‘ಕಗ್ಗತ್ತಲ ಖಂಡ’ ಎಂದರೇನು?
by Nataraj Huliyar
ಇದನ್ನು ನೀವು ನಿಮ್ಮೂರ ಕಡೆಯೂ ನೋಡಿರಬಹುದು. ಜನ ಒಬ್ಬ ವ್ಯಕ್ತಿಗೆ, ಒಂದು ಊರಿಗೆ ಒಂದು ಸಲ ಯಾವುದೋ ಕಾರಣಕ್ಕೆ ಅಡ್ಡ ಹೆಸರಿಟ್ಟರೆ ಅದು ಜೀವಮಾನವಿಡೀ ಆ ವ್ಯಕ್ತಿತ್ವವನ್ನು, ಊರನ್ನು ನಿರ್ದೇಶಿಸಲು ಶುರು ಮಾಡುತ್ತದೆ! ಇದು ದೇಶಗಳ, ಖಂಡಗಳ, ಸಂಸ್ಕೃತಿಗಳ ಸಂದರ್ಭದಲ್ಲೂ ಆಗಿಬಿಟ್ಟರೆ ಏನಾಗುತ್ತದೆ?
ಒಂದು ಕಾಲಕ್ಕೆ ಆಫ್ರಿಕಾದ ಬಗ್ಗೆ ಯುರೋಪಿನ ಬಿಳಿಯರು ಅಜ್ಞಾನದಿಂದ ಮಾಡಿದ ವರ್ಣನೆಯ ಪರಿಣಾಮವನ್ನು ಗಮನಿಸಿದರೆ ಇಂಥ ಅಡ್ಡಹೆಸರುಗಳ ಕ್ರೌರ್ಯ, ಪರಿಣಾಮ ನಿಮಗೆ ಗೊತ್ತಾಗುತ್ತದೆ. ಹತ್ತೊಂಬತ್ತನೇ ಶತಮಾನದ ಕೊನೆಗೆ ಹೆನ್ರಿ ಮಾರ್ಟಿನ್ ಸ್ಟ್ಯಾನ್ಲಿ ಆಫ್ರಿಕಾವನ್ನು ‘ಡಾರ್ಕ್ ಕಾಂಟಿನೆಂಟ್’ ಎಂದು ಕರೆಯತೊಡಗಿದ ನಂತರ, ಜಗತ್ತಿನ ನೂರಾರು ಭಾಷೆಗಳು ಅದನ್ನು ಕಪ್ಪು ಖಂಡ, ಕತ್ತಲ ಖಂಡ ಎಂದೆಲ್ಲ ಅನುವಾದಿಸಿಕೊಂಡವು. ಕನ್ನಡದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಕಗ್ಗತ್ತಲ ಖಂಡ’ ಎಂದು ಅನುವಾದಿಸಿಕೊಂಡರು! ಈ ಥರದ ಅನುವಾದಗಳಿಂದ ಒಂದು ಖಂಡವನ್ನು ನೋಡುವ ರೀತಿಯೇ ದಿಕ್ಕೆಟ್ಟು ಹೋದ ಕತೆ ನಂತರದ ಅರೆಜ್ಞಾನದ ಚರಿತ್ರೆಯ ಭಾಗವಾಗಿ ಹೋಗಿದೆ!
ಮೊದಲಿಗೆ ಆಫ್ರಿಕಾ ಎನ್ನುವುದು ಏನು ಎಂಬುದನ್ನು ನೋಡಿ: ಹಲವು ದೇಶಗಳು ಹಾಗೂ ಹಲವು ಬಗೆಯ ಸಂಸ್ಕೃತಿಗಳ, ಬುಡಕಟ್ಟುಗಳ, ಅತ್ಯಂತ ಪ್ರಾಚೀನ ನಾಗರಿಕತೆಗಳ ಒಂದು ವಿಶಾಲ ಖಂಡ. ಹಾಗೆಯೇ ಆಫ್ರಿಕಾ ಎನ್ನುವುದು ಜಗತ್ತಿನಾದ್ಯಂತ ಹಲವು ಅರ್ಥಗಳನ್ನು ಸೂಚಿಸುವ ರೂಪಕ ಕೂಡ ಆಗಿದೆ. ನಾವೀಗ ಆಫ್ರಿಕಾ ಖಂಡ ಎಂದು ಕರೆಯುವ ಭೌಗೋಳಿಕ ಪ್ರದೇಶದಲ್ಲಿ ಪೂರ್ವ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಸೆಂಟ್ರಲ್ ಆಫ್ರಿಕಾ, ಉತ್ತರ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾಗಳಿವೆ. ದೇಶೀ ಜನರು ತಮ್ಮ ಪಾಡಿಗೆ ತಾವು ತಮ್ಮ ಜೀವನಕ್ರಮಗಳನ್ನು ರೂಪಿಸಿಕೊಂಡು ಬದುಕುತ್ತಿದ್ದ ಈ ಆಫ್ರಿಕಾ ಖಂಡಗಳನ್ನು ಹೊಕ್ಕು ಲಾಭ ಪಡೆಯುವ ದುರಾಸೆ ಐನೂರು ವರ್ಷಗಳ ಕೆಳಗೆ ಪಶ್ಚಿಮದ ಬಿಳಿಯರಿಗೆ ಹಾಗೂ ಕೆಲವು ಆಫ್ರಿಕೇತರರಿಗೆ ಹುಟ್ಟಿತು.
೧೫೦೦ನೆಯ ಇಸವಿಯ ಹೊತ್ತಿಗೆ ಆಫ್ರಿಕಾದ ಕಡಲ ತೀರಗಳು ಯೂರೋಪಿಯನ್ನರಿಗೆ ಪರಿಚಿತವಾಗತೊಡಗಿದವು. ಯಾಕೆಂದರೆ, ಆ ಕಡಲ ತೀರಗಳಲ್ಲಿ ಆಫ್ರಿಕಾದ ದೇಶೀಯರನ್ನು ಮಾರಾಟ ಮಾಡುವ, ಕೊಳ್ಳುವ ಅಮಾನುಷ ವ್ಯಾಪಾರಿ ಚಟುವಟಿಕೆಗಳು ನಡೆಯಲಾರಂಭಿಸಿದ್ದವು. ಈ ಗುಲಾಮರ ಮಾರಾಟದಲ್ಲಿ ತಮ್ಮ ನಾಡಿನ, ತಮ್ಮ ಬುಡಕಟ್ಟಿನ ಜನರನ್ನೇ ಪರದೇಶದವರಿಗೆ ಮಾರಾಟ ಮಾಡುವ ಏಜೆಂಟರುಗಳಾಗಿ ಸ್ಥಳೀಯ ಆಫ್ರಿಕನ್ನರೂ ಸೇರಿಕೊಂಡಿದ್ದರು. ಈ ವ್ಯಾಪಾರದಲ್ಲಿ ಭಾಗಿಯಾಗಿದ್ದ ಯೂರೋಪಿಯನ್ನರಿಗೆ ಹಾಗೂ ಅರಬ್ಬರಿಗೆ ಮೊದಮೊದಲಿಗೆ ಆಫ್ರಿಕಾದ ಭೂಪ್ರದೇಶಗಳು ಅಷ್ಟಾಗಿ ಪರಿಚಯವಿರಲಿಲ್ಲ.
