ಬಾಬಾಸಾಹೇಬರ ಯುಗ ಪ್ರವರ್ತಕ ಕೃತಿಗೆ ೯೦ ವರ್ಷ!
by Nataraj Huliyar
ಈ ಸಲ ಬರೆಯಹೊರಟಿದ್ದು ಸಮಾಜವನ್ನು ಕದಲಿಸಲೆತ್ನಿಸಿದ ಅಪ್ಪಟ ಕವಿಯೊಬ್ಬನ ಬಗ್ಗೆ; ಆದರೆ ಇದ್ದಕ್ಕಿದ್ದಂತೆ ಗೆಳೆಯರು ಭಾರತೀಯ ಸಮಾಜವನ್ನು ನಿರ್ಣಾಯಕವಾಗಿ ಬದಲಿಸಿದ ಅಂಬೇಡ್ಕರ್ ಅವರ ‘ಆನ್ನಿಹಿಲೇಶನ್ ಆಫ್ ಕ್ಯಾಸ್ಟ್’ ಪುಸ್ತಕಕ್ಕೆ ಮೊನ್ನೆ ಮೇ ೧೫ಕ್ಕೆ ತೊಂಬತ್ತು ವರ್ಷ ತುಂಬಿತು ಎಂದು ನೆನಪಿಸಿದಾಗ, ಅಂಕಣದ ವಸ್ತು ಬದಲಾಯಿತು! ೧೯೯೦ರಲ್ಲಿ ಒಂದು ಸಂಜೆ ಪೊಲೀಸ್ ಆಫೀಸರ್ ಎಸ್. ಮರಿಸ್ವಾಮಿಯವರು ನಡೆಸುತ್ತಿದ್ದ ಮೀಟಿಂಗಿಗೆ ಕವಿ ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್ ನನ್ನನ್ನೂ ಕರೆದೊಯ್ದ ಚಿತ್ರ ಕಣ್ಣೆದುರು ಬಂತು.
ಅದು ಅಂಬೇಡ್ಕರ್ ಶತಮಾನೋತ್ಸವದ ಅಂಗವಾಗಿ ಕೆ. ಮರಿಸ್ವಾಮಿಯವರು ವರ್ಷಾದ್ಯಂತ ರೂಪಿಸಲು ಹೊರಟಿದ್ದ ಕಾರ್ಯಕ್ರಮಗಳ ಮೀಟಿಂಗ್. ಅಲ್ಲೇ ಕೂತ ಕವಿಗಳು ಜಾಥಾಕ್ಕಾಗಿ ‘ದಲಿತರ ನಡಿಗೆ ಹೊಸ ಬಾಳಿನ ಕಡೆಗೆ’ ಎಂಬ ಘೋಷವಾಕ್ಯ ರೂಪಿಸಿದ್ದನ್ನು ಕಂಡು ವಿಸ್ಮಯಗೊಂಡೆ. ಆ ಘೋಷವಾಕ್ಯ ಆಗ ಹೊಸದು. ನಂತರ ಈ ಘೋಷಣೆಯನ್ನು ಹಲವರು ಹಲವು ರೀತಿ ಬಳಸಿ ಅಗ್ಗವಾಗಿಸಿದ್ದನ್ನು ಕಂಡೆ.
ಅಂಬೇಡ್ಕರ್ ಶತಮಾನೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳ ಕಿರು ಪುಸ್ತಕಗಳ ಸರಣಿಯನ್ನು ಡಿ. ಆರ್. ನಾಗರಾಜ್ ರೂಪಿಸಿದರು. ಹಾಗೆ ನೋಡಿದರೆ, ಅದು ನನ್ನ ಮೊದಲ ಪೂರ್ಣಾವಧಿ ಅನುವಾದ. ಅಂಬೇಡ್ಕರ್ ಅವರ ‘ಕ್ಯಾಸ್ಟ್ಸ್ ಇನ್ ಇಂಡಿಯಾ’ …ಹಾಗೂ ‘ಅನ್ನಿಹಿಲೇಶನ್ ಆಫ್ ಕ್ಯಾಸ್ಟ್’ ಹಾಗೂ ಇನ್ನಿತರ ಪುಸ್ತಕಗಳ ಬರಹಗಳನ್ನು ಕೊಟ್ಟ ಡಿ. ಆರ್. ‘ನಿಮಗೆ ಯಾವುದು ಮುಖ್ಯ ಅನ್ನಿಸುತ್ತದೋ ಆ ಭಾಗಗಳನ್ನು ಅನುವಾದಿಸಿ’ ಎಂದರು. ಕೆಲವೆಡೆ ಡಿ. ಆರ್. ಪೆನ್ಸಿಲ್ಲಿನಲ್ಲಿ ಮಾರ್ಕ್ ಮಾಡಿದ್ದ ಭಾಗಗಳಿದ್ದವೆಂದು ಕಾಣುತ್ತದೆ. ಒಂದೆರಡು ವಾರದಲ್ಲಿ ನಾನು ಸಂಗ್ರಹಾನುವಾದ ಮಾಡಿದ ಈ ಪುಟ್ಟ ಪುಸ್ತಕ ‘ಅಸ್ಪೃಶ್ಯರ ವಿಮೋಚನೆ’ಎಂಬ ಹೆಸರಿನಲ್ಲಿ ಡಿ.