ಲೋಟಸ್ ಈಟರ್‍ಸ್!

ಆ ದ್ವೀಪದಲ್ಲಿರುವ ಜನರ ಕೆಲಸ ಇಷ್ಟೇ: ತಾವರೆ ತಿನ್ನುವುದು, ಸುಮ್ಮನೆ ಇರುವುದು, ಒರಗುವುದು, ಮಲಗುವುದು!  ತಾವರೆ ತಿಂದರೆ ಸಾಕು, ಅವರಿಗೆ ಬೇರೇನೂ ಬೇಕೆನ್ನಿಸುವುದಿಲ್ಲ! 

ಮೇಲುನೋಟಕ್ಕೆ ‘ಮಹಾಸೋಮಾರಿತನ’ ಎನ್ನಿಸುವ ಸ್ಥಿತಿ. ಆದರೂ ಈ ಸ್ಥಿತಿಯನ್ನು ಸಾಂಕೇತಿಕವಾಗಿ ಎಲ್ಲರಿಗೂ ಅನ್ವಯಿಸಿ ನೋಡಿ: ಮನುಷ್ಯರಷ್ಟೇ ಅಲ್ಲ, ಎಲ್ಲ ಜೀವಿಗಳೂ ಒಂದಲ್ಲ ಒಂದು ಸಲ-ಅಥವಾ ನೂರಾರು ಸಲ-ಈ ಸ್ಥಿತಿಯಲ್ಲಿರಬೇಕೆಂದು ಬಯಸುತ್ತಲೇ ಇರಬಹುದು ಎಂಬುದು ನನ್ನ ಊಹೆ. 

ಈ ‘ಲೋಟಸ್ ಈಟರ‍್ಸ್’ಅಥವಾ ‘ತಾವರೆ ಭಕ್ಷಕರು’ಕತೆ ಗ್ರೀಕ್ ಕವಿ ಹೋಮರನ ಮಹಾಕಾವ್ಯ ‘ಒಡಿಸ್ಸಿ’ಯ ಮೋಹಕ ಭಾಗಗಳಲ್ಲಿ ಒಂದು. ಹೋಮರನ ಮೊದಲ ಮಹಾಕಾವ್ಯ ‘ಇಲಿಯಡ್’ನಲ್ಲಿ ಗ್ರೀಕ್ ಹಾಗೂ ಟ್ರೋಜನ್ನರ ನಡುವೆ ಯುದ್ಧ ನಡೆಯುತ್ತದೆ. ಗ್ರೀಕ್ ನಾಯಕ ಅಖಿಲೀಸನ ಸಾವಿನೊಂದಿಗೆ ಮೂಲ ಮಹಾಕಾವ್ಯ ಮುಗಿಯುತ್ತದೆ. ಗ್ರೀಕರು ಯುದ್ಧ ಗೆಲ್ಲಲಾಗದೆ ವಾಪಸ್ ಹೊರಟ ನಂತರ ಗ್ರೀಕ್ ವೀರ, ಚತುರ ಒಡಿಸ್ಯೂಸ್ ಮರದ ಕುದುರೆಯಲ್ಲಿ ಯೋಧರನ್ನು ಹುದುಗಿಸಿ ಟ್ರಾಯ್ ಕೋಟೆಯೊಳಕ್ಕೆ ಕಳಿಸಿ ಟ್ರೋಜನ್ನರನ್ನು ಮುಗಿಸಿದ ಎಂಬ ಕತೆ ‘ಇಲಿಯಡ್’ಮಹಾಕಾವ್ಯದೊಳಗೆ ನಂತರ ಸೇರಿಕೊಂಡಿದೆ. ಈ ಪ್ರಸಂಗದಲ್ಲಿ ಬರುವ ‘ಟ್ರೋಜನ್ ಹಾರ್ಸ್’ಎಂಬುದು ಯುರೋಪಿಯನ್ ಭಾಷೆಗಳಲ್ಲಿ ಕುಟಿಲೋಪಾಯವನ್ನು ಸೂಚಿಸುವ ನುಡಿಗಟ್ಟಾಗಿ ಬಳಕೆಯಾಗುತ್ತಿದೆ. ಕೆಲವು ವರ್ಷಗಳ ಕೆಳಗೆ ಗ್ರೀಕ್ ಪ್ರಧಾನಿ ಯುರೂಪಿನ ಕೆಲವು ದೇಶಗಳು ತನಗೆ ಕೊಟ್ಟ ಸಲಹೆಯನ್ನು ತಿರಸ್ಕರಿಸುತ್ತಾ, ‘ನಮಗೆ ನಿಮ್ಮ ಟ್ರೋಜನ್ ಹಾರ್ಸ್ ಬೇಕಾಗಿಲ್ಲ’ ಅಂದಿದ್ದು ನೆನಪಾಗುತ್ತದೆ! 

