ಮನುಜರ ಮೇಲೆ ಬರೆಯುವುದು!

ಬಾಲ್ಯದಲ್ಲಿ ಶಾಲಾ ಪುಸ್ತಕದಲ್ಲಿ ಓದಿದ ಒಂದು ಪ್ರಸಂಗ ಇವತ್ತಿಗೂ ನನ್ನನ್ನು ಕೆಣಕುತ್ತಿರುತ್ತದೆ. ಕನ್ನಡ ಕವಿ ರಾಘವಾಂಕ ಹಿರಿಯ ಕವಿ ಹರಿಹರನ ‌ಸೋದರಳಿಯ. ರಾಘವಾಂಕ ಬರೆಯಲು ಶುರುಮಾಡುವ ಹೊತ್ತಿಗಾಗಲೇ ಹರಿಹರ ತನ್ನ ‘ಬಸವರಾಜ ದೇವರ ರಗಳೆ’, ‘ಮಹಾದೇವಿಯಕ್ಕನ ರಗಳೆ’, ‘ಕುಂಬಾರ ಗುಂಡಯ್ಯನ ರಗಳೆ’ ಕಾವ್ಯಗಳನ್ನು ಬರೆದು ಮುಗಿಸಿದ್ದನೆಂದು ಊಹಿಸಬಹುದು.

ರಾಘವಾಂಕ ತನ್ನ ‘ಹರಿಶ್ಚಂದ್ರ ಕಾವ್ಯ’ವನ್ನು ಬರೆದುಕೊಂಡು ಹೋಗಿ ಹರಿಹರನಿಗೆ ತೋರಿಸಿದ. ಮನುಷ್ಯಮಾತ್ರರಾದ ರಾಜರ ಮೇಲೆ ಏಕೆ ಕಾವ್ಯ ಬರೆದೆ ಎಂದು ಕೋಪಗೊಂಡ ಹರಿಹರ ರಾಘವಾಂಕನ ಕಪಾಳಕ್ಕೆ ಹೊಡೆದ. ಆಗ ಅವನ ಹಲ್ಲುಗಳು ಮುರಿದುಹೋದವು. ಇದು ಆ ಕಾಲದ ದಂತಕತೆ; ‘ದಂತ’ ಕತೆ ಕೂಡ! ಆ ಘಟ್ಟದಲ್ಲಿ ಹರಿಹರ ರಾಘವಾಂಕನಿಗೆ ಹೇಳಿದನೆನ್ನಲಾದ ಮಾತು ಪ್ರಖ್ಯಾತವಾಯಿತು. ಅದು ಪಂಪಾಶತಕದಲ್ಲಿರುವುದನ್ನು ಗೆಳೆಯ ಮೋಹನ್ ಮಿರ್ಲೆ ಹುಡುಕಿಕೊಟ್ಟರು:

ಮನುಜರ ಮೇಲೆ ಸಾವವರ ಮೇಲೆ ಕನಿಷ್ಠರ ಮೇಲೆಯಕ್ಕಟಾ 
ತನತನಗಿಂದ್ರ ಚಂದ್ರ ರವಿ ಕರ್ಣ ದಧೀಚಿ ಬಲೀಂದ್ರನೆಂದು ಮೇಣ್ 
ಅನವರತಂ ಪೊಗಳ್ದು ಕೆಡಬೇಡಲೆ ಮಾನವ ನೀನಹರ್ನಿಶಂ 
ನೆನೆ ಪೊಗಳರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಂ 

ಹರಿಹರ ಪದ್ಯದ ಕೊನೆಗೆ, ಬರೆದರೆ ಹಂಪೆಯ ವಿರೂಪಾಕ್ಷನ ಬಗ್ಗೆ ಕಾವ್ಯ ಬರೆಯಬೇಕು ಎಂದು ಮೇಲ್ನೋಟಕ್ಕೆ ಹೇಳಿದ್ದರೂ ಅದರ ರೂಪಕಾರ್ಥವನ್ನು ಹೀಗೂ ನೋಡಬಹುದು: ಸಾಧಾರಣ ಮನುಷ್ಯರು ಕಾವ್ಯದ ವಸ್ತುವಾಗಲು ತಕ್ಕವರಲ್ಲ; ಕನಿಷ್ಠರನ್ನು ಇಂದ್ರ, ಚಂದ್ರ, ದಧೀಚಿ ಎಂದೆಲ್ಲ ಹೊಗಳುತ್ತಾ ಕೆಡಬಾರದು;  ಆದರ್ಶವಾದದ್ದನ್ನು ಕುರಿತು ಬರೆ ಎಂಬ ಒಂದು ಸೂಚನೆಯೂ ಇದೆ. ಇತರ ಓದುಗಿಯರಿಗೆ, ಓದುಗರಿಗೆ ಇದರಲ್ಲಿ ಬೇರೆ ಬೇರೆ ಅರ್ಥ ಕಾಣಲೂಬಹುದು. 

‘ಹಾಗಾದರೆ ಹರಿಹರ ‘ಮನುಷ್ಯ’ ಬಸವಣ್ಣನ ಬಗ್ಗೆ ಬರೆದನಲ್ಲ?’ ಎಂದರು ಗೆಳೆಯರು.

