‘ಸಿನಿಕರ ನಡುವೆ ಶ್ರದ್ಧೆ’ ಎಂಬ ಚಿರ ರೂಪಕ!
by Nataraj Huliyar
ಕಾಲ ಇಷ್ಟೊಂದು ವೇಗವಾಗಿ ಉರುಳುವುದನ್ನು ಯಾವಾಗ ಕಲಿಯಿತು!
'ಗಾಳಿ ಬೆಳಕು' ಅಂಕಣದ ಮೂರನೆಯ ಅವತಾರ ಮೂರನೆಯ ವರ್ಷಕ್ಕೆ ಅಡಿಯಿಟ್ಟದ್ದನ್ನು natarajhuliyar.com ವೆಬ್‌ಸೈಟ್ ನಡೆಸುವ ಸಮಂತ್ ನೆನಪಿಸಿದಾಗ ಅಚ್ಚರಿಯಾಯಿತು.
ಆ ಬಗ್ಗೆ ಬರೆಯುವುದೋ, ಎಂದಿನಂತೆ ಅಂಕಣ ಬರೆಯುವ ಹವ್ಯಾಸ ಗಳಿಗೆಗಳಲ್ಲಿ ಕೆಣಕುವ-ಆಹ್ವಾನಿಸುವ- ಪ್ರೇರೇಪಿಸುವ ವಸ್ತುವಿನ ಸುತ್ತ ಹೊರಡುವುದೋ ಎಂದುಕೊಳ್ಳುತ್ತಿದ್ದವನನ್ನು ಕಿರಿಯ ಮಿತ್ರ ಚರಣ್ ಕಳೆದ ವಾರದ 'ಶಾಂತವೇರಿ ಡೈರಿ’ ಓದಿ ಬರೆದ ಪತ್ರ ಬೇರೊಂದು ದಿಕ್ಕಿಗೆ ಒಯ್ದಿತು. ಚರಣ್ ಶಾಂತವೇರಿಯವರ ಡೈರಿಯ ಭಾಗಗಳನ್ನಷ್ಟೇ ಅಲ್ಲ, ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ಪ್ರಕಟಿಸಿರುವ ನನ್ನ 'ಶಾಂತವೇರಿ ಗೋಪಾಲಗೌಡ’ ಜೀವನ ಚರಿತ್ರೆಯನ್ನೂ ಓದಿ ಪ್ರತಿಕ್ರಿಯೆ ಬರೆದಿದ್ದ.
ಮೊದಲಿಗೆ ಚರಣ್ ಬರೆದ ಪತ್ರ:
‘ರಾಜಕೀಯ ಕುರಿತು ತಿಳಿದುಕೊಳ್ಳಲು, ತಾವು ರಚಿಸಿರುವ ಗೋಪಾಲಗೌಡರ ಜೀವನಚರಿತ್ರೆ ಓದಿದ ಮೇಲೆ, ಕ್ಷುಲ್ಲಕ ವೈಯಕ್ತಿಕ ಪ್ರತಿಷ್ಠೆಗೆ ಮಾಡುವ ರಾಜಕಾರಣಗಳಾಚೆ, ಜನಜೀವನದ ಉದ್ಧಾರದ ಉದ್ದೇಶಕ್ಕಾಗಿ ಮಾಡಿದ ಗೋಪಾಲಗೌಡರ ರಾಜಕಾರಣ ಕಂಡು, "ಇಲ್ಲ, ರಾಜಕಾರಣ ಅಂದ್ರೆ ನಾವು ಇಲ್ಲಿಯತನಕ ಅಂದುಕೊಂಡಂತೆ ಸಣ್ಣದ್ದಲ್ಲ" ಎನಿಸತೊಡಗಿತು. ಇವತ್ತಿನ ರಾಜಕಾರಣ ಜಾತಿ, ಮತ, ಹಣ, ದರ್ಪ, ಕೊಲೆ ಇವುಗಳ ಮೇಲೆ ನಡೆಯುತ್ತಿದೆ. ರಾಜಕಾರಣ ಎಷ್ಟು ಅವಶ್ಯಕ ಎಂಬ ಪ್ರಾಥಮಿಕ ತಿಳುವಳಿಕೆ ಮೂಡಿಸಲಾಗದಷ್ಟು ನಮ್ಮ ಮನೆ, ಬೀದಿ, ಶಾಲೆ, ಕಾಲೇಜು ಮುಂತಾದ ಸಂಸ್ಥೆಗಳು ಮೋಸ ಮಾಡಿವೆ ಅಥವಾ ಅಧಿಕಾರಸ್ಥರು