ಓದದ ಪುಸ್ತಕಗಳ ನಿತ್ಯ ಭಯ!
by Nataraj Huliyar
ಮೂರು ದಿನಗಳ ಕೆಳಗೆ ನನ್ನ ಥೀಸಿಸ್ಸಿನ ಪುಸ್ತಕರೂಪದ ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ಯ ಮೂರನೆಯ ಮುದ್ರಣ ಬಂದಾಗ, ಅದನ್ನು ತೆಗೆದು ನೋಡಲು ಎಂದಿನಂತೆ ಅಳುಕು! ಇದು ಮುದ್ರಣಗೊಂಡ ನನ್ನ ಪುಸ್ತಕಗಳನ್ನು ಕುರಿತ ಹಳೆಯ ಭಯ. ಯಾವುದೋ ಐಡಿಯಾವನ್ನು ಅರೆಬರೆ ಗ್ರಹಿಸಿದ ರೀತಿಯೋ; ಅಥವಾ ಯಾವುದೋ ಕಾಗುಣಿತದ ತಪ್ಪೋ ಕಣ್ಣಿಗೆ ಬಿದ್ದರೆ ಇರಿಸುಮುರಿಸು…ಇದು ಪುಸ್ತಕಗಳನ್ನು ಕುರಿತ ಒಂಥರದ ಭಯ.
ಮತ್ತೊಂದು ಭಯ- ಮೂರು ದಶಕಗಳ ಕೆಳಗೆ ನಾನು ಬರೆದಿದ್ದ ‘ಓದದ ಪುಸ್ತಕಗಳ ಭಯ.’ ಅದರಲ್ಲೂ ಎರಡು ಥರದ ಭಯಗಳು: ಒಂದು ನನ್ನ ಪ್ರಿಯ ಪುಸ್ತಕಗಳು ಎಷ್ಟೋ ವರ್ಷದಿಂದ ಇಲ್ಲೇ ಇದ್ದರೂ ಅವನ್ನು ಓದಿ ಮುಗಿಸದ ಬಗೆಗಿನ ನಿರಂತರ ಪಾಪಪ್ರಜ್ಞೆ; ಮತ್ತೊಂದು ಹಲವರು ಕೊಡುವ, ಕಳಿಸುವ ಪುಸ್ತಕಗಳನ್ನು ಕುರಿತದ್ದು; ಮೊನ್ನೆ ತಾನೇ ಬಂದ ನಾಗಣ್ಣ ಕಿಲಾರಿಯವರ ಕಾದಂಬರಿ; ಚೈತ್ರಾ ಕೊಟ್ಟ ಅನುವಾದಿತ ಕವಿತೆಗಳು, ಶಾಖಿರಾ ಖಾನುಂ ಕಳಿಸಿದ ಸ್ವಾತಂತ್ಯ್ರ ಹೋರಾಟಗಾರ ಮುಸ್ಲಿಂ ವೆಲ್ಲೂರಿ ಕುರಿತ ಪುಸ್ತಕ…ಹೀಗೆ ವರ್ಷಕ್ಕೆ ಕೊನೇ ಪಕ್ಷ ಮುನ್ನೂರು, ನಾನೂರು ಹೊಸ ಪುಸ್ತಕಗಳಾದರೂ ನನಗೆ ಎದುರಾಗುತ್ತಿರುತ್ತವೆ. ಅವುಗಳಲ್ಲಿ ನಾನು ಕೊಂಡ, ಎಡಿಟ್ ಮಾಡಿದ, ಕಿಂಡಲ್‌ನಲ್ಲಿ ದೊರಕಿಸಿಕೊಂಡ ಪುಸ್ತಕಗಳೂ ಇರುತ್ತವೆ. ಜೊತೆಗೆ ಲೇಖಕ ಲೇಖಕಿಯರು ಸಿಕ್ಕಾಗ ಅಥವಾ ಪೋಸ್ಟಿನಲ್ಲಿ ಬರುವ ಪುಸ್ತಕಗಳು, ಗೆಳೆಯರ ಮನೆಯಲ್ಲೋ, ಅವರ ಕೈಯಲ್ಲೋ ನಾನು ಕಂಡು, ಕಣ್ಣಾಡಿಸಿದ ಪುಸ್ತಕಗಳು…
ಈ ಪುಸ್ತಕಗಳಲ್ಲಿ ಎಷ್ಟನ್ನು ಕಣ್ಣಾಡಿಸುತ್ತೇನೋ; ಓದುತ್ತೇನೋ; ಕವರ್ ಟು ಕವರ್ ಓದುತ್ತೇನೋ ಎಲ್ಲವೂ ‘ನನಗೆ ಅವಗೆ (ಅಂದರೆ ಪುಸ್ತಕಕ್ಕೆ) ಗೊತ್ತು’! ಈ ನಡುವೆ ಸಲ್ಮಾನ್ ರಶ್ದಿಯ ‘ವಿಕ್ಟರಿ ಸಿಟಿ’ ಥರದ ಪುಸ್ತಕಗಳನ್ನೋ, ಮೊಗಳ್ಳಿ ಗಣೇಶರ ಪುಸ್ತಕಗಳನ್ನೋ ಎಡೆಬಿಡದೆ ಓದಿ ಮುಗಿಸುವುದೂ ಇದೆ. ಮೊನ್ನೆ ಗೆಳೆಯರ ಮನೆಯಲ್ಲಿ ನಾಟಕವೊಂದರ ಮೇಲೆ ಕಣ್ಣಾಡಿಸುತ್ತಲೇ ಮೂವತ್ತು ಪೇಜು ಓದಿಬಿಟ್ಟಿದ್ದೆ. ಒಂದು ನಾಟಕದ ಮೊದಲ ಓದಿಗೆ ಅದರ ಪ್ರದರ್ಶನದಷ್ಟೇ ಟೈಮ್ ಸಾಕು ಎಂಬ ನನ್ನ ಹಳೆಯ ನಂಬಿಕೆ ಮತ್ತೆ ದೃಢವಾಯಿತು…ಆದರೂ ಓದದೆ ಬಿಟ್ಟ ಪುಸ್ತಕಗಳು ಕೆಣಕುತ್ತಲೇ ಇರುತ್ತವೆ…
ಇಂಥದೊಂದು ಭಯವಿದೆ ಎಂದು ಈ ಅಂಕಣಕಾರನಿಗೆ ಜ್ಞಾನೋದಯವಾಗಿ ಬೆಳ್ಳಿ ಹಬ್ಬದ ವರ್ಷ ದಾಟಿದೆ; ಆದರೂ ಇದಕ್ಕೊಂದು ಪರಿಹಾರ ಕಂಡಿಲ್ಲ! ೧೯೯೯ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ‘ಗಾಳಿ ಬೆಳಕು’ ಅಂಕಣದಲ್ಲಿ ‘ಬರೆದ ಓದದ ಪುಸ್ತಕಗಳ ಭಯ’ ಲೇಖನವನ್ನು ಮತ್ತೆ ನೋಡಿದೆ. ಸಾಕಷ್ಟು ಪ್ರಾಮಾಣಿಕವಾಗಿದೆ ಎನ್ನಿಸಿ, ಅದರ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ:
ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದ ಎಂ.ಎ. ವಿದ್ಯಾರ್ಥಿಯೊಬ್ಬ ಅವತ್ತು ಟೀ ಬ್ರೇಕಿನಲ್ಲಿ 'ಇವರೆಲ್ಲ ಮಾತಾಡುವುದನ್ನು ಕೇಳಿದರೆ ಇವರೆಲ್ಲಾ ನಿದ್ದೇನೇ ಮಾಡೊಲ್ಲವೇನೋ ಅನ್ನಿಸುತ್ತೆ' ಎಂದು ಅಚ್ಚರಿ, ಭಯ ಎರಡೂ ತುಂಬಿದ ದನಿಯಲ್ಲಿ ಹೇಳಿದ. ವಿದ್ಯಾರ್ಥಿಯಾದ ಅವನಿಗೆ ಆ ಸೆಮಿನಾರ್ ಹಕ್ಕಿಗಳು ಹಗಲೂರಾತ್ರಿ ಓದಿ ಅರಗಿಸಿಕೊಂಡಿರಬಹುದಾದ ಪುಸ್ತಕಗಳ ಬಗ್ಗೆ ಭಯವಿತ್ತು! ವೇದಿಕೆಯ ಮೇಲೆ ಯಾವುದೇ ವಸ್ತುವಿನ ಬಗ್ಗೆ ನಿರರ್ಗಳವಾಗಿ ಮಾತಾಡುವವರ, ವಿಶ್ಲೇಷಿಸುವವರ ಬಗ್ಗೆ ಅನೇಕರಿಗೆ ಇರುವ ಈ ಭಯ 'ಪ್ರಾತಿನಿಧಿಕ'ವೆಂದು ಕಾಣುತ್ತದೆ.
