ಡಾಕ್ಟರ್ ಸಾಹೇಬ್ ಮೂಡಿದ ಪರಿ….

ಚರಿತ್ರೆ ಯಾರನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ನಿಜಕ್ಕೂ ಕುತೂಹಲಕರ; ಅದು ಅನೇಕ ಸಲ ನಮ್ಮ ಊಹೆಗೆ ನಿಲುಕದ ವಿಷಯ ಕೂಡ. ಒಳ್ಳೆಯ ಕೆಲಸಗಳಿಗೆ ಯಾರು ಯಾರನ್ನು ಹೇಗೆ ಪ್ರೇರೇಪಿಸುತ್ತಾರೆ ಎಂಬುದು ಕೂಡ ಹಾಗೇ ಆಕಸ್ಮಿಕ.  

ಒಂದು ಪುಟ್ಟ ಊರಿನಿಂದ ತಿಪಟೂರಿಗೆ ಬಂದು ಬಿ.ಎ. ಓದುತ್ತಿದ್ದ ಹುಡುಗನಿಗೆ ಅಕಸ್ಮಾತ್ ಮೇಷ್ಟರೊಬ್ಬರು ಕೆ.ವಿ. ಸುಬ್ಬಣ್ಣನವರು ಅನುವಾದಿಸಿದ ರಾಮಮನೋಹರ ಲೋಹಿಯಾರ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕ ಕೊಟ್ಟರು. ಆ ಮೇಷ್ಟರ ಹೆಸರು ಕೆ.ಎಸ್. ಕರುಣಾಕರನ್. ಮಲಯಾಳಂ ಮಾತೃಭಾಷೆಯ ಕರುಣಾಕರನ್ ಕನ್ನಡ ಪ್ರೊಫೆಸರಾಗಿದ್ದರು. ಮಲಯಾಳಂ ಕತೆಗಳನ್ನು ಕನ್ನಡಿಸುತ್ತಿದ್ದರು. ಅವರು ಕೊಟ್ಟ ಲೋಹಿಯಾ ಪುಸ್ತಕವನ್ನು ಆಗ ಬಿ.ಕಾಂ. ವಿದ್ಯಾರ್ಥಿಯಾಗಿದ್ದ, ಈಗ ಖ್ಯಾತ ರಂಗ ನಿರ್ದೇಶಕರಾಗಿರುವ, ನಟರಾಜ ಹೊನ್ನವಳ್ಳಿಯವರೂ ಓದಿದರು.  ಆ ಇಬ್ಬರು ಕಾಲೇಜ್ ಹುಡುಗರಲ್ಲಿ ನಾನೂ ಒಬ್ಬ.

ಅದೇ ಸರಿಸುಮಾರಿಗೆ, ತುಮಕೂರು ಜಿಲ್ಲೆಯಲ್ಲಿ ರೈತಸಂಘವನ್ನು ಸಂಘಟಿಸುತ್ತಿದ್ದ ಮಧುಗಿರಿ ಕಡೆಯ ಜಿ. ಶ್ರೀನಿವಾಸಕುಮಾರ್ ಲೋಹಿಯಾ ರೆಡ್ ಬುಕ್ ಹಿಡಿದುಕೊಂಡು ಎನ್.ಜಿ. ರಾಮಚಂದ್ರ, ನಟರಾಜಪ್ಪನವರ ಜೊತೆ ತಿಪಟೂರಿಗೆ ಬಂದರು. ಈ ಪುಸ್ತಕವನ್ನು ನಾವು ನೋಡುವುದಕ್ಕಿಂತ ಹತ್ತು ವರ್ಷಗಳ ಮೊದಲು ಸಮಾಜವಾದಿ ಯುವಜನಸಭಾದ ತರುಣ ಸಮಾಜವಾದಿಗಳಾದ ಎಂ.ಡಿ. ನಂಜುಂಡಸ್ವಾಮಿ ಹಾಗೂ ಪೂರ್ಣಚಂದ್ರ ತೇಜಸ್ವಿ ಇಬ್ಬರೂ ಸೇರಿ ಲೋಹಿಯಾರ ಆಯ್ದ ಮುಖ್ಯ ಚಿಂತನೆಗಳ ಈ ಪುಸ್ತಕವನ್ನು ಕನ್ನಡಿಗರಿಗಾಗಿ ರೂಪಿಸಿದ್ದರು. ೧೯೭೦ರ ಸುಮಾರಿಗೆ ಮೂಡಿಗೆರೆಯ ತೇಜಸ್ವಿಯವರ ತೋಟದ ಮನೆಯ ಜಗಲಿಯ ಮೇಲೆ ಮೂವತ್ತು, ಮೂವತ್ತೈದರ ಆಸುಪಾಸಿನ ಈ ಇಬ್ಬರು ಸಮಾಜವಾದಿ ಚಿಂತಕರು ಲೋಹಿಯಾರ ಇಂಗ್ಲಿಷ್ ಪುಸ್ತಕಗಳನ್ನು ಹರಡಿಕೊಂಡು ಕೂತು ಈ ಪುಸ್ತಕ ಮಾಡಿದ ಬಗ್ಗೆ ನನ್ನ ಕಲ್ಪನೆಯ ಚಿತ್ರ ನಿಜವಾದ ಚಿತ್ರದಂತೆ ನನ್ನಲ್ಲಿ ಅಚ್ಚೊತ್ತಿದೆ. 

