಕ ರೂಪಿಸಿದ ಮೂವರು ವಿಶಿಷ್ಟ-ವಿಭಿನ್ನ ನಾಯಕರಾದ ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ, ಎಂ.ಡಿ. ನಂಜುಂಡಸ್ವಾಮಿ ಮೂವರೂ ‘ಮ್ಯಾನ್‌ಕೈಂಡ್’ ಓದುಗರಾಗಿದ್ದರು. ಗೋಪಾಲಗೌಡರು ‘ಮ್ಯಾನ್‌ಕೈಂಡ್’ನ ಸಂಪಾದಕೀಯ ಸಮಿತಿಯಲ್ಲಿದ್ದರು. ಲೋಹಿಯಾ ನಿಧನದ ನಂತರ, ಪೂರ್ಣಚಂದ್ರ ತೇಜಸ್ವಿ ಕೂಡ ಸಂಪಾದಕೀಯ ಸಮಿತಿಯಲ್ಲಿದ್ದರು. ಕರ್ನಾಟಕಕ್ಕೆ ಈ ಎಲ್ಲರ ಕೊಡುಗೆಯ ಹಿಂದೆ  ಲೋಹಿಯಾ ಸಮಾಜವಾದದ ಚಿಂತನೆ, ರಾಜಕಾರಣಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂದ ಹಾಗೆ, ‘ಮ್ಯಾನ್‌ಕೈಂಡ್’ನಲ್ಲಿ ಲೋಹಿಯಾ ಪ್ರತಿ ತಿಂಗಳು ಬರೆಯುತ್ತಿದ್ದ ‘ನೋಟ್ಸ್ ಅಂಡ್ ಕಾಮೆಂಟ್ಸ್’ ಬರಹಗಳ ಕನ್ನಡಾನುವಾದಗಳ ಪರಿಷ್ಕೃತ ರೂಪ ‘ಮಾನವ ಕುಲದ ಏಕತೆ’ ಈಗ ಮತ್ತೆ ಪ್ರಕಟವಾಗಿದೆ.

ಹದಿಹರೆಯದಲ್ಲಿ ಕಮ್ಯುನಿಸಂ ಕಡೆಗೆ ಒಲವಿದ್ದ ದೇವರಾಜ ಅರಸು ಕ್ರಮೇಣ ಲೋಹಿಯಾ ರೂಪಿಸುತ್ತಿದ್ದ ಸಮಾಜವಾದವನ್ನು ’ಮ್ಯಾನ್‌ಕೈಂಡ್’ ಬರಹಗಳ ಓದಿನ ಮೂಲಕವೂ ಗ್ರಹಿಸಿರಬಹುದು; ತಮ್ಮ ಆದರ್ಶಗಳು, ಯೋಜನೆಗಳು ಹಾಗೂ ರಾಜಕಾರಣದ ಕೆಲವು ನಡೆಗಳನ್ನಾದರೂ ಅದರಿಂದ ರೂಪಿಸಿಕೊಂಡಿರಬಹುದು ಎಂದು ಊಹಿಸುವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ, ದಲಿತ-ಹಿಂದುಳಿದ ವರ್ಗಗಳ ಏಕತೆ, ಉಳುವವನೇ ನೆಲದೊಡೆಯ, ಭಾರತದ ಜಾತೀಯ ರೋಗಗಳು, ಜಾತಿ ಕೀಳರಿಮೆ, ತಬ್ಬಲಿ ಜಾತಿಗಳ ಸಬಲೀಕರಣ ಹಾಗೂ ಅರಸು ಅವರ ಇನ್ನಿತರ ಸಾಂಸ್ಕೃತಿಕ ನೋಟಗಳ ಹಿಂದೆ ಲೋಹಿಯಾ ಚಿಂತನೆಗಳ ಚೌಕಟ್ಟುಗಳಿವೆ. ಮುಂದೆ ಕಾಂಗ್ರೆಸ್ಸಿಗರು ‘ಉಳುವವನೇ ಹೊಲದೊಡೆಯ’ದ ಆದರ್ಶವನ್ನು ಮೇಲ್ಪದರದಲ್ಲಿ ಮಾತಾಡುತ್ತಿದ್ದಾಗ, ಅರಸು ‘ಜನತಾ ನ್ಯಾಯಾಲಯ’ ಸ್ಥಾಪನೆಯ ಬಗ್ಗೆ ಮಾತಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಅರಸು ಶಾಸಕರಾಗಿ ಸದನದಲ್ಲಿ ಗೋಪಾಲಗೌಡರ ಮಾತುಗಳನ್ನು ಕೇಳಿಸಿಕೊಂಡಿದ್ದರು.

