ಕಾವ್ಯ- ರಾಜಕಾರಣ: ಸಂಕೀರ್ಣ ನಂಟು
by Nataraj Huliyar
ಭಾನುವಾರ ಬೆಳಗ್ಗೆ ಬರೆಯಲು ಹೊರಟಿದ್ದ ವಸ್ತುವೊಂದರ ಬಗ್ಗೆ ಅರೆ ಮನಸಿನ ಅಕ್ಷರಗಳು ಲ್ಯಾಪ್ ಟಾಪ್ ತೆರೆಯ ಮೇಲೆ ಮೂಡುತ್ತಿರುವ ಗಳಿಗೆಯಲ್ಲೇ ಬಂದ ಕವಿಯೊಬ್ಬರ ಫೋನು ಈ ಅಂಕಣವನ್ನು ಮತ್ತೊಂದು ವಸ್ತುವಿನತ್ತ ಕರೆದೊಯ್ದಿತು!
ಆ ಕವಿ ನಿನ್ನೆ ತಾನೇ ಒಂದು ಕವಿಮೇಳದಲ್ಲಿ ಮಾತಾಡಿದ್ದರು.
‘ಏನು ಕರೆ ಕೊಟ್ಟಿರಿ?’
‘ಕವಿಗಳು ಹೇಗೆ ಸಾಮಾಜಿಕ ಪ್ರಜ್ಞೆ- ರಾಜಕೀಯ ಪ್ರಜ್ಞೆ ಇಟ್ಟುಕೊಂಡು ಬರೆಯಬೇಕು ಇತ್ಯಾದಿ ಹೇಳಿದೆ.’
‘ನೀವೇ ಬರೆದು ತೋರಿಸದೆ, ರಾಜಕೀಯ ಪಕ್ಷದ ಪ್ರಣಾಳಿಕೆಯಂತೆ ಕರೆ ಕೊಟ್ಟರೆ ಯಾರು ನಿಮ್ಮ ಮಾತು ಕೇಳಿ ಅದರಂತೆ ಬರೆಯುತ್ತಾರೆ?’
ಹೀಗೆ ಕವಿಯನ್ನು ಚಣ ಕೆಣಕಿ ಫೋನಿಟ್ಟ ನಂತರ, ಹಲವು ವರ್ಷಗಳ ಕೆಳಗೆ ನಾನು ಅನುವಾದಿಸಿಕೊಂಡಿದ್ದ ಚಿಲಿಯ ಕವಿ ಪಾಬ್ಲೊ ನೆರೂಡನ ‘ಟುವರ್ಡ್ ಇಂಪ್ಯೂರ್ ಪೊಯೆಟ್ರಿ’ ಪ್ರಣಾಳಿಕೆ ನೆನಪಾಯಿತು. ನೆರೂಡನ ಕಾವ್ಯ ತನ್ನ ಕಾಲದ ರಾಜಕಾರಣ, ಶ್ರಮಜೀವಿಗಳ ಬದುಕು, ಕಮ್ಯುನಿಸಂ, ರಾಜಕಾರಣಿಗಳ ಒಟನಾಟ ಇತ್ಯಾದಿಗಳಿಂದ ಪಡೆದ ಸರಕು, ರಾಜಕೀಯ ಪ್ರಜ್ಞೆ ಇವೆಲ್ಲ ನೆರೂಡನಂತೆಯೇ ಕವಿತೆ ಬರೆಯಲು ಹೊರಟ ಹಲವರಿಗೆ ದಕ್ಕಿದಂತಿಲ್ಲ.
ಇದಕ್ಕೆ ಒಂದು ಕಾರಣ ಹೀಗಿರಬಹುದು: ನೆರೂಡ ರಾಜಕಾರಣ, ಜನಮಾನಸದ ಕಷ್ಟ ಸುಖ ಎಲ್ಲದರ ಜೊತೆಯಿದ್ದರೂ ಅವನ ಮೂಲ ಪ್ರಜ್ಞಾಕೇಂದ್ರ ಸಾಹಿತ್ಯವಾಗಿತ್ತು; ಅದರಲ್ಲೂ ಅವನ ಪ್ರಜ್ಞಾಕೇಂದ್ರ ಕಾವ್ಯ ಆಗಿತ್ತು. ಎಲ್ಲವನ್ನೂ ಗ್ರಹಿಸುವ ಮೂಲ ಸಂವೇದನಾಕೇಂದ್ರವಾಗಿ ಕಾವ್ಯ ಪ್ರಜ್ಞೆ ನೆರೂಡನ ನೆರವಿಗೆ ಬರುತ್ತಿತ್ತು.
ನನ್ನ ‘ಗಾಳಿ ಬೆಳಕು’ ಪುಸ್ತಕದಲ್ಲಿರುವ ನೆರೂಡನ ಕಾವ್ಯ ಪ್ರಣಾಳಿಕೆಯನ್ನು ಮತ್ತೆ ಓದುತ್ತಾ, ಅದನ್ನು ಈ ಅಂಕಣದ ಶುರುವಿನಲ್ಲಿ ಹೇಳಿದ ಕವಿಯ ಗಮನಕ್ಕೂ ತರಬೇಕೆನ್ನಿಸಿ, ‘ಅಶುದ್ಧ ಕಾವ್ಯದೆಡೆಗೆ’ ಎಂಬ ನೆರೂಡನ ಕಾವ್ಯ ಪ್ರಣಾಳಿಕೆಯ ಭಾಗಗಳನ್ನು ಇಲ್ಲಿ ಮತ್ತೆ ಕೊಡುತ್ತಿದ್ದೇನೆ. ಕಾವ್ಯದ ಆವರಣವನ್ನು 'ಶುದ್ಧ'ವಾಗಿಟ್ಟುಕೊಳ್ಳಲು ಬಯಸುವವರನ್ನು ಕಂಡು ನೆರೂಡ 'ಅಶುದ್ಧ ಕಾವ್ಯ ಕುರಿತು' ಎಂಬ ಗದ್ಯ ಪ್ರಣಾಳಿಕೆ ಬರೆದಿದ್ದ:
‘ಬೆಳಗಿನ ಅಥವಾ ರಾತ್ರಿಯ ಯಾವುದೋ ಒಂದು ನಿರ್ದಿಷ್ಪ ಹೊತ್ತಿನಲ್ಲಿ ವಿಶ್ರಾಂತಿಯಲ್ಲಿರುವ ವಸ್ತುಗಳನ್ನು ನೋಡುವುದು ಒಳ್ಳೆಯದು: ಹಣ್ಣು, ತರಕಾರಿಗಳು, ಇದ್ದಿಲು ಮೂಟೆಗಳು, ಬ್ಯಾರಲ್ಲುಗಳು, ಬುಟ್ಟಿಗಳು, ಬಡಗಿಯ ಉಳಿ, ಸುತ್ತಿಗೆಗಳು- ಇವೆಲ್ಲವನ್ನೂ ಹೊತ್ತು, ಧೂಳು ತುಂಬಿದ ಲೋಕಗಳನ್ನು ಹಾಯ್ದು ಬಂದ ಚಕ್ರಗಳನ್ನು ಒಂದು ಗಳಿಗೆ ಗಮನಿಸಿ.
