ಲೋಕಾನುಭವ ಮತ್ತು ರಾಜಕಾರಣ

ಈ ಘಟನೆ ಕೆಲವು ವರ್ಷಗಳ ಕೆಳಗೆ ತೀರಿಕೊಂಡ ತಮಿಳು ಲೇಖಕ, ಆಪ್ತಗೆಳೆಯ ಪ್ರೊಫೆಸರ್ ನಂಜುಂಡನ್ ಹೇಳಿದ್ದು: 

ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಒಮ್ಮೆ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದರು. ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ಅಡ್ಡಾಡುತ್ತಿದ್ದಾಗ ಹುಡುಗನೊಬ್ಬ ದನ ಮೇಯಿಸುವುದನ್ನು ನೋಡಿದರು; ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಹುಡುಗ ದನ ಮೇಯಿಸುತ್ತಿದಾನಲ್ಲ ಎನ್ನಿಸಿ, ಆ ಹುಡುಗನನ್ನು ಕರೆದು, ‘ಯಾಕೋ ಸ್ಕೂಲಿಗೆ ಹೋಗ್ತಾ ಇಲ್ಲ?’ ಅಂದರು. 

ಪ್ರಶ್ನೆ ಕೇಳುತ್ತಿದ್ದವರು ರಾಜ್ಯದ ಮುಖ್ಯಮಂತ್ರಿ ಎಂಬುದು ಹುಡುಗನಿಗೆ ಗೊತ್ತಿರಲಿಲ್ಲ. 

‘ಸ್ಕೂಲ್‌ಗೋದ್ರೆ ನೀನು ಊಟ ಕೊಡ್ತೀಯ?’ ಅಂದ.

‘ಊಟ ಕೊಟ್ರೆ ಸ್ಕೂಲಿಗೆ ಹೋಗ್ತೀಯ?’ ಕಾಮರಾಜ್ ಕೇಳಿದರು.
‘ಹೂಂ!’ ಅಂದ ಹುಡುಗ.

ಹುಡುಗ ಕೊಟ್ಟ ಉತ್ತರದ ಬಗ್ಗೆ ಕಾಳಜಿಯಿಂದ ಯೋಚಿಸಿದ ಕಾಮರಾಜ್‌ಗೆ ಹುಡುಗನ ಕಷ್ಟ  ಗೊತ್ತಿತ್ತು. ಹುಡುಗನ ಸವಾಲಿಗೆ ಉತ್ತರವೂ ಹೊಳೆಯಿತು. ತಮಿಳುನಾಡಿನ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಕೊಡುವ ಯೋಜನೆ ಹುಟ್ಟಿದ್ದು ಆಗ.

ಈ ಯೋಜನೆಗೆ ಕಾಮರಾಜ್ ಹುಡುಗನಾಗಿದ್ದಾಗ ಕಂಡುಂಡ ಅನುಭವವೂ ಕಾರಣವಾಗಿತ್ತು. ಪ್ರೈಮರಿ ಸ್ಕೂಲಿನಲ್ಲಿ ಕಾಮರಾಜ್‌ಗೆ ಮೇಷ್ಟ್ರಾಗಿದ್ದ ವೇಲಾಯುಧನ್‌ಗೆ ಕೋಲು ಬಿಟ್ಟರೆ ಬೇರೆ ಮಾರ್ಗ ಗೊತ್ತಿರಲಿಲ್ಲ. ಈ ಮೇಷ್ಟ್ರಿಂದ ಗಣಿತ, ವರ್ಣಮಾಲೆ ಕಲಿಯುವ ಹೊತ್ತಿಗೆ ಕಾಮರಾಜ್ ಸುಸ್ತಾಗಿ ಹೋದ. ಮೇಷ್ಟರ ಒರಟುತನದಿಂದ ಬೇಸತ್ತಿದ್ದ ತಂದೆ ತಾಯಿಗಳು ಮಗನನ್ನು ಬೇರೆ ಶಾಲೆಗೆ ಸೇರಿಸಿದರು. 

ಮುಂದೆ ಕಾಮರಾಜ್ ವಿರುಧುಪಟ್ಟಿಯ ಕ್ಷತ್ರಿಯ ವಿದ್ಯಾಲಯ ಹೈಸ್ಕೂಲ್ ಸೇರಿದ. ನಾಡಾರ್ ಸಮುದಾಯ ತಮ್ಮ ಸಮುದಾಯದ ಹುಡುಗರಿಗೆ ಶಿಕ್ಷಣ ದೊರಕಿಸಲು ಆರಂಭಿಸಿದ ಶಾಲೆ ಇದು. ಈ ಶಾಲೆಗೆ ಅಲ್ಲಿನ ಸಮುದಾಯದ ಪ್ರತಿಯೊಂದು ಮನೆಯೂ ಒಂದೊಂದು ಹಿಡಿ ಅಕ್ಕಿ ಕೊಡುತ್ತಿತ್ತು. ಅದನ್ನು ‘ಪಿಡಿ ಅರಸಿ ಶಾಲೆ’ ಅಂದರೆ ‘ಹಿಡಿ ಅಕ್ಕಿ ಶಾಲೆ’ ಎನ್ನುತ್ತಿದ್ದರು. ನಂತರ ಆ ಸಮುದಾಯದ ಜನ ಈ ಶಾಲೆಗೆ ಮಾಡುತ್ತಿದ್ದ ಸಹಾಯವನ್ನು ಇನ್ನಷ್ಟು ಹೆಚ್ಚಿಸಿದರು. 

ಹನ್ನೆರಡನೆಯ ವಯಸ್ಸಿಗೆ ಶಾಲೆ ಬಿಟ್ಟ ಕಾಮರಾಜ್ ಮುಂದೆ ಸ್ವಾತಂತ್ರ‍್ಯ ಚಳುವಳಿ ಸೇರಿದರು. ಗಾಂಧೀಜಿಯ ಒಂದು ಭಾಷಣ ಅವರ ನೋಟವನ್ನೇ ಬದಲಿಸಿತು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರು ದೇಶದ್ರೋಹದ ಆಪಾದನೆ ಮೇಲೂ ಕಾಮರಾಜರನ್ನು ಜೈಲಿಗೆ ಕಳಿಸಿದರು. ಸ್ವತಂತ್ರ ಭಾರತದಲ್ಲಿ ಕಾಮರಾಜ್ ೧೯೫೪-೧೯೬೩ರ ನಡುವೆ ಎರಡು ಸಲ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅವರು ಉಚಿತ ಪ್ರಾಥಮಿಕ ಶಿಕ್ಷಣವನ್ನು ರಾಜ್ಯದ ಎಲ್ಲೆಡೆ ಜಾರಿಗೊಳಿಸಲು ಕೂಡ ಬಾಲ್ಯದ ಅನುಭವ ಕಾರಣವಾಗಿತ್ತು. 

ಕಾಮರಾಜ್ (೧೯೦೩-೧೯೭೫) ಆರಂಭಿಸಿದ ಮಧ್ಯಾಹ್ನದ ಊಟದ ಯೋಜನೆ ‘ಹಿಡಿ ಅಕ್ಕಿ ಶಾಲೆ’ಯಿಂದ ಬಂದಂತೆ, ದಾರಿಯಲ್ಲಿ ಎದುರಾದ ದನ ಮೇಯಿಸುವ ಹುಡುಗನ ಪ್ರಶ್ನೆಯಿಂದಲೂ ಹುಟ್ಟಿತ್ತು. ಕಾಮರಾಜರ ಉಳಿದ ಸಾಧನೆಗಳ ಜೊತೆಗೇ ಅವರು ಜನರ ದನಿಗೆ ಕಿವಿ ಕೊಟ್ಟ ರೀತಿ ಕೂಡ ಮುಖ್ಯವಾದುದು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾಲ್ಯದಲ್ಲಿ ತಾವು ಕಂಡುಂಡ ಹಸಿವೇ ಉಚಿತ ಅಕ್ಕಿ ಕೊಡುವ ಯೋಜನೆಯ ಹಿಂದಿರುವ ಪ್ರೇರಣೆ ಎಂದು ಹಲವು ಸಲ ಹೇಳಿರುವುದು ಎಲ್ಲರಿಗೂ ಗೊತ್ತಿದೆ. 