‘ಹರಿಹರ ತನ್ನ ಕಾಲದ ‘ಮನುಷ್ಯ’ ಬಸವಣ್ಣನನ್ನು ಆದರ್ಶ ಪಾತ್ರವನ್ನಾಗಿಸಿ ಬರೆದ’ ಎಂದು ತಕ್ಷಣ ಅನ್ನಿಸಿದ್ದನ್ನು ಹೇಳಿದೆ. ಆದರೆ ಕೆಲವು ವರ್ಷಗಳ ಕೆಳಗೆ ’ಮುಂದಣ ಕಥನ’ ನಾಟಕ ಬರೆಯುವಾಗ ವಚನಯುಗದ ಅನೇಕ ಕೃತಿಗಳನ್ನು ಜಾಲಾಡುತ್ತಿದ್ದಾಗ, ಬಸವಣ್ಣನನ್ನು ಪವಾಡಪುರುಷನನ್ನಾಗಿ ಮಾಡಿದ ಹರಿಹರ ಬಸವಣ್ಣನ ವೈಚಾರಿಕ ವ್ಯಕ್ತಿತ್ವಕ್ಕೆ ಅನ್ಯಾಯ ಮಾಡಿದ್ದಾನೆ ಎನ್ನಿಸತೊಡಗಿತು. ಬಸವಣ್ಣ ತೀರಿಕೊಂಡ ನಂತರದ ಐವತ್ತು ವರ್ಷಗಳ ಆಸುಪಾಸಿನಲ್ಲಿ ಬದುಕಿದ್ದ ಹರಿಹರ ಬರೆದ ‘ಬಸವರಾಜದೇವರ ರಗಳೆ’ ಓದಲು, ಕೇಳಿಸಿಕೊಳ್ಳಲು ತುಂಬಾ ಸುಂದರವಾದ ಕಾವ್ಯ; ಆದರೆ, ವೈಭವೀಕರಣದತ್ತಲೇ ಎಳೆದೊಯ್ಯುವ ರಗಳೆಯ ಛಂದೋರೂಪದ ಹರಿವು ಈ ಕೃತಿಯ ವಸ್ತುವಿನ್ಯಾಸವನ್ನು  ನಿಯಂತ್ರಿಸಿದಂತಿದೆ ಅನ್ನಿಸುತ್ತಿತ್ತು. ಇದು ಛಂದೋರೂಪಗಳ ಸಾಂಸ್ಕೃತಿಕ ರಾಜಕಾರಣವೂ ಇರಬಹುದು. ಅಕಸ್ಮಾತ್ ಹರಿಹರನ ಕಾಲದಲ್ಲಿ ಬಸವಣ್ಣ ಬದುಕಿದ್ದು, ‘ಬಸವರಾಜ ದೇವರ ರಗಳೆ’ಯನ್ನು ನೋಡಿದ್ದರೆ? ಹರಿಹರನ ದಂತಭಗ್ನ ನಡೆಯದಿದ್ದರೂ, ‘ಬಸವರಾಜ’ ವೈಭವೀಕರಣವನ್ನು ಬಸವಣ್ಣ ಖಂಡಿತಾ ಒಪ್ಪುತ್ತಿರಲಿಕ್ಕಿಲ್ಲ!

ಇದೆಲ್ಲ ನೆನಪಾದದ್ದು ಮೊನ್ನೆ ಪ್ರೊಫೆಸರೊಬ್ಬರು ಕೇಳಿದ ಕುತೂಹಲದ ಪ್ರಶ್ನೆಯ ಹಿನ್ನೆಲೆಯಲ್ಲಿ:

‘ನಾನು ಬದುಕಿದ್ದಾಗಲೇ ನೀನು ಏನು ಬರೀತೀಯ ಅಂತ ತಿಳಿಯುವ ಆಸೆ ನನ್ನದು’ ಎಂದರು ಪ್ರೊಫೆಸರ್‍. ಕೆಲವು ವಾರಗಳ ಕೆಳಗೆ ಇದೇ ಅಂಕಣದಲ್ಲಿ ಪ್ರಕಟವಾದ ‘ಸತ್ತವರ ಸವಿ ನೆರಳು’ ಬರಹ ಓದಿದ ಹಿನ್ನೆಲೆಯಲ್ಲಿ ಈ ಕುತೂಹಲ ಮಾತಿನ ನಡುವೆ ಹೊರಬಿತ್ತು.    

ಈ ಆಸೆ ಕೇಳಿದ ನನಗೂ, ’ನೀಲಿ ಬಾವುಟ’ದ ಅಂಕಣಕಾರ ಕವಿ ಸುಬ್ಬುವಿಗೂ ‘ಕವಿರತ್ನ ಕಾಳಿದಾಸ’ ಎಂಬ ಜನಪ್ರಿಯ ಸಿನಿಮಾದ ಭೋಜರಾಜನ ಆಸೆ ನೆನಪಾಯಿತು. ಇಂಥ ಆಸೆ ಎಲ್ಲರಿಗೂ ಇರಬಹುದೇನೋ. ಸತ್ತಾಗ ಯಾರು, ಹೇಗೆ ಅಳುತ್ತಾರೆ ಎಂದು ಊಹಿಸುವುದು ಜನರ ಸೋಮಾರಿ ಗಳಿಗೆಗಳ ಒಂದು ಕುತೂಹಲಕರ ಪಾಸ್ ಟೈಂ ಆಗಿರಬಲ್ಲದು! ಆದ್ದರಿಂದಲೇ ಕವಿ ಅಥವಾ ಲೇಖಕ ನಮ್ಮ ಆತ್ಮೀಯ ಮಿತ್ರನಾಗಿದ್ದರೆ ನಾವು ತೀರಿಕೊಂಡಾಗ ಆತ ಏನು ಬರೆಯಬಹುದು ಎಂಬ ಕುತೂಹಲ ಸಹಜ!  

ಮೇಲೆ ಹೇಳಿದ ಪ್ರೊಫೆಸರ್ ಬಗ್ಗೆ ಕೆಲವು ದಿನಗಳ ಕೆಳಗೆ ಸಹೋದ್ಯೋಗಿಗಳು ಪದ್ಯವೊಂದನ್ನು ಬರೆದು ಅರ್ಪಿಸಿದ್ದರು. ಅದರಲ್ಲಿ ಸಹೋದ್ಯೋಗಿಗಳ ಪ್ರೀತಿಯೂ ಇರಬಹುದು.  ಈ ನಡುವೆ ಕವಿಯೊಬ್ಬರು ‘ನನ್ನ ಮೇಲೆ ಹಿರಿಯ ಕವಿಯೊಬ್ಬರು ಬರೆದಿರುವ ‘ಬಂಡೆಯಂಥ ಬಲಭೀಮ’ ಎಂಬ ಪದ್ಯವನ್ನು ನೀವು ಓದಲೇಬೇಕು’ ಎಂದರು. ಆ ಕವಿ ಇನ್ನೊಬ್ಬರ ಬಗ್ಗೆ ‘ಚಂದ್ರಕಿರಣದ ಚಂಪಕಮಾಲಾ’ ಎಂಬ ಪದ್ಯವನ್ನೂ ಬರೆದಿರಬಹುದು. ಇವನ್ನೆಲ್ಲ ಬರೆದವರಿಗೆ, ಬರೆಸಿಕೊಂಡವರಿಗೆ ಇದರಿಂದೆಲ್ಲ ಖುಷಿ, ಲಾಭ ಇರಬಹುದು. ಅದೇ ಬೇರೆ ಕತೆ. ಆದರೆ ಅದರಲ್ಲೆಲ್ಲ ಕಾವ್ಯ ಇರುವುದು ಕಷ್ಟ ಅನ್ನಿಸಿ ಓದುವ ಉತ್ಸಾಹ ಮೂಡುವುದಿಲ್ಲ.  

