ಶಾಂತವೇರಿ ಡೈರಿ
by Nataraj Huliyar
ಮೈಸೂರಿನ ಡಾ. ವಿಷ್ಣುಮೂರ್ತಿಯವರಿಗೆ ಶಾಂತವೇರಿ ಗೋಪಾಲಗೌಡರ ಆರು ವರ್ಷದ ಡೈರಿಗಳು ಸಿಕ್ಕವು. ಹಿಂದೊಮ್ಮೆ ವಿಷ್ಣುಮೂರ್ತಿ ಪ್ರಕಟಿಸಿದ್ದ ‘ಗೋಪಾಲಗೌಡ ಶಾಂತವೇರಿ: ಅಂತರಂಗ ಬಹಿರಂಗ’ ಪುಸ್ತಕದಲ್ಲಿ ಈ ಡೈರಿಗಳ ಜೊತೆಗೇ ಪತ್ರಗಳು, ಭಾಷಣಗಳು, ಶಾಂತವೇರಿ ಕುರಿತ ನೆನಪುಗಳು, ಪತ್ರಿಕಾ ಹೇಳಿಕೆಗಳು ಇವೆಲ್ಲ ಇದ್ದವು. ಧಾರವಾಡದ ಅನನ್ಯ ಪ್ರಕಾಶನ ಈ ಅಪೂರ್ವ ಚಾರಿತ್ರಿಕ ದಾಖಲೆಗಳನ್ನು ೨೦೨೪ರಲ್ಲಿ ಮತ್ತೆ ಪ್ರಕಟಿಸಿ ಅವನ್ನು ಮರುಜೀವಗೊಳಿಸಿದೆ. ಈ ಪುಸ್ತಕ ನೋಡನೋಡುತ್ತಾ, ನ್ಯಾ಼ಶನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ನನ್ನ ‘ಶಾಂತವೇರಿ ಗೋಪಾಲಗೌಡ’ ಪುಸ್ತಕಕ್ಕಾಗಿ ೨೦೧೭ರಲ್ಲಿ ಮಾಡಿಕೊಂಡ ಗೋಪಾಲಗೌಡರ ಡೈರಿಯಿಂದ ಆಯ್ದ ಟಿಪ್ಪಣಿಗಳು ನೆನಪಾದವು:
೧೯೫೨ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದ ತರುಣ ಶಾಂತವೇರಿ ಗೋಪಾಲಗೌಡರು ೧೯೫೭ರಲ್ಲಿ ಚುನಾವಣೆ ಸೋತರು. ಅನಂತರ ಯಾವ ಆದಾಯವೂ ಇಲ್ಲದೆ, ಬೆಂಗಳೂರಿನಲ್ಲಿ ಇರಲು ಮನೆಯೂ ಇಲ್ಲದೆ ಗೋಪಾಲಗೌಡರು ಹಲ್ಲುಕಚ್ಚಿ ಬದುಕುತ್ತಿದ್ದರು. ಅವರು ದಾಖಲಿಸಿರುವ ೧೯೬೦ರ ವರ್ಷದ ದಿನಚರಿಯ ವಿವರಗಳು: ‘ಸಂಜೆ ಬಾಟಾದಿಂದ ಎರಡು ಮೂರು ರೂಪಾಯಿಗಳನ್ನು ತರಿಸಿಕೊಂಡು ಕಾಲ ಹಾಕಲಾಯಿತು.’ ‘ಮಂಡ್ಯದವರು ಕೊಟ್ಟಿದ್ದ ೪೦ ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು. ಇಂದು ಯಾವ ಹಣವೂ ಬರಲಿಲ್ಲ.’