ಅಲ್ಲಿಂದ ಒಸರುವ ಮಣ್ಣಿನ ಸ್ಪರ್ಶ ಹಾಗೂ ಮನುಷ್ಯನ ಸ್ಪರ್ಶಗಳು ಪ್ರಕ್ಷುಬ್ಧಗೊಂಡಿರುವ ಕವಿಗೆ ಹಲವು ಪಾಠಗಳನ್ನು ಕಲಿಸುತ್ತವೆ. ಸವೆದ ಹೊರಮೈಗಳು, ಸಾಮಾನುಗಳ ಮೇಲೆ ಬಿದ್ದ ಕೈಗುರುತುಗಳು, ಆ ಗುರುತುಗಳ ಸುತ್ತ ಒಮ್ಮೊಮ್ಮೆ ದುರಂತದ, ಇನ್ನೊಮ್ಮೆ ಕಳೆದುಹೋದ ಏನನ್ನೋ ಕುರಿತು ಆಸೆಗಣ್ಣಾಗಿ ನಿಂತಂತೆ ತೋರುವ ಪ್ರಭಾವಳಿ... ಇವೆಲ್ಲ ದೈನಂದಿನ ವಾಸ್ತವದ ಜಗತ್ತಿಗೆ ಎಂಥ ವಿಚಿತ್ರ ಕ್ರಾಂತಿ ತರುತ್ತವೆಯೆಂದರೆ ಅವನ್ನೆಲ್ಲ ನಾವು ಹಗುರಾಗಿ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ.
ಮನುಷ್ಯರ ಗೊಂದಲಗಳೆಲ್ಲವೂ ಅಲ್ಲಿ ಕಾಣಿಸಿಕೊಳ್ಳುತ್ತವೆ. ಅಣುಗಳು, ಬಳಸಿದ, ಬಳಸಿ ಬಿಸಾಕಿದ ಸಾಮಾನುಗಳು, ಹೆಜ್ಜೆ, ಕೈಬೆರಳುಗಳ ಗುರುತುಗಳು ಹಾಗೂ ಮಾನವಕುಲದ ಶಾಶ್ವತ ಚಹರೆಗಳು ಈ ಎಲ್ಲ ವಸ್ತುಗಳ ಒಳಗೂ ಹೊರಗೂ ಕಾಣಿಸಿಕೊಳ್ಳುತ್ತವೆ.
ನಾವು ಹುಡುಕಿಹೊರಡಬೇಕಾಗಿರುವುದು ಇಂಥ ಕಾವ್ಯವನ್ನು. ಆಸಿಡ್ ಬಿದ್ದು ಸವೆದಿದೆಯೇನೋ ಎಂಬ ಭ್ರಮೆ ಹುಟ್ಟಿಸುವಂತೆ, ದುಡಿಯುವ ಕೈಗಳು ತಗುಲಿ ಸವೆದ ಕಾವ್ಯವನ್ನು; ಬೆವರು, ಹೊಗೆ ಮುತ್ತಿದ; ಲಿಲಿ ಹೂಗಳು ಹಾಗೂ ಮೂತ್ರ- ಇವೆರಡರ ವಾಸನೆಯೂ ಬೆರೆತುಹೋದ, ನಮ್ಮ ನೈತಿಕ, ಅನೈತಿಕ ಕೆಲಸಗಳ ಬಗೆಬಗೆಯ ತುಣುಕುಗಳಿಂದ ಕಾವ್ಯವನ್ನು...
ಅಂದರೆ ಹಳೆಯ ಬಟ್ಟೆಗಳಂತೆ 'ಅಶುದ್ಧ'ವಾಗಿ ಕಾಣುವ ಉಂಡ ಅನ್ನದ ಕಲೆಗಳು, ನಾಚಿಕೆ, ಅವಮಾನಗಳು, ಸುಕ್ಕುಗಳು, ಗ್ರಹಿಕೆಗಳು, ಕನಸು, ಎಚ್ಚರ, ಭವಿಷ್ಯವಾಣಿಗಳು, ನಮ್ಮ ಪ್ರೀತಿ-ದ್ವೇಷದ ಘೋಷಣೆಗಳು, ಮೂರ್ಖತನಗಳು, ದಿಗ್ಭ್ರಮೆಗಳು, ಜಾನಪದ ಹಾಡುಗಳು, ರಾಜಕೀಯ ನಂಬಿಕೆಗಳು, ನಿರಾಕರಣೆಗಳು, ಅವಮಾನಗಳು, ಖಡಾಖಡಿ ನಿರ್ಣಯಗಳು, ಬಿದ್ದ ಹೊಡೆತಗಳು ಎಲ್ಲವನ್ನೂ ಹೊತ್ತ ದೇಹದಂತೆ 'ಅಶುದ್ಧ'ವಾಗಿರುವ ಕಾವ್ಯವನ್ನು ನಾವೆಲ್ಲ ಹುಡುಕಿ ಹೊರಡಬೇಕು...’
೧೯೯೯ರ ಸುಮಾರಿಗೆ ನೆರೂಡನ ಈ ಭಾಗಗಳನ್ನು ನಾನು ಅನುವಾದಿಸಿಕೊಂಡಿದ್ದು ಬೆಂಗಳೂರಿನ ‘ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಲೈಬ್ರರಿ’ಯಲ್ಲಿ ಓದಿದ ಯಾವುದೋ ಮ್ಯಾಗಝಿನ್‌ನಿಂದ. ‘ಅದು ಎಲ್ಲಿದೆ?’ ಎಂದು ಹಿಂದೊಮ್ಮೆ ಗೆಳೆಯ ಸಿರಾಜ್ ಅಹ್ಮದ್ ಕೇಳಿದಾಗ, ಅದು ಮತ್ತೆ ಸಿಕ್ಕದೇ ಹೋಯಿತು.
ಈ ಅಂಕಣ ಬರೆಯುತ್ತಾ ಸಿರಾಜ್ ಕೇಳಿದ್ದು ಮತ್ತೆ ನೆನಪಾಗಿ ಒತ್ತಿದ ಬೆರಳ್ಗೆ, ಗೂಗಲ್ ಈ ಕುರಿತ ವಿವರಗಳನ್ನು ಕೊಟ್ಟಿತು.
