ಸವಾಲು, ಜವಾಬ್ದಾರಿ, ಐಡೆಂಟಿಟಿ
by Nataraj Huliyar
ಮೊನ್ನೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಒಂದು ‘ಸ್ತ್ರೀಪುರುಷ’ ವ್ಯಕ್ತಿತ್ವದ ಅನನ್ಯ ಜೀವನಗಾಥೆ ಓದಿದ ಮೇಲೆ, ಈ ಸಲ ಈ ಅಂಕಣದಲ್ಲಿ ಬರೆಸಿಕೊಳ್ಳಲು ಮನಸ್ಸಿನಲ್ಲಿ ಸುತ್ತುತ್ತಿದ್ದ ಉಳಿದೆಲ್ಲ ವಸ್ತುಗಳೂ ಕಣ್ಮರೆಯಾದವು. ಈ ಜೀವನಗಾಥೆ ಬರೆದವರ ಹೆಸರು ನೋಡಿದೆ. ಇರಲಿಲ್ಲ. ಬರೆದವರ ಬಗ್ಗೆ ಹಾಗೂ ಬರೆಸಿಕೊಂಡವರ ಬಗ್ಗೆ ಅಪಾರ ಕೃತಜ್ಞತೆ ಹುಟ್ಟಿತು. ಶೇಕ್‌ಸ್ಪಿಯರನ ‘ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಪೋರ್ಷಿಯಾ ಹೇಳುವ ಮಾತು ನೆನಪಾಯಿತು: ‘ಕರುಣೆ ಇಬ್ಬಗೆಯಲ್ಲಿ ಹರಸುವುದು- ಕೊಡುವವರನ್ನೂ ಪಡೆಯುವವರನ್ನೂ.’ ಹೀಗೆ ಇಬ್ಬಗೆ ಕೃತಜ್ಞತೆ ಹುಟ್ಟಿಸಿದ ಜೀವನಗಾಥೆಯ ಸಾರ:
ತಮಿಳುನಾಡಿನ ಹಳ್ಳಿಯೊಂದರಲ್ಲಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ, ಆಗೀಗ ಬೀಡಿ ಸೇದುವ ಮುತ್ತುಮಾಸ್ತರ್ ವಾಸಿಸುವ ಪುಟ್ಟ ಮನೆ ಊರ ದೇವರಗುಡಿಯ ಹತ್ತಿರ ಇದೆ. ಒಬ್ಬಂಟಿಯಾಗಿರುವ ಮುತ್ತುವನ್ನು ಜನ ‘ಅಣ್ಣಾಚಿ’ ಅನ್ನುತ್ತಾರೆ.
ಸುಮಾರು ಮೂವತ್ತೈದು ವರ್ಷಗಳ ಕೆಳಗೆ ಬಿಳಿ ಶರಟು, ಬಿಳಿ ಪಂಚೆ ತೊಡಲು ಶುರು ಮಾಡಿದ ಮುತ್ತು ‘ಈ ಉಡುಪು ನನಗೆ ಒಂದು ಥರದ ಡಿಗ್ನಿಟಿ ತಂದುಕೊಟ್ಟಿದೆ. ನನ್ನ ಮಗಳನ್ನು ಬೆಳೆಸಲು ನನಗೆ ನೆರವಾಗಿದೆ’ ಎಂದು ಸದರಿ ಪತ್ರಿಕೆಯ ರಿಪೋರ್ಟರ್ ಜೊತೆ ಮಾತಾಡುತ್ತಾ ಹೇಳಿದರು. ವಿಶೇಷವೆಂದರೆ, ಮುತ್ತು ತಮ್ಮ ಜೀವನದ ಒಂದು ಘಟ್ಟದಲ್ಲಿ ಒಂದು ವಿಶೇಷ ಕಾರಣಕ್ಕಾಗಿ ಸೇದಲು ಕೈಗೆತ್ತಿಕೊಂಡ ಬೀಡಿ ಕೂಡ ಅವರ ವ್ಯಕ್ತಿತ್ವಕ್ಕೆ ನೆರವಾಗಿದೆ.
ಈ ಅನುಭವವನ್ನು ಓದುತ್ತಿರುವಾಗ ಈ ಭವ್ಯಭಾರತದ ಪರಂಪರಾಗತ ದಮನಗಳು ಹಾಗೂ ಅವುಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸೆಣಸಿದ ಮುತ್ತುವಿನ ಬದುಕು ರೋಮಾಂಚನ ಹುಟ್ಟಿಸತೊಡಗಿತು. ಮಗಳಿಗೆ ತಾಯಿಯೂ, ತಂದೆಯೂ ಎರಡೂ ಆಗುವ ಪ್ರಸಂಗಗಳನ್ನು ನಾವು ಸುತ್ತಮುತ್ತ ನೋಡುತ್ತಲೇ ಇರುತ್ತೇವೆ. ಈ ಪರಿಚಿತ ಸಾಹಸಗಾಥೆಗಳ ನಡುವೆ ಮುತ್ತುವಿನ ಬದುಕು ಅನನ್ಯವಾಗಿ ಕಾಣುತ್ತದೆ:
ಮೂವತ್ತೇಳು ವರ್ಷಗಳ ಕೆಳಗೆ ಇಪ್ಪತ್ತರ ಹರೆಯದ ‘ಶೆಣ್ಬಗಂ’ ಎಂಬಾಕೆ ಸಿವ ಎಂಬ ತರುಣನನ್ನು ಮದುವೆಯಾದಳು. ಮದುವೆಯಾದ ಹದಿನೈದೇ ದಿನಕ್ಕೆ ಗಂಡ ಹೃದಯಾಘಾತದಿಂದ ತೀರಿಕೊಂಡ. ಅಷ್ಟೊತ್ತಿಗಾಗಲೇ ಶೆಣ್ಬಗಂ ಗರ್ಭಿಣಿ. ಹೆಣ್ಣು ಮಗು ಹುಟ್ಟಿತು. ಹೊಟ್ಟೆಪಾಡಿಗಾಗಿ ಕಲ್ಲಿದ್ದಲು ಫ್ಯಾಕ್ಟರಿಯಲ್ಲಿ ಕೆಲಸ ಮಾಡತೊಡಗಿದಳು.
