ವಿಶ್ವ ಕಾವ್ಯ ದಿನದ ಸುತ್ತಮುತ್ತ

ಇದು ಒಮ್ಮೆ ಮೈಸೂರಿಗೆ ಹೋಗುವ ದಾರಿಯಲ್ಲಿ ಕಂಬಾರರು ಹೇಳಿದ ಪ್ರಸಂಗ: 

ಸಭೆಯೊಂದರಲ್ಲಿ ಮಾತಾಡುತ್ತಿದ್ದ ಶಂಬಾ ಜೋಷಿ ಸಮಾಜ ಹೇಗೆ ಪದಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸುತ್ತಿದ್ದರು.

ಮಧ್ಯ ಪ್ರವೇಶಿಸಿದ ಬೇಂದ್ರೆ ಹೇಳಿದರು: ‘ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುವುದಿಲ್ಲ; ಕವಿ ಸೃಷ್ಟಿಸುತ್ತಾನೆ; ಸಮಾಜ ಅದಕ್ಕೆ ಠಸ್ಸೆ ಒತ್ತುತ್ತದೆ’

ಶಂಬಾ: ಇಲ್ಲ ಇಲ್ಲ! ಸಮಾಜ, ಸಮುದಾಯ ಶಬ್ದಗಳನ್ನು ಸೃಷ್ಟಿಸುತ್ತದೆ. 

ಬೇಂದ್ರೆ: ಇಲ್ಲ ಇಲ್ಲ. ಸಮುದಾಯದಲ್ಲಿ ‘ಪ್ರಜೆ’ ಅನ್ನೋ ಶಬ್ದ ಒಂದು ಕಡೆ ಬಿದ್ದಿರುತ್ತೆ; ‘ಪ್ರಭುತ್ವ’ ಅನ್ನೋದು ಒಂದು ಕಡೆ ಬಿದ್ದಿರುತ್ತೆ. ಕವಿ ಅವೆರಡನ್ನೂ ಸೇರಿಸಿ ‘ಪ್ರಜಾಪ್ರಭುತ್ವ’ ಅನ್ನೋ ಪದಾನ ಸೃಷ್ಟಿಸುತ್ತಾನೆ…’

ಸಂಸ್ಕೃತಿ ಅಧ್ಯಯನಕಾರ ಶಂಬಾ- ಕವಿ ಬೇಂದ್ರೆ ನಡುವಣ ಈ ಜಟಾಪಟಿಯನ್ನು ಹೇಳುತ್ತಾ ಕಂಬಾರರು ಮತ್ಯಾವುದೋ ಕಾಕರಾಜಪ್ರೇಮಿ ಕವಿಗಳ ಕುರಿತು ನಗೆಯಾಡುತ್ತಾ ಮತ್ತೆಲ್ಲಿಗೋ ಹೊರಟರು…
ಕಂಬಾರರು ಹೇಳಿದ ಪ್ರಸಂಗದಲ್ಲಿದ್ದ ಶಂಬಾ-ಬೇಂದ್ರೆ ತಾತ್ವಿಕ ಜಗಳ ಮಾತ್ರ ನನ್ನೊಳಗೇ ಉಳಿಯಿತು. ನಿನ್ನೆ ಮಾರ್ಚ್ ೨೧ರಂದು ’ವಿಶ್ವ ಕಾವ್ಯ ದಿನ’ದ ಪೋಸ್ಟರುಗಳನ್ನು ಕವಿ, ಕವಯಿತ್ರಿಯರು ಅಲ್ಲಲ್ಲಿ ಪ್ರಕಟಿಸುತ್ತಿದ್ದಾಗ ಅದು ಮತ್ತೊಮ್ಮೆ ನೆನಪಾಯಿತು. 

ಈ ಪ್ರಸಂಗ ಹೇಳುತ್ತಿದ್ದ ಕಂಬಾರರಿಗೆ ಬೇಂದ್ರೆಯವರ ಜೊತೆಗೆ ಒಂದು ಬಗೆಯ ‘ಕಾವ್ಯ ಸ್ಪರ್ಧಾಜಗಳ’ ಇದ್ದರೂ, ಅವರು ಕೂಡ ಬೇಂದ್ರೆ ಹೇಳುತ್ತಿದ್ದ ಕವಿಯ ಶಬ್ದ ಸೃಷ್ಟಿ ಶಕ್ತಿಯ ಪರವಾಗೇ ಇದ್ದರೆಂದು ಊಹಿಸುವೆ. 