ಲೋಹಿಯಾ ನಮ್ಮೊಳಗೆ ಪ್ರವೇಶಿಸಿದ್ದು ಈ ರೆಡ್ ಬುಕ್ ಹಾಗೂ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕದ ಮೂಲಕ. ಅದೆಲ್ಲ ಈ ಇಬ್ಬರು ಕಾಲೇಜು ಹುಡುಗರಿಗೆ ಎಷ್ಟು ಅರ್ಥವಾಯಿತೋ ಈಗ ನೆನಪಿಲ್ಲ. ಆದರೆ ಲೋಹಿಯಾರ ತೀಕ್ಷ್ಣ ಮಾತುಗಳು ನಮ್ಮೊಳಗೆ ಇಳಿಯತೊಡಗಿದವು. ಅದರಲ್ಲೂ ಮುಖ್ಯವಾಗಿ, ರಾಷ್ಟ್ರಪತಿ ಬಾಬೂ ರಾಜೇಂದ್ರಪ್ರಸಾದ್ ಬಹಿರಂಗವಾಗಿ ಕಾಶಿಯಲ್ಲಿ ನೂರು ಜನ ಬ್ರಾಹ್ಮಣರ ಕಾಲು ತೊಳೆದಾಗ ಅದನ್ನು ಖಂಡಿಸುತ್ತಾ ಲೋಹಿಯಾ ಹೇಳಿದ ಮಾತು: 

‘ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೈಗಳು ಶೂದ್ರರನ್ನೂ ದಲಿತರನ್ನೂ ಒದೆಯುವ ಕಾಲುಗಳ ಜೊತೆಗೇ ಇರುತ್ತವೆ.’ 

ಆ ಕಾಲದಲ್ಲಿ ಅಂಬೇಡ್ಕರ್ ಕೂಡ ರಾಜೇಂದ್ರ ಪ್ರಸಾದರನ್ನು ಖಂಡಿಸಿದ್ದನ್ನು ಅನಂತರ ಓದಿದೆ. ಮೊನ್ನೆ ಲೋಹಿಯಾ ಖಂಡನೆಯ ಬೆನ್ನು ಹತ್ತಿ, ಗೂಗಲ್‌ನಲ್ಲಿ ಅಡ್ಡಾಡುತ್ತಿದಾಗ ಆ ಕಾಲದ ವಿಚಾರವಾದಿ ವ್ಯಂಗ್ಯಚಿತ್ರಕಾರರೊಬ್ಬರ ಅದ್ಭುತ ವ್ಯಂಗ್ಯಚಿತ್ರ ಕಣ್ಣಿಗೆ ಬಿತ್ತು. ಅದನ್ನು ಇಲ್ಲಿ ಕೊಟ್ಟಿರುವೆ:

ಆ ಕಾಲದಿಂದ ಇವತ್ತಿನವರೆಗೂ ನನ್ನಲ್ಲಿ ಉಳಿದಿರುವ ನೂರಾರು ಲೋಹಿಯಾ ಕಾಣ್ಕೆಗಳಲ್ಲಿ ಕೆಲವು ಹೀಗಿವೆ:

’ಭಾರತೀಯರು ಇಡೀ ಜಗತ್ತಿನಲ್ಲೇ ಅಪಾರ ದುಃಖಿಗಳು; ಜಾತಿಭೇದ, ಲಿಂಗಭೇದ ಮಾಡುವ ಅವರ ಧೋರಣೆಯೇ ಈ ಮನಸ್ಥಿತಿಗೆ ಕಾರಣ’ 

‘ಕೆಲವರನ್ನಾದರೂ ಕೋಪಾವಿಷ್ಠಗೊಳಿಸದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ.’

