ವಚನಕಾರ್ತಿಯರ ಜೊತೆಯಲ್ಲಿ
by Nataraj Huliyar
ವಚನಕಾರ್ತಿಯರನ್ನು ಕುರಿತು ಸಮಾಜಮುಖಿ ಸಾಹಿತ್ಯ ಸಮಾವೇಶದಲ್ಲಿ ಮಾತಾಡಲು ಟಿಪ್ಪಣಿ ಮಾಡುತ್ತಾ ಆಗಾಗ ಗುರುತು ಹಾಕಿದ್ದ ಈ ಆದಿಮ ಕನ್ನಡ ಕವಯಿತ್ರಿಯರ ವಚನಗಳತ್ತ ಕಣ್ಣಾಡಿಸತೊಡಗಿದೆ. ಎಂದಿನಂತೆ ಇಂದು ಕೂಡ ಈ ಪ್ರತಿಮೆಗಳು, ಮಾತುಗಳು, ಪ್ರಶ್ನೆಗಳು ಮಿಂಚು ಹುಟ್ಟಿಸತೊಡಗಿದವು.
‘ಬಸವನ ಅನುಭವದಿಂದ ವಿವರವ ಕಂಡು ವಿಚಾರಪತ್ನಿಯಾದೆನಯ್ಯ’ ಎಂಬ ನೀಲಾಂಬಿಕೆಯ ಮಾತನ್ನು ಕಂಡಾಗಲೆಲ್ಲ ‘ವಿಚಾರಪತ್ನಿ’ ಎಂಬ ಬಣ್ಣನೆ ನನ್ನನ್ನು ಚಕಿತಗೊಳಿಸುತ್ತಲೇ ಇರುತ್ತದೆ. ಗೆಳೆಯ ಮೋಹನ್ ಮಿರ್ಲೆಯವರನ್ನು ‘ವಿಚಾರಪತ್ನಿ ಎಂಬ ಬಣ್ಣನೆ ಬೇರೆ ಯಾರದಾದರೂ ವಚನದಲ್ಲಿ ಬರುತ್ತದೆಯೇ ನೋಡಿ’ ಎಂದು ಕೇಳಿದೆ. ‘ವಚನ ಸಂಚಯ.ಕಾಂ’ ತಡಕಿದ ಅವರು ‘ಅದನ್ನು ಬಳಸಿರುವವರು ನೀಲಾಂಬಿಕೆ ಒಬ್ಬರೇ’ ಎಂದಾಗ ಸ್ಟನ್ ಆದೆ. ವೈಚಾರಿಕ ನಾಯಕನೂ ಆದ ಬಸವಣ್ಣನನ್ನು ಗುರುವೆಂದು ಪರಿಗಣಿಸಿ, ಅವನಿಂದ ಕಲಿಯುತ್ತಲೇ ಬಸವಣ್ಣನಿಗೆ ಸಮನಾಗಿ ನಿಂತು ತಾನು ‘ವಿಚಾರಪತ್ನಿ’ ಎಂದಾಗ ಬಸವಣ್ಣನವರೂ ‘ಮೆಚ್ಚಿ ಅಹುದಹುದೆಂದು’ ತಲೆದೂಗಿರಬೇಕೆಂದು ಊಹಿಸುವೆ. ಈ ಬಣ್ಣನೆ ಕಂಡು ಆಧುನಿಕ ಕಾಲದ ‘ಇಂಟಲೆಕ್ಚುಯಲ್ ಕಂಪ್ಯಾನಿಯನ್’ ಬಣ್ಣನೆ ನೆನಪಾಗಿ ವಿದ್ವಾಂಸರಾದ ಕಲಬುರ್ಗಿಯವರೂ ಚಕಿತಗೊಂಡಿದ್ದರು.