ಇದರ ಜೊತೆಗೆ, ಗೋಪಾಲಗೌಡರಿಗೆ ಸಣ್ಣ ಪುಟ್ಟ ಸಾಲ ಕೊಟ್ಟವರು ಮರಳಿ ಕೇಳುತ್ತಿದ್ದರು: ‘ಬೆಳಗ್ಗೆ ಶ್ರೀ ಬಸಪ್ಪ ಹಣ ವಸೂಲಿಗಾಗಿ ಬಂದಿದ್ದರು. ನಮ್ಮ ಪರಿಸ್ಥಿತಿ ವಿವರಿಸಿದ ಮೇಲೆ ಅವರೇ ನಮಗೆ ಪಂಜಾಬ್ ಕೆಫೆಯಲ್ಲಿ ವಡೆ, ಟೀ ಇತ್ಯಾದಿ ಕೊಡಿಸಿ ಕೈ ಬಿಟ್ಟರು… ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ಬಸಪ್ಪನವರಿಗೆ ವಾಯಿದೆ ಹೇಳಿ ಹೇಳಿ ಸಾಕಾಯಿತು.’
ಬೇರೆಯವರಿಂದ ಹಣ ತೆಗೆದುಕೊಳ್ಳುವಾಗ ಗೌಡರಿಗೆ ಅಪಾರ ಮುಜುಗರವೂ ಆಗುತ್ತಿತ್ತು: ‘ಗೆ. [ಕೋಣಂದೂರು]ಲಿಂಗಪ್ಪ ರಾತ್ರಿ ರೈಲಿಗೆ ಮೈಸೂರಿಗೆ ಹೋದ. ನನ್ನ ಸ್ಥಿತಿ ನೋಡಿ ಆತನೇ ಹತ್ತು ರೂ. ಕೊಟ್ಟ. ಅದನ್ನು ಸ್ವೀಕರಿಸುವುದು ನನಗೆ ತುಂಬ ಕಷ್ಟವಾಯಿತು. ಆದರೂ ತೆಗೆದುಕೊಂಡೆ. ಆತ ವಿದ್ಯಾರ್ಥಿ. ನನಗಿಂತಲೂ ಅಸಹಾಯಕ, ಬಡವ. ನಾನು ಅವನಿಗೆ ಸಹಾಯ ಮಾಡುವುದು ಬಿಟ್ಟು, ನಾನು ಅವನಿಂದ ಹಣ ಪಡೆಯುವುದೆಂದರೆ ಆಭಾಸಕರ.’
ಸಣ್ಣಪುಟ್ಟ ಪ್ರಯಾಣದ ಖರ್ಚಿಗೂ ಹಣವಿಲ್ಲದೆ ಗೌಡರು ಅಸಹಾಯಕ ರಾಗಿದ್ದರು. ಬೆಂಗಳೂರಿನ ಮೆಜೆಸ್ಟಿಕ್ಕಿನ ಚಿಕ್ಕ ಲಾಲ್‌ಬಾಗ್ ಬಳಿ ಸಮಾಜವಾದಿ ಪಕ್ಷದ ಕಾರ್ಯಾಲಯವಿತ್ತು. ಕಾರ್ಯಾಲಯ ತೆರವುಗೊಳಿಸಬೇಕೆಂದು ಮಾಲೀಕರು ಕೇಸು ಹಾಕಿದ್ದರು. ಈ ಸಂಬಂಧ ಕೋರ್ಟಿನ ಅಲೆತವೂ ನಡೆಯುತ್ತಿತ್ತು. ‘ಮಾರ್ಗದರ್ಶಿ’ ವಾರಪತ್ರಿಕೆ ಪ್ರಕಟಿಸಲು ಮತ್ತೆ ಮತ್ತೆ ಸಾಲ ಎತ್ತಬೇಕಾಗಿತ್ತು. ಪತ್ರಿಕೆ ಅಚ್ಚು ಮಾಡಿದರೂ, ಪೋಸ್ಟ್ ಮಾಡಲು ಅಂಚೆ ಚೀಟಿ ಕೊಳ್ಳುವುದು ಕಷ್ಟವಿತ್ತು. ಪಕ್ಷಕ್ಕೆ ಹೊಸ ಸದಸ್ಯರನ್ನು ಮಾಡಿಸಿ, ಸದಸ್ಯರಿಂದ ಐದು, ಹತ್ತು ರೂಪಾಯಿ ಸದಸ್ಯತ್ವ ಶುಲ್ಕ ಪಡೆಯುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿತ್ತು.