ಆ ವಾತಾವರಣವನ್ನು ನಿರ್ಮಿಸಿದ್ದಾರೆ. ಇವತ್ತು ರೀಲ್ಸ್ ಮೂಲಕ political leaning ನಿರ್ಧಾರ ಆಗುತ್ತಿದೆಯೇ ವಿನಾ ಪ್ರಾಮಾಣಿಕ ಬೌದ್ಧಿಕ ಸಂವಾದದಿಂದ ಅಲ್ಲ. ಪರ್ಯಾಯ ಎಂದು ಬಿಂಬಿಸಿಕೊಳ್ಳುತ್ತಿರುವ ಉಪೇಂದ್ರರ ಪ್ರಸಿದ್ಧ ’ಪ್ರಜಾಕೀಯ’ವು ಮರುಳು ಮಾಡುವಂತೆ, ಸಮಾಜದ ಮುಖ್ಯ ಸಮಸ್ಯೆಗಳೇ ಇಲ್ಲವೆಂಬಂತೆ, ವಿಚಿತ್ರ ಟೊಳ್ಳುತನದ ಪಾಯದ ಮೇಲೆ ನಿಂತಿದೆ. ಯುವಕರಿಗೆ ಇದೇ ಇಷ್ಟವಾಗುತ್ತಿದೆ. ಮೋಸವನ್ನು, ಭ್ರಷ್ಟಾಚಾರವನ್ನು ಒಂದು ತರ ವೈಭವೀಕರಿಸಿ ಅಥವಾ ಗ್ರೇಟೀಕರಿಸಿ ನಾವೆಲ್ಲ ನಮಗೆ ಜನಕ್ಕೆ ಮೋಸ ಮಾಡುತ್ತಿದ್ದೇವೆ ಅನ್ನಿಸುತ್ತದೆ. ಇದಕ್ಕೆಲ್ಲ ಕಾರಣ ಸಾಂಸ್ಕೃತಿಕ ರಾಜಕಾರಣ, ಸಾಮಾಜಿಕ ರಾಜಕಾರಣ ಮತ್ತು ಆರ್ಥಿಕ ರಾಜಕಾರಣದ ಅನಕ್ಷರತೆ ಅನಿಸುತ್ತದೆ. ಇದು ನಮ್ಮನ್ನು ಅನೈಕ್ಯತೆಯ ಎಡೆಗೆ ಮುಖಮಾಡಿ ನಿಲ್ಲಿಸಿ ಆಸಕ್ತಿಹೀನರನ್ನಾಗಿ ಮಾಡಿದೆ. ಆದರೆ ಗೋಪಾಲಗೌಡರ ಜೀವನಚರಿತ್ರೆ ಓದಿದಾಗ ಸಾಹಿತ್ಯ-ಸಂಗೀತ-ರಾಜಕಾರಣ ಮಿಳಿತವಾದ ಪ್ರಾಮಾಣಿಕ ವ್ಯಕ್ತಿತ್ವ ಮೈಯಲ್ಲಿ ಪುಳಕ ಹುಟ್ಟಿಸಿತು; ಹಾಗೇ ಭರವಸೆಯನ್ನೂ ಕೂಡ.’
ಆಲೋಚನೆ ಸ್ಪಷ್ಟವಾಗಿದ್ದರೆ ಭಾಷೆಯೂ ಸ್ಪಷ್ಟವಾಗಿರಬಲ್ಲದು ಎಂಬುದನ್ನು ಚರಣ್ ಬರವಣಿಗೆ ಕೂಡ ಸೂಚಿಸುತ್ತದೆ. ನಾನು ಗಮನಿಸುವ ಈ ಕಾಲದ ಅನೇಕ ಹುಡುಗ ಹುಡುಗಿಯರ ಭಾಷೆಯಲ್ಲಿ ಎಲ್ಲರನ್ನೂ ತಲುಪಬಲ್ಲ ಸರಳ ಕಮ್ಯುನಿಕೇಟೀವ್ ಶಕ್ತಿ ಇದೆ. ಆದರೆ ಇವರೆಲ್ಲ ತಂತಮ್ಮ ತಕ್ಷಣದ ಪ್ರತಿಕ್ರಿಯೆಗಳ ಆಚೆಗೆ ಗಂಭೀರವಾದ ವಸ್ತುಗಳನ್ನು ನಿರ್ವಹಿಸುವಾಗ ಹಾಗೂ ಸುದೀರ್ಘ ನಿರೂಪಣೆಗಳನ್ನು ಬರೆಯಲು ಹೊರಟಾಗ ಈ ಭಾಷೆ ಹೇಗೆ ಬೆಳೆಯುತ್ತದೆ ಎನ್ನುವುದರ ಮೇಲೆ ಇವರ ಬರವಣಿಗೆಯ ಮುಂದಿನ ದಿಕ್ಕು ನಿಂತಿದೆ ಅನ್ನಿಸುತ್ತದೆ.
