ಫುಟ್‌ಬಾಲ್ ಮತ್ತು ಬರವಣಿಗೆ 

ಫೀಫಾ ಫುಟ್‌ಬಾಲ್ ವರ್ಲ್ಡ್ ಕಪ್‌ನ ಪೂರಾ ಮ್ಯಾಚುಗಳನ್ನು ನೋಡುವ ವ್ಯವಧಾನ,  ಸಮಯ ಎರಡೂ ಇಲ್ಲದೆ ರಾತ್ರಿ ಮ್ಯಾಚುಗಳ ಹೈಲೈಟ್ಸ್ ಮಾತ್ರ ನೋಡುತ್ತಿದ್ದರೆ, ಒಂದು ಜಡ ಚಣವೂ ಇಲ್ಲದ (‘ನಾಟ್ ಎ ಡಲ್ ಮೊಮೆಂಟ್’) ಆಟದ ಲವಲವಿಕೆ ವಿಸ್ಮಯಗೊಳಿಸತೊಡಗುತ್ತದೆ. ಮೈ, ಮನ, ಕಣ್ಣು, ಕಾಲು, ಕೈ, ಕಲ್ಪನೆ, ಊಹೆ, ಆಕ್ಷಣದ ಒಳಪ್ರೇರಣೆ, ಮುನ್ನೋಟ, ನಿರೀಕ್ಷೆ, ಜಾಣತನ, ಚತುರತೆ, ಏನನ್ನಾದರೂ ಒದೆಯುವ ಖುಷಿ, ಗುರಿಯೊಂದನ್ನೇ ಗುರಿಯಾಗಿಸಿಕೊಂಡು ಗುರಿಮುಟ್ಟುವ ಛಲ... ಇವೆಲ್ಲವೂ ಅರೆಚಣದಲ್ಲಿ ಬೆರೆಯುವ ಆಟದ ಮಾಂತ್ರಿಕತೆ ನೋಡುಗರಲ್ಲಿ ವಿಚಿತ್ರ ಎನರ್ಜಿ ತುಂಬತೊಡಗುತ್ತದೆ. ಮೆಸ್ಸಿ, ರೊನಾಲ್ಡೋ ಥರದ ಸ್ಟಾರ್‌ಗಳ ನಡುವೆಯೇ ಹೊಸ ಹೊಸ ಅನಾಮಧೇಯರು ಸ್ಟಾರುಗಳಾಗಿ ಹೊಮ್ಮುವ ರೀತಿ, ಹಲವು ದೇಶಗಳ ತಂಡದಲ್ಲಿರುವ ಆಫ್ರಿಕಾ ಮೂಲದ ಆಟಗಾರರ ಸಹಜ ಸ್ಟಾಮಿನಾ ಕಂಡು ಮನ ತುಂಬಿ ಬರುತ್ತದೆ. 

ಈ ಆಟ ನೋಡನೋಡುತ್ತಾ, ಅದೇಕೋ ಏನೋ, ನಮ್ಮ ಬರವಣಿಗೆಗೂ ಇಂಥ ಜಡ ಚಣವಿಲ್ಲದ ಭಾಗ್ಯ ದಕ್ಕಬಲ್ಲದೇ ಎಂದು ಹಂಬಲಿಸುವಂತಾಗುತ್ತದೆ. ನನ್ನ ಓದಿನ ಅನುಭವದಲ್ಲಿ ಹೆಚ್ಚಿನ ಜಡ ಗಳಿಗೆಗಳು ಇಲ್ಲದಂಥ ಬರವಣಿಗೆ ಮಾಡಿರುವವರು ಯಾರು ಎಂದು ಹಿಂತಿರುಗಿ ನೋಡಿದರೆ ಕೆಲವೇ ಹೆಸರುಗಳು ಹೊಳೆಯುತ್ತವೆ: ನಾಟಕಕಾರರಾದ ಸೋಫೋಕ್ಲಿಸ್, ಶೇಕ್‌ಸ್ಪಿಯರ್; ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ಮಿಲನ್ ಕುಂದೇರ, ಪಿ.ಜಿ. ವೋಡ್‌ಹೌಸ್; ಕನ್ನಡದಲ್ಲಿ ತಕ್ಷಣ ಹೊಳೆವ ಹೆಸರು ಲಂಕೇಶ್... ಮುಂದಿನ ಹೆಸರಿಗೆ ತಡಕಾಡುವಂತಾಗುತ್ತದೆ. 

ನಿತ್ಯ ಫೇಸ್‌ಬುಕ್, ಯೂಟ್ಯೂಬುಗಳಲ್ಲಿ ಮುಳುಗಿರುವವರು ಕೂಡ ‘ನಾಟ್ ಎ ಡಲ್ ಮೊಮೆಂಟ್’ ಎನ್ನಲಾದ ಸ್ಥಿತಿಯಲ್ಲಿರಬಹುದು! ಆದರೆ ಪುಸ್ತಕಗಳ ಜೊತೆಯಲ್ಲಿ ನಮ್ಮಂಥವರಿಗೆ ಆಗುವ ಸೃಜನಶೀಲ ಅನುಭವ ಅಲ್ಲಿರಲಾರದು.  ಓದುವುದು ನಿಷ್ಕ್ರಿಯ (ಪ್ಯಾಸೀವ್) ಅನುಭವ ಎಂದು ತಿಳಿದವರು ಕೆಟ್ಟರು! ಓದುವಾಗ ನಾವು ’ಕ್ರಿಯೇಟೀವ್’ ಆಗುತ್ತೇವೆ, ಮನಸ್ಸಿನಲ್ಲೇ ಬರೆಯುತ್ತಿರುತ್ತೇವೆ; ಒಂದು ಪಾತ್ರದ ಮೂಲಕ ಮತ್ತೊಂದು ಪಾತ್ರ, ಒಂದು ಐಡಿಯಾ ತಗುಲಿ ಮತ್ತೊಂದು ಐಡಿಯಾ- ಹೀಗೆ ನಮ್ಮ ಸೃಜನಶೀಲ ಒರತೆ ಬರಿದಾಗದ ಹಾಗೆ ಓದು ನಮ್ಮನ್ನು ಪೊರೆಯುತ್ತಿರುತ್ತದೆ.  

ಮೊನ್ನೆ ಉಪನ್ಯಾಸವೊಂದರ ನಂತರ ಚಡಪಡಿಕೆಯ ಹುಡುಗ ಹುಡುಗಿಯರು ಕೇಳಿದ ಪ್ರಶ್ನೆಗಳು ನೆನಪಾಗುತ್ತವೆ: 

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ‘ಸಂಕಥನ’ ಸಂಶೋಧನಾ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಪೊಲಿಟಿಕಲ್ ಸೈನ್ಸ್ ಎಂ.ಎ. ಓದುವ ವಿದ್ಯಾರ್ಥಿಯೊಬ್ಬ ಭಾಷೆ, ಬರವಣಿಗೆ ಇತ್ಯಾದಿಗಳನ್ನು ಹೇಗೆ ಕಲಿಯುವುದು ಎಂದು ಕೇಳುತ್ತಿದ್ದ. ಕೃತಕ ಜಾಣತನ (ಕೃಜಾ) ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಂದಿದೆ; ಮುಂದೆ ಪುಸ್ತಕಗಳ ಗತಿ ಏನು ಎಂದು ಇನ್ನೊಬ್ಬರು ಕೇಳುತ್ತಿದ್ದರು. 