ಹೆನ್ರಿ ಮಾರ್ಟಿನ್ ಸ್ಟ್ಯಾನ್ಲಿ(೧೮೪೧-೧೯೦೪) ಎಂಬ ವೆಲ್ಷ್-ಅಮೆರಿಕನ್ ಪತ್ರಕರ್ತ, ವಸಾಹತು ಅಧಿಕಾರಿ, ಲೇಖಕ ೧೮೭೮ರಲ್ಲಿ ‘ತ್ರೂ ದ ಡಾರ್ಕ್ ಕಾಂಟಿನೆಂಟ್, ಸಂಪುಟ- ೧’ ಪುಸ್ತಕ ಬರೆದ. ಅಲ್ಲಿ ಅವನು ಆಫ್ರಿಕಾ ಖಂಡವನ್ನು ‘ಡಾರ್ಕ್ ಕಾಂಟಿನೆಂಟ್’ ಎಂದು ಕರೆದಿದ್ದು ಯುರೋಪಿಯನ್ನರಿಗೆ ಆಫ್ರಿಕಾದ ಬಗ್ಗೆ ಸೀಮಿತ ತಿಳಿವಳಿಕೆಯಿದ್ದುದನ್ನು ಸೂಚಿಸುವಂತಿತ್ತು. ಇದಾದ ನಂತರ, ಯೂರೋಪಿನ ಚರಿತ್ರೆಯ ಪುಸ್ತಕಗಳು ತಮಗೆ ಪರಿಚಯವಿರದ, ತಾವು ಕಾಣದ, ತಮಗೆ ನಿಗೂಢವಾಗಿರುವ, ಆಫ್ರಿಕಾ ಖಂಡವನ್ನು ‘ಡಾರ್ಕ್ ಕಾಂಟಿನೆಂಟ್’ ಎಂದು ಬಣ್ಣಿಸತೊಡಗಿದವು. ಪೋಲಿಶ್-ಬ್ರಿಟಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ೧೮೯೯ರಲ್ಲಿ ಬರೆದ 'ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯಲ್ಲಿ ಸಾಮ್ರಾಜ್ಯಶಾಹಿಯ ನಿರ್ದಯತೆಯನ್ನು ತೋರಿಸಿದ; 'ಡಾರ್ಕ್‌ನೆಸ್’ ಎಂಬ ರೂಪಕವನ್ನು ಪಶ್ಚಿಮಕ್ಕೇ ತಿರುಗಿಸಿದ. ಆದರೂ ಈ ಕಾದಂಬರಿಯಲ್ಲಿ ಕಪ್ಪಿನ ಬಗ್ಗೆ ಪೂರ್ವಗ್ರಹ ಮುಂದುವರಿದಿದೆ ಎಂದು ಆಫ್ರಿಕನ್ ಲೇಖಕ ಚಿನುವ ಅಚಿಬೆ ತೋರಿಸುತ್ತಾನೆ.
‘ಡಾರ್ಕ್ ಕಾಂಟಿನೆಂಟ್’ ಎಂಬ ಬಣ್ಣನೆಯಲ್ಲಿರುವ ‘ಡಾರ್ಕ್’ ಎಂಬ ಪದಕ್ಕೆ ಮೇಲುನೋಟಕ್ಕೆ ಕತ್ತಲು ಎಂಬ ಅರ್ಥವಿದೆ; ಆದರೆ ಹೆನ್ರಿ ಮಾರ್ಟಿನ್ ಸ್ಟ್ಯಾನ್ಲಿ ಯೂರೋಪಿಯನ್ನರಿಗೆ ತಿಳಿಯದ, ಅಪರಿಚಿತವಾದ, (ಅನ್‌ನೋನ್), ಈ ಕುರಿತು ಅಜ್ಞಾನವಿರುವ ಖಂಡ ಎಂಬ ಅರ್ಥದಲ್ಲಿ ಈ ಬಣ್ಣನೆಯನ್ನು ಬಳಸಿದ್ದ. ಈ ಪದಗುಚ್ಛವನ್ನು ಕನ್ನಡದ ಪಠ್ಯಪುಸ್ತಕಗಳು ‘ಕಗ್ಗತ್ತಲ ಖಂಡ’ ಎಂದು ಅನುವಾದಿಸಿಕೊಂಡವು. ಹಿಂದಿಯಲ್ಲಿ ‘ಅಂಧಾ ಮಹಾದ್ವೀಪ್’; ಉರ್ದುವಿನಲ್ಲಿ ’ತಾರೀಕ್ ಬರ್‍ರೆ ಆಝಮ್’… ಹೀಗೆಲ್ಲಾ ಇದು ಅನುವಾದಗೊಂಡಿತು. ಜರ್ಮನ್ ಭಾಷೆಯಲ್ಲಿ ಇದು der schwarze Kontinent ಎಂದು ಅನುವಾದಗೊಂಡು ’ಬ್ಲ್ಯಾಕ್ ಕಾಂಟಿನೆಂಟ್’ ಅಥವಾ ’ಕಪ್ಪು ಖಂಡ’ ಎಂದಾಯಿತು.
ಹೀಗೆ ಲೋಕದ ಭಾಷೆಗಳಲ್ಲಿ ‘ಡಾರ್ಕ್ ಕಾಂಟಿನೆಂಟ್’ ಎಂಬುದನ್ನು ಸೀಮಿತ ವಾಚ್ಯಾರ್ಥದಲ್ಲಿ ಅನುವಾದಿಸಿಕೊಂಡಿದ್ದರ ಪರಿಣಾಮ: ಆಫ್ರಿಕಾ ಎಂದರೆ ‘ಕತ್ತಲ ಪ್ರದೇಶ’ ಎಂಬ ಅರ್ಥ ಜನರ ತಲೆಯಲ್ಲಿ ಉಳಿದುಬಿಟ್ಟಿತು. ಈ ಅಂಶ ಒಂದು ಸಂಸ್ಕೃತಿ ಕುರಿತ ಬಣ್ಣನೆಯನ್ನು ಇನ್ನೊಂದು ಸಂಸ್ಕೃತಿ ಅನುವಾದಿಸಿಕೊಳ್ಳುವುದರಲ್ಲಿ ಇರುವ ಸಮಸ್ಯೆಯನ್ನು ಮಾತ್ರ ಹೇಳುತ್ತಿಲ್ಲ; ಭಾರತವೂ ಸೇರಿದಂತೆ ಜಗತ್ತಿನ ಉಳಿದ ಭೂಭಾಗಗಳು ಆಫ್ರಿಕಾವನ್ನು ಸೀಮಿತ ಅರ್ಥದಲ್ಲಿ ಹಾಗೂ ಅಪೂರ್ಣವಾಗಿ ಗ್ರಹಿಸಿದ್ದವೆಂಬುದನ್ನೂ ಹೇಳುತ್ತದೆ. ಇವತ್ತಿಗೂ ಇಂಡಿಯಾದ ಶಾಲಾಕಾಲೇಜು ಪಠ್ಯಗಳಲ್ಲಿ ಜಗತ್ತಿನ ಚರಿತ್ರೆಯನ್ನು ಬೋಧಿಸುವಾಗ ಯೂರೋಪಿಯನ್ ಚರಿತ್ರೆಯನ್ನು ಹೆಚ್ಚು ಬೋಧಿಸಲಾಗುತ್ತದೆಯೇ ಹೊರತು, ಅಲ್ಲಿ ಆಫ್ರಿಕಾದ ಚರಿತ್ರೆಯ ಬಗೆಗಿನ ಗಮನ ತೀರಾ ಕಡಿಮೆ. ಇದು ಕೂಡ ಆಫ್ರಿಕಾ ಕುರಿತ ನಮ್ಮ ಅಜ್ಞಾನ ಮುಂದುವರಿಯುವಂತೆ ಮಾಡಿದೆ.
