ಪಡೆವ, ಕೊಡುವ ಮುಕ್ತತೆ

ಶತಮಾನಗಳ ಕೆಳಗೆ ಸರ್ವಜ್ಞ ಹೇಳಿದ ವಿನಯದ ಮಾತು ಎಲ್ಲರಿಗೂ ಆಗಾಗ ಅನುಭವಕ್ಕೆ ಬರುತ್ತಿರುತ್ತದೆ: ‘ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ.’ ವಿನಯಶೀಲ, ಮುಕ್ತ ಮನಸ್ಸುಗಳಲ್ಲಿ ನಡೆಯುವ ಈ ನಿರಂತರ ಪ್ರಕ್ರಿಯೆ ಸಂಸ್ಕೃತಿಗಳಲ್ಲೂ ಆಗುತ್ತಿರುತ್ತದೆ; ಮುಕ್ತವಾಗಿರುವ ಸಂಸ್ಕೃತಿಗಳು ‘ಸರ್ವರೊಳಗೊಂದೊಂದು’ ಎಳೆಯನ್ನು ಗಳಿಸುತ್ತಿರುತ್ತವೆ. 

ದೇಶಗಳ ಆಳುವ ವರ್ಗಗಳು, ಸಂಕುಚಿತ ರಾಜಕಾರಣಿಗಳು, ಆಕ್ರಮಣಕಾರಿಗಳು ಏನಾದರೂ ಹೇಳುತ್ತಿರಲಿ, ಎಲ್ಲ ಸಂಸ್ಕೃತಿಗಳಲ್ಲೂ ಕಲಾವಿದರು, ಸೂಕ್ಷ್ಮಜೀವಿಗಳು ಇತರ ಸಂಸ್ಕೃತಿಗಳಿಂದ ಪ್ರೇರಣೆಗಳನ್ನು ಪಡೆಯುತ್ತಲೇ ಇರುತ್ತಾರೆ. ಯುರೋಪಿನ ಕಲಾಪ್ರಕಾರಗಳನ್ನು ದಕ್ಷವಾಗಿ ಬಳಸುತ್ತಿದ್ದ ಕೆಲವು ದೊಡ್ಡ ಕಲಾವಿದರು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಆಫ್ರಿಕಾದ ಬುಡಕಟ್ಟುಗಳ ಜನ ರೂಪಿಸುತ್ತಿದ್ದ ಮುಖವಾಡಗಳು ಹಾಗೂ ಶಿಲ್ಪಗಳ ಸಾಂಕೇತಿಕ ಅರ್ಥಗಳನ್ನು ನೋಡಿ ಚಕಿತರಾದರು; ಅವನ್ನು ಅಭ್ಯಾಸ ಮಾಡಿ ‘ಕ್ಯೂಬಿಸಂ’ ಎಂಬ ಕಲಾಮಾದರಿಯನ್ನು ಬೆಳೆಸಿದರು. ಯುರೋಪಿನ ವಸಾಹತುಕಾರ ಥಿಯರಿಸ್ಟರು ಆಫ್ರಿಕಾವನ್ನು ‘ಅನಾಗರಿಕ’, ‘ಹಿಂದುಳಿದ’ ಖಂಡ ಎಂದು ಬಣ್ಣಿಸಿದ್ದನ್ನು ಅವರು ತಮ್ಮ ತಲೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ. 

‘ಆಫ್ರಿಕನ್ ನಾಡುಗಳನ್ನು ನಾಗರೀಕೀಕರಣಗೊಳಿಸುತ್ತೇವೆ’ ಎಂಬ ಪಿಳ್ಳೆ ನೆವದಲ್ಲಿ ಇಡೀ ಖಂಡವನ್ನು ಆಕ್ರಮಿಸಿಕೊಂಡ ಬಿಳಿಯರ ಕಣ್ಣು ಆಫ್ರಿಕಾದ ವಜ್ರಗಳ ಮೇಲೆ, ದಂತಗಳ ಮೇಲೆ ನೆಟ್ಟಿತ್ತು. ಬಿಟ್ಟಿ ದುಡಿಯಲು ಆಫ್ರಿಕಾದ ಗುಲಾಮರೂ ಬಿಳಿಯರಿಗೆ ಬೇಕಾಗಿದ್ದರು. ಬರಬರುತ್ತಾ ಯುರೋಪಿನಲ್ಲಿ ಕೆಲಸ ಸಿಕ್ಕದೆ ಆಫ್ರಿಕಾಕ್ಕೆ ಹೋದ ವಸಾಹತು ಅಧಿಕಾರಿಗಳು, ಸೇನೆಯವರು ಅಲ್ಲಿ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ವಾಪಸ್ ಬರುತ್ತಿದ್ದರು. ಅವರಲ್ಲಿ ಕೆಲವರು ಆಫ್ರಿಕಾದ ಕಲಾಕೃತಿಗಳನ್ನೂ ಹಡಗಿನಲ್ಲಿ ಹೇರಿಕೊಂಡು ಬರುತ್ತಿದ್ದರು. ಕೆಲವು ಫ್ರೆಂಚ್ ಆಡಳಿತಗಾರರು ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್ಸಿಗೂ ಹೊತ್ತೊಯ್ದಿದ್ದರು. 

