’ಕೀರಂ’ ಎಂಬ ಕೊನೆಯಿರದ ನಂಟು!

      
ಕಳೆದ ವಾರ ಗೆಳೆಯರೊಬ್ಬರು ಇದ್ದಕ್ಕಿದ್ದಂತೆ ಪ್ರೊಫೆಸರ್ ಕಿ.ರಂ. ನಾಗರಾಜರ ಫೋಟೋ ಸಮೇತ ನನ್ನ ‘ಕಾಮನಹುಣ್ಣಿಮೆ’ ಕಾದಂಬರಿಯ ಭಾಗವನ್ನು ತಮ್ಮ ಫೇಸ್‌ಬುಕ್ಕಿನಲ್ಲಿ ಪ್ರಕಟಿಸಿ, ನನಗೂ ಮೇಲ್ ಮಾಡಿದ್ದರು. ಆ ಭಾಗ ಕೀರಂ ನಾಗರಾಜು ಎಂಬ ಪಾತ್ರದ ಬಗ್ಗೆ ಇರುವುದರಿಂದ ಆ ಪಾತ್ರ ಕುರಿತಂತೆ ಕಾದಂಬರಿಯ ಎರಡು ಪ್ಯಾರಾಗಳನ್ನು ಇಲ್ಲಿ ಕೊಡುತ್ತೇನೆ:  

‘‘...ಮೈಸೂರಿನತ್ತ ಹೊರಡಲು ಮನಸ್ಸು ಮಾಡಿದ ಗಳಿಗೆಯಿಂದಲೂ ತನ್ನ ಜೀವನವೆಲ್ಲ ಹೆಚ್ಚೂಕಡಿಮೆ ಸ್ನೇಹದ ಬಲದಿಂದಲೇ ನಡೆದುಬಂದಿದೆಯೆಂಬ ಸತ್ಯ ಕಾಲೇಜಿನ ಒಂದು ಸಭೆಯಲ್ಲಿ ಕೂತಿದ್ದಾಗ ಚಂದ್ರನಿಗೆ ಇದ್ದಕ್ಕಿದ್ದಂತೆ ಹೊಳೆಯಿತು. ಅದು ಹೊಳೆದದ್ದು ಸಾಹಿತಿ ಕೀರಂ ನಾಗರಾಜು ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆ ಬಂದಿದ್ದ ದಿನ. ಕೀರಂ ನಾಗರಾಜು ಅವತ್ತು ಪಂಪ, ಕುಮಾರವ್ಯಾಸ ಎಂದೆಲ್ಲ ಮಾತಾಡುತ್ತಿದ್ದವರು, ಇದ್ದಕ್ಕಿದ್ದಂತೆ 'ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ...' ಎಂಬ ಅಕ್ಕನ ವಚನಕ್ಕೆ ಬಂದು ನಿಂತರು. ಅದೇ ಸಾಲನ್ನೇ ಇನ್ನೊಂದು ಸಲ ಹೇಳಿ, 'ಸ್ನೇಹ ಅಂದರೆ ಏನು ಗೊತ್ತೇನ್ರಿ?' ಎಂದು ಚಣ ಮಾತು ನಿಲ್ಲಿಸಿ, ಸೈಲೆಂಟಾಗಿ ಸುತ್ತಮುತ್ತ ನೋಡಿದರು; ಕನ್ನಡ ಮೇಷ್ಟ್ರರಾದಿಯಾಗಿ ಯಾರೂ ಇದಕ್ಕೆ ಉತ್ತರ ಹೇಳಲು ಬಾಯಿ ಬಿಡಲಿಲ್ಲ; ಆಮೇಲೆ ಅವರೇ, 'ಸ್ನೇಹ ಅಂದರೇ... ಅಂಟು ಅಂತ! ಗೊತ್ತೆನ್ರೀ!' ಎಂದು ನಗುತ್ತಾ ಕಣ್ಣು ಮಿಟುಕಿಸಿದರು! ಅವರ ಅಡೆತಡೆಯಿಲ್ಲದ ಮಾತು, ಕಣ್ಣ ಮಿಟುಕು, ಬಿಡುಬೀಸು ನಗು, ಕತ್ತಿನ ಕುಣಿತ, ಕೈಯ ಆಟ, ಯಕ್ಷಗಾನದ ವೇಷದವರಂತೆ ಎಣ್ಣೆ ಹಚ್ಚಿ ಹಿಂದಕ್ಕೆ ಬಾಚಿದ ಕೂದಲು... ಎಲ್ಲವೂ ಚಂದ್ರನ ಮನಸ್ಸಿನಲ್ಲಿ ಉಳಿದುಬಿಟ್ಟವು. 

‘‘ಅವತ್ತು ಸಂಜೆ ಚಂದ್ರ ‘ಸ್ನೇಹ ಎಂದರೆ ಅಂಟು’ ಅಂತ ಕೀರಂ ಹೇಳಿದ್ದ ಮಾತನ್ನು ಶಿವಣ್ಣನಿಗೆ ಹೇಳಿದಾಗ, ಅದು ಅವನಿಗೆ ತೀರಾ ಇಷ್ಟವಾಗಿ, ‘ಕರಕ್ಟು ಕಣಪ್ಪಾ, ಕರಕ್ಟಾಗೇಳವರೇ!’ ಎಂದು ಅದನ್ನು ಸಂಪೂರ್ಣವಾಗಿ ಒಪ್ಪಿದವನಂತೆ ಎರಡೆರಡು ಸಲ ಕತ್ತು ಹಾಕಿದ; ಅಲ್ಲೇ ನಿಂತಿದ್ದ ಲಾಲ್‌ಚಂದ್‌ಗೆ ಅದು ಪೂರ್ತಿ ಅರ್ಥವಾದಂತೆ ಕಾಣದಿದ್ದರೂ, ಅವನೂ ಅರ್ಥವಾದವನಂತೆ ಸುಮ್ಮನೆ ಕತ್ತು ಹಾಕಿದ್ದ.” (ಪು.೧೧೦)

