ಬುಕರ್ ಬಾನು ಮುಷ್ತಾಕರ ಬುಕ್ ಕವರ್‍ಸ್!

ನಮ್ಮಲ್ಲಿ ಪುಸ್ತಕ ಓದುವ ಎಷ್ಟು ಜನ ಪುಸ್ತಕದ ಕವರುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೋ ಗೊತ್ತಿಲ್ಲ. ಯಾವುದೇ ಪುಸ್ತಕ ಕೈಗೆತ್ತಿಕೊಂಡಾಗ ಸಾಮಾನ್ಯವಾಗಿ ಎಲ್ಲರೂ ನೋಡುವುದು ಮುಖಪುಟವನ್ನೇ; ಆದರೆ ಈ ಮುಖಪುಟ ಕಲಾವಿದರು ಮೂಲತಃ ಸೃಜನಶೀಲ ಲೇಖಕ, ಲೇಖಕಿಯರಷ್ಟೇ ಸೂಕ್ಷ್ಮಜೀವಿಗಳು, ಪ್ರತಿಭಾವಂತರು ಎಂಬುದನ್ನು ನಾವು ಸರಿಯಾಗಿ ಯೋಚಿಸಿರುವುದಿಲ್ಲ. 

ಅದೇನೇ ಇರಲಿ, ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ (ಅನುವಾದ: ದೀಪ ಬಾಸ್ತಿ) ಅನುವಾದಿತ ಕೃತಿಗೆ ಹಲ ಬಗೆಯ ರಕ್ಷಾಪುಟಗಳನ್ನು ಮಾಡಿದ ಕಲಾವಿದ ಅಹ್ಲಾವತ್ ಗುಂಜನ್ ಅವರ ಸಂದರ್ಶನ ಮುಖಪುಟ ವಿನ್ಯಾಸದ ಕಲೆ ಕುರಿತು ನನ್ನ ಕಣ್ಣನ್ನಂತೂ ತೆರೆಸಿತು. ಅಹ್ಲಾವತ್ ರಕ್ಷಾಪುಟ ಮಾಡಿದ ‘ಹಾರ್ಟ್ ಲ್ಯಾಂಪ್’, ಗೀತಾಂಜಲಿ ಶ್ರೀಯವರ, ‘ಟೂಂಬ್ ಆಫ್ ಸ್ಯಾಂಡ್’ ಬುಕರ್ ಪ್ರಶಸ್ತಿ ಗಳಿಸಿವೆ.
ಸಂದರ್ಶನದ ಶುರುವಿಗೇ ಅಹ್ಲಾವತ್, ‘ಪುಸ್ತಕ ವಿನ್ಯಾಸ ಒಂದು ‘ಸರ್ವಿಸ್’ ಎಂದ ತಕ್ಷಣ, ಸರ್ವಿಸ್ ಎಂಬ ಪದಕ್ಕಿರುವ ವಿಶಾಲ ಅರ್ಥಗಳು ನನ್ನನ್ನು ತಟ್ಟಿದವು. ಈ ಸರ್ವಿಸ್-  ಪುಸ್ತಕಕ್ಕೆ, ಪುಸ್ತಕ ಬರೆದವರಿಗೆ, ಪುಸ್ತಕದ ಸೂಕ್ಷ್ಮ ವಿವರಗಳಿಗೆ, ವಸ್ತುವಿಗೆ, ನಿರೂಪಣೆಗೆ, ಪುಸ್ತಕ ಸಂಸ್ಕೃತಿಗೆ, ಒಟ್ಟಾರೆ ಸಂಸ್ಕೃತಿಗೆ, ಓದುಗ ಓದುಗಿಯರಿಗೆ, ಪುಸ್ತಕ ಪ್ರಕಾಶಕರಿಗೆ...ಹೀಗೆ ಅಹ್ಲಾವತ್ ಹೇಳುವ ‘ಸರ್ವಿಸ್’ ಎಂಬುದರ ಅರ್ಥಗಳು ವಿಸ್ತಾರವಾಗುತ್ತಾ ಹೋದವು. 

ಅಹ್ಲಾವತ್ ಪ್ರಕಾರ, ಪುಸ್ತಕ ವಿನ್ಯಾಸಕಾರನ ಈ ಸರ್ವಿಸ್ ಎಂಥದೆಂದರೆ, ‘ಅದು ಕೃತಿಗೆ, ಪಠ್ಯಕ್ಕೆ ನಿಷ್ಠೆ. ನನ್ನ ಪಾತ್ರ ಏನು ಅಂದರೆ, ಪದಗಳ ಮೂಲಸತ್ವವನ್ನು ಒಂದು ರೂಪಕ್ಕೆ, ಆಕಾರಕ್ಕೆ -ಫಾರ್ಮ್‌ಗೆ- ಭಟ್ಟಿ ಇಳಿಸುವುದು. ಆ ರೂಪ ನೋಡಿದ ತಕ್ಷಣ ನೋಡಿದವರಿಗೆ ಅರ್ಥ ಎಟುಕಬೇಕು, ಸಂದರ್ಭ ಕರಾರುವಾಕ್ಕಾಗಿರಬೇಕು; ಸೌಂದರ್ಯದ ದೃಷ್ಟಿಯಿಂದ ಅದು ನೋಡಲೇಬೇಕು ಎನ್ನಿಸುವಂತಿರಬೇಕು.’

‘ಅಂದರೆ, ಬರೆಯುವವರಿಗೆ ಇಲ್ಲದ ಒತ್ತಡ, ಆಹ್ವಾನ ಪುಸ್ತಕ ಕಲಾವಿದನ ಸೃಜನಶೀಲ ನೋಟಕ್ಕೆ ಇರುತ್ತದೆ: ಈ ಕಣ್ಣು ಕೃತಿಯ ಒಳಗೆ ನೋಡಬೇಕು; ಕೃತಿಯಲ್ಲಿ ಕೇಂದ್ರ ಅರ್ಥ ಹೊಮ್ಮಿಸುವ ವಿವರಗಳನ್ನು, ಪ್ರತಿಮೆಗಳನ್ನು ಹುಡುಕಬೇಕು; ಓದುಗಿ-ಓದುಗರನ್ನೂ ಗಮನದಲ್ಲಿಟ್ಟುಕೊಳ್ಳಬೇಕು.’ ಇದು ಅಹ್ಲಾವತ್ ಗ್ರಹಿಕೆ.  