ಮಸಲಾ ವಿಚಾರ: ಯಾವುದೇ ವ್ಯಕ್ತಿಯ ವ್ಯಕ್ತಿತ್ವ, ಕೃತಿಗಳು ಬರೆಯುವರೊಳಗೆ ಆಳವಾಗಿ ಇಳಿಯದಿದ್ದರೆ, ಪ್ರಾಮಾಣಿಕ ಕೃತಿ ಹುಟ್ಟಲಾರದು. ಈ ಮಾತು ಬರೆಯುತ್ತಿರುವಾಗ, ಇಂಗ್ಲಿಷ್ ಕವಿ ಜಾನ್ ಕೀಟ್ಸ್ ತೀರಿಕೊಂಡಾಗ ಅವನ ಕಾಲದ ಕವಿ ಶೆಲ್ಲಿ ಬರೆದ ‘ಅಡೋನಿಸ್’ ಖಂಡ ಕಾವ್ಯ ನೆನಪಾಯಿತು. ಅದರ ಎಳೆ ಮನದಲ್ಲಿ ಉಳಿದಿತ್ತು; ಮತ್ತೆ ಖಂಡ ಕಾವ್ಯ ಓದಿನೋಡಿದೆ. ಜೊತೆಗಾರ ಕವಿಯ ಬಗ್ಗೆ ಪ್ರೀತಿ, ಅವನ ಕೃತಿಗಳ ಬಗ್ಗೆ ಗೌರವ, ಮೋಹ ಇವೆಲ್ಲ ಇದ್ದರೆ ಮಾತ್ರ ಇಂಥ ಅದ್ಭುತ ಶೋಕಗೀತ ಮೂಡಬಲ್ಲದು ಎನ್ನಿಸತೊಡಗಿತು: 

ಇಪ್ಪತ್ತೈದನೇ ವರ್ಷಕ್ಕೆ ತೀರಿಕೊಂಡ ಕೀಟ್ಸ್ ಬಗ್ಗೆ ಬರೆಯಹೊರಟ ಶೆಲ್ಲಿಗೆ ಗ್ರೀಕ್ ಪುರಾಣದ ಅಡೋನಿಸ್ ನೆನಪಾದ. ಅಡೋನಿಸ್ ಗ್ರೀಕ್ ಕತೆಗಳ ಸುರ ಸುಂದರ; ಸೌಂದರ್ಯ ದೇವತೆ ಆಫ್ರೊದಿತಿಯ ಪ್ರಿಯಕರ. ಕೀಟ್ಸ್ ಬರೆದ ‘ಎಂಡೀಮಿಯನ್’ ಕವಿತೆಯನ್ನು ಇಷ್ಟ ಪಡದ ಶೆಲ್ಲಿಗೆ, ಅವನ ‘ಹೈಪೀರಿಯನ್’ ಪದ್ಯ ಓದಿದ ನಂತರ, ಕೀಟ್ಸ್ ಕಾವ್ಯದ ಮಹತ್ವ ಗೊತ್ತಾಗಿತ್ತು. ಕೀಟ್ಸ್‌ಗೆ ಕ್ಷಯರೋಗ ಅಂಟಿಕೊಂಡಾಗ ಇಟಲಿಯ ಪೀಸಾ ನಗರದಲ್ಲಿದ್ದ ಶೆಲ್ಲಿ ಮತ್ತವನ ಪತ್ನಿ ಕೀಟ್ಸ್ ಆರೋಗ್ಯ ಸುಧಾರಿಸಿಕೊಳ್ಳಲು ತಮ್ಮ ಜೊತೆಗಿರುವಂತೆ ಕರೆದರು. ಆಗ ಶೆಲ್ಲಿ, ‘ನನ್ನನ್ನು ಮೀರಿಸುವ ಕವಿಯೊಬ್ಬನನ್ನು ನಾನು ಆರೈಕೆ ಮಾಡಲಿದ್ದೇನೆ ಎಂಬುದು ನನಗೆ ಗೊತ್ತು. ಅದು ಕೂಡ ಅವನನ್ನು ಇಲ್ಲಿಗೆ ಕರೆಯಲು ಕಾರಣ; ಅದು ನನ್ನ ಖುಷಿಯನ್ನು ಹೆಚ್ಚಿಸಿದೆ’ ಎಂದಿದ್ದ. ಶೆಲ್ಲಿಯ ಊರಿಗೆ ಹೊರಟಿದ್ದ ಕೀಟ್ಸ್ ಮಾರ್ಗಮಧ್ಯದಲ್ಲಿ ರೋಮ್‌ನಲ್ಲಿ ತೀರಿಕೊಂಡ. ಆ ಕಾಲದಲ್ಲಿ ಶೆಲ್ಲಿ ಬರೆದ ‘ಅಡೋನಿಸ್’ ಖಂಡಕಾವ್ಯ ‘ಪಾಸ್ಟೊರಲ್ ಎಲಿಜಿ’ ಮಾದರಿಯ ಅಮರ ಕಾವ್ಯವಾಯಿತು.