ಉತ್ತರವಾಗಿ ನನ್ನ ಅನುಭವದ ಮಾರ್ಗವನ್ನೇ ಅವರಿಗೂ ಹೇಳಿದೆ: ನಿತ್ಯ ಓದುವುದನ್ನು ಬಿಟ್ಟರೆ, ಬರೆಯುವುದನ್ನು ಕಲಿಯಲು ಇನ್ಯಾವುದೇ ಮಾರ್ಗಗಳಿಲ್ಲ. ನನ್ನ ಪ್ರಕಾರ, ಬರೆಯುವ ಹುಡುಗಿಗೆ ಇನ್ನೊಬ್ಬ ಲೇಖಕಿ ಅಥವಾ ಲೇಖಕನೇ ಟೀಚರ್. ಕನ್ನಡ, ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಓದುವ, ಈ ಭಾಷೆಗಳಲ್ಲಿ ಬರೆಯುವ ನನಗೆ ಒದಗಿ ಬರುವ ಭಾಷೆ, ಹೊಸ ಹೊಸ ಯೋಚನೆ, ಶಬ್ದಗಳು ಇವೆಲ್ಲವೂ ನಾನು ಓದುವ ಹೊಸ ಅಥವಾ ಹಳೆಯ ಪುಸ್ತಕಗಳಿಂದಲೂ ಬರುತ್ತಿರುತ್ತವೆ. 

ಆದರೆ, ನಾವಿರುವ ಈ ಯುಗ ಈಗ ಎಲ್ಲರೂ ಬಲ್ಲಂತೆ ‘ತೆರೆಯುಗ’; ‘ಏಜ್ ಆಫ್ ದಿ ಸ್ಕ್ರೀನ್’. ಈ ಶತಮಾನದ ಹೊಸ ತಲೆಮಾರಿನ ಬಹುತೇಕರು ಒಂದಲ್ಲ ಒಂದು ಸ್ಕ್ರೀನಿನಲ್ಲೇ ಓದುವುದು, ಬರೆಯುವುದು. ನಮ್ಮ ಮಕ್ಕಳು ಇನ್ನೂ ಬರೆಯಬಲ್ಲ ‘ಅಕ್ಷರಸ್ಥ’ರಾಗಿರುವುದಕ್ಕೆ ಹತ್ತನೇ ತರಗತಿಯವರೆಗಿನ ನಮ್ಮ ಮೇಡಂಗಳಿಗೆ ಇಡೀ ಜಗತ್ತಿನ ಸಂಸ್ಕೃತಿ ಕೃತಜ್ಞವಾಗಿರಬೇಕು! ಆದರೂ ಮುದ್ರಿತ ಪುಸ್ತಕಗಳನ್ನೇ ಓದುವ, ಪೆನ್ ಹಿಡಿದು ಕೈಯಲ್ಲೇ ಬರೆಯುವ ತಲೆಮಾರು ನಿಧಾನಕ್ಕೆ ಹಿಂದಕ್ಕೆ ಸರಿಯುತ್ತಿದೆ ಎನ್ನಿಸತೊಡಗಿದೆ. ಇಷ್ಟೆಲ್ಲದರ ನಡುವೆ ಹೊಸ ಹೊಸ ಪುಸ್ತಕಗಳನ್ನು ಮನೆಗೆ ಒಯ್ಯುತ್ತಲೇ ಇರುವ ಹಿರಿಯರೂ ಕಿರಿಯರೂ   ಕಂಡಾಗ ಆನಂದವಾಗುತ್ತದೆ.

ಇದೆಲ್ಲ ಬರೆಯುವಾಗ ಅರ್ಜೆಂಟೀನಾದ ಲೇಖಕ ಬೋರ್ಹೆಸ್ ಹೇಳಿದ ಮಾತು ಕಣ್ಣಿಗೆ ಬಿತ್ತು: ‘ಸ್ವರ್ಗ ಅಂದರೆ ಒಂಥರದ ಲೈಬ್ರರಿ ಎಂದು ಸದಾ ನಾನು ಊಹಿಸಿಕೊಂಡಿದ್ದೇನೆ.’ 
ಹಾಂ! ಬೋರ್ಹೆಸ್ ಕೂಡ ಜಡ ಗಳಿಗೆಗಳಿರದ ಜೀವಂತ ಬರವಣಿಗೆ ಮಾಡಬಲ್ಲವನಾಗಿದ್ದ. ಅವನನ್ನು ಕುರಿತು ಈ ಹಿಂದೆಯೂ ಬರೆದಿದ್ದು ನೆನಪಾಗುತ್ತದೆ. ತಾರುಣ್ಯದಿಂದಾಚೆಗೆ ಕಣ್ಣಿನ ದೃಷ್ಟಿ ಮಂಕಾಗತೊಡಗಿದ ಜಾರ್ಜ್ ಲೂಯಿ ಬೋರ್ಹೆಸ್ ಐವತ್ತೈದನೆಯ ವಯಸ್ಸಿನಲ್ಲಿ ತನ್ನ ಕಣ್ಣೆರಡನ್ನೂ ಕಳೆದುಕೊಂಡ. ಆಮೇಲೂ ಎರಡು ಮೂರು ದಶಕ ಕತೆ, ಕವಿತೆ ಬರೆಯುತ್ತಲೇ ಇದ್ದು ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನೆನ್ನಿಸಿಕೊಂಡ. ಅವನ ಬದುಕಿನ ಒಂದು ದುರಂತ ವ್ಯಂಗ್ಯವೆಂದರೆ, ತಾನು ಅಷ್ಟೊಂದು ಪ್ರೀತಿಸುವ ಪುಸ್ತಕಗಳ ಜೊತೆಗೆ ಬದುಕುವ ಆಸೆಯಿಂದ ಅರ್ಜೆಂಟೀನಾದ ರಾಷ್ಟ್ರೀಯ ಗ್ರಂಥಾಲಯದ ನಿರ್ದೇಶಕನಾಗಿ ನೇಮಕಗೊಂಡ ಹೊಸತರಲ್ಲೇ ಪೂರಾ ಕಣ್ಣು ಕಳೆದುಕೊಂಡ. 