ಈ ಸಲದ ಅಂಕಣದ ವಸ್ತುವಿನ ದೆಸೆಯಿಂದ ಸಂಭವಿಸಿದ ಈ ‘ಸ್ವ-ಕಾದಂಬರಿ ಮರ್ದನ’ಕ್ಕೆ ಕ್ಷಮೆಯಿರಲಿ! ಅವತ್ತು ‘ಕಾಮನ ಹುಣ್ಣಿಮೆ’ ಕಾದಂಬರಿಯ ಮೇಲಿನ ಪ್ಯಾರಾಗಳ ಭಾಗವನ್ನು ಪ್ರಕಟಿಸಿದ್ದ ಶ್ರೀಧರ ಏಕಲವ್ಯ ಅದರ ಜೊತೆಗೇ ಆ ಮೂಡಿಗೆ ತಕ್ಕ ಕೀರಂ ಫೊಟೋವನ್ನೂ ಪ್ರಕಟಿಸಿದ್ದರು. 

‘ಇವತ್ತು ಕೀರಂ ನೆನಪಿನ ದಿನವೇ?’ ಎಂದೆ.

‘ಇಲ್ಲ, ಫ್ರೆಂಡ್‌ಶಿಪ್ ಡೇ!’ ಎಂದರು ಶ್ರೀಧರ್.

ಹತ್ತು ಹನ್ನೆರಡು ವರ್ಷ ಹಾಗೂ ಹೀಗೂ ಬರೆದು, ೨೦೧೮ರಲ್ಲಿ ಪ್ರಕಟವಾದ ‘ಕಾಮನ ಹುಣ್ಣಿಮೆ’ (ಪಲ್ಲವ ಪ್ರಕಾಶನ, ರೂ. ೧೫೦) ಕಾದಂಬರಿಯಲ್ಲಿ ಕೀರಂ ಯಾಕೆ ಬಂದರು; ಹೇಗೆ ಬಂದರು…ಇದೆಲ್ಲ ‘ಅದಕೋ ಹರಿದತ್ತ ಹಾದಿ’ ಎಂದು ಹರಿದ ಆ ಕಾದಂಬರಿಯ ಆಟೋಟಕ್ಕೆ ಸಂಬಂಧಿಸಿದ್ದು. ಆದರೆ ಶ್ರೀಧರ್ ‘ಫ್ರೆಂಡ್‌ಶಿಪ್ ಡೇ’ ದಿನ ಕೀರಂ ಅವರನ್ನು ನೆನೆದಿದ್ದು, ಕೀರಂ ಸ್ನೇಹದ ಸವಿಯನ್ನು ಮತ್ತೆ ನೆನೆಯುವಂತೆ ನನ್ನನ್ನು ಪ್ರೇರೇಪಿಸಿತು. ನಾನು ಹತ್ತಿರದಿಂದ ಬಲ್ಲ ಕೆಲವು ಹಿರಿಯರಲ್ಲಿ ಕೀರಂ, ಸ್ನೇಹ ಎಂದರೆ ಫಲಾಪೇಕ್ಷೆಯಲ್ಲದೆ ಸುಮ್ಮನೆ ಕೊಡುವುದು ಎಂಬ ಅದ್ಭುತ ಜೀವನಮೌಲ್ಯವೊಂದನ್ನು ಬದುಕಿ ನನ್ನಂಥ ನೂರಾರು ಜನರಿಗೆ ತೋರಿಸಿದವರು. ಸಂಶೋಧಕನೊಬ್ಬನಿಗೆ ಬೇಕಾದ ಪುಸ್ತಕ; ವಿದ್ಯಾರ್ಥಿನಿಯೊಬ್ಬಳಿಗೆ ಬೇಕಾದ ಟೆಕ್ಸ್ಟ್ ಬುಕ್ಕಿನ ಜೆರಾಕ್ಸ್; ಕವಿಯೊಬ್ಬ ಓದಬೇಕೆಂದು ಹೇಳಿದ ಕವನ ಸಂಕಲನ; ಯಾವುದೋ ಕೆಲಸ ಮಾಡಿಕೊಟ್ಟವನಿಗೆ ಜೇಬಲ್ಲಿ ಸಿಕ್ಕಷ್ಟು ದುಡ್ಡು…ಹೀಗೆ ಎಲ್ಲವನ್ನೂ ಕೀರಂ ಸುಮ್ಮನೆ ತೆಗೆತೆಗೆದು ಕೊಡುತ್ತಿದ್ದರು; ಗೆಳೆಯರೊಡನೆ ಹೋಟೆಲ್, ಬಾರ್ ಎಲ್ಲಿಗೇ ಹೋಗಲಿ, ’ಬಿಲ್ ಬಾಣವ ತಾ ಪಾರ್ಥಾ’ ಎಂದು ಬಿಲ್ಲು ಕೊಡಲು ಪುಟ್ಟ ವಾಕ್‌ಸಮರವನ್ನೇ ನಡೆಸುತ್ತಿದ್ದರು! 