ನಮ್ಮ ಅಪರೂಪದ ಬುದ್ಧಿಜೀವಿ-ಮುಖ್ಯಮಂತ್ರಿಯಾದ ಅರಸು ಅವರ ಜೀವಿತ ಕಾಲದಲ್ಲಿ ನಮ್ಮ ದೊಡ್ಡ ಲೇಖಕರಿಗೂ ಅರಸು ಅವರ ಈ ಮುಖಗಳು ಅಷ್ಟಾಗಿ ಕಂಡಿರಲಿಲ್ಲ. ಅದಕ್ಕೆ ಕಾರಣವೂ ಇದೆ: 
ನಾವು ಘಟನಾವಳಿಗಳಿಗೆ ಹತ್ತಿರವಿದ್ದಾಗ ಅವು ಕಾಣುವ ರೀತಿಗೂ ಆ ಘಟನಾವಳಿಗಳು ಚರಿತ್ರೆಯ ಭಾಗವಾದಾಗ ಕಾಣುವ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಅರಸು ಆಡಳಿತ ಕಾಲದಲ್ಲಿ ಹದಿಹರೆಯದ ವಿದ್ಯಾರ್ಥಿಯಾಗಿದ್ದ ನನ್ನಂಥವರಿಗೆ ಅರಸು ಇಂದಿರಾಗಾಂಧಿಯವರು ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವ ಅವಕಾಶವಾದಿ ರಾಜಕಾರಣಿಯಂತೆ ಕಾಣುತ್ತಿದ್ದರು. ನಾವೆಲ್ಲ ಆ ಪೂರ್ವಗ್ರಹಗಳಿಂದ ಕಳಚಿಕೊಂಡು, ಅರಸು ಕಾರ್ಯಕ್ರಮಗಳ ಒಳ್ಳೆಯ ಪರಿಣಾಮಗಳನ್ನು ಗ್ರಹಿಸುವ ಹೊತ್ತಿಗೆ ನಾಲ್ಕೈದು ವರ್ಷಗಳಾದವು. ಲಂಕೇಶರು ೧೯೮೦ರಲ್ಲಿ ಪ್ರಜಾವಾಣಿ ಅಂಕಣದಲ್ಲಿ ಬರೆದ ಕೊನೆಯ ಲೇಖನ ಅರಸುವನ್ನು ಕುರಿತಾಗಿತ್ತು. ಈ ಲೇಖನ ಕೂಡ ನಮ್ಮಂಥವರ ದೃಷ್ಟಿಕೋನವನ್ನು ಬದಲಿಸಿತು. ಅರಸು ಜಾರಿಗೆ ತಂದ ಯೋಜನೆಗಳ ಫಲಾನುಭವಿಗಳಾದ ಲಕ್ಷಾಂತರ ಸಾಮಾನ್ಯರು, ಸರ್ಕಾರಿ ನೌಕರರು, ರಾಜಕಾರಣಿಗಳು ಅರಸು ಕೊಡುಗೆಯನ್ನು ಅರಸು ನಿರ್ಗಮನದ ನಂತರ ಅರಿಯತೊಡಗಿದರು.

ಅರಸು ಅವರ ಪುಟ್ಟ ವ್ಯಕ್ತಿಚಿತ್ರ ಕೊಡಲು ಅರಸುವನ್ನು ಹತ್ತಿರದಿಂದ ಬಲ್ಲವರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರ ‘ಬಹುರೂಪಿ ಅರಸು’ ಪುಸ್ತಕದ ಕೆಲವು ವಿವರಗಳನ್ನು ಇಲ್ಲಿ ಬಳಸಿರುವೆ: 

ಮೈಸೂರು ರಾಜಮನೆತನದ ಸಂಬಂಧಿಯಾಗಿದ್ದ ಅರಸು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದು, ಬೆಂಗಳೂರಿನಲ್ಲಿ ಬಿ.ಎಸ್ಸಿ. ಓದುತ್ತಾ, ಪೈಲ್ವಾನ್ ಕೂಡ ಆಗತೊಡಗಿದ್ದರು! ಅವರು ಈ ವಿದ್ಯೆ ಕಲಿತಿದ್ದು, ‘ಶಾಂತಲಾ’ ಕಾದಂಬರಿ ಖ್ಯಾತಿಯ ಕನ್ನಡ ಲೇಖಕ ಕೆ.ವಿ. ಅಯ್ಯರ್‍ ಅವರ ವ್ಯಾಯಾಮ ಶಾಲೆಯಲ್ಲಿ. ಅರಸು ಮುಖ್ಯಮಂತ್ರಿಯಾಗಿದ್ದಾಗ ‘ಪ್ರಜಾವಾಣಿ’ಯಲ್ಲಿ ವ್ಯಂಗ್ಯಚಿತ್ರಕಾರ ರಾಮಮೂರ್ತಿ ಅರಸುವನ್ನು ಗ್ಲೌಸ್ ಹಾಕಿದ ಪೈಲ್ವಾನ್ ಆಗಿ ಚಿತ್ರಿಸುತ್ತಿದ್ದುದು ನೆನಪಾಗುತ್ತದೆ. ಹಾಗೇ ಲಂಕೇಶರು ‘ಜಟ್ಟಿ’ ಎಂದದ್ದು ಕೂಡ! 

