ಕತೆ ಬರೆವ ಕಷ್ಟಗಳು

‘ಮಯೂರ’ದ ಉಪಸಂಪಾದಕರಾಗಿದ್ದ ಸಂದೀಪ ನಾಯಕ್ ಎಂಟು ವರ್ಷಗಳ ಕೆಳಗೆ, ‘ಕತೆ ಬರೆಯುವ ನಿಮ್ಮ ಅನುಭವದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕಳಿಸುತ್ತೇನೆ; ಉತ್ತರ ಕೊಡಿ’ ಎಂದರು. ಅವುಗಳಲ್ಲಿ ಕೆಲವು ಪ್ರಶ್ನೆಗಳು, ಉತ್ತರಗಳು ಇವತ್ತಿಗೂ -ಪ್ರಾಯಶಃ ನಿಮಗೂ-ಕೊಂಚ ಕುತೂಹಲ ಹುಟ್ಟಿಸುವಂತಿವೆ ಎನ್ನಿಸಿ ಕೆಲವನ್ನು ಆಯ್ದು ಇಲ್ಲಿ ಕೊಡುತ್ತೇನೆ. ಈ ಅಂಕಣ ಸಿದ್ಧಪಡಿಸುವ ದಿನ ಈ ಭಾಗಗಳನ್ನು ಎಡಿಟ್ ಮಾಡುತ್ತಾ ಹೊಳೆದ ಹೊಸ ಗ್ರಹಿಕೆಗಳನ್ನೂ ಇಲ್ಲಿ ಸೇರಿಸಿದ್ದೇನೆ.  

ಕತೆ ಬರೆಯುವ ಪ್ರಕ್ರಿಯೆ ಎಷ್ಟರಮಟ್ಟಿಗೆ ಪ್ರಜ್ಞಾಪೂರ್ವಕ? 

ನನ್ನ ಅನುಭವದಲ್ಲಿ ಕಥಾ ಬರವಣಿಗೆ ಪ್ರಜ್ಞಾಪೂರ್ವಕ ಹಾಗೂ ಅಪ್ರಜ್ಞಾಪೂರ್ವಕ- ಈ ಎರಡೂ ನೆಲೆಗಳಲ್ಲಿ ನಡೆಯುತ್ತಿರುತ್ತದೆ. ಕೆಲವೊಮ್ಮೆ ಕತೆಯ ವಸ್ತು, ಪಾತ್ರಗಳು ಹಾಗೂ ಕತೆಯೊಳಗಿನ ಬಿಕ್ಕಟ್ಟುಗಳು ನನ್ನ ಕತೆಯನ್ನು ಎಲ್ಲೋ ಕರೆದೊಯ್ದು ನಿಲ್ಲಿಸಿದಾಗ, ‘ಅರೆ! ಇಲ್ಲಿಗೆ ಹೇಗೆ ಬಂದೆ!’ ಎನ್ನಿಸಿ ಅಚ್ಚರಿಯಾಗುತ್ತದೆ. ಬೈಕ್, ಕಾರ್ ಡ್ರೈವ್ ಮಾಡುವಾಗ ಇಷ್ಟೊಂದು ದೂರ ಹೇಗೆ ಬಂದೆ ಎಂದು ಇದ್ದಕ್ಕಿದ್ದಂತೆ ಅನ್ನಿಸುವ ಹಾಗೆಯೇ ಇದು ಕೂಡ! ಈಗ ಈ ಕತೆಗಳನ್ನು ಹಿಂತಿರುಗಿ ನೋಡಿದರೆ, ನನ್ನ ಬಹುತೇಕ ಕತೆಗಳು ತಮ್ಮ ದಿಕ್ಕುಗಳನ್ನು ತಾವೇ ನಿರ್ಧರಿಸಿಕೊಂಡಂತಿವೆ ಹಾಗೂ ಪಾತ್ರಗಳು, ಘಟನೆಗಳು ತಮಗೆ ಇಷ್ಟ ಬಂದಂತೆ, ತಮ್ಮ ಆಂತರಿಕ ತರ್ಕಕ್ಕೆ ತಕ್ಕಂತೆ ಬೆಳೆದುಕೊಂಡಿವೆ ಎನ್ನಿಸುತ್ತದೆ. ನನ್ನ ಕೆಲವು ಕತೆಗಳ ಅಂತ್ಯವನ್ನು ಮಾತ್ರ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡೋ ಅಥವಾ ‘ಎಫೆಕ್ಟಿನ’ ದೃಷ್ಟಿಯಿಂದಲೋ ರೂಪಿಸಿರಲೂಬಹುದು ಎನ್ನಿಸುತ್ತದೆ! ಹಾಗೆಯೇ ಕತೆಯಲ್ಲೇ ವಿಕಾಸಗೊಳ್ಳುವ ಕಾಣ್ಕೆ, ಸತ್ಯ, ಪಾತ್ರ ಹಾಗೂ ಘಟನಾವಳಿಗಳ ಸೂಚನೆ-ಆದೇಶ-ಒತ್ತಾಯಗಳು ಕೂಡ ಕೆಲ ಬಗೆಯ ಅಂತ್ಯಗಳನ್ನು ನಿರ್ಧರಿಸಿರಬಹುದು. 