ಯುರೋಪಿನ ಸೂಕ್ಷ್ಮ ಕಲಾವಿದರು ತಮ್ಮ ದೇಶದ ಲಾಭಕೋರ ವ್ಯಾಪಾರಿಗಳಂತೆ, ಆಕ್ರಮಣಕಾರಿ ವಸಾಹತುಕಾರರಂತೆ ಆಫ್ರಿಕಾದತ್ತ ನೋಡದೆ, ಅಲ್ಲಿನ ಆದಿಮ ಕಲೆಯ ದಿವ್ಯ ಸ್ಫೂರ್ತಿಗಾಗಿ ಆಫ್ರಿಕಾದತ್ತ ತಿರುಗಿದರು. ಸ್ಪೇನಿನ ಮಹಾನ್ ಕಲಾವಿದ ಪಾಬ್ಲೋ ಪಿಕಾಸೋಗೆ ಒಂದು ಘಟ್ಟದಲ್ಲಿ ತಾನು ಬಳಸುತ್ತಿದ್ದ ಪಶ್ಚಿಮದ ವಾಸ್ತವವಾದಿ ಕಲೆ ಯಾಕೋ ಮಾನವ ಸತ್ಯಗಳನ್ನು, ಮನುಷ್ಯರ ಒಳಮುಖಗಳನ್ನು ಹಿಡಿದಿಡಲು ಸಾಲದು ಎನ್ನಿಸತೊಡಗಿದಂತಿದೆ. ಹೀಗೇ ಒಂದು ದಿನ ಪಿಕಾಸೋ ಪ್ಯಾರಿಸ್ಸಿನ ಮ್ಯೂಸಿಯಂಗೆ ಭೇಟಿ ಕೊಟ್ಟ ಗಳಿಗೆ ಅವನ ಕಲೆಗೆ ಹೊಸ ತಿರುವನ್ನೇ ಕೊಟ್ಟಿತು. ಯಾರೋ ಸದಭಿರುಚಿಯ ಫ್ರೆಂಚ್ ಅಧಿಕಾರಿಯೊಬ್ಬ ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ತಂದು ಪ್ಯಾರಿಸ್ ಮ್ಯೂಸಿಯಂನಲ್ಲಿ ತಂದಿಟ್ಟಿದ್ದ. ಪಿಕಾಸೋ ಈ ಆಫ್ರಿಕಾದ ಮುಖವಾಡಗಳನ್ನು ನೋಡುತ್ತಾ, ಹೊಸ ಕಲೆಯ ಸಾಧ್ಯತೆಯನ್ನು ಅರಿಯತೊಡಗಿದ.  