ಬೇಂದ್ರೆ ಕೊಟ್ಟ ‘ಪ್ರಜಾಪ್ರಭುತ್ವ’ ಪದದ ಹುಟ್ಟನ್ನು ವಿವರವಾಗಿ ಗಮನಿಸಿ: ಪ್ರಜಾಪ್ರಭುತ್ವದ ಆರಂಭದ ಚರ್ಚೆಗಳು ಸಾವಿರಾರು ವರ್ಷಗಳ ಕೆಳಗೆ ಗ್ರೀಸ್ ಅಥವಾ ರೋಮ್‌ನಲ್ಲಿ ಇದ್ದವು; ಅಥವಾ ಫ್ರಾನ್ಸ್ ದೇಶದ ವರ್ಸೈಲ್ಸ್ ಊರಿನಲ್ಲಿ ಜೂನ್ ೨೦, ೧೭೮೯ರಲ್ಲಿ ಒಂದು ದಿನ ಟೆನ್ನಿಸ್ ಕೋರ್ಟಿನಲ್ಲಿ ನಡೆದ ಚರ್ಚೆಗಳು ಡೆಮಾಕ್ರಸಿ ಅಥವಾ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದವು… ಈ ಥರದ ವಿವರಗಳೆಲ್ಲವೂ ಇವೆ. ಎಂದೋ ಯಾರೋ ಕವಿಮನಸ್ಸಿನ ಸೃಜನಶೀಲ ವ್ಯಕ್ತಿ ‘ಪ್ರಜಾಪ್ರಭುತ್ವ’ ಪದವನ್ನು ಸೃಷ್ಟಿಸಿರಬಹುದು, ಉಳಿದವರು ಅದನ್ನು ಒಪ್ಪಿರಬಹುದು; ಅಥವಾ ಹಲವರು ಮಾತುಮಾತಾಡುತ್ತಾ ‘ಡೆಮಾಕ್ರಸಿ’ ಎಂಬ ಪದ ಸೃಷ್ಟಿಯಾಗಿರಬಹುದು; ಡೆಮಾಕ್ರೆಸಿಯಲ್ಲಿ ದುಷ್ಟರ ದರ್ಬಾರು ಸೃಷ್ಟಿಯಾದಾಗ ಅದೇ ಪಶ್ಚಿಮ ‘ಡೆಮನೋಕ್ರೆಸಿ’ ಅಥವಾ ’ರಾಕ್ಷಸ ಪ್ರಭುತ್ವ’ ಎಂಬ ಪದವನ್ನು ಸೃಷ್ಟಿಸಿತು!

ಈ ಚರ್ಚೆ ಮತ್ತೆ ಕವಿ, ಕವಯಿತ್ರಿಯರ ಅಥವಾ ಕವಿ ಮನಸ್ಸಿನವರ ನವಪದ ಸೃಷ್ಟಿಯ ಸಾಧ್ಯತೆಯನ್ನೇ ಹೇಳುತ್ತಿದೆ. ರಾಜಪ್ರಭುತ್ವ, ಧರ್ಮಪ್ರಭುತ್ವಗಳ ಕಾಲದಲ್ಲೂ ಕನಸುಗಾರರು- ಅಂದರೆ ಕವಿ ಮನಸ್ಸಿನವರು- ಈ ವ್ಯವಸ್ಥೆಯನ್ನು ಬದಲಿಸಿ ಜನರೇ ಆಳುವ ಪ್ರಭುತ್ವವನ್ನು ಸೃಷ್ಟಿಸಿಕೊಳ್ಳಬೇಕೆಂದು ಕನಸು ಕಂಡರಲ್ಲವೆ? 

ಕಿ.ರಂ. ನಾಗರಾಜ್ ಕವಿಯ ನವಪದ ನಿರ್ಮಾಣದ ಬಗ್ಗೆ ಮೈದುಂಬಿ ಮಾತಾಡುತ್ತಿದ್ದುದು ನೆನಪಾಗುತ್ತದೆ: ‘ಈಗ ನೋಡಿ! ಪ್ರೇಮ ಅನ್ನೋ ಪದ ಇರುತ್ತೆ! ಕಾಶ್ಮೀರ ಅನ್ನೋ ಪದ ಇರುತ್ತೆ. ಇವೆರಡೂ ಸೇರಿ ಕುವೆಂಪೂಗೆ ‘ಪ್ರೇಮ ಕಾಶ್ಮೀರ’ ಅನ್ನೋ ಶಬ್ದ ಹೊಳೆಯುತ್ತೆ. ‘ಪಕ್ಷಿ’ ಅನ್ನೋ ಪದ ಇರುತ್ತೆ; ‘ಕಾಶಿ’ ಅನ್ನೋ ಪದ ಇರುತ್ತೆ; ಕುವೆಂಪು ಪದ್ಯದಲ್ಲಿ ಅದು ‘ಪಕ್ಷಿಕಾಶಿ’ ಆಗುತ್ತೆ…’ 

