ಗೆಳೆಯನ ನೆನಪಿನ ತಂಗಾಳಿ!
by Nataraj Huliyar
ಇನ್ನೇನು ಸಂಜೆಯ ಕತ್ತಲಿಳಿಯುತ್ತಿರುವಾಗ ಆ ಸಾಕ್ಷ್ಯಚಿತ್ರ ಪ್ರತ್ಯಕ್ಷವಾಯಿತು! ಐದಾರು ವರ್ಷಗಳ ಕೆಳಗೆ ಆ ಸಾಕ್ಷ್ಯಚಿತ್ರ ಶೂಟ್ ಮಾಡಲು ಕನ್ನಡದ ಉತ್ತಮ ನಿರ್ದೇಶಕ ಪಿ.ಎಚ್. ವಿಶ್ವನಾಥ್ ನಮ್ಮ ಮನೆಗೆ ಬಂದಿದ್ದಾರೆ ಎಂಬುದು ನನಗೆ ಮೊದಲಿಗೆ ಗೊತ್ತಾಗಲಿಲ್ಲ. ಗೊತ್ತಾದ ತಕ್ಷಣ, ಅವರನ್ನು ಮೊದಲು ಸರಿಯಾಗಿ ಅಟೆಂಡ್ ಮಾಡದಿದ್ದಕ್ಕೆ ಪೆಚ್ಚಾಗಿ, ಆಮೇಲೆ ಹಾಗೂ ಹೀಗೂ ಸರಿದೂಗಿಸಿದೆ! ವಿಶ್ವನಾಥ್ ಎನ್.ಕೆ. ಹನುಮಂತಯ್ಯನವರ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಬಂದಿದ್ದರು. ತರುಣ ಕವಿ, ಗೆಳೆಯ ಎನ್. ಕೆ. ೨೦೧೦ರಲ್ಲಿ ತೀರಿಕೊಂಡಿದ್ದರು. ಪಿ.ಎಚ್. ವಿಶ್ವನಾಥ್ ಮಾಡಿದ ಸಾಕ್ಷ್ಯಚಿತ್ರ ೨೦೨೫ರ ಆಗಸ್ಟ್ ೨೩ರ ಶನಿವಾರ ಸಂಜೆ ನನ್ನ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿತ್ತು.
ಆ ಸಾಕ್ಷ್ಯಚಿತ್ರವನ್ನು ಅಲ್ಲಲ್ಲಿ ನೋಡನೋಡುತ್ತಾ, ಎನ್.ಕೆ.ಯ ಮಾಮೇರಿ ನೆನಪುಗಳು ಹಬ್ಬತೊಡಗಿದವು. ವಿಶಿಷ್ಟ ಕವಿಯಾದ ಅವನ ಎರಡೂ ಕವನ ಸಂಕಲನಗಳಿಗೆ ಪ್ರಕಾಶಕರನ್ನು ನಾನೇ ಹುಡುಕಿಕೊಟ್ಟಿದ್ದ ಆಕಸ್ಮಿಕ ಗಳಿಗೆಗಳು ಅಚ್ಚರಿ ಹುಟ್ಟಿಸತೊಡಗಿದವು. ಅವನ ಮೊದಲನೆಯ ಕವನ ಸಂಕಲನ 'ಹಿಮದ ಹೆಜ್ಜೆ’ ಪ್ರಕಟಿಸಿದವರು ಇಂಥ ನೂರಾರು ಹೊಸ ಪ್ರತಿಭೆಗಳನ್ನು ಪೊರೆದ ಶ್ರೀನಿವಾಸರಾಜು ಮತ್ತು ಕ್ರೈಸ್ಟ್ ಕಾಲೇಜು ಕನ್ನಡ ಸಂಘ. ನಂತರ ಗೆಳೆಯ-ಇಂಗ್ಲಿಷ್ ಮೇಷ್ಟ್ರು ರಾಜಾರಾಂ ಸೇಂಟ್ ಜೋಸೆಫ್ಸ್ ಕನ್ನಡ ಸಂಘದಿಂದ 'ಚಿತ್ರದ ಬೆನ್ನು’ ಕವನ ಸಂಕಲನ ಪ್ರಕಟಿಸಿದರು. ಎರಡಕ್ಕೂ ಅನಿತಾ ಹುಳಿಯಾರ್ ರಚಿಸಿದ ಸಂಕೀರ್ಣ ಮುಖಪುಟಗಳು; 'ಚಿತ್ರದ ಬೆನ್ನು’ ಸಂಕಲನಕ್ಕೆ ನಾನು ಬರೆದ ದೀರ್ಘ ಮುನ್ನುಡಿ; ಎನ್.ಕೆ.ಯ ವಿಸ್ಮಯಕರ, ತಾಜಾ ಪ್ರತಿಮೆಗಳು ಇವೆಲ್ಲ ನೆನಪಾದವು; ಅದೆಲ್ಲದರ ಜೊತೆಗೆ, ಎನ್.ಕೆ. ಕೊಟ್ಟ ಕನ್ನಡದ ಕಾವ್ಯದ ಒಂದು ಒರಿಜಿನಲ್ ಮೆಟಫರ್: 'ಗೋವು ತಿಂದು ಗೋವಿನಂತಾದವನು…’
ಕವಯಿತ್ರಿ ಮಾಲತಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಮಾಡಿದ್ದ ಒಳ್ಳೆಯ ಯೋಜನೆಗಳಲ್ಲಿ ಈ ಸಾಕ್ಷ್ಯಚಿತ್ರ ಮಾಲಿಕೆ ಕೂಡ ಒಂದು.
