ಲಂಕೇಶ್, ವಡ್ಡರ್ಸೆ, ಉಮಾಪತಿ...
by Nataraj Huliyar
ಅಧ್ಯಾಪಕಿಯೊಬ್ಬರು ಈ ಕಾಲದ ಜಾತಿ ಜನಗಣತಿಯ ಗೊಂದಲಗಳ ಬಗ್ಗೆ ಕಳಕಳಿಯಿಂದಲೇ ಪ್ರಶ್ನೆಯೆತ್ತಿದ್ದರು. ಅದಕ್ಕೆ ಉತ್ತರ ಬರೆಯಲು ಯೋಚಿಸುತ್ತಿದ್ದವನಿಗೆ ನಲವತ್ತು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯ ಕಛೇರಿಗೆ ಬಂದಿದ್ದ ಇಂಜಿನಿಯರಿಂಗ್ ಕಾಲೇಜಿನ ಹುಡುಗರ ಜೊತೆಗೆ ಲಂಕೇಶರ ಮಾತುಕತೆ ನೆನಪಾಯಿತು. ಮೀಸಲಾತಿ ವಿರೋಧಿಸಿ ಚಳುವಳಿ ಮಾಡಲು ಹೊರಟಿದ್ದ ಆ ಮೇಲುಜಾತಿಯ ಹುಡುಗರು ಜಾತಿ ಹಾಗೂ ಮೀಸಲಾತಿ ಕುರಿತ ತಮ್ಮ ಗೊಂದಲ ಹಾಗೂ ಪ್ರಶ್ನೆಗಳನ್ನು ಲಂಕೇಶರೆದುರು ಇಟ್ಟರು. ಲಂಕೇಶ್ ಆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ‘ಮೀಸಲಾತಿ ವಿರೋಧಿ ಹುಡುಗರೊಂದಿಗೆ’ ಎಂಬ ‘ಸಾಕ್ರೆಟೀಸ್ ಡಯಲಾಗ್’ ಮಾದರಿಯ ಟೀಕೆಟಿಪ್ಪಣಿ ಬರೆದರು.
ಈ ಲೇಖನವನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿರುವ ‘ದ ಸೋರ್ ಮ್ಯಾಂಗೋ ಟ್ರೀ’ ಎಂಬ ಲಂಕೇಶರ ಪ್ರಾತಿನಿಧಿಕ ಬರಹಗಳ ಇಂಗ್ಲಿಷ್ ಅನುವಾದಗಳ ಸಂಕಲನಕ್ಕಾಗಿ ಅನುವಾದಿಸುತ್ತಿದ್ದಾಗ, ‘ಅನುವಾದವೆಂದರೆ ನಿಕಟ ಓದು’ ಎಂಬ ಸತ್ಯ ಮತ್ತೆ ಅನುಭವಕ್ಕೆ ಬರತೊಡಗಿತು. ಲಂಕೇಶರ ಬರಹದ ಧ್ಯಾನಸ್ಥ ಧ್ವನಿ, ಹುಡುಗರಿಗೆ ವಿವರವಾಗಿ ತಿಳಿ ಹೇಳುವ ರೀತಿಗಳು ಇವತ್ತಿಗೂ ಜಾತಿ, ಮೀಸಲಾತಿ ಕುರಿತು ಇದೇ ರೆಡಿಮೇಡ್ ಪ್ರಶ್ನೆಗಳನ್ನು ಹಬ್ಬಿಸುವವರ ಕಣ್ತೆರೆಸುವಂತಿವೆ. ಆ ಮಾತುಕತೆಯ ಮುಖ್ಯ ಗ್ರಹಿಕೆಗಳು:
ಆ ಗುಂಪಿನಲ್ಲಿದ್ದ ಹುಡುಗನೊಬ್ಬ ಲಂಕೇಶರನ್ನು ಕೇಳಿದ: ‘ನಮ್ಮದು ಜಾತ್ಯತೀತ ಸಮಾಜ. ಸೆಕ್ಯುಲರಿಸಮ್ಮನ್ನು ಉಳಿಸಿ ಬೆಳೆಸುವುದು ಯಾವುದೇ ಸರ್ಕಾರದ ಉದ್ದೇಶ ಮತ್ತು ಕರ್ತವ್ಯವಾಗಿರಬೇಕು. ಹೀಗಿರುವಾಗ ಎಳೆಯ ವಿದ್ಯಾರ್ಥಿಗಳ ಮೇಲೆ, ಉದ್ಯೋಗ ಬಯಸುವ ಯುವ ಅಭ್ಯರ್ಥಿಗಳ ಮೇಲೆ ಜಾತಿಯ ಕಡಿವಾಣ ಹಾಕುವುದು, ಜಾತಿಯ ಆಧಾರದ ಮೇಲೆ ಅವರನ್ನು ಹಿಂದೆ ತಳ್ಳುವುದು ಸರಿಯೆ? ಬುದ್ಧಿಜೀವಿಗಳಾದ ನಿಮ್ಮಂಥವರು ಮಾತೆತ್ತಿದರೆ ಸಾವಿರಾರು ವರ್ಷಗಳಿಂದ ಮೇಲ್ಜಾತಿಯವರು ಕೆಳಜಾತಿಯವರನ್ನು ತುಳಿದ ಚರಿತ್ರೆಯನ್ನೇ ನೀಡುತ್ತೀರಿ. ಹಾಗೆ ಎಂದೋ ಆದ ಅನ್ಯಾಯ, ಶೋಷಣೆಯ ಆಧಾರದ ಮೇಲೆ ಈಗಿನ ಜನಾಂಗವನ್ನು ಏಕೆ ನಾಶಮಾಡಬೇಕು?’
