ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು
by Nataraj Huliyar
ತಿಪಟೂರು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಬಿ.ಎ. ವಿದ್ಯಾರ್ಥಿಯೊಬ್ಬ ಗೋಡೆಗಳ ಮೇಲೆ ತೂಗುಬಿಟ್ಟಿದ್ದ ಕಾರ್ಟೂನ್ ಪ್ರದರ್ಶನವನ್ನು ನೋಡುತ್ತಿದ್ದ ಅವನ ವಾರಗೆಯ ಹುಡುಗನೊಬ್ಬ ‘ನೀವೇನಾ ನಟರಾಜ್?’ ಎಂದು ಕೇಳಿದ.
ಇದು ಅಷ್ಟಿಷ್ಟು ಪಾಕೆಟ್ ಮನಿಗಾಗಿ ಪಾಕೆಟ್ ಕಾರ್ಟೂನ್ ಬರೆಯುತ್ತಿದ್ದ ಹುಳಿಯಾರು ಎಂಬ ಪುಟ್ಟ ಊರಿನ ನಟರಾಜ್ ಹಾಗೂ ಅಣ್ಣನ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ದುಡಿಯುತ್ತಿದ್ದ ನಟರಾಜ ಹೊನ್ನವಳ್ಳಿಯವರ ಮೊದಲ ಭೇಟಿ. ಅವತ್ತು ಕುಲುಕಿದ ಕೈಗಳು ಇವತ್ತಿಗೂ ಹಾಗೇ ಬೆಸೆದಿವೆ. ಒಟ್ಟಾಗಿ ಹತ್ತಾರು ಸಂಜೆಗಳನ್ನು ‘ಕಳೆದಿಲ್ಲ’; ಗಳಿಸಿವೆ! ನೂರಾರು ಸಾಹಿತಿ, ಸಾಹಿತ್ಯ ಕೃತಿಗಳ ‘ಪೋಸ್ಟ್ ಮಾರ್ಟಂ’ ಮಾಡಿವೆ. ಪರಸ್ಪರ ಕಲಿತಿವೆ; ಕಲಿಸಿವೆ. ಏನೇನೋ ಸಾಹಸ ಮಾಡಿವೆ. ಈಗ ಹಿನ್ನೋಟದಲ್ಲಿ ಇವೆಲ್ಲ ರೋಮಾಂಚನಕಾರಿಯಾಗಿ ಕಾಣುತ್ತವೆ.
ಇದನ್ನೆಲ್ಲ ಬರೆಯಬೇಕಾಗಿ ಬಂದಿದ್ದು ಆಕಸ್ಮಿಕ. ಮೊನ್ನೆ ಹೊನ್ನವಳ್ಳಿಗೆ ಸಿ.ಜಿ.ಕೆ. ಪ್ರಶಸ್ತಿ ಬಂದಾಗ ಕಲಾವಿದ ಗೆಳೆಯ ಕೃಷ್ಣ ರಾಯಚೂರ್ ಆ ಸಭೆಯಲ್ಲಿ ಮಾತಾಡಲು ಹೇಳಿದರು: ನಟರಾಜ ಹೊನ್ನವಳ್ಳಿಯ ಜೊತೆಗಿನ ಸಂಬಂಧ ನನ್ನನ್ನು ಸದಾ ಪೊರೆದ ಚಿತ್ರಗಳು ತೆರೆದುಕೊಳ್ಳತೊಡಗಿದವು. ಜೊತೆಗೆ ನನ್ನ ವಿದ್ಯಾರ್ಥಿ ದೆಸೆಯ ಹಸಿದ ರಾತ್ರಿಗಳಲ್ಲಿ ಗೆಳೆಯ ಕೊಡಿಸಿದ ತಿಂಡಿ-ಕಾಫಿ-ಟೀ ಕೂಡ. ಅವೆಲ್ಲದರ ಬಗ್ಗೆ ಕೃತಜ್ಞತೆ ಹೊತ್ತೇ ನಟರಾಜ್ ಹೊನ್ನವಳ್ಳಿಯ ಸಾಧನೆಯ ಹಾದಿಯನ್ನು ನೋಡುತ್ತಾ, ಮಾತಾಡಲೆತ್ನಿಸಿದೆ.
ನಟರಾಜ್ ಹೊನ್ನವಳ್ಳಿ ರಂಗಭೂಮಿಯಲ್ಲಿ ಮಾಡಿದ ನೂರಾರು ಕೆಲಸಗಳ ಪಟ್ಟಿ ನೋಡಿದಂತೆಲ್ಲ ಆ ಪ್ರತಿಯೊಂದು ಕೆಲಸದಲ್ಲೂ ಈ ನಿರ್ದೇಶಕ-ನಟ ಅರ್ಥಪೂರ್ಣವಾಗಿ ತೊಡಗಿದ ರೀತಿಯನ್ನು ಊಹಿಸಿಕೊಂಡೆ. ಒಂದು ನಾಟಕದ ಅನುಭವಗಳು ಪಾತ್ರಗಳ ಮೂಲಕ ಇಡೀ ರಂಗದ ಮೇಲೆ, ಥಿಯೇಟರಿನೊಳಗೆ ಮೆಲ್ಲಗೆ, ಗಾಢವಾಗಿ, ಅಬ್ಬರವಿಲ್ಲದೆ ಹಬ್ಬುವಂತೆ ಮಾಡುವ ಹೊನ್ನವಳ್ಳಿಯ ಕಲಾತ್ಮಕ ಮಾಂತ್ರಿಕತೆ, ದಕ್ಷತೆ ನೆನಪಾಗಿ ಬೆರಗಾದೆ. ‘ಪೊಲೀಸರಿದ್ದಾರೆ ಎಚ್ಚರಿಕೆ’ಯ ನಾಟಕದಲ್ಲಿ ಏಣಗಿ ನಟರಾಜ್ ಮೂಲಕ ಹೊರಚೆಲ್ಲಿದ, ನಮ್ಮೆಲ್ಲರಲ್ಲೂ ಅಡಗಿರುವ, ನಿಗೂಢ ಭೀತಿ; ‘ಗುಣಮುಖ’ದಲ್ಲಿ ನಾದಿರ್ ಶಾ-ಅಲಾವಿಖಾನ್ ಒಬ್ಬ ಇನ್ನೊಬ್ಬನಾಗುವ ರೀತಿ; ಗೆಳೆಯ ರಾಜಪ್ಪ ದಳವಾಯಿ ಹೇಳಿದಂತೆ ‘ಗುಣಮುಖ’ವನ್ನು ಕನ್ನಡ ರಂಗಭೂಮಿಯಲ್ಲಿ ಅನನ್ಯವಾಗಿ ಸ್ಥಾಪಿಸಿದ ಹೊನ್ನವಳ್ಳಿಯ ಗಂಭೀರ ರಂಗರೀಡಿಂಗ್; ಭೂತ- ವರ್ತಮಾನ-ಭವಿಷ್ಯಗಳ ಸುತ್ತ ಚಲಿಸುವ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದ ವೃತ್ತಾಕಾರದ ಚಲನೆಗೆ ರಂಗ ರಿಸರ್ಚರ್ ಹೊನ್ನವಳ್ಳಿ ಹುಡುಕಿದ ಹದಿನೇಳನೇ ಶತಮಾನದ ಎಲಿಝಬೆತನ್ ಗಾಲಿ; ಆ ರಂಗಗಾಲಿಬಂಡಿಯನ್ನು ಮೂಡುಗಳಿಗೆ ತಕ್ಕಂತೆ ರವೀಂದ್ರ ಕಲಾಕ್ಷೇತ್ರದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿ ಸೃಷ್ಟಿಸಿದ ಅಪರೂಪದ ರಂಗವಿಸ್ಮಯ, ‘ಜುಗಾರಿಕ್ರಾಸ್’ ನಾಟಕದ ಹುಡುಗ, ಹುಡುಗಿಯರ ಪ್ರಾಯದ ಪೆಂಪು; ರೈತ ಚಳುವಳಿ, ದಲಿತ ಚಳುವಳಿ, ಲೋಹಿಯಾ ಚಿಂತನೆ ಹೊನ್ನವಳ್ಳಿಯ ರಂಗಕಲೆಗೆ ಕೊಟ್ಟಿರುವ ಖಚಿತ ತಾತ್ವಿಕ-ಸಾಮಾಜಿಕ ಆಯಾಮ…ಹೀಗೆ ಥರಂಥರ ಚಿತ್ರಗಳು ಹಾದುಹೋಗತೊಡಗಿದವು.
ಅದರ ಜೊತೆಗೇ, ತನಗೆ ಆಳದಲ್ಲಿ ಮುಖ್ಯವೆಂದು ಮನವರಿಕೆಯಾದಾಗ ಮಾತ್ರ ನಾಟಕಪಠ್ಯವೊಂದನ್ನು ನಿರ್ದೇಶನಕ್ಕೆ ಕೈಗೆತ್ತಿಕೊಳ್ಳುವ ಹೊನ್ನವಳ್ಳಿಯ ಪ್ರಖರ ಟೇಸ್ಟ್; ನಾಟಕ ಪಠ್ಯವನ್ನು ಬಗೆಬಗೆಯಲ್ಲಿ, ಮತ್ತೆ ಮತ್ತೆ, ಹತ್ತಿರದಿಂದ ಓದಿ, ಎಷ್ಟೇ ಡಿಸ್‌ಮ್ಯಾಂಟಲ್ ಮಾಡಿ, ಮುರಿದು ಕಟ್ಟಿ, ‘ನಿಚ್ಚಂ ಪೊಸತು’ ಮಾಡುವಾಗಲೂ ಎಂದೂ ಸಿಲ್ಲಿ ಸಂಭಾಷಣೆಗಳನ್ನು ಸೇರಿಸಬಾರದೆಂಬ ಅಭಿರುಚಿ-ವ್ರತ; ಜಗತ್ತಿನ ರಂಗಪರಂಪರೆಯನ್ನೇ ಆವಾಹಿಸಿಕೊಳ್ಳುವ ರಂಗ ಟೀಚಿಂಗ್… ಪಾತ್ರಗಳ ನಟ ನಟಿಯರು ತಂತಾವೇ ಬೆಳೆಯಲು ಬಿಟ್ಟರೂ, ಅವನ್ನು ಅಗೋಚರವಾಗಿ, ಆದರೆ ಖಚಿತವಾಗಿ ನಿರ್ದೇಶಿಸುವ ರೀತಿ…
ಇವನ್ನೆಲ್ಲ ಹತ್ತಿರದಿಂದ ಕಂಡಿರುವ ನನಗೆ ಕನ್ನಡ ರಂಗಭೂಮಿಯ ಹತ್ತು ಅನನ್ಯ ನಿರ್ದೇಶಕರ ಪಟ್ಟಿಯಲ್ಲಿ ಹೊನ್ನವಳ್ಳಿಗೆ ಕಾಯಂ ನೆಲೆಯಿದೆ ಎಂದು ಮತ್ತೆ ಮತ್ತೆ ಅನ್ನಿಸಿತು, ನನ್ನ ಈ ಪಟ್ಟಿಯಲ್ಲಿ ಸಿ.ಜಿ.ಕೆ., ಬಿ.ವಿ.ಕಾರಂತರೂ ಇದ್ದಾರೆ. ಉಳಿದ ಏಳು ಮಂದಿಯನ್ನು ‘ಅವರವರ ಭಾವಕ್ಕೆ’ ಅವರವರ ಅಭಿರುಚಿಗೆ ಬಿಡುವೆ!