ಈ ಅಂಕಣ ಬರೆಯಹೊರಟ ಸಂಜೆ ವಿಶ್ವನಾಥ್ ಮಾಡಿದ ಸಾಕ್ಷ್ಯಚಿತ್ರ ಪ್ರತ್ಯಕ್ಷವಾಗಲು ಆರೀಫ್ ರಾಜ ಮತ್ತು ಗೊರವರ್ ‘ಅಕ್ಷರ ಸಂಗಾತ’ದ ಮೊದಲ ಸಂಚಿಕೆಗಾಗಿ ನನ್ನೊಡನೆ ನಡೆಸಿದ ಮಾತುಕತೆ ಕಣ್ಣಿಗೆ ಬಿದ್ದದ್ದು ಕಾರಣವಾಗಿತ್ತು. ಆ ಮಾತುಕತೆಯಲ್ಲಿ ಎನ್.ಕೆ. ಪ್ರಸ್ತಾಪ ಕಂಡು, ಅವನು ಹುಟ್ಟಿದ ತಾರೀಕಿಗಾಗಿ ಗೂಗಲ್ ಬೆರಳಾಟ ಶುರುವಾದಾಗ…ಈ ಸಾಕ್ಷ್ಯಚಿತ್ರ ಕಂಡಿತು…
ಅವತ್ತು ‘ಸಂಗಾತ’ಕ್ಕಾಗಿ ಮಧ್ಯಾಹ್ನದಿಂದ ರಾತ್ರಿಯ ತನಕ ಆಡಿದ ಮಾತುಕತೆಗಳ ನಡುವೆ ಆರೀಫ್ ಎನ್.ಕೆ.ಯ ಬಗ್ಗೆ ಕೇಳಿದ್ದರು: ‘ಪ್ರಸ್ತುತ ಕನ್ನಡ ಕಾವ್ಯದ ಸಂದರ್ಭದಲ್ಲಿ ದಲಿತ ಪ್ರಜ್ಞೆಯನ್ನು ಇನ್ನೊಂದು ಎತ್ತರಕ್ಕೆ ಒಯ್ದ ಪ್ರತಿಭಾಶಾಲಿ ಕವಿ ಎನ್.ಕೆ. ಹನುಮಂತಯ್ಯ. ನಿಮ್ಮ ಸಹಲೇಖಕ, ಶಿಷ್ಯ, ಒಡನಾಡಿ. ಹೊಸ ತಲೆಮಾರಿಗೆ ಅವರ ಕಾವ್ಯ ಸ್ಫೂರ್ತಿಯ ಚಿಲುಮೆಯಾಗಿರುವಂತೆ, ಅವರ ಬದುಕಿನ ಅಂತ್ಯ ಅನುಕರಣೀಯವಾಗದಿರುವುದು ವಿಷಾದಕರ. ಈ ಸಂದರ್ಭದಲ್ಲಿ ಅವರನ್ನು ಹೇಗೆ ನೆನೆಯುತ್ತೀರಿ?’