ಟ್ರೋಜನ್ ಯುದ್ಧದಲ್ಲಿ ಮಡಿಯದೆ ಉಳಿದ ಕೆಲವೇ ವೀರರಲ್ಲಿ ಚತುರನಾಯಕ ಒಡಿಸ್ಯೂಸ್ ಕೂಡ ಒಬ್ಬ. ಗ್ರೀಕ್ ಭಾಷೆಯಲ್ಲಿ ಅದಿಸ್ಯೂಸ್ ಎಂದು ಕರೆಯುವ ಒಡಿಸ್ಯೂಸ್‌ಗೆ ಯೂಲಿಸಿಸ್ ಎಂಬ ಹೆಸರು ಕೂಡ ಇದೆ. ಒಡಿಸ್ಯೂಸನ ಯಾನ ಅಥವಾ ಪಯಣವೇ ‘ಒಡಿಸ್ಸಿ’. ನಂತರದಲ್ಲಿ ‘ಒಡಿಸ್ಸಿ’ ಎಂಬ ಪದ ಯುರೋಪಿಯನ್ ಭಾಷೆಗಳಲ್ಲಿ ಯಾವುದೇ ದೀರ್ಘಪಯಣವನ್ನು ಸೂಚಿಸುವ ಪದವಾಗಿ ನಿಘಂಟು ಸೇರಿದೆ. 

ಟ್ರೋಜನ್ ಯುದ್ಧದಲ್ಲಿ ಅಳಿದುಳಿದ ಯೋಧರನ್ನು ಕರೆದುಕೊಂಡು ತನ್ನೂರು ಇಥಕಕ್ಕೆ ಹೊರಟ ಒಡಿಸ್ಯೂಸ್ ಹಲಬಗೆಯ ಕಷ್ಟ ಎದುರಿಸಿ, ಸಾಹಸ ನಡೆಸಿ, ಮುಂದೆ ಸಾಗುತ್ತಿದ್ದಾನೆ. ಒಂದು ಘಟ್ಟದಲ್ಲಿ ಅವನಿದ್ದ ದೋಣಿ ಫೀಶಿಯಾ ಪಟ್ಟಣದ ಬಳಿ ಕಡಲ ದಂಡೆಗೆ ಬಡಿದು ಚೂರಾಗುತ್ತದೆ; ಒಡಿಸ್ಯೂಸ್ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಮೈ ಮೇಲೆ ನೂಲಿನೆಳೆಯೂ ಇಲ್ಲದೆ ಎಲೆಗಳಲ್ಲಿ ಸೊಂಟ ಮುಚ್ಚಿಕೊಂಡು ಮೇಲೆದ್ದು ಬರುತ್ತಿದ್ದ ಒಡಿಸ್ಯೂಸನ ಮೈಕಟ್ಟು ಕಂಡ ಫೀಶಿಯಾದ ದೊರೆ ಆಲ್ಸಿನೌಸ್‌ನ ಮಗಳು ರಾಜಕುಮಾರಿ ನೌಸಿಕಾಗೆ ಇವನು ಯಾರೋ ವೀರಾಧಿವೀರನೇ ಇರಬೇಕು; ಮದುವೆಯಾದರೆ ಇಂಥವನನ್ನೇ ಮದುವೆಯಾಗಬೇಕು ಎನ್ನಿಸುತ್ತದೆ! ಸಖಿಯರಿಗೆ ಹೇಳಿ ಅವನನ್ನು ಸಜ್ಜುಗೊಳಿಸಿ ಅರಮನೆ ತಲುಪುವ ಹಾದಿ ತೋರಿಸುತ್ತಾಳೆ. ದೊರೆ ಆಲ್ಸಿನೌಸ್ ಅವನನ್ನು ಎದುರುಗೊಂಡು ಆದರಿಸುತ್ತಾನೆ. 