ಹತ್ತು ವರ್ಷಗಳ ಕೆಳಗೆ ‘ಆಫ್ರಿಕಾ ಸಾಹಿತ್ಯ ವಾಚಿಕೆ’ ಮಾಡುವಾಗ ನಟರಾಜ್ ಹೊನ್ನವಳ್ಳಿಯನ್ನು ಅನುವಾದಕ್ಕೂ ಎಳಕೊಂಡು ಬಂದೆ! ಲೂಯಿ ನಕೋಸಿಯ ‘ರಿದಂ ಆಫ್ ವಯಲೆನ್ಸ್’ ಆಫ್ರಿಕನ್ ನಾಟಕದ ಕನ್ನಡಾನುವಾದ ‘ಆ ಲಯ ಈ ಲಯ’ಕ್ಕೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿಯೂ ಸೇರಿದಂತೆ ಹಲವು ಬಹುಮಾನಗಳು ಬರತೊಡಗಿದಾಗ, ‘ಗುರೂ! ಇದು ನಿನ್ನ ಉತ್ಸರ್ಪಿಣಿ ಕಾಲ!’ ಎಂದು ನಕ್ಕೆ.
ಫೋನಿನ ಆ ಕಡೆಯಿಂದಲೂ ನಗು ಪ್ರತಿಧ್ವನಿಸಿತು. ಜೋಕು ನಮ್ಮಿಬ್ಬರಿಗೂ ಅರ್ಥವಾಯಿತು.
ಜೋಕ್ ಅರ್ಥವಾಗಿದ್ದರ ಬಗ್ಗೆ ಬರೆಯುವಾಗ ಇಂಗ್ಲಿಷ್ ಕವಿಗಳಾದ ಎಜ್ರಾಪೌಂಡ್ ಮತ್ತು ಎಲಿಯಟ್ ಸಂಬಂಧದ ಬಗ್ಗೆ ಲಂಕೇಶರು ಬರೆದ ಮಾತೊಂದು ತೇಲಿ ಬಂತು. ಎಜ್ರಾಪೌಂಡ್ ತೀರಿಕೊಂಡಾಗ ಎಲಿಯಟ್ ಬರೆದ ಮಾತು: ’ಇನ್ನು ನನ್ನ ಜೋಕುಗಳನ್ನು ಯಾರ ಬಳಿ ಹಂಚಿಕೊಳ್ಳಲಿ?’ ಈ ಮಾತು ಮೂವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ನನ್ನಲ್ಲಿ ಉಳಿದುಬಿಟ್ಟಿದೆ.
ಅಂದರೆ, ಜೋಕುಗಳನ್ನು ಯಾರ ಬಳಿಯಾದರೂ ಹಂಚಿಕೊಳ್ಳಲು ಸಾಧ್ಯವಿಲ್ಲವೆ? ಖಾಸಗಿ ಜೋಕುಗಳು, ಅದರಲ್ಲೂ ಇಂಟಲಿಜೆಂಟ್ ಲಿಟರರಿ ಜೋಕುಗಳು, ಸರ್ದಾರ್ ಜಿ ಜೋಕುಗಳ ಥರ, ಸಾರ್ವತ್ರಿಕವಲ್ಲ; ಅವು ನಮ್ಮ-ನಮ್ಮ ನಡುವೆ, ನಮ್ಮ ಸಂವೇದನೆ ಹಂಚಿಕೊಂಡವರ ಜೊತೆಯೇ ಹೆಚ್ಚಿನ ಪ್ರತಿಧ್ವನಿ ಪಡೆಯುವುದು. ಇದನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಸಾಹಿತ್ಯವಲಯದ ಜೋಕುಗಳಂತೂ ಆ ಜೋಕುಗಳ ಪಾತ್ರಗಳು ಕೇಳುಗರಿಗೆ ಪರಿಚಯವಿದ್ದರೆ ಮಾತ್ರ ಕ್ಲಿಕ್ಕಾಗುವುದನ್ನು ನೋಡಿದ್ದೇನೆ. ನಿನ್ನೆ ಸಂಜೆಯಿನ್ನೂ ಹೊಸ ತಲೆಮಾರಿನ ಇಬ್ಬರು ಕನ್ನಡ ಅಧ್ಯಾಪಕರ ಜೊತೆ ಹಂಚಿಕೊಂಡ ಸಾಹಿತ್ಯವಲಯದ ತಮಾಷೆಗಳು ನನ್ನ ಇಂಜಿನಿಯರ್ ಗೆಳೆಯರ ವಲಯದಲ್ಲಿ ಕ್ಲಿಕ್ಕಾಗುವುದಿಲ್ಲ. ಅವರಿಗೆ ಕಂಬಾರ ಯಾರು, ಶ್ರೀಕೃಷ್ಣ ಆಲನಹಳ್ಳಿ ಯಾರು ಎಂದು ಕ್ಲಾಸ್ ಮಾಡಿ, ನಂತರ ಆ ಜೋಕುಗಳನ್ನು ಸಿಡಿಸುವುದು ಕಷ್ಟ! ಅಷ್ಟೇ ಅಲ್ಲ, ಇಬ್ಬರ ನಡುವೆ ಆತ್ಮೀಯತೆ, ಪ್ರೀತಿ ಇದ್ದಾಗ ಮಾತ್ರ ಜೋಕ್ ತಮಾಷೆಯಾಗುವುದು. ‘ಪ್ರೀತಿಯಿಲ್ಲದ ಮೇಲೆ ಜೋಕಿಗೆ ನಗೆ ಅರಳೀತು ಹೇಗೆ?’ (ರಾಷ್ಟ್ರಕವಿಗಳ ಕ್ಷಮೆಯಿರಲಿ!)