ಗಾಂಧಿ ಬಝಾರಿನ ಅಂಗಡಿಯಲ್ಲಿ ಒಂದು ಗಂಟೆ ನಿಂತು ಇಯಾನ್ ಕಾಟ್‌ನ ‘ಶೇಕ್‌ ಸ್ಪಿಯರ್ ಅವರ್ ಕಾಂಟೆಂಪರರಿ’ ಎಂಬ ಇಡೀ ಪುಸ್ತಕವನ್ನು ಜೆರಾಕ್ಸ್ ಮಾಡಿಸಿಕೊಟ್ಟ ಗಳಿಗೆ; ಸಿಮೋನ್ ವೇಲ್, ಹೋಮರ್, ಅಂಬರ್ತೋ ಇಕೋ…ಹೀಗೆ ಯಾವ ಪುಸ್ತಕ ಬೇಕಾದರೂ ಪುಸ್ತಕದ ರಾಶಿಯಿಂದ ಹೊರಗೆಳೆದು ನನಗೆ ಎತ್ತಿ ಕೊಟ್ಟ ಕೀರಂ ಕೈ; ಒಂದು ನಡುರಾತ್ರಿ ’ಪೋಸ್ಟ್‌ಮಾಡರ್ನಿಸಂ’ ಎಂಬ ಪುಸ್ತಕದ ಮೊದಲ ಪುಟದಲ್ಲಿ ಇಂಗ್ಲಿಷಿನಲ್ಲಿ ನನ್ನ ಹೆಸರು ಬರೆದು, ಕನ್ನಡದಲ್ಲಿ ತಮ್ಮ ಸಹಿ ಹಾಕಿ ಕೊಟ್ಟು ಕೆನ್ನೆಯರಳಿಸಿ ನನ್ನತ್ತ ನೋಡಿದ ರೀತಿ… ಇಂಥ ಅನೇಕ ಚಿತ್ರಗಳು ನನ್ನ ಕಣ್ಣೆದುರು ಮೂಡುತ್ತಲೇ ಇರುತ್ತವೆ.
ಕೊನೆಗೂ ಮನುಷ್ಯನೊಬ್ಬ ಭೌತಿಕವಾಗಿ ಅಳಿದ ಮೇಲೆ ಉಳಿಯುವುದು, ಅವನ ಅಥವಾ ಅವಳ ನೆನಪಾದ ತಕ್ಷಣ ಕೃತಜ್ಞತೆ ಹುಟ್ಟಿಸುವುದು ಅವರ generosity ಅಥವಾ ಔದಾರ್ಯ ಒಂದೇ ಇರಬಹುದೇ? ಇದು ಕೀರಂ ನೆನಪಾದಾಗ ಇನ್ನಷ್ಟು ನಿಜ ಎನ್ನಿಸುತ್ತಿರುತ್ತದೆ.

ಕಳೆದ ಹಲವು ವರ್ಷಗಳಂತೆ ಮೊನ್ನೆ ಆಗಸ್ಟ್ ೭ನೆಯ ತಾರೀಕು ಕೂಡ ನೂರಾರು ಜನ ಕಿರಿಯರು, ಹಿರಿಯರು ಪ್ರೊಫೆಸರ್ ಕಿ.ರಂ. ನಾಗರಾಜ್ (೫ ಡಿಸೆಂಬರ್ ೧೯೪೩- ೭ ಆಗಸ್ಟ್ ೨೦೧೦) ಅವರ ನೆನಪಿನ ಕಾರ್ಯಕ್ರಮ ಮಾಡಿದರು. ಮಾತು, ಹಾಡು, ಪದ್ಯ; ಎಲ್ಲೋ ಮರೆಯಲ್ಲಿ ಮದ್ಯಾಸಕ್ತರ ಪಾನ… ಇವೆಲ್ಲದರ ನಡುವೆ ಉತ್ಸಾಹ, ಸಂಭ್ರಮಗಳಿಂದ ಕೀರಂ ನೆನಪಿನ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುವ ಗೆಳೆಯರ ಬಗ್ಗೆ ಕೇಳಿದಾಗ, ಕೀರಂ ಅವರ ಸ್ನೇಹಮಯ, ಅರ್ಥಪೂರ್ಣ ಬದುಕಿನ ಬಗೆಗೆ ಕೃತಜ್ಞತೆ ಹುಟ್ಟುತ್ತದೆ. 

ಹೆಚ್ಚು ಬರೆಯದ ಕೀರಂ ತರಗತಿಗಳಲ್ಲಿ ಅಥವಾ ಮಾತುಕತೆಗಳಲ್ಲಿ, ಭಾಷಣಗಳಲ್ಲಿ ಕಲಿಸಿದ ಓದಿನ ಪಾಠಗಳು ಹೊಸ ಹೊಸ ತಲೆಮಾರುಗಳಲ್ಲಿ, ನಾನು ಈಚೆಗೆ ಕೇಳಿಸಿಕೊಂಡ ಗಂಗರಾಜು ತಟಗುಣಿ, ನೆಲ್ಲುಕುಂಟೆ ವೆಂಕಟೇಶ್, ಆಶಾದೇವಿ ಮೊದಲಾದವರು ಕೃತಿಗಳನ್ನು ನಿಕಟವಾಗಿ ಓದಿ ಮಾತಾಡುವ ರೀತಿಯಲ್ಲಿ ಮಿಂಚುತ್ತಿರುತ್ತವೆ; ಇದನ್ನು ಕಂಡಾಗ ಕನ್ನಡ ಸಾಹಿತ್ಯಕ ಸಂಸ್ಕೃತಿ ತನ್ನ ಸುತ್ತ ಕವಿದಿರುವ ಮೀಡಿಯೋಕ್ರಿಟಿಯನ್ನು ಮೀರಿ, ಅದರಾಚೆಗೆ ಹೊರಳುತ್ತಲೇ ಇರುತ್ತದೆ ಎಂಬ ಬಗ್ಗೆ ವಿಶ್ವಾಸ ಮೂಡತೊಡಗುತ್ತದೆ. ಸ್ವತಃ ನನ್ನ ಓದು, ಬರಹಗಳಿಗಂತೂ ಕೀರಂ ಏನೇನು ಮಾಡಿದ್ದಾರೆ ಎಂಬುದನ್ನು ಕುರಿತು ಆಗಾಗ್ಗೆ ನೆನೆಯುತ್ತಲೇ ಬಂದಿದ್ದೇನೆ. 