ಪಿಕಾಸೋ ಹಾಗೂ ಅವನ ವಾರಗೆಯ ಕಲಾವಿದರು ಪಶ್ಚಿಮ ಆಫ್ರಿಕಾ ಹಾಗೂ ಸೆಂಟ್ರಲ್ ಆಫ್ರಿಕಾದ ಮುಖವಾಡಗಳು ಹಾಗೂ ಶಿಲ್ಪಗಳನ್ನು ಆಳವಾಗಿ ಸ್ಟಡಿ ಮಾಡತೊಡಗಿದರು. ಪಿಕಾಸೋನಂಥ ಮಹಾಪ್ರತಿಭೆಯ ನೋಟ, ಸಂವೇದನೆ ಹಾಗೂ ಕೈಗಳಲ್ಲಿ ಪಶ್ಚಿಮದಲ್ಲಿ ‘ಕ್ಯೂಬಿಸಂ’ ಎಂಬ ಕಲಾ ಚಳುವಳಿಯೇ ಶುರುವಾಯಿತು. ವಸ್ತುಗಳನ್ನು ಬೇರೆ ಬೇರೆ ಕೋನಗಳಿಂದ ಮಂಡಿಸುವ ಕ್ಯೂಬಿಸಂ ಕಲೆ ಹುಟ್ಟಿದ್ದು ಆಫ್ರಿಕನ್ ಕಲೆಯ ಪ್ರೇರಣೆಯಿಂದ. ಆಫ್ರಿಕಾದ ನಾಗರಿಕತೆಯ ಬಗ್ಗೆ ಬಿಳಿಯರ ಪೂರ್ವಗ್ರಹಗಳಿಂದ ಬಿಡಿಸಿಕೊಂಡು, ಕಲಾವಿದರು ಮುಕ್ತವಾಗಿ ಆಫ್ರಿಕನ್ ಸಂಸ್ಕೃತಿಯನ್ನು ನೋಡಿದ್ದರಿಂದ ಪಶ್ಚಿಮದ ಕಲೆಯ ದಿಕ್ಕೇ ಬದಲಾಯಿತು. ಆಫ್ರಿಕಾದ ಕಾಂಗೋ ನದಿಯ ದಂಡೆಯ ಶಿಲ್ಪ ಕಲೆಯಿಂದ ಯುರೋಪಿಯನ್ ಶಿಲ್ಪಕಲೆ ಮರುಜೀವ ಪಡೆಯತೊಡಗಿತು.

ಚರಿತ್ರೆಯ ಈ ಘಟನೆಗಳು ಸೂಚಿಸುತ್ತಿರುವ ಸತ್ಯ ಇದು: ಕಲಾವಿದರು, ಸೂಕ್ಷ್ಮಜೀವಿಗಳು, ಲೇಖಕರು, ಪತ್ರಕರ್ತರು, ಒಟ್ಟಾರೆಯಾಗಿ ಆರೋಗ್ಯಕರ ಮನಸ್ಸುಳ್ಳವರು ದೇಶದೇಶಗಳ ನಡುವಣ ಸಂಬಂಧ ಕುರಿತಂತೆ ಅಧಿಕಾರಸ್ಥರ ಕಾಲಕಾಲದ ನಿಲುವುಗಳನ್ನು ಮೀರಿ, ವಿಭಿನ್ನವಾಗಿ ನೋಡುತ್ತಿರಬೇಕಾಗುತ್ತದೆ. ಆಗ್ರಾದ ಮಹಾನ್ ಕಲಾಸ್ಮಾರಕ ತಾಜ್‌ಮಹಲ್ ಕಳೆಗುಂದಿ, ಒಮ್ಮೊಮ್ಮೆ ಹಳದಿ ಬಣ್ಣಕ್ಕೆ ತಿರುಗುವ ಸುದ್ದಿಯನ್ನು ನೀವು ಕೇಳಿರಬಹುದು. ತಾಜ್ ಮಹಲಿನ ಅಮೃತಶಿಲೆ ಹಳದಿ ಬಣ್ಣಕ್ಕೆ ತಿರುಗಿದಾಗಲೆಲ್ಲ ಅದಕ್ಕೊಂದು ಚಿಕಿತ್ಸೆ ಕೊಡುತ್ತಾರೆ. ಆ ಚಿಕಿತ್ಸೆಯ ಹೆಸರು ಮುಲ್ತಾನಿ ಮಿಟ್ಟಿ ಚಿಕಿತ್ಸೆ. 
೧೯೯೪, ೨೦೦೧, ೨೦೦೮ರಲ್ಲಿ ತಾಜ್‌ಮಹಲ್‌ಗೆ ಈ ಮುಲ್ತಾನಿ ಮಣ್ಣಿನ ಚಿಕಿತ್ಸೆ ಕೊಡಿಸಲಾಗಿತ್ತು. ೨೦೨೨ರ ಸುಮಾರಿನಲ್ಲಿ ಈ ಚಿಕಿತ್ಸೆ ನಡೆಯಿತು. ಮುಲ್ತಾನಿ ಮಣ್ಣಿನ ಚಿಕಿತ್ಸೆ ಪಡೆಯಲು ತಾಜ್‌ಮಹಲ್ ಆಗಾಗ ಸಿದ್ಧವಾಗುತ್ತಿರುತ್ತದೆ. 