ಆ ಗಳಿಗೆಯಲ್ಲಿ ಅನ್ನಿಸಿದ್ದನ್ನು ಹೇಳಿದೆ:
‘ನನಗೆ ಯಾರೂ ಶಿಷ್ಯರಿಲ್ಲ. ನಾನೇ ನಿತ್ಯ ಗುರುಗಳನ್ನು ಹುಡುಕ್ತಿರ್‍ತೀನಿ! ಹನುಮಂತಯ್ಯನ ಅಂತ್ಯಕ್ಕೆ ಕಾರಣವಾದ ವಿಚಾರಗಳು ಅತ್ಯಂತ ಭಾವನಾತ್ಮಕವಾದ ಖಾಸಗಿ ವಿಚಾರಗಳು. ಇವು ತುಂಬಾ ’ಇರ‍್ಯಾಷನಲ್’ ಆದ ವಿಚಾರಗಳು. ಅವನ್ನು ರ‍್ಯಾಷನಲ್ ಆಗಿ ವಿವರಿಸೋಕೆ ಬರಲ್ಲ. ಯಾವುದೋ ಒಂದು ವ್ಯಕ್ತಿಯ ಜೀವನದಲ್ಲಿ ಇನ್ಯಾವುದೋ ಒಂದು ಜೀವ ಪ್ರವೇಶಿಸುತ್ತೆ. ಇವುಗಳ ಬಗ್ಗೆ ನಿಮಗೆ ಹಿಡಿತ ಇರುತ್ತೋ, ಇಲ್ಲವೋ ಗೊತ್ತಿಲ್ಲ. ಇವನ್ನೆಲ್ಲಾ ಮೀರಿ ಹನುಮಂತಯ್ಯನ ಬಗ್ಗೆ ಹೇಳಬೇಕಾದ್ರೆ, ಅವನು ಅನೇಕ ಸಲ ತನಗೆ ತಕ್ಷಣ ಅನ್ನಿಸಿದ ಭಾವನೆಗಳಿಗೆ ಪ್ರಾಮಾಣಿಕನಾಗಿರುತ್ತಿದ್ದ. ಭಾವುಕನಾಗಿ ಒಂದು ನಿರ್ಣಾಯಕ ಸನ್ನಿವೇಶಕ್ಕೆ ರಿಯಾಕ್ಟ್ ಮಾಡಿದ. ಈ ನಡುವೆ ಒಮ್ಮೆ ವಿಕ್ರಮ್ ವಿಸಾಜಿ ಹೇಳಿದ್ದರು- ‘ಎರಡು ಸರ್ತಿ ನಿಮ್ಮತ್ರ ಹೋಗೋಣ ಅಂತಾ ಹೊರಟಿದ್ವಿ ಸರ್, ನಾವಿಬ್ಬರೂ. ಆದರೆ ಹನುಮಂತಯ್ಯ, ‘ಬೇಡ ಬೇಡ, ಮೇಷ್ಟ್ರು ನನ್ನ ವಿರುದ್ಧ ತೀರ್ಪು ಕೊಡ್ತಾರೆ. ನಾನು ಬರಲ್ಲ’ ಅಂದ.’ ತೀರ್ಪು ಅನ್ನೋದು ಬಹಳ ದೊಡ್ಡ ಮಾತಾಯ್ತು. ನಾನ್ಯಾರು ತೀರ್ಪು ಕೊಡೋಕೆ?
ಬಟ್... ಬೇಜಾರಾಗುತ್ತೆ. ಆದ್ರೆ ಅವ್ನು ಹಿಪೋಕ್ರೈಟ್ ಆಗಿರ‍್ಲಿಲ್ಲ. ತನಗೆ ಆ ಘಟ್ಟದಲ್ಲಿ ಆಳದಲ್ಲಿ ಏನು ತುಡೀತಾ ಇತ್ತು, ಆ ಕಡೆ ಹೋದ. ಅದು ಕೊನೆಗೆ ಸಾವಿಗೆ ಕರ‍್ಕೊಂಡು ಹೋಯ್ತು. ಬಾಳ ವಿಚಿತ್ರವಾದ ತಿರುವುಗಳಾದವು ಅಂತ ಕಾಣುತ್ತೆ. ಅವನು ಏನನ್ನು ನಂಬಿ ಹೊರಟು ಹೋಗಿದ್ನೋ ಅದೂ ಕೈ ಬಿಡ್ತಾ ಇದೆ ಅನ್ನೋ ಸ್ಥಿತಿಯಲ್ಲಿ ಅವ್ನು ಸೂಯಿಸೈಡ್ ಮಾಡ್ಕೊಂಡ ಅನಿಸುತ್ತೆ. ಆ ಕಾಲಕ್ಕೆ ಏನನ್ನಿಸ್ತೋ ಅದರ ಹಿಂದೆ ಹೊರಟು ಹೋದ ಅವನು. ಅದನ್ನು ನಾವು ಹೀಗೇ ಅಂತ ನಿರ್ಣಯ ಮಾಡಿ ಹೇಳೋದು ಬಹಳ ಕಷ್ಟ. ನನಗೆ ಅತ್ಯಂತ ಪ್ರಿಯರಾದ ವ್ಯಕ್ತಿಗಳಲ್ಲಿ ಅವನೂ ಒಬ್ಬ. ನಾನು ಏನಾದ್ರೂ ಜೋಕ್ ಹೇಳಿದ್ರೆ ಮನ ತುಂಬಿ ನಗ್ತಿದ್ದ. ಬಹಳ ಡಿಸ್ಟರ್ಬ್ ಆಗುತ್ತೆ ಅವನ ವಿಷಯದಲ್ಲಿ... ಅವನಿಗೆ ಎರಡು ಸಲ ರಿಸರ್ಚ್ ಮಾಡಲು ರಿಜಿಸ್ಟರ್ ಮಾಡಿಸಿದ್ದೆ. ಪ್ರತಿಭಾವಂತ, ಅವನು ರಿಸರ್ಚ್ ಮಾಡಬೇಕು ಅಂತ ಒಂದು ಆಸೆ.