ಡಿ.ಆರ್. ನಾಗರಾಜರ ಬಗ್ಗೆ ಕೆಲವರಿಗೆ ಇಂಥ ಭಯವಿತ್ತು. ಅವರ ಪರಿಚಯವಾದ ಹೊಸತರಲ್ಲಿ ಅವರ ಮನೆಯ ಪುಸ್ತಕಗಳ ರಾಶಿಯನ್ನು ನಿಬ್ಬೆರಗಾಗಿ ನೋಡುತ್ತಾ 'ಇವನ್ನೆಲ್ಲಾ ಓದಿದೀರಾ ಸಾರ್?’ ಎಂದೆ. ತಕ್ಷಣ ಡಿ.ಆರ್., 'ಮತ್ತೆ? Each one of them' ಎಂದರು. ಅನಾತೊಲ್ ಫ್ರಾನ್ಸ್ ಎಂಬ ಫ್ರೆಂಚ್ ಲೇಖಕನ ಬೃಹತ್ ಗ್ರಂಥ ಭಂಡಾರವನ್ನು ನೋಡಿದ ಮುಗ್ಧನೊಬ್ಬ ‘ಇವನ್ನೆಲ್ಲಾ ಓದಿದೀರಾ ಸಾರ್?' ಎಂದು ಅವನನ್ನು ಕೇಳಿದ; ಆಗ ಅನಾತೊಲ್ ಕೊಟ್ಟ ಉತ್ತರ: ಹತ್ತರಲ್ಲಿ ಒಂದು ಭಾಗ ಕೂಡ ಇಲ್ಲ. ನೀನು ನಿಮ್ಮ ಮನೆಯಲ್ಲಿರುವ ಪಿಂಗಾಣಿ ಪಾತ್ರೆಗಳನ್ನು ದಿನಾಲೂ ಬಳಸುತ್ತೀಯೇನಯ್ಯ? ಹಾಗೇನೇ ಪುಸ್ತಕಗಳ ವಿಚಾರ ಕೂಡ.'
ಮತ್ತೊಂದು ಇಂಥ ಪ್ರಸಂಗ: ಫ್ರೆಂಚ್ ಚಿಂತಕ ಡೆರಿಡಾನ ಗ್ರಂಥಭಂಡಾರದಲ್ಲಿದ್ದ ಸಾವಿರಾರು ಪುಸ್ತಕಗಳನ್ನು ನೋಡುತ್ತಾ ಸಂದರ್ಶಕನೊಬ್ಬ ಕೇಳಿದ: ‘ಇವನ್ನೆಲ್ಲಾ ಓದಿದೀರಾ ಸಾರ್?’ ಅದಕ್ಕೆ ಡೆರಿಡಾ ಕೊಟ್ಟ ಉತ್ತರ: 'ಉಹೂಂ, ಕೇವಲ ನಾಲ್ಕು ಪುಸ್ತಕಗಳನ್ನು ಮಾತ್ರ ಓದಿದ್ದೇನೆ... ಆದರೆ ಅವನ್ನು ತುಂಬಾ ಕ್ಲೋಸ್ ಆಗಿ ಓದಿದ್ದೇನೆ'. ಅಂದರೆ, ನಮ್ಮನ್ನು ರೂಪಿಸುವ ಆಯ್ದ ಪುಸ್ತಕಗಳನ್ನು ಹೇಗೆ ಓದಬೇಕೆಂಬ ಒಳನೋಟ ಕೂಡ ಡೆರಿಡಾನ ಉತ್ತರದಲ್ಲಿದೆ.
ಅದಿರಲಿ, ಅವತ್ತು ಡಿ.ಆರ್. ಉತ್ತರ ಕೇಳಿದ ನಂತರ ನಾನು ಮೆಲ್ಲಗೆ ಅವರ ಕಪಾಟಿನಿಂದ ಕೆಲವು ಪುಸ್ತಕಗಳನ್ನು ತೆಗೆದು ನೋಡಿದರೆ ಅಲ್ಲಲ್ಲಿ ಮಾರ್ಕ್ ಮಾಡಿದ ಗುರುತುಗಳಿದ್ದವು. ವಿದೇಶೀ ಮದ್ಯಪಾನಿಗಳು ಒಂದು ಬಾರ್‌ನಲ್ಲಿ ಕೆಲಕಾಲ ಕುಡಿದು ಇನ್ನೊಂದು ಬಾರ್‌ಗೆ, ನಂತರ ಮತ್ತೊಂದು ಬಾರ್‌ಗೆ ಜಿಗಿದು 'ಬಾರ್ ಹಾಪಿಂಗ್' ಮಾಡುವಂತೆ ಡಿ.ಆರ್. ಕೂಡ 'ಬುಕ್ ಹಾಪಿಂಗ್’ ಮಾಡಿರಬಹುದೆಂದು ಸಮಾಧಾನ ಮಾಡಿಕೊಳ್ಳಲೆತ್ನಿಸಿದರೂ ಅವರು ಈ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಿರಬಹುದೆಂಬ ಭಯ ಮಾತ್ರ ಮುಂದುವರಿಯಿತು. ಪುಸ್ತಕವೊಂದರ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅದನ್ನು ಹತ್ತಾರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲ ಹಾಗೂ ಯಾವಾಗ ಬೇಕಾದರೂ ಅದನ್ನು ಸಂಗ್ರಹ ರೂಪದಲ್ಲಿ ಹೇಳಬಲ್ಲ ಅಸಾಧಾರಣ ಶಕ್ತಿ ಡಿ.ಆರ್.ಅವರಿಗಿತ್ತು. ಡಿ.ಆರ್. ಒಮ್ಮೊಮ್ಮೆ ಈ ಶಕ್ತಿಯಿಂದಾಗಿಯೇ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ತಮ್ಮ ಸರೀಕರಲ್ಲಿ ವಿಚಿತ್ರ ಇರಿಸುಮುರಿಸು ಹುಟ್ಟಿಸಬಲ್ಲವರಾಗಿದ್ದರು.
ಒಮ್ಮೆ ಡಿ.ಆರ್. ಶಿಮ್ಲಾಕ್ಕೆ ಹೊರಟಾಗ 'ಲಂಕೇಶ್ ಪತ್ರಿಕೆ'ಯ ಆಫೀಸಿನಲ್ಲಿ ನಡೆದ ಪುಟ್ಟ ಬೀಳ್ಕೊಡುಗೆ ಪಾರ್ಟಿಯಲ್ಲಿ ಅಗ್ರಹಾರ ಕೃಷ್ಣಮೂರ್ತಿ ತಮ್ಮ ಒಂದು ಕುತೂಹಲಕರ ಕನಸನ್ನು ವರ್ಣಿಸಿದ್ದರು. ಒಂದು ರಾತ್ರಿ ಇದ್ದಕ್ಕಿದ್ದಂತೆ ಕೃಷ್ಣಮೂರ್ತಿಯವರ ಕನಸಿನಲ್ಲಿ ಪ್ರತ್ಯಕ್ಷವಾದ ಡಿ.ಆರ್. ಯಾವುದೋ ಪುಸ್ತಕವನ್ನು ಕೃಷ್ಣಮೂರ್ತಿಯವರ ಮುಖಕ್ಕೆ ಹಿಡಿದು 'ಈ ಪುಸ್ತಕ ಓದಿದೀಯಾ ಗುರೂ?’ ಎಂದು ಗಂಭೀರ ಮುಖಮುದ್ರೆ ಹೊತ್ತು ಕೇಳಿದ್ದರು. ತಾವು ಪುಸ್ತಕಗಳಿಂದ ಪಡೆದ ಜ್ಞಾನವನ್ನು ಅದ್ಭುತ ವಿಶ್ಲೇಷಣೆಗಳಿಗೆ ಬಳಸುತ್ತಿದ್ದ ಡಿ.ಆರ್. ಅದನ್ನು ಇನ್ನೊಬ್ಬರ ಮೇಲೆ ಆಯುಧವನ್ನಾಗಿ ಬಳಸುತ್ತಾರೇನೋ ಎಂಬ ಅನುಮಾನ ಕೂಡ ಅವರ ಪರಿಚಿತರಲ್ಲಿದ್ದುದನ್ನು ಈ ಕನಸು ಸೂಚಿಸುವಂತಿದೆ.