ಕೆಲ ಬಗೆಯ ಕವಿತೆಗಳನ್ನು ಈಗಾಗಲೇ ಓದಿದ್ದರೂ, ಅವನ್ನು ಕೀರಂ ನುಡಿದು, ನುಡಿಸಿದ ಮೇಲೆ ಅವು ನನ್ನ ಕಿವಿಯಲ್ಲಿ ಕಾಯಮ್ಮಾಗಿ ಕೂತು ಹೊಸ ಥರದ ಅರ್ಥಗಳನ್ನು ಹೊರಡಿಸಲೆತ್ನಿಸುತ್ತಲೇ ಇರುತ್ತವೆ. ಕೀರಂ ಒಂದು ರಾತ್ರಿ, ‘ನಮ್ಮೂರು ಚಂದವೋ ನಿಮ್ಮೂರು ಚಂದವೋ’ ಎನ್ನುತ್ತಾ, ‘ಊರು ಅಂದರೆ ತೊಡೆ ಅಂತ ಅರ್ಥಾನೂ ಇದೆಯಲ್ಲಾ ಸಾರ್!’ ಎಂದು ಮುಖ ಅರಳಿಸುತ್ತಾ ಹೇಳಿದ್ದು ಕಿವಿಯಲ್ಲಿ ಗುಂಯ್‌ಗುಡುತ್ತದೆ; ಅದಾದ ನಂತರ, ಕೆ.ಎಸ್.ನರಸಿಂಹಸ್ವಾಮಿಯವರ ಜನಪ್ರಿಯ ಹಾಡಿನ ಸಾಲನ್ನು ಬೇರೆ ರೀತಿಯಲ್ಲಿ ಓದಲು ಹೊರಟರೆ ಮನಸ್ಸು ಮುಷ್ಕರ ಹೂಡುತ್ತದೆ! ಹಿಂದೆ ಇದೇ ಅಂಕಣದಲ್ಲಿ ಉಲ್ಲೇಖಿಸಿದ ಕವಿ ಕೋಲರಿಜ್ ಮಾತು ನಿಮಗೆ ನೆನಪಿರಬಹುದು: ’ಕವಿತೆಯೊಂದನ್ನು ಓದುವ ನಮ್ಮ ಪಯಣವೇ ಆಹ್ಲಾದಕರವಾಗಿರಬೇಕು; ಅದು ಸರ್ಪದ ನಡಿಗೆಯಂತಿರಬೇಕು; ಅಲ್ಲಲ್ಲಿ ನಿಂತು ಆಸ್ವಾದಿಸಿ, ಮುನ್ನಡೆಯುವಂತೆ ಇರಬೇಕು; ಮುಂದೇನಾಗುತ್ತದೋ ಎಂಬ ಕುತೂಹಲದಿಂದ ಕವಿತೆಯನ್ನು ಓದಿದರೆ ಪ್ರಯೋಜನವಿಲ್ಲ…’ ಕೋಲರಿಜ್ ಹೇಳಿದ ರೀತಿಯ ವ್ಯವಧಾನ-ಧ್ಯಾನದ ಓದಿನ ರೀತಿ ನಾನು ಬಲ್ಲಂತೆ ಕೀರಂ ಬಿಟ್ಟರೆ, ಅನೇಕ ಒಳ್ಳೆಯ ಓದುಗ, ಓದುಗಿಯರಿಗೂ ಹೆಚ್ಚು ಸಾಧ್ಯವಾದಂತಿಲ್ಲ! ‘ದಶಕಗಳಿಂದ ಕವಿತೆ ಬರೆಯುತ್ತಿದ್ದೇನೆ’ ಎಂದುಕೊಂಡಿರುವ ನಾನು ಬಲ್ಲ ಕವಿ ಕವಯಿತ್ರಿಯರಲ್ಲೂ ಈ ವ್ಯವಧಾನ ಕಂಡಂತಿಲ್ಲ.

ಇದನ್ನೆಲ್ಲ ಬರೆಯುವಾಗ, ಈ ಬರಹದ ಶುರುವಿನಲ್ಲಿ ಸ್ನೇಹ ಕುರಿತು ಕೀರಂ ನೆನಪಿಸಿದ ಅಕ್ಕನ ವಚನದ ಉಪಮೆ, ಉಪಮಾನಗಳು ಮತ್ತೆ ನೆನಪಾಗುತ್ತದೆ; ಕೀರಂ ಕೂಡ ಹಾಗೇ ಅವರ ಪ್ರಿಯ ಕೃತಿಗಳ ಜೊತೆ ನಿರಂತರ ಸ್ನೇಹ ಅಥವಾ ಅಂಟಿನಲ್ಲಿ ಸಿಕ್ಕಿಕೊಂಡಿದ್ದವರೇ! ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ?’ ಎಂದು ಬೇಂದ್ರೆಯವರ ‘ಸಖೀಗೀತ’ ಕೇಳುತ್ತದೆ; ಕೀರಂ ನುಡಿಸುತ್ತಿದ್ದ ಈ ಕವಿಪ್ರತಿಮೆ ಕೊಂಚ ಪಲ್ಲಟಗೊಂಡು, ಕಾವ್ಯಪ್ರತಿಮೆಗಳ ಕಾಯಂ ಸಖ ಕೀರಂ ಕುರಿತ ಈ ಬರಹಕ್ಕೆ ತಲೆಬರಹವಾಗಿಬಿಟ್ಟಿತು!