ಇಪ್ಪತ್ತೊಂದು ವರ್ಷದ ಶೆಣ್ಬಗಂ ಎಂಬ ಹೆಣ್ಣಿನ ಸುದೀರ್ಘ ಬವಣೆಯ ಬದುಕು ಹೀಗೆ ಶುರುವಾಯಿತು. ಒಂದು ಸಂಜೆ ಶೆಣ್ಬಗಂ ಫ್ಯಾಕ್ಟರಿಯ ರಾತ್ರಿ ಪಾಳಿಗೆ ಹೋಗುತ್ತಿದ್ದಾಗ, ಡ್ರೈವರೊಬ್ಬ ಲಾರಿ ನಿಲ್ಲಿಸಿ, ‘ಲಾರಿ ಹತ್ತು’ ಎಂದು ಒತ್ತಾಯಿಸಿದ. ಶೆಣ್ಬಗಂ ಒಪ್ಪದಿದ್ದಾಗ ಡ್ರೈವರ್ ಅವಳನ್ನು ಬೈಯುತ್ತಾ ಹೊರಟುಹೋದ. ಶೆಣ್ಬಗಂ ನಡುಗಿ ಹೋದಳು. ಅವತ್ತಿನ ಪಾಳಿಯ ಕೆಲಸದ ರಾತ್ರಿಯಿಡೀ ಈ ಘಟನೆ ಅವಳನ್ನು ಮುತ್ತಿ ಕಾಡತೊಡಗಿತು.
ಮಾರನೆಯ ದಿನ ಶೆಣ್ಬಗಂ ಒಂದು ಶರ್ಟ್, ಒಂದು ಪಂಚೆ ತಂದಳು. ತಿರುಚೆಂಡೂರಿಗೆ ಹೋಗಿ ತಲೆ ಬೋಳಿಸಿಕೊಂಡಳು. ಹೆಣ್ಣಿನ ಅವತಾರದಲ್ಲಿ ಕೊನೆಯ ಬಾರಿಗೆ ದೇವಸ್ಥಾನಕ್ಕೆ ಹೋದಳು. ಹೊರ ಬಂದಾಗ ಗಂಡಿನ ಉಡುಗೆಯಲ್ಲಿ ಹೊರ ಬಂದಳು. ‘ಮುತ್ತು’ ಎಂಬ ಹೊಸ ಹೆಸರು ಇಟ್ಟುಕೊಂಡಳು.
ಈ ಮುತ್ತು ‘ಮುತ್ತು ಮಾಸ್ತರ್’ ಆದದ್ದು ತೂತ್ತುಕುಡಿಯ ಹೋಟೆಲೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದಾಗ. ಕೆಲವು ವರ್ಷ ಹೋಟೆಲಿನಲ್ಲಿ ಅಡುಗೆ ಕೆಲಸ ಮಾಡಿದ ಮುತ್ತು ಮಾಸ್ತರ್ ಚೆನ್ನೈ ಸೇರಿ, ನಂತರ ಮೂರು ವರ್ಷಗಳ ನಂತರ, ಹತ್ತು ವರ್ಷದ ಹೆಣ್ಣು ಮಗುವಿನ ಜೊತೆಗೆ ತೂತ್ತುಕುಡಿ ಜಿಲ್ಲೆಯ ಹಳ್ಳಿಯೊಂದಕ್ಕೆ ತಲುಪಿದ್ದಾಯಿತು. ಅಲ್ಲಿ ಯಾರೂ ಗುರುತು ಪರಿಚಯದವರಿರಲಿಲ್ಲ. ಈ ಹಳ್ಳಿಯಲ್ಲಿ ಮುತ್ತು ಮಾಸ್ತರ್ ಕೃಷಿ ಕಾರ್ಮಿಕನ ಕೆಲಸ ಶುರುವಾಯಿತು. ಗುದ್ದಲಿ, ಕೊಡಲಿ ಹಿಡಿದು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಮುತ್ತು ಮಾಸ್ತರನ್ನು ಜನ ಕೆಲಸಕ್ಕೆ ಕರೆಯುತ್ತಿದ್ದರು. ಮುತ್ತು ಮಾಸ್ತರ್ ಬಗ್ಗೆ ಎಲ್ಲರಿಗೂ ಗೌರವ.
ಹೀಗೇ ಹಲವು ವರ್ಷ ನಡೆಯಿತು. ನಡುನಡುವೆ ಹಲವು ಥರದ ಕಷ್ಟಗಳಿದ್ದವು. ಪಬ್ಲಿಕ್ ಟಾಯ್ಲೆಟ್ಟುಗಳು, ಋತು ಚಕ್ರದ ಕಷ್ಟ, ಆ ದಿನಗಳ ನೋವು... ಹೀಗೆ ಹಲವು ಕೋಟಲೆಗಳು. ಪ್ರತಿ ತಿಂಗಳೂ ಋತುಚಕ್ರದ ದಿನ ಬಂದಾಗ ಮುತ್ತು ನೋವುನಿವಾರಕ ಮಾತ್ರೆಗಳ ಮೊರೆ ಹೋಗುವುದು; ನೋವು ಮರೆಯಲು ಕೆಲಸದಲ್ಲಿ ಅತಿಯಾಗಿ ತೊಡಗಿಬಿಡುವುದು ಶುರುವಾಯಿತು. ‘ಒಂದು ಥರದ ಜೀವನವನ್ನು ಆರಿಸಿಕೊಂಡ ಮೇಲೆ ಅದು ಒತ್ತಾಯಿಸುವ ಎಲ್ಲವನ್ನೂ ಪೂರೈಸಲು ಸಿದ್ಧವಾಗಿರಲೇಬೇಕಲ್ಲ!’ ಇದು ಮುತ್ತುವಿನ ಅನುಭವವೇ ಹೊಮ್ಮಿಸಿದ ಜೀವನದೃಷ್ಟಿ. ಅದೃಷ್ಟವೆಂಬಂತೆ ನಲವತ್ತನೆಯ ವಯಸ್ಸಿಗೆ ಋತುಚಕ್ರದ ಸಮಸ್ಯೆ ನಿಂತು ಹೋಯಿತು.