ನಾವು ಎಂ.ಎ.ಯಲ್ಲಿದ್ದಾಗ ಬುದ್ಧಿವಂತ ಸಹಪಾಠಿಯೊಬ್ಬ ನಮ್ಮನ್ನೆಲ್ಲ ಹೆದರಿಸುತ್ತಿದ್ದುದು ಹೆಚ್ಚುಕಡಿಮೆ ಹೀಗೆಯೇ. ನಾವೆಲ್ಲಾ ಎಲಿಯಟ್‌ನ 'ವೇಸ್ಟ್ ಲ್ಯಾಂಡ್' ಖಂಡಕಾವ್ಯವನ್ನು ಓದಲು ಕಷ್ಟಪಡುತ್ತಿದ್ದರೆ, ಅವನು ಎಲಿಯಟ್‌ನ ಎಲ್ಲಾ ಪದ್ಯಗಳನ್ನು ಓದಿ ಮುಗಿಸಿ ಅವುಗಳ ಸಾಲುಗಳನ್ನು ನಾಲಿಗೆಯ ತುದಿಯ ಮೇಲಿಟ್ಟುಕೊಂಡು ನೀವು ಎಲಿಯಟ್‌ನ 'ಫೋರ್ ಕ್ವಾರ್ಟ್ರೆಟ್ಸ್' 'ಪ್ರುಫ್ರಾಕ್’ ಇವೆಲ್ಲಾ ಓದದಿದ್ದರೆ ಈ ಪದ್ಯ ಹೇಗ್ರಯ್ಯಾ ಅರ್ಥವಾಗುತ್ತೆ?' ಎಂದು ಭಯೋತ್ಪಾದನೆ ಶುರುಮಾಡುತ್ತಿದ್ದ! ನಾವು ಹಾಗೂ ಹೀಗೂ ಅವನು ಹೇಳಿದ ಮೂರು, ನಾಲ್ಕು ಪದ್ಯಗಳನ್ನು ಓದಿಕೊಂಡು ಬಂದರೆ, 'ಜಾರ್ಜ್ ಸಾಂತಾಯನನ್ನ ಓದಿದೀರೇನಯ್ಯ, ಅವನು ಎಲಿಯಟ್‌ನ ಗುರು. ಮೊದಲು ಅವನನ್ನು ಓದಿಕೊಂಡು ಬನ್ನಿ' ಎನ್ನುತ್ತಿದ್ದ. ನಾವು ಇವನ್ನೆಲ್ಲ ಓದಲಾಗದಿದ್ದಕ್ಕೋ ಏನೋ ಅವನು ಕೆಲಕಾಲ ನಮ್ಮೆಲ್ಲರ ದುಃಸ್ವಪ್ನವಾಗತೊಡಗಿದ!
'ಜ್ಞಾನ' ಎಂದರೆ ‘ನಾವು ಓದಿರುವೆವೆಂದು ಭ್ರಮಿಸಿದ ಪುಸ್ತಕಗಳ ಸಂಖ್ಯೆ’ ಎಂಬ ಕಲ್ಪನೆ ಕೂಡ ಇಂಥ ದುಃಸ್ವಪ್ನಗಳಿಗೆ ಕಾರಣವಾಗಿರಬಹುದೇನೋ! ಇಂಡಿಯಾದಲ್ಲಂತೂ ಅನೇಕರಿಗೆ 'ಪಾಂಡಿತ್ಯ' ಎಂದರೆ ಏನೆಂದು ನಿಮಗೆ ಗೊತ್ತಿರಬಹುದು: ಲೈಬ್ರರಿಯಲ್ಲಿ ತಮಗೆ ಸಿಕ್ಕ ಒಂದು ಮುಖ್ಯ ಪುಸ್ತಕ ಯಾರಿಗೂ ಸಿಗದಂತೆ ತಾವೇ ಇಟ್ಟುಕೊಂಡು ಅದರಿಂದ ಆಯ್ದ ಸಾಲುಗಳನ್ನು ಉಲ್ಲೇಖಿಸುತ್ತಿರುವುದು. ಅಕಸ್ಮಾತ್ ನಿಮ್ಮ ಬಳಿ ಸ್ವಲ್ಪ ಹಣವಿದ್ದು ಈಚಿನ ವಿದೇಶೀ ಪುಸ್ತಕಗಳು ಸಿಕ್ಕರಂತೂ ಮುಗಿದೇ ಹೋಯಿತು. ಒಬ್ಬ ಪಂಡಿತನಿಗೆ ಇನ್ನೊಬ್ಬ ಪಂಡಿತನ ಬಗ್ಗೆ ಇರುವ ಭಯಗಳಲ್ಲಿ ತನಗೆ ಸಿಕ್ಕದ ಪುಸ್ತಕ ಅವನಿಗೆ ಸಿಕ್ಕಿದ್ದರೇನು ಗತಿ' ಎಂಬುದೂ ಒಂದು! ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಅಡ್ಡಾಡುವ ಅನೇಕ ರಿಸರ್ಚ್ ಸ್ಕಾಲರುಗಳ ಮುಖದ ಮೇಲೆ ಸದಾ ಸ್ಥಾಯಿಯಾಗಿರುವ ಭಯ ಕೂಡ ಇದೇ, ಭಾರತದ ಯೂನಿವರ್ಸಿಟಿಗಳಲ್ಲಂತೂ ರಿಸರ್ಚ್ ಸ್ಕಾಲರುಗಳ ಇಡೀ ಸಂಶೋಧನೆಯ ಅವಧಿ 'ಆ ಪುಸ್ತಕ ಸಿಕ್ಕಿಲ್ಲವಲ್ಲ' ಎಂಬ ಭಯದಲ್ಲೇ ಉರುಳಿಹೋಗುತ್ತಿರುತ್ತದೆ.
ನಮ್ಮ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ ಒಮ್ಮೆ ಸಿನಿಕ ಮೇಷ್ಟ್ರರೊಬ್ಬ ಮಾಡಿದ ವ್ಯಾಖ್ಯಾನ ಇದು: ನಾಲ್ಕು ವರ್ಷದ ರಿಸರ್ಚ್ ಅವಧಿಯಲ್ಲಿ, ಮೊದಲ ವರ್ಷ: ತನ್ನ ಸಂಶೋಧನೆಯ ವಸ್ತುವಿಗೆ ಅಗತ್ಯವಾದ ಪುಸ್ತಕಗಳ ಹೆಸರು ಬರೆದುಕೊಳ್ಳುವುದು. ಎರಡನೆಯ ವರ್ಷ: ಆ ಪುಸ್ತಕಗಳನ್ನು ಲೈಬ್ರರಿಗಳಲ್ಲಿ ಹುಡುಕುವುದು. ಲೈಬ್ರರಿಗಳಲ್ಲಿ 'ಹುಡುಕುವುದು' ಎಂದರೆ ಅವು ಸಿಗುವುದಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಅಥವಾ ರಿಸರ್ಚ್ ಕೂಡ ಶ್ರೀಮಂತರ ಲಕ್ಷುರಿಯಾಗಿರುವ ಈ ದೇಶದಲ್ಲಿ ಪುಸ್ತಕಗಳಿಗಾಗಿ ಬೇಡುವುದು. ಮೂರನೆಯ ವರ್ಷ; ಹಾಗೆ ಬೇಡಿದ ಪುಸ್ತಕಗಳಲ್ಲಿ ಕೆಲವು ಸಿಕ್ಕರೂ ಸಿಗಬಹುದು. ನಾಲ್ಕನೆಯ ವರ್ಷ: ಕೊನೆಗೂ ಥೀಸಿಸ್ ಮುಗಿಯುವ ಹೊತ್ತಿಗೆ ಆ ಪುಸ್ತಕಗಳಿಂದ ಓಡಿ ಹೋದರೆ ಸಾಕು ಎನಿಸುತ್ತಿರುತ್ತದೆ...
…ಮನುಷ್ಯನ ಬಗೆಬಗೆಯ ಭಯಗಳನ್ನು ಕುರಿತು ಮಾತಾಡುವ ಮನಃಶಾಸ್ತ್ರಜ್ಞರು ನಾವು ಓದದ ಪುಸ್ತಕಗಳ ಭಯ ಕುರಿತು ಚಿಂತಿಸಿದಂತಿಲ್ಲವಲ್ಲ... ಎಂದುಕೊಳ್ಳುತ್ತಿರುವಾಗಲೇ, ರಾತ್ರಿ ಮಲಗುವ ಮುನ್ನ ಒಮ್ಮೊಮ್ಮೆ ನನ್ನ ಪುಸ್ತಕದ ಶೆಲ್ಫಿನತ್ತ ಕಣ್ಣಾಡಿಸಿದರೆ ಹುಟ್ಟುವ ಭಯ ಮೆಲ್ಲಗೆ ಪುಟಿಯತೊಡಗಿತು: ಒಂದೇ ಆ್ಯಂಗಲ್ಲಿನಲ್ಲಿ ಎಷ್ಟೋ ತಿಂಗಳಿಂದ ಮುಖ ವಾರೆ ಮಾಡಿ ಇನ್ನೇನು ಬೀಳುವ ಸ್ಥಿತಿಯಲ್ಲೇ ಇರುವ ಚಾಮ್‌ಸ್ಕಿಯ ಪುಸ್ತಕ, ಧೂಳು ಕೂತ ಫಿಲಿಪ್ ರಾತ್, ದಾಸೊವ್‌ಸ್ಕಿ, ಗುಂಟರ್‌ಗ್ರಾಸರ ಕಾದಂಬರಿಗಳು, ಪ್ರತಿ ವರ್ಷ ಮುಂದಿನ ಬೇಸಿಗೆಗೆ ಓದಿಯೇ ತೀರಬೇಕೆಂದು ಸಂಕಲ್ಪ ತೊಟ್ಟ 'ವಾರ್ ಅಂಡ್ ಪೀಸ್' ಮತ್ತು...