ನೆರೂಡ ಹುಟ್ಟು ಹಾಕಿದ Caballo verde para la poesia ಎಂಬ ಸ್ಪ್ಯಾನಿಶ್ ಕಾವ್ಯ ಪತ್ರಿಕೆಯ ಮೊದಲ ಸಂಚಿಕೆ ೧೯೩೫ರ ಅಕ್ಟೋಬರ್ ತಿಂಗಳಲ್ಲಿ ಹೊರ ಬಂತು. ನೆರೂಡನ ‘Toward an impure poetry (Para una poesis sin Pureza) ಲೇಖನ ಮೊದಲ ಸಂಚಿಕೆಯಲ್ಲಿ ಪ್ರಕಟವಾಯಿತು ಎಂಬ ವಿವರ ಒಂದೆಡೆಯಿತ್ತು. ಅದು ೧೯೩೯ರಲ್ಲಿ ಪ್ರಕಟವಾಯಿತು ಎಂಬ ವಿವರ ಮತ್ತೊಂದೆಡೆಯಿತ್ತು. ನೆರೂಡ ಕಮ್ಯುನಿಸ್ಟ್ ಪಾರ್ಟಿ ಸೇರಿದ್ದು ೧೯೩೯ರಲ್ಲಿ ಎಂದು ಮತ್ತೊಂದು ವಿವರ ಹೇಳುತ್ತದೆ.
ಫಳಾರನೆ ತಲೆಯಲ್ಲಿ ಏನೋ ಮಿಂಚಿದಂತಾಗಿ ‘ಕುವೆಂಪು ಆಯ್ದ ಕವಿತೆಗಳು’ ಸಂಕಲನ ತೆಗೆದು ನೋಡಿದೆ. ಕುವೆಂಪು ‘ಗೊಬ್ಬರ’ ಕವಿತೆ ಬರೆದ ದಿನಾಂಕ: ೯.೧. ೧೯೩೫. ಹಿಂದೆ ನೆರೂಡನ ಅಶುದ್ಧ ಕಾವ್ಯದೆಡೆಗೆ ಕುರಿತು ಬರೆಯುವಾಗಲೂ ಕುವೆಂಪು ಪದ್ಯ ನೆನಪಾಗಿತ್ತು. ಅವತ್ತು ನೆರೂಡನ ಪ್ರಣಾಳಿಕೆಯ ದಿನಾಂಕ ಗೊತ್ತಿರಲಿಲ್ಲ. ಕುವೆಂಪು ಗೊಬ್ಬರ ಕವಿತೆ ಬರೆದ ದಿನಾಂಕ ಕೂಡ ಸಿಕ್ಕಿರಲಿಲ್ಲ. ಮುಂದೊಮ್ಮೆ ಯಾವುದೋ ಭಾಷಣದಲ್ಲಿ ಒಂದು ಅಂದಾಜಿನ ಮೇಲೆ ಕುವೆಂಪು ನೆರೂಡನಿಗಿಂದ ಮೊದಲು ಈ ಪದ್ಯ ಬರೆದಿದ್ದರು ಎಂದು ಹೇಳಿದ್ದು ನೆನಪಾಯಿತು. ಅಂದಾಜು ಸರಿಯಾಗಿತ್ತು! ಆದರೂ ಅಂಕಿ ಅಂಶಗಳನ್ನು ಕುರಿತು ಅಂದಾಜಿನಲ್ಲಿ ಮಾತಾಡುವುದು ಅಪರಾಧ ಎಂದು ಮತ್ತೊಮ್ಮೆ ತಾಕೀತು ಮಾಡಿಕೊಳ್ಳುತ್ತಾ, ಇದೀಗ ಮತ್ತೆ ಕುವೆಂಪು ಮೂವತ್ತೊಂದನೆಯ ವಯಸ್ಸಿನಲ್ಲಿ ಬರೆದ ’ಗೊಬ್ಬರ’ ಕವಿತೆ ಓದಿದೆ.
‘ಸುಂದರ’ವಾದದ್ದನ್ನೇ ಬರೆಯಬೇಕೆನ್ನುವ ಕವಿಗಡಣದ ಧ್ವನಿಯನ್ನು ಅಣಕಿಸುತ್ತಾ ‘ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ?’ ಎಂದು ಕುವೆಂಪು ಕವಿತೆ ಶುರುವಾಗುತ್ತದೆ…ನಂತರ ಹೀಗೆ ಛೇಡಿಸುತ್ತದೆ:
ನಿರ್ಮಲ ಸರಸ್ವತಿಯ
ವೀಣೆಯಂ ಶೂದ್ರಂ ಕಸಿದುಕೊಂಡು ಗೊಬ್ಬರದ
ಗುಂಡಿಯನ್ನಗೆಯೆ ಗುದ್ದಲಿಯ ಮಾಡಿಹನಲ್ಲ!’
ಇದು ಪರಿಚಿತವಾದ, ಪ್ರಖ್ಯಾತ ಪದ್ಯವಾದ್ದರಿಂದ ಜಾಣ ಓದುಗ, ಓದುಗಿಯರಿಗೆ ಕವಿತೆಯನ್ನು ಇಲ್ಲಿ ಮತ್ತೆ ವಿವರಿಸುವ ಅಗತ್ಯವಿಲ್ಲ. ಕಾವ್ಯ ಪ್ರತಿಮೆಯಾಗಲು ಇವು ತಕ್ಕವಲ್ಲ, ಇವು ’ಅಶುದ್ಧ’ ಎಂದು ಹೀಗಳೆದಿದ್ದ ಅನುಭವಗಳನ್ನು, ವಿವರಗಳನ್ನು ಕಾವ್ಯ ಪ್ರತಿಮೆಗಳನ್ನಾಗಿಸುವ ಕುರಿತು ನೆರೂಡನಿಗಿಂತ ಮೊದಲೇ ಕುವೆಂಪು ಯೋಚಿಸಿದ್ದರು ಎಂಬುದು ಇವತ್ತಿಗೂ ನನ್ನಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಕುವೆಂಪು ಅವರ ಈ ಕಾವ್ಯ ತತ್ವದ ಹಿಂದೆ ಕಮ್ಯುನಿಸಂನ ಚಿಂತನೆಗಳು, ಸ್ವಾತಂತ್ರ‍್ಯ ಚಳುವಳಿ ಎಲ್ಲವೂ ಇದ್ದಿರಬಹುದು. ಆದರೆ ಶೂದ್ರ, ದಲಿತ ವಚನಕಾರ ವಚನಕಾರ್ತಿಯರು ನೆರೂಡ, ಕುವೆಂಪು ಇವರಿಗಿಂತ ಮೊದಲೇ ಈ ’ಅಶುದ್ಧ’ ಎನ್ನಲಾದ ಪ್ರತಿಮೆಗಳನ್ನು ಕಾವ್ಯದಲ್ಲಿ ತಂದಿದ್ದರು ಎಂಬುದು ಕೂಡ ನೆನಪಾಗುತ್ತದೆ.