ಆದ್ದರಿಂದಲೇ, ಜಗತ್ತಿಗೆ ಅತ್ಯಂತ ಪ್ರಾಚೀನ ನಾಗರಿಕತೆಯನ್ನು ಕೊಟ್ಟ ಈಜಿಪ್ಟ್ ನಾಗರಿಕತೆ ಆಫ್ರಿಕಾದ ಕೊಡುಗೆ ಎಂಬುದನ್ನು ಮತ್ತೆ ಲೋಕಕ್ಕೆ ನೆನಪಿಸಬೇಕಾಗಿದೆ. ತಮ್ಮದೇ ಆದ ಆಡಳಿತ ಪದ್ಧತಿ, ಜೀವನ ಕ್ರಮ, ಕೃಷಿ ಪದ್ಧತಿಗಳನ್ನು ಹೊಂದಿ ಸ್ವಾಯತ್ತವಾಗಿದ್ದ ಆಫ್ರಿಕನ್ ಸಮಾಜಗಳು ಹಾಗೂ ಅಲ್ಲಿನ ಜನಜೀವನ ೧೬ನೆಯ ಶತಮಾನದ ಆರಂಭದಿಂದ ಬಿಳಿಯರಿಂದ ಭೀಕರ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಅದಕ್ಕೆ ಕಾರಣ, ಆಫ್ರಿಕಾದ ದೇಶೀಯರನ್ನು ಗುಲಾಮರನ್ನಾಗಿ ಮಾರಾಟ ಮಾಡಲಾರಂಭಿಸಿದ ಹೃದಯಹೀನ ಮಾರುಕಟ್ಟೆ. ಈ ಮಾರಾಟ ಮುಂದಿನ ನಾಲ್ಕು ಶತಮಾನಗಳವರೆಗೂ ಮುಂದುವರಿದು ಆಫ್ರಿಕಾದ ದೇಶೀಯರು ‘ಕರಿಯರು’ ಎನ್ನಿಸಿಕೊಂಡು ಜಗತ್ತಿನ ಹಲವು ಭೂಭಾಗಗಳಲ್ಲಿ ಹರಿದು ಹಂಚಿಹೋದರು.
ಹೀಗೆ ಆಫ್ರಿಕಾದ ಅತ್ಯಂತ ಶಕ್ತ ಮಾನವ ಸಂಪನ್ಮೂಲದ ಕಳವು-ಹರಾಜು-ಮಾರಾಟ-ಕೊಳ್ಳುವಿಕೆಯ ಕ್ರೌರ‍್ಯ ನಡೆಯುತ್ತಿದ್ದಾಗಲೇ ಆಫ್ರಿಕಾದ ಉಳಿದ ಸಂಪನ್ಮೂಲಗಳ ಕಡೆಗೂ ಯೂರೋಪಿನ ಕಣ್ಣು ಬಿತ್ತು. ಆಫ್ರಿಕಾದ ಖನಿಜಗಳು ಹಾಗೂ ಪಾಮ್ ಎಣ್ಣೆಗಳ ಮಾರಾಟವನ್ನೂ ಯೂರೋಪು ಆರಂಭಿಸಿತು. ಆ ಕಾಲಘಟ್ಟದ ಮತ್ತೊಂದು ಜಾಗತಿಕ ಬೆಳವಣಿಗೆಯನ್ನೂ ಇಲ್ಲಿ ನೆನಪಿಸಬೇಕು. ಯೂರೋಪಿನಲ್ಲಿ ೧೭೦೦ರಿಂದೀಚೆಗೆ ‘ಎನ್‌ಲೈಟನ್‌ಮೆಂಟ್ ಯುಗ’ವೆಂದು ಕರೆಯಲಾಗುವ ‘ದ ಏಜ್ ಆಫ್ ರೀಸನ್’ (ವಿವೇಚನೆಯ ಯುಗ) ಕೂಡ ಶುರುವಾಗಿತ್ತು. ಯುರೋಪಿನ ದಿಟ್ಟ ಚಿಂತಕರು ರಾಜಪ್ರಭುತ್ವವನ್ನು ಪ್ರಶ್ನಿಸುವ, ರಾಜರು ಜನರನ್ನು ಆಳಲು ತಾವೇ ನಿರ್ಮಿಸಿಕೊಂಡಿದ್ದ ದೈವೀಕವಚದ ಹಕ್ಕನ್ನು ಪ್ರಶ್ನಿಸುವ ಯುಗ ಆಗ ಆರಂಭವಾಗಿತ್ತು. ವಿಪರ್ಯಾಸವೆಂದರೆ, ಆಫ್ರಿಕಾದಿಂದ ಕದ್ದು ತಂದ ಗುಲಾಮರ ಮಾರಾಟವೂ ಅದೇ ಯುಗದಲ್ಲಿ ಯೂರೋಪಿನಿಂದಲೇ ನಡೆಯುತ್ತಿತ್ತು.
ಹದಿನೆಂಟನೆಯ ಶತಮಾನದ ಸರಿಸುಮಾರಿಗೆ ಆಫ್ರಿಕಾ ಖಂಡದೆಡೆಗೆ ಕ್ರಿಶ್ಚಿಯನ್ ಧರ್ಮ ಪ್ರಸಾರದ ಪಯಣಗಳೂ ಆರಂಭವಾದವು. ಧರ್ಮಪ್ರಸಾರಕರು ತಮ್ಮ ದೇಶಗಳನ್ನು ಬಿಟ್ಟು ಆಫ್ರಿಕಾ ಖಂಡದತ್ತ ಹೊರಟರು. ಅಂಥವರಲ್ಲಿ ಆಫ್ರಿಕಾದ ನೈಲ್ ನದಿಯ ಮೂಲ ಹುಡುಕಿಕೊಂಡು ಹೋಗಿ ಹಲವು ವರ್ಷ ಕಾಣೆಯಾಗಿ, ನಂತರ ಪತ್ತೆಯಾದ ಸ್ಕಾಟ್‌ಲೆಂಡ್‌ನ ಕ್ರೈಸ್ತ ಮಿಷನರಿ ಲಿವಿಂಗ್ ಸ್ಟೋನ್ ಕೂಡ ಒಬ್ಬ. ಈತ ಕೂಡ ‘ಡಾರ್ಕ್ ಕಾಂಟಿನೆಂಟ್’ನ ಆಳಅಗಲಗಳನ್ನು ಹುಡುಕಿ ಹೊರಟವನು. ಸ್ಟ್ಯಾನ್ಲಿ ಮಾರ್ಟನ್ ಟಾಂಝಾನಿಯಾದಲ್ಲಿ ಪ್ರವಾಸದಲ್ಲಿದ್ದಾಗ ಉಜಿಜಿ ಎಂಬ ಸ್ಥಳದಲ್ಲಿ ಲಿವಿಂಗ್ ಸ್ಟೋನ್ ಅಕಸ್ಮಾತ್ ಅವನಿಗೆ ಸಿಕ್ಕ. ಆಗ ಸ್ಟ್ಯಾನ್ಲಿ ತೆಗೆದ ಉದ್ಗಾರ, ’ಡಾಕ್ಟರ್ ಲಿವಿಂಗ್ ಸ್ಟೋನ್, ಐ ಪ್ರೆಸ್ಯೂಮ್?’ ಎಂಬುದು ಮುಂದೆ ಇಂಗ್ಲಿಷಿನ ಪ್ರಖ್ಯಾತ ನುಡಿಗಟ್ಟಾಯಿತು.