ಡಿ.ಆರ್. ಕನಸಿನಲ್ಲಿ ಬರುವ ಮುನ್ನ ಇವನ್ನೆಲ್ಲಾ ಓದಿ ಮುಗಿಸಬೇಕು...
***
ಇಪ್ಪತ್ತೆಂಟು ವರ್ಷಗಳ ಹಿಂದೆ ಬರೆದ ಲೇಖನ ಅಲ್ಲಿಗೆ ಮುಗಿಯುತ್ತದೆ. ಆದರೂ ಈ ಪುಸ್ತಕಗಳಲ್ಲಿ ಒಂದೆಡರನ್ನು ಇನ್ನೂ ಓದಿಲ್ಲ ಎನ್ನಿಸಿ ಕಸಿವಿಸಿಯಾಗುತ್ತದೆ! ಅದಕ್ಕೆ ಕಾರಣ, ಈ ನಡುವೆ ಬಂದ ಪುಸ್ತಕಗಳೋ, ಅಥವಾ ಆ ಪುಸ್ತಕಗಳು ನನ್ನಲ್ಲಿ ಇನ್ನೂ ಉತ್ಸಾಹ ಹುಟ್ಟಿಸಲಿಲ್ಲವೋ…ರಿಸರ್ಚ್ ಮಾಡಿಕೊಳ್ಳಬೇಕು!
ಕೊನೆ ಟಿಪ್ಪಣಿ
ಸಂಶೋಧಕ ಸಂಶೋಧಕಿಯರು, ಪಲ್ಲವ ವೆಂಕಟೇಶ್ ‘ಈ ಪುಸ್ತಕ ಸಿಗುತ್ತಿಲ್ಲ’ ಎಂದು ಹೇಳುತ್ತಲೇ ಇದ್ದರು. ಅಳೆದೂ ಸುರಿದೂ ಮತ್ತೆ ಈ ಪುಸ್ತಕವನ್ನು ಮೂರನೇ ಮುದ್ರಣಕ್ಕೆ ಅಣಿ ಮಾಡಿದೆ. ವಿನ್ಯಾಸ ವಿಜ್ಞಾನಿ ಸುಜ್ಞಾನಮೂರ್ತಿಯವರ ಪೇಜ್ ಡಿಸೈನ್, ಸುರೇಶ್ ಹುಡುಕಿದ ಚಿತ್ರದಲ್ಲಿ ಆಫ್ರಿಕಾ-ಭಾರತ ಎರಡೂ ಕಲೆಗಳ ಸಂಗಮದ motif ನನ್ನ ತಟ್ಟಿದವು!
ಪುಸ್ತಕ ಬೇಕಾದವರು ಬರೆಯಿರಿ: ಹೂವಿನಹಳ್ಳಿ ನರಸಿಂಹಮೂರ್ತಿ: 94850 83913 ಅಥವಾ ‘ಪಲ್ಲವ ಪ್ರಕಾಶನ’ ಸಂಪರ್ಕಿಸಿ. ಅಥವಾ ಈ ಅಂಕಣದ ಕಾಮೆಂಟ್ ಬಾಕ್ಸಿನಲ್ಲಿ ವಿವರ ಕೊಡಿ. ಬೆಲೆ: ರೂ. ೨೭೦ (ರಿಯಾಯತಿ ಮತ್ತು ಅಂಚೆ ವೆಚ್ಚ ಸೇರಿ)
Comments
23 Comments
| ಚರಣ್
ಬಹುಶಃ, ಓದದ ಪುಸ್ತಕಗಳು ಹುಟ್ಟಿಸುವ ಭಯದ ಬಗ್ಗೆ ಅಷ್ಟಾಗಿ ಎಲ್ಲೂ ಓದಿರಲಿಲ್ಲ ಮತ್ತು ಅದು ಚರ್ಚೆಯಾಗಿರುವುದನ್ನು ನಾನು ಕಂಡಿಲ್ಲ. ಹಿಂದೆ ನಾನು ಓದುತ್ತಿದ್ದ ಕಾಲೇಜಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಪ್ರೊಫೆಸರ್ ಗಳವರೆಗೂ ಯಾರು ಎಂದೂ ಒಂದು ಪುಸ್ತಕವನ್ನು ಉಲ್ಲೇಖಿಸದೇ ಮಾತನಾಡುತ್ತಿದ್ದದ್ದು ನನ್ನಲ್ಲಿ ಇದೇಗೆ ಜಗತ್ತಿನ ವಿಚಾರಗಳನ್ನೆಲ್ಲ ಇವರು ಮಾತನಾಡುತ್ತಾರೆ ಎಂಬ ದಿಗ್ಭ್ರಮೆ ಮೂಡಿಸುತ್ತಿತ್ತು. ಎಲ್ಲೋ ಯಾರು ಕೂಡ ತಮ್ಮ ಜ್ಞಾನ ಮೂಲದ ಬಗ್ಗೆ ಸುಳಿವು ಬಿಟ್ಟುಕೊಡುತ್ತಿಲ್ಲ ಅನಿಸಿ, ಆ ಇಂಪ್ರೆಷನ್ ಮೂರು ವರ್ಷಗಳವರೆಗೂ ನನ್ನಲ್ಲಿ ಹಾಗೇ ಉಳಿದು ಬಂದಿತು. ಹಿಂದೆ ಇಂಗ್ಲಿಷ್ ಸಾಹಿತ್ಯ/ಭಾಷೆ ಅಂದ್ರೆ ನನಗೆ ಸಂಬಂಧಿಸಿಯೇ ಇಲ್ಲ ಅನ್ನೋ ಆಳವಾದ ನಂಬಿಕೆ ಇತ್ತು. ಯಾವಾಗ ಗಾಳಿ ಬೆಳಕಿನ exposure ಸಿಗ್ತೋ ಆಗ ನನ್ನ ಪೂರ್ವಗ್ರಹಗಳು ಕರಗುತ್ತಾ ಬಂದಿತು. ಕ್ಲಾಸಲ್ಲಿ ಒಬ್ಬರು ಪ್ರೊಫೆಸರ್ ಜಗತ್ತಿನ ನಾನಾ ಪಠ್ಯಗಳನ್ನು ಸಂಧಿಸುತ್ತಾ ಕೊಡುವ ಒಳನೋಟಗಳನ್ನು ಕಂಡಾಗ ನನ್ನೊಳಗಿನ ಹಸಿವು ತಣಿದಂತೆ, ಎಲ್ಲೋ ಮೂಲೆಯಲ್ಲಿ "ಇವೆಲ್ಲಾ ನಾನ್ ಓದಲಿಕ್ಕಾಗುತ್ತದೆಯಾ?" ಎಂಬ ಅಳುಕು ಮೂಡುತ್ತದೆ. ಅದೇ ನಿಟ್ಟಿನಲ್ಲಿ ನಮಗೆ ಯಾವಾಗ ಒಂದು ಸಾಹಿತ್ಯ ತಟ್ಟಲೇಬೇಕು ಅಂತಿರುತ್ತದೋ ಆಗ ಅದೇ ನಮ್ಮನ್ನು ಕರೆಸಿಕೊಳ್ಳುತ್ತದೆ ಅನ್ನೋದು ನನ್ನ ಚಿಗುರು ನಂಬಿಕೆ. ತಾವು ಒಂದು ಕಾರ್ಯಕ್ರಮದಲ್ಲಿ ಕುವೆಂಪುರವರ "ನಾನೇರುವ ಎತ್ತರಕ್ಕೆ ನೀನೇರಬಲ್ಲೇಯಾ?" ಎಂಬ ಮಾತನ್ನು ವ್ಯಾಖ್ಯಾನಿಸಿದ್ದು ಯಾವುದೇ ಪಠ್ಯ ಓದಲು ಶುರುಮಾಡಿದಾಗ, ಅದು ಕಷ್ಟವಿದ್ದರೂ, ಅರ್ಥವಾಗದ ಪದಗಳ ರಾಶಿ ಇದ್ದರೂ, "ಇಲ್ಲ, ಇದು ನನ್ನನ್ನು ಕವಿ/ಸಾಹಿತಿ ಏರಿದ ಮಟ್ಟಕ್ಕೆ ಕರೆದೊಯ್ಯುತ್ತೆ" ಎಂಬ ಬಲವಾದ ನಂಬಿಕೆಯನ್ನು ಹುಟ್ಟಿಸುತ್ತದೆ. ದೊಡ್ಡ ದೊಡ್ಡವರು ತಮ್ಮ ಭಯವನ್ನು ಹೇಳಿಕೊಂಡಾಗ ನನ್ನಂತ ಸಣ್ಣವರ ಮನಸ್ಸೊಳಗಿನ ಭಯವು ನಿವಾರಣೆಯಾಗುತ್ತದೆ ಅನ್ನೋದು ನನ್ನದೊಂದು ಸ್ಟಡಿ!