ಅದೇನೇ ಇರಲಿ, ಕುವೆಂಪುವಿನ ಮಲೆನಾಡಿನಲ್ಲೇ ಮೂಡಿ ಬಂದ ತರುಣ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕುವೆಂಪು ಕಾವ್ಯದಿಂದಲೂ ಸ್ಫೂರ್ತಿ ಪಡೆದದ್ದು ಅಚ್ಚರಿಯಲ್ಲ. ಈ ಕುರಿತು ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದ ಅಧ್ಯಾಯವೊಂದರಲ್ಲಿ ಕುತೂಹಲಕರ ವಿವರವೊಂದು ಬರುತ್ತದೆ. ತೇಜಸ್ವಿ ಒಮ್ಮೆ ಕುವೆಂಪು ಅವರ ಜೊತೆ ಕುಪ್ಪಳಿ ಬಳಿಯ ಇಂಗ್ಲಾದಿಗೆ ಹೋಗುತ್ತಾರೆ. ಆಗಿನ್ನೂ ತೇಜಸ್ವಿಗೆ ಗೋಪಾಲಗೌಡರ ಪರಿಚಯ ಇರಲಿಲ್ಲ. ಆ ಊರಿನಲ್ಲಿ ಗೋಪಾಲಗೌಡರ ಬಗ್ಗೆ ಕೇಳಿ ಬಂದ ಒಂದು ‘ದೂರು’ ಗೋಪಾಲಗೌಡರ ಬಗ್ಗೆ ತೇಜಸ್ವಿಯಲ್ಲಿ ಕುತೂಹಲ ಹುಟ್ಟಿಸುತ್ತದೆ. ಈ ಕುರಿತು ತೇಜಸ್ವಿ ಬರೆಯುತ್ತಾರೆ:
‘ಅಲ್ಲಿ ಶ್ರೀ ಮಾನಪ್ಪನವರೂ, ವಿಜಯದೇವ ಅವರೂ ಅಣ್ಣನ ಜೊತೆ ಮಾತಾಡುತ್ತಾ, ಗೋಪಾಲಗೌಡ ಚಳವಳಿಯಲ್ಲಿ ಹಾಗೂ ಇತರೆಡೆಗಳಲ್ಲಿ ಭಾಷಣ ಮಾಡುತ್ತಾ ನಿಮ್ಮ ‘ಕಲ್ಕಿ’, ‘ನೇಗಿಲಯೋಗಿ’ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಏಕೆಂದರೆ, ಇದರಿಂದ ನನಗೆ ಗೋಪಾಲಗೌಡರ ಬಗ್ಗೆ ಕುತೂಹಲವೂ, ಸ್ವಲ್ಪ ಸದಭಿಪ್ರಾಯವೂ ಪಾರಂಭವಾಯ್ತು...ಗೋಪಾಲಗೌಡ ಕಥೆ, ಕವನಗಳನ್ನು ಓದುವ ಮನುಷ್ಯನಾದರೆ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಸರಿ ಎಂದು ಅನ್ನಿಸಿತ್ತು.’
ಇದು ಕುತೂಹಲಕರ: ಗೋಪಾಲಗೌಡರು ಕನ್ನಡ ಕವಿಗಳ ಕವನಗಳ ಸಾಲುಗಳನ್ನೂ ಆಶಯಗಳನ್ನೂ ತಮ್ಮ ಸಮಾಜವಾದಿ ರಾಜಕಾರಣದಲ್ಲಿ ಬಳಸುತ್ತಿದ್ದಾರೆಂದು ತೇಜಸ್ವಿ ಥರದ ಲೇಖಕರು ಹೆಮ್ಮೆ ಪಡುತ್ತಿದ್ದರೆ, ಹಾಗೆ ಬಳಸುವುದನ್ನು ಆಕ್ಷೇಪಿಸಿ ಕವಿಯ ಬಳಿಗೇ ಹೋಗಿ ದೂರುತ್ತಿದ್ದ ಸುಶಿಕ್ಷಿತರೂ ಅದೇ ಮಲೆನಾಡಿನಲ್ಲಿ ಇದ್ದರು!
ಮುಂದೆ ಅರವತ್ತರ ದಶಕದಲ್ಲಿ ಗೋಪಾಲಗೌಡ ಮತ್ತು ಸಮಾಜವಾದಿ ಪಕ್ಷದಿಂದ ಹಲವು ಪ್ರೇರಣೆಗಳನ್ನು ಪಡೆದ ಲಂಕೇಶರ ಅನುಭವಗಳನ್ನು ನೋಡಿದರೆ, ರಾಜಕಾರಣ ಮತ್ತು ಸಾಹಿತ್ಯಗಳ ಸಂಕೀರ್ಣ ಸಂಬಂಧದ ಇನ್ನಷ್ಟು ಹೊಳಹುಗಳು ಗೋಚರಿಸುತ್ತವೆ. ತಮ್ಮ ‘ಹುಳಿಮಾವಿನ ಮರ’ ಆತ್ಮಕತೆಯಲ್ಲಿ ಲಂಕೇಶ್ ಬರೆಯುವ ಮಾತುಗಳು:
‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು ಮತ್ತು ರೈತರು, ಕಾರ್ಮಿಕರು- ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’
ವ್ಯಕ್ತಿಯ ಆಳಕ್ಕಿಳಿದು ನೋಡುವ, ವ್ಯಕ್ತಿಯನ್ನು ಸ್ವ-ಪರೀಕ್ಷೆಗೆ ಒಡ್ಡುವ ಸೂಕ್ಷ್ಮ ನವ್ಯ ಲೇಖಕರಾಗಿದ್ದ ತೇಜಸ್ವಿ, ಲಂಕೇಶರು ಗೋಪಾಲಗೌಡ ಹಾಗೂ ಸಮಾಜವಾದಿ ಪಕ್ಷದಿಂದ ಸಮುದಾಯ ಪರೀಕ್ಷೆಯ ಲೇಖಕರಾಗಿ ವಿಕಾಸಗೊಂಡದ್ದರ ಹಿಂದೆ ಇವೆಲ್ಲವೂ ಇದೆ.
