ಗುಹಾ ರೂಪಕದ ಸುತ್ತ!
by Nataraj Huliyar
ರಷ್ಯಾದ ನೀನಾ ಕುಟಿನಾ ಎಂಬ ಮಹಿಳೆಯ ಗುಹಾವಾಸದ ಬಗ್ಗೆ ‘ಕರಾವಳಿ ಮುಂಜಾವು’ ಎಂಬ ಉತ್ತರಕನ್ನಡದ ಪತ್ರಿಕೆ ಎರಡು ವಾರಗಳ ಕೆಳಗೆ ಪ್ರಕಟಿಸಿದ ಸುದ್ದಿ ಅನಂತರ ಹಲವು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಗಮನಿಸಿರಬಹುದು. ನೀನಾ ಕುಟಿನಾ ಗೋಕರ್ಣದ ಬಳಿಯ ‘ಪಾಂಡವರ ಗುಹೆ’ಯಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ಇದ್ದದ್ದನ್ನು ಓದಿದ ಮಿತ್ರರೊಬ್ಬರು 'ವಿದೇಶೀಯರು ಪ್ರಕೃತಿಯ ಜೊತೆ ಬದುಕುವ ಕಲೆಯನ್ನು ಈಚಿನ ದಶಕಗಳಲ್ಲಿ ಹೆಚ್ಚು ಹೆಚ್ಚು ಕಂಡುಕೊಳ್ಳುತ್ತಿದ್ದಾರೆ’ ಎಂದು ರೊಮ್ಯಾಂಟಿಕ್ಕಾಗಿ ಮೆಚ್ಚತೊಡಗಿದ್ದರು!
ರೂಪಕಗಳ ವಿದ್ಯಾರ್ಥಿಯಾದ ನನಗೆ ನೀನಾ ಇದ್ದ ಗುಹೆ ಹಲವು ಅರ್ಥಗಳನ್ನು ಹೊರಡಿಸಿದ್ದು ಸಹಜವಾಗಿತ್ತು. ಆಕೆ ಇದ್ದ ಗುಹೆಯಂತೆ ಆಕೆಯ ಜೀವನ ಕೂಡ-ಆಫ್‌ಕೋರ್ಸ್, ಎಲ್ಲರ ಜೀವನದ ಹಾಗೇ!- ನಿಗೂಢವಾಗಿರುವಂತಿತ್ತು. ಹದಿನೈದು ವರ್ಷದ ಕೆಳಗೆ ರಷ್ಯಾ ಬಿಟ್ಟ ನೀನಾ ಹಲವು ದೇಶಗಳನ್ನು ಸುತ್ತಿದ್ದಾಳೆ. ಆಕೆಯ ಒಬ್ಬ ಮಗ ರಷ್ಯಾದಲ್ಲಿದ್ದಾನೆ. ಮತ್ತೊಬ್ಬ ಮಗ ಗೋವಾದಲ್ಲಿ ಅಪಘಾತದಲ್ಲಿ ತೀರಿಕೊಂಡ. ಈಕೆಯ ಗುಹಾವಾಸದ ಸುದ್ದಿ ಬಿತ್ತರಗೊಂಡ ಮೇಲೆ ಆಕೆಯ ಸಂಗಾತಿ ಇಸ್ರೇಲಿ ಬಿಸಿನೆಸ್‌ಮನ್ ಡ್ರೋರ್ ಗೋಲ್ಡ್‌ಸ್ಟೈನ್ ಟೆಲಿವಿಶನ್ ಚಾನಲ್ಲೊಂದರಲ್ಲಿ ಮಾತಾಡಿದ.
ಡ್ರೋರ್ ಎಂಟು ವರ್ಷಗಳ ಕೆಳಗೆ ಗೋವಾದಲ್ಲಿ ನೀನಾಳನ್ನು ಭೇಟಿಯಾದ. ನೀನಾ-ಡ್ರೋರ್ ಪ್ರೀತಿಸಿದರು; ಜೊತೆಯಲ್ಲಿದ್ದರು. ನೀನಾಳ ಇಬ್ಬರು ಹೆಣ್ಣುಮಕ್ಕಳ ತಂದೆ ಡ್ರೋರ್. ಕೆಲ ವರ್ಷ ಇಂಡಿಯಾದಲ್ಲೂ, ಉಕ್ರೇನ್‌ನಲ್ಲೂ ಇದ್ದ ಡ್ರೋರ್, ನೀನಾ, ಹೆಣ್ಣುಮಕ್ಕಳು ಮತ್ತೆ ಗೋವಾಕ್ಕೆ ಬಂದಿದ್ದರು. ‘ಕೆಲವು ತಿಂಗಳ ಕೆಳಗೆ ಗೋವಾದಲ್ಲಿ ನನ್ನ ಜೊತೆಗಿದ್ದ ನೀನಾ ಹೇಳದೆ ಕೇಳದೆ ಹೆಣ್ಣುಮಕ್ಕಳನ್ನು ಕರೆದುಕೊಂಡು ಗೋವಾದಿಂದ ಕಾಣೆಯಾದಳು’ ಎಂದು ಡ್ರೋರ್ ಪೊಲೀಸ್ ಕಂಪ್ಲೇಂಟ್ ಕೊಟ್ಟ. ನಂತರ ಅವರು ಗೋಕರ್ಣದಲ್ಲಿರುವುದನ್ನು ಕಂಡು ಅಲ್ಲಿಗೆ ಹೋದ.
‘ನಾನು ಮಕ್ಕಳ ಜೊತೆ ಕಾಲ ಕಳೆಯಲು ನೀನಾ ಬಿಡಲಿಲ್ಲ, ಒರಟಾಗಿ ನಡೆದುಕೊಂಡಳು’ ಎನ್ನುತ್ತಾನೆ ಡ್ರೋರ್. ತಾಯಿ, ಮಕ್ಕಳ ಜೀವನ ನಿರ್ವಹಣೆಗೆ ಸಾಕಷ್ಟು ಹಣವನ್ನೂ ಕೊಡುತ್ತಿದ್ದ ಡ್ರೋರ್, ಮುಖ್ಯವಾಗಿ ತನ್ನ ಹೆಣ್ಣು ಮಕ್ಕಳಿಗಾಗಿ ಹಪಹಪಿಸುತ್ತಿರುವಂತಿದೆ. ಆ ಹೆಣ್ಣುಮಕ್ಕಳು ರಷ್ಯಾಕ್ಕೆ ಹೋಗದಂತೆ ರಕ್ಷಿಸುವುದು ಡ್ರೋರ್‌ನ ಮೊದಲ ಆದ್ಯತೆ. ಇತ್ತ ನೀನಾ ತಾನು ಪ್ರಕೃತಿಯ ಮಡಿಲಿನಲ್ಲಿ ಇರಲು ಗುಹೆಗೆ ಹೋಗಿದ್ದೆ; ಪ್ರಕೃತಿಯ ಜೊತೆಗಿರುವುದು ಮನುಷ್ಯರ ಜೊತೆಗೆ ಇರುವುದಕ್ಕಿಂತ ಕ್ಷೇಮ ಎನ್ನುತ್ತಿದ್ದಾಳೆ. ಆಕೆ ಡ್ರೋರ್‌ನಿಂದ ತಪ್ಪಿಸಿಕೊಳ್ಳಲು ಗುಹೆ ಹಿಡಿದಳೋ, ಪಾಸ್‌ಪೋರ್ಟ್, ವೀಸಾಗಳ ಸಮಸ್ಯೆಯಿಂದ ಗುಹೆ ಸೇರಿಕೊಂಡಳೋ… ಎಲ್ಲವೂ ಗುಹೆಯಂತೆಯೇ ನಿಗೂಢ!
ಇದೆಲ್ಲದರ ಹಿಂದಿನ ಸತ್ಯ ಏನಾದರೂ ಇರಲಿ, ನೀನಾಳ ಗುಹೆ ನನ್ನನ್ನು ಏಕಾಏಕಿ ಫಾಸ್ಟರ್‌ನ ’ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಯ ಮರಬಾರ್ ಗುಹೆಗಳಿಗೆ ಕರೆದೊಯ್ದಿತು; ಹಲವಾರು ಗಂಟೆಗಳ ಕಾಲ ಮತ್ತೆ ಆ ಕಾದಂಬರಿಯ ಘಟನಾವಳಿಗಳಲ್ಲಿ ಮುಳುಗೇಳುವಂಥ ಆಕಸ್ಮಿಕ ಆನಂದ ಸೃಷ್ಟಿಸಿತು.
ಪ್ರಕೃತಿಯೇ ಸೃಷ್ಟಿಸಿದ ಖಾಸಗಿ ಮನೆಯಂತಿರುವ ಗುಹೆಯ ಬಗ್ಗೆ ಮಾನವವ್ಯಾಮೋಹ ಇವತ್ತಿನದಲ್ಲ. ಬುದ್ಧನ ಹಲವು ಅನುಯಾಯಿಗಳಿಗೆ ಗುಹೆಗಳು ಮೂಲತಃ ಧ್ಯಾನದ, ಕಲಿಕೆಯ ಕೇಂದ್ರಗಳಾಗಿದ್ದವು. ನಂತರ ಬೋಧಿಸತ್ವನ ಪ್ರತಿಮೆ ತೆಗೆದು, ಶಿವಲಿಂಗ ಪ್ರತಿಷ್ಠಾಪಿಸಿದ ಗುಹೆಗಳೂ ಇವೆ. ಗುಹಾ ಸಂಕೇತ, ಗುಹಾ ರೂಪಕಗಳ ಸುತ್ತ ಸುತ್ತುವ ಮನಸ್ಸು ಕೊನೆಗೆ ಗುಹೇಶ್ವರನನ್ನು ತಲುಪಲೇಬೇಕಲ್ಲ! ‘ಗೊಗ್ಗೇಶ್ವರ’ ಎಂಬುದೇ ಅಲ್ಲಮಪ್ರಭುವಿನ ಅಂಕಿತ ನಾಮ, ಇಷ್ಟದೈವ ಎಂದು ಹಲವರು ವಾದ ಮಾಡಿದರೂ, ‘ಗುಹೇಶ್ವರಾ’ ಎಂಬ ಹೆಸರಿನ ಸಾಂಕೇತಿಕತೆ; ಅಲ್ಲಮನ ವಚನಗಳು ಅರಸುತ್ತಿರುವ ನಿಗೂಢ ಸತ್ಯಗಳಿಗೂ ’ಗುಹೇಶ್ವರ’ ರೂಪಕಕ್ಕೂ ಇರುವ ಸಂಬಂಧ ಇವನ್ನೆಲ್ಲ ನೆನೆದು ಮನಸ್ಸು ’ಗುಹೇಶ್ವರ’ನನ್ನೇ ಒಪ್ಪತೊಡಗುತ್ತದೆ; ಮತ್ತೆ ‘ಎ ಪ್ಯಾಸೇಜ್ ಟು ಇಂಡಿಯಾ’ದ ಮರಬಾರ್ ಗುಹೆಗಳಿಗೆ ಮರಳುತ್ತದೆ…