ಈ ಬಗ್ಗೆ ಮಾತಾಡುತ್ತಾ ಒಮ್ಮೆ ಬೋರ್ಹೆಸ್ ಸಂದರ್ಶಕ ಆಲಿಫ್ಯಾನೋಗೆ ಹೇಳುತ್ತಾನೆ: “ನಿನಗೊಂದು ಗುಟ್ಟು ಹೇಳಲೆ? ಇವತ್ತಿಗೂ ’ನಾನು ಕುರುಡ ಅಲ್ಲ' ಅಂತ ನನಗೆ ನಾನೇ ಹೇಳಿಕೊಳ್ತಾ ಪುಸ್ತಕದಂಗಡಿಯಿಂದ ಪುಸ್ತಕಗಳನ್ನು ಕೊಂಡುಕೊಂಡು ಬಂದು ಮನೆಯ ತುಂಬಾ ಅವನ್ನು ತುಂಬಿಸಿದ್ದೀನಿ. ಪುಸ್ತಕಗಳ ಸ್ನೇಹದ ಚುಂಬಕ ಶಕ್ತಿಯನ್ನ ಅನುಭವಿಸ್ತಾ ಇದ್ದೀನಿ. ಒಂದು ಪುಸ್ತಕ ನಮ್ಮ ಖುಷಿಯ ಸಾಧ್ಯತೆಗಳನ್ನು ತೆರೆಯುತ್ತೆ ಅಂತ ನಾನು ನಂಬಿರೋದಕ್ಕೆ ಕಾರಣ ಏನು ಅಂತ ಕೇಳಿದರೆ ಮಾತ್ರ ಅದಕ್ಕೆ ನನ್ನ ಬಳಿ ಉತ್ತರ ಇಲ್ಲ!”

ಎಲ್ಲ ಸೂಕ್ಷ್ಮ ಲೇಖಕ ಲೇಖಕಿಯರಿಗೂ ಅನಿಸುವಂತೆ ಬೋರ್ಹೆಸ್‌ಗೆ ಕೂಡ ತಾನಿರುವ ಕಾಲ ಮಹಾಕೇಡಿನ ಕಾಲ ಅನಿಸುತ್ತದೆ. ಕಾಲದ ಕೇಡು ಕುರಿತ ಅವನ ಭಯದಲ್ಲಿ ಪುಸ್ತಕಗಳು ಮಾಯವಾಗುವ ಭಯ ಕೂಡ ಸೇರಿದೆ. ‘ನಮ್ಮ ಕಾಲದ ಕೇಡು ಹಿಂದಿನ ಕಾಲಗಳ ಕೇಡಿನಂತಲ್ಲ' ಎನ್ನುವ ಬೋರ್ಹೆಸ್‌ಗೆ, ವರ್ಡ್ಸ್‌ವರ್ತ್‌ನ ‘ದಿ ಪ್ರಿಲ್ಯೂಡ್' ಖಂಡಕಾವ್ಯದಲ್ಲಿ ಬರುವ ಕನಸು ನೆನಪಾಗುತ್ತದೆ:

ಇದ್ದಕ್ಕಿದ್ದಂತೆ ಪ್ರಳಯವಾಗಿ ಕಲೆ, ವಿಜ್ಞಾನ ಎಲ್ಲವೂ ನಾಶವಾಗಿ ಬಿಡಬಹುದು ಎಂಬ ಭಯ ವರ್ಡ್ಸ್‌ವರ್ತನಿಗಿತ್ತು. ಆ ಭಯವೇ ಆ ಕವಿತೆಯಲ್ಲಿ ದುಃಸ್ವಪ್ನದ ಚಿತ್ರವಾಗಿ ಬರುತ್ತದೆ. ಈ ದುಃಸ್ವಪ್ನದಲ್ಲಿ ಕವಿ ವರ್ಡ್ಸ್‌ವರ್ತ್‌ ಸಮುದ್ರದ ಬದಿಯ ಗುಹೆಯಲ್ಲಿದ್ದಾನೆ. ಮಧ್ಯಾಹ್ನದ ಮಂಪರಿನಲ್ಲಿ ಕವಿ ತನ್ನ ಪ್ರೀತಿಯ ಪುಸ್ತಕಗಳಲ್ಲೊಂದಾದ ಸರ್ವಾಂಟಿಸ್‌ನ ‘ಡಾನ್‌ಕ್ವಿಯೋಟೆ'ಯನ್ನು ಓದುತ್ತಿರುವಾಗ ನಿದ್ರೆ ಆವರಿಸುತ್ತದೆ. ಕನಸು. ಸುತ್ತ ಕಪ್ಪು ಮರಳಿನ ರಾಶಿ. ಎಲ್ಲೂ ನೀರಿಲ್ಲ. ಅದೊಂದು ಮರುಭೂಮಿ, ದಿಗ್ಭ್ರಮೆಗೊಂಡ ವರ್ಡ್ಸ್‌ವರ್ತ್‌ ಅಲ್ಲಿಂದ ಓಡಲೆತ್ನಿಸುತ್ತಾನೆ. ಪಕ್ಕದಲ್ಲಿ ಯಾರೋ ಇದ್ದಾರೆ. ನೋಡಿದರೆ ಬೆಡೋಯಿನ್ ಬುಡಕಟ್ಟಿಗೆ ಸೇರಿದ ಅರಬ್ಬಿ. ಅವನ ಬಲಗೈಯಲ್ಲೊಂದು ಕತ್ತಿ, ಎಡ ಕಂಕುಳಲ್ಲಿ ಒಂದು ಕಲ್ಲು, ಎಡಗೈಯಲ್ಲೊಂದು ಕಪ್ಪೆಚಿಪ್ಪು. ‘ನಾನು ಕಲೆಯನ್ನು ಉಳಿಸಲು ಬಂದಿದ್ದೇನೆ’ ಎನ್ನುವ ಅರಬ್ಬಿ, ತಾನು ತಂದ ಸುಂದರವಾದ ಕಪ್ಪೆಚಿಪ್ಪನ್ನು ಕವಿಗೆ ಕೊಟ್ಟು ‘ಇದನ್ನು ಕಿವಿಯ ಬಳಿ ಇಟ್ಟುಕೋ' ಎನ್ನುತ್ತಾನೆ. 

ಮರುಕ್ಷಣವೇ ‘ದೇವರು ಸಿಟ್ಟಿಗೆದ್ದಿದ್ದಾನೆ. ಮಹಾ ಪ್ರವಾಹವೊಂದು ಮುನ್ನುಗ್ಗಿ ಬರುತ್ತಿದೆ. ಅದು ಎಲ್ಲವನ್ನೂ ನಾಶ ಮಾಡುತ್ತದೆ' ಎಂದು ಎಚ್ಚರಿಸುತ್ತಾನೆ. ಬಳಿಕ ಒಂದು ಕಲ್ಲನ್ನು ತೆಗೆದು ಕಪ್ಪೆಚಿಪ್ಪಿನ ಬದಿಗಿಡುತ್ತಾನೆ. ಅದು ಪುಸ್ತಕ ರೂಪದಲ್ಲಿರುವ ಒಂದು ಕಲ್ಲು. ವರ್ಡ್ಸ್‌ವರ್ತ್‌ ನೋಡುತ್ತಾನೆ: ಆ ಕಪ್ಪೆಚಿಪ್ಪು ಕೂಡ ಒಂದು ಪುಸ್ತಕವೇ. ಜಗತ್ತಿನ ಕಾವ್ಯವೆಲ್ಲವೂ ಅದರೊಳಗಿದೆ. ‘ಇವೆರಡೂ ಪುಸ್ತಕಗಳನ್ನು ನಾನು ಕಾಪಾಡಬೇಕು' ಎನ್ನುತ್ತಾನೆ ಅರಬ್ಬಿ. ಆದರೆ ಅವನ ಮುಖದ ತುಂಬಾ ಭಯ, ಕಳವಳ. ದೂರದಿಂದ ಹರಿದುಬಂದ ಬೆಳಕೊಂದು ಆ ಮರುಭೂಮಿಯನ್ನು ಮುತ್ತುತ್ತಿದೆ. ನೋಡಿದರೆ, ಅದು ಬೆಳಕಲ್ಲ; ಪ್ರವಾಹ. ಅರಬ್ಬಿ ಅಲ್ಲಿಂದ ಹೊರಡುತ್ತಾನೆ. ಕವಿ ಭಯದಿಂದ ಅತ್ತ ನೋಡುತ್ತಿದ್ದರೆ, ಆ ಅರಬ್ಬಿ ಡಾನ್‌ಕಿಯೋಟೆಯಾಗಿದ್ದಾನೆ. ಚಣ ಕಳೆದ ಮೇಲೆ ಅವನೂ ಇಲ್ಲ. ನೀರು ವರ್ಡ್ಸ್‌ವರ್ತನ ಕುತ್ತಿಗೆಯ ತನಕ ಬರುತ್ತಿದೆ. ಕಿರುಚುತ್ತಾ ಮೇಲೇಳುತ್ತಾನೆ... 