‘ಗಂಡು-ಹೆಣ್ಣಿನ ಸಂಬಂಧದಲ್ಲಿ ಬಲಾತ್ಕಾರ ಹಾಗೂ ಕೊಟ್ಟ ಮಾತು ತಪ್ಪುವುದು ಎರಡೇ ಅಪರಾಧ…’

ಈ ಥರದ ಮಾತುಗಳನ್ನು ಗೆಳೆಯರೆಲ್ಲ ಉರು ಹೊಡೆದವರಂತೆ ಹೇಳಿಕೊಂಡು ಅಡ್ಡಾಡುತ್ತಿದ್ದೆವು. ಹೀಗೆ ಹೊರಗೆ ಆಡುತ್ತಿದ್ದ ಮಾತುಗಳು ಮೆಲ್ಲಗೆ ಒಳಗಿಳಿದು ಮುಂದೆ ಏನೇನೋ ಆಗಿದ್ದು ನಂನಮ್ಮ ಸ್ವಂತದ ಚರಿತ್ರೆಯ ಭಾಗವಾಗಿಹೋಗಿದೆ. ಈ ಬಗೆಯ ಅನುಭವ ಪಯಣಗಳು ಕೇವಲ ಖಾಸಗಿ ಅನುಭವಗಳಲ್ಲ; ಇವೆಲ್ಲ ಸಾಂಸ್ಕೃತಿಕ ವಿದ್ಯಮಾನಗಳು ಎಂಬ ಕಾರಣಕ್ಕಾಗಿ ಇದನ್ನೆಲ್ಲ ಇಲ್ಲಿ ಹೇಳುತ್ತಿರುವೆ. ಮೊದಲ ಬಾರಿಗೆ ಕಾರ್ಲ್ ಮಾರ್ಕ್ಸ್, ಸಿಮೊನ್ ದ ಬುವಾ ಓದಿದ ಹುಡುಗ, ಹುಡುಗಿಯರಿಗೂ ಹೀಗಾಗಿರಬಹುದು.

ಇದಾದ ಒಂದೆರಡು ವರ್ಷಗಳಲ್ಲಿ ಲೋಹಿಯಾರನ್ನು ಓದಿರುವ ಹುಡುಗ ಎಂಬ ಕಾರಣದಿಂದಲೂ ಆಗ ತರುಣ ಬಂಡಾಯ ಲೇಖಕರಾಗಿದ್ದ ಕಾಳೇಗೌಡ ನಾಗವಾರ ನನ್ನನ್ನು ತಮ್ಮೊಡನೆ ಸೇರಿಸಿಕೊಂಡರು. ಕೆ.ವಿ. ಸುಬ್ಬಣ್ಣ ಅದ್ಬುತವಾಗಿ ಕನ್ನಡಿಸಿರುವ ಲೋಹಿಯಾರ ‘ಸೌಂದರ್ಯ ಮತ್ತು ಮೈಬಣ್ಣ’ ‘ರಾಮ ಕೃಷ್ಣ ಶಿವ’ ಎಂಬ ಯುಗಪ್ರವರ್ತಕ ಲೇಖನಗಳ ಬಗ್ಗೆ ಕಾಳೇಗೌಡರು ಮೈದುಂಬಿಕೊಂಡು ಮಾತಾಡುತ್ತಿದ್ದರು. ಅವರ ಲೋಹಿಯಾ ಸಂಭ್ರಮ ನನ್ನಂಥವರಲ್ಲಿ, ಗೆಳೆಯ ಜಿ.ವಿ.ಆನಂದಮೂರ್ತಿ ಮುಂತಾದ ಹಲವರಲ್ಲಿ ಹಬ್ಬತೊಡಗಿತು. 

ನಂತರ ೧೯೯೦ರ ಸುಮಾರಿಗೆ ಕರ್ನಾಟಕ ಸರ್ಕಾರ ರಾಮಮನೋಹರ ಲೋಹಿಯಾ ಸಂಪುಟಗಳ ಸಮಗ್ರ ಕೃತಿಗಳ ಅನುವಾದಗಳ ಸಂಪುಟಗಳ ಯೋಜನೆಯ ಸಂಪಾದಕೀಯ ಹೊಣೆ ನನ್ನ ಹೆಗಲೇರಿತು. ಅದಕ್ಕೂ ಕಾಳೇಗೌಡರೇ ಕಾರಣ. ಇವೆಲ್ಲ ಪುಟ್ಟ ಊರಿನಿಂದ ಬಂದ ಯಾವುದೇ ಲೇಖಕನ ಬದುಕಿನ ಭಾಗ್ಯಶಾಲಿ ತಿರುವುಗಳು ಎಂಬ ಅಚ್ಚರಿ, ಕೃತಜ್ಞತೆಗಳಿಂದ ಈ ಮಾತುಗಳನ್ನು ಬರೆಯುತ್ತಿರುವೆ.