ನಿಮ್ಮ ಅನುಭವ ಹಾಗೂ ಓದು ನಿಮ್ಮ ಕತೆಗಳಿಗೆ ಹೇಗೆ ನೆರವಾಗಿದೆ? 

ಬರೆಯುವವನ ಅನುಭವ ಎನ್ನುವುದು ಯಾವಾಗಲೂ ಸೀಮಿತ ಅರ್ಥದಲ್ಲಿ ಅವನದ್ದೇ ಆದ ‘ಸ್ವಂತ’ ಅನುಭವವಾಗಿರಬೇಕಿಲ್ಲ. ಗೆಳೆಯ, ಗೆಳತಿಯರ ಕಷ್ಟ ಸುಖಗಳು, ಬದುಕಿನ ಸವಾಲುಗಳು, ಅವರ ಮಕ್ಕಳು ತಂದೊಡ್ಡುವ ಸಮಸ್ಯೆಗಳು, ಆಸ್ಪತ್ರೆಯ ಹಾಸಿಗೆಯ ಮೇಲೆ ಆಸೆ-ಆತಂಕಗಳ ನಡುವೆ ಮಲಗಿರುವ ಗೆಳೆಯ…ಎಲ್ಲವೂ ನನ್ನ ಅನುಭವಗಳೇ. 

ಕತೆಗಾರ, ಕತೆಗಾರ್ತಿಯರ ಪಾತ್ರಸೃಷ್ಟಿಯಲ್ಲಿ ಹೇಗೆ ಪರಕಾಯ ಪ್ರವೇಶ ನಡೆಯುತ್ತಿರುತ್ತದೋ ಹಾಗೆಯೇ ಇತರರ ಅನುಭವಗಳನ್ನು ತನ್ನದಾಗಿಸಿಕೊಂಡು ಆ ಅನುಭವಗಳನ್ನು ಶೋಧಿಸುವ ಕೆಲಸವೂ ನಡೆಯುತ್ತಿರುತ್ತದೆ. ಹೀಗೆ ಕತೆಗಾರನ ಅನುಭವಕ್ಕೆ ಬಂದ ಇತರರ ಸತ್ಯಗಳು ಕತೆಯಲ್ಲಿ ಇನ್ನೇನೋ ಆಗಿ ಮಾರ್ಪಾಡಾಗುತ್ತಿರುತ್ತವೆ. ಉದಾಹರಣೆಗೆ, ನೀವು ಒಂದು ಕತೆಯಲ್ಲಿ ಬಡಗಿಯೊಬ್ಬನ ಬದುಕಿನ ಹಾಗೂ ವ್ಯಕ್ತಿತ್ವದ ಏರಿಳಿತಗಳನ್ನು ಸೃಷ್ಟಿಸುತ್ತಿದ್ದರೆ, ಬಡಗಿಯ ಪಾತ್ರಕ್ಕೆ ಅಧಿಕೃತತೆ ತರಲು ಅವನ ವೃತ್ತಿಯ ಕೆಲವಾದರೂ ಬಾಹ್ಯ ವಿವರಗಳನ್ನು ಸೃಷ್ಟಿಸಲೆತ್ನಿಸುತ್ತೀರಿ; ಹಲವೊಮ್ಮೆ ನಿಮ್ಮ ಭಾವಗಳು ಅಥವಾ ನೀವು ಅವರಿವರಲ್ಲಿ ಕಂಡ ಅಥವಾ ನೀವು ಕಲ್ಪಿಸಿಕೊಂಡ ಭಾವಗಳು ಕೂಡ ಆ ಪಾತ್ರದೊಳಗೆ ಸೇರಿಕೊಳ್ಳುತ್ತವೆ. 

ಇವೆಲ್ಲ ಎಷ್ಟು ಸಂಕೀರ್ಣವೆಂದರೆ, ಇವನ್ನು ಥಿಯರೈಸ್ ಮಾಡಿ ಸ್ಪಷ್ಟವಾಗಿ ಹೇಳುವುದು ಕಷ್ಟ. ಒಂದು ಕತೆಯಲ್ಲಿ ನಾವು ಮಾಡಿದ ದುಡುಕುಗಳು ಮುಂದಿನ ಕತೆಯಲ್ಲಿ ಅಂಥ ದುಡುಕುಗಳನ್ನು ತಡೆಯಲು ನೆರವಾಗಬಹುದು! ಕತೆ ಬರೆಯುವುದು ಕೂಡ ಮಗುವೊಂದು ತೆವಳಿ, ದೊಗ್ಗಾಲು ಮಂಡಿಯಲ್ಲಿ ಚಲಿಸಿ, ಎದ್ದು ಬಿದ್ದು ನಡೆಯುವುದನ್ನು ಕಲಿತ ಹಾಗೆಯೇ. ಕೊನೆಗೊಮ್ಮೆ ಎದ್ದು ನಿಂತ ತಕ್ಷಣ ಮಗುವಿನ ಕೆಲಸ ಮುಗಿಯಲಿಲ್ಲ; ಹಾಗೆಯೇ ಕತೆಗಾರನ ಕೆಲಸ ಕೂಡ: ಏಳುವುದು, ಎಡವುವುದು, ಬೀಳುವುದು, ಮೇಲೇಳುವುದು, ನಡಿಗೆ ಕಲಿತ ಮೇಲೂ ನಡೆ ತಪ್ಪುವುದು… ಇವೆಲ್ಲ ಕಥಾ ಬರವಣಿಗೆಯಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ. 

ಇನ್ನು, ನಿಮ್ಮ ಪ್ರಶ್ನೆಯ ಎರಡನೆಯ ಭಾಗದಲ್ಲಿರುವ ‘ಓದು ನಿಮ್ಮ ಕತೆಗಳಿಗೆ ಹೇಗೆ ನೆರವಾಗಿದೆ?’ ಎಂಬ ಪ್ರಶ್ನೆಯನ್ನು ಇತರರ ಕತೆಗಳ ಹಾಗೂ ಇನ್ನಿತರ ಬಗೆಯ ಕೃತಿಗಳ ಓದು ನನ್ನ ಕಥಾಬರವಣಿಗೆಗೆ ಹೇಗೆ ನೆರವಾಗಿದೆ ಎನ್ನುವುದನ್ನು ಕುರಿತಾದದ್ದು ಎಂದು ಊಹಿಸುತ್ತೇನೆ: ಕನ್ನಡದಲ್ಲಿ ಕತೆ ಬರೆಯುವುದನ್ನು ಶಿಸ್ತುಬದ್ಧವಾಗಿ ಕಲಿಯುವ ಯಾವ ಕೋರ್ಸುಗಳೂ ಇಲ್ಲ. ಅಕಾಡೆಮಿಗಳು, ಕೆಲ ಬಗೆಯ ಸಂಸ್ಥೆಗಳು ನಡೆಸುವ ಕಥಾಕಮ್ಮಟಗಳು ತೀರಾ ‘ಅನ್‌ಪ್ರೊಫೆಶನಲ್’ ಅನ್ನಿಸುತ್ತವೆ. ನೊಬೆಲ್ ಪ್ರಶಸ್ತಿ ಪಡೆದ ಜಪಾನಿನ ಕಾದಂಬರಿಕಾರ ಇಷಿಗುರೊ ಅಂಥದೊಂದು ಕೋರ್ಸ್‌ನಲ್ಲಿ ಭಾಗವಹಿಸಿದ್ದನಂತೆ. ಇಂಥ ಕೋರ್ಸುಗಳು ಎಷ್ಟು ಉಪಯುಕ್ತವೋ ಗೊತ್ತಿಲ್ಲ. ಆದರೆ ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನಡೆಸಿದ ಇಂಥದೊಂದು ಕೋರ್ಸ್‌ನಲ್ಲಿ ಭಾಗವಹಿಸಿದ್ದ ಲೇಖಕನೊಬ್ಬ ಈ ಅನುಭವದ ಬಗ್ಗೆ ಉತ್ಸಾಹದಿಂದ ಬರೆದದ್ದು ನೆನಪಾಗುತ್ತದೆ. ಆದರೂ ಕತೆ ಬರೆಯುವ ಯಾವುದೇ ಲೇಖಕ ಲೇಖಕಿಯರಿಗೆ ಲೋಕ, ಬದುಕು, ತಮ್ಮ ಹಾಗೂ ಇತರರ ಅನುಭವಗಳು, ಸೃಜನಶೀಲತೆ ಹಾಗೂ ಇತರ ಲೇಖಕ, ಲೇಖಕಿಯರ ಕೃತಿಗಳೇ ಗುರುಗಳು. ಕನ್ನಡದ ಅಥವಾ ಇತರ ಭಾರತೀಯ ಭಾಷೆಗಳ ಅಥವಾ ಜಗತ್ತಿನ ಕತೆಗಾರ, ಕತೆಗಾರ್ತಿಯರನ್ನು ಹಾಗೂ ವಿಭಿನ್ನ ಪ್ರಕಾರಗಳ ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಅವೆಲ್ಲವೂ ಯಾವ್ಯಾವುದೋ ಪಾಠಗಳನ್ನು ಕಲಿಸುತ್ತಿರುತ್ತವೆ.