ಇದು ತನ್ನ ಕಾಲದಲ್ಲಿ ಕಾವ್ಯ, ಕಲೆ ಕಣ್ಮರೆಯಾಗಬಹುದೆನ್ನುವ ಕವಿಯ ಭಯ. ಈ ಭಯ ಎಲ್ಲ ಕಾಲದ ಕವಿಗಳಲ್ಲೂ ಲೇಖಕರಲ್ಲೂ ಇರುವ ಭಯ. ಆ ಬಗ್ಗೆ ಮಾತಾಡುತ್ತಾ ‘ಹೊಸ ಕಾಲದಲ್ಲಿ ಪುಸ್ತಕಗಳಿಗೆ ಸ್ಥಾನವೇ ಇಲ್ಲ; ಇನ್ನು ಪುಸ್ತಕಗಳ ಕಾಲ ಮುಗಿದಂತೆಯೇ ಎಂದು ಬಹುತೇಕರು ಹೇಳುತ್ತಾರಲ್ಲ?' ಎಂದು ಆಲಿಫ್ಯಾನೋ ಬೋರ್ಹೆಸ್‌ನನ್ನು ಕೇಳುತ್ತಾನೆ.  

'ಅದು ಮಾತ್ರ ಎಂದೆಂದಿಗೂ ಸಾಧ್ಯವಿಲ್ಲ. ನನ್ನ ಪ್ರಕಾರ ಮನುಷ್ಯನ ಅತ್ಯಂತ ಶ್ರೇಷ್ಠ ಸಂಶೋಧನೆಯೆಂದರೆ ಪುಸ್ತಕ, ಮನುಷ್ಯನ ಉಳಿದೆಲ್ಲ ಸಂಶೋಧನೆಗಳೂ ಅವನ ದೇಹದ ವಿಸ್ತರಣೆ. ಟೆಲಿಸ್ಕೋಪ್ ಹಾಗೂ ಮೈಕ್ರೋಸ್ಕೋಪ್‌ಗಳು ನಮ್ಮ ದೃಷ್ಟಿಯ ವಿಸ್ತರಣೆ; ಕತ್ತಿ ಮತ್ತು ನೇಗಿಲು ನಮ್ಮ ತೋಳುಗಳ ವಿಸ್ತರಣೆ. ಆದರೆ ಪುಸ್ತಕ ಮಾತ್ರ ನಮ್ಮ ಕಲ್ಪನಾವಿಲಾಸ ಮತ್ತು ನೆನಪಿನ ವಿಸ್ತರಣೆ. ಪುಸ್ತಕಗಳು ಮಾಯವಾದರೆ ಚರಿತ್ರೆಯೂ ಕಣ್ಮರೆಯಾಗುತ್ತದೆ. ಜೊತೆಗೆ ಮನುಷ್ಯನೂ ಕಣ್ಮರೆಯಾಗುತ್ತಾನೆ' ಎನ್ನುತ್ತಾನೆ ಬೋರ್ಹೆಸ್. ಅವನು ಅಂಧನಾದ ಎಷ್ಟೋ ವರ್ಷಗಳ ಕಾಲ ಪೋಷಿಸಿಕೊಂಡು ಬಂದ ಒಂದು ಆಸೆಯೆಂದರೆ ಪುಸ್ತಕಗಳ ಇತಿಹಾಸ ಕುರಿತ ಪುಸ್ತಕವೊಂದನ್ನು ಬರೆಯುವುದು! 

ಪುಸ್ತಕಗಳಿಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ನನ್ನಂಥವರಿಗೆ ಕಷ್ಟ; ಈ ಪುಸ್ತಕಗಳು ಫುಟ್‌ಬಾಲ್ ಆಟದ ಥರ ಒಂದು ಜಡ ಗಳಿಗೆಯೂ ಇಲ್ಲದಂತೆ ಇದ್ದರೆ ಅವು ತೀರಾ ಇಷ್ಟ! 

Share on:

Comments

13 Comments



| Subramanyaswamy Swamy

ಓದು ಅವಿರತ ಶಕ್ತಿ ಎಂಬುದು ತುಂಬಾ ಆಳವಾಗಿ ಬೇರೂರಿದೆ ಇಲ್ಲಿ.


| Suresha B

ಪರಪೆಕ್ಟಾಗದೆ ಕಾಮ್ರೇಡ್... ಪುಸ್ತಕ ಇಲ್ಲದೆ ನಾವಿಲ್ಲ... ನಾವಿಲ್ಲದೆ ಪುಸ್ತಕವೂ ಇಲ್ಲ... ಅಕ್ಷರ ಸಮುದ್ರದೊಳಗೆ ಈಸುತ್ತಾ ಪ್ರತಿಘಳಿಗೆ ಅರಳಲಿ ಹೊಸ ಬರವಣಿಗೆ ಸಿಗಲಿ ಅದೆಲ್ಲವೂ ಎಲ್ಲರ ಓದಿಗೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಫುಟ್ ಬಾಲ್ ಆಟ ಮತ್ತು ಬರವಣಿಗೆಯ ಹೋಲಿಕೆಯೇ ತುಂಬಾ ವಿನೂತನ, ವಿಶಿಷ್ಟ, ಮತ್ತು ಸಮಂಜಸ. ಈ ಮೊದಲು ಇಂತಹ ಹೋಲಿಕೆಯನ್ನು ಎಲ್ಲೂ ಕೇಳಿರಲಿಲ್ಲ ಮತ್ತು ಓದಿರಲಿಲ್ಲ. ಇದನ್ನು ಪ್ರಪ್ರಥಮವಾಗಿ ಓದಿದ್ದು ಈ ಲೇಖನದಲ್ಲೇ. ಅದ್ಭುತವಾದ ಸಮೀಕರಣವಿದು.'ಸ್ವರ್ಗ ಅಂದರೆ ಲೈಬ್ರರಿ' ಎಂಬ ಬೋರ್ಹೆಸ್ ಅವರ ಮಾತು ಎಷ್ಟೊಂದು ಅರ್ಥಪೂರ್ಣ! 'ಪುಸ್ತಕಗಳಿಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ನನ್ನಂಥವರಿಗೆ ಕಷ್ಟ; ಈ ಪುಸ್ತಕಗಳು ಫುಟ್‌ಬಾಲ್ ಆಟದ ಥರ ಒಂದು ಜಡ ಗಳಿಗೆಯೂ ಇಲ್ಲದಂತೆ ಇದ್ದರೆ ಅವು ತೀರಾ ಇಷ್ಟ!' ಎಂಬ ಹುಳಿಯಾರರ ಅರ್ಥಪೂರ್ಣ ಮಾತುಗಳು ಪುಸ್ತಕಗಳಿಗೆ, ಓದಿಗೆ, ಮತ್ತು ಬರವಣಿಗೆಗೆ ಇಡೀ ಬದುಕನ್ನೇ ಸಮರ್ಪಿಸಿಕೊಂಡವರ ನುಡಿಗಳಾಗಿವೆ. ಅವು ಓದುಗವರ್ಗದವರ ಕಿವಿಗಳಲ್ಲಿ ಸದಾ ರಿಂಗಣಿಸುವ ಅಭೂತಪೂರ್ವ ನುಡಿಗಳು!!