ಲೋಹಿಯಾ ಕೃತಿಗಳ ಸಂಪಾದಕರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ- ಜವಾಬ್ದಾರಿ-ಶ್ರಮ ಎಲ್ಲ ಬೆರೆತು ರೂಪಿಸತೊಡಗಿದ ಆ ಪುಸ್ತಕಗಳ ಏಳೆಂಟು ಸಾವಿರ ಪುಟಗಳನ್ನು ಅಪ್ಪಟ ಕನ್ನಡ ಪುಸ್ತಕಗಳಾಗುವಂತೆ ಸತತವಾಗಿ ಎಡಿಟ್ ಮಾಡಿದ ಬೌದ್ಧಿಕ ಶ್ರಮ ಮುಂದೆ ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಬರೆಯುವವರೆಗೂ ನಡೆದು ಬಂದಂತಿದೆ.  ‘ಡಾಕ್ಟರ್ ಸಾಹೇಬ್’ ಬರವಣಿಗೆ ಇದ್ದಕ್ಕಿದ್ದಂತೆ ಶುರುವಾದದ್ದರ ಹಿಂದೆ ಕೂಡ ಒಂದು ಆಕಸ್ಮಿಕ ತಿರುವು ಇತ್ತು: 

ನಮ್ಮ ಗೆಳೆಯರ ಬಳಗ ಬೆಳೆದಂತೆಲ್ಲ ಅದರೊಳಗೆ ಸೇರಿಕೊಂಡ ಸಿನಿಮಾ ಗೆಳೆಯರ ಸಂಗ ನನ್ನನ್ನು ಲೋಹಿಯಾ ಜೀವನಚರಿತ್ರೆಯತ್ತ ಒಯ್ದದ್ದು ಕುತೂಹಲಕರ. ನಟ ಕಿರಣ್ ನಾಯಕರ ಅಂದಿನ ಬ್ರಹ್ಮಚಾರಿ ಕುಟೀರ ಕೋವಿಡ್ ಕಾಲದ ನಮ್ಮ ತಂಗುದಾಣವಾಯಿತು; ಅಲ್ಲಿ ಸಿನಿಮಾ ನಿರ್ದೆಶಕ ರಾಘು ಶಿವಮೊಗ್ಗ, ಕಿರಣ್ ನಾಯಕ್ ಜೊತೆಗೆ ಸ್ಕ್ರೀನ್‌ಪ್ಲೇ ಬರವಣಿಗೆ  ಶುರುವಾಯಿತು. ಇದ್ದಕ್ಕಿದ್ದಂತೆ ಲೋಹಿಯಾ ಡಾಕ್ಯುಮೆಂಟರಿ, ಲೋಹಿಯಾ ಸಿನಿಮಾ ಐಡಿಯಾಗಳು ಮೂಡಿಬಂದವು. ರಾಘು, ಕಿರಣ್ ಅವರ ಸಲಹೆ-ಮಾರ್ಗದರ್ಶನ-ಹುರಿದುಂಬಿಕೆ ಎಲ್ಲ ಸೇರಿ ಎರಡು ಗಂಟೆಯ ಲೋಹಿಯಾ ಸಿನಿಮಾದ ಸ್ಕ್ರೀನ್‌ಪ್ಲೇವರೆಗೂ ಆಟ ಬೆಳೆಯತೊಡಗಿತು. ಸಿನಿಮಾ ನಿರ್ದೇಶಕರಾದ ಕೃಷ್ಣ ಮಾಸಡಿ, ನರೇಂದ್ರಬಾಬು, ಬಿ. ಸುರೇಶ್, ನಟ ಕಿಶೋರ್, ನಟರಾಜ ಹೊನ್ನವಳ್ಳಿ. ಮಾಲತೇಶ್ ಬಡಿಗೇರ್ ಮೊದಲಾದವರ ಎದುರು ಚಿತ್ರಕತೆ ಓದಿ ಸೈ ಎನ್ನಿಸಿಕೊಂಡು, ಅವರ ವಿಮರ್ಶೆ, ಸಲಹೆ ಪಡೆದು ತಿದ್ದುವ ಕೆಲಸವೂ ಶುರುವಾಯಿತು. ಚಿತ್ರಕತೆ ಬರೆಯುವ ಕಲೆಯ ಮೊದಲ ಪಾಠಗಳನ್ನು ಈ ಕಸರತ್ತಿನಲ್ಲಿ ಕಲಿತ ಮೇಲೆ ಹಾಲಿವುಡ್ ಚಿತ್ರಕತೆಯ ಗುರುಗಳ ಹಲವು ಪುಸ್ತಕಗಳ ಓದೂ ಜೊತೆಗೆ ಬೆರೆಯಿತು; ಇದರಿಂದಾಗಿ ನನ್ನ ಇನ್ನಿತರ ಬರವಣಿಗೆಗಳಿಗೂ ಚಿತ್ರಕ ಗುಣ ದೊರೆಯತೊಡಗಿತು. 