ಟಿ.ಪಿ- ಅದು ಡಿಟಿಪಿ ಬಂದ ಹೊಸದು- ಆಗಿ ಪ್ರೆಸ್ಸಿನಲ್ಲಿ ಮುದ್ರಣವಾಗುತ್ತಿತ್ತು. ಈ ಸರಣಿಯ ಪುಸ್ತಕಗಳು ಬರುವವರೆಗೂ ಹಗಲೂ ರಾತ್ರಿ ಚಾಮರಾಜಪೇಟೆಯ ಸತ್ಯಶ್ರೀ ಮುದ್ರಣಾಲಯಕ್ಕೆ ಹೋಗುತ್ತಿದ್ದ ಥ್ರಿಲ್ ನೆನಪಿದೆ. ಇಂದೂಧರ ಹೊನ್ನಾಪುರ ಅಂಬೇಡ್ಕರ್ ಅವರ ಅಪರೂಪದ ಫೋಟೋವೊಂದನ್ನು ಈ ಸರಣಿಯ ಮುಖಪುಟಕ್ಕಾಗಿ ತಂದಿದ್ದರು. ಈ ಸರಣಿಗೆ ಎಲ್ಸಿ ನಾಗರಾಜ್, ಬಿ. ಗಂಗಾಧರಮೂರ್ತಿ ಕೂಡ ಕೆಲವು ಕಿರುಪುಸ್ತಕಗಳನ್ನು ಅನುವಾದಿಸಿದ್ದರು.
ಮುಂದೆ ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ‘ಜಾತಿವಿನಾಶ’ ಕೃತಿಯ ಜೊತೆಗೆ ಪೂರ್ಣತೇಜಸ್ವಿಯವರ ಪ್ರಭಾವಶಾಲಿ ಕಾದಂಬರಿ ’ಚಿದಂಬರ ರಹಸ್ಯ’ವನ್ನು ತೌಲನಿಕವಾಗಿ ನೋಡಿ ಸಾಂಸ್ಕೃತಿಕ ಅಧ್ಯಯನಕ್ಕೆ ಒಳಪಡಿಸುವ ಸಂದರ್ಭವೂ ಬಂತು. ಅಂಬೇಡ್ಕರ್ ಅವರ ‘ಜಾತಿವಿನಾಶ’ ಪಠ್ಯ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪಠ್ಯವಾಗಲು ನಾನು ಕೂಡ ನಿಮಿತ್ತಮಾತ್ರನಾದೆ ಎಂಬ ಹೆಮ್ಮೆ ಇವತ್ತಿಗೂ ಹಾಗೇ ಇದೆ. ಹಾಗೆಯೇ ‘ಜಾತಿ ಪಥ ತೋಡಕ್ ಮಂಡಲ್’ ಸಮಾವೇಶಕ್ಕಾಗಿ ಒಂದು ಮಹಾನ್ ಥೀಸಿಸ್ಸಿಗೆ ಸಮನಾದ ಭಾಷಣ ಸಿದ್ಧಪಡಿಸಿದ ಅಂಬೇಡ್ಕರ್ ಬೌದ್ಧಿಕ ಸಾಹಸ ಇವತ್ತಿಗೂ ರೋಮಾಂಚನ ಉಂಟು ಮಾಡುತ್ತದೆ; ಸ್ಫೂರ್ತಿ ಹುಟ್ಟಿಸುತ್ತದೆ. ಸಮಾವೇಶ ಏರ್ಪಡಿಸಿದ್ದ ಮಂಡಲ ಈ ಭಾಷಣದ ಕೆಲವು ಭಾಗಗಳ ಬಗ್ಗೆ ಅಸಮ್ಮತಿ ಸೂಚಿಸಿತು. ಅವನ್ನು ಬದಲಿಸಲು ಒಪ್ಪದ ಅಂಬೇಡ್ಕರ್ ಅಲ್ಲಿ ಪ್ರಬಂಧ ಮಂಡಿಸಲಿಲ್ಲ. ಕೊನೆಗೆ ತಾವೇ ಈ ಪುಸ್ತಕವನ್ನು ಪ್ರಕಟಿಸಿದರು. ಈ ಪುಸ್ತಕದ ಹಲವು ಅನುವಾದಗಳು ಈಗ ಕನ್ನಡಿಗರಿಗೂ ಪರಿಚಿತವಾಗಿವೆ. ಈ ಪುಸ್ತಕ ಲೋಕದಾದ್ಯಂತ ಮಹತ್ತರ ಕ್ರಾಂತಿಕಾರಕ ಪಠ್ಯವಾಗಿ ಹಬ್ಬಿದೆ.