ಚರಣ್ ಎರಡು ವರ್ಷದ ಕೆಳಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಿಕ್ಕಾಗ ಬಿ.ಎ. ಪತ್ರಿಕೋದ್ಯಮ ಓದುತ್ತಿದ್ದ. ಚಡಪಡಿಕೆಯ ರಾಜಕಾರಣಿ ರವಿಕೃಷ್ಣಾರೆಡ್ಡಿಯವರ ಜೊತೆ ಅಡ್ಡಾಡುತ್ತಿದ್ದ. ’ಈ ದಿನ.ಕಾಂ’ನಲ್ಲೂ ಬರೆದ. ಎಲ್ಲ ಕಾಲದಲ್ಲೂ ಮೂಡಿ ಬರುವ ಇಂಥ ಹೊಸ ಲೇಖಕ, ಲೇಖಕಿಯರ ಬೆಳೆಯ ಬಗ್ಗೆ ನಾನು ಸದಾ ಆಶಾವಾದಿ. ಥಿಯೇಟರ್, ಕವಿತೆ, ಕತೆ, ರಾಜಕಾರಣ, ಟೀಚಿಂಗ್, ಚಳುವಳಿ, ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾ ಮುಂತಾಗಿ ಹಲವು ದಿಕ್ಕಿನಲ್ಲಿ ಆರೋಗ್ಯವನ್ನು ಬಿತ್ತಿ ಬೆಳೆಯುತ್ತಲೇ ಇರುವ ಇಂಥ ನೂರಾರು ಹೊಸ ಹುಡುಗ, ಹುಡುಗಿಯರು ಕರ್ನಾಟಕದ ಎಲ್ಲೆಡೆ ಆಸೆ, ಭರವಸೆ ಹುಟ್ಟಿಸುತ್ತಿರುತ್ತಾರೆ. ಹಾಗೆಯೇ ನಾನು ಒಡನಾಡುವ ಹಲವು ತಲೆಮಾರಿನ ಹಿರಿಯ ಕಿರಿಯ ಗೆಳೆಯ ಗೆಳತಿಯರು ಕೂಡ. ಇವರೆಲ್ಲರ ಒಳಿತಿನ ಪ್ರಜ್ಞೆ, ಬದ್ಧತೆ, ಚಡಪಡಿಕೆ, ನೈತಿಕ ಶಕ್ತಿಗಳು ನಮ್ಮ ಸುತ್ತ ಹೂಂಕರಿಸುವ ಈವಿಲ್‌ಗಳನ್ನು ತಂತಮ್ಮ ಮಿತಿಯಲ್ಲೇ ಹಿಮ್ಮೆಟ್ಟಿಸುತ್ತಿರಬಲ್ಲವು ಎಂಬ ನಿರೀಕ್ಷೆ ಮೂಡುತ್ತಲೇ ಇರುತ್ತದೆ…
ಇಂಥವರ ಜೊತೆ ಇರಲು ಈ ಅಂಕಣ ಎಂಬುದು ನಿಮಗೆಲ್ಲ ಗೊತ್ತಿರುತ್ತದೆ.
ಈ ಕುರಿತು ಹೆಚ್ಚು ಹೇಳದೆ, ಐವತ್ತು ಅರವತ್ತು ವರ್ಷಗಳ ಕೆಳಗೆ ಪ್ರತಿ ತಲೆಮಾರೂ ತನ್ನ ಆದರ್ಶ, ಗುರಿಗಳನ್ನು ಹುಡುಕಿಕೊಳ್ಳುತ್ತಿರುತ್ತದೆ ಎಂದು ನಂಬಿ ಕೆಲಸ ಮಾಡುತ್ತಿದ್ದ ರಾಮಮನೋಹರ ಲೋಹಿಯಾ ಹೊಸ ತಲೆಮಾರನ್ನು ಕುರಿತು ಆಡಿದ ಮಾತುಗಳನ್ನು ಮತ್ತೆ ಕೇಳಿಸಿಕೊಳ್ಳುತ್ತಾ ಇಲ್ಲಿ ಕೊಡುತ್ತಿರುವೆ. ಕೆ.ವಿ. ಸುಬ್ಬಣ್ಣ ಅನುವಾದಿಸಿದ 'ಸತ್ಯ, ಕ್ರಿಯೆ, ಪ್ರತಿಭಟನೆ ಮತ್ತು ವ್ಯಕ್ತಿತ್ವ ನಿರ್ಮಾಣ’ ಲೇಖನದಿಂದ ಆಯ್ದ ಭಾಗ:
‘ಕ್ರಾಂತಿಕಾರರು ಅನೇಕ ಸಲ ತಾವು ಎಲ್ಲಿಂದ ಹೊರಟೆವು ಎಂಬುದನ್ನೇ ಮರೆತುಬಿಡುವುದುಂಟು. ತಮ್ಮ ಜನಕೋಟಿಗೋ ಅಥವಾ ಮಾನವಕುಲಕ್ಕೋ ಸತ್ಯ, ಕಾರ್ಯಶೀಲತೆ, ಔದಾರ‍್ಯ ಮುಂತಾದ ಸದ್ಗುಣಗಳ ಸಂಸ್ಕಾರ ಕೊಡುವುದಕ್ಕೆ ಕ್ರಾಂತಿ ಬೇಕು ಎಂಬ ನೆಲೆಯಿಂದಲೇ ಅವರು ಹೊರಟಿರಬಹುದು. ಆದರೆ ಒಮ್ಮೆ ಅವರು ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಕ್ರಾಂತಿಯ ಆರಂಭಕ್ಕೆ ತಮ್ಮನ್ನು ತೆತ್ತುಕೊಂಡರೆಂದರೆ, ಆಮೇಲೆ ತಮ್ಮ ಗುರಿಯ ಮೂಲ ಕಾರಣಗಳನ್ನೇ ಮರೆತುಬಿಡುವುದುಂಟು. ಕ್ರಾಂತಿಯ ತ್ವರೆ ಕೂಡ ಅವರನ್ನು ಹಾದಿಯಿಂದ ಅಡ್ಡ ಹಚ್ಚಿಬಿಡಬಹುದು. ಯಾವುದನ್ನು ತಾವು ಕಲಿತುಕೊಳ್ಳಬೇಕೆನ್ನುತ್ತಾರೋ, ಯಾವುದನ್ನು ತಮ್ಮ ಜನಕ್ಕೆ ಕಲಿಸಬೇಕೆನ್ನುತ್ತಾರೋ ಅದಕ್ಕೆ ತದ್ವಿರುದ್ಧವಾದ ಹಾದಿ ಹಿಡಿಯುವುದರಲ್ಲೇ ಯಶಸ್ಸು ಸುಲಭವಾಗಿ ಸಿಕ್ಕುತ್ತದೆ ಎಂದು ಅವರಿಗೆ ಭಾಸವಾಗುತ್ತದೆ. ಯಾರಿಗೆ ಸತ್ಯದ ಜೊತೆ ಸುಳ್ಳು ಬೆರೆಸುವುದು ಹೇಗೆಂಬುದು ತಿಳಿದಿರುತ್ತದೆಯೋ ಮತ್ತು ಯಾರಿಗೆ ಔದಾರ‍್ಯ, ಸಹಕಾರಗಳನ್ನು ಭೇದ ಹಾಗೂ ನಿಷ್ಕರುಣೆಯ ನಡವಳಿಕೆಗಳಿಂದ ಸಾಧಿಸಲು ಆತಂಕವೆನಿಸುವುದಿಲ್ಲವೋ ಅಂಥವರಿಗೇ ರಾಜಕೀಯದಲ್ಲಿ ಜಯ ದೊರಕುವುದು ಹೆಚ್ಚು. ಹೀಗಾಗಿ ನಿನ್ನೆಯ ಅಂಥ ಕ್ರಾಂತಿಕಾರರು ಪುರಾತನ ಅಸ್ತ್ರಾಗಾರದ ತುಕ್ಕು ಹಿಡಿದ ಆಯುಧದ ಹಾಗೆ ನಿರುಪಯುಕ್ತವಾಗುತ್ತಾರೆ. ಮಾನವಕುಲಕ್ಕೆ ಪ್ರಶಂಸನೀಯ ಸದ್ಗುಣಗಳ ಸಂಸ್ಕಾರ ದೊರಕಿಸಿಕೊಡಲು ಅವರು ಅಸಮರ್ಥರು. ಒಂದು ವಿಶಿಷ್ಟ ಸಾಮಾಜಿಕ ಪದ್ಧತಿಗೆ ಬದ್ಧರಾದ ಇಂಥ ಸಂಕುಚಿತ ಕ್ರಾಂತಿಕಾರಿಗಳು ಸಾಮಾಜಿಕ ಶೂನ್ಯತೆಯಲ್ಲಿ ಚಾರಿತ್ಯ್ರ (ಕ್ಯಾರಕ್ಟರ್)ನಿರ್ಮಾಣಕ್ಕೆ ಹೆಣಗುವ ಸುಧಾರಕರ ಹಾಗೆ ಅರ್ಥಹೀನರಾಗುತ್ತಾರೆ. ರಾಷ್ಟ್ರೀಯ ಚಾರಿತ್ಯ್ರದ ನಿರ್ಮಾಪಕರು ಎನ್ನುವಂಥ ಅನೇಕರು ಸತ್ಯ, ಕಾರ್ಯಶೀಲತೆ, ಔದಾರ‍್ಯ ಮುಂತಾದ ಸದ್ಗುಣಗಳನ್ನು ಚಂದ ಮಾತುಗಳಲ್ಲಿ ಎತ್ತಿ ಎತ್ತಿ ಹೊಗಳುತ್ತಾರೆ, ಸತತ ಶ್ಲಾಘ್ಯವಾಗಿ ಉಪದೇಶಿಸುತ್ತಾರೆ. ಆದರೆ ಚಾರಿತ್ಯ್ರ ದ ಅಡಿಪಾಯ ನಿರ್ಮಿಸುವುದಕ್ಕೆ ಬದಲಾಗಿ ಅವರು ಮಾತಿನ ಧಭದಭೆ ಮೆರೆಸಿರುತ್ತಾರೆ. ಇಂಥ ಕ್ರಾಂತಿಕಾರರು ಮತ್ತು ಸುಧಾರಕರು- ಹೆಚ್ಚೆಂದರೆ ಒಂದು ನೆಲೆಯ ತನಕ ಯಾರು ಕ್ರಾಂತಿ ಹಾಗೂ ಚಾರಿತ್ಯ್ರ ನಿರ್ಮಾಣಗಳೆರಡನ್ನೂ ಒಂದಾಗಿಯೇ ಸಾಧಿಸಲು ಶ್ರಮಿಸುತ್ತಾರೋ ಅಂಥವರಿಗೆ ಅನುಕೂಲ ವಾತಾವರಣವನ್ನು ನಿರ್ಮಿಸಿಕೊಡಬಲ್ಲರು. ಆಲಸಿತನ, ಮೈಗಳ್ಳತನಗಳು ಎಂಥ ರೇಶಿಮೆ ನುಣುಪಿನ ವಾಕ್ಚಾತುರ‍್ಯಗಳನ್ನು ಸುತ್ತಿಬಂದಿದ್ದರೂ ಅಥವಾ ಎಂಥ ವಶೀಲಿಗಳನ್ನು ಎದುರಿಟ್ಟುಕೊಂಡು ಬಂದಿದ್ದರೂ ಕ್ರಾಂತಿಕಾರಿಗಳು ಮಾತ್ರ ಇವನ್ನು ಎಂದೂ ಸಹಿಸಬಾರದು; ಹಾಗೆಯೇ ಶೀಘ್ರ ಯಶಸ್ಸು ಸಿಕ್ಕುತ್ತದೆಯೆಂದು ಎಂದೂ ಸುಳ್ಳಿನ ಸಾಧನೆಗಳನ್ನು ಅವಲಂಬಿಸಬಾರದು. ಸಾಮಾಜಿಕ ಕ್ರಾಂತಿ ಮತ್ತು ಚಾರಿತ್ಯ್ರ ನಿರ್ಮಾಣಗಳೆರಡೂ ಒಗ್ಗೂಡಿ ನಡೆಯಬೇಕು, ಒಂದಕ್ಕೊಂದಕ್ಕೆ ಸಂವಾದವಿರಬೇಕು; ಒಂದು ಇನ್ನೊಂದರ ಪರಿಣಾಮ ಎಂಬ ಭಾವನೆಯಿಲ್ಲದೆ ಇವು ಒಂದೇ ಅಭಿವ್ಯಕ್ತಿಯ ಎರಡು ಅವಿಭಕ್ತ ಮುಖಗಳು ಎನಿಸಬೇಕು.’
