ಬಿಸಿಲಣ್ಣು ಉಂಡವರು; ಬೆಳದಿಂಗಳು ಹಂಚಿದವರು
by Nataraj Huliyar
‘ಬಿಸಿಲಣ್ಣು ಉಂಡೀದಿ; ಬೆಳದಿಂಗಳ ಕಂಡೀದಿ…’
ಕವಿ ರವೀಂದ್ರನಾಥ ಟ್ಯಾಗೋರರನ್ನು ಬೇಂದ್ರೆ ಬಣ್ಣಿಸುವ ಈ ಪರಿಯನ್ನು ಕೀರಂ ಮೈದುಂಬಿ ಎರಚುತ್ತಿದ್ದರು! ಕವಿರೂಪಕಗಳೇ ಕಣ್ಣಾಗಿರುವ ನನ್ನಂಥವರಿಗೆ ಬಿಸಿಲು ರೇಗುತ್ತಿರುವ ಈ ಕಾಲದಲ್ಲಿ ಈ ಬಣ್ಣನೆ ನೆನಪಾದದ್ದು ಸಹಜವಾಗಿತ್ತು. ಈ ಬಣ್ಣನೆಯ ಜೊತೆಗೇ, ಬಿಸಿಲಣ್ಣು ಉಂಡು, ಬೆಳದಿಂಗಳು ಹಂಚಿದ ಮಹಾನ್ ಗುರುಗಳ ಬಗ್ಗೆ ನಂಜನಗೂಡಿನ ಕಾಲೇಜಿನಲ್ಲಿ ಮಾತಾಡಿದ್ದು, ಅಂಕಣವೊಂದರಲ್ಲಿ ಬರೆದದ್ದು ನೆನಪಾಯಿತು; ಆ ಅಂಕಣವನ್ನು ಗೆಳೆಯ ಜಯಶಂಕರ ಹಲಗೂರ್ ನಂಜನಗೂಡಿನ ಪ್ರಥಮದರ್ಜೆ ಕಾಲೇಜಿಗೆ ವರ್ಗವಾದಾಗ ಅಲ್ಲಿನ ಹುಡುಗ ಹುಡುಗಿಯರಿಗೆ ಓದಿ ಹೇಳಿದ್ದು ಕೂಡ…
ಕುತೂಹಲಕ್ಕೆ ಗಮನಿಸಿ: ಬುದ್ಧ, ಮಹಾವೀರ, ಬಸವಣ್ಣ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಜಗಜೀವನರಾಮ್... ಎಲ್ಲರೂ ಏಪ್ರಿಲ್-ಮೇ ತಿಂಗಳ ನಡುವೆ ಉರಿಬಿಸಿಲಿನ ಕಾಲದಲ್ಲೇ ಹುಟ್ಟಿದ್ದರು. ಆದ್ಯ ವಚನಕಾರ ದಾಸಿಮಯ್ಯ, ಕವಯಿತ್ರಿ ಅಕ್ಕಮಹಾದೇವಿ ಕೂಡ ಬೇಸಗೆಯಲ್ಲೇ ಹುಟ್ಟಿದ್ದರು.
ಏಪ್ರಿಲ್ ೨೦೧೬. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ಐನೂರು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಉರಿಬಿಸಿಲಿಗೆ ಸೆಡ್ಡು ಹೊಡೆದಂತೆ ಹರಡಿಕೊಂಡಿದ್ದ ಒಂದು ಸುಂದರ ಛತ್ರಿಮರದ ಅಡಿ ಸದ್ದು ಮಾಡದೆ ಕೂತಿದ್ದರು. ಆಗ ಆ ಕಾಲೇಜು ನಂಜನಗೂಡಿನ ಜೂನಿಯರ್ ಕಾಲೇಜಿನ ಆವರಣದಲ್ಲೇ ನಡೆಯುತ್ತಿತ್ತು. ಕಾಲೇಜು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ‘ಚೈತನ್ಯಕ್ಕೆ ಶರಣು’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಈ ವರ್ಷ ಕೂಡ ತಮ್ಮ ಅಧ್ಯಾಪಕ, ಅಧ್ಯಾಪಕಿಯರ ಜೊತೆ ಕೂತ ಆ ಹೊಸ ತಲೆಮಾರು ಬಿರುಬಿಸಿಲಿನ ಕಾಲದಲ್ಲಿ ಹುಟ್ಟಿದ ಮಹಾನ್ ಗುರುಗಳ ಬಗ್ಗೆ ಅತಿಥಿಗಳು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ಅದು ದೇವನೂರ ಮಹಾದೇವರ ಜೊತೆ ಈ ಅಂಕಣಕಾರನೂ ಮಾತಾಡಿದ ದಿನ.