ಬಾಬಾಸಾಹೇಬರ ಈ ಕೃತಿಯ ಕೆಲವು ಭಾಗಗಳನ್ನು ಇಪ್ಪತ್ತಾರು ವರ್ಷಗಳ ಕೆಳಗೆ ಅನುವಾದಿಸಿದ ನಂತರ, ಅವುಗಳನ್ನು ಒಳಗೊಂಡ ವಿಶ್ಲೇಷಣೆಯ ಹತ್ತಾರು ಬರಹ-ಭಾಷಣಗಳನ್ನು ಆಗಾಗ್ಗೆ ಮಂಡಿಸಿರುವೆ. ಆ ಬರಹ-ಮಾತುಗಳ ಕೆಲವು ಭಾಗಗಳನ್ನು ಹೊಸ ಓದುಗಿ-ಓದುಗರಿಗಾಗಿ ಮುಂದಿನ ಭಾಗದಲ್ಲಿ ಕೊಟ್ಟಿರುವೆ:
೨
ಇಪ್ಪತ್ತನೆಯ ಶತಮಾನದ ಜಾತಿಪದ್ಧತಿಯ ಅಧ್ಯಯನಕಾರರು ಜನಾಂಗೀಯವಾದ, ಮೈಬಣ್ಣ ಮುಂತಾದವುಗಳ ಆಧಾರದ ಮೇಲೆ ಜಾತಿಪದ್ಧತಿಯನ್ನು ವಿವರಿಸಿದ ಕ್ರಮಗಳನ್ನು ಅಂಬೇಡ್ಕರ್ ತಿರಸ್ಕರಿಸಿದರು. ಅನುಕರಣೆ ಹಾಗೂ ಬಹಿಷ್ಕಾರಗಳಿಂದ ಜಾತಿಗಳು ಬೆಳೆದ ರೀತಿಯನ್ನು ಕಂಡುಕೊಂಡ ಅಂಬೇಡ್ಕರ್ ಅವರು ‘ಜಾತಿ ಎನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ’ ಎಂದು ಆಧಾರಸಹಿತ ತೋರಿಸಿದರು. ಜಾತಿಪದ್ಧತಿಯನ್ನು ಶ್ರಮದ ವಿಭಜನೆ ಎಂದು ವಿದೇಶಿ ಅಧ್ಯಯನಗಳು ಗ್ರಹಿಸಿದ್ದವು. ‘ಜಾತಿಪದ್ಧತಿ ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ. ಅದ್ದರಿಂದಲೇ ಭಾರತದಲ್ಲಿ ಕಾರ್ಮಿಕರು ಕೂಡ ಒಗ್ಗೂಡಿ ಬದಲಾವಣೆಗೆ ಯತ್ನಿಸದಂತೆ ಜಾತಿಪದ್ಧತಿ ಅಡ್ಡಿಯಾಗಿದೆ’ ಎಂಬ ಸತ್ಯವನ್ನು ಅಂಬೇಡ್ಕರ್ ಕಾಣಿಸಿದರು. ಜಾತಿಪದ್ಧತಿ ಏಕಕಾಲಕ್ಕೆ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಹಾಗೂ ವಿವಿಧ ಬಗೆಯ ವಿಕಾರಗಳನ್ನು, ಭೇದಭಾವಗಳನ್ನು ಸೃಷ್ಟಿಸುವ ರೀತಿಯನ್ನು ಭಾರತದ ಭೂತ-ವರ್ತಮಾನಗಳೆರಡನ್ನೂ ಶೋಧಿಸುವುದರ ಮೂಲಕ ತೋರಿಸಿಕೊಟ್ಟರು.
ಧಾರ್ಮಿಕ ಮೂಲಗಳೂ ಸೇರಿದಂತೆ ವಿವಿಧ ಮೂಲಗಳಿಂದ ಜಾತಿಪದ್ಧತಿ ತನ್ನ ಅಸ್ತಿತ್ವಕ್ಕೆ ನ್ಯಾಯಬದ್ಧತೆಯನ್ನು ಸೃಷ್ಟಿಸಿಕೊಂಡಿರುವ ರೀತಿಯನ್ನು ಹಾಗೂ ಅದು ಬಗೆಬಗೆಯ ಅಧಿಕಾರಗಳನ್ನು ಗಳಿಸಿಕೊಂಡ ರೀತಿಯನ್ನು ಅಂಬೇಡ್ಕರ್ ತೋರಿಸಿದರು. ಸಮಾಜದ ಮೂಲಭೂತ ಬದಲಾವಣೆಗೆ ಜಾತಿ ಅಡ್ಡಿಯಾಗಿರುವುದನ್ನು, ಕೆಳಜಾತಿಗಳ ಪ್ರಗತಿಗೆ ಮೇಲುಜಾತಿಗಳು ಅಡ್ಡಿಯಾಗಿರುವ ರೀತಿಯನ್ನು ಅಂಬೇಡ್ಕರ್ ಗುರುತಿಸಿದರು. ಸಮೂಹದ ಸರ್ವಾಧಿಕಾರವನ್ನು ಹೇರುವ ಜಾತಿಪದ್ಧತಿ ವ್ಯಕ್ತಿಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗಿದೆ; ಜಾತಿ ಮೂಲತಃ ‘ಒಂದು ನಕಾರಾತ್ಮಕ ವ್ಯವಸ್ಥೆ’ (ಅಂದರೆ, ಇದನ್ನು ಮಾಡಬೇಡ, ಅದನ್ನು ಮಾಡಬೇಡ ಎಂಬುದನ್ನೇ ಆಜ್ಞಾಪಿಸುವ ವ್ಯವಸ್ಥೆ) ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟರು.