ಈ ಮಾತುಗಳಿರುವ ಮೂಲ ಲೇಖನ ಕೆ.ವಿ. ಸುಬ್ಬಣ್ಣ ಅನುವಾದಿಸಿರುವ ‘ರಾಜಕೀಯದ ಮಧ್ಯೆ ಬಿಡುವು’ (ಅಕ್ಷರ ಪ್ರಕಾಶನ ಹಾಗೂ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ); ನಟರಾಜ್ ಹುಳಿಯಾರ್ ಸಂಪಾದಿಸಿರುವ ’ಉತ್ತರ ದಕ್ಷಿಣ’ (ಕನ್ನಡ ಸಂಸ್ಕೃತಿ ಇಲಾಖೆ,) ರಾಮಮನೋಹರ ಲೋಹಿಯಾ ಚಿಂತನೆ (ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ) ಈ ಪುಸ್ತಕಗಳಲ್ಲಿದೆ.
ಈ ಅಂಕಣ ಬರೆಯುತ್ತಿದ್ದಾಗ, ಸುಮಾರು ಮೂವತ್ತು ವರ್ಷಗಳ ಕೆಳಗೆ ಡಿ. ಆರ್. ನಾಗರಾಜ್ ‘ಲಂಕೇಶ್ ಪತ್ರಿಕೆ’ಯ ಹುಟ್ಟುಹಬ್ಬಕ್ಕಾಗಿ ಬರೆದ ಲವಲವಿಕೆಯ ಗಂಭೀರ ಲೇಖನಕ್ಕೆ ಕೊಟ್ಟ ಶೀರ್ಷಿಕೆ: ‘ಸಿನಿಕರ ನಡುವೆ ಶ್ರದ್ಧೆ’ ನೆನಪಾಯಿತು. ಈ ಟೈಟಲ್ ಸರ್ವಕಾಲಕ್ಕೂ ಸಲ್ಲುವ ರೂಪಕದಂತೆ ನಾವು ಮಾಡುವ ಎಲ್ಲ ಬಗೆಯ ಕೆಲಸಗಳ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಆ ಕಾರಣದಿಂದ ಆ ಟೈಟಲ್ಲನ್ನೇ ಇಲ್ಲಿ ಬಳಸಿರುವೆ. ಈ ಅಂಕಣದಲ್ಲಿ ಸದಾ ಹರಿಯುವ ಲೋಹಿಯಾ, ಅಂಬೇಡ್ಕರ್, ಲಂಕೇಶ್, ಡಿ.ಆರ್, ಕೀರಂ ಎಲ್ಲರೂ ಸಿನಿಕರ ನಡುವೆ ಶ್ರದ್ಧೆ ಎಂಬ ರೂಪಕದ ಅರ್ಥವನ್ನೇ ಪ್ರತಿಧ್ವನಿಸುತ್ತಿರುತ್ತಾರೆ. ಅಂಥ ದೊಡ್ಡವರ ನೋಟಗಳನ್ನು ಮತ್ತೆ ಮತ್ತೆ ಎಲ್ಲರೊಡನೆ ಹಂಚಿಕೊಳ್ಳುವ ಕಾತರ ಕೂಡ ಈ ಅಂಕಣಗಳನ್ನು ಮೂರನೆಯ ವರ್ಷಕ್ಕೆ ಒಯ್ದಿದೆ ಎಂದಷ್ಟೆ ಹೇಳಿದರೆ ಸಾಕು.