| Subramanya Swamy
ಸಂಶೋಧನಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತುಂಬಾ ಅಗತ್ಯವಾದ ಪುಸ್ತಕ ಇದು ಮೂರು ಮುದ್ರಣ ಸಂತೋಷ ತಂದಿದೆ ಸಾರ್.
| sanganagouda
ನಾನು ತರಿಸಿಕೊಂಡು ಓದುತ್ತಿರುವೆ ಸರ್
| Puttaswamy K
ನಿಮ್ಮ ಪುಸ್ತಕದ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಾಜರಿದ್ದೆ. ಕಿ. ರಂ. ಸರ್ ಅಂದು ಅಮೋಘ ಭಾಷಣ ಮಾಡಿದರು. ಕೆಲ ಭಾಗಗಳನ್ನು ನಾನು ಬರೆದುಕೊಂಡೆ. ಫ್ರೆಂಚ್ ಫಿಲಾಸಫರ್ ಲೂಯಿಸ್ ಆಲ್ತುಸರ್ ಪುಸ್ತಕಗಳನ್ನು ನೇರವಾಗಿ ಬರೆದದ್ದು ಕಡಿಮೆಯಂತೆ. ಅವರ ಭಾಷಣಗಳನ್ನು ಉತ್ಸಾಹಿ ಶಿಷ್ಯರು ಬರೆದುಕೊಂಡು ನಂತರ ಆಲ್ತುಸರ್ ಹತ್ತಿರ ಕೊಟ್ಟು correction ಮಾಡಿಸುತ್ತಿದ್ದರಂತೆ. ಅಂತಹವುಗಳನ್ನು ಕ್ರೋಡೀಕರಿಸಿ ಪ್ರಬಂಧಗಳ ಸಂಕಲನವನ್ನು ಪ್ರಕಟಿಸುತ್ತಿದ್ದರಂತೆ. ಕಿ. ರಂ ಶಿಷ್ಯರೂ ಆ ರೀತಿ ಅವರ ಭಾಷಣಗಳನ್ನು ಬರೆದುಕೊಂಡಿದ್ದರೆ ಎಂಥ ನಿಧಿ ದಕ್ಕುತ್ತಿತ್ತು?
| Puttaswamy K
ಲೇಖನ ಓದಿ ಸಂತೋಷವಾಯ್ತು. ಓದಿರುವ ಪುಸ್ತಕಗಳಿಗಿಂತ ಕಣ್ಣಾಡಿಸಿದ, ಓದದೇ ಇರುವ ಪುಸ್ತಕಗಳು ನನ್ನಲ್ಲೂ ಇದ್ದು ದಿಗಿಲು ಹುಟ್ಟಿಸುತ್ತಿದ್ದವು. ಈ ಲೇಖನ ಓದಿದ ಮೇಲೆ I am not alone ಅನ್ನಿಸಿ ನಿರಾಳನಾದೆ.
| ಬಂಜಗೆರೆ ಜಯಪ್ರಕಾಶ
ಒಳ್ಳೆಯ ಲೇಖನ. ಓದದಿರುವ ಪುಸ್ತಕಗಳು ಹುಟ್ಟಿಸುವ ವಿಷಾದ ಭಾವ ನಿಜವಾದ ಪುಸ್ತಕ ಪ್ರೇಮಿಗಳೆಲ್ಲರೊಳಗೂ ಇರುತ್ತದೆನಿಸುತ್ತೆ. ಸಾಯುವುದರೊಳಗೆ ಬಹುಶಃ ಇವನ್ನೆಲ್ಲಾ ಓದಲಾರೆನೆನಿಸುತ್ತೆ ಅಂತ ಬಹಳ ಸಲ ನಾನು ಕೊರಗಿದ್ದೇನೆ. ಯಾರೋ ಪ್ರಸ್ತಾಪಿಸಿದ ಪುಸ್ತಕ ತಕ್ಷಣ ತರಿಸಿ ಓದಿದ್ದಿರುವಂತೆಯೇ ಹುಡುಕಾಡಿ ತರಿಸಿದ ಪುಸ್ತಕ ಓದದೆ ಎಷ್ಡೋ ಕಾಲ ತಳ್ಳಿದ್ದೂ ಇದೆ. ಅದು ಆಗಾಗಿನ ಹುಕಿಗೆ ಸಂಬಂಧಿಸಿದ್ದು. ಇದೆಲ್ಲಾ ಸರಿ. ಜಾಸ್ತಿ ಪುಸ್ತಕ ಓದಿದವರೆಲ್ಲಾ ಜಾಸ್ತಿ ಜ್ಞಾನಿಗಳಾಗುತ್ತಾರೆ ಎನ್ನುವ ಖಾತ್ರಿಯೇನೂ ಇದ್ದಂತಿಲ್ಲ. ಓದಿದ ಪುಸ್ತಕಗಳ ಪಟ್ಟಿ ಹೇಳಿ ಬೇರೆಯವರನ್ನು ಇಂಪ್ರೆಸ್ ಮಾಡುವ ಅಥವಾ ಹೆದರಿಕೆ ಹುಟ್ಟಿಸುವ ಜಾಣರಿರುವುದು ನಿಜ. ಓದಿದ್ದೆಲ್ಲಾ ದಕ್ಕುವುದಿಲ್ಲ. ಏನನ್ನು ಜೀರ್ಣ ಮಾಡಿಕೊಳ್ಳಬಲ್ಲೆವೋ ಅದು ಮಾತ್ರ ರಕ್ತವಾಗುತ್ತದೆ. ಓದಿನ ಸಂತೋಷವನ್ನು ಮಾತ್ರ ಕೈಬಿಡುವಂತಿಲ್ಲ.
| ಬಂಜಗೆರೆ ಜಯಪ್ರಕಾಶ
ಮೂರನೇ ಮುದ್ರಣದ ಮುಖಪುಟ ಚೆನ್ನಾಗಿದೆ. ಚಿಯರ್ಸ್
| ಶಾಮರಾವ್
ಓದದ ಪುಸ್ತಕಗಳ ಭಯದ ಜೊತೆಗೆ ಇಂಥದೊಂದು ಪುಸ್ತಕ ಓದಲಿಲ್ಲವಲ್ಲ ಎಂಬ ಹಳಹಳಿಕೆಯಂತೂ ಸಾಮಾನ್ಯ. ಅಲ್ಲದೆ ನಿಮ್ಮಂಥವರು ಉಲ್ಲೇಖಿಸಿರುವ ಪುಸ್ತಕಗಳನ್ನು ಓದಿಯೇ ಇಲ್ಲವೆಂಬ ವಿಷಾದವಂತೂ ಕಾಡಿಯೇ ಕಾಡುತ್ತದೆ.