ಪ್ರಖರ ಚಿಂತಕಿ ಎಂ.ಎಸ್. ಆಶಾದೇವಿ ಬರೆದ ‘ಬೆಳಕಿಗಿಂತ ಬೆಳ್ಳಗೆ’ ಪುಸ್ತಕದಲ್ಲಿ ನೀಲಾಂಬಿಕೆಯವರ ‘ಮಡದಿ ಎಂಬ ಪದ ನಿಶ್ಶಬ್ದವಾದಡೆ ನಾನೀಗ ನಿಜ ಸುಖಿ ಬಸವಾ’ ಎಂಬ ಮಾತನ್ನು ಮೊದಲ ಸಲ ಕಂಡಾಗ ಅದರ ಫೆಮಿನಿಸ್ಟ್ ಧ್ವನಿಗೆ ಇಷ್ಟೇ ಚಕಿತನಾಗಿದ್ದೆ. ಸತಿಪತಿ ಸಮಾನಭಾವವನ್ನು ಪ್ರತಿಪಾದಿಸುವ ಕವಯಿತ್ರಿ, ಸಾಂಪ್ರದಾಯಿಕ ಸಮಾಜದಲ್ಲಿ ‘ಮಡದಿ’ ಎಂಬ ಪದದಲ್ಲೇ ಹೆಣ್ಣಿನ ಎರಡನೇ ಸ್ಥಾನ ಸೂಚಿತವಾಗುವುದರ ಬಗ್ಗೆ ಜಾಗೃತಳಾಗಿದ್ದಾಳೆ. ನೀಲಾಂಬಿಕೆಯ ಮತ್ತೊಂದು ವಚನ:
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನ್ನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ ಶಿಶುವಾದೆನು
ಬಸವನೆನ್ನ ಶಿಶುವಾದನು
ಮತ್ತೊಂದೆಡೆ ನೀಲಾಂಬಿಕೆ ತನ್ನ ಕಾಲದ ಜಾತಿಯ ಕಟ್ಟುಗಳನ್ನು ಧಿಕ್ಕರಿಸಿ ‘ನಾನು ನಿಮ್ಮವಳಲ್ಲವಯ್ಯಾ, ನಾನು ಮಾದಾರ ಚನ್ನಯ್ಯನ ಮೊಮ್ಮಗಳು’ ಎನ್ನುತ್ತಾ, ಕ್ಷತ್ರಿಯ ಕುಲದ ಹಳೆಯ ವಾಸನೆ ಬಿಟ್ಟು ನಿರ್ಜಾತೀಕರಣಗೊಳ್ಳುತ್ತಾಳೆ. ಜಾತ್ಯತೀತಳಾಗುತ್ತಾಳೆ.
ಅತ್ತ ಅಕ್ಕಮಹಾದೇವಿ, ‘ನಾನು ಹೆಂಗೂಸಲ್ಲ’, ಅಂದರೆ ಹೆಣ್ಣು ಕೂಸಲ್ಲ; ಸ್ವತಂತ್ರ ವ್ಯಕ್ತಿತ್ವವಿರುವ ಹೆಣ್ಣು ಎಂದು ಗಟ್ಟಿಯಾಗಿ ಹೇಳುತ್ತಿದ್ದಾಳೆ. ‘ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು’ ಎಂದು ಆಯ್ಕೆಯ ಸ್ವಾತಂತ್ರ್ಯವನ್ನು ಹೇಳುತ್ತಾ ಸ್ವತಂತ್ರವಾಗಿ, ಏಕಾಂಗಿಯಾಗಿ ನಡೆದಿದ್ದಾಳೆ. ಪದ್ಯ ರಚಿಸುತ್ತಿದ್ದಾಳೆ. ವಚನಕಾರ್ತಿಯರ ಈ ಸ್ವಾತಂತ್ರ್ಯ ಅವರು ಬಳಸಿದ ಕಾವ್ಯ ಎಂಬ ಅಭಿವ್ಯಕ್ತಿ ಕ್ರಮದಿಂದ ಬಂತು. ತಂತಮ್ಮ ಭಾಷೆಯಲ್ಲಿ, ತಮ್ಮ ಮನೆ ಭಾಷೆಯಲ್ಲಿ ಏನು ಬೇಕಾದರೂ ಹೇಳಬಹುದು ಎಂಬ ವಚನ ಕಾವ್ಯತತ್ವದಿಂದ ಈ ಸ್ವಾತಂತ್ರ್ಯ ಬಂತು. ಅವರು ಪ್ರವೇಶಿಸಿದ ಅನುಭಾವದ ಲೋಕದಿಂದ ಬಂತು; ಅನುಭವ ಮಂಟಪದ ಮುಕ್ತತೆಯಿಂದಲೂ ಬಂತು. ಈ ಬುದ್ಧಿಜೀವಿ ಮಹಿಳೆಯರ ಸ್ವಂತದ ತಹತಹದಿಂದ ಬಂತು. ಕೆಲವರ ವಿಚಾರದಲ್ಲಿ ಸತಿಪತಿಯರೊಂದಾಗಿ ಅನುಭಾವದೆಡೆಗೆ ನಡೆದ ರೀತಿಯಿಂದಲೂ, ಗಂಡಿನ ಸಹಕಾರದಿಂದಲೂ ಈ ಸ್ವಾತಂತ್ರ್ಯ ಬಂತು ಎಂಬುದನ್ನು ಕೂಡ ಮರೆಯಲಾಗದು. ಸ್ವಾತಂತ್ರ್ಯದ ಹುಡುಕಾಟದ ಜೊತೆಗೇ ಸಮಾನತೆಯ ದನಿಯೂ, ಅಸಮಾನತೆಗಳ ನೆಲೆಗಳನ್ನು ಕುರಿತ ವಿಮರ್ಶೆಗಳೂ ಶುರುವಾದವು.