ಕುವೆಂಪು ಕಾವ್ಯದಲ್ಲಿ ನವಪದ ನಿರ್ಮಾಣ ಕುರಿತೇ ಕೀರಂ ವಿದ್ಯಾರ್ಥಿನಿ ಗೌರಿ  ಡಿಸರ್ಟೇಶನ್ ಬರೆದದ್ದು ನೆನಪಾಗುತ್ತದೆ. ಈ ಕೀರಂ ಜಾಡು ನನಗಂತೂ ಹಲ ಬಗೆಯಲ್ಲಿ ಕಾವ್ಯ ಓದುವ ದಾರಿ ತೋರಿಸಿದೆ; ತಂತಮ್ಮ ಕೆಲಸ ಮಾಡಿಕೊಂಡಿದ್ದ ಪದಗಳು ಕವಿಯ ನವಪದ ನಿರ್ಮಾಣ ಪ್ರತಿಭೆಯಲ್ಲಿ ‘ಪ್ರೇಮ ಕಾಶ್ಮೀರ’ ಅಥವಾ ‘ಪಕ್ಷಿಕಾಶಿ’ ಆಗಿ ಹೊಸ ಮೆಟಫರ್‍ ಅಥವಾ ರೂಪಕವಾಗಿ ಬೇರೆ ಬೇರೆ ಅರ್ಥಗಳು, ಚಿತ್ರಗಳು, ದರ್ಶನಗಳು ಸೃಷ್ಟಿಯಾಗುವ ಕುರಿತ ಕೀರಂ ನೋಟ ಕಾವ್ಯದ ಓದಿನ ಸಂಭ್ರಮವನ್ನು ಉಕ್ಕಿಸುತ್ತಲೇ ಇರುತ್ತದೆ.

ಇದೆಲ್ಲ ಬರೆಯುವಾಗ ಬೇಂದ್ರೆ ಶಂಬಾಗೆ ಹೇಳಿದ ಮಾತನ್ನೇ ಬದಲಾಯಿಸಿ ಹೇಳಬೇಕೆನ್ನಿಸುತ್ತದೆ: ಕವಿತೆ ಬಿದ್ದಿರುತ್ತೆ; ಓದುವವರು ಅದಕ್ಕೆ ಹೊಸ ಅರ್ಥ ಕೊಡುತ್ತಾರೆ. ಆಗ ಕವಿತೆಗೆ ರೆಕ್ಕೆ ಮೂಡಿ ಹಾರುತ್ತದೆ! ವಿಶ್ವ ಕಾವ್ಯದ ದಿನ ‘ಈಗ ಕವಿತೆ ‌ಓದುವವರೇ’ ಇಲ್ಲ ಎಂದು ಕೆಲ ಬಗೆಯ ಕವಿಗಳು ಹಲುಬುವುದು ನೆನಪಾಗುತ್ತದೆ; ಅಂಥ ಹಲುಬರು ‘ತಮ್ಮ’ ಕವಿತೆಯನ್ನು ‘ಓದುವವರಿಲ್ಲ’ ಎಂದು ತಮ್ಮ ಸ್ವ-ಮರುಕದ ಹಲುಬನ್ನು ಬದಲಿಸಿಕೊಳ್ಳುವುದು ಒಳ್ಳೆಯದು! 

ಈ ಮಾತು ಹೇಳಲು ಕಾರಣವಿದೆ: ಕವಿತೆಗಳನ್ನು ಯಾರು ಓದಲಿ ಬಿಡಲಿ, ಕರ್ನಾಟಕದ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೇಡಂ, ಮೇಷ್ಟರುಗಳು ಕೊನೇ ಪಕ್ಷ ಪಠ್ಯಪುಸ್ತಕಗಳಲ್ಲಿರುವ ಕವಿತೆಗಳನ್ನಾದರೂ ಓದುತ್ತಲೇ ಇರುತ್ತಾರೆ! ನಿತ್ಯ ಹಾಡು ಕೇಳುವ ಕೋಟ್ಯಾಂತರ ಜನ ಒಂದಲ್ಲ ಒಂದು ಬಗೆಯ ಕಾವ್ಯಕ್ಕೆ ಕಿವಿ ಕೊಟ್ಟೇ ಇರುತ್ತಾರೆ. ಪಾಪ್ಯುಲರ್‍ ಇರಲಿ, ರ್‍ಯಾಪ್ ಸಂಗೀತವಿರಲಿ, ಸಿನಿಮಾ ಹಾಡುಗಳಿರಲಿ ಅಲ್ಲೆಲ್ಲ ಕಾವ್ಯದ ಒಂದು ಎಳೆ- ಅದು ಕ್ಲೀಷೆಯಾದರೂ ಸರಿ, ಸವಕಲಾದರೂ ಸರಿ- ಇರುತ್ತದೆ; ಅಲ್ಲಿ ಕೂಡ ಪ್ರತಿಮೆಗಳು ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ… 