ಅಡೊನಿಸ್ ತೀರಿಕೊಂಡಿದ್ದಾನೆ; ಬಾ ಯುರೇನಿಯಾ ಶೋಕಿಸು ಎಂದು ದೇವತೆಯನ್ನು ಶೆಲ್ಲಿ ಕರೆಯುತ್ತಾನೆ. ಕೀಟ್ಸನ ಕಾವ್ಯದ ವಸ್ತುವನ್ನು ಕರೆದು ಬಾ ಕವಿಗಾಗಿ ಶೋಕಿಸು ಎನ್ನುತ್ತಾನೆ. ಕಾವ್ಯವಸ್ತು ಬಂದು ಶೋಕಿಸುತ್ತದೆ. ಕೀಟ್ಸ್ ಹಾಡಿಹೊಗಳಿದ ಪ್ರಕೃತಿ ಬಂದು ಶೋಕಿಸುತ್ತದೆ. ಆದರೆ ಪ್ರಕೃತಿಗೆ ಹೊಸ ಜೀವ ಕೊಡುವ ವಸಂತ ಋತು ಕವಿಗೆ ಜೀವ ತುಂಬಲಾರದು. ಯುರೇನಿಯಾ ದೇವಿ ಕವಿಯ ಸಾವಿನ ಕೋಣೆಯವರೆಗೂ ಹೋಗಿ ನಾನು ಸಾವಿನಲ್ಲಿ ನಿನ್ನೊಡನೆ ಸೇರಲಾರೆನಲ್ಲಾ ಎಂದು ಅಳುತ್ತಾಳೆ. ಬೈರನ್, ಶೆಲ್ಲಿ ಥರದ ಜೊತೆಗಾರ ಕವಿಗಳು ಶೋಕಿಸುತ್ತಾರೆ. ಕೀಟ್ಸ್ ಕಾವ್ಯ ಕುರಿತು ‘ಕ್ವಾರ್ಟರ್‍ಲಿ ರಿವ್ಯೂ’ ಪತ್ರಿಕೆಯಲ್ಲಿ ಬಂದ ಅನಾಮಧೇಯ ವಿಮರ್ಶೆ ಕೂಡ ಕವಿಯ ಸಾವಿಗೆ ಕಾರಣ ಎಂದು ಶೆಲ್ಲಿ ತಪ್ಪಾಗಿ ತಿಳಿದ್ದರಿಂದ ಆ ಅನಾಮಧೇಯ ವಿಮರ್ಶಕನೂ ತರಾಟೆಗೆ ಗುರಿಯಾಗುತ್ತಾನೆ. 

‘ಅಡೋನಿಸ್’ ಖಂಡಕಾವ್ಯದ ಕೊನೆಗೆ, ಯಾರೂ ಶೋಕಿಸಬೇಡಿ, ಕೀಟ್ಸ್ ಸತ್ತಿಲ್ಲ ಎನ್ನುತ್ತಾನೆ ಶೆಲ್ಲಿ: ಅವನು ಬದುಕಿದ್ದಾನೆ, ಅವನು ಎದ್ದಿದ್ದಾನೆ. ಸಾವೇ ಸತ್ತು ಹೋಗಿದೆ; ಅವನು ಸತ್ತಿಲ್ಲ. ಅಡೋನಿಸನಿಗಾಗಿ ಶೋಕಿಸದಿರಿ; ಅವನೀಗ ಪ್ರಕೃತಿಯಲ್ಲಿ ಒಂದಾಗಿದ್ದಾನೆ. ಗುಡುಗಿನ ನರಳಿನಿಂದ ಹಿಡಿದು ರಾತ್ರಿಯ ಮಧುರ ಹಕ್ಕಿಯ ಗಾನದವರೆಗೂ ಪ್ರಕೃತಿಯ ಸಂಗೀತದಲ್ಲಿ ಅವನ ದನಿ ಕೇಳಿಸುತ್ತಿದೆ; ಕತ್ತಲಲ್ಲಿ, ಬೆಳಕಿನಲ್ಲಿ ಅವನ ಇರವಿದೆ…ಅವನು ಸತ್ತಿಲ್ಲ; ಬದುಕಿರುವವರೇ ಸತ್ತಿರುವರು ಎನ್ನುತ್ತಾನೆ; ಕೊನೆಗೆ ಸ್ವತಃ ಶೆಲ್ಲಿಗೇ ‘ನಾನೀಗ ಈ ಬದುಕಿನಿಂದ ಹೊರಡಬೇಕು… ಅಮರವಾಗಿ ಉಳಿವವರ ನಡುವೆ ತಾರೆಯಂತೆ ಹೊಳೆವ ಕೀಟ್ಸನ ಕಡೆಗೆ  ತೆರಳಬೇಕು’ ಅನ್ನಿಸುತ್ತದೆ… 

ತನಗೆ ಪ್ರಿಯವಾಗಿದ್ದ 'ಎಂಡೀಮಿಯನ್’ ಪದ್ಯವನ್ನು ಶೆಲ್ಲಿ ಇಷ್ಟಪಡದಿದ್ದುದು ಕೀಟ್ಸನನ್ನು ಬಾಧಿಸಿತ್ತು; ನಂತರದ ’ಹೈಪೀರಿಯನ್’ ಪದ್ಯವನ್ನು ಶೆಲ್ಲಿ ಇಷ್ಟಪಟ್ಟಿದ್ದ. ಆದರೆ ಕೀಟ್ಸ್ ತನ್ನ ಕಾಲದ ದೊಡ್ಡ ಕವಿ ಶೆಲ್ಲಿಯ ಪೂರ್ಣ ಮೆಚ್ಚುಗೆಗಾಗಿ ಕಾತರಿಸುತ್ತಿದ್ದಂತಿತ್ತು. ಆದರೆ ಕೀಟ್ಸ್ ಬದುಕಿದ್ದಾಗಲೇ ಶೆಲ್ಲಿ ಮೆಚ್ಚುಗೆಯ ಕಾವ್ಯ ಬರೆಯುವುದು ಸಾಧ್ಯವಿತ್ತೆ? ಬರೆದಿದ್ದರೆ ಕೀಟ್ಸ್ ಖುಷಿ ಪಡುತ್ತಿದ್ದನೆ? ಆದರೆ ಕೀಟ್ಸ್ ಬದುಕಿದ್ದಾಗ ‘ಅಡೋನಿಸ್’ ಕಾವ್ಯದ ಭಾವ ಉಕ್ಕಿ ಹರಿಯುತ್ತಿತ್ತೆ? ಈ ಥರದ ಪ್ರಶ್ನೆಗಳು ಎದುರಾಗುತ್ತವೆ. 