ಕೆಲವು ವಚನಕಾರ್ತಿಯರ ವಚನಗಳಲ್ಲಿ ಅನುಭವ ಮಂಟಪವನ್ನೇ ಶುದ್ಧೀಕರಿಸುವ ಚಿಂತನೆಗಳೂ ಇವೆ. ಹೀಗೆ ವಚನಕಾರ್ತಿಯರ ಕಾವ್ಯ ಆಧ್ಯಾತ್ಮದ ಹುಡುಕಾಟದಿಂದ ವ್ಯಾಪಕ ಸಮಾಜ ವಿಮರ್ಶೆಗೆ ಹೊರಳಿಕೊಳ್ಳುತ್ತಿರುತ್ತದೆ. ವಚನಕಾರ್ತಿಯರಲ್ಲಿ ಅವತ್ತಿನ ಬೂಟಾಟಿಕೆ ಭಕ್ತರನ್ನು, ವೇಷಧಾರಿಗಳನ್ನು ಕುರಿತ ಟೀಕಾಸ್ತ್ರಗಳು ಕುತೂಹಲಕರವಾಗಿವೆ: ‘ತೂಬರಕೊಳ್ಳಿಯಂತೆ ಉರಿವಾತ ಭಕ್ತನೆ, ಹುಸಿದು ತಂದು ಮಾಡುವಾತ ಭಕ್ತನೆ?’ ಎಂದು ಕಾಳವ್ವೆ ಪ್ರಶ್ನಿಸುತ್ತಾಳೆ. ಒಂದು ಬಗೆಯ ವಿನಯದ ಮಂಡನೆಯಂತೆ ಕಾಣುವ ವಚನಗಳಲ್ಲಿ ಕೂಡ ಸುಪ್ತ ಪ್ರತಿಭಟನೆ ಇರುವಂತೆ ಕಾಣುತ್ತದೆ. ಉದಾಹರಣೆಗೆ, ಈವರೆಗೆ ಸಿಕ್ಕಿರುವ ದುಗ್ಗಳೆಯ ಎರಡೇ ವಚನಗಳಲ್ಲಿ ಒಂದರಲ್ಲಿ, ಆಕೆ ಬಸವಣ್ಣ, ಪ್ರಭುದೇವ, ಸಿದ್ಧರಾಮ, ಚನ್ನಬಸವಣ್ಣ, ಅಜಗಣ್ಣರನ್ನು ಮಾದರಿಯನ್ನು ನಾವೂ ಅನುಸರಿಸಬೇಕು ಎಂದು ಹೇಳುತ್ತಾ, ಕೊನೆಗೆ ಹೀಗೆನ್ನುತ್ತಾಳೆ:
ಇಂತೀ ಐವರ ಪ್ರಸಾದವ ಕೊಂಡು
ಸತ್ತ ಹಾಗಿರಬೇಕಲ್ಲದೆ ತತ್ವದ ಮಾತು ನಮಗೇಕಯ್ಯ
ದಾಸಯ್ಯಪ್ರಿಯ ರಾಮನಾಥ.