ಹೀಗೆ ತಲೆಬರಹಗಳಿಗೆ ರೂಪಕಗಳನ್ನು ಹುಡುಕುವ ಅಥವಾ ಅಂಥ ರೂಪಕಗಳು ತಂತಾವೇ ಒದಗಿ ಬರುವ ಸೋಜಿಗದ ಕಲೆ ಕೂಡ ನನ್ನಂಥವರಿಗೆ ಕೀರಂ ಥರದವರ ಸ್ನೇಹದ ದೆಸೆಯಿಂದಲೂ ಬಂದಿರಬಹುದೇನೋ! 

ಕೀರಂ ಸ್ನೇಹ, ನಂಟು ಕುರಿತ ಅಪರೂಪದ ಅನುಭವಗಳು ನಿಮ್ಮಲ್ಲೂ ಇದ್ದರೆ, ಸಾಧ್ಯವಾದರೆ, ಈ ವೆಬ್‌ಸೈಟಿನ ಕಾಮೆಂಟ್ ಸೆಕ್ಷನ್ನಿಗೋ ಅಥವಾ ನನ್ನ ಇ-ಮೇಲ್‌ಗೋ (natarajhuliyar@gmail.com) ಬರೆಯಿರಿ!      

Share on:

Comments

19 Comments



| Suresha B

ಕಿ.ರಂ. ನೆನಪು ಒಂದೇ ಎರಡೇ... ಅವುಗಳನ್ನು ಹಾಗೆ ಬರೆದಿಡಲು ಸಾಧ್ಯವೇ... ಮಿಲ್ಟನ್ ಕುರಿತು ಅವರ ಮನೆಯ ಪುಸ್ತಕಗಳ ಸಂದಿನಲ್ಲಿ ಮಾಡಿದ ಪಾಠ, ಷೇಕ್ಸ್‌ಪಿಯರ್ ಟ್ರಾಜಿಡಿಗಳ ಕುರಿತು ಅದೇ ಮನೆಯಲ್ಲಿ ಹೇಳಿದ ತಿಳುವಳಿಗಳು ಒಂದು ತೆರನಾದ ಅಚ್ಚರಿಯಾದರೆ... ಇಂಜಿನಿಯರಿಂಗ್ ಹಿನ್ನೆಲೆಯ ನನ್ನೊಳಗೆ ಸಾಹಿತ್ಯಾಸಕ್ತಿ ಮೂಡಿಸಿ "ಇದನ್ನೋದು, ಅದನ್ನೋದು" ಎನ್ನುತ್ತಾ ಓದುಗಳ ಲೋಕ ತೆರೆದಿಟ್ಟದ್ದು ಮತ್ತೊಂದು ಬಗೆಯ ಅಚ್ಚರಿ... ಅವರು ನಾಟಕ ಬರೆವ ಕಾಲದಲ್ಲಿ ನಮ್ಮನ್ನು ಕಲಾಸಿಪಾಳ್ಯದೊಳಗೆ ಕರೆದೊಯ್ದು ಹಲಬಗೆಯ ಹುಳಿಗಳನ್ನು ನಾಲಿಗೆಗೂ ಮಿದುಳಿಗೂ ನೇವರಿಸಿ, ಕ್ರಿಯೇಟಿವಿಟಿ ಎಂಬುದೇ ಒಂದು ಭಾಷಿಕ ಆಟ ಎಂಬರಿವು ಮೂಡಿಸಿದ್ದು ಮತ್ತೊಂದಚ್ಚರಿ... ಕಿ.ರಂ. ಎಂದರೆ ಅಚ್ಚರಿಗಳ ಸಂತೆ ಅದರೊಳಗೆ ಇಣುಕಿದವರಿಗೆಲ್ಲರಿಗೂ ಸಿಕ್ಕಿರಬಹುದೊಂದೆರಡು ಕಂತೆ... 🙏


| Nataraj Huliyar Replies

Thanks Comrade. pl recall what kiram said on Milton and Tragedy


| Kaavyashri

ಕೀರಂ ಬಗ್ಗೆ ಇನ್ನಷ್ಟು, ಮತ್ತಷ್ಟು ಓದಬೇಕೆಂದು ತಹತಹಿಸುವಂತೆ ಮಾಡುತ್ತದೆ ಈ ಬರಹ. ಎಂದೂ ಮುಗಿಯದ, ಮುಗಿಯಬಾರದ ಮಹಾಕಾವ್ಯ ಕೀರಂ!


| ರುದ್ರೇಶ್ ಅದರಂಗಿ

ನಿಮ್ಮ ಮತ್ತು ಮೇಸ್ಟ್ರ ನಡುವಿನ ಸ್ನೇಹ ಎಣೆಯಿಲ್ಲದ್ದು. ತೆರೆದ ಪಠ್ಯ ಇದಕ್ಕೆ ದ್ಯೋತಕ


| ಡಾ. ಶಿವಲಿಂಗೇಗೌಡ ಡಿ.