ಲಂಕೇಶ್ ಹೇಳಿದರು: ‘ಜಾತಿಯ ಆಧಾರದ ಮೇಲೆ ಯಾವುದೂ ನಡೆಯಕೂಡದು...ಸರಿ. ಆದರೆ ಏನಾಗಿದೆ ಅಂದರೆ, ಒಂದೂರಲ್ಲಿ ಹರಿಜನ ಕೇರಿ, ಅಗಸರ ಕೇರಿ, ಬ್ಯಾಡರ ಕೇರಿಯಿಂದ ಹಿಡಿದು ನಿಮ್ಮ ಹಿರಿಯರು ನಿಮ್ಮನ್ನು ನಿಮ್ಮ ಜಾತಿಯ ಉಚಿತ ಅಥವಾ ಅನುಚಿತ ಹಾಸ್ಟೆಲ್ಲಿಗೆ ಸೇರಿಸುವುದನ್ನೊಳಗೊಂಡು ನಿಮ್ಮ ಮದುವೆ, ಮುಂಜಿ, ಸತ್ಯನಾರಾಯಣಪೂಜೆ, ಬಸವಜಯಂತಿಯವರೆಗೆ ಜಾತೀಯತೆ ಹಬ್ಬಿದೆ. ಇವತ್ತಿಗೂ ಈ ದೇಶದಲ್ಲಿ ಶೇಕಡ ತೊಂಭತ್ತೊಂಬತ್ತು ಭಾಗ ಜನಕ್ಕೆ ಸ್ವಜಾತಿಯಲ್ಲೇ ಮದುವೆ, ಸ್ವಂತ ಜಾತಿಯವರ ಜೊತೆಗೇ ಇವರ ಒಡನಾಟ. ಈ ಸಂಬಂಧ ಮತ್ತು ಒಡನಾಟಗಳು ಎಲ್ಲಿಯವರೆಗೆ ಹಬ್ಬಿವೆ ಎಂಬುದನ್ನು ಯೋಚಿಸಿ. ಇದು ಆರ್ಥಿಕ ರಂಗ, ಸಾಂಸ್ಕೃತಿಕ ರಂಗ, ವಿದ್ಯಾರಂಗವನ್ನು ಆವರಿಸಿದೆ. ಬ್ರಾಹ್ಮಣರ ಖಾಸಗಿ ಕಾಲೇಜಿನಲ್ಲಿ ಎಷ್ಟು ಜನ ಹರಿಜನ ವಿದ್ಯಾರ್ಥಿಗಳು, ಅಧ್ಯಾಪಕರಿದ್ದಾರೆ ಎಂಬುದನ್ನು ನೋಡಿ. ಇದೆಲ್ಲಕ್ಕಿಂತ ಮುಖ್ಯವಾಗಿ, ವಿದ್ಯೆ ಎನ್ನುವುದು ಜನರಲ್ಲಿ ಹೂಡಿದ ಸಂಪತ್ತು ಎಂದು ಯೋಚಿಸುವುದನ್ನು ಈ ಸಮಾಜ ಕಲಿಯಬೇಕಾಗಿದೆ. ಒಬ್ಬ ಬ್ರಾಹ್ಮಣರ ಹುಡುಗ, ಒಬ್ಬ ಲಿಂಗಾಯತರ, ಜೈನರ, ವೈಶ್ಯರ ಹುಡುಗ ವಿದ್ಯಾವಂತನಾಗಲು ಸಮಾಜ ಎಷ್ಟು ಹಣ ಹೂಡಿತು? ಬ್ರಾಹ್ಮಣರಲ್ಲಿ ಶೇಕಡ ಎಂಭತ್ತು ಭಾಗ, ಲಿಂಗಾಯತರಲ್ಲಿ ಶೇಕಡ ಐವತ್ತು ಭಾಗ ಜನರು ವಿದ್ಯಾವಂತರಾಗಿದ್ದಾರೆ ಅಂದರೆ ಅವರನ್ನು ವಿದ್ಯಾವಂತರನ್ನಾಗಿಸಲು ಸಮಾಜ ಅಪಾರ ಸಂಪತ್ತನ್ನು ವ್ಯಯ ಮಾಡಿದೆ. ಹರಿಜನರಲ್ಲಿ ಕೇವಲ ಒಂದು ಭಾಗ, ಬೇಡರಲ್ಲಿ ಒಂದೂವರೆ ಭಾಗ ವಿದ್ಯಾವಂತರಿದ್ದರೆ ಅಷ್ಟೇ ಕಡಿಮೆ ಸಂಪತ್ತನ್ನು ಸಮಾಜ ಅವರಲ್ಲಿ ಹೂಡಿದೆ ಎಂದಂತಾಯಿತು. ಇದು ಕೇವಲ ಇತಿಹಾಸವನ್ನು ನೋಡಿ ಹೇಳುತ್ತಿರುವ ಮಾತಲ್ಲ; ನಮ್ಮ ಸುತ್ತಣ ವಿದ್ಯಾವಂತ, ಅವಿದ್ಯಾವಂತ ಜನರನ್ನು ನೋಡಿ ಹೇಳುತ್ತಿರುವ ಮಾತು.’
ಈ ಮಾತಿನ ನಡುವೆ ‘ಮೀಸಲಾತಿಯ ಗುಂಪಿನ ಹಲವಾರು ವಿದ್ಯಾರ್ಥಿಗಳು ಹೆಚ್ಚು ಅಂಕ ತೆಗೆದು ಇತರೆಯವರೊಂದಿಗೆ ಸ್ಪರ್ಧಿಸುವ’ ಬಗ್ಗೆ ಇತರ ಜಾತಿಗಳವರ ಕಣ್ಣುರಿ ಕಂಡು ಲಂಕೇಶ್ ಹೇಳಿದರು: ‘ಅವರು ಇತರರೊಂದಿಗೆ ಸ್ಪರ್ಧಿಸಿ ಗೆಲ್ಲುತ್ತಾರೆ ಎಂಬುದನ್ನು ಕೂಡ ನೀವು ಸಹಿಸಲಾರಿರಿ.’
ಆಗ ಹುಡುಗನೊಬ್ಬ ಕೇಳಿದ ಇನ್ನೊಂದು ರೆಡಿಮೇಡ್ ಪ್ರಶ್ನೆ: ‘ಶೇಕಡ ತೊಂಭತ್ತೈದು ಅಂಕ ತೆಗೆದ ಒಬ್ಬನನ್ನು ಹಿಂದುಳಿದ, ಪರಿಶಿಷ್ಟ ವರ್ಗದ ಐವತ್ತೈದು ಅಂಕದ ಹುಡುಗ ಹಿಂದಕ್ಕೆ ತಳ್ಳುವಂತಾದರೆ ಹೇಗೆ? ಗಾಢ ಪ್ರತಿಭೆ ಅಗತ್ಯವಿರುವ ಹುದ್ದೆಗಳಿಗೆ ಕಡಿಮೆ ಅಂಕ ತೆಗೆದು ತೇರ್ಗಡೆಯಾದವನನ್ನು ನೇಮಿಸುವುದು ಸರಿಯೆ? ಸೇತುವೆ, ಅಣೆಕಟ್ಟು ಕಟ್ಟಲು ದಡ್ಡನಾದ ಇಂಜಿನಿಯರ್‌ಗಳನ್ನು ನೇಮಿಸುವುದು, ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಮಾಡಲು ಅರ್ಹನಲ್ಲದವನನ್ನು ನೇಮಿಸುವುದು ಅಪಾಯಕಾರಿಯಲ್ಲವೆ?’