ರಿಸರ್ಚ್ ಬಗ್ಗೆ ಮತ್ತೆ ಮತ್ತೆ ಲೆಟರ್ ಬರ್‍ದೆ- ನೀನು ಹಿಂಗಿಂಗೆ ರಿಸರ್ಚ್ ಮಾಡು ಅಂತ. ನಾನು ಬರೆದಿದ್ದ ಒಂದು ಲೆಟರನ್ನ ಅವನ ಟೇಬಲ್ ಮೇಲೆ ಇಟ್ಕೊಂಡಿದ್ದ. ನಾನು ಅದರಲ್ಲಿ ಬರೆದಿದ್ದೆ- ‘ನಾವು ಇತರರರಿಗೆ ಹೇಳುವ ನೆವಗಳನ್ನು ನಮಗೇ ಹೇಳಿಕೊಳ್ಳಬಾರದು’ ಅಂತ. ನಾನು ಒಂದಿನ ತಿಪಟೂರಿಗೆ ಹೋದಾಗ ಬೆಳಬೆಳಗ್ಗೆ ಅವನ ಮನೆಯ ಹೊರಗೆ ನಿಂತು ಅವನ್ನ ಫೂಲ್ ಮಾಡೋಣ ಅಂತ ‘ಪೇಪರ್! ಮಿಲ್ಕ್! ಮಿಲ್ಕ್!’ ಅಂತ ಕೂಗಿದೆ! ದನಿ ಕೇಳಿ ನಾನೇ ಅಂತ ಅವನಿಗೆ ಗೊತ್ತಾಗಿ ಹೋಯ್ತು. ‘ಸಾ...ರ್’ ಅಂತ ಅಚ್ಚರಿಯಿಂದ ಹೊರ ಬಂದ. ನಾನು ಬರೋದು ಗೊತ್ತಿದ್ದಿದ್ರೆ ಟೇಬಲ್ ಮೇಲೆ ಫ್ರೇಮಿಗೆ ಅಂಟಿಸಿದ್ದ ಆ ಪತ್ರ ಎತ್ತಿಟ್ಟಿರೋನೋ ಏನೋ! ನಾವೆಲ್ಲಾ ಹಂಗೆ ತಾನೇ- ಯಾರಾದ್ರೂ ನಮ್ಮ ರೂಮಿಗೆ ಬರ‍್ತಾರೆ ಅಂತ ಮೊದಲೇ ಗೊತ್ತಿದ್ರೆ ನಮ್ಮ ಪತ್ರ, ಹಾಳೆ, ಡೈರಿ ಎಲ್ಲಾ ಎತ್ತಿಟ್ಟಿರ‍್ತೀವಲ್ವ...’
‘ನಮ್ಮ ಅರ್ಧಂಬರ್ಧ ರಚನೆಗಳು, ಅಪ್ರಕಟಿತ ಬರಹಗಳು ಯಾರಿಗೂ ಕಾಣಬಾರದೂ ಅಂತ...’ ಎಂದು ಸೇರಿಸಿದರು ಆರೀಫ್.