| ಮಂಜುನಾಥ್ ಸಿ ನೆಟ್ಕಲ್

ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಡಿಜಿಟಲ್ ಪುಸ್ತಕಗಳು ಬಂದರೂ , ನನಗೆ ಇಂದಿಗೂ ಸಹ ಪುಸ್ತಕಗಳನ್ನು ಓದುವುದರಲ್ಲಿ ಇರುವ ಖುಷಿ ಆನಂದ ಮತ್ತು ತೃಪ್ತಿ ಮೊಬೈಲ್ ಫೋನ್, ಕಿಂಡಲ್ ಅಥವಾ ಕಂಪ್ಯೂಟರ್ ತೆರೆಯ ಮೇಲೆ ಓದುವಾಗ ಸಿಗುವುದಿಲ್ಲ... ಇಂದಿಗೂ ಪುಸ್ತಕಗಳೇ ನಮ್ಮ ಅತ್ಯುತ್ತಮ ಸ್ನೇಹಿತರು. ನಿಮ್ಮ ಅನಿಸಿಕೆಗೆ ಸಹಮತವಿದೆ ಸರ್ ಧನ್ಯವಾದಗಳು


| ಡಾ. ಶಿವಲಿಂಗೇಗೌಡ ಡಿ.

ಪುಸ್ತಕಗಳಿಗೂ ಬದುಕಿಗೂ ಇರುವ ಸಂಬಂಧವನ್ನು ಚೆನ್ನಾಗಿ ವಿವರಿಸಿದ್ದೀರಿ. ಪುಸ್ತಕಗಳಿಂದ ದೂರಾಗುತ್ತಿರುವ ಪೀಳಿಗೆಗಳ ಬದುಕಿನ ಬಗೆಗೆ ಆತಂಕವನ್ನು ವ್ಯಕ್ತಪಡಿಸುತ್ತಲೇ ಬೋರ್ಹೆಸ್ ನ ಮಾತುಗಳ ಮೂಲಕ ಆಶಾವಾದವನ್ನೂ ಬಿತ್ತುತ್ತದೆ ಲೇಖನ.