ಗೋಪಾಲಗೌಡರ ಆರೋಗ್ಯವೂ ಕೆಡುತ್ತಿತ್ತು. ಪಿತ್ತಕೋಪ. ಅರುಚಿ, ಜ್ವರ, ಆಮಶಂಕೆ, ಇಂಜೆಕ್ಷನ್, ಮಾತ್ರೆ... ಹೀಗೆ ಇಡೀ ವರ್ಷ ಅನಾರೋಗ್ಯ. ಬಟ್ಟೆಗಳು ಹರಿದು ಹೋಗಿದ್ದವು. ‘ಹೊಸ ಬಟ್ಟೆಗೆ ೮ರೂ. ೧೦ ಪೈಸೆ ಮತ್ತು ಹೊಲಿಗೆಗೆ ೨ ರೂ; ೩ ರೂ. ಇಂಜೆಕ್ಷನ್, ೧ ರೂ. ೨೫ ಪೈ. ಮಾತ್ರೆ, ೨ ರೂ. ಸಿಗರೇಟು.’ ಸಭೆಯೊಂದರ ಸಂಘಟಕರು ಹತ್ತು ರೂಪಾಯಿ ಮನಿಯಾರ್ಡರ್ ಮಾಡಿದ ಮೇಲೆ ಗೌಡರು ಮಂಡ್ಯಾದ ಸಭೆಗೆ ಹೋಗುತ್ತಾರೆ: ‘ಮಂಡ್ಯದವರು ಕೊಟ್ಟಿದ್ದ ೪೦ ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು.’
ಅವರಿವರಿಂದ ಇಪ್ಪತ್ತು, ನಲವತ್ತು, ಇಪ್ಪತ್ತೈದು ರೂಪಾಯಿಗಳ ಕೈಗಡ, ಜಮಾ, ಸಹಾಯ ತೆಗೆದುಕೊಂಡು, ದುಡ್ಡಿದ್ದಾಗ ಎರಡೆರಡು ಪೇಜ್ ಕಂಪೋಸ್ ಮಾಡಿಸಿ, ಕಷ್ಟಪಟ್ಟು ಹಾಗೂ ಹೀಗೂ ನಡೆಸುತ್ತಿದ್ದ ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು’ ಎಂಬ ಗಾಢ ವಿಷಾದವೂ ಇಲ್ಲಿದೆ.
೧೯೬೦ರ ವರ್ಷದ ಈ ಚಾರಿತ್ರಿಕ ಡೈರಿಯಲ್ಲಿ ಕರ್ನಾಟಕದ ಧೀಮಂತ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು, ಸಾರ್ವಜನಿಕ ಜವಾಬ್ದಾರಿಗಳು, ಬಡತನ, ಅಭದ್ರತೆ, ಒಂಟಿತನ, ಸಂಜೆಯ ಹಾಗೂ ನಾಳೆಯ ಊಟದ ಖಾತ್ರಿಯಿರದ ಸ್ಥಿತಿ, ಇನ್ನೊಬ್ಬರಿಂದ ಹಣ ಪಡೆಯುವಾಗ ಹುಟ್ಟುವ ದೈನೇಸಿತನ, ಮತ್ತೆ ಮತ್ತೆ ಆತ್ಮಾಭಿಮಾನಕ್ಕೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನಿಗೆ ಹಲವು ದಿಕ್ಕಿನ ಕಷ್ಟಗಳು ಮುತ್ತುತ್ತವೆ.
ಆ ವರ್ಷ ಗೋಪಾಲಗೌಡರು ಧಾರವಾಡಕ್ಕೆ ಹೋದಾಗಿನ ಒಂದು ವಿವರ: ‘…ಇಲ್ಲಿ ಎಲ್ಲಾ ಥಂಡಿ- ರಾಜಕೀಯವೂ ಥಂಡಿ. ನಮ್ಮ ಗೆಳೆಯರಂತೂ ಉಸಿರಾಡಲು ಕೂಡ ಹಿಂದೆಗೆಯುತ್ತಿದ್ದಾರೆ. ನಿರಾಶೆ, ಅಸಹಾಯಕತೆ, ವಿಮುಖತೆ, ಜಿಗುಪ್ಸೆ ಎಲ್ಲಾ ಸೇರಿ ನಿಶ್ಚೇಷ್ಟಿತರಾಗಿದ್ದಾರೆ. ಜೀವನ ನಡೆಸುವುದು ತೀರಾ ಕಷ್ಟವಾಗಿದೆ ಈ ಜನಕ್ಕೆ. ಹೋರಾಡಲು ಶಕ್ತಿಯಿಲ್ಲ.’