ಎಂದಿನಂತೆ ಈ ವೆಬ್‌ಸೈಟ್ ನೋಡಿಕೊಳ್ಳುವ ಸಮಂತ್ ಪತ್ತಾರ್, ಕಲಾವಿದ ವಿನ್ಯಾಸ ಬಡಿಗೇರ್, ಮೂಲ ಪ್ರೇರಣೆಯಾದ ’ಓಪನ್ ಮೈಂಡ್ಸ್’ ಕಿರಣ್‌ಕುಮಾರ್; ತಿದ್ದುವ, ಒಪ್ಪುವ, ಟೀಕಿಸುವ ಗೆಳೆಯ ಗೆಳತಿಯರು; ಹೊಸ ಹೊಸ ಓದುಗಿಯರು, ಓದುಗರು…ಎಲ್ಲರಿಗೂ ಥ್ಯಾಂಕ್ಸ್, ಅಂಡ್ ಚಿಯರ್‍ಸ್.
ಜರ್ಮನಿಯ ಫಿಲಾಸಫರ್ ಫ್ರೆಡರಿಕ್ ನೀಷೆ ಜಗತ್ತಿನ ಶ್ರೇಷ್ಠ ಫಿಲಾಸಫರುಗಳಲ್ಲಿ ಒಬ್ಬ. ತೀವ್ರ ಚಿಂತನೆಯಲ್ಲಿ ಹುಟ್ಟುವ ಅವನ ತೀಕ್ಷ್ಣ ಸತ್ಯಕ್ಕೆ ಎಲ್ಲರಲ್ಲೂ ‘ಮಿಂಚಿನ ಹೊಳೆ ತುಳುಕಾಡುವುದು’.
‘ನೀಷೆಗೆ ಹೊಳೆದ ಸತ್ಯ’ ಎಂಬ ಈ ಬಿಡಿ ಬಿಡಿ ಹೊಳಹುಗಳಲ್ಲಿ ನೀಷೆಯ ಒಳನೋಟಗಳನ್ನು ಪದ್ಯದ ಸರಳ ಚೌಕಟ್ಟಿಗೆ ತರಲೆತ್ನಿಸಿರುವೆ. ಇಂಥ ಹೊಳಹುಗಳು ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಕನ್ನಡ ಟೈಮ್ಸ್ ೨೦೦೭-೮ರ ನಡುವೆ ಗೆಳೆಯರೆಲ್ಲ ಸೇರಿ ಹೊರಡಿಸುತ್ತಿದ್ದ ವಾರಪತ್ರಿಕೆ. ಅದರೊಡನಿದ್ದ ಚಂದ್ರಶೇಖರ ಐಜೂರ್, ಮಂಜುನಾಥ ಲತಾ, ಮಂಜುನಾಥ ಕಾರ್ಗಲ್, ಜಯಶಂಕರ ಹಲಗೂರು, ನಾಗತಿಹಳ್ಳಿ ರಮೇಶ್, ಎನ್. ಸಿ. ಮಹೇಶ್ ಮೊದಲಾದವರು ನೀಷೆಗೆ ಹೊಳೆದ ಸತ್ಯವನ್ನು ಮೆಲುಕು ಹಾಕುತ್ತಿದ್ದುದು ನೆನಪಾಗುತ್ತದೆ.
ನಂತರ ಕೂಡ ಆಗಾಗ್ಗೆ ನೀಷೆಯ ಹೊಳಹುಗಳನ್ನು ಓದಿದಾಗೆಲ್ಲ ಕನ್ನಡಿಸಿಕೊಳ್ಳುವ ಕೆಲಸ ಮುಂದುವರಿಯಿತು. ಈಗ ‘ಗಾಳಿ ಬೆಳಕು ವೆಬ್ ಅಂಕಣಕ್ಕೆ ಎರಡು ವರ್ಷ ತುಂಬಿ ಮೂರಕ್ಕೆ ಕಾಲಿಟ್ಟಾಗ ಏನನ್ನಾದರೂ ಹೊಸದನ್ನು ಕೊಡಬಹುದು ಅನ್ನಿಸಿ, ‘ನೀಷೆಗೆ ಹೊಳೆದ ಸತ್ಯ’ದ ಎರಡನೆಯ ಅವತಾರ ಇಲ್ಲಿ ಕಾಣಿಸಿಕೊಂಡಿದೆ. ಆಗಾಗ ಪ್ರಕಟವಾಗುವ ನೀಷೆ ನಮ್ಮೊಳಗನ್ನು ಬೆಳಗಿಸಬಲ್ಲ.
೧
ನೀವು ನಿಮ್ಮ ಬಾಯಿಂದ ಸುಳ್ಳು ಹೇಳಬಹುದು;
ಆದರೆ,
ಆ ಸುಳ್ಳಿನ ಜೊತೆಗೇ ಮೂಡುವ
ತಿರುಚಿದ, ಕಹಿಯಾದ ವ್ಯಗ್ರ ಮುಖ
ಹೇಗೂ ಸತ್ಯವನ್ನು ಹೇಳಿಯೇ ತೀರುವುದು.
೨
ಆತ್ಮಹತ್ಯೆಯ ಬಯಕೆ
ಅದ್ಭುತ ಸಮಾಧಾನ ತರುವುದು
ಅದರ ಮೂಲಕ ನಾವು ಹಲವು
ಕೆಟ್ಟ ರಾತ್ರಿಗಳನ್ನು ಯಶಸ್ವಿಯಾಗಿ ದಾಟುವೆವು.