ಕತೆ ಬರೆಯುವ ವ್ಯಕ್ತಿಗೆ ಕೇವಲ ಇತರರ ಕತೆಗಳೇ ಮಾರ್ಗದರ್ಶನ ಮಾಡುತ್ತವೆಂದೇನಿಲ್ಲ; ನಾಟಕ, ಕಾವ್ಯದಂಥ ಇತರ ಪ್ರಕಾರಗಳು; ಸ್ತ್ರೀವಾದ, ಮಾರ್ಕ್ಸ್‌ವಾದ, ಲೋಹಿಯಾವಾದದಂಥ ಚಿಂತನೆಗಳು... ಇವೆಲ್ಲವೂ ಕಥಾ ಬರವಣಿಗೆಯ ಹಿನ್ನೆಲೆಯಲ್ಲಿದ್ದು ಪ್ರೇರಣೆ ನೀಡುತ್ತಿರುತ್ತವೆ. ಮುಸ್ಲಿಂ ಲೋಕದ ದುಗುಡಗಳನ್ನು, ಸೂಕ್ಷ್ಮಗಳನ್ನು ಪ್ರೇಮಚಂದ್ ಅಥವಾ ಇಸ್ಮತ್ ಚುಗ್ತಾಯಿಯವರ ಕತೆಗಳು ನನಗೆ ಹೇಳಿಕೊಟ್ಟಂತೆಯೇ, ಒಂದು ಕತೆಯ ಪಾತ್ರಗಳ ಜಾತಿಮೂಲ ವರ್ತನೆಗಳನ್ನು ಅರಿಯಲು ಅಂಬೇಡ್ಕರ್‌ವಾದ, ಲೋಹಿಯಾವಾದಗಳೂ ನೆರವಾಗುತ್ತಿರಬಹುದು. ಔದಾರ್ಯದ ಮಾನವೀಯ ಪಾತ್ರಗಳನ್ನು ಸೃಷ್ಟಿಸಲು ಗಾಂಧೀವಾದವೂ ನೆರವಾಗುತ್ತಿರಬಹುದು. ಇವೆಲ್ಲ ನಾವು ಉಸಿರಾಡುವ ಗಾಳಿಯಂತೆ ನಮಗರಿವಿಲ್ಲದೆಯೇ ನಮ್ಮ ಕಥಾಬರವಣಿಗೆಗೆ ಒದಗಿ ಬರುತ್ತಿರುತ್ತವೆ; ಆದರೆ ಕತೆಯೊಂದರಲ್ಲಿ ಇವೆಲ್ಲವೂ ಕಂಡೂ ಕಾಣದಂತೆ ಸಹಜವಾಗಿ ಬೆರೆಯದೆ, ಕೇವಲ ‘ವಾದ’ಗಳಂತೆ ವರ್ತಿಸತೊಡಗಿದರೆ ಕತೆಗೆ ಹೊಡೆತ ಬೀಳುತ್ತದೆ.

ಅನೇಕ ಸಲ ನಾವು ಗಮನಿಸುವ ಸಣ್ಣಪುಟ್ಟ ಅಂಶಗಳು ಹಾಗೂ ಸಾಧಾರಣ ವಿವರಗಳಿಂದಲೂ ಕಲಿಯುತ್ತಿರುತ್ತೇವೆ. ಮಾರ್ಕ್ವೆಝ್, ‘ಒಂದು ಬೆಕ್ಕು ಮೂಲೆಯಲ್ಲಿ ಹೇಗೆ ತಿರುಗುತ್ತದೆಂಬುದರ ಸ್ವಾರಸ್ಯವನ್ನು ಗ್ರಹಿಸುವ ರೀತಿಯನ್ನು ಹೆಮಿಂಗ್ವೇಯಿಂದ ಕಲಿಯಬೇಕು’ ಅನ್ನುತ್ತಾನೆ. ಕ್ಯಾಥರಿನ್ ಆ್ಯನ್ ಪೋರ್ಟರ್ ಬರೆದ ಕತೆಯೊಂದರಲ್ಲಿ ಹೆಂಗಸೊಬ್ಬಳು ಸಂತೆಯಲ್ಲಿ ಮಾರಲು ಹೊರಟ ಕೋಳಿಯ ಕಣ್ಣಿನ ವರ್ಣನೆ ಕಂಡಾಗ ಕತೆಯೊಂದರಲ್ಲಿ ಅಂಥ ಸಣ್ಣಪುಟ್ಟ ವಿವರಗಳ ಮಹತ್ವ ನನಗೆ ಅರಿವಾಗುತ್ತದೆ. ಆಫ್ರಿಕಾದ ಚಿನುವ ಅಚಿಬೆ, ಅಲೀಫಾ ರಿಫಾತ್; ಲಂಕೇಶರ ಗದ್ಯದ ಸೀಳಬಲ್ಲ ತೀವ್ರತೆ, ದೇವನೂರ್‍ ಕತೆಗಳ ವ್ಯವಧಾನ, ಅನಂತಮೂರ್ತಿಯವರ ಕತೆಗಳಲ್ಲಿ ವೈಚಾರಿಕತೆಯ ಮಿಶ್ರಣ, ತೇಜಸ್ವಿಯವರ ಲಘು ಅನುಕರಣೆ ಇವೆಲ್ಲವುಗಳಿಂದಲೂ ಕಲಿಯುತ್ತಿರುತ್ತೇನೆ. ಅಷ್ಟೇ ಅಲ್ಲ, ನನ್ನ ವಾರಿಗೆಯ ಮೊಗಳ್ಳಿ ಗಣೇಶರ ಕತೆಗಳ ಅಸಹಾಯಕ ಪಾತ್ರಗಳ ಲೋಕದಿಂದ; ಅಥವಾ ಹೊಸ ಕತೆಗಾರ ಗುರುಪ್ರಸಾದ್ ಕಂಟಲಗೆರೆ ಕತೆಯೊಂದರಲ್ಲಿ ಬಳಸಿದ ನಮ್ಮೂರಿನ ಸುತ್ತಲ ಭಾಷೆಯ ಬಳುಕಿನಿಂದಲೂ ಕಲಿಯುತ್ತಿರುತ್ತೇನೆ. ಹೀಗೆ ಒಬ್ಬರಲ್ಲ, ಹತ್ತಾರು ಲೇಖಕ, ಲೇಖಕಿಯರಿಂದ ನಾನು ದಿನನಿತ್ಯ ಕಲಿಯುತ್ತಿರುತ್ತೇನೆ…  
 