‘ಸತ್ತ ಹಾಗಿರಬೇಕಲ್ಲದೆ’ ಎಂಬ ಮಾತು ದಾಸಿಮಯ್ಯನವರ ಪತ್ನಿ ದುಗ್ಗಳೆ ಹಿರಿಯರ ದಾರಿಯನ್ನು ಸುಮ್ಮನೆ ಒಪ್ಪಿಕೊಳ್ಳಬೇಕಾದ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಕೆಲವರು ಬರೆದಿದ್ದಾರೆ. ಇದನ್ನೇ ಕೊಂಚ ಸೀಳಿ ಓದಿದರೆ, ‘ಸತ್ತ ಹಾಗಿರಬೇಕಲ್ಲದೆ’ ಎಂಬಲ್ಲಿ ವಚನಕಾರ್ತಿಯ ಗಂಟಲಲ್ಲೇ ಅಡಗಿರಬಹುದಾದ ಮುನಿಸಿನ ಧ್ವನಿಯ ಸೂಚನೆಗಳನ್ನು ಕಾಣಬಹುದು. ಸ್ತ್ರೀವಾದಿ ರೀಡಿಂಗ್ ಹೆಣ್ಣಿನ ಕವಿತೆಯಲ್ಲಿ ಎಲ್ಲಿ, ಯಾಕೆ ಮೌನವಿದೆ; ಯಾವುದು ಅಲ್ಲಿ ಹೇಳದೆ ಉಳಿದಿದೆ ಎಂಬುದನ್ನು ಸೂಕ್ಷ್ಮವಾಗಿ ಹುಡುಕುತ್ತಿರುತ್ತದೆ; ಕವಿತೆಯಲ್ಲಿ ಬಳಕೆಯಾದ ಪದಕ್ಕೆ ಅವಿತಿಟ್ಟ ಅರ್ಥಗಳಿವೆ, ಪದ್ಯದ ಲಯಗಳು ಕೂಡ ಬಗೆಬಗೆಯ ಬಂಡಾಯವನ್ನು ಸೂಚಿಸುತ್ತಿರುತ್ತವೆ ಎಂಬುದನ್ನು ಗಮನಿಸುತ್ತಿರುತ್ತದೆ. ಈ ಸ್ತ್ರೀವಾದಿ ಓದಿನ ತರಬೇತಿಯೇ ದುಗ್ಗಳೆಯ ಮಾತಿನಲ್ಲಿ ಅಣಕದ ಬಂಡಾಯ ದನಿಯನ್ನು ಗುರುತಿಸುವಂತೆ ನನ್ನನ್ನು ಪ್ರೇರೇಪಿಸುತ್ತದೆ.
ಜಗತ್ತಿನ ಚರಿತ್ರೆಯಲ್ಲಿ ಹೆಣ್ಣು ತನಗೆ ಅನ್ನಿಸಿದ್ದನ್ನು ಸ್ವತಂತ್ರವಾಗಿ ಹೇಳಿಕೊಳ್ಳಲು ಸಿಕ್ಕಿದ ಮೊದಲ ವೇದಿಕೆ ಕಾವ್ಯವೇ ಇರಬೇಕು. ಕಾವ್ಯ ಮಹಿಳೆಯ ಸ್ವ-ವ್ಯಕ್ತಿತ್ವ ಪ್ರತಿಪಾದನೆಯ ವೇದಿಕೆ ಹಾಗೂ ಹೇರಿದ ಪುರುಷ ಪ್ರಧಾನ ಮೌಲ್ಯಗಳನ್ನು ಪ್ರಶ್ನಿಸುವ ವೇದಿಕೆ ಎಂಬುದನ್ನು ಸ್ತ್ರೀವಾದ ವಿವರಿಸಿದೆ. ಸ್ತ್ರೀ ತನ್ನ ಪರವಾಗಿ ವಾದಿಸುವ, ತನ್ನ ಪ್ರಶ್ನೆಗಳನ್ನು ಮಂಡಿಸುವ ವೇದಿಕೆಯಾಗಿ ಕಾವ್ಯ ಆಕೆಗೆ ಆಗಾಗ ನೆರವಿಗೆ ಬಂದಿದೆ. ಆಧುನಿಕ ಜಗತ್ತಿನ ಸ್ತ್ರೀಕಾವ್ಯವಂತೂ ಏನನ್ನು ಬೇಕಾದರೂ ಪ್ರಶ್ನಿಸುವ ವೇದಿಕೆಯನ್ನಾಗಿ ಕಾವ್ಯವನ್ನು ರೂಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಂಟುನೂರು ವರ್ಷಗಳ ಕೆಳಗೇ ವಚನಕಾರ್ತಿಯರು ವಚನಗಳನ್ನು ಸಮಾಜ ವಿಮರ್ಶೆಯ, ಪುರುಷಾಧಿಕಾರ, ಜಾತಿ, ಲಿಂಗ ಅಸಮಾನತೆಗಳ ವಿಮರ್ಶೆಯ ವೇದಿಕೆಯಾಗಿಸಿಕೊಂಡಿದ್ದು ಚಾರಿತ್ರಿಕ ಹೆಜ್ಜೆಯಾಗಿದೆ. ತಮ್ಮ ಕಾಲದ ಢಾಂಬಿಕ ಹಿರಿಯರನ್ನು ಟೀಕಿಸುವ ಸವಾಲನ್ನೂ ಅಕ್ಕಮ್ಮನಂಥ ವಚನಕಾರ್ತಿಯರು ನಿರ್ವಹಿಸುತ್ತಾರೆ:
ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ
ಬಿಡಾರ ಬಿಡಾರವೆಂದು ಹಿರಿಯತನಕೆ ಅಹಂಕರಿಸಿ
ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ
ಭಕ್ತರೊಳು ಕ್ರೋಧ ಭ್ರಷ್ಟರೊಳು ಮೇಳ-
ಇವರು ನರಕಕ್ಕೇ ಯೋಗ್ಯರು.
ನಮ್ಮ ಕಾಲ ತೋರಿಸಿಕೊಟ್ಟಿರುವಂತೆ ಮಹಿಳಾ ಕಾವ್ಯ ಎನ್ನುವುದೇ ಒಂದು ರಾಜಕೀಯ ಕ್ರಿಯೆ; ಪೊಲಿಟಿಕಲ್ ಆಕ್ಟ್. ಈ ಅಂಶವನ್ನು ಜಗತ್ತಿನ ಸ್ತ್ರೀ ಕಾವ್ಯ, ಅಮೆರಿಕದ ಕಪ್ಪು ಮಹಿಳಾ ಕಾವ್ಯ, ಕನ್ನಡ ಸ್ತ್ರೀ ಕಾವ್ಯ ಸಮರ್ಥವಾಗಿ ತೋರಿಸಿವೆ. ಇಪ್ಪತ್ತು-ಇಪ್ಪತ್ತೊಂದನೆಯ ಶತಮಾನದ ಸ್ತ್ರೀವಾದಿ ಚಿಂತನೆಗಳು ಬಂದ ಮೇಲೆ ಈ ಥರದ ಹೊಸ ನೋಟಗಳು ವ್ಯಾಪಕವಾಗಿ ತೆರೆದಿವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಚಿಂತನೆಗಳೇ ಇಲ್ಲದ ಸಂಪ್ರದಾಯಸ್ಥ ಸಮಾಜದಲ್ಲಿ, ಎಂಟುನೂರು ವರ್ಷಗಳ ಕೆಳಗೆ ಈ ಮಹಿಳೆಯರಿಗೆ ಈ ದನಿ ಎಲ್ಲಿಂದ ದಕ್ಕಿತು ಎಂದು ವಿಸ್ಮಯವಾಗುತ್ತದೆ: ವಚನಗಳನ್ನು ಬರೆಯುವುದರ ಮೂಲಕ ತಮ್ಮ ಸ್ವಾತಂತ್ರ್ಯ ಕಂಡುಕೊಂಡ ಈ ಮಹಿಳೆಯರು ಕವಿತೆ ಬರೆಯುವುದರ ಮೂಲಕವೇ ಎಲ್ಲವನ್ನೂ ಪ್ರಶ್ನಿಸುವ ಅಧಿಕಾರ ಕಂಡುಕೊಂಡರು. ಆ ಕಾಲದಲ್ಲಿ ಈ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬಂದರು? ತಂತಮ್ಮ ಊರಿನಲ್ಲೇ ಇದ್ದು ವಚನಗಳನ್ನು ನುಡಿದರೆ? ಬರೆದರೆ? ಹಾಡಿದರೆ? ಎಲ್ಲರೂ ಕಲ್ಯಾಣಕ್ಕೆ ಬಂದರೆ? ಅನುಭವಮಂಟಪದಲ್ಲಿ ಶರಣರ ಅನುಭಾವ ಗೋಷ್ಠಿಯಲ್ಲಿ ಕೂತು ನುಡಿದರೆ? ತಂತಮ್ಮ ಗಂಡನ ಜೊತೆಗೆ ಬಂದರೆ?