’ಹಾಂ!’ ಎನ್ನುತ್ತಾ ಮುಂದುವರಿಸಿದೆ: ’ಹನುಮಂತಯ್ಯ ನಿಜಕ್ಕೂ ನನಗೆ ಆಳದ ಗೆಳೆಯನಾಗಿಬಿಟ್ಟಿದಾನೆ ಅಂತ ನನಗೆ ತೀವ್ರವಾಗಿ ಅನ್ನಿಸಿದ್ದು ಅವನು ಕೆಲ ಕಾಲ ಬೆಂಗಳೂರಿನಲ್ಲಿದ್ದವನು, ಕೆಲಸ ಸಿಕ್ಕಿ ತಿಪಟೂರಿಗೆ ಮನೆ ಶಿಫ್ಟ್ ಮಾಡುವ ಹಿಂದಿನ ದಿವಸ. ಅವನು ನಾಳೆ ಹೋಗ್ತಾನೆ ಅಂತ ನಮ್ಮ ಮನೇಲಿ ಮಧ್ಯಾಹ್ನ ಅವನಿಗೆ ಸೆಂಡಾಫ್. ಸಂಜೆ ಬೇಜಾರಾಗಿ ಮತ್ತೆ ಅವನ ಮನೆಗೆ ಹುಡುಕ್ಕೊಂಡು ಹೋದೆ. ನಾನೂ ಅವನ ಮೇಲೆ ಡಿಪೆಂಡ್ ಆಗಿದೀನಿ ಅಂತ ಆಗ ನನಗೆ ಗೊತ್ತಾಯ್ತು. ನಾನು ಯಾಕೆ ಬಂದೆ ಅಂತ ಅವನಿಗೂ ಗೊತ್ತಾಯ್ತು. ಇಬ್ಬರಿಗೂ ಬೇಜಾರು. [ಆ ಸಂಜೆಯ ’ಮದ್ಯ’ಕಾಲೀನ, ಭಾವುಕ ಸಿಟ್ಟಿಂಗಿನ ನಂತರ] ನಾನು ರಾತ್ರಿ ಮನೆಗೆ ಬಂದ ಮೇಲೆ ಆ ದುಃಖ, ಬೇಸರ ಎಲ್ಲಾನೂ ಪದ್ಯದ ಥರಾ ಬರೆದೆ. ‘ಗೆಳೆಯನೊಬ್ಬ ಊರು ಬಿಟ್ಟಾಗ’ ಅಂತ ಪದ್ಯ ಶುರುವಾಗುತ್ತೆ...ನನ್ನ ಎಷ್ಟೋ ಅಪೂರ್ಣ ಬರಹಗಳಂತೆ ಅದೂ ಎಲ್ಲೋ ಇರಬಹುದು... ಆದರೆ ಇದನ್ನೆಲ್ಲ ನೆನಸಿಕೊಳ್ಳುವಾಗ ಎದೆ, ಕಣ್ಣು ತುಂಬಿ ಬರುತ್ತೆ...
‘ಇನ್ನೊಂದು ನೆನಪು. ಅವನು ಒಂದು ಸಲ ಬೆಂಗಳೂರಿಗೆ ಬಂದಾಗ ಒಂದು ರಾತ್ರಿ, ‘ನಮ್ಮ ಕಾಲೇಜ್ ಹುಡುಗಿ ಒಂದು ಕವಿತೆ ಬರ‍್ದವ್ಳೆ ಸಾರ್, ಓದ್ಲಾ ಸಾರ್?’ ಅಂದ. [ಅಕಾಡೆಮಿಯ ಕೃಷ್ಣ ಕಿಂಬಹುನೆಯವರ ಮನೆಯಲ್ಲಿ; ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ.]
‘ಓದಪ್ಪಾ. ಈ ರಾತ್ರಿ ನಮ್ಮ ಮೇಲೆ ಹಲ್ಲೆ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ ಓದಪ್ಪಾ’ ಅಂದೆ.
‘ನಮ್ಮ ಕಾಲೇಜ್ ಹುಡುಗಿ… ಬಾಳಾ ಚೆನಾಗಿ ಬರ್‍ದೈತೆ ಸಾರ್’ ಅಂತ ಓದೋಕೆ ಶುರು ಮಾಡಿದ. ‘ಹೆಗ್ಗಣ ನುಗ್ಗಿದವೋ... ಊರೊಳು ಹೆಗ್ಗಣ ನುಗ್ಗಿದವೋ...’ ಅಂತ ಪದ್ಯ ಓದಲು ಶುರು ಮಾಡಿದ.
ಒಂದು ಸ್ಟ್ಯಾಂಜಾ ಓದೋ ಹೊತ್ತಿಗೆ ನಾನು, ‘ಚೆನ್ನಾಗಿ ಬರ‍್ದವ್ಳೆ- ಎನ್.ಕೆ. ಹನುಮಂತಯ್ಯ ಅನ್ನೋ ಹುಡುಗಿ!’ ಅಂದೆ.
‘ಸಾ...ರ್, ಸಾರ್...’ ಅಂತ ಎನ್. ಕೆ. ನಗತೊಡಗಿದ.’