‘ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ’ ಎಂಬ ಮಾತು ಈಗ ಎಲ್ಲರಿಗೂ ಗೊತ್ತಿದೆ. ಸಾಹಿತ್ಯ ಕೂಡ ಆದರ್ಶ, ಕನಸುಗಳ ಸಾಕಾರಗಳ ಸುತ್ತ ಸುತ್ತುತ್ತಿರುತ್ತದೆ. ಇವೆರಡರ ಸಂಬಂಧದ ಸಂಕೀರ್ಣತೆ ಕುರಿತು ಮತ್ತೆ ಯೋಚಿಸುವಂತೆ ಮಾಡಿದ ಬೆಳಗಿನ ಫೋನ್ ಕರೆಗೆ ಥ್ಯಾಂಕ್ಸ್ ಹೇಳದಿದ್ದರೆ ತಪ್ಪಾಗುತ್ತದೆ!
Comments
8 Comments
| ಸದಾನಂದ ಆರ್
ಸರ್, ಸಾಹಿತ್ಯ ಮತ್ತು ರಾಜಕಾರಣದ ನಡುವಿನ ಸಂಬಂಧ ಸಂಕೀರ್ಣವೆಂದು ವಿವರವಾಗಿ ಮಂಡಿಸಿದ ವಿಚಾರ ಓದುತ್ತಾ ಓದುತ್ತಾ, ಕುವೆಂಪು ತಮ್ಮ ಸಾಮಾಜಿಕ ಸುಧಾರಣೆ ಕೆಲಸಗಳ ಬಗ್ಗೆ ನೆನಪಿನ ದೋಣಿಯಲ್ಲಿ ಕೃತಿಯ ಪುಟ 974-975ಗಳಲ್ಲಿ ಮಂಡಿಸಿರುವ ವಿಚಾರ ಇಲ್ಲಿ ದಾಖಲಿಸಬೇಕೆನಿಸಿತು. ಇದರ ಸಂದರ್ಭ ಹೀಗಿದೆ: ಜೂನ್ 2, 1932 ʻಮಲೆನಾಡು ಒಕ್ಕಲಿಗರ ಯುವಕ ಸಂಘದʼ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಅದರ ಕುರಿತು ಬರೆಯುತ್ತಾ ಕುವೆಂಪು ಹೇಳುತ್ತಾರೆ: "ಸಾಧಾರಣವಾಗಿ, ನನ್ನ ಕವಿ ಬದುಕಿನ ಸಾಹಿತ್ಯಭೂಮಿಕೆಯನ್ನೆ ನನ್ನ ಜೀವನಮೌಲ್ಯದ ಸರ್ವಸ್ವವೆಂಬಂತೆ ನನ್ನ ಜೀವನಚರಿತ್ರೆ ಬರೆದವರು ಮತ್ತು ನನ್ನ ಸಾಹಿತ್ಯ ವಿಮರ್ಶೆ ಮಾಡುವವರು ತಿಳಿದು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ. ನನ್ನ ಸಮಾಜ ಸುಧಾರಣಾ ಪಕ್ಷವನ್ನಾಗಲಿ, ನನ್ನ ವಿಚಾರವಾದೀ ಮನೋಧರ್ಮವನ್ನಾಗಲಿ ಅವರು ಅಷ್ಟೇನು ಗಂಭೀರವಾಗಿ ಗಣನೆಗೆ ತಂದುಕೊಳ್ಳುತ್ತಿಲ್ಲ. ನನ್ನ ಕವಿಪ್ರತಿಭೆ ತನ್ನ ರಸಧರ್ಮಕ್ಕೆ ಒಂದಿನಿತೂ ಭಂಗ ಬರದ ರೀತಿಯಲ್ಲಿ ವೈಚಾರಿಕ ಬುದ್ಧಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಸಮಪ್ರಮಾಣದಲ್ಲಿ ಅಳವಡಿಸಿಕೊಂಡಿರುವುದನ್ನು ಸಹೃದಯರು ಗುರುತಿಸಲಾಗದಿದ್ದರೆ ನನ್ನನ್ನು ಆಂಶಿಕವಾಗಿ ಪರಿಶೀಲಿಸಿದಂತಾಗುತ್ತದೆ; ನನ್ನ ಪೂರ್ಣತ್ವಕ್ಕೆ ಚುತಿ ಬರುತ್ತದೆ. ಅಂದು ಪ್ರಾರಂಭವಾದ ಮಲೆನಾಡು ಒಕ್ಕಲಿಗರ ಯುವಕರ ಸಂಘ ಒಳಹೊಕ್ಕು ನೋಡಿದರೆ ಅದೊಂದು ಕ್ರಾಂತಿಕಾರಿ ಸಂಸ್ಥೆಯಾಗಿತ್ತು. ಒಕ್ಕಲಿಗರ ಎಂಬ ವಿಶೇಷಣ ಮಲೆನಾಡಿನ ದುಃಸ್ಥಿತಿಯ ಪರಿಸ್ಥಿತಿಗೆ ಅನಿವಾರ್ಯವಾಗಿತ್ತು. ಅಲ್ಲಿಯ ಒಕ್ಕಲಿಗರು ಇತರ ಶೂದ್ರವರ್ಗದವರಂತೆ ಬ್ರಾಹ್ಮಣರೊಡ್ಡಿದ ಮತಾಚಾರ ಮೌಢ್ಯ ಸಂಕುಲಗಳ ಬೋನಿನೊಳಗೆ ಸಿಕ್ಕಿಬಿದ್ದ ಇಲಿಗಳಾಗಿದ್ದರು. ಆ ಇಲಿಗಳನ್ನು ಬೋನಿನಿಂದ ಕ್ರೈಸ್ತ ಪಾದ್ರಿಗಳು ತಮ್ಮ ರೀತಿಯ ಪ್ರಯತ್ನಗಳನ್ನು ಮಾಡಿ, ಆ ಬೋನಿನಿಂದ ಹೊರಬಂದವುಗಳನ್ನು ಹಿಡಿದು ಹಾಕಿಕೊಳ್ಳಲು ತಮ್ಮದೇ ಆಗಿರುವ ಬೇರೆ ರೀತಿಯ ಬೋನುಗಳನ್ನು ಒಡ್ಡಿಕೊಂಡಿದ್ದರು. ಶೂದ್ರರು ಬ್ರಾಹ್ಮಣ ಮೌಢ್ಯದ ಬೋನಿನಿಂದ ನೆಗೆದರೆ ಕ್ರೈಸ್ತ ಮೌಢ್ಯದ ಬೋನಿಗೆ ಬೀಳಬೇಕಾಗಿತ್ತು. ಎರಡೂ ಪುರೋಹಿತಶಾಹಿತಗಳೇ! ಎರಡೂ ಪುರಹೋಹಿತಶಾಹಿಗಳು ಬೋನಿನೊಳಗೆ ಇಲಿಗನ್ನಾಕರ್ಷಿಸಲು ಇಡುತ್ತಿದ್ದ ತಿಂಡಿಗಳ ರೂದಪಲ್ಲಿ ಬೇರೆಬೇರೆಯಾಗಿದ್ದರೂ ಸ್ವರೂಪದಲ್ಲಿ ಒಂದೇ ತರಹದ್ದಾಗಿದ್ದವು. ದೇವರು, ಧರ್ಮ, ಪಾಪ, ಪುಣ್ಯ, ಸ್ವರ್ಗ, ನರಕ, ಇತ್ಯಾದಿ ಆಧ್ಯಾತ್ಮಿಕ ವೇಷದ ಮತನಾಮಕ ಗರುಡ ಪುರಾಣದಂತಹ ಸರಕುಗಳು! ನಮ್ಮವರನ್ನು ಈ ಹಳೆಯ ಮತಮೌಢ್ಯದ ಸಂಕುಲಗಳಿಂದ ಪಾರುಮಾಡಿ, ಅವರಿಗೆ ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ನೀಡಿ, ನಿಜವಾದ, ಉಪನಿಷತ್ ಪ್ರಣೀತವಾದ ವೇದಾಂತದ ಆಧ್ಯಾತ್ಮಿಕಶ್ರೀಯಡೆಗೆ ಅವರನ್ನು ಕರೆದೊಯ್ಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅವರಿಗೆ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಪರಿಚಯ ಮಾಡಿಕೊಟ್ಟು ಅವರ ಚೇತನವನ್ನು ಮೇಲೆತ್ತಿದರೆ ಆ ಕೆಲಸ ತನ್ನಷ್ಟಕ್ಕೆ ತಾನೆ ಕೈಗೊಳ್ಳುತ್ತದೆ ಎಂದೂ ನನ್ನ ನಂಬಿಕೆ. ಅದಕ್ಕಾಗಿ, ಮುಂದೊಮ್ಮೆ ನಡೆದ ಮಲೆನಾಡು ಯುವಕರ ಸಂಘದ ವಾರ್ಷಿಕ ಅಧಿವೇಶನ ಒಂದರಲ್ಲಿ ʼಮಲೆನಾಡುವ ಯುವಕರಿಗೆ ಎಂಬ ಭಾಷಣದಲ್ಲಿ (ಅದು ನಿರಂಕುಷಮತಿಗಳಾಗಿ ಎಂಬ ಪುಸ್ತಕದಲ್ಲಿ ಅಚ್ಚಾಗಿದೆ) ಲೌಕಿಕವಾದ ಅನೇಕ ವಿಷಯಗಳಲ್ಲಿ ಹಿತವಾದ ನೀಡಿ, ಕೊನೆಗೆ ಶ್ರೀ ರಾಮಕೃಷ್ಣ ಪರಮಹಂಸರ ಉಪದೇಶಗಳಲ್ಲಿ ಸರ್ವರಿಗೂ ಸರ್ವಸಮ್ಮತವಾದ ಸಂಪೂರ್ಣವಾದ ತೃಪ್ತಿಯ ಆತ್ಮಶ್ರೀ ಲಭಿಸುತ್ತದೆ ಎಂದು ಹೇಳಿ, ಉಪನಿಷತ್ತಿನ ಮಹಾಮಂತ್ರಗಳಿಂದ ಭಾಷಣವನ್ನು ಕೊನೆಗಾಣಿಸಿದ್ದೆ. ಜಕ್ಕಿಣಿ, ಪಂಜ್ರೊಳ್ಳಿ, ಭೂತ, ದೆವ್ವ ಮೊದಲಾದವುಗಳಿಗೆ ಬಲಿಕೊಟ್ಟು ಪೂಜೆ ಮಾಡುವುದರ ಬದಲು ಹೆಚ್ಚು ತಾತ್ಮಕವೂ ನಾಗರಿಕವೂ ಆಗಿರುವ ದೇವಭಾವನೆಗಳನ್ನು ಆಶ್ರಯಿಸಲು ಕರೆ ಕೊಟ್ಟಿದ್ದೆ, ವರ್ಷವರ್ಷವೂ ಬಂದು ಕಾಣಿಕೆ ವಸೂಲು ಮಾಡುವ ಗುರುಗಳನ್ನು ತಿರಸ್ಕರಿಸಿ, ಆ ಕಾಣಿಕೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಟ್ಟುತ್ತಿರುವ ವಿದ್ಯಾರ್ಥಿನಿಲಯದ ನಿಧಿಗೆ ಕೊಡುವಂತೆ ಸಲಹೆಯಿತ್ತಿದ್ದೆ. ಪ್ರತಿ ಹಬ್ಬದಲ್ಲಿಯೂ ಕಾಣಿಕೆ ಡಬ್ಬಿಗೆ ಹಾಕುತ್ತಿದ್ದ ದುಡ್ಡನ್ನು ತಿರುಪತಿ ಧರ್ಮಸ್ಥಳಗಳಿಗೆ ಕಳಿಸುವುದನ್ನು ನಿಲ್ಲಿಸಿ ವಿದ್ಯಾಸಂಸ್ಥೆಗೆ ಆ ಧನವನ್ನೆಲ್ಲ ನೀಡಿದರೆ ಭಗವತಿ ಸರಸ್ವತಿ ಸಲ್ಲಿಸಿದಂತಾಗುತ್ತದೆ ಎಂದು ಬೋಧಿಸಿದ್ದೆ. ಹಾಗೆ ಮಾಡುವುದರಿಂದ ನಿಮಗೆ ಏನೂ ಅಮಂಗಳ ಅಪಾಯ ಆಗುವುದಿಲ್ಲ ಎಂಬುದನ್ನು ತೋರಿಸಲು ನಮ್ಮ ಮನೆಯ ಕಾಣಿಕೆ ದುಡ್ಡನ್ನೆಲ್ಲ ವಿದ್ಯಾನಿಧಿಗೆ ಅರ್ಪಿಸಿ ನಿದರ್ಶನವಾಗಿದ್ದೆ… " ಕುವೆಂಪು ಅವರ ಆಶಯವನ್ನು ಮಾನಪ್ಪರಂತಹವರು ಈಡೇರಿಸಲು ಸೋತರು, ಗೋಪಾಲಗೌಡರಂತಹವರು ಬದುಕಿನಲ್ಲಿ ಅದು ಈಡೇರಿದ್ದು - ಸಾಹಿತ್ಯ ಮತ್ತು ರಾಜಕೀಯಗಳ ನಡುವಿನ ಸಂಬಂಧ ಸಂಕೀರ್ಣವಾದ್ದದು ಎನ್ನುವುದು ಸತ್ಯ ಸರ್.