ಈ ಸರಿಸುಮಾರಿನಲ್ಲಿ ಶೇಷಾದ್ರಿಪುರಂ ಕಾಲೇಜಿನ ಆವರಣದಲ್ಲಿ ಇದ್ದಕ್ಕಿದ್ದಂತೆ ನಡೆದ ಒಂದು ಪುಟ್ಟ ಸಂಭಾಷಣೆ ನನ್ನ ಮತ್ತೊಂದು ಸುಂದರ ಆಕಸ್ಮಿಕವಾಯಿತು. ಗೆಳೆಯ ಹೂವಿನಹಳ್ಳಿ ನರಸಿಂಹಮೂರ್ತಿಯವರ ‘ಚಂಡವ್ಯಾಘ್ರರು’ ಕಾದಂಬರಿ ಬಿಡುಗಡೆ ಮಾಡಿ ಹೊರ ಬಂದ ಗೆಳೆಯ, ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ, ಚ.ಹ ರಘುನಾಥ್, ಇದ್ದಕ್ಕಿದ್ದಂತೆ ‘ಕಾದಂಬರಿ ಬರೀಲಿಲ್ವ ಸಾರ್‍?’ ಎಂದರು.  ‘ಸುಧಾ’ ಧಾರಾವಾಹಿಗೆ ಬೇಕಾದ ಕಾದಂಬರಿಯ ಹುಡುಕಾಟದ ಸೂಚನೆಯೂ ಅವರ ಮಾತಿನಲ್ಲಿದ್ದಂತಿತ್ತು. 

ಥಟ್ಟನೆ, ‘ಲೋಹಿಯಾ ಜೀವನ ಚರಿತ್ರೆ?’ ಅಂದೆ.

’ಯಾಕಾಗಬಾರದು?’ ಎಂದರು ರಘು.

ಲೋಹಿಯಾ ಜೀವನಯಾನದ ಬರವಣಿಗೆಯ ಬಿತ್ತನೆಯ ಬೀಜ ಬಿದ್ದಿತ್ತು! ಮುಂದಿನ ಮೂರುನಾಲ್ಕು ತಿಂಗಳಲ್ಲಿ ಪೈಲಟ್ ಪ್ರಾಜೆಕ್ಟಿನ ಒಂದೆರಡು ಕಂತು ಬರೆಯುತ್ತಿದ್ದಂತೆ ‘ಡಾಕ್ಟರ್‍ ಸಾಹೇಬ್’ ಧಾರಾವಾಹಿ ಶುರುವಾಗಿಯೇ ಬಿಟ್ಟಿತು. ಮುಂದಿನ ನಾಲ್ಕು ತಿಂಗಳ ಕಾಲ ಕೂತಲ್ಲಿ, ನಿಂತಲ್ಲಿ, ಕನಸಿನಲ್ಲಿ ಲೋಹಿಯಾ! ಹತ್ತು ಕಂತಿನಲ್ಲಿ ಮುಗಿಸಲು ಹೊರಟಿದ್ದ ಧಾರಾವಾಹಿ ಇಪ್ಪತ್ತೆರಡು ವಾರ ಮುನ್ನಡೆಯಿತು. ಓದುಗ, ಓದುಗಿಯರು ವಾರವಾರ ಸ್ಪಂದಿಸುತ್ತಿದ್ದರು. ಅದಾದ ನಂತರ ಇನ್ನಷ್ಟು ಸಂಶೋಧನೆ, ಬ್ರಿಟಿಷ್ ವಸಾಹತುಶಾಹಿಯ ದಾಖಲೆಗಳು, ಆರ್ಕೈವ್ ಸಾಮಗ್ರಿಗಳು, ಹತ್ತು ಹದಿನೈದು ಸಾವಿರ ಪುಟಗಳ ಓದು…ಇವೆಲ್ಲ ಸೇರಿ ‘ಡಾಕ್ಟರ್ ಸಾಹೇಬ್’ ಕೊನೆಗೂ ಹೊರ ಬಂದಿದೆ.

ನಾನು ಬಲ್ಲಂತೆ ಲೋಹಿಯಾರ ಈ ಪ್ರಮಾಣದ ಸಮಗ್ರ ಜೀವನ ಚರಿತ್ರೆ ಈ ಬಗೆಯಲ್ಲಿ ಇಂಡಿಯಾದಲ್ಲಿ ಈತನಕ ಬಂದಂತಿಲ್ಲ. ಇಡೀ ಬರವಣಿಗೆಯ ಶ್ರಮ ಎನ್ನುವುದು ಎಂದೂ ಬಳಲಿಸದಂತೆ ನನ್ನನ್ನು ಆವರಿಸಿಕೊಂಡ ಲೋಹಿಯಾರ ಬದುಕು, ಚಿಂತನೆ, ಬರಹ, ಮಾತು, ವ್ಯಗ್ರತೆ…ಇನ್ನೂ ಏನೇನೋ ಸೇರಿ ‘ಡಾಕ್ಟರ್‍ ಸಾಹೇಬ್’ ಈಗ ಐನೂರು ಪುಟಗಳ ಪುಸ್ತಕವಾಗಿ ಈಗ ನಿಮ್ಮೆದುರು...