ಆ ಕಾಲದ ಜಾತಿಪದ್ಧತಿಯ ಸಮರ್ಥಕರು ‘ಉತ್ತಮ ತಳಿ’ ಮುಂತಾದ ಸಿದ್ಧಾಂತಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ವರ್ಣ ಹಾಗೂ ಜಾತಿಗಳು ಬೇರೆ ಬೇರೆ ಎಂದು ವಾದಿಸುತ್ತಿದ್ದರು. ವರ್ಣ ಹಾಗೂ ಜಾತಿಗಳ ನಡುವೆ ಇರುವ ಅನೇಕ ಸಾಮಾನ್ಯ ಅಂಶಗಳನ್ನು ಅಂಬೇಡ್ಕರ್ ಸ್ಪಷ್ಟವಾಗಿ ತೋರಿಸಿದರು. ‘ಶಾಸ್ತ್ರಗಳನ್ನು ಹೊಸದಾಗಿ ವಿವರಿಸುವುದರಿಂದ ಏನೂ ಪ್ರಯೋಜನವಿಲ್ಲ. ಅವುಗಳನ್ನು ಜನ ಹೇಗೆ ಅರ್ಥ ಮಾಡಿಕೊಂಡಿದ್ದಾರೆಂಬುದೇ ಮುಖ್ಯ’ ಎಂದ ಅಂಬೇಡ್ಕರ್, ಜಾತಿಪದ್ಧತಿಯನ್ನು ವಿನಾಶ ಮಾಡುವುದೊಂದೇ ಜಾತಿಯಿಂದ ಬಿಡುಗಡೆಗೊಳ್ಳುವ ಮಾರ್ಗ ಎಂದು ನಂಬಿದ್ದರು.
ಜಾತಿಗಳು ರೂಪುಗೊಂಡದ್ದನ್ನು ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಹೇಳುತ್ತಾರೆ: ‘ನನ್ನ ಪ್ರಕಾರ, ಜಾತಿ ಎಂಬ ಒಂದು ಗುಂಪಿರುವುದಿಲ್ಲ. ಇದ್ದರೆ ಹಲವು ಜಾತಿಗಳೇ ಇರುತ್ತವೆ. ಹೀಗೆ ಸೃಷ್ಟಿಗೊಂಡ ಜಾತಿಗಳಲ್ಲಿನ ಸದಸ್ಯನ ಯಾವುದೇ ಬಗೆಯ ಹೊಸ ಹೆಜ್ಜೆ ಜಾತಿಯ ನಿಯಮಗಳಿಗೆ ವಿರೋಧಿಯಾದರೆ, ಅವನು ಆ ಜಾತಿಯಿಂದ ಹೊರಗೆಸೆಯಲ್ಪಡುತ್ತಾನೆ. ಹೀಗೆ ಹೊರಗೆಸೆಯಲ್ಪಟ್ಟವನಿಗೆ ಮತ್ತೊಂದು ಜಾತಿಯ ಬಾಗಿಲುಗಳು ಮುಚ್ಚಿರುತ್ತವೆ. ಈ ಬಗೆಯ ಬಹಿಷ್ಕೃತರಿಂದ ಹೊಸ ಜಾತಿಗಳು ಹುಟ್ಟುತ್ತವೆ. ಈ ಬಗೆಯಲ್ಲಿ ಜಾತಿಗಳನ್ನು ಹುಟ್ಟು ಹಾಕಿಕೊಳ್ಳಲೇಬೇಕೆನ್ನುವುದು ಒಂದು ಮನಸ್ಥಿತಿಯೇನೂ ಅಲ್ಲ. ಜಾತಿಗಳು ಮುಚ್ಚಿದ ಗುಂಪುಗಳಾದ್ದರಿಂದ ಹೀಗೆ ಹೊಸ ಜಾತಿಗಳು ತಾವಾಗಿಯೇ ಹುಟ್ಟುತ್ತವೆ.’