ಗೆಳೆಯ-ಕತೆಗಾರ ‘ಮೊಗಳ್ಳಿ ಗಣೇಶ್ ಇದ್ದಾಗಲೇ ನೀವು ‘ಮಯೂರದಲ್ಲಿ ಬರೆದ ಬರಹ ಬಂದಿದ್ದರೆ ಬಹಳ ಖುಷಿಪಡುತ್ತಿದ್ದ’ ಎಂದು ಸುಬ್ಬು ಹೇಳಿದ್ದು ನೆನಪಾಯಿತು. ಅದು ನಿಜವಿರಬಹುದು; ಆದರೆ ಯಾವುದೇ ನಿಜವಾದ ಬರಹವನ್ನು ‘ಬರೆಸುವ’ ಭಾವ ಸಹಜವಾಗಿ ‘ಹುಟ್ಟುವ’ ತನಕ ತೀವ್ರವಾಗಿ ಬರೆಯುವುದು ಕಷ್ಟ! ಕೀಟ್ಸ್ ಕುರಿತು ಬರೆಯಬೇಕೆಂದು ಕೀಟ್ಸ್ ಕವಿತೆಗಳೇ ಶೆಲ್ಲಿಯನ್ನು ಬರೆಯುವಂತೆ ಪ್ರೇರೇಪಿಸಿದವಲ್ಲವೆ! ಇಂಥ ಪ್ರೇರೇಪಣೆ ಕವಿ ಇದ್ದಾಗಲೇ ಹುಟ್ಟುವುದಿಲ್ಲವೆ? ಹಾಗೆ ಹುಟ್ಟಲು ಎಂಥದಾದರೂ ತೀವ್ರ ಭಾವ ಒಳಗಿಂದ ಗುದ್ದಿಕೊಂಡು ಬರಬೇಕಲ್ಲವೆ? 

ಬದುಕಿರುವವರ ಮುಲಾಜಿನಲ್ಲಿ ಮುಕ್ತ, ಸ್ವತಂತ್ರ ಭಾವಗಳು ಹುಟ್ಟುವುದು ಕಷ್ಟವೇನೋ!  ಅವು ಮೂಡಿದ್ದು ಮೂಡಿದ ಹಾಗೆಯೇ ಹುಲು ಮಾನವರು ಬರೆಯಬಲ್ಲರೆ? ಹಾಗೆ ಬರೆದವರಿದ್ದಾರೆ. ಏನನ್ನಾದರೂ ಕಾವ್ಯ ಮಾಡಬಲ್ಲ ಅಪ್ಪಟ ಕವಿ, ಕವಯಿತ್ರಿಯರು ಅಂಥದನ್ನು ಬರೆದಿದ್ದಾರೆ. ಸಾವು, ಅಗಲಿಕೆಯಷ್ಟೇ ತೀವ್ರ ಭಾವ ಹುಟ್ಟಿಸಿದ ಉತ್ಕಟ ಪ್ರೇಮ ಕಾಮ ವಿರಹಗಳ ಸಂದರ್ಭದಲ್ಲಿ ಅಂಥ ಅದ್ಭುತ ಕೃತಿಗಳು ಹುಟ್ಟಿವೆ. ಅಂಥವರ ಸಂತತಿ ಹೆಚ್ಚಲಿ! 
 
ಕೊನೆ ಟಿಪ್ಪಣಿ: ಮತ್ತೆ ಹರಿಶ್ಚಂದ್ರ! 

ಮನುಜರ ಮೇಲೆ ಕಾವ್ಯ ಬರೆವ ಕಷ್ಟ, ಹರಿಶ್ಚಂದ್ರ ಕಾವ್ಯ ಬರೆದ ರಾಘವಾಂಕನ ಕಷ್ಟ… ಇದರ ಬಗ್ಗೆ ಬರೆಯುತ್ತಿರುವಾಗಲೇ ರಾಜಪ್ಪ ದಳವಾಯಿಯವರ ‘ಹರಿಶ್ಚಂದ್ರ’ಕ್ಕೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ಹುಟ್ಟಿದ ಆ ಕ್ಷಣದ ಮೆಚ್ಚುಗೆ:   

‘ಶಿಷ್ಯವತ್ಸಲ’ ಬಿರುದಾಂಕಿತ ಗೆಳೆಯ ರಾಜಪ್ಪ ದಳವಾಯಿ ಮಾಡಿರುವ ‘ಹರಿಶ್ಚಂದ್ರ’ ಕಿರು ಸಿನಿಮಾಕ್ಕೆ ಕೊಚ್ಚಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಬಂದಿದೆ. ಅದರಲ್ಲಿ ಪಾತ್ರ ಮಾಡಿರುವ ಸಂಪತ್ ಮೈತ್ರೇಯ ನನ್ನ ಪ್ರೀತಿಯ ನಟ. ಈ ಗೆಳೆಯರಿಬ್ಬರೂ ನನ್ನೊಳಗೆ ಇರುವವರು. ಆದ್ದರಿಂದಲೋ ಏನೋ, ಈ ಮೆಚ್ಚುಗೆ ಈ ಗಳಿಗೆಯಲ್ಲಿ ತಂತಾನೇ ಹುಟ್ಟಿತು…ಇದು ದಳವಾಯಿಯೊಳಗೆ ನೆಲೆಸಿ ನಿತ್ಯ ಬೆಳೆಯುವ ಸಾವಿರಾರು ಕನ್ನಡ ಸಾಹಿತ್ಯ ಪಠ್ಯಗಳ ವಿಶಿಷ್ಟ ಜ್ಞಾನ; ಸಂಪತ್ ಮೈತ್ರೇಯನ ಅನನ್ಯ ನಟನಾಪ್ರತಿಭೆ- ಇವು ತಂತಾವೇ ಹುಟ್ಟಿಸಿದ ಮೆಚ್ಚುಗೆ ಕೂಡ. 
ಚಿಯರ್‍ಸ್!
 