ಈ ಮನ ಮುಟ್ಟುವ ದೃಶ್ಯವನ್ನು ನೋಡುತ್ತಿರುವಂತೆ, ನನಗಂತೂ ನೆರಳು ಕೊಡುತ್ತಿದ್ದ ಛತ್ರಿ ಮರ ಅಥವಾ ರೈನ್ ಟ್ರೀ ಒಂದು ಅನನ್ಯ ಸಂಕೇತದಂತೆ ಕಾಣತೊಡಗಿತು. ಕಾರಣ, ಅವತ್ತು ಅಲ್ಲಿದ್ದ ಎಲ್ಲರೂ ನೆನೆಯುತ್ತಿದ್ದ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ವಿವಿಧ ಕಾಲಘಟ್ಟಗಳಲ್ಲಿ ಈ ನೆಲದಲ್ಲಿ ವೈಚಾರಿಕ ಆಸರೆಗಳನ್ನು ಹಬ್ಬಿಸಿ, ಆ ಮರದಂತೆಯೇ ಹಲವು ತಲೆಮಾರುಗಳ ಜನರಿಗೆ ಆಸರೆಯಾಗಿದ್ದರು. ‘ಬಿಸಿಲಣ್ಣು ಉಂಡೀದಿ; ಬೆಳದಿಂಗಳ ಕಂಡೀದಿ’ ಎಂಬ ಗುರುದೇವ ರವೀಂದ್ರರನ್ನು ಕುರಿತ ಬೇಂದ್ರೆಬಣ್ಣನೆ ಈ ನಾಲ್ವರೂ ಚಿಂತಕರಿಗೆ ನಿಖರವಾಗಿ ಹೊಂದಿಕೊಳ್ಳುತ್ತಿತ್ತು. ದಮನಕ್ಕೊಳಗಾದವರಿಗೆ ತಂಪೆರೆಯುವ ಚಿಂತನೆಯ ಫಲಗಳನ್ನು ನೀಡುತ್ತಾ ಬಂದಿದ್ದ ಈ ಚಿಂತಕರು ಈ ನೆಲದಲ್ಲಿ ಕಂದಾಚಾರಿಗಳು ಶತಮಾನಗಳಿಂದ ಸೃಷ್ಟಿಸಿದ್ದ ಅಸಮಾನತೆಗಳ ಖಾಯಂ ಬಿರುಬೇಸಗೆಯನ್ನು ಹೊಡೆದೋಡಿಸುವ ದಾರಿಗಳನ್ನು ಹುಡುಕುತ್ತಿದ್ದರು.
ನಂಜನಗೂಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಟೀಚರ್ ಶೈಲಜಾ, ‘ಕುಸುಮಬಾಲೆ’ ಕಂಠಪಾಟಿ ಶಿವಸ್ವಾಮಿ, ಮೊರಬದ ಮಲ್ಲಿಕಾರ್ಜುನ…ಹೀಗೆ ನಾನು ಬಲ್ಲವರಿದ್ದರು. ಅವತ್ತಿನ ಕಾರ್ಯಕ್ರಮದ ಚಿಂತನೆ ಮುಖ್ಯವಾಗಿ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಸುತ್ತ ಹರಿಯುತ್ತಿತ್ತು. ಇವತ್ತು ಹಿಂತಿರುಗಿ ನೋಡಿದರೆ, ಬುದ್ಧನ ವೈಚಾರಿಕತೆ ಅನಂತರ ಬೇರೆ ಬೇರೆ ರೀತಿಯಲ್ಲಿ ಇನ್ನುಳಿದ ಮೂವರಲ್ಲೂ ಬೆಳೆದ ರೀತಿಯಲ್ಲೂ ಒಂದು ನಿರಂತರತೆ ಕಾಣುತ್ತದೆ.