| Dr. V.N
ಓದಿದೆ 👌🏼👌🏼
| Poornima L
ಸದಾನಂದರವರು ತುಂಬಾ ಮೌಲಿಕ ವಿಚಾರ ಹೇಳಿದ್ದಾರೆ. 'ಬ್ರಾಹ್ಮಣ ಬೋನು' 'ಕ್ರೈಸ್ತ ಬೋನು' ಎಂಬುದು ಜಾಗೃತ ಅವಲೋಕನವಾಗಿದೆ. ಅವನ್ನು ಒಡ್ಡುವವರೂ ಕೂಡ ಬೋನಿನೊಳಗೆ ಸ್ವತಃ ಸಿಲುಕಿಯೂ ಅದು ಅರ್ಥವಾಗದೆ, ಹೊರಬರಲಾಗದೆ ತಮಗೆ ತಾವೂ, ಸಮಾಜಕ್ಕೂ ತೊಂದರೆಯಾಗಿದ್ದಾರೆ. ಎಚ್ಚರಿಕೆ ಇಲ್ಲದಿದ್ದರೆ ಇಂತಹ ಅನೇಕ ಬೋನುಗಳು ನಮ್ಮನ್ನು ಹಿಡಿದುಬಿಡುತ್ತವೆ. ಧರ್ಮ, ರಾಜಕೀಯ, ಸಂಸ್ಕೃತಿ, ರಾಷ್ಠ್ರೀಯತೆ, ನಂಬಿಕೆ, ಭ್ರಷ್ಟಾಚಾರ ಇತ್ಯಾದಿ ಸಂಸ್ಥೆಗಳ ಬೋನುಗಳು ಬಹುವ್ಯಾಪಿತ ಹಾಗೂ ಬಹು ಶಕ್ತಿಶಾಲಿ. ಪ್ರಗತಿಪರತೆ ಅಂದುಕೊಳ್ಳುವಲ್ಲಿಯೂ ಇದು ರೂಪುಗೊಳ್ಳಬಹುದು. ನಿರಂತರ ಜಾಗೃತಿ ಮುಖ್ಯ. ಇಂತಹ ಜಾಗೃತಿ ಹಿಂದಿಗಿಂತ ಈಗ ಹೆಚ್ಚು ಸುಲಭ. ಆದರೂ ನಾವು ಕುರುಡಾದರೆ ಅದು ಶೋಚನೀಯ.
| Mohan Raju P K
ನೀವು ಹೇಳಿದಂತೆ "ಶೂದ್ರ, ದಲಿತ ವಚನಕಾರ ವಚನಕಾರ್ತಿಯರು ನೆರೂಡ, ಕುವೆಂಪು ಇವರಿಗಿಂತ ಮೊದಲೇ ಈ ʼಅಶುದ್ಧ’ ಎನ್ನಲಾದ ಪ್ರತಿಮೆಗಳನ್ನು ಕಾವ್ಯದಲ್ಲಿ ತಂದಿದ್ದರು" ಎಂಬ ವಿಚಾರ ತುಂಬ ಮಹತ್ವದ್ದು ಹಾಗೂ ಹೆಮ್ಮೆಯ ಸಂಗತಿ. ಗಟ್ಟಿ ಕವಿಯಾಗಿರದಿದ್ದರೆ ʼಅಶುದ್ಧʼದಲ್ಲಿ ಸಲೀಸಾಗಿ ಕೊಳೆತುಹೋಗುವ ಅಪಾಯವಿರುತ್ತದೆ. ಭಾಷೆಯ ಸಂದರ್ಭದಲ್ಲಿ ಟ್ಯಾಬ್ಲಾಯ್ಡ್‌ಗಳು ʼಅಶುದ್ಧʼ ಶೈಲಿಯನ್ನು ಹಿಡಿದವು. ಲಂಕೇಶ್ ರೀತಿಯವರು ಅದಕ್ಕೆ ಸಮರ್ಥನೀಯ ಅಧಿಕೃತತೆ ಒದಗಿಸಿದರು. ಪಡಪೋಸಿ ಪತ್ರಕರ್ತರು ಭಾಷೆಯನ್ನು ವೃಥಾ ಶೋಷಿಸಿದರು (ಈ ವರಸೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣುತ್ತೇವೆ). ಥ್ಯಾಂಕ್ಸ್ ಸರ್.
| Ramachandra Naik
ಸಾಹಿತ್ಯ ಸೂಕ್ಷ್ಮ ಮನಸಿನ ಪ್ರಗ್ನಾವಂತರ ಮನಸಿನಲ್ಲಿ ಸ್ರೃಷ್ಟಿ ಮಾಡುವ ತಳಮಳವನ್ನು, ಅವರ ಅಂತಪ್ರಗ್ನೆಯನ್ನು ಈ ಬರಹ ಹೇಳುತ್ತದೆ, ಆದರೆ ಸಾಮಾಜಿಕವಾಗಿ ಇಂದಿನ ಪರಿಸ್ಥಿತಿಯಲ್ಲಿ ತನ್ನ ಪರಿಣಾಮವನ್ನು ಕಳೆದುಕೊಂಡಿದೆ, ನನ್ನ ಗೆಳೆಯನೊಬ್ಬ ಇತ್ತೀಚೆಗೆ ಎಡಪಂಥೀಯ ಒಲವು ಹೊಂದಿದ ಲೇಖಕರೊಬ್ಭರು ರಾಜಕೀಯದ ಬಗ್ಗೆ ಮಾತನಾಡಿದ್ದನ್ನು ಓದಿ ಸಾಹಿತಿಗಳಿಗೇಕೆ ರಾಜಕೀಯ ಎಂದು ಕೇಳಿದವನು ಅದೇ ಮಠಾದೀಶರೊಬ್ಬರು ರಾಜಕೀಯದ ಬಗ್ಗೆ ಮಾತನಾಡಿದಾಗ ಚಪ್ಪಾಳೆ ತಟ್ಟಿದ್ದ !