Share on:

Comments

14 Comments



| Gangaraju G

" 'ಬರೆಸುವ ಭಾವ ಸಹಜವಾಗಿ 'ಹುಟ್ಟುವ' ತನಕ‌ ತೀವ್ರವಾಗಿ ಬರೆಯುವುದು ಕಸ್ಟ!" ನಿಮ್ಮ‌ ಈ‌ ಮಾತು‌ ಅಕ್ಷರಶ: ನಿಜ. ಮೊಗಳ್ಳಿ ತೀರಹೋದ‌ ಸುದ್ದಿ ಕಿವಿಗೆ ಬಿದ್ದ ನಂತರ ನನ್ನಲಿ ಮೂಡಿದ ಭಾವನೆಗಳು ಮುಂಜಾನೆ ಮೂರುಗಂಟೆವರೆಗೂ ಮೊಗಳ್ಳಿ ಬಗೆಗೆ ಒಂದು ಆಪ್ತ ಲೇಖನ ಬರೆವಂತೆ ಕಾಡಿದ್ದು ಮರೆಯಲಾರೆ. ಲಂಕೇಶರು ಕಾಲವಾಗುವವರೆಗೂ ಲಂಕೇಶರ ವಿಚಾರಗಳ ವಕ್ತಾರರಂತೆ ಇದ್ದ ಅನೇಕರು ಈಗ ಅದಕ್ಕೆ ಸಂಪೂರ್ಣ ವಿರುದ್ದವಾದ ರಾಜಕೀಯ ಶಕ್ಕಿಗಳೊಂದಿಗೆ ಬೆರೆತುಹೋಗಿರುವುದು, ಲಂಕೇಶ್ ಮತ್ತು ತೇಜಸ್ವಿ ಸಾಹಿತ್ಯದ 'ಕರುಳ ದನಿ' ಆಲಿಸದೆ ಅವರ ಸಾಹಿತ್ಯೇತರ ಭಾಷೆ, ನಡವಳಿಕೆಗಳಲ್ಲಿ ಮೇಲುಜಾತಿಯ ಅಹಂಕಾರ, ಠೇಂಕಾರ ಹುಡುಕಿ ಗೋರಿ ಅಗೆಯುತ್ತಿರುವುದು ಬದುಕಿರುವವರ ಮುಲಾಜಿನಿಂದ ಬಿಡಿಸಿಕೊಂಡಿರುವ ಜಗೆಯೋ ಸತ್ತರೂ ಸಾಯದ 'ಸತ್ತವರ ನೆರಳ' ಭಯದ ದುರುಳೀಕರಣ ತಂತ್ರವೋ ಹೇಳಲಾಗದು.


| Dharmendra

I liked it. Thanks


| Suresha B

ತಟ್ಟನೆ ಅ.ನ.ಕೃ ಅವರ ಭಾಷಣ ಒಂದರಲ್ಲಿ ಬಂದ phrase ನೆನಪಾಯಿತು. "ಇದ್ದಾಗ ಮಾರಕ, ಸತ್ತಮೇಲೆ ಸ್ಮಾರಕ" ಅಂತ ಆ ಮಾತು. ಆ ಮಾತಿಗೂ ನಿಮ್ಮ ಲೇಖನಕ್ಕೂ ಸಂಬಂಧ ಇಲ್ಲ. ಆದರೂ ಸೃಜನಶೀಲರಿಗೆ ಚಪ್ಪಾಳೆ ಸದ್ದು ಬೇಕಾಗುತ್ತದೆ ಎಂಬುದು ನನ್ನ ಒಂದು ಇದು... 😊


| ಕೆ. ಪಿ. ನಾರಾಯಣಪ್ಪ

ಬಸವಣ್ಣ-ಹರಿಹರರ ಬಗ್ಗೆ ಬರೆಯಲು ಹೊರಟ ನೀವು ಕೀಟ್ಸ್ ಮತ್ತು ಶೆಲ್ಲಿ ಬಗ್ಗೆ ಬರೆದದ್ದು ಔಚಿತ್ಯಪೂರ್ಣವಾಗಿದೆ. ಇಂಥ ಲೇಖನ ಓದಿದಾಗ ಡಿಆರ್ ಎನ್, ಲಂಕೇಶ್ ನೆನಪಾಗುತ್ತಾರೆ. ಅವರ ಕೊಂಡಿ ಎನ್ನಿಸುತ್ತದೆ. ಲೇಖನ ಓದಿ ಮನ ಮಿಡಿಯಿತು-ಶೆಲ್ಲಿ ಕಿಟ್ಸ್ ಬಗ್ಗೆ ಬರೆದ ನುಡಿ ಓದಿ. ಶೆಲ್ಲಿ ಆಹ್ವಾನದ ಮೇರೆಗೆ ಅವರಲ್ಲಿಗೆ ಹೊರಟ ಕೀಟ್ಸ್ ಮರ್ಗ ಮಧ್ಯದಲ್ಲಿ ನಿಧನರಾದ ಘಟನೆ ಓದಿ ಮನ........ ಪದ ಸಿಗುತ್ತಿಲ್ಲ. ಕ್ಷಮಿಸಿ. ಲೇಖನ ಮನದ ಕದ ತಟ್ಟಿತು. ಅಭಿನಂದನೆಗಳು ಸರ್


| ಮಹಾಲಿಂಗೇಶ್ವರ್

ಸೊಗಸಾಗಿದೆ


| ಬಂಜಗೆರೆ ಜಯಪ್ರಕಾಶ

ಬದುಕಿದ್ದವರ ಬಗ್ಗೆ ಬರೆಯುವುದು, ಎದುರು ಕುಳಿತಿರುವವರ ಬಗ್ಗೆ ಮಾತನಾಡುವುದು ಪೂರಾ ವಸ್ತುನಿಷ್ಠವಾಗಿರೋದು ಕಷ್ಟ. ಉತ್ಕಟ ಭಾವ ಒದ್ದುಕೊಂಡು ಬಂದಾಗ ಮೂಡುವ ಬರಹದ ತೀವ್ರತೆ, ಒತ್ತಾಯಕ್ಕೆ ಬರೆದ ಬರಹಕ್ಕಿರಲ್ಲ ಅನ್ನೋ ಸತ್ಯ ಬಹಳ ಬರಹಗಾರರ ಭಾವಕ್ಕೆ ತಾಕಿರುತ್ತೆ. ಅದೆಷ್ಟಿದ್ದರೂ ಒತ್ತಿಗಿಟ್ಟು ಮಾಗಿಸಿದ ಹಣ್ಣು.