‘ಹಾರ್ಟ್ ಲ್ಯಾಂಪ್’ ಕೃತಿಗೆ ಬುಕರ್ ಅವಾರ್ಡ್ ಬಂದ ಕಾಲಕ್ಕೆ ಪುಸ್ತಕ ಹಾಗೂ ಅದರ ಅನುವಾದ ಕುರಿತು ವಿಧಾನಸಭೆಯಲ್ಲಿ ನಡೆದ ಅಭಿನಂದನೆಯ ಸಂದರ್ಭದಲ್ಲಿ ಹತ್ತು ನಿಮಿಷ ಮಾತಾಡುವ ಸಂದರ್ಭ ನನಗೆ ಬಂದಿತ್ತು. ಆಗ ಈ ಪುಸ್ತಕದ ಕವರ್ ಕುರಿತು ಸರಿಯಾಗಿ ಯೋಚಿಸಿರಲೇ ಇಲ್ಲ. ಮನಸೆಲ್ಲ ಇದ್ದ ಒಂದೇ ದಿನದಲ್ಲಿ ಪುಸ್ತಕ ಓದಿ ಮಾತಾಡುವುದರ ಕಡೆಗೇ! ಮೊನ್ನೆ ಅಹ್ಲಾವತ್ ಈ ಕತೆಗಳನ್ನು ಓದಿದ ಕ್ರಮ ನನ್ನನ್ನು ಅಚ್ಚರಿಗೊಳಿಸಿತು. 

‘ಡಿಸೈನರ್ ಒಬ್ಬ ಟ್ರಾನ್ಸ್ಲೇಟರ್' ಎನ್ನುವ ಅಹ್ಲಾವತ್‌ಗೆ, ‘ಡಿಸೈನರ್ ಕೇವಲ ಅಲಂಕಾರಪಟುವಲ್ಲ’ ಎಂಬ ನಂಬಿಕೆ. ಬಾನು ಮುಷ್ತಾಕರ ಕತೆಗಳನ್ನು ಅನುವಾದಿಸಿದ ದೀಪಾ ಭಾಸ್ತಿ ಒಮ್ಮೆ ಅಹ್ಲಾವತ್ ತಲೆಯಲ್ಲಿ ಬಿತ್ತಿದ ದಾಳಿಂಬೆ ಬೀಜಗಳ ಐಡಿಯಾ ಅವರ ಕಲಾವಿದ ಪ್ರತಿಭೆಯಲ್ಲಿ ಮೊಳೆಯತೊಡಗಿತು: ‘ಹಾರ್ಟ್ ಲ್ಯಾಂಪ್’ನ ಕತೆಗಳು ನನ್ನಲ್ಲಿ ಉಳಿದವು: ಅವುಗಳ ಸದ್ದಿಲ್ಲದ ಶಕ್ತಿ, ಅವು ಸ್ತ್ರೀತನವನ್ನು ಶೋಧಿಸುವ ರೀತಿ, ಪ್ರೀತಿ, ಕಳೆದುಕೊಂಡ ಸಂಗತಿಗಳು, ಸಂಪ್ರದಾಯದ ಭಾರ… ಎಲ್ಲವೂ ನನ್ನೊಳಗೆ ಉಳಿದವು. ಪ್ರತಿದಿನ ಕಾಣುವ ಚಿತ್ರಗಳ ಬಗ್ಗೆ ಬಾನು ಮುಷ್ತಾಕ್ ಕತೆಗಳಲ್ಲಿ ಎಷ್ಟೊಂದು ಕೋಮಲತೆಯಿತ್ತು; ಅವರ ಪಾತ್ರಗಳ ಮೌನದಲ್ಲಿ ಎಷ್ಟೊಂದು ಶಕ್ತಿಯಿತ್ತು! ನನ್ನ ಮನಸ್ಸು ಮತ್ತೆ ಮತ್ತೆ ದಾಳಿಂಬೆಯ ಪ್ರತಿಮೆಗೆ ಮರಳುತ್ತಿತ್ತು. ಅವುಗಳ ದಿಟ್ಟ, ಪೂರ್ಣ ಜೀವಂತಿಕೆ, ಆದರೆ ಅದೇ ವೇಳೆಗೆ ಅವುಗಳ ತಾತ್ಕಾಲಿಕತೆ, ನಶ್ವರತೆ...’ 

ಅಹ್ಲಾವತ್ ನೋಟಗಳು ಲೇಖಕ-ಲೇಖಕಿ-ಕಲಾವಿದ-ಕಲಾವಿದೆ-ಪ್ರಕಾಶಕ-ಪ್ರಕಾಶಕಿ-ಓದುಗ-ಓದುಗಿ ಎಲ್ಲರನ್ನೂ ಎಜುಕೇಟ್ ಮಾಡಬಲ್ಲವು:

‘ಬುಕ್ ಕವರ್ ಬರಿ ಪ್ಯಾಕೇಜಿಂಗ್ ಅಂತ ನಾನು ತಿಳಿದಿಲ್ಲ. ಅದು ತನ್ನದೇ ಆದ ಸ್ಟ್ರಕ್ಚರ್-ಐಡೆಂಟಿಟಿ ಇರುವ ಪ್ರಕ್ರಿಯೆ. ಇವೆರಡೂ ಸೇರಿ ಕೃತಿ ಬರೆದವರ ಅರ್ಥ, ಸಂದೇಶಗಳಿಗೆ ಆಕಾರ ಕೊಟ್ಟು, ಕೃತಿಯೊಳಗಿನ ಶಬ್ದಗಳಿಗೆ ಒಂದು ಮುಖ ಕೊಡುತ್ತವೆ. ಇದು ನಾವು ಪುಸ್ತಕ ತೆರೆಯುವ ಮೊದಲೇ ಕಾಣುವ ಮುಖ. ಪುಸ್ತಕ ತೆರೆಯುವ ಆ ಗಳಿಗೆಯಲ್ಲಿ ಮಖಪುಟಕ್ಕೆ ನಿರ್ಣಾಯಕ ಪಾತ್ರವಿದೆ. ಅದು ಪುಸ್ತಕ ಓದುವವರಲ್ಲಿ ಪ್ರತಿಧ್ವನಿ ಪಡೆಯಬೇಕು. ಆಹ್ವಾನಿಸಬೇಕು. ಪುಸ್ತಕ ಓದಲು ಒತ್ತಾಯಿಸಬೇಕು. ಎಲ್ಲವೂ ಪುನರಾವರ್ತನೆಯಾಗುವ ಈ ಕಾಲದಲ್ಲಿ ವಿನ್ಯಾಸಕಾರ ಅತ್ಯಂತ ವಿಭಿನ್ನವಾಗಿಯೇ ಯೋಚಿಸಬೇಕಾಗುತ್ತದೆ; ತನ್ನೊಳಗಿನ ಪಿಸುದನಿಯನ್ನು ಕೇಳಿಸಿಕೊಂಡು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಓದುವವರ ನಿರೀಕ್ಷೆಗೆ ಮೀರಿದ್ದನ್ನು ಕೊಡುವುದು ಅನಿವಾರ್ಯ.’