‘ಇವತ್ತು ಕೂಡ ಜಾತಿಯ ಸಮರ್ಥಕರಿರುವುದು ಕರುಣಾಜನಕ’ ಎನ್ನುವ ಅಂಬೇಡ್ಕರ್, ‘ಜಾತಿವ್ಯವಸ್ಥೆಯೆಂದರೆ ಶ್ರಮದ ವಿಭಜನೆ ಮಾತ್ರ’ ಎನ್ನುವವರಿಗೆ ಹೀಗೆ ಹೇಳಿದರು: ‘ಜಾತಿ ಕೇವಲ ಶ್ರಮದ ವಿಭಜನೆಯಲ್ಲ; ಅದು ಶ್ರಮಜೀವಿಗಳ ವಿಭಜನೆ ಕೂಡ. ಇದು ವಿಭಜನೆಯಷ್ಟೇ ಅಲ್ಲ; ಈ ವಿಭಜನೆಗಳನ್ನು ಒಂದರ ಕೆಳಗೊಂದು ಜೋಡಿಸಿರುವ ಶ್ರೇಣೀಕೃತ ವ್ಯವಸ್ಥೆ. ಯಾವ ದೇಶದಲ್ಲೂ ಕಾಣದ ಶ್ರೇಣೀಕರಣವಿದು. ಈ ಶ್ರೇಣೀಕರಣ ವ್ಯಕ್ತಿಯ ಸ್ವಂತ ಸಾಮರ್ಥ್ಯದ ಮೇಲೆ ನಿರ್ಧಾರವಾದದ್ದಲ್ಲ. ವ್ಯಕ್ತಿಯ ತಂದೆ, ತಾಯಂದಿರ ಸಾಮಾಜಿಕ ಸ್ಥಾನದ ಮೇಲೆ ನಿರ್ಧಾರವಾದದ್ದು. ಉದ್ಯೋಗಗಳ ಪುನರ್‌ಹೊಂದಾಣಿಕೆಯನ್ನೇ ಮಾಡದ ಜಾತಿ ನಿರುದ್ಯೋಗದ ಮೂಲವೂ ಹೌದು. ಜಾತಿಯ ಕಾರಣಕ್ಕಾಗಿಯೇ ಕೀಳೆಂದು ಕಾಣಲಾಗುವ ಎಷ್ಟೋ ಕಸುಬುಗಳು ಇಂಡಿಯಾದಲ್ಲಿವೆ. ಇಂಥ ಕಸುಬುಗಳಿಂದ ತಪ್ಪಿಸಿಕೊಳ್ಳುವ ಬಯಕೆ ಮಾನವರಲ್ಲಿ ನಿರಂತರವಾಗಿರುತ್ತದೆ. ಆದ್ದರಿಂದ ಮನಸ್ಸೂ ಬುದ್ಧಿಯೂ ತೊಡಗಲಾರದ ಕಸುಬುಗಳಲ್ಲಿ ಎಂಥ ಸಾಮರ್ಥ್ಯವೂ ವ್ಯಕ್ತವಾಗಲಾರದು. ಹೀಗಾಗಿಯೇ ಆರ್ಥಿಕ ವ್ಯವಸ್ಥೆಯಾಗಿ ಕೂಡ ಜಾತಿ ಒಂದು ಹಾನಿಕಾರಕ ಸಂಸ್ಥೆಯಾಗಿದೆ.’
ಅಂಬೇಡ್ಕರ್ ಪ್ರಕಾರ, ‘ಹಿಂದೂ ಸಮಾಜವೆನ್ನುವುದು ಒಂದು ‘ಮಿಥ್’. ಇರುವುದೇನಿದ್ದರೂ ಜಾತಿಗಳ ಒಂದು ಸಮೂಹ. ಇಲ್ಲಿ ಪ್ರತಿ ಜಾತಿಯೂ ತನ್ನ ಅಸ್ತಿತ್ವದ ಬಗ್ಗೆ ಜಾಗೃತವಾಗಿರುತ್ತದೆ. ಒಂದು ಜಾತಿಗೂ ಇನ್ನೊಂದು ಜಾತಿಗೂ ಸಂಪರ್ಕ ಉಂಟಾಗುವುದು ಹಿಂದೂ-ಮುಸ್ಲಿಂ ಜಗಳಗಳಾದಾಗ ಮಾತ್ರ. ರಾಷ್ಟ್ರೀಯವಾದಿಗಳು ಭಿನ್ನತೆಯಲ್ಲೂ ಇರುವ ಸಾಮ್ಯತೆ ಹಾಗೂ ಏಕತೆಯನ್ನು ತೋರಿಸುತ್ತಾರೆ. ಆದರೆ ಈ ಸಾಮರ್ಥ್ಯಗಳ ಆಧಾರದ ಮೇಲೆ ಹಿಂದೂಗಳನ್ನು ಸಂವಿಧಾನಿಕ ಸಮಾಜ ಎನ್ನಲಾಗದು. ಈ ಬಗೆಯ ಸಾಮ್ಯತೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಇಟ್ಟಿಗೆಯಂತೆ ಸಾಗಿರಬಹುದು, ಅಷ್ಟೆ. ಸಂಸ್ಕೃತಿ ಪ್ರಸರಣದಿಂದಾಗಿ ಎಷ್ಟೋ ಬುಡಕಟ್ಟುಗಳ ನಡುವೆ ಸಾಮ್ಯವಿದೆ. ಆದರೆ ಈ ಕಾರಣದಿಂದಲೇ ಅವು ಸಮಾಜವೊಂದನ್ನು ರೂಪಿಸಲಾರವು. ಹಾಗೆ ನೋಡಿದರೆ ಹಬ್ಬಗಳಲ್ಲಿರುವ ಸಾಮ್ಯತೆಗಳು ವಿವಿಧ ಜಾತಿಗಳನ್ನು ಎಂದೋ ಒಂದಾಗಿ ಬೆಸೆಯಬೇಕಾಗಿತ್ತು. ಇಂಥ ಪರಸ್ಪರ ಸಮಾನವಾದ ಚಟುವಟಿಕೆಗಳಿಗೆ ಜಾತಿ ಅಡ್ಡಿಯಾಗಿರುವದರಿಂದಲೇ ಹಿಂದೂಗಳು ಒಂದು ಸಮಾಜವಾಗದೇ ಹೋಗಿರುವುದು.’