ಕಾರಣ: ಜೋಕುಗಳಲ್ಲೂ ನಮ್ಮ ನಮ್ಮ ಸಂಬಂಧಗಳ ಒಳಗಿರುವ ಖಾಸಗಿ ಸಂಜ್ಞೆ- ಸೂಚಕ- ಸೂಚಿತ; ಧ್ವನ್ಯಾರ್ಥ, ಇಂಗಿತಾರ್ಥ ಇವೆಲ್ಲ ಇರುತ್ತವೆ. ಈ ಸಂಭಾಷಣೆಯಲ್ಲಿ ’ಅವಳು’ ಅಂದರೆ ಇಬ್ಬರಿಗೂ ಗೊತ್ತಿರುವ ‘ಅವಳು’ ಮಾತ್ರ. ಅಥವಾ, ‘ಇದು ಕೊರಗರ ಸಂಸ್ಕೃತಿ’ ಎಂದು ಲೇಖಕನೊಬ್ಬ ನಕ್ಕರೆ, ಅದು ‘ಆ ಮೆಂಬರ್ ಶಿಪ್ ಸಿಗಲಿಲ್ಲ’, ‘ಈ ಅವಾರ್ಡ್ ಸಿಗಲಿಲ್ಲ’, ‘ಆ ಸೆಮಿನಾರಿಗೆ ನನ್ನ ಕರೆದಿಲ್ಲ’ ಎಂದು ಕೊರಗುವವರ ಬಗೆಗಿನ ಬೆಂಗಳೂರ್ ಜೋಕ್ ಎಂಬುದು ಕೆಲವರಿಗಷ್ಟೇ ಅರ್ಥವಾಗಬಲ್ಲದು! ಈ ಅಂಕಣಕಾರನ ಅದೃಷ್ಟ! ನಟರಾಜ್ ಹೊನ್ನವಳ್ಳಿಯಂಥ ಹತ್ತಾರು ಸಂಧ್ಯಾಸ್ನೇಹಿತರ ಜೊತೆ- ಕೆಲವರು ಮುಸ್ಸಂಜೆಯ ಮದ್ಯಾಕಾಂಕ್ಷೆಯಿಂದ ವಿರಕ್ತರಾದ ಮೇಲೂ- ಈ ಜೋಕ್ ಪುಲಕ ಚಿಮ್ಮುತ್ತಲೇ ಇರುತ್ತದೆ. ನನ್ನಂಥವರ ಮಾರನೆಯ ದಿನದ ಲವಲವಿಕೆಯ ಮೂಲ ಇಂಥ ಸಂಜೆಗಳಲ್ಲೂ ಇರಬಲ್ಲದು.
ಹೀಗೆಂದುಕೊಳ್ಳುತ್ತಾ, ನಿನ್ನೆಯಷ್ಟೇ ಗಮನಿಸಿದ್ದ ಖಲೀಲ್ ಗಿಬ್ರಾನ್ ಕವಿತೆ ‘ಆನ್ ಫ್ರೆಂಡ್‌ಶಿಪ್’ಗೆ ಮರಳಿದೆ. ಮೂಲ ಕವಿತೆ ಅರೇಬಿಕ್‌ನಲ್ಲಿದ್ದರೆ, ಅದು ಇಂಗ್ಲಿಷ್ ಪುನರ್ಜನ್ಮದಲ್ಲಿ ಎಷ್ಟು ಮುಕ್ಕಾಗಿದೆಯೋ! ಈ ಕನ್ನಡ ಮರುಜನ್ಮದಲ್ಲಿ ಅದು ಇನ್ನೆಷ್ಟು ಮುಕ್ಕಾಗಲಿದೆಯೋ! ಮೂಲ ಕವಿತೆಯ ಜೊತೆಗೆ ಇದನ್ನು ಓದಬಲ್ಲ ಓದುಗಿ-ಓದುಗರ ಮಾರ್ಗದರ್ಶನದಲ್ಲಿ ತಿದ್ದುವ ಅವಕಾಶವಂತೂ ಇದ್ದೇ ಇದೆ. ‘ಪದವಿಟ್ಟಳುಪದೊಂದಗ್ಗಳಿಕೆ’ ಯ ಕುವರವ್ಯಾಸ ಪ್ರತಿಭೆ ಹುಲುಲೇಖಕರಿಗೆಲ್ಲಿಯದು!
ಗಿಬ್ರಾನ್ ಕವಿತೆಯ ಕೆಲ ಭಾಗಗಳ ಈ ಕ್ಷಣದ-೧೪ ಡಿಸೆಂಬರ್ ೨೦೨೫ರ ಬೆಳಗಿನ- ಮೊದಲ ಸುತ್ತಿನ ಸರಳಾನುವಾದ:
‘ಗೆಳೆತನ ಕುರಿತು ಮಾತಾಡಿ’ ಎಂದು ತರುಣನೊಬ್ಬ ಕೇಳಿದ.
ಅದಕ್ಕೆ ಇವನು ಹೇಳಿದ:
‘ನಿನ್ನ ಗೆಳೆಯ ನಿನ್ನ ಬೇಕು ಬೇಡಗಳನ್ನು ಪೂರೈಸುವವನು.
ನೀನು ಪ್ರೀತಿಯಿಂದ ಬಿತ್ತುವ ಹೊಲ ಗದ್ದೆಗಳಲ್ಲಿ
ಕೃತಜ್ಞತೆಯಿಂದ ಕೊಯ್ಯುವ ಕೊಯಿಲು ಅವನು.
ಅವನು ನಿನ್ನ ನೆಮ್ಮದಿಯ ತಾಣ, ಚಳಿಗೆ ಮೈಕಾಯಿಸಿಕೊಳ್ಳುವ ಬೆಂಕಿ.