`ಹಾರ್ಟ್ ಲ್ಯಾಂಪ್’ ಕೃತಿ ಮರುಮುದ್ರಣವಾದಾಗಲೆಲ್ಲ ಅಹ್ಲಾವತ್ ಮೂಲದ ದಾಳಿಂಬೆ ಪ್ರತಿಮೆಯನ್ನು ಬೇರೆ ಬೇರೆ ಥರದಲ್ಲಿ ಬಳಸಿದರು: ‘ಒಂದು ಪ್ರಕಾಶನ ಸಂಸ್ಥೆಯಲ್ಲಿ ಮುಖಪುಟ ವಿನ್ಯಾಸ ಎನ್ನುವುದು ಹಲವರು ಸೇರಿ ಮಾಡುವ ಕೆಲಸ.  ಎಡಿಟರುಗಳು, ಮಾರಾಟ ವಿಭಾಗ, ಕೃತಿ ಬರೆದವರು ಅನುವಾದಿಸಿದವರು... ಎಲ್ಲರ ಜೊತೆಗೂ ನಾವು ಕೆಲಸ ಮಾಡಬೇಕಾಗುತ್ತದೆ. ‘ಹಾರ್ಟ್ ಲ್ಯಾಂಪ್’ ಕೃತಿಯ ವಿನ್ಯಾಸದ ಸಂದರ್ಭದಲ್ಲಿ ದೀಪಾ ಭಾಸ್ತಿ ದಾಳಿಂಬೆ ಬೀಜದ ಐಡಿಯಾ ಸೂಚಿಸಿದ ಮೇಲೆ, ಕಥಾ ಸಂಕಲನದ ಹಸ್ತಪ್ರತಿ ಓದಿದಾಗ ಈ ಸಲಹೆಯ ಅರ್ಥ ಹಾಗೂ ಸೌಂದರ್ಯ ನನ್ನೊಳಗೆ ಇಳಿಯತೊಡಗಿದವು.’

‘ಹಾರ್ಟ್ ಲ್ಯಾಂಪ್ ಮುಖಪುಟ ಬಾನು ಮುಷ್ತಾಕರ ಲೋಕಕ್ಕೆ ನನ್ನ ಸ್ಪಂದನ. ಈ ಕತೆಗಳಂತೆ ಈ ಮುಖಪುಟ ಕೂಡ ಓದುಗ ಓದುಗಿಯರನ್ನು ಮೆಲ್ಲಗೆ ಹಾಗೂ ಬಲವಾಗಿ ಆಹ್ವಾನಿಸುತ್ತದೆ ಎಂಬುದು ನನ್ನ ನಿರೀಕ್ಷೆ’ ಎನ್ನುವ ಆಹ್ಲಾವತ್, ನಂತರ ‘ಹಾರ್ಟ್ ಲ್ಯಾಂಪ್’ನ ಹತ್ತಾರು ಮುದ್ರಣಗಳಿಗೆ ಬಗೆಬಗೆಯ ಬಣ್ಣಗಳ ಕವರುಗಳನ್ನು ಮಾಡುತ್ತಲೇ ಇದ್ದಾರೆ.

ವಿನ್ಯಾಸ ಕಲಾವಿದ ಒಳ್ಳೆಯ ರೀಡರ್ ಕೂಡ ಆಗಿದ್ದರೆ ಅದು ಇನ್ನೂ ಚಂದ: ಆಗ ಇಡೀ ಕೆಲಸ ಆಳವಾಗಿ ತೊಡಗುವ, ಒಳ್ಳೆಯ ಫಲ ಕೊಡುವ, ಆನಂದದ ಕೆಲವಾಗುತ್ತದೆ. ಕಲಾವಿದ ಪುಸ್ತಕ ಓದಿದ್ದರೆ, ಇಡೀ ವಿನ್ಯಾಸ ರಚನೆಯ ಪಯಣದಲ್ಲಿ ನಡೆಯುವ ಚರ್ಚೆಗಳು, ಆಲೋಚನೆಗಳು ತೀರ್ಮಾನಗಳು, ಅರ್ಥಪೂರ್ಣವಾಗುತ್ತವೆ... ಇವೆಲ್ಲದರ ಬಗ್ಗೆ ಅಹ್ಲಾವತ್ ಸ್ಪಷ್ಟವಾಗಿದ್ದರು. 

ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’  

ಈ ಮಾತುಕತೆಯ ಕೊನೆಗೆ ಐಶ್ವರ್ಯ ಖೋಸ್ಲಾ ಕೇಳಿದರು: ‘ನೀವು ಮಾಡಿದ ಕವರುಗಳಲ್ಲಿ ನಿಮಗೆ ಪ್ರಿಯವಾದ ಮೂರು ಕವರುಗಳನ್ನು ಹೇಳಿ.’ 
ಅಹ್ಲಾವತ್ ಆಯ್ಕೆಯ ಮೂರು ಕವರುಗಳು: ರಂಜಿತ್ ಹೊಸಕೋಟೆಯವರ ‘ಮೀರ್ ತಖೀ ಮೀರ್‍’. ಅರುಂಧತಿ ರಾಯ್ ಅವರ ನಾನ್ ಫಿಕ್ಷನ್ ಬಾಕ್ಸ್ ಸೆಟ್. ಅಮಿತಾವ್ ಘೋಷ್ ಅವರ ‘ಗನ್ ಐಲ್ಯಾಂಡ್.’

ಐಶ್ವರ್ಯ ಖೋಸ್ಲಾ: ನಿಮಗೆ ತುಂಬ ಇಷ್ಟವಾದ ಬೇರೆ ವಿನ್ಯಾಸಕಾರರ ಮೂರು ಕವರುಗಳನ್ನು ಹೇಳಿ.  

ಅಹ್ಲಾವತ್ ಗುಂಜನ್: ಸಿಮನ್ ದ ಬೋವಾ ಅವರ ‘ದ ವುಮನ್ ಡೆಸ್ಟ್ರಾಯ್ಡ್’; ಮುಖಪುಟ ವಿನ್ಯಾಸ: ಪೀಟರ್ ಮೆಂಡಲ್ಸಡ್.  ಝೇಡಿ ಸ್ಮಿತ್ ಅವರ ‘ದ ಫ್ರಾಡ್; ಮುಖಪುಟ ವಿನ್ಯಾಸ: ಜಾನ್ ಗ್ರೇ. ಮ್ಯಾಕ್ಸ್ ಪೋರ್ಟರ್ ಅವರ ‘ಗ್ರೀಫ್ ಈಸ್ ದಿ ಥಿಂಗ್ ವಿತ್ ದ ಫೆದರ್‍ಸ್’; ಮುಖಪುಟ ವಿನ್ಯಾಸ: ಎಲಿನಾರ್ ಕ್ರೋ.  