| ಮಹಾಂತ
ತುಂಬಾ ಕೆನೆಕ್ಟ ಆಗುವ ಬರಹ ಸರ್, ಓದದೆಯೆ ಇರುವ ಪುಸ್ತಕಗಳನ್ನು ನೋಡಿದಾಗೊಮ್ಮೆ ಬೇಸರ, ಕಳವಳ ಹಾಗೂ ಗಿಲ್ಟ್ ಫೀಲ್ ಆಗುತ್ತದೆ. ನಾನು ಓದಿದ್ದರೆನೆಂತೆ ಬೇರೆಯವರಿಗಾದರು ಕೊಡೋಣ ಅಂತ ಯೋಚಿಸಬೇಕಾದರೆ ನನ್ನ ಡಿಪಾರ್ಟ್ಮೆಂಟ್ ನಲ್ಲೆ ಕೆಲಸ ಮಾಡುವ ಅಟೆಂಡರ್ ಒಮ್ಮೆ ನನಗೆ ಹೇಳಿದ್ದು ನೆನಪಾಯ್ತು, ದಿನಾಲೂ ಅವರಿಗೆ ಒಂದೆ ಕಡೆ ಕುಳಿತು ಬೇಜಾರಾಗುತ್ತೆ, ಅಷ್ಟೇನು ಕೆಲಸವಿಲ್ಲ ಎಂದಾಗ ತಟ್ವಟನೆ ಪುಸ್ತಕಗಳ ನೆನಪಾಗಿ ಪುಸ್ತಕ ಓದುವ ಹವ್ಯಾಸವಿದೆಯೆ ಕೇಳಿದೆ, ಅವರು ನನಗೆ ಇಂಗ್ಲೀಷ್ ಓದಲು ಬರುವುದಿಲ್ಲ ಆದರೆ ಕನ್ನಡ ಓದುತ್ತೇನೆ ಅಂದರು. ನನಗೆ ಏನೊ ಸಾಧಿಸಿ ಬಿಟ್ಟೆ ಅನ್ನುವ ಖುಷಿ. ಅವರಿಗೆ ನನ್ನ ಪುಸ್ತಕ ಕೊಟ್ಟಿದ್ದೇನೆ ಓದುತ್ತಾ ಇದ್ದಾರೆ. ನಾನು ಹೇಗಿದೆ ಅಂತಾ ಕೇಳಿದಾಗೋಮ್ಮೆ ಬಹಳ ಚೆನ್ನಾಗಿದೆ ಓದಲು ಓದಿಸಿಕೊಂಡೆ ಹೋಗುತ್ತೆ ಅಂದಾಗ ನನ್ನ ಖುಷಿಗೆ ಪಾರವೆ ಇಲ್ಲ. ಎಲ್ಲೊ ಸುಪ್ತ ಮನಸ್ಸಿನಲ್ಲಿ ನಾನೇನೊ ದೊಡ್ಡ ಸಾಧನೆ ಮಾಡಿದ್ದೇನೆ ಅನ್ನಿಸುತ್ತದೆ😁
| ಮಹಾಂತ
ತುಂಬಾ ಕೆನೆಕ್ಟ ಆಗುವ ಬರಹ ಸರ್, ಓದದೆಯೆ ಇರುವ ಪುಸ್ತಕಗಳನ್ನು ನೋಡಿದಾಗೊಮ್ಮೆ ಬೇಸರ, ಕಳವಳ ಹಾಗೂ ಗಿಲ್ಟ್ ಫೀಲ್ ಆಗುತ್ತದೆ. ನಾನು ಓದಿದ್ದರೆನೆಂತೆ ಬೇರೆಯವರಿಗಾದರು ಕೊಡೋಣ ಅಂತ ಯೋಚಿಸಬೇಕಾದರೆ ನನ್ನ ಡಿಪಾರ್ಟ್ಮೆಂಟ್ ನಲ್ಲೆ ಕೆಲಸ ಮಾಡುವ ಅಟೆಂಡರ್ ಒಮ್ಮೆ ನನಗೆ ಹೇಳಿದ್ದು ನೆನಪಾಯ್ತು, ದಿನಾಲೂ ಅವರಿಗೆ ಒಂದೆ ಕಡೆ ಕುಳಿತು ಬೇಜಾರಾಗುತ್ತೆ, ಅಷ್ಟೇನು ಕೆಲಸವಿಲ್ಲ ಎಂದಾಗ ತಟ್ವಟನೆ ಪುಸ್ತಕಗಳ ನೆನಪಾಗಿ ಪುಸ್ತಕ ಓದುವ ಹವ್ಯಾಸವಿದೆಯೆ ಕೇಳಿದೆ, ಅವರು ನನಗೆ ಇಂಗ್ಲೀಷ್ ಓದಲು ಬರುವುದಿಲ್ಲ ಆದರೆ ಕನ್ನಡ ಓದುತ್ತೇನೆ ಅಂದರು. ನನಗೆ ಏನೊ ಸಾಧಿಸಿ ಬಿಟ್ಟೆ ಅನ್ನುವ ಖುಷಿ. ಅವರಿಗೆ ನನ್ನ ಪುಸ್ತಕ ಕೊಟ್ಟಿದ್ದೇನೆ ಓದುತ್ತಾ ಇದ್ದಾರೆ. ನಾನು ಹೇಗಿದೆ ಅಂತಾ ಕೇಳಿದಾಗೋಮ್ಮೆ ಬಹಳ ಚೆನ್ನಾಗಿದೆ ಓದಲು ಓದಿಸಿಕೊಂಡೆ ಹೋಗುತ್ತೆ ಅಂದಾಗ ನನ್ನ ಖುಷಿಗೆ ಪಾರವೆ ಇಲ್ಲ. ಎಲ್ಲೊ ಸುಪ್ತ ಮನಸ್ಸಿನಲ್ಲಿ ನಾನೇನೊ ದೊಡ್ಡ ಸಾಧನೆ ಮಾಡಿದ್ದೇನೆ ಅನ್ನಿಸುತ್ತದೆ😁
| Suresha B
ಓದದ ಪುಸ್ತಕಗಳ ಭಯ ಒಂದು ತೆರನಾದ ಸಂಕಟವಾದರೆ, ಓದಿದ್ದು ಸಕಾಲದಲ್ಲಿ ನೆನಪಿಗೆ ಬಾರದೆ ಕಾಡಿಸುವುದು ಮತ್ತೂ ಕಠೋರವಾದದ್ದು. ನಾನು ಎರಡೂ ಸಂಕಟಗಳ ಸಮುದ್ರದಲ್ಲಿ ಈಸುತ್ತಿದ್ದೇನೆ. ಒಂದು ಪುಸ್ತಕ ಓದಿ ಮುಗಿಸುವ ಮುನ್ನ ಮತ್ತೊಂದು ಹೊಸ ಪುಸ್ತಕ ಎದುರಿಗೆ ಕುಳಿತು ಕೇಕೆ ಹಾಕಿ ನಗುತ್ತದೆ. ಹಲವು ಪುಸ್ತಕಗಳನ್ನು ಒಟ್ಟಿಗೆ (ಅಂದರೆ ಬೆಳಗಿನ ಬಿಡುವಲ್ಲಿ ಎಚ್ಚರದ ಓದಿಗೆ ಒಂದು, ಮಧ್ಯಾಹ್ನದ ಸಿಯೆಸ್ಟಾ ಜೊತೆಗೆ ಓದಬಹುದಾದ್ದಕ್ಕೆ ಒಂದು, ರಾತ್ರಿ ಮಲಗುವ ಮುನ್ನ ಹಾಸಿಗೆಯ ಪಕ್ಕದಲ್ಲಿ ಇರಿಸಿಕೊಂಡ ಮತ್ತೊಂದು... ಹೀಗೆ) ಓದುವ ನನ್ನ ಅಭ್ಯಾಸವು ದಿನವೊಂದಕ್ಕೆ ಇನ್ನೂರು ಪುಟ ಓದಿಸುತ್ತದೆಯಾದರೂ ಇನ್ನೂ ಓದದೆ ಉಳಿದಿರುವ ಪುಸ್ತಕಗಳು ಸದಾ ಕಣ್ಣೆದುರು ಕುಣಿಯುತ್ತವೆ. ಇನ್ನು, ಇಷ್ಟೆಲ್ಲಾ ಓದಿದ್ದನ್ನು ಆಗೀಗ ಸಣ್ಣ ಪುಸ್ತಕದಲ್ಲಿ ಟಿಪ್ಪಣಿ ಮಾಡಿದ್ದರೂ, ಯಾವುದೋ ಲೇಖನ ಬರೆಯುವಾಗ ಅಥವಾ ಭಾಷಣ ಮಾಡುವಾಗ ಸಕಾಲದಲ್ಲಿ ಓದಿರುವ ಪುಸ್ತಕದ ಅಥವಾ ಲೇಖಕನ ಹೆಸರು ನೆನಪಾಗದೆ "ಇದೇನಿದು" ಎನಿಸಿದ್ದೂ ಇದೆ. ನಿಮ್ಮಂತಹವರು ಈ ಸಂಕಟದ ಸಮುದ್ರ ಈಸುವುದು ಹೇಗೆಂದು ಕಲಿಸಬೇಕಷ್ಟೇ... - ಬಿ ಸುರೇಶ
| ವಿಶುಕುಮಾರ್ ಎನ್ ಆರ್
ಬಹಳ ಪ್ರಾಮಾಣಿಕ ಅನಿಸಿಕೆ . ಇವು ಲೇಖಕರಿಗೆ ಇರಲೇ ಬೇಕಾದ ಭಯ . ಕಡೆಗೂ ಅವರ ಸಹಜ ಪ್ರತಿಭೆಯೇ ನೆರವಿಗೆ ಬರುವುದು . ಲೇಖಕರ ಸಂತೋಷಕ್ಕೆ ಬರೆಯುವ ಪುಸ್ತಕಗಳು ಓದುಗರಿಗೆ ಎಷ್ಟು ಜ್ಞಾನ ಮತ್ತು ಮುದವನ್ನು ದಾಟಿಸುತ್ತವೆ ಎನ್ನುವುದೇ ಲೇಖಕರ ಯಶಸ್ಸು .