ತನ್ನ ಈ ‘ಸ್ತ್ರೀಪುರುಷ’ ಬದುಕಿನಲ್ಲಿ ಬೀಡಿ ಕೊಟ್ಟ ರಕ್ಷಣೆ, ಅದು ಕೊಟ್ಟ ಗಂಡು ಇಮೇಜಿನ ಬಗೆಗೂ ಮುತ್ತುವಿಗೆ ಕೃತಜ್ಞತೆಯಿತ್ತು. ಒಮ್ಮೆ ಕುಡಿದ ಮತ್ತಿನಲ್ಲಿದ್ದ ಆಸಾಮಿಯೊಬ್ಬನಿಗೆ ಈ ಮುತ್ತು ಒಬ್ಬ ಹೆಂಗಸು ಎಂಬ ಅನುಮಾನ ಬಂತೋ ಏನೋ, ಮುತ್ತುವಿನ ಬಳಿ ಬರಲೆತ್ನಿಸಿದ. ಇದರಿಂದ ಪಾರಾಗಲು ಮುತ್ತು ಬೀಡಿ ಹಚ್ಚಲು ಕಡ್ಡಿ ಗೀರಿದ ತಕ್ಷಣ, ಆತ ‘ಅಣ್ಣಾ, ಮ್ಯಾಚ್ ಬಾಕ್ಸ್ ಕೊಡ್ತೀಯಾ’ ಅಂದ! ಬೀಡಿಯ ಹೊಗೆ ಒಳಗೆ ಹಬ್ಬಿಸುವ ಬಿಸಿ, ದಂ ಎಳೆದಾಗ ಹುಟ್ಟುವ ಲಹರಿ, ಅದು ಸೃಷ್ಟಿಸಿದ ಖಾಸಗಿ ಸ್ಪೇಸ್ ಕೂಡ ಮುತ್ತುವಿಗೆ ಏಕಾಕಿತನ ಮೀರಲು ನೆರವಾಗಿರಬಹುದು ಎಂದು ನಾವು ಊಹಿಸಬಹುದು.
ಈ ನಡುವೆ ಮುತ್ತುವಿನ ಪ್ರೇಮ-ಕಾಮದ ಲೋಕಗಳ ಒತ್ತಡಗಳು, ತಳಮಳಗಳು ಹೇಗಿದ್ದವೋ ಏನೋ ಯಾರಿಗೂ ತಿಳಿಯದು. ಆದರೆ ತನ್ನಂತವರಿಗೆ ಯಾವ ರಕ್ಷಣೆಯೂ ಇರದ ಸಮಾಜದಲ್ಲಿ, ಮಗಳಿಗಾಗಿ ನಾನು ಹೀಗೇ ಮುಂದುವರಿಯಲು ನಿರ್ಧರಿಸಿದೆ ಎಂಬ ಬಗ್ಗೆ ಮುತ್ತುವಿಗೆ ಖಚಿತತೆಯಿತ್ತು. ಹತ್ತು ವರ್ಷವಾಗುವವರೆಗೂ ಮುತ್ತುವಿನ ಮಗಳು ತನ್ನ ಚಿಕ್ಕಮ್ಮ ಲಕ್ಷ್ಮಿಯ ಬಳಿಯಿದ್ದಳು; ಅಷ್ಟೇ ಅಲ್ಲ, ಲಕ್ಷ್ಮಿಯನ್ನೇ ತಮ್ಮಮ್ಮ ಎಂದುಕೊಂಡಿದ್ದಳು. ಮುತ್ತು ಮಾಸ್ತರ್ ಕೂಡ ತನ್ನಂತೆಯೇ ಹೆಣ್ಣು ಎಂದು ಮಗಳಿಗೆ ಗೊತ್ತಾದದ್ದು ತನ್ನ ಏಳನೆಯ ವಯಸ್ಸಿನಲ್ಲಿ. ಲಕ್ಷ್ಮಿ ತೀರಿಕೊಂಡಾಗ ಅವಳಿಗೆ ಹತ್ತು ವರ್ಷ. ಅದಾದ ಮೇಲಷ್ಟೇ ಮುತ್ತು ತಮ್ಮಮ್ಮ ಎಂಬುದು ಅವಳಿಗೆ ಗೊತ್ತಾಗಿದ್ದು. ಲಕ್ಷ್ಮಿ ತೀರಿಕೊಂಡ ಮೇಲೆ ಮಗಳು ಮುತ್ತು ಇದ್ದ ಊರಿಗೇ ಬರಬೇಕಾಯಿತು. ಮಗಳು ಕೂಡ ಅಮ್ಮನನ್ನು ಮುತ್ತು ಮಾಸ್ತರ್ ಎಂದು ಕರೆಯುತ್ತಿದ್ದಳು. ಅಮ್ಮ-ಮಗಳು ಇಬ್ಬರೂ ‘ಶೆಣ್ಬಗಂ’ ಗುರುತನ್ನು ಮರೆಯಲ್ಲೇ ಇಟ್ಟಿದ್ದರು. ತೀರಾ ಹತ್ತಿರದ ಸಂಬಂಧಿಕರಿಗೆ ಮಾತ್ರ ಇದು ಗೊತ್ತಿತ್ತು. ಮಗಳು ಮದುವೆಯಾಗಿ ಹೋದ ಮೇಲೆ ಮುತ್ತುವಿನ ಒಂಟಿ ಬದುಕು, ಕೆಲಸ, ಬೀಡಿ ಎಲ್ಲವೂ ಹಾಗೇ ಮುಂದುವರಿದವು.