ಲಿವಿಂಗ್ ಸ್ಟೋನ್ ಥರದವರ ಸಾಹಸಗಳ ನಡುವೆ ವಸಾಹತುಗಳ ಲಾಭದ ವಾಸನೆ ಹಿಡಿದಿದ್ದ ವಲಯವೂ ಯೂರೋಪಿನಲ್ಲಿ ಬೆಳೆಯುತ್ತಿತ್ತು. ಅಷ್ಟೊತ್ತಿಗಾಗಲೇ ಇಂಡಿಯಾ, ನಾರ್ತ್ ಅಮೆರಿಕಾಗಳಿಂದ ಲೂಟಿ ಹೊಡೆದು ತಂದ ಬಿಟ್ಟಿ ಸಂಪತ್ತಿನ ರುಚಿ ಹತ್ತಿದ್ದ ಯೂರೋಪಿನ ಹಲವು ದೇಶಗಳು ಹೊಸ ವಸಾಹತುಗಳನ್ನು ಹುಡುಕತೊಡಗಿದ್ದವು. ೧೮೮೦ರ ದಶಕದಿಂದೀಚೆಗೆ ಆಫ್ರಿಕಾದ ನಾಡುಗಳ ಮೇಲೆ ಹಿಡಿತ ಸಾಧಿಸಲು ಯೂರೋಪಿಯನ್ ದೇಶಗಳ ನಡುವೆ ಭೀಕರ ಕದನ ಶುರುವಾಯಿತು. ಚರಿತ್ರೆಯ ಪುಟಗಳಲ್ಲಿ ‘ಸ್ಕ್ರಾಂಬಲ್ ಫಾರ್ ಆಫ್ರಿಕಾ’ (ಆಫ್ರಿಕಾಕ್ಕಾಗಿ ಕಚ್ಚಾಟ) ಎಂದು ದಾಖಲಾಗಿರುವ ಘಟ್ಟ ಇದು. ೧೯೨೦ರ ಹೊತ್ತಿಗೆ ಬೆಲ್ಜಿಯಂ, ಫ್ರಾನ್ಸ್, ಇಟಲಿ, ಜರ್ಮನಿ, ಗ್ರೇಟ್ ಬ್ರಿಟನ್, ಸ್ಪೇನ್ ಹಾಗೂ ಪೋರ್ಚುಗಲ್ ದೇಶಗಳು ಆಫ್ರಿಕಾದ ಬಹುತೇಕ ಭಾಗಗಳನ್ನು ಆಕ್ರಮಿಸಿಕೊಂಡು, ಅವುಗಳನ್ನು ತಮ್ಮತಮ್ಮಲ್ಲೇ ಹಂಚಿಕೊಂಡು ವಸಾಹತುಗಳನ್ನಾಗಿಸಿಕೊಂಡವು. ಯಾರದೋ ದೇಶ! ಯಾರದೋ ಪಾರುಪತ್ಯದ ಜಾತ್ರೆ! ಹೇಗಿದೆ ನೋಡಿ! ಈ ಬಿಳಿಯ ಹದ್ದುಗಳ ಆಕ್ರಮಣದ ನಡುವೆ ಇಥಿಯೋಪಿಯಾ ಹಾಗೂ ಲೈಬೀರಿಯಾ ದೇಶಗಳು ಮಾತ್ರ ಅದು ಹೇಗೋ ತಮ್ಮ ಸ್ವಾತಂತ್ರ‍್ಯವನ್ನು ಉಳಿಸಿಕೊಂಡಿದ್ದವು.
ಇಪ್ಪತ್ತನೆಯ ಶತಮಾನದಲ್ಲಿ ಇಂಡಿಯಾದಂತೆ ಆಫ್ರಿಕಾದ ದೇಶಗಳಲ್ಲೂ ಸ್ವಾತಂತ್ರ‍್ಯ ಚಳುವಳಿಗಳು ನಡೆದು ಈ ದೇಶಗಳು ಒಂದೊಂದಾಗಿ ಸ್ವತಂತ್ರವಾಗತೊಡಗಿದವು. ದಕ್ಷಿಣ ಆಫ್ರಿಕಾ ಬರೇ ಮೂವತ್ತೈದು ವರ್ಷಗಳ ಕೆಳಗೆ ಸ್ವತಂತ್ರವಾಯಿತು. ಆದರೆ ‘ಡಾರ್ಕ್ ಕಾಂಟಿನೆಂಟ್’ ಎಂಬ ಬಣ್ಣನೆ ಹಬ್ಬಿಸಿದ ಪೂರ್ವಗ್ರಹದ ಕೆಟ್ಟ ಪರಿಣಾಮ ಮಾತ್ರ ನಮ್ಮ ಮನಸ್ಸಿನಲ್ಲಿ ಹಾಗೇ ಉಳಿದುಬಿಟ್ಟಿದೆ. ಇದೆಲ್ಲ ನನಗೆ ಸರಿಯಾಗಿ ಅರ್ಥವಾಗಿದ್ದು ನನ್ನ ಪಿಎಚ್.ಡಿ.ಗಾಗಿ ಆಫ್ರಿಕನ್ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ಕುರಿತ ತೌಲನಿಕ ಅಧ್ಯಯನ ಮಾಡುತ್ತಿದ್ದಾಗ. ನಮ್ಮ ಪಠ್ಯಪುಸ್ತಕಗಳಿಂದಾಗಿ ಕೂಡ ಆಫ್ರಿಕಾ ಒಂದು ‘ಡಾರ್ಕ್ ಕಾಂಟಿನೆಂಟ್’ ಎಂಬ ಬಣ್ಣನೆ ಹಾಗೇ ಉಳಿದುಬಿಟ್ಟಿದೆ; ಅವನ್ನು ತೆಗೆಯುವ ಪ್ರಯತ್ನ ಆಗಬೇಕು. ಒಂದು ಸಂಸ್ಕೃತಿ ಕುರಿತು ಅನ್ಯ ಲೇಖಕರ ಅರೆಜ್ಞಾನದ ಬಣ್ಣನೆಯಿಂದ ಸಂಸ್ಕೃತಿಗೆ ಆಗುವ ಡ್ಯಾಮೇಜುಗಳು ಎಷ್ಟು ವರ್ಷಗಳಾದರೂ ಹಾಗೇ ಉಳಿದುಬಿಡುತ್ತವೆ ಎಂಬುದನ್ನು ಮರೆಯಬಾರದು.