ಭಾರತದ ಕೆಲವೇ ಕೆಲವು ಶ್ರೇಷ್ಠ ಆಧುನಿಕ ಚಿಂತಕರ ಸಾಲಿನಲ್ಲಿರುವ ಹಾಗೂ ಭಾರತದ ಶ್ರೇಷ್ಠ ರಾಜಕೀಯ ಚಿಂತಕರಾಗಿರುವ ಲೋಹಿಯಾ ಬದುಕು-ಬರಹ ಇವತ್ತಿಗೂ ಯಾರಲ್ಲೇ ಆದರೂ ಹೊಸ ಪ್ರಜ್ಞೆ ರೂಪಿಸಬಲ್ಲದು ಎಂಬುದು ನನ್ನ ಖಚಿತ ನಂಬಿಕೆ. 

೧೨ ಅಕ್ಟೋಬರ್‍ ಸೋಮವಾರ ಸಂಜೆ 'ಡಾಕ್ಟರ್ ಸಾಹೇಬ್' ಬಿಡುಗಡೆಯಾಯಿತು. ಅಂದು ಲೋಹಿಯಾ ಸ್ಮರಣೆಯ ದಿನ. ೧೯೬೭ರ ಅಕ್ಟೋಬರ್ ೧೨ರ ನಡುರಾತ್ರಿ ರಾಮಮನೋಹರ ಲೋಹಿಯಾ ತೀರಿಕೊಂಡರು. 

‘ತೀರಿಕೊಂಡವರ ಸತ್ವ ಬದುಕಿ ಉಳಿದವರ ಬೆನ್ನಹುರಿಯಲ್ಲಿ ಬೆಳೆಯುತ್ತದೆ’ ಎಂಬ ನೀಷೆಯ ಮಾತನ್ನು ಆಗಾಗ ನಂಬಿ ನೆನೆಯುವ ನನಗೆ, ‘ಡಾಕ್ಟರ್ ಸಾಹೇಬ್’ ಐವತ್ತೊಂಬತ್ತು ವರ್ಷಗಳ ಕೆಳಗೆ ತೀರಿಕೊಂಡ ಲೋಹಿಯಾ (೧೯೧೦-೧೯೬೭) ಕನ್ನಡ ಮಣ್ಣಿನಲ್ಲಿ ಮರಳಿ ಹುಟ್ಟುವ ರೀತಿಗೆ ಸಾಕ್ಷಿಯಾಗಬಲ್ಲದು ಎನ್ನಿಸುತ್ತಿದೆ; ಆ ಭಾವವನ್ನು ನಿಮ್ಮೊಡನೆ ಹೇಳಿಕೊಂಡರೆ ತೀರಾ ತಪ್ಪಾಗಲಿಕ್ಕಿಲ್ಲ!

ಈ ಪುಸ್ತಕವನ್ನು ಓದಲು ಬಯಸುವ ಓದುಗ, ಓದುಗಿಯರಿಗೆ: 

ನಟರಾಜ್ ಹುಳಿಯಾರ್ ಬರೆದ  'ಡಾಕ್ಟರ್ ಸಾಹೇಬ್' ರಾಮಮನೋಹರ ಲೋಹಿಯಾ ಅವರ ಸಮಗ್ರ ಜೀವನ ಚರಿತ್ರೆ  ಪ್ರಕಟವಾಗಿದೆ. ಐನೂರು ಪುಟಗಳ ಈ ಮಹತ್ವದ ಕೃತಿ ವಿಶೇಷ ರಿಯಾಯಿತಿಯಲ್ಲಿ ದೊರೆಯುತ್ತದೆ. ಅಂಚೆ ವೆಚ್ಚ ಸೇರಿ: ರೂ. 350 ಸಂಪರ್ಕ: ನರಸಿಂಹಮೂರ್ತಿ: 9480583913

ಈ ಅಂಕಣದ ಕಾಮೆಂಟ್ ಬಾಕ್ಸ್ ನಲ್ಲೂ ಈ ಕುರಿತು ಬೇಡಿಕೆ ದಾಖಲಿಸಬಹುದು.