ಫಾಸ್ಟರ್ ಕಾದಂಬರಿ ಗುಹೆಗಳನ್ನು ಪಶ್ಚಿಮ ಅರಿಯಲಾಗದ ಇಂಡಿಯಾದ ನಿಗೂಢ ಮುಖಗಳ ಸಂಕೇತವನ್ನಾಗಿಸುತ್ತದೆ. ಗುಹೆಗಳನ್ನು ಪರಸ್ಪರ ಅರ್ಥವಾಗದ ದೇಶಗಳು, ಸಂಸ್ಕೃತಿಗಳು; ಅರಿಯಲಾಗದ ಘಟನೆಗಳು, ವರ್ತನೆಗಳು, ಮಾತುಗಳು, ಮನಸ್ಸುಗಳ ರೂಪಕವನ್ನಾಗಿಯೂ ನೋಡುತ್ತದೆ. ಮರಬಾರ್ ಗುಹೆಗಳ ಬಣ್ಣನೆಯೊಂದಿಗೇ ಶುರುವಾಗುವ ಕಾದಂಬರಿಯ ಒಂದು ಘಟ್ಟದಲ್ಲಿ ಇಂಡಿಯನ್ ಡಾಕ್ಟರ್ ಅಝೀಝ್ ಶ್ರೀಮತಿ ಮೂರ್ ಹಾಗೂ ಅಡೆಲಾ ಕೊಸ್ಟೆಡ್ ಎಂಬ ಇಂಗ್ಲಿಷ್ ಮಹಿಳೆಯರಿಗೆ ಮರಬಾರ್ ಗುಹೆಗಳನ್ನು ತೋರಿಸಲು ಹೋಗುತ್ತಾನೆ. ಶ್ರೀಮತಿ ಮೂರ್ ದಣಿವಿನಿಂದಾಗಿ ಬೆಟ್ಟ ಹತ್ತಲಾಗದೆ ಕೆಳಗೇ ಉಳಿಯುತ್ತಾಳೆ. ಡಾಕ್ಟರ್ ಅಝೀಝ್, ಟೂರ್ ಗೈಡ್ ಹಾಗೂ ಅಡೆಲಾ ಬೆಟ್ಟ ಹತ್ತಿ ಮುಂದೆ ಸಾಗುತ್ತಾರೆ. ಒಂದು ಹಂತದಲ್ಲಿ ಮೂವರೂ ಬೇರೆಯಾಗುತ್ತಾರೆ. ಅಡೆಲಾ ಒಬ್ಬಳೇ ಗುಹೆಯೊಳಗೆ ಕಾಣೆಯಾಗುತ್ತಾಳೆ. ನಂತರ ಅಡೆಲಾ ಗುಹೆಯಲ್ಲಿ ಆಕ್ರಮಣಕ್ಕೆ ಒಳಗಾದಳೆಂಬ ಸುದ್ದಿ ಬರುತ್ತದೆ.
ಡಾಕ್ಟರ್ ಅಝೀಜ್ ಮೇಲೆ ಆಕ್ರಮಣದ ಆಪಾದನೆ ಬಂದು, ಬಂಧನಕ್ಕೊಳಗಾಗುತ್ತಾನೆ. ಆದರೆ ಅಡೆಲಾಗೆ ಯಾವ ರೀತಿಯ ಆಕ್ರಮಣವಾಯಿತು, ಯಾರಿಂದ ಆಯಿತು ಎಂಬ ಬಗ್ಗೆ ಯಾವುದೂ ಸ್ಪಷ್ಟವಿಲ್ಲ. ಅಡೆಲಾ ಕೊನೆಗೆ ಕೋರ್ಟಿನ ಸಾಕ್ಷಿಕಟ್ಟೆಯಲ್ಲಿ ನಿಂತಾಗ, ‘ಅಝೀಝ್ ನೆವರ್…’ ಎಂಬ ಮಾತು ಅವಳ ಒಳಗಿಂದ ಬರುತ್ತದೆ. ದೂರನ್ನು ವಾಪಸ್ ಪಡೆಯುತ್ತಿದ್ದೇನೆ ಎನ್ನುತ್ತಾಳೆ. ಅಝೀಝ್ ಆಪಾದನೆಯಿಂದ ಮುಕ್ತನಾಗುತ್ತಾನೆ. ಗುಹೆಯ ಕತ್ತಲಲ್ಲಿ ಏನಾಯಿತು ಎಂಬುದು ಕೊನೆಗೂ ಯಾರಿಗೂ ತಿಳಿಯುವುದಿಲ್ಲ. ಇಂಡಿಯಾದಲ್ಲಿ ಎಲ್ಲವೂ ಹೀಗೆಯೇ; ಇಲ್ಲಿ ಎಲ್ಲವೂ ನಿಗೂಢವಾಗಿ ಉಳಿದುಬಿಡುತ್ತದೆ ಎಂದು ಕೆಲವು ಪಶ್ಚಿಮದ ಲೇಖಕರಿಗೆ ಅನ್ನಿಸುವುದನ್ನು ಈ ಕಾದಂಬರಿಯೂ ಮರುದನಿಸುತ್ತದೆ.