ಆ ದಿನಗಳಲ್ಲಿ ಗೋಪಾಲಗೌಡರು ಹೈದರಾಬಾದಿನಲ್ಲಿ ಕಂಡ ಸಮಾಜವಾದಿ ಕಾರ್ಯಾಲಯದ ಚಿತ್ರ: ‘ದುಂಡುಮೇಜಿನ ಸುತ್ತ ಗೆಳೆಯ ಮುರಹರಿ, ಆಧ್ಯಾತ್ಮ ತ್ರಿಪಾಠಿ, ಅಜನಾಲ್ವಿ ಉದಾಸರಾಗಿ ಕುಳಿತಿದ್ದರು. ಅಲ್ಲಲ್ಲಿ ಒಳಗೆ ಒಬ್ಬಿಬ್ಬರು ಕೂತಿದ್ದರು... ನಮ್ಮ [ಬೆಂಗಳೂರು] ಕಾರ್ಯಾಲಯಕ್ಕಿಂತ ಕಳಾಹೀನ, ಜೀವನ್ಮರಣ ಸ್ಥಿತಿ ಎಲ್ಲೆಲ್ಲೂ ಅದರ ಮುದ್ರೆ ಒತ್ತಿತ್ತು. ಕಸ ಕಡ್ಡಿಗಳ ರಾಶಿ, ನಗು ಸತ್ತ ಮುಖ, ಅಸಹಾಯಕ ಕೆಲಸಗಾರರು- ಅಯ್ಯೋ ಹೀಗಾಗಬಾರದಿತ್ತು ಎಂದು ಮನಸ್ಸಿಗೆ ಸಂಕಟವಾಯಿತು.’
ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಮಾಜವಾದಿ ಸಂಗಾತಿಗಳು ಚಳುವಳಿ ರಾಜಕಾರಣದ ಮೂಲಕ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುವ ಮೂಲಕ ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇಡಲೆತ್ನಿಸುತ್ತಿದ್ದರು. ಹರತಾಳ; ಅರಣ್ಯಭೂಮಿ ಆಕ್ರಮಿಸುವ ಉಪವಾಸ ಸತ್ಯಾಗ್ರಹ; ಇಂಗ್ಲಿಷ್ ತೊಲಗಿಸಿ ಆಂದೋಲನ; ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ; ಸವಿನಯ ಕಾನೂನುಭಂಗ ಚಳುವಳಿ; ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಆದರೆ ನಿರಾಶಾದಾಯಕ ಫಲಿತಾಂಶಗಳು ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು: ‘ಸಾರ್ವತ್ರಿಕ ಮುಷ್ಕರ ಅಷ್ಟಾಗಿ ಬೆಂಗಳೂರಿನಲ್ಲಿ ಯಶಸ್ವಿಯಾಗಲಿಲ್ಲ’; ‘ಕಾರ್ಪೋರೇಷನ್ ಎಲೆಕ್ಷನ್‌ನಲ್ಲಿ ನಮ್ಮ ಪಾರ್ಟಿಯ ಎಲ್ಲರೂ ಸೋತಿದ್ದಾರೆ.’