ಒಬ್ಬ ಗಂಭೀರ ಹೆಣ್ಣು ಅಥವಾ ಗಂಡು ಸಂಗೀತ, ಸಾಹಿತ್ಯ, ನಟನೆ, ಚಿತ್ರಕಲೆ... ಹೀಗೆ ಯಾವುದೇ ರಂಗದಲ್ಲಿರಲಿ, ಅವರು ಮನದಾಳದಿಂದ ಪ್ರಾಮಾಣಿಕವಾಗಿ ಮಾತಾಡಿದಾಗ, ಗಂಭೀರವಾಗಿ ಸ್ಪಂದಿಸಿದಾಗ ಎಂಥ ತೂಕವಿರುತ್ತದೆ ಎಂಬುದನ್ನು ಅಹ್ಲಾವತ್ ಮಾತುಗಳು ಕೂಡ ಸೂಚಿಸುತ್ತವೆ. ಹಾಗೆಯೇ ಅವರ ಜೊತೆ ಅಷ್ಟೇ ತೂಕವಾಗಿ ಮಾತಾಡಿದ ಐಶ್ವರ್ಯ ಖೋಸ್ಲಾರ ಪ್ರಬುದ್ಧತೆ, ಸಿದ್ಧತೆ...

ನಮ್ಮ ಕನ್ನಡ ಪತ್ರಿಕೆಗಳಲ್ಲಿ ಇಂಥದ್ದಕ್ಕೆಲ್ಲ ಜಾಗವಿರದಿದ್ದರೆ ಹೋಗಲಿ, ಅವುಗಳ ಡಿಜಿಟಲ್ ಮಾಧ್ಯಮದಲ್ಲಾದರೂ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಇಂಥ ತೂಕದ ಮಾತುಕತೆಗಳು ಬಂದರೆ ಸಂಸ್ಕೃತಿಗಳ ವಿಕಾಸಕ್ಕೆ ಘನತೆ ಬರಬಲ್ಲದು.

ಅಂದ ಹಾಗೆ, ಮುಖಪುಟದ ಕೊನೇ ಗಳಿಗೆಯ ಕೆತ್ತನೆಯಲ್ಲಿ ತೊಡಗುವ ಕಲಾವಿದ-ಲೇಖಕ-ಪ್ರಕಾಶಕ ಬಳಗ; ಕಲಾವಿದರ ಸಂಭಾವನೆಯನ್ನು ಏರಿಸದೆ ಇಪ್ಪತ್ತು ವರ್ಷಗಳ ಹಿಂದಿನ ಸಂಭಾವನೆಯನ್ನೇ ಕೊಸರಾಡಿ ಕೊಡುವ ಜನ; ಅಥವಾ ಪುಸ್ತಕದ ಮೇಲೆ ಕಣ್ಣಾಡಿಸದೇ ಮುಖಪುಟ ಮಾಡುವ ಮಂದಿ, ತಮ್ಮ ಐಡಿಯಾವನ್ನೇ ವಿನ್ಯಾಸಕಾರರ ಮೇಲೆ ಹೇರುವವರು ...ಎಲ್ಲರೂ ಅಹ್ಲಾವತ್ ಅವರ ಒಳನೋಟದ ನಿವೇದನೆಗಳನ್ನು, ತನಗೆ ತಾನೇ ಆಡಿಕೊಂಡಂತಿರುವ ಪಿಸುದನಿಗಳನ್ನು ಗಮನವಿಟ್ಟು ಕೇಳಿಸಿಕೊಂಡರೆ ಒಳ್ಳೆಯದಾಗುತ್ತದೆ. 

ಎರಡು ವಾರಗಳ ಕೆಳಗೆ ಇಂಡಿಯನ್ ಎಕ್ಸ್‌ಪ್ರೆಸ್ ಡಿಜಿಟಲ್ ಆವೃತ್ತಿಯಲ್ಲಿ ಬಂದ ಈ ಸಂದರ್ಶನವನ್ನು ಬಾನು ಮುಷ್ತಾಕ್ ನೋಡಿರಲಿಕ್ಕಿಲ್ಲ ಎಂದು ಬೆಳಬೆಳಗ್ಗೆಯೇ ಫೋನ್ ಮಾಡಿ, ‘ಅಕ್ಕಾವ್ರಾ?’ ಎಂದೆ. 
ಅಷ್ಟೊತ್ತಿಗಾಗಲೇ ಬಾನು ಮುಷ್ತಾಖ್ ಅಹ್ಲಾವತ್ ಮಾತುಗಳನ್ನು ಓದಿದ್ದರು.

‘ಅಹ್ಲಾವತ್ ಗುಂಜನ್ ನಿಮ್ಮ ಕತೆಗಳನ್ನ ಓದಿರೋ ರೀತಿಯೇ ಬೇರೆ! ನಾನು ಮೊದಲ ಸಲ ಈ ಪುಸ್ತಕ ನೋಡಿದಾಗ ಇದ್ಯಾಕೆ ಈ ದಾಳಿಂಬೆ ಬೀಜ... ಅಂದುಕೊಂಡು ಸುಮ್ಮನಾಗಿದ್ದೆ. ಈಗ ನೋಡಿದರೆ ಈ ಕವರ್ ಪೇಜಿನ ಪ್ರತಿಮೆಗಳು ಎಷ್ಟೊಂದು ಅರ್ಥಪೂರ್ಣ ಅನ್ನಿಸುತ್ತಿವೆ!’ ಎಂದೆ. 

‘ಹೂಂ’ ಎಂದ ಬಾನು ಕೂಡ ಅಹ್ಲಾವತ್ ತಮ್ಮ ಕತೆಗಳನ್ನು ಓದಿದ ರೀತಿಗೆ ವಿಸ್ಮಯಗೊಂಡಿದ್ದರು.

ಒಂದು ಪ್ರತಿಭೆ ಮತ್ತೊಂದು ಪ್ರತಿಭೆಯನ್ನು ಭೇಟಿ ಮಾಡುವುದೆಂದರೆ ಇದೇ; ‘ಕವಿಗೆ ಕವಿ ಮಣಿವಂ’ ಎಂದು ನಮ್ಮ ಹಿರಿಯ ಕವಿಗಳು ಹೇಳಿದ್ದೂ ಇದೇ!  