ಎರಡೂವರೆ ಸಾವಿರ ವರ್ಷಗಳ ಕೆಳಗೆ ಗೌತಮ ದುಃಖದ ಕಾರಣಗಳನ್ನು ಹುಡುಕಿ ಹೊರಟ. ಈ ದುಃಖಕ್ಕೆ ಮನುಷ್ಯ ಕಾರಣನೋ ಅಥವಾ ಈ ದುಃಖವು ವ್ಯವಸ್ಥೆಯೇ ಸೃಷ್ಟಿಸಿದ ಭೇದಭಾವಗಳಲ್ಲಿದೆಯೋ ಎಂಬ ಬಗ್ಗೆ ಗಾಢವಾಗಿ ಚಿಂತಿಸಿದ. ಜನರನ್ನು ಒಡೆಯುವ ನಾಲ್ಕು ವರ್ಣಗಳ ಕಟ್ಟಳೆಗಳನ್ನು ಧಿಕ್ಕರಿಸಿ, ಅಸ್ಪೃಶ್ಯರನ್ನೂ ಒಳಗೊಂಡು ಎಲ್ಲರೂ ಒಟ್ಟಿಗೆ ಸೇರುವಂಥ ಸಂಘವನ್ನು, ಧಮ್ಮವನ್ನು ರೂಪಿಸಿದ. ಮೊದಮೊದಲು ಮಹಿಳೆಯರಿಗೆ ಸಂಘದಲ್ಲಿ ಪ್ರವೇಶವಿರಲಿಲ್ಲ; ನಂತರ ಮಹಿಳೆಯರಿಗೆ ಪರಿವ್ರಾಜಕಿಯರಾಗುವ ಅವಕಾಶ ತೆರೆಯಿತು. ಬುದ್ಧನ ಸಂಘದ ಈ ಆರಂಭದ ಹಿಂಜರಿಕೆ ಹನ್ನೆರಡನೆಯ ಶತಮಾನದ ವಚನಯುಗದ ಅನುಭವಮಂಟಪದಲ್ಲಿ ಇರಲಿಲ್ಲ; ಅಮುಗೆ ರಾಯಮ್ಮ, ಅಕ್ಕಮಹಾದೇವಿ, ನೀಲಮ್ಮ, ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಸಂಕವ್ವೆ ಮೊದಲಾದವರು ಅನುಭವಮಂಟಪದಲ್ಲಿ ಕೂತು ಕಾವ್ಯರಚನೆಯಲ್ಲಿ, ಆಧ್ಯಾತ್ಮಿಕ ಚಿಂತನೆಯಲ್ಲಿ, ಸಾಮಾಜಿಕ ವಿಮರ್ಶೆಯಲ್ಲಿ ತೊಡಗಿದ್ದರು.
ನಂತರ ಹತ್ತೊಂಬತ್ತನೆಯ ಶತಮಾನದಲ್ಲಿ ಜೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಬಾಯಿಗೆ ವಿದ್ಯಾಭ್ಯಾಸ ಕೊಡಿಸಿ, ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು; ಹುಡುಗಿಯರಿಗಾಗಿ ಶಾಲೆಗಳನ್ನು ತೆರೆದರು; ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಸಂಪ್ರದಾಯಸ್ಥರ ನೀಚ ನಡೆನುಡಿಗಳನ್ನು ಪ್ರಶ್ನಿಸಿ, ತಿದ್ದಲೆತ್ನಿಸಿದರು. ಬುದ್ಧ, ಫುಲೆ, ಕಬೀರರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದ ಅಂಬೇಡ್ಕರ್, ಶಿಕ್ಷಣವೂ ಸೇರಿದಂತೆ ಎಲ್ಲ ಹಕ್ಕುಗಳೂ ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಚಿಂತನೆ, ಹೋರಾಟಗಳನ್ನು ರೂಪಿಸಿದರು. ಇವೆಲ್ಲವನ್ನೂ ನೋಡುತ್ತಿದ್ದರೆ, ಇಂಡಿಯಾದ ಬೃಹತ್ ವೈಚಾರಿಕ ಮಹಾವೃಕ್ಷವೊಂದು ಎರಡೂವರೆ ಸಾವಿರ ವರ್ಷಗಳ ಕೆಳಗೆ ಆಳವಾಗಿ ಬೇರೂರಿ, ಹಲವು ಟೊಂಗೆಗಳಾಗಿ, ನಿರಂತರ ಫಲ ಕೊಡುತ್ತಿರುವ ಅದ್ಭುತ ಚಿತ್ರವೊಂದು ಮೂಡತೊಡಗುತ್ತದೆ!