ಯಾಕೆ ಗೊತ್ತ? ನೀನು ಹಸಿದು ಅವನಲ್ಲಿಗೆ ಬರುವೆ;
ನೆಮ್ಮದಿಗಾಗಿ ಅವನ ಹುಡುಕಿ ಬರುವೆ.
ಹೀಗೆ ’ಆನ್ ಫ್ರೆಂಡ್‌ಶಿಪ್’ ಕವಿತೆಯಲ್ಲಿ ತಕ್ಷಣಕ್ಕೆ ನನ್ನ ತಟ್ಟಿದ ಪ್ರತಿಮೆಗಳ ತಕ್ಷಣದ ಅರ್ಥಗಳನ್ನು ಕನ್ನಡಿಸುತ್ತಾ, ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂದು ಉಸುರಿದ ಕವಿ ಬೇಂದ್ರೆಯನ್ನು ನೆನೆಯುತ್ತಾ, ಮುಂದಿನ ಭಾಗದಲ್ಲಿ ನಿನ್ನೆ ತಟ್ಟಿದ ಸಾಲುಗಳಿಗೆ ಮತ್ತೆ ವಾಪಸಾದೆ. ಪ್ರಾಯಶಃ ಮೊದಲನೆಯ ಭಾಗ ಆರಂಭದ ಪ್ರಶ್ನೆ ಕೇಳಿದ ತರುಣನ ದೃಷ್ಟಿಯಲ್ಲಿ ಗೆಳೆತನವನ್ನು ವಿವರಿಸಿ, ನಂತರದ ಭಾಗ ಗೆಳೆತನದ ಅರ್ಥವನ್ನು ವಿಸ್ತರಿಸುತ್ತದೆ ಎಂದು ಈ ಕವಿತೆ ಕುರಿತ ಟಿಪ್ಪಣಿಯೊಂದು ಸೂಚಿಸುತ್ತದೆ.
ಗೆಳೆಯ ತನ್ನ ಎದೆಯಲ್ಲಿದ್ದುದನ್ನೆಲ್ಲ ಹೇಳಿದಾಗ,
‘ಅದು ಸರಿಯಲ್ಲ’ ಎಂದು ನಿನಗನ್ನಿಸಿದರೆ ನಿನಗೆ ದಿಗಿಲಾಗದು;
‘ಅದು ಸರಿ’ ಎನ್ನಬೇಕೆನಿಸಿದರೆ, ಆ ಮಾತು ನಿನ್ನ ಗಂಟಲಲ್ಲೇ ಉಳಿಯದು.
ಅವನು ಮೌನವಾಗಿದ್ದಾಗ ಅವನೆದೆಯ ಮಾತನ್ನು
ಕೇಳಿಸಿಕೊಳ್ಳುವುದನ್ನು ನಿನ್ನೆದೆ ನಿಲ್ಲಿಸದು.
ಯಾಕೆ ಗೊತ್ತಾ? ಕೆಳೆತನದಲ್ಲಿ ಮಾತಿಲ್ಲದೆ ಎಲ್ಲ ಯೋಚನೆ,
ಎಲ್ಲ ಬಯಕೆ, ಎಲ್ಲ ನಿರೀಕ್ಷೆಗಳು ಹುಟ್ಟುವುವು, ಪರಸ್ಪರ ತಲುಪುವುವು;
ಆ ಆನಂದವನ್ನು ನೀನು ಬಿಚ್ಚಿ ಹೇಳದಿದ್ದರು ಕೂಡ ಇದೆಲ್ಲ ನಡೆಯುವುದು.
ಗೆಳೆಯ ಹೊರಟಾಗ ನೀನು ಶೋಕಿಸುವುದಿಲ್ಲ
ಯಾಕೆ ಗೊತ್ತ? ಅವನಲ್ಲಿ ನೀನು ಹೆಚ್ಚು ಮೆಚ್ಚುವುದೆಲ್ಲ
ಅವನಿಲ್ಲದಿರುವಾಗ ಇನ್ನಷ್ಟು ಒಡೆದು ಕಾಣುವುದು;
ಬೆಟ್ಟ ಹತ್ತುವವನಿಗೆ, ಬಯಲಲ್ಲಿ ನಿಂತಾಗ ಬೆಟ್ಟ ಚೆನ್ನಾಗಿ ಕಾಣುವ ಹಾಗೆ.
ಗೆಳೆತನದಲ್ಲಿ ನಿನ್ನ ಸತ್ವ-ಚೈತನ್ಯಗಳ ಆಳವಾಗಿಸಿಕೊಂಬ ಆಸೆ ಬಿಟ್ಟು
ಬೇರಾವ ಉದ್ದೇಶವೂ ಇಲ್ಲದಿರಲಿ.
ನಿನ್ನ ಅತ್ಯುತ್ತಮವೆಲ್ಲ ನಿನ್ನ ಗೆಳೆಯನಿಗಿರಲಿ.
ನಿನ್ನೊಳಗಿನ ಅಲೆಗಳ ಏರಿಳಿತ ಅವನಿಗೆ ಗೊತ್ತಿರಲಿ;
ಜೊತೆಗೆ, ಆ ಪ್ರವಾಹದ ಉಕ್ಕು ಕೂಡ.
ಕಾಲವ ಕೊಲ್ಲಲು ನೀ ಹುಡುಕುವ ಗೆಳೆಯ ಅದೆಂಥ ಗೆಳೆಯ?
ನೀ ಬದುಕಲುಬಯಸುವ ಗಳಿಗೆ, ಗಂಟೆಗಳಿದ್ದಾಗ ಮಾತ್ರ
ಅವನ ಹುಡುಕಿ ಹೊರಡು.