Share on:

Comments

14 Comments



| ಪಲ್ಲವ

ಪುಸ್ತಕದ ಮುಖಪುಟ ರೂಪಿಸುವುದು ಸೃಜನಶೀಲ ಕ್ರಿಯೆ. ಅನೇಕ ಸಾರಿ ಪುಸ್ತಕದ ಆಶಯಕ್ಕೆ ಹೊಂದದ ಮುಖಪುಟಗಳೇ ಹೆಚ್ಚು.. ಲೇಖಕ-ಪ್ರಕಾಶಕರ ತುರ್ತಿಗೋ ಒತ್ತಾಯಕ್ಕೋ ಪುಸ್ತಕದ ಒಡಲನ್ನು ಗಮನಿಸದೇ ಮುಖಪುಟ ರೂಪಿಸುವ ಅನಿವಾರ್ಯತೆಗೆ ಕಲಾವಿದ ಒಳಗಾಗುತ್ತಾನೆ. ಕೇವಲ ಪುಸ್ತಕದ ಕವರ್ ಮಾತ್ರವಲ್ಲ; ಬಳಸುವ ಕಾಗದ ಅಕ್ಷರಗಾತ್ರ, ಅಂತರ , ತಬ್ಬಲಿ ಸಾಲು ಇತ್ಯಾದಿಗಳಿಗೆ ತಲೆ ಕೆಡಿಸಿಕೊಳ್ಳುವ ಲೆರಖಕರು, ಪ್ರಕಾಶಕರು, ಪ್ರಕಾಶಕರು ಕನ್ನಡದಲ್ಲೂ ಇದ್ದಾರೆ. ಅಹ್ಲಾವತ್ ಗುಂಜನ್ ಅವರ ಓದು, ಗ್ರಹಿಕೆ ಅಂತಃಸತ್ವವನ್ನು ಮುಖಪುಟದಲ್ಲಿ ಪ್ರಕಟಪಡಿಸಲು ತೋರುವ ಉತ್ಸಾಹವನ್ನು ಅಭಿನಂದಿಸುವೆ. ಪುಸ್ತಕ ಪ್ರಕಟಣೆಯನ್ನು ಪ್ರೀತಿಸುವ , ಆ ಕ್ರಿಯೆಯನ್ನು ಸುಖಿಸುವ ಪ್ರತಿಯೊಬ್ಬರು ಓದಿ ತಲೆ ಕೆಡಿಸಿಕೊಳ್ಳಬೇಕಾದ ಬರೆಹ ಇದು. ಸರ್...


| ಪಲ್ಲವ

ಪುಸ್ತಕದ ಮುಖಪುಟ ರೂಪಿಸುವುದು ಸೃಜನಶೀಲ ಕ್ರಿಯೆ. ಅನೇಕ ಸಾರಿ ಪುಸ್ತಕದ ಆಶಯಕ್ಕೆ ಹೊಂದದ ಮುಖಪುಟಗಳೇ ಹೆಚ್ಚು.. ಲೇಖಕ-ಪ್ರಕಾಶಕರ ತುರ್ತಿಗೋ ಒತ್ತಾಯಕ್ಕೋ ಪುಸ್ತಕದ ಒಡಲನ್ನು ಗಮನಿಸದೇ ಮುಖಪುಟ ರೂಪಿಸುವ ಅನಿವಾರ್ಯತೆಗೆ ಕಲಾವಿದ ಒಳಗಾಗುತ್ತಾನೆ. ಕೇವಲ ಪುಸ್ತಕದ ಕವರ್ ಮಾತ್ರವಲ್ಲ; ಬಳಸುವ ಕಾಗದ ಅಕ್ಷರಗಾತ್ರ, ಅಂತರ , ತಬ್ಬಲಿ ಸಾಲು ಇತ್ಯಾದಿಗಳಿಗೆ ತಲೆ ಕೆಡಿಸಿಕೊಳ್ಳುವ ಲೆರಖಕರು, ಪ್ರಕಾಶಕರು, ಪ್ರಕಾಶಕರು ಕನ್ನಡದಲ್ಲೂ ಇದ್ದಾರೆ. ಅಹ್ಲಾವತ್ ಗುಂಜನ್ ಅವರ ಓದು, ಗ್ರಹಿಕೆ ಅಂತಃಸತ್ವವನ್ನು ಮುಖಪುಟದಲ್ಲಿ ಪ್ರಕಟಪಡಿಸಲು ತೋರುವ ಉತ್ಸಾಹವನ್ನು ಅಭಿನಂದಿಸುವೆ. ಪುಸ್ತಕ ಪ್ರಕಟಣೆಯನ್ನು ಪ್ರೀತಿಸುವ , ಆ ಕ್ರಿಯೆಯನ್ನು ಸುಖಿಸುವ ಪ್ರತಿಯೊಬ್ಬರು ಓದಿ ತಲೆ ಕೆಡಿಸಿಕೊಳ್ಳಬೇಕಾದ ಬರೆಹ ಇದು. ಸರ್...


| ಸೋಮಶಂಕರ ವಿ

ಅಭೂತಪೂರ್ವ ಗೆಲವು ಸಾಧಿಸಿ ಗಲ್ಲಾ ಪೆಟ್ಟಿಗೆಯನ್ನು ತುಂಬಿ ಹರಿಸಿದ ಒಂದು ಸಿನಿಮಾ ಬಗ್ಗೆ ಪದೇ ಪದೇ ಮಾತಾಡುವಾಗ ಆ ಸಿನಿಮಾದ ನಾಯಕ ಅಥವಾ ನಿರ್ದೇಶಕರಿಗೆ ಕೊಡುವ ಪ್ರಾಮುಖ್ಯತೆ ಇತರೆ ಯಾರಿಗೂ ಸಿಗಲಾರದು. ಆದರೆ ಆ ಸಿನಿಮಾ ಯಶಸ್ವಿಯ ಹಿಂದೆ ಹಲವರ ಬೆವರು ಹರಿದಿರುತ್ತದೆ. ಅದನ್ನು ಗುರುತಿಸಿದವ ದೊಡ್ಡವ ಹಾಗೆ ಕೃತಿಯ ಮುಖ ಪುಟದಲ್ಲಿ ಅಷ್ಟು ದೊಡ್ಡ ನಿಗೂಢತೆ ಇದೆ ಎಂದು ಮನಗಂಡದ್ದು ಸೃಜನಶೀಲವೇ ಸರಿ.


| ಡಾ. ಶಿವಲಿಂಗೇಗೌಡ ಡಿ.

ಮುಖಪುಟ ವಿನ್ಯಾಸವೂ ಒಂದು ಸೃಜನಶೀಲ ಓದು ಮತ್ತು ಪ್ರತಿಕ್ರಿಯೆ ಎಂಬುದನ್ನು ತಿಳಿಸುವ ಈ ಲೇಖನ ನಮ್ಮ ಓದಿನ ಸೂಕ್ಷ್ಮತೆಯನ್ನು ವಿಸ್ತರಿಸುವಂತಿದೆ.