ಎಂಟುನೂರಕ್ಕೂ ಹೆಚ್ಚಿನ ವರ್ಷಗಳ ಹಿಂದಿನ ಈ ವಿದ್ಯಮಾನಗಳನ್ನು ಕೇವಲ ಊಹಿಸಿಕೊಳ್ಳಬಹುದೇ ಹೊರತು ಇವಕ್ಕೆ ಖಚಿತ ದಾಖಲೆಗಳಿಲ್ಲ. ಈವರೆಗೆ ಸಿಕ್ಕಿರುವ ವಚನಗಳ ಆಧಾರದ ಮೇಲೆ ಸುಮಾರು ಮೂವತ್ತೈದು ವಚನಕಾರ್ತಿಯರನ್ನು ‘ಶಿವಶರಣೆಯರ ವಚನಗಳು’ ಸಂಪುಟ ಪಟ್ಟಿ ಮಾಡಿದೆ. ಸ್ತ್ರೀಯರ ರಚನೆಗಳನ್ನು ಕುರಿತ ಈ ಕಾಲದ ಧೋರಣೆಗಳ ಕನ್ನಡಿಯಲ್ಲಿ ನೋಡಿದರೆ, ಅಂದಿನ ವಚನಕಾರ್ತಿಯರು ನುಡಿದ ಎಲ್ಲ ವಚನಗಳನ್ನೂ ಮುಂದಿನವರು ಬರೆದಿಟ್ಟದ್ದು ತೀರಾ ಕಡಿಮೆಯೇನೋ ಎನ್ನಿಸುತ್ತದೆ. ಕಲಬುರ್ಗಿ ಬರೆದಿರುವ ‘ಶಾಸನಗಳಲ್ಲಿ ಶಿವಶರಣರು’, ‘ಶಿಲ್ಪಗಳಲ್ಲಿ ಶಿವಶರಣರು’ ಲೇಖನಗಳನ್ನು ನೋಡಿದರೆ, ವಚನಕಾರ್ತಿಯರನ್ನು ಆ ಕಾಲದ ಸಮಾಜ ದಾಖಲಿಸಿಯೇ ಇಲ್ಲ ಎಂಬುದು ಗೊತ್ತಾಗುತ್ತದೆ. ಇನ್ನು ಅವರು ಬರೆದ ವಚನಗಳಿಗೆ ಏನಾಗಿರಬಹುದು ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು.
ಅದೇನೇ ಇರಲಿ, ಇವತ್ತು ಕನ್ನಡದಲ್ಲಿ ಬರೆಯುವ ಕವಿಯಾಗಲೀ ಕವಯಿತ್ರಿಯಾಗಲೀ ಅಪ್ಪಟ ಕನ್ನಡದ ನುಡಿಗಟ್ಟುಗಳಿಗಾಗಿ ಕೂಡ ವಚನಗಳಿಗೆ ಮರಳಲೇಬೇಕಾಗುತ್ತದೆ. ಕವಯಿತ್ರಿಯರಂತೂ ವಚನಕಾರ್ತಿಯರ ಪ್ರತಿಮೆಗಳಿಗೆ, ವಿಮರ್ಶಾ ಸ್ವಾತಂತ್ರ್ಯ ತರಬಲ್ಲ ನುಡಿಗಟ್ಟುಗಳಿಗೆ ಮತ್ತೆ ಮತ್ತೆ ಮರಳಲೇಬೇಕಾಗುತ್ತದೆ. ಮೂವತ್ತು ವರ್ಷಗಳ ಕೆಳಗೆ, ಕನ್ನಡದ ಆರಂಭದ ಸ್ತ್ರೀವಾದಿ ಚಿಂತಕಿ ವಿಜಯಾದಬ್ಬೆ ‘ಅಕ್ಕನ ಮೇಲೆ ವಚನ ಬರೆಯದ ಕನ್ನಡ ಕವಯಿತ್ರಿಯರೇ ಇಲ್ಲ’ ಎಂದಿದ್ದರು. ನಂತರದ ಕನ್ನಡ ಕವಯಿತ್ರಿಯರು ನೀಲಾಂಬಿಕೆ, ರಾಯಮ್ಮ, ಮುಕ್ತಾಯಕ್ಕ ಮುಂತಾದ ಹಲವರನ್ನು ನಿಕಟವಾಗಿ ಹುಡುಕಿಕೊಂಡಿದ್ದಾರೆ.