ತರುಣ ದೇವರಾಜನಿಗೆ ಮಿಲಿಟರಿ ಸೇರುವ ಅವಕಾಶ ಸಿಕ್ಕಿತು. ಮಗನನ್ನು ಮಿಲಿಟರಿಗೆ ಕಳಿಸಲು ತಾಯಿ ಒಪ್ಪಲಿಲ್ಲ. ಊರಿನಲ್ಲೇ ಕೃಷಿಕನಾದ ದೇವರಾಜ ಹೊಲ ಉಳುತ್ತಿದ್ದ, ನೀರು ಸೇದುತ್ತಿದ್ದ, ದನ ಕರು ಮೇಯಿಸುತ್ತಿದ್ದ. ಸಮಯ ಸಿಕ್ಕಾಗ ಒಬ್ಬನೇ ಓದುತ್ತಾ ಕೂರುತ್ತಿದ್ದ. ಕಮ್ಯುನಿಸ್ಟ್ ಚಿಂತನೆಗಳ ಬಗ್ಗೆ ಒಲವು ತೋರುತ್ತಿದ್ದ ಈ ತರುಣನನ್ನು ೧೯೪೧ರಲ್ಲಿ ಕಾಂಗ್ರೆಸ್ ನಾಯಕ ಸಾಹುಕಾರ್ ಚೆನ್ನಯ್ಯ ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು. ೧೯೪೬ರಲ್ಲಿ ಅರಸು ಪ್ರಜಾಪ್ರತಿನಿಧಿ ಸಭೆಗೆ ಆರಿಸಿ ಬಂದರು. ೧೯೫೨ರಲ್ಲಿ ಹುಣಸೂರಿನಿಂದ ಚುನಾವಣೆ ಗೆದ್ದು ಮೈಸೂರು ವಿಧಾನಸಭೆ ಪ್ರವೇಶಿಸಿದ ಅರಸು ಗೆಲ್ಲುತ್ತಾ ಹೋದರು. ಮುಂದಿನ ವಿವರಗಳು ಎಲ್ಲರಿಗೂ ಗೊತ್ತಿವೆ. 

ಪ್ರಜಾವಾಣಿಯಲ್ಲಿ ತರುಣ ಪತ್ರಕರ್ತರಾಗಿದ್ದ ವಡ್ಡರ್ಸೆ ಅರಸುವನ್ನು ಮೊದಲ ಸಲ ಕಂಡಾಗ ಅವರ ಜೊತೆ ಮೇಡಂ ಕ್ಯೂರಿ ಜೀವನ ಚರಿತ್ರೆಯ ಬಗ್ಗೆ ಮಾತಾಡಿದ ಅರಸು, ಮತ್ತೊಮ್ಮೆ ವಿ.ಎಸ್. ನೈಪಾಲ್ ಬರೆದ ‘An Area of Darkness’ ಓದಿ, ವಡ್ಡರ್ಸೆಯವರಿಗೆ ಹೇಳುವ ಮಾತು: ‘ಭಾರತೀಯ ಸಮಾಜದ ಬಗ್ಗೆ ಮಾತಾಡುವ ನಿಮ್ಮಂಥ ಯುವಕರು ಈ ಪುಸ್ತಕ ಓದಬೇಕು. ಭಾರತವೆಂಬ ದೇಶದಲ್ಲಿ ಒಳ್ಳೆಯತನಗಳೂ ಇವೆ. ಆದರ್ಶವೂ ಇದೆ… ದುರ್ದೈವವೆಂದರೆ ಈ ಒಳ್ಳೆಯತನಗಳೆಲ್ಲಾ ಮ್ಯೂಸಿಯಂ ಪೀಸ್ ಆಗಿವೆ. ಭಾರತದ ಇಂದಿನ ವಾಸ್ತವಸ್ಥಿತಿಯೆಂದರೆ ಇದು ಜಗತ್ತಿನ ಕತ್ತಲು ಪ್ರದೇಶ- ಮಹಾಕೊಚ್ಚೆ ಎಂದಿದ್ದಾನೆ ನೈಪಾಲ್. ಒಮ್ಮೆ ಅದನ್ನು ಓದಿ.’ 