ಕಾಮರಾಜ್‌ಗಿಂತ ಭಿನ್ನವಾಗಿ, ಭಾರತದುದ್ದಕ್ಕೂ ಅಡ್ಡಾಡಿ ಜನರ ಸಂಕಷ್ಟಗಳನ್ನು ಕಂಡಿದ್ದ ಲೋಹಿಯಾ ಒಮ್ಮೆ ತಾವು ಕಂಡ ಸತ್ಯವನ್ನು ಹೇಳಿದರು: ‘ನಮ್ಮ ದೇಶದ ಜಾಡಮಾಲಿಯೊಬ್ಬ ದಿನಕ್ಕೆ ಎರಡು ರೂಪಾಯಿ ಗಳಿಸುತ್ತಾನೆ; ಹೊಲದಲ್ಲಿ ಕೂಲಿ ಮಾಡುವವನಿಗೆ ಹತ್ತು, ಹನ್ನೆರಡಾಣೆ ಆದಾಯ. ಆದರೆ ನಮ್ಮ ಪ್ರಧಾನಿಯ ಒಂದು ದಿನದ ಖರ್ಚು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ.' 
‘ಸಾಮಾನ್ಯರ ದಿನನಿತ್ಯದ ವರಮಾನ ಮೂರಾಣೆ’ ಎಂಬ ಅರವತ್ತರ ದಶಕದ ಮುಖ್ಯ ಚರ್ಚೆ ರೂಪುಗೊಂಡ ಗಳಿಗೆ ಕುರಿತು ರಬಿರಾಯ್ ಬರೆಯುತ್ತಾರೆ: 

ಒಮ್ಮೆ ಹಳ್ಳಿಯೊಂದರಲ್ಲಿ ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಹುಡುಗನನ್ನು ಲೋಹಿಯಾ ಕೇಳಿದರು: ‘ನಿನ್ನ ಒಂದು ದಿನದ ಆದಾಯ ಎಷ್ಟು?'
‘ಮೂರು, ಮೂರೂವರೆ ಆಣೆ' ಎಂದ ಹುಡುಗ. 

ಈ ಉತ್ತರ ಕೇಳಿದ ನಂತರ ಲೋಹಿಯಾ ಭಾರತದ ಸಾಮಾನ್ಯ ಜನರ ನಿತ್ಯದ ಆದಾಯದ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿದರು. ಜನರ ತಲಾ ಆದಾಯದ ಬಗ್ಗೆ ಸರ್ಕಾರ ಕೊಡುತ್ತಿರುವ ಅಂಕಿ ಅಂಶಗಳು ಬೋಗಸ್ ಎಂಬುದನ್ನು ಬಯಲಿಗೆಳೆಯುತ್ತಾ ಲೋಹಿಯಾ ೧೯೬೨ರ ಲೋಕಸಭಾ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಮತ್ತೆ ಎತ್ತಿದರು. ಪ್ರಧಾನಮಂತ್ರಿಯವರ ದಿನದ ಖರ್ಚನ್ನು ಕುರಿತ ಈ ತಾತ್ವಿಕ ಪ್ರಶ್ನೆ ಕೇವಲ ನೆಹರೂ ಕುರಿತ ಪ್ರಶ್ನೆಯಾಗಿರಲಿಲ್ಲ; ಬದಲಿಗೆ, ಅಧಿಕಾರಸ್ಥರು ಹಾಗೂ ಜನಸಾಮಾನ್ಯರ ವರಮಾನ-ವೆಚ್ಚದ ಅಂತರ ಕುರಿತ ವ್ಯಾಪಕ ಪ್ರಶ್ನೆಯಾಗಿತ್ತು.

ಇವೆರಡೂ ದೇಶದ ಇಬ್ಬರು ದೊಡ್ಡ ರಾಜಕಾರಣಿಗಳು ಎತ್ತಿದ ಪ್ರಶ್ನೆಗಳಾದರೆ, ಕರ್ನಾಟಕದ ವಿಶಿಷ್ಟ ನಾಯಕ ಬಿ. ನಾರಾಯಣರಾವ್ ಅವರ ವಿದ್ಯಾರ್ಥಿದೆಸೆಯ ಕಾಳಜಿಯಿಂದ ಹುಟ್ಟಿದ ಪ್ರಶ್ನೆಯ ಪರಿಣಾಮ ಕೂಡ ಇಷ್ಟೇ ಮುಖ್ಯವಾಗಿದೆ. ಬಸವರಾಜು ಮೇಗಲ್ಕೇರಿ ಸಂಪಾದಿಸಿರುವ ‘ನಮ್ಮ ಅರಸು’ ಪುಸ್ತಕದಲ್ಲಿ ದಾಖಲಾಗಿರುವ ಘಟನೆ ಇದು: ಓದಲು ಹಾಸ್ಟೆಲ್ ಇಲ್ಲದೆ ಕಷ್ಟಪಡುತ್ತಿದ್ದ ಬೀದರ್‍ ಜಿಲ್ಲೆಯ ಬಸಂತಪುರದ ಕೋಲಿ ಸಮುದಾಯದ ಬಡ ಬಿ.ಎ. ವಿದ್ಯಾರ್ಥಿ ಬಿ. ನಾರಾಯಣರಾವ್ ಹುಡುಗರನ್ನು ಕಟ್ಟಿಕೊಂಡು ಬಂದು ೧೯೭೬ರಲ್ಲಿ ವಿಧಾನಸೌಧದ ಎದುರು ಒಂಬತ್ತು ದಿನ ಸತ್ಯಾಗ್ರಹ ಮಾಡಿದರು. ಹುಡುಗರ ಅಹವಾಲು ಕೇಳಿದ ಮುಖ್ಯಮಂತ್ರಿ ಅರಸು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ೨೨೪ ಪ್ರಿ-ಮೆಟ್ರಿಕ್ ಹಾಗೂ ೨೧ ಪೋಸ್ಟ್‌ಮೆಟ್ರಿಕ್ ಹಾಸ್ಟೆಲುಗಳನ್ನು ಮಂಜೂರು ಮಾಡಿದರು. 

ಮುಂದೆ ನಾರಾಯಣರಾವ್ ಮೊದಲ ಬಾರಿಗೆ ೨೦೧೮ರಲ್ಲಿ ಬಸವಕಲ್ಯಾಣದ ಶಾಸಕರಾದರು. ‘ಜವಾರಿ ಜನನಾಯಕರಾಗಿದ್ದ ನಾರಾಯಣರಾವ್ ಕೋವಿಡ್ ಸಮಯದಲ್ಲಿ ಅಸಹಾಯಕ ಹಳ್ಳಿಗರಿಗೆ ಸಹಾಯ ಮಾಡಲು ಊರೂರು ಸುತ್ತಿ ೨೦೨೦ರಲ್ಲಿ ತೀರಿಕೊಂಡರು’ ಎಂದು ಗೆಳೆಯ ದೇವು ಪತ್ತಾರ್ ಹೇಳಿದರು. 