‘ಇದನ್ನು ಬೇರೆ ರೀತಿ ಬರೆಯಬಹುದಿತ್ತು’ ಎಂದು ಯಾವುದಾದರೂ ಕತೆಯನ್ನು ಬರೆದ ನಂತರ ನಿಮಗೆ ಅನ್ನಿಸಿದೆಯೆ?

ಯಾವುದಾದರೂ ಒಂದು ಕತೆಯನ್ನಲ್ಲ, ನನ್ನ ಅನೇಕ ಕತೆಗಳನ್ನು ಹಾಗೆ ಬೇರೆ ರೀತಿ ಬರೆಯಬೇಕಾಗಿತ್ತು, ಬರೆಯಬಹುದಿತ್ತು ಎನ್ನಿಸಿದೆ! ಪ್ರಕಟವಾಗುವ ಮೊದಲು ಒಂದಲ್ಲ ನೂರು ಸಲ ಎಡಿಟ್ ಮಾಡಿದ ಮೇಲೆ ಪ್ರಕಟಿಸಿದ ಕತೆಯನ್ನು ಮತ್ತೆ ಓದಲು ನಾನು ಹಿಂಜರಿಯುವುದು ಈ ಕಾರಣಕ್ಕಾಗಿಯೇ ಇರಬಹುದು! ಯಾವುದೋ ವರ್ಣನೆಯ ಹುಸಿತನ, ಇನ್ಯಾವುದೋ ಉತ್ಪ್ರೇಕ್ಷೆ, ಮತ್ತಾವುದೋ ವಾಕ್ಯ ರಚನೆಯ ಸಂದಿಗ್ಧತೆ, ಕೊಂಚ ಹೇರಿದಂತೆ ಕಾಣುವ ಮುಕ್ತಾಯ, ಪಾತ್ರಗಳಿಗೆ ನನ್ನಿಂದ ಆದ ಅನ್ಯಾಯ …ಹೀಗೆ ಹಲವಾರು ಸಮಸ್ಯೆಗಳು ನನಗೇ ಕಾಣತೊಡಗುತ್ತವೆ. ಅದರ ನಡುವೆಯೂ, ನನಗೆ ಸಾಧ್ಯವಾದಷ್ಟು ಪರಿಪೂರ್ಣವಾಗಿವೆ ಎನ್ನಿಸಿದ ಕತೆಗಳೂ ಇವೆ. ನನ್ನನ್ನು ಮೀರಿ ತಂತಾನೇ ಎತ್ತಲೋ ಹರಿದ ನನ್ನ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಇಂಥ ಕತೆಯಿರಬಹುದು. ಆದರೂ… ಒಬ್ಬ ಜನಪದ ಕತೆಗಾರ್ತಿಯಂತೆ ಇವತ್ತು ಹೇಳಿದ ಕತೆಯನ್ನು ನಾಳೆ ಬೇರೆ ಥರ ಹೇಳುವ ಭಾಗ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿದ್ದಿದೆ. ಇದು ಕತೆ ಬರೆಯುವ ಎಲ್ಲರ ಬಯಕೆಯೂ ಆಗಿರಬಹುದು… 

ತುಂಬಾ ಸಮಯದಿಂದ ಬರೆಯಬೇಕು ಎಂದುಕೊಂಡ, ಬರೆಯಲಾಗದ ಕತೆ, ಮುಟ್ಟಲಾಗದ ಅನುಭವ ನಿಮ್ಮ ಭಾವಕೋಶದಲ್ಲಿ ಇನ್ನೂ ಇದೆಯೇ?