ಭಾರತ ಕುರಿತಂತೆ ಅರಸು ಅವರ ವಾಸ್ತವ ಪ್ರಜ್ಞೆ ಇಂಥ ಪುಸ್ತಕಗಳಿಂದಲೂ ಬೆಳೆದಂತಿದೆ. ಅರಸು ಹೇಳಿದ ಮೇಲೆ ವಡ್ಡರ್ಸೆ ಈ ಪುಸ್ತಕ ಓದಿದರು. ಕನ್ನಡದ ಅಪೂರ್ವ ಪತ್ರಕರ್ತರಾಗಿ ಬೆಳೆದರು. ಈ ವಿವರ ಓದಿದಾಗ, ಎಂ.ಎ ವಿದ್ಯಾರ್ಥಿಯಾಗಿದ್ದಾಗ ಈ ಪುಸ್ತಕವನ್ನು ಪಠ್ಯಪುಸ್ತಕವಾಗಿಸಿ ನನ್ನ ಕಣ್ಣನ್ನೂ ತೆರೆಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಡಿಪಾರ್ಟ್‌ಮೆಂಟಿನ ಮೇಡಂ, ಮೇಷ್ಟರುಗಳ ಬಗ್ಗೆ ಅಪಾರ ಗೌರವ ಉಕ್ಕಿತು.

ಭಾರತೀಯ ಸಮಾಜವನ್ನು ಗ್ರಹಿಸಲು ವಿಶೇಷ ಬೌದ್ಧಿಕ ಸಿದ್ಧತೆ ಮಾಡಿಕೊಂಡಿದ್ದ ಅರಸು ನೇಮಿಸಿದ ಹಾವನೂರ್ ಆಯೋಗ ಕರ್ನಾಟಕದ ದಿಕ್ಕನ್ನೇ ಬದಲಿಸಿತು; ಮುಂದೆ ಮಂಡಲ್ ವರದಿಗೂ ಇದು ಪ್ರೇರಣೆಯಾಯಿತು. ಅರಸು ರಾಜಕಾರಣದ ಕಾಲಘಟ್ಟದಲ್ಲೇ ಸಮುದಾಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಮೂಲಕ ದಲಿತ ಹಾಗೂ ಹಿಂದುಳಿದ ವರ್ಗಗಳ ಹೊಸ ಸಾಂಸ್ಕೃತಿಕ ಎನರ್ಜಿ ಹೊರಚಿಮ್ಮಿತು. ಒಂದು ಕಾಲದ ರಾಜಕಾರಣದ ಆಶಯಗಳು ಸಾಂಸ್ಕೃತಿಕ-ಸಾಮಾಜಿಕ ವಲಯಗಳಲ್ಲೂ ವಿಕಾಸಗೊಂಡ ಅಥವಾ ಅವು ಪರಸ್ಪರ ಅದಲುಬದಲಾದ ವಿಶಿಷ್ಟ ವಿದ್ಯಮಾನ ಅದು. ೧೯೭೫-೧೯೮೦ರ ನಡುವೆ ವಿಕಾಸಗೊಂಡ ದಲಿತ ಸಾಹಿತ್ಯ, ಸ್ತ್ರೀವಾದಿ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಧಾರೆಯ ನೂರಾರು ಲೇಖಕ ಲೇಖಕಿಯರು ಅರಸು ಕೊಡುಗೆಯನ್ನು ಇವತ್ತಿಗೂ ನೆನೆಯುವುದು ಈ ಕಾರಣದಿಂದ ಕೂಡ.

ಭಾರತದ ರಾಜಕಾರಣದ ನಿಕಟ ಅಧ್ಯಯನ ಮಾಡಿರುವ ರಾಜಕೀಯವಿಜ್ಞಾನಿ ಜೇಮ್ಸ್ ಮ್ಯಾನರ್‍ ಅರಸುವನ್ನು ಇಂಡಿಯಾದ ರಾಜಕಾರಣದ ‘ಪ್ರಾಗ್ಮ್ಯಾಟಿಕ್ ಪ್ರೋಗ್ರೆಸೀವ್ಸ್’ (‘ಮಾನವಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡ ವ್ಯಾವಹಾರಿಕ ಪ್ರಗತಿಪರರು’) ಎಂಬ ಪಟ್ಟಿಗೆ ಸೇರಿಸುತ್ತಾರೆ. ಅತ್ತ ಬಿಹಾರದಲ್ಲಿ ಕ್ಷೌರಿಕ ಕುಟುಂಬದಿಂದ ಬಂದು, ಪ್ರಖರ ಸಮಾಜವಾದಿಯಾಗಿ, ೧೯೭೦-೭೧ ಹಾಗೂ ೧೯೭೭-೭೯ರ ನಡುವೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಹಾಗೂ ಅರಸು ಅವರ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಮ್ಯಾನರ್ ಹೋಲಿಸಿ ನೋಡುತ್ತಾರೆ. ಪ್ರಬಲ ಜಾತಿಗಳ ಆಟದಿಂದಾಗಿ ಕರ್ಪೂರಿ ಠಾಕೂರ್ ಸೋತಲ್ಲಿ ಅರಸು ಗೆದ್ದದ್ದನ್ನು ಗುರುತಿಸುತ್ತಾ, ಮ್ಯಾನರ್ ಕಂಡುಕೊಂಡ ಸತ್ಯಗಳು: 