| DEVINDRAPPA
ಕನ್ನಡದಲ್ಲಿ ಸದ್ಯಕ್ಕೆ ಕಾವ್ಯ - ರಾಜಕಾರಣದ ನಂಟು ಇಲ್ಲದೆ ಇರುವುದರಿಂದ ಒಂದು ಭಾಷಾ ಸೂಕ್ಷ್ಮತೆ ರಾಜಕಾರಣಿಗಳಲ್ಲಿ, ಕವಿಗಳಲ್ಲಿ ಕಡಿಮೆ ಆಗುತ್ತಿದೆ. ಕಾವ್ಯ ಬರೆಯುವ ತುಡಿತ ಇದ್ದರೆ ಸಾಲದು ಅದಕ್ಕೆ ಅದರದೇ ಆದ ಭಾಷೆ ಬೇಕು. ಜೊತೆಗೆ ಲೋಕದೃಷ್ಟಿ ಕೂಡ ಬೇಕಾಗುತ್ತದೆ. ವಚನಕಾರರು, ದಾಸರು, ಕುವೆಂಪು, ಬೇಂದ್ರೆ, ಅಡಿಗ, ಲಂಕೇಶ್ ಜೊತೆಗೆ ಮಹಿಳಾ ಕವಯಿತ್ರಿಯರ ಕಾವ್ಯಗಳನ್ನು ಓದಿದಾಗ ನಮ್ಮಲ್ಲಿ ಉಂಟಾಗುವ ಭಾವ ತೀವ್ರತೆಗೆ ಕವಿತೆಯೇ ಸಾಕ್ಷಿ ಆಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಕವಿತೆಗೆ ತಕ್ಷಣಕ್ಕೆ ಪ್ರತಿಕ್ರಿಯೆ ಬರುತ್ತದೆ. ಅಲ್ಲಿ ಕವಿತೆಯ ಆಶಯಕ್ಕಿಂತ ಕವಿಯ ಗುಣಗಾನವೇ ಹೆಚ್ಚು. ಕವಿ ನಮಗೆ ನೆಪ ಮಾತ್ರ ಕವಿತೆಯೇ ಮುಖ್ಯ ಆಗಬೇಕು. ಇಂದಿನ ದಿನಗಳಲ್ಲಿ ಕಾವ್ಯ ವಿಮರ್ಶೆ ಕಡಿಮೆ ಆಗಿ ಕವಿ ವಿಮರ್ಶೆಗೆ ಒತ್ತು ಕೊಡುತ್ತಿದ್ದೇವೆ. ಓದುಗ ಮತ್ತು ಸಾಹಿತ್ಯದ ನಡುವೆ ಸೇತುವೆಯಾಗಿ ಕಾವ್ಯ ನಿಲ್ಲಬೇಕಾಗಿದೆ. ಜೊತೆಗೆ ಕವಿಯಾದವರಿಗೂ ಸಾಮಾಜಿಕ ಕಾಳಜಿ, ಪ್ರಜ್ಞೆ ಬೇಕು.
| ಡಾ. ನಿರಂಜನ ಮೂರ್ತಿ ಬಿ ಎಂ
'ಕಾವ್ಯ-ರಾಜಕಾರಣ: ಸಂಕೀರ್ಣ ನಂಟು' ಲೇಖನದಲ್ಲಿ ಗಹನವಾದ ವಿಚಾರವನ್ನು ಸರಳವಾಗಿ ಮಂಡಿಸಿದ ರೀತಿ ಚೆನ್ನಾಗಿದೆ. ನೆರೂಡರ 'ಟುವರ್ಡ್ ಇಂಪ್ಯೂರ್ ಪೊಯೆಟ್ರಿ' ಪ್ರಣಾಳಿಕೆಗಿಂತ ಮೊದಲೇ ನಮ್ಮ ಹೆಮ್ಮೆಯ ರಸಋಷಿ ಕುವೆಂಪುರವರು ಅಶುದ್ಧವೆನಬಹುದಾದ ಅನುಭವಗಳನ್ನೂ ಕಾವ್ಯಪ್ರತಿಮೆಗಳನ್ನಾಗಿಸುವ ಪ್ರಯತ್ನ ಮಾಡಿದ್ದರೆಂಬುದನ್ನು ತಿಳಿದು ಗರ್ವಭಾವ ಉಂಟಾಯಿತು. ಜಗತ್ತಿನೆಲ್ಲೆಡೆ ಬದುಕಿದ್ದ, ಬದುಕುತ್ತಿರುವ, ಮತ್ತು ಬದುಕಲಿರುವ (ಕವಿಗಳು, ಸಾಹಿತಿಗಳು, ತತ್ವಜ್ಞಾನಿಗಳು, ದಾರ್ಶನಿಕರು, ಚಿಂತಕರು, ರಾಜಕಾರಣಿಗಳು, ನಾಯಕರು, ರೈತರು, ಮುಂತಾದ) ಮಾನವತಾವಾದೀ ಮಹಾನುಭಾವರು ಒಂದೇ ತೆರನಾಗಿ ಚಿಂತಿಸುವರೆಂಬುದು ಸತ್ಯವಾದ ವಿಚಾರವೇ ಆಗಿದೆ. ಇಂತಹ ಸಂಕೀರ್ಣ ವಿಚಾರವನ್ನು ಸುಲಲಿತವಾಗಿ ಪ್ರಸ್ತುತಪಡಿಸಿರುವ ಹುಳಿಯಾರರಿಗೆ ನಮನಗಳು. ಹಾಗೆಯೇ ವಿದ್ವತ್ಪೂರ್ಣವಾದ ಮತ್ತು ವೈಚಾರಿಕವಾದ ಪ್ರತಿಕ್ರಿಯೆಗಳೂ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತವೆ. ಸರ್ವರಿಗೂ ನಮನಗಳು.
| Ramachandra Naik
ಸಾಹಿತ್ಯ ಸೂಕ್ಷ್ಮ ಮನಸಿನ ಪ್ರಗ್ನಾವಂತರ ಮನಸಿನಲ್ಲಿ ಸ್ರೃಷ್ಟಿ ಮಾಡುವ ತಳಮಳವನ್ನು, ಅವರ ಅಂತಪ್ರಗ್ನೆಯನ್ನು ಈ ಬರಹ ಹೇಳುತ್ತದೆ, ಆದರೆ ಸಾಮಾಜಿಕವಾಗಿ ಇಂದಿನ ಪರಿಸ್ಥಿತಿಯಲ್ಲಿ ತನ್ನ ಪರಿಣಾಮವನ್ನು ಕಳೆದುಕೊಂಡಿದೆ, ನನ್ನ ಗೆಳೆಯನೊಬ್ಬ ಇತ್ತೀಚೆಗೆ ಎಡಪಂಥೀಯ ಒಲವು ಹೊಂದಿದ ಲೇಖಕರೊಬ್ಭರು ರಾಜಕೀಯದ ಬಗ್ಗೆ ಮಾತನಾಡಿದ್ದನ್ನು ಓದಿ ಸಾಹಿತಿಗಳಿಗೇಕೆ ರಾಜಕೀಯ ಎಂದು ಕೇಳಿದವನು ಅದೇ ಮಠಾದೀಶರೊಬ್ಬರು ರಾಜಕೀಯದ ಬಗ್ಗೆ ಮಾತನಾಡಿದಾಗ ಚಪ್ಪಾಳೆ ತಟ್ಟಿದ್ದ !
Add Comment