ಗೋಪಾಲಗೌಡರು ಈ ಸ್ಥಿತಿಯಲ್ಲೂ ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು, ರೇಡಿಯೋದಲ್ಲಿ ಅಲಿ ಅಕ್ಬರ್ ಸರೋದ್ ವಾದನ ಕೇಳಿಸಿಕೊಳ್ಳುವುದು, ಕಾರಂತರ ‘ಅಳಿದ ಮೇಲೆ’ ಥರದ ಕಾದಂಬರಿಗಳನ್ನು ಓದುವುದು ಇವೆಲ್ಲ ಡೈರಿಯಲ್ಲಿವೆ. ‘ಲಂಕೇಶಪ್ಪನವರ ಜೊತೆ ಬಂದಿದ್ದ ಕೆ.ಎಸ್. ನಿಸಾರ್ ಅಹಮದ್ ಪದ್ಯ ಓದಿ’ದ್ದೂ ಇದೆ. ನೆಬೊಕೊವ್ ಅವರ ‘ಲೋಲಿತಾ’ ಕಾದಂಬರಿ, ಪರ್ಲ್ ಎಸ್. ಬಕ್ ಅವರ ‘ದಿ ಹಿಡನ್ ಫ್ಲವರ್ ಕಾದಂಬರಿ ಓದಿದ ವಿವರವೂ ಇದೆ: ‘ದಿನವೆಲ್ಲಾ ‘ದ ಹಿಡನ್ ಫ್ಲವರ್’ ಓದುತ್ತಾ ಕಳೆದೆ. ವಿಶ್ವದಲ್ಲಿ ಇಬ್ಬರು ಪ್ರೇಮಿಗಳು ತನ್ನ ಇಚ್ಛೆಯಂತೆ ಕೂಡಿ ಜೀವನ ನಡೆಸಲು ಸಮಾಜ ಎಷ್ಟು ಅಡ್ಡಿ ಬರುತ್ತದೆಂಬ ಸಮಸ್ಯೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ ಪರ್ಲ್ ಎಸ್. ಬಕ್; ಅಂಥವರಿಗೆ ಹುಟ್ಟಿದ ಮಕ್ಕಳು?’
ಆ ಕಾಲದಲ್ಲಿ ವಿವಾದ ಹುಟ್ಟಿಸಿದ್ದ ‘ಲೋಲಿತಾ’, ‘ದ ಹಿಡನ್ ಫ್ಲವರ್’ ಥರದ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಕಾಲದಲ್ಲಿ ಪ್ರೇಮ, ಕಾಮ, ಗಂಡುಹೆಣ್ಣಿನ ಸಂಬಂಧ ಕುರಿತ ವಾಂಛೆಗಳು ಆಗಾಗ್ಗೆ ಗೋಪಾಲಗೌಡರ ಚಿತ್ತದಲ್ಲಿ, ಜೀವನಾನುಭವದಲ್ಲಿ ಮಿಂಚಿ ಮರೆಯಾದಂತಿವೆ. ನಿರಾಶೆ, ಅನಿಶ್ಚಯಗಳ ನಡುವೆ ಸಾಹಿತ್ಯ, ಸಂಗೀತ, ರಾಜಕೀಯ ಚಿಂತನೆ, ಸಂಬಂಧಗಳು ಗೋಪಾಲಗೌಡರನ್ನು ಕೊಂಚವಾದರೂ ನೆಮ್ಮದಿಯಲ್ಲಿಟ್ಟ ಸೂಚನೆಗಳಿವೆ. ಗೋಪಾಲಗೌಡರು ತೀರಾ ಸ್ವ ಮರುಕವಿಲ್ಲದೆ ತಮ್ಮ ಹತಾಶೆಯ ಸ್ಥಿತಿಯನ್ನು ತೂಗಿಸಿಕೊಂಡು ಹೋಗಿರುವ ರೀತಿ ಅವರ ಅನನ್ಯ ಹಳ್ಳಿಗ ಛಲವನ್ನೂ ಸೂಚಿಸುತ್ತದೆ.