ಈ ನಾಲ್ವರೂ ಮೊದಲು ವ್ಯಕ್ತಿಗಳಾಗಿ ಬಂಡೆದ್ದವರು. ಕ್ಷತ್ರಿಯ ಗೌತಮ ಅರಮನೆ ಬಿಟ್ಟು ಹೊರಟ. ಇತ್ತ ಬಸವಣ್ಣ, ಕವಿ ಹರಿಹರ ಬಣ್ಣಿಸುವಂತೆ, ‘ಕರ್ಮಲತೆಯಂತಿರ್ದ ಜನಿವಾರಮಂ ಕಿತ್ತು ಬಿಸುಟು’ ಹೊರಟ. ಈ ಇಬ್ಬರಲ್ಲೂ ನಿಜವಾದ ಒಳಬಂಡಾಯ ಹಾಗೂ ಸಮಾಜದ ಮೇಲುಸ್ತರದಲ್ಲಿ ಹುಟ್ಟಿದ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಪಾಪಪ್ರಜ್ಞೆ ಎರಡೂ ಸೇರಿ, ನೊಂದವರ ಬಿಡುಗಡೆಗಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸಿರಬಹುದು. ಆದರೂ, ಸಮಾಜವಾದಿ ಚಿಂತಕ-ನಾಯಕ ಎಂ.ಡಿ. ನಂಜುಂಡಸ್ವಾಮಿಯವರು ಒಂದು ಸಂದರ್ಶನದಲ್ಲಿ ಹೇಳಿದಂತೆ, ‘ಒಂದು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಬೇಕೆಂದರೆ, ಸಮಾಜದ ದೇಹ ಹಾಗೂ ಮನಸ್ಸು ಎರಡನ್ನೂ ಏಕಕಾಲಕ್ಕೆ ಬದಲಿಸಬೇಕು. ಬುದ್ಧ ಹಾಗೂ ಬಸವ ಜನರ ಮನಸ್ಸನ್ನು ಮಾತ್ರ ಬದಲಾಯಿಸಲೆತ್ನಿಸಿದರು; ಆದರೆ ಸಮಾಜದ ದೇಹ ಹಾಗೇ ಉಳಿಯಿತು.’