ಅರಸು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಾಗ ಮೇಲುಜಾತಿಗಳಲ್ಲಿ ಅಸಮಾಧಾನ ಉಂಟಾಯಿತು; ಆದರೆ ದಲಿತ, ಹಿಂದುಳಿದ ವರ್ಗಗಳ ನಡುವೆ ಪರಸ್ಪರ ಅಸಮಾಧಾನ ಹೆಚ್ಚಲಿಲ್ಲ. ಕಾರಣ, ಕಂದಾಯ ಮಂತ್ರಿ ಬಸವಲಿಂಗಪ್ಪನವರ ಭೂ ಸುಧಾರಣೆಯ ಕಾರ್ಯಕ್ರಮಗಳಿಂದಾಗಿ ದಲಿತರಿಗೆ, ಹಿಂದುಳಿದವರಿಗೆ ಭೂಮಿ ಸಿಕ್ಕಲಾರಂಭಿಸಿತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿಯಾದ ಸಂದರ್ಭದಲ್ಲಿ ದಲಿತ ಮಂತ್ರಿಗಳ ಸಂಖ್ಯೆ ಎರಡು ಪಟ್ಟಾಯಿತು; ಹಿಂದುಳಿದ ವರ್ಗಗಳ ಮಂತ್ರಿಗಳ ಸಂಖ್ಯೆಯೂ ಹೆಚ್ಚಿತು. ದಲಿತರಿಗೆ ಮೀಸಲಿಟ್ಟ ಸರ್ಕಾರಿ ಹುದ್ದೆಗಳನ್ನು ಅರಸು ಭರ್ತಿ ಮಾಡಿದರು. 

ಇದು ಸಾಮಾಜಿಕ ನ್ಯಾಯದ ರಾಜಕಾರಣ ಪ್ರಾಕ್ಟಿಕಲ್ ರಾಜಕಾರಣದ ಜೊತೆಗೆ ಬೆಸೆದುಕೊಂಡ ರೀತಿ. ೧೯೭೧ರಲ್ಲಿ ಮುಖ್ಯಮಂತ್ರಿ ಪಟ್ಟದವರೆಗೂ ಬಂದು ಹಿನ್ನಡೆ ಕಂಡ ಶಾಂತವೇರಿ ಗೋಪಾಲಗೌಡರ ಜೊತೆ ಅರಸುವನ್ನು ಹೋಲಿಸುತ್ತಾ ವಡ್ಡರ್ಸೆ ಬರೆಯುವ ಮಾತು: ’ಸಮಾಜವಾದಿ ಶಾಂತವೇರಿ ಗೋಪಾಲಗೌಡರು ತುಂಬು ಆದರ್ಶವಾದಿಯಾಗಿದ್ದರು… ಸಮಾಜವಾದಿ ಸರ್ಕಾರದ ರಚನೆಯ ಅವರ ಕನಸುಗಳೆಲ್ಲ ಕಮರಿ ಹೋದವು. ಜ್ಞಾನಾರ್ಜನೆಯಿಂದ ಸ್ಫುರಿಸುವ ಆದರ್ಶವಾದಕ್ಕೆ ವ್ಯವಹಾರಜ್ಞಾನದ ಹುರಿ ಹಾಕಲು ಕಲಿತ ಅಪೂರ್ಣ ಸಮಾಜವಾದಿ ಅರಸು ಗೆದ್ದರು.’

ಅರಸು ಒಮ್ಮೆ ಲೋಹಿಯಾರನ್ನು ಪ್ರಸ್ತಾಪಿಸುತ್ತಾ ಹೇಳಿದ ಮಾತನ್ನು ವಡ್ಡರ್ಸೆ ನೆನೆಯುತ್ತಾರೆ: ‘ನನಗೆ ಪರಂಪರೆಯ ಬಲವೂ ಇಲ್ಲ. ಜಾತಿಬೆಂಬಲವೂ ಇಲ್ಲ; ನಾನು ನಿಮ್ಮ ಲೋಹಿಯಾರ ಹಾಗೆ ತತ್ವಬೋಧೆ ಮಾಡ್ತಾ ಕೂತರೆ, ಈ ಎಂ.ಎಲ್‌.ಎ.ಗಳು ನನ್ನನ್ನು ಅಧಿಕಾರದಲ್ಲಿ ಇಡ್ತಾ ಇದ್ದರು ಅಂತ ತಿಳ್ಕೊಂಡಿದೀರಾ?’ 
ಮುಂದೊಮ್ಮೆ ಜಾರ್ಜ್ ಫರ್ನಾಂಡಿಸ್ ದೇವರಾಜ ಅರಸರಲ್ಲಿ ಅಪ್ಪಟ ಸಮಾಜವಾದಿಯ ಎಲ್ಲ ಗುಣಗಳನ್ನು ಗುರುತಿಸಿದ್ದನ್ನೂ ವಡ್ಡರ್ಸೆ ದಾಖಲಿಸುತ್ತಾರೆ. 