ಗೋಪಾಲಗೌಡರ ಈ ಘಟ್ಟ ಕುರಿತು ಲಂಕೇಶ್ ‘ಹುಳಿಮಾವಿನ ಮರ’ದಲ್ಲಿ ಬರೆಯುತ್ತಾರೆ: ‘[ಆ ಕಾಲದಲ್ಲಿ] ಅಲ್ಲೋಲ ಕಲ್ಲೋಲ ಮನಸ್ಸಿನ ಗೋಪಾಲಗೌಡರು ಚಿಕ್ಕ ಲಾಲ್‌ಬಾಗ್ ಹತ್ತಿರದ ತಮ್ಮ ಆಫೀಸಿನಲ್ಲಿ ಇರುತ್ತಾ ಗೆಳೆಯರನ್ನು ಸಂಧಿಸುತ್ತಿದ್ದರು. ಅವರಿಗೆ ಸಾಹಿತಿಗಳು, ಕಲಾವಿದರೆಂದರೆ ತುಂಬ ಇಷ್ಟ. ಅಧಿಕಾರವಿಲ್ಲದ ಆ ದಿನಗಳಲ್ಲಿ ಅವರು ಒಂದು ರೀತಿಯ ಗುರಿ ಇಲ್ಲದ ಜೀವನ ನಡೆಸುತ್ತಿದ್ದಂತೆ, ರಾಜಕೀಯವೇ ದುಷ್ಟ ವೃತ್ತಿಯೆಂಬ ಅನುಮಾನ ಅವರಲ್ಲಿ ಬಲವಾಗುತ್ತಿದ್ದಂತೆ ಕಾಣುತ್ತಿತ್ತು.’
ಗೋಪಾಲಗೌಡರ ಈ ಸ್ಥಿತಿಯ ಬಗ್ಗೆ ಮುಂದೊಮ್ಮೆ ‘ಕಟ್ಟೆ ಪುರಾಣ’ದ ಬಿ.ಚಂದ್ರೇಗೌಡರ ಜೊತೆ ಮಾತಾಡುತ್ತಾ ಲಂಕೇಶ್ ಹೇಳಿದರು: ‘...ಆಗ ಗೋಪಾಲಗೌಡರು ತುಂಬ ಹಣಕಾಸಿನ ತೊಂದರೆಯಲ್ಲಿದ್ದರು. ನಾವೆಷ್ಟು ಅವಿವೇಕಿಗಳಾಗಿದ್ವು ಅಂದ್ರೆ, ಅವರ ಹತ್ರ ದುಡ್ಡಿದೆಯೋ ಇಲ್ಲವೋ ಅಂತ ಕೂಡ ಕೇಳುತ್ತಿರಲಿಲ್ಲ. ನಾವು ಅವರ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳದಷ್ಟು ಅಹಂಕಾರಿಗಳೂ ಸಿನಿಕರೂ ಆಗಿದ್ದೆವು.’ ಅವತ್ತು ಮಾತು ನಿಲ್ಲಿಸಿದಾಗ ಲಂಕೇಶರ ಕಣ್ಣು ತುಂಬಿ ಬಂದಿತ್ತು ಎಂದು ಚಂದ್ರೇಗೌಡ ನೆನಸಿಕೊಳ್ಳುತ್ತಾರೆ.
ಆಗಿನ ಗೋಪಾಲಗೌಡರ ಬಗ್ಗೆ ಲಂಕೇಶರು ಕೊಡುವ ಚಿತ್ರ: ‘...ಮಹಾ ಸ್ವಾಭಿಮಾನಿಯಾಗಿದ್ದು ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಸಮಾಜದ ನೀಚರು, ಶೋಷಕರನ್ನು ಕಂಡರೆ ಕೆಂಡವಾಗುತ್ತಿದ್ದರು; ಆದರೆ ಆತ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ. ಸಮಾಜವಾದಿ ನಿಲುವಿಗೆ ತಕ್ಕಂತೆ ಜಾತಿ, ಆಸ್ತಿ, ಭಾಷೆಯ ಬಗ್ಗೆ ಸ್ಪಷ್ಟವಾಗಿ, ಮನ ಮುಟ್ಟುವಂತೆ ಮಾತಾಡಬಲ್ಲವರಾಗಿದ್ದರೂ, ಮನುಷ್ಯರ ಎದುರು ಎಲ್ಲ ಸಿದ್ಧಾಂತ ಮರೆತು ಅಕ್ಕರೆಯ ಮೂರ್ತಿಯಾಗುತ್ತಿದ್ದರು.’ ಅದೇ ಆಸುಪಾಸಿನಲ್ಲಿ ಗೋಪಾಲಗೌಡರನ್ನು ಕುರಿತು ಲಂಕೇಶರ ಇನ್ನೊಂದು ನೋಟ: ‘...ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು.’