| Shivaraju S ಕವಿವೇದ

"ಸತ್ಯ ಎಂಬುದು ಸಾಧ್ಯತೆಗಳ ಆಚೆಯ ಮತ್ತೊಂದು ಸಾಧ್ಯತೆ" ಅಲ್ವಾ ಸರ್! ಹೌದು ಸರ್ ಪುಸ್ತಕದ ನೇರವಾದ ಓದಿನ ಅನುಭವ ಅದೊಂದು ರೀತಿಯ: "ಸಕಲರಾಧನ ಸಾಧನಬೋಧನದನುಭವರಸ ತಾನಿಹುದಲ್ಲಿ." ಎಂಬಂತಹದ್ದು.ನಿಮ್ಮ ನಿತ್ಯ ವಿಸ್ತಾರದ ನೆಲೆಗೆ ಧನ್ಯವಾದಗಳು. ಆದರೆ, ಇಂಗ್ಲಿಷ್ ಭಾಷೆ ಅಷ್ಟು ಚೆನ್ನಾಗಿ ತಿಳಿಯದಂತಹ ನನ್ನಂತಹ(ಅದಕ್ಕೆ ಹೊಣೆಗಾರ ನಾನೇ) ಕನ್ನಡ ಸಾಹಿತ್ಯದ ವಿದ್ಯಾರ್ಥಿಗೆ, ಅದರಲ್ಲೂ 'ಕನಸು ಮತ್ತು ಸಾಹಿತ್ಯದ ನಡುವಿನ ಸೃಜನಶೀಲತೆ'ಯನ್ನು ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ ಹೊಸ ಅವಕಾಶಗಳನ್ನು, ಹೊಸ ಸಾಧ್ಯತೆಗಳನ್ನು ತೋರಿಸಿದ್ದು ಇಂಥದ್ದೇ ಒಂದು AI ಸಾಧನ. ಸಾಹಿತ್ಯ ಸೃಷ್ಟಿಯ ಮೂಲವನ್ನು ಹುಡುಕುತ್ತಾ ಹೋದಾಗ ನೀವು ಹೇಳಿದ ಅನುಭವದ "ಆದರೆ ಪುಸ್ತಕಗಳ ಜೊತೆಯಲ್ಲಿ ನಮ್ಮಂಥವರಿಗೆ ಆಗುವ ಸೃಜನಶೀಲ ಅನುಭವ ಅಲ್ಲಿರಲಾರದು. ಓದುವುದು ನಿಷ್ಕ್ರಿಯ (ಪ್ಯಾಸೀವ್) ಅನುಭವ ಎಂದು ತಿಳಿದವರು ಕೆಟ್ಟರು! ಓದುವಾಗ ನಾವು ’ಕ್ರಿಯೇಟೀವ್’ ಆಗುತ್ತೇವೆ, ಮನಸ್ಸಿನಲ್ಲೇ ಬರೆಯುತ್ತಿರುತ್ತೇವೆ; ಒಂದು ಪಾತ್ರದ ಮೂಲಕ ಮತ್ತೊಂದು ಪಾತ್ರ, ಒಂದು ಐಡಿಯಾ ತಗುಲಿ ಮತ್ತೊಂದು ಐಡಿಯಾ- ಹೀಗೆ ನಮ್ಮ ಸೃಜನಶೀಲ ಒರತೆ ಬರಿದಾಗದ ಹಾಗೆ ಓದು ನಮ್ಮನ್ನು ಪೊರೆಯುತ್ತಿರುತ್ತದೆ." ಹೌದು ನಿಜ, ಆದರೆ ನನ್ನಂಥವನಿಗೆ ಇದರ ಜತೆಗೆ ಇನ್ನೊಂದು ಹೊಸ ಸಾಧ್ಯತೆ ಪುಸ್ತಕದಿಂದ ಆಚೆಗೆ ಇಂತಹ AI ಮೂಲಕವೂ ಇದೆ ಎನಿಸುತ್ತದೆ. ಇಲ್ಲಿಯೂ ಇಂಥ ಕೊಂಡಿಗಳು ತೆಗೆದುಕೊಳ್ಳುತ್ತವೆ, ಒಂದಕ್ಕೊಂದು ಸಂಪರ್ಕಿಸುತ್ತಾ; ಒಂದನ್ನೊಂದು ಬಂಧಿಸುತ್ತಾ; ಹೊಸದೊಂದನ್ನು ತೆರೆದು ತೋರಿಸುತ್ತಾ; ಹೊಸದೊಂದರ ಸೃಜನಶೀಲ ಅನುಭವಕ್ಕೊ, ಕ್ರಿಯೆಗೊ ಕಾರಣವಾಗುತ್ತದೆ. ಕಳೆದ ವಾರ ನನ್ನ ಇಂತಹ ಒಂದು ಹುಡುಕಾಟದಲ್ಲಿ 'ಸರ್ಕಸ್' ಮಾಡಿ ತಿದ್ದಿತೀಡಿ, ಕತ್ತರಿಸಿ-ಅಂಟಿಸಿ ಆದ ಮೇಲೆ ಕೊನೆಗೆ ಸಿಕ್ಕಿದ್ದು ಹೀಗೆ ಸರ್.(ಪ್ರಾಮಾಣಿಕವಾಗಿ ಹೇಳುವುದಾದರೆ: ಬಹುಶಃ ಇಂತಹ ಒಂದು AI ಸಾಧನ ಇಲ್ಲದಿದ್ದರೆ ನನ್ನಂಥವನಿಗೆ ಕನ್ನಡ ಸಾಹಿತ್ಯದ ಆಚೆಗೆ ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಯೂಂಗ್, ಎರಿಕ್ ಫ್ರಾಂ, ಜಾರ್ಜ್ ಲೂಯಿಸ್ ಬೋರ್ಹೆಸ್, amy lowell, Susanne K Langre, Ernst Cassirer ಮುಂತಾದವರು ಖಂಡಿತ ಸಿಕ್ಕುತ್ತಿರಲಿಲ್ಲ. ಇದರಾಚೆಗೂ ಎಷ್ಟು ಜನ ಹೀಗೆ ಹುಡುಕುತ್ತಾರೆ ಎಂಬ ಪ್ರಶ್ನೆಗೆ ಉತ್ತರ: ಗೊತ್ತಿಲ್ಲ! ಈ ಹುಡುಕುವ ಸಾಧ್ಯತೆಯೊಂದನ್ನು ಕಲಿಸಿದ್ದು ಕೂಡ ಪುಸ್ತಕವೇ ಎಂಬುದು ನೂರಕ್ಕೆ ನೂರರಷ್ಟು ನಿಜ. ಈ ಭಾಗವನ್ನು ಹಾಗೆ ಸುಮ್ಮನೆ ಹಂಚಿಕೊಳ್ಳುತ್ತಿದ್ದೇನೆ. ALIFANO: Well, you state in a memorable passage that literature is a dream. BORGES: It is true. Literature is a dream, a controlled dream. Now I believe that we owe literature almost everything we are and what we have been, also what we will be. Our past is nothing but a sequence of dreams. What difference can there be between dreaming and remembering the past? Books are the great memory of all centuries. Their function, therefore, is irreplaceable. If books disappear, surely history would disappear, and surely man would disappear. ಆಲಿಫ್ಯಾನೋ: ಒಂದು ಸ್ಮರಣೀಯ ಭಾಗದಲ್ಲಿ ನೀವು ಸಾಹಿತ್ಯವು ಒಂದು ಕನಸು ಎಂದು ಹೇಳಿದ್ದೀರಿ. ಬೋರ್ಹೆಸ್: ಹೌದು, ಅದು ಸತ್ಯ. ಸಾಹಿತ್ಯವು ಒಂದು ಕನಸು; ಆದರೆ ಅದು ನಿಯಂತ್ರಿತ ಕನಸು. ನಾವು ಏನಾಗಿದ್ದೇವೆಯೋ, ಏನಾಗಿದ್ದೇವೆಯೋ ಮತ್ತು ಮುಂದೆ ಏನಾಗಲಿದ್ದೇವೆಯೋ ಅದರ ಬಹುಪಾಲನ್ನು ಸಾಹಿತ್ಯಕ್ಕೇ ಋಣಿಯಾಗಿದ್ದೇವೆ ಎಂದು ನಾನು ನಂಬುತ್ತೇನೆ. ನಮ್ಮ ಭೂತಕಾಲವೆಂದರೆ ಕನಸುಗಳ ಒಂದು ಸರಣಿಯಷ್ಟೇ. ಕನಸು ಕಾಣುವುದಕ್ಕೂ ಭೂತಕಾಲವನ್ನು ನೆನಪಿಸಿಕೊಳ್ಳುವುದಕ್ಕೂ ಏನು ವ್ಯತ್ಯಾಸವಿದೆ? ಪುಸ್ತಕಗಳು ಎಲ್ಲ ಶತಮಾನಗಳ ಮಹಾಸ್ಮೃತಿಗಳಾಗಿವೆ. ಆದ್ದರಿಂದ ಅವುಗಳ ಕಾರ್ಯಕ್ಕೆ ಪರ್ಯಾಯವಿಲ್ಲ. ಪುಸ್ತಕಗಳು ನಾಶವಾದರೆ ಇತಿಹಾಸವೂ ನಾಶವಾಗುತ್ತದೆ; ಇತಿಹಾಸ ನಾಶವಾದರೆ ಮನುಷ್ಯನೂ ನಾಶವಾಗುತ್ತಾನೆ. ಈ ಮಾತು ಕೇವಲ "ಸಾಹಿತ್ಯ = ಕನಸು" ಎಂಬ ಸರಳ ಹೋಲಿಕೆ ಅಲ್ಲ. ಇಲ್ಲಿ ಬೋರ್ಹೆಸ್ ಮೂರು ಮಹತ್ವದ ವಿಚಾರಗಳನ್ನು ಮಂಡಿಸುತ್ತಾರೆ: 1. ಸಾಹಿತ್ಯವು ಕನಸಿನಂತೆಯೇ ಒಂದು ಸೃಷ್ಟಿ: ಕನಸುಗಳು ಹೇಗೆ ಮನಸ್ಸಿನೊಳಗೆ ಹೊಸ ಜಗತ್ತನ್ನು ನಿರ್ಮಿಸುತ್ತವೆಯೋ, ಸಾಹಿತ್ಯವೂ ಹಾಗೆಯೇ ಭಾಷೆಯ ಮೂಲಕ ಹೊಸ ಲೋಕಗಳನ್ನು ನಿರ್ಮಿಸುತ್ತದೆ. 2. ಸ್ಮೃತಿಯೂ ಒಂದು ಕನಸೇ: ಬೋರ್ಹೆಸ್‌ಗೆ ಭೂತಕಾಲವು ಸ್ಥಿರವಾದ ವಾಸ್ತವವಲ್ಲ(ಹಾಗೆ ನೋಡಿದರೆ ನಮ್ಮಲ್ಲಿ ವರ್ತಮಾನ ಎಂಬುದೊಂದಿಲ್ಲ ಅದು ನಿತ್ಯಭೂತ ಎನ್ನುವ ಮಾತಿದೆ). ನಾವು ನೆನಪಿಸಿಕೊಳ್ಳುವ ಪ್ರತಿಯೊಂದು ಘಟನೆ ಮನಸ್ಸಿನ ಪುನರ್‌ಸೃಷ್ಟಿ. ಆದ್ದರಿಂದ: ನೆನಪು ಪುನರ್‌ರಚಿತ ಭೂತಕಾಲವಾದರೆ; ಕನಸು ಪುನರ್‌ರಚಿತ ಅನುಭವವಾಗಿದೆ. ಈ ಕಾರಣದಿಂದ ಬೋರ್ಹೆಸ್ ಕನಸು ಮತ್ತು ಸ್ಮೃತಿಯ ನಡುವಿನ ಗಡಿಯನ್ನು ಅಳಿಸಿಹಾಕುತ್ತಾನೆ. 3. ಪುಸ್ತಕಗಳು ಮಾನವಕುಲದ ಸಾಮೂಹಿಕ ಸ್ಮೃತಿ: ಈ ಉಲ್ಲೇಖದ ಕೇಂದ್ರಭಾವನೆ ವಾಸ್ತವವಾಗಿ "ಕನಸು" ಮಾತ್ರವಲ್ಲ; "ಸ್ಮೃತಿ" ಕೂಡ ಹೌದು. ಬೋರ್ಹೆಸ್ ಅವರ ಪ್ರಕಾರ ಪುಸ್ತಕಗಳು ಮಾನವ ನಾಗರಿಕತೆಯ ಸ್ಮೃತಿಭಂಡಾರಗಳಾಗಿವೆ. ಆದ್ದರಿಂದ ಸಾಹಿತ್ಯವು ವೈಯಕ್ತಿಕ ಕನಸನ್ನು ಸಾಮೂಹಿಕ ಸ್ಮೃತಿಯಾಗಿ ಪರಿವರ್ತಿಸುತ್ತದೆ. "ಕನಸು → ಸ್ಮೃತಿ → ಸಾಹಿತ್ಯ" ಈ ಮೂರು ಪರಿಕಲ್ಪನೆಗಳನ್ನು ಬೋರ್ಹೆಸ್ ಒಂದೇ ಚಿಂತನಾ ಸರಣಿಯಲ್ಲಿ ಜೋಡಿಸುತ್ತಾರೆ. ಹೀಗಾಗಿ ಅವರ ದೃಷ್ಟಿಯಲ್ಲಿ: "ಸಾಹಿತ್ಯವು ಕನಸಿನ ಕಲಾತ್ಮಕ ರೂಪವಾಗಿದೆ; ಪುಸ್ತಕಗಳು ಆ ಕನಸುಗಳ ಶಾಶ್ವತ ಸ್ಮೃತಿಗಳಾಗಿವೆ."