ಫಾಸ್ಟರ್ ಕಾದಂಬರಿಯ ಈ ಭಾಗದ ನಿಗೂಢತೆಯನ್ನು ಕೆಲವರು ಟೀಕಿಸಿದ್ದಾರೆ. ಲೇಖಕನೊಬ್ಬ ಫಾಸ್ಟರ್‌ಗೆ ಪತ್ರ ಬರೆದು, ‘ಗುಹೆಯಲ್ಲಿ ನಿಜಕ್ಕೂ ಏನಾಯಿತು ಎಂಬ ಬಗ್ಗೆ ಕಾದಂಬರಿಕಾರನಾದ ನೀನು ಇನ್ನಷ್ಟು ಸ್ಪಷ್ಟತೆ ಕೊಡಬೇಕಾಗಿತ್ತು’ ಎನ್ನುತ್ತಾನೆ. ಅದಕ್ಕೆ ಫಾಸ್ಟರ್ ಕೊಟ್ಟ ಉತ್ತರ: ‘ಗುಹೆಯಲ್ಲಿ ಆದ ಕೃತ್ಯ ನಡೆದದ್ದು ಮನುಷ್ಯನಿಂದಲೋ, ಮಾನವಾತೀತ ಶಕ್ತಿಯಿಂದಲೋ ಅಥವಾ ಭ್ರಮೆಯೋ ಎಂಬುದನ್ನು ಕುರಿತಂತೆ ನನ್ನ ‘ಲೇಖಕಮನಸ್ಸು’ ಮಸಕುಮಸಕಾಯಿತು. ಜೀವನದ ಅನೇಕ ಅಂಶಗಳಂತೆ ಇದು ಕೂಡ ಹಾಗೇ ಮಸಕುಮಸುಕಾಗಿರಲಿ, ಅನಿಶ್ಚಿತವಾಗಿರಲಿ ಎಂಬುದು ನನ್ನ ಇಚ್ಛೆಯೂ ಹೌದು. ನಾನು ಮಾಡಿದ್ದು ಸರಿ ಅನ್ನಿಸುತ್ತೆ. ಯಾಕೆಂದರೆ, ನನ್ನ ಕಾದಂಬರಿಯ ವಸ್ತು ಇಂಡಿಯಾ. ಇದು ಬೇರೆ ಇನ್ಯಾವುದೋ ದೇಶವಾಗಿದ್ದರೆ ನಾನು ಹೀಗೆ ಬರೆಯುತ್ತಿರಲಿಲ್ಲವೇನೋ.’
‘ಸರಿ! ಗುಹೆಯಲ್ಲೇನಾಯಿತು, ಹೇಳಿ?’ ಎಂಬ ಪ್ರಶ್ನೆಗೆ ಫಾಸ್ಟರ್, ‘ಐ ಡೋಟ್ ನೋ’ ಎಂದ. ‘ಇಂಡಿಯಾ ಎನ್ನುವುದು ಖಚಿತವಾಗಿ ವಿವರಿಸಲಾಗದ ಗೋಜಲು-ಗೊಂದಲ ಎಂಬುದನ್ನು ಅಡೆಲಾಗೆ ಗುಹೆಯಲ್ಲಿ ಆದ ಅನುಭವದ ಮೂಲಕ ತೋರಿಸಲೆತ್ನಿಸಿದ್ದೇನೆ’ ಎಂದು ಕೂಡ ಹೇಳಿದ. ಗುಹೆಗಳನ್ನು ಅರಿಯುವುದು ಸುಲಭವಲ್ಲ;ಅದರಲ್ಲೂ ಮಾನವಲೋಕದ ಗುಹೆಗಳನ್ನು… ಎಂಬ ಗಾಢ ಸತ್ಯ ಈ ಕಾದಂಬರಿ ಓದುತ್ತಾ ಮತ್ತೆ ಹೊಳೆಯತೊಡಗುತ್ತದೆ.
ಈಚಿನ ದಶಕಗಳಲ್ಲಿ ಇಂಡಿಯಾದ ಗುಹೆಗಳನ್ನು ಹುಡುಕಿಕೊಂಡು ಬರುವ, ಅಲ್ಲಿ ಕೆಲ ಕಾಲ ಇದ್ದು ಹೋಗುವ ವಿದೇಶಿಯರು ಈ ಗುಹೆಗಳನ್ನು ರಮ್ಯವಾಗಿ ನೋಡಿ ನಿಗೂಢೀಕರಿಸುತ್ತಲೇ ಇರುವುದು ಎಲ್ಲರಿಗೂ ಗೊತ್ತಿದೆ. ಗೋಕರ್ಣದ ಸುತ್ತಣ ಗುಹೆಗಳಲ್ಲಿ ಕೆಲವು ದಶಕಗಳಿಂದ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಪಶ್ಚಿಮದ ಹಿಪ್ಪಿಗಳ ಅಥವಾ ‘ಆಧ್ಯಾತ್ಮಿಕ ಅನ್ವೇಷಕರ’ ಗುಹಾವಾಸ ಮೇಲುನೋಟಕ್ಕೆ ಕಾಣುವಷ್ಟು ಸರಳವಲ್ಲ! ಇವರಲ್ಲಿ ನಶಾಜೀವಿಗಳೆಷ್ಟೋ? ಇಂಡಿಯಾದಲ್ಲಿರುವ ಸೋಕಾಲ್ಡ್ ಆಧ್ಯಾತ್ಮಜೀವಿಗಳಂತೆ ಇವರಲ್ಲೂ ತಾವು ‘ಆಧ್ಯಾತ್ಮಜೀವಿ’ಗಳೆಂದು ಭ್ರಮಿಸಿರುವವರೆಷ್ಟೋ? ಸುಮ್ಮನೆ ಅಲೆಯುವ ಅಬ್ಬೇಪಾರಿಗಳೆಷ್ಟೋ? ಯಾರ ಹಂಗೂ ಇಲ್ಲದೆ ತಮ್ಮ ಪಾಡಿಗೆ ತಾವು ಇರಲು ಬಯಸುವವರೆಷ್ಟೋ? ಈ ಗುಹಾಂತರಂಗ ಯಾರಿಗೆ ಗೊತ್ತು!