‘ಇದೇ ಮಾತನ್ನು ಮೂವತ್ತು ವರ್ಷಗಳ ಕೆಳಗೆ ಎಲ್ಲ ಬ್ರಾಹ್ಮಣರು ಲಿಂಗಾಯತರನ್ನೊಳಗೊಂಡು ಎಲ್ಲ ಅಬ್ರಾಹ್ಮಣರ ಬಗ್ಗೆ ಹೇಳುತ್ತಿದ್ದರು’ ಎಂಬುದನ್ನು ಆ ಹುಡುಗರಿಗೆ ನೆನಪಿಸುತ್ತಾ ಲಂಕೇಶ್ ಹೇಳಿದರು: ‘ಈಗ ನೀವೆಲ್ಲ ಹಿಂದುಳಿದ, ಪರಿಶಿಷ್ಟ ವರ್ಗಗಳ ಬಗ್ಗೆ ಇದನ್ನೇ ಹೇಳುತ್ತಿದ್ದೀರಿ. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು, ಆತಂಕಗಳನ್ನು ತೋರುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದವರು ಮಾಂಸವನ್ನು ಕೊಯ್ದು ಅನುಭವವುಳ್ಳ ಜನ ಮಾತ್ರ ಅಂದರೆ ನೀವೇನು ಹೇಳುತ್ತೀರಿ? ಸೇತುವೆ, ಅಣೆಕಟ್ಟು ಕಟ್ಟಬೇಕಾದವರು ಮಣ್ಣು, ಕಲ್ಲು, ಸಿಮೆಂಟನ್ನು ಮುಟ್ಟಿ, ಹೊತ್ತ ಜನಾಂಗದಿಂದ ಬಂದವರು ಮಾತ್ರ ಅಂದರೆ ನೀವೇನು ಹೇಳುತ್ತೀರಿ? ಇಂಥ ಜಾಣತನದ ವಾದಗಳಿಗೆ ಇಳಿಯುವುದು ಬೇಡ. ಈಗ ಇರುವ ಸ್ಥಿತಿ ಏನೆಂದರೆ, ವಿದ್ಯೆಯ, ಸಂಪತ್ತಿನ ಲಾಭ ಪಡೆದ ಜನಾಂಗದಿಂದ ಬಂದವ ತೊಂಭತ್ತೈದು ಅಂಕ ತೆಗೆಯುವುದು ಎಷ್ಟು ಅದ್ಭುತವೋ ಯಾವುದೇ ಅಕ್ಷರ, ಆಸ್ತಿಯ ಹಿನ್ನೆಲೆಯಿಲ್ಲದವ ಐವತ್ತೈದು ಅಂಕ ತೆಗೆಯುವುದು ಅದಕ್ಕಿಂತ ಅದ್ಭುತ. ಅದಕ್ಕಿಂತ ಹೆಚ್ಚಾಗಿ, ತೊಂಭತ್ತೈದು ಅಂಕ ತೆಗೆದವನಿಗೆ ಆತನ ಹಿನ್ನೆಲೆಯಿಂದಾಗಿ ಅವನ ಗುಂಪಿನ ಪರಿಚಿತರು, ವಿದೇಶದಲ್ಲಿರುವವರು, ಉನ್ನತ ಸ್ಥಾನದಲ್ಲಿರುವವರು ನೆರವಾಗಿ ಒಂದು ನೆಲೆ ನೀಡುವ ಸಾಧ್ಯತೆ ಎಂಬುದಾದರೂ ಇರುತ್ತದೆ.’
ಈ ಮಾತುಕತೆಯ ಒಂದು ಹಂತದಲ್ಲಿ ಲಂಕೇಶರು ವಾದದ ಧಾಟಿ ಬಿಟ್ಟು, ದಲಿತ, ಹಿಂದುಳಿದವರ ಬದುಕಿನ ವಾಸ್ತವ ಸ್ಥಿತಿಯನ್ನು ಆ ಹುಡುಗರ ಎದೆಗಿಳಿಯುವಂತೆ ತೆರೆದಿಟ್ಟರು: ‘ಈ ನಾಡಿನಲ್ಲಿರುವ ಕೋಟ್ಯಾಂತರ ಹರಿಜನರು, ಹಿಂದುಳಿದವರಿಗೆ ಹಿಂದುಗಡೆಯೂ ಕತ್ತಲು, ಮುಂದುಗಡೆಯೂ ಕತ್ತಲು. ಇಡೀ ಹಿಂದುಳಿದ ಜನಾಂಗದ ವಿದ್ಯೆಯೇ ಕೇವಲ ಶೇಕಡ ಮೂರು, ನಾಲ್ಕು ಭಾಗವಾಗಿದ್ದಾಗ ಅವರಲ್ಲಿರುವ ಶ್ರೀಮಂತರು, ಸವಲತ್ತುಳ್ಳವರು ಎಷ್ಟು ಜನ? ನಿಮಗೇನಾದರೂ ಹರಿಜನರ ಆಸ್ತಿಪಾಸ್ತಿ, ವಿದ್ಯೆಯ ಖಚಿತ ಕಲ್ಪನೆಯಾದರೂ ಇದೆಯೆ? ಅವರ ದುರಂತದ ಪರಿವೆ ಇದೆಯೆ?’
ಅಂಬೇಡ್ಕರ್, ಲೋಹಿಯಾ ಜಾತಿಪದ್ಧತಿಯ ಬಗ್ಗೆ ಕಾಣಿಸಿದ ಕಠೋರ ಸತ್ಯಗಳು, ಗಾಂಧೀಜಿಯ ಮನವೊಲಿಸುವ ಧ್ವನಿ ಎಲ್ಲವೂ ಬೆರೆತಿರುವ ಲಂಕೇಶರ ಮಾತುಗಳು ಮೀಸಲಾತಿ ವಿರೋಧಿ ಹುಡುಗರಲ್ಲಿ ಕೊನೇ ಪಕ್ಷ ಆತ್ಮಪರೀಕ್ಷೆಯನ್ನಾದರೂ ಹುಟ್ಟು ಹಾಕಿರಬಹುದು ಎಂದು ಊಹಿಸುವೆ.
‘ಹಾಗಾದರೆ ನಾವೀಗ ಏನು ಮಾಡಬೇಕು ಹೇಳಿ’ ಅಂದರು ಹುಡುಗರು.