| DEVINDRAPPA

ಮನುಜರ ಮೇಲೆ ಬರೆಯುವುದು ಲೇಖನ ಓದಿದಾಗ ಮನುಜರು ಬದುಕಿದ್ದಾಗ ಅನ್ನಿಸಿದ್ದನ್ನು ಬರೆಯೋದು ಕಷ್ಟ. ಆದರೆ ಅವರು ಇಲ್ಲದೆ ಇರುವಾಗಲೂ ಕೂಡ ಬರೆಯುವುದು ಕಷ್ಟ. ಮುಕ್ತವಾಗಿ ಪ್ರಶಂಸೆ ಮಾಡುವ ಸಂದರ್ಭ ಇದ್ದಾಗ್ಯೂ ಅವರು ಅದನ್ನು ಸ್ವೀಕರಿಸುವುದಿಲ್ಲ. ತೆಗಳಿಕೆಗೂ ಜಗ್ಗುವುದಿಲ್ಲ. ತಮ್ಮ ಪಾಡಿಗೆ ತಾವು ಕಾಯಕದಲ್ಲಿ ನಿರತರಾಗಿರುತ್ತಾರೆ. ವಚನಕಾರ ಬಸವಣ್ಣನ ಕುರಿತು ಆ ಸಂದರ್ಭದಲ್ಲಿಯೇ ಚೆನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವರ ವಚನಗಳಲ್ಲಿ ಉಲ್ಲೇಖ ಸಿಗುತ್ತದೆ. ಅವರು ಕೂಡ ಬಸವಣ್ಣನನ್ನು ಆದಿ ಪುರುಷನ ರೀತಿಯಾಗಿ ವರ್ಣಿಸಿದ್ದಾರೆ. ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರು ಎಂಬ ಭಾವ ಅಲ್ಲಿದೆ. ಪಾಶ್ಚಾತ್ಯರಲ್ಲಿ ಬಹುಶಃ ಕವಿತೆಗಳನ್ನು ರಚಿಸಲು ತುಂಬಾ ಆತ್ಮೀಯರ ಅಗಲಿಕೆಯೇ ಪ್ರಮುಖ ಕಾರಣ ಎಂದು ನನಗನ್ನಿಸಿದೆ. ವರ್ಡ್ಸ್ವರ್ತ್, ಬೋದಿಲೇರ್ ಮುಂತಾದ ಕವಿಗಳು. ಪ್ರೇಯಸಿಯ ಅಗಲಿಕೆಯಿಂದ ಅವರು ಕಾವ್ಯ ರಚನೆಗೆ ಇಳಿದದ್ದು ವಿಶೇಷ. ಅಗಲಿಕೆ ಕೆಲವರಿಗೆ ಶಾಶ್ವತವಾದ ಮರೀಚಿಕೆಯಾದರೆ ಇನ್ನೂ ಹಲವರಿಗೆ ಮತ್ತೆ ಮತ್ತೆ ಹೊಸ ಜನ್ಮ ಪಡೆಯುವ ವ್ಯಕ್ತಿಯಾಗಿ ಕಾಣಿಸುತ್ತಾರೆ. ಶೆಲ್ಲಿ ಕೀಟ್ಸ್ ಬಗ್ಗೆ ಬರೆದ ಪದ್ಯ ಇದನ್ನೇ ಬಿಂಬಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ ಶೋಕಗೀತೆ ರಚನೆಯಾದದ್ದು ಇದೆ ಕಾರಣಕ್ಕೆ ಸಾಲಿ ರಾಮಚಂದ್ರರಾಯರು ಮತ್ತು ಪಂಜೆಯವರು ಆರಂಭದಲ್ಲಿ ತಮ್ಮನ್ನು ಅಗಲಿದ ವ್ಯಕ್ತಿಗಳಿಗಾಗಿ ಶೋಕಗೀತೆ ಬರೆದು ನುಡಿ ನಮನ ಸಲ್ಲಿಸಿದ್ದಾರೆ. ಇದು ಇಂದಿಗೂ ಮುಂದುವರೆದಿದೆ. ಬಹುಶಃ ಕನ್ನಡದಲ್ಲಿ ಅತೀ ಹೆಚ್ಚು ಗಾಂಧೀಜಿ ಕುರಿತು ಬರೆದ ಕವಿತೆಗಳು ಸಿಗುತ್ತವೆ. ಅವುಗಳೆಲ್ಲವೂ ಗಾಂಧೀಜಿಯ ಮರಣದ ನಂತರ ರಚನೆಗೊಂಡದ್ದು ವಿಶೇಷ.


| Somanna

Baraha super 👌 namaste 🙏


| ಚಂದ್ರಶೇಖರ ತಾಳ್ಯ

ಹರಿಹರ ಮಹಾಕವಿಯ ತುರ್ತನ್ನು ಅರ್ಥ ಮಾಡಿಕೊಳ್ಳಬೇಕೆನಿಸುತ್ತೆ, ಪುರೋಹಿತಶಾಹಿ ಮುಳುಗಿಸಿದ್ದ ಹಡಗನ್ನು ಮೇಲೆತ್ತಲು ಆ ತಂತ್ರ ಬಳಸಿರಬಹುದಲ್ಲವೇ? ಕಳವಳವಿಲ್ಲದ ಕಾಲದ ಮರೆಗೆ ಬಸವ ಸಂದು ಮಸುಕಾಗಬಾರದೆಂಬ ತವಕವೂ ಇದ್ದೀತು. ಇಲ್ಲದೇ ಹೋಗಿದ್ದರೆ ಬಸವಣ್ಣ ನಮ್ಮ ಕಾಲಕ್ಕೂ ಉಳಿದು ಬೆಳಗುತ್ತಿದ್ದನೆ? ಲೇಖನ ಓದಿದ ತತ್ ಕ್ಷಣ ನನ್ನೊಳಗೆ ಸುಳಿದ ಪ್ರಶ್ನೆಗಳಿವು. ಉಳಿದಂತೆ ಲೇಖನದ ಎಲ್ಲ ವಿಚಾರಗಳು ಸ್ವಸ್ತ. ಬದುಕಿದ್ದಾಗ ಯಾರ ಬಗ್ಗೆ ಬರೆದರೂ ಅದು ಅಧರ ತುರ್ತು


| ಸೋಮಶಂಕರ ವಿ ಸುಣ್ಣಂಗೂರು

ಕವಿ ಬರಹಗಾರ, ತನ್ನ ಭಾವನೇರಕ್ಕೆ ವಸ್ತುವನ್ನು ಕಟ್ಟಿ ನಿಲ್ಲಿಸುವ ಸಂಪ್ರದಾಯಕ್ಕೆ ಅಡಿಗಲ್ಲು ಬಿದ್ದಿರುವುದು ಪಂಪನ ಆದಿಪುರಾಣದಿಂದಲೇ ಸುರವಾಗಿರಬೇಕು ಅನಿಸುತ್ತದೆ, ಇಂದಿಗೂ ಆ ಕಟ್ಟಡದ ಮೇಲೆ ಕಲ್ಲು ಜೋಡಿಸುವ, ಬೆಳೆಸುವ ಕೆಲಸ ನಿಲ್ಲುವಂತೆ ಕಾಣುತ್ತಿಲ್ಲ ಸರ್.