ಇಪ್ಪತ್ತನೆಯ ಶತಮಾನದಲ್ಲಿ ಎಲ್ಲೆಡೆ ಪರಿಚಿತವಿದ್ದ ’ಡಾರ್ಕ್ ಕಾಂಟಿನೆಂಟ್’ ಎಂಬ ರೂಪಕವನ್ನು ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಕೂಡ ಬಳಸಿದ; ಆದರೆ ಬೇರೊಂದು ಸಂದರ್ಭದಲ್ಲಿ. ಫ್ರಾಯ್ಡ್ ೧೯೨೬ರಲ್ಲಿ ಬರೆದ ’ಕ್ವೆಶ್ಚನ್ ಆಫ್ ಲೇ ಅನಾಲಿಸಿಸ್’ ಎಂಬ ಪುಸ್ತಕದಲ್ಲಿ ಡಾರ್ಕ್ ಕಾಂಟಿನೆಂಟ್ ಎಂಬುದನ್ನು ಜರ್ಮನ್ ಭಾಷೆಗೆ ಅನುವಾದಿಸದೆ ಇಂಗ್ಲಿಷ್ ಭಾಷೆಯಲ್ಲೇ ಬಳಸಿದ ಬಣ್ಣನೆ ಇರುವ ಸಾಲು: 'after all, the sexual life of adult females is a dark continent for psychology.’
ಫ್ರಾಯ್ಡ್ ಹೇಳಿಕೆಯಲ್ಲಿ ಬಳಕೆಯಾದ 'ಡಾರ್ಕ್ ಕಾಂಟಿನೆಂಟ್’ ರೂಪಕದ ಬಗ್ಗೆ ಕೂಡ ಇವತ್ತು ನಮಗೆ ತಕರಾರು ಏಳಬಹುದು. ಆದರೆ ಮಾನವ ಮನಸ್ಸನ್ನು ಬಲ್ಲೆವೆಂಬ ಗತ್ತಿನಲ್ಲಿ ಉತ್ತರಿಸುವ ಸೈಕೋ-ಅನಲಿಸ್ಟರು, ಲೇಖಕರು ಕೂಡ ಫ್ರಾಯ್ಡ್ 'ಡಾರ್ಕ್ ಕಾಂಟಿನೆಂಟ್’ ಎಂಬ ಪದವನ್ನು 'ಅರಿವಿಗೆ ನಿಲುಕದ’ ಎಂಬ ಅರ್ಥದಲ್ಲಿ ಬಳಸುತ್ತಿರುವ ರೀತಿಯನ್ನು ಅರಿಯುವ ಅಗತ್ಯವಿದೆ. ಹಾಗೆಯೇ, ನಮ್ಮ ನಿತ್ಯದ ಮಾತು, ಬರವಣಿಗೆ, ಟೆಲಿವಿಷನ್ ಚರ್ಚೆ, ಪತ್ರಿಕೋದ್ಯಮಗಳ ಮಂದಿ ಅರೆಜ್ಞಾನದಿಂದ, ಅಜ್ಞಾನದಿಂದ ಎಲ್ಲವನ್ನೂ ವಿಶ್ಲೇಷಿಸಿ ಎಷ್ಟೆಲ್ಲ ಅಪಾಯ ಸೃಷ್ಟಿಸುತ್ತಿರಬಹುದು ಎಂಬ ಬಗ್ಗೆ ಆತ್ಮಪರೀಕ್ಷೆ ಮಾಡಿಕೊಳ್ಳುವ ಅಗತ್ಯ ಕೂಡ!
Comments
20 Comments
| ಹರಿಪ್ರಸಾದ್
Mind blowing
| ಶ್ರೀಧರ್ ಆರ್.
ಸರ್, ನಮಸ್ಕಾರ.... ಮಂಟೇಸ್ವಾಮಿ ಕಾವ್ಯದಲ್ಲಿ 'ಉತ್ತರ ದೇಸ ಕತ್ತಲ ರಾಜ್ಯ' ಎಂಬ ಉಲ್ಲೇಖವಿದೆ. ದೇವನೂರ ಮಹಾದೇವ ಬೆಂಗಳೂರಿನಲ್ಲಿ ನಡೆದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನದ (ಮಾರ್ಚ್ 10, 1979) ಆಶಯ ಭಾಷಣದಲ್ಲಿ, "ನಾನು ಅಂಥ ಕತ್ತಲ ರಾಜ್ಯದಿಂದ ಬಂದಂಥವನು. ಕಲಾ ಮಾಧ್ಯಮದಲ್ಲಿ ನಾನು ಕಂಡುಕೊಳ್ಳುತ್ತಿರುವುದು ಒಂದು ಆಕಸ್ಮಿಕವೆ. ನಾನು ಇದುವರೆಗೆ ಬರೆದಿರುವುದು ನಮ್ಮ ರಾಜ್ಯದ ಮನುಷ್ಯನ ಆರೇಳು ಬೆರಳುಗಳು, ಹೆಚ್ಚೆಂದರೆ ಒಂದು ಹಸ್ತ ಇದ್ದೀತು. ಅದಷ್ಟೆ ಕನ್ನಡ ಸಾಹಿತ್ಯದ ಗತಿಯನ್ನು ತನ್ನ ಪ್ರಮಾಣಕ್ಕಿಂತ ಹೆಚ್ಚಾಗಿ ಅಲ್ಲಾಡಿಸಿದೆ. ಕತ್ತಲ ರಾಜ್ಯದ ಇಡೀ ಮನುಷ್ಯ ಮಾತಾಡುವುದಾದರೆ? ಒಂದು ಸಮುದಾಯವೇ ಮಾತಾಡಿದಂತಾಗಬಹುದು. ಒಂದು ಆಂದೋಲನ ಇದನ್ನು ಕಾಣಿಸಬಹುದೇನೊ. ಇಂಥ ಒಂದು ಆಂದೋಲನದಿಂದ ಮಾತ್ರವೇ ಅಸ್ಪೃಶ್ಯತೆಯ ಕತ್ತಲು ಕೊನೆಯಾಗಬಹುದು. ಜಾತೀಯ ಗೋಡೆಗಳು ಕುಸಿಯಬಹುದು. ಆಗ ಒಬ್ಬರ ಮೇಲೆ ಒಬ್ಬರು ನಿಂತವರು ನೆಲದ ಮೇಲೆ ಪಾದ ಊರಿ ಸಮಸಮ ನಿಲ್ಲಬಹುದು. ಮನುಷ್ಯರ ನಡುವೆ, ಮನುಷ್ಯ-ಮನುಷ್ಯ ಸಂಬಂಧ ಉಂಟಾಗಬಹುದು. ಈ ರೂಪಾಂತರವನ್ನು ಹಿಡಿಯುವ ಕಲೆಯು ತಾನೂ ಹೊಸ ಹುಟ್ಟನ್ನು ಪಡೆದು ಹೊಸ ಮನುಷ್ಯನ ಹುಟ್ಟಿಗೂ ಕಾರಣವಾಗಬಹುದು." ಎಂದು ಹೇಳಿದ್ದಾರೆ. ಕವಿ ಸಿದ್ಧಲಿಂಗಯ್ಯನವರದು 'ಕಪ್ಪು ಕಾಡಿನ ಹಾಡು' ಎಂಬ ಪದ್ಯ ಕೂಡ ಇದೆ. 1983 ರಲ್ಲಿ ಪ್ರಕಟಗೊಂಡ ಅವರ ಕವನ ಸಂಕಲನದ ಶೀರ್ಷಿಕೆ 'ಕಪ್ಪು ಕಾಡಿನ ಹಾಡು' ಸಿದ್ಧಲಿಂಗಯ್ಯನವರು ಆಫ್ರಿಕಾದ ಕವಿ ಡೇವಿಡ್ ಡಿಯೋಪ್ (1927-1960) ಪುಟ್ಟ ಪರಿಚಯವನ್ನು 'ಬಂಡಾಯ ಕವಿ ಡೇವಿಡ್ ಡಿಯೋಪ್' ಎಂಬ ಲೇಖನದಲ್ಲಿ ಮಾಡಿದ್ದಾರೆ. ಡೇವಿಡ್ ಡಿಯೋಪ್ ಬರೆದಿರುವ ಎರಡು ಕವಿತೆಗಳನ್ನು 'ಎಲ್ಲವನ್ನೂ ಕಳಕೊಂಡವನು' ಹಾಗೂ 'ಆಫ್ರಿಕಾ' ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
| Nataraj Huliyar Replies
Thanks Shridhar for your fine academic intervention. And yet the dark Continent and Kattala Rajya or Kappu kaadina Haadu have different connotations. An interesting similarity for a study.