ಕಿ.ರಂ. ಬಗೆಗಿನ ನೆನಪುಗಳನ್ನ ಬಿಚ್ಚುಡುವ ಈ ಲೇಖನ ಕಿ.ರಂ. ಬಗೆಗಿನ ನಮ್ಮ ಬೆರಗನ್ನು ಇಮ್ಮಡಿಗೊಳಿಸುತ್ತದೆ. ಧನ್ಯವಾದಗಳು ಸರ್


| ಡಾ. ಎಸ್ ಕೃಷ್ಣಪ್ಪ ,

ಕಿ ರಂ ಒಂದು ಸ್ನೇಹದ ಬಂಡಿ. ಇಲ್ಲಿ ಒಬ್ಬ ಪ್ರಾಮಾಣಿಕ ಸಾಹಿತ್ಯ ವಿದ್ಯಾರ್ಥಿಗೆ ಬೇಕಾಗುವ ಎಲ್ಲಾ ಸ್ವರೂಪದ ಸರಕುಗಳು ಸಿಗುತ್ತವೆ ಹಾಗೂ ದೊರಕುತ್ತದೆ.. ಪಡೆಯುವವನ ವಿವೇಕದ ಮೇಲೆ ಕಿ ರo ಕಾಣಿಸಿಕೊಳ್ಳುತ್ತಾರೆ.


| ಮಂಜುನಾಥ್ ಸಿ ನೆಟ್ಕಲ್

ಕಿರಂ ಸರ್ ಅಂದ್ರೆ ನನ್ನ ಪಾಲಿಗೆ ತಾಯಿ ಸ್ವರೂಪ. ಏಕೆಂದರೆ ಅವರಿಂದ ಸಾಹಿತ್ಯದ ಅರಿವಿನ ಜೊತೆಗೆ ಕೈ ತುತ್ತು ಸಹ ಸವಿದ ಅದೃಷ್ಟ ನನ್ನದು. ಅವರ ಮನೆಯಲ್ಲಿ ಗೆಳೆಯರ ಜೊತೆ ರಾತ್ರಿ ಊಟ ಮಾಡದೇ ಮಲಗಿದ್ದೆ... ಮಧ್ಯರಾತ್ರಿ ಕಿರಂ ನನ್ನನ್ನು ಎಬ್ಬಿಸಿ ತಾವೇ ತಟ್ಟೆಯಲ್ಲಿ ಮೊಸರನ್ನ ಕಲಸಿ ತಂದು ರಾತ್ರಿ ವೇಳೆ ಊಟ ಮಾಡದೇ ಮಲಗಬಾರದು ಎಂದು ತಮ್ಮ ಕೈಯಾರೆ ಊಟ ಮಾಡಿಸಿ ಮಲಗಿಸಿದರು. ಕಿರಂ. ಸರ್ ಜೊತೆ ಪ್ರೆಸ್ ಕ್ಲಬ್ ಗೆ ಹೋದಾಗ ಅಲ್ಲಿನ ಪ್ರತಿಯೊಬ್ಬ ಸಪ್ಲೈ ಯರ್ ಗೂ ತಮ್ಮ ಕೈ ಗೆ ಸಿಕ್ಕಷ್ಟು ಹಣ ಕೊಡುತ್ತಿದ್ದರು. ನಾಸ್ತಿಕರಾಗಿದ್ದರೂ ಸಹ ( ನಾನು ಹಾಗೆ ಭಾವಿಸಿದ್ದೆ) ಅವರ ಊರು ಕಿತ್ತಾನೆಯಿಂದ ದೇವಸ್ಥಾನ ಕಟ್ಟಲು ಸಹಾಯ ಕೇಳಲು ಬಂದವರೊಂದಿಗೆ ದೇವಾಲಯ ಯಾಕೆ ಅಗತ್ಯ ಎಂಬುದನ್ನು ಮತ್ತು ಅದನ್ನು ಹೇಗೆ ನಿರ್ಮಿಸಬೇಕು ಎನ್ನುವುದನ್ನು ಅಪ್ಪಟ ಆಸ್ತಿಕನ ಹಾಗೆ ವಿವರಿಸುತ್ತಿದ್ದುದನ್ನು ಸ್ವತಃ ನೋಡಿ ವಿಸ್ಮಯಗೊಂಡಿದ್ದೆ..... ಪ್ರಬುದ್ಧ ವ್ಯಕ್ತಿತ್ವದ ಜೊತೆಯಲ್ಲಿ ಮಕ್ಕಳ ಹಠಮಾರಿತನ ಕಂಡಿರುವೆ. ಯಾರಾದರೂ ಅವರ ಮನೆಗೆ ಬಂದರೆ ಅಷ್ಟು ಸುಲಭವಾಗಿ ವಾಪಸ್ ಹೋಗಲು ಬಿಡುತ್ತಿರಲಿಲ್ಲ. ಅವರ ಮಾತು ಕೇಳಿಸಿಕೊಳ್ಳುತ್ತಾ ನನಗೆ ಕೆಲವೊಮ್ಮೆ ನಿದ್ದೆ ಬರುತ್ತಿತ್ತು ಆಗ ಅವರು ಕೋಪಿಸಿಕೊಳ್ಳದೆ.. ಅಲ್ಲೇ ಮಲಗಿಕೊಂಡು ಬಿಡ್ರೀ ಯಾಕೆ ಕಷ್ಟ ಪಡುತ್ತೀರಿ ಅನ್ನುತ್ತಾ ಮಲಗಲು ಬಿಡುತ್ತಿದ್ದರು... ಎಲ್ಲರನ್ನೂ ತನ್ನವರೆಂದೇ ಭಾವಿಸುತ್ತಾ ಅವರ ನೆರವಿಗೆ ಧಾವಿಸುತ್ತಿದ್ದ ಅಪ್ಪಟ ಮಹಾನ್ ಮಾನವತಾವಾದಿಯಾಗಿದ್ದರು.... ಬರೆಯಲು ಬಹಳ ಇದೆ... ಬರಹಕ್ಕೆ ನಿಲುಕದ ನಕ್ಷತ್ರವಾಗಿದ್ದಾರೆ ಕಿರಂ ಸರ್