| Dalavayi

ತುಂಬಾ ಚೆನ್ನಾದ ಲೇಖನ. ಮಧ್ಯಕಾಲೀನ ಕನ್ನಡ ಧೋರಣೆಯ ಬಗ್ಗೆ ಉತ್ತಮ ವಿಶ್ಲೇಷಣೆ.


| Dalavayi

ತುಂಬಾ ಚೆನ್ನಾದ ಲೇಖನ. ಮಧ್ಯಕಾಲೀನ ಕನ್ನಡ ಧೋರಣೆಯ ಬಗ್ಗೆ ಉತ್ತಮ ವಿಶ್ಲೇಷಣೆ.


| ದೇವಿಂದ್ರಪ್ಪ ಬಿ.ಕೆ.

ಮನುಜರ ಮೇಲೆ ಬರೆಯುವುದು ಲೇಖನ ಓದಿದಾಗ ಮನುಜರು ಬದುಕಿದ್ದಾಗ ಅನ್ನಿಸಿದ್ದನ್ನು ಬರೆಯೋದು ಕಷ್ಟ. ಆದರೆ ಅವರು ಇಲ್ಲದೆ ಇರುವಾಗಲೂ ಕೂಡ ಬರೆಯುವುದು ಕಷ್ಟ. ಮುಕ್ತವಾಗಿ ಪ್ರಶಂಸೆ ಮಾಡುವ ಸಂದರ್ಭ ಇದ್ದಾಗ್ಯೂ ಅವರು ಅದನ್ನು ಸ್ವೀಕರಿಸುವುದಿಲ್ಲ. ತೆಗಳಿಕೆಗೂ ಜಗ್ಗುವುದಿಲ್ಲ. ತಮ್ಮ ಪಾಡಿಗೆ ತಾವು ಕಾಯಕದಲ್ಲಿ ನಿರತರಾಗಿರುತ್ತಾರೆ. ವಚನಕಾರ ಬಸವಣ್ಣನ ಕುರಿತು ಆ ಸಂದರ್ಭದಲ್ಲಿಯೇ ಚೆನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವರ ವಚನಗಳಲ್ಲಿ ಉಲ್ಲೇಖ ಸಿಗುತ್ತದೆ. ಅವರು ಕೂಡ ಬಸವಣ್ಣನನ್ನು ಆದಿ ಪುರುಷನ ರೀತಿಯಾಗಿ ವರ್ಣಿಸಿದ್ದಾರೆ. ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರು ಎಂಬ ಭಾವ ಅಲ್ಲಿದೆ. ಪಾಶ್ಚಾತ್ಯರಲ್ಲಿ ಬಹುಶಃ ಕವಿತೆಗಳನ್ನು ರಚಿಸಲು ತುಂಬಾ ಆತ್ಮೀಯರ ಅಗಲಿಕೆಯೇ ಪ್ರಮುಖ ಕಾರಣ ಎಂದು ನನಗನ್ನಿಸಿದೆ. ವರ್ಡ್ಸ್ವರ್ತ್, ಬೋದಿಲೇರ್ ಮುಂತಾದ ಕವಿಗಳು. ಪ್ರೇಯಸಿಯ ಅಗಲಿಕೆಯಿಂದ ಅವರು ಕಾವ್ಯ ರಚನೆಗೆ ಇಳಿದದ್ದು ವಿಶೇಷ. ಅಗಲಿಕೆ ಕೆಲವರಿಗೆ ಶಾಶ್ವತವಾದ ಮರೀಚಿಕೆಯಾದರೆ ಇನ್ನೂ ಹಲವರಿಗೆ ಮತ್ತೆ ಮತ್ತೆ ಹೊಸ ಜನ್ಮ ಪಡೆಯುವ ವ್ಯಕ್ತಿಯಾಗಿ ಕಾಣಿಸುತ್ತಾರೆ. ಶೆಲ್ಲಿ ಕೀಟ್ಸ್ ಬಗ್ಗೆ ಬರೆದ ಪದ್ಯ ಇದನ್ನೇ ಬಿಂಬಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ ಶೋಕಗೀತೆ ರಚನೆಯಾದದ್ದು ಇದೆ ಕಾರಣಕ್ಕೆ ಸಾಲಿ ರಾಮಚಂದ್ರರಾಯರು ಮತ್ತು ಪಂಜೆಯವರು ಆರಂಭದಲ್ಲಿ ತಮ್ಮನ್ನು ಅಗಲಿದ ವ್ಯಕ್ತಿಗಳಿಗಾಗಿ ಶೋಕಗೀತೆ ಬರೆದು ನುಡಿ ನಮನ ಸಲ್ಲಿಸಿದ್ದಾರೆ. ಇದು ಇಂದಿಗೂ ಮುಂದುವರೆದಿದೆ. ಬಹುಶಃ ಕನ್ನಡದಲ್ಲಿ ಅತೀ ಹೆಚ್ಚು ಗಾಂಧೀಜಿ ಕುರಿತು ಬರೆದ ಕವಿತೆಗಳು ಸಿಗುತ್ತವೆ. ಅವುಗಳೆಲ್ಲವೂ ಗಾಂಧೀಜಿಯ ಮರಣದ ನಂತರ ರಚನೆಗೊಂಡದ್ದು ವಿಶೇಷ.


| Shamarao

ನಾನು ಕೇಳಿರದ ಹೆಸರು ವಿಟಗನ್ ಸ್ಟೈನ್. ಇನ್ನು ಅವರನ್ನು ಓದಿರುವ ಮಾತೇ ಇಲ್ಲ. ನನ್ನ ಕೊರತೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಇನ್ನು ಶಿಷ್ಯನಿಂದ ಪರಾಜಿತನಾಗಲು ಒಪ್ಪುವ ಗುರು ಎಲ್ಲಿದ್ದಾರೆ!




Add Comment


Mundana Kathana Nataka

YouTube






Recent Posts

Latest Blogs