| ಗುರು ಜಗಳೂರು

ಸರ್ ಒಮ್ಮೊಮ್ಮೆ ಜಡವಾಗುವ ಈ ಬದುಕಿನಲ್ಲಿ ನಾಲ್ಕು ವರ್ಷಕ್ಕೊಮ್ಮೆ ಬರುವ ಫುಟ್ ಬಾಲ್ ಇಡೀ ಒಂದು ತಿಂಗಳು ಹೈಲೈಟ್ ಗಳನ್ನು ನೋಡುವ ಹಬ್ಬದ ಸಂಭ್ರಮ ಇರುತ್ತದೆ.ಹಾಗೆಯೇ ಈ ಗ್ರಾಂಡ್ ಸ್ಲಾಮ್(ಲಂಕೇಶರ ಮೆಚ್ಚಿನ,),ಶೆಟಲ್‌ ಬ್ಯಾಡ್ಮಿಂಟನ್.ಇತ್ತೀಚಿನ ಕ್ರಿಕೆಟ್ ಎಂಬ ಕೊಳಕು ಆಟದಿಂದ ನಾವು 25 ವರ್ಷದ ಕೆಳಗೇ ದೂರವಾಗಿದ್ದೇವೆ.ಸರ್, ಈ ಓದು ಹೇಗೆಂದರೆ ನಮ್ಮ ತಂದೆ ವಯೋಸಹಜವಾದ ಕಾರಣಗಳಿಗಾಗಿ ಆಸ್ಪತ್ರೆ ಸೇರಿದ್ದರು.ಎಂದಿನಂತೆ ಪುಸ್ತಕ ತೆಗೆದುಕೊಂಡು ಹೋದ ನಾನು ಆಸ್ಪತ್ರೆಯ ಕೆಲಸ ಮುಗಿಸಿ ಪುಸ್ತಕದಲ್ಲಿ ಮುಳುಗುತ್ತಿದ್ದೆ.ಬೇಗನೆ ಡಿಸ್ಚಾರ್ಜ್ ಆಗಲು ಅವರು ಚಡಪಡಿಸಿದ ದಿನ ನಾನು ತಣ್ಣಗೆ ಓದಿನಲ್ಲಿ ಮುಳುಗಿದ್ದು ನೋಡಿ ಅವರಿಗೆ ಕಸಿವಿಸಿ ಎನಿಸಿತು .ಅಷ್ಟಿಲ್ಲದೆ ಗಾಂದೀಜಿ ಜೈಲನ್ನೇ ಓದುವ,ಬರೆಯುವ ಜಾಗವನ್ನು ಮಾಡಿಕೊಂಡಿದ್ದನ್ನು ಓದಿದ್ದೇವೆ.