ಯಾಕೆ ಗೊತ್ತ? ಅವನು ನಿನ್ನ ಬೇಕು, ಬೇಡಗಳನ್ನು ತುಂಬುವನು;
ನಿನ್ನ ಖಾಲಿತನವನ್ನಲ್ಲ.
ಗೆಳೆತನದ ಸವಿಯಲ್ಲಿ ನಗುವಿರಲಿ, ಆನಂದ ಕೊಡುಕೊಳ್ಳುವುದಿರಲಿ.
ಯಾಕೆ ಗೊತ್ತ? ಸಣ್ಣಪುಟ್ಟ ತುಣುಕುಗಳ ಇಬ್ಬನಿಯಲ್ಲಿ
ಹೃದಯ ತನ್ನ ಬೆಳಗು ಪಡೆಯುವುದು; ಮರಳಿ ಚೈತನ್ಯ ಪಡೆಯುವುದು.
೧೯೨೩ರಲ್ಲಿ ಈ ಕವಿತೆ ಬರೆದ ಖಲೀಲ್ ಗಿಬ್ರಾನ್ ಥರದ ದೊಡ್ಡ ಕವಿಗೆ ಅನ್ನಿಸಿದ್ದು ನನಗೂ ನಿಮಗೂ ಅಷ್ಟಿಷ್ಟು ಅನ್ನಿಸಿರಬಹುದು. ಈ ಕವಿತೆ ‘ಅವನು’ ಎನ್ನುತ್ತಿರುವಾಗಲೂ, ‘ಅವಳು’ ಎಂದು ಓದುತ್ತಾ ವ್ಯಾಪ್ತಿ ವಿಸ್ತರಿಸಿಕೊಳ್ಳಬಹುದು ಎನ್ನಿಸಿತು.
ಹೀಗೆಂದುಕೊಳ್ಳುತ್ತಿರುವಾಗ ಹಳೆಯ ಟಿಪ್ಪಣಿಯೊಂದು ನೆನಪಾಯಿತು. ಆ ಟಿಪ್ಪಣಿಯ ತಲೆಬರಹವನ್ನೇ ಇವತ್ತಿನ ಅಂಕಣಕ್ಕೂ ಕೊಡಬೇಕೆನ್ನಿಸಿತು. ಹತ್ತು ವರ್ಷಗಳ ಕೆಳಗೆ ಪ್ರಜಾವಾಣಿಯ ’ಕನ್ನಡಿ’ ಅಂಕಣದಲ್ಲಿ ಚರಿತ್ರಕಾರ್ತಿ-ಸಹೋದ್ಯೋಗಿ ವಸು ಮಳಲಿ ತೀರಿಕೊಂಡಾಗ ಬರೆದ ’ವಸು: ಕಣ್ಮರೆಯಾದ ಅರ್ಥಪೂರ್ಣ ಕನಸು’ ಬರಹದ ಕೊನೆ ಟಿಪ್ಪಣಿ:
ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು
ವಸು ಮಳಲಿಯ ನಿರ್ಗಮನದ ನಂತರ ಬಂದ ಬರಹಗಳಲ್ಲಿ, ಮಾತುಕತೆಗಳಲ್ಲಿ ಅವರ ವ್ಯಕ್ತಿತ್ವವನ್ನು ನೆನೆಯುತ್ತಿರುವವರೆಲ್ಲ ಅವರ ಸ್ನೇಹಪ್ರವೃತ್ತಿಯ ಬಗೆಗೆ ಹೆಚ್ಚು ಮಾತಾಡುತ್ತಿದ್ದರು. ವಸುವಿನ ವ್ಯಕ್ತಿತ್ವದ ಈ ಮುಖ ಕಣ್ಣೆದುರು ಸುಳಿಯುತ್ತಿರುವಂತೆ ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು ನನ್ನೆದುರು ಮೂಡತೊಡಗಿದವು:
ನಾವು ನಿಜಕ್ಕೂ ಅಂಟಿಕೊಂಡ ಸ್ನೇಹಿತರಾದ ಮೇಲೆ, ಅಲ್ಲಿ ಎಲ್ಲವನ್ನೂ ಹೇಳುವ ಅವಕಾಶವಿರಬೇಕು; ಅಲ್ಲಿ ಹೆಚ್ಚಿನ ಸುಳ್ಳಿಗೆ ಅವಕಾಶವಿರಬಾರದು. ಈಕೆ ಮಹಿಳೆಯೆಂದಾಗಲೀ ಅಥವಾ ಇವರು ನಮ್ಮ ಕಡೆಯವರೆಂದಾಗಲೀ, ನಮ್ಮ ಜಾತಿಯವರೆಂದಾಗಲೀ, ದುರ್ಬಲರೆಂದಾಗಲೀ ಮುಖಸ್ತುತಿ ಮಾಡಬಾರದು. ಒಂದು ವಿಚಾರದಲ್ಲಿ ನಮ್ಮನ್ನು ಒಪ್ಪಲಿಲ್ಲವೆಂದ ಮಾತ್ರಕ್ಕೆ ಅವರನ್ನು ದ್ವೇಷಿಸಬಾರದು. ಅಲ್ಲಿ ಮೆಚ್ಚುಗೆ, ಟೀಕೆಗಳೆರಡೂ ಸಹಜವಾಗಿರಬೇಕು. ‘ಎಲ್ಲ ತತ್ವದೆಲ್ಲೆ ಮೀರಿ’ ಒಂದು ಗೆಳೆತನದಲ್ಲಿ ಭಾಗಿಯಾದ ಇಬ್ಬರೂ ಸೇರಿ ಸತ್ಯ ಹುಡುಕುವ ಕುತೂಹಲ, ಮುಕ್ತತೆ ಬೆಳೆಸಿಕೊಂಡರಂತೂ ಈ ನಂಟಿನ ಫಲ ಇನ್ನಷ್ಟು ಅದ್ಭುತವಾಗಿರಬಲ್ಲದು...