| Gangadhara BM
ನಮಸ್ತೆ ಸರ್. ಆಫ್ರಿಕಾ ಖಂಡದ ಕುರಿತು ನಮ್ಮೊಳಗಿನ 'ಡಾರ್ಕ್ ನೆಸ್'/'ಪೂರ್ವಗ್ರಹ'/'ಅರೆಜ್ಞಾನ'/ 'ಅಜ್ಞಾನ' ಗಳನ್ನು ದೂರಮಾಡಿ ವಸಾಹತು ಶಾಹಿಗಳ (ಬಿಳಿಯ ಹದ್ದುಗಳು) ಕ್ರೌರ್ಯದ ಚರಿತ್ರೆಯನ್ನು ನೆನಪಿಸುವ ಅಪೂರ್ವ ಲೇಖನ ತಮ್ಮದು. ಬಹಳ ಉಪಯುಕ್ತವಾಗಿದೆ ಸರ್. ಧನ್ಯವಾದಗಳು.
| Ashwath
Liked it
| DEVINDRAPPA
ಇದೊಂದು ಸಂಶೋಧನಾತ್ಮಕ ಲೇಖನವಾಗಿದೆ. ವಿಷಯದ ಹರವು ವಿಸ್ತಾರವಾಗಿದೆ. ವ್ಯವಸ್ಥೆಗಳು ಹೇಗೆ ತಮ್ಮ ಅಧಿಕಾರದ ಮೂಲಕ ಒಂದು ರಾಷ್ಟ್ರ ಮತ್ತು ಅಲ್ಲಿನ ಜನಜೀವನದ ಮೇಲೆ ಬೀರುವ ಗಾಢ ಪ್ರಭಾವ ಅದರಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಆಲೋಚಿಸುವಂತಿದೆ ಈ ಲೇಖನ. ವಸಾಹತು ಶಾಹಿ ದೇಶಗಳು ಬೇರೆ ಬೇರೆ ದೇಶಗಳ ಮೇಲೆ ಮಾಡಿದ ಗಾಯಗಳು ಇಂದಿಗೂ ಗುಣಪಡಿಸಲು ಸಾಧ್ಯವಾಗಿಲ್ಲ. ಬ್ರಿಟಿಷರು ಭಾರತಕ್ಕೆ ಬಂದಾಗ ಭಾರತೀಯರಿಗೆ ಚರಿತ್ರೆಯ ಮಹತ್ವ ಗೊತ್ತಿಲ್ಲ ಎಂದು ಹೇಳಿದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಅತ್ಯಂತ ಪ್ರಬುದ್ಧರು ಕೂಡ ಈ ಮಾತನ್ನು ಮತ್ತೆ ಮತ್ತೆ ತಮ್ಮ ಭಾಷಣಗಳಲ್ಲಿ ಉಲ್ಲೇಖ ಮಾಡುತ್ತಾರೆ. ಹಾಗೆಯೇ ಕಲ್ಯಾಣ ಕರ್ನಾಟಕ ಭಾಗವನ್ನು ಈ ಹಿಂದೆ ಹೈದರಾಬಾದ್ ಕರ್ನಾಟಕ ಪ್ರದೇಶ ಎಂದು ಕರೆಯುತ್ತಿದ್ದರು. ಹಿಂದುಳಿದ ಕಾರಣಕ್ಕಾಗಿ ಆದರೆ ಹಿಂದುಳಿಸಲ್ಪಟ್ಟ ವ್ಯವಸ್ಥೆಯನ್ನು ಪ್ರಶ್ನಿಸದೆ ಅದನ್ನೆಲ್ಲ ಒಪ್ಪಿಕೊಂಡ ನಾವುಗಳು ಸಂವಿಧಾನದಲ್ಲಿ ವಿಶೇಷ ಮೀಸಲಾತಿಯನ್ನು ಪಡೆದುಕೊಂಡು ಸುಮ್ಮನಾದೆವು. ಕನ್ನಡ ಸಾಹಿತ್ಯದಲ್ಲಿ 16 ನೆ ಶತಮಾನವನ್ನು ಅಂಧಕಾರ ಯುಗ ಎಂದು ಕರೆಯುತ್ತಾರೆ. ಆ ಸಂದರ್ಭದಲ್ಲಿ ರಚನೆಯಾದ ತತ್ವಪದಗಳು, ದಾಸ ಸಾಹಿತ್ಯವನ್ನೂ ಸಾಹಿತ್ಯದ ವ್ಯಾಪ್ತಿಗೆ ಒಳಪಡಿಸದೆ ಈ ನಿರ್ಧಾರವನ್ನು ತಳೆಯಲಾಯಿತು. ಮುಂದಿನ ಅಧ್ಯಯನಕಾರರು ಅದನ್ನು ಬದಲಾಯಿಸಿದರು. ಅಮೇರಿಕಾ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಅವರನ್ನು ಮೊದಲ ಕಪ್ಪು ವರ್ಣಿಯ ಅಧ್ಯಕ್ಷರೆಂದು, ನೆಲ್ಸನ್ ಮಂಡೇಲಾ ಅವರನ್ನು ಕಪ್ಪು ವರ್ಣಿಯರ ಹೋರಾಟದ ಸಂಕೇತವೆಂದು, ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರನ್ನು ಕಪ್ಪು ವರ್ಣದವರೆಂದು ಅವಮಾನಿಸಿದ ಸಂದರ್ಭ ಇವೆಲ್ಲವೂ ಪಾಶ್ಚಾತ್ಯರು ಸೃಷ್ಟಿಸಿದ ಅಸಹಜ ಸಂಗತಿಗಳಾಗಿವೆ. ಇದರಿಂದ ಸುಮಾರು ವರ್ಷಗಳಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಹೊಸದನ್ನು ಕಟ್ಟುವ ಹಂಬಲ ಇದ್ದರೂ ಪರಂಪರೆ ನಮಗೆ ಎದೆಯ ಭಾರವಾಗಿ ಇನ್ನೂ ಇದೆ. ಸಿದ್ಧಯ್ಯ ಪುರಾಣಿಕರು ಪೂರ್ವಾಂಗನೆ ಪಶ್ಚಿಮಾಂಗನೆ ಎಂಬ ಕವಿತೆಯಲ್ಲಿ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಗುರುತಿಸುತ್ತಾರೆ. ಕನ್ನಡದ ವಿಮರ್ಶಕರಾದ ಎಚ್. ಎಸ್. ರಾಘವೇಂದ್ರರಾವ್ ಅವರು ೨೦೧೩ ರಲ್ಲಿ ಕಪ್ಪು ಕವಿತೆ ಎಂಬ ಶೀರ್ಷಿಕೆಯಲ್ಲಿ ಆಫ್ರಿಕಾದ ಬರಹಗಾರರ ಕವಿತೆಗಳನ್ನು ಅನುವಾದಿಸಿದ್ದಾರೆ. ಇಲ್ಲಿಯೂ ಕೂಡ ಕಪ್ಪು ಪದ ಮುಖ್ಯ ನೆಲೆಯಲ್ಲಿ ಜಾಗ ಪಡೆದಿದೆ. ಆಫ್ರಿಕಾದ ಕಪ್ಪು ಗುಲಾಮ ಎಂದೇ ಕರೆಯುವ ಫೆಡ್ರಿಕ್ ಡಗ್ಲಾಸ್ ಅವರ ಆತ್ಮಕಥನದ ಹೆಸರು 'ಕಪ್ಪು ಕುಲುಮೆ ' (ಕನ್ನಡಕ್ಕೆ - ವಿಕಾಸ್ ಆರ್ ಮೌರ್ಯ, ಅಹರ್ನಿಶಿ ಪ್ರಕಾಶನ, ೨೦೧೯). ಇನ್ನೂ ಅನೇಕ ಉದಾಹರಣೆಗಳು ನಮಗೆ ಸಿಗುತ್ತಾ ಹೋಗುತ್ತವೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಇಸ್ಲಾಂ ಹೆಸರಿನ ಊರುಗಳನ್ನು ಬದಲಾಯಿಸುವುದು ನಡೆದಿದೆ. ಅದು ದೈಹಿಕವಾಗಿ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧ್ಯವಾಗಬಹುದು. ಮಾನಸಿಕವಾಗಿ ನಮ್ಮ ಮೇಲೆ ಹೇರಲಾದ ಈ ಪೂರ್ವಗ್ರಹ ಪೀಡಿತ ವ್ಯವಸ್ಥೆಯಿಂದ ಮುಕ್ತಿ ಎಂದು ಯೋಚಿಸುವಂತಹ ಸಂಗತಿ.