ಮುಲ್ತಾನಿ ಮಣ್ಣಿನ ಚಿಕಿತ್ಸೆಯ ವಿವರಗಳು ೧೬ನೆಯ ಶತಮಾನದ Ain-i-Akbary ಎಂಬ ಮೊಗಲ್ ಜರ್ನಲ್‌ನಲ್ಲಿದ್ದವು ಎಂದು ‘ಸಂಡೇ ಟೆಲಿಗ್ರಾಫ್’ ವರದಿ ಸೂಚಿಸುತ್ತದೆ. ಮುಲ್ತಾನಿ ಪಾಕಿಸ್ತಾನದ ಚಿನಾಬ್ ನದಿ ದಂಡೆಯಲ್ಲಿರುವ ನಗರ. ಸೂಫಿ ಸಂತರ ನಗರ ಎಂದು ಕೂಡ ಈ ನಗರ ಖ್ಯಾತವಾಗಿದೆ. ಮುಲ್ತಾನಿಯಲ್ಲಿ ದೊರಕುವ ಮಣ್ಣಿನಲ್ಲಿ ಸುಣ್ಣದ ಅಂಶ ಇರುತ್ತದೆ. ಮುಖದ ಸೌಂದರ‍್ಯವನ್ನು ಕಾಪಾಡಲು ಮುಲ್ತಾನಿಯ ಮಹಿಳೆಯರು ಮನೆಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರುಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಈ ಮಣ್ಣಿಗೆ ಕೊಳೆ ತೊಳೆಯುವ ಗುಣವಿದೆ. ತಾಜ್‌ಮಹಲ್ ಎಲ್ಲೆಲ್ಲಿ ಹಳದಿ ಬಣ್ಣಕ್ಕೆ ತಿರುಗಿದೆಯೋ ಅಲ್ಲೆಲ್ಲ ಎರಡು ಮಿಲಿಮೀಟರ್ ದಪ್ಪಕ್ಕೆ ಮುಲ್ತಾನಿ ಮಣ್ಣನ್ನು ಮೆತ್ತಲಾಗುತ್ತದೆ. ಇದು ತಾಜಮಹಲಿಗೊಂದು ಫೇಸ್ ಪ್ಯಾಕ್! ಹೀಗೆ ಈ ತಾಜ್ ಮಹಲ್ ಚಿಕಿತ್ಸೆ ನಡೆಯುತ್ತದೆ. 

ಈ ಚಿಕಿತ್ಸೆ ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್ ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದು ನಾಲ್ಕು ಶತಮಾನಗಳ ನಂತರ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮಣ್ಣಿನಿಂದ!  ೨೦೨೨ರ ಸುಮಾರಿನಲ್ಲಿ ತಾಜ್ ಮಹಲಿಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತಿದ್ದಾಗ ಪಾರಂಪಾರಿಕ ಕಟ್ಟಡಗಳ ಸಂರಕ್ಷಣೆ ಮಾಡುವ ರೋಮ್ ಸಂಸ್ಥೆಯೊಂದರ ವಿಜ್ಞಾನಿಗಳು ಆಗ್ರಾಕ್ಕೆ ಬಂದರು; ಈ ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆಂದು ನೋಡಿದರು. ಇಟಲಿಯಲ್ಲಿ ಕಪ್ಪಾಗುತ್ತಿರುವ ಅಮೃತಶಿಲೆಯ ಪ್ರತಿಮೆಗಳಿಗೆ ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಕೊಡುವ ಕಲೆಯನ್ನು ಭಾರತದಲ್ಲಿ ಕಲಿಯತೊಡಗಿದರು. ನಾಲ್ಕು ವರ್ಷಗಳ ಕೆಳಗೆ ತಾಜಮಹಲಿನ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಆಗ್ರಾದ ಹಲ ಬಗೆಯ ಮಾಲಿನ್ಯಗಳಿಂದ ತಾಜಮಹಲನ್ನು ರಕ್ಷಿಸಿದ್ದನ್ನು ಕಂಡ ತಾಜಮಹಲಿನ ಉಸ್ತುವಾರಿಗಳು ನೆಮ್ಮದಿಗೊಂಡರು. 