೧೯೬೦ರ ವರ್ಷ ಮುಗಿದ ದಿನ ಡಿಸೆಂಬರ್ ೩೧ರಂದು ಗೋಪಾಲಗೌಡರು ಬರೆಯುತ್ತಾರೆ: ‘ಈ ವರ್ಷವೆಲ್ಲಾ ತೊಡಕಿನಿಂದಲೇ ಕಳೆಯಿತು. ಪಾರ್ಟಿಯ ಕೆಲಸಗಳು ತೃಪ್ತಿಕರವಾಗಿ ನಡೆಯಲಿಲ್ಲ. ಕಾನೂನುಭಂಗ ಚಳುವಳಿಯೂ ಸಫಲವಾಗಲಿಲ್ಲ. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಬೋರ್ಡುಗಳಿಗೆ ನಡೆದ ಚುನಾವಣೆಗಳಲ್ಲಿ ಪಾರ್ಟಿ ಹೇಳಿಕೊಳ್ಳುವಂತಹ ಪಾತ್ರ ವಹಿಸಲಿಲ್ಲ. ಸದಸ್ಯತ್ವವಂತೂ ನಡೆಯಲಿಲ್ಲ. ಸಂಘಟನೆ ಮತ್ತಷ್ಟು ಬಲಹೀನವಾಯಿತೆಂದೇ ಹೇಳಬೇಕು. ಗೆ.ಶಿವಪ್ಪ, ಕಣ್ಣನ್ ಮೊದಲಾದವರು ಪಿ.ಎಸ್.ಪಿ.ಗೆ ಹೊರಟು ಹೋದರು. ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು. ಈ ಕಡೆಯ ಎರಡು ತಿಂಗಳುಗಳನ್ನು ಅನಾರೋಗ್ಯ ಮತ್ತು ವಿಶ್ರಾಂತಿಯಲ್ಲಿ ಕಳೆದೆ.’
ಕೊನೆ ಟಿಪ್ಪಣಿ
ಈ ಡೈರಿಯ ಶುರುವಿನಲ್ಲಿ ಗೋಪಾಲಗೌಡರು ತಮ್ಮ ಹಳೆಯ ಡೈರಿಗಳು ’ಯಾರ ಯಾರ ಮನೆಯಲ್ಲೋ ಬಿದ್ದಿವೆ. ಅವುಗಳನ್ನೆಲ್ಲ ಸಂಗ್ರಹಿಸುವುದು ಸಾಧ್ಯವಾದರೆ ಏನಾದರೂ ಪ್ರಯೋಜನವಾದೀತು’ ಎಂದು ಬರೆಯುತ್ತಾರೆ. ಆ ಡೈರಿಗಳು ಯಾರ ಬಳಿಯಾದರೂ ಇದ್ದರೆ, ಅವುಗಳ ಪ್ರಕಟಣೆ ಕರ್ನಾಟಕದ ರಾಜಕೀಯ ಚರಿತ್ರೆಯ ಮಹತ್ವದ ದಾಖಲೆಯಾಗಬಲ್ಲದು.
Comments
5 Comments
| Subramanyaswamy Swamy
ತುಂಬಾ ಅಪರೂಪದ ವ್ಯಕ್ತಿತ್ವ , ಕಣ್ಣು ತುಂಬಿ ಬರುತ್ತದೆ, ಮನ ಮುಟ್ಟುವಂತೆ ಬರೆದ ನಿಮಗೆ ಅನಂತ ನಮಸ್ಕಾರ.