ಇದರಿಂದ ಯಾರಿಗೂ ತೊಂದರೆಯಿಲ್ಲದಿದ್ದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ, ಆ ಮಾತು ಬೇರೆ. ಆದರೆ ಆಧುನಿಕ ದೃಷ್ಟಿಕೋನದಿಂದ ನೋಡಿದರೆ, ಈ ಥರದ ‘ಗುಹಾಆಧ್ಯಾತ್ಮ’ ಒಂದು ಬಗೆಯ ಬೋರ್‌ಡಂನಿಂದ; ಶೂನ್ಯಭಾವದಿಂದ; ಮನುಷ್ಯರ ಸಹವಾಸ ಹುಟ್ಟಿಸಿದ ಸುಸ್ತಿನಿಂದ; ಏಕಾಂತದ ಆಸೆಯಿಂದ; ಅಥವಾ ಪಶ್ಚಿಮದಲ್ಲಿ ತಿಂದು ಕಟ್ಟರೆಯಾದ ಅತಿಯಾದ ಸುಖದಿಂದ…ಹೀಗೆ ಹಲವು ಹಿನ್ನೆಲೆಗಳ ಖಾಲಿತನದಿಂದಲೂ ಹುಟ್ಟಿರಬಹುದು ಎನ್ನಿಸುತ್ತದೆ. ಭಾರತದಲ್ಲಿ ಇವತ್ತಿಗೂ ಬೆಟ್ಟಗುಡ್ಡಗಳ ನಡುವಣ ಒಂಟಿ ಮನೆಗಳಲ್ಲಿ ಬದುಕುವ; ನಿತ್ಯ ಹೊಲ, ತೋಟ, ಗದ್ದೆಗಳಲ್ಲಿ ದುಡಿಯುತ್ತಾ, ‘ಪ್ರಕೃತಿಯ ಮಡಿಲಲ್ಲಿ ಬದುಕಿದ್ದೇವೆ’ ಎಂದು ಎಂದೂ ಘೋಷಿಸದೆ ಕೆಲಸ ಮಾಡುವ ಕೋಟ್ಯಾಂತರ ಜನರನ್ನು ನೋಡುತ್ತಲೇ ಇರುತ್ತೇವೆ. ಇವರನ್ನು ಕಂಡವರಿಗೆ ’ಪ್ರಕೃತಿಯ ಜೊತೆಗೆ ಬದುಕಲು ಬಂದಿದ್ದೇವೆ’ ಎನ್ನುವ ವಿದೇಶೀಯರ ಮಾತು ರೊಮ್ಯಾಂಟಿಕ್ ಅನ್ನಿಸದಿರದು!
ಈ ಬರಹದ ಶುರುವಿನಲ್ಲಿ ಹೇಳಿದ ರಷ್ಯನ್ ಮಹಿಳೆ ನಿಜಕ್ಕೂ ನೊಂದು ಕೂಡ ಗುಹೆಯಂಥ ಜಾಗ ಸೇರಿರಬಹುದು. ಫಾಸ್ಟರ್ ಕಾದಂಬರಿಯ ಅಡೆಲಾಳ ಗುಹಾನುಭವದ ಸಂಕೇತದ ನಿಗೂಢತೆ ನೀನಾ ಕತೆಗೂ ಅನ್ವಯಿಸುವಂತಿದೆ. ಆದರೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ಕಾಲದಲ್ಲಿ ತನ್ನ ಇಬ್ಬರು ಮುಗ್ಧ ಹೆಣ್ಣುಮಕ್ಕಳನ್ನು ಭಾರತ ರಷ್ಯಾಕ್ಕೆ ಕಳಿಸದಿರಲಿ ಎಂಬ ಡ್ರೋರ್ ತಲ್ಲಣ ಮನ ಕರಗಿಸುತ್ತದೆ. ಹಾಗೆಯೇ ಮರಬಾರ್ ಗುಹೆಗಳ ಪದರುಗಳಂತೆ ಕತೆಯ ಮೇಲೆ ಕತೆ ಹೇಳುವಂತೆ ಕಾಣುವ ನೀನಾಳ ವಿಚಿತ್ರ ನಿಗೂಢ ಸ್ಥಿತಿ ಕೂಡ ಮರುಕ ಹುಟ್ಟಿಸುತ್ತದೆ.
Comments
16 Comments
| ಮಂಜುನಾಥ್ ಸಿ ನೆಟ್ಕಲ್
ಗುಹೆಯ ಒಳಗಿನ ನಿಗೂಢ ಲೋಕ...ಖುಲ್ ಜಾ ಸಿಂ. ಸಿಂ. ಮಂತ್ರ ಮರೆತು ಗುಹೆಯೊಳಗೆ ಸಿಲುಕಿ ಆತಂಕಿತನಾಗಿ ಅಂತ್ಯವಾದ ಅಲಿಬಾಬಾನ ಕತೆ ನೆನಪಿಸಿತು. ಮನುಷ್ಯನ ಅಂತಿಮ ಪಯಣ ಭೂಮಿಯ ಗುಹೆಯೊಳಗೆ ಸೇರುವುದೂ ಇದೆ. ಗುಹಾಂತರ ಹೋಟೆಲ್ ಗಳೂ ಸಹ ಈಗ ಟ್ರೆಂಡ್ ಆಗಿದೆ. ಮನುಷ್ಯನ ವಿಕಾಸದ ಆರಂಭ ಸಹ ಗುಹೆಯಿಂದಲೇ ಆಗಿದ್ದು ಸಹ ಕಾರಣವಿರಬಹುದು. ಆದಿಮ ನೆನಪುಗಳು ಈಗಲೂ ಪ್ರವಹಿಸುತ್ತಿರಬಹುದೇ ಸರ್
| ಅನಿಲ್ ಗುನ್ನಾಪೂರ
ವಿಶೇಷ ಬರಹ ಸರ್. ತುಂಬಾ ಕಾಡಿತು.