Comments
8 Comments
| ಶ್ರೀಧರ್ ಆರ್.
ನಮಸ್ಕಾರ ಸರ್, ಬಹಳ ದಿನಗಳಿಂದ ನಾನು ಹುಡುಕುತ್ತಿದ್ದ ರೂಪಕದ ಉಲ್ಲೇಖದ ಮಾಹಿತಿ ನಿಮ್ಮ ಈ ದಿನದ 'ಸಿನಿಕರ ನಡುವೆ ಶ್ರದ್ಧೆ' ಎಂಬ ಚಿರ ರೂಪಕ! ಬರಹ ಓದಿದ ಮೇಲೆ ನೆನಪಾಯಿತು. ****** "ಸಿನಿಕತೆ ಎಂದರೆ ದೀರ್ಘಕಾಲದ ಶ್ರದ್ಧೆ ಅಸಾಧ್ಯವಾಗುವ ಸ್ಥಿತಿ. ಬಾಯಾರಿಕೆ ಜಾಸ್ತಿಯಾದಾಗ ನೀರಿನ ಬಾಟಲಿನ ಬಿರಡೆ ನಾಜೂಕಾಗಿ ತೆಗೆಯುವುದನ್ನು ಬಿಟ್ಟು, ಬಾಟಲನ್ನೇ ಒಡೆದುಹಾಕಿ ಸಿಕ್ಕಷ್ಟು ನೀರನ್ನು ಕುಡಿಯುವುದು ಸಿನಿಕತನಕ್ಕೆ ಅಂತಿಮ ರೂಪಕ. ಸಿನಿಕತನ ಒಂದು ಮಟ್ಟದಲ್ಲಿ ಶ್ರದ್ದೆಯಲ್ಲಿ ಕಾಯಲಾರದು. ಇನ್ನೊಂದು ಮಟ್ಟದಲ್ಲಿ ಎದುರಿಗೆ, ತಕ್ಷಣದಲ್ಲೇ ಒಳ್ಳೆಯದೊಂದು ಹುಟ್ಟೀತು ಎಂದು ನಂಬಲೂ ಆಗದು. ನಾನು ಮೇಲೆ ಬಳಸಿದ ನೀರಿನ ಬಾಟಲಿನ ರೂಪಕವನ್ನು ಸಾರ್ತ್ರ್ ಹಿಂಸೆಯನ್ನು, ಹಿಂಸ್ರಕ ವ್ಯಕ್ತಿತ್ವವನ್ನು ಶೋಧಿಸಲು ಬಳಸಿಕೊಳ್ಳುತ್ತಾನೆ. ಹಿಂಸೆ ಎನ್ನುವುದು ಆಧ್ಯಾತ್ಮಿಕ ಸಿನಿಕತನದ ಮೂರ್ತರೂಪ... ಸಿನಿಕತನ ಎನ್ನುವುದು ತೀವ್ರ ಜಡತೆ ಮತ್ತು ಮಂಪರಿನ ಸ್ಧಿತಿಯಾದರೆ, ಕ್ರಿಯಾಶೀಲತೆಯೇ ಆತ್ಯಂತಿಕ ಸ್ವಾಸ್ಥ್ಯ." -ಡಿ.ಆರ್. ನಾಗರಾಜ್ ಉಲ್ಲೇಖ: -ಹದಿಮೂರು ತುಂಬಿದ 'ಪತ್ರಿಕೆ' ಸಿನಿಕರ ನಡುವೆ ಶ್ರದ್ಧೆ (ಲೇಖನ, ಲಂಕೇಶ್ ಪತ್ರಿಕೆ, ಜುಲೈ 14, 1993) ಕೃಪೆ -'ಸಂಸ್ಕೃತಿ ಕಥನ' (ಪುಟ: 367, 2002) ******** ಸರ್, ಡಿ.ಆರ್.ಎನ್. ಬರೆದಿರುವ 'ಶೂದ್ರ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, ಸಾರ್ತ್ರ್ ಬಳಸಿರುವ 'ನೀರಿನ ಬಾಟಲಿನ ರೂಪಕ'ದ ಉಲ್ಲೇಖದ ಮಾಹಿತಿ ಇತ್ತೀಚೆಗೆ ನನ್ನ ಕಣ್ಣಿಗೆ ಬಿತ್ತು...💙 "ದ ರೆಚಡ್ ಆಫ್ ದ ಅರ್ತ್" ಫ್ರಾನ್ಜ್ ಫ್ಯಾನನ್ ಪುಸ್ತಕಕ್ಕೆ ಜೀನ್ ಪಾಲ್ ಸಾರ್ತ್ರ್ ಬರೆದ ಮುನ್ನುಡಿಯಲ್ಲಿ ('ಟಿಬೆಟಿನ ನಾಯಿ, ಮೌನಿ ಸಾಧುಗಳು ಮತ್ತು ಚಂಪಾರನ್ ರೈತರು' ಲೇಖನ, 'ಸಂಸ್ಕೃತಿ ಕಥನ' ಪುಟ: 233-234, 2002) ಇಂತಿ ನಮಸ್ಕಾರಗಳು...💙
| Nataraj Huliyar Replies
Thank you Shridhar. Truly brain storming. It gives a lot of clarity about cynicism.