ಲಂಕೇಶ್ ಹೇಳಿದರು: ‘ನನ್ನ ದುಃಖವೇನೆಂದರೆ, ನಿಮ್ಮಂಥ ಹುಡುಗರನ್ನು ವಿದ್ಯೆ, ಉದ್ಯೋಗದ ಬರ ಕಾಡುವಂಥ ಕಾಲ ಬಂದಿರುವುದು; ನೀವೆಲ್ಲ ಹೀಗೆ ಅನಗತ್ಯ ವಿಚಾರಗಳ ಬಗ್ಗೆ ಕೋಪಗೊಳ್ಳುವಂಥ ದುರಂತ ಈ ನಾಡಲ್ಲಿ ಏರ್ಪಾಟಾಗಿರುವುದು. ಎಲ್ಲೋ ಸಾವಿರ ಜನ ಹರಿಜನ, ಗಿರಿಜನ, ಹಿಂದುಳಿದವರು ಸರ್ಕಾರಿ ಆಫೀಸು, ಕಾಲೇಜುಗಳಲ್ಲಿದ್ದಾರೆ; ಲಕ್ಷಾಂತರ ಇತರರು ಇತರ ಆಫೀಸುಗಳು, ಕಾಲೇಜುಗಳಲ್ಲಿದ್ದಾರೆ. ನಿಮ್ಮಂಥ ಆರೋಗ್ಯವಂತ ಹುಡುಗರು ಸತ್ಯವನ್ನು ಕಾಣಲಾರದೆ ಕೇವಲ ವಾದದ ಮೂಲಕ ಅನಾರೋಗ್ಯಕರ ಮನಸ್ಥಿತಿಗೆ, ಬದುಕಿಗೆ ಅಣಿಯಾಗುತ್ತಿದ್ದೀರಿ. ಇವತ್ತಿಗೂ ಈ ನಾಡು ಹೆಚ್ಚು ಹೆಚ್ಚು ಜಾತೀಯತೆ, ಸಣ್ಣತನದಿಂದ ಪತನದ ಹಾದಿಯನ್ನೇ ತುಳಿಯುತ್ತಿದೆ. ಹರೆಯದ ಹುಡುಗರಾದ ನಿಮ್ಮಲ್ಲಿ ಒಬ್ಬರಿಗೂ ಇವತ್ತಿಗೂ ನಿಮ್ಮೂರಲ್ಲಿ ಏಕೆ ಹರಿಜನರಿಗೆ, ಮೇಲ್ಜಾತಿಯವರಿಗೆ ಪ್ರತ್ಯೇಕ ಬಾವಿಗಳಿವೆ ಎಂಬುದು ದಿಗ್ಭ್ರಮೆಗೊಳಿಸುವುದಿಲ್ಲ; ನಮ್ಮ ನಾಡಿನ ಸಾವಿರಾರು ಹಳ್ಳಿಗಳ ಹರಿಜನ, ಗಿರಿಜನರ ಕುಟುಂಬಗಳಿಗೆ ವಿದ್ಯೆ, ಉದ್ಯೋಗದ ಕಲ್ಪನೆಯಾಗಲಿ, ಅವರಿಗೆ ಇರುವ ಸವಲತ್ತುಗಳಾಗಲಿ ಗೊತ್ತಿಲ್ಲ. ಶಾಲೆಗಳನ್ನು ಪ್ರವೇಶಿಸಲು ಕೂಡ ಹರಿಜನರ ಹುಡುಗರು ಹಿಂಜರಿವ ಪರಿಸ್ಥಿತಿ ಇದೆ. ಈ ವಾತಾವರಣ ಬದಲಾಗುವುದಕ್ಕಾಗಿ ಚಳವಳಿ ನಡೆಯಬೇಕು...ತಕ್ಷಣದ ಕೋಪ, ನಿರಾಶೆಯಿಂದ ಯಾವನೂ ಯಾವುದೇ ತೀರ್ಮಾನ ತೆಗೆದುಕೊಳ್ಳಕೂಡದು… ನಮ್ಮ ಜನಕ್ಕೆ - ಪೂರ್ತಿ ಜನ ಸಮೂಹಕ್ಕೆ - ಸಣ್ಣತನದಿಂದ, ನೀಚ ಕೆಲಸದಿಂದ ಬರುವ ಸಣ್ಣಪುಟ್ಟ ಲಾಭಕ್ಕಿಂತ ಅವರ ಮಾನವೀಯ, ಆತ್ಮ ಪರಿಶುದ್ಧಿಯ ಕ್ರಮದಿಂದ ಬರುವ ಜೀವನವಿಧಾನವೇ ಒಳ್ಳೆಯದು. ಇದು ಬಸವಣ್ಣ ಬದುಕಿದ ನಾಡು ಎಂಬುದನ್ನು ಮರೆಯದಿರೋಣ.’