| ಕುಸುಮ ಬಿ. ಎಂ
ಕಣ್ಣು ತೆರೆಸುವ ಸಂಗತಿ. ಇಷ್ಟವಾಯಿತು ಸರ್
| Dr.G.Gangaraju
ಪಶ್ಚಿಮವು ಪೂರ್ವ ಕುರಿತು ಕಟ್ಟಿದ ಮಿಥ್ ನ ರೀತಿಯಲ್ಲೇ ಆಫ್ರಿಕಾ ಕುರಿತು ಕಟ್ಟಿದ ಅಪಾಯಕಾರಿ ಮಿಥ್ ನ ನೆಲೆಗಳ ಉಪಯುಕ್ತ ವಿಶ್ಲೇಷಣೆ. ಇಂಥ ವಿಶ್ಲೇಷಣೆಗಳು ಮೂರನೇ ಜಗತ್ತಿನ ಚರಿತ್ರೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನಕ್ಕೆ ಬಹಳ ಅಗತ್ಯವಾದವು
| Kavitaratna
Powerful insights. Thank you very much sir. This is probable why subaltern studies are deeply relevant.
| Kallaiah
Wonderful post
| K j suresh
ಹೊಸ ಜಗತ್ತು ಪರಿಚಯಿಸುವ ಲೇಖನ
| ಗುರು ಜಗಳೂರು
ಸರ್,ನಮಗೆ ಬಹಳ ವರ್ಷಗಳ ಕೆಳಗೆ ನ್ಯಾಷನಲ್ ಜಿಯಾಗ್ರಫಿ ಛಾನಲ್ ಬಂದ ಹೊಸತು ,ಕಿನ್ಯಾದ ಮಸಯ್ ಮಾರಾ(ವೈಲ್ಡ್ ಬೀಸ್ಟ್ ವಲಸೆ),ತಾಂಜೇನಿಯಾದ ಸೆರಂಗಟ್ಟಿ ಅಸಂಖ್ಯಾತ ಕಾಡು ಪ್ರಾಣಿಗಳನ್ನು ಬೆಳಿಗಿನಿಂದ ಸಂಜೆವರೆಗೆ ನೋಡಿದ್ದೇ ನೋಡಿದ್ದು. ಒಂದೆಡೆ ಸಮೃದ್ದಿ ಇದ್ದರೆ ಮತ್ತೊಂದೆಡೆ ಸುಡಾನ್ ,ಇಥಿಯೋಪಿಯಾ ಕ್ಷಾಮ,ಭೀಕರ ಅಂತರ್ಯುದ್ಧದಿಂದ ನಲುಗಿವೆ. ಬೊಟ್ಸ್ವಾನ ಡೈಮಂಡ್ ಗಳಗೆ ಪ್ರಸಿದ್ದಿ. ಹೆಣ್ಣುಮಕ್ಕಳು ಧರಿಸುವ ಆಭರಣಗಳಿಗಾಗಿ ಅಸಂಖ್ಯಾತ ಗಣಿ ಕಾರ್ಮಿಕರು ಖಾಯಿಲೆಗಳಿಂದ ನರಳುವುದನ್ನು ಓದಿದ್ದೇವೆ. ಬೋಕೋ ಹರಾಮ್ ಥರದ ಬೀಕರ ಉಗ್ರಗಾಮಿಗಳು ಯುವತಿರನ್ನು ಹೊತ್ತೋಯ್ದು ವರ್ಷಗಟ್ಟಲೆ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿ ಅವರಿಗೆ ಮಕ್ಕಳಾದ ಮನಕಲಕುವ ಘಟನೆಗಳು ನಡೆದರೆ.ಅದೇ ಸೌತ್ ಆಫ್ರಿಕಾದಲ್ಲಿ ಜಗತ್ತಿನ ಎರಡನೇ ಗಾಂಧಿ ನೆಲ್ಸನ್ ಮಂಡೆಲಾರನ್ನು ನೋಡಬಹುದು. ಆಫ್ರಿಕನ್ನರು,ಕರಿಯರು,ನೀಗ್ರೊಗಳೆಂದು ಕರೆಯಲ್ಪಡುವ ಇವೆಉಗಳು ಅಥ್ಲೆಟಿಕ್ಸ್ ಅದರಲ್ಲೂ 100 ಮೀಟರ್ ರೋಚಕ ಓಟ ಕಾರ್ಲ್ ಲೂಯಿಸ್,ಬೆನ್ ಜಾನ್ಸನ್(ಡ್ರಗ್ ನಿಂದ ನಿಷೇದಗೊಂಡವ),ಜಮೈಕಾದ ಉಸೇನ್ ಬೋಲ್ಟ್ ಇವರುಗಳನ್ನು ನೋಡುವುದೇ ಒಂದು ಚೆಂದ.ಮ್ಯಾರಾಥಾನ್ ನಲ್ಲಿ ಕೀನ್ಯ,ಇಥಿಯೋಪಿಯಾ ಅಥ್ಲೆಟಿಕ್ ಗಳನ್ನು ಮೀರಿಸಿದವರಿಲ್ಲ. ಬಿಳಿಯರಿಗಿಂತ ದೈಹಿಕವಾಗಿ ಸದೃಢರೆಂದು ಈ ದೆಸೆಯಲ್ಲಿ ವೈಜ್ಞಾನಿಕ ಸಂಶೋಧನೆಗಳು ಧೃಡಪಡಿಸಿವೆ.