Share on:

Comments

14 Comments



| Subramanyaswamy Swamy

ಲೋಹಿಯಾ ನಿರ್ವಾಣದ ದಿನವೇ ಡಾಕ್ಟರ್ ಸಾಬ್ ಆಗಮನ ನನಗೆ ಚಾರಿತ್ರಿಕ ಮಹತ್ವದ ದಿನ ಅನ್ನಿಸುತ್ತದೆ. ಮಹತ್ವದ ಹೊತ್ತಿಗೆ ಅರ್ಪಿಸುತ್ತಿರುವ ನಿಮಗೆ ಅಭಿನಂದನೆಗಳು ಸಾರ್


| Hari Prasad

ಲವುಲೀ ಇದು ನಿವೇದನೆಯಾಗಿ, ಅವಲೋಕನವಾಗಿ, ಸಾಂಸ್ಕೃತಿಕ ಬೇರುಗಳು ಹಬ್ಬುವ ಒಂದು ಸುಂದರ ಕತೆಯೂ ಆಗಿದೆ. ಅಭಿನಂದನೆಗಳು ಸಾ.


| ಮಂಜುನಾಥ್ ಸಿ ನೆಟ್ಕಲ್

ಲೋಹಿಯಾ ನಿಮ್ಮೊಳಗೆ ಬೆಳೆದು ಬಂದ ಹಾದಿ ತುಂಬಾ ರೋಚಕವಾಗಿದೆ ಸರ್.... ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ


| P Puttaraju

Very nice article. Loved it.


| Channabasavanna

ಡಾಕ್ಟರ್ ಸಾಹೇಬ್ ಹೆರಿಗೆಯ ಸುಖ ಚೇತೋಹಾರಿಯಾಗಿದೆ. ಸಮಸ್ತ ಕನ್ನಡದ ಓದುಗರ ಪರವಾಗಿ ಶರಣು


| Kaavya

Congratulations


| Puttaswamy K.

ಪದವಿ ಓದುವ ಕಾಲದಲ್ಲಿ ನಮಗಿಂತ ಒಂದು ವರ್ಷ ಸೀನಿಯರ್ ಹ. ಸೋಮಶೇಖರ್ ಲೋಹಿಯಾ ದೀಕ್ಷೆ ಕೊಟ್ಟರು. ಲೋಹಿಯಾ ಅವರು ಸಂಪಾದಿಸುತ್ತಿದ್ದ ಮ್ಯಾನ್ ಕೈಂಡ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಹೈದರಾಬಾದ್ ನ ಲೋಹಿಯಾ ನ್ಯಾಸ್ ನಿಂದ ಹೊತ್ತು ತಂದಿದ್ದ ಅವರು ಸಮಯ ಸಿಕ್ಕಾಗಲೆಲ್ಲ ಒಂದೊಂದು ಲೇಖನವನ್ನು ಓದುತ್ತಾ ಚರ್ಚಿಸುತ್ತಿದ್ದರು. ಲೋಹಿಯಾ ನಮ್ಮ ಕೆಲವು ಗೆಳೆಯರ ಒಳಗೆ ಇಳಿದದ್ದು ಹೀಗೆ. ಅದೇ ವೇಳೆ ಓಂ ಪ್ರಕಾಶ್ ದೀಪಕ್ ಅವರು ಬರೆದ ಜೀವನ ಚರಿತ್ರೆಯ ಕನ್ನಡ ಅನುವಾದ ಪ್ರಕಟವಾಗಿತ್ತು. ಆದರೆ ಆ ಪುಸ್ತಕ ಹಾಗೂ ಬರಹಗಳು ನಮ್ಮ ಸಂಗಾತಿಯಾದವು.


| ಸೋಮಾಶಂಕರ ವಿ

ನಾನು ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಭಾಗ್ಯ ಸರ್.. ಲೋಹಿಯಾ ಚಿಂತನೆಗಳು ನಾಡಿನ ಯುವಕರಲ್ಲಿ ಹೊಸ ಸಂವೇದನೆಯನ್ನು ಹುಟ್ಟಿಸುವ ಸಮರ್ಥ ಘಟನೆಗಲಾಗಿವೆ ಈ ಕೃತಿಯಲ್ಲಿ ಸಮಗ್ರವಾಗಿ ಸೆರೆಯಾಗಿರುವುದು ನಾನು ಕೃತಿ ಕೊಂಡು ತಂದು ರಾತ್ರಿ ಮೂರು ತಾಸಿಗೂ ಮೀರಿದ ನನ್ನ ಕಣ್ಣ ಸ್ಕ್ಯಾನಿಂಗ್ ನಿಂದ. ನನ್ನ ಅರಿವಿನ ಮಿತಿಯಲ್ಲಿ, ಕನ್ನಡ ಸಾಹಿತ್ಯ ಮತ್ತು ನಾಡಿನಲ್ಲಿ ಅತ್ಯಮೂಲ್ಯ ಪುಸ್ತಕ ಅನಿಸುತ್ತದೆ ಅಷ್ಟು ಸಮಗ್ರವಾಗಿ ಲೋಹಿಯರನ್ನು ದರ್ಶಿಸಿದ ಮತ್ತ್ಯಾವ ಪುಸ್ತಕ ನಾನು ನೋಡಿಲ್ಲ. ನಿಮ್ಮ ಶ್ರಮ ನಮ್ಮಂಥ ಹಲವು ಓದುಗರ ಹೊಸ ಚಿಂತನೆಯ ಪಯಣಕ್ಕೆ ನೇರವಾದುದಕ್ಕೆ ಧನ್ಯವಾದಗಳು ಸರ್.