ಗಂಭೀರ ಪುಸ್ತಕಗಳ ಸಂಗ್ರಹವಿದ್ದ ಅರಸು ಅವರ ಪುಸ್ತಕಗಳ ಒಡನಾಟದ ದಿನಚರಿಯಿಂದ ಕೂಡ ನಮ್ಮ ಲೇಖಕ ಲೇಖಕಿಯರು, ರಾಜಕಾರಣಿಗಳು ಕಲಿಯಬೇಕಾಗಿದೆ. ಜಿ.ಎಚ್. ನಾಯಕರಂಥ ವಿದ್ವಾಂಸರು ಸಿಕ್ಕರೆ, ಅರಸು ಇರಾವತಿ ಕರ್ವೆಯವರ ‘ಯುಗಾಂತ’ ಕುರಿತು ಮಾತಿಗೆ ಇಳಿಯಬಲ್ಲವರಾಗಿದ್ದರು. ಗೋಪಾಲಕೃಷ್ಣ ಅಡಿಗರ ಪದ್ಯವನ್ನು ಓದಿ ಉಲ್ಲೇಖಿಸಬಲ್ಲವರಾಗಿದ್ದರು. ಗಂಭೀರ ವಿಚಾರ ಸಂಕಿರಣಗಳಲ್ಲಿ ಪ್ರೇಕ್ಷಕ-ಪ್ರೇಕ್ಷಕಿಯರ ಸಾಲಿನಲ್ಲಿ ಕೂತು ಟಿಪ್ಪಣಿ ಮಾಡಿಕೊಂಡು, ನಂತರ ಉತ್ತರ ಕೊಡಬಲ್ಲವರಾಗಿದ್ದರು, ಅ.ನ. ಯಲ್ಲಪ್ಪರೆಡ್ಡಿ ‘ಅರಸುಯುಗದ ಅರಣ್ಯ ಪರ್ವ’ ಪುಸ್ತಕದಲ್ಲಿ ಹೇಳುವಂತೆ ಜಾಗತಿಕ ಮಟ್ಟದ ಅರ್ಥಶಾಸ್ತ್ರದ ಪುಸ್ತಕಗಳಿಂದ ಹಿಡಿದು ವೈಜ್ಞಾನಿಕ ಪುಸ್ತಕಗಳೂ ಅವರಿಗೆ ಪರಿಚಯವಿದ್ದವು.  

ಅರಸು ತೀರಿಕೊಳ್ಳುವ ಕೆಲವು ತಿಂಗಳ ಕೆಳಗೆ ನಡೆದ ಲಂಕೇಶ್-ಅರಸು ಭೇಟಿಯಲ್ಲಿ ನಡೆದ ಮಾತುಕತೆ ಕುರಿತು ವಡ್ಡರ್ಸೆ ಬರೆಯುತ್ತಾರೆ: ‘ಭಾರತೀಯ ಸನ್ನಿವೇಶದಲ್ಲಿ ಗಾಂಧಿ ತತ್ವ ವಿಚಾರಗಳು, ಮಾರ್ಕ್ಸ್‌ವಾದ, ಲೋಹಿಯಾ ಚಿಂತನೆಗಳು, ಜಯಪ್ರಕಾಶ ನಾರಾಯಣರ ಸೌಮ್ಯವಾದ, ಪಂಡಿತ್ ಜವಾಹರಲಾಲ್ ಅವರ ಸಮಾಜವಾದ ಎಲ್ಲವನ್ನೂ ಈ ಮಾತುಕತೆ ಆವರಿಸಿತು. ವಿಶ್ಲೇಷಣೆಗಳು ನಡೆದವು.’