ಹೀಗೇ ಈ ಪಟ್ಟಿಯನ್ನು ನಾವು ಬೆಳೆಸುತ್ತಾ ಹೋಗಬಹುದು. ತಮ್ಮ ನಲವತ್ತೇಳನೆಯ ವಯಸ್ಸಿಗೆ ಗಂಭೀರವಾದ ಹಾಗೂ ಪ್ರೌಢವಾದ ಸ್ಥಿತಿ ತಲುಪತೊಡಗಿದ್ದ ವಸುವಿನ ನಿಸ್ವಾರ್ಥ ಸ್ನೇಹದ ಕನ್ನಡಿಯ ಮೂಲಕ ಈ ಸರಳ ಸತ್ಯಗಳು ಮತ್ತೊಮ್ಮೆ ನಿಚ್ಚಳವಾಗತೊಡಗಿದವು. (೧೮ ಫೆಬ್ರವರಿ ೨೦೧೫)
Comments
13 Comments
| ಮಂಜುನಾಥ್ ಸಿ ನೆಟ್ಕಲ್
ಗೆಳೆತನದ ಅರ್ಥಪೂರ್ಣತೆಯನ್ನು ಸೊಗಸಾಗಿ ಚಿತ್ರಿಸಿದ್ದೀರಿ ಸರ್... ಗೆಳೆತನದ ಸವಿಯಲ್ಲಿ ನಗುವಿರಲಿ, ಆನಂದ ಕೊಡುಕೊಳ್ಳುವುದಿರಲಿ. ಯಾಕೆ ಗೊತ್ತ? ಸಣ್ಣಪುಟ್ಟ ತುಣುಕುಗಳ ಇಬ್ಬನಿಯಲ್ಲಿ ಹೃದಯ ತನ್ನ ಬೆಳಗು ಪಡೆಯುವುದು; ಮರಳಿ ಚೈತನ್ಯ ಪಡೆಯುವುದು. ಈ ಕವಿತೆ ಅನುವಾದ ಸಹ ಹೃದಯಕ್ಕೆ ತಟ್ಟಿತು... ವಾರಾಂತ್ಯಗಳಲ್ಲಿ ನಮಗೆ ನವ ಚೈತನ್ಯ ಸಿಗುವುದು ಸಹ ಇಂತಹ ಸ್ನೇಹಿತರಿಂದಲೇ ಅಲ್ಲವೇ
| Sanganagouda
ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ. ಎದುರಿಗೆ ಒಂದೆರಡು ಬಾರಿಯೆ ನಿಮ್ಮಲ್ಲಿ, ಕವಿ ಸಿದ್ಧಲಿಂಗಯ್ಯನವರಲ್ಲಿ, ಚಂಪಾ ಅವರಲ್ಲಿ ಕಂಡಿರುವೆ ಸರ್.
| ಡಾ. ಶಿವಲಿಂಗೇಗೌಡ ಡಿ.
ಸಾರ್ಥಕತೆಯ ಗೆಳೆತನದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ ಸರ್. ಖಲೀಲ್ ಗಿಬ್ರಾನ್ ಕವಿತೆಯ ಅನುವಾದ ಹಾಗೂ ಅದರ ಮೂಲಕ ಗೆಳೆತನವು ಹೇಗಿರಬೇಕೆಂಬುದರ ಬಗೆಗಿನ ಮಾತುಗಳು ಮತ್ತು ಕೊನೆಟಿಪ್ಪಣಿ ಅರ್ಥಪೂರ್ಣವಾಗಿವೆ.
| ಹರಿಪ್ರಸಾದ್ ಬೇಸಾಯಿ
ಲವ್ಸ ಅಂಡ್ ಹಗ್ಸ ಸರ. ಪುತಿನ ಅವರ ಅಹಲ್ಯೆ ನಾಟಕದ ಭಾಷೆಯನ್ನು ಹೊನವಳ್ಳಿಯವರು ಪಾತ್ರಧಾರಿಗಳ ಮೂಲಕ ನುಡಿಸಿದ ರೀತಿ ಅನನ್ಯವಾದುದು. ಆ ಪ್ರದರ್ಶನ ಮತ್ತು ಅದರ ಇಂಟರ್ಪ್ರಿಟೇಶನ್ ಅಮೋಘವಾಗಿತ್ತು.
| Gangaraju Tataguni
'ಸಖ್ಯ'ದ ಸೊಗಸಾದ ನಿರೂಪಣೆ. ಅನುಭವ, ಅರ್ಥ, ಆಲೋಚನೆಗಳ ಸಂಶ್ಲೇಷಣೆ. ರೂಮಿಯ The Force of Friendship ಕವಿತೆ ಮೇಲ್ ಮಾಡಿದ್ದೇನೆ. ಗಮನಿಸಿ.