ಅಷ್ಟೇ ಯಾಕೆ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ…ಹೀಗೆ ಯಾವ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದರೂ ಹತ್ತಾರು ಹೊಸಬರು ಒಂದಲ್ಲ ಒಂದು ಬಗೆಯ ಕವಿತೆಯನ್ನು ಅಥವಾ ಕವಿತೆಯಂಥ ರಚನೆಗಳನ್ನು ಉತ್ಸಾಹದಿಂದ ಓದುತ್ತಲೇ ಇರುತ್ತಾರೆ. ಇವರ ನಡುವಿನಿಂದಲೇ ಒಬ್ಬಳೋ ಒಬ್ಬನೋ ಬರಬರುತ್ತಾ ಕಾವ್ಯವನ್ನು ಗಟ್ಟಿಯಾಗಿ ಹಿಡಿಯುತ್ತಾರೆ; ಇಂಥವರಿಗೆ ಸಾವಿರಾರು ವರ್ಷಗಳ ಕನ್ನಡ ಕಾವ್ಯ ಪರಂಪರೆಯ ಜೊತೆಗಿನ ತಕ್ಕಮಟ್ಟಿನ ಒಡನಾಟವಾದರೂ ದಕ್ಕಿದರೆ ಕನ್ನಡ ಭಾಷೆಯ ಸಹಜ ಲಯಗಳು ಅವರೊಳಗೆ ನುಡಿಯತೊಡಗುತ್ತವೆ…ಒಂದು ಭಾಷಾಪರಂಪರೆಯ ಸಹಜ ಲಯಗಳು ದಕ್ಕದಿದ್ದರೆ ಯಾರೂ ದೊಡ್ಡ ಕವಿಯಾಗುವುದಿಲ್ಲ. ಈ ನಂಟಿನ ಜೊತೆಗೇ ನೂರಾರು, ಸಾವಿರಾರು ಸಾಲುಗಳನ್ನು ಬರೆದು ಅಳಿಸಿ ಬೇಸರಾಗಿ ಬಿಸುಟೆದ್ದು…ಎಲ್ಲೋ ಒಂದು ಹೊಸ ಪ್ರತಿಮೆ ಹುಟ್ಟುತ್ತದೆ. ಹೊಸ ಸತ್ಯ ಕಂಡರೆ ತಾನೆ ಹೊಸ ಪ್ರತಿಮೆಯ ಹುಟ್ಟು! ಈ ಪ್ರಕ್ರಿಯೆಯನ್ನೂ ಕವಿಯೇ ಹೇಳಿದ್ದು ನನ್ನ ಬಾಯಲ್ಲೇ ಇದೆ: 

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ 
ಕಂಡೀತು ಗೆರೆಮಿರುವ ಚಿನ್ನದದಿರು.
ಹೊರ ತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ 
ಇನ್ನಾದರೂ ಕೊಂಚ ಕಲಿಯಬೇಕು;
ಹೊನ್ನ ಕಾಯಿಸಿ, ಹಿಡಿದು ಬಡಿದಿಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು

ಹೀಗೆ ಅಡಿಗರ ಕಾವ್ಯದಲ್ಲಾಗುವಂತೆ ಕವಿತೆ ಅಪಾರ ಶ್ರಮದಿಂದ ಮತ್ತೆ ಮತ್ತೆ ಒಡೆದು ಮುರಿದು ಕಟ್ಟಿ ರೂಪುಗೊಳ್ಳಬಹುದು; ಅಥವಾ ಅದು ಬೇಂದ್ರೆಯ ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿರಬಹುದು; ಮಾತು ಮಾತು ಮಥಿಸಿ ಬಂದ ನವನೀತವಾಗಿರಬಹುದು; ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ’ವಾಗಿರಬಹುದು…ಅಥವಾ ವರ್ಡ್ಸ್ ವರ್ತನ ‘ಸಹಜ ಭಾವನೆಗಳ ಸ್ವಚ್ಛಂದ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವನೆ’ಯಾಗಿರಬಹುದು.  

ಕಾವ್ಯವೇ ಎಲ್ಲವನ್ನೂ ನೋಡುವ, ಯೋಚಿಸುವ ಪರಿಯಾದ ಈ ಥರದವರಿಗಿಂತ ಭಿನ್ನವಾಗಿ ಕಾವ್ಯದಿಂದ ಸ್ಫೂರ್ತಿ ಪಡೆದ ದೊಡ್ಡ ಚಿಂತಕರ ಕಾವ್ಯ ಪ್ರೇರಣೆಗಳು ನೆನಪಾಗುತ್ತವೆ. ಮಾರ್ಕ್ಸ್-ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಯಾಕೆ ಅಪ್ಪಟ ಕಾವ್ಯ ಎಂದು ಜನ ಹೇಳುತ್ತಾರೆಂದು ಹಲವು ಸಲ ಯೋಚಿಸಿದ್ದೇನೆ. ತರುಣ ಕಾರ್ಲ್ ಮಾರ್ಕ್ಸ್ ಕವಿಯಾಗಿದ್ದುದು ನೆನಪಾಗುತ್ತದೆ. 

ಕಾರ್ಲ್ ಮಾರ್ಕ್ಸ್ ಹದಿನೆಂಟು-ಹತ್ತೊಂಬತ್ತನೇ ವಯಸ್ಸಿನ ನಡುವೆ ತೀವ್ರ ರೊಮ್ಯಾಂಟಿಕ್ ಕವಿತೆಗಳನ್ನು ಬರೆದ. ಇವು ತನ್ನ ಪ್ರಿಯತಮೆ ಜೆನ್ನಿಗಾಗಿ ಬರೆದ ’ಟು ಜೆನ್ನಿ’; ‘ಕನ್‌ಕ್ಲೂಡಿಂಗ್ ಸಾನೆಟ್ಸ್ ಟು ಜೆನ್ನಿ’ ಎಂಬ ಕವಿತಾ ಗುಚ್ಛ ಗಳಾದವು. ಮಾರ್ಕ್ಸ್ ಮುಂದೆ ಜೆನ್ನಿಯನ್ನೇ ಮದುವೆಯಾದ. ಅವುಗಳಲ್ಲೊಂದು ಕವಿತೆ ಹೀಗೆ ಶುರುವಾಗುತ್ತದೆ: 

ನೋಡು ನೋಡು! ಸಾವಿರ ಸಂಪುಟಗಳನ್ನು ತುಂಬಿಸಬಲ್ಲೆ 

ಪ್ರತಿ ಸಾಲಿನಲ್ಲೂ ಬರೆಬರೆದು ’ಜೆನ್ನಿ’ ‘ಜೆನ್ನಿ’ ಎಂದು.  

ಹದಿ ಹರೆಯದಲ್ಲಿ ಧುಮ್ಮಿಕ್ಕುವ ಉದ್ವೇಗದಲ್ಲಿ ಶುರುವಾದ ಈ ಕವಿತೆಯ ಕೊನೆ ಹೀಗಿದೆ:

ನಿಜಕ್ಕೂ ಇದನ್ನೊಂದು ಪಲ್ಲವಿಯಾಗಿ ಬರೆಯುವೆನು-
ಮುಂಬರುವ ಶತಶತಮಾನ ಇದನ್ನು ಕಾಣಲೆಂದು:
ಪ್ರೀತಿ ಎಂದರೆ ಜೆನ್ನಿ; ಜೆನ್ನಿ ಎಂಬುದು ಪ್ರೀತಿಯ ಹೆಸರು. 