| Nataraj Huliyar Replies

Deeply touched by the way all of you have re-written my take on books. Guru Jagalur's companionaship with books really moved me. Thank you all. May great books always lead you


| Somashankara N

"I am not sure that I exist, actually. I am all the writers that I have read, all the people that I have met, all the women that I have loved; all the cities I have visited." - Jorge Luis Borges ಪುಸ್ತಕದ ನಂಟು ಬರಹಗಾರನ ಈ ಮೇಲಿನ ಹೇಳಿಕೆಯಂತೆ ತನ್ನ ಇರುವಿಕೆಯನ್ನು ಮರೆಸಬಲ್ಲದು, ತಾನೇ ಎಲ್ಲವೂ ಆಗಬಲ್ಲದು. ಈ ಎಲ್ಲವೂ ಆಗಬಲ್ಲ ಮಾಯಕ ಶಕ್ತಿ ಇರುವ ತಾಣವೇ ಬರಹ ರೂಪಿ ಸ್ವರ್ಗ. ತಮ್ಮ ಈ ಲೇಖನದ ಪ್ರಾಸಂಗಿಕ ವೈರುಧ್ಯಗಳ ಮುಖಾಮುಖಿಯಿಂದಾಗಿ, ಹೊಸ ಪ್ರಜ್ಞೆಯ ಕೋಶ ವಿಸ್ತರಿಸಿದಂತಾಗಿ; ಅಂತರಾಳ ನಿರಾಳ! ಧನ್ಯವಾದಗಳು ಸರ್..🙏


| Ramachandra Naik

ಮನುಷ್ಯನ ಅತ್ಯುತ್ತಮ ಸಂಶೋಧನೆ ಎಂದರೆ ಪುಸ್ತಕ ಎಂಬ ನಿಮ್ಮ ಮಾತು ಅದ್ಭುತ, ಇತ್ತೀಚೆಗೆ ನನ್ನ ವಯಸ್ಸಿನವರೂ ಓದುವ ಅಭ್ಯಾಸ ಬಿಡುತ್ತಿದ್ದಾರೆ, ಪುಸ್ತಕಗಳಿರಲಿ, ಪತ್ರಿಕೆಗಳನ್ನೂ ಓದುತ್ತಿಲ್ಲ, ನನ್ನ ಪ್ರಕಾರ ‘ಬಲ್ಲವರೇ ಬಲ್ಲರು ಓದುವ ಸವಿಯ’


| Vasantha

ಫುಟ್ ಬಾಲ್. ಜೊತೆ ಓದುವ ಸಮೀಕರಣಧ ಕಲ್ಪನೆ ತುಂಬಾ ಚೆನ್ನಾಗಿದೆ.


| Somashankara N

ಚಾರ್ಜ್ ಲೂಯಿಸ್ ಬೋರ್ಹೆಸ್ ಬಗ್ಗೆ ತಾವು ಬರೆದಿರುವ ಈ ಲೇಖನದ ಸ್ಪೂರ್ತಿಯಿಂದಾಗಿ ಅವರು ಬರೆದಿರುವ Funes, the memorious (Translated by ANTHONY KERRIGAN ) ಎಂಬ ಕತೆಯನ್ನು ಈಗಷ್ಟೇ ಓದಿದೆ. ಈ ಕಥೆ ಒಂದು ವ್ಯಕ್ತಿಯ ಅದ್ಭುತ ಸ್ಮರಣಾಶಕ್ತಿಯ ಕಥೆಯಷ್ಟೇ ಅಲ್ಲ. ಮರೆಯುವ ಸಾಮರ್ಥ್ಯವೂ ಮಾನವ ಚಿಂತನೆಯ ಅವಿಭಾಜ್ಯ ಅಂಗ ಎಂಬ ಗಾಢ ತಾತ್ವಿಕ ಸತ್ಯವನ್ನು ಅನಾವರಣಗೊಳಿಸುತ್ತದೆ. ಬೋರ್ಹೆಸ್‌ನ ಒಂದು ಸಾಲು: “To think is to forget differences, to generalize.” ಪ್ರತಿಯೊಂದು ವಿವರವನ್ನು ಎಂದಿಗೂ ಮರೆತೇ ಬಿಡದ ಮನಸ್ಸು ಜ್ಞಾನವನ್ನು ಕೇವಲ ಸಂಗ್ರಹಿಸಬಹುದು; ಆದರೆ ಅದನ್ನು ಪರಿಕಲ್ಪನೆ, ವರ್ಗೀಕರಣ ಮತ್ತು ಚಿಂತನೆಯ ರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೆನಪು ಎಷ್ಟು ಮುಖ್ಯವೋ, ಮರೆವು ಕೂಡ ಅಷ್ಟೇ ಮುಖ್ಯ, ಮನಸ್ಸಿಗೆ ವಿಶ್ರಾಂತಿಯೂ ಮುಖ್ಯ ಎಂಬ ಆಳವಾದ ಸಂದೇಶವನ್ನು ಈ ಕಥೆ ನೀಡುತ್ತೆ. ಫ್ಯೂನಸ್ ನ ಅದ್ಭುತ ಸ್ಮರಣ ಶಕ್ತಿ ವರವೋ, ಶಾಪವೋ ಎಂದು ಚಿಂತನೆಗೆ ಹಚ್ಚುವ ಈ ಕಥೆ ಗಣಕಯಂತ್ರದ ಈ ಯುಗದಲ್ಲಿ ಎಷ್ಟು ಪ್ರಸ್ತುತ ಎಂದೆನ್ನಿಸಿತು. ನನಗೆ ಹೊಸಬರಾದ ಈ ವಿಶಿಷ್ಟ ಬರಹಗಾರನನ್ನು ಪರಿಚಯಿಸಿದ್ದಕ್ಕೆ ತಮಗೆ ಧನ್ಯವಾದಗಳು ಸರ್..


| Chandrashekhara Talya

ಫುಟ್ ಬಾಲ್ ಆಟ ಅದೊಂದು ರೋಮಾಂಚನ, ಕಾಲುಗಳನ್ನೇ ಕಣ್ಣು ಮಾಡಿಕೊಂಡು ಸದಾ ಗಮನದೆಚ್ಚರದಲ್ಲಿ ಆಡುವ, ನೋಡುವ ಅದ್ಭುತ ಆಟ, ಏಕಾಗ್ರತೆಯ ಶಿಖರಸ್ಥಿತಿಯಲ್ಲಿನ ಮಾಂತ್ರಿಕ ಕ್ಷಣಗಳನ್ನು ನಿರಂತರವಾಗಿ ಕಾಣಿಸುವ ಕ್ರಿಯಾಶೀಲ ಆಟ. ಪುಸ್ತಕದ ಓದು ಈ ಅನುಭವಕ್ಕಿಂತ ಭಿನ್ನ ಎಂದು ನನಗಂತೂ ಅನಿಸಿಲ್ಲ...ನಿಜ. ಬೋರೆಸ್ ನ ಭಯ ನಮ್ಮೆಲ್ಲರಲ್ಲೂ ಇರಬೇಕಾದುದೇ. ಕೃಜಾ ಏನಿದ್ದರೂ ಅದರ ದೊಡ್ಡಸ್ತಿಕೆಗೆ ಮಿತಿ ಇದ್ದೇ ಇದೆ. ಪುಸ್ತಕದ ಸೃಜನಶೀಲತೆ ಯ ಗಮ್ಮತ್ತೇ ಬೇರೆ.ಲಂಕೇಶ್ ಬಹಳ ಹಿಂದೆ ಫುಟ್ ಬಾಲ್, ಟೆನ್ನಿಸ್ ಬಗ್ಗೆ ಪತ್ರಿಕೆಯಲ್ಲಿ ಬರೆದ ಕಲಾತ್ಮಕ ಲೇಖನಗಳನ್ನು ನಿಮ್ಮ ಬರಹ ನೆನಪಿಸಿಕೊಳ್ಳುವಂತೆ ಮಾಡಿತು, ಧನ್ಯವಾದಗಳು




Add Comment


Mundana Kathana Nataka

YouTube






Recent Posts

Latest Blogs