| Sudha H

ಫೇಸ್‌ ಈಸ್‌ ದಿ ಇಂಡೆಕ್ಸ್‌ ಆಫ್‌ ಮೈಂಡ್‌ ಎಂಬಂತೆ ಕವರ್‌ ಪೇಜ್‌ ಈಸ್‌ ದಿ ಇಂಡೆಕ್ಸ್‌ ಆಫ್‌ ಬುಕ್.‌ ಕಟ್ಟಡದ ಎಲಿವೇಷನ್‌ನಂತೆ ಮುಖಪಟ ನಮ್ಮನ್ನು ಸೆಳೆಯುತ್ತದೆ. ಅದು ಪುಸ್ತಕದ ಥೀಂ ಅನ್ನು, ಕಥನದ ಚಲನೆಗಳನ್ನು, ಪುಟಪುಟಗಳ ವಿವಿಧ ವೇಗದ ಕಂಪನಗಳನ್ನು ಒಂದು ಬಿಂದು, ಒಂದು ಚೌಕಟ್ಟು, ಒಂದು ಗಳಿಗೆಯಲ್ಲಿ ಸಾಂದ್ರವಾಗಿ ಹರಳುಗಟ್ಟಿಸಿಕೊಡುತ್ತದೆ. ಇದು ಒಮ್ಮೆ ಕಣ್ಣಿಗೆ ಬಿದ್ದು ಮರೆಯಾಗುವಂತಹುದಲ್ಲ. ಪುಸ್ತಕ ನಿರೂಪಿಸುವ ಭಾವ- ವೈಚಾರಿಕ ಹಂದರದ ಪ್ರತಿನಿಧಿಯಾಗಿ ಮನಸ್ಸಿನ ಕಣ್ಣಿನಲ್ಲಿ ನಿಲ್ಲುವಂತಹುದು. ಅದಕ್ಕೆ ಪುಸ್ತಕದ ಓದಿನ ಮುನ್ನ ಹಾಗೂ ನಂತರದಲ್ಲಿ ವಿಶಿಷ್ಟ ಪರಿಣಾಮ ಬೀರುವ ಶಕ್ತಿಯಿದೆ. ಓದುವ ಮುನ್ನ ಕುತೂಹಲ ಹಾಗೂ ಶೋಧನಾ ಚಪಲವನ್ನು ಮೂಡಿಸಿ ವ್ಯಾವಹಾರಿಕ ಅಗತ್ಯವನ್ನು ಪೂರೈಸುತ್ತದೆ. ಓದಿದ ನಂತರ ಪುಸ್ತಕದ ಬಗೆಗಿನ ನಮ್ಮ ಪುನರಾವಲೋಕನವನ್ನು ಕಲಾತ್ಮಕ ಮನಸ್ಸಿನ ಸಹಸ್ಪಂದನದ ಜೊತೆ ತಃಖ್ತೆ/ಡಿಕನ್ಸ್‌ಟ್ರಕ್ಷನ್ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಕಲಾವಿದನಿಗೆ ಸವಾಲು ಇರುವುದು ಇಲ್ಲಿಯೇ. ತಕ್ಷಣಕ್ಕೆ ಏನೋ ಕಾರಣಕ್ಕೆ ಮನಸೆಳೆದು ನಂತರದ ನಿಧಾನದ ನೋಟಕ್ಕೆ ಬಿಚ್ಚಿಕೊಳ್ಳುವ ಪುಸ್ತಕದೊಳಗಿನ ಸರಕುಗಳನ್ನು ಕಲೆಯಲ್ಲಿ ಸ್ಥಾಪಿಸಬೇಕಾಗುತ್ತದೆ. ನೃತ್ಯಕ್ಕೆ ವಾದ್ಯಗಾರರ ಹಾಗೆ ಪುಸ್ತಕಕ್ಕೆ ಕವರ್‌ ಪೇಜ್‌ ಕಲಾವಿದರು. ಇವರ ಕ್ಯಾನ್‌ವ್ಯಾಸ್‌ ಓಪನ್‌ ಎಂಡೆಂಡ್‌ ಕೂಡಾ ಆಗಿರುತ್ತದೆ.


| ಹರಿಪ್ರಸಾದ್ ಬೇಸಾಯಿ

ಒಂದು ಸಂದರ್ಶನ ನಿಮ್ಮಲ್ಲಿ ಕುತೂಹಲ ಹುಟ್ಟಿಸಿದಂತೆ ಈ ಬರಹ ಗುಂಜನ್ ಬಗ್ಗೆ ಆತನ ಕೆಲಸಗಳ ಬಗ್ಗೆ ಆಸಕ್ತಿ ಕೆರಳಿಸಿತು. Slow is beautiful ಎಂಬ ಪುಸ್ತಕದ ಲೇಖಕ ಕೂಡ ಆತ....


| ಗುರು ಜಗಳೂರು

ಸರ್, ಮುಖಪುಟದ ವಿನ್ಯಾಸದಂತೆ ರೇಖಾ ಚಿತ್ರಗಳು ಸಹ ಪುಸ್ತಕಗಳ ಮತ್ತು ಪತ್ರಿಕೆಗಳ ಚಿಂತನೆ,ಅಂದ,ವ್ಯಾಪಾರ ಹೆಚ್ಚಿಸಿರುವುದನ್ನು ಈಹಿಂದೆ ನೋಡಿದ್ದೇವೆ.ಚಿಕ್ಕರಿದ್ದಾಗಿನ ಪ್ರಜಾಮತದ ಹೆಬ್ಳೀಕರ್, ಆರ್ ಕೆ ಲಕ್ಷ್ಮಣ್ ,ರಾವ್ ಬೈಲ್,ಕೆ.ಕೆ.ಹೆಬ್ಬಾರ್,ಲಂಕೇಶ್ ಪತ್ರಿಕೆಯ ಹಾದಿಮನಿ ಇವರುಗಳ ವ್ಯಂಗ್ಯ ಚಿತ್ರಗಳು ಒಳನೋಟಗಳ ಜೊತೆಗೆ ಖುಷಿ ಕೊಟ್ಟಿರುವುದನ್ನು ಮರೆಯಲು ಸಾಧ್ಯವಿಲ್ಲ.


| Kantaha Raju P

ಕವರ್ ಪೇಜ್ ಕುರಿತಂತೆ ಅನೇಕ ಮಾಹಿತಿ ದೊರೆಯಿತು. ಧನ್ಯವಾದಗಳು. ಇಂಗ್ಲಿಷ್ ಪ್ರಕಾಶನ ವಲಯದಲ್ಲಿದ್ದಷ್ಟು ಈ ಕುರಿತ ಗಮನ ಭಾರತೀಯ ಭಾಷಾ ಸಂದರ್ಭಗಳಲ್ಲಿ ಇಲ್ಲ. ಪುಸ್ತಕ ವಿಮರ್ಶೆ, ಚರ್ಚೆಗಳು ಕೃತಿಯ ಸುತ್ತ ಇರುತ್ತವೆ ಅಷ್ಟೇ. ಮುಖಪುಟದ ಬಗ್ಗೆಯೂ ನಾಲ್ಕಾರು ಮಾತು ಹೇಳುವ ಪದ್ಧತಿ ಆರಂಭವಾಗಬೇಕು. ಚಿತ್ರ ಮಾಧ್ಯಮವನ್ನು ನೋಡಲು, ಅನುಭವಿಸಲು ಹೆಚ್ಚು ಮಂದಿಗೆ ಸಾಧ್ಯವಾಗುತ್ತಿಲ್ಲ. ಅದರ ವಿಭಿನ್ನ ಕವಲಾದ ಕವರ್ ಪೇಜ್ ನ ರಸಗ್ರಹಣವನ್ನು ಮಾಡುವಲ್ಲಿ ನಮ್ಮ ಅಭಿರುಚಿ ಬೆಳೆಯಬೇಕಿದೆ. ನಿಜ ಹೇಳುವುದಾದರೆ ಗುಂಜನ್ ಅವರ ಅಭಿಪ್ರಾಯಗಳು ಮೌಲಿಕವಾಗಿ ಅನಿಸಿದರೂ ಅವರ, ಅವರು ಮೆಚ್ಚಿದ ಕವರ್ ಪೇಜ್ ಗಳ ಮಹತ್ವ ಎದ್ದು ಕಾಣುವಂತಿಲ್ಲ, ನನ್ನಂಥವರಿಗೆ. ಪುಸ್ತಕದ ಜೊತೆ ಜೊತೆಗೆ ಮೊದಲಾಗಿ ಬರುವ ಈ ಕಲೆ ನಿರ್ಲಕ್ಷ್ಯಗೊಳ್ಳುವುದು ಸಾಂಸ್ಕೃತಿಕ ನಷ್ಟ.