| Pushpa HL
'ಓದದ ಪುಸ್ತಕಗಳು' ಲೇಖನ ಚೆನ್ನಾಗಿದೆ. ಓದಬೇಕೆಂದರೂ ಓದಲಾಗದ, ಒಂದೊಂದು ಬಾರಿ ಎಷ್ಟೊಂದು ಓದುವುದಿದೆಯಲ್ಲಾ ಎಂಬ ಗಾಬರಿ ಬಹುಶಃ ಎಲ್ಲರಿಗೂ ಕಾಡುವ ತುಡಿತವಿರಬೇಕು. ಥೀಸಿಸ್ ಗಳು ಒಂದು ಕಾಲಗಟ್ಟದಲ್ಲಿ ಬರೆದದ್ದಾಗಿದ್ದು ನೀವು ಹೇಳಿದ ಒಂದರ್ಥದಲ್ಲಿ ಇನ್ನೂ ಪೂರ್ಣವಾಗಬೇಕಾದ ಕೃತಿಗಳಾಗಿರುತ್ತವೆ. ಎಲ್ಲರಿಗೂ ಒಂದಲ್ಲ ಒಂದು ಬಾರಿ ಕಾಡುವ ಚಿಂತನೆಗಳನ್ನು ನೀವು ಹಿಡಿದಿಡುವ ರೀತಿ ಅಚ್ಚರಿ ಹುಟ್ಟಿಸುತ್ತದೆ.
| ವಿಶುಕುಮಾರ್ ಎನ್ ಆರ್
ಬಹಳ ಪ್ರಾಮಾಣಿಕ ಅನಿಸಿಕೆ . ಇವು ಲೇಖಕರಿಗೆ ಇರಲೇ ಬೇಕಾದ ಭಯ . ಕಡೆಗೂ ಅವರ ಸಹಜ ಪ್ರತಿಭೆಯೇ ನೆರವಿಗೆ ಬರುವುದು . ಲೇಖಕರ ಸಂತೋಷಕ್ಕೆ ಬರೆಯುವ ಪುಸ್ತಕಗಳು ಓದುಗರಿಗೆ ಎಷ್ಟು ಜ್ಞಾನ ಮತ್ತು ಮುದವನ್ನು ದಾಟಿಸುತ್ತವೆ ಎನ್ನುವುದೇ ಲೇಖಕರ ಯಶಸ್ಸು .
| Guruprasad Kantalagere
ಓದದೆ ಇರುವ, ಓದಬೇಕೆನ್ನುತ್ತಲೇ ಕಾಲ ಕಳೆವರಿಗೆ ಧೈರ್ಯ ತುಂಬುವ ಈ ಲೇಖನ.
| ಸೋಮಶಂಕರ ವಿ ಸುಣ್ಣಂಗೂರು
ಪ್ರತಿ ವ್ಯಕ್ತಿಯ ಹಸಿವಿನ ಪರಿಮಾಣ ಅವರು ಸೇವಿಸುವ ಆಹಾರ ಪ್ರಮಾಣವನ್ನು ನಿರ್ಧರಿಸಿದರೆ, ಓದುಗನ ಓದಿನ ದಾಹ ತನ್ನ ಪುಸ್ತಕ ಸಂಗ್ರವನ್ನು ನಿರ್ಧರಿಸುತ್ತದೆ. ಸಂಗ್ರಹ ಮಾಡಿದರೆ ಸಾಲದು ಅವನ್ನು ಸತ್ವ ಹಿರುವ ಕ್ರಮ ಕೂಡ ತಿಳಿದರಬೇಕು ಅಂಬೇಡ್ಕರ್ ಯು.ಆರ್. ರಾವ್ ಪುಸ್ತಕ ಬಂಡಾರವನ್ನು ಒಮ್ಮೆ ನೋಡಿ ‘ಇಷ್ಟು ಪುಸ್ತಕಗಳನ್ನು ಯಾವಾಗ ಓದುತ್ತಿರಿ?’ . ‘ಓದುವುದು ಎಂದರೇನು? ಹೇಳಿ’ ಎಂದು ಕೇಳುತ್ತಾರೆ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿ ಅದನ್ನು ಅರಗಿಸಿಕೊಂಡು ವಿಶ್ಲೇಷಿಸಿ ನೆನಪಿಸಿಕೊಳ್ಳುವುದು ಎಂದು ಉತ್ತರ ಕೊಟ್ಟರು ರಾವ್. ಆಗ ಅಂಬೇಡ್ಕರ್, ‘ಇಲ್ಲ ಇಲ್ಲ ನನ್ನದು ಆ ಶೈಲಿಯಲ್ಲ. ಕೆಲವೇ ಪುಸ್ತಕಗಳು ಮಾತ್ರ ಆಳ ಓದಿಗೆ, ಸಂಪೂರ್ಣ ಓದಿಗೆ ಪ್ರಶಸ್ತ ವಾಗಿರುತ್ತವೆ. ಉಳಿದಂತೆ ನಾನು ಪುಸ್ತಕ ನೋಡಿದ ಕೂಡಲೇ ಅದರ ಪರಿವಿಡಿ ಪರಿಚಯ ಬೆನ್ನುಡಿ ಮುನ್ನುಡಿಗಳನ್ನು ನೋಡುತ್ತೇನೆ. ಆನಂತರವಷ್ಟೇ, ನನಗೆ ಅದು ಬೇಕು ಬೇಡವೋ ಎಂದು ನಿರ್ಧರಿಸುತ್ತೇನೆ" ಎನ್ನುತ್ತಾರೆ. ಡಿ ಅರ್ ಕ್ರಮ ಇನ್ನೊಂದಿರಬಹುದು ಆದರೆ ಪುಸ್ತಕ ಒಂದಲ್ಲ ಒಂದು ಸಲ ಓದಿಸಿಕೊಳ್ಳುತ್ತದೆ ವಿಶೇಷವೆಂದರೆ ಲಂಡನ್ ಬಾರ್ ಕೂಡ ಓದಿನ ಭಾಗ ಅಲ್ಲಿ ಹಲವು ಪುಸ್ತಕ ಸಂಗ್ರಹ ಇರುತ್ತವೆ; ಜೊತೆಗೆ ತಂಪು ಬಿಯರ್. ಹನಿ ಹನಿ ಬಿಯರ್ ಹೀರುತ್ತಾ ಪೇಜ್ ತಿರುಗಿಸಬಹುದು.