ಇವತ್ತಿಗೂ ಬಡವರಿಗೆ ಕೊಡುವ ಹತ್ತು ಕೆ.ಜಿ. ಅಕ್ಕಿಯನ್ನು ಆಡಿಕೊಳ್ಳುವ ಹೊಟ್ಟೆ ತುಂಬಿದ ಮಂದಿ ನಮ್ಮ ಸುತ್ತ ಇದ್ದಾರೆ. ಮಕ್ಕಳಿಗೆ ಕೊಡುವ ಮಧ್ಯಾಹ್ನದ ಊಟವನ್ನು ಸಿನಿಕತೆಯಿಂದ ಹೀಗಳೆವ ಹೀನರಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಜಾತಿವಿಕಾರದಿಂದ ಕ್ಯಾತೆ ತೆಗೆಯುವವರಲ್ಲಿ ಸಾಧಾರಣ ಹುಂಬರಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎಂ.ಎಸ್. ತಿಮ್ಮಪ್ಪ ಥರದವರೂ ಇದ್ದಾರೆ; ಮಠಾಧೀಶರಿದ್ದಾರೆ. ಇಂಥ ಜನಕ್ಕೆ ಹಿಂದೊಮ್ಮೆ ಮಧ್ಯಾಹ್ನದ ಉಪ್ಪಿಟ್ಟಿನ ಯೋಜನೆ ಕೋಟ್ಯಂತರ ಮಕ್ಕಳು ಶಿಕ್ಷಣ ಪಡೆಯಲು ನೆರವಾಗಿದೆ; ಆ ಮಕ್ಕಳನ್ನು ಕಾಪಾಡಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಬಿಸಿಯೂಟ ಯೋಜನೆಯಿಂದ ದಲಿತ ಹಿಂದುಳಿದ ವರ್ಗಗಳ ಮಕ್ಕಳ, ಅದರಲ್ಲೂ ಹೆಣ್ಣು ಮಕ್ಕಳ, ವಿದ್ಯಾಭ್ಯಾಸ ದೊಡ್ಡ ಮಟ್ಟದಲ್ಲಿ ಹೆಚ್ಚಿರುವ ಅಂಕಿ, ಅಂಶಗಳು ಗೊತ್ತಿರಲಿಕ್ಕಿಲ್ಲ. 

ಇವತ್ತು ಹೈಸ್ಕೂಲ್‌ವರೆಗಿನ ಶಾಲೆಗಳ ಎಲ್ಲ ಜಾತಿ, ವರ್ಗಗಳ ಮಕ್ಕಳು ಮಧ್ಯಾಹ್ನದ ಊಟದ ಪ್ರಯೋಜನ ಪಡೆಯುತ್ತಿದ್ದಾರೆ. ಮೊದಲು ಒಂದನೆಯ ತರಗತಿಯಿಂದ ಐದನೇ ತರಗತಿಯ ಮಕ್ಕಳವರೆಗೂ ಜಾರಿಗೆ ಬಂದ ಬಿಸಿಯೂಟ ಯೋಜನೆ ಕುರಿತು ಗೆಳೆಯ, ಸಮಾಜವಿಜ್ಞಾನಿ ಎಚ್. ಡಿ. ಪ್ರಶಾಂತ್ ಮಾಡಿದ ’ಶಾಲಾ ಬಿಸಿಯೂಟ ಅಧ್ಯಯನ ಯೋಜನೆ’ ಎಂಬ ಅಧ್ಯಯನ ೨೦೦೪ರಲ್ಲಿ ಪ್ರಕಟವಾಯಿತು; ಈ ಯೋಜನೆಯ ವ್ಯಾಪಕ ಪರಿಣಾಮ ಕುರಿತ ಚರ್ಚೆ ಈ ಪುಸ್ತಕದಲ್ಲಿ ಆರಂಭವಾಯಿತು. ಈ ಯೋಜನೆ ಹೈಸ್ಕೂಲಿನವರೆಗೂ ವಿಸ್ತರಿಸಿದ ಮೇಲೆ ಪ್ರಶಾಂತ್ ಈ ಯೋಜನೆಯನ್ನು ಮತ್ತೆ ಮತ್ತೆ ವಿಶ್ಲೇಷಿಸಿದ್ದಾರೆ. 

ಹುಳಿಯಾರಿನ ಮಾಧ್ಯಮಿಕ ಶಾಲೆಯಲ್ಲಿ ಮಧ್ಯಾಹ್ನ ಕೊಡುತ್ತಿದ್ದ ಉಪ್ಪಿಟ್ಟಿನ ವಾಸನೆ ಇನ್ನೂ ನನ್ನ ಮೂಗಿನಲ್ಲಿದೆ. ಹಳ್ಳಿಯಿಂದ ಬರುತ್ತಿದ್ದ ಮಕ್ಕಳಿಗೆ ಆ ಉಪ್ಪಿಟ್ಟು ಕೂಡ ಆಸರೆಯಾಗಿ ಎಷ್ಟೋ ಜನ ಶಾಲೆ ಬಿಡಲಿಲ್ಲ ಎಂಬುದು ನಂತರ ಗೊತ್ತಾಯಿತು. ಕನ್ನಡ ದಲಿತ ಆತ್ಮಕತೆಗಳಲ್ಲಿ ಶಾಲೆಯ ಉಪ್ಪಿಟ್ಟು ತಮ್ಮ ಓದಿಗೆ ನೆರವಾದ ಪ್ರಸಂಗಗಳಿವೆ. ಅವತ್ತೂ ಆ ಉಪ್ಪಿಟ್ಟಿನ ಬಗ್ಗೆ ಮೂಗು ಮುರಿಯುತ್ತಾ ಬಾಯಿಗೆ ಬಂದದ್ದು ಹೇಳುತ್ತಿದ್ದವರ ಶನಿಸಂತಾನ ಇವತ್ತೂ ಇದೆ. ಮಹಿಳೆಯರಿಗೆ ಟಿಕೆಟ್‌ರಹಿತ ಬಸ್ ಪ್ರಯಾಣದ ಅವಕಾಶ ಕೊಟ್ಟಾಗ ಅದರ ವಿರುದ್ಧ ಮಾತಾಡುವವರೂ ಇವರೇ. ಖ್ಯಾತ ಲೇಖಕಿಯೊಬ್ಬರು ಮೊನ್ನೆ ಇಂಥದೇ ಆಣಿಮುತ್ತನ್ನು ಉದುರಿಸಲು ಹೊರಟು, ನನ್ನ ನಿಲುವು ನೆನಪಾಗಿಯೋ ಏನೋ, ತಮ್ಮ ವಿಷವಾಕ್ಯವನ್ನು ಹಾಗೇ ನುಂಗಿಕೊಂಡರು! ಉಚಿತ ಹಾಸ್ಟೆಲುಗಳಲ್ಲಿ ಎರಡು ಹೊತ್ತು ಊಟ ಮಾಡಿ ಬದುಕಿ ದೊಡ್ಡ ದೊಡ್ಡ ಹುದ್ದೆ ಹಿಡಿದವರ ಸಾವಿರಾರು ಉದಾಹರಣೆಗಳು ಇಂಥ ಸಿನಿಕರಿಗೆ ಗೊತ್ತಿರಲಿಕ್ಕಿಲ್ಲ.  