| Mahalingeshwar
Really admirable. This will certainly benifit researchers.
| ವಸಂತ
ಕಗ್ಗತ್ತಲ ಖಂಡದ ಬಗ್ಗೆ ತಿಳುವಳಿಕೆ ನೀಡಿದ್ದಕ್ಕೆ ಧನ್ಯವಾದ. ಪತ್ರಿಕೆಗಳಲ್ಲಿ ಪ್ರಕಟವಾಗಿ, ಎಲ್ಲರಿಗೂ ತಿಳಿಯಲೇಬೇಕಾದ ವಿಷಯ ಇದು
| ಜಿ.ಎಸ್.ರಾಜೇಂದ್ರ, ಅಸುರ ನಾಡು
ಪ್ರಧಾನ ಸಂಸ್ಕೃತಿಯ ಗುಂಗಿನ ಜನರು ಜಗತ್ತಿನಾದ್ಯಂತ ಬುಡಕಟ್ಟು ನಾಗರೀಕತೆಗಳನ್ನು ಧಮನ ಮಾಡಿ ತಮ್ಮ ಅವಿವೇಕದ ಅಸಹ್ಯಗಳನ್ನು ಶ್ರೇಷ್ಠತೆಯ ಹೆಸರಿನಲ್ಲಿ ಬಿಂಬಿಸಿ ಚರಿತ್ರೆ ಬರೆದಿದ್ದಾರೆ. ಇಂತಹ ಕೆಟ್ಟ ಮಾದರಿಗಳನ್ನು ಮುರಿದು ಕಟ್ಟಿ ಬರೆಯುವ syllogism ಬೇಕು. ಇದಕ್ಕೆ ಮೂಲ? ಸ್ವಚ್ಛ ಮನಸ್ಸು ಎಂದು ಈ ಲೇಖನದ ಮೂಲಕ ನಟರಾಜ್ ಹುಳಿಯಾರ್ ಸ್ಪಷ್ಟಪಡಿಸಿದ್ದಾರೆ. ಇಂತಹ ಉತ್ತಮ ಚಿಂತನೆಗಾಗಿ ಧನ್ಯವಾದಗಳು ನಟರಾಜ್.
| Sanket
Super
| Kariswamy K
ಸರ್, ಈ ಬರೆಹ ಓದುವವರೆಗೂ ಆಫ್ರಿಕಾದ ಕುರಿತು ನನಗಿದ್ದ ಕ್ಲಾರಿಟಿಯೂ ಅಷ್ಟಕ್ಕಷ್ಟೆ. ಒಂದು ಟರ್ಮಿನಾಲಜಿಯು ಹಿಂದಿನ ಮನಸ್ಥಿತಿಯನ್ನು ಅರಿಯದಿದ್ದರೆ, ಅದು ಒಂದು ದೇಶ ಅಥವಾ ಖಂಡದ ಕುರಿತ ಗ್ರಹಿಕೆಯನ್ನು ಜಾಗತಿಕ ಮಟ್ಟದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗು ರಾಜಕೀಯ ವಲಯಗಳ ಮೇಲೆ ಬೀರುವ ಪ್ರಭಾವ, ಪರಿಣಾಮಗಳ ಅಗಾಧತೆಯನ್ನು ಅರಿಯುವುದು ಸುಲಭವಲ್ಲ. ಪರಿಭಾಷೆಗಳ ಗ್ರಹಿಕೆಯ ಪ್ರಭಾವವನ್ನು ಮನದಟ್ಟು ಮಾಡಿದ್ದಕ್ಕಾಗಿ🙏 ವಂದನೆಗಳೊಂದಿಗೆ
| ಡಾ. ನಿರಂಜನ ಮೂರ್ತಿ ಬಿ ಎಂ
ಕಗ್ಗತ್ತಲೆಯ ಖಂಡದ ಮೇಲೆ ಬೆಳಕು ಚೆಲ್ಲಿ ಅದನ್ನು ಪ್ರಕಾಶಿಸುವ ಹಾಗೆ ಮಾಡಿ, ಅದರ ಒಳಹೊರಗನ್ನು ತೋರಿಸುವ ಈ ವಿಶ್ಲೇಷಣಾತ್ಮಕ ಬರವಣಿಗೆ ವಾರದ ಕೊನೆಯ ಒಂದೊಳ್ಳೆ ಓದಿನ ಸಂತೋಷಕ್ಕೆ ಕಾರಣವಾಯಿತು. ಜಗದ ಬಲಶಾಲಿಗಳು ದುರ್ಬಲರ ಮೇಲೆ ಹೇರುವ ಅಭಿಪ್ರಾಯಗಳು ಒಂದಿಡೀ ದೇಶ-ಸಂಸ್ಕೃತಿಗಳನ್ನು ಹೇಗೆ ಶತಮಾನಗಳವರೆಗೂ ಬಿಂಬಿಸಬಲ್ಲವೆಂಬುದನ್ನು ಋಜುವಾತುಪಡಿಸುವ ಲೇಖನ. ನಮನಗಳು.
| Azeempasha Asst Registrar, CUK
It is simply awesome for the Insights on the Mother INSIGHT. It appears like a Live Dialogue with the writer. This article predominantly speaks that the area of darkness is only in the beholder's eyes. I do stand by the insightful interactions by Shridar Sir, Gangadhar sir, Devendrappa sir, Gangaraju sir, and Guru sir. Dr. NIranjanamurthy sir. First, I must be thankful to Prof. Nataraj sir for peeling off darkness from the minds of readers like me. This write-up sparked innumerable questions about history, humanity, and perception in my mind: ' are they not dark hearted who practiced Untouchability? Are they not dark-dark Hearted who killed, stamped and burnt alive (sati) innocent in the name of religion and race? Why is History written at the mercy of the ruling class? Why did Andaman become Kala Pani (Black Water)?. Are Pseudo Bhaktas not sowing seeds of black economy, black education, black culture? This article doesn't allow me to sleep without reading it again and again. Thank you Sir.
| Abhisheka M
ವಸಾಹತು ನಿರೂಪಣೆಗಳು ತಮಗಿಂತ ಭಿನ್ನವಾದ ಒಂದು ಸಂಸ್ಕೃತಿಯನ್ನು ಹೇಗೆ ಅರ್ಥೈಸುತ್ತವೆ. ಅದರಿಂದಾಗಿ ಉಂಟಾಗುವ ತಪ್ಪು ಗ್ರಹಿಕೆಗಳು ಹೇಗೆಲ್ಲಾ ಪ್ರಚಾರವನ್ನು ಪಡೆದುಕೊಳ್ಳುತ್ತವೆ. ಕೇವಲ ರಾಜಕೀಯ ಮತ್ತು ಆರ್ಥಿಕ ಪ್ರಭುತ್ವ ಮಾತ್ರವಲ್ಲದೇ ಸಾಂಸ್ಕೃತಿಕ ಜಗತ್ತಿನಲ್ಲಿಯು ವಸಾಹತುಶಾಹಿಯ ಹಿಡಿತದ ಪರಿಣಾಮವೇನು? ಎಂಬುವನ್ನು ಈ ಲೇಖನ ಚೆನ್ನಾಗಿ ಅರ್ಥೈಸಿದೆ. ಧನ್ಯವಾದಗಳು ಸರ್
Add Comment