| Amarendra Hollambally
ನಟರಾಜ ಹೊನ್ನವಳ್ಳಿಯವರ ಒಡನಾಟದ ಮೆಲುಕು ಮತ್ತು ಆ ನೆಪದಲ್ಲಿ ನೀವು ಕಟ್ಟಿರುವ ಸ್ನೇಹ ಮೀಮಾಂಸೆ ಬಹಳ ವಿಶಿಷ್ಟವಾಗಿದೆ. ಇಬ್ಬರು ‘ನಟರಾಜ’ರೂ ಮನುಷ್ಯ ಸಂಬಂಧಗಳನ್ನು ಗೌರವಿಸುವ ಗುಣ ಹೊಂದಿರುವುದರಿಂದಲೇ ದೀರ್ಘ ಕಾಲದಿಂದ ಸ್ನೇಹ ಹಸಿರಾಗಿಯೇ ಇರುವುದು. ಸಣ್ಣ ಸಣ್ಣ ಕಾರಣಗಳಿಗೆಲ್ಲ ವ್ಯಕ್ತಿಗಳು ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಲ್ಲುವುದನ್ನು ಕಂಡಾಗ ನಿಮ್ಮ ಸ್ನೇಹ ಮತ್ತು ಅದನ್ನು ಉಳಿಸಿಕೊಳ್ಳುವಲ್ಲಿ ತೋರುವ ಬದ್ಧತೆ ತುಂಬ ಮುಖ್ಯವೆನಿಸುತ್ತದೆ. ಹಾಗೆ ನೋಡಿದರೆ ನಿಮ್ಮ ಸ್ವಚ್ಛ ಸ್ನೇಹ ಮತ್ತು ಕಾಳಜಿಯ ಅನುಭವ ನಟರಾಜ ಹೊನ್ನವಳ್ಳಿಯವರಿಗೆ ಅಷ್ಟೇ ಅಲ್ಲ, ನಿಮ್ಮ ಒಡನಾಟಕ್ಕೆ ಬಂದವರಿಗೆಲ್ಲರಿಗೂ ಆಗಿರುತ್ತದೆ.
| Mahalingeshwar
Really great🌷🌷
| Sandhya Rani N
ಈ ಸಲದ ಲೇಖನದ ಫೋಟೋ ಬರೆಸಿಕೊಂಡ ಸಾಲುಗಳು: ಒಂದೆ ಪ್ರಾಯದ ಅಭಿಪ್ರಾಯದ ಕಳಿತ ಹುಳಿಯ ಸಿಹಿ, ಮಿನುಗಿನಾಚೆಯ ಹೊನ್ನು ಆಜೂಬಾಜು. ಕೊಡದದ್ದ ನೀಡುತ್ತ ನೀಡದ್ದ ಪಡೆಯುತ್ತ ಜೋಡಿ ಕಳಸಗಳು. ಕೃಷ್ಣ ಚೇತನದ ಕಲೆ ಶ್ವೇತದ ಅಸಲಿ ಪಕ್ವತೆ ಸುತ್ತ ನೇಹ ರಾಗಾಲಾಪ.
| Dr. K P Narayanappa
ಒಂದೇ ಸಮನೇ ಓಡುವ ರೖಲು. ಒಳ ಹೊಕ್ಕರೆ ಅಪ್ಪಿಕೊಳ್ಳುವ ಬಂಧ. ಒಂದೇ ಗುಕ್ಕಿಗೆ ಮುಗಿಸುವ ತವಕ. ಎಷ್ಟೊಂದು ಲೆಖಕರ-ಕೃತಿಗಳ ಉಲ್ಲೇಖ, ಓದಿನ ಹರಹುವಿಗೆ, ನೆನಪಿನ ಶಕ್ತಿಗೆ🙏, DRN, ಕೀರಂ ನೆನಪಿಗೆ ಬರುತ್ತಾರೆ, ಅಭಿನಂದನೆಗಳು ಸರ್
| Anil
ಇಷ್ಟವಾಯಿತು. ಶುಭೋದಯ
| M Hiremath
ಗೆಳೆತನ ದ ಕಲ್ಲು ಸಕ್ಕರೆ ಸಿಹಿ ಹಂಚಿದ್ದೀರಿ
| Mamata
ಬರಹದ ಆಪ್ತತೆ, ಮುಕ್ತತೆ ಮನಸು ತುಂಬಿಸಿತು. ಸ್ನೇಹದ ಈ ಬರಹ ಹೆಚ್ಚು ತಟ್ಟಿತು.
| Prema K
ಸ್ನೇಹಿತರು ಹತ್ತಿರವಿರಲಿ, ದೂರವಿರಲಿ, ಸಮಾನ ನಂಬಿಕೆ, ಆಶಯ, ಬದ್ಧತೆಗಳೇ ಅವರನ್ನು ಹಿಡಿದಿಡಿವುದು. ಸ್ನೇಹದ ಇನ್ನೊಂದು ಮಾದರಿ ಲಿಯೋ ಟಾಲ್‌ಸ್ಟಾಯ್ ಮತ್ತು ಮಹಾತ್ಮ ಗಾಂಧಿಯವರದು. ಅವರಿಬ್ಬರೂ ಎಂದಿಗೂ ಭೇಟಿಯಾಗಲಿಲ್ಲ. ಆದರೆ ಅಪಾರ ಗೆಳೆತನ ಹಾಗೂ ಆಳವಾದ ಬೌದ್ಧಿಕ ಸಂಬಂಧವನ್ನು ಹಂಚಿಕೊಂಡರು. ಗಾಂಧಿಯವರು ಟಾಲ್‌ಸ್ಟಾಯ್ ಅವರ ಅಹಿಂಸೆಯ ತತ್ವದಿಂದ ಆಳವಾಗಿ ಪ್ರಭಾವಿತರಾದರು, ಸತ್ಯಾಗ್ರಹ ಚಳುವಳಿ ನೀಡಿದರು. ಸತ್ಯ ಮತ್ತು ಪ್ರೀತಿ ಮೇಲೆ ಕೇಂದ್ರೀಕರಿಸಿದ ಅವರ ಪತ್ರವ್ಯವಹಾರವು ಗಾಂಧಿಯವರ ಅಹಿಂಸಾತ್ಮಕ ಪ್ರತಿರೋಧದ ಬದ್ಧತೆಯನ್ನು ಗಟ್ಟಿಗೊಳಿಸಿತು. ಟಾಲ್ ಸ್ಟಾಯ್‌ರ ಭಾವನೆಗಳಿಗೆ ಗಾಂಧೀಜಿ ಕ್ರಿಯೆಯಾದರು.
Add Comment