| ಡಾ. ಶಾಕಿರಾ ಖಾನುಂ

ಅಹ್ಲಾವತ್ ಅವರ ಈ ಹೇಳಿಕೆ ಅವರ ಕಲಾತ್ಮಕ ಪ್ರತಿಭೆ ಮತ್ತು ಬಾನು ಮುಷ್ತಾಕ್ ಅವರ ಕತೆಗಳ ಪ್ರಭಾವವನ್ನು ಸೂಚಿಸುತ್ತದೆ. ದಾಳಿಂಬೆ ಬೀಜಗಳು ಹೊಸ ಚಿಂತನೆಗಳನ್ನು ಹುಟ್ಟುಹಾಕಿವೆ ಮತ್ತು ಬಾನು ಮುಷ್ತಾಕ್ ಅವರ ಕತೆಗಳಲ್ಲಿನ ಸ್ತ್ರೀತನದ ಶೋಧನೆ, ಪ್ರೀತಿ, ಸಂಪ್ರದಾಯದ ಭಾರ ಅವರನ್ನು ಆಪ್ತವಾಗಿ ಮುಟ್ಟಿರಬಹುದು. ಅವರ ಕತೆಗಳಲ್ಲಿನ ಕೋಮಲತೆ ಮತ್ತು ಪಾತ್ರಗಳ ಮೌನದ ಶಕ್ತಿ ಅಹ್ಲಾವತ್ ಅವರನ್ನು ಪ್ರೇರೇಪಿಸಿರಬಹುದು. ದಾಳಿಂಬೆಯ ಪ್ರತಿಮೆಯ ದಿಟ್ಟತೆ ಮತ್ತು ನಶ್ವರತೆ ಅವರ ಮನಸ್ಸಿನಲ್ಲಿ ಆಲೋಚನೆಯಾಗಿ ಉಳಿದಿರಬೇಕು.


| Ramesh Aroli

ತುಂಬಾ ಆಸಕ್ತಿಕರ ವಿಷಯ ಇದು. ನಮ್ಮ ನವ್ಯದ ಅನೇಕ ಲೇಖಕರ ಕಾವ್ಯಪುಸ್ತಕ ದ ಮುಖಪುಟ ಚಿತ್ರಗಳು ಯುರೋಪಿನ ಲಿಟ್ಲ್ ಮ್ಯಾಗಝಿನ್, ಮಾಡರ್ನಿಸ್ಟ್ ಲೇಖಕರ ಪುಸ್ತಕದ ಕವರ್ ಡಿಸೈನ್ ಅನ್ನು ಹೋಲುತ್ತಿದ್ದವು. ಈ ವಿಷಯದಲ್ಲಿ "ಸಾಕ್ಷಿ " ಪತ್ರಿಕೆ ಅಂತು ಥೇಟು ಅನುಕರಣೆ ಅನಿಸುತಿತ್ತು. ಈ ಕಂತಿನ ಬರಹಕ್ಕಾಗಿ ಧನ್ಯವಾದ ಸರ್.


| ಕೀರ್ತಿಪ್ರಸಾದ್‌ ಟಿ. ಎಸ್.

ʼಹಾರ್ಟ್ ಲ್ಯಾಂಪ್ʼ ಮುದ್ರಣಗಳ ಕವರ್ ಪೇಜ್ ಗಳಲ್ಲಿ ವಿವಿಧ ರೀತಿಯ ದಾಳಿಂಬೆ ಚಿತ್ರ ಬಳಕೆ ಏಕೆಂಬ ಪ್ರಶ್ನೆ ಕಾಡುತ್ತದೆ. ತಡಕಾಡಿದಾಗ ತಿಳಿದದ್ದು ಇಷ್ಟು: ಹಣ್ಣುಗಳಿಗೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಪ್ರಾದೇಶಿಕವಾಗಿ, ಸ್ತ್ರೀವಾದವಾಗಿ ಸಾಂಕೇತಿಕ ಅರ್ಥಗಳಿವೆ. ಫೆಮಿನಿಸ್ಟ್ ಫ್ರೂಟ್ ಆರ್ಟ್ ಎಂಬುದೇ ಒಂದು ಪ್ರಬಲ ಶಾಖೆಯಾಗಿದೆ. ಹಣ್ಣುಗಳಲ್ಲಿ ಅತ್ಯಂತ ವ್ಯಾಪಕ ಹಾಗೂ ತೀವ್ರವಾಗಿ ಸಾಂಕೇತಿಕತೆಯ ಸ್ಥಾನ ಪಡೆದಿರುವುದು ದಾಳಿಂಬೆ. ಈ ತಿಳುವಳಿಕೆ ಚಿತ್ರ ಗ್ರಹಿಕೆಯ ಹಿನ್ನೆಲೆಯಲ್ಲಿ ಇರದಿದ್ದರೆ ಇದೇನು ದಾಳಿಂಬೆ ಕೃಷಿಯ ಪುಸ್ತಕವೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೆಣ್ಣು, ಕಣ್ಣೀರು, ಸರಪಳಿ, ಪ್ರತಿಭಟನೆಯ ಸೆಡವು ಇಂಥವನ್ನು ಬಳಸಿದ್ದರೆ ಸುಲಭವಾಗಿ ಅರ್ಥವಾಗುತ್ತಿತ್ತಲ್ಲವೇ ಅನಿಸುತ್ತದೆ. ಈ ಸಂವಹನದ ಮಿತಿ ಕುರಿತು ವಿಮರ್ಶಕರು ಚರ್ಚಿಸಬೇಕು. ಯುರೋಪ್, ಮಧ್ಯಪ್ರಾಚ್ಯ, ಏಷ್ಯಾ, ಬೌದ್ಧ, ಇಸ್ಲಾಂ, ಯಹೂದಿ, ಕ್ರೈಸ್ತ, ಹಿಂದೂ ಇಷ್ಟರಲ್ಲೂ ಎಲ್ಲಾ ಹಣ್ಣುಗಳಿಗಿಂತ ಮಿಗಿಲಾಗಿ ದಾಳಿಂಬೆಗೆ ಶಕ್ತಿಯುತ ಸಾಂಕೇತಿಕ ಮಹತ್ವವಿದೆ. ತಲೆಕೆಡಿಸಿಕೊಳ್ಳುವ ಓದುಗರಿಗೆ ದಾಳಿಂಬೆ ಸಂಕೇತವು ಕೃತಿಯನ್ನು ಬೇರೆ ಬೇರೆ ಬಣ್ಣ ಹಾಗೂ ತೀವ್ರತೆಗಳಲ್ಲಿ ಪ್ರಕಾಶಿಸಿ ಹೊಸ ಅರ್ಥಗಳನ್ನು ಕೃತಿಯನ್ನು ಮೀರಿಯೂ ಒದಗಿಸುತ್ತದೆ.