ಎಂದೋ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಜನರ ಹಸಿವನ್ನು ನೀಗಿಸುವ ಚಿಂತನೆ-ಯೋಜನೆಗಳು ಹೊಳೆಯಬಲ್ಲವು. ಅಮೆರಿಕದ ಕರಿಯರ, ಬಡವರ ಕಷ್ಟ ಕಂಡಿದ್ದ ಅಧ್ಯಕ್ಷ ಬರಾಕ್ ಒಬಾಮ ‘ಒಬಾಮ ಕೇರ್’ ಎಂಬ ಯೋಜನೆ ಸ್ಥಾಪಿಸಿ ಅಮೆರಿಕದ ಲಕ್ಷಾಂತರ ಬಡವರ ಆರೋಗ್ಯವನ್ನು ಪೊರೆದರು. ದುರಹಂಕಾರಿ ಅಧ್ಯಕ್ಷ ಟ್ರಂಪ್ ಇಂಥ ಜನಪರ ಯೋಜನೆಗಳನ್ನು ಕೊಲ್ಲತೊಡಗಿದ. 

ಇದರಿಂದ ಟ್ರಂಪ್ ಎಂಬಾತನಿಗೆ ಬಂದ ಲಾಭವೇನು ಎಂದು ನೀವು ಕೇಳಬಹುದು. ಮೇಲ್ವರ್ಗದ ಜನರ ಅಹಂಕಾರದ ತಣಿವು ಯಾವ ಯಾವ ರೀತಿ ಆಗುತ್ತಿರುತ್ತದೋ ಯಾರು ಬಲ್ಲರು! ಬಡವರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನಗಳ ದಿನಗೂಲಿ ಕೆಲಸ ಕೊಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯೋಜನೆಯನ್ನು ಹಿನ್ನೆಲೆಗೆ ತಳ್ಳಿರುವುದಕ್ಕೂ ಹೊಟ್ಟೆ ತುಂಬಿದವರ ದುರಹಂಕಾರವೇ ಕಾರಣ. ಕೊನೇ ಪಕ್ಷ ಬಡತನದಿಂದ ನೊಂದ ಅಧಿಕಾರಿ, ರಾಜಕಾರಣಿಗಳಿಗಾದರೂ ನೊಂದವರ   ನೋವನ್ನು ಕಡಿಮೆ ಮಾಡಲು ಪ್ರೇರಣೆಯಾಗದಿದ್ದರೆ, ಅವರ ನೋವಿಗೆ ಏನರ್ಥವಿದೆ? 

ಕೊನೆಗೂ ರಾಜಕಾರಣಿಯನ್ನಾಗಲೀ, ಯಾವುದೇ ವ್ಯಕ್ತಿಯನ್ನಾಗಲೀ ಜನ ನೆನಸಿಕೊಳ್ಳುವುದು ಆತನ ಉದಾರ ಗುಣದಿಂದ ಹಾಗೂ ಚಾಚಿದ ಸಹಾಯಹಸ್ತದಿಂದಲೇ ಹೊರತು ಡೌಲಿನ ಪ್ರದರ್ಶನದಿಂದಲ್ಲ. ಕಾಮರಾಜ್, ಅರಸು, ನಾರಾಯಣರಾವ್ ಥರದ ನಾಯಕರು ಇವತ್ತಿಗೂ ತಂಗಾಳಿಯಂತೆ ನೆನಪಾಗುವುದು ಆ ಕಾರಣಕ್ಕೇ. 

ಕೊನೇ ಮಾತು: ಗೆಳೆಯನೊಬ್ಬ ಈ ಸಲದ ಅಂಕಣದಲ್ಲಿ ಡಿಸೆಂಬರ್ ೬ರ ಅಂಬೇಡ್ಕರ್ ಪರಿನಿಬ್ಬಾಣದ ಸಂದರ್ಭಕ್ಕೆ ತಕ್ಕ ಲೇಖನವನ್ನು ಎದುರು ನೋಡುತ್ತೇನೆಂದು ಬರೆದಿದ್ದ. ಈ ಸಲದ ಲೇಖನವನ್ನು ಅಂಬೇಡ್ಕರ್ ‘ಬರೆಸಿಲ್ಲ’ ಎಂದು ಹೇಗೆ ಹೇಳುವುದು! 
 

Share on:

Comments

21 Comments



| Nataraj Honnavalli

ಬಡವರಿಗೆ ಧೈರ್ಯ ಕೊಡುವ ಲೇಳನ. ನಾನೂ ಕೂಡ ಉಪ್ಪಿಟ್ಟು ಹಾಲು‌ ಕುಡಿದು ಬೆಳದವ ಸರ್


| Dr.G.Gangaraju

ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಎಲ್ಲ ಸರ್ಕಾರಿ ಪದವಿ ಕಾಲೇಜುಗಳವರೆಗೂ ವಿಸ್ತರಿಸಬೇಕು. ಅದರಲ್ಲೂ ತಾಲ್ಲೂಕು/ಜಿಲ್ಲಾಕೇಂದ್ರಗಳಲ್ಲಿರುವ ಇಂಥ ಕಾಲೇಜುಗಳಿಗೆ ದೂರದಲ್ಲಿರುವ ಹಳ್ಳಿಗಳಿಂದ ಸೂಕ್ತ ಸಮಯಕ್ಕೆ ಬಸ್ಸು/ವಾಹನ ಸೌಕರ್ಯವಿಲ್ಲದೆ ಬರುವ ವಿದ್ಯಾರ್ಥಿಗಳು ಹಸಿವಿನ ಕಾರಣದಿಂದಲೇ ಪೂರ್ತಿ ಪಾಠ ಕೇಳದೆ ತೆರಳುವುದು ಸಾಮಾನ್ಯ ವಿದ್ಯಮಾನ.