| Vijaya

ಕೀರಂ ನಮ್ಮ ಮನ,ಮನೆಯ ಖಾಯಂ ಅತಿಥಿ. ಕಷ್ಟ,ಸುಖಗಳಲ್ಲಿ ಭಾಗಿ.ಅವರು ತುಂಬಿಕೊಟ್ಟ ಧೈರ್ಯ ಎಂಥದನ್ನೂ ಬದಿಗಿಟ್ಟು ನಡೆವುದನ್ನು ಕಲಿಸಿತು. ಹೊಸ ಹೊಸ ಪುಸ್ತಕಗಳನ್ನು ಕೈ ಗಿಟ್ಟು ಓದಿಸಿ,ಓದಿದ್ದು ಎಷ್ಟನ್ನು ಗ್ರಹಿಸಲು ಸಾಧ್ಯವಾಗಿದೆಯೆಂದು ಪರಿಶೀಲಿಸಿ ಮಾರ್ಕ್ಸ್ ಕೊಡುತ್ತಿದ್ದ ತುಂಟ ಮೇಷ್ಟ್ರು. ನನ್ನ ಇಬ್ಬರೂ ಮಕ್ಕಳ ಜೊತೆ ನೆಲದ ಮೇಲೆ ಪದ್ಮಾಸನ ಹಾಕಿ ಕೂತು ಕೈ ತುತ್ತಿಗೆ ಕೈ ಒಡ್ಡುತ್ತಿದ್ದ ನಿಗರ್ವಿ. ಅವರ ಕೊನೆಯ ಉಪನ್ಯಾಸವೂ ನನ್ನ ಕೋರಿಕೆಯಂತೆ ಬೇಂದ್ರೆ ಕುರಿತದ್ದು.ಪ್ರಾರಂಭಿಸಿದ ಕೆಲ ಕ್ಷಣಗಳಲ್ಲೇ ಸೋತು ಒರಗಿದರು.ಆರೈಕೆ ಮಾಡಿದೆ.ಇಡ್ಲಿ ತರಿಸಿ ತಿನ್ನಿಸಿದೆ.ಬೆವೆತು ಹೋದರು.ಒರೆಸಿದ್ದು ನನ್ನ ಸೆರಗೇ. ಇಲ್ಲ...ಅವರು ನನ್ನ,ನಮ್ಮ ಕೈಗೆ ಸಿಗಲಿಲ್ಲ.ಮತ್ತೆಲ್ಲೋ ಬೇಂದ್ರೆ ಕುರಿತು ಉಪನ್ಯಾಸ ಮಾಡುತ್ತಿದ್ದಾರೆಂದೇ ಭಾಸವಾಗುತ್ತಿದೆ; ಇದ್ದಾರೆ,ಇರಲೇ ಬೇಕು


| Nataraj Huliyar Replies

Deeply moving memories of Kiram are pouring. I am grateful to all


| ರವಿಕುಮಾರ ಎನ್.ಎಸ್.

ಕಾವ್ಯವನ್ನು ಉಂಡು- ಉಟ್ಟ ಕಿರಂ ಅವರ ಕಾವ್ಯಪ್ರೀತಿ ಮತ್ತು ಅವರ ಈ ರೀತಿಯ ನಡವಳಿಕೆಗಳೇ ನಾಡಿನಾದ್ಯಂತ ಅವರ ಶಿಷ್ಯ ವರ್ಗ ಹೆಚ್ಚಾಗಲು ಕಾರಣ.


| ಚರಣ್‌ ಬಿ ಕೆ

ತಮ್ಮ ಬ್ಲಾಗ್‌ ಮತ್ತು ಅಂಕಣ ಪುಸ್ತಕಗಳಿಂದ ನಮ್ಮಂತ ಯುವ ತಲೆಮಾರಿನಲ್ಲಿ ಹೊಸ ದೃಷ್ಟಿಕೋನ ಬೆಳೆಯತೊಡಗಿದೆ. ಇಷ್ಟು ವರ್ಷಗಳ ಕಾಲ ಕನ್ನಡವನ್ನು ಇಂಗ್ಲಿಷನ್ನು ಶಾಲೆ ಕಾಲೇಜುಗಳಲ್ಲಿ ಓದಿದರು ಸಾಹಿತ್ಯವನ್ನು ಸಮಾಜವನ್ನು ಮತ್ತು ನಮ್ಮನ್ನು ಕಂಡುಕೊಳ್ಳುವ ರೀತಿಯೇ ಸಿಗಲಿಲ್ಲವಲ್ಲ ಎಂಬ ಕೊರಗು ಸದಾ ಮನೆಮಾಡುತ್ತದೆ. ಸದ್ಯ ಈಗಲಾದರೂ ತಮ್ಮ ಸಂಗಡ ಬಂದೇವಲ್ಲ ಎಂಬ ಸಂತೋಷವೇ ಜೀವಂತಿಕೆಯನ್ನು ತಂದುಕೊಟ್ಟಿದೆ. ತಾವು ಕೂಡ ನಮಗೆ ಬರಹದ ಮೂಲಕ ಸಂಗಾತಿಯಾಗಿ ಗೆಳೆಯರಾಗಿ ಇದ್ದೀರಿ ಸರ್.‌ ತಮಗೆ ತಡವಾಗಿ ಗೆಳೆಯರ ದಿನಾಚರಣೆಯ ಶುಭಾಶಯಗಳು.