ಒಬ್ಬಳೇ ಬದುಕುವ, ಬದುಕಬಯಸುವ, ಬದುಕಲೇಬೇಕಾದ ಹೆಣ್ಣಿನ ವಿಚಿತ್ರ ಛಲದ ಲೋಕವನ್ನು ಹೇಳುವ ಈ ಕತೆಯನ್ನು ಆ ಇಂಗ್ಲಿಷ್ ಪತ್ರಿಕೆ ಪರಿಚಯಿಸಿದ್ದು, ಬಹಿರಂಗ ಪಡಿಸಿದ್ದು ಸರಿಯೋ ತಪ್ಪೋ ಎಂಬ ಸಂಕೀರ್ಣ ನೈತಿಕ ಪ್ರಶ್ನೆ ಕೂಡ ಈ ಬರಹ ಬರೆಯುವಾಗ ಎದುರಾಗತೊಡಗಿತು. ಅದಕ್ಕೇ ಇಲ್ಲಿ ಕೇಂದ್ರ ಪಾತ್ರದ ಹೆಸರು, ಊರು ಬದಲಿಸಿದೆ. ಆದರೆ ಇದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದ್ದನ್ನೂ ಈ ಬರಹ ಮುಗಿಸುವಾಗ ಗಮನಿಸಿದೆ. ಮೂಲ ಬರಹ ಬರೆದವರ ನಿಜವಾದ ಕಳಕಳಿಯ ಬಗ್ಗೆ ಮೆಚ್ಚುಗೆಯ ಜೊತೆಗೇ ಇದನ್ನು ಒಬ್ಬ ಆಧುನಿಕ ಮನಸ್ಸಿನ ವರದಿಗಾರ್ತಿ ಅಥವಾ ಸ್ತ್ರೀವಾದಿ ದೃಷ್ಟಿಕೋನದ ವರದಿಗಾರ್ತಿ ಅಥವಾ ಹೆಣ್ಣು ಮನಸ್ಸಿನ ವರದಿಗಾರ ಬರೆದಿರಬಹುದು ಎಂದು ಊಹಿಸಿದೆ. ಪುರುಷನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಗಂಡಾದ ಈ ಕತೆಯನ್ನು ಸ್ತ್ರೀವಾದಿ ದೃಷ್ಟಿಕೋನದ ಮೂಲಕ ಇನ್ನಷ್ಟು ಆಳವಾಗಿ ನೋಡಬೇಕೆನ್ನಿಸಿತು.
ಮಕ್ಕಳಿಗಾಗಿ ತಂದೆ, ತಾಯಿ ಎರಡೂ ಆಗುವ ದಿಟ್ಟ ಮಹಿಳೆಯರ ಬದುಕಿನ ಅಚಲವಾದ ಏಕೋದ್ದೇಶ, ಸಂಕಷ್ಟ, ಛಲಗಳನ್ನು ಹತ್ತಿರದಿಂದ ಕಂಡಿರುವ ನನ್ನಂಥವರಿಗೆ ಹಲ್ಲುಕಚ್ಚಿ ಬದುಕಿ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವ ಇಂಥ ಮಹಿಳೆಯರ ಬದುಕು ಅಪಾರ ಕೃತಜ್ಞತೆ, ಹೆಮ್ಮೆ ಮೂಡಿಸುತ್ತಲೇ ಇರುತ್ತದೆ. ನಾಲ್ಕು ಮಕ್ಕಳನ್ನು ತನ್ನ ಏಕಾಂಗಿ ಬದುಕಿನ ಹೋರಾಟದ ಮೂಲಕವೇ ಬೆಳೆಸಿದ ಸಾರ್ಥಕ ಬದುಕಿನ ತಾಯಿಯನ್ನು ಮನೆಯಲ್ಲೇ ಕಂಡ ನನ್ನಂಥವರಿಗೆ ಇಂಥ ಜೀವನಗಾಥೆಗಳು ನನ್ನ ಅನುಭವದ, ಒಳಗಿನ ಕತೆಗಳೇ ಅನ್ನಿಸುವುದು, ಈ ಕುರಿತು ಬರೆಯುವಂತೆ ಪ್ರೇರೇಪಿಸುವುದು ಸಹಜ.
ಕೊನೆ ಟಿಪ್ಪಣಿ
ನಟರಾಜ ಹೊನ್ನವಳ್ಳಿ: ಹೊಸ ನೋಟದ ಓಟ!