ಒಂದು ಸಂಜೆ ಆಲ್ಸಿನೌಸ್‌ನ ಆಸ್ಥಾನದಲ್ಲಿ ಗಾಯಕನೊಬ್ಬ ಟ್ರೋಜನ್ ಯುದ್ಧಕಾಲದ ಒಡಿಸ್ಯೂಸ್-ಅಖಿಲೀಸರ ಕತೆಯನ್ನು ಹಾಡುತ್ತಾನೆ. ಈ ಹಾಡು ಕೇಳುತ್ತಾ ಒಡಿಸ್ಯೂಸ್‌ಗೆ ಕಣ್ಣೀರು ಉಕ್ಕುತ್ತದೆ. ‘ಯಾಕಪ್ಪಾ ಅಳುತ್ತಿದ್ದೀಯ?’ ಎಂದು ಆಲ್ಸಿನೌಸ್ ವಿಚಾರಿಸಿದಾಗ, ಒಡಿಸ್ಯೂಸ್ ‘ಆ ಹಾಡುಗಾರ ಬಣ್ಣಿಸುತ್ತಿರುವ ಓಡಿಸ್ಯೂಸ್ ನಾನೇ’ಎನ್ನುತ್ತಾನೆ. ಅಲ್ಲಿಯತನಕ ತನ್ನ ಗುರುತು ಮುಚ್ಚಿಟ್ಟಿದ್ದ ಒಡಿಸ್ಯೂಸ್ ತನ್ನ ಆವರೆಗಿನ ಸಾಹಸದ ಕತೆಗಳನ್ನು, ಟ್ರೋಜನ್ ಯುದ್ಧ ಮುಗಿದ ನಂತರ ಇಲ್ಲಿಯವರೆಗೆ ಪಟ್ಟ ಪಾಡನ್ನು, ಹೇಳುತ್ತಾನೆ. ಆಧುನಿಕ ಕಾಲದಲ್ಲಿ ನಾವು ‘ಫ್ಲ್ಯಾಶ್‌ಬ್ಯಾಕ್’ಎನ್ನುವ ಕಥಾನಿರೂಪಣಾ ತಂತ್ರವನ್ನು ಹೋಮರ್ ೨೮೦೦ ವರ್ಷಗಳ ಕೆಳಗೇ ಬಳಸಿದ್ದ! ಸಾವಿರ ವರ್ಷಗಳ ಕೆಳಗೆ ಕನ್ನಡ ಕವಿ ರನ್ನ ತನ್ನ ‘ಗದಾಯುದ್ಧ’ದಲ್ಲಿ ‘ಸಿಂಹಾವಲೋಕನ ತಂತ್ರ’ಬಳಸಿ ಹಿಂದೆ ನಡೆದ ಕತೆ ಹೇಳಿದ್ದ. ನನ್ನ ಕಲ್ಪನೆಯಲ್ಲಿ ಸಿಂಹಾವಲೋಕನ ಫ್ಲ್ಯಾಶ್‌ಬ್ಯಾಕ್‌ಗಿಂತ ಭಿನ್ನವಾದ, ವಿರಾಮದ ಕಥನತಂತ್ರದಂತೆ ಕಾಣುತ್ತಿರುತ್ತದೆ.

ಅದಿರಲಿ. ಒಡಿಸ್ಯೂಸ್ ಆಲ್ಸಿನೌಸಿನ ಆಸ್ಥಾನದಲ್ಲಿ ತನ್ನ ಆವರೆಗಿನ ಯಾನದ ಕತೆ ಹೇಳುತ್ತಾ ಈ ಅಂಕಣದ ಆರಂಭದಲ್ಲಿ ಹೇಳಿದ ತಾವರೆ ತಿನ್ನುವವರ ನಾಡಿನ ಪ್ರಸಂಗಕ್ಕೆ ಬರುತ್ತಾನೆ. ಆ ಭಾಗದ ಸರಳ ಗದ್ಯಾನುವಾದ:

‘…ಅದಾದ ಮೇಲೆ ಒಂಬತ್ತು ದಿನ ಭೀಕರ ಬಿರುಗಾಳಿ ನಮ್ಮನ್ನು ಎಲ್ಲೆಲ್ಲೋ ಒಯ್ದಿತು. ಹತ್ತನೆ ದಿನಕ್ಕೆ ನಾವು ತಾವರೆ ತಿನ್ನುವವರ ನಾಡಿಗೆ ಕಾಲಿಟ್ಟೆವು. ಅಲ್ಲಿರುವ ಜನ ತೊಡಗಿರುವ ಒಂದೇ ಕೆಲಸವೆಂದರೆ ತಾವರೆ ತಿನ್ನುವುದು. ಸರಿ, ನಮ್ಮ ಪಾಡಿಗೆ ನಾವು ಕಡಲ ದಂಡೆಗೆ ಹೋಗಿ ಉಂಡೆವು, ಕುಡಿದೆವು. ಎಲ್ಲರೂ ಉಂಡಾದ ಮೇಲೆ, ‘ಈ ನಾಡಿನಲ್ಲಿರೋ ಆ ತಾವರೆ ತಿನ್ನೋ ಜನ ಯಾರು, ಎತ್ತ, ವಿಚಾರಿಸಿಕೊಂಡು ಬನ್ನಿ’ ಎಂದು ನನ್ನಿಬ್ಬರು ಸಹಚರರನ್ನು ಕಳಿಸಿದೆ. ಈ ಇಬ್ಬರ ಉಸ್ತುವಾರಿಗೆ ಮತ್ತೊಬ್ಬನನ್ನು ಕಳಿಸಿದೆ. ನಾನು ಕಳಿಸಿದ ಮೂವರೂ ತಾವರೆ ಭಕ್ಷಕರ ತಾಣಕ್ಕೆ ಹೋದರು. ಆದರೆ ಎಷ್ಟೊತ್ತಾದರೂ ಅವರು ಮರಳಿ ಬರಲೇ ಇಲ್ಲ! 