‘ಜಾತಿ ಒಂದು ನಕರಾತ್ಮಕ ವ್ಯವಸ್ಥೆ’ ಎನ್ನುವುದನ್ನು ಅಂಬೇಡ್ಕರ್ ಚರಿತ್ರೆಯುದ್ದಕ್ಕೂ ಗುರುತಿಸುತ್ತಾರೆ: ‘ಅನಾಗರಿಕರನ್ನು ಸುಧಾರಿಸುವುದಿರಲಿ, ಹಿಂದೂ ವಲಯದೊಳಗೇ ಕೆಳಜಾತಿಯ ಹಿಂದೂಗಳು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರದಂತೆ ಮೇಲು ಜಾತಿಯ ಹಿಂದೂಗಳು ತಡೆದಿದ್ದಾರೆ. ಉದಾಹರಣೆಗೆ, ಬ್ರಾಹ್ಮಣರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲೆತ್ನಿಸಿದ ಪಥಾರೆ ಪ್ರಭು ಹಾಗೂ ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಳ್ಳಲಾರಂಭಿಸಿದರು. ಬ್ರಾಹ್ಮಣರ ಉಡುಗೆಗಳನ್ನೂ ನಡವಳಿಕೆಗಳನ್ನೂ ಅನುಸರಿಸಲಾರಂಭಿಸಿದರು. ಅವರು ಹಾಗೆ ಅನುಸರಿಸಿದ ಕೆಲವೇ ದಿನಗಳಲ್ಲಿ ಅವರ ಈ ಪ್ರಯತ್ನವನ್ನು ಬ್ರಾಹ್ಮಣರು ಪೇಶ್ವೆಗಳ ಅಧಿಕಾರವನ್ನು ಉಪಯೋಗಿಸಿಕೊಂಡು ಮುರಿದರು. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಸೋನಾರರ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಿದರು.’
‘ಚಾತುರ್ವರ್ಣದ ಪ್ರತಿಪಾದಕರ ವಾದಗಳು ವಿಚಿತ್ರವಾಗಿವೆ’ ಎನ್ನುವ ಅಂಬೇಡ್ಕರ್, ಚಾತುರ್ವರ್ಣ ಪ್ರತಿಪಾದಕರ ವಾದಗಳನ್ನು ತಾರ್ಕಿಕವಾಗಿ ಮುಖಾಮುಖಿಯಾಗುತ್ತಾರೆ: ‘ಇತರ ಮೂರು ವರ್ಣಗಳು ಶೂದ್ರನನ್ನು ನೋಡಿಕೊಳ್ಳುವಾಗ ಶೂದ್ರನೇಕೆ ಸಂಪತ್ತನ್ನು ಸಂಪಾದಿಸಬೇಕು ಎಂಬ ಚಾತುರ್ವರ್ಣ ಪ್ರತಿಪಾದಕರ ವಾದವೇನೋ ಹಿತವಾಗಿ ಕೇಳಿಸುತ್ತದೆ. ಆದರೆ ವಾಸ್ತವವಾಗಿ ಈ ಮೂರೂ ವರ್ಣಗಳು ಪರಸ್ಪರ ಒಂದಾಗಿ ಸೇರಿ ಶೂದ್ರ ತಲೆಯೆತ್ತದಂತೆ ಮಾಡಿವೆ. ಶೂದ್ರನಿಗೆ ಜ್ಞಾನ ಸಂಪಾದನೆಗೆ ಅವಕಾಶವೇ ಇರದಿದ್ದುದರಿಂದ ತನ್ನ ಹಿತಗಳೇನೆಂದು ಅವನಿಗೆ ಅರಿವೇ ಆಗಲಿಲ್ಲ. ಅಧಿಕಾರದ ವಿರುದ್ಧ ಉಸಿರೆತ್ತಲು ಅವನಲ್ಲಿ ಅಸ್ತ್ರಗಳಿರಲಿಲ್ಲ. ಜಗತ್ತಿನ ಎಲ್ಲೆಡೆ ಕ್ರಾಂತಿಯಾದರೂ ಇಂಡಿಯಾದಲ್ಲಿ ಆಗದೇ ಹೋದುದಕ್ಕೆ ಕೆಳಜಾತಿಯ ಹಿಂದೂಗಳು ಚಾತುರ್ವರ್ಣ ಪದ್ಧತಿಯಿಂದಾಗಿ ದುರ್ಬಲರಾಗಿರುವುದೇ ಕಾರಣ. ಶೂದ್ರರು ಅಧಿಕಾರದಲ್ಲಿದ್ದ ಮೌರ್ಯರ ಕಾಲ ಬಿಟ್ಟರೆ, ಉಳಿದೆಲ್ಲಾ ಘಟ್ಟದಲ್ಲಿ ಈ ದೇಶ ಸೋಲು ಮತ್ತು ಕತ್ತಲೆಯಲ್ಲಿ ನರಳಿದೆ. ಮುಸ್ಲಿಮರು, ಕ್ರಿಶ್ಚಿಯನ್ನರಲ್ಲಿ ಕೂಡ ಜಾತಿಗಳಿವೆ ಎಂದು ಹಿಂದೂಗಳು ಸಮಾಧಾನ ತಳೆಯುತ್ತಾರೆ. ಆದರೆ ಇದರಲ್ಲಿ ವ್ಯತ್ಯಾಸಗಳಿವೆ. ವಿವಿಧ ಜಾತಿಗಳನ್ನು ಒಟ್ಟಿಗೇ ಹಿಡಿದಿಡುವ ಕಟ್ಟುಗಳು ಹಿಂದೂಗಳಲ್ಲಿಲ್ಲ. ಹಿಂದೂ ನಾಗರಿಕತೆ ಸಹಸ್ರಾರು ವರ್ಷಗಳಿಂದ ಬದುಕಿ ಉಳಿದು ಬಂದಿದೆಯೆಂದು ಡಾ.ರಾಧಾಕೃಷ್ಣನ್‌ರಂಥವರು ಹೆಮ್ಮೆಯಿಂದ ಹೇಳುತ್ತಾರೆ. ಆದರೆ ‘ಬದುಕುವುದಕ್ಕೂ’ ‘ಸಾರ್ಥಕವಾಗಿ ಬದುಕುವುದಕ್ಕೂ’ ವ್ಯತ್ಯಾಸವಿಲ್ಲವೆ?’