ಅವತ್ತು ಆರೀಫ್, ಗೊರವರ್ ಜೊತೆಗಿನ ಈ ಮೇಲಿನ ಮಾತುಕತೆಯಲ್ಲಿ ಹೇಳಿದ ’ಗೆಳೆಯನೊಬ್ಬ ಊರು ಬಿಟ್ಟಾಗ’ ಪದ್ಯ ವರ್ಷಗಟ್ಟಲೆ ಬೆಳೆದು ಮುಂದೊಮ್ಮೆ ’ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು:
ಗೆಳೆಯನೊಬ್ಬ ಊರು ಬಿಟ್ಟಾಗ
ಗೆಳೆಯನೊಬ್ಬ ಊರು ಬಿಟ್ಟ ಗಳಿಗೆ
ಎಲ್ಲ ಗೆಳೆಯರೂ ಊರು ಬಿಟ್ಟಿರಬಹುದೆಂಬ ಬಡಪಾಯಿ ದುಗುಡ;
ಟೆಲಿಫೋನ್ ಡೈರಿಯ ಯಾವ ನಂಬರು ತಿರುಗಿಸಿದರೂ
ಅಲ್ಲಿ ಗೆಳೆಯರು ಸಿಕ್ಕಲಾರರೆಂಬ ಕಳ್ಳ ಅಳುಕು ಒಸರುತ್ತಿತ್ತು;
ನಂಬರು ಸಿಕ್ಕಿದರೂ ಅಲ್ಲಿ ಗೆಳೆಯರಿರಲಾರರೆಂಬುದು ಖಾತ್ರಿಯಾಗಿತ್ತು.
ಮೂರು ಸಲ ಮೂವರಿಗೆ ಫೋನೆತ್ತಿ ಕೆಳಗಿಟ್ಟೆ;
ನಡುವೆ ಉತ್ತರವಿರಲಿಲ್ಲ.
ಅವತ್ತು ಊರು ಬಿಟ್ಟ ಗೆಳೆಯನಲ್ಲಿ-
ಸಾಮಾನ್ಯವಾಗಿ ಪ್ರೀತಿಯಿತ್ತು; ಕಣ್ಣಲ್ಲಿ ಮೆಚ್ಚುಗೆಯಿತ್ತು
ಅಕಸ್ಮಾತ್ ಉಕ್ಕುವ ಪ್ರೀತಿಜಲ ಹೀರಿಕೊಳ್ಳುವ
ಬ್ಲಾಟಿಂಗ್ ಪೇಪರಿನಂಥ ಎದೆಯಿತ್ತು.
ಮಿಗಿಲಾಗಿ, ಅಲ್ಲಿ ದುಃಖವಿತ್ತು
ಉಡಾಫೆಯಿತ್ತು, ಅಲೆಮಾರಿಯ ಸೆಳೆತವಿತ್ತು.
ಅವನು ಎಲ್ಲೋ ಹೋಗುತ್ತಿದ್ದ, ಎಲ್ಲೋ ಬರುತ್ತಿದ್ದ
ಅವನ ಸಿಡಿಮಿಡಿ ವಿಸ್ಮಯ ಹುಟ್ಟಿಸುತ್ತಿತ್ತು
ಅಲ್ಲಿ ಸಣ್ಣತನ ಕೊಂಚ ಕಡಿಮೆಯಿತ್ತು
ಸಂಜೆ ಗುಂಡಿನ ಕರೆಗೆ ಅವನ ಇಡೀ ಮೈ ಹೂಂಗುಡುತ್ತಿತ್ತು
ಆಗ ಸಡಿಲಾಗುತ್ತಿದ್ದ ನಾಲಗೆಯಲ್ಲಿ ಆಸೆಯಿತ್ತು, ಭರವಸೆಯಿತ್ತು
ಗಂಟಲು ಗಿಲಿಗಿಲಿಗುಡುತ್ತಿತ್ತು
ಅಪ್ಪಂಥವರು ಸಿಕ್ಕರೆ ಅದು ಗುಡುಗುತ್ತಲೂ ಇತ್ತು.
ಮಾತುಮಾತಿಗೆ ಸುಮ್ಮನೆ ತೂಗುವ ಆ ಕತ್ತು ನನಗೆ ಪ್ರಿಯವಾಗಿತ್ತೆ?
ವಿಧೇಯ ಮುಖ ಹುಡುಕುತ್ತಿದ್ದ ನನ್ನ ಮನ ತುಂಬಿ ಬಂದಿತ್ತೆ?
ಇದ್ದರೂ ಇರಬಹುದು!