| DEVINDRAPPA

ಕೀರಂ ಅವರನ್ನು ಕಣ್ಣ ಮುಂದೆ ತಂದು ನಿಲ್ಲಿಸಿದ್ದೀರಿ. ಅವರ ಬಗ್ಗೆ ಅನೇಕ ಹಿರಿಯ ಲೇಖಕರು ಈಗಲೂ ಹೇಳುತ್ತಾ ಇರ್ತಾರೆ-ಅವರು ನಡೆಯುತ್ತಲೇ ಅನೇಕರ ಬೌದ್ಧಿಕತೆಯನ್ನು ರೂಪಿಸಿದವರು ಎಂದು. ಅವರ ಪ್ರತಿ ನುಡಿಯು ಕೂಡ ಚಲನಶೀಲತೆಯ ಸಂಕೇತವಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಡಾ. ಸಿ ಆರ್ ಗೋವಿಂದರಾಜು ಅವರು ಕೀರಂ ಅವರ ಶಿಷ್ಯರು. ಅವರಿಂದ ಕೀರಂ ಅವರ ಇಡೀ ಬದುಕಿನ ಚಿತ್ರಣ ನನಗೆ ಲಭಿಸಿತು. ಕೀರಂ ಅವರು ಅಲ್ಲಮನಂತೆ ಹೆಗಲಿಗೆ ಪುಸ್ತಕ ಜೋಳಿಗೆ ಹಾಕಿಕೊಂಡು ನಡೆದವರು. ನಡೆಯುತ್ತಲೇ ಕನ್ನಡ, ಕರ್ನಾಟಕವನ್ನು ರೂಪಿಸಿದವರು.


| Rupa Hassan

ಕಿ.ರಂ. ನೆನಪೆಂದರೆ ಅದೊಂದು ತಂಗಾಳಿಯಂತೆ. ಅವರು ಮನೆಗೆ ಬಂದು ನಮ್ಮ ಕುಟುಂಬದೊಡನೆ ಕಳೆದ ಕ್ಷಣಗಳ ನೆನಪು ಮತ್ತು ಅಲ್ಲಿ ಇಲ್ಲಿ ಸಿಕ್ಕಾಗಲೆಲ್ಲಾ ತೋರಿದ ಅಕ್ಕರೆ ನೆನಪಾಯ್ತು.


| HN

What a write up!


| Nanjaiah

So Super sir


| ಡಾ. ನಿರಂಜನ ಮೂರ್ತಿ ಬಿ ಎಂ

ಕನ್ನಡದ ಪ್ರಸಿದ್ಧ ಸಾಹಿತಿ, ವಿಮರ್ಶಕ, ಮತ್ತು ಅಧ್ಯಾಪಕ ಕೀರಂ ಅವರ ವಿಶೇಷ ವ್ಯಕ್ತಿಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಅವರ ಸ್ನೇಹವೆಂದರೆ ಅಂಟು ಎಂಬ ವ್ಯಾಖ್ಯಾನವಂತೂ ಬಲು ಅರ್ಥಪೂರ್ಣ. ಅವರ ಸರಳತೆ, ಸ್ನೇಹಪರತೆ, ಸಾಂಗತ್ಯಪ್ರಿಯತೆ, ಸಾಹಿತ್ಯದೊಲವು, ಕಾವ್ಯ ವಿಶ್ಲೇಷಣೆ, ಮಾತಿನ ಹರವು, ಮತ್ತು ಮಾನವೀಯತೆ ಆಪ್ಯಾಯಮಾನ ಮತ್ತು ಅನುಕರಣೀಯ. ಹುಳಿಯಾರರ ಕೀರಂ ಸ್ಮರಣೆ ಸಕಾಲಿಕ ಮತ್ತು ಮೌಲಿಕ.


| Dr. Sanganagouda

"ಎಂದೂ ತೀರಿ ಹೋಗದ ಎರಡು ಚೇತನಗಳು" ಎಂಬ ನಿಮ್ಮ ಲೇಖನ ಅದ್ಭುತ ಸರ್


| Gangaraj

ಇಂದಿನ ವಿದ್ಯಾರ್ಥಿಗಳಿಗೆ ಕಿ.ರಂ ಥರದ ಮೇಷ್ಟ್ರು ಗಳು ಸಿಗುತ್ತಿಲ್ಲ ಎಂಬುದು ದುಃಖಕರ. ಕಿ.ರಂ.ಈ ನಾಡಿನ ನಿಜ ನಾಡೋಜ


| ಮಾಲತಿ ಪಟ್ಟಣಶೆಟ್ಟಿ

ಓದಿ ಆ ಗುರು ವಿನ ಭಾವಾಸಮುದ್ರದಲ್ಲಿ ಈಸಾಡಿದ್ದೆನೆ. ಅವರೊಬ್ಬ ಮಾಂತ್ರಿಕರು!! ಅಂಥ ಗುರುವು ಭಾಳ ಅಪರೂಪ!!!




Add Comment


Nataraj Huliyar on Book Prize Awardees

YouTube






Recent Posts

Latest Blogs