೩
ತಮ್ಮ ಪ್ರಕಾರ ಧರ್ಮದ ನಾಶ ಎಂದರೇನು ಎಂಬ ಬಗ್ಗೆ ಅಂಬೇಡ್ಕರ್ ವಿವರಿಸುತ್ತಾ ‘ಯಾವಾಗ ಜನರಿಗೆ ಇದು ಧರ್ಮವಲ್ಲ, ಬರೀ ನಿಯಮ ಎಂದು ಮನವರಿಕೆಯಾಗುತ್ತದೋ ಆ ಗಳಿಗೆಯೇ ಆ ನಿಯಮವನ್ನು ಬದಲಿಸಲು ಅವರು ಸಿದ್ಧರಾಗುತ್ತಾರೆ’ ಎನ್ನುತ್ತಾರೆ. ‘ಇದರರ್ಥ ಧರ್ಮದ ಅಗತ್ಯವೇ ಇಲ್ಲ ಎಂದಲ್ಲ’ ಎನ್ನುವ ಅಂಬೇಡ್ಕರ್, ‘ಆದರೆ ಅದು ತತ್ವಗಳ ಧರ್ಮವಾಗಿರಬೇಕು’ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ‘ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವುದು ಹೇಗೆ? ಜಾತಿವಿನಾಶ ಹೇಗೆ?’ ಎಂಬುದನ್ನು ಕುರಿತು ಅಂಬೇಡ್ಕರ್ ಬರೆಯುತ್ತಾರೆ: ‘ಅಂತರ್ಜಾತೀಯ ವಿವಾಹ ಮಾತ್ರ ಜಾತಿವಿನಾಶಕ್ಕೆ ಸೂಕ್ತ ಕಾರ್ಯಕ್ರಮ. ರಕ್ತದ ಬೆರೆಯುವಿಕೆ ಮಾತ್ರ ತನ್ನವರೆಂಬ ಭಾವನೆ ಹುಟ್ಟು ಹಾಕಬಲ್ಲದು. ಛಿದ್ರಗೊಂಡ ಸಮಾಜದಲ್ಲಿ ವಿವಾಹ ಒಟ್ಟುಗೂಡಿಸುವ ಶಕ್ತಿಯಾಗಿ ಕೆಲಸ ಮಾಡುತ್ತದೆ. ಯಾಕೆಂದರೆ ಜಾತಿಯೆನ್ನುವುದು ಒಂದು ಗೋಡೆಯಲ್ಲ; ಒಂದು ಮನಸ್ಥಿತಿ. ಅಸ್ಪೃಶ್ಯತೆಯನ್ನು ತೊಡೆಯಲೆತ್ನಿಸುತ್ತಿರುವ ಗಾಂಧಿಯವರಂಥವರು ಅರಿಯಬೇಕಾಗಿರುವುದು ಏನೆಂದರೆ, ಜನರ ಕ್ರಿಯೆಗಳು ಅವರು ನಂಬುವ ಶಾಸ್ತ್ರಗಳಿಂದ ನಿಯಂತ್ರಿಸಲ್ಪಟ್ಟಿರುತ್ತವೆ. ಆ ಶಾಸ್ತ್ರಗಳಲ್ಲಿನ ನಂಬಿಕೆ ನಾಶವಾಗುವ ತನಕ ಅವರು ಬದಲಾಗುವುದಿಲ್ಲ. ಕಡೆಯದಾಗಿ, ಜಾತಿ ಹಿಂದೂಗಳ ಉಸಿರು ನಿಜ. ಆದರೆ ಈ ಉಸಿರು ಇಡೀ ಪರಿಸರವನ್ನೇ ಮಲಿನಗೊಳಿಸಿದೆ. ಕ್ರೈಸ್ತರು, ಸಿಖ್ಖರು, ಮುಸ್ಲಿಮರನ್ನು ಕೂಡ ಅದು ಮಲಿನಗೊಳಿಸಿದೆ. ಆದ್ದರಿಂದಲೇ ಈ ಜಾತಿವಿನಾಶ ಕಾರ್ಯಕ್ಕಾಗಿ ಉಳಿದವರೂ ಒಂದಾಗಬೇಕಾಗಿದೆ. ಜಾತಿರಹಿತವಾದ ಈ ಬಗೆಯ ಆಂತರಿಕ ಶಕ್ತಿ ಇಲ್ಲದಿದ್ದರೆ ಹಿಂದೂಗಳ ಸ್ವರಾಜ್ಯ ಕೂಡ ಗುಲಾಮಗಿರಿಯೆಡೆಗೆ ಇನ್ನೊಂದು ಹೆಜ್ಜೆಯಷ್ಟೇ ಆಗಿಬಿಡುತ್ತದೆ.’