| ಮಂಜುನಾಥ್ ಸಿ ನೆಟ್ಕಲ್

ನಿಮ್ಮ ಲೇಖನ ಓದುತ್ತಿದ್ದಂತೆ ಬಂಜೆ ಬೇನೆಯನರಿವಳೆ? ಬಲದಾಯಿ ಮದ್ದ ಬಲ್ಲಳೆ? ನೊಂದವರ ನೋವ ನೋಯದವರೆತ್ತ ಬಲ್ಲರೊ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ಎಂಬ ಅಕ್ಕ ಮಹಾದೇವಿಯ ವಚನ ನೆನಪಾಯಿತು ಸರ್. 2014 ರಲ್ಲಿಪರೀಕ್ಷಾ ವಿಚಕ್ಷಣ ಕಾರ್ಯ ನಿರ್ವಹಿಸಲು ಅನುದಾನಿತ ಕಾಲೇಜೊಂದರಲ್ಲಿ ಇದ್ದಾಗ ಅಲ್ಲಿ ಅಕ್ಕಮಹಾದೇವಿಯನ್ನು ಆರಾಧಿಸುವ ಮತ್ತು ಆಕೆಯ ವಚನಗಳನ್ನು ಪೂಜಿಸುವವರು ತಾವು ತೆಗೆದುಕೊಳ್ಳುವ ಯುಜಿಸಿ ವೇತನಕ್ಕೆ ನ್ಯಾಯ ಸಲ್ಲಿಸದೆ ಸರಿಯಾಗಿ ಪಾಠ ಮಾಡದೆ ವಿದ್ಯಾರ್ಥಿಗಳು ನಕಲು ಮಾಡಲು ಸಹಕರಿಸಲು ಯತ್ನಿಸುತ್ತಿದ್ದ ಪ್ರಾಧ್ಯಾಪಕರುಗಳೂ ಸಹ ಆಗಿನ ಅನ್ನಭಾಗ್ಯಯೋಜನೆ ಬಗ್ಗೆ ಅಸಹ್ಯ ಕಾರಿಯಾಗಿ ಮಾತಾಡುವುದನ್ನು ಕೇಳಿದ್ದೆ... ಈ ಯೋಜನೆಗಳಿಂದ ನಮಗೆ ಹಳ್ಳಿಗಳಲ್ಲಿ ಕೂಲಿಗೆ ಜನ ಬರುತ್ತಿಲ್ಲ... ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆ, ಸರ್ಕಾರಕ್ಕೆ ಇದು ತುಂಬಾ ಹೊರೆ, ನಮ್ಮ ತೆರಿಗೆ ಹಣ ಪೋಲಾಗುತ್ತಿದೆ, ಎಂದೆಲ್ಲಾ ನಾನಾ ವಿಧವಾಗಿ ಟೀಕಿಸುತ್ತಿದ್ದರು ಆದರೆ ಅವರು ತಾವು ಪಡೆಯುತ್ತಿದ್ದ ಸಂಬಳಕ್ಕೆ ತಕ್ಕ ಹಾಗೆ ತಾವು ಕೆಲಸ ಮಾಡುತಿದ್ದೇವೆಯೇ ಎಂಬುದನ್ನು ಯೋಚಿಸುತ್ತಾ ಆತ್ಮ ನಿರೀಕ್ಷಣೆ ಮಾಡಿಕೊಂಡಿದ್ದರೆ ಸರ್ಕಾರದ ಈ ಯೋಜನೆಯಿಂದ ಮಾತ್ರ ತೆರಿಗೆ ಹಣ ಪೋಲಾಗುತ್ತಿದೆಯೇ ಅಥವಾ ಬಡವರಿಗೆ ಸಹಾಯವಾಗುತ್ತಿದೆಯೇ ಅರಿವಾಗುತ್ತಿತ್ತು. ಈಗಲೂ ಹಾಗೂ ಮುಂದೆಯೂ ಇಂತಹ ಸಿನಿಕತನದ ವ್ಯಕ್ತಿಗಳು ಇರುತ್ತಾರೆ... ಹೀಗಾಗಿ ಸರ್ಕಾರಗಳು ತಲೆಕೆಡಿಸಿಕೊಳ್ಳದೆ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸಲೇಬೇಕು ಸರ್ ಧನ್ಯವಾದಗಳು


| ವಲಿ ಆರ್

2004ನೆಯ ಇಸವಿಯಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 'ನೆಲ್ಲಿಬೀಡು' ಎಂಬ ಚಿಕ್ಕ ಗ್ರಾಮಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕವಾದೆ. ಅಲ್ಲಿ ಊರು ಎಂದರೆ ಒಂದೆರಡು ಮನೆಗಳು ಅಷ್ಟೇ. ಅಲ್ಲಿಗೆ ಶಾಲೆ ಕಲಿಯಲು ಸುಮಾರು ಐದಾರು ಕಿಲೋಮೀಟರ್ ದೂರಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಮುಂಜಾನೆ ತಮ್ಮ ತಂದೆ ತಾಯಿಗಳು ಕೆಲಸಕ್ಕೆ ಹೊರಟರೆ, ಅವರೊಂದಿಗೆ ಮಕ್ಕಳು ಶಾಲೆಗೆ ಹೊರಡುತ್ತಿದ್ದರು. ಇಂದು ಈ ಮಕ್ಕಳೆಲ್ಲ ಕಲಿತು ಒಳ್ಳೆ ಒಳ್ಳೆಯ ಹುದ್ದೆಗಳಲ್ಲಿದ್ದಾರೆಂದರೆ ಅದಕ್ಕೆ ಅಂದಿನ ಮಧ್ಯಾಹ್ನದ ಬಿಸಿ ಊಟದ ಯೋಜನೆಯೇ ಕಾರಣ. ಈ ಯೋಜನೆ ಇರದೆ ಇದ್ದರೆ ಆ ಮಕ್ಕಳು, ಅದರಲ್ಲೂ ವಿದ್ಯಾರ್ಥಿನಿಯರು ಖಂಡಿತವಾಗಿ ಶಾಲೆಗೆ ಬರುತ್ತಿರಲಿಲ್ಲ. ಇಂತಹ ಯೋಜನೆಗಳು ಈ ದೇಶಕ್ಕೆ ತುಂಬಾ ಅಗತ್ಯವಾಗಿದ್ದವು. ಇಂಥವುಗಳ ಮಾಹಿತಿಯನ್ನು ಒಳಗೊಂಡ ಈ ಲೇಖನ ಬಹಳಷ್ಟು ಜನರಿಗೆ ಕಣ್ಣು ತೆರೆಸಬಹುದು. ಲೇಖನಕ್ಕಾಗಿ ಧನ್ಯವಾದಗಳು ಸರ್.


| Subramanyaswamy Swamy

ಈ ಲೇಖನ ವಾಸ್ತವ ಸತ್ಯವನ್ನು ಅನಾವರಣ ಮಾಡಿದೆ. ಹಾಗೂ ಇಂದಿರಾ ಕ್ಯಾಂಟೀನ್ ಕೂಡಾ ಅನೇಕ ಬಡವರ ಹಸಿದ ಹೊಟ್ಟೆಗಳನ್ನು ,ಬದುಕನ್ನು ಪೊರೆಯುತ್ತಿದೆ.


| ಪರಮಶಿವಮೂರ್ತಿ

ತೋಟದಪ್ಪ ಚತ್ರದಲ್ಲಿ ಉಚಿತ ಊಟ ವಸತಿಯಿಲ್ಲದಿದ್ದರೆ ನಾನು ಪದವಿ ಓದಲು ಸಾಧ್ಯವೇ ಇರಲಿಲ್ಲ. ಊಟ ಎಂಬುದು ನಮಗೆ ಜೀವವೇ ಆಗಿತ್ತು.


| Rajappa Dalavayi

ನಿಮ್ಮ ಲೇಖನ ಎದೆ ನಡುಗಿಸಿತು, ಕರಗಿಸಿತು. ಇದನ್ನು ಅಂಬೇಡ್ಕರೆ ಬರೆಸಿದ್ದು. ಅಮೇರಿಕಾದ ಪೌಡರ್ ಹಾಲು, ಉಪ್ಪಿಟ್ಟಿನ ಕಾರಣಕ್ಕೆ ಕುರಿ ಕಾಯುವುದರಿಂದ, ತುಪ್ಪಟ ಹಿಂಜುವುದರಿಂದ ಬಿಡುಗಡೆ ಹೊಂದಿ ಶಿಕ್ಷಣಕ್ಕೆ ಜಿಗಿಯಲು ನನಗೆ ಸಾಧ್ಯವಾದ ಹಳೆಯ ದಿನಗಳು ನೆನಪಾಗುತ್ತಿವೆ. ಇದುವರೆಗಿನ ನಿಮ್ಮ ಬರಹಕ್ಕಿಂತ ಜಾಸ್ತಿ ಸ್ಟ್ರಾಂಗ್ ಲೇಖನ ಇದು.


| Dr. Venkatesh T S

ಬಹುಶಃ ಈ ರೀತಿಯ ಹಸಿವಿನ ಬಗ್ಗೆ ತಾತ್ವಕ ಚಿಂತನೆ ಸಾಧ್ಯವಾಗಬೇಕಾಗಿರುವುದು ಬುದ್ಧನ ಚೈತನ್ಯದಾಯಕವಾದ ಮಾನವೀಯ ಮೌಲ್ಯಗಳನ್ನು ಲೋಕದಲ್ಲಿ ಬಿತ್ತಿದಾಗ ಮಾತ್ರ ಸಾಧ್ಯ. ಇದು ಲೋಕದ ಅನುಭವದ ಜೊತೆ ಜೀವನದ ಮೇಲೆ ಹಸಿವಿನ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಅದಕ್ಕೆ ರಾಜಕಾರಣ ಬೆರಕೆ ಆಗದಿದ್ದರೆ ಸೂಕ್ತ. ಧನ್ಯವಾದಗಳು ಸರ್ ಒಳ್ಳೆಯ ಲೇಖನ.