| kaavya
ಬಹು ಆಯಾಮಗಳ ವಿಶ್ಲೇಷಣೆ ಚಿಂತನೆಗೆ ಹಚ್ಚುತ್ತದೆ.
| ಎಸ್. ಆರ್.
ಮಾನವನ ಬದುಕು ಮತ್ತು ಮನಸ್ಸು ಖಚಿತವಾಗಿ ವಿವರಿಸಿಕೊಳ್ಳಲಾಗದ ಗೊಂದಲ-ಗೋಜಲುಗಳ ಗುಹೆ. ಇದನ್ನು ಅರಿಯುವುದೆಂದರೆ ನಿಗೂಢಲೋಕದಲ್ಲಿ ಕಳೆದು ಹೋದಂತೆ.
| Vikhar Ahmed
Delighted you wrote about A Passage to India using the news story about the Russian woman. A PASSAGE TO INDIA was my favourite novel and the movie for a long time
| sanganagouda
"ಗುಹೆ" ಕುರಿತು ಸರ್ಪಭೂಷಣ ಶಿವಯೋಗಿ ಒಂದು ತತ್ವಪದ ಇದೆ...ಸರ್, ಕೆಲ ಅಲ್ಲಮನ ಅನುಯಾಯಿ ತತ್ವಪದಕಾರರ ಗುಹೆ ಅನ್ನು ರೂಪಕವಾಗಿ ಬಳಸಿಕೊಂಡುದ್ದು..... ಗುಹೆ ಹೊಕ್ಕವರನ್ನು ಮಾತನಾಡಿಸಲು ಹೋಗುವುದೆಂದರೆ. ರಾತ್ರಿ ಹೊತ್ತಲ್ಲಿ (ಕತ್ತಲಿನಲ್ಲಿ) ಗುಬ್ಬಿ ಗೂಡಿಗೆ ಟಾರ್ಚ್ ಹಾಕಿದಂತೆ..
| Nataraj Huliyar Replies
Thank you all. Nice that Manju Kargal thought of Alibaba and Sanganagowda reminded me Of Sarpabhushana Shivayogi's metaphor.
| ದೇವಿಂದ್ರಪ್ಪ ಬಿ.ಕೆ.
ಇತ್ತೀಚೆಗೆ ಸುದ್ದಿಯಾದ ರಷ್ಯಾ ಮಹಿಳೆಯ ಗುಹಾ ವಾಸ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು. ಮನುಷ್ಯ ತನ್ನ ಖುಷಿಗಾಗಿ ಇತ್ತೀಚೆಗೆ ಇಂತಹ ಗುಹೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾನೆ. ಆದರೆ ಇಲ್ಲಿ ನೀನಾ ಕುಟಿನಾ ಮಹಿಳೆಯ ಗುಹಾ ವಾಸ ನಿಗೂಢವಾಗಿದೆ. ಪ್ರಕೃತಿ ಮತ್ತು ಮನುಷ್ಯ ಜೊತೆಗಿನ ಸಂಬಂಧಕ್ಕಿಂತ ಗುಹಾ ವಾಸವೇ ಕ್ಷೇಮ ಎನ್ನುವ ಆಕೆಯ ಮಾತು ಸತ್ಯವಾದದ್ದು. ವಚನ ಚಳವಳಿ ಚದುರಿದ ನಂತರ ಅನೇಕ ವಚನಕಾರರು, ವಚನಕಾರ್ತಿಯರು ಬೇರೆ ಬೇರೆ ಕಡೆ ಹೋದರು. ಅದರಲ್ಲಿ ಅಕ್ಕಮಹಾದೇವಿ, ಚೆನ್ನಬಸವಣ್ಣ ಗುಹೆ ಸೇರಿದ ಉಲ್ಲೇಖ ಮತ್ತು ಕುರುಹುಗಳು ಇಂದಿಗೂ ಇವೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಕ್ಕಮಹಾದೇವಿ ಗುಹೆ ಎಂತಲೇ ಇರುವುದು ಗಮನಾರ್ಹ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಇಂತಹ ನಿಗೂಢ ಗುಹೆಗಳಲ್ಲಿ ಚಿತ್ರ ಹಿಂಸೆ ನೀಡಿದ್ದು ನೋಡಬಹುದು. ಹಿಟ್ಲರ್, ಗಡಾಫಿ ಮುಂತಾದವರು. ಸೃಜನಶೀಲತೆ ತನ್ನೊಳಗಿನ ಅಂತರಂಗದ ಹುಡುಕಾಟಕ್ಕೆ ಗುಹೆಯನ್ನು ಆರಿಸಿಕೊಂಡರೆ, ರಾಜಕಾರಣ ತನ್ನನ್ನು ಪ್ರಶ್ನಿಸಿದವರನ್ನು ಹಣಿಯಲು ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇಂದಿಗೂ ಭೂಗತ ಲೋಕದ ಅನೇಕರ ಕುರಿತ ಬರಹಗಳನ್ನು ಗಮನಿಸುವಾಗ ಗುಹೆ ನಿಜಕ್ಕೂ ನಿಗೂಢವಾಗಿಯೇ ಉಳಿದಿದೆ.