ಹದಿನೆಂಟರ ಆಸುಪಾಸಿನಲ್ಲಿ ಈ ಥರದ ಕವಿತೆಗಳನ್ನು ಬರೆದ ಮಾರ್ಕ್ಸ್ ಇದಾದ ಹತ್ತು ಹದಿನೈದು ವರ್ಷಗಳ ನಂತರ ಕಮ್ಯುನಿಸಂ, ಸೋಷಲಿಸಂ ಕಡೆಗೆ ಗಂಭೀರವಾಗಿ ನಡೆದ. ಮುಂದಿನ ಶತಮಾನದಲ್ಲಿ ಕಮ್ಯುನಿಸ್ಟ್ ಕವಿ ಪಾಬ್ಲೋ ನೆರೂಡ ಕೂಡ ತನ್ನ ಹದಿನೆಂಟನೇ ವಯಸ್ಸಿನಲ್ಲಿ ತೀವ್ರ ಪ್ರೇಮಪದ್ಯಗಳನ್ನು ಬರೆದ; ಹತ್ತು ಹದಿನೈದು ವರ್ಷಗಳ ನಂತರ ಮಾರ್ಕ್ಸ್ ವಾದಿಯಾದ, ನೆರೂಡ ಹದಿಹರೆಯದಲ್ಲಿ ಬರೆದ ‘ಟು ನೈಟ್ ಐ ಕೆನ್ ರೈಟ್ ದ ಸ್ಸ್ಯಾಡೆಸ್ಟ್ ಲೈನ್ಸ್…’ ಎಂಬ ಪ್ರಖ್ಯಾತ ಪದ್ಯವನ್ನು ಇದೇ ಅಂಕಣದಲ್ಲಿ ಎರಡು ವರ್ಷಗಳ ಕೆಳಗೆ ಕನ್ನಡಿಸಿ ಕೊಟ್ಟಿದ್ದು ನಿಮಗೆ ನೆನಪಿರಬಹುದು: 

 ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.

‘ದಿಕ್ಕೆಟ್ಟ ಕನಸು, ಕನವರಿಕೆ ಕಿಕ್ಕಿರಿದು ರಾತ್ರಿ ಕಂಗೆಟ್ಟಿದೆ;
ಎಲ್ಲೋ ದೂರದಲ್ಲಿ ನೀಲಿ ತಾರೆಗಳು ಥರಥರ ನಡುಗುತ್ತಿವೆ…’
ಹೀಗೆಲ್ಲ ಬರೆಯಬಲ್ಲೆ.

ಇರುಳಗಾಳಿ ಬಾನಲ್ಲಿ ಸುತ್ತರಗಾಣ ಹೊಡೆದು ಸುಯ್ಯೆಂದು ಹಾಡುತ್ತಿದೆ.
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು 

ನಾನವಳ ಪ್ರೀತಿಸಿದೆ; ಅವಳೂ ಆಗೀಗ ನನ್ನ ಪ್ರೀತಿಸಿದಳು.
ಇಂಥ ಇರುಳುಗಳಲ್ಲಿ ಈ ತೋಳ ತೆಕ್ಕೆಯಲ್ಲಿ ಅವಳ ಬಾಚಿಕೊಂಡಿದ್ದೆ.

ಹೀಗೆ ಈ ಕವಿತೆ ಓಡುತ್ತದೆ! ಸಾಮಾನ್ಯವಾಗಿ ಕವಿತೆ ಉಕ್ಕುವುದೇ ತಾಯ್ನುಡಿಯಲ್ಲಿ. ಮಾರ್ಕ್ಸ್ ಬರೆದ ಜರ್ಮನ್ ಭಾಷೆಯಲ್ಲಿ ಅಥವಾ ನೆರೂಡ ಬರೆದ ಸ್ಪ್ಯಾನಿಷ್ ಭಾಷೆಯಲ್ಲಿ ಈ ಕವಿತೆಗಳ ಸಂಗೀತ, ತೀವ್ರತೆ ಹೇಗಿದ್ದಿರಬಹುದು ಎಂಬುದನ್ನು ತಂತಮ್ಮ ಭಾಷೆಗಳಲ್ಲಿ ಕವಿತೆ ಬರೆಯುವವರು ಅನುಭವಿಸಿಕೊಳ್ಳಬಹುದು; ಅದರಲ್ಲೂ ಇಂಥ ಉತ್ಕಟ ಅನುಭವವನ್ನು, ತೀವ್ರವಾದ ಪ್ರೇಮಕವಿತೆಗಳನ್ನು ಬರೆದಿರುವವರು, ಈ ಕವಿತೆಗಳನ್ನು ಇಷ್ಟೇ ತೀವ್ರವಾಗಿ ಓದಿರುವವರು ಇದನ್ನು ಊಹಿಸಿಕೊಳ್ಳಬಲ್ಲರು. ಅದರಲ್ಲೂ ಮೈಯೇ ನುಡಿಯುವ ಪ್ರೇಮಕವಿತೆ ಬರೆದ ಹೆಣ್ಣು, ಗಂಡುಗಳು ಈ ತೀವ್ರತೆಯನ್ನು ಇನ್ನಷ್ಟು ಅನುಭವಿಸಿರಬಲ್ಲರು; ಅಷ್ಟೇ ಅಲ್ಲ, ಇಂಥ ಪ್ರೇಮಕವಿತೆಗಳನ್ನು ಯಾವ ಗಳಿಗೆಯಲ್ಲಾದರೂ, ಯಾವ ವಯಸ್ಸಿನಲ್ಲಾದರೂ ಬರೆದಾಗಲೂ ಮೈ ಮಧುರವಾಗಿ ಕಂಪಿಸುವ ತೀವ್ರ ಕೋಮಲತೆ ಹಬ್ಬುವುದನ್ನು ಕಂಡುಂಡಿರಬಹುದು. 