ಸಂಸ್ಕೃತಿಗಳ ನಡುವಣ ಸ್ವೀಕಾರಗಳ ಬಗ್ಗೆ ನಾವು ನಾಡುಗಳ ಗಡಿಗಳ ಸಂಕುಚಿತ ಗೆರೆಗಳನ್ನು ದಾಟಿ ಯೋಚಿಸಬೇಕಾಗುತ್ತದೆ. ಜಗತ್ತಿನ ವಿವಿಧ ದಿಕ್ಕುಗಳಿಂದ ಸಂಗೀತ ಕಲೆ, ಆಟ, ಊಟ ಎಲ್ಲವನ್ನೂ ಪಡೆದು ಆನಂದಿಸುವ ನಾವು ದೇಶದೇಶಗಳ ಮನುಷ್ಯ ಮನುಷ್ಯರ ನಡುವೆ ಕೃತಕ ಗೋಡೆಗಳನ್ನು ನಿರ್ಮಿಸಲು ಹೊರಡುತ್ತೇವೆ; ಒಂದು ಸಂಸ್ಕೃತಿ ಮತ್ತೊಂದರಿಂದ ಪಡೆದು ಸಮೃದ್ಧವಾಗುವ ಸಾಧ್ಯತೆಯನ್ನು ಕೈಬಿಟ್ಟು ಪೂರ್ವಗ್ರಹಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಪಶ್ಚಿಮದ ಸಂಗೀತ ಏಕತಾನತೆಯಿಂದ ದಣಿದಿದ್ದಾಗ ಅದು ಆಫ್ರಿಕಾದ ಬುಡಕಟ್ಟು ಸಂಗೀತದಿಂದ ಹೊಸ ಜೀವ ಪಡೆಯಿತು. ಇವತ್ತು ನಾವು ಕೇಳುವ ಜಾಸ್ ಸಂಗೀತ ಆಫ್ರಿಕನ್ ಮೂಲದಿಂದ ಬಂದದ್ದು. 

ನಮ್ಮ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನರ ಸಿನಿಮಾ ಸಂಗೀತ ಒಮ್ಮೆ ಪುನರಾವರ್ತನೆಯ ಜಾಡಿಗೆ ಬಿದ್ದಾಗ ಅವರು ಭಾರತದ ವಿವಿಧ ಭಾಗಗಳ ಗುಡ್ಡಗಾಡುಗಳ ಸಂಗೀತದ ಮಟ್ಟುಗಳನ್ನು ಹುಡುಕಿಕೊಂಡು ಹೋದರು; ಅವನ್ನು ಬಳಸಿ ಜನಪ್ರಿಯ ಸಂಗೀತದ ಹೊಸ ಲಯಗಳನ್ನು ರೂಪಿಸಿದರು; ಅದರ ಜೊತೆಗೆ ಪಶ್ಚಿಮದ ಸಂಗೀತದಿಂದಲೂ ರೆಹಮಾನ್ ಅನೇಕ ಅಂಶಗಳನ್ನು ಬೆಸೆಯುತ್ತಾ ಬಂದರು. ನಮ್ಮ ಹೆಮ್ಮೆಯ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಸಂಗೀತಕ್ಕೆ ಹೊಸ ಜೀವ ತುಂಬಲು ಕನ್ನಡನಾಡಿನ ಮೂಲೆ ಮೂಲೆಗಳ ದೇಶಿ ಮಟ್ಟುಗಳನ್ನು ಹುಡುಕಿಕೊಂಡು ಹೋದರು. ಇದರಿಂದ ದೇಶಿ ಸಂಗೀತವೂ ಮರುಜೀವ ಪಡೆಯಿತು; ಆ ದೇಶಿ ಮಟ್ಟುಗಳಿಂದ ಹಂಸಲೇಖರು ಸೃಷ್ಟಿಸುವ ಸಂಗೀತಕ್ಕೂ ಹೊಸ ಜೀವ ಬಂತು. 