| K. Kiran Gowda

ನಿಮ್ಮ ಲೇಖನ ಸರಿಯಾಗಿದೆ. ಅದು ಇನ್ನೂ ಗಟ್ಟಿ ದನಿಯಲ್ಲಿ ಇರಬಹುದಾಗಿತ್ತು. ಯಾರ ವ್ಯಕ್ತಿ ಪೂಜೆ ಮಾಡುವ ಅಗತ್ಯವೂ ಇಲ್ಲ. ನೀವು ಪ್ರಸ್ತಾಪಿಸಿರುವ ಸಣ್ಣಪುಟ್ಟ ಸರ್ಕಾರಿ ಸೌಲಭ್ಯಗಳು ಜನಸಾಮಾನ್ಯರ ಮತ್ತು ದಮನಿತರ ಹಕ್ಕು. ಸರಿಯಾದ ಇತಿಹಾಸ ಮತ್ತು ಆಡಳಿತ ಸಿಕ್ಕಿದ್ದರೆ ಬಡವರು ಇಂತಹ ಸೌಲಭ್ಯಗಳಿಗೆ ಬಾಯಿ ಬಿಡಬೇಕಾಗಿರಲಿಲ್ಲ. ಫ್ರೀ ಬಸ್ ಗಿಂತ ಮುಖ್ಯವಾದ್ದೇನೆಂದರೆ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ವ್ಯಾನಿನ ವ್ಯವಸ್ಥೆ. ಯಾವುದೇ ವಿದ್ಯಾರ್ಥಿ ಮೂರು ಕಿಮೀ ಗಿಂತ ಹೆಚ್ಚು ನಡೆಯದಂತಹ ಅನುಕೂಲವಾಗಬೇಕು. ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣ ಪರಿಣಾಮಕಾರಿಯಾಗಿ ಆಗಬೇಕು.


| ರಾಮಚಂದ್ರ ನಾಯಕ

ಯಾವುದೇ ಯೋಜನೆಯಾದರೂ ಅದು ಅರ್ಹ ಫಲಾನುಭವಿಗಳಿಗೆ ತಲುಪಬೇಕು, ಆದರೆ ಅವು ಅಪ್ರಾಣಿಕರ ಕೈಗೆ ಸಿಕ್ಕು ಹೊಟ್ಟೆ ಹೊರೆವ ಸಾಧನಗಳಾಗಬಾರದು


| Mahadevaiah

ಜನರಿಗೆ ಬೇಕಾಗಿರುವುದನ್ನು ಗುರುತಿಸಿ ಯೋಜನೆಯನ್ನಾಗಿ ರೂಪಿಸಿ ಆಡಳಿತ ಮಾಡುವುದು. ಇಲ್ಲವೆ ಯೋಜನೆ ರೂಪಿಸಿ ಇದು ಜನಮುಖಿ ಆಗಿದೆ ಎಂದು ನಂಬಿಸುವುದು. ಯಾವುದೆ ಒಂದು ಸರಕಾರ ಜನತೆ ಸರಕಾರವಾಗಬೇಕಾದರೆ ಮೊದಲನೆ ವಿಧಾನ ಸರಿಯಾದುದು ಎಂಬುದು ವಾಸ್ತವ.


| ಡಾ ನಾರಾಯಣ್ ಕ್ಯಾಸಂಬಳ್ಳಿ

ಕಾಮರಾಜರು ತನ್ನ ವಾಹನ ನಿಲ್ಲಿಸಿ ಮಾತನಾಡಿಸಿದ ಆ ದನ ಕಾಯುತ್ತಿದ್ದ ಹುಡುಗ ನಾನು ಆಗಬಹುದು; ನನ್ನಂತ ಲಕ್ಷಾಂತರ ಹುಡುಗರು ಹಾಗಬಹುದು? Your writing always touches the heart." ವಂದನೆಗಳು ಸರ್ 🙏❤️


| ದೇವಿಂದ್ರಪ್ಪ ಬಿ.ಕೆ.

ಲೋಕಾನುಭವ ಮತ್ತು ರಾಜಕಾರಣ ಲೇಖನ ಓದಿದೆ. ಇದು ನನ್ನದೇ ಅನುಭವದ ಲೇಖನ. ಬಾಲ್ಯದಲ್ಲಿ ಶಾಲೆಯಲ್ಲಿನ ಮಧ್ಯಾಹ್ನದ ಊಟವೇ ನಮ್ಮ ಪಾಲಿನ ಮೃಷ್ಟಾನವಾಗಿತ್ತು. ಶಾಲೆಗೆ ಸೇರದೆ ಇದ್ದಿದ್ದರೆ ಅಕ್ಷರದ ಜ್ಞಾನವನ್ನು ಕಳೆದುಕೊಳ್ಳುವುದರ ಹಸಿವನ್ನು ನೀಗಿಸಿಕೊಳ್ಳಲು ಸಂಕಟಪಡಬೇಕಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಕೊನೆಯ ಹಳ್ಳಿಗಳಲ್ಲಿ ಇಂದಿಗೂ ಬಡತನ, ಅನಕ್ಷರತೆ ಎದ್ದು ಕಾಣುತ್ತದೆ. ಊರನ್ನು ಬಿಟ್ಟು ಪಟ್ಟಣ ಸೇರಲು ಕೂಡ ವಸತಿ ನಿಲಯಗಳು ನಮಗೆ ದಾರಿದೀಪವಾಗಿವೆ. ಬದುಕಿನಲ್ಲಿ ಶಾಂತಿ ಸಾಮರಸ್ಯ ಸಹಬಾಳ್ವೆ ಯನ್ನು ಹಾಸ್ಟೆಲ್ ಗಳು ಕಲಿಸಿವೆ. ಕನ್ನಡ ವಿಶ್ವವಿದ್ಯಾಲಯದ ಅನಿಕೇತನ ವಸತಿ ನಿಲಯ ಇಂದಿಗೂ ನಮ್ಮಂತ ಬಡ ಮಧ್ಯಮ ವರ್ಗದ ಮಕ್ಕಳನ್ನು ಪೋಷಿಸಿ ತನ್ನೊಡಲಿನಲ್ಲಿ ಯಾವುದೇ ಬೇಧ ಭಾವ ಇಲ್ಲದೆ ಕಾಪಾಡುತ್ತಿದೆ. ಜೇಡರ ದಾಸಿಮಯ್ಯ ಹೇಳುವ ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ. ಎಲ್ಲರೂ ಒಮ್ಮೆ ಹಸಿವುಗೊಂಡು ನೋಡಬೇಕು. ಅಂಬೇಡ್ಕರ್, ಕಾಮರಾಜ್ , ದೇವರಾಜ ಅರಸು ಸಿದ್ಧರಾಮಯ್ಯ, ನಾರಾಯಣರಾವ್ ಅವರ ಹಾಗೆ ಹಸಿವನ್ನು ಅನುಭವಿದಾಗ ಮಾತ್ರ ಜನಪರ ಯೋಜನೆಗಳನ್ನು ತರಲು ಸಾಧ್ಯ. ಇಂತಹವರ ಸಂಖ್ಯೆ ಹೆಚ್ಚಾಗಲಿ.