ಜಾತಿಪದ್ಧತಿಯನ್ನು ಕುರಿತು ಈ ಗಂಭೀರ ವಿಶ್ಲೇಷಣೆಗಳನ್ನು ಮಂಡಿಸಿ, ನಿರಂತರವಾಗಿ ಜಾತಿವಿನಾಶದ ಕಾರ‍್ಯಕ್ರಮಗಳನ್ನು ರೂಪಿಸಿದ ಅಂಬೇಡ್ಕರ್ ಅವರಿಗೆ ಹಿಂದೂ ಧರ್ಮದ ಒಳಗಿದ್ದುಕೊಂಡು ಜಾತಿವಿನಾಶ ಅಸಾಧ್ಯ ಎಂಬುದು ಸ್ಪಷ್ಟವಾದದ್ದರಿಂದ ಅವರು ಬೌದ್ಧ ಧರ್ಮವನ್ನು ಹೊಸ ರೀತಿಯಲ್ಲಿ ವಿವರಿಸಿ, ಬೌದ್ಧಧರ್ಮವನ್ನು ಜಾತಿವಿನಾಶದ ಮುಖ್ಯ ಸಾಧನವಾಗಿ ಕಂಡರು ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಇವತ್ತಿಗೂ ಅಂಬೇಡ್ಕರ್ ಅವರ ೧೯೩೬ರಲ್ಲಿ ಬಂದ ‘ಜಾತಿ ವಿನಾಶ’ ಹಾಗೂ ಐವತ್ತರ ದಶಕದ ಕೊನೆಗೆ ಬಂದ ಲೋಹಿಯಾ ಅವರ ‘ಜಾತಿ ಪದ್ಧತಿ’ ಈ ಎರಡೂ ಪುಸ್ತಕಗಳು ಜಾತಿ ಪದ್ಧತಿಯನ್ನು ಅರಿಯಲು ಹಾಗೂ ಹಂತಹಂತವಾಗಿ ನಿರ್ಮೂಲನ ಮಾಡಲು ಚಿಂತನೆಗೆ, ಕ್ರಿಯೆಗೆ ತೊಡಗಿಸುವ ಕೇಂದ್ರ ಪಠ್ಯಗಳಾಗಿ ಭಾರತದಲ್ಲಿ ಉಳಿದಿವೆ. ಕನ್ನಡ ಸಾಹಿತ್ಯದ ದೊಡ್ಡ ಲೇಖಕರಾದ ಕುವೆಂಪು, ಚಂದ್ರಶೇಖರ ಪಾಟೀಲ, ಸಿದ್ಧಲಿಂಗಯ್ಯ, ತೇಜಸ್ವಿ, ಲಂಕೇಶ್, ದೇವನೂರ ಮಹಾದೇವ ಮೊದಲಾದ ನೂರಾರು ಲೇಖಕರು; ದಲಿತ ಚಳುವಳಿ, ಪ್ರಗತಿಪರ ಚಳುವಳಿಗಳ ನೂರಾರು ನಾಯಕರು ಸಾವಿರಾರು ಕಾರ್ಯಕರ್ತರು ಈ ಎರಡೂ ಪುಸ್ತಕಗಳ ಆಶಯಗಳನ್ನು ನಿರಂತರವಾಗಿ ಹಬ್ಬಿಸುತ್ತಾ ಬಂದಿದ್ದಾರೆ. ಬಾಬಾಸಾಹೇಬರ ಯುಗ ಪ್ರವರ್ತಕ ಕೃತಿಗೆ ತೊಂಬತ್ತು ವರ್ಷ ತುಂಬಿದ ಈ ಗಳಿಗೆಯಲ್ಲಿ ಈ ಪುಸ್ತಕದ ಜೊತೆಗೇ ಈ ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯೋಣ; ಈ ಕೃತಿಯನ್ನು ನಿರಂತರವಾಗಿ ಹಬ್ಬಿಸುತ್ತಾ, ವಿಸ್ತರಿಸುತ್ತಿರೋಣ.
Comments
0 Comments
Add Comment