ದೇಶಿಯರಲಿ, ವಿದೇಶಿಯಿರಲಿ, ನಮ್ಮ ಸಂಸ್ಕೃತಿಯ ಆರೋಗ್ಯಕ್ಕೆ ಬೇಕಾದದ್ದೇನು ಎಂಬ ಬಗ್ಗೆ ನಾವು ತೆರೆದ ಮನಸ್ಸಿನಿಂದ ನೋಡುತ್ತಿರಬೇಕು ಎಂದು ಈ ಉದಾಹರಣೆಗಳು ಸೂಚಿಸುತ್ತವೆ. ತಾಜ್‌ಮಹಲ್ ಕಳೆಗುಂದಿದಾಗ ಅದು ಪಾಕಿಸ್ತಾನದ ಸೂಫಿ ಸಂತರ ನಗರ ಮುಲ್ತಾನಿಯ ಮಣ್ಣಿನಿಂದ ಹೊಸ ಖಳೆ ಪಡೆಯುತ್ತದೆ ಎಂಬುದು ಹಲವು ಆರೋಗ್ಯಕರ ಅರ್ಥಗಳನ್ನು  ಹೊರಡಿಸಬಲ್ಲದು.   
ಮುಕ್ತ ಸಂಸ್ಕೃತಿಗಳಂತೆ ಹುಲುಮಾನವರು ಕೂಡ ಮುಕ್ತ ಮನಸ್ಸಿನಿಂದ ಪಡೆಯುವ, ಬೆಳೆಯುವ, ಉಳಿಯುವ ಕಲೆಯನ್ನು ನಿತ್ಯ ನವೀಕರಿಸಿಕೊಂಡರೆ ಎಷ್ಟು ಚಂದ! 

ಕೊನೆ ಟಿಪ್ಪಣಿ: ಕೊಡುವ, ಪಡೆವ ಗಾಳಿ ಬೆಳಕು!

ಕಳೆದ ವಾರ ಈ ಅಂಕಣದಲ್ಲಿ ಹಾಗೂ ವಾರ್ತಾಭಾರತಿಯಲ್ಲಿ ‘ಡಿಜಿಟಲ್ ಯುಗದಲ್ಲಿ ಪ್ರೂಫ್ ರೀಡಿಂಗ್’ ಎಂಬ ಬರಹದ ಒಂದು ಪುಟ್ಟ ಇಂಪ್ಯಾಕ್ಟ್ ಬಗ್ಗೆ ಇಲ್ಲಿ ಹೇಳಬೇಕು: 

ಕನ್ನಡಕ್ಕೊಂದು ಸ್ಪೆಲ್ ಚೆಕ್ ಬೇಕು ಎಂಬ ಈ ಅಂಕಣದ ತುಡಿತ ಹಲವು ಓದುಗ ಓದುಗಿಯರಲ್ಲಿ ಸ್ಪಂದನ ಹುಟ್ಟಿಸಿದ್ದನ್ನು ಪತ್ರಗಳು, ಟೆಲಿಫೋನ್ ಕರೆಗಳು ಹೇಳುತ್ತವೆ. ಆ ನಿಟ್ಟಿನ ಒಂದು ಮಹತ್ವದ ಹೆಜ್ಜೆ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರೂ ಆಗಿರುವ ಗೆಳೆಯ-ಲೇಖಕ ರವಿಕುಮಾರ್‍ ನೀಹಾ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜೊತೆ ಈ ಕುರಿತು ಚರ್ಚಿಸಿದರು. ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರೂ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿದ್ದಾರೆ. ಗೆಳೆಯರಾದ ಇಸ್ಮಾಯಿಲ್- ರವಿ ನೀಹಾ- ಬಿಳಿಮಲೆ ಎಲ್ಲರೂ ಸೇರಿ ಕನ್ನಡ ಸ್ಪೆಲ್ ಚೆಕ್ ರೂಪಿಸಿಕೊಟ್ಟರೆ ಕನ್ನಡ ಸಂಶೋಧಕ, ಸಂಶೋಧಕಿಯರ ನಿತ್ಯದ ಅಳಲು ಅಷ್ಟಿಷ್ಟಾದರೂ ಕಡಿಮೆಯಾಗಬಲ್ಲದು. 

ಸುತ್ತ ಮುತ್ತಿರುವ ಸಿನಿಕತೆಯ ನಡುವೆ ಹೀಗೆ ಪಾಸಿಟಿವ್ ಆಗಿ ಯೋಚಿಸುವ ಮನಸ್ಸುಗಳಿಗೆ ಕೃತಜ್ಞತೆಗಳು. 
 