| Rupa

Wonderful


| Vijaya

ಲೇಖನ ಚೆನ್ನಾಗಿದೆ.ಹಲವರ ಅನುಭವ ಅಕ್ಷರವಾಗಿದೆ. ಪ್ರತಿಕ್ರಿಯೆ ವ್ಯಕ್ತಪಡಿಸಿದ ಲೇಖಕರು ಅಕ್ಕನ ವಚನ ಎಂದು ಉಲ್ಲೇಖಿಸಿದ ವಚನ ಬಂಜೆ ಬೇನೆ ಅರಿಯಳು ಅಕ್ಕನದಲ್ಲ ಪ್ರಕ್ಷಿಪ್ತ ಎಂದು ಗೊತ್ತಾಯಿತು ತಜ್ಞರಿಂದ.ಹೆಣ್ಣನ್ನು ಜರಿಯುವ ಕೆಲಸ ಅಕ್ಕ ಮಾಡಿರಲಾರರು. ಹಿಂದೊಮ್ಮೆ ನಾನು ಪ್ರಕಟಿಸುತ್ತಿದ್ದ ಸಂಕುಲ ಪತ್ರಿಕೆಯಲ್ಲಿ ಈ ವಚನ ಬಳಸಿ ಒಂದು ವಿಶೇಷ ಪ್ರಯೋಗ ಮಾಡಿದ್ದೆವು.ಆ ದಿನಗಳಲ್ಲಿ ಹಲವರು ಸ್ತ್ರೀ ವಾದಿ ನೆಲೆಯಲ್ಲಿ ವಿವರಿಸಿ ಈ ವಚನದ ಬಳಕೆ ತಪ್ಪು ಎಂದು ತಿಳಿ ಹೇಳಿದ್ದರು.ಉದ್ಧರಿಸುವಾಗ ಒಮ್ಮೆ ಯೋಚಿಸುವುದು ಒಳಿತೇನೋ. ಒಳ್ಳೆಯ ಲೇಖನಕ್ಕೆ ಧನ್ಯವಾದ ನಟರಾಜ್. ನಮಸ್ಕಾರ ವಿಜಯಾ


| Pradeep Nayak K

ಶಾಲಾ ಮಕ್ಕಳ ಊಟದ ವಿಚಾರವಾಗಿ ಜನರ ಮತ್ತು ನಾಯಕರ ಸ್ಪಂದನೆ ತೀರಾ ನಿರಾಶಾದಾಯಕವಲ್ಲ. ಕಾಮರಾಜರು ವ್ಯಾಪಕವಾಗಿ ಇದನ್ನು ಜಾರಿ ಮಾಡುವ ಮೊದಲು 1920 ರಲ್ಲಿ ಚೆನ್ನೈನಲ್ಲಿ ಸುಬ್ಬರಾಯುಲು ರೆಡ್ಡಿಯಾರ್ ಜಾರಿ ಮಾಡಿದ್ದರು.‌ 1930ರಲ್ಲಿ ಪುದುಚೇರಿಯಲ್ಲಿ ಫ್ರೆಂಚರು ಆರಂಭಿಸಿದ್ದರು. 2001ರಲ್ಲಿ ಪಿಯುಸಿಎಲ್ ಸುಪ್ರೀಂಕೋರ್ಟಿಗೆ ಪಿಐಎಲ್ ಹಾಕಿ ಎಲ್ಲ ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಯಿತು. ಇಸ್ಕಾನ್ ನಿಂದ ಈಗ ದಿನವು 1.76 ಮಿಲಿಯನ್ ಮಕ್ಕಳಿಗೆ ಊಟವಾಗುತ್ತಿದೆ. ʼಅದಮ್ಯ ಚೇತನʼ 1997ರಿಂದ ಆರಂಭಿಸಿ ಈಗ ಎರಡು ಲಕ್ಷ ಮಕ್ಕಳಿಗೆ ಊಟ ಕೊಡುತ್ತಿದೆ. ಸರ್ಕಾರದ ಬಿಸಿಯೂಟ ಮೆಚ್ಚುವಂತಿದೆ. ಇಂತಹ ಯೋಜನೆಯನ್ನು ಹಾಗೂ ಫ್ರೀ ಬಸ್, ಫ್ರೀ ಕರೆಂಟ್ ಫ್ರೀ ಪೆನ್ಷನ್ ಇತ್ಯಾದಿಗಳನ್ನು ಒಂದೇ ತಕ್ಕಡಿಯಲ್ಲಿ ಇಡುವುದು ಕಷ್ಟ. ಎಚ್ಚರಿಕೆಯ ಹೆಜ್ಜೆ ಇಡಬೇಕು. ಸರ್ಕಾರ ಈಗಾಗಲೇ ಶೇ.30 ಬಜೆಟ್ ವಿನಿಯೋಗವನ್ನು ಇಲಾಖೆಗಳಿಗೆ ಕಡಿತ ಮಾಡಿದೆ. ಇನ್ನೂ ಶೇ. 20 ಕಡಿತಗೊಳಿಸುವ ಅಥವಾ ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಸರ್ಕಾರದ ಮುಂದಿಟ್ಟಿದೆ. ಹಲವು ಆಡಳಿತಾರೂಢ ಶಾಸಕರೇ ಗ್ಯಾರಂಟಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಅಭಿವೃದ್ಧಿಗೆ ಒತ್ತಿಕೊಡಲು ಆಗ್ರಹಿಸುತ್ತಿದ್ದಾರೆ. ಇವನ್ನೆಲ್ಲ ಗಮನಿಸಿ ನೀವು ಗ್ಯಾರಂಟಿ ಅಂತಹ ಯೋಜನೆಗಳಿಗೆ ಬೆಂಬಲ ಕೊಡಲು ಭಾವನಾತ್ಮಕ ಮಿಡಿತದ ಜೊತೆ ವಸ್ತುನಿಷ್ಠ, ಲೆಕ್ಕಾಚಾರಯುಕ್ತ ತರ್ಕವನ್ನು ಮುಂದಿಡಲು ಪ್ರಯತ್ನಿಸಬೇಕಿತ್ತು ಎನಿಸುತ್ತದೆ ಸರ್.


| Vathsala Ranganath

ನಿಮ್ಮ ಲೇಖನ ಚೆನ್ನಾಗಿದೆ. ಈ ವಿಚಾರದಲ್ಲಿ ನ್ಯಾಯಾಂಗದ ಕೊಡುಗೆಯನ್ನು ಸ್ಮರಿಸಲೇಬೇಕಿತ್ತು. ಶಾಲಾ ಊಟವನ್ನು ಶಿಕ್ಷಣ ಮತ್ತು ಜೀವನದ ಮೂಲಭೂತ ಹಕ್ಕಿನ ಭಾಗವೆಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಈ ʼಮಿಡ್‌ ಡೇ ಮೀಲ್‌ʼ ಯೋಜನೆ ಜಾರಿಗೊಳಿಸಲು 2001ರಲ್ಲಿ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಆಹಾರದ ಮೆನ್ಯೂ ಮೂಲಭೂತ ಹಕ್ಕು ಅಲ್ಲ. ಲಕ್ಷದ್ವೀಪದಲ್ಲಿ ಹಲವು ಮಾಂಸಾಹಾರದ ಐಟಂಗಳನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿದ ದಾವಯನ್ನು ಮಜಾಗೊಳಿಸಿದೆ. ಪೌಷ್ಟಿಕಾಂಶ ಕಾಪಾಡುವುದು ಮಾತ್ರ ಕಡ್ಡಾಯ. ಕೇಂದ್ರ ಸರ್ಕಾರ ಈ ಯೋಜನೆಗೆ ಹಣಕಾಸು ಬೆಂಬಲ ನೀಡಬೇಕು. ಅಡುಗೆಯವರನ್ನು ನೇಮಿಸುವುದರಲ್ಲಿ ದಲಿತರಿಗೆ ಪ್ರಾಮುಖ್ಯತೆ ಕೊಡಬೇಕಿದೆ. ಆದರೂ ಕಾಮರಾಜರು ಶಾಲಾ ಊಟದ ಪಿತಾಮಹರೇ ಹೌದು.