ಭಾರತದ ದೇಹವನ್ನು- ಅಂದರೆ ಸಾಮಾಜಿಕ-ಆರ್ಥಿಕ ರಚನೆಯನ್ನು- ಬದಲಿಸುವುದರ ಅನಿವಾರ್ಯತೆ ಮುಂದೆ ಬಂದ ಫುಲೆ- ಅಂಬೇಡ್ಕರ್ ಅವರ ಎದುರಿಗೆ ಇದ್ದವು. ಜಾತಿ ಪದ್ಧತಿಯ ವಿರುದ್ಧ ಚರಿತ್ರೆಯಲ್ಲಿ ನಡೆದ ಮಹತ್ತರ ಹೋರಾಟಗಳ ಮಿತಿಗಳು ಫುಲೆ ಹಾಗೂ ಅಂಬೇಡ್ಕರ್ ಅವರಿಗೆ ಅರ್ಥವಾಗತೊಡಗಿದವು. ಫುಲೆ ತಮ್ಮ ಹೂವಾಡಿಗ ಜಾತಿಯ ಜನರನ್ನು ಮಾತ್ರವಲ್ಲ, ಇಂಥ ಹತ್ತಾರು ಹಿಂದುಳಿದ ಜಾತಿಗಳು ಹಾಗೂ ದಲಿತರನ್ನು ಒಟ್ಟಾಗಿಸಲೆತ್ನಿಸಿದರು. ಅವರ ಮಾನಸಿಕ, ಆರ್ಥಿಕ ಬಿಡುಗಡೆಗೆ, ಅದರಲ್ಲೂ ಕೃಷಿಕ ಸಮುದಾಯದ ಕಷ್ಟಗಳ ಪರಿಹಾರಕ್ಕೆ ಪ್ರಯತ್ನಿಸಿದರು. ಅಂಬೇಡ್ಕರ್ ಸ್ವಂತದ ಅವಮಾನವನ್ನು ಮೀರುವುದಕ್ಕಿಂತ ಮುಖ್ಯವಾಗಿ ಹಲವು ಸಮುದಾಯಗಳ ಅವಮಾನಗಳಿಗೆ ಉತ್ತರ ಹುಡುಕಿದರು. ಹೀಗೆ ಈ ಚಿಂತಕರು ಹುಡುಕಿದ ಉತ್ತರಗಳು ಎಲ್ಲ ಜಾತಿಗಳಿಗೂ ಬಿಡುಗಡೆಯ ಹಾದಿಗಳನ್ನು ತೆರೆದವು.
ಇಂಡಿಯಾದ ಮನಸ್ಸಿನ ಜಡತೆ ಹಾಗೂ ಗುಲಾಮಗಿರಿಗೆ ಕಾರಣವಾಗಿದ್ದ ವಿಧಿವಾದವನ್ನು ಈ ನಾಲ್ವರೂ ತಿರಸ್ಕರಿಸಿದರು; ಮನುಷ್ಯನ ಸ್ಥಿತಿಯನ್ನು ಮನುಷ್ಯನೇ ಬದಲಿಸಬಹುದು ಎಂಬ ನಂಬಿಕೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಲೆತ್ನಿಸಿದರು. ಜನರ ಮನಸ್ಸನ್ನು ಆಳುತ್ತಿದ್ದ ಶಾಸ್ತ್ರಾಧಾರಗಳನ್ನು ತಿರಸ್ಕರಿಸಿದರು. ಗೌತಮಬುದ್ಧ ‘ಸಂದೇಹ’ವನ್ನು ಒಂದು ನೋಟಕ್ರಮವನ್ನಾಗಿ ಮಾಡಿ, ದೇವರು, ಆತ್ಮ, ಧರ್ಮಗಳ ಸುತ್ತ ಹಬ್ಬಿದ್ದ ಕಟ್ಟುಕತೆಗಳನ್ನು ತಿರಸ್ಕರಿಸಿದರು. ಬಸವಣ್ಣ ‘ಶಾಸ್ತ್ರಕ್ಕೆ ನಿಗಳನಿಕ್ಕುವೆ’ ಎಂದು ದಿಟ್ಟವಾಗಿ ಸಾರಿದರು. ಜೋತಿಬಾ ಫುಲೆ ವಿಧಿವಿಧಾನಗಳ ಕಗ್ಗಂಟುಗಳನ್ನು ಸೃಷ್ಟಿಸಿದ್ದ ಶಾಸ್ತ್ರಗಳನ್ನು ತಿರಸ್ಕರಿಸಿ, ಆಧುನಿಕ ವೈಚಾರಿಕ ವಿದ್ಯೆಯನ್ನು ಕೊಡುವ ಚಳುವಳಿಯನ್ನೇ ಶುರು ಮಾಡಿದರು. ಅಂಬೇಡ್ಕರ್ ‘ಶಾಸ್ತ್ರಗಳನ್ನು ಹೊಸದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಅವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಹೇಳಿದರು. ಮನುಧರ್ಮಶಾಸ್ತ್ರವನ್ನು ಸುಟ್ಟರು. ಆದರೆ ಜನಸಮುದಾಯಕ್ಕೆ ಧರ್ಮದ ಅಗತ್ಯವಿದೆ ಎಂದು ಅವರಿಗೆ ತೀವ್ರವಾಗಿ ಅನ್ನಿಸಿದಾಗ, ಬೌದ್ಧಧರ್ಮವನ್ನು ವೈಚಾರಿಕ ಮನಸ್ಸಿಗೆ ಒಪ್ಪಿಗೆಯಾಗುವಂತೆ ಮರುರೂಪಿಸಿದರು.