ಆ ತಾವರೆ ಭಕ್ಷಕರು ನಮ್ಮವರಿಗೆ ಕೇಡನ್ನೇನೂ ಮಾಡಿರಲಿಲ್ಲ; ನಮ್ಮವರನ್ನೂ ‘ಬನ್ನಿ, ತಾವರೆ ರುಚಿ ನೋಡಿ’ಎಂದು ಕರೆದಿದ್ದರು. ಆ ಜೇನುಸವಿಯ ತಾವರೆ ತಿಂದವರಿಗೆ ಅಲ್ಲಿಂದ ಎದ್ದು ಹೊರಡುವ ಬಯಕೆಯೇ ಮೂಡುತ್ತಿರಲಿಲ್ಲ. ಹೀಗಾಗಿ ನಮ್ಮವರು, ನಮ್ಮೂರು, ಊರ ದಾರಿ, ಮನೆ… ಎಲ್ಲ ಮರೆತು ಅಲ್ಲಿಯೇ ಇದ್ದುಬಿಟ್ಟಿದ್ದರು. ನಾನು ಅಲ್ಲಿಗೆ ಹೋಗಿ ಅವರನ್ನು ಕಾಡಿ ಬೇಡಿ, ಅತ್ತು ಕರೆದು, ಅವರನ್ನು ಹಡಗಿನತ್ತ ಎಳೆದುಕೊಂಡು ಬಂದು ಕಟ್ಟಿ ಹಾಕಿದೆ. ‘ಸರಸರ ಹಡಗು ಮುನ್ನಡೆಸಿ’ ಎಂದು ಉಳಿದ ನಾವಿಕರಿಗೆ ಹೇಳಿದೆ. ಯಾಕೆಂದರೆ ಈ ಉಳಿದವರು ಕೂಡ ಆ ತಾವರೆ ತಿಂದು ಮನೆಯ ಹಾದಿ ಮರೆತಾರೆಂದು ನನ್ನ ಭಯ. ನನ್ನ ಮಾತಿಗೆ ಕಿವಿಗೊಟ್ಟ ನಾವಿಕರು ಹಡಗು ನಡೆಸತೊಡಗಿದರು.’   

ಇಂಥ ಮಹಾಕಾವ್ಯ ಕತೆಗಳೆಲ್ಲ ಓಬೀರಾಯನ ಕಾಲದ ಕತೆಗಳು, ಊಳಿಗಮಾನ್ಯ ಕಾಲದ ಕತೆಗಳು ಇತ್ಯಾದಿ ವಾದಗಳೆಲ್ಲ ಒಂದು ಮಟ್ಟದವರೆಗೆ ಸರಿಯಿರಬಹುದು. ಆದರೆ ಈ ಮಹಾಕಾವ್ಯ ಕತೆಗಳನ್ನು ಜನಸಮುದಾಯದ ಸಾಮೂಹಿಕ ಮಹಾಜ್ಞಾನ-ಕಲೆಕ್ಟೀವ್ ವಿಸ್ಡಂ- ಅಥವಾ ಕಾರ್ಲ್ ಯೂಂಗ್ ಹೇಳುವ ಸಾಮೂಹಿಕ ಅಪ್ರಜ್ಞೆ- ‘ಕಲೆಕ್ಟಿವ್ ಅನ್‌ಕಾನ್ಷಿಯಸ್’-ಕೂಡ ಸೃಷ್ಟಿಸಿದೆ ಎಂಬುದನ್ನು ಮರೆಯದಿರೋಣ. ಅವು ಜನಮಾನಸದ ಕತೆಗಳಾಗಿ ಸಾವಿರಾರು ತಲೆಮಾರುಗಳು ಮೆಚ್ಚಿ, ಮೆಲುಕು ಹಾಕಿರುವ ಕತೆಗಳೂ ಆಗಿರುತ್ತವೆ; ಅವುಗಳಲ್ಲಿರುವ ರೂಪಕಗಳು ಹೊಸ ಹೊಸ ತಲೆಮಾರುಗಳಿಗೆ ಆಕರ್ಷಕವೂ ಆಗಿರುತ್ತವೆ; ಎಲ್ಲ ಕಾಲಕ್ಕೂ ಹೊಸ ಅರ್ಥ ಕೊಡುವ ಕತೆಗಳೂ ಆಗುತ್ತವೆ. ಹೋಮರನ ‘ಒಡಿಸ್ಸಿ’ಯಲ್ಲಿರುವ ತಾವರೆ ತಿನ್ನುವವರ ಕತೆಯನ್ನು ಮೂವತ್ತೈದು ವರ್ಷಗಳ ಕೆಳಗೆ ಓದಿದಾಗಿನಿಂದಲೂ ಈ ಕತೆ ಹಾಗೂ ಮಹಾಕಾವ್ಯ ರೂಪಕಗಳ ಕಾಲಾತೀತತೆ ಅಚ್ಚರಿ ಹುಟ್ಟಿಸುತ್ತಲೇ ಇರುತ್ತದೆ. 