ಎಲ್ಲ ತೀವ್ರ ಬರವಣಿಗೆಗೂ ಕಾವ್ಯವೇ ಮೂಲ. ಬರೆಯುವವರಿಗೆ ನಿತ್ಯವೂ ಕಾವ್ಯ ದಿನವೇ! ಏನನ್ನಾದರೂ ಬರೆಯಲಿ, ಕಾವ್ಯದ ತೀವ್ರಸ್ಥಿತಿ ದಕ್ಕದಿದ್ದರೆ ಬರವಣಿಗೆಯಲ್ಲಿ ಜೀವ ಸಂಚಾರ ಎಂಬುದಿಲ್ಲ! ಕಾರ್ಲ್ ಮಾರ್ಕ್ಸ್ ಸಾಲನ್ನೇ ಕೊಂಚ ಪಲ್ಲಟಿಸಿ ಹೇಳಿದರೆ ಅದು ಸವಕಲಾಗುತ್ತದೆ ಎನ್ನಿಸಿದರೂ ಹೇಳಿಯೇಬಿಡಬೇಕೆನ್ನಿಸುತ್ತದೆ: ‘ಕಾವ್ಯ ಎಂದರೆ ಪ್ರೀತಿ; ಪ್ರೀತಿ ಎಂಬುದು ಕಾವ್ಯದ ಹೆಸರು’ 

ಈ ಬರಹದ ಆರಂಭದಲ್ಲಿರುವ ಶಂಬಾ- ಬೇಂದ್ರೆ ಚರ್ಚೆಗೆ ಮತ್ತೆ ವಾಪಸಾಗೋಣ: ಎಲ್ಲೋ ಭಾಷೆಯಲ್ಲಿ, ಸಮಾಜದಲ್ಲಿ ಇದ್ದ ವರ್ಗ-ವರ್ಗ-ಸಂಘರ್ಷ-ವರ್ಗಪ್ರಜ್ಞೆ; ಉಳ್ಳವರು-ನಿರ್ಗತಿಕರು; ದುಡಿಯವ ಜನರ ಸರ್ವಾಧಿಕಾರ…ಇಂಥ ಪರಿಕಲ್ಪನೆಗಳು ಕವಿ ಮಾರ್ಕ್ಸ್ ಕನಸಿದ ಹೊಸ ಸಮಾಜದ ಹಿನ್ನೆಲೆಯಲ್ಲೂ ಹೊಸ ಅರ್ಥ ಪಡೆದಿರಬಹುದು. ಮುಂದೆ ಕವಿ ಮಾರ್ಕ್ಸ್ ಕಟ್ಟಿದ ವೈಜ್ಞಾನಿಕ ಸಿದ್ಧಾಂತದ ಕನಸಿನ ಆಶಯಗಳು ಜಗತ್ತಿನ ಅರ್ಧ ಭಾಗಕ್ಕಿಂತ ಹೆಚ್ಚು ಹಬ್ಬಿದ್ದು ಇಂಥ ಕವಿಮನಸ್ಸಿನ ಹೋರಾಟಗಾರರು, ಚಿಂತಕ ಚಿಂತಕಿಯರು ಈ ಕವಿಕನಸುಗಳನ್ನು ಮುಂದೊಯ್ದದ್ದರಿಂದ ಅಲ್ಲವೆ? 

ಮಾರ್ಕ್ಸ್, ಅಂಬೇಡ್ಕರ್ ಎಲ್ಲರನ್ನೂ ಜಡವಾಗಿಸುವವರು ಅಂಬೇಡ್ಕರ್ ಸಂತ ಕವಿ ತುಕಾರಾಮನ ಅಭಂಗಗಳಿಂದ ಸ್ಫೂರ್ತಿಗೊಂಡಿದ್ದನ್ನು; ಮಾರ್ಕ್ಸ್ ಮಹಾಕವಿ ಗಯಟೆ, ಹೆನ್ರಿಕ್ ಹೈನ್, ಶೆಲ್ಲಿ ಮೊದಲಾದವರ ಕಾವ್ಯದಿಂದ ಪ್ರೇರಣೆ ಪಡೆದಿದ್ದನ್ನು ಗಮನಿಸುವುದು ಒಳ್ಳೆಯದು.
 