ಅಂಥ ಸಾವಿರಾರು ಅನುಭವಗಳು ಹಾಗೂ ಹತ್ತಾರು ಅಪೂರ್ಣ ಕತೆಗಳು ನನ್ನ ನೋಟ್ ಬುಕ್ಕುಗಳಲ್ಲಿ, ಡೈರಿಗಳಲ್ಲಿ, ತಲೆಯಲ್ಲಿ ಇವೆ. ನನ್ನ ಯಾವುದೋ ಒಂದು ಕತೆಯ ಸುತ್ತ ಹಬ್ಬಿದ ವಿಚಿತ್ರ ಅನುಭವಗಳು ಕಳೆದ ಹತ್ತು ವರ್ಷಗಳಿಂದಲೂ ಕತೆಯಾಗಿ ಬರೆದುಕೊಳ್ಳುತ್ತಲೇ ಇವೆ.  ಸ್ತ್ರೀ ಪಾತ್ರಗಳು, ದಲಿತ ಪಾತ್ರಗಳು ನನ್ನ ಕತೆಯೊಳಗೆ ಸೃಷ್ಟಿಯಾಗಿದ್ದರೂ, ಈ ಎರಡೂ ಲೋಕಗಳ ಬಗ್ಗೆ ನಾನು ಗ್ರಹಿಸಬೇಕಾದ್ದು ಇನ್ನೂ ತುಂಬಾ ಇದೆ ಎನ್ನಿಸುತ್ತದೆ; ಹಾಗೆಯೇ ನಾನು ಮುಟ್ಟಬಯಸುವ, ಇನ್ನೂ ಮುಟ್ಟಲಾಗದಿರುವ ಇನ್ನೂ ಅನೇಕ ಲೋಕಗಳಿವೆ. ಅದರಲ್ಲೂ ಮಾನವ ವರ್ತನೆಗಳ ಸೂಕ್ಷ್ಮಾತಿಸೂಕ್ಷ್ಮ ರೂಪಗಳನ್ನು, ಮಾನವರ ನಡೆನುಡಿಗಳ ಹಿಂದಿರುವ ಅಸಲಿ ಮುಖವನ್ನು, ಮಾನವಚಿತ್ತದ ವೈಪರೀತ್ಯಗಳನ್ನು, ಸುಳ್ಳುಗಳನ್ನು, ಘನತೆಯನ್ನು ಕತೆಯಲ್ಲಿ ಹಿಡಿಯುವ ಕಷ್ಟ ನಿತ್ಯ ನನ್ನ ಅನುಭವಕ್ಕೆ ಬರುತ್ತಲೇ ಇರುತ್ತದೆ.  

ಕೊನೆಟಿಪ್ಪಣಿ: ಮೇಲಿನ ಪ್ಯಾರಾದಲ್ಲಿ ‘ಹತ್ತು ವರ್ಷಗಳಿಂದಲೂ ಬರೆದುಕೊಳ್ಳುತ್ತಲೇ ಇದೆ’ ಎಂದು ಸೂಚಿಸಿರುವ ಕತೆ ಮುಂದೆ ‘ಒಂದು ಬಹುಮಾನಿತ ಕತೆಯ ಸುತ್ತ’ ಎಂಬ ಕತೆಯಾಗಿ, ’ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು; ಅದಾದ ನಂತರವೂ ಕೊಂಚ ತಿದ್ದಿಸಿಕೊಂಡು, ಕಥಾನಂತರದ ಅನುಭವವನ್ನೂ ಬರೆಸಿಕೊಂಡು ನನ್ನ ‘ಕಥಾನಂತರ’ (ಪಲ್ಲವ ಪ್ರಕಾಶನ) ಕಥಾ ಸಂಕಲನದಲ್ಲಿ ಪ್ರಕಟವಾಯಿತು. ಕತೆಗಾರ-ಗೆಳೆಯ ಗೌತಮ್ ಜೋತ್ಸ್ನಾ ಕೈಯಲ್ಲಿ ’ಮಾರೀಚ’ ಎಂಬ ಚಿತ್ರಕತೆಯಾಗಿ, ಅದೇ ಹೆಸರಿನಲ್ಲಿ ಶಾನುಭಾಗ್ ಕೈಯಲ್ಲಿ ಸಿನಿಮಾ ಆಗಿ ಹೊರಬರುವ ಗಳಿಗೆಯನ್ನು ಎದುರು ನೋಡುತ್ತಿದೆ. ಆ ಕತೆಯೇ ಬೇರೆ. ಆ ಬಗ್ಗೆ ಮುಂದೊಮ್ಮೆ… 
 
 

Share on:

Comments

15 Comments



| Subramanyaswamy Swamy

ಕತೆಯ ಬರವಣಿಗೆಯ ಜಿಜ್ಞಾಸೆ ತುಂಬಾ ಚೆನ್ನಾಗಿ ಮೂಡಿಬಂದಿದೆ.


| ಹರಿಪ್ರಸಾದ್

Thank you Professor


| ಮಂಜುನಾಥ್ ಸಿ ನೆಟ್ಕಲ್

ಕತೆ ಹೇಳಬಹುದು ಆದರೆ ಬರೆಯುವುದು ಸುಲಭ , ಸುಲಭವಲ್ಲ .... ಸುಮ್ಮನೇ ಒಂದು ಕತೆ ಬರೆದು ಬಿಡುವುದು ಬೇರೆ ಆದರೆ ಓದುವವರ ಮನಸ್ಸಿನಲ್ಲಿ ಇಳಿದು ಬೇರೆ ಬೇರೆ ಆಯಾಮ ಪಡೆದು ಬಹುಕಾಲ ಕಾಡುತ್ತಲೇ ಇರುವ ಕತೆ ಬರೆಯಲು ಬೇಕಾದ ಅನುಭವ ಮತ್ತು ಕಲೆಗಾರಿಕೆಯನ್ನು ‌ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್...ಆದರೆ ಇದೆಲ್ಲವನ್ನೂ ಓದಿದ ಮೇಲೂ , ಕತೆಯಾಗಬಲ್ಲ ಅನೇಕ ಸಂಗತಿಗಳು ನನ್ನೊಳಗೆ ಓಡಾಡುತ್ತಿದ್ದರೂ ಅವನ್ನೆಲ್ಲಾ ಒಂದು ಚೌಕಟ್ಟಿನಲ್ಲಿ ಬಂಧಿಸಿ ಕತೆಯಾಗಿಸಲು ಧೈರ್ಯವೇ ಬರುತ್ತಿಲ್ಲ... ಎಂದಾದರೂ ಬರಬಹುದೋ ಗೊತ್ತಿಲ್ಲ..ಇದು ಕೇವಲ ನನ್ನೊಬ್ಬನ ಸಮಸ್ಯೆಯೇ ...???