| ಗುರು ಜಗಳೂರು
ಒಂದು ಇತ್ತೀಚಿನ ಗುಹೆಯ ಘಟನೆ ನಮಗೆ ಎ ಪ್ಯಾಸೇಜ್ ಟು ಇಂಡಿಯಾಗೆ ಕರೆದೊಯ್ಯತ್ತದೆ.ಅದೇ ಈ ಲೇಖನದ ಮಜಾ. ಸೊಗಸಾದ ಬರಹ ,ಧನ್ಯವಾದಗಳು ಸರ್.
| ಡಾ. ನಿರಂಜನ ಮೂರ್ತಿ ಬಿ ಎಂ
ಗುಹಾ ರೂಪಕದ ಸುತ್ತ ಸುತ್ತಿಸುವುದಲ್ಲದೆ, ಗುಹೆಯೊಳಗಿನ ನಿಗೂಢತೆ ಬಗೆಯಲೆತ್ನಿಸುವ ಈ ಬರಹ ತುಂಬಾ ವಿಶೇಷವಾಗಿದೆ. ರಷ್ಯಾದ ನೀನಾ ಕುಟಿನಾ, ಫಾಸ್ಟರ್ ಕಾದಂಬರಿಯ ಅಡೆಲಾ, ಶೂನ್ಯ ಸಿಂಹಾಸನಾಧ್ಯಕ್ಷ ಅಲ್ಲಮ ಪ್ರಭು, ಪಶ್ಚಿಮದ ಆಧ್ಯಾತ್ಮ ಅನ್ವೇಷಕ ಹಿಪ್ಪಿಗಳು, ಮತ್ತು ಇಂಡಿಯಾದ ಸೋಗಿನ ಆಧ್ಯಾತ್ಮ ಜೀವಿಗಳನ್ನೆಲ್ಲಾ ತೋರಿಸಿ ಜಾಲಾಡಿದರೂ, ಬಯಲಾಗದ ನಿಗೂಢ ಗುಹೆಯ ರೂಪಕದ ಓದು ಮಾತ್ರ ವಿಶೇಷ ತಿಳುವಳಿಕೆ ನೀಡಿತು. ಹುಳಿಯಾರರಿಗೆ ನಮನಗಳು.
| ಸದಾನಂದ ಆರ್
ರಷಿಯನ್ ಮಹಿಳೆ ತನ್ನ ಕಾನೂನು ಸ್ಥಿತಿಯ ಕಾರಣದಿಂದ ಗುಹೆಯನ್ನು ಹೊಕ್ಕಿರುವ ಸಾಧ್ಯತೆಗಳು ಹೆಚ್ಚಿರುವುದಾದರೂ, ಆಕೆ ಗುಹೆಯನ್ನೇ ಆರಿಸಿಕೊಂಡ ಬಗೆಯನ್ನು ನೀವು ಬರಹದಲ್ಲಿ ಚಿತ್ರಿಸಿದ ರೀತಿ ಆಸಕ್ತಿಕರವಾಗಿದೆ. ನಿಮ್ಮ ಈ ಬರಹವನ್ನು ಓದುತ್ತಾ ಹೋದಂತೆ, ವರ್ಡ್ಸ್‌ವರ್ಥ್ ಕವಿಯ The World is Too Much With Us ಪದ್ಯದ ನೆನಪಾಯಿತು. ಪಶ್ಚಿಮ ಆರಂಭದಿಂದಲೂ ಸಂತೋಷದ ಹಿಂದೆ ಬಿದ್ದಿದೆ. ಇದು ವಸ್ತು ಸಂಸ್ಕೃತಿಯೇ ಅಂತಿಮ ಎನ್ನುವ ನಿಲುವಿನ ಫಲವಿದು. ವರ್ಡ್ಸ್‌ವರ್ಥ್ ಕವಿ ತಾನೊಬ್ಬ ಪೇಗನ್ ಆಗಿ ಸಮುದ್ರದ ಅಲೆಯ ದೇವತೆಯನ್ನು ಮಾರುತದ ದೇವರ ಕಹಳೆಯ ದನಿಯನ್ನು ಕೇಳಲು ಇಚ್ಛಿಸುವೆ ಎನ್ನುವ ಆಸೆಯನ್ನು ವ್ಯಕ್ತ ಪಡಿಸುತ್ತಾನೆ. ಹಾಗೆ ನಿಮ್ಮ ಬರಹ ಓದುತ್ತಾ ಇನ್ನೊಂದು ವಿಷಯ ನೆನಪಾಯಿತು: ಆಧುನಿಕ ಪಶ್ಚಿಮ ಸಂತೋಷದ ಹಿಂದೆ ಬಿದ್ದಿದೆ. ಸಂತೋಷ ಎನ್ನುವುದು ಕ್ಷಣಿಕ ಮಾನಸಿಕ ಸ್ಥಿತಿ. ಇದನ್ನು ಸದಾ ಕಾಲ ಪಡೆಯುವುದು ಅಸಾಧ್ಯವಾದ ವಿಚಾರ. ಆದರೆ ಗುರಿಯನ್ನು ತಲುಪಿದ ಇಲ್ಲವೇ ಅಂದು ಕೊಂಡಂತೆ ಬುದುಕಿದ ತೃಪ್ತಿಯನ್ನು ಇಲ್ಲವೇ ಸಮಾಧಾನವನ್ನು ಹೊಂದುವುದು ಕ್ಷಣಿಕವಲ್ಲದ ಸ್ಥಿತಿ. ಹಾಗಾಗಿ Happinessಗಿಂತ Sense of Satisfaction ಹೆಚ್ಚು ಸ್ಥಿರವಾದ ವಿಚಾರ - ನೆಮ್ಮದಿ ತರುವ ವಿಷಯ. ಯಾವುದೇ ಜೀವಿ ತನ್ನ ನಿತ್ಯದ ಬದುಕಿಗೆ ಹೋರಾಡಲೇ ಬೇಕಾಗುತ್ತದೆ - ಎಲ್ಲ ಜೀವಿಗಳು ಬದುಕುವ ಇರಾದೆ ಹೊಂದಿರುವುದರಿಂದ, ಮತ್ತೊಂದು ಜೀವಿಗೆ ಒಂದಲ್ಲಾ ರೀತಿಯಲ್ಲಿ ತೊಂದರೆ ನೀಡುವುದು ಅನಿವಾರ್ಯವಾಗುತ್ತದೆ. ಇಂತಹ ಅಡ್ಡಿಗಳಿಂದ ದೂರವಾಗಿ ಬದುಕುವ ಪ್ರಕ್ರಿಯೆ ಹೋರಾಟವೇ ಆಗುತ್ತದೆ. ಹೋರಾಟ ಎಂದ ಮೇಲೆ ನೋವು-ದುಃಖ ಇದ್ದೇ ಇರುತ್ತದೆ. ಹಾಗಾಗಿ ಕವಿ ಅಡಿಗರು ಹೇಳುವಂತೆ ನಗು ಎನ್ನುವುದು ಅಳುವ ಕಡಲಿನಲ್ಲಿ ತೇಲಿಬರುವ ಹಾಯಿ ದೋಣಿ ಹೆಚ್ಚು ಸೂಕ್ತವಾಗುತ್ತದೆ. ಭಾರತದಲ್ಲಿ ತಮಗೊಂದು ಆಧ್ಯಾತ್ಮಿಕ ನೆಲೆ - ಸೆಲೆ ದೊರೆಯುವುದೆಂದು ಧಾವಿಸುವ ಪಶ್ಚಿಮದವರಿಗೆ ಅದೊಂದು ಗುಹೆ ಅನ್ನು ಹೊಕ್ಕ ಅನುಭವವೇ ಆಗುತ್ತದೆಂದು ನನ್ನ ಗ್ರಹಿಕೆ. ಅಲ್ಪ ಗುರುಗಳು ದೊರೆತರೆ (ಇರುವವರಲ್ಲಿ ಹೆಚ್ಚಿನವರ ಇವರೆ) - ಈ ಗುಹೆಗಳಿಂದ ಬಿಡಿಸಿಕೊಂಡು ಹೊರಬರುವ ಸಾಧ್ಯತೆಯೇ ಇರುವುದಿಲ್ಲ.
| NATARAJ HULIYAR replies
Thank you Sadanand for your excellent addition. This is the beauty of this column-writing. Every week I find at least a dozen serious intellectuals who add to the ideas expressed in the column and make it growing. Thank you all. ’ನೀನು ಬೆಳೆದರೆ ನಾನು ಬೆಳೆವೆ’ (ಕುವೆಂಪು)
| Madhavi
ಇಂಡಿಯಾ ಯಾವಾಗಲೂ ಗೊಂದಲ, ಗೋಜಲಿನ ಗುಹೆಯೇ
| Shamarao
ಒಂದು ಪತ್ರಿಕಾ ವರದಿ ಒಂದು ರೂಪಕದ ಸೃಷ್ಟಿಗೆ ಕಾರಣವಾದ ಸೋಜಿಗ...
| Shamarao
ಒಂದು ಪತ್ರಿಕಾ ವರದಿ ಒಂದು ರೂಪಕದ ಸೃಷ್ಟಿಗೆ ಕಾರಣವಾದ ಸೋಜಿಗ...
| ಸವಿತಾ ನಾಗಭೂಷಣ
ಇತ್ತಿಚೆಗೆ quantum physics ಕುರಿತು ಫೇಸ್‌ಬುಕ್ ನಲ್ಲಿ ಹೆಚ್ಚು ಓದುತ್ತಿರುವೆ, ನೋಡುತ್ತಿರುವೆ. ಅಲ್ಲನ ವಿಜ್ಞಾನಿಗಳು ಕಪ್ಪು ರಂಧ್ರದ ವಿವರಣೆ ಕೊಟ್ಟಾಗೆಲ್ಲ ನನಗೆ ಗುಹೇಶ್ವರ ನೆನಪಾಗುವುದು! ಶೂನ್ಯ, ಗುಹೇಶ್ವರ, ಬ್ಲಾಕ್ ಹೋಲ್ ಎಲ್ಲಾ ಒಂದೇ! ಅದು ನಿಮ್ಮನ್ನು ಎಳೆದುಕೊಳ್ಳುತ್ತದೆ, ಒಮ್ಮೆ ಒಳಗೆ ಹೋದರೆ ಮತ್ತೆ ವಾಪಸು ಬರಲಾರಿರಿ! ನಿಮ್ಮ ಬರಹ ಹೀಗೆ ನನಗೆ ಆಲೋಚಿಸುವಂತೆ ಮಾಡಿತು. ಧನ್ಯವಾದಗಳು
Add Comment