ನಿನ್ನೆ ಶನಿವಾರ (೨೮ ಜೂನ್ ೨೦೨೬) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಮೊಗ್ಗ ‘ರಂಗಾಯಣ’ ರೂಪಿಸಿದ, ಗೆಳೆಯ ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ, ’ಸ್ವಾತಂತ್ರ್ಯದ ಓಟ’ ಭಾರತದ ವಿಭಜನೆಯ ಕಾಲದ ಚರಿತ್ರೆಯನ್ನು ರಂಗದ ಮೇಲೆ ತಂದ ರೀತಿ ನೋಡುಗ, ನೋಡುಗಿಯರನ್ನು ನಿಧಾನವಾಗಿ ಆವರಿಸಿಕೊಳ್ಳತೊಡಗಿತು. ಈ ನಾಟಕದ ಶುರುವಿನಲ್ಲೇ ಹೊನ್ನವಳ್ಳಿಯವರ ಸಿಗ್ನೇಚರ್ ಸ್ಟೈಲಿನ ನಿಧಾನ ನಡಿಗೆಯ ಕಾರವಾನ್ ಪ್ರೇಕ್ಷಕ, ಪ್ರೇಕ್ಷಕಿಯರನ್ನು ಭಾರತದ ಈ ಕಾಲಘಟ್ಟದ ಚರಿತ್ರೆಯನ್ನು ಸಾವಧಾನದಿಂದ, ಪೂರ್ವಗ್ರಹ ಬಿಟ್ಟು ನೋಡಲು ಸೂಚಿಸತೊಡಗಿತು.
ಹೀಗಾಗಿ ಪರಕೀಯಭಾವ, ಪಲ್ಲಟದ ಭೀಕರ ಅನುಭವ, ಭಾವನಾತ್ಮಕತೆ, ಹಿಂಸೆ ಎಲ್ಲವೂ ಇರುವ ಚರಿತ್ರೆಯನ್ನು ವಸ್ತುನಿಷ್ಠವಾಗಿ-ಆರೋಗ್ಯಕರವಾಗಿ-ವೈಚಾರಿಕವಾಗಿ ನೋಡುವ ಧ್ವನಿ ಶುರುವಿನಿಂದಲೇ ರಂಗದ ಮೇಲೆ ಹಾಗೂ ಇಡೀ ಕಲಾಕ್ಷೇತ್ರದಲ್ಲಿ ದಟ್ಟವಾಗಿ ವ್ಯಾಪಿಸತೊಡಗಿತು. ಪ್ರೊಫೆಸರ್ ಮಂಜುನಾರಾಯಣರ ಗಾಢ ಕತ್ತಲು-ಬೆಳಕಿನ ಚಳಕ, ನಟನೆ, ಸಂಗೀತ ಎಲ್ಲವೂ ಸೇರಿದ ಕೆಲವು ದೃಶ್ಯಗಳ ಆಳದ ಪರಿಣಾಮ ಹೇಗಿತ್ತೆಂದರೆ, ಸಾಮಾನ್ಯವಾಗಿ ಪರಿಣಾಮಕಾರಿ ದೃಶ್ಯಗಳಿಗೆ ಚಪ್ಪಾಳೆ ಹೊಡೆಯುವ ನೋಡುಗ ಬಳಗ ಸ್ತಬ್ಧವಾಗಿ, ಮುಂದಿನ ದೃಶ್ಯಕ್ಕಾಗಿ ಕಾಯತೊಡಗುತ್ತಿತ್ತು. ಅತ್ಯಂತ ಸೂಚ್ಯವಾಗಿ, ಎದೆ ಕರಗಿಸುವಂತೆ ಮಂಡಿಸಿದ ಗಾಂಧೀ ಹತ್ಯೆಯ ನಂತರ ಇನ್ನೇನನ್ನೂ ನೋಡಲಾರದಷ್ಟು ಈ ನಾಟಕದ ಫ್ರೇಮುಗಳು, ಕಾಲದ ದುರಂತ ಇವೆಲ್ಲವೂ ನನ್ನ ತುಂಬ ತುಂಬಿಕೊಂಡಿದ್ದವು…
ನಟರಾಜ ಹೊನ್ನವಳ್ಳಿ ನಮ್ಮ ಕಾಲದ ಕೆಲವೇ ಸೂಕ್ಷ್ಮ-ಜೀವಂತ ನಿರ್ದೇಶಕರಲ್ಲಿ ಒಬ್ಬರು ಎಂಬುದನ್ನು ಅವರು ವ್ಯಕ್ತಿಗಳು, ದೃಶ್ಯಗಳನ್ನು ಹ್ಯಾಂಡಲ್ ಮಾಡುವ ರೀತಿ ಮತ್ತೆ ಮತ್ತೆ ಸೂಚಿಸುತ್ತಿತ್ತು. ಇದೀಗ ಅವರ ಈ ಹೊಸ ನೋಟದ ಸ್ವತಂತ್ರ ಓಟಕ್ಕೆ ರಂಗಾಯಣದ ಪ್ರಸನ್ನ ಡಿ. ಸಾಗರ್ ಜೊತೆಗೆ ಜೋಡಿಯಾದ ರಂಗಾಯಣದ ಕಮಿಟೆಡ್ ತಂಡಕ್ಕೆ ಕನ್ನಡನಾಡಿನ ಕೃತಜ್ಞತೆಗಳು.
‘ಸ್ವಾತಂತ್ರ್ಯದ ಓಟ’ದ ಮೂಲ ಕೃತಿ: ಬೊಳುವಾರು ಮಹಮ್ಮದ್ ಕುಂಞಯವರ ಕಾದಂಬರಿ. ರಂಗರೂಪ: ಮಂಜುನಾಥ ಗೋಮಾರನಹಳ್ಳಿ, ಸಂಗೀತ: ರಾಘವ ಕಮ್ಮಾರ. ಬೆಳಕು: ಮಂಜುನಾರಾಯಣ್.