೧೯೮೫ರಲ್ಲಿ ಬರೆದ ಲಂಕೇಶರ ಟೀಕೆ ಟಿಪ್ಪಣಿ ಎರಡು ಮೂರು ತಲೆಮಾರುಗಳಿಗೆ ಜಾತಿಗಳನ್ನು ನೋಡಬೇಕಾದ ರೀತಿ ಕುರಿತು, ಮೀಸಲಾತಿಯಿಂದ ದಕ್ಕುವ ಸಾಮಾಜಿಕ ನ್ಯಾಯ ಕುರಿತು ಸ್ಪಷ್ಟತೆ ಕೊಟ್ಟಿದೆ. ಇದಕ್ಕೂ ಮೊದಲು ಅಂಬೇಡ್ಕರ್, ಲೋಹಿಯಾ ಲಂಕೇಶರಿಗಿಂತ ವಿಸ್ತೃತ ಚೌಕಟ್ಟಿನಲ್ಲಿ ಈ ಕುರಿತು ಮಾತಾಡಿದ್ದಾರೆ, ಬರೆದಿದ್ದಾರೆ; ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅಂಬೇಡ್ಕರ್ ಅವರ ‘ಜಾತಿ ವಿನಾಶ’, ಲೋಹಿಯಾರ ‘ಜಾತಿ ಪದ್ಧತಿ’ ಥರದ ಪುಸ್ತಕಗಳ ಗ್ರಹಿಕೆಗಳನ್ನು ನಾವು ದಣಿಯದೆ ಹಬ್ಬಿಸುತ್ತಲೇ ಇರಬೇಕಾಗುತ್ತದೆ. ಮೇಲುಜಾತಿಯ ಹುಡುಗ ಹುಡುಗಿಯರ ಪೂರ್ವಗ್ರಹಗಳು; ದಮನಿತ ಜಾತಿಗಳ ಹುಡುಗ, ಹುಡುಗಿಯರ ಗೊಂದಲ, ಕೀಳರಿಮೆಗಳು ಇವೆಲ್ಲವನ್ನೂ ನಿತ್ಯ ಚದುರಿಸುತ್ತಲೇ ಇರಬೇಕಾಗುತ್ತದೆ. ನಾವೆಲ್ಲ ‘ಮೇಷ್ಟ್ರು’ ಎನ್ನುತ್ತಿದ್ದ ಲಂಕೇಶರ ಧಾಟಿಯಲ್ಲಿ ಹುಡುಗರ ತಳಮಳ, ಗೊಂದಲಗಳನ್ನು ವ್ಯವಧಾನದಿಂದ ಅರ್ಥ ಮಾಡಿಕೊಳ್ಳುವ, ಮಕ್ಕಳ ಮನಸ್ಸಿನ ಕೊಳೆ ತೊಳೆಯುವ ಕೆಲಸ ಎಲ್ಲ ಕಾಲಗಳಲ್ಲೂ ನಡೆಯುತ್ತಿರಬೇಕಾಗುತ್ತದೆ; ಅದರಲ್ಲೂ ಪತ್ರಕರ್ತರು, ಸಾರ್ವಜನಿಕ ಭಾಷಣಕಾರರು, ಮೇಡಂಗಳು, ಮೇಷ್ಟ್ರುಗಳು ಈ ಕೆಲಸವನ್ನು ದಣಿವರಿಯದೆ ಮಾಡುತ್ತಲೇ ಇರಬೇಕಾಗುತ್ತದೆ.
ಮೇಲಿನ ಟಿಪ್ಪಣಿಗಳನ್ನು ಬರೆಯುತ್ತಿದ್ದ ದಿನ ಗೆಳೆಯ ಡಿ. ಉಮಾಪತಿಗೆ ಕರ್ನಾಟಕ ಸರ್ಕಾರದ ‘ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ ಬಂದ ವರದಿ ಓದಿದೆ. ಲಂಕೇಶ್, ವಡ್ಡರ್ಸೆ, ಉಮಾಪತಿ… ಹೀಗೆ ಕರ್ನಾಟಕದಲ್ಲಿ ಕೊಂಡಿ ಕಳಚದೆ ಮುಂದುವರಿಯುತ್ತಲೇ ಇರುವ ಪತ್ರಿಕೋದ್ಯಮದ ಪ್ರೋಗ್ರೆಸೀವ್ ಪರಂಪರೆಯ ಒಂದು ಮಹತ್ತರ ಧಾರೆ ನನ್ನೆದುರು ಮೂಡತೊಡಗಿತು. ವಡ್ಡರ್ಸೆ ರಘುರಾಮಶೆಟ್ಟರು ದಶಕಗಳ ಕೆಳಗೆ ‘ಮುಂಗಾರು’ ಪತ್ರಿಕೆ ಮಾಡಿ, ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರ ಪರ ನಿಲ್ಲಬಲ್ಲ ಗಟ್ಟಿ ಪತ್ರಕರ್ತರನ್ನು, ಓದುಗ ಓದುಗಿಯರನ್ನು ಸೃಷ್ಟಿಸಿದರು. ವಡ್ಡರ್ಸೆಯಂಥವರು ಬಿತ್ತಿದ ಸಮಾಜವಾದಿ ಚಿಂತನೆ, ಹಿಂದುಳಿದ ವರ್ಗಗಳ ಪರ ಚಿಂತನೆಗಳು ಕರ್ನಾಟಕದಲ್ಲಿ ಸಮಾನತೆಯ ದನಿಗಳಾಗಿ ಹಬ್ಬುತ್ತಲೇ ಇರುತ್ತವೆ ಎಂಬುದನ್ನು ಕರ್ನಾಟಕದ ಪ್ರಗತಿಪರ ಚರಿತ್ರೆ ಖಚಿತವಾಗಿ ದಾಖಲಿಸಬೇಕಾಗುತ್ತದೆ. ಇಂಥ ಆರೋಗ್ಯಕರ ಮಾದರಿ ವಿಭಿನ್ನ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಉಮಾಪತಿ ಥರದ ಹಲವರಲ್ಲೂ ಮುಂದುವರಿಯುತ್ತಲೇ ಇರುತ್ತದೆ.
ಮೂವತ್ತೇಳು ವರ್ಷಗಳ ಕೆಳಗೆ ಸಂಜೆ ಏಳು ಗಂಟೆಯ ಸುಮಾರಿಗೆ ಬೆಂಗಳೂರಿನ ‘ಕನ್ನಡಪ್ರಭ’ ಕಛೇರಿಯ ಒಂದನೇ ಮಹಡಿಯಲ್ಲಿ ಟೇಬಲ್ಲಿನ ಎದುರು ಕೂತ ಉಮಾಪತಿಯವರನ್ನು ಮೊದಲ ಸಲ ಕಂಡ ನೆನಪಾಗುತ್ತದೆ. ಅವತ್ತು ಮೈಕೇಲೇಂಜಲೋ ಕಡೆದ ಕಪ್ಪು ಶಿಲೆಯ ಶಿಲ್ಪದಲ್ಲಿ ಒಡಮೂಡಿದ್ದ ಗಟ್ಟಿ ಯೋಧನಂತೆ ಕಂಡಿದ್ದ ಉಮಾಪತಿ ಎಂಟು ವರ್ಷಗಳ ಕೆಳಗೆ ದೆಹಲಿಯಲ್ಲಿ ಸಿಕ್ಕಾಗಲೂ ಹಾಗೇ ಕಂಡಿದ್ದರು. ಈ ಎರಡೂ ಭೇಟಿಗಳ ನಡುವೆ, ಅನಂತರದ ಮಾತುಕತೆಗಳಲ್ಲಿ, ಬರೆದ ಬರಹಗಳಲ್ಲಿ ಕೂಡ ಉಮಾಪತಿಯವರನ್ನು ಕಂಡಿರುವೆ: ಕಾಳಜಿ-ಕೋಪ-ಖಚಿತ ನೈತಿಕನಿಲುವು ಬೆರೆತ ಅವರ ವಿಶ್ಲೇಷಣೆಗಳಲ್ಲಿ ಅವರ ವ್ಯಕ್ತಿತ್ವ ಹಲವು ದಶಕಗಳಿಂದಲೂ ಸಮಗ್ರವಾಗಿ ಒಂದೇ ಎಂಬಂತೆ ಒಡಮೂಡುತ್ತಲೇ ಇರುವುದನ್ನು ಗಮನಿಸಿರುವೆ.