‘ಸ್ವಾತಂತ್ಯ್ರ, ಸಮಾನತೆ ಹಾಗೂ ಸೋದರಿತ್ವ-ಸೋದರತೆಗಳನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಕಲಿಯಲಿಲ್ಲ; ಬದಲಿಗೆ ನನ್ನ ಗುರು ಬುದ್ಧನಿಂದ ಕಲಿತೆ’ ಎಂದ ಅಂಬೇಡ್ಕರ್, ಈ ಮೂರು ಲಕ್ಷಣಗಳುಳ್ಳ ಧರ್ಮ ಮಾತ್ರ ಅನುಸರಿಸಲು ಯೋಗ್ಯ ಎಂದು ಹೇಳಿದರು. ಬಸವಣ್ಣನ ಮಹತ್ವವನ್ನು ಅರಿತಿದ್ದ ಅಂಬೇಡ್ಕರ್ ಕರ್ನಾಟಕದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಬರೆದ ಪತ್ರದಲ್ಲಿ, ಇಂಡಿಯಾದುದ್ದಕ್ಕೂ ಮಹಾನ್ ಚಿಂತಕರಾಗಿ ವಿಕಾಸಗೊಳ್ಳಬಹುದಾಗಿದ್ದ ಬಸವಣ್ಣನವರ ಪ್ರಭಾವವನ್ನು ಲಿಂಗಾಯತರು ಸೀಮಿತಗೊಳಿಸಿದ್ದನ್ನು ಕುರಿತು ಹೇಳಿದ್ದರು.
ಬುದ್ಧನ ಕಾಲದಲ್ಲಿ ಈ ನೆಲದ ನಿಜವಾದ ನಾಗರಿಕತೆಯ ಯುಗ ಶುರುವಾಯಿತು ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದರು. ಎಲ್ಲ ವರ್ಣಗಳೂ ವರ್ಗಗಳೂ ಒಂದೆಡೆ ಕೂತು ತಂತಮ್ಮ ಆಲೋಚನೆಯನ್ನು ಹಂಚಿಕೊಳ್ಳುವ ಬುದ್ಧನ ‘ಸಂಘ’ದ ನಂತರ ಅನುಭವ ಮಂಟಪ, ಸತ್ಯಶೋಧಕ ಸಮಾಜ ಹಾಗೂ ಅನಂತರ ಅಂಬೇಡ್ಕರ್ ರೂಪಿಸಿದ ಸಾಮಾಜಿಕ, ರಾಜಕೀಯ ಸಂಘಟನೆಗಳು ಈ ದೇಶವನ್ನು ಪ್ರಜಾಪ್ರಭುತ್ವಕ್ಕೆ ಅಣಿ ಮಾಡಿದವು. ಈ ಎಲ್ಲ ಚಿಂತಕರೂ ತಮ್ಮ ಚಿಂತನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಸ್ಪಷ್ಟ, ಸರಳ ಭಾಷೆಯನ್ನು ಬಳಸಿದ್ದರು.