| ಸೋಮಶಂಕರ ವಿ ಸುಣ್ಣಂಗೂರು
ಪ್ರತಿ ವ್ಯಕ್ತಿಯ ಹಸಿವಿನ ಪರಿಮಾಣ ಅವರು ಸೇವಿಸುವ ಆಹಾರ ಪ್ರಮಾಣವನ್ನು ನಿರ್ಧರಿಸಿದರೆ, ಓದುಗನ ಓದಿನ ದಾಹ ತನ್ನ ಪುಸ್ತಕ ಸಂಗ್ರವನ್ನು ನಿರ್ಧರಿಸುತ್ತದೆ. ಸಂಗ್ರಹ ಮಾಡಿದರೆ ಸಾಲದು ಅವನ್ನು ಸತ್ವ ಹಿರುವ ಕ್ರಮ ಕೂಡ ತಿಳಿದರಬೇಕು ಅಂಬೇಡ್ಕರ್ ಯು.ಆರ್. ರಾವ್ ಪುಸ್ತಕ ಬಂಡಾರವನ್ನು ಒಮ್ಮೆ ನೋಡಿ ‘ಇಷ್ಟು ಪುಸ್ತಕಗಳನ್ನು ಯಾವಾಗ ಓದುತ್ತಿರಿ?’ . ‘ಓದುವುದು ಎಂದರೇನು? ಹೇಳಿ’ ಎಂದು ಕೇಳುತ್ತಾರೆ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿ ಅದನ್ನು ಅರಗಿಸಿಕೊಂಡು ವಿಶ್ಲೇಷಿಸಿ ನೆನಪಿಸಿಕೊಳ್ಳುವುದು ಎಂದು ಉತ್ತರ ಕೊಟ್ಟರು ರಾವ್. ಆಗ ಅಂಬೇಡ್ಕರ್, ‘ಇಲ್ಲ ಇಲ್ಲ ನನ್ನದು ಆ ಶೈಲಿಯಲ್ಲ. ಕೆಲವೇ ಪುಸ್ತಕಗಳು ಮಾತ್ರ ಆಳ ಓದಿಗೆ, ಸಂಪೂರ್ಣ ಓದಿಗೆ ಪ್ರಶಸ್ತ ವಾಗಿರುತ್ತವೆ. ಉಳಿದಂತೆ ನಾನು ಪುಸ್ತಕ ನೋಡಿದ ಕೂಡಲೇ ಅದರ ಪರಿವಿಡಿ ಪರಿಚಯ ಬೆನ್ನುಡಿ ಮುನ್ನುಡಿಗಳನ್ನು ನೋಡುತ್ತೇನೆ. ಆನಂತರವಷ್ಟೇ, ನನಗೆ ಅದು ಬೇಕು ಬೇಡವೋ ಎಂದು ನಿರ್ಧರಿಸುತ್ತೇನೆ" ಎನ್ನುತ್ತಾರೆ. ಡಿ ಅರ್ ಕ್ರಮ ಇನ್ನೊಂದಿರಬಹುದು ಆದರೆ ಪುಸ್ತಕ ಒಂದಲ್ಲ ಒಂದು ಸಲ ಓದಿಸಿಕೊಳ್ಳುತ್ತದೆ ವಿಶೇಷವೆಂದರೆ ಲಂಡನ್ ಬಾರ್ ಕೂಡ ಓದಿನ ಭಾಗ ಅಲ್ಲಿ ಹಲವು ಪುಸ್ತಕ ಸಂಗ್ರಹ ಇರುತ್ತವೆ; ಜೊತೆಗೆ ತಂಪು ಬಿಯರ್. ಹನಿ ಹನಿ ಬಿಯರ್ ಹೀರುತ್ತಾ ಪೇಜ್ ತಿರುಗಿಸಬಹುದು.
| ಡಾ. ನಿರಂಜನ ಮೂರ್ತಿ ಬಿ ಎಂ
'ಓದದ ಪುಸ್ತಕಗಳ ನಿತ್ಯ ಭಯ' ನನ್ನಲ್ಲಿದ್ದ ಭಯವನ್ನು ಬಯಲಿಗೆಳೆಯಿತು. ನಾನು ಕೊಂಡು ತಂದ, ಓದದಿರುವ ಪುಸ್ತಕಗಳು ನನ್ನನ್ನು ಅಣಕಿಸುತ್ತಿವೆ ಎನ್ನುವ ಭಾವ ಕಾಡುತ್ತಿತ್ತು. ಅವುಗಳನ್ನು ನೋಡಿದಾಗ ಏನೋ ಒಂಥರಾ ಮುಜುಗರ, ಕಸಿವಿಸಿ, ಅಳುಕು ಉಂಟಾಗುತ್ತಿತ್ತು. ಅವನ್ನು ಕೊಂಡು ತರುವವರೆಗೂ ಇದ್ದ ಉತ್ಸಾಹ, ತಂದಾದ ಮೇಲೆ ಕಡಿಮೆಯಾಗುತ್ತಿದೆ ಎಂಬ ಭಾವ ಕಾಡುತ್ತಿತ್ತು. ಅದು ನಿಜವಾಗಿಯೂ ಭಯವೆಂಬುದು ಈ ಲೇಖನ ಓದಿದ ಮೇಲೆಯೇ ಸ್ಪಷ್ಟವಾಗಿದ್ದು. ಇಂತಹ ಅವ್ಯಕ್ತವಾದ ಓದದಿರುವ ಪುಸ್ತಕಗಳ ಭಯದ ವಿಶ್ಲೇಷಣೆ ಓದಿ ತುಸು ನಿರಾಳ ಭಾವ ಮೂಡಿರುವುದಂತೂ ನಿಜ. ಕಾರಣ, ಈ ಭಯದಿಂದ ಬಳಲುತ್ತಿರುವವರು ಹಲವರು ಇದ್ದಾರೆ ನನ್ನ ಹಾಗೆ ಎಂಬ ಸಮಾಧಾನ. ಇನ್ನು ಮುಂದಾದರೂ ಈ ಭಯದಿಂದ ಹೊರಬರಬೇಕೆಂಬ ನನ್ನ ಈಗಿನ ಭಾವ ಕಾರ್ಯರೂಪಕ್ಕೆ ಬರಲಿ ಎಂದು ಬಯಸುತ್ತೇನೆ. ಅಂದ ಹಾಗೆ ಓದಿನ ವಿಷಯದಲ್ಲಿ ಭಯೋತ್ಪಾದನೆ ಶುರುಮಾಡಿ, ದುಃಸ್ವಪ್ನವಾಗಿದ್ದ ಎಂ.ಎ., ತರಗತಿಯ ಸಹಪಾಠಿ ಬೆಳವಾಡಿಯಲ್ಲವೆ?
| ಗುರು ಜಗಳೂರು
ಸರ್ ತಡವಾಗಿ ಓದಿದೆ.ಎಷ್ಟೊಂದು ಒಳ್ಳೆಯ ಲೇಖನ.ಓದುವುದು,ಓದುವುದನ್ನು ಹಂಚಿಕೊಳ್ಳುವುದು ಪ್ರೇರೇಪಿಸುವುದು,ಓದದೇ ಇರುವ ಪುಸ್ತಕಗಳ ಬಗಗೆ ಪರಿತಪಿಸುವುದು ಇದೇ ಜೀವನವಲ್ಲವೇ?ಓದುವ ಖುಷಿಯೇ ಗೊತ್ತಿಲ್ಲದಿರುವ ಅಸಂಖ್ಯಾತ ಜನಗಳು ,ಗೊತ್ತಿದ್ದರೂ ನಿರ್ಲಕ್ಷಿಸುವವರಿಗೆ ಮರುಕ ಪಡದೇ ವಿಧಿಯಿಲ್ಲ ಅಲ್ಲವೇ?
| ವಸಂತ
ಓದದ ಪುಸ್ತಕಗಳ ಬಗೆಗಿನ ಲೇಖನ ತುಂಬ ಇಷ್ಟವಾಯಿತು. ‘ಆಫ್ರಿಕನ್...’ ಪುಸ್ತಕದ ಮೂರನೆಯ ಮುದ್ರಣದ ಮುಖಪುಟ ವಿಶೇಷವಾಗಿದೆ,
| Mohan
ಪುಸ್ತಕಗಳ ಓದಿಗೆ ಪ್ರೇರೇಪಿಸುವ ಬರಹ
| Chandrashekhara Talya
ಡೆರಿಡಾ ಹೇಳಿದ್ದು ನೂರಕ್ಕೆ ನೂರು ನಿಜ. ನಮ್ಮಲ್ಲಿರುವ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸುವುದು ಅಸಾಧ್ಯವೇ. (ಡಿ ಆರ್ ಅವರಂತವರು ಅಪವಾದ)ಆದರೆ ಅವೆಲ್ಲವನ್ನೂ ಓದಲೇಬೇಕೆಂಬ ತುಡಿತ ಇದ್ದೇ ಇರುತ್ತೆ, ಅದರೊಟ್ಟಿಗೆ ಭಯವೂ ಸಹ. ನಮ್ಮ ವಿವಿಗಳಲ್ಲಿ ನೀವು ಹೇಳಿದ ಭಯ ಹುಟ್ಟಿಸುವ ಓದುಭಯಂಕರ ಗಿರಾಕಿಗಳಿಗೇನೂ ಕೊರತೆ ಇಲ್ಲ. ಹಳ್ಳಿಯಿಂದ ಹೋದ ನಮ್ಮಂತವರಿಗಂತೂ ದಿಗಿಲು ತಪ್ಪಿದ್ದಲ್ಲ. ಆಯ್ದ ಓದು ಉತ್ತಮವಿರಬಹುದೇನೋ.
| Ramachandra Naik
ಹುಳಿಯಾರ್ ಸರ್, ನೀವು ಹೊಸ ರೀತಿಯ ಭಯವೊಂದನ್ನು ಹುಟ್ಟು ಹಾಕಿದ್ದೀರಿ, ಪುಸ್ತಕಗಳನ್ನು ನೋಡಿದರೇ ಭಯ ಪಡುವ ಜನರೇ ಜಾಸ್ತಿಯಿರುವಾಗ ಓದದ ಪುಸ್ತಕಗಳ ಭಯ!, ಬಹುತೇಕ ಭಯಗಳಂತೆ ಈ ಭಯವೂ ಸಾಂಕ್ರಾಮಿಕವಾದರೆ ಎಷ್ಟು ಚೆನ್ನ ಅಲ್ಲವೇ?
Add Comment