ಹತ್ತೊಂಬತ್ತನೇ ಶತಮಾನದ ಇಂಗ್ಲಿಷ್ ಕವಿ ಆಲ್‌ಫ್ರೆಡ್ ಟೆನ್ನಿಸನ್ ಈ ಕತೆ ಓದಿ ಚಕಿತಗೊಂಡು ‘ಲೋಟಸ್ ಈಟರ್ಸ್’ಎಂಬ ಸುಂದರ ಪದ್ಯ ಬರೆದು ತಾವರೆ ತಿಂದವರ ಸ್ಥಿತಿ-ಮನಸ್ಥಿತಿಗಳನ್ನು ಇನ್ನಷ್ಟು ಚಿತ್ರಕವಾಗಿ ವಿಸ್ತರಿಸಿ ತೋರಿಸಿದ. ಟೆನ್ನಿಸನ್ ಪದ್ಯದ ಶುರುವಿನಲ್ಲಿ ಒಡಿಸ್ಯೂಸ್ ತಾವರೆ ತಿಂದು ಆರಾಮಾಗಿ ಕೂತಿದ್ದ ತನ್ನ ಸೈನಿಕರಿಗೆ ‘ಕರೇಜ್!’ಎಂದು ಹುರಿದುಂಬಿಸುತ್ತಾನೆ.  ಸೈನಿಕರು ಹೊರಡಲು ಸಿದ್ಧರಿಲ್ಲ! ಸುಂದರ ಮಧ್ಯಾಹ್ನ, ಮೆಲ್ಲಗೆ ಮದವೇರಿಸುವ ಸೋಮಾರಿತನ… ಅಯ್ಯೋ ಮುಂದಿನ ಗುರಿ, ಊರು… ಇವೆಲ್ಲ ಯಾರಿಗೆ ಬೇಕು ಎಂದು ಒಡಿಸ್ಯೂಸನ ಸೈನಿಕರು ತಾವರೆ ತಿಂದು ಕುಂತಲ್ಲೇ ಕೂರುತ್ತಾರೆ. 

ಹೀಗೆ ತಾವರೆ ತಿಂದು ಇದ್ದಲ್ಲೇ ಇರಬಯಸುವವರ ಈ ಕತೆ, ಎಲ್ಲೆಂದರಲ್ಲಿ, ಯಾವುದರಲ್ಲಿ ಮುಳುಗಿದ್ದರೆ ಅದರಲ್ಲೇ, ಇರುವ ಎಲ್ಲರ ಕತೆಯೂ ಆಗಿರಬಹುದೇನೋ! ಯಾರಿಗೆ ಬೇಡ ಈ ಸ್ಥಿತಿ? ಏನೂ ಮಾಡದೆ ಆರಾಮಾಗಿರುವುದು. ‘ಇಲ್ಲಿ ಏನೂ ಕೆಲಸ ಇಲ್ಲ. ಆರಾಮಾಗಿದ್ದೇನೆ’ಎಂದು ಆನಂದ ಪಡುವ ಜನರನ್ನು ನೋಡುತ್ತಲೇ ಇರುತ್ತೇವೆ. ಅಂಥವರು ಒಳಗೊಳಗೇ ಜಡರಾಗಿ ಕೊಳೆತು ನಾಶವಾಗುತ್ತಾರೆ ಎನ್ನುವವರು ಇರಬಹುದು. ಅದೇ ರೀತಿ ಸಂಗೀತ, ಓದು, ಕಲೆಗಳಲ್ಲಿ ಮುಳುಗಿ ಬೇರೇನೂ ಬೇಡ ಎನ್ನುವವರ ಸ್ಥಿತಿಯನ್ನೂ ಈ ಕತೆ ಹೇಳುತ್ತಿದೆಯೆ? ಊರು ಬಿಟ್ಟು ನಗರ ಸೇರಿ, ಊರಿನತ್ತ ತಲೆ ಹಾಕಿಯೂ ಮಲಗದೆ ಇರುವವರ ಮಂಪರನ್ನೂ ಈ ಕತೆ ಸೂಚಿಸುತ್ತಿದೆಯೆ? ಅಥವಾ ಕೆಲಸದಲ್ಲೇ ಮುಳುಗಿ ಬೇರೇನೂ ಬೇಡ ಎನ್ನುವ ‘ವರ‍್ಕ್ಆಲ್ಕೋಹಾಲಿಕ್’ಗಳ-ಕಾಯಕ ನಶಾಜೀವಿಗಳ- ಸ್ಥಿತಿಯನ್ನೂ ಇದು ಹೇಳುತ್ತಿರಬಹುದಲ್ಲವೆ? 