ಲೋಹಿಯಾ ಹೇಳುತ್ತಿದ್ದ ತಬ್ಬಲಿ ಜಾತಿಗಳ ರಾಜಕಾರಣ ಅರಸು ರಾಜಕಾರಣದಲ್ಲಿ ಮೂಲಕ ಕಾರ್ಯರೂಪಕ್ಕೆ ಬಂತು. ಅರಸು ಸಣ್ಣಪುಟ್ಟ ಜಾತಿಗಳಿಂದ ನಾಯಕರನ್ನು ಆರಿಸಿ ಶಾಸಕರು ಹಾಗೂ ಮಂತ್ರಿಗಳನ್ನಾಗಿಸಿದ್ದು ಆ ಜಾತಿಗಳ ಚಲನೆಗೆ ಕಾರಣವಾಗತೊಡಗಿತು. ಆ ಜಾತಿಗಳಿಂದ ಪ್ರತಿಭೆಗಳು ಹೊರಹೊಮ್ಮಿದವು. ದೇವರಾಜ ಅರಸು ಚರಿತ್ರೆಯ ನಿರ್ಣಾಯಕ ಚಲನೆಯೊಂದರ ಸಾಧನವಾದರು; ಅರಿವಿದ್ದೋ, ಅರಿವಿಲ್ಲದೆಯೋ ದಲಿತ ಹಾಗೂ ಹಿಂದುಳಿದ ಜಾತಿಗಳು ಒಂದು ‘ವರ್ಗ’ವಾಗುವಂತೆ ಮಾಡಲೆತ್ನಿಸಿದರು. ೧೯೭೨ರ ವಿಧಾನಸಭಾ ಚುನಾವಣೆಯಲ್ಲಿ ಅರಸು ದಲಿತ, ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಮಾಡಿದ ‘ಸೋಷಿಯಲ್ ಎಂಜಿನಿಯರಿಂಗ್' ಅದ್ಭುತ ಕೆಲಸ ಮಾಡಿತು. ೧೯೭೨ರ ಚುನಾವಣೆಗೆ ಅರಸು ಪ್ರಕಟಿಸಿದ ಮುಖರಹಿತ ಅಭ್ಯರ್ಥಿಗಳ ಪಟ್ಟಿ ನೋಡಿ ಕರ್ನಾಟಕದ ಪತ್ರಕರ್ತರು ನಗುತ್ತಿದ್ದರಂತೆ. ಆದರೆ ಅವತ್ತು ಇಂದಿರಾ ಕಾಂಗ್ರೆಸ್ಸಿನಿಂದ ೧೬೩ ಶಾಸಕರು ಗೆದ್ದರು. ಅವರಲ್ಲಿ ೯೨ ಜನ ದಲಿತ ಹಾಗೂ ಹಿಂದುಳಿದ ವರ್ಗಗಳ ಶಾಸಕರಿದ್ದರು.  

ರಾಜಕೀಯ ಚಕ್ರದ ವಿಚಿತ್ರ ತಿರುವುಗಳ ಫಲವಾಗಿ ಅರಸು ‘ಕರ್ನಾಟಕ ಕ್ರಾಂತಿರಂಗ’ ಕಟ್ಟಿದಾಗ ಅವರು ನೆಚ್ಚಿದ್ದ ಅನೇಕ ಹಿಂದುಳಿದ ಜಾತಿಗಳ ನಾಯಕರು ಕೈಕೊಟ್ಟರು. ಅರಸು ಅವರ ಪಕ್ಷ ಸೋತಾಗ ತಬ್ಬಲಿಗಳಂತೆ ಅಳುತ್ತಿದ್ದ ಹಿಂದುಳಿದ ಜಾತಿಗಳ ಮತದಾರರನ್ನು ನಾನೇ ಕಂಡಿದ್ದೇನೆ. ಅರವತ್ತೇಳನೆಯ ವಯಸ್ಸಿನಲ್ಲಿ ತೀರಿಕೊಳ್ಳುವ ಕಾಲಕ್ಕೆ ಅರಸು ದುರಂತನಾಯಕನಂತೆ ಕಾಣುತ್ತಿದ್ದರು. ಆದರೆ ಕರ್ನಾಟಕದ ಅನೇಕ ಮುಖ್ಯಮಂತ್ರಿಗಳ ಹೆಸರು ಕೂಡ ಮರೆತು ಹೋಗುತ್ತಿರುವ ಈ ಕಾಲದಲ್ಲಿ ಅರಸು ಅವರ ಧೀಮಂತ ವ್ಯಕ್ತಿತ್ವ ಹಾಗೂ ನಿರ್ಗಮನದ ನಂತರದ ನಿರಂತರ ವ್ಯಕ್ತಿತ್ವವಿಕಾಸ ನಮ್ಮಂಥವರಲ್ಲಿ ಅಭಿಮಾನ- ಆನಂದ-ಕೃತಜ್ಞತೆ ಹುಟ್ಟಿಸುತ್ತದೆ.

ಕೊನೆ ಟಿಪ್ಪಣಿ:

ಮೇಲೆ ಪ್ರಸ್ತಾಪಿಸಿದ ಲೋಹಿಯಾ ಬರಹಗಳ ಅನುವಾದ ‘ಮಾನವ ಕುಲದ ಏಕತೆ’ಯ ಜೊತೆಗೇ ಈ ಅಂಕಣಕಾರ ಹಾಗೂ ಇತರರು ಸಂಪಾದಿಸಿದ ಲೋಹಿಯಾ ಕನ್ನಡ ಸಂಪುಟಗಳ ಪರಿಷ್ಕೃತ ಮುದ್ರಣಗಳು, ಹೊಸ ಸಂಪುಟಗಳು ಈಗ ಪ್ರಕಟವಾಗಿವೆ.