ಈ ನಾಲ್ವರ ಚಿಂತನೆಗಳು ವ್ಯಾಖ್ಯಾನಕಾರರ ನೆರವಿಲ್ಲದೆಯೂ ನಮಗೆ ತಲುಪುತ್ತವೆ ಎಂಬುದು ಕೂಡ ಅವರು ತೆರೆದ ಪರಿವರ್ತನೆಯ ಹಾದಿಯಲ್ಲಿ ಮುಖ್ಯವಾದದ್ದು. ಕಾರ್ಯರೂಪಕ್ಕೆ ತರಬಲ್ಲ ಚಿಂತನೆಯನ್ನು, ಚಿಂತನೆಗೆ ತಕ್ಕ ಭಾಷೆಯನ್ನು ಅವರು ತಂತಮ್ಮ ದೇಶಭಾಷೆಗಳಲ್ಲಿ ರೂಪಿಸಿದರು; ಅಂಬೇಡ್ಕರ್ ಮರಾಠಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನೇರ, ಸರಳ ಗದ್ಯವನ್ನು ಬಳಸಿದರು. ಬುದ್ಧ, ಬಸವರು ಭಾಷೆಯನ್ನು ಬಳಸುವಾಗ ಸದಾ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವ ರೀತಿ; ಪದಗಳ ಬಳಕೆಯಲ್ಲಿ ತೋರುವ ನೈತಿಕ ಎಚ್ಚರ… ಇವೆಲ್ಲವೂ ಮಾತು, ಬರಹಗಳನ್ನು ಬಳಸುವವರಿಗೆ ಎಲ್ಲ ಕಾಲದಲ್ಲೂ ಉತ್ತಮ ಮಾದರಿಗಳಾಗಿವೆ.
ತಮ್ಮ ಕಾಲದ ಜನಬಳಕೆಯ ಹಾದಿಗಿಂತ ಭಿನ್ನವಾದ ಹಾದಿ ತುಳಿದಿದ್ದರಿಂದ ಎದುರಾದ ಅಡ್ಡಿ, ಆತಂಕಗಳನ್ನು ಈ ಚಿಂತಕರು ಎದುರಿಸಿದ ರೀತಿ ಕೂಡ ನಮಗೆ ಸ್ಫೂರ್ತಿಯಾಗಬಲ್ಲದು. ಅಂಬೇಡ್ಕರ್ ತಮ್ಮ ಜೀವಿತದ ಕೊನೆಗೆ ಹೇಳಿದರು: ‘ನಾನು ಜೀವನದಲ್ಲಿ ಈ ಕೆಲಸಗಳನ್ನು ಮಾಡುವಾಗ, ತೀವ್ರ ಯಾತನೆಗಳನ್ನು, ಕೊನೆಯಿಲ್ಲದ ಕಿರುಕುಳಗಳನ್ನು ಎದುರಿಸುತ್ತಾ, ನನ್ನ ವಿರೋಧಿಗಳ ವಿರುದ್ಧ ಸೆಣಸುತ್ತಾ ಬಂದಿದ್ದೇನೆ.’ ಈ ಮಾತು ಉಳಿದ ಮೂವರು ಚಿಂತಕರಿಗೂ ಅನ್ವಯಿಸುತ್ತದೆ. ಬಿರು ಬೇಗೆಯನ್ನು ಜೀವನದುದ್ದಕ್ಕೂ ಈ ನಾಲ್ವರು ಚಿಂತಕರೂ ಅನುಭವಿಸಿದರು. ಆದರೆ ಸಾಂಪ್ರದಾಯಿಕ ಸಮಾಜದ ಬೇಗೆ ಅವರನ್ನು ಹಿಮ್ಮೆಟ್ಟಿಸಲಿಲ್ಲ; ಮನೆಯೊಳಗೆ ಕಟ್ಟಿ ಹಾಕಲಿಲ್ಲ. ತಮ್ಮ ಜೀವನಪೂರ್ತಿ ಅವರು ಬಯಲಲ್ಲೇ ಇದ್ದರು.