ದನಿಯಲ್ಲದವರ ಜೊತೆ ನಿಂತು, ಕೋಮುವಾದ-ಜಾತಿವಾದ-ಭ್ರಷ್ಟಾಚಾರಗಳ ದುಷ್ಟತನಗಳನ್ನು ಮುಖಾಮುಖಿಯಾಗುತ್ತಲೇ ಇರುವ ಡಿ. ಉಮಾಪತಿ ವಡ್ಡರ್ಸೆಯವರ ಹೆಸರಿನ ಪ್ರಶಸ್ತಿಗೆ ಅತ್ಯಂತ ಅರ್ಹ ಲೇಖಕ ಎಂಬುದನ್ನು ನನ್ನಂತೆಯೇ ಮನಸಾರೆ ಹೇಳಬಲ್ಲ ಜನ ಕರ್ನಾಟಕದಲ್ಲಿ ಹಲವರಿದ್ದಾರೆ. ಅರ್ಥಪೂರ್ಣವಾದ ಪ್ರಶಸ್ತಿಯೊಂದು ಹೊರಿಸಿದ ಜವಾಬ್ದಾರಿ ಗೆಳೆಯ ಉಮಾಪತಿಯವರ ಬರಹಗಳನ್ನು ಇನ್ನಷ್ಟು ಗಾಢ ಹಾಗೂ ಜೀವಂತವಾಗಿಸಲಿ. ಲಂಕೇಶ್, ವಡ್ಡರ್ಸೆ ಥರದವರ ಪರಂಪರೆ ಉಮಾಪತಿಯವರಲ್ಲಿ ಹಾಗೂ ಅವರು ಭಾಗಿಯಾಗಿರುವ ಈ ಕಾಲದ ಪ್ರಬಲ ಪ್ರೋಗ್ರೆಸೀವ್ ವೇದಿಕೆಗಳಲ್ಲೊಂದಾದ ‘ಈದಿನ.ಕಾಂ’ ಸಂಸ್ಥೆಯಲ್ಲಿ ಪ್ರಖರವಾಗಿ ಮುಂದುವರಿಯುತ್ತಿರಲಿ.
Comments
15 Comments
| ಮಂಜುನಾಥ್ ಸಿ ನೆಟ್ಕಲ್
ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪಡೆದ ನನ್ನ ಮೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ ಡಿ.ಉಮಾಪತಿಯವರಿಗೆ ಹಾರ್ದಿಕ ಅಭಿನಂದನೆಗಳು. ಪ್ರಗತಿಪರ ವಿಚಾರಧಾರೆಯನ್ನು ಹಾಗೂ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಸಂವೇದನೆಯನ್ನು , ಕೋಮುವಾದಿಗಳ ಬಣ್ಣ ತಮ್ಮ ಅಂಕಣಗಳ ಮೂಲಕ ಬಯಲು ಮಾಡುತ್ತಾ ನಮಗೆಲ್ಲ ಅರಿವು ಮೂಡಿಸುತ್ತಿರುವ ಉಮಾಪತಿ ಅವರಿಂದ ಇನ್ನಷ್ಟು ವಿಚಾರ ಪೂರ್ಣ ವಾಸ್ತವದ ರಾಜಕೀಯ ವಿಶ್ಲೇಷಣೆಗಳನ್ನು ನಿರೀಕ್ಷಿಸುತ್ತಿದ್ದೇನೆ. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಮೀಸಲಾತಿ ಕುರಿತ ಗೊಂದಲಗಳನ್ನು ಲಂಕೇಶ್ ಪರಿಹರಿಸುತ್ತಿದ್ದ ಕ್ರಮವನ್ನು ವಿವರಿಸಿ ಎಲ್ಲಾ ಕಾಲಕ್ಕೂ ಸಲ್ಲುವ ಲಂಕೇಶ್ವರ ಈ ಪ್ರಖರ ವಿಚಾರಧಾರೆಯನ್ನು ಇಂದಿನ ಯುವ ಜನರಿಗೂ ನಮಗೂ ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್
| ಪ್ರಕಾಶ್ ಮಂಟೇದ
ಒಂತರ ....ಹಳ್ಳಿಯ ಪತನ, ಸಾಮಾಜಿಕ ಜಾತಿ ಪೆಡಸುತನ, ಕೋಮುವಾದದ ರಾಜಕಾರಣದ ಮಂಗಾಟಗಳ ನಡುವೆ ತಮ್ಮದೇ ಕ್ರೇಜ್ ಗಳಲ್ಲಿ ಕಳೆದು ಹೋಗುತ್ತಿರುವ ಇಂದಿನ ಯುವಜನತೆ ಹಾಗೂ ಸಂವೇದನಾಶೀಲತೆ ಇಲ್ಲದ ಅಧ್ಯಾಪಕ ವರ್ಗದ ನಡುವೆ ಲಂಕೇಶ್ ಸರ್, ಉಮಾಪತಿ ಸರ್ ಮತ್ತೆ ನಿಮ್ಮ ಬರಹ ಏನೋ ಭರವಸೆ ನೀಡುತ್ತದೆ.ಆತ್ಮವಿಶ್ವಾಸ ಪುಟಿವಂತೆ ಮಾಡುತ್ತದೆ. ಜಾತಿ ವಿನಾಶದ ಸಂವೇದನೆಯನ್ನು ಈಗ ಮತ್ತಷ್ಟು ತೀವ್ರಗೋಳಿಸಬೇಕಿದೆ. ಇದು ಎಲ್ಲ ತರದ ಸಮಾಜವಾದದ ಬಹುಮುಖಿ ಧಾರೆಗಳ ಮೂಲಕ ಶುರುವಾಗಬೇಕಿದೆ....ಬಾರು ಕೋಲು ಚರ್ಚೆಯನ್ನು ನಾವು ಈ ಹೊತ್ತಿನಲ್ಲಿ ತೀವ್ರಗೊಳಿಸಬೇಕಿದೆ. ಧನ್ಯವಾದಗಳೊಂದಿಗೆ ನಿಮ್ಮ ವಿದ್ಯಾರ್ಥಿ ಪ್ರಕಾಶ್ ಮಂಟೇದ ಡಿ.ಆರ್ ನಾಗರಾಜ್ ಬಳಗ ದೊಡ್ಡಬಳ್ಳಾಪುರ
| ಹರಿಪ್ರಸಾದ್ ಬೇಸಾಯಿ
ಇದು ಚಂದಾಗದೆ ಸಾ. ಇದರ ಜೊತೆಗೆ ನೀವೇ ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ನಡೆದ ಸಮೀಕ್ಷೆ ಕುರಿತಾಗಿ ಟೀವಿ ಸಂದರ್ಶನದಲ್ಲಿ ಆಡಿದ ಮಾತುಗಳನ್ನು ಸೇರಿಸಿ ಬರೆದಿದ್ದರೆ- ಈವತ್ತಿನ ಅನೇಕ ಗೊಂದಲಿಗರಿಗೆ - ಹೆಚ್ಚು ಸಮರ್ಪಕವಾಗಿ ಮುಟ್ಟಿಸಬಹುದಿತ್ತು.