Share on:

Comments

4 Comments



| ಹರಿಪ್ರಸಾದ್ ಬೇಸಾಯಿ

ನಟರಾಜ ತಾಂಡವ!


| Pushpa h l

ನಮಸ್ತೆ ನಟರಾಜ್ ವಿಶ್ವ ಕಾವ್ಯದಿನ ಕುರಿತಾದ ಲೇಖನ ಶಂಬಾ,ಬೇಂದ್ರೆ, ಕಂಬಾರರು, ಅಡಿಗರಿಂದ ಆರಂಭಿಸಿ ಮಾರ್ಕ್ಸನವರೆಗೂ ನೀವು ಬೆಳೆಸಿದ ಚರ್ಚೆ ಚೆನ್ನಾಗಿ ಓದಿಸಿಕೊಳ್ಳುತ್ತದೆ. ಇಂತಹದೊಂದು ಸರಾಗವಾಗಿ ಬೆಳೆಯುವ ಲೇಖನ ಬೇಕಿತ್ತು. ಅಭಿನಂದನೆಗಳು. - ಪುಷ್ಪ. ಎಚ್. ಎಲ್


| ಕವಿ

ಬದುಕೆಂಬ ಬಜಾರಿನಲ್ಲಿ ಭಾವನೆಗಳು ಬಿಕರಿಯಾಗುವುದಿಲ್ಲ. ಹೀಗಾಗಿ ಜನ ಭಾವಿಸುವುದನ್ನೂ ಬಿಟ್ಟಿದ್ದಾರೆ. ಆದರೆ ತಮ್ಮ ಬರಹಗಳು ಆ ಭಾವನೆಗಳನ್ನು ಬಡಿದೆಬ್ಬಿಸಿ ಜೀವ ತುಂಬುತ್ತವೆ. ಧನ್ಯವಾದ


| Vrushabhendra Murthy N

ಭಾಷೆಯ ಪೂರ್ಣಗಾತ್ರ ಭಾಗ-ಭಾಗಗಳಲ್ಲಿ ಸೇರಿರುವುದು ಸಮಗ್ರ ಸಮಾಜದಲ್ಲಿ. ಕವಿಯು ಭಾಷೆಯ ವಿಶೇಷ ಬಳಕೆದಾರ ಮತ್ತು ಅದರ ಕುಶಲಕರ್ಮಿ. ಭಾಷೆಯ ಒಂದು ಆಯಾಮದ ಪರಿಣಿತನಾದ ಅವನು ಅದರ ಹೊಸ ಸಾಧ್ಯತೆಗಳ ಮೂಲಕ ಭಾಷೆಯನ್ನು ವಿಸ್ತರಿಸುತ್ತಾನೆ. ತರ್ಕಕ್ಕೆ ಹೇಳುವುದಾದರೂ, ಒಬ್ಬ ತಜ್ಞ ಭಾಷೆಯೊಂದರ ಎಲ್ಲಾ ಪದಗಳನ್ನು ತಿಳಿದವವನಾಗಿರುತ್ತಾನೆಯೆ ವಿನಾ ಆ ಎಲ್ಲಾ ಪದಗಳ ಸಹಜ ಬಳಕೆದಾರ ಆಗಿರುವುದಿಲ್ಲ. ಆದ್ದರಿಂದ ಶಂಬಾ ಅವರು ಹೇಳಿದ್ದೇ ಸರಿ. ಹೊಸ ಪದಗಳು ಎಲ್ಲಾ ಕ್ಷೇತ್ರಗಳಲ್ಲೂ ಆಗುತ್ತಿರುತ್ತವೆ. ತಾಂತ್ರಿಕ, ವೈಜ್ಞಾನಿಕ, ಆಡಳಿತಾತ್ಮಕ ಇತ್ಯಾದಿ ವಲಯಗಳು ಕವಿಗೆ ಸಂಬಂಧಿಸಿದ್ದೂ ಅಲ್ಲ ಹಾಗೂ ಅದರಲ್ಲಿ ಅವನಿಗೆ ಪರಿಣತಿಯೂ ಇರುವುದಿಲ್ಲ.




Add Comment


Mundana Kathana Nataka

YouTube






Recent Posts

Latest Blogs