Comments
15 Comments
| Vasantha
ನಿಜವಾಗಿಯೂ ಮುತ್ತುವಿನ ಧೈರ್ಯ ಮತ್ತು ಗಟ್ಟಿತನ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಕ್ಕೆ ಹಿಡಿದ ಕನ್ನಡಿ
| Naveen Kumar
ಶೆಣ್ಬಗಂನ ಆವರಿಸಿದ ಮುತ್ತು ಐಡೆಂಟಿಟಿ ಆಕೆಯ ಬದುಕಿಗೆ ಬದುಕುವ ಭರವಸೆಯನ್ನು ನೀಡಿದೆ. ವ್ಯವಸ್ಥೆಯಲ್ಲಿನ ಹೆಣ್ಣು ಗಂಡು ಐಡೆಂಟಿಟಿಗೆ ಪರಂಪರೆಯ ನಿರ್ದೇಶಿತ ವ್ಯತ್ಯಾಸಗಳು ಉಂಟು. ಗಂಡಿನ ನೋಟಗಳಿಂದ ತಪ್ಪಿಸಿಕೊಳ್ಳಲು ಮುತ್ತು ಮಾಸ್ತರ್ ಆಗುವ ಬಗೆ, ಹೆಣ್ತತನ ವೇದನೆಗಳು, ತನ್ನ ಮಗಳಿಗಾಗಿ ಬದಲಿಸಿಕೊಂಡ ರೂಪು ಎಲ್ಲವೂ ವ್ಯವಸ್ಥೆಯ ಮುಖವಾಡವನ್ನು ತೆರೆದಿಡುತ್ತದೆ.
| ಮಂಜುನಾಥ್ ಸಿ ನೆಟ್ಕಲ್
ದಿಟ್ಟ ಹೆಣ್ಣಿನ ಹೋರಾಟದ ಕಥನವು ಬದುಕಿನಲ್ಲಿ ಕಂಗೆಟ್ಟು ನೊಂದಿರುವ ಹೆಣ್ಣುಗಳ ಪಾಲಿಗೆ ಸ್ಫೂರ್ತಿ ನೀಡಲಿ... ಹೆಣ್ಣಿನ ಈ ಸಲಹುವ, ಮತ್ತು ಕಷ್ಟ ಸಹಿಷ್ಣುತೆಯ ಗುಣಗಳು ಗಂಡಸರಿಗೂ ಪ್ರೇರಣೆ ನೀಡಿವೆ...ಅಂತಹ ಉದಾಹರಣೆಗೆಳು ನಮ್ಮ ಕಣ್ಮುಂದೆ ಇವೆ... ಎಂತಹುದೇ ಸಂಕಷ್ಟ ಎದುರಾದಾಗಲೂ ಆ ಸಹಿಷ್ಣುತೆಯ ನೆನಪುಗಳು ನನ್ನಲ್ಲೂ ಆತ್ಮ ಸ್ಥೈರ್ಯ ತುಂಬಿ ಧೈರ್ಯದಿಂದ ಮುನ್ನಡೆಯಲು ನೆರವಾಗಿವೆ. ಈ ಬರಹಕ್ಕೆ ಧನ್ಯವಾದಗಳು ಸರ್
| Vasantha
ನಿಜವಾಗಿಯೂ ಮುತ್ತುವಿನ ಧೈರ್ಯ ಗಟ್ಟಿತನ ಹೆಣ್ಣು ಮಕ್ಕಳ ಆತ್ಮ ಸ್ಥೈರ್ಯ ಹಿಡಿದ ಕನ್ನಡಿ
| Somashankara N
ಆದರಣೀಯ ಗುರುಗಳಾದ ಡಾ. ನಟರಾಜ್ ಹುಳಿಯಾರ್ ಅವರಿಗೆ, "ಹೆಣ್ಣು: ಹೊಸ ಐಡೆಂಟಿಟಿಯ ಸ್ವತಂತ್ರ ಓಟ!" ಎಂಬ ನಿಮ್ಮ ಲೇಖನವು ಕೇವಲ ಒಂದು ಜೀವನಗಾಥೆಯಲ್ಲ; ಅದು ಸಮಾಜದ ಮನಸ್ಸನ್ನು ಪ್ರಶ್ನಿಸುವ, ಮಾನವೀಯತೆಯನ್ನು ಮರುಚಿಂತನೆಗೆ ಹಚ್ಚುವ ವೈಚಾರಿಕ ಬರಹವಾಗಿದೆ. ಮುತ್ತುವಿನ ಬದುಕಿನ ಮೂಲಕ ಮಹಿಳೆಯ ಅಸುರಕ್ಷತೆ, ಮಾತೃತ್ವದ ತ್ಯಾಗ, ಸಾಮಾಜಿಕ ದಮನ ಮತ್ತು ಅಸ್ತಿತ್ವದ ಹೋರಾಟವನ್ನು ನೀವು ಅತ್ಯಂತ ಸಂವೇದನಾಶೀಲವಾಗಿ ಅನಾವರಣಗೊಳಿಸಿದ್ದೀರಿ. ಈ ಲೇಖನದ ವಿಶೇಷತೆ ಎಂದರೆ, ಅದು ಓದುಗರಲ್ಲಿ ಕೇವಲ ಅನುಕಂಪವನ್ನಷ್ಟೇ ಅಲ್ಲ, ಆತ್ಮಾವಲೋಕನವನ್ನೂ ಮೂಡಿಸುತ್ತದೆ. ಸುರಕ್ಷತೆಗಾಗಿ ಒಬ್ಬ ಮಹಿಳೆ ತನ್ನ ಗುರುತನ್ನೇ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ನೀವು ನಿರೂಪಿಸಿರುವ ರೀತಿ, ನಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಇದೇ ನಿಜವಾದ ಸಾಹಿತ್ಯದ ಮತ್ತು ವೈಚಾರಿಕ ಬರವಣಿಗೆಯ ಶಕ್ತಿ. ಲೇಖನದ ಕೊನೆಯಲ್ಲಿ ನೀವು ಮಂಡಿಸಿರುವ ಸ್ತ್ರೀವಾದಿ ದೃಷ್ಟಿಕೋನ ಹಾಗೂ ಮಾನವೀಯ ಮೌಲ್ಯಗಳ ಕುರಿತ ಚಿಂತನೆಗಳು ಓದುಗರಿಗೆ ಹೊಸ ನೋಟವನ್ನು ನೀಡುತ್ತವೆ. ನಿಮ್ಮ ಬರಹದಲ್ಲಿ ಕಾಣುವ ಸಾಮಾಜಿಕ ಬದ್ಧತೆ, ಸಂವೇದನಾಶೀಲತೆ ಮತ್ತು ವಿಮರ್ಶಾತ್ಮಕ ದೃಷ್ಟಿ ನಮ್ಮಂತಹ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ನಿಮ್ಮ ಲೇಖನಗಳು ಇದೇ ರೀತಿ ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಯ ಲೋಕವನ್ನು ಶ್ರೀಮಂತಗೊಳಿಸುತ್ತಿರಲಿ. ನಿಮ್ಮ ಲೇಖನಿಯ ಬೆಳಕು ಇನ್ನಷ್ಟು ಓದುಗರ ಮನಸ್ಸನ್ನು ತಲುಪಿ, ಮಾನವೀಯತೆ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಬಿತ್ತರಿಸಲಿ ಎಂದು ಆಶಿಸುತ್ತೇನೆ. ವಂದನೆಗಳೊಂದಿಗೆ ತಮ್ಮ ವಿದ್ಯಾರ್ಥಿ ಸೋಮಶಂಕರ ಎನ್.