| ಚರಣ್
ಮೂರನೆ ವರ್ಷಕ್ಕೆ ಗಾಳಿ ಬೆಳಕು ಹರಡುತ್ತಿರುವುದು ಸಂತಸಕರ ವಿಷಯ. ವೈಚಾರಿಕತೆಯನ್ನು ಹಲವು ಸಲ ಕೇವಲ ಧರ್ಮ ದೇವರು ಮುಂತಾದ ಕೆಲವಕ್ಕಷ್ಟೇ ಸೀಮಿತ ಮಾಡಿಕೊಳ್ಳುತ್ತೇವೆ. ಆದರೆ ಬದುಕಿನ ಎಲ್ಲಾ ಆಯಾಮಗಳಲ್ಲೂ ಅದನ್ನು ಪ್ರಯೋಗಿಸಬಹುದು, ಸತ್ಯದೊಂದಿಗೆ ಸಹಜವಾಗಿ ಮುಖಾಮುಖಿಯಾಗಬಹುದು ಹಾಗೂ ಸಾಹಿತ್ಯ ಮತ್ತು ಬದುಕಿನ ನಡುವೆ ನಂಟನ್ನು ಕ್ರಿಯಾಶೀಲ ದೃಷ್ಟಿಯಿಂದ ಸಾಧಿಸಬಹುದು ಅಂತ 'ಗಾಳಿ ಬೆಳಕು' ನಮ್ಮನ್ನು ಪೊರೆಯುತ್ತಾ ಬಂದಿದೆ. ಗಾಳಿ ಬೆಳಕಿನ ಹೊಳಪು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.❤
| sanganagouda
ಅಭಿವ್ಯಕ್ತಿ, ಅವಿಭಕ್ತವಾಗಬೇಕೆನ್ನುವುದು ತಿಳುವಳಿಕೆ ಮಾತು ಸರ್ 🙏🙏🙏
| Dr.Doreswamy
ನೀಷೆಯ ರೂಪಕದೊಂದಿಗೆ ಈ ಅಂಕಣದಲ್ಲಿ ಸುಳ್ಳನ್ನೇ ಹಿಮ್ಮೆಟ್ಟುವ ಬಯಕೆ ಅಡಗಿದೆ
| Keshav
Hearty Congratulations
| ಗುರು ಜಗಳೂರು
ಸರ್ ಗೋಪಾಲ ಗೌಡರ ಚುನಾವಣೆಗೆ ಅಲ್ಲಿನ ಜನಗಳೇ ದುಡ್ಡು ಹಾಕಿ ಗೆಲ್ಲಿಸದರು ಎಂದು ಓದಿದ್ದೇವೆ.ಆದರೆ ಈಗ ಈಥರದ ಜನಗಳನ್ನು ನಿರೀಕ್ಷೆ ಮಾಡಲು ಸಾಧ್ಯವೇ? ಈಗ ಎಲೆಕ್ಷನ್ ಗಳಲ್ಲಿ ಜನಗಳು ಎಷ್ಟು ಸಾಧ್ಯನೋ ಅಷ್ಡು ಗುಂಜತಾರೆ.ಯೂಟ್ಯೂಬ್ ಲ್ಲಿ ನೋಡ್ತಾ ಇದ್ದೆ ,ರಸ್ತೆಗೆ ಹಾಕಿದ ಡಾಂಬರನ್ನೇ ಜನಗಳು ಕಿತ್ತು ಒಯ್ತಾ ಇರೋದನ್ನ.
| ಡಾ. ನಿರಂಜನ ಮೂರ್ತಿ ಬಿ ಎಂ
'ಸಿನಿಕರ ನಡುವೆ ಶ್ರದ್ಧೆ' ಚೆನ್ನಾಗಿದೆ. ಇರಲೇಬೇಕಲ್ಲವೆ? ಎಲ್ಲಾ ಕಡೆ ಸಿನಿಕರೇ ತುಂಬಿದ್ದರೆ, ಕೆಲಸಗಳು ಸಾಗುವುದೆಂತು? ಚರಣ್ ಅವರ ಪತ್ರ ಅದ್ಭುತವಾಗಿದೆ. ಕೊನೆಯಲ್ಲಿನ ನೀಷೆ ಮಿಂಚು ಹೊಳೆದ ಹಾಗಿದೆ. ಹುಳಿಯಾರರ ಬರವಣಿಗೆ ಎಂದಿನಂತೆಯೇ ಬದಿಗಿಡದೆ ಓದಿಸಿಕೊಳ್ಳುತ್ತದೆ. ಮುಟ್ಟಿದರೆ ತಟ್ಟದೇ ಬಿಡದು ಅವರ ಬರವಣಿಗೆ! 'ಗಾಳಿ ಬೆಳಕು' ಮೂರನೆಯ ವರ್ಷಕ್ಕೆ ಕಾಲಿಟ್ಟಿರುವುದು ತುಂಬಾ ಸಂತೋಷದ ವಿಷಯ. ಇದು ಹೀಗೆಯೇ ಒಳ್ಳೆಯ ಗಾಳಿ ಬೆಳಕನ್ನು ಒದಗಿಸುತ್ತಿರಲಿ ಅನವರತ.
Add Comment