| ಮಂಜುನಾಥ್ ಸಿ ನೆಟ್ಕಲ್
ಗೋಪಾಲಗೌಡರ ತರಹದ ರಾಜಕಾರಣಿಗಳು ಅಪರೂಪದಲ್ಲಿ ಅಪರೂಪ. ಇವರು ಕರ್ನಾಟಕದವರು ಎಂಬುದು ನಮ್ಮ ಹೆಮ್ಮೆ. ರಾಜಕಾರಣಿಯೊಬ್ಬ ಇಷ್ಟು ಮಟ್ಟಿಗೆ ಹಣದ ಮುಗ್ಗಟ್ಟನ್ನು ಎದುರಿಸಿದ ಸಂಗತಿಗಳು ಭವಿಷ್ಯದಲ್ಲಿ ನಂಬಲಾಗದ ಸತ್ಯಗಳಾಗಲಿವೆ. ಇಂದಿನ ಹಾಗೂ ಮುಂದಿನ ರಾಜಕೀಯ ನೇತಾರರಿಗೆ ಗೋಪಾಲಗೌಡರು ಆದರ್ಶವಾಗಬೇಕು ಅವರೆಲ್ಲರೂ ಗೋಪಾಲಗೌಡರ ಜೀವನ ಚರಿತ್ರೆ ಓದಬೇಕು ಅವರಂತೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ...ಆದರೆ ಇದು ಸಾಧ್ಯವೆ.. ವರ್ತಮಾನದ ಬೆಳವಣಿಗೆಗಳನ್ನು ಗಮನಿಸಿದರೆ ಅಸಾಧ್ಯವೆಂದೇ ಅನಿಸುತ್ತದೆ. ಈ ಬರಹ ಕಣ್ಣಾಲಿಗಳನ್ನು ತೇವಗೊಳಿಸಿತು. ನಮನಗಳು ಸರ್
| ಭೀಮೇಶ ಯರಡೋಣಿ
ಈ ಲೇಖನಕ್ಕೆ ಎದುರುಗೊಂಡಾಗ ಅಪಾರ ಪ್ರತಿಭೆಯ, ಸ್ವಾಭಿಮಾನದ ಬದುಕಿನ, ಸಮಾಜದ ಕೆಡುಕಿಗೆ ಕೆಂಡವಾಗುವ ಹಿರಿಕಿರಿಯರ ಮುಖಗಳು ಕಣ್ಮುಂದೆ ಸುಳಿದಾಡುತ್ತಿವಿ. ಆದರೆ ಬದುಕೊಡ್ಡುವ ನಿಕಷಕ್ಕೆ ಕರಗಿ ಹುದುಲಲಿ ಸಿಕ್ಕಂತಾಗಿವೆ. ಡೈರಿ ಬರವಣಿಗೆ ಎಷ್ಟು ಮುಖ್ಯ ಅಲ್ವಾ ಸರ್, ಬರೆಯದಿದ್ದರೆ ಬಾಬಾಸಾಹೇಬ ಇಂದು ಬದುಕುತ್ತಿರಲಿಲ್ಲ. ಬರೆಯದೆ, ಬರೆಯಿಸಿಕೊಳ್ಳದೆ ಬಾಳ ದಂದುಗದಲಿ ಕಳೆದುಹೋದ ವ್ಯಕ್ತಿತ್ವಗಳೆಷ್ಟೊ! ಧಾರವಾಡದ ಥಂಡಿಯಂತೆ ಇಲ್ಲಿನ ಮಳೆ, ಬಿಸಿಲು ಮತ್ತು ಜನರ ಸ್ವಭಾವ ಕುರಿತು ರಂಗನಾಥ ಮಾತಾಡುತ್ತಿದ್ದರು.
| ಹರಿಪ್ರಸಾದ್ ಬೇಸಾಯಿ
ಎದೆ ಭಾರವಾಯಿತು, ದುಗುಡ ಆವರಿಸಿತು, ವಿಷಾದ ತುಂಬಿತು....... ಹೀಗೆ ಏನು ಬರೆದರೂ ಕ್ಲೀಷೆಯಾಗಿ ಬಿಡುತ್ತದೆ. ಆದರೆ ಈ ತೆರನಾದ ಪದಗಳೇ ನಮ್ಮ ಆಲೋಚನೆಯನ್ನು ಎಷ್ಟೊಂದು ಹಿಡಿದುಕೊಂಡಿವೆಯಲ್ಲ ಎಂದು ಬೇಸರ. ನಿಜಕ್ಕೂ ದಿಗ್ಮೂಡನಾಗಿರುವೆ. ಇಷ್ಟು ಸಾಕು. Thank you sir
| Dr.Kavyashri H
Very heart touching write up. True leaders are not measured by the position they hold, but by the lives they touch and the hope they inspire. Gopalagowda reminds that politics is not about power but about service.
Add Comment