ತಲಾ ನೂರು ರೂಪಾಯಿ ಬೆಲೆಯ ಈ ಚಾರಿತ್ರಿಕ ಬರಹಗಳ ಸಂಪುಟಗಳ ಹೆಸರು ಮತ್ತು ದೊರೆಯುವ ಸ್ಥಳ: 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಮಳಿಗೆ, (ಕಲಾಕ್ಷೇತ್ರ ಆವರಣ) ಬೆಂಗಳೂರು:

ಸಂಪುಟ೧: ಸ್ವಾತಂತ್ರದ ಅಂತರ್ಜಲ
ಸಂಪುಟ ೨: ಉತ್ತರ ದಕ್ಷಿಣ
ಸಂಪುಟ ೩: ಜಾತಿ ಭಾಷೆ ಪ್ರಭುತ್ವ
ಸಂಪುಟ ೪ : ಮಾನವ ಕುಲದ ಏಕತೆ

ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ಇಲ್ಲಿ ದೊರೆಯುವ ಪುಸ್ತಕಗಳು. ಈ ಕೆಳಕಂಡ ಎರಡು ಪುಸ್ತಕಗಳ ಆನ್‌ಲೈನ್ ಮಾರಾಟವೂ ಇದೆ: 

ಸಂಪುಟ ೬ : ಲೋಕಸಭೆಯಲ್ಲಿ ಲೋಹಿಯಾ
ಸಂಪುಟ ೭ : ಇತಿಹಾಸ ಮತ್ತು ವರ್ತಮಾನ

ಚಿಂತನಾಸಕ್ತರು ಪ್ರತಿಗಳು ಖರ್ಚಾಗುವ ಮುನ್ನ ಈ ಪುಸ್ತಕಗಳನ್ನು ಖರೀದಿಸುವುದು ಕ್ಷೇಮಕರ!
  
 

Share on:

Comments

4 Comments



| Somashankara N

ಅರಸು: ಆದರ್ಶ ಚಿಂತನೆ–ವಾಸ್ತವಗಳ ನಡುವೆ ಲೇಖನವು ದೇವರಾಜ ಅರಸರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸುವ ಅತ್ಯುತ್ತಮ ಲೇಖನ. ಅರಸರು ಕೇವಲ ರಾಜಕಾರಣಿಯಾಗಿರದೆ, ಅಪಾರ ಓದು, ವಿಶಾಲ ಚಿಂತನೆ ಮತ್ತು ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಬುದ್ಧಿಜೀವಿಯಾಗಿದ್ದರು ಎಂಬುದನ್ನು ಲೇಖನ ಮನಮುಟ್ಟುವಂತೆ ನಿರೂಪಿಸಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಭೂಸುಧಾರಣೆ, ದಲಿತ–ಹಿಂದುಳಿದ ವರ್ಗಗಳ ಸಬಲೀಕರಣ ಮುಂತಾದ ಅರಸರ ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಲೇಖನ ಪರಿಣಾಮಕಾರಿಯಾಗಿ ವಿವರಿಸುತ್ತದೆ. ಆದರ್ಶಗಳನ್ನು ಕೇವಲ ಚಿಂತನೆಯಲ್ಲಿರಿಸದೆ, ಅವುಗಳನ್ನು ವಾಸ್ತವ ರಾಜಕಾರಣದ ಮೂಲಕ ಕಾರ್ಯರೂಪಕ್ಕೆ ತಂದ ಅರಸರ ವೈಶಿಷ್ಟ್ಯವನ್ನು ತಿಳಿದಾಗ ಅವರ ಮೇಲೆ ಮತ್ತಷ್ಟು ಅಭಿಮಾನ ಮೂಡುತ್ತದೆ. ಈ ಲೇಖನವು ದೇವರಾಜ ಅರಸರನ್ನು ಪರಿಚಯಿಸುವುದರ ಜೊತೆಗೆ, ಒಬ್ಬ ನಾಯಕನನ್ನು ಪೂರ್ವಗ್ರಹವಿಲ್ಲದೆ ಅರ್ಥಮಾಡಿಕೊಳ್ಳುವ ಹೊಸ ದೃಷ್ಟಿಯನ್ನೂ ನೀಡುತ್ತದೆ. Thank you, sir, for this inspiring and insightful piece on Devaraj Urs’s remarkable life and legacy.


| Dr. Mahadevaiah P

ಸಂದರ್ಭಕ್ಕೆ ಅರ್ಥಪೂರ್ಣವಾದ ಲೇಖನ ನೀಡಿದಕ್ಕೆ ಧನ್ಯವಾದಗಳು ಸರ್.


| Subramanyaswamy

ಅರಸು ಅವರನ್ನು ಕುರಿತ ಈ ನಿಮ್ಮ ಲೇಖನದಲ್ಲಿ ಕೋಲಾರದ ಸಾಹುಕಾರ್ ಚನ್ನಯ್ಯ ದೇವರಾಜ ಅರಸು ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದವರು ಆ ಕಾಲದ ಧೀಮಂತ ದಲಿತ ನಾಯಕರಾಗಿದ್ದರು ಮತ್ತು ಅಂಬೇಡ್ಕರ್ ಒಡನಾಟ ಇದ್ದವರೂ ಆಗಿದ್ದರು.


| Subbaih,Kodagu

Well written essay. He was perhaps the best CM Karnataka had




Add Comment


Mundana Kathana Nataka

YouTube






Recent Posts

Latest Blogs