Share on:

Comments

7 Comments



| N R Vishukumar

ತಾಜ್ ಮಹಲ್ ಗೆ ಫೇಸ್ ಪ್ಯಾಕ್ !! ಗ್ರಹಿಕೆ ಚೆನ್ನಾಗಿದೆ ..


| Suresha Beesu

ಕಾಮ್ರೇಡ್ ನಟರಾಜ್ ಅವರೇ, ನುಡಿ ೬.೦ ತಂತ್ರಾಂಶದಲ್ಲಿ ಕನ್ನಡ ಸ್ಪೆಲ್ ಚೆಕ್ ಇದೆ. ಒಮ್ಮೆ ಬಳಸಿ ನೋಡಿ. ಅಥವಾ ಕನ್ನಡ ಗಣಕ ಪರಿಷತ್ತಿನ ಯಾರನ್ನಾದರೂ ಸಂಪರ್ಕಿಸಿ.


| sanganagouda

ಈ ಲೇಖನದಿಂದ, ತಾಜಮಹಲ್, ಯುರೋಪ್, ಮುಖ್ಯವಾಗಿ ಕನ್ನಡಕ್ಕೊಂದು ಕಳೆ ಬಂತು ಸರ್.... ಮುಲ್ತಾನಿ ಮಣ್ಣು ವಿಶೇಷ ಮಾಹಿತಿ


| ಶಿವಲಿಂಗಮೂರ್ತಿ

ಮುಲ್ತಾನಿ ಮಟ್ಟಿ ನಿಜಕ್ಕೂ ಒಂದು ರೂಪಕದ ಶಬ್ದ. ಸಂತರು ಸೂಫಿಗಳು ಅವಧೂತರು ಮುಂತಾದ ಬಹುತೇಕ ಸಿದ್ಧರೆಲ್ಲ ನೆಲೆಗೊಂಡ ಸ್ಥಳ ಬೆಟ್ಟ ಗುಡ್ಡಗಳೇ ಆಗಿವೆ. ಸಿದ್ದರಬೆಟ್ಟ ಬಾಬಾಬುಡನ್ ಗಿರಿ ಬೆಟ್ಟ ಇವುಗಳನ್ನು ಉದಾರಣೆಯಾಗಿ ಗಮನಿಸಬಹುದು. ಇಲ್ಲಿಯ ಗಿಡ ಮರ ಮಣ್ಣುಗಳಲ್ಲೆಲ್ಲ ಔಷಧದ ಗುಣ ತುಂಬಿ ತುಳುಕುತ್ತದೆ. ಭಾರತದ ಉದ್ದಗಲಕ್ಕೂ ಚಾಚಿಕೊಂಡಿದ್ದ ಈ ಸಿದ್ದ ಪರಂಪರೆಯು ಅವಜ್ಞೆಗೊಳಗಾದದ್ದು ನಿಜಕ್ಕೂ ಶೋಚನೀಯ. ಈ ಸಿದ್ದರು ಮಾನವನ ಮನಸ್ಸಿಗೂ ದೇಹಕ್ಕೂ ನೀಡುತ್ತಿದ್ದ ಚಿಕಿತ್ಸೆ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಕರ್ನಾಟಕದ ತತ್ವಪದ ಸಾಹಿತ್ಯವು 50 ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ಅವುಗಳನ್ನು ಒಮ್ಮೆಯಾದರೂ ತಿರುವಿ ಹಾಕಬೇಕು. ತತ್ವಪದ ಸಾಹಿತ್ಯಕ್ಕೆ ಪಠ್ಯಗಳಲ್ಲಿ ನಿಜದ ನೆಲೆಯೂ ಸಿಗಬೇಕು.


| Aiyasha

ಸಂಸ್ಕೃತಿಯನ್ನು ಗ್ರಹಿಸಬೇಕಾದ ಲೇಖನ ಅತಿ ಮಹತ್ತರ ವಿಚಾರವನ್ನು ಓದುಗರೊಂದಿಗೆ ಹಂಚಿಕೊಂಡಿದೆ ಧನ್ಯವಾದಗಳು ಸರ್


| Mamatha

ಬಹಳ ಮಹತ್ವದ ಮಾಹಿತಿ. ವೈವಿಧ್ಯಮಯ ವಿಷಯಗಳನ್ನು ಒಟ್ಟು ಮಾಡಿ ನೇಯ್ಗೆ ನೇಯುವ ಮಾದರಿಯೇ ಚಂದ


| Kavita

Once upon a time I used to apply Multani Mitti to my face. Your article made me remember the fresh fragrance of it




Add Comment


Mundana Kathana Nataka

YouTube






Recent Posts

Latest Blogs