| somashankara n

ಹಿರಿಯರ ಅನ್ನದಾಸೋಹದ ನೆನಪುಗಳು ಅಷ್ಟೇ ಅಲ್ಲದೆ, ಜ್ಞಾನ ಮಾರ್ಗದ ಕಡೆಗೆ ಉತ್ಸಾಹ ಮೂಡಿಸಿದ ಪರಿ ಸೂಕ್ಷ್ಮ ಮಾನವಿಕ ಮೌಲ್ಯಗಳ ಪಲ್ಲವವೇ ಸರಿ. ಆ ಎಲ್ಲಾ ಮಹನೀಯರಿಗೂ ನನ್ನ ಹೃದಯಪೂರ್ವಕ ನಮನಗಳು. ಆದರೆ, ಯಂತ್ರ ನಾಗರಿಕತೆ ಆಧುನಿಕ ಮನಸ್ಸುಗಳನ್ನು ವಿಕೃತಗೊಳಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೇಸಾಯದ ಮಹತ್ವ ಮತ್ತು ತುರ್ತನ್ನು ತಿಳಿಸುವ, ದೇಸಿ ಸಂಸ್ಕೃತಿಯ ಕಡೆಗೆ ಹೊರಳುವ ಬಹಳ ದೊಡ್ಡ ವೈಚಾರಿಕ ಕ್ರಾಂತಿ ಇವತ್ತಿನ ಅಗತ್ಯ. ತಮ್ಮಂಥ ಬುದ್ಧಿಜೀವಿಗಳು, ಸೂಕ್ಷ್ಮಜ್ಞರು ಈ ಬಗ್ಗೆ ಚಿಂತಿಸಿ ಬರೆದರೆ ಈ ನೆಲ ಮತ್ತೆ ಹಸಿರಾದೀತು.


| ಶಿವಲಿಂಗಮೂರ್ತಿ

ಶ್ರೀಸಾಮಾನ್ಯರ ಮೇಲಿನ ಅಭಿಮಾನವೇ ಈ ಲೇಖನಕ್ಕೆ ಪ್ರೇರಣೆಯಾಗಿದೆ. ಒಬ್ಬ ಶ್ರೇಷ್ಠ ಲೇಖಕನ ಸಾಮಾಜಿಕ ಜವಾಬ್ದಾರಿ ಇದೇ ಅಲ್ಲವೇ. ಒಂದು ಅತ್ಯುತ್ತಮ ಕೃತಿಯನ್ನು ಓದಿದ ಅನುಭವವೇ ನನಗಾಯಿತು. ಅದಕ್ಕಾಗಿ ತಮಗೆ ಶರಣು 🙏 1980ರ ದಶಕದಲ್ಲಿ ನಾನು ಮಿಡ್ಲ್ ಸ್ಕೂಲ್ ಹೈಸ್ಕೂಲ್ ಓದುವಾಗ ನನ್ನೂರಿನಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಸ್ಕೂಲ್ಗೆ ನಡೆದುಕೊಂಡು ಹೋಗಿ ಓದುವಂತ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇದ್ದಿದ್ದರೆ ನಾನು ಹಸಿವಿನಿಂದ ನರಳುತ್ತಿರಲಿಲ್ಲ; ಆಸಕ್ತಿಯಿಂದ ಇನ್ನೂ ಚೆನ್ನಾಗಿ ಓದುತ್ತಿದ್ದೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಅತ್ಯುತ್ತಮ ಸಾಮಾಜಿಕ ಕಾರ್ಯಕ್ರಮಗಳ ಹಿಂದೆ ಮಾನವೀಯ ಕಳಕಳಿಯುಳ್ಳ ನಾಯಕರ ಮಹಾಕನಸುಗಳಿರುತ್ತವೆಯೆಂದು ತಿಳಿದು ಸಮಾಧಾನವಾಯಿತು. ಶಾಲಾಮಕ್ಕಳಿಗಾಗಿಯೇ ಇರುವ ಬಿಸಿಯೂಟದ ಹಿಂದೆ ಕಾಮರಾಜರ ಕಳಕಳಿಯಿದೆಯೆಂದು ಗೊತ್ತಿರಲಿಲ್ಲ. ಇಂತಹ ಹಲವು ಮಾನವೀಯ ಕಾರ್ಯಕ್ರಮಗಳಿಗೆ ಕಾರಣರಾದ ಮಹಾ ಮಾನವೀಯ ಮುತ್ಸದ್ದಿಗಳೆಲ್ಲರನ್ನು ನೆನಪಿಸಿದ ಈ ಲೇಖನ ಅತ್ಯುತ್ತಮ.


| ಚರಣ್

ತಮ್ಮ ಜಾತಿ, ಸ್ಟೇಟಸ್ಸು ಇರೋರೊಂದಿಗಷ್ಟೇ ಒಡನಾಡುವ, ಕಣ್ಣು ಕಿವಿ ಆತ್ಮಸಾಕ್ಷಿಗೆ ಬೆಡ್ಶೀಟ್ ಹೊದಿಸಿಕೊಂಡಿರುವ, ಸವಲತ್ತಿನ ಕನಿಷ್ಟ ಪ್ರಜ್ಞೆಯೂ ಇಲ್ಲದವರಿಂದಷ್ಟೇ ಜನಕಲ್ಯಾಣ ಯೋಜನೆಗಳ ಬಗ್ಗೆ ಕುಹಕ ನುಡಿಗಳು ಹೊರಬರುವುದು. ನಮ್ಮ ಮನೆ ಹೇಗೆ ಒಂದು ಮಟ್ಟಕ್ಕೆ ಬೆಳಗಿತು ಎಂದು ಹಿಮ್ಮಾವಲೋಕನ ಮಾಡಿದಾಗ, ಅರಸು ಅವರ ಭೂಸುಧಾರಣೆ, ರೇಷನ್ ಅಕ್ಕಿ, ಅಮ್ಮ ನಡೆಸುತ್ತಿರುವ ಸ್ತ್ರೀ ಶಕ್ತಿ ಸಂಘ ಹಾಗೂ ಅಂಗವಿಕಲ ಅಜ್ಜಿಯ ಅಡುಗೆಗೆಲಸ ಕಣ್ಮುಂದೆ ಬರುತ್ತೆ. ದೊಡ್ಡ ದೊಡ್ಡ ಕರೋಢ್ಪತಿಗಳ ಸಾಲ ಮನ್ನಾ ಮಾಡುವ crony capitalism ವ್ಯವಸ್ಥೆ, ಭ್ರಷ್ಟಾಚಾರ ಮುಂತಾದವುಗಳ ಬಗ್ಗೆ ತುಟುಕ್ ಬಿಟುಕ್ ಎನ್ನದವರು ಕೇವಲ welfare schemeಗಳ ಬಗ್ಗೆ "ಪಾಂಡಿತ್ಯಪೂರ್ಣ" ಉಪನ್ಯಾಸ ಕೊಡುವುದು ರಾಜಕೀಯ ಆತ್ಮದ್ರೋಹಿತನವನ್ನು ಎತ್ತಿ ತೋರಿಸುತ್ತದೆ.




Add Comment


Mundana Kathana Nataka

YouTube






Recent Posts

Latest Blogs