| ಡಾ. ನಿರಂಜನ ಮೂರ್ತಿ ಬಿ ಎಂ

'ಡಾಕ್ಟರ್ ಸಾಹೇಬ್ ಮೂಡಿದ ಪರಿ'ಯೂ ಚೆನ್ನಾಗಿ ಮೂಡಿಬಂದಿದೆ. ಅದು ಧಾರಾವಾಹಿಯಾಗಿ ಬರುತ್ತಿದ್ದಾಗ, ಪ್ರತಿ ಧಾರೆಯನ್ನು ಓದಲಾಗಿರಲಿಲ್ಲ. ಈಗ ಒಮ್ಮೆಗೇ ವರ್ಷಾಧಾರೆಯಾಗಿ ಬರುತ್ತಿರುವುದು ಸಂಭ್ರಮದ ವಿಷಯ. ವರ್ಷಾಧಾರೆಯಲ್ಲಿ ಮನಸಾರೆ ತೊಯ್ದು, ನೆನೆದು ನಲಿಯಬಹುದು. ಪುಸ್ತಕ ಬಿಡುಗಡೆ ಸಮಾರಂಭ ಸಾಂಗವಾಗಿ ನಡೆಯಲಿ. ಲೋಹಿಯಾರ ಸ್ಮರಣೆ ಮತ್ತವರ ಚಿಂತನೆಗಳನ್ನು ಅಮರವಾಗಿಸುವ ಈ ಕಾರ್ಯಕ್ಕಾಗಿ ಹುಳಿಯಾರರಿಗೆ ಮನಃಪೂರ್ವಕ ಅಭಿನಂದನೆಗಳು.


| ಡಾ. ನಿರಂಜನ ಮೂರ್ತಿ ಬಿ ಎಂ

'ಡಾಕ್ಟರ್ ಸಾಹೇಬ್ ಮೂಡಿದ ಪರಿ'ಯೂ ಚೆನ್ನಾಗಿ ಮೂಡಿಬಂದಿದೆ. ಅದು ಧಾರಾವಾಹಿಯಾಗಿ ಬರುತ್ತಿದ್ದಾಗ, ಪ್ರತಿ ಧಾರೆಯನ್ನು ಓದಲಾಗಿರಲಿಲ್ಲ. ಈಗ ಒಮ್ಮೆಗೇ ವರ್ಷಾಧಾರೆಯಾಗಿ ಬರುತ್ತಿರುವುದು ಸಂಭ್ರಮದ ವಿಷಯ. ವರ್ಷಾಧಾರೆಯಲ್ಲಿ ಮನಸಾರೆ ತೊಯ್ದು, ನೆನೆದು ನಲಿಯಬಹುದು. ಪುಸ್ತಕ ಬಿಡುಗಡೆ ಸಮಾರಂಭ ಸಾಂಗವಾಗಿ ನಡೆಯಲಿ. ಲೋಹಿಯಾರ ಸ್ಮರಣೆ ಮತ್ತವರ ಚಿಂತನೆಗಳನ್ನು ಅಮರವಾಗಿಸುವ ಈ ಕಾರ್ಯಕ್ಕಾಗಿ ಹುಳಿಯಾರರಿಗೆ ಮನಃಪೂರ್ವಕ ಅಭಿನಂದನೆಗಳು.


| Jayaram

Excellent. The cartoon about Rajendra Prasad washing the feet of 200 Sanskrit seers is a very rare one


| Suman Priya

ಕುತೂಹಲಕಾರಿಯಾದ ಆತ್ಮೀಯ ಬರಹ, ಸರ್.‌ ಇದನ್ನು ಓದಿ ಲೋಹಿಯಾ ಅವರ ಬಗ್ಗೆ ಗಹನವಾಗಿ ಓದಲೇ ಬೇಕು ಎನ್ನುವ ಮನಸಾಗಿದೆ. ʼಡಾಕ್ಟರ್‌ ಸಾಹೇಬ್‌ʼ ಮೂಲಕ ನನ್ನ ಲೋಹಿಯಾ ಪಯಣವನ್ನು ಆರಂಭಿಸುತ್ತೇನೆ. ಈ ಅವಕಾಶ ಒದಗಿಸಿಕೊಟ್ಟ ನಿಮಗೆ ತುಂಬಾ ಥ್ಯಾಂಕ್ಸ್‌ ಸರ್.‌


| Ram

congrats


| Dalavayi

ಒಳ್ಳೆಯ ಬರಹ. ಮುನ್ನೆಲೆಗೆ ಹಿನ್ನೆಲೆ




Add Comment


Mundana Kathana Nataka

YouTube






Recent Posts

Latest Blogs