ಊರು ಬಿಟ್ಟ ಗೆಳೆಯನ ಬಗ್ಗೆ ಚರಮಗೀತೆ ಬರೆಯುವುದೇ?
ಅಗಲುವುದೆಂದರೆ ಹಾಗೆಯೇ ತಾನೆ?
ಎಲ್ಲೋ ದೂರದಲ್ಲಿರುವ ಗೆಳೆಯ ಇನ್ನು ಅತ್ತತ್ತಲೇ ಅಲ್ಲವೆ?
ಹೋದವನು ಬರುತ್ತಾನೆ, ಬಂದು ಹೋಗುತ್ತಾನೆ; ಅದೆಲ್ಲ ಸರಿ,
ಅಂದು ಬಿಟ್ಟುಹೋದ ದುಗುಡ ಮಾತ್ರ ಹಾಗೇ ಇದೆ ಎಲ್ಲೋ ಒಳಗೆ…
ಅಂದು ಊರುಬಿಟ್ಟ ಗೆಳೆಯ ಕೊನೆಗೂ ಒಂದು ದಿನ ಬಂದ;
ಬಂದದ್ದು ವಿಷ ಕುಡಿದು ಜೀವ ಬಿಟ್ಟ ಸುದ್ದಿಯಾಗಿ...
(೨೦೦೪-೨೦೧೨-೨೦೧೮.)
ಇದೀಗ ಮತ್ತೆ ಈ ಪದ್ಯ ನೋಡುತ್ತಾ, ನನ್ನ ಹಳೆಯ ಮೂಢನಂಬಿಕೆಯಂತೆ ತೀರಿಕೊಂಡವರ ಕೊನೆಯ ಮುಖ ನೋಡದಿದ್ದರೆ ಅವರು ಎಲ್ಲೋ ಇದ್ದಾರೆ ಅನ್ನಿಸತೊಡಗುತ್ತದೆ. ನನ್ನಲ್ಲಿ ಯಾವ ಕಹಿ ನೆನಪನ್ನೂ ಉಳಿಸದ ತಂಗಾಳಿಯಂಥ ಎನ್.ಕೆ.ಯ ಕಿಲಿಕಿಲಿ ನಗು ಹುಟ್ಟಿಸುವ ಎನರ್ಜಿಯಿಂದಾಗಿ ನನ್ನ ಲವಲವಿಕೆಯ ಮಾತುಕತೆ ಅವನೊಡನೆ ನಡೆಯುತ್ತಲೇ ಇರುತ್ತದೆ… ಈ ಅಂಕಣ ಆಗಸವೇರುವ ಹೊತ್ತಿಗೆ ಅಳುಕುತ್ತಲೇ ವಿಶ್ವನಾಥ್ ಮಾಡಿದ ವ್ಯಕ್ತಿ-ಸಾಕ್ಷ್ಯ ಚಿತ್ರವನ್ನು ಅಲ್ಲಲ್ಲಿ ನೋಡಿದೆ. ನಿಜಕ್ಕೂ ಮೂವಿಂಗ್...
Comments
10 Comments
| ಮಂಜುನಾಥ್ ಸಿ ನೆಟ್ಕಲ್
ಹೃದಯ ಕಲಕಿದ ಬರಹ ಸರ್. ಎನ್ ಕೆ ತನ್ನ ಕವಿತೆಗಳ ಮೂಲಕ ಇಂದಿಗೂ ಕಾಡುತ್ತಲೇ ಇರುತ್ತಾರೆ ...ತರುಣ ಕವಿಗೆ, ಹಾಗೂ ತಮ್ಮ ಆತ್ಮೀಯ ಶ್ರದ್ಧಾಂಜಲಿ ನುಡಿಗಳಿಗೆ ನನ್ನ ನಮನಗಳು
| ಹರಿಪ್ರಸಾದ್ ಬೇಸಾಯಿ
ಅಕ್ಷರ ಸಂಗಾತದ ಆ ಸಂದರ್ಶನ ಓದಿರುವ ನನ್ನಂತವರಿಗೆ ಇಲ್ಲಿ ಹೊಸತೇನೂ ಇಲ್ಲ. ಬಹುಶಃ ಸಾಕ್ಷ್ಯಚಿತ್ರದ ಬಗ್ಗೆ ಬರಿಬಹುದಿತ್ತೆನೋ
| Rajaram
Nataraj, reading this gem of a piece was emotionally difficult for me. I remember him spending a whole night in cubbonpet home with him drumming, singing and whiskey. Never been able to get over his loss…
| ಡಾ. ನಿರಂಜನ ಮೂರ್ತಿ ಬಿ ಎಂ