| ನಟರಾಜ್ ಹುಳಿಯಾರ್ ಉತ್ತರ
ಪ್ರಿಯ ಹರಿಪ್ರಸಾದ್ ನೀವು ಹೇಳಿರುವ ನನ್ನ ಮಾತು ಕಂಡರೆ ಕಳಿಸಿ
| ಪಿ. ಮಹಮ್ಮದ್
_/\_
| ಮಲ್ಲಿಕಾರ್ಜುನ್
ಒಂದು ಲೇಖನ ಓದಿ, ಒಂದು ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಲಂಕೇಶರಿಂದ ಪಾಠ ಕೇಳಿದ ಅನುಭವವಾಯಿತು
| ಹುಲಿಕುಂಟೆ ಮೂರ್ತಿ
ಇವತ್ತಿಗೆ ಅತ್ಯಂತ ಮುಖ್ಯವಾದ ಬರಹ ಸಾರ್. ಲಂಕೇಶರ ಮೂಲಕ ಉಮಾಪತಿ ಸರ್ ಅವರಿಗೆ ಅಭಿನಂದನೆ ಸಲ್ಲಿಸಿದಹಾಗಿದೆ....🙏
| ವಿಜಯಾ
ಹಲವು ಸಂದೇಹಗಳನ್ನು ಪರಿಹರಿಸಿದ ಲೇಖನ ನಟರಾಜ್.ಒಳ್ಳೆಯ ಕೆಲಸ ಮಾಡಿದಿರಿ
| ಮಹೇಶ್ ಹರವೆ
ನಲವತ್ತು ವರ್ಷಗಳಲ್ಲಿ ಸಮಾಜ ಎಷ್ಟೋ ದೂರ ಮುನ್ನಡೆಯಬೇಕಿತ್ತು.ಆದರೆ ನಾವು ಸಮಾಜದ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸದ ಕಾರಣ ಸಮಾಜದ ಚಲನೆಯನ್ನು ೮೦ ವರ್ಷಗಳಷ್ಟು ಹಿಂದೆ ನೂಕಿದ್ದೇವೆ. ಸಮಾಜವನ್ನು ಬಗ್ಗಡಗೊಳಿಸುವವರಲ್ಲಿರುವುದು ಒಂದೇ ಅಜಾಂಡ ಅದನ್ನು ಅವರು ಯಾವುದೇ ನೈತಿಕತೆಯ ನೆಲೆಯನ್ನೂ ನೋಡದೆ ಪಟ್ಟಾಗಿ ಕ್ರಿಯಾಶೀಲಗೊಳಿಸುತ್ತಾರೆ.ಆದರೆ ನಾವು ನಮ್ಮನಮ್ಮದೇ ಸಿದ್ಧಾಂತಗಳು ದೋಣಿಯಲ್ಲಿ ಕುಳಿತು ನಮಗೆ ನಾವೇ ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗುತ್ತಿದ್ದೇವೆ. ನಾವು ನಮ್ಮ ನಮ್ಮ ಇಗೋ ಗಳನ್ನು ಬದಿಗಿಟ್ಟು ಸಾಮಾಜಿಕ ಸಂರಚನೆಗೆ ತೊಡಗಬೇಕಾದ ಅನಿವಾರ್ಯತೆ ಇದೆ ಅನ್ನಿಸಿತು. ನಿಮ್ಮ ಸಕಾಲಿಕ ಬರಹಕ್ಕೆ ಧನ್ಯವಾದಗಳು ಅಣ್ಣ.
| ರವಿಕುಮಾರ್
ಅರ್ಥಪೂರ್ಣ ಲೇಖನ
| Subramanyaswamy Swamy
ಪ್ರಗತಿ ಪರ ಸಾಮಾಜಿಕ , ಸಾಂಸ್ಕೃತಿಕ ಚಿಂತನೆ ಬರಹಗಳ ಮೂಲಕ ಒಂದು ತಲೆಮಾರಿನ ಆಲೋಚನೆಯ ದಿಕ್ಕನ್ನು ವಡ್ಡರಸೆಯವರು ಬದಲಾಯಿಸಿದರು ಹಾಗೆ ಉಮಾಪತಿಯಂತವರು ದಿಟ್ಟತನದಿಂದ ಪತ್ರಿಕಾ ರಂಗದಲ್ಲಿ ಕೆಲಸ ಮಾಡಿದರು. ಹಾಗೆ ವಡ್ಡರಸೆಯವರ ಮಗ ಮಧುಕರ್ ಶೆಟ್ಟಿ ಲೋಕಾಯುಕ್ತ ಎಸ್ ಪಿ ಆಗಿ ಮುಖ್ಯಮಂತ್ರಿ, ಶಾಸಕರು, ಒಳಗೊಂಡಂತೆ ಜೈಲಿಗೆ ಹಟ್ಟಿದರು.
| ಗುರು ಜಗಳೂರು
ಸರ್ ಈ ಮೂವತ್ತು ವರ್ಷಗಳಲ್ಲಿ ಸಾಕಷ್ಟು ನೀರು ಹರಿದಿದೆ. ಮೀಸಲಾತಿ ವಿಷಯದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಪಬ್ಲಿಕ್ ಸೆಕ್ಟರ್ ದುರ್ಬಲವಾಗಿದೆ.ಖಾಸಗಿರಂಗದಲ್ಲಿರುವ challenge ಗಳಿಗೆ ಈಗಿನ ಪೀಳಿಗೆಯನ್ನು ಸಿದ್ದಗೊಳಿಸಬೇಕಾಗಿದೆ.ಸರ್ಕಾರ ತನ್ನ ಬಳಿ ಚಿನ್ನದ ನಿಕ್ಷೇಪವೇ ಇದೆಯೆಂದು ಬಿಂಬಿಸಿಕೊಳ್ಳುತ್ತಿದೆ.ಆದರೆ ಮೀಸಲಾತಿ ಬಗೆಗಿನ ಸರ್ಕಾರದ ನಿಲುವುಗಳೇ ಸಂಶಯಾಸ್ಪದವಾಗಿದೆ.