| ಡಾ. ರೇಣುಕಾ ಪ್ರಸಾದ್‌ ವಿ. ಟಿ.

ಕೀರ್ತಿ ಪ್ರಸಾದ್ ಅವರ ಮಾಹಿತಿ ತುಂಬಾ ಪ್ರಯೋಜನಕಾರಿ. ಆದರೆ, ಈಗಾಗಲೇ ಇಷ್ಟೊಂದು ಸ್ಥಾಪಿತ ಸಾಂಕೇತಿಕ ಅರ್ಥ ಹೊಂದಿ ಸಾಂಸ್ಥೀಕರಣಗೊಂಡ ಪುರಾತನ ಕಲ್ಪನೆಯನ್ನು ಬಳಸುವುದರಲ್ಲಿ ಕಲಾವಿದರ ಸೃಜನಶೀಲತೆಯನ್ನು ಹೇಗೆ ಕಾಣುವುದು? ಹಳತಿನ ಬಂಧನಕ್ಕೆ ಸಿಕ್ಕಿದಂತಾಗಲಿಲ್ಲವೇ? ಗುಂಜನ್ ರ ಕೃತಿ ಸ್ಟೀರಿಯೋಟೈಪ್ ಆಗುವುದಿಲ್ಲವೇ? ಅದಕ್ಕಿಂತ ದೊಡ್ಡ ಅಪಾಯವೆಂದರೆ, ಈ ಹಳತಿನ ಆಲಿಂಗನ ಪಠ್ಯದ ಆಶಯಕ್ಕೆ ವಿರುದ್ಧವಾಗುವುದಿಲ್ಲವೇ? ಸಮಕಾಲೀನ ರೂಪಕ. ಸಂಕೇತಗಳು ಹೆಚ್ಚು ಅರ್ಥಪೂರ್ಣವಾಗುತ್ತಿತ್ತಲ್ಲವೆ? ಕೀರ್ತಿವಂತರ ಸುತ್ತ ಯಾಕೋ ವಿಮರ್ಶಾ ವಿವೇಚನೆಯೂ ಅಧೀರವಾಗುತ್ತದೆ ಎನಿಸುತ್ತದೆ.


| ಹೇಮಾವತಿ ವಿ.ಆರ್.‌

ಗುಂಜನ್ ರವರಾಗಲಿ ಪ್ರಕಾಶಕರಾಗಲಿ ಕಡಿಮೆ ಅವಧಿಯಲ್ಲಿ ಪದೇಪದೇ ʼಹಾರ್ಟ್‌ ಲ್ಯಾಂಪ್‌ʼ ಕವರ್ ಪೇಜ್ ಬದಲಾಯಿಸುತ್ತಿರುವುದೇತಕ್ಕೆ? ಅಪ್ ಗ್ರೇಡ್ ಮಾಡುವ ಪ್ರಯತ್ನವೇ? ಸೃಜನಶೀಲ ವೈವಿಧ್ಯ ನೀಡುವ ಪ್ರಯತ್ನವೇ? ಮಾರುಕಟ್ಟೆ ತಂತ್ರವೇ? ಹಳೆ ವಿನ್ಯಾಸದ ಬಗ್ಗೆ ವಿಶ್ವಾಸ ಇಲ್ಲವೇ? ಒಂದು ಪುಸ್ತಕಕ್ಕೆ ಅನಗತ್ಯವಾಗಿ ಮುಖಪುಟ ಬದಲಿಸುವುದು ಅದರ ಅಸ್ಮಿತೆಗೆ ಧಕ್ಕೆ ತಂದಂತೆ. ಇದು ಪದ್ಧತಿಯೂ ಹೌದು, ಸಾಮಾನ್ಯ ಜ್ಞಾನವೂ ಹೌದು. ಹೀಗೆಲ್ಲ ಸಣ್ಣ ಸಣ್ಣ ಪ್ರಶ್ನೆಗಳು ಕೊನೆಯಾಗದಿರುವಾಗ ತಮ್ಮ ಕಲೆಯ ಬಗ್ಗೆ ಕಲಾವಿದರು ದೊಡ್ಡ ಮಾತು ಹೇಳುತ್ತಿದ್ದರೆ ಅದು ಪುಸ್ತಕದ ಬದನೆಕಾಯಿಯಂತೆ ಅನಿಸಿಬಿಡುತ್ತದೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಒಂದು ಪುಸ್ತಕದ ಮುಖಪುಟ ಆಕರ್ಷಕವಾಗಿರಬೇಕು, ಅರ್ಥಪೂರ್ಣವಾಗಿರಬೇಕು, ಮತ್ತು ಆ ಪುಸ್ತಕದ ವಸ್ತುವನ್ನು ಸೂಚಿಸುವ ಹಾಗಿರಬೇಕು ಎಂದು ಸಹಜವಾಗಿ ಸಾಮಾನ್ಯ ಓದುಗನಾಗಿ ತಿಳಿದುಕೊಂಡಿದ್ದೆನು. ಮುಖಪುಟ ವಿನ್ಯಾಸವೂ ಒಂದು ರೀತಿಯ ಸೃಜನಶೀಲ ಕಲೆಯೆಂಬುದನ್ನು ತಿಳಿಸುವುದರ ಜೊತೆಗೆ ಅದರ ಸೂಕ್ಷ್ಮ ವಿವರಗಳನ್ನು ನೀಡಿದ ಈ ಲೇಖನಕ್ಕಾಗಿ ಹುಳಿಯಾರರಿಗೆ ನಮನಗಳು.




Add Comment


Mundana Kathana Nataka

YouTube






Recent Posts

Latest Blogs