| Kumar Naik
Drama is super 🙏🙏🙏👌👌👌💐💐💐 Good Job
| Vimala
ಸದಾರಮೆ ನೆನಪಾದಳು
| ಚರಣ್
ತುಂಬಿದ ಚೀಲದ ಕಾಣದೊಲವಿನ ಮರವೇ ಸುಟ್ಟು ಬರೆಗಳ ಹೊರೆಹೊತ್ತು ನಗುವವಳೇ ಅಡಿಯಡಿಯಲ್ಲೂ ಪೊರೆದು ಬಾಳ ಬಗೆಗೆ ನೋಟವಿಲ್ಲದವಳೇ ಅದೇನು ಶಿಶ್ನಕ್ಕೆ ಈಪಾಟಿ ಕುರುಡು ನೀ ತಿರುಗಿದರೆ ಉರುಳದೇನದು?
| Shivamada naika
ಒಂದು ಹೆಣ್ಣಿನ ಹೋರಾಟದ ಬದುಕಿನ ಕಥೆಯನ್ನು ಹಾಗೂ ಅವಳ ಬದುಕಿನ ಬವಣೆಯ ವಿಭಿನ್ನ ಮುಖಗಳನ್ನು ಅತ್ಯಂತ ಸ್ವಾಭಾವಿಕವಾಗಿ ಚಿತ್ರಿಸಲಾಗಿದೆ..
| ರಮ್ಯಾ
ಅಂದರೆ ನನ್ನ ಜೀವನವನ್ನು ಒಂದು ಅಸೈನ್ ಮೆಂಟಿನಂತೆ , ಒಂದು ಪ್ರಾಜೆಕ್ಟಿನಂತೆ ಕಳೆದುಬಿಟ್ಟೆನೆ ಎನ್ನಿಸುತ್ತದೆ- ಮುತ್ತುವಿನ ಜೀವನಗಾಥೆ ಓದುತ್ತಿರುವಾಗ
| Guru Jagalur
ಲಂಕೇಶರ ಟೀಕೆ ಟಿಪ್ಪಣಿ ೧ "ಯಾರೂ ಮರೆಯದ ಹೀರೋ" ಓದಿ ವಿಸ್ಮಯಗೊಂಡಿದ್ದೇನೆ.ಬೇರೆಯವರಿಗೆ ಕಳಿಸಿದ್ದೇನೆ.ಯಾರು ಹೀಗೆ ಬರೆಯಲು ಸಾಧ್ಯ. ನಿಮ್ಮ ಮೇಲಿನ ಲೇಖನ ಓದಿ ದಿಗ್ಭ್ರಮೆಗೊಂಡಿದ್ದೇನೆ.ಸಣ್ಣ ಮಕ್ಕಳು,ವಯಸ್ಸಾದವರನ್ನು ಹಿರಿದು ಮುಕ್ಕುವ ಈ ಕಾಲಘಟ್ಟದಲ್ಲಿ ಶೆಣ್ಮಗಂ ಮುತ್ತು ಆಗುವ ಅನಿವಾರ್ಯತೆ ಇತ್ತು.ಇದು ನಮ್ಮ ಕಾಲದ ದುರಂತ.ಆದರೂ ಆಕೆಯ ಛಲ ಎಲ್ಲರಿಗೂ ಮಾದರಿ. .ಹಾಗೆಯೇ ಇತ್ತೀಚಿಗೆ ನಾನು ಹೆಚ್ಚಾಗಿ ಯೂಟ್ಯೂಬ್ ನಲ್ಲಿ ನೋಡಿದ ನೀನಾ ಗುಪ್ತಾ ಎಂಬ ಹಿಂದಿ ನಟಿ ಸಂಪ್ರದಾಯಕ್ಕೆ ಶೆಡ್ಡು ಹೊಡೆದು ಖ್ಯಾತ ಕ್ರಿಕೆಟ್ ಆಟಗಾರ ವಿವಾಹಿತನಾದ ವಿವಿಯನ್ ರಿಚರ್ಡ್ಸ್ ನಿಂದ ಆದ ಸಂಬಂಧದಿಂದ ಹೆಣ್ಣು ಮಗುವನ್ನು ಪಡೆದು ಅಪಾರ ಕಷ್ಟ ಉಂಡುರೂ ಆಕೆಯನ್ನು(ಮಸಾಬ ಎಂಬ ಹೆಸರು) ಸ್ವತಂತ್ರವಾಗಿ ಬೆಳೆಸಿದ್ದು.ನಿಜಕ್ಕೂ ನೀನಾ ದಿಟ್ಟ ಹೆಣ್ಣುಮಗಳು.