| ಗುರು ಜಗಳೂರು
ಉಮಾಪತಿಯವರಿಗೆ ಅಭಿನಂದನೆಗಳು.ಪ್ರಮುಖ ಪತ್ರಿಕೆಯಲ್ಲಿ ಸೊಗಸಾಗಿ ಬರೆಯುತ್ತಿದ್ದ ಇವರು ಮತ್ತು ಪದ್ಮರಾಜ ದಂಡಾವತಿಯವರು ನೇಪತ್ಯಕ್ಕೆ ಸರಿದಿದ್ದು ಬೇಸರದ ಸಂಗತಿ.
| ದೇವಿಂದ್ರಪ್ಪ ಬಿ.ಕೆ.
ಲಂಕೇಶ್, ವಡ್ಡರ್ಸೆ, ಉಮಾಪತಿ... ಹೀಗೆಯೇ ಈ ಹೆಸರುಗಳು ಮುಂದುವರೆಯಲಿ. ನಮ್ಮ ಬಾಲ್ಯದಲ್ಲಿ ನಾವು ಬೆಳೆದ ಪರಿಸರ ಜಾತ್ಯತೀತವಾಗಿತ್ತು. ಅನೇಕ ಸಮುದಾಯಗಳು ವಾಸಿಸುವ ಜನರ ನಡುವೆ ನಾನು ಬಾಲ್ಯ ಕಳೆದೆ. ಶಾಲೆಯಲ್ಲಿಯೂ ಸಹ ಶಿಕ್ಷಕರು ಜಾತಿಭೇದ ಮಾಡದೇ ನಮ್ಮನ್ನು ಪೋಷಿಸಿದರು. ನಂತರ ಬದುಕಿನಲ್ಲಿ ಉನ್ನತ ಶಿಕ್ಷಣಕ್ಕೆ ಬಂದ ನಂತರ ಗಾಂಧೀಜಿ, ಅಂಬೇಡ್ಕರ್ ಲೋಹಿಯಾ, ಲಂಕೇಶ್, ತೇಜಸ್ವಿ, ಶಾಂತವೇರಿ ಗೋಪಾಲಗೌಡರ ಕುರಿತು ಓದುವಾಗ ಇವರೆಲ್ಲ ತಮ್ಮ ಬದುಕಿನ ಕುರಿತು ತಾಳಿದ ನಿಲುವುಗಳು ಮುಂದೆ ಅನೇಕರಿಗೆ ಪ್ರೇರಣೆಯಾದವು. ಇಂದು ಪತ್ರಿಕಾ ಮಾಧ್ಯಮ ತನ್ನ ಮೌಲ್ಯ ಕಳೆದುಕೊಂಡಿದೆ ಎನ್ನುವಾಗಲೂ ಸಹ ಉಮಾಪತಿ ಅವರಂತಹ ಬದ್ಧತೆ ಇರುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ ಎನ್ನುವುದಕ್ಕೆ ಅವರಿಗೆ ಸಂದ ಪ್ರಶಸ್ತಿಯೇ ಕಾರಣ. ಅವರು ದೆಹಲಿಯಲ್ಲಿ ಇದ್ದಾಗ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. ಅದನ್ನು ಓದಿದಾಗ ಅವರಿಗಿರುವ ಸೂಕ್ಷ್ಮ ನೋಟಗಳು ಮತ್ತು ಜೀವಪರ ನಿಲುವುಗಳು ನಮಗೆ ಮನವರಿಕೆ ಆಗುತ್ತವೆ. ಒಮ್ಮೆ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಿದ್ದರು ಅಂದು ಅವರ ಉಪನ್ಯಾಸ ಕೇಳಿದ ನನಗೆ ರೋಮಾಂಚನವಾಯಿತು.ಇಂದಿನ ಯುವಕರಲ್ಲಿ ಜಾತಿ ಬಗೆಗೆ ಬೆಳೆಯುತ್ತಿರುವ ಕುರುಡು ನಂಬಿಕೆಗೆ ನಮ್ಮ ಲೇಖಕರ ಕೃತಿಗಳಲ್ಲಿ ಉತ್ತರವಿದೆ. ಓದಿ ನಮ್ಮನ್ನು ನಾವು ಅರಿತು ಕೊಳ್ಳಬೇಕಿದೆ. ಸಮಕಾಲೀನ ಬರಹ ಸರ್. ಧನ್ಯವಾದಗಳು.
| ಡಾ. ನಿರಂಜನ ಮೂರ್ತಿ ಬಿ ಎಂ
'ಲಂಕೇಶ್, ವಡ್ಡರ್ಸೆ, ಉಮಾಪತಿ...' ಶೀರ್ಷಿಕೆಯ ಈ ಲೇಖನ ಸಕಾಲಿಕ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ; ಜನಜಾತಿ ಗಣತಿ; ಮೀಸಲಾತಿ, ಮುಂತಾದ ಪಚಲಿತ ವಿಷಯದ ಬಗ್ಗೆ ಲಂಕೇಶರಿಂದ ಹಿಡಿದು, ವಡ್ಡರ್ಸೆಯವರನ್ನೊಳಗೊಂಡು, ಉಮಾಪತಿಯವರ ಮಾತು-ಕೃತಿಗಳನ್ನು ಆಧಾರವಾಗಿಟ್ಟುಕೊಂಡು, ಸಮರ್ಥನೆ ಮಾಡಿರುವ ರೀತಿ, ಮಾನವೀಯ ಅಂತಃಕರಣದ ಸಂಬಂಧವನ್ನು ಬೆಸೆದು, ಜಾತಿರಹಿತ-ವರ್ಗರಹಿತ ಸಮ ಸಮಾಜ ನಿರ್ಮಾಣದ ಪಥದಲ್ಲಿ ಓದುಗರನ್ನು ಕರೆದೊಯ್ಯುತ್ತಿದೆಯೆಂಬುದು ನನ್ನ ಅನಿಸಿಕೆ. ಹುಳಿಯಾರರಿಗೆ ನಮನಗಳು.
Add Comment