ಈ ಕೆಲವು ಮಾತುಗಳನ್ನು ಸಭೆಯಲ್ಲಿ ತುಂಡುತುಂಡಾಗಿ ಹೇಳಲೆತ್ನಿಸಿದೆ. ಇದೇ ಸಭೆಯಲ್ಲಿ ಕವಯಿತ್ರಿ ಭುವನಾ ಹಿರೇಮಠ ನಾನು ಈವರೆಗೆ ಗಮನಿಸದಿದ್ದ ಕದಿರ ರೆಮ್ಮವ್ವೆಯ ದಿಟ್ಟ ವಚನವೊಂದನ್ನು ಓದಿದರು:
ಪತಿವ್ರತೆ ಎಂಬುದು ಹೆಣ್ಣಿಗೆ ಸತಿ ಧರ್ಮ
ಗಂಡನಾದವನಿಗೆ ಇದು ಧರ್ಮವಲ್ಲವೇ
ಹೆಣ್ಣಿಗೆ ಒಂದು ನ್ಯಾಯ, ಗಂಡಿಗೆ ಒಂದು ನ್ಯಾಯವೆ?
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ.
ತರುಣ ಕವಿ ಮಧು ಬಿರಾದಾರ, ‘ಮುಕ್ತಾಯಕ್ಕ ಅಲ್ಲಮನಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ’ ಎಂದಿದ್ದು ನಿಜಕ್ಕೂ ಕುತೂಹಲಕರವಾಗಿತ್ತು. ‘ಬ್ರೆಕ್ಟ್ ಪರಿಣಾಮ’ದ ಕವಿ ರಾಜೇಂದ್ರ ಪ್ರಸಾದ್, ಭುವನಾ ಇಬ್ಬರೂ ಪ್ರಸ್ತಾಪಿಸಿದ ರೆಮ್ಮವ್ವೆಯ ಒಂದು ‘ಡ್ಯಾಶಿಂಗ್’ ವಚನ:
ಎಲ್ಲರ ಹೆಂಡಿರು ತೊಳಸುವರು
ಎನ್ನ ಗಂಡಂಗೆ ತೊಳಸುವುದಿಲ್ಲ
ಎಲ್ಲರ ಗಂಡಂದರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ
ಎಲ್ಲರ ಗಂಡಂದರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ ನಾ ಮೇಲೆ
ಕದಿರ ರೆಮ್ಮೆಯೊಡೆಯ ಗುಮ್ಮೇಶ್ವರಾ.
ಇಂಥ ಸಾವಿರಾರು ತೀಕ್ಷ್ಣ ಪ್ರತಿಮೆಗಳನ್ನು ಸೃಷ್ಟಿಸಿ, ಜಗತ್ತಿನಲ್ಲಿ ಸ್ತ್ರೀವಾದ ಆರಂಭವಾಗುವ ಮುನ್ನವೇ ಕನ್ನಡ ಸ್ತ್ರೀವಾದದ ಕೆಲವಾದರೂ ಬೀಜಗಳನ್ನು ಎಂಟು ನೂರು ವರ್ಷಗಳ ಕೆಳಗೆ ನಮ್ಮ ಕನ್ನಡ ವಚನಕಾರ್ತಿಯರು ಬಿತ್ತಿದ್ದರು ಎಂಬುದನ್ನು ಇಲ್ಲಿ ಮತ್ತೆ ಹೇಳಲು ಹೆಮ್ಮೆಯಾಗುತ್ತದೆ. ಈ ಕಾರಣಕ್ಕಾಗಿಯೇ ವಚನಯುಗವನ್ನು ಮುಗ್ಧವಾಗಿ ‘ನೋಯುವ ಹಲ್ಲು’ ಎನ್ನದೆ, ಹಲ ಬಗೆಯ ಫಲ ಬಿಟ್ಟ ಬೃಹತ್ ವಚನ ಮರ ಎನ್ನಬೇಕು ಎಂದು ಸೂಚಿಸಲೆತ್ನಿಸಿದೆ.
Comments
0 Comments
Add Comment