| Sandeepnayak

ನಿಮ್ಮ ಉತ್ತರಗಳು ಇವತ್ತಿಗೂ ತಾಜಾ ಆಗಿವೆ; ಹೊಸ ಹುಡುಗರಿಗೆ ಮಾರ್ಗದರ್ಶಿಯಾಗಿವೆ. ನಾವು ಈ ಸಂವಾದವನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಈ ಹಿಂದೆ ಮಾಡಿದ ಸಂದರ್ಶನ ಮತ್ತು ಇದನ್ನು ಇಟ್ಟುಕೊಂಡು ಈ ಸಂವಾದವನ್ನು ಇನ್ನಷ್ಟು ಬೆಳೆಸೋಣ.


| Anil Gunnapur

ಧನ್ಯವಾದಗಳು ಸರ್. ಪ್ರತಿಸಲ ಓದಿದಾದಗಲೂ ಹೊಸದೇನೊ ಹೊಳೆಯುತ್ತದೆ. ಅಷ್ಟೊಂದು ಪ್ರಭಾವ ಬೀರುವ ಲೇಖನವಿದು.


| Sanganagowda

ಕಥೆಗಾರರಾಗಿ ನಿಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೀರಿ ಸರ್. ಇಲ್ಲಿಯ ಅನುಭವದ ಮಾತುಗಳು ಸೃಜನಶೀಲ ಬರಹಗಾರರೆಲ್ಲರ ಅನುಭವಗಳೂ ಕೂಡ... "ಸಣ್ಣ ಕತೆ" ಒಂದು ಸ್ಕೂಲ್ ಆಗಿ ಕನ್ನಡದಲ್ಲಿ ಏಕೆ ಬೆಳೆಯಲಿಲ್ಲ?


| Rupa

Wonderful


| Kallaiah

ಕತೆ ಬರೆವ ಕಷ್ಟಗಳನ್ನು ಕುರಿತ ಲೇಖನ ಚೆನ್ನಾಗಿದೆ. ನಮಸ್ಕಾರ


| ಶಿವಲಿಂಗಮೂರ್ತಿ

ಕತೆಯ ರಚನೆಗೆ ಸಂಬಂಧಿಸಿದಂತೆ ಬಹುದಿನಗಳಿಂದ ನನ್ನಲ್ಲಿದ್ದ ಸಂದೇಹಗಳಿಗೆ ಉತ್ತರಗಳು ನಿಮ್ಮ ಈ ಲೇಖನದಿಂದ ದೊರೆತಿವೆ. ಕತೆಗಾರನೊಬ್ಬನ ಬರವಣಿಗೆಯ ಪ್ರಯಾಣ 'ಮಗು ಎದ್ದು ಬಿದ್ದು ಓಡಾಡುವುದನ್ನು ಕಲಿಯುವಂತೆ 'ಎಂಬ ನಿಮ್ಮ ವಿವರವು ನಮ್ಮಂತವರ ಬೆನ್ನು ತಟ್ಟುತ್ತದೆ. ಈ ಲೇಖನದಲ್ಲಿ ಅನೇಕ ಮೌಲಿಕ ವಿವರಗಳಿವೆ. ಅದಕ್ಕಾಗಿ ತಮಗೆ ಧನ್ಯವಾದಗಳು ಸರ್


| ಎಸ್.ಆರ್.

ತುಂಬಾ ಮೌಲಿಕ ವಿವರಣೆ. ಕಥಾರಚನೆಗೆ ಸಂಬಂಧಿಸಿದಂತೆ ಮಂಜುನಾಥ ನೆಟ್ಕಲ್ ಅವರು ಹೇಳಿರುವ ಸಮಸ್ಯೆ ನನ್ನದೂ ಹೌದು. ಭರಪೂರ ಅನುಭವಗಳು ನಮ್ಮಲ್ಲಿ ಇದ್ದರೂ ಬರೆಯುವುದಕ್ಕೆ ಧೈರ್ಯ ಬೇಕು.