ಕತೆಯೊಂದರ ಬಗೆಬಗೆಯ ಅರ್ಥವಿಸ್ತಾರಗಳನ್ನು ನೋಡನೋಡುತ್ತಾ, ‘ವಾಚ್ಯಕ್ಕಳಿವುಂಟು; ರೂಪಕಕ್ಕಳಿವಿಲ್ಲ’ ಅನ್ನಿಸತೊಡಗುತ್ತದೆ! ಈ ಅನ್ನಿಸಿಕೆಗೆ ಪ್ರೇರಣೆಯಾದ ಬಸವಣ್ಣನವರ `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಮಾಣಿಕದಲ್ಲಿ ವಾಚ್ಯ ಸ್ಥಾವರ, ರೂಪಕ ಜಂಗಮ ಎಂಬ ಅರ್ಥವೂ ಹೊರಡುತ್ತದೆ. ಈ ಅಂಕಣದ ಬರಹಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಡೆರಿಡಾನ ‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂಬ ಮಾತಿನ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿರುತ್ತದೆ!



ಜಗತ್ತಿನ ಮಹಾನ್ ಮನಸ್ಸುಗಳನ್ನು ಕೆಣಕಿದ ಒಡಿಸ್ಯೂಸ್ ತತ್ವಜ್ಞಾನಿ ನೀಷೆಯನ್ನೂ ಕೆಣಕಿದ್ದು ಅಚ್ಚರಿಯಲ್ಲ! 

ಹತ್ತಾರು ತಿಂಗಳ ಹಿಂದಿನ ಅಂಕಣವೊಂದರಲ್ಲಿ ಕೊಟ್ಟಿದ್ದ ಆಲ್ಸಿನೌಸ್‌ನ ಅರಮನೆಯಿಂದ ಒಡಿಸ್ಯೂಸ್ ಹೊರಟ ಪ್ರಸಂಗವನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: ಒಡಿಸ್ಯೂಸನ ಕತೆ ಕೇಳಿದ ಆಲ್ಸಿನೌಸನಿಗೆ ತನ್ನ ಮಗಳು ನೌಸಿಕಾಗೆ ಒಡಿಸ್ಯೂಸ್ ತಕ್ಕ ಜೋಡಿ ಎನ್ನಿಸುತ್ತದೆ. ಮಗಳಿಗೆ ಮದುವೆ ಮಾಡಿ ಒಡಿಸ್ಯೂಸನನ್ನು ಇಲ್ಲೇ ಉಳಿಸಿಕೊಳ್ಳಬೇಕೆನ್ನಿಸುತ್ತದೆ. ಆದರೆ ಊರು ತಲುಪುವ ಕಾತರದಲ್ಲಿರುವ ಒಡಿಸ್ಯೂಸನನ್ನು ಇಲ್ಲೇ ಉಳಿಯಬೇಕೆಂದು ಒತ್ತಾಯಿಸಲಾಗದ ದೊರೆ ಅವನನ್ನು ಇಥಾಕಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡುತ್ತಾನೆ. 

ಎಂಥ ಸನ್ನಿವೇಶದಲ್ಲೂ ವ್ಯವಧಾನದ ಸುಂದರ ಚಿತ್ರಗಳನ್ನು ಕೊಡಬಲ್ಲ ವ್ಯವಧಾನದ ಪ್ರಕಾರವೆಂದರೆ ಮಹಾಕಾವ್ಯ! ಒಡಿಸ್ಯೂಸ್ ಹೊರಟು ಇನ್ನೇನು ಅರಮನೆ ಬಿಡುವ ಗಳಿಗೆಯಲ್ಲಿ ಹೋಮರ್ ಕೋಮಲ ಸನ್ನಿವೇಶವೊಂದನ್ನು ಸೃಷ್ಟಿಸುತ್ತಾನೆ:

ರಾಜಕುವರಿ ನೌಸಿಕಾ, ಕಡು ಚೆಲುವೆ ನೌಸಿಕಾ,
ಸ್ವರ್ಗವೇ ಕಡೆದಂತಿರುವ ನೌಸಿಕಾ,
ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ,
ಒಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರ್ರನೆ ಮೆಲುನುಡಿದಳು:

‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು, ನೆನೆದುಕೋ 
ನೆನೆನೆನೆದು ಹಾಯೆಂದುಕೋ.’

ನೌಸಿಕಾ ಮೆಲುನುಡಿಗೆ ಒಡಿಸ್ಯೂಸ್ ಮರುನುಡಿದನು:

‘ನೌಸಿಕಾ, ಆಲ್ಸಿನೌಸನ ಮಗಳೆ,    
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ,
ಆ ನೆಲದಲ್ಲಿ ಆ ಗಳಿಗೆಯಲ್ಲಿ 
ಮತ್ತು ಅಂದಿನಿಂದ ಅನುದಿನವು 
ನನ್ನ ಕಟ್ಟ ಕಡೆಯ ಉಸಿರಿರುವ ತನಕ, 
ನನ್ನ ಜೀವ ಉಳಿಸಿದ ರಾಜಕುವರಿಯೇ, 
ದೇವಿಯೊಬ್ಬಳ ನೆನೆದಂತೆ 
ನಾ ನಿನ್ನ ನೆನೆಯುವಂತಾಗಲಿ.’

ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.

‘ಒಡಿಸ್ಸಿ’ಯ ಈ ಭಾಗ ಕಂಡು ನೀಷೆಗೆ ಹೊಳೆದ ಸತ್ಯ:

ಒಡಿಸ್ಯೂಸ್ ಒಂದು ಘಟ್ಟದಲ್ಲಿ 
ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಹೊರಡುತ್ತಾನಲ್ಲಾ
ಹಾಗೆ ಜೀವನದಿಂದ ತೆರಳಬೇಕು-
ಶುಭ ಕೋರುತ್ತಾ ತೆರಳಬೇಕು; 
ಬದುಕಿನ ಬಗ್ಗೆ ತೀವ್ರ ಅನುರಕ್ತಿಯಿಂದಲ್ಲ.
    
 

Share on:

Comments

11 Comments



| Subramanyaswamy Swamy

ಒಡಿಸ್ಸಿಯ ಕತೆ ತಾವರೆ ತಿಂದು ವಾಸ್ತವ ಮರೆಯುವ ಜನರ ಬದುಕು ಇಂದಿನ ಲೋಕದ ತಲ್ಲಣಗಳಿಗೆ ಪರಿಹಾರದ ರೂಪದಲ್ಲಿ ಕಂಡುಬರುತ್ತದೆ. ಪ್ರಯಾಣದ ಜೋತೆ ಅಪಘಾತ ಸಂಭವಿಸಿ ಸಾವು ಸಂಭವಿಸುತ್ತದೆ ಇದು ಒಂದು ರೀತಿ ಮನುಷ್ಯನ ಬೆನ್ನಿನ ಹಿಂದೆ ಇರುವ ಸಾವಿನ ನೆರಳು. ಮನುಷ್ಯನ ಮಿತಿ ಮತ್ತು ಅತಿಗಳನ್ನು ತೆರೆದು ನಮ್ಮ ಮುಂದಿಟ್ಟಿದೆ.


| ಗುರು ಜಗಳೂರು

ಸರ್,ಎಷ್ಟು ಒಳ್ಳೆಯ ಲೇಖನ.ಲೇಖನ ಓದಿ ತಾವರೆ ತಿಂದ ಮನಸ್ಥಿತಿ ನನ್ನದಾಯಿತು(ಸಂತೋಷ). ಬಹುಶಃ ಈಗ ತಾವರೆ ಎಂದರೆ ಯುವಕರಿಗೆ ಗುಟ್ಕಾ ಇರಬಹುದು? ಗುಟ್ಕಾ ತಿಂದು ಬಾಯಿಬಿಟ್ಟು ಪ್ರಶ್ನಿಸದೇ ಮೌನಿಗಳಾಗುತ್ತಿದ್ದಾರೆ!(ಆರೋಗ್ಯವನ್ನು ಕಳೆದುಕೊಂಡು).


| ಶ್ರೀಧರ್ ಆರ್

ಸರ್, ನಮಸ್ಕಾರ... ಬದುಕಿನ ಅನಿವಾರ್ಯ ಗಳಿಗೆಯಾದ 'ವಿದಾಯ'ದ ಬಗ್ಗೆ ಲಂಕೇಶ್ ಬರೆದಿರೋದು ಹೀಗೆ: "ವಿದಾಯದ ಬಗ್ಗೆ ನೋವನ್ನನುಭವಿಸುವುದರ ಜೊತೆಗೇ ವಿದಾಯದ ಅನಿವಾರ್ಯತೆಯನ್ನು ಅರಿಯದ ಮನುಷ್ಯ ನಾಶವಾಗುತ್ತಾನೆ... ಒಂದು ಹಳ್ಳಿ ಬಿಡುವಾಗ, ಒಂದು ಶಾಲೆ ಬಿಡುವಾಗ, ಒಂದು ಮನೆ ಬಿಡುವಾಗ ನಮ್ಮನ್ನು ದುಗುಡ ತುಂಬುತ್ತದೆ; ಹಾಗೆಯೇ ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಹೋಗುವಾಗ ದುಃಖ ಉಮ್ಮಳಿಸುತ್ತದೆ. ಆದರೆ ನಿಂತ ನೀರಿನಂತಹ ಬದುಕು ಮನುಷ್ಯನಿಗೆ ಹೇಳಿಮಾಡಿಸಿದ್ದಲ್ಲ. ಪ್ರೀತಿ ಮತ್ತು ಸಂಬಂಧವನ್ನು ಹೊಂದಿದ ಮನುಷ್ಯ ತನ್ನ ಉದ್ಯೋಗ, ಪರಿಸರದೊಂದಿಗೆ ಪ್ರಯೋಗ ನಡೆಸದಿದ್ದರೆ ನಶಿಸುತ್ತಾ ಹೋಗುತ್ತಾನೆ... ಸಮರ್ಪಣೆ ಮತ್ತು ಸ್ವಾತಂತ್ರ್ಯ ಇವೆರಡರ ಅರ್ಥ ಅರಿತವನು ಮಾತ್ರ ವಿದಾಯದ ನೋವು ಮತ್ತು ಪ್ರಯೋಗದ ರೋಮಾಂಚನ ಎರಡನ್ನೂ ಅನುಭವಿಸುತ್ತಾನೆ." -ಪಿ. ಲಂಕೇಶ್ (ಸೆಪ್ಟೆಂಬರ್ 02, 1990) ಕೃಪೆ: -'ಟೀಕೆ-ಟಿಪ್ಪಣಿ' (ಸಂಪುಟ-01, 1991)