| ವಿಜಯಾ
ಬದುಕು ಕಟ್ಟಿಕೊಳ್ಳುವುದು ಎಂದರೆ ತನಗಾಗಿ ಎಂದಲ್ಲ,ಅಲ್ಲಿ ತಾನು ಸಮಾಜಕ್ಕೆ ಕೊಡಬೇಕಾದ ಉತ್ತಮ ಪ್ರಜೆಯನ್ನು ಕೆತ್ತುವ ಕೆಲಸವೂ ಹೌದು. ಹೆಣ್ಣೊಂದು ಗಂಡುವೇಷ ತೊಟ್ಟಾದರೂ ಗಂಡುಗಳಿಂದ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಈ ಕ್ಷಣದವರೆಗಿನ ಸತ್ಯ. ಉಪಾಯ,ಎಚ್ಚರಿಕೆ,ಜಾಗರೂಕತೆ ಮೊದಲಾದ ಹತ್ತಾರು ಜವಾಬ್ದಾರಿಗಳನ್ನೂ ನಿಭಾಯಿಸುವುದು ಸುಲಭವಲ್ಲ ಹೇಗೋ ಹಾಗೇ ಅದವಳ ಇಚ್ಛೆಯೂ ಅಲ್ಲ.. ಹೆಣ್ಣು ಹೆಣ್ತನವನ್ನೇ ಬಿಟ್ಟು ಕೊಡುವುದು ಸ್ವ ಇಚ್ಛೆಯಲ್ಲ,,ಪರಿಸರದ ಒತ್ತಡ. ಈ ಕ್ಷಣಕ್ಕೆ ಮೆಚ್ಚುವ ಮಾತು ಬೇರೆ ಆದರೆ ಆಕೆ ಕಳೆದುಕೊಂಡದ್ದರ ಪ್ರಮಾಣ ಯಾರೂ ಊಹಿಸಲಾಗದ್ದು. ಹೆತ್ತ ಕಂದನನ್ನು ಸಾಕಲು ರೂಪ ಬದಲಿಸಲಿಲ್ಲ.ತಾನೊಲ್ಲದ ಗಂಡಸರ ಪಾಲಾಗಲೊಲ್ಲದೆ ಕಾಪಾಡಿಕೊಳ್ಳಲು ಹೆಣ್ಣಿನ ದೃಷ್ಟಿಯಲ್ಲಿ ವಿಕೃತಿಎನ್ನಿಸುವ ಹಾಗೆ ತನ್ನ ರೂಪವನ್ನು ವಿರೂಪಗೊಳಿಸುವುದು ಕ್ರೌರ್ಯದ ಮತ್ತೊಂದು ಮುಖವೇ ತಾನೆ? ಇಲ್ಲಿಯೂ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.ಮತ್ತದು ಹಿಂತಿರುಗಿ ಪಡೆಯಲಾಗದ್ದು.ಇದು ಸಮಾಜದ ಕ್ರೌರ್ಯಕ್ಕೆ ಉತ್ತರವೋ ಬಲಿಯೋ ಯೋಚಿಸಿ
| ಡಾ. ನಿರಂಜನ ಮೂರ್ತಿ ಬಿ ಎಂ
ತನ್ನ ಸಹಜ ಸ್ವಭಾವ, ಭಾವನೆ, ಗುಣಧರ್ಮವನ್ನು ಮತ್ತು ತನ್ನ ತನವನ್ನೇ ಮರೆತು, ಅದನ್ನು ಬದುಕಿಗಾಗಿ ಬಲಿಗೊಟ್ಟು, ತಾನು ತಾನೇ ಅಲ್ಲದ, ಬೇರೆಯದೇ ರೂಪವನ್ನು ತನ್ನದಾಗಿಸಿಕೊಂಡು ಬದುಕಿದ ಶೆಣ್ಬಗಂ-ಮುತ್ತು ಮಾಸ್ತರನ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಮೆಚ್ಚಿಕೊಳ್ಳಬೇಕೆ ಅಥವಾ ಹಾಗೆ ಬದುಕುವ ಹಾಗೆ ಮಾಡಿದ ಈ ನಮ್ಮ ಸಮಾಜದ ಬಗ್ಗೆ ಮರುಗಬೇಕೆ ಎಂಬುದೇ ನಿಜವಾದ ಪ್ರಶ್ನೆ. ಅಂತೂ ಮನ ಕಲಕಿದ ವಾಸ್ತವ ಕಥೆಯಿದು.
| Ramachandra Naik
ಈ ರೀತಿ transformation ಆಗುವುದು ನಿಜಕ್ಕೂ ಹಿಂಸಾತ್ಮಕ ಕೆಲಸ, ಆ ವ್ಯಕ್ತಿ ಅನುಭವಿಸಿರುವ ನೋವು ಊಹಾತೀತ, ಇದಕ್ಕೇ ‘ಬದುಕು ಮಾಯೆಯ ಮಾಟ’ ಎನ್ನುವುದು 🙏🏻
| Shiva Prakasha
News ಪೇಪರ್ ನಲ್ಲಿ ಓದಿದ್ದೆ, ಇಷ್ಟ್ಟು ವಿಸ್ತಾರ ಅರಿವಿಗೆ ಬಂದಿರಲಿಲ್ಲ. ಬರವಣಿಗೆ ಆಪ್ತ ಅನಿಸಿತು. ವೇಷ ಧರಿಸಿದ ಬದುಕಿನ ಸತ್ಯಗಳು ಹೀಗೆ ಕಾಣ ಬರುವುದು ಅಪರೂಪ.
Add Comment