ನಿಜವಾಗಿಯೂ ಮೂವಿಂಗ್ ಆಗಿರುವ 'ಗೆಳೆಯನ ನೆನಪಿನ ತಂಗಾಳಿ' ಗೊಂದು ಒಲವಿನ ಸಲಾಂ. ಎನ್ಕೆಯವರ ಪುಟ್ಟ ಅವಧಿಯ ಬದುಕಿನ ಚಿತ್ರಣ ಓದಿ ಕಣ್ಣು ಮಂಜಾದವು. ಕವಿಯಾಗಿ ಅರಳಿ ಗಮನ ಸೆಳೆಯುವ ಮುನ್ನವೇ ಇಳೆಯಿಂದಲೇ ಹೊರಳಿ ಮರೆಯಾದದ್ದು ನೋವಿನ ವಿಚಾರ. ಮುಚ್ಚುಮರೆಯಿಲ್ಲದೆ ಮನಸಿನಲಿ ಮೂಡಿದ ಭಾವನೆಗಳ ಬೆನ್ನತ್ತಿದ್ದ ಎನ್ಕೆ, ತತ್ಪರಿಣಾಮದಿಂದಲೇ ಬಲವಂತವಾಗಿಯೇ ಬಟಾಬಯಲಲ್ಲಿ ಲೀನವಾಗಿಹ ಎನ್ಕೆಗೆ ನನ್ನದೊಂದು ಭಾವಪೂರ್ಣ ನಮನ. ಎನ್ಕೆಯವರೊಂದಿಗಿನ ಹುಳಿಯಾರರ ಗೆಳೆತನದ ಬೆಸುಗೆ ಅಪೂರ್ವ. ಅವರ ಸ್ನೇಹಸ್ಮರಣೆ ಆದರ್ಶಮಯ ಮತ್ತು ಅನುಕರಣೀಯ. ಎನ್ಕೆಯವರೊಂದಿಗಿನ ಗೆಳೆತನದಿಂದಾಗಿ, ಅವರು ದೂರವಾದ ಬೇಸರದಲ್ಲಿ, ಹಲವಾರು ವರ್ಷಗಳ (೨೦೦೪-೧೮) ಅವಧಿಯಲ್ಲಿ ಪೂರ್ಣವಾದ ಕವಿತೆ ತುಂಬಾ ಚೆನ್ನಾಗಿದೆ. ಎನ್ಕೆಯವರ ಕವನ ಸಂಕಲನಗಳಿಂದಾಯ್ದ ಒಂದೆರಡು ಕವನಗಳನ್ನು ಕೊಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತು.
| Subramanyaswamy Swamy
NK memories , his poetry and personality unforgettable, In Kannada literature his poems plays important role. Thank you sir
| ಮಾಲತಿ ಪಟ್ಟಣಶೆಟ್ಟಿ
ಕಳೆದು ಹೋಗುವ ಗೆಳೆಯ ಗೆಳತಿಯರನ್ನು ಮನಸ್ಸು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ, ಸಾವಲ್ಲಿ ಆ ಮೋಹನಾಸ್ತ್ರ ಇರುತ್ತದೆ ಎನ್ನಿಸುತ್ತದೆ. ನಾನೂ ಆಪ್ತ ಗೆಳತಿ ಗಾಗಿ ಪದ್ಯ ಬರೆದಿದ್ದೇನೆ, ಅವಳ ನೆನಪಾದಾಗ ಓದಿಕೊಂಡು ಸಮಾಧಾನ ತಂದು ಕೊಳ್ಳುತ್ತೇನೆ
| Kariswamy K
ಅಯ್ಯೋ ಮುಗಿದೇ ಹೋಯ್ತ ಇಷ್ಟು ಬೇಗ ಅನಿಸಿತು. ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತೇನೋ ಅನಿಸಿತು.
| Irappa M Kambali
ಕವಿ ಎನ್ ಕೆ ಹನುಮಂತಯ್ಯ ತರದವರು ಸ್ಟೇಷನ್ ತಲುಪಿ, ಗಾಡಿ ನಿಲ್ಲುವ ಮೊದಲೇ ಹಾರಿಕೊಂಡವರಂತೆ ಕಾಡುತ್ತಾರೆ. ಎಂದಿನಂತೆ ಆಪ್ತ ಧಾಟಿಯಲ್ಲಿ ದಾಖಲಿಸಿದ್ದೀರಿ.
| Subbaih
Very nice and emotional
| Dr.Prabhakar
Nice reminiscing that moved me
Add Comment