ಇಂಡಿಯಾದ ಒಂದು ದೊಡ್ಡ ವೈಚಾರಿಕ ಪರಂಪರೆಯ ನಾಲ್ಕು ದೃಢವಾದ ಕಂಬಗಳಂತಿರುವ ಈ ನಾಲ್ವರನ್ನೂ ಕರ್ನಾಟಕದ ದಲಿತ ಚಳುವಳಿ ಸದಾ ಸ್ಮರಿಸುತ್ತಿದ್ದುದು, ಆನಂತರ ಬಹುಜನ ಸಮಾಜ ಪಕ್ಷ ಕರ್ನಾಟಕದಲ್ಲಿ ಅವರನ್ನು ಮುಖ್ಯ ಸಾಂಸ್ಕೃತಿಕ ನಾಯಕರಾಗಿ ಬಿಂಬಿಸಿದ್ದು ನೆನಪಾಗುತ್ತದೆ. ದಲಿತ ಚಳುವಳಿ ಹಾಗೂ ಬಹುಜನ ಸಮಾಜ ಪಕ್ಷ ಈ ಬಗೆಯ ಚಿಂತಕರನ್ನು ಒಟ್ಟಿಗೆ ಬೆಸೆಯಹೊರಟಿದ್ದರ ಹಿಂದೆ ಮಹತ್ತರ ದೂರದೃಷ್ಟಿಇತ್ತು. ಈ ದೂರದೃಷ್ಟಿಯ ಮಹತ್ವ ಇಂಡಿಯಾದ ಅನೇಕ ಬುದ್ಧಿಜೀವಿಗಳಿಗೆ, ರಾಜಕೀಯ ವಿಶ್ಲೇಷಕರಿಗೆ ಕಾಣದೇ ಹೋದದ್ದು ನಿಜಕ್ಕೂ ವಿಚಿತ್ರ. ಕೋಮುವಾದಿಗಳು, ಜಾತಿವಾದಿಗಳು, ಜಾಗತೀಕರಣವಾದಿಗಳು ಬಿಂಬಿಸುತ್ತಿರುವ ಹುಸಿ ‘ಸಾಂಸ್ಕೃತಿಕ’ ನಾಯಕರ ಎದುರು ಇಂಥ ಶ್ರೇಷ್ಠ ಸಾಂಸ್ಕೃತಿಕ ನಾಯಕರನ್ನು ಬಿಂಬಿಸುವ ಈ ಪಾಸಿಟಿವ್ ಸಾಂಸ್ಕೃತಿಕ ರಾಜಕಾರಣಕ್ಕೆ ಚಾರಿತ್ರಿಕ ಮಹತ್ವವಿದೆ. ಇಂಥ ಪ್ರಯತ್ನಗಳಿಂದ ಸೀಮಿತ ಮಟ್ಟದಲ್ಲಾದರೂ ಈ ಚಿಂತನೆಗಳು ಹೊಸ ತಲೆಮಾರುಗಳಲ್ಲಿ ಹಬ್ಬುತ್ತಾ ಹೋಗುತ್ತವೆ. ಬಿಸಿಲಲ್ಲಿ ಹುಟ್ಟಿ, ಬದುಕಿನಲ್ಲೂ ಬಿಸಿಲಣ್ಣು ಉಂಡು ವೈಚಾರಿಕ ಬೆಳದಿಂಗಳು ಹಂಚಿದ ಈ ಗುರುಗಳಿಗೆ ಭಾರತದ ಪ್ರತಿ ತಲೆಮಾರೂ ಕೃತಜ್ಞವಾಗಿರಬೇಕಾಗುತ್ತದೆ.
ಕೊನೆ ಮಾತು: ಅವತ್ತು ನನ್ನ ಮಾತಿನ ಕೊನೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎದ್ದು ನಿಂತು ‘ನಾನು ಅಸ್ಪೃಶ್ಯತೆ, ಜಾತೀಯತೆ ಇತ್ಯಾದಿಗಳನ್ನು ಆಚರಿಸುವುದಿಲ್ಲ’ ಎಂದು ಎದ್ದು ನಿಂತು ಕೈ ಮುಂದೆ ಚಾಚಿ ಪ್ರತಿಜ್ಞೆ ಕೈಗೊಂಡರು. ಆ ಅಪರೂಪದ ದೃಶ್ಯ ಕಂಡು ದೇವನೂರ್ ಆ ಅಪರೂಪದ ದೃಶ್ಯ ಕಂಡು ಅಪರೂಪಕ್ಕೆ ಥ್ರಿಲ್ಲಾಗಿದ್ದರು.
Comments
1 Comments
| Vasantha
ಬಿಸಿಲುಂಡು ಎಲ್ಲರಿಗೂ ಜ್ಞಾನದ ನೆರಳನಿತ್ತ ಎಲ್ಲ ಮಹನೀಯರಿಗೆ ಹೃದಯಪೂರ್ವಕ ನಮನಗಳು
Add Comment