| Nataraj Huliyar Replies

ಪ್ರಿಯ ನೆಟ್ಕಲ್ ಮತ್ತು ಎಸ್ ಆರ್, ಕತೆ ಬರೆಯುವವರಿಗೆ ಧೈರ್ಯಕ್ಕಿಂತ ಮುಖ್ಯವಾಗಿ ಬರೆವ ಕಾತರ, ಒತ್ತಡ, ತುರ್ತು, ಪ್ರಕಾರ ಪ್ರಜ್ಞೆ ಇವೆಲ್ಲ ಬೇಕು ಎನ್ನಿಸುತ್ತದೆ. ಈ ಮಾತು ಬರೆಯುವಾಗ ಲಂಕೇಶ್ ತಮ್ಮ 'ಚಿತ್ರಸಮೂಹ' ಕವನ ಸಂಕಲನದ ಬ್ಲರ್ಬಿನಲ್ಲಿ ಬರೆದ ಮಾತು ನೆನಪಾಗುತ್ತದೆ: 'ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳ ಪರಿಶುದ್ಧತೆ ಅಲ್ಲ...'


| Somanna

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.ಹಿರಿಯರಿಗೆ ಮತ್ತು ಕಿರಿಯರಿಗೆ ತಮ್ಮ ಅನುಭವಗಳು ಕಥೆಯಾದ ಸಂದರ್ಭ ದ ನೆನಪುಗಳನ್ನು ಪ್ರಕಟಿಸುತ್ತವೆ. ಪ್ರತಿಯೊಬ್ಬರಿಗೂ ನಿಮ್ಮಂತಹ ವರ ಅನುಭವ ದಾರಿ ದೀಪವಾಗುತ್ತದೆ ಎಂಬುದು ನನ್ನ ಪ್ರಾಮಾಣಿಕವಾದ ಅಭಿಪ್ರಾಯವಾಗಿದೆ


| Ramesh

ಕತೆ ಬರೆಯುವವರಿಗೊಂದು ಕೈಪಿಡಿ ಆಗಬಹುದು ನಿಮ್ಮ ಮಾತು. ಬರವಣಿಗೆಯ ಹಿಂದಿನ ತಯಾರಿ, ಬರೆಯುತ್ತಾ ಬರೆಯುತ್ತಾ ಕತೆಯೊಂದು ಏನೆಲ್ಲ ತಿರುವು ಕಾಣುತ್ತದೆ, ತಿದ್ದಿ ಬರೆದಾಗಲೂ ಬರೆದಾತನಲ್ಲಿ ಉಳಿಯುವ ತಳಮಳದ ಬಗ್ಗೆ ಆಡಿದ ಮಾತು ಎಲ್ಲಾ ಪ್ರಕಾರಗಳಿಗೂ ಅನ್ವಯವಾಗುತ್ತದೆ.


| Krishnakumar

ಅನುಭವಗಳು ಕಥೆಗಳಾಗಿ ಅಕ್ಷರ ರೂಪ ಕೊಡುವುದು,ಒಂದು ಸವಾಲೆ, ಅಂದುಕೊಂಡಿದ್ದನ್ನ ಬರೆಯುವುದು ಇನ್ನು ಕಷ್ಟ, ಸಿದ್ದಂತಾಗಳಿಗೆ ಅಂಟಿಕೊಂಡು ಬರೆದು ಪಾತ್ರಗಳ ಸೃಷ್ಟಿ ಮಾಡಿ ಮೂರ್ತರೂಪ ಕೊಟ್ಟು ಒಂದು ಕಥೆ ಹೆಣೆಯುವುದು ನಮ್ಮ ವಾದಗಳ್ಳನ್ನು ಆ ಮೂಲಕ ಮಾತನಾಡಿಸುವುದು ಫಿಕ್ಷನ್ ಆಗಬಹುದು, ಕಥಾಹಂದರ ಎಲ್ಲ ನೆಲೆಗಟ್ಟುಗಳು ದಾಟಿ ಎಲ್ಲವನು ಪ್ರಶೆಮಾಡಿ ವಾಸ್ತವಕ್ಕೆ ಹತ್ತಿರವಾಗುತ್ತಾ ಹೋದಾಗ ಒಂದು ಕಥೆಗಾರ, ಯಶಶ್ವಿ ಆಗುತ್ತಾನೆ


| ಡಾ. ನಿರಂಜನ ಮೂರ್ತಿ ಬಿ ಎಂ

'ಕತೆ ಬರೆವ ಕಷ್ಟಗಳು' ಕತೆಯ ಹುಟ್ಟಿನ ಹಿಂದಿನ ಗುಟ್ಟನ್ನು ರಟ್ಟು ಮಾಡುತ್ತದೆ. ಕಥೆಗಾರನ ಅನಿಸಿಕೆ, ಅನುಭವ, ಓದು, ನೋಟ, ಜಿಜ್ಞಾಸೆ, ವಿಚಾರ, ವಿಮರ್ಶೆ, ಸಿದ್ಧಾಂತ, ತತ್ವ, ನಂಬಿಕೆ, ಕಂಡದ್ದು-ಉಂಡದ್ದು, ಮುಂತಾದ ವಿಷಯಗಳು ಕಥೆಯ ಹುಟ್ಟಿಗೆ ಕಾರಣವಾಗುವ ಪ್ರಕ್ರಿಯೆಗಳನ್ನು ವಿಶ್ಲೇಷಿಸಿರುವ ರೀತಿ ಅನನ್ಯವಾಗಿದೆ.




Add Comment


Nataraj Huliyar on Book Prize Awardees

YouTube






Recent Posts

Latest Blogs