| ಹರಿಪ್ರಸಾದ್ ಬೇಸಾಯಿ

ಮಿಯಾಂವ್ ಮಿಯಾಂವ್


| ಜಿ.ಗಂಗರಾಜು

Very interesting and insightful writing.


| ಕುಸುಮ ಬಿ.ಎಂ

ಅಮಲಿನ ಚಿತ್ರಗಳು. ಒಬ್ಬರಿಗೆ ಒಂದೊಂದು ಅಮಲು. ಕೆಲವು ಸರಿ. ಕೆಲವು ತಪ್ಪು. ಪ್ರೀತಯು ಅಮಲಾಗದೆ ಭಾವವಾಗುವ ಚಿತ್ರಗಳು ಓಡಿಸ್ಯೂನ ಸುಂದರ ಭಾವಯಾನದ ನಿರೂಪಣೆ ಚೆನ್ನಾಗಿದೆ ಸರ್.


| Dr. Nanjaiah

Super


| ಡಾ. ನಿರಂಜನ ಮೂರ್ತಿ ಬಿ ಎಂ

'ಲೋಟಸ್ ಈಟರ್ಸ್' ಬಿಡದೆ ಓದಿಸಿಕೊಂಡು ಹೋಗುತ್ತದೆ. ಯೂಲಿಸಿಸ್ ನ ಪಾತ್ರ ಅದ್ಭುತವಾಗಿದೆ. ಪಯಣ, ಜ್ಞಾನ, ಅನ್ವೇಷಣೆ, ಸಮ್ಯಕ್ಭಾವ, ಮತ್ತು ಸಹಿಷ್ಣುತೆಗೆ ಮತ್ತೊಂದು ಹೆಸರೇ ಯೂಲಿಸಿಸ್. ತುಂಬಾ ಚೆನ್ನಾಗಿದೆ. ತಾವರೆ ತಿಂದು ಸೋಮಾರಿಯಾಗಿ, ಆರಾಮವಾಗಿ ತೇಲಾಡುವ ಸ್ಥಿತಿಯನ್ನು ಬಹುಶಃ ಎಲ್ಲರೂ ಬಯಸಬಹುದು. ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡುತ್ತಾ ಅದರಲ್ಲಿಯೇ ತಲ್ಲೀನರಾಗುವವರನ್ನೂ ಸಹ ತಾವರೆ ತಿನ್ನುವವರೆನ್ನಬಹುದೆಂಬ ವಿಶ್ಲೇಷಣೆ ಚೆನ್ನಾಗಿದೆ. 'ಕಾಯಕ ನಶಾಜೀವಿಗಳು' ಎಂಬ ಪದಪ್ರಯೋಗ ವಿನೂತನ. ನಮನಗಳು.


| Krishnakumar

Sir it made me think how lotus eaters life inside the prison. Sure of daily bread make them addicted to it and forget foregone freedom and its makes prison management possible to work.


| ಮಾಲತಿ

ಹೋಮರ್ ಕತೆ ಕಾಲಾಂತರದಲ್ಲಿ ಉಪಮೆಯಾಗಿ ರೂಪಕವಾಗಿದೆ. ಹೀಗೆ ಬಹುರೂಪದಲ್ಲಿ ಬಳಸುವವರ ಕಲ್ಪನಾ ಶಕ್ತಿ ಮೆಚ್ಚಿ ಕೊಳ್ಳಲೇಬೇಕು


| ಮಾಲತಿ

ಹೋಮರ್ ಕತೆ ಕಾಲಾಂತರದಲ್ಲಿ ಉಪಮೆಯಾಗಿ ರೂಪಕವಾಗಿದೆ. ಹೀಗೆ ಬಹುರೂಪದಲ್ಲಿ ಬಳಸುವವರ ಕಲ್ಪನಾ ಶಕ್ತಿ ಮೆಚ್ಚಿ ಕೊಳ್ಳಲೇಬೇಕು




Add Comment


Nataraj Huliyar on Book Prize Awardees

YouTube






Recent Posts

Latest Blogs